ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು! ಬರೋದಿಲ್ಲ ಅಂದ್ರ ಬರೋದಿಲ್ಲ. ಹೋಗ್ ಸುಮ್ನ. ಏನ್ ಪೀಡ್ಸಾಕತ್ತಿದಿ’ ಎಂದು ಕೂಗಾಡಿಬಿಟ್ಟರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ಮೂರನೆಯ ಕಂತು
ಸೋದರಮಾವನ ಮಗ ಶಂಕರನನ್ನು ಮದುವೆಯಾಗುವುದು ನನ್ನ ತಂದೆಯವರಿಗೆ ಸುತರಾಂ ಇಷ್ಟವಿರಲಿಲ್ಲ. ಅವ್ವನ ಒತ್ತಾಯಕ್ಕೆ ಮಣಿದು ನನ್ನನ್ನು ಸೋದರಮಾವನ ಮನೆಯಲ್ಲಿ ಇರಿಸಲು ಒಪ್ಪಿದ್ದರು. ನನ್ನನ್ನು ಬಿಟ್ಟಿದ್ದಷ್ಟೇ, ಒಂದು ರಾತ್ರಿಯೂ ಅವರ ಮನೆಯಲ್ಲಿ ತಂಗಲಿಲ್ಲ. ಎಂಟು ದಿನಗಳಾದ ಮೇಲೆ ಬಂದು ನೋಡುತ್ತಾರೇನು? ಅಳುತ್ತಾ, ಕೂತಿದ್ದೆ. ನನಗೆ ಹೀಗಾಯಿತೆಂದು ತಿಳಿದಮೇಲಂತೂ ಕೆಂಡಾಮಂಡಲವಾಗಿಬಿಟ್ಟರು. ಕಾಗೆ ಕೂರುವುದಕ್ಕೂ ಕೋಲು ಮುರಿಯುವುದಕ್ಕೂ ಸರಿಯಾಯಿತು ಎನ್ನುವ ಹಾಗೆ, ತಂದೆಯವರಿಗೆ ಬೇಕಾದ ಹಾಗೆ ಮದುವೆಯ ಮಾತು ಅಲ್ಲಿಗೆ ಸಮಾಪ್ತಿಯಾಯಿತು.
ನಾವು ಬಸ್ಸೇರಿ ಕೂತಿದ್ದೆವು. ಸೋದರಮಾವನೇ ಅಲ್ಲಿಗೆ ಬಂದು, ‘ಕಾಳವ್ವ, ಇಳಿಯವ್ವಾ…’ ಎಂದು ದೈನ್ಯತೆಯಿಂದ ಬೇಡಿಕೊಳ್ಳುತ್ತಿದ್ದರು. ‘ನಾ ಇಳಿಯಲ್ಲ’ ಎನ್ನುತ್ತಾ, ಮುಖ ಸರಿಸಿ ಕೂತೆ. ‘ನಾ ಬೈದಿದ್ದು ನೀ ತಪ್ಪಾಗ್ ತಿಳ್ಕೊಂಡಿ, ಕೈ ಮುಗಿತೀನವ್ವಾ’ ಎನ್ನುತ್ತ ಗೋಳೋ ಎಂದು ಅಳಲು ಶುರುವಿಟ್ಟರು! ಮನಸ್ಸು ಅದಾಗಲೇ ಜಡ್ಡುಗಟ್ಟಿಹೋಗಿತ್ತು. ಯಾರೋ ಬಂದು ಕರೆದುಕೊಂಡು ಹೋಗುವುದು, ನೀನೇ ಬೇಕೆಂದು ಹೇಳುವುದು, ಏನೋ ಕನಸು ತೋರುವುದು, ನಂತರ ಅಸಹಾಯಕರಂತೆ ಬಿಂಬಿಸಿ ಕೈಬಿಡುವುದು. ಮುಂದಿನ ನನ್ನ ಪಾಡು? ಒದ್ದಾಟ, ಒಂಟಿತನ, ವೇದನೆ, ಬದಲಾಗದ ಅದದೇ ಭಾವ!
ಎಷ್ಟು ಕರೆದರೂ ಬಾರದಿರುವುದನ್ನು ಕಂಡ ಮಾವ ಕೆಳಗಿಳಿದು ನಡೆದುಬಿಟ್ಟರು. ಮುಂದೆ ನಾವು ಊರು ಸೇರಿದೆವು. ನಡೆದ ಘಟನೆಯಷ್ಟನ್ನೂ ಸೋದರಮಾವನ ಮಗ ಶಂಕರನಿಗೆ ತಿಳಿಯಿತು. ತಕ್ಷಣದಲ್ಲೇ ಹೊರಟು ನನ್ನತ್ತ ಧಾವಿಸಿದ್ದ. ಅವನು ಬಂದು ಹೇಳಿದ ಪ್ರಕಾರ, ನಾವು ಹೊರಟ ನಂತರ ಮಾವ ದುಃಖ ಸಹಿಸಲಾರದೆ ಕಲ್ಲಿನಲ್ಲಿ ತಲೆಗೆ ಬಡಿದುಕೊಂಡು ಮೂರ್ಛೆ ತಪ್ಪಿದ್ದರು. ಆಸ್ಪತ್ರೆಯಲ್ಲಿರುವ ತಂದೆಗೆ ಈಗ ನಿನ್ನ ಅವಶ್ಯಕತೆ ಇದೆ. ಬಾಯೆಂದು ಶಂಕರ ಕರೆದೊಯ್ಯಲು ಬಂದಿದ್ದ. ಮುಜುಗರದ ಹಂಗು ತೊರೆದು ಕೇಳೇಬಿಟ್ಟೆ, ‘ಯಾವ ರೀತಿ ಮಾತಾಡಬೇಕೆಂದೂ ತಿಳೀಲಿಲ್ವಾ? ಮೊದಲೇ ಹೀಗೆ, ಇನ್ನು ಮದುವೆಯಾಗಿ ಮನೆ ಸೇರಿದರೆ ಸುಮ್ಮನೆ ಬಿಡುತ್ತೀರೇನು!’ ಹಾಗಲ್ಲ ಹೀಗೆಂದು ಏನೇನೊ ಸಬೂಬು ಕೊಡುತ್ತಿದ್ದರೂ ‘ನಾನಿನ್ನು ಮದುವೆಯೇ ಆಗುವುದಿಲ್ಲ. ನನ್ಹತ್ರ ಯಾರೂ ಬರಕೂಡದು’ ಎಂದೆ. ಕರಗದ ಕಲ್ಲಾಗಿದ್ದೆ. ಅಪ್ಪ ನಾ ಕೂತಿದ್ದ ಕೋಣೆಯ ಕದ ಮುಚ್ಚಿ, ಶಂಕರನನ್ನು ಕಳುಹಿಸಿದರು.
ಇಷ್ಟಾಗಿ ಎರಡು ಮೂರು ದಿನಗಳೂ ಕಳೆದಿರಲಿಕ್ಕಿಲ್ಲ, ಮಲ್ಲ(ಭಿ)ಯಿಂದ ಶೇಕ್ ಚಾಂದ್ ಬಂದಗೀಸಾಬ್ ಮುಲ್ಲಾ ಎಂಬುವವರು ಬಂದರು. ನನ್ನ ಬದುಕಿನ ಹಾದಿ ಇವರ ನಡಿಗೆಯತ್ತ ಸಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಮದುವೆಯೇ ಬೇಡವೆಂದು ನಿಶ್ಚಯಿಸಿದ್ದವಳನ್ನು ಅದ್ಹೇಗೆ ಒಪ್ಪಿಸಿ, ಮದುವೆಯಾದರೋ? ನಾ ಹೇಳುವ ಮುಂದಿನ ಕಥೆ ಬಹುಶಃ ನಿಮಗೆ ಕನಸಿನಂತೆಯೋ ಇಲ್ಲಾ, ಸಿನೆಮಾ ದೃಶ್ಯದಂತೆ ಅನಿಸಬಹುದು. ಕಥೆಯಾದ ಬದುಕನ್ನು, ಅದರ ನಡುವೆ ರಂಗಭೂಮಿ ಕೊಟ್ಟ ಹೊಸ ಕನಸನ್ನು ಎಲ್ಲವನ್ನೂ ವಿವರಿಸುವೆ.
ಹಾಂ, ‘ನಾವು ಶ್ರೀಶೈಲದಲ್ಲಿ ಮೂರು ನಾಟಕ ಮಾಡುತ್ತಿದ್ದೇವೆ. ಬನ್ನಿ’ ಎಂದು ಒತ್ತಾಯಿಸಿದರು. ಯಾವ ಕಂಪೆನಿಗೂ ಹೋಗಲು ಇಷ್ಟವಿರದ ನಾನು, ನಾಟಕ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ. ‘ಹಾಗ್ ಹೇಳ್ಬ್ಯಾಡ್ರಿ. ಊರಲ್ಲಿ ದೇವತಿ ಜಾತ್ರಿ ಐತಿ. ಮೂರ್ ವರ್ಷಕ್ಕೊಂದ್ ಸತಿ ಆಗೋ ಜಾತ್ರಿ ಅದ. ನಾಟ್ಕ ಮಾಡಾಕ್ ಬನ್ರೀ’ ಎಂದು ಮತ್ತೆ ಕರೆದರು. ಹೌದು, ಊರ ಪೊರೆವ ಮಾರಮ್ಮನನ್ನು ಮೂರು ವರ್ಷಕ್ಕೊಮ್ಮೆ ಹೊರತೆಗೆದು, ಬಣ್ಣ ತುಂಬಿ ಮಾಡುವ ಜಾತ್ರೆ. ಆದರೆ ನಾನಾಗ ಬಣ್ಣ ಹಚ್ಚುವ ಉತ್ಸಾಹದಲ್ಲಿ ಇರಲಿಲ್ಲವಲ್ಲಾ, ‘ಆಗಲ್ಲ ಹೋಗ್ರಿ’ ಎಂದು ನಿರಾಕರಿಸುತ್ತಲಿದ್ದೆ. ಈ ಕಂಪೆನಿ, ನಾಟಕದ ಉಸಾಬರಿ ಸಾಕು, ಟೈಲರಿಂಗ್ ಕಲಿತು ಏನಾದರೂ ಜೀವನ ನಡೆಸಬೇಕೆಂದು ಯೋಚಿಸುತ್ತಿದ್ದ ಹೊತ್ತು.

ಎಷ್ಟು ಹೇಳಿದರೂ ಅವರದು ನಿಲ್ಲದ ವರಾತ. ‘ಯಾರ್ರೀ ಹೇಳಿದ್ದು ನಿಮ್ಗೆ ನಾ ನಾಟ್ಕ ಮಾಡೋಳು ಅಂತ. ನನ್ಗೆ ಯಾವ್ ಪಾತ್ರನೂ ಮಾಡಾಕ್ ಗೊತ್ತಿಲ್ಲ. ತಿಳೀತಿಲ್ಲೋ ಹೊರಡ್ರಿ’ ಎಂದಾಗ ನನ್ನ ದನಿಯಲ್ಲಿ ಸಹಜವಾದ ಗದರಿಕೆಯಿತ್ತು. ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು! ಬರೋದಿಲ್ಲ ಅಂದ್ರ ಬರೋದಿಲ್ಲ. ಹೋಗ್ ಸುಮ್ನ. ಏನ್ ಪೀಡ್ಸಾಕತ್ತಿದಿ’ ಎಂದು ಕೂಗಾಡಿಬಿಟ್ಟರು. ತಂದೆಯವರನ್ನು ಒತ್ತಾಯಿಸುವ ಕೆಲಸವಂತೂ ಹೊಳೆಯಲ್ಲಿ ತೊಳೆದ ಹುಣಿಸೆ ಹಣ್ಣಾಯಿತು! ಮರುಮಾತಿಲ್ಲದೇ ಜಾಗ ಖಾಲಿ ಮಾಡಿದರು.
ಆದರೇನು? ಮತ್ತೆ ಬೆಳಿಗ್ಗೆ ಬಂದರು. ಬಂದವರೇ, ‘ಕಲ್ಬುರ್ಗಿ ಹತ್ರ ನಮ್ಮೂರು ಐತ್ರಿ’ ಎಂದರು. ‘ಅರೇ! ಕಲ್ಬುರ್ಗಿ ಶರಣಬಸವೇಶ್ವರ?!’ ಅಚ್ಚರಿಯಿಂದ ಕೇಳಿದೆ. ‘ಹೂಂ ರಿ. ನಮ್ಮೂರಿಂದ ಎಪ್ಪತ್ ಕಿ.ಮೀ ಆಗ್ತೇತಿ. ಅಲ್ಲಿಗ್ ಹೋಗೇ ಹೋಗ್ಬೇಕ್ರಿ ನೀವು’ ಎನ್ನುತ್ತಿದ್ದಂತೆ ಲಿಂಗ ಪೂಜೆ ಮಾಡುತ್ತಿದ್ದದ್ದು ನೆನಪಾಯಿತು. ಶಿವನೊಡನೆಯ ಭಕ್ತಿಯೊಂದೆ ಮನಸ್ಸಿಗೆ ಸಾಂತ್ವನವಾಗಿತ್ತು. ಲಿಂಗ ಪೂಜಿಸುವ ಭಕ್ತರಿಗೆ ಅದೊಂದು ಪವಿತ್ರಸ್ಥಳ. ಆ ಹೆಸರು ಕೇಳುತ್ತಿದ್ದಂತೆ ಸಂತಸಗೊಂಡೆ. ಈ ಅವಕಾಶ ತಪ್ಪಿಸಿಕೊಂಡರೆ ಕಲ್ಬುರ್ಗಿಯ ಶರಣಬಸಪ್ಪನನ್ನು ನೋಡಲಾರೆ ಎನಿಸಿತು. ಒಳಕೋಣೆಗೆ ತಂದೆಯವರನ್ನು ಕರೆದು, ‘ಇದೊಂದ್ ಸತಿ, ಹೋಗಾನ ಯಪ್ಪಾ. ಆಮೇಲ್ ನೀ ಯಾರನ್ನ ತೋರಸ್ತೀಯೋ ಅವ್ರನ್ನೇ ಮದ್ವಿ ಆಗ್ತೀನಿ’ ಎಂದು ನಾನೇ ಒತ್ತಾಯಿಸಿದೆ! ಮಗಳ ಖುಷಿಯನ್ನೇ ಬಯಸುತ್ತಿದ್ದ ತಂದೆ ಅವರು. ಕಣ್ಣೀರು ಹಾಕುತ್ತಿರುವ ಮಗಳನ್ನು ಹೇಗೆ ಸಮಾಧಾನ ಮಾಡುವುದೆಂದೇ ಅವರ ಯೋಚನೆಯಾಗಿತ್ತು. ಅಂತಹ ತಂದೆಯನ್ನು ಪಡೆಯಲು ಯೋಗ ಬೇಕು. ದೀಪಾವಳಿ ಬಂತೆಂದರೆ ಸಾಕು, ‘ಏ, ಬಾರ್ಲೆ ಈರ. ಬಾರ್ಲೇ’ ಎಂದು ತಂದೆಯವರನ್ನು ಇಸ್ಪೀಟು ಆಡಲು ಕರೆದೊಯ್ಯುತ್ತಿದ್ದರು. ‘ನಿನ್ನ ಹೆಸರಲ್ಲಿ ಆಡಿ. ನಿನಗೆ ದುಡ್ಡು ಸಂಪಾದಿಸಿಕೊಡುತ್ತೇವೆ’ ಎಂದು ಬಲವಂತದಿಂದ ಕೂರಿಸುತ್ತಿದ್ದರು. ಕಾಣದಂತೆ ಎದ್ದು ಹೋಗಲು ಹವಣಿಸಿದಾಗಂತೂ, ಎಲ್ಲರೊಂದಿಗೂ ಇರಬೇಕೆಂಬ ತಾಕೀತು. ಒಲ್ಲೆನೆನ್ನಲು ತಿಳಿಯದೆ ಒತ್ತಾಯದಿಂದ ಕುಳಿತು, ಕಿಸೆ ಬರಿದಾಗಿಸಿಕೊಂಡು ಹಿಂದಿರುಗುತ್ತಿದ್ದರು. ನನಗೀಗಲೂ ಅಪ್ಪನೆಂದರೆ ನೆರಳು ಕೊಟ್ಟ ಮರ.
ಸರಿ, ಮಗಳ ಆಸೆಗೆ ತಣ್ಣೀರೆರಚದೆ ಸಮ್ಮತಿಸಿದರು. ದುಡ್ಡಿನ ಮಾತುಕತೆಗೆಂದು ಕುಳಿತರು. ದಿನವೊಂದಕ್ಕೆ ಮುನ್ನೂರು ರೂಪಾಯಿ ನೀಡುವುದು, ಊಟ ತಿಂಡಿ, ಪ್ರಯಾಣದ ಖರ್ಚು ಸಂಘಟಕರದ್ದು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ನೀಡಬೇಕೆಂಬುದು ತಂದೆಯವರ ಷರತ್ತು. ನನ್ನ ಎಣಿಕೆಯಂತೆ ಆಗಲೇ ಇಲ್ಲ! ಗುಲ್ಬರ್ಗ ಮಾರ್ಗವಾಗಿ ಹೋಗುತ್ತೇವೆಂದು ಭಾವಿಸಿದ್ದೆ. ಬಿಜಾಪುರದ ಮಾರ್ಗವಾಗಿ ಹೊರಟೆವು. ಬರುವ ದಾರಿಯಲ್ಲಿ ಇಡೀ ಊರು ಒಂದೇ ನೋಟಕ್ಕೆ ಹೇಗಿತ್ತೆಂದು ಅರ್ಥವಾಯಿತು. ಒಂದುಕಡೆ ತೀರಾ ಹಳ್ಳಿಗಾಡು, ಕಾಡು, ಧೂಳು. ಇನ್ನೊಂದೆಡೆ ಮಣ್ಣಿನ ಮನೆಗಳು, ಸಾಹುಕಾರರೇ. ಒಂದು ದೊಡ್ಡ ಕೋಣೆ. ಮಧ್ಯದಲ್ಲೊಂದು ಪರದೆ. ಗಂಡಸರು ಮತ್ತು ಹೆಂಗಸರನ್ನು ಪ್ರತ್ಯೇಕವಾಗಿಸುತ್ತಿದ್ದದ್ದೇ ಪರದೆ. ಕಲಾವಿದೆಯರೆಲ್ಲ ಒಟ್ಟಾಗಿ ಅಲ್ಲಿಯೇ ಉಳಿಯಬೇಕಿತ್ತು. ಪರದೆಯಾಚೆಗೆ ಗಂಡಸರು ಸಿಗರೇಟು ಸೇದುತ್ತಾ, ಹರಟುತ್ತಾ ಕುಳಿತಿದ್ದರು. ಅಲ್ಲೇ ಪ್ರಾಕ್ಟೀಸ್ ಮಾಡುವುದೆಂದು ತಿಳಿಯಿತು.
‘ಇದೇನಿದು? ನೀವೆಲ್ಲ ಬಂದು ಸಿಗರೇಟು ಬೀಡಿ ಸೇದಿ ಮನೆಯನ್ನ ಹೊಗೆ ತುಂಬಿಸಿ ಅಡುಗೆ ಕೋಣೆ ಮಾಡಿಟ್ಟಿದ್ದೀರಲ್ಲಾ. ಕೂಡಲೇ ನಮಗೆ ಬೇರೆ ಕೋಣೆಯ ವ್ಯವಸ್ಥೆ ಮಾಡಿ’ ಎಂದೆ. ಚಿಕ್ಕ ಹಳ್ಳಿಯಲ್ಲಿ ಇನ್ನೊಂದು ಕೋಣೆಯನ್ನು ಹೇಗೆ ಮಾಡುವುದೆಂದು ಕಂಗಾಲಾಗಿ, ನಾವು ಗಂಡಸರೆಲ್ಲ ಬೇರೆಡೆ ಉಳಿಯುತ್ತೇವೆ. ನೀವೆಲ್ಲ ಇಲ್ಲೇ ಇರಿ. ತುಸು ಹೊಂದಾಣಿಕೆ ಮಾಡಿಕೊಳ್ಳಿ ಎಂದು ಕೇಳಿಕೊಂಡರು. ರಂಗಭೂಮಿಯಲ್ಲಿ ಇವೆಲ್ಲ ಸಾಮಾನ್ಯ, ಆಯ್ತೆಂದು ಒಪ್ಪಿದೆ. ತಂದೆಯವರು ಅಲ್ಲಿದ್ದ ಕಲಾವಿದ ದಂಪತಿಗಳನ್ನು ಹೊರತುಪಡಿಸಿ, ಗಂಡಸರ್ಯಾರೂ ಬರಕೂಡದು. ಅನುಮತಿಯನ್ನು ಪಡೆದೇ ಒಳಬರಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು. ತಂದೆಯ ಈ ಮಾತಿಗೆ ಕಲಾವಿದರಾಗಿದ್ದ ತಾಳಿಕೋಟೆ ಶಿವಣ್ಣ ಮತ್ತವರ ಇಬ್ಬರು ಹೆಂಡತಿಯರು ಹೌದೆಂದು ಬೆಂಬಲಿಸಿದರು.
(ಹಿಂದಿನ ಕಂತು: ಆಗಿಹೋಯಿತು ನನ್ನ ಮದುವೆ)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

