ಅಂದಹಾಗೆ ಅವಳು ಬೇರಾರೂ ಅಲ್ಲ. ಕಂಪೆನಿಯ ಮಾಲೀಕರಾದ ಮಾಂಡ್ರೆ ಕವಿಗಳ ಮಗಳು, ಭಾಗೀರಥಿಯನ್ನೇ. ನಾನು ಹೌಹಾರಿಹೋದೆ. ಅವನೂ ಏನೂ ಸಾಮಾನ್ಯನಲ್ಲ; ಕಂಪೆನಿಯಲ್ಲಿ ಮಾಂಡ್ರೆ ಕವಿಗಳಿಗೆ ಬಲಗೈ ಆಗಿದ್ದ. ಏನೇ ಹೊಸ ನಾಟಕಗಳ ಸ್ಕ್ರಿಪ್ಟ್ ಬರೆಯುವುದಕ್ಕೆ ಜಕ್ಲಿ ಈಶ್ವರನೇ ಬರಬೇಕಿತ್ತು. ಅಕ್ಷರವಂತೂ ಅದ್ಭುತವಾಗಿತ್ತು. ‘ಕವಿಗಳಿಗೆ ವಿಷಯ ಗೊತ್ತಾ?’ ಎಂದು ಕೇಳಿದೆ. ಜಕ್ಲಿ ಈಶ್ವರ ‘ಇಲ್ಲ’ ಎಂದ. ‘ಅವರ ಮಗಳಿಗೆ, ಆ ಹುಡುಗಿಗೆ?’ ಎಂದೆ. ತಲೆಯಲ್ಲಾಡಿಸಿದ. ಅಂದರೆ ಅವಳಿಗೆ ಗೊತ್ತಿಲ್ಲದೆ ಅವಳನ್ನು ಪ್ರೀತಿಸುವುದು. ಇದೊಂಥರ ಹುಚ್ಚು ಎಂದು ಆಗಲೇ ಅನ್ನಿಸಿತಾದರೂ ಹೇಳುವ ಉಸಾಬರಿಗೆ ಹೋಗಲಿಲ್ಲ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೇಳನೆಯ ಕಂತು
ಮಾಂಡ್ರೆ ಕವಿಗಳ ಕಂಪೆನಿಗೆ ಸೇರಿದ್ದೆ. ಮಾಂಡ್ರೆ ಕವಿಗಳು ಮತ್ತು ತಲೆವಾನ ಬಿ.ಪಿ. ಸಣ್ಣಪ್ಪ ಅವರಿಬ್ಬರ ಮಾಲೀಕತ್ವದಲ್ಲಿ ಕಂಪೆನಿ ನಡೆಯುತ್ತಿತ್ತು. ಬಿ.ಪಿ.ಸಣ್ಣಪ್ಪ ಅವರು ಕಾರ್ಗಲ್ ಬೇಬಿಯನ್ನು ಕಂಪೆನಿಗೆ ಕರೆಸುವ ಆಲೋಚನೆಯಲ್ಲಿದ್ದರು. ಅಷ್ಟಕ್ಕೂ ಮಾಲೀಕರಲ್ಲವೇ? ಬೇಬಿಗೆ ಇವರ ಕಡೆಯಿಂದ ಆಹ್ವಾನವೂ ಹೋಗಿತ್ತು. ಕಂಪೆನಿಯ ತುಂಬ ಅವಳದೇ ಬಿಗಿ ಚರ್ಚೆ. ಅಂತೂ ಬಂದಳು. ಅವಳನ್ನು ದಿನವೂ ನೋಡುತ್ತಿದ್ದೆ. ನಮ್ಮ ಮುಖಕ್ಕೆ ಬಣ್ಣ ಬೀಳುತ್ತಿದ್ದದ್ದು ನಾಟಕ ಆರಂಭ ಆಗುವಾಗ. ನಾಟಕ ಮುಗಿದ ಬಳಿಕ ಬಣ್ಣವೂ ಅಳಿಸಿಹೋಗುತ್ತಿತ್ತು. ನೋಡಿ, ಬಣ್ಣದ ಜೀವಿತಾವಧಿ ಅಷ್ಟೇ! ಆದರೆ ಆಕೆ ಎಲ್ಲರಂತಲ್ಲ. ಅವಳೆಷ್ಟು ಅಲಂಕಾರಪ್ರಿಯಳಾಗಿದ್ದಳೆಂದರೆ ಹಗಲು ಹೊತ್ತಿನಲ್ಲೂ ಕೇಶಾಲಂಕಾರ, ಮುಖಕ್ಕೆ, ತುಟಿಗೆ ಬಣ್ಣ ತೀಡುವುದೇನು, ಆ ಸಂಭ್ರಮದ ಪರಾಕಾಷ್ಠೆಯೇ ಬೇರೆ ಬಿಡಿ. ಈಗಿನವರು ಮಾಡುವ ವಿಭಿನ್ನ ಬಗೆಯ ಕೇಶ ವಿನ್ಯಾಸಗಳನ್ನು ಬೇಬಿ ಆಗಲೇ ಕೈಕೂರಿಸಿಕೊಂಡಿದ್ದಳು.
ಅಲಂಕಾರಕ್ಕೂ ಅಹಂಕಾರಕ್ಕೂ ಯಾವ ಸಂಬಂಧವೂ ಇರಬೇಕೆಂದೇನೂ ಇಲ್ಲವಲ್ಲ. ಬೇಬಿಗೂ ನಾನೆಷ್ಟು ಸುಂದರವಾಗಿದ್ದೇನೆ ಎಂಬ ಅಹಮಿಕೆಯಾಗಲೀ ಕಂಪೆನಿಯಲ್ಲಿರುವ ಉಳಿದ ಕಲಾವಿದರಿಗೆ ಏನೂ ತಿಳಿದೇ ಇಲ್ಲ ಎಂಬ ತುಚ್ಛ ಭಾವವಾಗಲೀ ಇರಲಿಲ್ಲ. ಎಷ್ಟೋ ಸಲ ಅವಳೇ ಬಾ ಎಂದು ಕರೆದದ್ದಿದೆ. ತನ್ನ ಕೋಣೆಯೊಳಗೆ ಕರೆದು, ಕೈಯಲ್ಲಿ ಒಂದೆರಡು ಸೀರೆ ಹಿಡಿದು ಇದನ್ನು ತಗೋ ಎಂದೂ ಹೇಳಿದ್ದಿದೆ. ಕಂಪೆನಿಯ ಕಲಾವಿದರೆಲ್ಲ ಆಗಾಗ್ಗೆ ಏನಾದರೊಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದೆವು. ಅಲ್ಲಿಗೆ ಉಡಲು ಬೇಕಾದೀತು ಅಥವಾ ಇವತ್ತಿನ ನಾಟಕಕ್ಕೆ ಈ ಸೀರೆಯನ್ನೇ ಉಡು, ತೆಗೆದುಕೋ ಎಂದು ಬೇಬಿ ಒತ್ತಾಯಿಸುತ್ತಿದ್ದರೆ ನಾನೋ ಮುಜುಗರದ ಮುದ್ದೆಯಾಗಿಬಿಡುತ್ತಿದ್ದೆ. ನನಗದರ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ನನಗೆ ಬೇಕಾದ ವಸ್ತುಗಳನ್ನು ನಾನೇ ಕೊಂಡುಕೊಳ್ಳಬಲ್ಲೆ. ಹಾಗಿರುವಾಗ ಇರುವುದರಲ್ಲೇ ಸರಿದೂಗಿಸಿಕೊಂಡು ಹೋಗುವ ಹೊಂದಾಣಿಕೆ ನನಗೂ ಮೈಗಂಟಿತ್ತು! ಬೇಡವೆನ್ನುತ್ತಿದ್ದೆ. ಆಶ್ಚರ್ಯ ಎನಿಸಬಹುದು, ಮುಂದೆ ಅವಳು ಬೇಬಿಯಕ್ಕಳಾಗಿ ನನ್ನ ಬದುಕಿಗೆ ಅಕ್ಕನ ಸ್ಥಾನವನ್ನು ತುಂಬಿದ್ದಳು.
ಆಗ ನಾನಿದ್ದ ಸ್ಥಿತಿಯಲ್ಲಿ ಪ್ರೀತಿ ಪ್ರೇಮವನ್ನೆಲ್ಲ ಹತ್ತಿರವೂ ಸುಳಿಯಬಿಡುತ್ತಿರಲಿಲ್ಲ. ಯಾರಾದರೂ ಬಂದು, ‘ನೀನ್ ಏನಾಗಬೇಕವ್ವಾ ಮುಂದೆ?’ ಎಂದರೆ ಒಂದೇ ವಾಕ್ಯದಲ್ಲಿ ದೊಡ್ಡ ನಟಿಯಾಗಿ, ಅವ್ವಅಪ್ಪರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಬಿಡುತ್ತಿದ್ದೆನೊ ಏನೊ. ಇರಲಿ, ಹೀಗಿರುವಾಗ ನನ್ನ ಮನಸ್ಸನ್ನೂ ಬಾಗಿಸಿದ ಮೊದಲ ಪ್ರೀತಿಯ ಕಥೆಯನ್ನು ಹೇಗೆ ತಾನೆ ಮುಚ್ಚಿಡಲಿ!
ಬಳ್ಳಾರಿ ಹೂವಿನ ಹಡಗಲಿಯ ಮೆಹಬೂಬ್ ಅಲಿ ಎಂಬುವವರು ನನ್ನನ್ನಾಗ ಪ್ರೀತಿಸುತ್ತಿದ್ದರು. ಕಂಪೆನಿಯಲ್ಲಿ ಇಟಗಿ ಚಿದಾನಂದಪ್ಪ ಎಂಬ ಕಲಾವಿದರಿದ್ದರು; ಕಣ್ಣಲ್ಲೇ ಹೆದರಿಸುವವರು. ಅವರ ಸಾಕುಮಗನೇ ಈ ಮೆಹಬೂಬ್ ಅಲಿ. ರಾಮದುರ್ಗದ ಕ್ಯಾಂಪ್ ಮುಗಿಯುತ್ತಿತ್ತು. ಅಷ್ಟರಲ್ಲಿ ಒಂದು ಪ್ರೇಮಪತ್ರ ಅವನ ಕಡೆಯಿಂದ ಬಂತು. ಓದಿ, ಭಯಗೊಂಡೆ. ಅವನೋ ನೋಡಲು ಸುರಸುಂದರ. ಗುಂಗುರು ಕೂದಲು, ಕಟ್ಟುಮಸ್ತಾದ ದೇಹ, ಸಂಭಾವಿತ ವ್ಯಕ್ತಿ. ಆದರೆ ಅವನು ಮುಸ್ಲಿಂ ಧರ್ಮಕ್ಕೆ ಸೇರಿದವನೆಂಬುದೇ ನನ್ನ ಆತಂಕಕ್ಕೆ ಕಾರಣ. ಏನಾದರೂ ಮಾಡಿಬಿಟ್ಟರೆ? ಎಂದು ಮನ ದಿಗಿಲುಗೊಳ್ಳುತ್ತಿತ್ತು. ಇನ್ನು ತಡಮಾಡುವುದು ಸರಿಯಲ್ಲವೆಂದು, ನಂಬಿಕಸ್ಥರಲ್ಲಿ ವಿಷಯ ತಿಳಿಸುವುದೇ ಸೂಕ್ತ ಎಂದು ಭಾವಿಸಿದೆ. ಮಾಂಡ್ರೆ ಕವಿಗಳ ಮಗಳು ಭಾಗೀರಥಿ ಜೊತೆ ನಾನು ಒಳ್ಳೆಯ ಸ್ನೇಹ ಬೆಳೆಸಿದ್ದೆ. ಅವಳಲ್ಲಿ ಈ ವಿಷಯ ಹಂಚಿಕೊಂಡೆ. ಭಾಗೀರಥಿ ತಡಮಾಡದೆ ಅಪ್ಪನವರಿಗೆ ತಿಳಿಸಿ, ನನ್ನನ್ನು ಅವಳು ಉಳಿದಿದ್ದ ಪ್ರತ್ಯೇಕ ಮನೆಗೇ ಕರೆಸಿಕೊಂಡಳು.
ಹಾಂ. ಇಲ್ಲಿ ಇನ್ನೂ ಒಂದು ಗಂಟಿದೆ. ಮೆಹಬೂಬ್ ಅಲಿ ನನಗೆ ಪ್ರೇಮಪತ್ರವನ್ನು ಕಳಿಸುವುದಕ್ಕೆ ಸೇತುವಾಗುತ್ತಿದ್ದದ್ದು ಜಕ್ಲಿ ಈಶ್ವರ್ ಎಂಬ ವ್ಯಕ್ತಿ. ಈತನೂ ಕಲಾವಿದ. ಆದರೆ ಕಂಪೆನಿಯಲ್ಲಿ ಅವಳೊಬ್ಬಳನ್ನು ಬಿಟ್ಟು, ನನ್ನನ್ನೂ ಸೇರಿಸಿ ಎಲ್ಲರಿಗೂ ಸಹೋದರಿಯರ ಸ್ಥಾನವನ್ನೇ ಕೊಟ್ಟಿದ್ದ. ಈಗ ಅದ್ಧೂರಿಯಾಗಿ ರಕ್ಷಾಬಂಧನ ಆಚರಿಸುವಷ್ಟು ಆಗ ಇದ್ದಿದ್ದೇ ಆದರೆ ಅವನ ಕೈ ತುಂಬ ನಮ್ಮ ಪ್ರೀತಿಯ ರಾಖಿಗಳೇ ತುಂಬಿಹೋಗುತ್ತಿತ್ತು! ಅಂದಹಾಗೆ ಅವಳು ಬೇರಾರೂ ಅಲ್ಲ. ಕಂಪೆನಿಯ ಮಾಲೀಕರಾದ ಮಾಂಡ್ರೆ ಕವಿಗಳ ಮಗಳು, ಭಾಗೀರಥಿಯನ್ನೇ. ನಾನು ಹೌಹಾರಿಹೋದೆ. ಅವನೂ ಏನೂ ಸಾಮಾನ್ಯನಲ್ಲ; ಕಂಪೆನಿಯಲ್ಲಿ ಮಾಂಡ್ರೆ ಕವಿಗಳಿಗೆ ಬಲಗೈ ಆಗಿದ್ದ. ಏನೇ ಹೊಸ ನಾಟಕಗಳ ಸ್ಕ್ರಿಪ್ಟ್ ಬರೆಯುವುದಕ್ಕೆ ಜಕ್ಲಿ ಈಶ್ವರನೇ ಬರಬೇಕಿತ್ತು. ಅಕ್ಷರವಂತೂ ಅದ್ಭುತವಾಗಿತ್ತು. ‘ಕವಿಗಳಿಗೆ ವಿಷಯ ಗೊತ್ತಾ?’ ಎಂದು ಕೇಳಿದೆ. ಜಕ್ಲಿ ಈಶ್ವರ ‘ಇಲ್ಲ’ ಎಂದ. ‘ಅವರ ಮಗಳಿಗೆ, ಆ ಹುಡುಗಿಗೆ?’ ಎಂದೆ. ತಲೆಯಲ್ಲಾಡಿಸಿದ. ಅಂದರೆ ಅವಳಿಗೆ ಗೊತ್ತಿಲ್ಲದೆ ಅವಳನ್ನು ಪ್ರೀತಿಸುವುದು. ಇದೊಂಥರ ಹುಚ್ಚು ಎಂದು ಆಗಲೇ ಅನ್ನಿಸಿತಾದರೂ ಹೇಳುವ ಉಸಾಬರಿಗೆ ಹೋಗಲಿಲ್ಲ. ಅದಿರಲಿ, ನನಗೆ ಮಾತ್ರ ಅವನ ಪ್ರೀತಿಯ ವಿಷಯ ತಿಳಿದಿರುವುದು ನನ್ನ ಪಾಪ ಪುಣ್ಯಗಳಲ್ಲಿ ಯಾವ ಪಟ್ಟಿಗೆ ಸೇರಿಸಬೇಕೆಂದು ಕೊನೆಗೂ ತಿಳಿಯಲಿಲ್ಲ.
ಸರಿ, ಮೆಹಬೂಬ್ ಸಾಬನನ್ನು ನಿತ್ಯವೂ ನೋಡುತ್ತಿದ್ದೆ. ಅದಕ್ಕಿಂತ ಹೆಚ್ಚಾಗಿ ಒಟ್ಟಿಗೆ ಪಾತ್ರಗಳ ನೆಪದಲ್ಲಿ ರಂಗದಲ್ಲಿ ಅಭಿನಯಿಸುತ್ತಿದ್ದೆವು. ಬೆರೆಯುವ, ಕೂಡುವ ಅವಕಾಶ ಅನಿವಾರ್ಯವಾಗಿ ಸಿಗುತ್ತಿತ್ತು. ಇತ್ತ ಮನಸ್ಸೂ ಮಾಗುತ್ತಿತ್ತು. ಅವನ ನಟನೆಯನ್ನು ಕಂಡು ನಾನೂ ಫಿದಾ ಆಗಿದ್ದೆ. ಅದಕ್ಕೇ ಮರುಳಾದೆನಾ? ಗೊತ್ತಿಲ್ಲ. ಭಾಗೀರಥಿಯಲ್ಲಿ ಮುಂದೇನು ಮಾಡುವುದೆಂದು ಚರ್ಚಿಸುತ್ತಿದ್ದೆ. ಒಂದು ದಿನ ಅಂದೇಬಿಟ್ಟೆ, ‘ಅವ್ನನ್ನೇ ಪ್ರೀತಿಸ್ತೀನಿ ಕಣೆ. ಮದ್ವೆ ಮಾಡ್ಕೊಂಡಿರ್ಲಾ ಅತ್ಲಾಗೆ’!

ಹೀಗೆ ಮರೆಯಿಂದ ನೋಡಿ ಪಿಸುಗುಟ್ಟು ನಗುವುದು ಎಲ್ಲ ತರಲೆಗಳೂ ಶುರುವಾಗಿತ್ತು. ಆರಂಭಗಳೆಲ್ಲ ಸಂತೋಷವೇ. ಆ ಮೊದಲ ಪ್ರೀತಿ ಮೊಳೆಯುತ್ತಿದ್ದ ದಿನಗಳಂತೂ ನನ್ನ ಪಾಲಿಗೆ ಹೊಸತು. ಆದರೆ ವಾಸ್ತವ ನನ್ನನ್ನು ಎಚ್ಚರಿಸಿದ್ದು ಕೊಂಚ ತಡವಾಗಿ. ಮತ್ತೊಂದು ಕಡೆಯಿಂದ ಬೇಬಿ ಅವನಿಗೆ ಹತ್ತಿರವಾಗತೊಡಗಿದ್ದಳು. ಅವಳಿಗೂ ಅವನು ಇಷ್ಟವಾಗಿದ್ದ. ನಮ್ಮಿಬ್ಬರ ನೋಟ, ನಗು, ಮಾತುಕತೆಗಳನ್ನೆಲ್ಲ ಬೇಬಿಯೂ ಕಾಣುತ್ತಿದ್ದಳು. ಒಂದು ದಿನ ದೇವಸ್ಥಾನದ ಕಡೆ ಕರೆದೊಯ್ದು, ಅವಳ ಮತ್ತವನ ಪ್ರೀತಿಯ ವಿಚಾರ ತಿಳಿಸಿದಳು. ಬರೀ ತಿಳಿಸಿದ್ದರೆ, ನಾನೂ ನನ್ನ ಪ್ರೀತಿಯ ಪ್ರಾಮಾಣಿಕತೆಯನ್ನು ಅರ್ಥೈಸಬಹುದಿತ್ತು. ‘ನೀನವನನ್ನು ನನಗಾಗಿ ಬಿಟ್ಟುಕೊಡುತ್ತೀಯಾ?’ ಎಂದಾಗ ಒಲ್ಲೆನ್ನಲು ಮನಸ್ಸಾಗಲಿಲ್ಲ. ಭಾವನೆಗಳೆಲ್ಲ ಹರಳುಗೊಂಡಿತ್ತು. ನಿಮ್ಮಿಬ್ಬರ ಪ್ರೀತಿಗೆ ಅಡ್ಡಬರುವುದಿಲ್ಲವೆಂದು ಆಣೆ ಮಾಡಿ, ಅವಳನ್ನು ನಂಬಿಸಿದೆ. ಗೋಳಾಡಿದ್ದಷ್ಟೇ ನೆನಪು. ನಾನೇನೊ ಕ್ರಮೇಣ ಅತ್ತು ಹಗುರಾದೆ. ಆದರೆ ಅವರಿಬ್ಬರೂ ಮತ್ತೆ ಒಂದಾಗಲೇ ಇಲ್ಲ. ಇತ್ತ ಜಕ್ಲಿ ಈಶ್ವರ್ ಕೂಡ ತನ್ನ ಪ್ರೀತಿಯನ್ನು ಪಡೆಯಲಿಲ್ಲ!
ಮುಂದುವರೆಯುವುದು…
(ಹಿಂದಿನ ಕಂತು: ಕುಣಿಯಬೇಕಿದ್ದ ಕಾಲುಗಳ ಕಟ್ಟಿ..)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

