ನನಗೆ ಶಾಕ್ ಆಯಿತು. ವ್ಯಂಗ್ಯಕ್ಕೋ ತಮಾಷೆಗೋ ಏನಾದರೂ ಹೇಳುತ್ತಿರಬಹುದೇ ಅನಿಸಿತು. ನನಗೂ ಅವರಿಗೂ ಗೊತ್ತಿದ್ದವರ ಪೈಕಿ ಕೆಲವರಿಗೆ ಅವರು ಮೇಷ್ಟ್ರು ಕೂಡ ಆಗಿದ್ದರು. ಮೂವತ್ತೈದು ವರ್ಷಗಳ ಕಾಲ ಒಂದೇ ಕಾಲೇಜಿನಲ್ಲಿ ಪಾಠ ಮಾಡಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಕುವೆಂಪುಗೆ ದೂರದ ಸಂಬಂಧ ಕೂಡ. ನಮ್ಮ ತಾತನಿಗೆ ಕುವೆಂಪು ಬಗ್ಗೆ ಇನ್ನಿಲ್ಲದ ಭಕ್ತಿ, ಗೌರವ. ನಮ್ಮ ತಾತನ ತಂದೆಯೂ, ಕುವೆಂಪು ತಾತನೂ ತುಂಬಾ ಆತ್ಮೀಯರಾಗಿದ್ದರಂತೆ. ಹಾಗಾಗಿ, ಮನೆಯಲ್ಲಿ ಎಲ್ಲರಿಗೂ ಹೂವಯ್ಯ, ಮುಕುಂದಯ್ಯ, ಚಿನ್ನಮ್ಮ ಅಂತಾನೇ ಎರಡು-ಮೂರು ತಲೆಮಾರು ಹೆಸರಿಡುತ್ತಿದ್ದರು. ನನಗೆ ಹೂವಯ್ಯ ಅಂತ ಹೆಸರಿಟ್ಟಾಗ ಎಷ್ಟೋ ಜನ ನಾನು ಕೊಡವರ ಪೈಕಿ ಅಂದುಕೊಂಡರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಭಾಷಣ ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲ. ಪ್ರಚಾರ, ಪ್ರಸಿದ್ಧಿ, ಪ್ರಶಸ್ತಿಯ ಆಸೆ ಇದ್ದರೂ ಪ್ರದರ್ಶಕ ವ್ಯಕ್ತಿ-ವಸ್ತುವಾಗಿ ಕಾಣಿಸಿಕೊಳ್ಳಬಲ್ಲ ಕಲೆಯನ್ನು ಮೊದಲಿನಿಂದಲೂ ರೂಢಿಸಿಕೊಂಡು ಬರಲಿಲ್ಲ. ಈಗ ಹಾಗೆ ಹೇಳುವುದು ಕೂಡ ಅಪ್ರಾಮಾಣಿಕವಾಗುತ್ತದೆ.
ಇರಲಿ. ಹಾಗಾಗಿ, ನಾನು ಭಾಷಣ, ಸೆಮಿನಾರು, ಅದೂ ಬೆಂಗಳೂರಿನಿಂದ ಹೊರಗೆ ಎಂದರೆ ಮೂಗು ಮುರಿಯುತ್ತೇನೆ. ತಪ್ಪಿಸಿಕೊಳ್ಳಲು ನೆಪಗಳನ್ನು, ಕಾರಣಗಳನ್ನು ಹುಡುಕುತ್ತೇನೆ.
ಶಿವಮೊಗ್ಗ ಕರ್ನಾಟಕ ಸಂಘದವರು ಎರಡು-ಮೂರು ಸಂದರ್ಭಗಳಲ್ಲಿ ಬರಲೇಬೇಕೆಂದು ಮತ್ತೆ ಮತ್ತೆ ಹೇಳುತ್ತಿದ್ದರಿಂದ ಒಪ್ಪಿಕೊಳ್ಳಬೇಕಾಯಿತು. ನನ್ನ ಗ್ರಹಚಾರಕ್ಕೆ ಸಮಾರಂಭದ ಎರಡು ದಿನ ಮುಂಚೆ ಕೌಟುಂಬಿಕ ಸಮಸ್ಯೆಯೊಂದು ಬಿಗಡಾಯಿಸಿ ಹೋಗಲಾಗಲಿಲ್ಲ. ನನ್ನ ಮೇಲೆ ಅವರಿಗೆ ಅನುಮಾನ ಬರದಿದ್ದರೂ ಶಂಕೆ ಇದ್ದೇ ಇತ್ತು. ನಾನೇನೋ ತಂತ್ರ ಮಾಡಿದ್ದೇನೆ ಎನ್ನುವ ಭಾವನೆ. ಆಗೋದಾದರೆ ಮುಂದಿನ ತಿಂಗಳು ಬನ್ನಿ ಅಂತ ಸೂಚಿಸಿದರು. ನಾನು ಒಪ್ಪಿಕೊಂಡು ಮಧ್ಯಾಹ್ನ ಮೂರು ಘಂಟೆ ರೈಲಿನಲ್ಲಿ ಬೆಂಗಳೂರಿನಿಂದ ಹೊರಟೆ.
ಒಂದೆರಡು ಘಂಟೆಗಳ ಪ್ರಯಾಣದ ನಂತರ ಚಡಪಡಿಕೆ ಶುರುವಾಗುತ್ತದೆ. ಕುಳಿತ ಸೀಟಿನಲ್ಲೇ ಹೊರಳಾಡುವುದು, ಮೈ ಮುರಿಯುವುದು, ಪದೇ ಪದೇ ಎದ್ದು ಶೌಚಾಲಯಕ್ಕೆ ಹೋಗಿ ಬರುವುದು, ಪಕ್ಕದಲ್ಲಿ ಕೂತವರಿಗೆ ರೇಜಿಗೆಯಾಗುವಂತೆ ಕುರುಕಲು ತಿಂಡಿ ತಿಂದು ಕಟ ಕಟ ಶಬ್ದ ಮಾಡುವುದು, ಪೇಪರ್ ಓದಲು ಪ್ರಯತ್ನಿಸಿ, ಪುಟ ಅವರಿಗೆ ತಗಲುವಂತೆ ಮಾಡುವುದು, ಹೀಗೆ. ಯಾರಿಗಾದರೂ ಸರಿ ಬೇಸರವಾಗುತ್ತದೆ, ಇರುಸು ಮುರುಸಾಗುತ್ತದೆ. ಕೆಲವರು ಮುಖ ಸಿಂಡರಿಸುತ್ತಾರೆ. ಕೆಲವು disturb ಮಾಡಬೇಡಿ ಎಂದು ರೇಗಿಯೇ ಬಿಡುತ್ತಾರೆ. ಸ್ವಮಗ್ನನಾದ ನಾನು ಇದಕ್ಕೆಲ್ಲ ಕ್ಯಾರೆ ಅನ್ನುವುದಿಲ್ಲ. ಪಕ್ಕದಲ್ಲಿ ಕುಳಿತವರು ಯಾರು ಎಂದು ಕೂಡ ಗಮನಿಸುವುದಿಲ್ಲ.
ಈ ಸಲವೂ ಹಾಗೇ ಆಯಿತು. ಪಕ್ಕದಲ್ಲಿ ಕೂತಿದ್ದ ಹಿರಿಯರು ಅವರ ಭುಜ, ಮೊಣಕೈ ಸೋಕಿಸಿ, ಕೆಮ್ಮಿ, ಒಂದೆರಡು ಸಲ ನನ್ನ ಕಡೆ ತೀಕ್ಷ್ಣವಾಗಿ ನೋಡಿ ಅಸಮಾಧಾನ ಸೂಚಿಸಿದರು. ನಾನು ಅವರನ್ನು ಗಮನಿಸಲೇಬೇಕಾಯಿತು. ಅವರು ರಾಮಕೃಷ್ಣ ಪರಮಹಂಸರ ವಚನವೇದ ಪುಸ್ತಕ ಓದುತ್ತಿದ್ದರು. ಅಡಿಗೆರೆ ಎಳೆಯುತ್ತಿದ್ದರು. ಪಾಕೆಟ್ ನೋಟ್‌ಬುಕ್‌ನಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಮಾಡಿಕೊಂಡ ಟಿಪ್ಪಣಿಯನ್ನು ಮತ್ತೊಂದು ಸಲ ಓದಿ, ಸಮಾಧಾನ ಪಟ್ಟು ಮತ್ತೆ ಪುಸ್ತಕ ಓದಲು ಪ್ರಾರಂಭಿಸುತ್ತಿದ್ದರು.
ಹೆಚ್ಚು ಕಡಿಮೆ ಬೋಳು ತಲೆ, ಅಗಲವಾದ ಕಿವಿಗಳು, ಎಡಗಿವಿಯಲ್ಲಿ ಓಲೆಯ ತೂತು ಇನ್ನೂ ಹಾಗೇ ಉಳಿದಿದೆ. ಆ ಭಾಗ ಕಪ್ಪಗಾಗಿದೆ. ಮುಖದಲ್ಲಿ ಮೀಸೆ ಗಡ್ಡವಿಲ್ಲದಿದ್ದರೂ ಕಿವಿಗಳ ಹತ್ತಿರ ಮಾತ್ರ ಪೊದೆ ಕೂದಲು. ಹಿರಿಯರು ಪುಸ್ತಕ ಓದುತ್ತಿದ್ದರೋ ಇಲ್ಲ ಪುಸ್ತಕ ಓದಲು ಹೆಚ್ಚು ಏಕಾಗ್ರತೆ ಬಯಸುತ್ತಿದ್ದರೋ ನನಗೆ ತಿಳಿಯಲಿಲ್ಲ.
ಯಾವಾಗಲೂ ಕತೆ-ಕಾದಂಬರಿಗಳ ಲೋಕದಲ್ಲೇ ಮುಳುಗಿರುವ ನನಗೆ ಅವರ ಬಗ್ಗೆ ಅಪ್ರಯತ್ನಪೂರ್ವಕವಾಗಿ ಗೌರವ ಮೂಡಿತು. ಮಾತು ಕತೆಗೆ ಹೇಗೆ ಎಳೆಯುವುದು ಎಂದು ಉಪಾಯ ಹುಡುಕುತ್ತಿದ್ದೆ. ಅವರಿಗೇನು ಮಾತು ಕತೆಯಲ್ಲಿ ಆಸಕ್ತಿ ಇರಲಿಲ್ಲವೆಂದು ಕಾಣುತ್ತದೆ.
ಎರಡು-ಎರಡೂವರೆ ಘಂಟೆ ಪ್ರಯಾಣವಾಯಿತು. ತಿಪಟೂರು ದಾಟಿರಬೇಕು. ನನ್ನ ಪಕ್ಕದಲ್ಲಿ ಕೂತಿದ್ದ ಹಿರಿಯರು ಕೂಡ ಮನುಷ್ಯರೇ ತಾನೇ! ಮೈ ಮುರಿದರು, ಆಕಳಿಸಿದರು, ಚಿಟಕಿ ಹೊಡೆದರು, ಕನ್ನಡಕ ತೆಗೆದು ನಿರುದ್ದಿಶ್ಯವಾಗಿ ನನ್ನ ಕಡೆ ನೋಡಿದರು. ನನಗೆ ಅಷ್ಟೇ ಸಾಕಾಯಿತು.
ನಮಸ್ಕಾರ ಅಂದೆ.
ಅವರು ಕೂಡ ಒಲ್ಲದ ಮನಸ್ಸಿನಿಂದ ನಮಸ್ಕಾರ ಅನ್ನಲೇ ಬೇಕಾಯಿತು.
ಅಗತ್ಯವಿಲ್ಲದಿದ್ದರೂ ನಾನು ಸ್ವಲ್ಪ ನಕ್ಕೆ. ಹಲ್ಲು ಕೂಡ ಕಿರಿದಿರಬೇಕು.
ಶಿವಮೊಗ್ಗ ತಮ್ಮ ಸ್ವಂತ ಸ್ಥಳವೇ? ಎಂದು ಕೇಳಿದೆ.
ಅವರಿಗೆ ರೇಗಿತೆಂದು ಕಾಣುತ್ತದೆ. ಮುಖ ಸಿಂಡರಿಸಿಕೊಂಡು, “ನನ್ನದು ಮಾತ್ರವಲ್ಲ. ಸುಮಾರು ಏಳೆಂಟು ತಲೆಗಳದ್ದು” ಎಂದು ರೇಗುವ ದಾಟಿಯಲ್ಲಿ ಹೇಳಿದರು. ಮಾತು ಬಿರುಸಾಗಿತ್ತು. ಅವರಿಗೂ ಅದು ಗೊತ್ತಾಗಿರಬೇಕು. ಧ್ವನಿ ತಗ್ಗಿಸಿ, “ತಮ್ಮದು” ಎಂದರು.
ನಾನು ಮಂಡದ್ಯದವನು ಎಂದೆ.
ಮತ್ತೆ ಈಗೇಕೆ ಶಿವಮೊಗ್ಗಕ್ಕೆ? ಸಂಬಂಧದವರು ಇದ್ದಾರಾ?
ಇಲ್ಲ ಎಂದು ಹೇಳುವಾಗ ನನಗೆ ಹಿಂಜರಿಕೆಯಾಯಿತು. ಭಾಷಣಕ್ಕೆ ಅಂತ ಹೇಳಲು ಬೇಜಾರು. ನನಗೇ ಉತ್ಸಾಹವಿಲ್ಲ. ಸುಳ್ಳು ಹೇಳಿದರೆ ಮಾತು ಮುಂದುವರಿಸುವುದು ಹೇಗೆ ಗೊತ್ತಿಲ್ಲ.
ಕರ್ನಾಟಕ ಸಂಘದಲ್ಲಿ ಸ್ವಲ್ಪ ಕೆಲಸವಿದೆ ಎಂದು ತಡೆದು ಹೇಳಿದೆ.
ಓ, ನೀವು ಪುಸ್ತಕ ವ್ಯಾಪಾರಿಯಾ ಎಂದು ರಾಗ ಎಳೆದರು. ಧ್ವನಿಯಲ್ಲಿ ತಾತ್ಸಾರವಿತ್ತು.
ಈಗ ನಿಜ ಹೇಳಲೇ ಬೇಕಾಯಿತು.
ನಿಜ ಹೇಳುವಾಗ ಆಸೆ –
ಯಾವ ಭಾಷಣ, ಯಾರ ಭಾಷಣ. ನಿಮ್ಮ ಹೆಸರೇನು ಎಂದೆಲ್ಲಾ ಕೇಳಬಹುದು, ನನ್ನ ಹೆಸರು ಅವರಿಗೆ ಗೊತ್ತಿರಬಹುದು ಅಂತ ಕಣ್ಣುಗಳಲ್ಲಿ ನಿರೀಕ್ಷೆ ತುಂಬಿಕೊಂಡ ಅವರನ್ನೇ ನೋಡುತ್ತಾ, ಧ್ವನಿಯನ್ನು ಸ್ಪಷ್ಟಮಾಡಿಕೊಂಡು ಎರಡು-ಮೂರು ವಾಕ್ಯಗಳಲ್ಲಿ ಎಲ್ಲವನ್ನೂ ಹೇಳಿದೆ.
ಇಲ್ಲ, ಇಲ್ಲ. ನನ್ನ ಹೆಸರು ಮಾತ್ರವಲ್ಲ, ನನ್ನ ಹೆಸರಿನ ಯಾರೊಬ್ಬರೂ ಅವರಿಗೆ ಗೊತ್ತೇ ಇರಲಿಲ್ಲ. ಆದರೆ ಅದರಿಂದೇನೂ ಅವರಿಗೆ ಬೇಸರವಾಗಲಿಲ್ಲ.
ಕರ್ನಾಟಕ ಸಂಘದ ಪದಾಧಿಕಾರಿಗಳು, ಶಿವಮೊಗ್ಗದ ನನ್ನ ಲೇಖಕ ಮಿತ್ರರೆಲ್ಲ ಅವರಿಗೆ ಗೊತ್ತಿದ್ದರು. ಕೆಲವರ ಹೆಸರು ಹೇಳಿದಾಗ, ನನಗೆ ಯಾರ‍್ಯಾರು ಗೊತ್ತು ಎಂದು ಹೇಳಿದೆ. ಈಗಲಾದರೂ ಅವರು ನನ್ನ ಬಗ್ಗೆ ಹೆಚ್ಚು ಕುತೂಹಲ ತೋರಬಹುದು, ನನ್ನ ಕೃತಿಗಳ ಬಗ್ಗೆ ವಿಚಾರಿಸಬಹುದು ಎನ್ನುವ ಆಸೆಯಿಂದ.
ಇಲ್ಲ, ಹಾಗಾಗಲಿಲ್ಲ.
ಅವರು ಮಾತನಾಡುವ ಮೂಡಿಗೆ ಬಂದಿದ್ದರು. ಮಾತು ಮುಂದುವರಿಸಬೇಕಲ್ಲ.
ನಾನು “ವಚನವೇದ” ಪುಸ್ತಕದ ಬಗ್ಗೆ ಮಾತನಾಡಿದೆ. ಅವರು ಪುಸ್ತಕದ ಹೊರಮೈ ಸವರಿದರು. ತಕ್ಷಣ ಅವರ ಮುಖದಲ್ಲಿ ಭಕ್ತಿಭಾವ ಮೂಡಿತು. ಪುಸ್ತಕವನ್ನು ಕಣ್ಣಿಗೊತ್ತಿಕೊಂಡರು. ಮತ್ತೆ ಹೊರಮೈ ಸವರಿದರು. ನಾನು ಅವರ ಹೆಸರು ಕೇಳಲೇಬೇಕಾಯಿತು.
ಹೂವಯ್ಯ, ಪ್ರೊಫೆಸರ್ ಹೂವಯ್ಯ ಎಂದರು.

ನನಗೆ ಶಾಕ್ ಆಯಿತು. ವ್ಯಂಗ್ಯಕ್ಕೋ ತಮಾಷೆಗೋ ಏನಾದರೂ ಹೇಳುತ್ತಿರಬಹುದೇ ಅನಿಸಿತು. ನನಗೂ ಅವರಿಗೂ ಗೊತ್ತಿದ್ದವರ ಪೈಕಿ ಕೆಲವರಿಗೆ ಅವರು ಮೇಷ್ಟ್ರು ಕೂಡ ಆಗಿದ್ದರು. ಮೂವತ್ತೈದು ವರ್ಷಗಳ ಕಾಲ ಒಂದೇ ಕಾಲೇಜಿನಲ್ಲಿ ಪಾಠ ಮಾಡಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಕುವೆಂಪುಗೆ ದೂರದ ಸಂಬಂಧ ಕೂಡ. ನಮ್ಮ ತಾತನಿಗೆ ಕುವೆಂಪು ಬಗ್ಗೆ ಇನ್ನಿಲ್ಲದ ಭಕ್ತಿ, ಗೌರವ. ನಮ್ಮ ತಾತನ ತಂದೆಯೂ, ಕುವೆಂಪು ತಾತನೂ ತುಂಬಾ ಆತ್ಮೀಯರಾಗಿದ್ದರಂತೆ. ಹಾಗಾಗಿ, ಮನೆಯಲ್ಲಿ ಎಲ್ಲರಿಗೂ ಹೂವಯ್ಯ, ಮುಕುಂದಯ್ಯ, ಚಿನ್ನಮ್ಮ ಅಂತಾನೇ ಎರಡು-ಮೂರು ತಲೆಮಾರು ಹೆಸರಿಡುತ್ತಿದ್ದರು. ನನಗೆ ಹೂವಯ್ಯ ಅಂತ ಹೆಸರಿಟ್ಟಾಗ ಎಷ್ಟೋ ಜನ ನಾನು ಕೊಡವರ ಪೈಕಿ ಅಂದುಕೊಂಡರು. ಪೂವಯ್ಯ ಅಲ್ಲ, ಹೂವಯ್ಯ ಅಂತ ಬಿಡಿಸಿ ಹೇಳಬೇಕಾಯಿತು. ಒಂದು ಕಾಲದಲ್ಲಿ ನಾನು ನೋಡೋಕೆ ಕೂಡ ಕೊಡವರ ತರ ಇದ್ದೆ.
ಈಗ ನನ್ನ ಕಡೆಯಿಂದ ಯಾವ ರೀತಿಯ ಸೂಚನೆ, ಪ್ರಚೋದನೆಯೂ ಇಲ್ಲದೆ, ಅವರಾಗಿ ಅವರೇ, ಅವರಷ್ಟಕ್ಕೇ ಮಾತನಾಡುತ್ತಿದ್ದರು.
ಅದೊಂದು ಕಾಲಕ್ಕೆ ನಾನು ಕೂಡ writer ಆಗಿದ್ದೆ. ನಾನೊಬ್ಬನೇ ಅಂತ ಅಲ್ಲ, ನಮ್ಮ ಪೈಕಿ ಎಲ್ಲರೂ ಒಂದಷ್ಟು ವರ್ಷಗಳ ಕಾಲ ಮರಿ ಕುವೆಂಪುಗಳೇ. ಇರಲಿ. ನಾಲ್ಕು ಸಾಮಾಜಿಕ ಕಾದಂಬರಿಗಳು, ಒಂದು ಕಥಾ ಸಂಕಲನ ಕೂಡ ಪ್ರಕಟಿಸಿದ್ದೆ. ಪಠ್ಯಪುಸ್ತಕ ಕಮಿಟಿಯ ಸದಸ್ಯ ಕೂಡ ಆಗಿದ್ದೆ. ಒಂದಷ್ಟು ವರ್ಷ ಬರೆದ ಮೇಲೆ, ನಾನು ಬರಹಗಾರನಲ್ಲ, ಬರೆಯುವುದಕ್ಕೆ ನನ್ನನ್ನು ದೇವರು ಹುಟ್ಟಿಸಿಲ್ಲ ಅಂತ ಗೊತ್ತಾಯಿತು. ಹಾಗೆ ಗೊತ್ತಾದದ್ದು ಕೂಡ ಪರಮಹಂಸರ ಪ್ರಸಾದವೇ ಸರಿ. ಇಲ್ಲದೇ ಹೋದರೆ ನನಗೆ ನಾನೇ ಮೋಸ ಮಾಡಿಕೊಳ್ಳುತ್ತಾ, ಬರಕೊಂಡು, ಇನ್ನೊಬ್ಬರಿಗೂ ಮೋಸ ಮಾಡ್ತಾ ಬದುಕಬೇಕಾಗಿತ್ತು, ಅಲ್ಲವಾ ಅಂತ ನನ್ನ ಕಡೆ ಪೂರ್ಣವಾಗಿ ಮುಖ ತಿರುಗಿಸಿ ಕೇಳಿದರು. ಮುಖದಲ್ಲಿ ಪ್ರಶಾಂತ ಭಾವ.
ಅವರ ವಯಸ್ಸು, ಅನುಭವ, ತಿಳುವಳಿಕೆಯ ಹಿನ್ನೆಲೆಯಲ್ಲಿ ನಾನು ಸಮಾಧಾನ ಅಥವಾ ಪ್ರೋತ್ಸಾಹದ ಮಾತು ಹೇಳುವುದು ಸೂಕ್ತವಾಗಿ ಕಾಣಲಿಲ್ಲ, ಆದರೂ:
ಇಲ್ಲ ಸಾರ್, ಬರೆಯುವುದನ್ನು ನೀವು ನಿಲ್ಲಿಸಬಾರದಾಗಿತ್ತು. ಏನೇ ಆದರೂ ಬರೆಯುವವರಿಗೆ ಬರೆಯುವಾಗ ಸಂತೋಷ ಆಗುತ್ತದೆ. ಅದಕ್ಕಾದರೂ ಬರೀತಾ ಹೋಗಬೇಕಲ್ಲವಾ ಸಾರ್ ಎಂದು ಗೌರವ, ಅನುನಯ ಎರಡನ್ನೂ ಬೆರೆಸಿ ಕೇಳಿದೆ.
ಪ್ರೊ|| ಹೂವಯ್ಯ, ದೃಢವಾದ ಧ್ವಾನಿಯಲ್ಲಿ, ಸಂತೋಷ ಅಲ್ಲ ಅದು, ಮರೀಚಿಕೆ, ಮರೀಚಿಕೆ, ಮರೀಚಿಕೆ ಅಂತ ಮೂರು ನಾಲ್ಕು ಸಲ ಬಿರುಸಾಗಿ ಹೇಳಿ, ದಿಢೀರನೆ ಮಾತು ನಿಲ್ಲಿಸಿಬಿಟ್ಟರು. ಕಣ್ಣುಮುಚ್ಚಿ ವಚನವೇದವನ್ನು ತೊಡೆಯ ಮೇಲಿಟ್ಟುಕೊಂಡರು. ದೀರ್ಘವಾಗಿ ಉಸಿರೆಳೆದುಕೊಂಡು, ನಿಧಾನವಾಗಿ ಉಸಿರು ಬಿಡುತ್ತಿದ್ದರು. ನಾಲ್ಕಾರು ನಿಮಿಷ ಕಳೆಯಿತು.
ಇಡೀ ಕೋಚ್‌ಗೆ ಕೇಳುವಂತೆ, “This Kuvempu is such a great writer, he finished all of us” ಎಂದು ಸಣ್ಣದಾಗಿ ಕಿರುಚಿಕೊಂಡರು.
ವ್ಯಂಗ್ಯವಿಲ್ಲ, ವ್ಯಗ್ರತೆಯಿಲ್ಲ. ಬೇರೆ ಯಾವ ಪ್ರಯಾಣಿಕರೂ ಪ್ರತಿಕ್ರಿಯಿಸಲೂ ಇಲ್ಲ. ನಾನು ತಾನೆ ಏನು ಹೇಳಲಿ, ಏನು ಮಾಡಲಿ? ಸುಮ್ಮನೆ ಅವರನ್ನೇ ನೋಡುತ್ತಾ ಕೂತೆ.
ನಮಗೆಲ್ಲ ಬರೆಯಲು ಏನೂ ಉಳಿಸಲೇ ಇಲ್ವಲ್ರೀ ಆ ಮಹಾನುಭಾವ. ಇನ್ನು ಇನ್ನೂರು ಮುನ್ನೂರು ವರ್ಷಗಳಲ್ಲಿ ಕೂಡ ಇಲ್ಲಿಂದ major writer ಬರೊಲ್ಲ. ಎಲ್ಲವನ್ನೂ ನುಂಗಿ ನೀರು ಕುಡಿದಿದ್ದಾನೆ. ಭೂಮಿ ಒಳಗೆ ಇರುವ ಕನಸನ್ನು ಕೂಡ ದಿವ್ಯ ದೃಷ್ಟಿಯಿಂದ ಕನಸು ಕಂಡು ಬರೆದು ಬಿಟ್ಟಿದ್ದಾನೆ. ಇದನ್ನು ತಿಳಿಯದೇ ಹೋದವರು ಮಾತ್ರ ಬರೀತಾರೆ. He has killed all of us.
ಧ್ವನಿಗೆ ಈಗ ನಿರ್ಣಯದ, ನಿರ್ಧಾರದ ಧಾಟಿ.
ಇಲ್ಲ ಸಾರ್, ಹಾಗೇಕೆ ಹೇಳುವಿರಿ. ಅವರಿದ್ದಾಗಲೇ ಅವರ ಮಗ ತೇಜಸ್ವಿ, ಅನಂತಮೂರ್ತಿ, ಲಂಕೇಶ್ ರೀತಿಯ ಬರಹಗಾರರು ಬಂದಿದ್ದಾರೆ, ಬರೆದಿದ್ದಾರೆ.
ಪ್ರೊ|| ಹೂವಯ್ಯ ಮೊದಲ ಬಾರಿಗೆ ನಕ್ಕರು. ತಮಾಷೆ ಧಾಟಿಯ ನಗು ಅದು.
“ಬರೆದರು ನಿಜ. ಬರವಣಿಗೆಯಲ್ರೀ ಅದು. Deviation, Standard Deviation, Mean Deviation ಅಂತಾರಲ್ಲ ಸಂಖ್ಯಾ ಶಾಸ್ತ್ರದಲ್ಲಿ, ತತ್ವಶಾಸ್ತ್ರದಲ್ಲಿ ಹಾಗೆ. ದೊಡ್ಡದು ಎದುರಿಗಿರುವಾಗ ಚೂರು, ಪಾರು ಭಿನ್ನವಾಗಿದ್ದರೂ ಅದೂ ಕೂಡ ಆಕರ್ಷಕವಾಗಿ ಕಾಣುತ್ತೆ ಅಷ್ಟೇ.
ನನಗೆ ಸಹ-ಪ್ರಯಾಣಿಕರ ಜೊತೆ ಮಾತನಾಡುವಾಗ ಇದನ್ನೆಲ್ಲ ಮಾತನಾಡಬೇಕೆಂಬ ಲೆಕ್ಕವೂ ಇರಲಿಲ್ಲ, ಸಿದ್ಧತೆಯೂ ಇರಲಿಲ್ಲ. ಇದು ಕೇವಲ ನನ್ನ ಕುತೂಹಲ, ಸಮಯ ಕಳೆಯಲು ಅಷ್ಟೇ. ಹೂವಯ್ಯನವರದು ಆತ್ಮಸಾಕ್ಷಾತ್ಕಾರದ ಗಂಭೀರ ಮಾತುಗಳು. ನನ್ನ ಹತ್ತಿರ ಹೇಳಿದ್ದಾರೆ ಅಷ್ಟೇ. ಅದೆಲ್ಲ ಅವರ ಒಳಗಿನ ಮಾತುಗಳು.
ನಾನು ಏನಾದರೂ ಉತ್ತರಿಸಲಿ. ಸುಮ್ಮನೆ ನಗುತ್ತಿದ್ದೆ. ಸದ್ಯ, ಈ ಹಿರಿಯರಿಗೆ ನನ್ನ ಬರವಣಿಗೆಯ ಕೃತಿಗಳ ಬಗ್ಗೆ ಏನೂ ಗೊತ್ತಿಲ್ಲದೇ ಇರುವುದು ಒಳ್ಳೆಯದೇ ಆಯಿತು ಅನಿಸಿ ನಿರಾಳಭಾವ ಮೂಡಿತು.
Cosmic vision ಗೊತ್ತಿತ್ರೀ ಕುವೆಂಪುಗೆ. ಅದರ ಪ್ರತಿಕ್ಷಣದ ಚಲನವಲನ, ಆಸೆ, ಆಕಾಂಕ್ಷೆ ಗೊತ್ತಿತ್ತು. ನಮಗೆ ಕಾಣುವ, ನಾವು ಕಂಡೆವೆಂದುಕೊಂಡ ಜೀವನ ಎಲ್ಲವೂ cosmic vision ನ ಒಂದು ಭಾಗ ಅಂತ ಗೊತ್ತಿತ್ತು. ಅವರು ಮಹತ್ವವಾದದ್ದನ್ನು ಬರೆಯಲಿಲ್ಲ, ಬರೆದದ್ದು ಮಹತ್ತಿನ ಭಾಗವಾಗಿತ್ತು. ನಾವೆಲ್ಲ ನಮಗೆ ಕಾಣುವುದರಲ್ಲಿ ಮಹತ್ವವಾದದ್ದನ್ನು ಕಾಣಲು ಹೊರಡುತ್ತೇವೆ. ಕಂಡದ್ದೇ ಮಹತ್ವದ್ದೆಂದು ಭಾವಿಸುತ್ತೇವೆ. ಆದರೆ ನಿಜವಾದ ಮಹತ್ ಆದದ್ದರ ಕಡೆ ಗಮನ ಹರಿಸೋಲ್ಲ. ಅಂತಹವರಿಗೆ ಒಟ್ಟಾಗಿ ಹಿಂದಿನ, ಇಂದಿನ, ಮುಂದಿನ ನೂರಾರು ವರ್ಷಗಳೆಲ್ಲ ಒಟ್ಟಾಗಿ ಕಂಡು ಬರುತ್ತೆ. ನಮಗೆ ಎದುರಿಗೆ ಇದ್ದರೂ ಕಾಣೋಲ್ಲ. ಹುಡುಕೋಕೆ, ಕಟ್ಟೋಕೆ ಆಸೆ ಪಡ್ತೀವಿ. ಚಪಲ ಆಗುತ್ತೆ ಬರೀತೀವಿ. I am really terribly angry with him. ನಾವೆಲ್ಲ ನಿರ್ನಾಮವಾಗಿ ಹೋಗಿದ್ದೀವೆ ಆತನಿಂದ.
ಭಾಷಣ, ಉಪನ್ಯಾಸ ಮಾಡುತ್ತಿರುವವರಂತೆ ಎರಡೂ ಕೈಗಳನ್ನು ಮುಷ್ಠಿ ಕಟ್ಟಿ, ಮುಂದಿನ ಸೀಟಿನ ಹಿಂಭಾಗಕ್ಕೆ ಗುದ್ದಿದರು. ಆ ಸೀಟಿನಲ್ಲಿ ಕುಳಿತಿದ್ದವರಿಗೆ ಬೇಸರವಾಯಿತು. ಬೆನ್ನಿಗೆ ನೋವು ಕೂಡ ಆಗಿರಬೇಕು. ಎದ್ದು ನಿಂತು ಹಿಂತಿರುಗಿ ಕೆಕ್ಕರಿಸಿ ನೋಡಿದರು. ಮೇಲೆ ತಿರುಗತ್ತಿದ್ದ ಫ್ಯಾನ್ ಕೂಡ ಒಂದು ಕ್ಷಣ ಕಿರ್ ಅಂತ ಶಬ್ದ ಮಾಡಿ ಅವರ ಕೆಕ್ಕರಿಸುವ ದೃಷ್ಟಿಯ ಜೊತೆ ಸೇರಿಕೊಂಡಿತು.
ನನಗೂ ಇದೆಲ್ಲ ಸ್ವಲ್ಪ ಅತಿಯಾಯಿತೆನಿಸಿತೇನೋ ಅನಿಸಿ ಹಾಗಂತ ಹೇಳುವ ಮೊದಲೇ ಪ್ರೊ|| ಹೂವಯ್ಯ ಸಮಾಧಾನಚಿತ್ತರಾದರು. ಕಣ್ಣುಗಳ ತುಂಬಾ ನೀರು. ಒರೆಸಿಕೊಂಡರು. ಮುಖವೆಲ್ಲ ಒದ್ದೆಯಾಯಿತು. ಮತ್ತೆ ಕೆಲವು ಕ್ಷಣಗಳ ಹಿಂದೆ ಕಂಡಿದ್ದ ಪ್ರಶಾಂತ ಕಳೆ.
ನನ್ನ ಹತ್ತಿರ ಇದುವರೆಗೆ ಮಾತೇ ಆಡಿಲ್ಲದವರಂತೆ ಮತ್ತೆ ವಚನವೇದದ ಪುಟಗಳನ್ನು ಬಿಡಿಸಿ ಓದಲು ಶುರು ಮಾಡಿದರು. ಮತ್ತೆ ನನ್ನ ಕಡೆ ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ರೈಲು ಶಿವಮೊಗ್ಗದಲ್ಲಿ ನಿಂತು ಇಳಿಯುವಾಗಲೂ ನಮಸ್ಕಾರ ಹೇಳಲಿಲ್ಲ. ಸಹ-ಪ್ರಯಾಣಿಕರ ಗುಂಪು, ಗಡಿಬಿಡಿಯಲ್ಲಿ ಕರಗಿ ಹೋದರು. ನಾನು ಪೆದ್ದು ಪೆದ್ದಾಗಿ ಅವರು ಕರಗಿ ಹೋದ ದಿಕ್ಕನ್ನೇ ನೋಡುತ್ತಾ ನಿಂತಿದ್ದೆ. ಟಿಕೆಟ್ ಕಲೆಕ್ಟರ್ ನನ್ನನ್ನು ಅನುಮಾನದಿಂದ ನೋಡುತ್ತಿದ್ದ. ನನ್ನನ್ನು ಸ್ವಾಗತಿಸಲು ಬಂದಿದ್ದ ಸ್ವಯಂಸೇವಕರು ನನ್ನ ಗುರುತು ಹಿಡಿದು ಬಳಿ ಬಂದರು.
*****
ಆವತ್ತು ರಾತ್ರಿ ನನಗೆ ನಿದ್ದೆ ಸರಿಯಾಗಿ ಬರಲಿಲ್ಲ. ಬೆಳಗಿನ ಜಾವದಲ್ಲಿ ನಿದ್ದೆ ಹತ್ತಿರಬೇಕು, ಇಲ್ಲ ಕನಸು ಬಿದ್ದಿರಬೇಕು, ಇಲ್ಲ ಎರಡರ ನಡುವಿನ ಸ್ಥಿತಿಯಿರಬೇಕು.
ಕನಸಿನ ತುಂಬಾ ಕಾಡೆಮ್ಮೆಗಳು, ಹಂದಿ ದೊಡ್ಡಿ, ಪಟ್ಟೆ ಹುಲಿ, ಕೊತ ಕೊತ ಕುದಿಯುತ್ತಿರುವ ಕಲಗಚ್ಚು, ಕಲ್ಲು ಮಂಟಪ, ಎಲೆಯಿಂದ ತೊಟ್ಟಿಕ್ಕುತ್ತಿರುವ ನೀರಿನ ಹನಿ, ಎರೆಹುಳ, ಕಂಬಳಿ ಹುಳ. ಎಚ್ಚರವಾದಾಗ ಬೆಳಿಗ್ಗೆ ಏಳೂವರೆ. ರೂಮಿನ ತುಂಬಾ ಬಿಸಿಲು. ಹಿಂದಿನ ರಾತ್ರಿ ಕರ್ಟನ್ ಹಾಕುವುದನ್ನು ಮರೆತಿದ್ದೆ ಎಂದು ಕಾಣುತ್ತದೆ.
*****
ಭಾಷಣಕ್ಕೆಂದು ಬರೆದುಕೊಂಡು ಬಂದಿದ್ದ ಟಿಪ್ಪಣಿಗಳನ್ನು ಓದಲು, ಪರಿಶೀಲಿಸಲು ಪ್ರಯತ್ನಿಸಿದರೆ, ಅಕ್ಷರಗಳೇ ಸರಿಯಾಗಿ ಕಾಣುತ್ತಿರಲಿಲ್ಲ. ಮನಸ್ಸಿಗೆ ಏಕಾಗ್ರತೆ ಸಾಧ್ಯವಾಗುತ್ತಿರಲಿಲ್ಲ. ಪ್ರೊ|| ಹೂವಯ್ಯ ಹೇಳಿದ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿದ್ದವು. ಹೂವಯ್ಯ ಹೇಳಿದ್ದು ನಿಜವಾದರೆ, ಸರಿಯಿದ್ದರೆ, ನಾವೆಲ್ಲ ಏನು ಮಾಡಬೇಕು? ಬದುಕುವುದು, ಬರೆಯುವುದು, ಎಲ್ಲ ನಿರರ್ಥಕವೇ?
ಹಾಗೇನೂ ಇರಲಾರದು, ಇರಬಾರದು. ಹೂವಯ್ಯನವರು ಹೇಳಿದ cosmic life, cosmic energy ಯ ಭಾಗ ನಾವೂ ಕೂಡ ತಾನೇ. ಆದರೆ ನಮ್ಮ ಸ್ವಭಾವ, ಉದ್ದೇಶ, ನಮ್ಮ destination ಏನು ಅನ್ನುವುದನ್ನು ಕಂಡುಕೊಂಡು ನಮ್ಮ ನಮ್ಮ destiny ಯನ್ನು ನಾವು ತಲುಪಬೇಕು ಅಷ್ಟೇ.
ಸಾಹಿತ್ಯ ವಲಯದ ಗೆಳೆಯರಿಗೆ, ಸಂಘದ ಪದಾಧಿಕಾರಿಗಳಿಗೆ ಕರೆ ಮಾಡಿ ಹೂವಯ್ಯನವರ ಪತ್ತೆ ತಿಳಿದು ನನಗನಿಸುತ್ತಿರುವುದನ್ನು, ಬಿದ್ದ ಕನಸು, ಎಲ್ಲವನ್ನೂ ಹೇಳಿಬಿಡಲೇ ಅನಿಸಿತು. ಬೇಡ, ಅವರಿಗೇನು ನನ್ನಲ್ಲಾಗಲೀ, ನಾನು ಹೇಳುವುದರಲ್ಲಾಗಲೀ ಆಸಕ್ತಿ ಇರಲಾರದು ಅನಿಸಿತು.

ನಾನು ಭಾಷಣ ಮಾಡಬೇಕಾಗಿದ್ದುದು “ಕುವೆಂಪು ಪರಂಪರೆಯತ್ತ” ಎಂಬ ಶೀರ್ಷಿಕೆಯ ಮೇಲೆ. ಅದಕ್ಕಾಗಿ ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಬದಿಗಿಟ್ಟು, ವಿಶ್ಯ ಚೈತನ್ಯದ ಸ್ವರೂಪದ ಬಗ್ಗೆ ಮಾತನಾಡಿದೆ, ವಿಶ್ವಮಾನವ ಕಲ್ಪನೆಯ ಬಗ್ಗೆ ಅಲ್ಲ.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

