Advertisement
 ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

 ಬಾಂಧವ್ಯದ ಕುಲುಮೆಯಲ್ಲಿ ಅರಳುವ ಸ್ವಾತಂತ್ರ್ಯದ ಓಟ…: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಶಿಬಿರದಲ್ಲಿನ ಜನರ ಆತಂಕ ಭಾರತ ಸರ್ಕಾರದ ಗಾಳಿಗೋಪುರದಂತ ಆಶ್ವಾಸನೆಗಳ ಜೊತೆಗೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ಕೂಗು, ರಣಭೀಕರದಂತೆ ಕೇಳಿಸುತ್ತಿತ್ತು. ಪಾಕಿಸ್ತಾನದಲ್ಲಿ ಗಳಿಸಿದ ಆಸ್ತಿಯನ್ನು ಅಲ್ಲೇ ಬಿಟ್ಟು ಬಂದವರ ನೋವು  ಹೇಳತೀರದು. ಮತ್ತೆ ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಹೆಜ್ಜೆಯ ಭಾರ ಅಧಿಕವಾಗಿತ್ತು. ಆಸ್ತಿ ಪಾಸ್ತಿಗಿಂತ ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು ಬಂದ ಹಿಂದೂ  ಮುಸ್ಲಿಮರ ಸಂಕಟದ ಸ್ಥಿತಿ. ಬಾಲ್ಯದ ದಿನಗಳನ್ನು ಕಳೆದುಕೊಂಡು ಅನಾಥ ಪ್ರಜ್ಞೆಯ ಛಾಯೆ ಒಡಮೂಡಿತ್ತು. 
“ಸ್ವಾತಂತ್ರ್ಯದ ಓಟ…” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಬಾಂಧವ್ಯ ಎರಡು ಬಗೆಯದು. ಒಂದು ಹಿತಕರ ಇನ್ನೊಂದು ಅಹಿತಕರ. ಇವೆರಡರ ಸಂಘರ್ಷ ನಿಂತಿಲ್ಲ. ಕಾರಣ, ಮನುಷ್ಯ ತನ್ನ ಅಸ್ತಿತ್ವದ  ಹುಡುಕಾಟದಲ್ಲಿದ್ದಾನೆ. ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾ ಅಥವಾ ಬೇರೆಯವರ ಸ್ವಾತಂತ್ರ್ಯವನ್ನು ಮಟ್ಟ ಹಾಕಬೇಕಾ?

ಸ್ವಾತಂತ್ರ್ಯವೆಂದರೇನು ಒಂದು ದೇಶವನ್ನು ಇಬ್ಭಾಗ ಮಾಡುವುದಾ? ಧರ್ಮದ ಆಧಾರದ ಮೇಲೆ ದೇಶ ಕಟ್ಟುವುದಾ ಅಥವಾ ಒಡೆಯುವುದಾ? ಜನರ ಮನಸ್ಸುಗಳಲಿ ಕಲ್ಮಶದ ವಿಚಾರಗಳನ್ನು ಬಿತ್ತಿ, ನಂಬಿಕೆ- ಅಪನಂಬಿಕೆಯನ್ನು ಭಟ್ಟಿ ಇಳಿಸುವುದಾ? ಈ ತರಹದ ಆತಂಕಗಳನ್ನು ತೆರೆದಿಡುವಲ್ಲಿ ನಾಟಕ ಮಾತಾಡುವುದು. ರೈಲು ನಿಲ್ದಾಣದ ದೊಂಬಿ, ಗದ್ದಲ, ಲಾರಿಯ ಪಯಣ, ಪೊಲೀಸರ ಗಸ್ತು, ಕಣಿವೆಯ ಮೌನದಂತ ಯಾತನಾ ಶಿಬಿರ, ಬಾಂಬಿನ ದಾಳಿ, ರೇಡಿಯೋ- ಆಭರಣ ಸಂಬಂಧದ ಛಾಯೆಗಳು ನೋಡುಗರನ್ನು  ನಿಬ್ಬೆರಗಾಗಿಸಿತ್ತು.

ಅಖಂಡ ಭಾರತ ಇಬ್ಬಾಗವಾದಾಗ ಜನರ ಮನಸ್ಥಿತಿ ಹಾಗೂ ಪರಿಸ್ಥಿತಿಗಳ ಆತಂಕ ನಾಟಕದಲ್ಲಿ ಮಡುಗಟ್ಟಿದೆ. ಮನುಷ್ಯ ಸಂಬಂಧಗಳ ತೀವ್ರತೆಯ ಬರಗಾಲದಲ್ಲಿ ಉಸಿರು ಬಿಗಿ ಹಿಡಿದು ನಾವು ನಿಂತಿದ್ದೇವೆ. ಕ್ಷಣ ಕ್ಷಣಕ್ಕೂ ಭಯದ ನೆರಳು ಬೆನ್ನು ಹತ್ತಿದೆ. ಬಿಡುಗಡೆಯ ದಾರಿ ಯಾವುದೆಂಬ ಗೊಂದಲಗಳ ನಡುವೆ ಮಾನವ ಕಾಲದೊಂದಿಗೆ ಓಡುತ್ತಿದ್ದಾನೆ. ನಿರಂತರ ಓಟ. ನೆಲೆಕಂಡರು ನೆಮ್ಮದಿ ಇಲ್ಲ. ಕುಂತರು ನೆಮ್ಮದಿ ಇಲ್ಲ. ಈ ಓಟಕ್ಕೆ ವಿರಾಮ ನೀಡುವರಾರು? ಏಕೆಂದರೆ  ದೇಶದ ತುಂಬಾ ದ್ವೇಷ, ಅಸೂಯೆ, ಅಧರ್ಮ, ವಿಕೃತಿ ಮನಸುಗಳ ಓಟಕ್ಕೆ ಕಡಿವಾಣ ಹಾಕಬೇಕು ಎಂಬ ಆರ್ದ್ರತೆ ನಾಟಕದ್ದು.

 ಚಾಂದ್ ಅಲಿ – ಚಂದನ್: ಮುತ್ತುಪ್ಪಾಡಿ 

ಚಾಂದ್ ಅಲಿ ಶಿಬಿರದಲ್ಲಿ ಹೆಸರು ಕೇಳಿದಾಗ  ಚಂದನ್ ಎಂದು ತನ್ವೀರ್  ನೋಂದಣಿ ಮಾಡಿಸುತ್ತಾಳೆ. ಹೆಸರಲ್ಲಿ ಏನಿದೆ ಹೇಳಿ. ಧರ್ಮಾತೀತವಾದ ಹೆಸರುಗಳನ್ನು ವಿವಿಧ ಧರ್ಮದವರು ಕೊಡುಕೊಳ್ಳುವಿಕೆ ಮಾಡಿಕೊಂಡಾಗ ಜಾತ್ಯಾತೀತ ಸಮಾಜ ನಿರ್ಮಾಣವಾಗಲು ಸಾಧ್ಯವಾಗಬಹುದು. ಅಥವಾ ಮನಸುಗಳು ಧರ್ಮಾತೀತವಾಗಿ ಬೆಳೆದಾಗ ಭಾವೈಕ್ಯದ ಕೊಂಡಿ ಗಟ್ಟಿಯಾಗಬಹುದೆಂಬ ಎಂಬ ಹಲವು ಯೋಚನೆಗಳೊಂದಿಗೆ ನಾಟಕ ಓಡುತ್ತದೆ. ಇಂದಿಗೂ ಕೂಡ ಹಳ್ಳಿಗಳಲ್ಲಿ ಮೊಹರಂ ಹಿಂದೂ- ಮುಸ್ಲಿಮರಿಬ್ಬರ ಐಕ್ಯತೆಯ ಭಾಗವಾಗದೆ, ಭಾವವಾಗಿದೆ. ಈ ನಿಟ್ಟಿನಲ್ಲಿ ಅಲಾಯಿ ಕುಣಿತ ರಂಗಕ್ಕೆ ಮೆರುಗು ತಂದು ಕೊಟ್ಟಿತು. ಖಾಜಾ ಬಂದೇ ನವಾಜ್ ರಂತಹ ಸೂಫಿಗಳ ತತ್ವಗಳು ನಾಟಕಕ್ಕೆ ನಿದರ್ಶನವಾಗಿದ್ದವು

ಚಾಂದ್ಅಲಿ ಮೂಲಕ ಆ ದಿನಗಳಲ್ಲಿ ಜನರು ಅನುಭವಿಸಿದ ಯಾತನೆಯನ್ನು ಕಟ್ಟಿಕೊಡಲಾಗಿದೆ. ಚಾಂದ್ ಅಲಿ  ಸರ್ದಾರ್ ಜಿ ಅವರ  ಮಹಿಳೆಯರನ್ನು ಪಾಕಿಸ್ತಾನದಿಂದ ಭಾರತಕ್ಕೆ  ತಲುಪಿಸಿದ. ಚಾಂದ್ ಅಲಿ  ಚಂದನ್ ಆಗಿ ಇಲ್ಲಿಯೇ  ನೆಲಸಿ, ತನ್ನ ಮಾತೃಭೂಮಿ ಪಾಕಿಸ್ತಾನಕ್ಕೆ ಹೋಗಬೇಕೆಂಬ ತೀವ್ರತೆಯಲ್ಲಿ ಮುತ್ತುಪ್ಪಾಡಿ ಎಂಬ ಊರಿಗೆ ಬಂದು, ತನ್ನ ಓಡಾಟಕ್ಕೆ ವಿರಾಮ ನೀಡಿದ್ದ. ಆದರೆ ಮನಸ್ಸು ಮಾತ್ರ ನೆನಪುಗಳ ಓಟವಾಗಿತ್ತು. ಮುಸ್ಲಿಂ, ಹಿಂದೂ ಸಿಖ್, ಎನ್ನದೆ ಎಲ್ಲರೂ ಅನ್ಯೋನ್ಯವಾಗಿರುವ ಊರು ಮುತ್ತುಪ್ಪಾಡಿ. ಒಂದು ರೀತಿಯ ಸ್ವಾತಂತ್ರ್ಯದ ಊರು. ಇಲ್ಲಿಯೇ ಚಾಂದ್ ಅಲಿ ತನ್ನ ಜೀವನದ ಏರಿಳಿತಗಳನ್ನು ಕಾಣುವನು.  ‘ಅಲ್ಲಾಹುವಿನ ಕರುಣೆ, ನಂಬಿಕೆಯೇ ಮಾನವನ ಉಸಿರಾದರೆ ಪಾಪ ಕರ್ಮಗಳಿಗೆ ಕೆಲಸವಿಲ್ಲ’ ಎಂಬ ಆಧ್ಯಾತ್ಮದ ಅಲೆಗಳು ನಾಟಕಕ್ಕೆ ಮೆರಗು ತಂದವು.

ಮುತ್ತುಪ್ಪಾಡಿಯಲ್ಲಿ ನಾಟಕದ ಎರಡನೇ ಭಾಗ. ಬಾಬಾ ಮುಸ್ಸಜ್ಜ ಮತ್ತು ಖೈರುನ್ನಿಸಾ  ದಾಂಪತ್ಯಕ್ಕೆ ಬಡತನವಿದ್ದರೂ ಪ್ರೀತಿಗೆ ಕೊರತೆ ಇರಲಿಲ್ಲ. ಸ್ವಂತ ಮಗ ಫಕ್ರುದ್ದೀನ್ ಫಕೀರ್  (ಜೋಳಿಗೆ ಬಾಬಾ)ನಾಗಿ ಊರೂರು ಅಲೆಯ ತೊಡಗಿದ್ದ. ಈತನೇ ಚಾಂದ್ ಅಲಿಯನ್ನು  ಕರೆ ತಂದಿದ್ದ.

ಚಾಂದ್ಅಲಿ ಆಶ್ರಿತನಾಗಿ ಬಂದು, ಮಗನೇ ಆಗಿಬಿಡುವನು. ಅವನು  ನಿಸ್ವಾರ್ಥ ಸೇವಕನಾಗಿದ್ದ. ದಂಪತಿಗಳ ಪ್ರೀತಿಯ ಮಗನಾಗಿದ್ದ. ಜೋಳಿಗೆ ಬಾಬಾ ಇವನ ಆಶ್ರಯದ ದೀವಿಗೆಯಾಗಿದ್ದರು. ವೃದ್ಧ ದಂಪತಿಗಳ ಸಾವು ನಾಟಕವನ್ನು ಮತ್ತಷ್ಟು ಮೌನದ ಮಡಿಲಿಗೆ ನೂಕಿತ್ತು. ದಂಪತಿಯ ಮನೆಯನ್ನು ಪರಿಚಯಿಸುವಾಗ, ಪಂಪ್ ಸೆಟ್ ಕೆಟ್ಟು ಹೋಗಿದೆ ರಿಪೇರಿ ಮಾಡುವವರನ್ನು ಕರೆದುಕೊಂಡು ಬರಬೇಕೆಂಬ ಸೂಚನೆ ಇದೆ. ಈ ಸಮಾಜದಲ್ಲಿ ಜಾತಿ, ಧರ್ಮ, ಭೂಮಿ, ಹಣಕ್ಕಾಗಿ ಮಾನವೀಯತೆ ಕೆಟ್ಟು ಹೋಗಿದೆ ಎಂಬ ಆತಂಕ  ಇರಬಹುದೇ? ಪ್ರೀತಿ, ಪ್ರೇಮ, ವಿಶ್ವಾಸ ಸಹಕಾರ  ಬತ್ತಿ ಹೋಗಿವೆ. ಏಕೆಂದರೆ ಈಗ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಚಾಲನೆಯಲ್ಲಿದೆ. ಕಾಯಂ ನಿವಾಸಿ ಎನ್ನುವರು ಅಧಿಕೃತ ಮಾಹಿತಿ ಕೊಡಬೇಕು ಎಂಬ ಆಡಳಿತದ ವೈಖರಿಯನ್ನು ಪ್ರಶ್ನಿಸಿದಂತಿದೆ.

ವಿಧವೆಯಾದ ಮಹಿಳೆ ನಾಲ್ಕು ತಿಂಗಳು ಹತ್ತು ದಿನ ಯಾವೊಬ್ಬ ಪುರುಷನ ಮುಖವನ್ನು ನೋಡಬಾರದೆಂಬ ಕಟ್ಟಳೆಯ ಚರ್ಚೆ. ಈ ಮನೆಯಲ್ಲಿ ಯುವಕ ವಾಸ ಮಾಡಬೇಕಾ? ಬೇಡವಾ ಎಂಬ ಗೊಂದಲ. ಮಹಿಳೆಯ ಸ್ವಾತಂತ್ರ್ಯವನ್ನು  ಕಸಿದುಕೊಳ್ಳುವ ಧರ್ಮದ ಜನರು. ಧರ್ಮ ಎಲ್ಲರಿಗೂ ಸ್ವಾತಂತ್ರ್ಯವನ್ನು ಕೊಟ್ಟಿದೆ. ಆದರೆ ಧರ್ಮಾಧಿಕಾರಿಗಳು ಸರ್ವಾಧಿಕಾರಿಯಂತೆ  ವರ್ತಿಸಿ ಮಹಿಳೆಯರಿಗೆ ಕಟ್ಟಳೆಗಳನ್ನು ವಿಧಿಸುವುದು ತರವಲ್ಲ. ತಮ್ಮ ಸ್ವಾತಂತ್ರ್ಯಕ್ಕಾಗಿ  ಮಹಿಳೆಯರು ಇನ್ನೂ ಹೋರಾಟ ಮಾಡಬೇಕಾಗಿದೆ ಎಂಬ ವಿವೇಚನೆ ಇದೆ.

ತನ್ವಿರ್  ಪಡೆದ ಚಿನ್ನದ ಆಭರಣಗಳನ್ನು  ಚಾಂದ್ ಅಲಿ   ತನ್ನ ಜೀವಿತಾವಧಿಯಲ್ಲಿ ಬಳಸಿಕೊಳ್ಳಲಿಲ್ಲ. ಅದನ್ನು ಹಿಂದಕ್ಕೆ ಕೊಡುವ ಅವಕಾಶ ಒದಗಿ ಬರಲಿ ಎಂದು ಅಲ್ಲಾಹುನಲ್ಲಿ  ಪ್ರಾರ್ಥಿಸುತ್ತಾ ಇದ್ದ. ಇತ್ತ ತನ್ವೀರ್ ಗುರುದ್ವಾರದಲ್ಲಿ ಚಾಂದ್ ಅಲಿ ರೇಡಿಯೋವನ್ನು ತನ್ನ ನೆನಪಿನ ವಸ್ತುವನ್ನಾಗಿಟ್ಟು ಕೊಂಡು ಕಾಪಾಡಿಕೊಂಡಿದ್ದು ಅನನ್ಯ ಬಾಂಧವ್ಯದ ಪ್ರತೀಕ. ವಾಘಾ ಗಡಿಯಲ್ಲಿ ಕಳೆದುಕೊಂಡವರನ್ನು ಪುನಃ ಭೇಟಿಯಾಗುವ ಸನ್ನಿವೇಶ ರೋಮಾಂಚನಕಾರಿಯಾದದು.

 ಶಿಬಿರದ ಕಂದೀಲುಗಳ ಯಾತನೆ:

1947ರ ಭಾರತದ ವಾಸ್ತವ ಚಿತ್ರಣ ಹಿಂದೂ ನಿರಾಶ್ರಿತರ ಶಿಬಿರದಲ್ಲಿ  ಕಂದೀಲುಗಳ ಧ್ಯಾನದೊಂದಿಗೆ ತೋರಿಸಲಾಗಿತ್ತು. ಐದಾರು ಕಂದಿಲುಗಳಿದ್ದವು. ಒಂದು ಪ್ರಕಾಶಮಾನವಾಗಿ, ಮತ್ತೊಂದು ಸಮಚಿತ್ತವಾಗಿ, ಇನ್ನೊಂದು ಶಾಂತತೆಯ ಸಣ್ಣ ಮಿಂಚಿನ ಹುಳುವಾಗಿ, ಮತ್ತೊಂದು ಗಾಢ ಬೆಳಕು, ಇನ್ನೊಂದು ತನ್ನಲ್ಲಿನ ಶಕ್ತಿ ಕುಂದು ಹೋಗುತ್ತಿದೆ ಎಂಬ ಆತಂಕದಲ್ಲಿ ಕಂದೀಲುಗಳು ಮಿನುಗುತ್ತಿದ್ದವು. ಈ ದೃಶ್ಯ ರಂಗಕ್ಕೆ ಹೊಸ ಸಾಧ್ಯತೆಯನ್ನು ತಂದು ಕೊಟ್ಟಿದ್ದವು.

ಶಿಬಿರದಲ್ಲಿನ ಜನರ ಆತಂಕ ಭಾರತ ಸರ್ಕಾರದ ಗಾಳಿಗೋಪುರದಂತ ಆಶ್ವಾಸನೆಗಳ ಜೊತೆಗೆ ‘ಬೋಲೋ ಭಾರತ್ ಮಾತಾ ಕಿ ಜೈ’ ಎಂಬ ಕೂಗು, ರಣಭೀಕರದಂತೆ ಕೇಳಿಸುತ್ತಿತ್ತು. ಪಾಕಿಸ್ತಾನದಲ್ಲಿ ಗಳಿಸಿದ ಆಸ್ತಿಯನ್ನು ಅಲ್ಲೇ ಬಿಟ್ಟು ಬಂದವರ ನೋವು  ಹೇಳತೀರದು. ಮತ್ತೆ ಭಾರತದಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂಬ ಹೆಜ್ಜೆಯ ಭಾರ ಅಧಿಕವಾಗಿತ್ತು. ಆಸ್ತಿ ಪಾಸ್ತಿಗಿಂತ ಹಿರಿಯರು ಬಾಳಿ ಬದುಕಿದ ಮನೆಯನ್ನು ಬಿಟ್ಟು ಬಂದ ಹಿಂದೂ  ಮುಸ್ಲಿಮರ ಸಂಕಟದ ಸ್ಥಿತಿ. ಬಾಲ್ಯದ ದಿನಗಳನ್ನು ಕಳೆದುಕೊಂಡು ಅನಾಥ ಪ್ರಜ್ಞೆಯ ಛಾಯೆ ಒಡಮೂಡಿತ್ತು.

ನಾಟಕದ ಆರಂಭದಲ್ಲಿನ ವಲಸಿಗರ ದೃಶ್ಯ, ಶಿಬಿರದ ರಾತ್ರಿ ಮೌನ ಕಣಿವೆಯ ಧ್ಯಾನವನ್ನು ಕೆಣಕುತ್ತಿತ್ತು. ನಿರಾಶ್ರಿತರ ಶಿಬಿರದಲ್ಲಿನ ಆಕ್ರೋಶ, ಶಾಂತಿಯ ಮಾತುಕತೆಗಳು ಗುಡುಗು ಸಿಡಿಲಿನ ಆರ್ಭಟಗಳು ಭವಿಷ್ಯದ ಬದುಕನ್ನು ಹೆದರಿಸುತ್ತಿದ್ದವು.

ನಗುವ ನಗಿಸುವ
ದಿನಗಳು ಕಳೆದು ಹೋದವು
 ರಾತ್ರಿ ಯಾತನೆ
 ಭಯಾನಕ ರಾತ್ರಿ
 ತಾರೆಗಳ ಹರಸಿ ನೀವು
 ಸಾವಿನ ಮೌನವಿಹುದಿಂದು” ಎಂಬ ಸಾಲುಗಳು ನಾಟಕಕ್ಕೆ ದಿಕ್ಸೂಚಿಯಾಗಿದ್ದವು.

ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರು ತಮ್ಮ ಆಸ್ತಿಪಾಸ್ತಿಯನ್ನು ಅಲ್ಲೇ ಬಿಟ್ಟು ಬಂದರು. ಭಾರತದಲ್ಲಿ ಮತ್ತೆ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಾಯಿತು. ಅಲ್ಲಿದ್ದರೆ ಜೀವ ಹೋಗುತ್ತಿತ್ತು ಅಷ್ಟೇ. ಇಲ್ಲಿ ಜೀವನವೇ ಹೋಗುತ್ತಿದೆ. ಮಾತೃಭೂಮಿಯ ಮೋಹ ಮರೆಯಲು ಪಾತ್ರಗಳಿಗೆ ಸಾಧ್ಯವಾಗುತ್ತಿರಲಿಲ್ಲ.

ಧರ್ಮದಾಧಾರದ ಮೇಲೆ ದೇಶ ನಿರ್ಮಾಣವಾದರೆ ಮನುಷ್ಯನ ಬದುಕು ಹಸನಾಗಲು ಸಾಧ್ಯವೇ? ಎಲ್ಲಿ ಇದ್ದರೂ ಎಲ್ಲರೂ ಸರ್ವ ಸ್ವತಂತ್ರವೆಂಬ ಆದರ್ಶ ನಮ್ಮದಾದಾಗ ಮಾತ್ರ ಬದುಕು ಬಣ್ಣಗಳಿಂದ ತುಂಬಲು ಸಾಧ್ಯ. ಇಂದು ಕತ್ತಲಲಿ  ಬಣ್ಣ ತುಂಬುವ ಜಾಯಮಾನದವರು ಹೆಚ್ಚಾಗಿದ್ದಾರೆ.

ಪಾದ ಹಾಗೂ ಕತ್ತರಿಯ  ಭಿತ್ತಿ ಚಿತ್ರಗಳು:

ನಾಟಕದ ಬಿತ್ತಿಚಿತ್ರಗಳೆರಡೂ ಅಗಾಧವಾಗಿ ನನ್ನನ್ನು ಕಾಡಿದವು. ಒಂದು ಪಾದದ ಚಿತ್ರ. ಈ ಪಾದ ನಡಿಗೆಯ ಸಂಕೇತವನ್ನು, ನೆಲೆ ನಿಂತ ಸ್ಥಳದ  ಸಂಚಲವನ್ನು ಸೃಷ್ಟಿಸಿದೆ. ಈ ಪಾದ ಇತಿಹಾಸದ ಕರಾಳತೆಯನ್ನು ಸಾಕ್ಷೀಕರಿಸುತ್ತಿತ್ತು. ಪಾದದ ಮೇಲಿನ ಟ್ರೈನ್ ಚಿತ್ರಣ, ಜನರು ವಲಸೆ ಹೋಗುವ ಸನ್ನಿವೇಶ, ಪ್ರತಿ ಬೆರಳುಗಳ ಮೇಲೆ ಸಾಮಾನು ಸರಂಜಾಮಗಳು. ಬದುಕಿನ ಬಾಳ ಬಂಡಿಯ ಪಯಣವನ್ನು ಪ್ರತಿಬಿಂಬಿಸುತ್ತಿದ್ದವು.

ಇಂದಿಗೂ ಕೂಡ ನನ್ನೂರಿನ ಜನತೆ ಹೊಟ್ಟೆಪಾಡಿಗಾಗಿ  ರೈಲ್ವೆ ಸ್ಟೇಷನ್‌ನಲ್ಲಿ ಬೀಡು ಬಿಟ್ಟಿರುತ್ತಾರೆ. ಬೆಂಗಳೂರು, ಹೈದ್ರಾಬಾದ್ ಮುಂಬೈಗಳಿಗೆ ವಲಸೆ  ಹೋಗುವ ಜನರ ಬವಣೆ ನೀಗುವುದು ಯಾವಾಗ ಎಂದು ಮನ ಮಿಡಿಯುತ್ತದೆ. ಪ್ರತಿದಿನ ವಲಸೆ ಹೋಗುವ ನನ್ನ ಜನಗಳು ಶೋಷಣೆಯ ಬೆಂಕಿಯಲ್ಲಿ ಕುದಿಯುತ್ತಿದ್ದಾರೆ. ಊರು ಬಿಟ್ಟು ಅಲೆಯುತ್ತಿದ್ದಾರೆ. ಗುಳೆ ಹೋಗುವವರನ್ನು ತಡೆಯಲು ವ್ಯವಸ್ಥೆ ರೂಪಿಸಿದ ಪರ್ಯಾಯ ಮಾರ್ಗಗಳು ಅಂಗ ವೈಕಲ್ಯಕ್ಕೆ ಗುರಿಯಾಗಿವೆ. ಕೆಲವರು  ದೊಡ್ಡ ನಗರಗಳ ಕಾಯಂ ನಿವಾಸಿಗಳಾಗಿದ್ದರಿಂದ  ಹಳ್ಳಿಗಳು ಬರಿದಾಗುತ್ತಿವೆ. ಇನ್ನೊಂದು ಕತ್ತರಿ ಚಿತ್ರ. ಕತ್ತರಿ ಕತ್ತರಿಸುವದರ  ಸಂಕೇತ. ಇಬ್ಭಾಗ ಮಾಡುವುದರ ಸೂಚನೆ. ದೇಹವನ್ನು ತುಂಡಾಗಿಸಿದರೆ ಪ್ರಾಣ ಉಳಿಯಲು ಸಾಧ್ಯವೇ?  ಮನುಷ್ಯನ ನಡುವಿನ ಪ್ರೀತಿ, ವಾತ್ಸಲ್ಯ ನಂಬಿಕೆಯನ್ನು ಕತ್ತರಿಸಿ ಹಾಕಲಾಗಿದೆ ಎಂಬ ಪ್ರತಿರೋಧವಿದೆ. ಮನಕ್ಕೆ ವಿಷ-ಬೀಜ ಬಿತ್ತುವ ಕೈಗಳ ಹುನ್ನಾರಕ್ಕೆ ಬೇಲಿ ಹಾಕುವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.

 ನಿಲ್ಲದ ಗುಂಡಿನ ದಾಳಿ 

ಮಹಾತ್ಮ ಗಾಂಧೀಜಿಯ ಹತ್ಯೆ, ನಾಟಕದ ಅಂತಃಕರಣಕ್ಕೆ ಸಾಕ್ಷಿಯಾಯಿತು. ಶಿವಮೊಗ್ಗ ರಂಗಾಯಣ ತನ್ನ ನಾಟಕಗಳಲ್ಲಿ ಗಾಂಧಿಯನ್ನು ಪ್ರತ್ಯಕ್ಷವಾಗಿ ತೋರಿಸದೆ, ಪರೋಕ್ಷವಾಗಿ ಗಾಂಧಿತನವನ್ನು ಪ್ರಸ್ತುತಪಡಿಸುವ ಜಾಣ್ಮೆ ಮೆಚ್ಚುವಂಥದ್ದು. ಗಾಂಧಿಯ ಸಂಕೇತವಾಗಿ ಚರಕ ಚಲಿಸುತ್ತಿತ್ತು. ಗಾಂಧೀಜಿ ಗುಂಡೇಟಿಗೆ ಬಲಿಯಾಗಿ ಹಿಂದೂ-ಮುಸ್ಲಿಮರ ಭಾವೈಕ್ಯತೆ ಕೊಂಡಿ ಕಳಿಚಿತು. ಚರಕವನ್ನು ನಂಬಿದ ಜನರ ಬದುಕು ಅನಾಥವಾಯಿತು. ಇಂದಿಗೂ ಕೂಡ ಸಮಾನತೆಯ ಸ್ವಾತಂತ್ರ್ಯಕ್ಕಾ ಗಿ, ವೈಚಾರಿಕ ನಿಲುವಿಗಾಗಿ, ಸತ್ಯ, ಅಹಿಂಸೆ, ನ್ಯಾಯಕ್ಕಾಗಿ ಹೋರಾಡುವವರ ಗುಂಡಿಗೆಗಳಿಗೆ ಗುಂಡು ಹಾರಿಸಲಾಗುತ್ತಿದೆ. ವಿಚಾರ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ  ನರೇಂದ್ರ ದಾಬೊಲ್ಕರ್, ಗೋವಿಂದ ಪಾನಸರೆ, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ನೆನಪಾದರು. ಇಂದಿಗೂ ದೇಶ ದೇಶಗಳ ನಡುವೆ ಬಾಂಬುಗಳ  ಸುರಿಮಳೆಯಾಗುತ್ತಿದೆ. ದೇಶಗಳ ನಡುವಿನ ವಲಸೆ ಇಂದಿಗೂ ನಡೆಯುತ್ತಿದೆ. ದೇಶಗಳ ದ್ವೇಷ, ಸಿಟ್ಟು, ಆಕ್ರೋಶ, ಹಿಂಸೆಯ ರೂಪದಲ್ಲಿ ಜನರ ಬದುಕು ನರಕ ಯಾತನೆಯಾಗಿದೆ. ನಾಟಕದ ಕೊನೆಯಲ್ಲಿ ಬಾಂಬಿನ ಶಬ್ದ, ಇಂದಿಗೂ ಮಾನವನ ಯುದ್ಧ ನಿಂತಿಲ್ಲವೆಂಬುದರ  ವ್ಯಂಗ್ಯಾತ್ಮಕ ಧ್ವನಿ ಅನುರಣಿಸಿತ್ತು.

ಬೋಳುವಾರರ ‘ಸ್ವಾತಂತ್ರದ ಓಟ’ ಕಾದಂಬರಿಗೆ 2016ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಹತ್ತು ವರ್ಷಗಳ ತರುವಾಯ ಇದು ರಂಗಕೃತಿಯಾಗಿ ಸ್ವರೂಪ ಪಡೆದುಕೊಂಡಿದ್ದು ವಿಶೇಷ. ಏಕೆಂದರೆ ಇದು ಸಾವಿರ ಪುಟಗಳ ಕಾದಂಬರಿ. ಕಲಬುರ್ಗಿ ರಂಗಾಯಣ ಆಯೋಜಿಸಿದ ಈ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಪಂಡಿತ್ ರಂಗಮಂದಿರದಲ್ಲಿ ಪ್ರಸ್ತುತಪಡಿಸಿದ್ದರು. ನಟರಾಜ್ ಹೊನ್ನವಳ್ಳಿ ಅವರ ನಿರ್ದೇಶನದಲ್ಲಿ ನಟರು ಮೈಚಳಿ ಬಿಟ್ಟು ನಟಿಸಿದರು. ಉತ್ತಮ ಕಲಾವಿದರಾಗಿ ಪಳಗುತ್ತಿರುವ ಸೂಚನೆಯೂ ಇತ್ತು. ರಾಘವ ಕಮ್ಮಾರರ ಸಂಗೀತ ಹಿತ ಮಿತವಾಗಿತ್ತು. ರಂಗ ಸಜ್ಜಿಕೆ, ಬೆಳಕು, ವಸ್ತ್ರ ವಿನ್ಯಾಸಗಳಲ್ಲಿ ಜೀವಂತಿಕೆ ವ್ಯಕ್ತವಾಗುತ್ತಿತ್ತು. ಮಂಜು ನಾರಾಯಣ್, ಸಹನಾ  ಪಿಂಜಾರ್ ಇತರರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.

ಕೊನೆಯದಾಗಿ, ಸ್ವಾತಂತ್ರ್ಯವೆಂದರೆ ಗಡಿಗಳನ್ನು ನಿರ್ಮಿಸಬೇಕೇ? ಯುದ್ಧ ಅನಿವಾರ್ಯವೇ? ಧಾರ್ಮಿಕ ಭಯೋತ್ಪಾದನೆ ಹುಟ್ಟು ಹಾಕಬೇಕಾ? ಇಂದಿನ ಶೈಕ್ಷಣಿಕ ಸ್ವಾತಂತ್ರ್ಯದ ಆಶಯಗಳನ್ನು ಪಡೆದುಕೊಳ್ಳುವುದಾದರೂ ಹೇಗೆ  ಎಂಬ ಅಂಶಗಳನ್ನು ನಾಟಕ  ಪ್ರಸ್ತುತಪಡಿಸಿತು.

 

ನಾಟಕದ ದೃಶ್ಯಗಳು ಮತ್ತು ಲೇಖಕರ ಚಿತ್ರ

About The Author

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ�‌ ಗೋಪಾಲ�‌ ಬರೆದ ಈ ಭಾನ�ವಾರದ ಕತೆ “ಆಟ�
https://tinyurl.com/5575hs6r

ಮದ�ವೆ ಮದ�ವೆ ಆ ಸಿಹಿ ಪದವೆ
ಲಾಸ�‌ ವೇಗಸ�‌ನ ‘ಲಿಟಲ� ವೈಟ� ವೆಡ�ಡಿಂಗ� ಚಾಪೆಲ�’ ಕ�ರಿತ� ಅಚಲ ಸೇತ� ಬರಹ
https://tinyurl.com/2v28abrv

ಭಾರತಕ�ಕೆ ಹತ�ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜ� ಅಂಕಣ “ಅನೇಕ ಅಮೆರಿಕಾ� ನಿಮ�ಮ ಓದಿಗೆ
https://tinyurl.com/35mrwwsn

ಭವ�ಯ ಟಿ.ಎಸ�. ಬರೆದ ಈ ದಿನದ ಕವಿತೆ

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ