Advertisement
ಬೀಜಾವೃತ ಅಪಘಾತ ವೃತ್ತಾಂತ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ಬೀಜಾವೃತ ಅಪಘಾತ ವೃತ್ತಾಂತ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

 ವಿಭಾ, “ಅಲ್ಲ ಬಾವ, ಬೀಜಗಳು ಇಲ್ಲದ ಕಲ್ಲಂಗಡಿ, ದ್ರಾಕ್ಷಿ ಇವೆಲ್ಲಾ ತಿನ್ನಕ್ಕೇನೋ ಚೆನ್ನಾಗಿರತ್ತೆ. ಆದ್ರೆ, ಒಂದು ಸಲ ಹಣ್ಣು ಬಿಟ್ರೆ, ಆ ಗಿಡದ ಕಥೆ ಮುಗೀತಾ? ಬೀಜಗಳೇ ಇಲ್ದೇ ಆ ಗಿಡ ಮರಿ ಹಾಕೋದು ಹೇಗೆ? ಅಂದ್ರೆ, ಹೊಸ ಗಿಡ ಬೆಳೆಯೋದು ಹೇಗೆ? ಪ್ರಕೃತಿ ಇಂಥಾ ಕೆಲ್ಸ ಯಾಕೆ ಮಾಡ್ತು ಅಂತ ಆಶ್ಚರ್ಯ ಆಗತ್ತೆ” ಎಂದಳು. ಆಗ ಪ್ರಕಾಶ್, “ನೀನು ಹೇಳಿದ್ದು ನಿಜವೇ ವಿಭಾ. ಯಾವುದೇ ಪ್ರಭೇದವಾಗ್ಲೀ, ತನ್ನ ಉಳಿವಿನ ಕಡೆ, ತನ್ನ ಸಂತತಿಯನ್ನ ಬೆಳೆಸೋ ಕಡೆ ಸಹಜವಾಗಿಯೇ ಗಮನ ಇರತ್ತೆ. ಪ್ರತೀ ಜೀವಿಯ, ಪ್ರತೀ ‘ಸ್ಪೀಶೀ’ ಅಂದ್ರೆ ಪ್ರಭೇದದ ಮೂಲಭೂತ ಕೆಲಸ ಅದು. ಆದ್ರೆ, ನಿಸರ್ಗದಲ್ಲಿ ಕೂಡ ಕೆಲವೊಮ್ಮೆ ‘ಆಕ್ಸಿಡೆಂಟ್’ ಆಗತ್ತೆ!” ಎಂದ.
ಕ್ಷಮಾ
ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾರನೆಯ ಕತೆ

ಇಳಿ ಮಧ್ಯಾಹ್ನದ ಹೊತ್ತು. ಒಳ್ಳೆ ಊಟ ಮುಗಿಸಿ ಬಂದ ಕಾವ್ಯ ಮತ್ತು ಕುಟುಂಬ, ಗೋಕರ್ಣದ ಕಡೆಗೆ ತಮ್ಮ ಪ್ರವಾಸವನ್ನು ಮುಂದುವರೆಸಿದ್ದರು. ಒಂದೆರಡು ಘಂಟೆಗಳ ಪ್ರಯಾಣವಿತ್ತು. ಸುಮಧುರ ಹಾಡುಗಳ ಹಿನ್ನೆಲೆಯಲ್ಲಿ ಆಗೀಗ ಮಾತು, ಹರಟೆ ಸಾಗಿತ್ತು. ತುಂಬಿದ್ದ ಹೊಟ್ಟೆ, ಮಧ್ಯಾಹ್ನದ ಬಿಸಿಲು ಮತ್ತು ಕುಲುಕುವ ಕಾರಿನ ಕಾರಣ ವಿಭಾಗೆ ಹಾಗೇ ಒಂದು ನಿದ್ರೆಯ ಝೊಂಪು ಹತ್ತಿತ್ತು. ವರ್ಣ ಮತ್ತು ಸಮುದ್ರ ಏನೋ ತರಲೆ ಮಾಡುತ್ತಾ ಸಮಯ ಕಳೆಯುತ್ತಿದ್ದರು. ಅಚಾನಕ್ಕಾಗಿ ವರ್ಣಾ ಸುಮ್ಮನಾದಳು. ಅವಳಿಗೇನೋ ಕಸಿವಿಸಿಯಾಗುತ್ತಿದ್ದದ್ದು ಗಮನಿಸಿ ಸಮುದ್ರ ಏನಾಯ್ತೆಂದು ಕೇಳಿದ. ಆಗ ವರ್ಣ, ತನಗೆ ಹೊಟ್ಟೆಯಲ್ಲೇಕೋ ಒಂದು ಬಗೆಯ ಸಂಕಟ, ತೊಳೆಸಿದ ಹಾಗೆ ಆಗುತ್ತಿದೆಯೆಂದು ವಿವರಿಸಿದಳು. ಹಿಂದಿನ ಸೀಟಿನಲ್ಲಿ ಗದ್ದಲ ಕಡಿಮೆಯಾದದ್ದು ಕಾವ್ಯ-ಪ್ರಕಾಶರ ಗಮನಕ್ಕೂ ಬಂತು. ಹಿಂದೆ ತಿರುಗಿದ ಕಾವ್ಯ, “ಆಲ್ ಓಕೆ? ಯಾಕ್ರಪ್ಪ ಏನಾಯ್ತು?” ಎಂದಳು.

ಅದಕ್ಕುತ್ತರಿಸಿದ ಸಮುದ್ರ, “ಅಮ್ಮ, ವರ್ಣಗೆ ಹೊಟ್ಟೆ ತೊಳೆಸ್ತಾ ಇದ್ಯಂತೆ” ಎಂದ. ಆಗ ಕಾವ್ಯ, “ಹೌದೇನೋ ವರ್ಣ, ತೊಗೋ ಈ ಆರೆಂಜ್! ಸಿಪ್ಪೆ ಬಿಡಿಸ್ತಾ ಪರಿಮಳ ನೋಡು. ಒಂಚೂರು ಕಿಟಕಿ ತೆಗಿ, ಇನ್ನೊಂಚೂರು ಗಾಳಿ ಬರ್ಲಿ” ಎಂದು ಕಿತ್ತಳೆಹಣ್ಣನ್ನು ನೀಡಿದಳು. ಕೊಂಚ ಹೊತ್ತಿಗೆ ಚೇತರಿಸಿಕೊಂಡ ವರ್ಣ, “ಕಾವ್ಯಕ್ಕಾ, ಯಾಕೆ ಹೀಗೆ ಕಾರಲ್ಲಿ ಹೊಟ್ಟೆ ತೊಳ್ಸತ್ತೆ?” ಎಂದಳು. ಆಗ ಕಾವ್ಯ, “ಅದೂ, ನಮ್ಮ ಮೆದುಳು ಕನ್ಫ್ಯೂಸ್ ಆಗಿ, ಹೀಗಾಗತ್ತೆ ನೋಡು ವರ್ಣ. ನಾವು ಚಲಿಸೋ ಕಾರಿನ ಒಳಗೆ ಇದೀವಿ, ಹಾಗಾಗಿ ನಾವೂ ಮೂವ್ ಆಗ್ತಿದೀವಿ ಅಂತ ನಮ್ಮ ಮೆದುಳಿಗೆ ಗೊತ್ತಿರತ್ತೆ. ನಮ್ಮ ಒಳಗಿವಿಯೊಳಗೆ ಒಂದು ಲಿಕ್ವಿಡ್ ಇರತ್ತೆ. ಆ ದ್ರವ, ಮತ್ತೆ ಅದರ ಜೊತೆ ಇರೋ ಕೆಲವು ‘ಸೆನ್ಸರ್’ಗಳು, ನಮ್ಮ ಚಲನೆಯನ್ನ, ನಮ್ಮ ದೇಹದ ಬ್ಯಾಲೆನ್ಸನ್ನ ಗಮನಕ್ಕೆ ತೊಗೊಂಡು, ನಮ್ಮ ದೇಹಕ್ಕೆ ಸೂಕ್ತ ಸಪೋರ್ಟ್ ಕೊಡೋ ಹಾಗೆ ಮೆದುಳಿಗೆ ಸಂದೇಶ ರವಾನಿಸ್ತಾ ಇರತ್ವೆ. ಕಾರಲ್ಲಿ, ಬಸ್ಸಲ್ಲಿ ಚಲಿಸೋವಾಗ, ನಮ್ಮ ಕಿವಿಯೊಳಗಿನ ದ್ರವಕ್ಕೆ, ಸೆನ್ಸರ್‌ಗಳಿಗೆ ‘ನಾವು ಚಲಿಸ್ತಾ ಇದೀವಿ’ ಅಂತ ಗೊತ್ತಿರತ್ತೆ. ಆದ್ರೆ ನಾವು ಕಿಟಕಿಯ ಹೊರಗೆ ಎಲ್ಲೋ ಒಂದೇ ಕಡೆ ನೋಡ್ತಾ ಇದ್ರೆ, ಅಥ್ವಾ, ಪುಸ್ತಕದ ಮೇಲೋ, ಫೋನಿನ ಮೇಲೋ ಒಂದೇ ಕಡೆ ಗಮನ ಕೊಟ್ರೆ, ನಮ್ಮ ಕಣ್ಣುಗಳು ಒಂದೇ ಕಡೆ ‘ಸ್ಟಿಲ್’ ಆಗಿರತ್ತಲ್ವ? ಆಗ ‘ನಾವು ಚಲಿಸ್ತಾ ಇಲ್ಲ’ ಅಂತ ಕಣ್ಣು ಮೆಸೇಜ್ ಕಳ್ಸತ್ತೆ ಮೆದುಳಿಗೆ. ಆಗ ನಮ್ಮ ಮೆದುಳು ಪಾಪ ಚಲಿಸ್ತಾ ಇದೀವಾ? ಇಲ್ವಾ? ಅಂತ ಕನ್ಫ್ಯೂಸ್ ಆಗಿಬಿಡತ್ತೆ!” ಎಂದಳು.

ಆಗ ವರ್ಣ, “ಓಹ್ ನಮ್ ಮೆದುಳು ಕನ್ಫ್ಯೂಸ್ ಆಗಿ, ಏನೇನೋ ಸಿಗ್ನಲ್ ಕಳ್ಸಿ, ಹೊಟ್ಟೆಯೊಳಗೂ ಏನೇನೂ ಆಗ್ಬಿಡತ್ತೆ ಹಾಗಾದ್ರೆ. ಸರಿ ಸರಿ, ಅರ್ಥ ಆಯ್ತು” ಎಂದಳು. ಮತ್ತೆ ಅರೆಕ್ಷಣ ಬಿಟ್ಟು, “ಅಲ್ಲಾ ಕಾವ್ಯಕ್ಕಾ! ಕಿಟಕಿ ತೆಗಿ ಗಾಳಿ ಬರ್ಲಿ ಅಂದೆ, ಆರೆಂಜ್ ಹಣ್ಣಿನ ಸ್ಮೆಲ್ ನೋಡು ಅಂದೆ. ಅದು ಹೇಗೆ ಹೆಲ್ಪ್ ಮಾಡತ್ತೆ? ನಂಗೀಗ ನಿಜ್ವಾಗ್ಲೂ ಹೊಟ್ಟೆ ತೊಳ್ಸೋದು ನಿಂತೇ ಹೋಯ್ತು.” ಎಂದಳು.

ಕಾವ್ಯ ನಗುತ್ತಾ “ಅದಕ್ಕೇ ಮಾರಾಯ್ತಿ ನಿಂಬೆಹಣ್ಣನ್ನೋ, ಹೀಗೆ ಕಿತ್ತಳೆ, ಮೂಸಂಬಿ ಇತ್ಯಾದಿ ಹಣ್ಣುಗಳನ್ನ ಬ್ಯಾಗಲ್ಲೇ ಇಟ್ಕೊಳ್ಳೋದು. ಈ ಹಣ್ಣುಗಳ ಸಿಪ್ಪೆಯಲ್ಲಿ ಸ್ಟ್ರಾಂಗ್ ಪರಿಮಳ ಇರತ್ತಲ್ಲ! ನಮ್ ಮೂಗಿನೊಳಗೆ ‘ಘ್ರಾಣ ವ್ಯವಸ್ಥೆ’ಯ ಭಾಗವಾಗಿ ಕೆಲವು ಸಂವೇದಕಗಳಿರತ್ವೆ. ಆ ‘ಸೆನ್ಸರ್’ಗಳು ಇಂತಹ ಗಾಢವಾದ ಫ್ರೆಶ್ ಪರಿಮಳದ ಬಗ್ಗೆ ಮಾಹಿತಿಯನ್ನ ಮೆದುಳಿಗೆ ತಲುಪಿಸತ್ವೆ. ಮೆದುಳಿನ ಗಮನ ಈಗ ಕಣ್ಣು, ಕಿವಿಯ ಸಿಗ್ನಲ್ ಕಡೆಯಿಂದ ಮೂಗು ಕೊಟ್ಟ ಪರಿಮಳದ ಸಿಗ್ನಲ್ ಕಡೆ ಹೊರಳತ್ತೆ. ಆಗ ವಾಕರಿಕೆ, ವಾಂತಿ ಬರೋ ಹಾಗೆ ಆಗೋದು ನಿಲ್ಲತ್ತೆ.” ಎಂದು ವಿವರಿಸಿದಳು.

ಇದಕ್ಕೆ ಸಮುದ್ರ, “ಪರ್ಫೆಕ್ಟ್ ಅಮ್ಮ! ಮೊದಲೇ ಕನ್ಫ್ಯೂಸ್ ಆಗಿದ್ದ ಮೆದುಳಿಗೆ ಮತ್ತೆ ಕನ್ಫ್ಯೂಸ್ ಮಾಡಿ, ತಲೆ ಕೆಡ್ಸಿ, ನಮ್ ಹೊಟ್ಟೆ ಸರಿ ಮಾಡಿಕೊಳ್ಳೋದು. ಸೂಪರ್! ಹೇ ವರ್ಣ, ಹೇಗೂ ನಿಂಗೆ ಹೊಟ್ಟೆ ತೊಳೆಸೋದು ಸರಿಯಾಯ್ತಲ್ಲ, ಕೊಡು ಆರೆಂಜ್ ಇಲ್ಲಿ. ನಾನು ತಿಂತೀನಿ.” ಎಂದು ಕಿತ್ತಲೆಹಣ್ಣನ್ನು ತೆಗೆದುಕೊಂಡ. ಹಣ್ಣು ಬಿಡಿಸ್ತಾ, ಬಾಯಿಗೆ ಹಾಕಿಕೊಳ್ತಾ “ಓಹ್ ವೆರಿ ಗುಡ್” ಎಂದ. ಆಗ ಪ್ರಕಾಶ್ “ಏನಪ್ಪಾ, ಫುಡ್ಡಿ ಸಮುದ್ರಾ, ಅಷ್ಟು ಚೆನ್ನಾಗಿದ್ಯಾ ಹಣ್ಣು?” ಎಂದ. ಆಗ ಸಮುದ್ರ, “ಅಲ್ಲ, ಚೆನ್ನಾಗೂ ಇದೆ, ಸ್ವಲ್ಪ ಸ್ವೀಟ್ ಸ್ವಲ್ಪ ಹುಳಿ. ಆದ್ರೆ ನಾನು ವೆರಿಗುಡ್ ಅಂದಿದ್ದು, ಇದು ‘ಸೀಡ್ ಲೆಸ್’ ಅಂತ. ಪದೇ ಪದೇ ಬೀಜವನ್ನ ಹೊರಗೆ ಬಿಸಾಡಬೇಕಿಲ್ವಲ್ಲ ಅಂತ” ಎಂದುತ್ತರಿಸಿದ.

ಆಗ ವರ್ಣ, “ಅದ್ಯಾಕೋ ಬೀಜ ಪದೇ ಪದೇ ಹೊರಗೆ ಹಾಕ್ಬೇಕು. ಪೇಪರ್ನಲ್ಲಿ ಸುತ್ತಿ ಇಟ್ರೆ ಆಗಲ್ವೇನು?” ಎಂದು ಮೂಗುಮುರಿದಳು. ಆಗ ಸಮುದ್ರ, “ಅಲ್ಲ ವರ್ಣ ಚಿಕ್ಕಮ್ಮ ಅವ್ರೇ” ಎಂದು ನಾಟಕೀಯವಾಗಿ “ನಾವು ದರಿದ್ರ ಪ್ಲಾಸ್ಟಿಕ್ಕನ್ನಂತೂ ಹೊರಗೆ ಎಸೆಯಲ್ಲ. ಜೋಪಾನವಾಗಿ ಬ್ಯಾಗಲ್ಲಿ, ಜೇಬಲ್ಲಿ ಇಟ್ಟುಕೊಂಡು, ಮನೆಗೆ ತೊಗೊಂಡು ಹೋಗಿ ಕಸದ ಬುಟ್ಟಿಗೆ ಸೇರಿಸ್ತೀವಿ. ಇನ್ನು ದೊಡ್ಡ ಹಣ್ಣಿನ ಸಿಪ್ಪೆ-ಗಿಪ್ಪೆ ಇತ್ಯಾದಿ ‘ಬಯೋಡೀಗ್ರೇಡಬಲ್’ ತ್ಯಾಜ್ಯ ಇದ್ರೆ, ಸಾಮಾನ್ಯವಾಗಿ ಅದನ್ನೂ ‘ಪೇಪರ್’ನಲ್ಲಿ ಕಟ್ಟಿಕೊಂಡು ಮನೆಗೆ ಹೋಗಿ, ಹಸಿ ಕಸಕ್ಕೆ ಸೇರಿಸ್ತೀವಿ. ನಾವು ‘ಜವಾಬ್ದಾರಿಯುತ ನಾಗರಿಕರು’ ಮೇಡಮ್! ಆದ್ರೆ, ಈ ಪುಟಾಣಿ ಬೀಜವನ್ನು ಹೊರಗೆ ಮಣ್ಣಿಗೆ ಎಸೆದ್ರೆ, ನಂಗೂ ಮಜಾ ಬರತ್ತೆ, ಫುಲ್ ಗುರಿ ಇಟ್ಟು ಮಣ್ಣಿಗೆ ಬಾಲ್ ಎಸೆದ ಹಾಗೆ ಎಸೆಯೋಕೆ. ಜೊತೆಗೆ, ಅಕಸ್ಮಾತ್ ಆ ಬೀಜ ಮೊಳಕೆಯೊಡೆದು ಗಿಡವಾದ್ರೆ ಆಗ್ಲಿ ಅಂತ ಒಂದು ದೂರದ ಆಸೆ” ಎಂದುತ್ತರಿಸಿದ.

ಮಕ್ಕಳ ಬುದ್ಧಿವಂತಿಕೆಯ ಮತ್ತು ಜವಾಬ್ದಾರಿಯುತ ಮಾತಿಗೆ ಕಾವ್ಯ-ಪ್ರಕಾಶ್ ಸಂತಸ ಪಡುತ್ತಾ, ಮುಂದಿನ ದಾರಿಯ ಮೇಲೆ ಗಮನವಿಟ್ಟರು. ಆಗ ಇವರ ಗಲಾಟೆಗೆ ನಿದ್ರೆ ಝೊಂಪಿನಿಂದ ಎಚ್ಚರವಾಗಿ, ಇವರ ಮಾತುಕತೆಯನ್ನು ಕೇಳುತ್ತಿದ್ದ ವಿಭಾ, “ಈ ಸೀಡ್ಲೆಸ್ ಹಣ್ಣುಗಳು ಅದು ಹೇಗೆ ಹುಟ್ಟತ್ವೆ ಅಂತ ನಂಗೆ ಯಾವಾಗ್ಲೂ ಕುತೂಹಲ” ಎಂದಳು. ಆಗ ವರ್ಣ “ಎಲ್ಲಾ ಯಾರೋ ಸೈಂಟಿಸ್ಟ್ ಪ್ರಾರಂಭ ಮಾಡಿದ್ದು ಅನ್ಸತ್ತೆ. ಅಯ್ಯೋ, ಈ ಬೀಜ ತೆಗೆಯೋದು, ಬಿಸಾಡೋದು ಯಾರಿಗೆ ಬೇಕು ಅಂತ ಮಾಡಿರ್ಬೇಕು. ಅಲ್ವಾ?” ಎಂದಳು.

ಆಗ ಪ್ರಕಾಶ್, “ನೀನು ಹೇಳಿದ್ದರಲ್ಲಿ ಸ್ವಲ್ಪ ಸತ್ಯ ಇದೆ ವರ್ಣ, ಆದ್ರೆ ಸಂಪೂರ್ಣವಾಗಿ ಅಲ್ಲ. ವಿಜ್ಞಾನಿಗಳು ಈ ಸಸ್ಯಗಳ ಒಳಗಿನ ‘ಜೀನ್’ಗಳನ್ನ ಅಧ್ಯಯನ ಮಾಡಿ, ಅವುಗಳಲ್ಲಿ ಸಣ್ಣ ಬದಲಾವಣೆ ಮಾಡಿ ‘ಸೀಡ್ ಲೆಸ್’ ವೆರೈಟಿ ಸೃಷ್ಟಿ ಮಾಡ್ತಾರೆ ಅನ್ನೋದೇನೋ ನಿಜಾನೇ! ಜೊತೆಗೆ ‘ಗ್ರಾಫ್ಟಿಂಗ್’ ಅಂದ್ರೆ ಎರಡು ಗಿಡಗಳನ್ನ ಒಟ್ಟಿಗೆ ಕಸಿ ಮಾಡೋದು ಕೂಡ ಸಹಾಯ ಮಾಡತ್ತೆ. ಆದ್ರೆ ಅವರು ಇದನ್ನ ಕಲಿತದ್ದು ಕೂಡ ಪ್ರಕೃತಿಯಿಂದ್ಲೇ. ನಿಜಕ್ಕೂ ‘ಸೀಡ್ ಲೆಸ್’ ಹಣ್ಣುಗಳನ್ನ ಮೊದಲಿಗೆ ತಯಾರು ಮಾಡಿದ್ದು ಪ್ರಕೃತೀನೇ!” ಎಂದು ವಿವರಿಸಿದ.

ಆಗ ವಿಭಾ, “ಅಲ್ಲ ಬಾವ, ಬೀಜಗಳು ಇಲ್ಲದ ಕಲ್ಲಂಗಡಿ, ದ್ರಾಕ್ಷಿ ಇವೆಲ್ಲಾ ತಿನ್ನಕ್ಕೇನೋ ಚೆನ್ನಾಗಿರತ್ತೆ. ಆದ್ರೆ, ಒಂದು ಸಲ ಹಣ್ಣು ಬಿಟ್ರೆ, ಆ ಗಿಡದ ಕಥೆ ಮುಗೀತಾ? ಬೀಜಗಳೇ ಇಲ್ದೇ ಆ ಗಿಡ ಮರಿ ಹಾಕೋದು ಹೇಗೆ? ಅಂದ್ರೆ, ಹೊಸ ಗಿಡ ಬೆಳೆಯೋದು ಹೇಗೆ? ಪ್ರಕೃತಿ ಇಂಥಾ ಕೆಲ್ಸ ಯಾಕೆ ಮಾಡ್ತು ಅಂತ ಆಶ್ಚರ್ಯ ಆಗತ್ತೆ” ಎಂದಳು. ಆಗ ಪ್ರಕಾಶ್, “ನೀನು ಹೇಳಿದ್ದು ನಿಜವೇ ವಿಭಾ. ಯಾವುದೇ ಪ್ರಭೇದವಾಗ್ಲೀ, ತನ್ನ ಉಳಿವಿನ ಕಡೆ, ತನ್ನ ಸಂತತಿಯನ್ನ ಬೆಳೆಸೋ ಕಡೆ ಸಹಜವಾಗಿಯೇ ಗಮನ ಇರತ್ತೆ. ಪ್ರತೀ ಜೀವಿಯ, ಪ್ರತೀ ‘ಸ್ಪೀಶೀ’ ಅಂದ್ರೆ ಪ್ರಭೇದದ ಮೂಲಭೂತ ಕೆಲಸ ಅದು. ಆದ್ರೆ, ನಿಸರ್ಗದಲ್ಲಿ ಕೂಡ ಕೆಲವೊಮ್ಮೆ ‘ಆಕ್ಸಿಡೆಂಟ್’ ಆಗತ್ತೆ!” ಎಂದ.

ಆಗ ಸಮುದ್ರಾ, “ಆಕ್ಸಿಡೆಂಟಾ?” ಎಂದ ಬಾಯಗಲಿಸುತ್ತಾ! ಆಗ ವರ್ಣ, “ಹೂಂ ಸಮುದ್ರಾ, ಉಪೇಂದ್ರನ ಹಾಡಿದ್ಯಲ್ಲ, “ಆಕ್ಸಿಡೆಂಟ್ ಆಗ್ ಹೋಯಿತೂ… ಸುಮ್ ಸುಮ್ನೇ…..” ಅಂತ ಹಾಡಲು ಶುರುವಿಟ್ಟಳು ಅವನನ್ನು ಕೀಟಲೆ ಮಾಡುತ್ತಾ. ಎಲ್ಲರೂ ನಗಾಡುತ್ತಾ, ಮತ್ತೆ ಮಾತು ಮುಂದುವರೆಸಿದರು. ಗೋಕರ್ಣ, ಇನ್ನು ೨೦ ನಿಮಿಷದ ಹಾದಿಯ ಕೊನೆಗಿತ್ತು. ಆಗ ಕಾವ್ಯ “ಸಮುದ್ರ, ಈ ಪ್ರಕೃತಿಯಲ್ಲಿ ಆಗೋ ಇಂತಹ ಜೆನೆಟಿಕ್ ಆಕ್ಸಿಡೆಂಟಿಗೆ ‘ಮ್ಯೂಟೇಶನ್’ ಅಂತೀವಿ. ಒಂದು ಜೀವಕೋಶ, ತನ್ನದೇ ನಕಲನ್ನ ಅಂದ್ರೆ ಝೆರಾಕ್ಸ್ ಫೋಟೋಕಾಪಿಯನ್ನ ತಯಾರಿಸ್ತಾ ಇರತ್ತೆ. ಆಗ ಏನೋ ಒಂದು ಕಾರಣದಿಂದ ಕಾಪಿ ಮಾಡುವಾಗ ಒಂದು ಸಣ್ಣ ತಪ್ಪಾಗಿಬಿಡತ್ತೆ. ಆಗ ಹೊಸ ಸೆಲ್ ಅಂದ್ರೆ ಜೀವಕೋಶ ಇರತ್ತಲ್ಲ, ಅದು ಬೇರೆಯದ್ದೇ ಗುಣಲಕ್ಷಣ ತೋರಿಸತ್ತೆ.” ಎಂದು ವಿವರಿಸಿದಳು.

ಸುಂದರವಾದ ಹಸಿರು ತಾಣಗಳ ನಡುವೆ ಚೆಂದದ ದೃಶ್ಯ, ಒಳ್ಳೆಯ ರಸ್ತೆ, ಕಾರ್ ಓಡಿಸುವ ಮಜಾ ಅನುಭವಿಸುತ್ತಾ, ತನ್ನ ವಿವರಣೆಯನ್ನೂ ಸೇರಿಸಿದ ಪ್ರಕಾಶ್ – “ಹೌದು, ಇಂತಹ ‘ಮ್ಯೂಟೇಶನ್’ ಆಗಿಯೇ ಅನೇಕ ಶತಮಾನಗಳ ಹಿಂದೆ ‘ಸೀಡ್ ಲೆಸ್’ ವೆರೈಟಿಯ ಹಣ್ಣುಗಳು ನೈಸರ್ಗಿಕವಾಗಿಯೇ ತಯಾರಾದ್ವು. ಮೊದಲಿಗೆ ಹೀಗೆ ‘ಸೀಡ್ ಲೆಸ್’ ಆಗಿದ್ದು ಬಾಳೆಹಣ್ಣು” ಎಂದಾಗ, ವರ್ಣ “ವಾಟ್? ಬಾಳೆಹಣ್ಣಿನ ಒಳಗೂ ಬೀಜ ಇತ್ತಾ?” ಎಂದಳು ಆಶ್ಚರ್ಯಚಕಿತಳಾಗಿ.

ಆಗ ಕಾವ್ಯ ನಗುತ್ತಾ, “ಹೌದು ಕಣೋ! ಕಾಡುಬಾಳೆಹಣ್ಣುಗಳಲ್ಲಿ ಬಾಯಿಬಾಯಿಗೆ ಸಿಗುವ ಗಟ್ಟಿಯಾದ ಕಟುಂಕಟುಂ ಬೀಜಗಳಿರ್ತಾ ಇದ್ವು ಅಂತಾರೆ ಸಂಶೋಧಕರು. ಇಂತಹ ಕಾಡು ಬಾಳೆಗಳಲ್ಲಿ ಒಮ್ಮೆ ಹೀಗೇ ಆಕ್ಸಿಡೆಂಟಲೀ, ‘ಕ್ರಾಸ್ ಪಾಲಿನೇಶನ್’ ಆಗಿ ಹೊಸ ‘ಸೀಡ್ ಲೆಸ್’ ಬಾಳೆ ಹುಟ್ಟಿದೆ. ಆಮೇಲೆ ಅದನ್ನೇ ಪ್ರಾಣಿಗಳೂ, ಮನುಷ್ಯರೂ ಇಷ್ಟ ಪಡುತ್ತಾ, ಅದರ ತಳಿಯೇ ನೈಸರ್ಗಿಕವಾಗಿ, ಮತ್ತೆ, ಮನುಷ್ಯ ಪ್ರಯತ್ನದಿಂದ ಹೆಚ್ಚಿದೆ. ನಾವು ಕೂಡ ಕೆಲವೊಮ್ಮೆ ನಮ್ಮ ಮನೆಯಲ್ಲಿ ಬಳಸೋ ಬಾಳೆಹಣ್ಣುಗಳ ಒಳಗೆ ಸಣ್ಣ ಸಣ್ಣ ಕಪ್ಪು ಚುಕ್ಕಿಯಂತಹ ಬೀಜವನ್ನ ಗಮನಿಸಿರಬಹುದು. ಅದು ತುಂಬಾ ಚಿಕ್ಕದಾಗಿರತ್ತೆ ಹಾಗಾಗಿ ಅದನ್ನ ಬೀಜ ಅಂತ ಗುರುತಿಸಲ್ಲ ನಾವು.” ಎಂದಳು.

ಆಗ ವರ್ಣ, “ಅಲ್ಲಾ ಕಾವ್ಯಕ್ಕ, ಈಗ ನಾವು ಬೀಜಗಳಿರೋ ದ್ರಾಕ್ಷಿ, ಕಿತ್ತಳೆ, ಕಲ್ಲಂಗಡಿ ನೋಡ್ತೀವಲ್ಲಾ, ಅದರ ಜೊತೆಗೇ ಇವೇ ಹಣ್ಣುಗಳಲ್ಲಿ ಬೀಜ ಇಲ್ದೇ ಇರೋ ‘ಸೀಡ್ ಲೆಸ್’ ವೆರೈಟಿಯನ್ನೂ ನೋಡಿದ್ದೀವಿ. ಹಾಗೇನೇ, ಬೀಜ ಇಲ್ದೇ ಇರೋ ಬಾಳೆಹಣ್ಣಿನ ಜೊತೆಗೇ ಕಟುಂ ಕುಟುಂ ಬೀಜಗಳಿರೋ ಬಾಳೆಹಣ್ಣು ಈಗ್ಲೂ ಸಿಗತ್ತಾ?” ಎಂದು ಕೇಳಿದಳು.

ಆಗ ಸಮುದ್ರ, “ಇಲ್ಲಿ ನೋಡು, ಗೂಗಲ್ ಮಾಡಿ ನೋಡ್ದೆ. ಈಗ್ಲೂ ಕಾಡುಬಾಳೆಯಲ್ಲಿ ಬೇಕಾದಷ್ಟು ಗಟ್ಟಿ ಬೀಜಗಳಿರತ್ವೆ. ಮಲೇಷ್ಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ ಕಾಡುಗಳಲ್ಲಿ, ಅಷ್ಟೇ ಯಾಕೆ, ನಮ್ಮದೇ ಕಾಡುಬಾಳೆಗಳ ಕೆಲವು ವೆರೈಟಿಗಳಲ್ಲೂ ನಾವು ಬೀಜ ಇರೋದನ್ನ ನೋಡ್ಬಹುದಂತೆ. ಅಂಡಮಾನ್, ನಾಗ್ಪುರ, ಅಸ್ಸಾಮ್ ಕಾಡುಗಳಲ್ಲಿ, ಅಷ್ಟೇ ಯಾಕೆ ನಮ್ಮ ಕರ್ನಾಟಕದ ಕಾಡುಗಳಲ್ಲೂ ಸಿಗತ್ತಂತೆ. ಕಲ್ಲು ಬಾಳೆ, ಕಾಡು ಬಾಳೆ ಅಂತ ಕರೀತಾರಂತೆ.” ಎಂದು ವಿವರಿಸಿದ. ಈ ಮಾಹಿತಿ ಕೇಳಿ ಆಶ್ಚರ್ಯವೂ, ಫೋನ್ ನೋಡಿದ್ದಕ್ಕೆ ಹೊಟ್ಟೆ ತೊಳೆಸಿದಂತೆಯೂ ಆಗಿ, ಮತ್ತೆ ಕಿತ್ತಳೆ ಸಿಪ್ಪೆಯ ಪರಿಮಳ ನೋಡೊಕೆ ತಿರುಗಿದಳು ವರ್ಣ.

ಆಗ ಪ್ರಕಾಶ್, “ನೈಸರ್ಗಿಕವಾಗಿ, ಬೀಜಗಳ ಉತ್ಪಾದನೆಯೇ ಇಲ್ಲದೆ ಹಣ್ಣಾಗುವ ಪ್ರಕ್ರಿಯೆಗೆ ‘ಪಾರ್ಥೆನೋಕಾರ್ಪಿ’ ಅಂತಾರೆ. ಕೆಲವೊಮ್ಮೆ ಬೀಜಗಳಿದ್ರೂ, ಅವು ಅತ್ಯಂತ ಪುಟ್ಟದಾಗಿ ಇರತ್ವೆ, ಅಥ್ವಾ, ಅವುಗಳನ್ನು ಮಣ್ಣಿನಲ್ಲಿ ಬಿತ್ತಿದ್ರೂ, ಅವು ಗಿಡವಾಗಲ್ಲ. ಇವೆಲ್ಲವೂ ‘ಪಾರ್ಥೆನೋಕಾರ್ಪಿ’ಯ ಭಾಗವೇ. ರೂಮಿಗೆ ಹೋದ ಮೇಲೆ ಅದರ ಬಗ್ಗೆ ಮತ್ತಷ್ಟು ಸರ್ಚ್ ಮಾಡಿ ಓದಿ.” ಎಂದ.

ಇದನ್ನು ಕೇಳುತ್ತಿದ್ದರೂ ಹೂಂಗುಡದೇ, ತನ್ನ ವಿವರಣೆಯನ್ನೂ ಸೇರಿಸದೇ ಸುಮ್ಮನಿದ್ದ ಕಾವ್ಯಳನ್ನು ನೋಡಿ, “ಏನಾಯ್ತು ಕಾವ್ಯ” ಎಂದ ಪ್ರಕಾಶ್. ಆಗ ಕಾವ್ಯ, “ಅಲ್ಲಾ, ನಿಸರ್ಗವೇ ಬೀಜಗಳನ್ನು ಉತ್ಪಾದನೆ ಮಾಡದಿದ್ದರೆ, ಅದರಿಂದ ದೊಡ್ಡ ನಷ್ಟವೇನೂ ಇಲ್ಲ. ಯಾಕಂದ್ರೆ, ತನ್ನದೇ ಆದ ರೀತಿಯಲ್ಲಿ ತನ್ನ ಪ್ರಭೇದವನ್ನ ಉಳಿಸಿಕೊಳ್ಳೋ ವಿದ್ಯೆ ಸಸ್ಯಗಳಿಗೆ ಗೊತ್ತಿರತ್ತೆ. ಆದ್ರೆ, ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಕೃಷಿಕ್ಷೇತ್ರದಲ್ಲಿ ಕೈಹಾಕಿ, ತಮ್ಮ ಕೈವಾಡದಿಂದ ಬಡ ರೈತರನ್ನು ಮತ್ತಷ್ಟು ಬಡವಾಗಿಸ್ತಾ ಇದ್ದಾರಲ್ಲ? ಒಮ್ಮೆ ಮಾತ್ರ ಮೊಳಕೆಯೊಡೆಯೋ ಬೀಜ ನೀಡಿ, ಅದರಿಂದ ಹೊರಬರೋ ‘ಸೀಡ್ಲೆಸ್’ ವೆರೈಟಿ ಅಥ್ವಾ ಮೊಳಕೆಯೊಡೆಯೋ ಶಕ್ತಿಯಿಲ್ಲದ ಬೀಜದಿಂದ, ರೈತರು ಮತ್ತೆ ವಾಪಾಸ್ ಅವರ ಹತ್ರಾನೇ ಹೋಗಿ ಬೀಜ ಖರೀದಿಸೋ ಹಾಗೆ ಮಾಡ್ತಾರಲ್ಲ! ಇದು ದೇಶದ ಫುಡ್ ಸೆಕ್ಯುರಿಟಿಗೆ, ಎಕಾನಮಿಗೆ ಮೆಲ್ಲಮೆಲ್ಲನೇ ಅದೆಷ್ಟು ತೊಂದರೆ ಕೊಡತ್ತಲ್ವಾ?” ಎಂದಳು ಬೇಸರದಿಂದ.

ಅಷ್ಟರಲ್ಲಿ ಗೋಕರ್ಣದ ಸಮುದ್ರದ ಮನಮೊಹಕ ದೃಶ್ಯ ಕಂಡು ಎಲ್ಲರಲ್ಲೂ ಉತ್ಸಾಹ, ಸಂತಸ ಚಿಮ್ಮಿತು. ಗೋಕರ್ಣದಲ್ಲಿ ಸಮುದ್ರದ ಅಲೆಗಳ ಹಿಮ್ಮೇಳವಿದ್ದಾಗ, ಕಾವ್ಯಳ ಕುಟುಂಬದ ಸದಸ್ಯರು ಏನು ಮಾಡಿದರು, ಏನೇನು ಮಾತಾಡಿದರು ಎಂಬುದನ್ನು ಮುಂದಿನ ಕಂತಿನಲ್ಲಿ ನೋಡೋಣ. ಏನಂತೀರಿ?

(ಹಿಂದಿನ ಕಂತು: ‘ಸ್ಟಾರ್ಟ್ ಸ್ಟಾಪ್’ ಆಟ ಮತ್ತು ವಡಬಾನಲ)

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ