ಅಷ್ಟರಲ್ಲಿ ವರ್ಣ, “ಅಲ್ಲ ಕಾವ್ಯಕ್ಕಾ, ಹಾಗಾದ್ರೆ, ನದಿಯ ಮರಳೇ ಯಾಕೆ ಬೇಕು? ಸಮುದ್ರದ ಮರಳು ಜಾಸ್ತಿ ಇದ್ಯಲ್ಲ? ಇದನ್ನೇ ಬಿಲ್ಡಿಂಗ್ ಕಟ್ಟೊಕೆ ಬಳಸಬಹುದಲ್ಲಾ?” ಎಂದಳು. ಆಗ ಕಾವ್ಯ, “ಅದು ಆಗಲ್ಲ ವರ್ಣ. ನದಿಯ ಸಣ್ಣಕಣಗಳ ಮರಳು ಸಿಮೆಂಟ್ ಜೊತೆ ಮಿಕ್ಸ್ ಆದ ಹಾಗೆ, ಸಮುದ್ರದ್ದು ಆಗಲ್ಲ. ಜೊತೆಗೆ ಸಮುದ್ರದ ಮರಳಲ್ಲಿ ಹೆಚ್ಚು ಉಪ್ಪಿನಂಶ ಇರತ್ತಲ್ವಾ? ಅದ್ರಲ್ಲೂ ಮುಖ್ಯವಾಗಿ ಕ್ಲೋರೈಡ್ ಕಣಗಳು ಇರತ್ವೆ. ಅವು, ಕಟ್ಟಡಗಳಲ್ಲಿ ಬಳಸೋ ಕಬ್ಬಿಣದ ರಾಡ್ ಇರತ್ತಲ್ಲಾ? ಅದನ್ನೆಲ್ಲಾ ತುಕ್ಕು ಹಿಡಿಸಿಬಿಡತ್ತೆ. ಅದಕ್ಕೇ ಆದಷ್ಟೂ ಸಮುದ್ರದ ಮರಳನ್ನ ಕಟ್ಟಡಗಳಲ್ಲಿ ಉಪಯೋಗಿಸಲ್ಲ.” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹತ್ತೊಂಭತ್ತನೆಯ ಕತೆ
ಗೋಕರ್ಣದ ಸಮುದ್ರದ ನೀರು, ಮೇಲೇರುತ್ತಿರುವ ಸೂರ್ಯನ ಬೆಳಕನ್ನು ಮಿರಮಿರನೆ ಪ್ರತಿಫಲಿಸುತ್ತಿತ್ತು; ಕಾವ್ಯ ಮತ್ತು ಕುಟುಂಬ ಪ್ಯಾರಾಸೇಲಿಂಗ್ ಮಾಡುತ್ತಾ ಮೈಮರೆತಿದ್ರು. ಹಕ್ಕಿಯಂತೆ ಹಾರುತ್ತಾ, ನಿಚ್ಛಳ ನೀಲಿ ಸಮುದ್ರ ಮತ್ತು ಸುತ್ತಲೂ ಹರವಿಕೊಂಡ ಮರಳಿನ ಸಾಮ್ರಾಜ್ಯವನ್ನೂ, ನಡುನಡುವೆ ಇರುವ ಕಡುಗಪ್ಪು ಬಂಡೆಗಳನ್ನು ಕಣ್ದುಂಬಿಸಿಕೊಂಡು, ಕೆಳಗಿಳಿದರು. ಪ್ಯಾರಾಸೇಲಿಂಗ್ ಹೊರಡುವ ಮುನ್ನ ಇದ್ದ ಉತ್ಸಾಹ, ಸಾಗರದ ಮೇಲೆ ಹಾರಿದ ನಂತರ ಈಗ ದುಪ್ಪಟ್ಟಾಗಿತ್ತು.
ವರ್ಣ ಮತ್ತು ಸಮುದ್ರ, “ಹೇ! ಒನ್ಸ್ ಮೋರ್! ಒನ್ಸ್ ಮೋರ್! ಸಖತ್ತಾಗಿತ್ತು. ಮತ್ತೆ ಹೋಗೋಣ್ವಾ?” ಎನ್ನುತ್ತಲೇ ಬಂದರು. ಆಗ ಪ್ರಕಾಶ್, “ಇನ್ನೂ ಇಲ್ಲೇ ಇರ್ತೀವಲ್ವಾ, ನಾಳೆ ಮತ್ತೆ ಮಾಡೋಣ ಬಿಡ್ರಪ್ಪ” ಎಂದು ಅವರ ಕುಣಿದಾಟವನ್ನು ಕೊಂಚ ಹತೋಟಿಗೆ ತಂದನು. ಅಷ್ಟರಲ್ಲಿ ವಿಭಾ ಮತ್ತು ಕಾವ್ಯ ಕೂಡ ಇವರ ಬಳಿ ಬಂದು ಸೇರಿದರು. ಬಿಸಿಲೇರುತ್ತಿದ್ದ ಕಾರಣ, “ನಡೀರಿ ಈಗ ರೂಮಿಗೆ ಹೋಗಿ ಕೊಂಚ ರೆಸ್ಟ್ ಮಾಡಿ, ಸಂಜೆ ಮತ್ತೆ ಬೀಚಲ್ಲಿ ಆಡೋಕೆ ಬರೋಣಂತೆ” ಎಂದು ಎಲ್ಲರನ್ನೂ ಹೊರಡಿಸಿಕೊಂಡು ಹೊರಟ ಪ್ರಕಾಶ್.
ಸಮುದ್ರತೀರದಿಂದ ಹೊರಟು ಕಾರ್ ಹತ್ತಿ ಕೂರುವಾಗ ಅದೆಷ್ಟೇ ಮರಳನ್ನು ಹೊರಗೆ ಉದುರಿಸಿ ಕೂತರೂ, ಕಾರಿಗೆ ಒಂದಷ್ಟು ಮರಳಿನ ಉಡುಗೊರೆ ಸಿಕ್ಕೇ ಸಿಗುತ್ತದೆಯಲ್ಲವೇ? ಇಲ್ಲೂ ಹಾಗೇ ಆಗಿತ್ತು.
ಕಾರ್ ಹೊರಟದ್ದೇ, ಸಮುದ್ರ “ಅಪ್ಪಾ! ಪ್ಲೀಸ್ ಬೇಗ ಏ.ಸಿ ಹಾಕಿ. ಸಿಕ್ಕಾಪಟ್ಟೆ ಸೆಖೆ!” ಎಂದ. ಆಗ ವಿಭಾ, “ಡೋಂಟ್ ವರಿ ಸಮುದ್ರಾ, ಕಾರ್ ಒಳಗೆ ಬಿಸಿ ಏರಿದ್ರೆ, ನಿನ್ನ ಚಡ್ಡಿ ಜೇಬಿನ ತುಂಬಾ ತಂದಿರುವ ಮರಳೇನೂ ಗಾಜು ಆಗಿಬಿಡೋಲ್ಲ.” ಎಂದಳು ನಗುತ್ತಾ.
ಇದನ್ನು ಕೇಳಿದ ವರ್ಣ, “ಹೌದೂ, ಮರಳನ್ನ ಬಿಸಿ ಮಾಡಿದ್ರೆ ಗಾಜು ತಯಾರಾಗಿಬಿಡತ್ತಾ?” ಎಂದು ಕೇಳಿದಳು. ಆಗ ಕಾವ್ಯ, “ಮರಳನ್ನ ಮಾತ್ರ ಬಿಸಿ ಮಾಡಿದ್ರೆ ಗಾಜು ಸಿಗೋಲ್ಲ. ಮರಳಿಗೆ, ಸುಣ್ಣ ಅಂದ್ರೆ ಕ್ಯಾಲ್ಸಿಯಂ ಕಾರ್ಬೊನೇಟ್, ಜೊತೆಗೆ ಸ್ವಲ್ಪ ವಾಶಿಂಗ್ ಸೋಡ ಅಂದ್ರೆ ಸೋಡಿಯಂ ಕಾರ್ಬೊನೇಟ್ – ಇವೆಲ್ಲಾ ಹಾಕಿ, ಜೊತೆಗೆ ಒಂದಷ್ಟು ಹಳೆ ಗಾಜಿನ ತುಂಡುಗಳನ್ನು ಹಾಕಿ 1400 ಡಿಗ್ರಿ ಸೆಲ್ಸಿಯಸ್ ಅಥ್ವಾ ಅದಕ್ಕೂ ಹೆಚ್ಚಿನ ತಾಪಮಾನದಲ್ಲಿ ಮೆಲ್ಟ್ ಮಾಡ್ದಾಗ, ಗಾಜು ತಯಾರಾಗತ್ತೆ.” ಎಂದಳು.
ಆಗ ಸಮುದ್ರ, “ಹಾಗಾದ್ರೆ, ಭೂಮೀಲಿ ಯಾವುದನ್ನ ತಯಾರಿಸೋಕೆ raw materials ಸಿಗದಿದ್ರೂ, ಗಾಜನ್ನ ತಯಾರು ಮಾಡೋಕೆ ಬೇಕಾದಷ್ಟು ಇದೆ. ಮರಳಿಗೇನು ಕೊರತೇನಾ? ನದೀತೀರ, ಸಮುದ್ರತೀರ ಮಾತ್ರ ಅಲ್ಲ, ಮರುಭೂಮೀಲೂ ಸಿಕ್ಕಾಪಟ್ಟೆ ಮರಳಿರತ್ತೆ ಅಲ್ವಾ?” ಎಂದ.
ಆಗ ಕಾವ್ಯ, “ನೀನು ಹೇಳಿದ್ದು ಸರೀನೇ ಸಮುದ್ರ. ಆದ್ರೆ, ಇಲ್ಲಿ ಕೆಲವು ವಿಷ್ಯಗಳನ್ನ ಗಮನಿಸ್ಬೇಕು. ಒಂದು, ಈಗಾಗ್ಲೇ ನದಿಗಳ ಒಡಲಲ್ಲಿರೋ ಮರಳನ್ನ ಜನ ಬಗೀತಾ ಇದಾರೆ, ಮೊಗೆದು ಮೊಗೆದು ಮನೆಗಳನ್ನ, ಬೃಹತ್ ಕಟ್ಟಡಗಳನ್ನ ಕಟ್ಟೋಕೆ ಖಾಲಿ ಮಾಡ್ತಾ ಇದಾರೆ. ಅದಕ್ಕೆ ಈಗಾಗ್ಲೇ ಅನೇಕ ರಾಜ್ಯಗಳ ಹೈ ಕೋರ್ಟುಗಳು ತಡೆಯಾಜ್ಞೆ ತಂದಿವೆ. ಇಲ್ದಿದ್ರೆ ನದಿಗಳು ಬರಡಾಗಿ, ನದಿಯನ್ನೇ ನಂಬಿರುವ ಜೀವಿಗಳ ಬದುಕೂ ನಾಶವಾಗತ್ತೆ, ನದಿಯ ಸುತ್ತಲಿನ ಪ್ರದೇಶಗಳ ಮೇಲೂ ಸಿಕ್ಕಾಪಟ್ಟೆ ನೆಗೆಟೆವ್ ಪರಿಣಾಮ ಆಗತ್ತೆ.” ಎಂದಳು.
ಅಷ್ಟರಲ್ಲಿ ವರ್ಣ, “ಅಲ್ಲ ಕಾವ್ಯಕ್ಕಾ, ಹಾಗಾದ್ರೆ, ನದಿಯ ಮರಳೇ ಯಾಕೆ ಬೇಕು? ಸಮುದ್ರದ ಮರಳು ಜಾಸ್ತಿ ಇದ್ಯಲ್ಲ? ಇದನ್ನೇ ಬಿಲ್ಡಿಂಗ್ ಕಟ್ಟೊಕೆ ಬಳಸಬಹುದಲ್ಲಾ?” ಎಂದಳು. ಆಗ ಕಾವ್ಯ, “ಅದು ಆಗಲ್ಲ ವರ್ಣ. ನದಿಯ ಸಣ್ಣಕಣಗಳ ಮರಳು ಸಿಮೆಂಟ್ ಜೊತೆ ಮಿಕ್ಸ್ ಆದ ಹಾಗೆ, ಸಮುದ್ರದ್ದು ಆಗಲ್ಲ. ಜೊತೆಗೆ ಸಮುದ್ರದ ಮರಳಲ್ಲಿ ಹೆಚ್ಚು ಉಪ್ಪಿನಂಶ ಇರತ್ತಲ್ವಾ? ಅದ್ರಲ್ಲೂ ಮುಖ್ಯವಾಗಿ ಕ್ಲೋರೈಡ್ ಕಣಗಳು ಇರತ್ವೆ. ಅವು, ಕಟ್ಟಡಗಳಲ್ಲಿ ಬಳಸೋ ಕಬ್ಬಿಣದ ರಾಡ್ ಇರತ್ತಲ್ಲಾ? ಅದನ್ನೆಲ್ಲಾ ತುಕ್ಕು ಹಿಡಿಸಿಬಿಡತ್ತೆ. ಅದಕ್ಕೇ ಆದಷ್ಟೂ ಸಮುದ್ರದ ಮರಳನ್ನ ಕಟ್ಟಡಗಳಲ್ಲಿ ಉಪಯೋಗಿಸಲ್ಲ.” ಎಂದಳು.
ಆಗ ಪ್ರಕಾಶ್, “ಹೌದು, ಅದಕ್ಕೇ ಈಗ M ಸ್ಯಾಂಡ್ ಬಳಸೋದು. M ಸ್ಯಾಂಡ್ ಅಂದ್ರೆ ಮ್ಯಾನುಫಾಕ್ಚರ್ಡ್ ಮರಳು. ಇದನ್ನ ಮನುಷ್ಯರೇ ದೊಡ್ಡ ಬೃಹತ್ ಯಂತ್ರಗಳನ್ನ ಬಳಸಿ ಬಂಡೆಗಳನ್ನ ಪುಡಿ ಮಾಡಿ, ಮರಳಿನ ಹಾಗೆ ಕಣಗಳನ್ನ ತಯಾರು ಮಾಡ್ತಾರೆ. ಅದನ್ನೇ ಈಗ ಸಾಮಾನ್ಯವಾಗಿ ಎಲ್ಲಾ ಕಡೆ ಕಟ್ಟಡ ಕಟ್ಟೋಕೆ ಬಳಸೋದು” ಎಂದ. ಇದನ್ನು ಕೇಳಿದ ವಿಭಾ, “ಅಲ್ಲಾ ಬಾವ, ಮರಳನ್ನ ತೆಗೆದ್ರೆ ಒಂಥರಾ ಪ್ರಾಬ್ಲೆಮ್, ಬಂಡೆಗಳನ್ನ ಕ್ವಾರಿ ಮಾಡಿ ತೆಗೆದ್ರೆ ಮತ್ತೊಂಥರ ಪ್ರಾಬ್ಲೆಮ್ ಅಲ್ವಾ?” ಎಂದಳು. ಆಗ ಪ್ರಕಾಶ್, “ನಿಜಾ ವಿಭಾ, ಮರಳಾಗ್ಲೀ, ಬಂಡೆಯಾಗ್ಲೀ, ಕೇವಲ ಮನೆ, ಆಫೀಸ್, ಬ್ರಿಡ್ಜ್ ಇತ್ಯಾದಿ ಕಟ್ಟೋಕೆ ಕಚ್ಚಾ ವಸ್ತುಗಳಲ್ಲ. ಮರಳನ್ನೇ ನಂಬಿರೋ, ಬಂಡೆಗಳನ್ನೇ ನಂಬಿರೋ ಜೀವಿಗಳ ಪ್ರಭೇದಗಳಿವೆ. ಅವುಗಳೆಲ್ಲಾ ಏನಾಗ್ಬೇಕು ನಾವು ಹೀಗೆ ಮರಳು, ಬಂಡೆ ಯಾವುದನ್ನೂ ಬಿಡದೇ ಬಗೀತಾ ಇದ್ರೆ?” ಎಂದ.
ಪ್ರಕಾಶನ ಮಾತಿಗೆ ದನಿಗೂಡಿಸುತ್ತಾ, ಕಾವ್ಯ, “ನಿಜಾ, ಅಷ್ಟೇ ಅಲ್ದೇ, ಭೌಗೋಳಿಕವಾಗಿ ಕೂಡ ತುಂಬಾ ಬದಲಾವಣೆಯಾಗಿ, ‘ಸಾಯಿಲ್ ಇರೋಶನ್’ ಅಂದ್ರೆ ಮಣ್ಣಿನ ಸವಕಳಿ ಹೆಚ್ಚತ್ತೆ, ಕಡಲ್ಕೊರೆತ, ಭೂಕುಸಿತ ಹೆಚ್ಚಾಗತ್ತೆ. ಇಂಥಾ ಎಷ್ಟೊಂದು ಪ್ರಾಬ್ಲೆಮ್ಸ್ ಆಗತ್ತೆ. ಆದ್ರೆ ನಾವು ಮಾತ್ರ, Anthropocentric ಅಂದ್ರೆ ಬರೀ ಮನುಷ್ಯರ ದೃಷ್ಟಿಕೋನದಿಂದ ನಮಗೆ ಬೇಕಾದ್ದನ್ನ ಮಾತ್ರ ಮಾಡ್ತಾ, ನಮ್ ಭೂಮಿ ಬಗ್ಗೆ, ಬೇರೆ ಪ್ರಾಣಿ, ಪಕ್ಷಿ, ಗಿಡ, ಮರ – ಇದ್ನೆಲ್ಲಾ ಮರ್ತೇ ಬಿಡ್ತೀವಿ. ಅವುಗಳಿಗೇನಾದ್ರೆ ನಮ್ಗೇನು ಅಂತ!” ಎಂದಳು ಬೇಸರದಿಂದ.

Idehan Ubari
ಆಗ ವಿಭಾ, “ನಿಜಾ ಕಾವ್ಯಕ್ಕ. ನಮ್ ಮೂಗಿನ್ ನೇರಕ್ಕೇ ಜಗತ್ತು ಅನ್ನೋ ಹಾಗೆ ಬದುಕೋದು ಸುಮಾರ್ ಜನ. ಬೇರೆ ಮನುಷ್ಯರ ಬಗ್ಗೆ ಯೋಚ್ನೇ ಮಾಡೋವ್ರೆ ಕಡಿಮೆ. ಇನ್ನು ಪ್ರಾಣಿ ಪಕ್ಷಿ ಪರಿಸರ ಎಲ್ಲಾ ಎಲ್ಲಿ ಯೋಚಿಸ್ತಾರೆ?” ಎಂದಳು. ಅಷ್ಟರಲ್ಲಿ ರೆಸಾರ್ಟ್ ತಲುಪಿದರು. ಎಲ್ಲರೂ ಇಳಿದು, ತಮ್ಮ ಬಿಸಿಲಟೋಪಿ, ನೀರಿನ ಬಾಟಲಿ, ಫುಟ್ಬಾಲ್ ಇತ್ಯಾದಿ ಹಿಡಿದುಕೊಂಡು ಒಳನಡೆದರು. ಅದೊಂದು ಪರಿಸರ ಸ್ನೇಹಿ ರೆಸಾರ್ಟ್ ಆಗಿದ್ದು, ಅಲ್ಲಿನ ಕಟ್ಟಡ ಕೂಡ ಚೆನ್ನಾಗಿ ಬೆಳಕು, ಗಾಳಿ ಆಡುವ ಹಾಗೆ ಬೃಹತ್ ಕಿಟಕಿಗಳು, ವಿಶಿಷ್ಟ ವಾಸ್ತುಶಿಲ್ಪ ಹೊಂದಿತ್ತು. ಸಂಪೂರ್ಣ ಕತ್ತಲು ಆವರಿಸದ ಹೊರತು ವಿದ್ಯುದ್ದೀಪ ಹಾಕೋ ಅವಶ್ಯಕತೆ ಇರಲಿಲ್ಲ. ಬೇಸಿಗೆಯಲ್ಲೂ ಆದಷ್ಟೂ ತಂಪು ಇರುವ ಹಾಗೆ ಅಲ್ಲಿಯೇ ಲಭ್ಯವಿರುವ ವಸ್ತುಗಳಿಂದ ರೂಮುಗಳನ್ನು ಕಟ್ಟಲಾಗಿತ್ತು. ಇದನ್ನು ನೋಡಿದ ಸಮುದ್ರ, “ಹೀಗೇ ಎಲ್ಲಾ ಕಡೆ ಮನೆ ಕಟ್ಟಿದ್ರೆ ಎಷ್ಟು ಒಳ್ಳೇದಲ್ವಾ ಅಮ್ಮ? ನಮ್ ಮನೇನೂ ಹೀಗೇ ತಾನೇ? ಸಿಮೆಂಟ್, ಮರಳು, ಪೈಂಟ್ ಇವೆಲ್ಲಾ ಹೆಚ್ಚು ಬೇಕಾಗದೇ ಇರೋ ಹಾಗೆ, Eco-friendly ಮನೆ ಕಟ್ಟೋಕೇನು ಕಷ್ಟ ಎಲ್ಲಾರ್ಗೂ? ಮರಳನ್ನ ಬಾಚಿ ಬಂಡೆ ಪುಡಿ ಮಾಡಿ ಎಲ್ಲಾ ಹಾಳ್ ಮಾಡ್ತಾರೆ” ಎಂದ.
ಆಗ ಕಾವ್ಯ, “ಅಲ್ವಾ ಕಂದ? ಖರ್ಚೇನೂ ಬಹಳ ವ್ಯತ್ಯಾಸವಾಗಲ್ಲ. ರೀಸೈಕಲ್ಡ್ ವಸ್ತುಗಳನ್ನ, ಮನೆ ಕಟ್ಟುವ ಕಡೆಯೇ ನ್ಯಾಚುರಲ್ ಆಗಿ ಏನೇನು ಸಿಗತ್ತೋ ಅದನ್ನೇ ಬಳಸಿ, ನೇಚರ್ ಜೊತೆ ಸಂಪರ್ಕ ಇರೋ ಹಾಗೆ ಮನೆ ಕಟ್ಟಿಕೊಂಡ್ರೆ ಭೂಮಿಗೂ ತೊಂದ್ರೆ ಇಲ್ಲ, ನಮಗೂ ತೊಂದ್ರೆ ಇಲ್ಲ.” ಎಂದಳು. ರೂಮ್ ತಲುಪಿ, ಸ್ವಲ್ಪ ರೆಸ್ಟ್ ಮಾಡಿ ಊಟಕ್ಕೆ ಬಂದರು. ಇವರು ತಂಗಿದ್ದ ರೆಸಾರ್ಟಿನಲ್ಲಿ ಊಟದ ಹಾಲ್, ಗಾಜಿನ ಕಲಾಕೃತಿಗಳಿಂದ ಮತ್ತು ಮುರಿದ ಟೈಲ್ಸ್ ತುಣುಕುಗಳ ಟೆರಾಕೋಟಾ ಚಿತ್ರಗಳಿಂದ ಅಲಂಕೃತಗೊಂಡಿತ್ತು. ಹಳೆಯ ಮರದ ಬೊಡ್ಡೆಗಳನ್ನು ಬಳಸಿ, ಟೇಬಲ್ ಚೇರುಗಳನ್ನು ಮಾಡಿದ್ದರು. ಹತ್ತಿರವೇ ಇದ್ದ ಟೇಬಲ್ ಆಯ್ದುಕೊಂಡು, ತಮಗೆ ಬೇಕಾದ ಆಹಾರವನ್ನು ತಟ್ಟೆಗೆ ಬಡಿಸಿಕೊಂಡು ಕುಳಿತರು. ಊಟದ ಜೊತೆಗೆ ಮಾತಾಡುತ್ತಾ, ಸುತ್ತೀ ಬಳಸೀ ಮಾತುಕತೆ ಮತ್ತೆ ಮರಳಿನ ಕಡೆಗೇ ಹೊರಳಿತು.
ತಮ್ಮ ಮೇಜಿನ ಮೇಲಿಟ್ಟಿದ್ದ ಚೆಂದದ ಗಾಜಿನ ಕಲಾಕೃತಿಯನ್ನು ಕಂಡು, ವರ್ಣ “ಬ್ರೌನ್ ಕಲರ್ ಮರಳಿನ ಕಣಗಳು ಹೀಗೆ ಪಾರದರ್ಶಕ ಗ್ಲಾಸ್ ಆಗತ್ತೆ ಅಂದ್ರೆ ನಂಬಕ್ಕೇ ಆಗಲ್ಲ. ಇದನ್ನೂ ಯಾವುದೋ ಸಮುದ್ರತೀರದ ಮರಳನ್ನೇ ಬಳಸಿ ಮಾಡಿರಬಹುದಲ್ವಾ?” ಎಂದಳು.
ಆಗ ಪ್ರಕಾಶ್, “ಇರ್ಬಹುದು. ಗಾಜಿನ ತಯಾರಿಗೆ ಮರಳನ್ನ ಬಳಸ್ತಾರೆ ಅನ್ನೋದು ನಿಜ. ಆದ್ರೆ ಯಾವ ಮರಳನ್ನ ಬೇಕಾದ್ರೂ ಬಳಸಕ್ಕೆ ಆಗಲ್ಲ. ಮರಳು ಅಂದ್ರೆ ೦.೦೫ ಇಂದ ೨ ಮಿಲಿಮೀಟರ್ ಗಾತ್ರ ಇರೋ ಕಣಗಳ ಸಂಗ್ರಹ. ಅದ್ರಲ್ಲಿ ಕ್ವಾರ್ಟ್ಝ್(Quartz) ಕಣಗಳು ಇರತ್ತೆ. ಜೊತೆಗೆ ಬೇರೆ ಬೇರೆ ಮಿನರಲ್ಸ್ ಅಂದ್ರೆ ಖನಿಜಗಳ ಕಣಗಳು ಕೂಡ ಇರತ್ವೆ. ಜೊತೆಗೆ ಅನೇಕ ಜೀವಿಗಳ ಚಿಪ್ಪುಗಳ ಸಣ್ಣ ತುಣುಕುಗಳೂ, ಗಿಡಮರಗಳ ತೊಗಟೆಗಳ ಕಣಗಳೂ ಇರತ್ವೆ. ಹೆಚ್ಚು ‘ಸಿಲಿಕಾನ್ ಡೈಆಕ್ಸೈಡ್’ ಅಂದ್ರೆ ಕ್ವಾರ್ಟ್ಝ್(Quartz) ಕಣಗಳು ಹೆಚ್ಚು ಇದ್ದಷ್ಟೂ ಅದು ಗಾಜಿನ ತಯಾರಿಗೆ ಸೂಕ್ತ ಅಂತ ಅರ್ಥ.” ಎಂದು ವಿವರಿಸಿದ.
ಮಧ್ಯೆ ಮಧ್ಯೆ ಬಗೆಬಗೆಯ ಸ್ಥಳೀಯ ಖಾದ್ಯಗಳನ್ನ ಬಡಿಸಿಕೊಳ್ಳೋಕೆ ಎದ್ದು ಹೋಗಿ, ಪುನಃ ಬಂದು ಮಾತು ಮುಂದುವರೆಸುತ್ತಾ, ಊಟ ಮುಂದುವರೆಸಿದರು. ಆಗ ಸಮುದ್ರ, “ಅಪ್ಪಾ, Quartz ಅಂದ್ರಲ್ಲ? ಅದನ್ನ ವಾಚಲ್ಲಿ ಯೂಸ್ ಮಾಡ್ತಾರೆ ಅಲ್ವಾ?” ಎಂದ. ಆಗ ಪ್ರಕಾಶ್, “ಹೌದು ಸಮುದ್ರ, ಇಲ್ಲಿ ನೋಡೂ, ಈ ನನ್ನ ಕನ್ನಡ ನಂಬರ್ಸ್ ಇರೋ ‘ಗಂಡಭೇರುಂಡ’ ವಾಚಲ್ಲೂ ಖಂಡಿತಾ ಕ್ವಾರ್ಟ್ಝ್ ಇದೆ. 1950ರ ಮುಂಚೆ ಬರೀ ಲ್ಯಾಬ್ ಅಥ್ವಾ ಇಂಡಸ್ಟ್ರೀಗಳಲ್ಲಿ ಇರ್ತಾ ಇದ್ದ ಕ್ವಾರ್ಟ್ಝ್ ಬಳಕೆ, ಆಮೇಲೆ ಆಫೀಸು, ಮನೆಗಳಲ್ಲಿ ಬಳಸುವ ಗೋಡೆ ಗಡಿಯಾರಗಳಲ್ಲಿ ಉಪಯೋಗಕ್ಕೆ ಬಂತು. ಆಮೇಲೆ ಕೈಗಡಿಯಾರದಲ್ಲೂ ಇದರ ಬಳಕೆ ಶುರುವಾಯ್ತು.” ಎಂದ.
ಆಗ ಸಮುದ್ರ, “ಹಾಗಾದ್ರೆ, ಅದು ಹಳೆಯ ಅನಲಾಗ್ ವಾಚಲ್ಲಿ ಮಾತ್ರ ಯೂಸ್ ಆಗೋದಾ? ನಮ್ Gen Z, Gen Alphaಗೆ ಕ್ವಾರ್ಟ್ಝ್ ಬೇಡ ಮತ್ತೆ!” ಎಂದ.
ಆಗ ಕಾವ್ಯ, “ಇಲ್ಲ ಪುಟ್ಟಾ. ಅನಲಾಗ್ ವಾಚ್ ಮಾತ್ರ ಅಲ್ಲ, ಕೆಲವು ಬಗೆಯ ಡಿಜಿಟಲ್ ವಾಚಲ್ಲಿ, ನಮ್ಮ ಲ್ಯಾಪ್ಟಾಪ್, ಸ್ಮಾರ್ಟ್ ಫೋನು – ಹೀಗೆ ಎಲ್ಲಾ ಕಡೆ ಉಪಯೋಗಿಸ್ತಾರೆ. ನಮ್ಮ ವಾಚಲ್ಲಿ ಬ್ಯಾಟರಿ ಇರತ್ತಲ್ಲಾ? ಅದರಿಂದ ಹೊರಟ ಎಲೆಕ್ಟ್ರಿಕ್ ಸಿಗ್ನಲ್, ನಮ್ಮ ವಾಚಲ್ಲಿರೋ ಕ್ವಾರ್ಟ್ಝ್ ಸ್ಫಟಿಕ ಅಂದ್ರೆ ‘ಕ್ರಿಸ್ಟಲ್’ನ ತಲುಪತ್ತೆ. ಆಗ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಈ ಕ್ವಾರ್ಟ್ಝ್ ಕ್ರಿಸ್ಟಲ್ ವೈಬ್ರೇಟ್ ಆಗಿ, ಗಡಿಯಾರದ ಮುಳ್ಳು ಕರೆಕ್ಟಾಗಿ ಒಂದು ‘ಸೆಕೆಂಡ್’ನಷ್ಟು ಚಲಿಸತ್ತೆ. ಆ ‘ಸೆಕೆಂಡ್ಸ್’ ಮುಳ್ಳು ಚಲಿಸಿದ್ದಕ್ಕೆ, ಅದಕ್ಕೆ ಹೊಂದಿಕೊಂಡಿರೋ ನಿಮಿಷದ ಮುಳ್ಳು, ಜೊತೆಗೆ ಘಂಟೆಯ ಮುಳ್ಳು ಕೂಡ ನಿಮಿಷ ಅಥ್ವಾ ಘಂಟೆಯ ಲೆಕ್ಕಾಚಾರಕ್ಕೆ ಸರ್ಯಾಗಿ ಚಲಿಸತ್ವೆ” ಎಂದು ವಿವರಿಸಿದಳು.
ಆಗ ವಿಭಾ, “ಈ ಕ್ವಾರ್ಟ್ಝ್ ಬರೀ ನಮ್ಮ ಮರಳಲ್ಲಿ ಸಣ್ಣ ಕಣಗಳಾಗಿ ಸಿಗೋದಲ್ಲ. ಎಷ್ಟೋ ಬಂಡೆಗಳ ನಡುವೆ ದೊಡ್ಡ ಗಾಜಿನ ಕಲಾಕೃತಿ ಥರಾ ಅಡಗಿ ಕೂತಿರತ್ತೆ. ಅದನ್ನ ಮೈನ್ ಮಾಡಿ ಕೂಡ ತೆಗೀತಾರಂತೆ. ಮತ್ತೆ, ಕ್ವಾರ್ಟ್ಝ್ ಯಾವಾಗ್ಲೂ ಟ್ರಾನ್ಸ್ಪರೆಂಟ್ ಅಂದ್ರೆ ಪಾರದರ್ಶಕವಾಗಿ, ಬಣ್ಣ ಇಲ್ದೇ ಇರೋ ಗಾಜಿನ ಥರಾ ಕಾಣಲ್ಲ. ಎಷ್ಟೋ ಸಲ ಅದ್ರಲ್ಲಿ ಬೇರೇ ಬೇರೆ ಖನಿಜಗಳ ಕಣಗಳು ಮಿಕ್ಸ್ ಆಗಿ, ಬ್ಯೂಟಿಫುಲ್ ಆಗಿರತ್ವೆ. ನೇರಳೆ ಅಂದ್ರೆ ಪರ್ಪಲ್ ಬಣ್ಣ ಇದ್ರೆ ‘ಅಮೇಥಿಸ್ಟ್’ ಅಂತಾರೆ, ಪಿಂಕ್ ಕಲರ್ ಇದ್ರೆ ‘ರೋಸ್ ಕ್ವಾರ್ಟ್ಝ್’ ಅಂತಾರೆ. ಹೀಗೇ ಎಷ್ಟೊಂದು ಟೈಪ್ಸ್ ಇದೆ ಅದ್ರಲ್ಲೇ. ಮೊನ್ನೆ ಒಂದು ಮ್ಯಾಗಝೀನಲ್ಲಿ ಓದ್ತಾ ಇದ್ದೆ ಇದ್ರ ಬಗ್ಗೆ.” ಎಂದಳು.

ಆಗ ವರ್ಣ, “ಓಹ್ ಹಾಗಾದ್ರೆ ಕ್ವಾರ್ಟ್ಝ್ ಒಂದು ಕೈಯಲ್ಲಿರೋ ವಾಚಲ್ಲಿ ಮಾತ್ರ ಅಲ್ಲ, ಇನ್ನೊಂದು ಕೈಯಲ್ಲಿರೋ ಉಂಗುರದಲ್ಲಿ, ಅಷ್ಟೇ ಅಲ್ಲ, ಎರಡೂ ಕೈಗಳ ಬೆರಳಿಗೆ ಪುರಸೊತ್ತು ಕೊಡದೇ ಇರೋ ಮೊಬೈಲಲ್ಲೂ ಇರತ್ತೆ” ಎಂದು ನಗಾಡಿದಳು. ಆಗ ಕಾವ್ಯ, “ಹೌದೌದು! ಕ್ವಾರ್ಟ್ಝ್ ಬಗ್ಗೆ ನೀವೆಲ್ಲಾ ಇಷ್ಟು ಆಸಕ್ತಿಯಿಂದ ಮಾತಾಡೋದು ನೋಡಿದ್ರೆ, ಸಂಜೆ ‘ಬೀಚ್’ಗೆ ಹೋದಾಗ ಸಮುದ್ರದಲ್ಲಿ ಆಡೋದು ಬಿಟ್ಟು, ಕಪ್ಪೆಚಿಪ್ಪು, ಶಂಖ ಆರಿಸಿಕೊಳ್ಳೋದು ಬಿಟ್ಟು, ಕ್ವಾರ್ಟ್ಝ್ ಕಣಗಳನ್ನ ಹುಡುಕ್ತೀರಾ ಅಂತ ಡೌಟ್ ಆಗ್ತಿದೆ” ಎಂದಳು ನಗುತ್ತಾ. ಊಟ ಮುಗಿಸಿ ರೂಮ್ ಕಡೆ ಹೊರಟ ಕಾವ್ಯಳನ್ನು, ಅವಳ ಹಿಂದೆಯೇ ಹೊರಟ ಸಮುದ್ರ, “ಅಮ್ಮ, ಒಂದು ಪ್ರಶ್ನೆ! ಸಮುದ್ರದ ತೀರದಲ್ಲಿ ಎಷ್ಟು ಮರಳ ಕಣಗಳಿವೆ ಗೊತ್ತಾ?” ಎಂದ. ಅಷ್ಟರಲ್ಲಿ ವರ್ಣ ಹಿಂಬಾಲಿಸುತ್ತಾ, “ನಮ್ಮೆಲ್ಲರ ತಲೆಯಲ್ಲಿರುವ ಕೂದಲಿಗಿಂತಾ ಜಾಸ್ತಿ” ಎಂದು ಕೀಟಲೆ ಮಾಡಿದಳು. ಹೀಗೆ ನಗೆಚಟಾಕಿ, ವಿಜ್ಞಾನ, ಪರಿಸರ ಅಂತ ಮಾತಾಡ್ತಾ ಮಾತಾಡ್ತಾ, ಕಾವ್ಯಳ ಕುಟುಂಬ ಮುಂದೆ ಏನು ಮಾಡಿದರು, ಇಲ್ಲಿಂದ ಇವರ ಪಯಣ ಎತ್ತ ಸಾಗಿತು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. ಅಲ್ಲಿಯವರೆಗೂ ನಿಮ್ಮ ಮೆದುಳಿಗೊಂದು ತರಲೆಹುಳು ಬಿಡೋಣ. ಅದೇ, ತರಲೆ ಸಮುದ್ರನ ತರಲೆ ಪ್ರಶ್ನೆ – ಭೂಮಿಯಲ್ಲಿರುವ ಸಮುದ್ರ ತೀರಗಳಲ್ಲಿರುವ ಮರಳ ಕಣಗಳು ಎಷ್ಟಿರಬಹುದು? ಅಂತರ್ಜಾಲ ಜಾಲಾಡದೇ ಜಾಣರ ಹಾಗೆ ಈ ಪ್ರಶ್ನೆಗೆ ಉತ್ತರ ಹೇಳಬಲ್ಲಿರಾ?
(ಹಿಂದಿನ ಕಂತು: ಬೆಳದಿಂಗಳ ಹಾಡಿಗೆ ಭೂಮಿಯ ಲಾಸ್ಯ)
ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ ‘ಜೀವಿಜ್ಞಾನ’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.


