ಸುಮ್ಮನೇ ಅತ್ತ ನೋಡಿದೆ. ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಮಾದು ಸೀದಾ ನನ್ನ ಬಳಿಗೆ ಬಂದರು. ತಮ್ಮ ಬೊಚ್ಚು ಬಾಯಿಂದ ಹೇಳ ಹೊರಟ ಮಾತುಗಳೆಲ್ಲಾ ಬಿಕ್ಕಳಿಕೆಗಳಾದವು. ಮೂಳೆ ಬಿಟ್ಟುಕೊಂಡಿದ್ದ ಅವರ ಮುಖದಲ್ಲಿನ ಕಣ್ಣೀರು ಮಾತಾಡತೊಡಗಿದವು. ಗೆಳೆಯನ ಸಾವು ಅವರನ್ನು ದಿಕ್ಕೆಡಿಸಿತ್ತು. ಅದಾದ ನಂತರ ನಾವಿಬ್ಬರೂ ಮುಂಚಿನ ಥರವೇ ಗೆಳೆಯರಾಗಿದ್ದೆವು. ಮಾದು ಮೆತ್ತಗಾಗತೊಡಗಿದ್ದರು. ವಯಸ್ಸು ದೇಹವನ್ನು ಜಪ್ಪುತ್ತಿತ್ತು. ಆದರೆ ಆ ಮುಗ್ಧ ನಗು, ಆ ತಾಳ್ಮೆ, ನಿಷ್ಕಲ್ಮಷ ಪ್ರೀತಿ, ಆ ತಮಾಷೆ ಮಾತ್ರ ಹಂಗೇ ಇದ್ದವು. `
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿಮೂರನೆಯ ಕಂತು
ಕೆಲವರ ಸ್ನೇಹ, ಸಲಿಗೆ, ಪ್ರೀತಿ, ವಿಶ್ವಾಸಗಳು ಕಾಲದ ಹಂಗಿಲ್ಲದೆ ಶಾಶ್ವತವಾಗಿ ಎದೆಯಲ್ಲಿ ಉಳಿದುಬಿಡುತ್ತವೆ. ಅಂತೆಯೇ ಅಂಥವರುಗಳ ಕೋಪ, ಮುನಿಸುಗಳು ಕೂಡಾ. ನೆನಪಾದಾಗಲೆಲ್ಲಾ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಾ ಕಳೆದ ಕಾಲದ ನೆನಪಿನ ಓಣಿಯಲ್ಲಿ ಅಡ್ಡಾಡಿಸುತ್ತವೆ. ಸಣ್ಣ ಖುಷಿಯ ಜತೆಗೆ ವಿಷಾದ, ಪಾಪಪ್ರಜ್ಞೆಗಳನ್ನೂ ಹುಟ್ಟಾಕುತ್ತಿರುತ್ತವೆ. ನನ್ನೊಳಗಿರುವ ಇಂಥ ಅನೇಕ ಘಟನೆಗಳಲ್ಲಿ ನನ್ನ ಪ್ರೀತಿಯ ಮಾದುವಿನ ಘಟನೆಯೂ ಒಂದು. ನನ್ನ ಬಾಲ್ಯದ ಅನೇಕ ಚಣಗಳನ್ನು ಚಂದವಾಗಿಸಿದವರು. ವಯಸ್ಸಿನ ಅಂತರವನ್ನು ಅತ್ತಲಾಗಿ ಇಟ್ಟು ನನ್ನೊಡನೆ ಮಗುವಿನಂತೆ ಇದ್ದವರು. ಇಂಥ ಈ ಮಾದು ಈಗಲೂ ಆಗಾಗ ನನ್ನೊಡನೆ ಮಾತಿಗಿಳಿಯುತ್ತಾರೆ. ಅದೇ ಮುಗ್ಧ ನಗುವಿನಿಂದ. ಅದೇ ನಿಷ್ಕಲ್ಮಷ ಪ್ರೀತಿಯಿಂದ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಇಂಥವರ ಮನಸ್ಸನ್ನು ನೋಯಿಸಿದ ಸಂಗತಿಗಳು ನೆನಪಾದಾಗಲೆಲ್ಲಾ ಎದೆ ಭಾರವಾಗುತ್ತದೆ.
ಮಾದು ತೀರಿಕೊಂಡು ಹನ್ನೊಂದು ವರ್ಷಗಳ ಮೇಲಾಗಿದೆ. ಅವರಿಗಾಗ ತೊಂಭತ್ತೈದು ವರ್ಷದ ಆಸುಪಾಸು. ಇವರ ಪೂರಾ ಹೆಸರು ಮಹದೇವಪ್ಪ ಅಂತ ಇದ್ದರೂ ನನಗವರು ಯಾವತ್ತೂ ಮಾದುವೇ ಆಗಿದ್ದರು. ನಮ್ಮಿಬ್ಬರ ಗೆಳೆತನ ಯಾವತ್ತೂ ಬಹುವಚನದ್ದಾಗಿಯೇ ಇರಲಿಲ್ಲ. ಇವರ ಊರು ನನ್ನ ಹಳ್ಳಿಯ ಪಕ್ಕದ ಶೆಟ್ಟೀಕೆರೆ. ಏನು ಕಸುಬು ಮಾಡುತಿದ್ರು ಅಂತ ಕೇಳಿದ್ರೆ ಇಂಥದೇ ಅಂತ ನಿಖರವಾಗಿ ಹೇಳೋಕಾಗಲ್ಲ. ಯಾಕೆಂದರೆ ಬೇಸಾಯದ ಕೆಲಸದಿಂದ ಹಿಡಿದು ಕ್ಷೌರದವರೆಗೆ ಅಂತ ಹೇಳಬಹುದಷ್ಟೇ. ಆದರೂ ನನ್ನ ಹಳ್ಳಿಯಲ್ಲಿ ಇವರನ್ನು ಹೆಚ್ಚಾಗಿ ಚೌರದ ಮಾದೇವಪ್ಪ ಅಂತಲೇ ಕರೆಯುತ್ತಿದ್ದರು. ದಿನಕ್ಕೊಮ್ಮೆಯಾದರೂ ನನ್ನ ಹಳ್ಳಿಗೆ ಬರದೇ ಇದ್ದರೆ ಜೀವ ತಡೆಯುತ್ತಿರಲಿಲ್ಲ. ಕಸುಬಿಗೆ ಅಂತ ಅಲ್ಲದಿದ್ದರೂ ಗೆಳೆಯರನ್ನ ಮಾತನಾಡಿಸುವ, ಹತ್ತಿರದವರಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುವ ಸಲುವಾಗಿಯಾದರೂ ನನ್ನ ಊರಿಗೆ ದಿನವೂ ಹಾಜರಿ ಹಾಕುತ್ತಿದ್ದರು. ಎಷ್ಟೋ ದಿನ ಕಸುಬಿಗೆಂದು ನನ್ನ ಹಳ್ಳಿಗೆ ಬಂದವರು ಏನೊಂದೂ ಕೆಲಸವೂ ಇಲ್ಲದೆ ಹಾಗೇ ಮನೆಗೆ ಹೋಗುತ್ತಿದ್ದದ್ದೂ ಉಂಟು. ಇನ್ನೂ ವಿಶೇಷ ಅಂದರೆ ಈ ಮಾದು ನನ್ನ ಊರಿಗೆ ಬಿಟ್ಟರೆ ಕಸುಬಿಗೆಂದು ಮತ್ತಾವ ಊರಿಗೂ ಹೋಗುತ್ತಿರಲಿಲ್ಲ. ಹಾಗೆ ನೋಡಿದರೆ ಇವರಿಗೂ ಒಂದಷ್ಟು ಹೊಲ ಇತ್ತು. ಅದರಲ್ಲಿ ಕೃಷಿಯನ್ನೂ ಮಾಡುತ್ತಿದ್ದರು.
ಇವರ ಎದುರಿಗೆ ಸಿಕ್ಕ ಯಾರಿಗೂ ಇವರನ್ನು ಮಾತನಾಡಿಸದೇ ಹೋಗಲು ಮನಸ್ಸು ಬರುತ್ತಿರಲಿಲ್ಲ. ಹಂಗೇನೇ ಇವರಿಗೂ ಸಿಕ್ಕವರ ಜೊತೆ ಮಾತನಾಡದೇ ಹೋದರೆ ತಪ್ಪಾಗಿಬಿಡುತ್ತೆ ಎಂಬಂತೆ ಭಾವವಿತ್ತು. ಬೆನ್ನಿಗೊಂದು ಕೈ ಚೀಲದಂಥದ್ದನ್ನು ತಗಲಾಕಿಕೊಂಡು ಕಸುಬಿನ ಸಾಮಾನುಗಳನ್ನೆಲ್ಲಾ ಅದರೊಳಕ್ಕೆ ತುಂಬಿಕೊಂಡು ಬೆಳಗ್ಗೆಯೇ ಮನೆ ಬಿಡುತ್ತಿದ್ದರು. ಕಸುಬಿಗಾಗಿ ಅಂತ ಆಗಿದ್ದರೂ ಈ ಮಧ್ಯೆ ಯಾರಾದರೂ ಸಿಕ್ಕಿ ಸೌದೆ ಹೊಡೆಯುವುದಕ್ಕೋ ನಾಟಿ ಮಾಡುವುದಕ್ಕೋ ಇಲ್ಲಾ ಹುಲ್ಲು ಕಟ್ಟಲೆಂದೋ ಕಣದ ಕೆಲಸಕ್ಕೋ ಒತ್ತಾಯಿಸಿದ್ದೇ ಆದರೆ ಅಷ್ಟಕ್ಕೇ ಅವರ ಆ ಮೂಲ ಕಸುಬು ಮೊಟಕುಗೊಂಡು ಸರಿ ಆ ಕೆಲಸಕ್ಕೆ ಹೋಗಿಬಿಡುತ್ತಿದ್ದರು. ವಿಶೇಷ ಅಂದರೆ ಬೆಳಗಿನಿಂದ ಸಂಜೆಯವರೆಗೆ ಹೀಗೆ ಕರೆದವರ ಬಳಿ ಕೆಲಸ ಮಾಡುತ್ತಿದ್ದ ಈ ನನ್ನ ಮಾದು ಸಂಜೆ ಹೊರಡುವಾಗ ಬಾಯಿ ಬಿಟ್ಟು ಕಾಸು ಕೇಳುತ್ತಿರಲೇ ಇಲ್ಲ. ಅವರಾಗೇ ಕೊಟ್ಟರೆ ಇಸುಕೊಳ್ಳುತ್ತಿದ್ದರು. ಅದು ಅಷ್ಟು ಇಷ್ಟು ಅಂತ ಕೂಡಾ ಅಲ್ಲ. ಇದು ಕಡಿಮೆ ಆಯ್ತು ಅಂತ ಸಣ್ಣ ಚಕಾರ ಕೂಡಾ ಎತ್ತುತ್ತಿರಲಿಲ್ಲ. ಕೊಟ್ಟಷ್ಟನ್ನು ಇಟ್ಟುಕೊಂಡು ಕೈ ಚೀಲವನ್ನು ಬಗಲಿಗೇರಿಸಿ ಹೊರಟು ಬಿಡುತ್ತಿದ್ದರು.
ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ನನಗೆ ನನ್ನ ಅಣ್ಣನಿಗೆ ಅದೇ ರೀತಿ ನನ್ನ ಅಪ್ಪನಿಗೆ ಕ್ಷೌರ ಮಾಡುತ್ತಿದ್ದುದು ಇದೇ ಮಾದುವೇ. ಇವರ ಕ್ಷೌರವೆಂದರೆ ಅದು ಹತ್ತು ಹದಿನೈದು ನಿಮಿಷಗಳಿಗೆ ಮುಗಿಯುವಂಥದ್ದಾಗಿರಲಿಲ್ಲ. ಏನಿಲ್ಲಾ ಅಂದರೂ ಒಬ್ಬೊಬ್ಬರಿಗೆ ಒಂದೊಂದು ಗಂಟೆಯ ಮಾತಾಗಿತ್ತು. ಅಷ್ಟು ಹೊತ್ತಿಗೆ ಮಕ್ಕಳಾಗಿದ್ದ ನಮ್ಮಂಥವರಿಗೆ ನಿದ್ದೆಯೇ ಬಂದುಬಿಡುತ್ತಿತ್ತು. ದೊಡ್ಡವರಿಗಾದರೆ ಅವರ ಹತ್ತಿರ ಹೊಲ ತೋಟ ಮಕ್ಕಳು ವ್ಯವಸಾಯ ಅದು ಇದು ಅಂತ ಮಾತನಾಡಲು ಹತ್ತಾರು ಸಂಗತಿಗಳಿರುತ್ತಿದ್ದವು. ಹಂಗಾಗಿ ಇವರೆದುರು ಕ್ಷೌರಕ್ಕೆ ಕುಳಿತವರು ಆ ಸಮಯಕ್ಕೆ ತಯಾರಾಗಿರುತ್ತಿದ್ದರು. ನಾನೊಮ್ಮೆ ಹೀಗೆ ಕ್ಷೌರಕ್ಕೆಂದು ಮಾದುವಿಗೆ ತಲೆಕೊಟ್ಟಾಗ ಹೆಚ್ಚೂ ಕಡಿಮೆ ಒಂದು ಗಂಟೆಯಾದರೂ ನನ್ನ ಕಟಿಂಗ್ ಮುಗಿಸದಿದ್ದ ಕಂಡು ಬೇಗ ಬೇಗ ಮುಗಿಸುವಂತೆ ಅವಸರಿಸತೊಡಗಿದೆ. ನನ್ನ ಅವಸರ ಅವರಿಗೆ ಅದೇನನ್ನಿಸಿತೋ ಏನೋ ಮತ್ತೂ ತಡಮಾಡತೊಡಗಿದ್ದರು. ನಾನು ಕೊಸರಾಡಿ ಎದ್ದು ಹೋಗಲು ನೋಡಿದ್ದೆ. ಮಾದು ನನ್ನನ್ನು ಮತ್ತೂ ಹತ್ತಿರಕ್ಕೆ ಎಳೆದುಕೊಂಡು ಕೂರಿಸಿಕೊಂಡು ಎದ್ದು ಹೋಗ್ತೀಯ ಹೋಗು ನೋಡಾನ ಅಂತ ತಮಾಷೆ ಮಾಡುತ್ತಾ ನಗುತ್ತಿದ್ದರು. ನಾನು ಅಲ್ಲಿಂದ ತಕ್ಷಣ ಹೊರಡಲೇ ಬೇಕಿತ್ತು. ಏಕೆಂದರೆ ನಾನು ಮತ್ತು ನನ್ನ ಗೆಳೆಯರೆಲ್ಲಾ ಸೇರಿಕೊಂಡು ಕೆಲವು ದಿನಗಳ ಹಿಂದೆ ಹಿಡಿದು ಕಟ್ಟಿದ್ದ ತಾತಯ್ಯನ ಗೋರಿಯ ಕುದುರೆ ಸವಾರಿ ಅವತ್ತು ಮಾಡಲೇಬೆಕಿತ್ತು. ಹಂಗಾಗಿ ಶನಿವಾರದ ಮಾರ್ನಿಂಗ್ ಕ್ಲಾಸನ್ನು ಮುಗಿಸಿಕೊಂಡು ಬಂದವನೇ ಮನೆಯಿಂದ ದೌಡಾಕುವ ಯೋಚನೆಯಲ್ಲಿದ್ದ ನನ್ನನ್ನು `ತಲೆ ಬೆಳ್ದು ನೋಡಾಕಾಗಲ್ಲ, ಮೊದ್ಲು ಕಟಿಂಗ್ ಮಾಡಿಸ್ಕ’ ಅಂತ ಅಯ್ಯ ಹಿಡಿದು ಮಾದುವಿನ ಮುಂದೆ ಕುಕ್ಕರುಬಡಿಸಿದ್ದರು. ಆ ಹೊತ್ತಿಗಾಗಲೇ ನಮ್ಮ ಹಿಂಬದಿಯಲ್ಲಿದ್ದ ಬರ‍್ಲು ಗುಂಡಿಯ ಪಕ್ಕದಲ್ಲಿ ಅದಕ್ಕಾಗೇ ನನ್ನ ಗೆಳೆಯರು ಜಮಾಯಿಸಿದ್ದರು. ಅವರು ಅಲ್ಲಿಂದಲೇ ಬೇಗ ಬರುವಂತೆ ಕಣ್ಣಲ್ಲೇ ಬಾಣ ಬಿಡುತ್ತಿದ್ದರು. ಮಾದು ಯಾವಾಗ ನನ್ನನ್ನು ಹತ್ತಿರಕ್ಕೆ ಕೂರಿಸಿಕೊಂಡು ಗೇಲಿಮಾಡತೊಡಗಿದರೋ ನನಗೆ ರೇಗಿ ಹೋಗಿ ಅವರು ಹಿಡಿದಿದ್ದ ಎಡಗೈಯ್ಯನ್ನು ಬಲವಾಗಿ ಕಚ್ಚಿಬಿಟ್ಟಿದ್ದೆ. ಅದರ ರಭಸ ಎಷ್ಟಿತ್ತೆಂದರೆ ಅವರು ಚಕ್ಕನೆ ನನ್ನನ್ನು ಬಿಟ್ಟು `ಇದ್ಯಾಕ್ರ ಹಿಂಗ್ಮಾಡ್ತೀರ?’ ಅಂತ ಅನ್ನುತ್ತಾ ಕೈ ಕೊಡವಿಕೊಳ್ಳುತ್ತಿದ್ದರು. ಆಗ ನಾನು ಹೇಳದೇ ಕೇಳದೆ ಅಲ್ಲಿಂದ ಮಾಯವಾಗಿಬಿಟ್ಟಿದ್ದೆ. ಪುಣ್ಯಕ್ಕೆ ಅದು ಹೇಗೋ ನನ್ನ ಕಟಿಂಗ್ ಹೆಚ್ಚೂ ಕಡಿಮೆ ಮುಗಿದಿತ್ತು. ಈ ಘಟನೆಯನ್ನು ನೆನೆದು ಮಾದು ಆಗಾಗ ನಗುತ್ತಿದ್ದರು. ಹಂಗೆ ಕಟಿಂಗ್ ಮಾಡಿಸಿಕೊಂಡು ಸ್ನಾನ ಮಾಡದೇ ಹೋಗಿದ್ದಕ್ಕಾಗಿ, ಮಾದುವಿನ ಕೈ ಕಚ್ಚಿದ್ದಕ್ಕಾಗಿ ಅವತ್ತು ಸಂಜೆ ಬಂದಾಗ ಅಯ್ಯನ ಕೈಯ್ಯಿಂದ ನನಗೆ ಚೆನ್ನಾಗಿಯೇ ಪೂಜೆ ಆಗಿತ್ತು. ಆದರೆ ಕುದುರೆ ಸವಾರಿಯಲ್ಲಿ ಆಗಿದ್ದ ಅನಾಹುತದ ಎದುರು ಈ ಲಾತಾಗಳು ಏನೇನೂ ಅನಿಸಿರಲಿಲ್ಲ.
ನಾನು ಚಿಕ್ಕವನಾಗಿದ್ದಾಗಿಂದಲೂ ಕ್ಷೌರದ ಹೊರತಾಗಿಯೂ ನಮ್ಮ ಮನೆಗೆ ಒಂದಲ್ಲಾ ಒಂದು ಕೆಲಸಕ್ಕೆಂದು ಬರುತ್ತಿದ್ದ ಮಾದು ನನ್ನ ಅಪ್ಪನ ಆತ್ಮೀಯ ಗೆಳೆಯನಾಗಿದ್ದರು. ಅಂತೆಯೇ ನನಗೆ ಕೂಡಾ. ನಮ್ಮ ಗೆಳೆತನ ಎಷ್ಟಿತ್ತೆಂದರೆ ನಾನು ಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಮನೆಯಲ್ಲಿ ನಾನು ಮಾಡಬೇಕಿದ್ದ ಕೆಲಸವನ್ನು ಇಂತಿಷ್ಟು ಅಂತ ನಿಗಧಿಪಡಿಸಿ ಸ್ಕೂಲಿಗೆ ಹೊಗುವ ಹೊತ್ತಿಗೆ, ಇಲ್ಲಾ ಬಂದ ಮೇಲೆ ನಾನು ಅದನ್ನು ಮಾಡಿ ಮುಗಿಸಲೇಬೇಕಿತ್ತು. ಕೆಲವೊಮ್ಮೆ ನಾನು ಊರೊಳಗೆ ಅದೂ ಇದೂ ಆಟ ಆಡಿಕೊಂಡು ಆ ಕೆಲಸವನ್ನು ಮುಗಿಸಲಾಗದಿದ್ದರೆ ಇನ್ನು ಅಪ್ಪನ ಕೈಯ್ಯಲ್ಲಿ ಬೈಗುಳ ಇಲ್ಲವೆ ಏಟು ತಿನ್ನಿಸಿಕೊಳ್ಳಲು ತಯಾರಾಗಬೇಕಾಗುತ್ತಿತ್ತು. ಇಂಥ ಅದೆಷ್ಟೋ ಸಂದರ್ಭಗಳಲ್ಲಿ ಮಾದು ನನ್ನ ಕೆಲಸವನ್ನು ಮಾಡಿಕೊಡುತ್ತಿದ್ದರು. ಇಲ್ಲವೇ ಗೆಳೆಯನಾಗಿದ್ದ ಅಪ್ಪನಿಗೆ ಬೈಯ್ಯದಂತೆ ಸಮಾಧಾನ ಮಾಡುತ್ತಿದ್ದರು. ಹಿಂಗಿದ್ದ ನಮ್ಮ ಒಡನಾಟ ಅದೊಂದು ದಿನ ಇದ್ದಕ್ಕಿದ್ದಂತೆ ಕಡಿದುಕೊಂಡುಬಿಟ್ಟಿತ್ತು. ಮುನಿಸೇ ಬಾರದ ಮುಗುದನೊಬ್ಬನಿಗೆ ಮುನಿಸು ಬಂದಿತ್ತು. ಇದು ನನ್ನನ್ನು ಬಲು ದಿನ ಕಾಡಿತ್ತು.
ನಡೆದದ್ದು ಇಷ್ಟು. ನನ್ನ ಗೆಳೆಯರೊಬ್ಬರು ನಡೆಸುತ್ತಿದ್ದ ಸ್ಥಳಿಯ ಪತ್ರಿಕೆಯಲ್ಲಿ ಇವರ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಇವರನ್ನು ಅವಹೇಳನ ಮಾಡುವ ಇಲ್ಲವೇ ನೋವುಂಟುಮಾಡುವ ಉದ್ದೇಶವಿರಲಿಲ್ಲ. ಇವರ ಬಗ್ಗೆ ಹಂಗೆ ಬರೆಯಲು ಸಾಧ್ಯ ಕೂಡಾ ಇರಲಿಲ್ಲ. ನಾನು ಬರೆದದ್ದು ಅಷ್ಟೂ ನಿಜವೇ ಆಗಿತ್ತು. ಹಾಗೆ ನೋಡಿದರೆ ತುಂಬಾ ಪ್ರೀತಿಯ ಬರೆಹ ಅದಾಗಿತ್ತು. ಅದು ಪ್ರಕಟವಾಗಿ ಒಂದೆರಡು ದಿನ ಕಳೆದಿದ್ದವು. ನಾನು ಹೆಂಡತಿ ಮಗಳು ಅವತ್ತು ಊರಿಗೆ ಹೋದವರು ಅವತ್ತು ಅಲ್ಲಿಯೇ ಉಳಿದಿದ್ದೆವು. ಮಾರನೆಯ ದಿನ ತೋಟದಲ್ಲಿರುವ ನಮ್ಮ ಮನೆಯ ಮುಂದೆ ಇದ್ದಕ್ಕಿದ್ದಂತೆ ಬೆಳಬೆಳಗ್ಗೆಯೇ ಹೆಂಗಸಿನ ಜೋರು ದನಿಯೊಂದು ಅಪ್ಪಳಿಸಿತು. ಯಾರೋ ಯಾರನ್ನೋ ಬೈಯ್ಯುತ್ತಿರುವುದು ಅಂದುಕೊಂಡು ಚಕ್ಕನೆ ಆಚೆ ಬಂದು ನೋಡಿದ್ದೆ. ಅಲ್ಲಿ ನೋಡಿದರೆ ಆ ದನಿ ಬೈಯ್ಯುತ್ತಿದ್ದದ್ದು ನನ್ನನ್ನೇ. ಹಂಗೆ ಕಿರುಚುತ್ತಿದ್ದವರು ನನ್ನ ಮಾದುವಿನ ಹೆಂಡತಿ. ಬಾಯಿಗೆ ಬಂದಂತೆ ಬೈಯ್ಯುತ್ತಿದ್ದುದು ನನ್ನನ್ನೇ. ಅದೂ ನನ್ನ ಮುಖ ಕಂಡ ಕೂಡಲೇ ಆ ಮುದುಕಿಗೆ ಅದಾವ ಪರಿಯ ರೋಷ ಉಕ್ಕಿತೆಂದರೆ ಬೆಂಕಿಯ ಕಣ್ಣುಗಳನ್ನು ಬಿಟ್ಟುಕೊಂಡು ನನ್ನತ್ತ ನುಗ್ಗಿಯೇ ಬಿಟ್ಟರು ಅವರು. ನನಗೆ ಕಕರುಮಕರು ಹಿಡಿದಂತಾಗಿತ್ತು. ಯಾಕೆ ಅಂತ ತಿಳಿಯಲಿಲ್ಲ. ಗೊಂದಲಗೊಂಡು ಸುಮ್ಮನೆ ನಿಂತು ಬಿಟ್ಟಿದ್ದೆ. ಹತ್ತಿರ ಬಂದ ಅವರು `ಮಾಡಾದ್ನೆಲ್ಲಾ ಮಾಡಿ ಈಗ ಮಳ್ಳಿಯಂಗೆ ನಿಂತಿದೀಯಾ ದರ್ವೇಸಿ’ ಅಂದರು. ನನಗೆ ಆಗಲೂ ಏನೊಂದೂ ತಿಳಿಯದೆ ಅವರನ್ನೇ ದಿಟ್ಟಿಸಿದ್ದೆ. `ನನ್ನ ಯಜಮಾನನ್ನ ಚೌರದವನು ಅಂತ ಕರ್ದಿದಿಯಂತಲ್ಲೋ ಮನೆಹಾಳ’ ಅಂತ ಜೋರು ಕಿರಿಚಿದಾಗ ನನಗೆ ಎಲ್ಲದೂ ಅರ್ಥವಾಗಿ ಹೋಯ್ತು. `ಚೌರದವರನ್ನ ಚೌರದವರು ಅಂತ ಬರೀದೆ ಇನ್ನೇನಂತ ಬರೀತಾರಜ್ಜಿ’ ಅಂತ ಅವರನ್ನು ಸಮಾಧಾನ ಮಾಡಲು ನೋಡಿದ್ದೆ. `ಮಂಡಗತ್ತಿ ಅದು ಇದು ಅಂತ ಬರ್ದಿದಿಯಂತಲ್ಲಾ ನಿಮ್ಮಪ್ಪ ತಂದು ಕೊಟ್ಟಿದ್ನ ಅವುನ್ನೆಲ್ಲಾ’ ಅಂತ ಮತ್ತೂ ರಾಂಗಾಗಿಬಿಟ್ಟರು ಅವರು. ಇದನ್ನೆಲ್ಲಾ ನೋಡುತ್ತಿದ್ದ ನನ್ನ ಅಪ್ಪ ತುಟಿಕ್ ಪಿಟಿಕ್ ಅನ್ನದೆ ಯಾರ ಪರವನ್ನೂ ವಹಿಸದೇ ಬೀಡಿಯೊಂದನ್ನು ಹಚ್ಚಿಕೊಂಡು ಮನೆಯ ಮುಂದಿನ ಜಗಲಿಯ ಮೇಲೆ ಕೂತುಬಿಟ್ಟಿದ್ದರು. ಅಷ್ಟು ಹೊತ್ತಿಗೆ ಹಿಂದಿನಿಂದ ಮಾದುವಿನ ಪ್ರವೇಶವೂ ಆಯಿತು. ಆಗ ನಾನು ಮಾದುವಿನ ಹೆಂಡತಿಯ ಹತ್ತಿರ ಮಾತನಾಡಿದರೆ ನನಗೆ ಉಳಿಗಾಲವಿಲ್ಲ ಅಷ್ಟು ರಾಂಗಾಗಿತ್ತು ಆ ಅಜ್ಜಿ. ಮಾದು ಕಾಣಿಸಿಕೊಳ್ಳುತ್ತಲೇ ನನ್ನೊಳಗಿನ ಆತಂಕ ಕೊಂಚ ಕಡಿಮೆಯಾಯ್ತು. ಅದರ ಹಿಂದೆ ನನ್ನ ಮಾದು ಈ ಅಜ್ಜಿಯ ಥರ ಆಡಲು ಸಾಧ್ಯವೇ ಇಲ್ಲ ಅನ್ನುವ ನಂಬಿಕೆಯಿತ್ತು. ಹಂಗಾಗಿ ನಡೆಯುತ್ತಿದ್ದ ರಾದ್ಧಾಂತವನ್ನು ಮಾದೂಗೆ ಒಪ್ಪಿಸುತ್ತಾ ಮಾದೂನತ್ತ ನೋಡಿದೆ. ಅಚ್ಚರಿ ಅಂದರೆ ಮಾದೂವಿನ ಮುಖದಲ್ಲೂ ಕೋಪ ಮಡುಗಟ್ಟಿತ್ತು. ಆದರೆ ಅವನ ವ್ಯಗ್ರತೆ ಮಾತುಗಳಿಗಿಳಿಯಲಿಲ್ಲ. ಮಾದು ನಿಂತಲ್ಲೇ ನನ್ನನ್ನು ದಿಟ್ಟಿಸಿದರು. ಆ ಮೌನ ನನ್ನನ್ನು ಕೊಲ್ಲ ತೊಡಗಿತ್ತು. ಮತ್ತೇನು ಮಾಡಲು ತೋಚದೆ ಅಯ್ಯನಿಗೆ ನ್ಯಾಯ ಒಪ್ಪಿಸಲು ನೋಡಿದ್ದೆ. ನಾನೇನನ್ನೂ ನೋಡಿಲ್ಲ ನಾನೇನನ್ನೂ ಕೇಳಿಲ್ಲ ಅನ್ನುವಂತೆ ಅಯ್ಯ ಒಂದೂ ಮಾತಾಡದೆ ಎದುರಿಗೆ ನಿಂತಿದ್ದ ಮಾದೇವಪ್ಪನನ್ನು ಹತ್ತಿರಕ್ಕೆ ಕರೆದು ಬೀಡಿಯೊಂದನ್ನು ಕೊಟ್ಟು ಜಗಲಿಯಲ್ಲಿ ಕೂರಿಸಿಕೊಂಡುಬಿಟ್ಟರು. ನನ್ನ ಪುಟ್ಟ ಮಗಳು ಮತ್ತು ಹೆಂಡತಿ ಗಾಬರಿಯಿಂದ ಪಡಸಾಲೆಯಲ್ಲಿ ಇದನ್ನೆಲ್ಲಾ ನೋಡುತ್ತಾ ನಿಂತಿದ್ದರು. ನನಗೆ ನಿಜಕ್ಕೂ ಅವಮಾನವಾದಂತಾಗಿ ಅಳುವೇ ಬಂದು ಬಿಟ್ಟಿತ್ತು. ಇದಾವುದನ್ನೂ ಗಮನಿಸದ ಆ ಅಜ್ಜಿಯ ಸಿಟ್ಟು ಏರುತ್ತಾ ಹೋಗಿ ಕಡೆಗೆ ಅಜ್ಜಿ ನೆಲಕ್ಕೆ ಬಗ್ಗಿ ಒಂದಿಡಿ ಮಣ್ಣನ್ನು ತೆಗೆದುಕೊಂಡು `ನಮ್ಮಂಥವರ ಹೊಟ್ಟೆ ಉರಿಸಿದ ನಿಮ್ಮ ಮನೆ ಹಾಳಾಗಿ ಹೋಗ್ಲಿ’ ಅಂತ ನಮ್ಮ ಮನೆಯತ್ತ ಮಣ್ಣು ತೂರಿ ಹೊರಟು ಹೋಗಿತ್ತು.

ಈ ಘಟನೆ ನನ್ನನ್ನು ತುಂಬಾ ಘಾಸಿಗೊಳಿಸಿತ್ತು. ಅಲ್ಲಿಂದ ಮುಂದಕ್ಕೆ ಸುಮಾರು ವರ್ಷ ನನ್ನ ಮತ್ತು ಮಾದುವಿನ ನಡುವೆ ಪೂರಾ ಮಾತು ನಿಂತು ಹೋಗಿತ್ತು. ಕಂಡರೂ ಕಾಣದಂತೆ ಹೋಗುತ್ತಿದ್ದ ಮಾದುವನ್ನು ಯಾಕೆ ಹಂಗೆ ಹೋಗ್ತಿದೀಯಾ ಅಂತ ನಿಲಾಕಿ ಮಾತನಾಡಿಸುವ ಧೈರ್ಯ ನನ್ನಲ್ಲಿ ಇಲ್ಲವಾಗಿತ್ತು. ಮಾದುವಿನ ಮುನಿಸನ್ನು ಕಾಲವೇ ಮಾಗಿಸಬೇಕಿತ್ತು. ಈ ನಡುವೆ ನಾನು ಊರಿನ ಕಡೆ ಹೋಗುವುದೂ ಕಡಿಮೆಯಾಗಿತ್ತು. ಇಷ್ಟಾದರೂ ಅಯ್ಯ ಮತ್ತು ಮಾದುವಿನ ಗೆಳೆತನಕ್ಕೆ ಯಾವ ಮುಕ್ಕೂ ಬಂದಿರಲಿಲ್ಲ. ಊರಿಗೆ ಹೋದಾಗ ಕೆಲವೊಮ್ಮೆ ಮಾದು ಅಯ್ಯನ ಜತೆ ಹರಟುತ್ತಾ ಕೂತಿರುತ್ತಿದ್ದರು. ನನ್ನನ್ನು ಕಂಡರೂ ಕಾಣದಂತೆ ಎದ್ದು ಹೋಗುತ್ತಿದ್ದರು. ಆಗೆಲ್ಲಾ ನನ್ನೊಳಗೆ ಮಾತನಾಡಿಸಿ ರಾಜಿ ಮಾಡಿಕೊಳ್ಳುವ ಹಂಬಲ ಹುಟ್ಟಿಕೊಳ್ಳುತ್ತಿತ್ತು. ಆದರೆ ಮಾತನಾಡಿಸಿ ಮತ್ತೆ ಅವರ ಮನಸ್ಸಿಗೆ ನೋವು ಮಾಡೋದು ಬೇಡ ಅಂತ ನಾನೂ ಮಾತನಾಡಿಸುವ ಧೈರ್ಯ ಮಾಡುತ್ತಿರಲಿಲ್ಲ. ಹಿಂಗಿರುವಾಗ ನನ್ನ ಅಯ್ಯ ಅಪಘಾತವೊಂದರಲ್ಲಿ ತೀರಿಕೊಂಡರು. ಮಣ್ಣಿನ ದಿನ ಮಣ್ಣಿಗೆಂದು ಬಂದಿದ್ದ ಈ ಮಾದು ಸಂಜೆಯವರೆಗೂ ಮನೆಯ ಹತ್ತಿರವೇ ಇದ್ದರು. ಆದರೆ ಮಣ್ಣು ಮಾಡುವ ಬದಲು ಅಯ್ಯನನ್ನು ಸುಟ್ಟಿದ್ದರಿಂದ ಮಾದು ಕೊಂಚ ವಿಚಲಿತರಾದಂತೆ ಕಂಡಿದ್ದರು. ಆಗ ಅವರು ನನ್ನನ್ನು ಮಾತಾಡಿಸಬೇಕು ಅನ್ನುವ ಮುಖಭಾವದೊಂದಿಗೆ ನನ್ನನ್ನೇ ದಿಟ್ಟಿಸುತ್ತಿದ್ದರು. ಆದರೆ ಅಂದಿನ ನನ್ನ ಮನಸ್ಥಿತಿಯಿಂದಾಗಿ ಅದಕ್ಕೆ ಅನುವಾಗಿರಲಿಲ್ಲ. ಮಾರನೆಯ ದಿನ ಮಾದು ಬೆಳಬೆಳಗ್ಗೆಯೇ ಮನೆಯ ಮುಂದೆ ಪ್ರತ್ಯಕ್ಷವಾಗಿದ್ದರು. `ಅಲ್ಲ ಮಣ್ಣು ಮಾಡಾದ ಬಿಟ್ಬುಟ್ಟು ಸುಟ್ಟಾಕ್ಬುಟ್ರಲ್ಲ ಶಿವಪ್ಪಾರುನ್ನ, ಒಂದು ಕುರುವೂ ಇಲ್ಲದಂಗೆ ಮಾಡಿಬಿಟ್ರಲ್ಲ’ ಅಂತ ನನ್ನ ಚಿಕ್ಕಪ್ಪನ ಹತ್ತಿರ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದರು. ಜೀವ ಚುರುಕ್ಕೆಂತು. ಸುಮ್ಮನೇ ಅತ್ತ ನೋಡಿದೆ. ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಮಾದು ಸೀದಾ ನನ್ನ ಬಳಿಗೆ ಬಂದರು. ತಮ್ಮ ಬೊಚ್ಚು ಬಾಯಿಂದ ಹೇಳ ಹೊರಟ ಮಾತುಗಳೆಲ್ಲಾ ಬಿಕ್ಕಳಿಕೆಗಳಾದವು. ಮೂಳೆ ಬಿಟ್ಟುಕೊಂಡಿದ್ದ ಅವರ ಮುಖದಲ್ಲಿನ ಕಣ್ಣೀರು ಮಾತಾಡತೊಡಗಿದವು. ಗೆಳೆಯನ ಸಾವು ಅವರನ್ನು ದಿಕ್ಕೆಡಿಸಿತ್ತು. ಅದಾದ ನಂತರ ನಾವಿಬ್ಬರೂ ಮುಂಚಿನ ಥರವೇ ಗೆಳೆಯರಾಗಿದ್ದೆವು. ಮಾದು ಮೆತ್ತಗಾಗತೊಡಗಿದ್ದರು. ವಯಸ್ಸು ದೇಹವನ್ನು ಜಪ್ಪುತ್ತಿತ್ತು. ಆದರೆ ಆ ಮುಗ್ಧ ನಗು, ಆ ತಾಳ್ಮೆ, ನಿಷ್ಕಲ್ಮಷ ಪ್ರೀತಿ, ಆ ತಮಾಷೆ ಮಾತ್ರ ಹಂಗೇ ಇದ್ದವು. `ಹೇಯ್ ಮಾದು ಅವತ್ತ ಹಂಗೆ ಬರ್ದಿದ್ದೆ ಅಂತ ಸಿಟ್ಕಂಡಿದ್ಯಲ್ಲ? ಈಗ ಇನ್ನೊಂದ್ ಕಡೆ ಅದ್ಕಿಂತ ಜಾಸ್ತಿ ಬರೀತೀನಿ ಏನ್ ಮಾಡ್ತೀಯಾ?’ ಅಂತ ಆಗಾಗ ತಮಾಷೆ ಮಾಡ್ತಿದ್ದೆ. `ಹೇಯ್ ಬರ್ಕೋ ಹೋಗ್ರಾ’ ಅನ್ನುತ್ತಿದ್ದರು. `ಮತ್ಯಾಕೆ ಅವತ್ತು ತೊಣಚಿ ಹೊಕ್ಕನಂಗೆ ಆಡಿದ್ದು?’ ಅಂತ ಕೇಳುತ್ತಿದ್ದೆ. `ಅವತ್ತಿನ್ ಘಳೀಗೇನೇ ಚೆನಾಗಿರ್ಲಿಲ್ಲ ಬಿಡು. ನಮ್ಮಳ್ಗೆ ಹೇಳ್ದೆ ಬ್ಯಾಡ ಅಂತಾವ. ಕೇಳ್ಲುಲ್ಲ’ ಅಂತ ಅಂದಿನ ಇಡೀ ಘಟನೆಯ ಬಗ್ಗೆ ಬೇಸರ ಮಾಡಿಕೊಳ್ಳುತ್ತಿದ್ದರು.
ಇಂಥ ಮಾದುವಿನ ನಿಷ್ಕಲ್ಮಷ ಪ್ರೀತಿಗೆ ಗೌರವ ತೋರುವ ಸಲುವಾಗಿ ನಾನು ಚಿಕ್ಕನಾಯಕನಹಳ್ಳಿಯ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದ ಮಾದುವನ್ನು ಪಕ್ಕದಲ್ಲಿ ಕೂರಿಸಿಕೊಂಡು ಗೌರವಿಸಬೇಕೆಂದು ಹಂಬಲಿಸಿದ್ದೆ. ಆದರೆ ಮಾದು ಅದಕ್ಕೆ ಆಸ್ಪದ ಕೊಡದಂತೆ ಸಮ್ಮೇಳನ ಎರಡು ದಿನ ಇದೆ ಅನ್ನುವಾಗ ಈ ಲೋಕದ ಯಾತ್ರೆ ಮುಗಿಸಿ ಹೋರಟುಬಿಟ್ಟಿದ್ದರು. ಈ ಮಾದು ಬೇಲಿಯ ಹೂವಿನಂಥವರು. ಈ ಹೂವಿನ ಪರಿಮಳ ನನ್ನ ಮೈ ಮನಸ್ಸುಗಳಿಗೆ ಆಗಾಗ ತಾಕುತ್ತಲೇ ಇರುತ್ತದೆ.
*****
ಇದಾದ ಸುಮಾರು ವರ್ಷಗಳ ನಂತರ ನಾನು ಕಾಲೇಜೊಂದರಲ್ಲಿ ಮೇಷ್ಟ್ರು ಕೆಲಸ ಮಾಡುತ್ತಿದ್ದಂಥ ಹೊತ್ತಲ್ಲಿ ಬರವಣಿಗೆ ಅನ್ನೋದು ನನ್ನನ್ನು ಮತ್ತೊಂದು ಪೇಚಿಗೆ ಸಿಗಾಕಿಸಿತ್ತು. ಇಲ್ಲಿ ಬರೆದದ್ದು ಐಐಟಿ ಪದವೀದರರ ಬಗ್ಗೆ. ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಅದು ಪ್ರಕಟಗೊಂಡಿತ್ತು. ಇವರೆಲ್ಲಾ ಬಾಂಬೆ, ಕಲ್ಕತ್ತಾ, ಮದ್ರಾಸ್ ಮುಂತಾದೆಡೆ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಡಿಗ್ರಿ ಮುಗಿಸಿ ಒಂದಷ್ಟು ದಿನ ತುಂಬಾ ಒಳ್ಳೆಯ ಕಂಪನಿಗಳಲ್ಲಿ ಮತ್ತು ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದವರು. ತಾವು ಮಾಡುತ್ತಿದ್ದ ಕೆಲಸ, ತಮ್ಮ ನಗರದ ಬದುಕು, ಕೈ ತುಂಬಾ ಸಂಬಳ ಎಲ್ಲವನ್ನೂ ಒತ್ತಟ್ಟಿಗಿಟ್ಟು ಬದುಕಲು ಎಷ್ಟು ಬೇಕೋ ಅಷ್ಟು ಕೆಲಸವನ್ನು ಮಾಡುತ್ತಾ ಬದುಕುತ್ತಿದ್ದರು. ಅದಕ್ಕೆ ಕಾರಣ ಅವರ ಈ ಹಿಂದಿನ ಬದುಕಿನಲ್ಲಿದ್ದ ಏಕತಾನತೆಯೋ, ನಗರ ಬದುಕಿನ ನಿರ್ಜೀವತೆಯೋ, ಇಲ್ಲಾ ಬದುಕಿನಲ್ಲಿ ಹೊಸದೊಂದು ಪ್ರಯೋಗ ಮಾಡುವ ತುಡಿತವೋ ಗೊತ್ತಿಲ್ಲ. ಆದರೆ ಅಂಥದ್ದೊಂದು ಬದುಕಿನಿಂದ, ನಗರದ ರಗಳೆಗಳಿಂದ ದೂರ ಉಳಿದು ತಾಲ್ಲೂಕ್ ಕೇಂದ್ರವೊಂದರಿಂದ ಹತ್ತಾರು ಮೈಲಿ ದೂರವಿದ್ದ ಅಪ್ಪಟ ಹಳ್ಳಿಯೊಂದರಲ್ಲಿ ಮಳೆ ಆಧಾರಿತ `ಒಣ ಬೇಸಾಯ’ದ ಪ್ರಯೋಗ ಮಾಡುತ್ತಾ ನೆಲೆಸಿದ್ದರು.
ಇವರ ಇಂಥ ಬದುಕಿನ ಬಗ್ಗೆ ತಿಪಟೂರಿನ ನನ್ನ ಗೆಳೆಯರೊಬ್ಬರು ಪ್ರಸ್ತಾಪಿಸಿದ್ದ ಕಾರಣಕ್ಕೆ ಅವರುಗಳನ್ನು ಮತ್ತು ಅವರ ಬದುಕಿನ ಕ್ರಮವನ್ನು ನೋಡುವ ಮನಸ್ಸಾಗಿತ್ತು. ಹಂಗಾಗಿ ಅದೊಂದು ದಿನ ಇಬ್ಬರೂ ಅವರುಗಳು ಇದ್ದ ಆ ಹಳ್ಳಿಗೆ ಹೋಗಿದ್ದೆವು. ಒಂದೇ ಒಂದು ಮನೆಯಿರುವ ಆ ಹಳ್ಳಿಯನ್ನು ತಲುಪಿದಾಗ ಗಂಟೆ ಬೆಳಗಿನ ಎಂಟಾಗಿತ್ತು. ಆದರೂ ಇನ್ನೂ ಚುಮು ಚುಮು ಚಳಿಯಿತ್ತು. ಎದುರಿಗೆ ಕಾಣುತ್ತಿದ್ದ ಮನೆಯ ಜಗಲಿಯ ಮೇಲೆ ಮಕ್ಕಳು ಮಾಡುತ್ತಿದ್ದ ಗಲಾಟೆಯ ಸದ್ದು ದೂರಕ್ಕೆ ಆ ಮನೆಯ ಸುತ್ತಲೂ ಇದ್ದ ಮರಗಳಲ್ಲಿ ಕೂತು ಕೂಗುತ್ತಿರುವ ಹಕ್ಕಿಗಳ ಚಿಲಿಪಿಲಿ ಸದ್ದು ಒಂದಾಗಿ ಬೆರೆತು ಬೆಳಗಿನ ಬಿಸಿಲನ್ನು ಬರಮಾಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು. ಹತ್ತಿರವಾದಂತೆ ಮಕ್ಕಳ ಅಂಥ ಚಿಲಿಪಿಲಿಯ ಇಂಪನ್ನು ಆಸ್ವಾದಿಸುತ್ತಿರುವಂತೆ ಕಾಣುತ್ತಿದ್ದ ಕನ್ನಡಕಧಾರಿ ವ್ಯಕ್ತಿಯೊಬ್ಬರು ಜಗಲಿಯ ಮೂಲೆಯಲ್ಲಿ ಕುಳಿತು ಮಕ್ಕಳಿಗೆ ಏನನ್ನೋ ಹೇಳಿಕೊಡುತ್ತಿದ್ದದ್ದು ಕಾಣತೊಡಗಿತು. ಪಾಠ ಕೇಳುತ್ತಿದ್ದ ಮಕ್ಕಳು ಐದರಿಂದ ಹತ್ತು ವರ್ಷಗಳೊಳಗಿನವರು. ಅಲ್ಲೇ ಸುತ್ತಮುತ್ತಲೂ ಇದ್ದ ಹಳ್ಳಿಗಳಲ್ಲಿ ಪ್ರೈಮರಿ ಅಥವಾ ಮಿಡ್ಲ್ ಸ್ಕೂಲ್ ಓದುತ್ತಿದ್ದವರು. ಆದರೆ ಅವರುಗಳಿಗೆ ಪಾಠ ಹೇಳಿ ಕೊಡುತ್ತಿದ್ದವರು ಮಾತ್ರ ಐಐಟಿ ಡಿಗ್ರಿ ಹಾಗೂ ಪಿ.ಹೆಚ್.ಡಿ. ಪಡೆದಿದ್ದವರಾಗಿದ್ದರು. ಅಲ್ಲಿ ಬರುತ್ತಿದ್ದ ಮಕ್ಕಳಿಗೆ ಇವರು ಸ್ಕೂಲಿನ ಸಿಲಬಸ್ ಬಗ್ಗೆ ಪಾಠ ಮಾಡುತ್ತಿರಲಿಲ್ಲ. ಬದಲಿಗೆ ಒಂದು ರೀತಿಯಲ್ಲಿ ತೊತ್ತೊಚಾನ್ ಮಾದರಿಯಲ್ಲಿ ಮಕ್ಕಳ ಕಲಿಕೆಯನ್ನು ಪ್ರೋತ್ಸಾಹಿಸುವುದು ಅವರ ಉದ್ದೇಶವಾಗಿತ್ತು. ಹಂಗಾಗಿ ಅಲ್ಲಿ ಮಕ್ಕಳಿಗೆ ಆಟದೊಂದಿಗೆ ಪಾಠವೂ ಇದರೊಂದಿಗೆ ಪ್ರಕೃತಿಯ ಬಗೆಗಿನ ಪ್ರೀತಿಯೂ ಒಟ್ಟೊಟ್ಟಿಗೇ ಉಂಟಾಗುವಂತಿತ್ತು. ಅಲ್ಲಿ ಮಕ್ಕಳಿಗಾಗಿ ಒಂದು ಪುಟ್ಟ ಲೈಬ್ರರಿ ಇತ್ತು. ಅದರೊಳಗೆ ಅತ್ಯುತ್ತಮ ಮಕ್ಕಳ ಪುಸ್ತಕಗಳಿದ್ದವು. ಅದೇ ರೀತಿ ಈ ಮಕ್ಕಳಿಗೆ ಜಗತ್ತಿನ ಅತ್ಯುತ್ತಮ ಸಿನೆಮಾಗಳನ್ನು ನೋಡುವ ಅನುಕೂಲವೂ ಅಲ್ಲಿತ್ತು. ಇದಕ್ಕಾಗಿ ಮಕ್ಕಳು ಏನನ್ನೂ ಕೊಡಬೇಕಾಗಿರಲಿಲ್ಲ. ಇದರ ಜತೆಗೆ ಅವರು ಕೃಷಿಯನ್ನೇ ಧ್ಯಾನಿಸುತ್ತಾ ಅದರ ಜೊತೆಗೆ ಗಿಡ ಮರ, ಪ್ರಾಣಿ ಪಕ್ಷಿಗಳ ಗೆಳೆತನಕ್ಕಾಗಿ ಹಂಬಲಿಸುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಇವರಿದ್ದ ಮನೆಯ ಎದುರು ಮತ್ತು ಸುತ್ತಲೂ ಇದ್ದ ಹೊಲದ ಎದೆಯಲ್ಲೊಂದು ಪುಟ್ಟ ಕಾಡು ಕಣ್ಬಿಡ ತೊಡಗಿತ್ತು. ಈ ಪುಟ್ಟ ಕಾಡಿನ ನಡುವೆ ಇಂಥದೇ ಕನಸನ್ನು ಉಸಿರಾಡುತ್ತಿರುವ ಮತ್ತಿಬ್ಬರಿದ್ದರು. ಇವರುಗಳೂ ದೂರದ ಊರುಗಳಿಂದ ಐಐಟಿ ಪದವಿ ಮತ್ತು ಡಾಕ್ಟರೇಟ್ ಪಡೆದಿದ್ದವರು. ನಾವಲ್ಲಿಗೆ ಹೋಗುವ ಹೊತ್ತಿಗೆ ಅವರು ಅಲ್ಲಿಗೆ ಬಂದು ನೆಲಸಿ ಐದು ವರ್ಷಗಳು ಕಳೆದಿದ್ದವು. ಪುಟ್ಟದೊಂದು ಗುಡಿಸಲು ಹಾಕಿಕೊಂಡು ಕೃಷಿ ಮಾಡಲಿಕ್ಕೆ ಶುರು ಮಾಡಿದ್ದರು. ಇಂಥ ತಮ್ಮ ಕೃಷಿಯ ಬದುಕಿನ ಜೊತೆಗೆ ಅಗತ್ಯದ ಖರ್ಚಿಗಾಗಿ ಆಗಾಗ ಒಂದೆರಡು ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು.
ಇಷ್ಟೆಲ್ಲಾ ಓದಿದ ಇವರುಗಳು ಇಲ್ಲಿ ಬಂದು ಮಾಡುತ್ತಿರುವ ಕೃಷಿಯನ್ನು ನೋಡಿದರೆ ಮಾತ್ರ ಎಂಥವರಿಗೂ ಅಚ್ಚರಿಯಾಗುವಂತಿತ್ತು. ಏಕೆಂದರೆ ಇವರ ಕೃಷಿ ಸಂಪೂರ್ಣ ಮಳೆ ಆಧಾರಿತ ಹಾಗೂ ಅಪ್ಪಟ ಪರಿಸರ ಸ್ನೇಹಿಯಾಗಿತ್ತು. ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಆಧುನೀಕರಣದ ವೇಗಕ್ಕೆ ಒಂದು ರೀತಿಯಲ್ಲಿ ಕಡಿವಾಣ ಹಾಕುತ್ತಾ ತಾತ ಮುತ್ತಾತಂದಿರ ಕೇಡಿಲ್ಲದ ಕೃಷಿ ಬದುಕನ್ನು ನೆನಪಿಸುವ ಒಣ ಬೇಸಾಯ ಪದ್ಧತಿ ಇವರದ್ದಾಗಿತ್ತು. ಸಕಲಕೂ ಇಲ್ಲಿ ಮಳೆಯ ನೀರೇ ಆಧಾರವಾಗಿತ್ತು. ಯಾವುದೇ ಗಿಡ ಮರಕ್ಕೂ ನೀರುಣಿಸುವ ಕ್ರಮವಿರಲಿಲ್ಲ. ಅದೇ ರೀತಿ ಇಲ್ಲಿ ಹುಟ್ಟಿದ್ದ ಅಥವಾ ಹುಟ್ಟುವ ಯಾವುದೇ ಗಿಡವನ್ನು ಇವರು ಕಡಿದು ಹಾಕುತ್ತಿರಲಿಲ್ಲ. ಹಂಗಾಗಿ ಇಲ್ಲಿ ಇವರೇ ಬೆಳಸಿದ ಅಪರೂಪದ ಗಿಡಗಳಿಂದ ಹಿಡಿದು ಜಾಲಿ, ಲಕ್ಕೆ, ತಂಗಡೆ ಮುಂತಾದ ಕಾಡು ಗಿಡಗಳವರೆಗೂ ಅಪರೂಪದ ಸಸ್ಯರಾಶಿಗಳಿದ್ದವು. ಇಲ್ಲಿನ ಒಂದೊಂದೂ ಗಿಡವನ್ನೂ ಮುಟ್ಟಿ ಮಾತನಾಡಿಸುತ್ತಿದ್ದ ಇವರುಗಳಿಗೆ ಅಲ್ಲಿನ ಒಂದೊಂದು ಗಿಡಗಳ ಇತಿಹಾಸವೂ ಗೊತ್ತಿತ್ತು. ತಿನ್ನಲು ಬೇಕಾಗುವಷ್ಟು ರಾಗಿ, ಸಾವೆ ಮುಂತಾದ ಕಿರುಧಾನ್ಯಗಳನ್ನು ಪಕ್ಕದಲ್ಲಿ ಅದಕ್ಕಾಗೇ ಬಿಟ್ಟುಕೊಂಡಿರುವ ಹೊಲದಲ್ಲಿ ಬೆಳೆದುಕೊಳ್ಳುತ್ತಿದ್ದರು. ಇಂಥ ಇವರ ಕನಸುಗಳನ್ನು ಪೊರೆಯಲು ನೆರವಾಗುತ್ತಿದ್ದದ್ದು ಇವರ ಅತ್ಯಂತ ಸರಳ ಬದುಕು. ಏಕೆಂದರೆ ಇವರು ಅದುವರೆವಿಗೂ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿರಲಿಲ್ಲ. ಮನೆಯ ದೀಪಗಳಿಗೆ ಸೋಲಾರ್ ಬೆಳಕನ್ನೇ ನಂಬಿದ್ದರು. ಕುಡಿಯುವ ನೀರಿನ ಸಲುವಾಗಿ ಕೊರೆಸಿದ್ದ ಬೋರ್‌ವೆಲ್‌ಗೆ ಕೂಡಾ ಕೈ ಪಂಪು ಹಾಕಿಸಿಕೊಂಡಿದ್ದರು. ಸಾಕಷ್ಟು ಸೌದೆ ಅಲ್ಲೇ ಸಿಗುವಂತಿದ್ದರೂ ಅಡಿಗೆಗೆ ಸೋಲಾರ್ ಕುಕ್ಕರ್‌ಗಳನ್ನೇ ಬಳಸುತ್ತಿದ್ದರು.
ಇವರ ಈ ಕಾಡಿನ ತೋಟವನ್ನು ಹೊಕ್ಕ ಕೂಡಲೇ ಕಣ್ಣಿಗೆ ಕಾಣುವ ದನ, ಕರು, ನಾಯಿ ಬೆಕ್ಕು, ದನದ ಕೊಟ್ಟಿಗೆ, ಹುಲ್ಲಿನ ಮೆದೆ ಮುಂತಾದವುಗಳು ನಮಗೆ ಯಾವುದೋ ಅಪ್ಪಟ ದೇಸೀ ಬದುಕೊಂದಕ್ಕೆ ಎದುರಾದಂಥ ಪುಳಕವನ್ನಿತ್ತಿದ್ದವು. ಇಂಥದ್ದೊಂದು ನಿರುಮ್ಮಳ ಬದುಕನ್ನು ಸಾಕಾರಗೊಳಿಸಲು ಯತ್ನಿಸುತ್ತಿದ್ದ ಇವರುಗಳೊಳಗೆ ಸ್ವಂತ ಆಸ್ತಿಯ ಪರಿಕಲ್ಪನೆಯೇ ಇರಲಿಲ್ಲ. ಬೆಳಗಿನಿಂದ ಸಂಜೆಯವರೆಗೆ ದನ ಕರುಗಳನ್ನು ಮೇಯಿಸುತ್ತಲೋ, ಗಿಡ ಮರಗಳನ್ನು ಒಪ್ಪ ಮಾಡುತ್ತಲೋ, ಸಿಕ್ಕ ಪುಸ್ತಕಗಳನ್ನು ಓದುತ್ತಲೋ, ಸದಾ ಚಟುವಟಿಕೆಯಿಂದಿದ್ದ ಇವರುಗಳು ತಮ್ಮ ಅಪಾರ ವೈಜ್ಞಾನಿಕ ಬುದ್ಧಿವಂತಿಕೆಯ ಜೊತೆಗೆ ಫುಕುವೊಕಾನ ಕೃಷಿಯ ಧ್ಯಾನವನ್ನೂ, ಸಲೀಂ ಅಲಿಯ ಪಕ್ಷಿ ಪ್ರೀತಿಯನ್ನೂ, ಸಾಲದ್ದಕ್ಕೆ ಸಾಹಿತ್ಯದ ಸಣ್ಣ ಸೂಕ್ಷ್ಮವನ್ನೂ, ಅದು ಕೊಡುವ ವಿಶಿಷ್ಠ ಗ್ರಹಿಕೆಯನ್ನೂ ದಕ್ಕಿಸಿಕೊಂಡು ಆಧುನಿಕ ಸಮಾಜದ ಕೃತಕ ಬದುಕಿನ ಚೌಕಟ್ಟಿನಾಚೆ ನಿಂತು ಅದರ ಸಕಲ ರಗಳೆಗಳಿಗೂ ತಣ್ಣಗೆ ಉತ್ತರ ಕೊಡುತ್ತಿರುವವರಂತೆ ಕಾಣುತ್ತಿದ್ದರು. ಜತೆಗೆ ನಿಜದ ಬದುಕನ್ನು ನಿಲುಕಿಸಲು ಯತ್ನಿಸುತ್ತಿರುವ ಇವರುಗಳ ಕನಸು, ಹುಮ್ಮಸ್ಸುಗಳು ಎಂಥವರನ್ನೂ ಅಚ್ಚರಿಗೊಳಿಸುವಂತಿದ್ದವು.
ಇವರಿಗೆ ಜಗತ್ತಿನ ಶ್ರೇಷ್ಠ ಸಾಹಿತ್ಯ ಗೊತ್ತಿತ್ತು. ಸಂಗೀತ ಗೊತ್ತಿತ್ತು. ಕೃಷಿ ವಿಧಾನಗಳು, ಶಿಕ್ಷಣ ಪದ್ಧತಿಗಳು ಗೊತ್ತಿದ್ದವು. ಇವೆಲ್ಲದರ ಬಗ್ಗೆ ಸಾವಕಾಶವಾಗಿ ಮಾತನಾಡಬಲ್ಲವರಾಗಿದ್ದ ಇವರುಗಳಿಗೆ ಅಲ್ಲಿ ಬೆಳೆದಿದ್ದ ಒಂದೊಂದು ಬಗೆಯ ಹುಲ್ಲಿನ ಬಗ್ಗೆ, ಅಲ್ಲಿ ಕೂಗುತ್ತಿದ್ದ ಒಂದೊಂದು ಪಕ್ಷಿಯ ಬಗ್ಗೆ, ಅಲ್ಲಿ ಹರಿದಾಡುತ್ತಿದ್ದ ಒಂದೊಂದು ಹಾವಿನ ಬಗ್ಗೆ, ಅಲ್ಲಿನ ಮಣ್ಣಿನ ಗುಣದ ಬಗ್ಗೆ ತುಂಬಾ ನಿಖರವಾದ ಜ್ಞಾನವಿತ್ತು. ಇವರುಗಳು ಒಂದು ರೀತಿಯಲ್ಲಿ ನಿಜವಾದ ಕಾಡಿನ ಮಕ್ಕಳಾಗಿದ್ದರು. ಸಹಜ ಬದುಕಿನ ಬನಿಯತ್ತ ಹರಿಯಲು ತವಕಿಸುತ್ತಿರುವ ಜೀವಂತ ತೊರೆಗಳಾಗಿದ್ದರು. ಅಲ್ಲಿ ಇವರುಗಳ ಇಂಥ ಬದುಕು ನನ್ನನ್ನು ಬಹುವಾಗಿ ಸೆಳೆದಿತ್ತು. ಇವರುಗಳ ಬಗ್ಗೆ ಗೆಳೆಯ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಹಂಗೆ ನೋಡಿದರೆ ಅವರು ಹೇಳಿದ್ದಕ್ಕಿಂತಲೂ ಸರಳ ಮತ್ತು ಸಹಜವಾಗಿತ್ತು ಅವರ ಬದುಕು. ಅವರು ಮಾಡುತ್ತಿದ್ದ ಒಣ ಬೇಸಾಯದ ಪ್ರಯೋಗ ಸ್ವಭಾವತಃ ಕೃಷಿ ಬದುಕಿನಿಂದ ಬಂದಿದ್ದ ನನಗೆ ತುಂಬಾ ವಿಶೇಷವಾಗಿ ಕಂಡಿತ್ತು. ಅಷ್ಟು ಚಿಕ್ಕ ವಯಸ್ಸಿಗೇ ಇವರುಗಳ ಇಂಥ ವಿಶೇಷ ಆಲೋಚನೆ ಮತ್ತು ಬದುಕಿನ ಕ್ರಮ ಯುವ ಮನಸ್ಸುಗಳಿಗೆ ಮಾದರಿಯಾಗಿತ್ತು ಅನ್ನುವ ಕಾರಣಕ್ಕೇ ಇಂಥದ್ದೊಂದು ವಿಶೇಷ ಬದುಕನ್ನು ಬರವಣಿಗೆಯಲ್ಲಿ ದಾಖಲಿಸಬೇಕು ಅನಿಸಿತ್ತು.

ಈ ಬಗ್ಗೆ ಬರೆದ ನನ್ನ ಆ ಬರಹದಲ್ಲಿ ಅವರುಗಳ ಹೆಸರು ಮತ್ತು ಅವರಿದ್ದ ಹಳ್ಳಿಯ ಹೆಸರನ್ನು ವಿವರವಾಗಿ ಬರೆದಿದ್ದೆ. ಅದೇ ಯಡವಟ್ಟಾಗಿತ್ತು. ಆಸಕ್ತರು ಅಲ್ಲಿಗೆ ಹೋಗಿ ಆ ಬದುಕನ್ನು ಕಣ್ಣಾರೆ ಕಂಡು ಇಂಥದ್ದೊಂದು ಬದುಕಿನಿಂದ ಸ್ಪೂರ್ತಿ ಪಡೆಯಲೆಂಬುದು ನನ್ನ ಆಶಯವಾಗಿತ್ತು. ಅದು ಕೊಂಚ ಮಟ್ಟಿಗೆ ಸಫಲವೂ ಆಗಿತ್ತು. ಈ ನಡುವೆ ಈ ಬರಹದಿಂದ ಅಲ್ಲಿದ್ದ ಮತ್ತೊಂದು ಜೋಡಿಯ ತಂದೆ ತಾಯಂದಿರುಗಳಿಗೆ ಅವರಿದ್ದ ಜಾಗದ ಸುಳಿವು ಸಿಕ್ಕಿತ್ತು. ಅವರು ಹೆತ್ತವರಿಗೆ ಗೊತ್ತಿಲ್ಲದಂತೆ ಗುಟ್ಟಾಗಿ ಬದುಕುತ್ತಿದ್ದದ್ದು ನನಗೆ ಗೊತ್ತಿರಲಿಲ್ಲ. ಪತ್ರಿಕೆಯನ್ನು ನೋಡುತ್ತಲೇ ಆ ಹೆತ್ತವರು ಪತ್ರಿಕೆಯ ಆಫೀಸಿಗೆ ಕಾಲ್ ಮಾಡಿ ಮಕ್ಕಳುಗಳ ಸಧ್ಯದ ವಾಸ್ತವ್ಯದ ಬಗ್ಗೆ ವಿಚಾರಿಸಿದ್ದಾರೆ. ಆ ನಂತರ ಅವರು ತಮ್ಮ ಮಕ್ಕಳನ್ನು ಸಂಪರ್ಕಿಸಿದರೋ ಇಲ್ಲವೋ ತಿಳಿಯದು. ಆದರೆ ಆ ಬರಹ ಪತ್ರಿಕೆಯಲ್ಲಿ ಬಂದು ಒಂದು ವಾರ ಕಳೆದಿತ್ತು. ಇವರು ಬದುಕುತ್ತಿದ್ದ ಊರಿನವರೊಬ್ಬರಿಂದ ನನಗೊಂದು ಫೋನ್ ಕಾಲ್ ಬಂದಿತ್ತು. ಅದನ್ನು ಬರೆದದ್ದು ನಾನೇ ಎಂಬುದನ್ನು ದೃಢಪಡಿಸಿಕೊಂಡ ಆ ವ್ಯಕ್ತಿ ನನಗೆ ಧಮಕಿ ಹಾಕತೊಡಗಿದರು. ನನ್ನ ಬರವಣಿಗೆಯ ಉದ್ದೇಶದ ಬಗ್ಗೆ ಎಷ್ಟೇ ಸಮಜಾಯಿಸಿ ಕೊಟ್ಟರೂ ಆ ವ್ಯಕ್ತಿಯ ಕೋಪ ತಮಣೆಗೊಳ್ಳಲೇ ಇಲ್ಲ. ನಿಮ್ಮ ಬರಹದಿಂದ ಅವರುಗಳ ಬದುಕಿಗೆ ತೊಂದರೆಯಾಗಿದೆ. ಅವರ ಖಾಸಗೀತನಕ್ಕೆ ಧಕ್ಕೆಯಾಗಿದೆ ಅಂತ ವಾದಿಸುತ್ತಾ ನೀವು ಈ ಬಗ್ಗೆ ಮತ್ತೆ ಅದೇ ಪತ್ರಿಕೆಯಲ್ಲಿ ಕ್ಷಮಾಪಣೆಯನ್ನು ಬರೆಯಬೇಕು ಅಂತ ದಿನವೂ ಪೀಡಿಸ ಹತ್ತಿದರು. ಹಂಗೇನಾದರೂ ಅವರಿಗೆ ಬೇಸರವಾಗಿದ್ದರೆ ಅವರ ಹತ್ತಿರವೇ ಮಾತಾಡ್ತೀನಿ ಬಿಡಪ್ಪ ಅಂದರೂ ಅದಕ್ಕೆ ಆ ವ್ಯಕ್ತಿ ತಯಾರಿರಲಿಲ್ಲ. ಆ ವ್ಯಕ್ತಿಯ ಧಮಕಿ ಅತಿರೇಕಕ್ಕೆ ಹೋಗುತ್ತಲೇ ನಾನು ಅದನ್ನು ನಿರ್ಲಕ್ಷಿಸಿದ್ದೆ. ಮತ್ತೆ ಆ ಕಡೆ ಗಮನ ಕೊಡುವುದನ್ನು ನಿಲ್ಲಿಸಿದ್ದೆ. ನೆಲದ ನೆರಳನ್ನು ಹಂಬಲಿಸಿ ಬದುಕ ಹೊರಟಿದ್ದವರಿಗೆ, ಹೊಸದೊಂದು ಬದುಕಿನ ಕ್ರಮವನ್ನು ಬದುಕಿ ತೋರಿಸುತ್ತಿದ್ದವರಿಗೆ ಈ ಘಟನೆ ಯಾಕಷ್ಟು ದೊಡ್ಡದು ಅನಿಸಿತು ಅನ್ನುವುದು ಇವತ್ತಿಗೂ ಅರ್ಥವಾಗದಿದ್ದರೂ ಎಲೆ ಮರೆಯ ಕಾಯಿಯಂತೆ ನಿರುಮ್ಮಳವಾಗಿದ್ದ ಅವರನ್ನು ತೋರಾಕಿದ್ದ ನನ್ನ ಅತ್ಯುತ್ಸಾಹದ ಬಗ್ಗೆ ಮಾತ್ರ ಒಂದು ಸಣ್ಣ ಅಳುಕು ಇದ್ದೇ ಇದೆ.
ತೊತ್ತೋಚಾನ್: ಜಪಾನಿನ ಲೇಖಕಿ ಟೆತ್ಸುಕೊ ಕುರೊಯಾನಗಿ ಅವರ ಪ್ರಸಿದ್ಧ ಆತ್ಮಕಥೆ.
ಫುಕುವೊಕ: ಜಪಾನಿನ ಕೃಷಿ ವಿಜ್ಞಾನಿ, ರೈತ ಮತ್ತು ತತ್ವಜ್ಞಾನಿ. ನೈಸರ್ಗಿಕ ಕೃಷಿ ವಿಧಾನವನ್ನು ಜಗತ್ತಿಗೆ ತೋರಿಸಿಕೊಟ್ಟವರು. `ಒಂದು ಹುಲ್ಲಿನ ಕ್ರಾಂತಿ’ ಇವರ ಪ್ರಸಿದ್ಧ ಪುಸ್ತಕ.
ಸಲೀಂ ಅಲಿ: ಭಾರತದ ಹೆಸರಾಂಥ ಪಕ್ಷಿ ವಿಜ್ಞಾನಿ.
(ಹಿಂದಿನ ಕಂತು: ಪರಿಮಳದ ಹೊಲಮಾಳಗಳು, ಹಲಸಿನ ಮರದ ಕರಡಿ ಹಾಗೂ ಹೆಣ ಕುಯ್ಯುವ ಮರ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

