ಜ಼ಪೊಟೆಕ್-ನಲ್ಲಿ ಅವರ ಭಾಷೆಯನ್ನು ‘ಡೈಡ್ಕ್ಸಾಜಾ’ (Diidxazá) ಎಂದು ಕರೆಯಲಾಗುತ್ತದೆ, ಇದು “ನಾಲಿಗೆ” ಮತ್ತು “ಮೋಡ” ಪದಗಳನ್ನು ಸಂಯೋಜಿಸಿ “ಮೋಡಗಳ ಭಾಷೆ” ಎಂಬ ಅರ್ಥ ಬರುವ ಪದವಾಗಿದೆ. 1970-ರ ದಶಕದಲ್ಲಿ, ಓವಾಹಾಕಾದಲ್ಲಿ ಜ಼ಪೊಟೆಕ್ ಭಾಷೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಒಂದು ಚಳುವಳಿ ಪ್ರಾರಂಭವಾಯಿತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಮೆಕ್ಸಿಕೋ (Mexico) ದೇಶದ ಜ಼ಪೊಟೆಕ್ ಮೂಲಜನಾಂಗಕ್ಕೆ ಸೇರಿದ ಜ಼ಪೊಟೆಕೋ (Zapoteco) ಭಾಷಾ ಕವಿ ವಿಕ್ಟರ್ ಡಿ ಲಾ ಕ್ರೂಜ಼್-ರವರ (Victor De La Cruz, 1948-2015) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ವಿಕ್ಟರ್ ಡಿ ಲಾ ಕ್ರೂಜ಼್ (1948-2015) ಮೆಕ್ಸಿಕೋ ದೇಶದ ತೆಹುವನ್ತೆಪೆಕ್-ನ ಇಸ್ತಮಸ್-ನಲ್ಲಿರುವ (Isthmus of Tehuantepec, ‘ಇಸ್ತಮಸ್’ ಅಂದರೆ ಎರಡು ದೊಡ್ಡ ಭೂಭಾಗಗಳನ್ನು ಸೇರಿಸುವ ಕಿರಿದಾದ ಭೂ ಪ್ರದೇಶ) ‘ಇಸ್ತಮಸ್ ಜ಼ಪೊಟೆಕ್’ ನಾಗರೀಕತೆಯ (Isthmus Zapotec) ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾದ ಓವಾಹಾಕಾ ರಾಜ್ಯದ ಹುಚಿತಾನ್-ನ ಕವಿಯಾಗಿದ್ದರು (Oaxacan poet from Juchitán). ಅವರ ಮಾತೃಭಾಷೆಯಾಗಿದ್ದ ಜ಼ಪೊಟೆಕೋ ಹಾಗೂ ಅವರ ದೇಶದ ಭಾಷೆಯಾದ ಸ್ಪ್ಯಾನಿಷ್ ಭಾಷೆಗಳಲ್ಲಿ ಅವರು ಕವಿತೆ ಬರೆಯುತ್ತಿದ್ದರು. ವಿಕ್ಟರ್ ಡಿ ಲಾ ಕ್ರೂಜ಼್ ಝೋಪೊಟೆಕ್ ಕಾವ್ಯದ ಅತ್ಯಂತ ಆಳವಾಗಿ ಬೇರೂರಿರುವ ಸಂಪ್ರದಾಯಕ್ಕೆ ಸೇರಿದವರು. ಮೆಕ್ಸಿಕೋದ ತೆಹುವನ್ತೆಪೆಕ್-ನ ಇಸ್ತಮಸ್-ನಲ್ಲಿ ವಾಸಿಸುವವರ ಪ್ರಾದೇಶಿಕ ಮೌಖಿಕ ಸಾಹಿತ್ಯವನ್ನು ಹಾಗೂ ಅವರ ಹಾಡು ಮತ್ತು ಕಾವ್ಯದ ಸ್ಥಳೀಯ ಪದಗಳನ್ನು ಉಳಿಸಿಕೊಂಡು ನಿರಂತರತೆಯನ್ನು ಕಾಪಾಡಿಕೊಂಡು ಬಂದ ಕಾವ್ಯಧ‌್ವನಿಯೆಂದು ಎಂದು ಅವರ ಕಾವ್ಯವನ್ನು ಪರಿಗಣಿಸಲಾಗಿದೆ.
ಅವರು ಬಹುಶಃ ಜ಼ಪೋಟೆಕ್ ಸಾಹಿತ್ಯದ ಅತ್ಯಂತ ಪ್ರಮುಖ ಸಂಕಲನವಾದ “ದಿ ಫ್ಲವರ್ ಆಫ್ ದಿ ವರ್ಡ್” (The Flower of the Word) ಕಾವ್ಯಸಂಗ್ರಹವನ್ನು ಸಂಪಾದಿಸಿದರು. ಅವರು ಮೆಸೊಅಮೆರಿಕನ್ ಸ್ಟಡೀಸ್-ನಲ್ಲಿ (Mesoamerican Studies) ಡಾಕ್ಟರೇಟ್ ಗಳಿಸಿದರು ಮತ್ತು ಅವರ ಕವನ ಸಂಕಲನಗಳಲ್ಲಿ ‘ಫಸ್ಟ್ ವಾಯ್ಸ್,’ ‘ಟು ದಟ್ ತ್ರೀ ಪೊಯಮ್ಸ್’ ಮತ್ತು ‘ಇಸ್ತಮಸ್ ಕಾರಿಡೋಸ್’ ಸೇರಿವೆ. ಅವರು ಓವಾಹಾಕಾ ರಾಜ್ಯದಲ್ಲಿ ಸಾಮಾಜಿಕ ಮಾನವಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು ಮತ್ತು ಸ್ಥಳೀಯ ಸಾಹಿತ್ಯದ Guaracha’ Reza (ಅರ್ಥ: Striped Iguana, ಪಟ್ಟೆ ಮೈಯ ಉಡ) ಎಂಬ ಪತ್ರಿಕೆಯನ್ನು ಸಹ ಸಂಪಾದಿಸಿದರು. ಅವರ ಕವಿತೆಗಳನ್ನು ಇಂಗ್ಲಿಷ್, ಫ್ರೆಂಚ್, ಇಟಾಲಿಯನ್ ಮತ್ತು ಜರ್ಮನ್ ಭಾಷೆಗಳಿಗೆ ಅನುವಾದಿಸಲಾಗಿದೆ.
ಜ಼ಪೊಟೆಕ್ ನಾಗರಿಕತೆಯು 2,500 ವರ್ಷಗಳ ಹಿಂದೆ ದಕ್ಷಿಣ ಮೆಕ್ಸಿಕೋದಲ್ಲಿ ಹುಟ್ಟಿಕೊಂಡಿತು ಮತ್ತು 1521-ರಲ್ಲಿ ಸ್ಪ್ಯಾನಿಷ್ ಆಕ್ರಮಣ ಮಾಡುವವರೆಗೂ ಪ್ರವರ್ಧಮಾನಕ್ಕೆ ಬಂದಿತು. ಜ಼ಪೊಟೆಕ್ ಜನರು ಬಂಡೆಗಳಿಂದ ಹುಟ್ಟಿದ್ದಾರೆ, ಅಥವಾ ಜಾಗ್ವಾರ್-ಗಳು, ಮರಗಳು ಅಥವಾ ಮೋಡಗಳಿಂದ ರೂಪಾಂತರಗೊಂಡಿದ್ದಾರೆ ಎಂದು ವಿವಿಧ ಜ಼ಪೊಟೆಕ್ ದಂತಕಥೆಗಳು ಹೇಳುತ್ತವೆ. ಜ ಇಂದು ಝೋಪೊಟೆಕ್ ಭಾಷೆಯನ್ನು ಮಾತನಾಡುವ 750,000 ಕ್ಕೂ ಹೆಚ್ಚು ಜನರು ಮೆಕ್ಸಿಕೋ ನಗರ ಮತ್ತು ಲಾಸ್ ಏಂಜಲೀಸ್-ನವರೆಗೆ ಹರಡಿದ್ದಾರೆ.
ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ವಿಕ್ಟರ್ ಡಿ ಲಾ ಕ್ರೂಜ಼್-ರವರ ಆರು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ಡೋನಲ್ಟ್ ಫ಼್ರಿಷ್‌ಮನ್ (Donald Frischmann) ಹಾಗೂ ನಾಲ್ಕನೆಯ ಕವನವನ್ನು ಡೇವಿಡ್ ಶುಕ್ (David Shook) ಅವರು ಸ್ಪ್ಯಾನಿಷ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು, ಐದನೆಯ ಕವನವನ್ನು ಮೂಲ ಜ಼ಪೊಟೆಕೋ ಭಾಷೆಯಿಂದ ಇಂಗ್ಲಿಷಿಗೆ ಡೇವಿಡ್ ಶುಕ್ ಹಾಗೂ ಆರನೆಯ ಕವನವನ್ನು ಮೂಲ ಜ಼ಪೊಟೆಕೋ ಭಾಷೆಯಿಂದ ಇಂಗ್ಲಿಷಿಗೆ ಅರ್ಲ್ ಶೋರಿಸ್ ಹಾಗೂ ಸಿಲ್ವಿಯಾ ಸಸೊನ್ ಶೋರಿಸ್ (Earl Shorris & Sylvia Sasson Shorris) ಅನುವಾದಿಸಿರುವರು.
೧
ನನ್ನ ಪತನ
ಮೂಲ: My Fall
ತಳಕ್ಕೆ,
ನೇರವಾಗಿ ತಳಕ್ಕೆ ನಾ ಬಿದ್ದೆ,
ಬತ್ತಿದ ಬಾವಿಯೊಂದರಲ್ಲಿ ಬಿದ್ದಂತೆ,
ನೋವು ಹರಿಯುತ್ತದೆ ಅಲ್ಲಿ
ನೀರಿನ ಬದಲಾಗಿ,
ನನ್ನೂರ ನಾ ಬಿಟ್ಟು ಬಂದಾಗಿನಿಂದ.
ನನ್ನ ಹೃದಯ ಕೊರಗುತ್ತದೆ ಪ್ರತಿದಿನ ಬೆಳಗ್ಗೆ,
ಪ್ರತಿ ಸಲ ಸುತ್ತ ನೋಡಿದಾಗ,
“ಇಲ್ಲೇನು ಮಾಡುತ್ತಿದ್ದೇನೆ ನಾನು?”
– ನನ್ನನ್ನು ನಾನೇ ಕೇಳುವೆ –
ಮಲಗಲು ಹೋಗುವೆ
ಮತ್ತೊಬ್ಬನ ಹಾಸಿಗೆಯಲ್ಲಿ,
ಹೆಸರು ಗೊತ್ತಿಲ್ಲದವನ ಹಾಸಿಗೆಯಲ್ಲಿ.
೨
ನನ್ನ ಮನೆ ನಿನಗಾಗಿ ಕಾಯುತ್ತಿದೆ
ಮೂಲ: My House Seeks You
ನನ್ನ ಮನೆಗೆ ಸುಣ್ಣ ಬಳಿದಿರುವೆ,
ಹಿಮದಂತೆ ಬಿಳಿಯಾಗಿ
ನಿನಗಾಗಿ ಕಾಯುತ್ತಿದೆ …
ನೀನು ಬರುವ ದಿನಕ್ಕಾಗಿ,
ಅದರ ಜೋಲುಮಂಚದಲ್ಲಿ ನೀನು ದಣಿವಾರಿಸಿಕೊಳ್ಳುವೆ,
ನಿನ್ನ ಪಾವಾಡೆಯ ಅಂಚಿನಿಂದ ಗಾಳಿ ಬೀಸುವೆ
ನನ್ನ ಬೆವರನ್ನು ಆರಿಸುವೆ
ನನ್ನ ತುಟಿಗಳ ಮೇಲೆ ಮುತ್ತನ್ನಿಡುವೆ.
ಖಾಲಿ ಹಾಳೆಯಂತೆ ನಿಂತಿದೆ ಅದು,
ತನ್ನ ಹೃದಯದ ಮೇಲೆ ನಿನ್ನ ರುಜುವಿಗಾಗಿ ಕಾಯುತ್ತಿದೆ,
ತನ್ನ ಚಾವಣಿಯುದ್ದಕ್ಕೂ ಚಾಚಿರುವ
ನಿನಗಾಗಿ ಕಾಯುತ್ತಿರುವ ಜೋಲುಮಂಚವನ್ನು ಹೊತ್ತಿರುವ
ಸಪೋಟಾ ಮರದ ದೂಲಗಳಡಿಯಲ್ಲಿ ನಿಂತಿದೆ ಅದು.
ಈ ಮನೆ ಮತ್ತು ನಾನು ನಿನಗಾಗಿ ಕಾಯುತ್ತಿದ್ದೇವೆ, ಬೇಗ ಬಾ,
ಇನ್ನೇನು ಸಂಜೆಯಾಗುತ್ತಿದೆ;
ಇರುಳು ಇಳಿದರೆ, ಇದರ ಬಿಳುಪನ್ನು ತಿಳಿಯಲಾರೆ ನೀನು,
ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ಸಹ ಅರಿಯಲಾರೆ ನೀನು.
ಈ ಮನೆಯನ್ನು ಸುತ್ತುವರಿದ ಫಲವೃಕ್ಷಗಳ ನೆರಳಿನಡಿಯಲ್ಲಿ
ತುಂಬುಹೃದಯದಿಂದ ನಿನಗಾಗಿ ಕಾಯುತ್ತಿರುವೆನು.
ಬಾ ಬೇಗ,
ರಾತ್ರಿ ಹರಡುವವರೆಗೂ ಕಾಯಬೇಡ.
ಹಗಲು ಉಲ್ಲಾಸವಾಗಿದೆ,
ನನ್ನ ಹೃದಯವೂ ಕೂಡ.
೩
ಕೇವಲ ಎರಡೇ ಪದಗಳು
ಮೂಲ: Just Two Words
I
ತಣ್ಣನೆ ಬೀಸುತಿದೆ ನಸುಗಾಳಿ ಈ ಅಕ್ಟೋಬರ್ ಮಾಸದಲಿ,
ಮಡಿದವರಿಗೆ ಅರ್ಪಿಸಿದ ಚೆಂಡುಹೂವುಗಳ* ಕಂಪನ್ನು ತರುತ್ತದೆ,
ವಿಲೋ ಮರದ ಎಲೆಗಳ ಕಂಪನ್ನು ತರುತ್ತದೆ,
ಈ ಮನೆದೇವರಿಗೆ** ಅರ್ಪಿಸಿದ ಹೂವು ಹಣ್ಣು ಧೂಪಗಳ***
ಧೂಮತರಂಗದ ಪರಿಮಳವನ್ನು ಹರಡುತ್ತದೆ.
ಬರೀ ವಿಲೋ ಮರದ ರೆಂಬೆಗಳು ಮಾತ್ರ
ಈಗ ನನ್ನ ಹೃದಯದಲ್ಲಿ ನೆಲೆಸಿವೆ,
ನನ್ನ ದೇವತೆಯಾಗಿ ನೀನು ಹಿಂದೊಮ್ಮೆ ನೆಲೆಸಿದ ಹೃದಯದಲ್ಲಿ.
II
ನಾನಾವಾಗ ಇನ್ನೂ ಯುವಕನಾಗಿದ್ದೆ.
ನನ್ನೆದುರು ಹಲವು ವರುಷಗಳೇ ಚಾಚಿದ್ದವು
ಆಗ ಹೊತ್ತು ಮೀರಿಹೋಗಿತ್ತು; ಕತ್ತಲು ಆವರಿಸಿತು,
ಆಗ ಬಹಳ ತಡವಾಗಿ ಹೋಗಿತ್ತು
ನನ್ನ ಹೃದಯದೊಳಗೆ,
ನೀನು ನನ್ನನ್ನು ಬಿಟ್ಟುಹೋದ ಆ ದಿನದಂದು.
ನನ್ನ ಜೀವನ ಪಯಣವ ಬೆಳಗಿಸಲು
ಆಗ ನನ್ನ ದಾರಿಯಲ್ಲಿ ಬೆಳಕೇ ಇರಲಿಲ್ಲ.
ನನ್ನ ಹೃದಯದೊಳು ಕತ್ತಲು ಆವರಿಸಿದಾಗ
ನಾನು ಇನ್ನೂ ಚಿಕ್ಕವನಾಗಿದ್ದೆ.
ಒಬ್ಬ ನಿದ್ರಾಸಂಚಾರಿಯಾಗಿ
ಈಗ ನಾನು ಈ ಭೂಮಿಯ ಜನರ ನಡುವೆ ಅಲೆದಾಡುವೆ.
ಕತ್ತಲು ಬಲು ಬೇಗ ಆವರಿಸಿತು,
ರಾತ್ರಿಯು ನನ್ನ ಹೃದಯದೊಳಗೆ ಇಳಿಯಿತು.
*ಮೂಲ ಜ಼ಪೊಟೆಕ್ ಕವಿತೆಯಲ್ಲಿ ಈ ಹೂವಿನ ಹೆಸರು guie’ gue’tu’ ಅಂತ ಇದೆ, ಅಂದರೆ ಇದು ನಮಗೆ ಗೊತ್ತಿರುವಂತೆ “ಚೆಂಡುಹೂವು.” ಈ ಕವನದ ಸ್ಪ್ಯಾನಿಷ್ ಅನುವಾದದಲ್ಲಿಯೂ ಮೆಕ್ಸಿಕನ್-ಸ್ಪ್ಯಾನಿಷ್-ನಲ್ಲಿ ಕರೆಯುವಂತೆ ಈ ಹೂವನ್ನು ‘cempasúchil’ ಅಂತ ಅನುವಾದಿಸಿದ್ದಾರೆ, ಅದೂ ಸಹ ಚೆಂಡುಹೂವೇನೆ; ಸೋಜಿಗವೆಂದರೆ, ಇಂಗ್ಲಿಷ್-ನಲ್ಲಿ ಈ ಹೂವಿಗೆ ‘marigold’ ಅಂತ ಹೆಸರಿದ್ದರೂ ಬರೀ ‘flowers’ ಅಂತ ಅನುವಾದಿಸಿದ್ದಾರೆ. ನನ್ನ ಕನ್ನಡ ಅನುವಾದದಲ್ಲಿ ಮೂಲ ಜ಼ಪೊಟೆಕ್-ನಲ್ಲಿರುವಂತೆ ನಾನು ‘ಚೆಂಡು ಹೂಗಳು’ ಅಂತ ಬಳಸಿದ್ದೇನೆ.
**ಮೂಲ ಜ಼ಪೊಟೆಕ್-ನಲ್ಲಿ bidó’ ಎಂಬ ಪದ ಒಬ್ಬ ಸಂತ ಅಥವಾ ಸಂತನ ಪ್ರತಿಮೆ ಯಾ ಚಿತ್ರವನ್ನು ಸೂಚಿಸುತ್ತದೆ, ಹಾಗೂ ಇದನ್ನು ಸ್ವಲ್ಪ ವಿಸ್ತರಿಸಿದರೆ, ‘ದೇವರು’ ಅಥವಾ ‘ದೈವ’ ಎಂಬ ಅರ್ಥವೂ ಬರುತ್ತದೆ. ಮೂಲ ಕವನದ ಕೊನೆಯ ಸಾಲಿನಲ್ಲಿ ಕವಿ ತಾನು ಪ್ರೀತಿಸಿದ ಹುಡುಗಿಯನ್ನು ಸಹ bidó’ ಎಂದು ಕರೆಯುತ್ತಾನೆ, ತನ್ನ ಹೃದಯದಲ್ಲಿ ನೆಲೆಸಿದ ದೇವತೆ ಎಂಬ ಅರ್ಥದಲ್ಲಿ.
***ಮೂಲ ಜ಼ಪೊಟೆಕ್-ನಲ್ಲಿ gu’xhu’ ಅಂತ ಇದೆ; ಇದರ ಅರ್ಥ ‘ಹೊಗೆಯನ್ನು ಹರಡು.’ ಆದರೆ, ಇದರ ಉಲ್ಲೇಖ pre-Columbian Mesoamerican ಸಂಸ್ಕೃತಿಗಳಲ್ಲಿ ಈಗಲೂ ಬಳಸುವ ‘ಕೋಪಲ್’ ಮರದ ಸುಗಂಧ ರಾಳದಿಂದ ಮಾಡಿದ ಧೂಪದ ಕಡೆಗೆ ಇದೆ.
೪
ನಾನು ಮರೆತ ಆ ಪದ
ಮೂಲ: The Word I Forgot
ಒಂದು ಪದ,
ಒಂದೇ ಒಂದು ಪದ,
ಆ ಒಂದು ಪದ
ನನ್ನ ಅಂಗೈಯಲ್ಲಿ
ನನ್ನ ಚಿತ್ತದಲ್ಲಿ
ನನ್ನ ಹೃದಯದಲ್ಲಿ
ಇದ್ದಿದ್ದರೆ.
ಆ ಒಂದು ಪದ
ಇರುಳಿನಲಿ ನಿನಗೆ ಹೇಳಲು,
ಮುಂಜಾನೆಯ ಕುಸುಮದಲಿ
ನಾವು ಎಚ್ಚರವಾದಾಗ ಹೇಳಲು,
ಲಾಹುವೊಯಾಗಾ ಹಳ್ಳಿಯ ಮರಗಳಲ್ಲಿರುವ
ಎಲ್ಲ ಹಕ್ಕಿಗಳ ಹಾಡಿಗೆ ಹೇಳಲು,
ಒಂದೇ ಒಂದು ಪದ,
ನಾನು ಮರೆತ ಆ ಪದ.
Lahuoyaga: ಮೆಕ್ಸಿಕೋ ದೇಶದ ‘ಓವಾಹಾಕಾ’ ನಗರವನ್ನು ಜ಼ಪೊಟೆಕ್ ಜನರು ಕರೆವ ಹೆಸರು. ಕವಿಯ ಊರಾದ ಈ ನಗರದ ಪ್ರದೇಶ ಕಾಡುಗಳು ಹಾಗೂ ಒರೆತಗಳಿಗೆ ಹೆಸರುವಾಸಿಯಾಗಿದೆ.
೫
ಒಂದಾನೊಂದು ದಿನ ನೀ ನನ್ನ ಹುಡುಕಲು ಹೊರಟಾಗ
ಮೂಲ: One day when you look for me
ಒಂದಾನೊಂದು ದಿನ ನೀ ನನ್ನ ಹುಡುಕಲು ಹೊರಟಾಗ
ಸಿಗುವುದಿಲ್ಲ ನಾ ನಿನಗೆ.
ಯಾರೂ ಉಳಿದಿರಲ್ಲ ಆಗ ನಿನ್ನ ಹೃದಯದಲ್ಲಿ,
ಯಾವ ರಸ್ತೆಯ ಹಿಡಿದೆ
ಎಲ್ಲಿ ಮರೆತೆ ನಿನ್ನನ್ನು,
ಎಂದು ನಿನಗೆ ಹೇಳಲು.
ಒಂದಾನೊಂದು ದಿನ ನೀ ಕಣ್ತೆರೆದಾಗ
ಇರುವುದಿಲ್ಲ ನಾನಿಲ್ಲಿ.
ಬೇರೊಂದು ರಸ್ತೆಯ ಹಿಡಿದಿರುವೆ
ನಿನ್ನ ಮರೆತಿರುವೆ.
ಹುಡುಕುವೆ ನೀನು ಬಡಗಣ ತೆಂಕಣ,
ಸೂರ್ಯ ಹುಟ್ಟುವಲ್ಲಿ ಸೂರ್ಯ ಅಡಗುವಲ್ಲಿ,
ನಾಲ್ಕು ರಸ್ತೆ ಕೂಡುವಲ್ಲಿ.
ಹುಚ್ಚುಹಿಡಿಯುವುದು ನಿನಗೆ
ನನ್ನ ಹೆಜ್ಜೆಗುರುತುಗಳಿಗಾಗಿ ಹುಡುಕಾಡುತ್ತಾ.
ಯಾವ ಮಳೆ ಯಾವ ಗಾಳಿ ಬಂದು
ಕೊಚ್ಚಿಕೊಂಡು ಹೋದವೋ ಅವನ್ನು
ಯಾರು ಬಲ್ಲರು.
೬
ಯಾರು ನಾವು? ನಮ್ಮ ಹೆಸರೇನು?
ಮೂಲ: Who Are We? What Is Our Name?
ಮಾತಾಡುತ್ತಾ, ರಾತ್ರಿಗೆ ಹೌದೆನ್ನುತ್ತಾ;
ಕತ್ತಲಿಗೆ ಹೌದೆನ್ನುತ್ತಾ.
ಯಾರ ಜತೆ ಮಾತಾಡಲಿ ನಾನು, ಏನು ಹೇಳಲಿ
ಮನೆಯಲ್ಲಿ ಯಾರೂ ಇರದೇ ಇದ್ದಾಗ,
ಹೀಗೆ ಒಬ್ಬನೇ ಕೂತು, ಜೀರುಂಡೆಯ ವಿಲಾಪ ಆಲಿಸಲೇ?
ನಾನು ಹೌದೆನ್ನುವುದಾದರೆ, ನಾನು ಇಲ್ಲವೆನ್ನುವುದಾದರೆ,
ಯಾರಿಗೆ ಹೌದೆಂದು ಹೇಳಲಿ, ಯಾರಿಗೆ ಇಲ್ಲವೆಂದು ಹೇಳಲಿ?
ಎಲ್ಲಿಂದ ಬಂದವು ಈ ಇಲ್ಲ ಮತ್ತು ಈ ಹೌದು
ಮತ್ತೆ, ಯಾರ ಜತೆಗೆ ಮಾತಾಡುತ್ತಿದ್ದೇನೆ ನಾನು ಈ ನಡುರಾತ್ರಿಯಲ್ಲಿ?
ಯಾರು ಬರೆದರು ಈ ಪದಗಳನ್ನು ಕಾಗದದ ಮೇಲೆ?
ಯಾಕೆ ಬರೆಯಲಾಗಿದೆ ಕಾಗದದ ಮೇಲೆ
ಭೂಮಿಯ ಮೇಲೆ ಬರೆಯುವ ಬದಲು?
ಭೂಮಿ ವಿಶಾಲವಾಗಿದೆ,
ವಿಸ್ತಾರವಾಗಿದೆ, ನೀಳವಾಗಿದೆ.
ನಮ್ಮ ಹೃದಯದಲ್ಲಿ ಹುಟ್ಟಿದ್ದನ್ನು,
ನಮ್ಮ ಮನಸ್ಸು ಹೇಳಿದ್ದನ್ನೆಲ್ಲ
ನಾವು ಯಾಕೆ ಆಕಾಶದ ಅಡಿಪಾರ್ಶ‌್ವದಲ್ಲಿ ಬರೆಯಬಾರದು?
ನಾವು ಯಾಕೆ ಹಸಿರೆಲೆಗಳ ಮೇಲೆ, ಮೋಡಗಳ ಮೇಲೆ,
ನೀರಿನ ಮೇಲೆ, ನಮ್ಮ ಅಂಗೈಗಳ ಮೇಲೆ ಬರೆಯಬಾರದು?
ಕಾಗದದ ಮೇಲೆಯೇ ಯಾಕೆ ಬರೆಯಬೇಕು?
ಎಲ್ಲಿ ಹುಟ್ಟಿತ್ತು ಈ ಕಾಗದ, ಹುಟ್ಟುವಾಗಲೇ ಬಿಳಿಯಾಗಿದ್ದು
ನಮ್ಮ ಸಾಹಿತ್ಯವನ್ನು ಸೆರೆಯಲ್ಲಿಡುವ ಈ ಕಾಗದ:
ನಮ್ಮ ಅಜ್ಜಂದಿರು ಕಲ್ಲಿನಲ್ಲಿ
ಶಿಲ್ಪಿಸಿದ ಆ ಪದಗಳು,
ಅವರು ರಾತ್ರಿಯಲ್ಲಿ ನರ್ತಿಸುವಾಗ
ಹಾಡಿದ ಆ ಪದಗಳು,
ಅವರ ಮನೆಗಳನ್ನು, ಅವರ ಆಶ್ರಯಧಾಮಗಳ ಒಳಗನ್ನು,
ಅವರ ಅರಮನೆಗಳನ್ನು
ಅಲಂಕರಿಸಲು ಬಳಸಿದ ಪದಗಳು?
ನಮ್ಮ ದ್ವಿತೀಯ ಭಾಷೆಯನ್ನು ತಂದವನು
ನಮ್ಮದೇ ಪದಗಳಿಂದ ನಮ್ಮನ್ನು ಕೊಲ್ಲಲು ಬಂದ,
ನಮ್ಮ ಊರಿನ ಜನರನ್ನು ಜಜ್ಜಲು ಬಂದ,
ಅವರೇನೋ ಮರಗಳಿಂದ ಉದುರಿದ,
ನೆಲದ ಮೇಲೆ ಬಿದ್ದ ಹುಳಗಳು ಎಂಬಂತೆ.
ಯಾರು ನಾವು, ನಮ್ಮ ಹೆಸರೇನು?

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ ‘ಬಾಲ್ಟಿಕ್ ಕಡಲ ಗಾಳಿ’ ಇತ್ತೀಚೆಗೆ ಪ್ರಕಟವಾಗಿದೆ.
