Advertisement
“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ

“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ

ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ, ಕೆಡುಕಿನೆಡೆಗೆ ಸಾಗಬಾರದೆಂಬ ಕಳಕಳಿ,  ಪರೋಪಕಾರ ಮನೋಭಾವ ಎಲ್ಲಾ ಪಾತ್ರಗಳಲ್ಲಿ ಅಡಕವಾಗಿರುವ ಮೂಲದ್ರವ್ಯ. ಹಾಗಾಗಿ ವಿದೇಶಿಯಳಾದರೂ ಸೋಫಿಯಾ ಮತ್ತವಳ ಮಗನನ್ನು ತಮ್ಮೊಳಗೆ ಒಬ್ಬನಂತೆ ಭಾವಿಸುತ್ತಾರೆ. ಗಂಗಾಳ ವಿಧವೆ ಮಗಳಿಗೊಂದು ಬದುಕು ಕಟ್ಟಿಕೊಡುವ ಹಿರಿಯಗುಣ ಇವರೆಲ್ಲರಲ್ಲಿ ಕಾಣಸಿಗುತ್ತದೆ. ಸಹಬಾಳ್ವೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಎನ್ನುವುದೇ ಲಯದಲ್ಲಿ ಕಂಡುಬರುವ ಪ್ರಮುಖ ಅಂಶ. ವಿವಿಧ ರಂಗದಲ್ಲಿ ವಿಭಿನ್ನ ಬದುಕನ್ನು ಕಟ್ಟಿಕೊಂಡ ಉತ್ತಮ ವಿಚಾರಗಳ, ಸಂಸ್ಕಾರ, ಸಂಸ್ಕೃತಿಪ್ರಿಯರ ಸಮಾವೇಶವೇ ಈ ‘ಲಯ’ ಕಾದಂಬರಿಯಲ್ಲಿದೆ.
ಎಲ್.ಎಸ್.‌ ಶಾಸ್ತ್ರಿ ಅವರ “ಲಯ” ಕಾದಂಬರಿ ಕುರಿತು ಸುಭದ್ರಾ ಹೆಗಡೆ ಬರಹ

ಈ ಕಾದಂಬರಿ ಓದಿ ಮುಗಿಸಿ ನಂತರ ಲೇಖಕರ ವಿಸ್ತಾರವಾದ ಓದು ಆಳವಾದ ಜ್ಞಾನ ಉನ್ನತ ವಿಚಾರಗಳು ಅವರ ಜೀವನಾನುಭವ ಇವೆಲ್ಲ ಘನೀಭೂತವಾದಂತೆ ಅನಿಸಿತು. ಲಯಬದ್ಧವಾದರೆ ಬದುಕು ಕೂಡ ಸರಿಯಾದ ದಾರಿಯಲ್ಲಿ ಸಾಗುತ್ತದೆ, ಸಮಾಜವೂ ಉತ್ತಮ ಪ್ರಜಾವರ್ಗದ ಆಗರವಾಗುತ್ತದೆ. ‘ಲಯ’ ತಪ್ಪಿದ ಬದುಕು ಅಸಹನೀಯ. ಹಲವು ಪಾತ್ರಗಳು ಇಲ್ಲಿ ಇಣುಕಿ ನೋಡುತ್ತಾ, ಸಾಮಾಜಿಕ ಬದ್ಧತೆಯನ್ನು ಸಾರುತ್ತ, ಅಮೂಲ್ಯವಾದ ಸಂದೇಶವನ್ನು ‘ಲಯ’ ನೀಡುತ್ತದೆ. ಮಾನವೀಯ ನೆಲೆಯಲ್ಲಿ ಬದುಕು ಕಟ್ಟಿಕೊಂಡ ಗೋಪಾಲ-ಮಾಲತಿ. ಪೇಟೆಯ ಆಡಂಬರದ ಬದುಕು ಬಿಟ್ಟು ತನ್ನ ಮೂಲನಿವಾಸಕ್ಕೆ ಬಂದು ಕೃಷಿ ಆಧಾರಿತ ಬದುಕೇ ಮುಖ್ಯ ಎಂದು ಸಾರುವಂತೆ ಪ್ರಾಮಾಣಿಕವಾಗಿ ಜೀವಿಸುವ ಗೋಪಾಲ, ಅವನನ್ನು ಅನುಸರಿಸಿ ಬಾಳುವ ಮಾಲತಿ ಆದರ್ಶ ಬದುಕಿಗೆ ಸಾಕ್ಷಿ ಆಗಿದ್ದಾರೆ. ತಮ್ಮದಲ್ಲದ ಮಗುವನ್ನು ಸಾಕಿ, ಸಂಸ್ಕಾರ ನೀಡಿ ಅವನನ್ನು ದೊಡ್ಡ ವಿದ್ವಾಂಸನನ್ನಾಗಿ ಮಾಡಿರುವುದು ಅತ್ಯಂತ ಖುಶಿ ಅನಿಸುತ್ತದೆ. ಉತ್ತಮ ಸಂಸ್ಕಾರ, ಸಂಸ್ಕೃತಿಯ ಸಾಕಾರಮೂರ್ತಿ ಅವಧಾನಿಗಳು, ಕಲೆಗಾಗಿ ಬದುಕನ್ನು ಮುಡಿಪಾಗಿಟ್ಟ ದೇವದತ್ತ ಶರ್ಮರು, ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಸೋಫಿಯಾ, ಈ ಎಲ್ಲಾ ಪಾತ್ರಗಳಲ್ಲಿ ಕಾಣುವ ಉದಾತ್ತತೆ, ಅದನ್ನು ನಿರೂಪಿಸುವ ರೀತಿ ಲೇಖಕರ ಭಾಷೆಯ ಸೊಗಡನ್ನು ತಿಳಿಸುತ್ತದೆ.

(ಎಲ್.ಎಸ್.‌ ಶಾಸ್ತ್ರಿ)

ಬಹು ಅಮೂಲ್ಯವಾದ ಸಂದೇಶವನ್ನು ಸಾರುವ ‘ಲಯ’ ಕೃತಿಯು ಅತ್ಯಮೂಲ್ಯ ವಿಚಾರಗಳ ಸಂಗಮ. ಸಂಗೀತವನ್ನು ಉಸಿರಾಗಿಸಿಕೊಂಡ ಕೃಷ್ಣ, ಅವನಿಗೆ ತಕ್ಕ ಮಡದಿ ವಾಣಿ ಎಲ್ಲ ಪಾತ್ರಗಳೂ ಮಾನವೀಯ ತುಡಿತವನ್ನು ಹೊಂದಿದೆ. ಗೊಂದಲ ಗೌಜುಗಳಿಲ್ಲದೆ ಸಹಜವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ‘ಲಯ’. ಇಲ್ಲಿ ಬರುವ ನಾರಾಯಣರಾಯರು ಪತ್ರಕರ್ತರಾಗಿ ಅವರ ಅನುಭವಗಳನ್ನು ಲೇಖಕರು ಪ್ರಬುದ್ಧವಾಗಿ ಚಿತ್ರಿಸಿದ್ದಾರೆ. ಪತ್ರಿಕಾಧರ್ಮದ ನಿಷ್ಠೆ, ಪತ್ರಕರ್ತರಿಗಿರಬೇಕಾದ ಬದ್ಧತೆ, ಪ್ರಾಮಾಣಿಕತೆಯನ್ನು ನಾರಾಯಣರಾಯರ ಬದುಕಿನ ಮೂಲಕ ನ್ಯಾಯಬದ್ಧವಾಗಿ ಹೇಳುತ್ತಾ, ಅವರ ಜವಾಬ್ದಾರಿ, ಕಷ್ಟನಷ್ಟಗಳು, ಅವರ ಬದುಕಿನ ಏರಿಳಿತಗಳನ್ನು ತಿಳಿಸುತ್ತ, ನಾರಾಯಣರಾಯರು ಬೆಂಗಳೂರಲ್ಲಿದ್ದರೂ ನಮ್ಮ ನೆಲದ ಸತ್ವಗಳಾದ ಯಕ್ಷಗಾನ, ಕಲೆ, ಸಂಗೀತ, ನಮ್ಮೂರಿನ ಪ್ರಕೃತಿ, ಸೌಂದರ್ಯವನ್ನು ಆಸ್ವಾದಿಸುವ ಪರಿ ಅದ್ಭುತವಾಗಿ ಚಿತ್ರಿತವಾಗಿದೆ. ನಮ್ಮ ನೆಲದ ಸಿರಿಯನ್ನು ನಾವು ಮರೆಯಬಾರದೆಂಬ ಆಶಯ ಇಲ್ಲಿದೆ. ಹೊಂದಾಣಿಕೆಯೆ ಬದುಕಿನ ಯಶಸ್ಸಿನ ಮೂಲಮಂತ್ರ, ಇದೇ ಸೂತ್ರ ಹಿಡಿದಿಡುವ ಕೊಂಡಿ ಎನ್ನುವುದನ್ನು ಕಾದಂಬರಿ ಸಾರುತ್ತದೆ.

ಇಲ್ಲಿ ಬರುವ ಪ್ರತಿ ಪಾತ್ರಗಳ ಅಂತರಾಳದ ಮಾತುಗಳು, ಕೃತಿಗಳು ಜೀವನ ಪ್ರೀತಿಯನ್ನು ಬಿಂಬಿಸುತ್ತದೆ. ಸಂಗೀತದಲ್ಲಿ ‘ಲಯ’ ಇರುವಂತೆ ಬದುಕಿನಲ್ಲಿಯೂ ಲಯ ಇರಬೇಕು, ಇರುವಂತೆ ನೋಡಿಕೊಳ್ಳಬೇಕು ಎಂಬ ಆಶಯ ಇಲ್ಲಿದೆ. ಇಲ್ಲಿ ಬರುವ ಪಾತ್ರಗಳ ಜೀವನದಲ್ಲಿ ಏನೇ ಘಟಿಸಿದರೂ ಅದನ್ನು ಬಂದಂತೆ ಸ್ವೀಕರಿಸಿ ಮುಂದೆ ಹೋಗಬೇಕೆಂಬ ಆದರ್ಶವನ್ನು ನೀಡಿದ್ದಾರೆ. ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ, ಕೆಡುಕಿನೆಡೆಗೆ ಸಾಗಬಾರದೆಂಬ ಕಳಕಳಿ,  ಪರೋಪಕಾರ ಮನೋಭಾವ ಎಲ್ಲಾ ಪಾತ್ರಗಳಲ್ಲಿ ಅಡಕವಾಗಿರುವ ಮೂಲದ್ರವ್ಯ. ಹಾಗಾಗಿ ವಿದೇಶಿಯಳಾದರೂ ಸೋಫಿಯಾ ಮತ್ತವಳ ಮಗನನ್ನು ತಮ್ಮೊಳಗೆ ಒಬ್ಬನಂತೆ ಭಾವಿಸುತ್ತಾರೆ. ಗಂಗಾಳ ವಿಧವೆ ಮಗಳಿಗೊಂದು ಬದುಕು ಕಟ್ಟಿಕೊಡುವ ಹಿರಿಯಗುಣ ಇವರೆಲ್ಲರಲ್ಲಿ ಕಾಣಸಿಗುತ್ತದೆ. ಸಹಬಾಳ್ವೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಎನ್ನುವುದೇ ಲಯದಲ್ಲಿ ಕಂಡುಬರುವ ಪ್ರಮುಖ ಅಂಶ. ವಿವಿಧ ರಂಗದಲ್ಲಿ ವಿಭಿನ್ನ ಬದುಕನ್ನು ಕಟ್ಟಿಕೊಂಡ ಉತ್ತಮ ವಿಚಾರಗಳ, ಸಂಸ್ಕಾರ, ಸಂಸ್ಕೃತಿಪ್ರಿಯರ ಸಮಾವೇಶವೇ ಈ ‘ಲಯ’ ಕಾದಂಬರಿಯಲ್ಲಿದೆ. ಲೇಖಕರ ಉನ್ನತ ವಿಚಾರಗಳ, ತಿಳುವಳಿಕೆಗಳ, ಆದರ್ಶ ಬದುಕಿನ ಲೋಕಾನುಭವಗಳ ಸಾರವೇ ‘ಲಯ’. ಉತ್ತಮ ಕೃತಿಯನ್ನು ಸಾರಸ್ವತ ಲೋಕಕ್ಕೆ ನೀಡಿದ ಲೇಖಕರಿಗೆ ಅಭಿನಂದನೆಗಳು.

About The Author

ಸುಭದ್ರಾ ಹೆಗಡೆ

ಸುಭದ್ರ ಹೆಗಡೆ ಮೂಲತಃ ಹೊನ್ನಾವರದ ಕೆರೆಕೋಣದವರು, ಪ್ರಸ್ತುತ ಇಂಗ್ಲೆಂಡ್ ನಿವಾಸಿ. 30 ವರ್ಷಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡದ ಅನೇಕ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಒಲವು ಹೊಂದಿರುವ ಇವರು ಕಥೆ ಕವನ ಬರೆಯುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಇದೀಗ ತಮ್ಮ ಬಿಡುವಿನ ಸಮಯವನ್ನು ಓದಿಗೆ, ಬರವಣಿಗೆಗೆ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಅನೇಕ ಲೇಖನಗಳು, ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ