ಕತ್ತಲೆಂಬ ಕಂಬಳಿಹುಳು
ದಿನ ದಿನವೂ ತೆವಳುತ್ತೇಳುತ್ತ, ಏರುತ್ತಿಳಿಯುತ್ತ
ಆ ಬಾನ ದಾರಿ ಹಿಡಿದು ಹೋದದ್ದು ಯಾರು?
ಚೂರು ಚೂರೇ
ಬೆಳಕನ್ನು ನುಂಗುತ್ತ, ನೊಣೆಯುತ್ತ
ಕತ್ತಲಗೂಡು ಕಟ್ಟಿದ್ದು ಯಾವ ಹುಳು?
ಆಹಾ! ಇದೆಂತಹ ಸೋಜಿಗವೋ?
ಇಂಚಿಂಚು ಬೆಳೆಯುತ್ತ, ಕಳೆಗೊಳ್ಳುತ್ತ
ಕತ್ತಲ ಪೊರೆ ಕಳಚಿ ಬೆಳಕಿನ ಮೊಟ್ಟೆ ಒಡೆದು
ಯಾವಾಗ ಹಾರಿತೋ ಬೆಳದಿಂಗಳು ಚಿಟ್ಟೆಯಾಗಿ
ರಾಶಿ ರಾಶಿ ಹೂಗಳ ನಭದ ಇರುಳ ತೋಟಕೆ?
ಆಹಾ! ಇದೆಂತಹ ಸೊಗಸೋ?
ಇದು ಕತ್ತಲೆ ಬೆಳಕಿನ ಆಟವೋ, ನೋಟವೋ,
ಹಗಲು, ಇರುಳ ರೂಪ ರೂಪಾಂತರವೋ?
ಕಡು ಕತ್ತಲೆಂಬ ಕಂಬಳಿಹುಳು-
ಅಮವಾಸೆ, ಹುಣ್ಣಿಮೆಯಾದದ್ದು
ಭುವಿಯ ಕೈಚಳಕವೋ? ಬಾನಿನ ಕೌತುಕವೋ?
ಆಹಾ! ಇದೆಂತಹ ಸೊಬಗೋ?
ಎಣಿಕೆಗೂ ಮೀರಿದ್ದು ಭುವಿ, ಬಾನು, ಚಂದ್ರ ಚೆಲುವು!
ವೈ. ಬಿ. ಹಾಲಬಾವಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ.
ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ.
ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ್‌ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

