ಯಾತನಾ ಶಿಬಿರದಿಂದ ಒಟ್ಟೋ ಫ್ರಾಂಕ್ ತಪ್ಪಿಸಿಕೊಂಡು ಮರಳಿ ಆಮ್ ಸ್ಟರ್ಡ್ಯಾಮ್ ತಲುಪಿದ. ಅವನ‌ಜೊತೆ ಇದ್ದುದು ಮಗಳ ಪತ್ರಗಳು. ಡೈರಿ‌ ಮಾತ್ರ. ಅಡಗುತಾಣ ತಡಕಾಡುವಾಗ ರದ್ದಿ ಕಾಗದ ಎಂದು ಗೆಸ್ಟಪೋಗಳು ಆ್ಯನ್ ಫ್ರಾಂಕ್ ಡೈರಿಯನ್ನು ಬಿಟ್ಟಿದ್ದರು. ಅದನ್ನು ಕಾಪಾಡಿಕೊಂಡಿದ್ದ ಆ್ಯನ್ ಫ್ರಾಂಕ್ ಳ ತಂದೆ ಒಟ್ಟೋ ಫ್ರಾಂಕ್ ಅವುಗಳನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತೋರಿಸಿದ. ಅವುಗಳು ಡಚ್ ಆ್ಯನ್ ಫ್ರಾಂಕ್‌ ಭಾಷೆಯಲ್ಲಿ ಮೊದಲು ಮುದ್ರಣವಾದವು.
ನಾಗರೇಖಾ ಗಾಂವಕರ್ ಅನುವಾದಿಸಿದ ಆ್ಯನ್ ಫ್ರಾಂಕ್‌ಳ “ದಿ ಡೈರಿ ಆಫ್ ಎ ಯಂಗ್ ಗರ್ಲ್” ಪುಸ್ತಕದ ಕುರಿತು ನಾಗರಾಜ್‌ ಹರಪನಹಳ್ಳಿ ಬರಹ

ಡೈರಿ ಎಂದರೆ ನಮ್ಮ ಅಂತರಂಗದ ಪಿಸುಮಾತು. ನಮ್ಮೊಡನೆ ನಾವು ಮಾತನಾಡಿಕೊಳ್ಳುವುದರ ದಾಖಲೆ. ದಿನವೂ ಬರೆದಿಟ್ಟರೆ ಅದೊಂದು ಹೊರ ಮತ್ತು ಒಳ‌ ಜಗತ್ತಿನ ನಡುವೆ ನಡೆದ ತಾಕಲಾಟವನ್ನು, ಸಂಘರ್ಷವನ್ನು ದಾಖಲಿಸುವುದು ಅರ್ಥಾತ್ ಬರೆದಿಡುವುದು. ಹೀಗೆ ಬರೆದಿಟ್ಟ ಡೈರಿ ಜಗತ್ತಿನ ಎಪ್ಪತ್ತು ಭಾಷೆಗಳಿಗೆ ಅನುವಾದಗೊಂಡು, ಇದೀಗ ಕನ್ನಡದಲ್ಲಿ ಸಹ ಓದುಗನ ಮುಂದಿದೆ. ಅದೇ ಆ್ಯನ್ ಫ್ರಾಂಕ್ ಬರೆದ ದಿನಚರಿ. ” ದಿ ಡೈರಿ ಆಫ್ ಎ ಯಂಗ್ ಗರ್ಲ್” ಹೆಸರಲ್ಲಿ ಕನ್ನಡದ ಲೇಖಕಿ ನಾಗರೇಖಾ ಗಾಂವಕರ್ ಇಂಗ್ಲಿಷ್ ನಿಂದ ಕನ್ನಡಕ್ಕೆ ತಂದಿದ್ದಾರೆ‌. ಆ್ಯನ್ ಡಚ್ ಭಾಷೆಯಲ್ಲಿ ಬರೆದ ಡೈರಿ ಇದು. ಡೈರಿ ಪುಟಗಳನ್ನು, ದಿನವೂ ಪತ್ರದ ಮಾದರಿಯಲ್ಲಿ ಬರೆದ ದಿನಚರಿಯನ್ನು ನಾಗರೇಖಾ ಸಶಕ್ತವಾಗಿ ಕನ್ನಡಕ್ಕೆ ತಂದಿದ್ದಾರೆ. ಇದಕ್ಕಾಗಿ ಅವರು ಹದಿನೆಂಟು ತಿಂಗಳುಗಳ ಕಾಲ ಶ್ರಮ ಹಾಕಿದ್ದಾರೆ. ಅನುವಾದ ಕನ್ನಡದ ಬನಿಯನ್ನು ಓದುಗನ ಮನಕ್ಕೆ ತಾಗಿಸುತ್ತದೆ.

ಆ್ಯನ್ ಫ್ರಾಂಕ್ ಕುಟುಂಬ ಇನ್ನೊಂದು ಕುಟುಂಬದ ಜೊತೆ ಸೇರಿ ನಾಜಿಗಳ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಅಡಗುತಾಣವೊಂದರಲ್ಲಿ ಎರಡು ವರ್ಷಗಳ ಕಾಲ ತಂಗಿದ್ದರು. ಅಡಗುತಾಣಕ್ಕೆ ಬಂದ ಕಾಲದಲ್ಲಿ ಆ್ಯನ್ ಇನ್ನೂ ಹದಿಮೂರು ವರ್ಷದ ಹುಡುಗಿ. ಗುಪ್ತ ಸ್ಥಳದ ವಾಸದಲ್ಲಿ ಬರೆದ ಡೈರಿ ಅದೆಷ್ಟು ವ್ಯಾಪಕ ಅನುಭವ ಮತ್ತು ಬಂಧನದಲ್ಲಿ ಆಶಾವಾದದ ಬೆಳಕು ಇಣುಕುವ ಕ್ರಮ, ಈ ಡೈರಿ ಪುಟಗಳಲ್ಲಿ ಕಾಣ ಸಿಗುತ್ತದೆ. ಆ್ಯನ್ ಫ್ರಾಂಕ್ ಡೈರಿ ೧೪ ಜೂನ್ ೧೯೪೨ ರಿಂದ ೨೨ ಡಿಸೆಂಬರ್ ೧೯೪೨ ರವರೆಗೆ ಮೊದಲ ಭಾಗವಿದೆ‌. ಎರಡನೇ ಭಾಗ ೧೩ ಜನವರಿ ೧೯೪೩ ರಿಂದ ೨೯ ಡಿಸೆಂಬರ್ ತನಕ ಇದೆ. ಮೂರನೇ ಭಾಗ ೦೨ ಜನವರಿಯಿಂದ ೧೯೪೪ ರಿಂದ ೦೧ ಆಗಸ್ಟ್‌ ೧೯೪೪ ತನಕ ಇದೆ.

೦೧ ಆಗಸ್ಟ್‌ ೧೯೪೪ ಆ್ಯನ್ ಬರೆದ ಡೈರಿಯ ಕೊನೆಯ ಪತ್ರ ಲಭ್ಯವಾಗಿದೆ. ಡೈರಿಯನ್ನು ಬರೆಯಲು ಆರಂಭಿಸಿ ಮೂರು ದಿನಗಳ ನಂತರ, ೨೦ ಜೂನ್ ೧೯೪೨ ರಲ್ಲಿ ಬರೆದ ನಾಲ್ಕನೇ ದಿನದ ಡೈರಿಯನ್ನು ಆ್ಯನ್, ಪ್ರೀತಿಯ ಗೆಳತಿ ಕಿಟಿಗೆ ಸಂಬೋಧಿಸಿ ಬರೆದಿದ್ದಾಳೆ. ಜೂನ್ ೧೪, ಜೂನ್ ೧೫, ಜೂ. ೨೦, ಮತ್ತೆ ಅದೇ ಜೂನ್ ೨೦ ರಂದು ಎರಡನೇ ಸಲ ಬರೆದಿದ್ದಾಳೆ‌. ಹದಿಮೂರು ವರ್ಷದ ಆ್ಯನ್ ಫ್ರಾಂಕ್ ಳ ಗ್ರಹಣ ಶಕ್ತಿ ಅದ್ಭುತವಾದುದು.

(ನಾಗರೇಖಾ ಗಾಂವ್ಕರ)

ಯಹೂದಿಗಳಿಗೆ ಜರ್ಮನ್ ದೇಶದ ಹಿಟ್ಲರ್ ಅದಾಗಲೇ ಹಲವಾರು ಕಟ್ಟಳೆಗಳನ್ನು ವಿಧಿಸಿದ ಸಮಯವದು. ೧೯೩೩ರಲ್ಲಿ ಫ್ರಾಂಕ್ ಫರ್ಟ್ ಆನ್ ಮೇನ್ ನಿಂದ ಹಾಲೆಂಡ್ ಗೆ ಆ್ಯನ್ ಕುಟುಂಬ ವಲಸೆ ಬಂದಿತ್ತು. ೧೯೪೦ರ ಹೊತ್ತಿಗೆ ಯಹೂದಿಗಳಿಗೆ ಒಳ್ಳೆಯ ದಿನಗಳು ಮರೆಯಾದ ಕಾಲವದು. ಟ್ರೇನ್ ಗಳಲ್ಲಿ ಯಹೂದಿಗಳು ಚಲಿಸುವಂತಿರಲಿಲ್ಲ. ಯಲ್ಲೋ ಸ್ಟಾರ್ ಧರಿಸಿ ಓಡಾಡಬೇಕಿತ್ತು‌. ಬೈಸಿಕಲ್ ಹೊಂದಿರಬೇಕಿತ್ತು. ವಾಹನ ಚಾಲನೆ ಮಾಡುವಂತಿರಲಿಲ್ಲ. ಶಾಪಿಂಗ್ ಮಾಡಲು ಮೂರರಿಂದ ಐದು ಗಂಟೆನತನಕ ಎಂಬ ನಿಯಮ ವಿಧಿಸಲಾಗಿತ್ತು. ಯಹೂದಿಗಳಿಗೆ ಮಾತ್ರ ಎಂದು ಕೆಲ ಅಂಗಡಿಗಳು ತೆರೆದಿರುತ್ತಿದ್ದವು. ಎಂಟು ಗಂಟೆಯೊಳಗೆ ಮನೆ ಸೇರಬೇಕು. ಯಹೂದಿಗಳು ಪಾರ್ಕ್ ನಲ್ಲಿ ಕುಳಿತುಕೊಳ್ಳುವಂತಿಲ್ಲ. ಸಿನಿಮಾ, ಮನೋರಂಜನಾ ಸ್ಥಳಗಳಿಗೆ ಪ್ರವೇಶ ಇರಲಿಲ್ಲ. ಆಟ ಕ್ರೀಡಾ ಚಟುವಟಿಕೆಗಳಿಗೆ ಯಹೂದಿಗಳು ಬಾರದಂತೆ ಬಹಿಷ್ಕಾರ ಹಾಕಲಾಗಿತ್ತು. ಕ್ರೈಸ್ತರೊಂದಿಗೆ ಬೆರೆಯುವಂತಿಲ್ಲ. ಯಹೂದಿಗಳಿಗಾಗಿಯೇ ಇರುವ ಪ್ರತ್ಯೇಕ ಶಾಲೆಗಳಿಗೆ ಹೋಗಬೇಕಿತ್ತು. ಈ ವಿವರಗಳು ಆ್ಯನ್ ಬರೆದ ಡೈರಿಯ ಆರಂಭದಲ್ಲಿ ನಮಗೆ ಸಿಗುತ್ತವೆ.

ಹಿಟ್ಲರ್ ನಿಂದ ನೇಮಕವಾದ ಕ್ರೂರ ಮನಸ್ಸಿನ ಜರ್ಮನ್ ಅರ್ಥರ್ ಸೇಯ್ಸ ಇನ್ಕ್ವಾರ್ಟ ಹಾಲೆಂಡ್ ನಲ್ಲಿದ್ದ ಯಹೂದಿಗಳನ್ನು ಯಾತನಾ ಶಿಬಿರಕ್ಕೆ ಕಳಿಸುತ್ತಿದ್ದ ಸಮಯವದು. ಇದರಿಂದ ತಪ್ಪಿಸಿಕೊಳ್ಳಲು ಆ್ಯನ್ ತಂದೆ ಡಚ್ ಪಾರ್ಟನರ್ ಜೊತೆ ಸೇರಿ ಆಮ್ ಸ್ಟರ್ ಡ್ಯಾಮ್ ನಲ್ಲಿ ಪ್ರಾಂಕ್ ನ ಫುಡ್ ಪ್ರಾಸೆಸಿಂಗ್ ಬಿಜಿನೆಸ್ ಉಗ್ರಾಣ ಮತ್ತು ಕಚೇರಿ ಕಟ್ಟಡಗಳನ್ನು ಸೇರಿತು. ಫ್ರಾಂಕ್ ಕುಟುಂಬ ಮತ್ತು ಇನ್ನೊಂದು ಯಹೂದಿ ಕುಟುಂಬ ವ್ಯಾನ್ಡ್ಯಾನ್ ಅಡಗುತಾಣ ಸೇರಿದರು‌. ಅಲ್ಲಿ ಆ್ಯನ್ ಡೈರಿ ಬರವಣಿಗೆಯ ಮೂಲಕ ನಾಜಿಗಳ ಕ್ರೌರ್ಯದ ಜೊತೆಗೆ ತನ್ನ ಬಾಲ್ಯ, ಆಸಕ್ತಿ, ಗೆಳೆತನ, ಮನಸ್ಸಿನ ಬಯಕೆ, ತಾಕಲಾಟ, ನೋವು, ಹತಾಶೆ, ಬಯಕೆ, ತಲ್ಲಣಗಳನ್ನು ದಾಖಲಿಸುತ್ತಾ ಹೋಗಿದ್ದಾಳೆ.

ಆ್ಯನ್ ಡೈರಿ ಬಹಳ ಮುಖ್ಯ ಎನಿಸುವುದು ಚಿಕ್ಕ ವಯಸ್ಸಿನಲ್ಲಿ ಅವಳಿಗಿರುವ ಪ್ರಬುದ್ಧ ನಿಲುವುಗಳಿಗಾಗಿ. ಪ್ರೇಮ, ಯುದ್ಧದ ಭೀಕರತೆ, ದುರಂತಗಳ ಸರಮಾಲೆ, ಅಸಹಾಯಕತೆ, ಹೊಂದಾಣಿಕೆ, ಅನಿವಾರ್ಯತೆಯನ್ನು ಆ್ಯನ್ ಡೈರಿಯಲ್ಲಿ ದಾಖಲಿಸುತ್ತಾ ಸಾಗಿದ್ದಾಳೆ. ಅವಳ ಆಲೋಚನೆಗಳು, ಶಾಲೆ, ಶಿಕ್ಷಕರು, ಅಲ್ಲಿನ ತರಲೆಗಳು, ಶಾಲೆಯಲ್ಲಿ ಕವಿತೆ ಬರೆದದ್ದು, ಅದು ಇತರೆ ತರಗತಿಗಳಲ್ಲಿ ಶಿಕ್ಷಕರೊಬ್ಬರು ಓದಿ ಹೇಳಿದ್ದು, ಅವಳ ಇಷ್ಟದ ಪುಸ್ತಕಗಳ ಓದು, ವಯಸ್ಸಿಗೆ‌ ಮೀರಿದ ತಿಳುವಳಿಕೆ, ವಯೋ ಸಹಜ ಕಾಮನೆಗಳು, ಹೊರ ಮನಸು ಮತ್ತು ಅವಳ ಒಳ ಮನಸು, ಅವಳು ಕುಟುಂಬಕ್ಕೆ ಕಾಣುವ ರೀತಿ ಹಾಗೂ ಅವಳು ಒಳಗೆ ನಿಜಕ್ಕೂ ಏನಾಗಿದ್ದಳು ಎಂಬುದನ್ನು ಸಹ ಬರೆಯುತ್ತಾ ಹೋಗಿದ್ದಾಳೆ. ಅಡಗುತಾಣದಲ್ಲಿನ‌ ಸಮಸ್ಯೆಗಳು, ಆಹಾರದ ಕೊರತೆ, ಅಪೌಷ್ಟಿಕತೆ ಎಲ್ಲವೂ ಇಲ್ಲಿ ದಾಖಲಾಗಿದೆ.

ಸಾಯುವಾಗ ಹದಿನೈದು ವರ್ಷ ತುಂಬಿದ್ದ ಆ್ಯನ್ ಫ್ರಾಂಕ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಜಾಣ್ಮೆ ಅಚ್ಚರಿಗೊಳಿಸುತ್ತದೆ. ಡೈರಿಯಲ್ಲಿ ಬರುವ ವಿವರ ಒಮ್ಮೆ ಕಥಾನಕದ ಸ್ವರೂಪ ಪಡೆಯುತ್ತವೆ. ಸಣ್ಣ ಕತೆಗಳಂತೆ ನಮ್ಮೆದುರು ನಿಲ್ಲುತ್ತವೆ.

“ನನ್ನ ಸಾವಿನ ನಂತರವೂ ನಾನು ಬದುಕ ಬಯಸುವೆ” ಎಂಬ ಆ್ಯನ್ ಫ್ರಾಂಕ್ ಳ ಮಾತು ಇವತ್ತು ನಿಜವಾಗಿದೆ. ಆ್ಯನಳ‌ ಅಕ್ಷರ ಪ್ರೀತಿ ಗೆದ್ದಿದೆ. ಗೆಸ್ಟಪೋ (ಗುಪ್ತಪೊಲೀಸ್) ಫ್ರಾಂಕ್ ಕುಟುಂಬದ ಅಡಗುತಾಣ ತಿಳಿದು, ಹಿಟ್ಲರ್‌ನ ನಾಝಿಗಳಿಗೆ ಮಾಹಿತಿ ನೀಡಿದರು. ನಾಝಿಗಳಿಗೆ‌ ಶರಣಾದ ಫ್ರಾಂಕ್ ಹಾಗೂ ವ್ಯಾನ್ಡ್ಯಾನ್ ಕುಟುಂಬವನ್ನು ಬ್ರುಶೆಲ್ಸ ನಗರದ‌ ಬಂಧೀಖಾನೆಗೆ ತಳ್ಳಲಾಯಿತು. ಬ್ರುಶೆಲ್ ಮಿತ್ರರಾಷ್ಟ್ರಗಳ ವಶಕ್ಕೆ ಹೋಗಲಿದೆ ಎಂದು ತಿಳಿದ ನಾಝಿಗಳು ಯಹೂದಿ ಕುಟುಂಬಗಳನ್ನು ವೆಸ್ಟರ್ ಬೋರ್ಕಗೆ ಕಳುಹಿಸಲಾಯಿತು. ಟ್ರೇನ್ ನಲ್ಲಿ ಮೂರು ಹಗಲು, ಮೂರು ರಾತ್ರಿ ಪಯಣದ‌ ನಂತರ ಪೋಲೆಂಡಿನ ಆಶ್ವಿಟ್ಜ್‌ ಯಾತನಾ ಶಿಬಿರಕ್ಕೆ ತಳ್ಳಲಾಯಿತು.

ಹೆಣ್ಣುಮಕ್ಕಳ ಯಾತನಾ ಶಿವಿರದಲ್ಲಿ ಆ್ಯನ್‌ ಸಹೋದರಿ ಮಾರ್ಗೋಟ್ ಹಾಗೂ ಶ್ರೀಮತಿ ವ್ಯಾನ್ಡ್ಯಾನ್ನ ಸಾವನ್ನಪ್ಪಿದರು. ಜರ್ಜರಿತಳಾಗಿದ್ದ ಆ್ಯನ್ ಮಾನಸಿಕ ಆಘಾತಕ್ಕೆ ಒಳಗಾದಂತೆ ಇದ್ದಳು. ಹದಿನಾರು ತುಂಬುವ ಮೊದಲು ೧೯೪೫ ಮಾರ್ಚ್‌ನಲ್ಲಿ ಇಹ ಲೋಕ ತ್ಯಜಿಸಿದಳು.

ಯಾತನಾ ಶಿಬಿರದಿಂದ ಒಟ್ಟೋ ಫ್ರಾಂಕ್ ತಪ್ಪಿಸಿಕೊಂಡು ಮರಳಿ ಅಮ್ಸ್ಟರ್ ಡ್ಯಾಮ್ ತಲುಪಿದ. ಅವನ‌ಜೊತೆ ಇದ್ದುದು ಮಗಳ ಪತ್ರಗಳು. ಡೈರಿ‌ ಮಾತ್ರ. ಅಡಗುತಾಣ ತಡಕಾಡುವಾಗ ರದ್ದಿ ಕಾಗದ ಎಂದು ಗೆಸ್ಟಪೋಗಳು ಆ್ಯನ್ ಫ್ರಾಂಕ್ ಡೈರಿಯನ್ನು ಬಿಟ್ಟಿದ್ದರು. ಅದನ್ನು ಕಾಪಾಡಿಕೊಂಡಿದ್ದ ಆ್ಯನ್ ಫ್ರಾಂಕ್ ಳ ತಂದೆ ಒಟ್ಟೋ ಫ್ರಾಂಕ್ ಅವುಗಳನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತೋರಿಸಿದ. ಅವುಗಳು ಡಚ್ ಭಾಷೆಯಲ್ಲಿ ಮೊದಲು ಮುದ್ರಣವಾದವು. ನಂತರ ಜಗತ್ತಿನ‌ ಇತರೆ ಭಾಷೆಗಳಿಗೆ ಅನುವಾದಗೊಂಡವು. ಆ್ಯನ್ ಫ್ರಾಂಕ್ ಕನಸು ಕೊನೆಗೂ ನನಸಾಯಿತು.

ಅಡಗುತಾಣಕ್ಕೆ ಬಂದ ಕಾಲದಲ್ಲಿ ಆ್ಯನ್ ಇನ್ನೂ ಹದಿಮೂರು ವರ್ಷದ ಹುಡುಗಿ. ಗುಪ್ತ ಸ್ಥಳದ ವಾಸದಲ್ಲಿ ಬರೆದ ಡೈರಿ ಅದೆಷ್ಟು ವ್ಯಾಪಕ ಅನುಭವ ಮತ್ತು ಬಂಧನದಲ್ಲಿ ಆಶಾವಾದದ ಬೆಳಕು ಇಣುಕುವ ಕ್ರಮ, ಈ ಡೈರಿ ಪುಟಗಳಲ್ಲಿ ಕಾಣ ಸಿಗುತ್ತದೆ.

ಕೊನೆಯ ಪತ್ರ ಆಸಕ್ತಿದಾಯಕ:

ಆ್ಯನ್ ಫ್ರಾಂಕ್ ಳ ಡೈರಿಯ ಕೊನೆಯ ಪುಟಗಳು ಅಥವಾ ಕೊನೆಯ ಪತ್ರ ಆಸಕ್ತಿದಾಯಕವಾಗಿದೆ. ಹಾಗೂ ಹೆಣ್ಣಿನ ಅಥವಾ ಮನುಷ್ಯನ ಒಳಗಿನ ಬಗ್ಗೆ ಒಳನೋಟ ನೀಡುತ್ತದೆ. ಗಮನಿಸಿ, ಅವಳ ಮಾತುಗಳು ಹೀಗಿವೆ;

ವಿರೋಧಾಭಾಸಗಳ ಸಣ್ಣ ಕಂತೆ ಎಂದು ಕರೆದುಕೊಂಡಿದ್ದಾಳೆ ತನ್ನ ಮನಸ್ಸನ್ನು. ಹೀಗೆಂದರೇ‌ನು ಎಂಬ ಪ್ರಶ್ನೆ ಎಸೆಯುವ‌ ಆ್ಯನ್ ಫ್ರಾಂಕ್ ವಿರೋಧಾಭಾಸ ಎಂದರೆ ಎರಡು ಅರ್ಥಗಳನ್ನು ಧ್ವನಿಸುವುದೇ, ಅಂದರೆ ಹೊರಗೆ ಕಾಣುವ ಏನೂ ಇಲ್ಲದ ಅಸಂಗತತೆ ಮತ್ತು ನಮ್ಮೊಳಗೆ ಅಂತರ್ಗತವಾಗಿರುವ ಅಸಂಗತತೆ ಎನ್ನುತ್ತಾಳೆ ಆ್ಯನ್. ನನ್ನ ಒಳಗನ್ನು ಯಾರಿಗೂ ತಿಳಿಯಲಾಗದ್ದು, ನನ್ನ ಅತಿ ಗೌಪ್ಯ ಸಂಗತಿ ಎಂದು ಸಹ ಬರೆದುಕೊಂಡಿದ್ದಾಳೆ.

ಗೆಳೆಯ ಕಿಟಿಗೆ ಬರೆದ ಕೊನೆಯ ಪತ್ರ ನನಗೆ ಬಹಳ ಮಹತ್ವದ್ದು ಎನಿಸಿದ್ದು ಈ ಕಾರಣಕ್ಕೆ, ಆ್ಯನ್‌ ಫ್ರಾಂಕಳ ಪ್ರಾಮಾಣಿಕತೆಗೆ. ಆ್ಯನ್ ಫ್ರಾಂಕ್ ಹೀಗೆ ಕಿಟಿಗೆ ಬರೆಯುತ್ತಾಳೆ:

“ಈ ಮೊದಲೇ ನಾನು ನಿನ್ನಲ್ಲಿ ದ್ವಿಮುಖ ವ್ಯಕ್ತಿತ್ವ ಇರುವುದನ್ನು ನಿನ್ನಲ್ಲಿ ಹೇಳಿದ್ದೇನೆ. ಅದರಲ್ಲಿ ಮೊದಲ ಅರ್ಧಭಾಗವಿದೆಯಲ್ಲಾ ಅದು ನನ್ನಲ್ಲಿ ತುಂಬಿಕೊಂಡಿರುವ ಆನಂದಾತಿಶಯ ಭಾವ. ಎಲ್ಲ ಸಂಗತಿಗಳನ್ನು ಲಘುವಾಗಿ ಹಾಸ್ಯಭರಿತವಾಗಿಸುವುದು”. ನನ್ನ ಅತ್ಯುತ್ಸಾಹ ಮತ್ತು ಎಲ್ಲಕ್ಕಿಂತ ಹೆಚ್ಚಿನದೆಂದರೆ ಎಲ್ಲವನ್ನು ಲಘುವಾಗಿ ಪರಿಗಣಿಸುವ ನನ್ನ ಗುಣ. ಮತ್ತು ಪ್ರಣಯಚೇಷ್ಟೆಗಳನ್ನು, ಚುಂಬನವನ್ನು, ತಬ್ಬಿಕೊಳ್ಳುವುದನ್ನು, ಅಶ್ಲೀಲ ಜೋಕುಗಳನ್ನು ನಾನೆಂದು ತಪ್ಪು ಎಂಬುದಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಇವನೆಲ್ಲಾ ಲಘುವಾಗಿ ಕಾಣುವೆ. ಈ ಸಂಗತಿ ಸದಾ ಸಂದರ್ಭಕ್ಕೆ ಕಾಯುತ್ತಿರುತ್ತವೆ. ಸಂದರ್ಭ ಸಿಕ್ಕ ತಕ್ಷಣ ಉಳಿದದ್ದನ್ನು ಅಂದರೆ ಯಾವುದು ಉತ್ತಮವೋ, ಗಂಭೀರವೋ ಮತ್ತು ಪರಿಶುದ್ಧವೋ ಅದನ್ನು ದೂರ ತಳ್ಳುತ್ತದೆ. ಈಗ ನಿನಗೆ ನಿಜಕ್ಕೂ ಆ್ಯನ್ ಳ ಉತ್ತಮ ಭಾಗ ಯಾವುದು ಎಂಬುದು ಯಾರಿಗೂ ಗೊತ್ತಿಲ್ಲ ಎಂಬ ಸಂಗತಿ ಮನವರಿಕೆಯಾಗಿರಲೇಬೇಕು ಮತ್ತು ಅದಕ್ಕಾಗಿ ಬಹಳ ಜನ ನನ್ನನ್ನು ಡೋಂಗಿ ಎಂದು ತಪ್ಪು ತಿಳಿಯುತ್ತಾರೆ‌. ಖರೇ ಅಂದರೂ ಒಂದು ನಡು ಮಧ್ಯಾಹ್ನ ನಾನು ಮೂರ್ಖ ವಿದೂಷಕಿಯಂತೆ ವರ್ತಿಸಬಹುದು…..

ಸಭ್ಯ ಆ್ಯನ್ ಎಂದಿಗೂ ಜನರ ಮಧ್ಯೆ ಬೆರೆಯುವುದೇ ಇಲ್ಲ, ಬರುವುದೂ ಇಲ್ಲ ಎನ್ನುತ್ತಾಳೆ. ಮುಂದುವರಿದು ಅದೇ ಪತ್ರದಲ್ಲಿ “ಯಾವಾಗ ನಾವು ಏಕಾಂತದಲ್ಲಿ ಇರುವೆವೋ ಆಗ ಆಕೆಯದೇ ಮೇಲುಗಾರಿಕೆ. ನಾನು ಹೇಗಿರಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತು. ನಾನು ತೀರಾ ಒಳ ಮುಖದಲ್ಲಿ…. ಒಳಗಿಂದ ಹೇಗಿದ್ದೇನೆ? ಎಂಬುದು ಕೂಡಾ ನನಗೆ ಗೊತ್ತು. ಆದರೆ…. ಅಯ್ಯೋ! ಏನು ಹೇಳಲಿ, ನಾನು ಕೇವಲ ನನ್ನ ಒಬ್ಬಳ ಬಗ್ಗೆ ಮಾತ್ರ ಹಾಗೇ, ಮತ್ತು ಪ್ರಾಯಶಃ ನಾನು ಒಳಗಿನಿಂದ ಬಹಳ ಸಂತುಷ್ಟಳೆಂದು ಹೇಳುವುದು ಇದೇ ಕಾರಣಕ್ಕೆಂದು ನನಗೆ ಸ್ಪಷ್ಟವಿದೆ ಎನ್ನುತ್ತಾಳೆ‌.

ಗಾಳಿಗೆ ಬಿಟ್ಟ‌ ಕೇವಲ ಹುಡುಗಾಟದ ಸಣ್ಣ ಕುರಿಮರಿ ಅಷ್ಟೇ! ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿದ್ದಾಳೆ ಆ್ಯನ್ ಫ್ರಾಂಕ್. ವೈಯಾರ ಮಾಡುವವಳು, ಪ್ರೇಮ‌ ಪುಸ್ತಕಗಳ ಹುಚ್ಚಿಯೆಂದು ಬಗೆ ಬಗೆಯ ಹೆಸರು ಗಳಿಸಿಕೊಂಡಿದ್ದೇನೆಂದು ಕೊನೆಯ ಪತ್ರದಲ್ಲಿ ಬರೆದಿದ್ದಾಳೆ.

ಕೊನೆಯ ಸಾಲು ಹೀಗಿದೆ:
ಈ ಜಗತ್ತಿನಲ್ಲಿ ಪ್ರಾಯಶಃ ಯಾವ ಮನುಷ್ಯರೂ ಜೀವಂತ ಇರಲಿಕ್ಕಿಲ್ಲ. ಅಲ್ಲವೇ?

ಹೀಗೆ ಆ್ಯನ್ ಡೈರಿ ಮುಕ್ತಾಯವಾಗುತ್ತದೆ. ಕೊನೆಗೆ ಒಂದು ನಿಟ್ಟುಸಿರು, ವಿಷಾದ, ನೋವು ಜೊತೆಗೆ ಆಶಾವಾದವನ್ನು ಆ್ಯನ್ ನಮ್ಮ ಮುಂದಿಡುತ್ತಾಳೆ. ಇವತ್ತು ನಮ್ಮ‌ ನೆಲದ ಸಂಕಟಗಳನ್ನು, ಹೆಣ್ಣು ಮಕ್ಕಳ ಗೋಳನ್ನು ಸಹ ನಾವು ಆ್ಯನ್ ಫ್ರಾಂಕ್ ಜೀವನವನ್ನು ಮುಂದಿಟ್ಟು ನೋಡಬಹುದು. ಇಲ್ಲಿನ ಪರಿಸ್ಥಿತಿ ಹೇಗಿದೆ? ಅಡಗುತಾಣದಿಂದ ಮಹಿಳೆ ಹೊರ ಬಂದಿದ್ದಾಳೆಯೇ? ಸಮಾಜದಲ್ಲಿ ಕಾಣದ ಹಿಟ್ಲರ್, ಕುಟುಂಬದೊಳಗಿನ ಹಿಟ್ಲರ್, ಪುರುಷ ಪ್ರಧಾನ ಮನಸ್ಥಿತಿಯ ಹಿಟ್ಲರ್ ನಮ್ಮ ಸುತ್ತಲೂ ಇಲ್ಲವೇ ಎಂಬ ಧ್ವನಿಯನ್ನು ಆ್ಯನ್ ಫ್ರಾಂಕ್ ಡೈರಿ ನಮ್ಮ ಮುಂದೆ ಪ್ರಶ್ನೆಗಳನ್ನು ಎತ್ತುತ್ತದೆ.

ನಾಗರೇಖಾ ನಮ್ಮ ನಡುವಿನ ಕವಯಿತ್ರಿ. ಆಂಗ್ಲ ಸಾಹಿತ್ಯದ ಓದುಗರು. ಉಪನ್ಯಾಸಕಿ. ಅವರು ಯಾಕೆ ಜಗತ್ತಿನ ಅತ್ಯುತ್ತಮ ಕೃತಿಯನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಂಡರು ಎಂಬುದು ಬಹುಮುಖದ ಮುಖ್ಯ ಪ್ರಶ್ನೆ. ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ತನ್ನ ೫೧ ನೇ ಕೃತಿಯಾಗಿ ಆ್ಯನ್‌ ಫ್ರಾಂಕ್ ಡೈರಿ ಪ್ರಕಟಿಸಿದೆ. ಕನ್ನಡದ ಇವತ್ತಿನ ಮನಸ್ಥಿತಿಗೆ ಈ ಕೃತಿ ಬೇಕಾಗಿತ್ತು. ಡಾ.ಎಂ.ಎಂ.ಪಡಶೆಟ್ಟಿ ಅವರ ನಿರ್ಧಾರ ಸಹ ಮಹತ್ವದ್ದು. ಮಹತ್ವದ ಕಾಲಘಟ್ಟದಲ್ಲಿ, ಮಹಿಳೆಯನ್ನು ವ್ಯವಸ್ಥಿತವಾಗಿ ತುಳಿಯುವ‌ ಕಾಲದಲ್ಲಿ ಕೃತಿ ಹೊಸ ಬೆಳಕು ಚೆಲ್ಲಬಲ್ಲದು, ಶರಣರ‌ ನೆಲದಲ್ಲಿ “ಹೆಣ್ಣು” ಗಂಡಿಗೆ ಸಮಾನಳು ಎಂಬ ಧ್ವನಿಯನ್ನು ಮತ್ತೆ ಈ‌ ಕೃತಿ ತೋರಿಸಬಲ್ಲದು.

ಹೆಣ್ಣೊಬ್ಬಳಿಗೆ ಬದುಕುವ, ಬರೆಯುವ, ಉಸಿರಾಡುವ ಸ್ವಾತಂತ್ರ್ಯ ಬೇಕು. ಆಕೆ ಸಾವಿನ‌ ನಂತರವೂ ಬದುಕ ಬಯಸುವೆ ಎಂಬ ಒಳದನಿಯ‌ನ್ನು‌ ನಾವು ಕಾಪಾಡಬೇಕು ಎಂಬುದನ್ನು ಆ್ಯನ್ ಫ್ರಾಂಕ್ ಡೈರಿ ನಮಗೆ‌ ನೀಡುವ ಮೌನ ಸಂದೇಶವಾಗಿದೆ.

(ಕೃತಿ: ದಿ ಡೈರಿ ಆಫ್ ಎ ಯಂಗ್ ಗರ್ಲ್, ಲೇಖಕರು : ನಾಗರೇಖಾ ಗಾಂವ್ಕರ, ಪ್ರಕಾಶಕರು: ನೆಲೆ ಪ್ರಕಾಶನ ಸಂಸ್ಥೆ, ಬೆಲೆ -272/)