ಅಂದು ಮಧ್ಯಾಹ್ನ

ಒಂದು ನಿಮಿಷದಲ್ಲಿ
ಏನೆಲ್ಲ ನಡೆದುಹೋಯಿತು
ತೊಟ್ಟ ಅಂಗಿ ಲುಂಗಿ ಹರಿದ ಸೀರೆ ಚಡ್ಡಿ
ತೂತು ಬನಿಯನ್ನಿನಲ್ಲಿಯೇ
ಓಡಿವೆ ಜೀವಗಳು
ಎತ್ತರದ ಜಾಗ ಕನಸಿ

ಅರ್ಧ ಕುದಿಸಿಟ್ಟ ಹಾಲು
ವಾಸನೆ ಎಬ್ಬಿಸಿದ ಪಳದಿ
ಹಬೆ ಆರಿದ ಡಿಕಾಕ್ಷನ್
ಅಂಗಡಿಯಲ್ಲಿ ಖಾಲಿಯಾಗದೆ ಉಳಿದ
ಕಟ್ಟಕಡೆಯ ಬಿಸ್ಕೀಟು ಪ್ಯಾಕು
ದಿನವು ತಪ್ಪದೇ ತಿಂಬ ಬಿಪಿ ಶುಗರ್ ಮಾತ್ರೆ
ಅಚ್ಚುಕಟ್ಟಾಗಿ ಜೋಡಿಸಿಟ್ಟ ಮಗನ ಶಾಲೆ ಪುಸ್ತಕ
ಕಟಾಂಜನದ ಮೇಲಿಟ್ಟ ಹಸೆ
ಬೇಳೆ ಡಬ್ಬಿಯಲ್ಲಿದ್ದ ಚಿಲ್ಲರೆ ಕಾಸು
ಟ್ರಂಕಿನಲ್ಲಿದ್ದ ಒಂದೆಳೆ ಕರಿಮಣಿ ಸರ
ಹಜಾರದಲ್ಲಿದ್ದ ದೇವರ ಪೂಜೆ ಸಾಮಾನು
ನೆನಪಾಗಿರಲಿಲ್ಲ ಆ ಒಂದು ನಿಮಿಷದಲ್ಲಿ..
ಎಲ್ಲ ಬಿಟ್ಟು ಓಡುವಾಗ
ಕಣ್ಣಿಗೆ ಕಂಡದ್ದು
ಬೆಳಕಿಲ್ಲದ ಹಗಲೊಂದೆ.

ಅದೇ ಒಂದು ನಿಮಿಷದ ಹಿಂದೆ..

ಇನ್ನೂ ಮುಳುಗದ ಮನೆಯವಳು
ಕುದಿಸಿ ಕೊಟ್ಟ ನೀರು ಕುಡಿದವರು
`ಹರಿದ ಒಣ ಬಟ್ಟೆಯಾದ್ರು ಸಾಕು’ ಎಂದು ಒಯ್ದವರು
`ಹುಡಿ ಅವಲಕ್ಕಿ ಅಡ್ಡಿಲ್ಲ’ ಎಂದವರು
ಬಿಸಿ ಚಾ ನೀರು ಬೇಡಿದ ಹಿರಿಯರು
ಬೇಕಾದುದ್ದನ್ನೆಲ್ಲ
ಬೇಡವೆಂದೇ ಓಡಿದರು

ಒಂದೇ ಒಂದು ಸುದ್ದಿ ಏನೆಲ್ಲ ಮಾಡಿತು..!?

ಕೂಡಿ ಬಾಳಿದ ದನಕರು ಕೋಳಿಕುರಿ
ಗುರುತುಳಿಸದೇ ಕಾಣೆಯಾಗಿರುವಾಗ
ಸಾಮಾನುಗಳೆಲ್ಲ ಮನೆಯ ತೊರೆದು
ಅದ್ಯಾವುದೋ ಮರದ ಕೊರಳಲ್ಲಿ
ಗಿಡದ ಹಿಂಡಿನಲ್ಲಿ ಸಿಕ್ಕಿ ಅನಾಥವಾದಾಗ
ಹಕ್ಕಿಗಳ ಕೂಗನ್ನು ಮೆಟ್ಟಿ ಹರಿವ ನೀರು
ಜೀವ ವಿಕಾಸದ ಸೂತ್ರ
ತುದಿಮೇಲು ಮಾಡಿದಾಗಲೇ
ವಿರಕ್ತಿ ನಗು ಚೆಲ್ಲಿದ್ದು.

ನೀರ ಕೊನೆ ಹನಿಗೂ
ದೇಹ ಹಿಂಡಿ ಅಳೆಯುವ ಆಸೆ
ಒಂದೇ ಸಮನೆ ಹೊರಬೀಳುವ
ಕ್ಯೂಸೆಕ್ ನೀರು
ಜೀವಕಣಗಳ ಚಪ್ಪರಿಸಿ
ಪೊರೆ ಕಳಚಿ ಹರಿದಾಗಲೆ
ಜೀವಜಾಲ ಬೆತ್ತಲೆಗೊಳ್ಳುತ್ತಿತ್ತು.

ನೀರಿಗೆಷ್ಟು ಹಸಿವು..!?

ಕಾಡಿನ ಪ್ರಾಣಿ ಪಕ್ಷಿ ತೀರದ ಮನೆಮಠ
ಅಂಗಡಿ ಮುಂಗಟ್ಟು ಶುದ್ಧ ಬಾವಿನೀರು
ಕೊನೆಗೆ ಅನ್ನ ನೀಡುವ ಭೂಮಿಯ
ಕಣಕಣವೂ ಕಾಣದಷ್ಟು ತುಂಬಿದ ನೀರು
ನೆಲವನ್ನೆಲ್ಲ ಸಾಗರ ಮಾಡಿದ್ದು ಆಗಲೇ

ಒಂದು ನಿಮಿಷದ ಹಿಂದೆ
ಅಣೆಕಟ್ಟು ಒಡೆದಿದೆ ಎಂಬ
ಸುಳ್ಳು ವದಂತಿಯಲ್ಲೂ
ಎಷ್ಟೆಲ್ಲ ಜಗತ್ತುಗಳಿತ್ತು

ಸಾವು ಹೆದರಿಸುವ ಪ್ರಶ್ನೆಯಾಗಿದ್ದೆ ಅಲ್ಲಿ
ಈಗ ಮರೆತಷ್ಟು ಕಾಡುವುದು ಎಲ್ಲ
ಮುಗಿದದ್ದು ಮರೆಯಾಗುವುದು ಅಲ್ಲಿ

 

ಅಕ್ಷತಾ ಕೃಷ್ಣಮೂರ್ತಿ ಮೂಲತಃ ಅಂಕೋಲಾದವರು
ಉತ್ತರಕನ್ನಡ ಜಿಲ್ಲೆ ಜೊಯಿಡಾ ತಾಲೂಕಿನಲ್ಲಿ ಶಿಕ್ಷಕಿಯಾಗಿದ್ದಾರೆ.
ಈವರೆಗೆ ಇವರ ಆರು ಕೃತಿಗಳು ಪ್ರಕಟವಾಗಿದ್ದು “ಹಾಲಕ್ಕಿ ಕೋಗಿಲೆ” ಇತ್ತೀಚೆಗೆ ಪ್ರಕಟಗೊಂಡ ಕೃತಿ
ತುಷಾರಕ್ಕೆ ಕಳೆದ ಒಂದು ವರ್ಷದಿಂದ ‘ಇಸ್ಕೂಲು’ ಅಂಕಣ ಬರೆಯುತ್ತಿದ್ದಾರೆ