ಒಂದು ದಿನ ಎದೆ ಬಡಿತವ ಸುಧಾರಿಸಿಕೊಂಡು ಎಲ್ಲರ ಜೊತೆ ಏನೋ ಜೋಕು ಹೇಳುತ್ತಾ ನಗಿಸುತ್ತಿದ್ದೆ. ಅಷ್ಟು ದೂರದ ಆಚೆ ಮೂಲೆಯಲ್ಲಿ ಮರದಡಿ ನಿಂತು ಯಾರೊ ಹೆಂಗಸರು ಗಮನಿಸುತ್ತಿದ್ದಾರೆಂಬ ಅನುಮಾನ ಬಂತು. ಗಮನಿಸಿ ಅವರತ್ತ ದಿಟ್ಟಿಸಿದೆ. ಅವರು ನನ್ನನ್ನು ಹೇಗೆ ನೋಡುತ್ತಿದ್ದರೆಂಬುದಕ್ಕೆ ನನ್ನ ಬಳಿ ವಿವರಿಸಲು ತಕ್ಕ ಶಬ್ದಗಳೇ ಇಲ್ಲ. ಮೈ ಜುಂ ಎಂದು ಕತ್ತಲಿಡಿದಂತಾಯಿತು. ಒಂದು ಕ್ಷಣ ಮೈ ನೀರು ತುಳುಕಿದಂತಾಗಿ ಕೆಳಗೆ ಒಂದು ಹನಿ ನೀರು ಜಾರಿತ್ತು. ಗಂಟಲು ಕೂಡಲೇ ಒಣಗಿತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಎರಡನೆಯ ಕಂತು

 

ಯಾಕೋ ನನ್ನತ್ತೆಯರ ಬಗ್ಗೆ ಈಗಲೇ ಬರೆದು ಬಿಡಬೇಕೆನಿಸಿತು. ನನ್ನ ಎರಡನೇ ತಾತ ಕುರುಡಿಯ ನಾಲ್ಕು ಹೆಣ್ಣು ಮಕ್ಕಳು ನನ್ನ ಕಿನ್ನರ ಲೋಕದ ಸುಂದರಿಯರಾಗಿದ್ದರು. ಒಬ್ಬೊಬ್ಬರೂ ಒಂದೊಂದು ಕೈ ಮೀರಿಸಿದಂತೆ ಚೆಲುವೆಯರು, ಅವರಪ್ಪ ಕುರುಡಿ ಎಂಡಗುಡುಕ. ರಾತ್ರಿ ವೇಳೆ ಅವನಿಗೆ ಕಣ್ಣುಗಳು ಸರಿಯಾಗಿ ಕಾಣುತ್ತಿರಲಿಲ್ಲ. ಆದರೂ ಆ ಲೋಪವನ್ನು ಹೇಗೆ ಮೀರಿದ್ದ ಎಂದರೆ; ಇರುಳೇ ತನಗೆ ಸೂಕ್ತ ಎಂದು ಹೇಗೋ ಮಾಂತ್ರಿಕ ಹೊಂದಾಣಿಕೆ ಮಾಡಿಕೊಂಡಿದ್ದ. ದೆವ್ವಗಳು ತನಗೆ ದಾರಿ ತೋರುತ್ತವೆ ಎಂದು ಸಾಹಸ ಗಾಥೆಗಳ ಕಟ್ಟಿ ಹೇಳುತ್ತಿದ್ದ. ‘ನಿಜವೇ ತಾತಾ’ ಎಂದು ಅಚ್ಚರಿಯಿಂದ ಕೇಳಿದರೆ; ‘ಬಾ ನಂಜೊತೆಗೇ; ಅವೆಲ್ಲನು ತೋರಿಸ್ಕೊಡ್ತಿನಿ’ ಎಂದಿದ್ದ ಸಲೀಸಾಗಿ. ‘ನಿಂದೆಲ್ಲ ಡೂಸು; ಸುಳ್ಳು’ ಎನ್ನಲು; ಕುಡಿದಿದ್ದ ಅವನು ನನ್ನನ್ನು ಕೈ ಹಿಡಿದು ಕರೆದುಕೊಂಡು ಸ್ಮಶಾನದತ್ತ ನಡೆದಿದ್ದ. ‘ಬ್ಯಾಡ ತಾತಾ; ನಂಗೆದುರ್ಕೆಯಾಯ್ತದೆ’ ಎಂದಿದ್ದೆ. ಎತ್ತಿ ಹೆಗಲ ಮೇಲೆ ತ್ರಿವಿಕ್ರಮನಂತೆ ಕೂರಿಸಿಕೊಂಡು ಸ್ಮಶಾನದ ಬಳಿಯ ಹೊಳೆಯ ಹಾಯ್ದು ಬಂದು ಬಿಟ್ಟಿದ್ದ.

ಆಹಾ ಎಂತಹ ಹಿತವಿತ್ತು! ಕತ್ತಲ ಲೋಕದಲ್ಲಿ ಎಷ್ಟೋಂದು ಮಿಣುಕು ಹುಳುಗಳು ಹಾರಾಡುತ್ತಿದ್ದವು… ಹಿಡಿದು ಜೇಬಿಗೆ ತುಂಬಿಕೊಂಡಿದ್ದೆ. ನನ್ನೆದೆಯೆ ಮಿನುಗುವಂತೆ ಸ್ಮಶಾನದ ಮರದ ಕೆಳಗೆ ಕೂರಿಸಿಕೊಂಡು ತಾತ ಮೌನವಾಗಿದ್ದ. ಒಂದೂ ದೆವ್ವ ಬರಲಿಲ್ಲ. ಎಲ್ಲಿ ನಿನ್ನ ದೆವ್ವಗಳು ಎಂದು ಕೇಳುವಷ್ಟು ಧೈರ್ಯ ಬಂದು ಬಿಟ್ಟಿತ್ತು. ಕಾದು ಸಾಕಾಗಿತ್ತು. ಪಿಸುಗುಟ್ಟಿದೆ. ‘ನೀನು ಬಂದಿರೋದ್ರಿಂದ ದೆವ್ವಗಳು ಬರೋದಿಲ್ಲ ನಡೀ’ ಎಂದು ತಾತ ಅದೇ ಹೆಗಲ ಮೇಲೆ ಕೂರಿಸಿಕೊಂಡು ಹಿಂತಿರುಗಿ ನನ್ನ ನಾಲ್ಕೂ ಜನ ಅತ್ತೆಯರ ನಡುವೆ ಬಿಟ್ಟು ಮಾಯವಾಗಿದ್ದ.

ಅತ್ತೆಯರೇ ನನಗೆ ಅವತ್ತು ಸ್ವರ್ಗವಾಗಿದ್ದರು. ಎಲ್ಲರೂ ಪ್ರಾಯದವರೇ… ಮದುವೆಯೇ ಆಗಲಿಲ್ಲ. ತಾತ ಒಬ್ಬ ಆಫ್ರಿಕಾದ ಆದಿವಾಸಿ ತರ; ಅತಿಮಾನುಷನಾಗಿದ್ದ. ತನ್ನ ಹೆಣ್ಣು ಮಕ್ಕಳ ಬಗ್ಗೆ ಅವನೆಂದೂ ತಲೆ ಕೆಡಿಸಿಕೊಂಡಿರಲಿಲ್ಲ. ಅವನ ಹೆಂಡತಿ ನನ್ನಜ್ಜಿ ಅವನನ್ನು ಎಂದಾದರೂ ಮಾತನಾಡಿಸಿ ಊಟವಿಕ್ಕಿದ್ದನ್ನು ನಾನು ಕಂಡೇ ಇರಲಿಲ್ಲ. ಆದರೂ ಎಂತದೋ ಕತ್ತಲ ದಾಂಪತ್ಯ ಅವರ ನಡುವೆ ಸಾಗಿ ಮುಗಿದು ಬಹಳ ಕಾಲವಾಗಿತ್ತು. ತನ್ನ ನಾಲ್ಕು ಹೆಣ್ಣು ಮಕ್ಕಳನ್ನು ಅಜ್ಜಿ ಬಹಳ ಜೋಪಾನ ಮಾಡಿ ಮಾಡಿ ಸುಸ್ತಾಗಿ ಸೋತು ಲೋಕದ ಗಂಡಸರ ಗಹಗಹಿಕೆಯ ಮುಂದೆ ಸಪ್ಪಗಾಗಿಬಿಟ್ಟಿದ್ದಳು. ಅವರ ಚೆಲುವೇ ಅವರಿಗೆ ಶಾಪವಾಗಿತ್ತು. ಹಿರಿಯತ್ತೆ ಆ ಕಾಲದ ನಟಿ ಜಯಂತಿಯಂತಿದ್ದಳು ನೋಡಲು. ಯಥಾವತ್ ರೂಪ, ಅದೇ ಮೈ ಕಟ್ಟು, ರಾತ್ರಿ ಹೊತ್ತು ನಮ್ಮೂರಿನ ಪಕ್ಕ ಅಕ್ಕೂರಿನಲ್ಲಿ ಟೆಂಟ್ ಸಿನಿಮಾ ನೋಡಲು ಜನ ಸುತ್ತೇಳು ಹಳ್ಳಿಗಳಿಂದಲೂ ಬರುತ್ತಿದ್ದರು. ಅತ್ತೆಯರಿಗೆ ಸಿನಿಮಾ ಎಂದರೆ ಅಷ್ಟೊಂದು ಆಸೆ, ನಟಿ ಜಯಂತಿ ಅವರಂತೆಯೇ ನಮ್ಮತ್ತೆಯೂ ವೇಷಭೂಷಣ ಮಾಡುತ್ತಿದ್ದಳು. ಎಂಡಗುಡುಕರ ಕಾಟ ಆಗ ನನ್ನತ್ತೆಯರ ಮೇಲೆ ಅಷ್ಟೊಂದು ಕೆಟ್ಟದಾಗಿತ್ತು. ಏನೂ ಮಾಡುವಂತಿರಲಿಲ್ಲ. ಸಹಿಸಿ ತಪ್ಪಿಸಿಕೊಳ್ಳಬೇಕಿತ್ತು. ಆ ಚಿಕ್ಕ ವಯಸ್ಸಿನ ನನಗೆ ವಿಪರೀತ ಸಿಟ್ಟು ಬರುತ್ತಿದ್ದರೂ ಆ ನಾಯಿಗಳ ವಿರುದ್ಧ ಹೋರಾಡಲು ಸಾಧ್ಯವಿರಲಿಲ್ಲ.

ಅತ್ತೆಯರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿರಲಿಲ್ಲ. ಕೆಲ ಮುದಿವಾತಗಳಂತಿದ್ದವರು ಬಂದು ತಾವು ‘ಇಟ್ಟು’ಕೊಳ್ಳುತ್ತೇವೆ ಎಂದು ಮೀಸೆ ತಿರುವುತ್ತಿದ್ದರು. ‘ಹೇ; ಎದ್ದೋಗೊ ಆಚೆ’ ಎಂದು ಬಿಡುತ್ತಿದ್ದರು ಅತ್ತೆಯರು. ಅಂತಹ ಸಂದರ್ಭದಲ್ಲಿ ಅತ್ತೆಯರ ಮಧ್ಯೆಯೇ ಅವರಿಗೆ ಬೆರೆತಂತೆ ಕೂತಿರುತ್ತಿದ್ದ ನಾನು ಜೋರಾಗಿ ನಕ್ಕು ಬಿಡುತ್ತಿದ್ದೆ. ಅತ್ತೆಯರು ಸರಿಯಾಗಿ ಮಂಗಳಾರತಿ ಮಾಡಿದರೆಂದು ಬೀಗುತ್ತಿದ್ದೆ. ಹೇಗೊ ಮದುವೆ ಕೂಡಿ ಬಂತು ಎನ್ನುವಾಗ ಕೇಡಿಗರು ಮುರಿದು ಬಿಡುತ್ತಿದ್ದರು. ಆ ನಾಲ್ಕೂ ಜನರೂ ವಾರಾಂಗನೆಯರು ಎಂದು ಸುದ್ದಿ ಹಬ್ಬಿಸಲಾಗಿತ್ತು. ಅತ್ತೆಯರು ಶಾಲೆಯ ಮುಖವನ್ನೆ ಕಂಡಿರಲಿಲ್ಲ. ಅಜ್ಜಿ ಬಾಯಿ ಬಡಿದುಕೊಂಡು; ತನ್ನ ಮಕ್ಕಳು ವಾರಾಂಗನೆಯರಲ್ಲಾ.. ಎಂದು ಪರಿಪರಿಯಾಗಿ ಬಂದವರ ಮುಂದೆ ವಿನಂತಿಸಿ; ಎದೆ ನೋವೆಂದು ಕೂತುಬಿಡುತ್ತಿದ್ದಳು. ನನ್ನ ಪಾಲಿಗೆ ನನ್ನತ್ತೆಯರು ಯಾವತ್ತೂ ವಾರಾಂಗನೆಯರು ಎಂದೆನಿಸಿರಲೇ ಇಲ್ಲ. ನನ್ನ ಭಾವನೆಗಳು ರೂಪುಗೊಳ್ಳುವಲ್ಲಿ ನನ್ನ ತಾಯಿಯಷ್ಟೇ ಮುಖ್ಯವಾಗಿದ್ದರು. ಎಂದೂ ಅತ್ತೆಯರು ನನ್ನ ಕಣ್ಣಲ್ಲಿ ಬೇರೆ. ಇವತ್ತಿಗೂ ಈ ಕ್ಷಣಕ್ಕೂ ಅವರನ್ನು ಸೂಳೆಯರಾಗಿ ಕಲ್ಪಿಸಿಕೊಳ್ಳುವುದಕ್ಕೂ ನನ್ನ ಮನಸ್ಸು ಒಪ್ಪದು. ಅಷ್ಟೊಂದು ಕ್ಷುದ್ರವಾಗಿ ಪೀಡಿಸುತ್ತಿದ್ದರು. ಸಾಲಾಗಿ ಬೆಳೆದು ನಿಂತಿದ್ದ ಅತ್ತೆಯರು ಹೊರಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದರು. ಕೆಲವರು ರಾತ್ರಿ ವೇಳೆ ಬಾಗಿಲು ಬಡಿದು ಕರೆಯುತ್ತಿದ್ದರು. ಅಂತಹ ಕತ್ತಲ ನಟ್ಟಿರುಳಲ್ಲಿ ಅಜ್ಜಿ ಎದ್ದು ಮನೆಯ ಸುತ್ತ ಬ್ಯಾಟರಿ ಬಿಟ್ಟು ಹುಡುಕಿ ಬೈಯ್ದು ಎಚ್ಚರಿಸಿ ಬರುತ್ತಿದ್ದಳು.

ಅತ್ತೆಯರು ರಮ್ಯ ಲೋಕದ ರಮಣೀಯ ರಾಜರಾಣಿಯರ ಕಥೆಗಳನ್ನು ಹೇಳುತ್ತ ಕಲ್ಪನೆಯ ತೊಟ್ಟಿಲಲ್ಲಿ ಆಕಾಶಕ್ಕೆಲ್ಲ ಕರೆದೊಯ್ದು ಬಿಡುತ್ತಿದ್ದರೇನೋ… ಅಂತಹ ಕೊಂಪೆಯಲ್ಲಿ ನಿಜಕ್ಕೂ ಅವರು ರಮ್ಯವತಿಯರಾಗಿದ್ದರು. ನಾಲ್ಕೂ ಜನ ಮಗ್ಗುಲಲ್ಲಿ ಮಲಗಿಸಿಕೊಂಡು ನನ್ನ ಬೆನ್ನು ತಲೆ ಹೊಟ್ಟೆ ಸವರಿ ಎಳೆದು ಎದೆ ಮೇಲೆ ಮಲಗಿಸಿಕೊಳ್ಳುತ್ತಿದ್ದರು. ಅಹಾ! ದೇವರೇ… ಎಲ್ಲಿ ಹೋದವು ಆ ಎಲ್ಲ ದಿನಗಳೂ… ಮುತ್ತಿಕ್ಕಿ; ಕೆನ್ನೆ ಕಚ್ಚಿಸಿಕೊಳ್ಳುತ್ತಿದ್ದರು. ಮೆಲ್ಲಗೆ ಸೆರಗ ಹೊದ್ದಿಸಿ ಹಾಲು ಕುಡಿಸುತ್ತಿದ್ದರು. ಹಿತವಾಗಿ ಅಪ್ಪಿಡಿದು ಬೆಚ್ಚಗೆ ಮಲಗಿಸಿಕೊಳ್ಳುತ್ತಿದ್ದರು. ಒಂದೇ ಎರಡೇ ಅವರ ತಾಯ್ತನದ ನಡವಳಿಕೆಗಳೂ… ಅವರನ್ನು ಬಿಟ್ಟಿರಲು ನನಗೆ ಬಹಳ ಕಷ್ಟವಾಗುತ್ತಿತ್ತು. ಕದ್ದು ಮುಚ್ಚಿ ಅತ್ತೆಯರ ಆ ಕಾಲದ ಉದ್ದನೆಯ ಗುಡಿಸಲು ಸೇರಿದೆ ಎಂದರೆ ನಾನು ಹೊರಕ್ಕೆ ಬರುತ್ತಲೇ ಇರಲಿಲ್ಲ. ನನ್ನಪ್ಪ ಬಹಳ ಕೀಳಾಗಿ ಕಾಣುತ್ತಿದ್ದ. ಅವನೂ ಕೂಡ ‘ಅವರು ವಾರಾಂಗನೆಯರು! ಅಲ್ಲಿಗೆ ಯಾಕೆ ಹೋಗಿದ್ದೆ’  ಎಂದು ಬಡಿಯುತ್ತಿದ್ದ.

ಅತ್ತೆಯರ ಬಗೆಗಿದ್ದ ಆರೋಪ ಊರಲ್ಲಿ ಜನರ ಬಾಯಲ್ಲಿ ಧಾರಾಳ ಹರಿದು ಕೊನೆಗೆ ಅತ್ತೆಯರು ಆ ದಾರಿ ಹಿಡಿಯಲೇ ಬೇಕಿತ್ತು. ಹುಣಸನಹಳ್ಳಿಯಲ್ಲಿ ಸಂತೆ ನಡೆಯುತ್ತಿತ್ತು. ಸಂತೆಯನ್ನೇ ಆ ವ್ಯವಹಾರದ ಮೊದಲ ಜಾಗವಾಗಿಸಿಕೊಂಡರು. ಕೈ ತುಂಬ ಸಂಬಳ ತಂದಂತೆ ಅತ್ತೆಯರು ಸಂತೆ ಮುಗಿಸಿ ತರಾವರಿ ತಿಂಡಿಗಳ ತಂದು ತಿನಿಸಿ, ಅಡ್ಡ ಗೋಡೆಯ ಮೇಲೆ ಇರಿಸಿದ ಕುಪ್ಪಿಯ ಬೆಳಕಿನಲ್ಲಿ ವಿಚಿತ್ರವಾಗಿ ನನ್ನ ಕಣ್ಣಿಗೆ ಕಾಣುತ್ತಿದ್ದರು. ಮಂದವಾದ ಆ ಬೆಳಕು ಅವರ ಮೈ ಮೇಲೆ ಬಿದ್ದು ವಕ್ರ ನೆರಳೆಬ್ಬಿಸುತ್ತಿತ್ತು. ಹೊಯ್ದಾಡುವ ದೀಪದ ನಾಲಿಗೆ ಅತ್ತೆಯರನ್ನು ಅತ್ತಿತ್ತ ಒಗೆದು ಬಿಸಾಡಿ ಅವರನ್ನೇ ತಿನ್ನುತ್ತಿರುವಂತೆ ಕಾಣುತ್ತಿತ್ತು. ಅತ್ತೆಯರಿಗೆ ಆ ಪರಿವೆಯೇ? ನನಗೆ ಅಷ್ಟೋಂದು ಎಚ್ಚರವೇ? ಇಲ್ಲಾ. ಒಟ್ಟಿನಲ್ಲಿ ಅತ್ತೆಯರು ಒಟ್ಟಾಗಿ ಕೂತು ಹರಟುತ್ತಿರುವಾಗ ಅವರ ನೆರಳುಗಳು ನನಗೆ ಭಯ ಉಂಟುಮಾಡುತ್ತಿದ್ದವು. ತಾತ ಕುರುಡಿಯ ದೆವ್ವಗಳು ನೆನಪಾಗಿ; ಹೇಗಾದರೂ ಮಾಡಿ ತಾತನಂತೆ ದೆವ್ವಗಳ ಸಾಮಿಪ್ಯ ಸಾಧಿಸಿ, ಅವುಗಳ ಪ್ರೀತಿಗೆ ಒಳಪಟ್ಟು ತನಗೆ ಬೇಕಾದಂತೆ ಅವುಗಳ ಶಕ್ತಿಯನ್ನು ಬಳಸಿಕೊಳ್ಳಬೇಕೆಂದು ಕಲ್ಪಿಸಿ ಸುಮ್ಮನಾಗುತ್ತಿದ್ದೆ. ಅತ್ತೆಯರು ಈಗ ಸಲೀಸಾಗಿ ಸಿಗುತ್ತಿರಲಿಲ್ಲ. ಅಜ್ಜಿಯು ಸಾಕಿದ್ದ ಆಡುಗಳ ಅಟ್ಟಿಕೊಂಡು ತೊರೆ ಸಾಲಿಗೆ ಹೋದವಳು ಸಂಜೆಗೇ ಬರುತ್ತಿದ್ದುದು. ಎಷ್ಟೋ ಬಾರಿ ಗುಡಿಸಲಿಗೆ ಬೀಗ ಹಾಕಿರುತ್ತಿತ್ತು. ಅತ್ತೆಯರು ಈಗ ಪೇಟೆಯ ದಾರಿ ಹಿಡಿದಿದ್ದರು. ತಡವಾಗಿ ಕತ್ತಲಾದಾಗ ಹಿಂತಿರುಗಿರುತ್ತಿದ್ದರು. ನಾನು ಹೋಗಿ ‘ಅತ್ತೇ’  ಎಂದು ಕರೆದರೆ ಪೇಟೆ ಸುತ್ತಿ ದುಡಿದು ಬಂದಿರುತ್ತಿದ್ದ ಅವರು ವಿಚಿತ್ರ ಬಳಲಿಕೆಯಲ್ಲಿ ಅದೇ ಅಡ್ಡಗೋಡೆಯ ಕೆಳಗೆ ಚಾಪೆ ಹಾಸಿಕೊಂಡು ಮೌನವಾಗಿ ಮಲಗಿರುತ್ತಿದ್ದರು. ಅವರ ಸಡಗರವನ್ನೆಲ್ಲ ಯಾರಿಗೋ ಬಸಿದುಕೊಂಡಂತಿತ್ತು. ನನ್ನ ಮೇಲೆ ಉತ್ಸಾಹವೇ ಇರುತ್ತಿರಲಿಲ್ಲ. ಆದರೂ ಕರುಣೆಯಲ್ಲಿ ಕರೆದು ಮಲಗಿಸಿಕೊಳ್ಳುತ್ತಿದ್ದರು. ‘ನನ್ನ ಮೈ ಕೈ ನೋವು ಕಣೋ ನನ್ನ ಗಂಡನೇ; ಬೆನ್ನು ತುಳಿಯೋ’ ಎಂದು ಅತ್ತೆಯರು ಸಾಲಾಗಿ ಬೆನ್ನು ತುಳಿಸಿಕೊಳ್ಳುತ್ತಿದ್ದರು. ತೊಡೆತನಕ ಕಾಲು ಹಿಂಡಿಸಿಕೊಳ್ಳುತ್ತಿದ್ದರು. ತಮಾಷೆಗೆ, ‘ನೀನು ದೊಡ್ಡೋನಾದ್ಮೇಲೆ ನಮ್ಮ ನಾಕೂ ಜನರ ಮದ್ವೆ ಮಾಡ್ಕಂಡಿಯಾ ನನರಾಜಾ’ ಎಂದು ಕೇಳುತ್ತಿದ್ದರು. ಮುಲಾಜಿಲ್ಲದೆ ನಾನು ‘ಹೂಂ’ ‘ಆಯ್ತಿನಿ’ ಎನ್ನುತ್ತಿದ್ದೆ. ಅತ್ತೆಯರನ್ನು ಬಿಟ್ಟಿರಲಾಗದ ಸಂಕಟದಲ್ಲಿ ನಾಳೆ ನಾನು ನನ್ನತ್ತೆಯರನ್ನೇ ಮದುವೆ ಮಾಡಿಕೊಳ್ಳಬೇಕೆಂದು ಬಾಲ್ಯದ ಮನದಲ್ಲಿ ಹೊರಲಾರದಷ್ಟು ಅತ್ತೆಯರನ್ನೇ ಹೊತ್ತುಕೊಂಡಿದ್ದೆ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಕತ್ತಲ ಲೋಕದಲ್ಲಿ ಎಷ್ಟೋಂದು ಮಿಣುಕು ಹುಳುಗಳು ಹಾರಾಡುತ್ತಿದ್ದವು… ಹಿಡಿದು ಜೇಬಿಗೆ ತುಂಬಿಕೊಂಡಿದ್ದೆ. ನನ್ನೆದೆಯೆ ಮಿನುಗುವಂತೆ ಸ್ಮಶಾನದ ಮರದ ಕೆಳಗೆ ಕೂರಿಸಿಕೊಂಡು ತಾತ ಮೌನವಾಗಿದ್ದ. ಒಂದೂ ದೆವ್ವ ಬರಲಿಲ್ಲ. ಎಲ್ಲಿ ನಿನ್ನ ದೆವ್ವಗಳು ಎಂದು ಕೇಳುವಷ್ಟು ಧೈರ್ಯ ಬಂದು ಬಿಟ್ಟಿತ್ತು.

ದಿನಗಳೆದಂತೆಲ್ಲ ಅತ್ತೆಯರು ನನ್ನ ಕೈಗೆಟುಕದಾದರು. ಅವರು ಮರುಭೂಮಿಯಲ್ಲಿ ಉದ್ದಾನುದ್ದ ನೆರಳಲ್ಲಿ ದೂರದಲ್ಲಿ ಸಾಲಾಗಿ ನಡೆಯುತ್ತಿರುವುದು ಕಂಡು ಹಿಂಬಾಲಿಸಿ ಓಡೋಡಿ; ‘ಅತ್ತೇರೇ ನಾನೂ ಬರ್ತೀನಿ ನಿಲ್ಲಿ’ ಎಂದು ಕೈ ಬೀಸಿ ಕೂಗುತ್ತಿದ್ದೆ. ಅತ್ತೆಯರ ನೆರಳು ಕೈಗೆ ಸಿಗುತ್ತಿತ್ತು. ಉಸುಕಿನಲ್ಲಿ ನನ್ನ ಕಾಲುಗಳು ಹೂತುಹೋದಂತಾಗಿ ಕಿರುಚುತ್ತಿದ್ದೆ. ಅತ್ತೆಯರ ಬಗ್ಗೆ ಅಂತಹ ಎಷ್ಟು ಕನಸುಗಳ ಕಂಡಿರುವೆನೊ…

ಒಂದು ದಿನ ಅಜ್ಜಿ ಹೊಲ ಮಾಳದಲ್ಲೇ ಸತ್ತು ಬಿದ್ದಿದ್ದಳು. ಅವಳ ಆಡುಗಳು ಮೂರು ದಿನಗಳ ತನಕ ಅವಳ ಸುತ್ತ ಮಲಗಿ ಕಾಯುತ್ತಿದ್ದವು. ಎಲ್ಲೂ ಹೋಗಿರಲಿಲ್ಲ. ಯಾರಿಗೋ ಗೊತ್ತಾದ ಮೇಲೆ ಅವಳ ಹೆಣ ತಂದ ಅತ್ತೆಯರು ಮಣ್ಣು ಮಾಡಿದ್ದರು. ನನ್ನ ಬಾಲ್ಯದಲ್ಲೇ ದುರಂತಗಳು ಅಂಟಿಕೊಂಡಿದ್ದವು. ಅವು ಆಕಸ್ಮಿಕವಾಗಿ ಬಂದೆರಗಿದ ಕೂಡಲೇ ಸ್ತಬ್ಧನಾಗಿ ಬಿಡುತ್ತಿದ್ದೆ. ಏನೋ ಮಂಕು ಕವಿಯುತ್ತಿತ್ತು. ಒಂಟಿಯಾಗಿರಬೇಕೆಂದು ನನಗೆ ನಾನೇ ಎಲ್ಲರಿಂದ ಬೇಲಿ ಹಾಕಿಕೊಂಡು ಮರೆಯಲ್ಲಿ ದುಃಕ್ಕಳಿಸುತ್ತ ಸಂಕಟಪಡುತ್ತಿದ್ದೆ. ಸಾಂತ್ವನಕ್ಕಿದ್ದ ಅತ್ತೆಯರೂ ದೂರ ಸರಿದು ಪೇಟೆಯ ಕೊಂಪೆಯಲ್ಲಿ ಅವರ ವೃತ್ತಿಗನುಸಾರ ಬದುಕುತ್ತ ಊರನ್ನೇ ಬಿಟ್ಟಿದ್ದರು.

ಅಪರೂಪಕ್ಕೆ ಹಬ್ಬಗಳಲ್ಲಿ ಬಂದು ಹೋಗುತ್ತಿದ್ದರು. ಆ ಗತಕಾಲದ ಗುಡಿಸಲನ್ನು ಆಗಾಗ ಬಂದು ರಿಪೇರಿ ಮಾಡಿಸಿ ಹೊರಟು ಹೋಗುತ್ತಿದ್ದರು. ನನಗೆ ಮೀಸೆ ಮೂಡುತ್ತಿದ್ದವು. ನನ್ನಪ್ಪ ಕೊಡುತ್ತಿದ್ದ ಹಿಂಸೆಯ ಪರಿಕಂಡಿದ್ದ ನನ್ನ ತಾತ, ನನ್ನನ್ನು  ದೊಡ್ಡ ಬಳ್ಳಾಪುರಕ್ಕೆ ಆಗ ತಾನೆ ಪೋಲಿಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಚಿಕ್ಕಪ್ಪನ ಬಳಿ ಕರೆದೊಯ್ದು ಹೈಸ್ಕೂಲಿಗೆ ಸೇರಿಸಿ ಕೈ ತೊಳೆದುಕೊಂಡಿದ್ದ. ನಾನೊಂದು ಬೇರೆಯದೇ ಲೋಕಕ್ಕೆ ಬಂದಿದ್ದೆ. ನಾನು ಊರು ಬಿಟ್ಟಿದ್ದೆ. ಅಂತಹ ಅತ್ತೆಯರ ಸಾಮಿಪ್ಯವನ್ನೇ ಕಾಲ ಮರೆಸಿತ್ತು. ಎಂದೊ ಕನಸಿಗೆ ಬರುತ್ತಿದ್ದರು. ಯಮಲೋಕದಿಂದ ತಪ್ಪಿಸಿಕೊಂಡು ಬಂದಂತಿದ್ದ ನನಗೆ ಹಳ್ಳಿಗೆ ಹಿಂತಿರುಗಲು ಯಾವ ಕಾರಣಕ್ಕೂ ಮನಸ್ಸು ಒಪ್ಪುತ್ತಿರಲಿಲ್ಲ. ನಾನು ಹುಟ್ಟಿ ಬೆಳೆದ ಊರೇ ತನಗೆ ದುಃಸ್ವಪ್ನವಾಗಿತ್ತು. ಈಗಲೂ ನಾನು ಆ ಹಳ್ಳಿ ಮೊಗಳ್ಳಿಗೆ ಹೋಗುವುದಿಲ್ಲ. ಸಂಬಂಧಗಳೆಲ್ಲ ಕಿತ್ತು ಹೋಗಿವೆ. ಅಷ್ಟೂ ಜನ ಅತ್ತೆಯರಲ್ಲಿ ಈಗ ಯಾರೊಬ್ಬರೂ ಜೀವಂತವಾಗಿಲ್ಲ.

ಅಷ್ಟೋಂದು ಚೆಲುವೆಯರು ಬಹಳ ಬೇಗ ಕುರೂಪಗೊಂಡಿದ್ದರು. ಕೊನೆ ಕೊನೆಗೆ ಅವರು ಬಸ್ ನಿಲ್ದಾಣದಲ್ಲಿ ಚಿಲ್ಲರೆ ಕಾಸಿಗಾಗಿ ಪರದಾಡುತ್ತಿದ್ದರು. ಯಾರೂ ಅವರತ್ತ ನೋಡುತ್ತಿರಲಿಲ್ಲ. ಅಷ್ಟೊತ್ತಿಗೆ ನಾನು ದೊಡ್ಡ ಮನುಷ್ಯನಾಗಿ ಕೋಡು ಬಂದು ಬಿಟ್ಟಿದ್ದವು. ಲಂಕೇಶರು ತಮ್ಮ ಪತ್ರಿಕಾ ಪ್ರಕಾಶನದಿಂದ ನನ್ನ ಬುಗುರಿ ಕಥಾ ಸಂಕಲನವನ್ನು ತಂದಿದ್ದರು. ಆ ಅಮಲಿನಲ್ಲಿ ‘ಬಾಡೂಟ’ ಎಂಬ ಕಥೆ ಬರೆದು ಪ್ರಜಾವಾಣಿಯಲ್ಲಿ ಅದು ಪ್ರಕಟವಾಗಿತ್ತು. ನೇರ ಅತ್ತೆಯರ ಹೆಸರನ್ನೇ ಆ ಪಾತ್ರಗಳಿಗೆ ನಮೂದಿಸಿದ್ದೆ. ವಿಷಾದದಲ್ಲಿ ಅವರ ದಂಧೆಯ ಬಗ್ಗೆ ಬರೆದಿದ್ದೆ. ಊರಲ್ಲಿದ್ದವನೊಬ್ಬ ಆ ಕಥೆಯ ಹಸಿ ಹಸಿಯಾಗಿ ಓದಿ ಅತ್ತೆಯರಿಗೆ ಹೇಳಿ; ಆ ಅತ್ತೆಯರು ಎದೆ ಚಚ್ಚಿಕೊಂಡು; ”ಅವನೂ ನಮ್ಮನ್ನು ‘ವಾರಾಂಗನೆಯರು’ ಅಂತಾ ಬರ್ದಿದ್ದಾನಾ; ನಾವಿನ್ನೂ ಬದ್ಕಿದ್ದೀವಲ್ಲಾ” ಎಂದು ರೋದಿಸಿದ್ದರಂತೆ. ಅವನು ಊರಿಗೆ ಹಬ್ಬಕ್ಕೆ ಬರಲೀ, ಕುತ್ತಿಗೆ ಪಟ್ಟಿ ಹಿಡಿದು ಕೇಳುತ್ತೇವೆ ಎಂದು ಕಿರಿ ಅತ್ತೆ ರಂಪ ಮಾಡಿದ್ದಳು. ಆಗಾಗ ಹಳ್ಳಿಗೆ ಹೋಗಿ ಬರುತ್ತಿದ್ದ ನನ್ನಕ್ಕನಿಂದ ವಿಷಯ ಗೊತ್ತಾಗಿ ನರಳಾಡಿದ್ದೆ. ಅತ್ತೆಯರು ಒಂದಷ್ಟು ಕಾಲ ಮಂಡ್ಯದಲ್ಲಿದ್ದರು. ಆಗ ಮೈಸೂರು ವಿಶ್ವವಿದ್ಯಾಲಯದ ಮಂಡ್ಯ ಪಿ.ಜಿ.ಸೆಂಟರ್‌ನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೆ. ಮಂಡ್ಯ ಬಸ್ ನಿಲ್ದಾಣ ಬಂದ ಕೂಡಲೆ ವಿಪರೀತ ಚಡಪಡಿಕೆಯಲ್ಲಿರುತ್ತಿದ್ದೆ. ನನ್ನ ಜೊತೆ ವಿದ್ಯಾರ್ಥಿಗಳಿದ್ದರು; ಹಾಗೆಯೇ ಇತರೆ ಸೀನಿಯರ್ ಪ್ರಾಧ್ಯಾಪಕರೂ ಇರುತ್ತಿದ್ದರು. ಎಲ್ಲಿ ಆ ಅತ್ತೆಯರು ಬಂದು ದಾಳಿ ಮಾಡುವರೋ ಎಂದು ವಿನಾಕಾರಣ ಟಾಯ್ಲೆಟ್ ರೂಮಿಗೆ ಹೋಗುವಂತಾಗುತ್ತಿತ್ತು. ಎಲ್ಲರೆದಿರೂ ಅತ್ತೆಯರು ಹಿಡಿದು ಬಾರಿಸಿ ಅಪಮಾನಿಸುವರು ಎಂಬ ಆತಂಕ ಸಂಕಟ ತಿವಿಯುತ್ತಿದ್ದವು. ಮೈಸೂರಿಂದ ಮಂಡ್ಯಕ್ಕೆ ಬಂದು; ಪಿ.ಜಿ.ಸೆಂಟರ್ ತಲುಪಲು ಮತ್ತೊಂದು ಬಸ್ಸು ಹಿಡಿದು ಕೊಮ್ಮೇರಳ್ಳಿಯನ್ನು ತಲುಪಬೇಕಿತ್ತು.

ಒಂದು ದಿನ ಎದೆ ಬಡಿತವ ಸುಧಾರಿಸಿಕೊಂಡು ಎಲ್ಲರ ಜೊತೆ ಏನೋ ಜೋಕು ಹೇಳುತ್ತಾ ನಗಿಸುತ್ತಿದ್ದೆ. ಅಷ್ಟು ದೂರದ ಆಚೆ ಮೂಲೆಯಲ್ಲಿ ಮರದಡಿ ನಿಂತು ಯಾರೊ ಹೆಂಗಸರು ಗಮನಿಸುತ್ತಿದ್ದಾರೆಂಬ ಅನುಮಾನ ಬಂತು. ಗಮನಿಸಿ ಅವರತ್ತ ದಿಟ್ಟಿಸಿದೆ. ಅವರು ನನ್ನನ್ನು ಹೇಗೆ ನೋಡುತ್ತಿದ್ದರೆಂಬುದಕ್ಕೆ ನನ್ನ ಬಳಿ ವಿವರಿಸಲು ತಕ್ಕ ಶಬ್ದಗಳೇ ಇಲ್ಲ. ಮೈ ಜುಂ ಎಂದು ಕತ್ತಲಿಡಿದಂತಾಯಿತು. ಒಂದು ಕ್ಷಣ ಮೈ ನೀರು ತುಳುಕಿದಂತಾಗಿ ಕೆಳಗೆ ಒಂದು ಹನಿ ನೀರು ಜಾರಿತ್ತು. ಗಂಟಲು ಕೂಡಲೇ ಒಣಗಿತು. ಯಾಕೆ ಏನಾಯ್ತು ಎಂದು ಕೇಳಿದರು ಗೆಳೆಯರು, ಮೂಕನಾಗಿದ್ದೆ. ಅತ್ತೆಯರು ಕೈ ಬೀಸಿ ಕರೆಯುತ್ತಿದ್ದರು! ಹಿರಿಯತ್ತೆ ನಗುತ್ತ ಕರ್ಚೀಪನ್ನು ಬೀಸಿ ಬಾ ಎಂಬಂತೆ ಕತ್ತು ಬಾಗಿಸುತ್ತಿದ್ದಳು. ಅಂತಹ ಬಿಕ್ಕಟ್ಟನ್ನು ನಾನೆಂದು ಎದುರಿಸಿರಲಿಲ್ಲ. ಕುಸಿಯುವಂತಾಗುತ್ತಿತ್ತು. ದೊಡ್ಡವನಾದ ಮೇಲೆ ನಾನೇ ನಿಮ್ಮನ್ನು ಮದುವೆ ಮಾಡಿಕೊಳ್ಳುವವನು ಎಂದು ಅತ್ತೆಯರ ನಡುವೆ ಹೊರಳಾಡುತ್ತಿದ್ದ ಗಂಡಸು ನಾನೇ ಏನೊ ಎಂದು ನೆನಪಾಗಿ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದೆ.

ಅತ್ತೆಯರು ನನ್ನ ಬಳಿ ಬರಲಿಲ್ಲ… ಎಷ್ಟೇ ಆಗಲಿ ವಿದ್ಯಾವಂತ ಮಾನವಂತ ಮಂದಿ ಅಲ್ಲವೇ ನಾವೂ! ಅವರ ಕಣ್ಣಿಗೆ ಎಷ್ಟೋ ವರ್ಷ ಆದ ನಂತರ ಸಿಕ್ಕಿದ್ದೆ. ಅವರ ನೋಟದಲ್ಲಿ ಸಂಕಟ, ಸಡಗರ, ಏನೋ ಹೆಮ್ಮೆ, ವಿಷಾದ ಮಡುಗಟ್ಟಿದ್ದವು. ನಾನೂ ಕೂಡ ಅವರ ಕಂಡು ತುಂಬ ಸಮಯವಾಗಿತ್ತು. ಬಸ್ಸು ಬಂತು. ನೆಗೆದ್ಹಾರಿದಂತೆ ಬಸ್ಸಿನೊಳಗೆ ನುಗ್ಗಿ ಬಚ್ಚಿಟ್ಟುಕೊಂಡೆ. ಹತ್ತಿರ ಬರುತ್ತಿದ್ದರು ಅತ್ತೆಯರು! ಭಾಗಶಃ ಇನ್ನಷ್ಟು ಹತ್ತಿರದಿಂದ ಅವನನ್ನು ಕಣ್ತುಂಬಿಕೊಳ್ಳುವ ಎಂಬಂತೆ! ನಾನು ಗಾಜಿನ ಕಿಟಕಿಯನ್ನು ಎಳೆದುಕೊಂಡಿದ್ದೆ. ಬಸ್ಸು ಚಲಿಸಿತು. ಅತ್ತೆಯರಲ್ಲಿಬ್ಬರು ಕೈ ಬೀಸಿದರು. ನಾನು ಪ್ರತಿಕ್ರಿಯಿಸಲಿಲ್ಲ. ಹೆದ್ದಾರಿಯಿಂದ ಬಸ್ಸು ಕಿರುದಾರಿಗೆ ತಿರುವಿಕೊಳ್ಳುತ್ತಿದ್ದಂತೆಯೇ ಅವರು ಕಣ್ಮರೆಯಾದರು. ನನ್ನ ಬಾಲ್ಯಕಾಲದ ಅಪ್ಸರೆ ಅತ್ತೆಯರು ಇವರೇನಾ, ಇವತ್ತು ಹೀಗೆ ಬೀದಿ ಸುತ್ತುವವರು ಎಂದು ಏನೋ ಅಪಮಾನವಾದಂತಾಗಿತ್ತು.

ಆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಒಂದು ಗಳಿಗೆ ಅವರ ಬಳಿ ಹೋಗಿ ಮಾತಾಡಿಸಿದ್ದಿದ್ದರೆ ನನ್ನ ಗಂಟೇನು ಹೋಗುತ್ತಿದ್ದುದು! ನನ್ನ ಯೋಗ್ಯತೆ ಇಷ್ಟೇನಾ? ನಾನ್ಯಕೆ ಇಷ್ಟೋಂದು ಹೆದರಿ ಹೇಡಿಯಂತೆ ನಡೆದುಕೊಂಡೆ ಎಂದು ನನ್ನನ್ನು ನಾನೇ ಹಳಿದುಕೊಂಡೆ. ಅರ್ಥ ಶೂನ್ಯ ಹಳಹಳಿಕೆಯಲ್ಲಿ ನಮ್ಮಂತವರು ಯಾಕೆ ಬಹಳ ಮುಂದೆ ಎಂದು ಎಷ್ಟೆಲ್ಲ ಯೋಚಿಸಿದರೂ ತಕ್ಕ ಉತ್ತರವೇ ಸಿಗುತ್ತಿರಲಿಲ್ಲ. ಅತ್ತೆಯರು ಇಂದಲ್ಲ ನಾಳೆ ನನ್ನನ್ನು ಹಿಡಿದೇ ಹಿಡಿವರು ಎಂದು ಭಯವಾಗಿ; ಆ ಪಿ.ಜಿ.ಸೆಂಟರಿನ ಅಧ್ಯಾಪಕ ವೃತ್ತಿಯೇ ಬೇಡ ಎಂದು ರಾಜಿನಾಮೆ ನೀಡಿ; ಮರಳಿ ಪಿಎಚ್.ಡಿ ಅಧ್ಯಯನ ಮುಂದುವರಿಸಿದೆ. ಅತ್ತೆಯರು ಮಾನಸ ಗಂಗೋತ್ರಿಯ ನನ್ನ ಹಾಸ್ಟಲ್ ಬಳಿ ಬಂದು ಕಾದು ಕೂತಿರುವಂತೆ ಆಗಾಗ ಕನಸು ಬೀಳುತ್ತಿದ್ದವು. ನನ್ನ ಸ್ವಭಾವವೇ ಹೀಗೆ. ಬಾಲ್ಯ ಕಾಲದ ತೊಟ್ಟಿಲಲ್ಲಿ ಕಂಡದ್ದರ ಆಚೆಗೆ ನಾನು ಬಂದೇ ಇಲ್ಲವೇನೋ… ದೊಡ್ಡವರ ಲೋಕದ ಹಿಂಸೆಯನ್ನು ಕಂಡು ಎರಡನ್ನೂ ಸಮದೂಗಿಸಿಕೊಳ್ಳಲು ಆಗದೆ; ಕೊನೆಗೆ ಎರಡೂ ದಕ್ಕದೆ ತೊಳಲಾಡುವುದರಲ್ಲೇ ನನ್ನ ವ್ಯಕ್ತಿತ್ವ ರೂಪುಗೊಂಡಿತೇನೊ!

ಇದೆಲ್ಲ ಅತ್ತ ಇರಲಿ. ಅತ್ತೆಯರ ಕೊನೆಗಾಲ ನಿರ್ದಯವಾಗಿತ್ತು. ಹಳ್ಳಿ ಬಿಟ್ಟು ಎಷ್ಟೋ ವರ್ಷ ಆಗಿತ್ತು. ನನ್ನಕ್ಕ ಹಳ್ಳಿಗೆ ಹೋಗಿ ಎಲ್ಲ ಸಮಾಚಾರ ತಿಳಿದು ಬಂದು ನನಗೆ ವಿವರಿಸುತ್ತಿದ್ದಳು. ನನ್ನ ಪರವಾಗಿ ಚಿಕ್ಕಪ್ಪನ ಜೊತೆ ಜಗಳವಾಡಿ ಬಂದಿದ್ದಳು. ಅವನ ಬಗ್ಗೆ ಅವನ ಹೆಸರಲ್ಲೇ ‘ಹಳೇಚಡ್ಡಿ’ ಕಥೆ ಬರೆದಿದ್ದೆ. ಅದರಿಂದ ಕುಪಿತನಾಗಿದ್ದ ಆತ, ಆತನ ಹೆಂಡತಿ ಹಾಗೂ ಮಗ ಮೂವರೂ ಸೇರಿ ಸವಾಲು ಹಾಕಿಸಿದ್ದರು. ದಮ್ಮಿದ್ದರೆ ಅವನು ಊರಿಗೆ ಬರಲಿ; ಆಗ ನಾವು ಪಬ್ಲಿಕ್ಕಲಿ ಎಕ್ಕಡದಲ್ಲಿ ಹೊಡೆಯುತ್ತೇವೆ ಎಂದು ಜಗಳ ಮಾಡಿದ್ದರು. ನಾನು ನಿಜಕ್ಕೂ ಹೆದರಿದೆ. ನಾನು ಬರೆದುದಕ್ಕೂ ಅವರು ಅರ್ಥಮಾಡಿಕೊಳ್ಳುವುದಕ್ಕೂ ಎಷ್ಟೊಂದು ಅಂತರವಿದೆಯಲ್ಲಾ ಎಂದು ವಿಷಾದ ಪಡುತ್ತಿದ್ದೆ. ಇಬ್ಬರು ಅತ್ತೆಯರು ವೃತ್ತಿಯನ್ನು ಬಿಟ್ಟಿದ್ದರು. ನರಳುತ್ತ ಅದೇ ಗುಡಿಸಲಲ್ಲಿ ಅತ್ತ ಇತ್ತ ಬಿದ್ದಿರುತ್ತಿದ್ದರು. ಇನ್ನಿಬ್ಬರು ಅತ್ತೆಯರು ದುಡಿದು ತಂದು ಅವರೂ ಹಳ್ಳಿಸೇರಿಕೊಂಡಿದ್ದರು.