ಬರ್ಮಾದ ಚಂಡಮಾರುತ, ಚೈನಾದ ಭೂಕಂಪ, ಅಫ್ಘಾನಿಸ್ತಾನದ ಸಾವುಗಳು, ಇರಾಕಿನ ಮಾರಣ ಹೋಮದ ನಡುವೆ ಇಲ್ಲೊಂದು ಹೊಸ ವಿವಾದ ಎದ್ದಿದೆ.
http://www.smh.com.au/ffximage/2008/05/26/webhenson.jpg

ಈ ಹದಿಮೂರು ವರ್ಷದ ನಗ್ನ ಮಕ್ಕಳ ಚಿತ್ರ ನೋಡಿ. ಅದರ ಫೋಟೋ ತೆಗೆದಾತ ಬಿಲ್ ಹೆನ್ಸನ್ ಎಂಬ ವಿಶ್ವವಿಖ್ಯಾತ ಆಸ್ಟ್ರೇಲಿಯನ್ ಫೋಟೋಗ್ರಾಫರ್. ಸುಮಾರು ಇಪ್ಪತ್ತೈದು ವರ್ಷಗಳಿಂದ ಈತ ಹಲವು ತರದ ಫೋಟೋಗಳನ್ನು ತೆಗೆಯುತ್ತಾ ಬಂದಿದ್ದಾನೆ. ಆದರೆ ಹೋದ ವಾರ, ಅವನ ಒಂದು ಹೊಸ ಪ್ರದರ್ಶನವನ್ನು ಪೋಲೀಸರು ಬಂದು ಮುಚ್ಚಿಸಿದರು. ಅವನ ಹಲವು ಫೋಟೋಗಳನ್ನು ಮುಟ್ಟುಗೋಲು ಹಾಕಿಕೊಂಡು ಹೋದರು. ಚೈಲ್ಡ್ ಪ್ರೊಟೆಕ್ಷನ್ ಎಂದು ಯಾರೋ ಕೊಟ್ಟ ದೂರನ್ನು ಪೋಲೀಸರು ತನಿಖೆಗೆ ಎತ್ತಿಕೊಂಡಿದ್ದರು. ಇನ್ನೊಂದತ್ತ, ಪ್ರಧಾನಿ ಕೆವಿನ್ ರಡ್, ಯೆಮ್ಮ ಎಂಬ ರಾಜ್ಯದ ಮುಖ್ಯಮಂತ್ರಿ ಎಲ್ಲ ಈ ಚಿತ್ರಗಳನ್ನು ಛೀ ಥೂ ಎಂದು ಬೈದಾಡಿಬಿಟ್ಟರು.

http://www.smh.com.au/ffximage/2008/05/22/billhenson_wideweb__470x321,0.jpg

ಇಲ್ಲಿ ಗಲಾಟೆ ಎಬ್ಬಿಸಿರುವುದು ನಗ್ನತೆಯಲ್ಲ. ನಗ್ನತೆಯ ಪ್ರದರ್ಶನವಲ್ಲ. ಆದರೆ, ಹದಿಮೂರು ವರ್ಷದ ಚಿಕ್ಕ ಹುಡುಗಿಯನ್ನು ಸೆರೆಹಿಡಿದಿದ್ದಾನೆಂಬ ಸಂಗತಿ. ಎಳೆಯ ದೇಹಗಳ ನಗ್ನತೆಯನ್ನು, ಅಶ್ಲೀಲತೆಯನ್ನು ಗುಟ್ಟಾಗಿ ಆವಾಹಿಸುವುದರ ಬಗ್ಗೆ ಇರುವ ರೊಚ್ಚಿನ ವಾತಾವರಣದಲ್ಲಿ ಈ ಗೊಂದಲ ಎದ್ದಿದೆ.

ಚಿತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು, ಪ್ರದರ್ಶನ ನಿಲ್ಲಿಸಿದ ಪೋಲೀಸರು ಇನ್ನೂ ಗ್ಯಾಲರಿಯವರ ಮೇಲಾಗಲಿ, ಛಾಯಾಗ್ರಾಹಕನ ಮೇಲಾಗಲೀ ಇನ್ನೂ ಯಾವುದೇ ಆರೋಪ ಹೊರಿಸಿಲ್ಲ. ಲಾಯರ್ ಒಬ್ಬನ ಪ್ರಕಾರ, ಕೋರ್ಟಿನಲ್ಲಿ ಸಾಬೀತಾಗಲೂ ಯಾವುದೇ ಕೃತ್ಯಕ್ಕೂ ಎರಡು ಅಂಶಗಳು ಇರಬೇಕು. ಒಂದು ತಪ್ಪು ಕೃತ್ಯ ಮತ್ತು ಎರಡನೆಯದು ಆ ಕೃತ್ಯದ ಹಿಂದಿನ ಕೆಟ್ಟ ಮನಸ್ಸು/ಮೋಟಿವ್. ಆತನ ಪ್ರಕಾರ ಅದು ಯಾವ ಆಧಾರದ ಮೇಲೆ ಪೋಲೀಸರು ಕೋರ್ಟಿನಲ್ಲಿ ಇದನ್ನು ದುಷ್ಕೃತ್ಯ ಎಂದು ಸಾಬೀತು ಮಾಡಬಲ್ಲರೋ ಎಂದು ಉದ್ಗಾರ ತೆಗೆದಿದ್ದಾನೆ.

ಹೆನ್ಸನ್ ಚಿತ್ರಗಳ ಕಲಾತ್ಮಕತೆಯ ಮಾತೇನೇ ಇರಲಿ. ಅದು ಎಲ್ಲರಿಗೂ ಇಷ್ಟವಾಗಬಲ್ಲಂತದ್ದೇನೂ ಅಲ್ಲ. ಬಾಲ್ಯ ಕಳೆದು, ಇನ್ನೂ ಯೌವ್ವನ ಮುತ್ತಿಕೊಂಡಿರದ ಕೌಮಾರ್ಯದಲ್ಲಿರುವವರ ಲೈಂಗಿಕತೆ ಇವನ ಚಿತ್ರಗಳ ಮಾದರಿಗಳು. ಮೊದಲ ಬಾರಿಗೆ ತಮ್ಮ ಲೈಂಗಿಕತೆಯನ್ನು ಕಂಡುಕೊಳ್ಳುವಲ್ಲಿನ ಆನಂದ ಮತ್ತು ಆತಂಕವನ್ನು ಹಿಡಿದಿಡುವುದು ಅದರ ಮೂಲ ಆಶಯ. ಎಂಬತ್ತರ ದಶಕದಿಂದ ಈ ಬಗೆಯ ಚಿತ್ರಗಳನ್ನು ತೆಗೆಯುತ್ತಾ ಬಂದಿರುವ ಇವನಿಗೆ ಧಡಕ್ಕನೆ ಶನಿಕಾಟ ಶುರುವಾಗಿರುವುದು ಹಲವು ಕಲಾವಿದರ ಹುಬ್ಬೇರಿಸಿದೆ. ಕೇಟ್ ಬ್ಲಾಂಚೆಟ್ ನಂತಹವರೆಲ್ಲಾ ಈತನ ಬೆಂಬಲಕ್ಕೆ ನಿಂತಿದ್ದು ಪ್ರಧಾನಿಯನ್ನು ತೆಗಳಿದ್ದಾರೆ. ಇದ್ದಕಿದ್ದಂತೆ ಕಲೆಯ ವಿಚಾರದಲ್ಲಿ ನೂರು ವರ್ಷ ಹಿಂದಕ್ಕೆ ಹೋಗಿಬಿಟ್ಟಿರುಂತಿದೆ ಎಂದು ಇನ್ನು ಕೆಲವರು ಗೊಣಗುತ್ತಿದ್ದಾರೆ.

ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೈತಿಕತೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೇ ಇರುತ್ತವೆ. ಅವುಗಳನ್ನು ಎಲ್ಲ ದೇಶದ ಸುದ್ದಿಗಳಲ್ಲೂ ಕೇಳುತ್ತಲೇ ಇರುತ್ತೇವೆ. ಎಲ್ಲರೂ ಸಮಾಜವನ್ನು ಕಾಪಾಡುವ ಮಾತೇ ಆಡುತ್ತಿರುತ್ತಾರೆ. ಕಲಾ ಚರಿತ್ರೆಯ ನೂರಾರು ವರ್ಷಗಳ ಹಲವಾರು ಪ್ರಕರಣಗಳು ನಿಮಗೆ ನೆನಪಿರಬಹುದು. ಸಮಕಾಲೀನದಲ್ಲೂ, ಎಂ.ಎಫ್.ಹುಸೇನರ ಮೇಲಿನ ದಾಳಿಯೂ ನಿಮಗೆ ಗೊತ್ತಿರಬಹುದು. ಏನೇ ಆದರೂ, ಕಲೆಯ ನೈತಿಕತೆ ಇವೆಲ್ಲವುಗಳ ಹೊರಗುಳಿಯಬೇಕಾಗುತ್ತದೆ. ಆಗಲೇ ಸಮಾಜದ ಹಲವು ನಿಲುವುಗಳನ್ನು ಕೆಣಕಬಹುದು, ಪ್ರಶ್ನಿಸಬಹುದು. ಅವುಗಳನ್ನು ಹೊಸ ದಿಗಂತದತ್ತ ದೂಡಬಹುದು. ಇಲ್ಲದಿದ್ದರೆ ನಿಂತ ನೀರಾಗುವ ಅಪಾಯವೇ ಹೆಚ್ಚು.