ಬೇಲಿ ಪಕ್ಕ ನಿಂತು ಪಕ್ಕದ ಮನೆಯ ಡೇವಿಡ್ ಜತೆ ಮಾತಾಡುತ್ತಿದ್ದೆ. ಅವನು ಒಂದು ರೀತಿಯ ದುಗುಡದಲ್ಲಿದ್ದ. ಹೇಗಿದ್ದೀ ಎಂಬುದಕ್ಕೆ ಚಿನಕುರಳಿಯಂತೆ ಪಟಪಟ ಎನ್ನಬೇಕಾದವನು ಎಳೆದೆಳದು ಏನೋ ಇದ್ದೇನೆ ಅಂದ. ನಾವು ಈ ಮನೆಗೆ ಬಂದ ಹೊಸತರಲ್ಲಿ ಅವನು ಮತ್ತು ಅವನ ಹೆಂಡತಿ ಜಗಳವಾಡುತ್ತಿದ್ದುದು ರಾತ್ರಿ ತುಂಬಾ ಹೊತ್ತಿನವರೆಗೆ ನಮಗೆ ನಿದ್ದೆಗೊಡುತ್ತಿರಲಿಲ್ಲ. ಅಸ್ಪಷ್ಟ ಮಾತುಗಳು. ಕಿವಿಯನ್ನು ಚುರುಕುಗೊಳ್ಳಿಸುತ್ತದೆ. ಅದು ಎಷ್ಟೇ ವ್ಯರ್ಥವಾಗಿದ್ದರೂ ಕೂಡ. ಜತೆಗೆ ಏನು ತೊಂದರೆಯೋ ಎಂಬ ಸಣ್ಣ ಚಿಂತೆ ಬೇರೆ. ಕಿವಿ ಹಾಗೂ ಮನಸ್ಸಿಗೆ ಸುಸ್ತಾಗಿ ನಿದ್ದೆ ಹತ್ತುತ್ತಿತ್ತು. ಮರುದಿನ ಬೆಳಗ್ಗೆ ಅವರು ಎಂದಿನಂತೆ ಇರುತ್ತಿದ್ದರು. ರಾತ್ರಿ ಹತ್ತಿಕೊಂಡಿದ್ದ ದೆವ್ವ ಏನಿರಬಹುದು ಎಂದು ಗುಟ್ಟಾಗಿಯೇ ಉಳಿದುಬಿಡುತ್ತಿತ್ತು.

ಪ್ರಿಂಟಿಂಗ್ ಕೆಲಸ ಮಾಡುವ ಡೇವಿಡ್ ಏಳಡಿ ಹತ್ತಹತ್ತಿರದ ಆಳು. ಅದಕ್ಕೆ ಹೊಂದುವಂಥ ಮೈಗಾತ್ರ ಕೂಡ. ನೋಡಿದವರಲ್ಲಿ ಹಿಂಜರಿಕೆ ಮೂಡಿಸಬಹುದಾದ ಆಕೃತಿ. ಲೆಬನೀಸ್‌ ಜನರ ಬಗ್ಗೆ ಕೀಳಾಗಿ ಮಾತಾಡುತ್ತಾನೆ. ಅವರನ್ನು ಕಂಡರೆ ತನಗೆ ಆಗದು ಎಂದು ನೇರವಾಗಿ ಹೇಳುತ್ತಾನೆ. ಅವರನ್ನು ರೇಸಿಸ್ಟ್ ಮಾತುಗಳಿಂದ ಹೀನಾಮಾನ ಬಯ್ಯುತ್ತಾನೆ. ಅದು ಸರಿಯಲ್ಲ ಎಂದು ನಾನು ಹೇಳುವುದನ್ನು ಅವನು ಕೇಳಿಸಿಕೊಳ್ಳುವುದೇ ಇಲ್ಲ. ಆದರೆ ಈವತ್ತು ಯಾಕೋ ಸ್ವಲ್ಪ ದುಗುಡದಲ್ಲಿ ದನಿ ತಗ್ಗಿಸಿ ಮಾತಾಡುತ್ತಿದ್ದಾನೆ. ಆಗಾಗ ತಲೆ ನೇವರಿಸಿಕೊಳ್ಳುತ್ತಾನೆ. ಜತೆಗೆ ಬೇಲಿಯನ್ನು ದಿಟ್ಟಿಸಿ ಅರೆಕ್ಷಣ ಮಾತು ನಿಲ್ಲಿಸುತ್ತಾನೆ. ನಿಟ್ಟುಸಿರಿಡುತ್ತಾನೆ. ಇದು ನನಗೆ ಗೊತ್ತಿದ್ದ ಪಕ್ಕದ ಮನೆಯ ಡೇವಿಡ್ ಅಲ್ಲವೇ ಅಲ್ಲ.

ಇವನ ದೊಡ್ಡ ಮಗಳಿಗೆ ಬಾಯ್‌ಫ್ರೆಂಡ್ ಸಿಕ್ಕಾಗ ಅದನ್ನು ತುಂಬ ಖುಷಿಯಲ್ಲಿ ಹೇಳಿದ್ದ. ಆ ಖುಷಿ ಮತ್ತೊಂದು ಜೀವವನ್ನು ಆಕರ್ಷಿಸಿ ಹಿಡಿದಿಡಬಲ್ಲ ಮಗಳ ತಾಕತ್ತು, ಚಂದದ ಬಗ್ಗೆಯೋ ಅಥವಾ ಹುಡುಗ ಒಳ್ಳೆಯವನಾಗಿದ್ದು ಅವಳ ಜೀವನಕ್ಕೊಂದು ದಾರಿಯಾಯಿತೆಂದೋ ಹೇಳುವುದು ಕಷ್ಟ. ಅಥವಾ ಇಂಥದೇ ಹತ್ತಾರು ಭಾವಗಳ ಕೊಲಾಜ್ ಇರಬಹುದು. ಆದರೂ ಉತ್ಸಾಹ ಮಾತ್ರ ಪುಳಪುಳ ಅನ್ನುತ್ತಿತ್ತು. ನಂತರ ಮಗಳು ಹಾಗು ಅವಳ ನಲ್ಲ ಬೇರೆ ಮನೆ ಮಾಡುತ್ತಿದ್ದೇವೆ ಅಂದಾಗಲೂ ಹಾಗೇ ಖುಷಿಪಟ್ಟಿದ್ದ. ಈ ರೀತಿಯ ಜೀವನೋತ್ಸಾಹಕ್ಕೆ ಮದುವೆಯ ತೋರಣ ಬೇಕೆಂಬ ಒತ್ತಾಯವೇ ಇಲ್ಲ. ಇದೇ ವಿಷಯದ ನನ್ನ ಇನ್ನೊಬ್ಬ ಗೆಳೆಯನ ಬಗ್ಗೆ ಇನ್ನಾವಗಲಾದರೂ ಹೇಳುತೀನಿ. 

ಮೂರು ಮಕ್ಕಳ ತಂದೆಯಾದ ಡೇವಿಡ್‌ಗೆ ಮತ್ತೊಬ್ಬ ಪುಟ್ಟ ಮಗಳಿದ್ದಾಳೆ. ಈಗ ತಾನೆ ಹೈಸ್ಕೂಲಿಗೆ ಬಂದಿರುವ ಅವಳ ಬಗ್ಗೆ ಡೇವಿಡ್‌ಗೆ ತುಂಬಾ ಹೆಮ್ಮೆ. ಚೆನ್ನಾಗಿ ಓದುತ್ತಾಳೆ. ಕ್ಲಾಸಿನಲ್ಲಿ ಮುಂದಿದ್ದಾಳೆ. ಯಾವಾಗಲೂ ಪುಸ್ತಕ ಹಿಡಿದು ಕೂತಿರುತ್ತಾಳೆ ಎಂಬ ಹೆಗ್ಗಳಿಕೆ. ಅವಳು ಚೆನ್ನಾಗಿ ಓದಿ ಮುಂದಕ್ಕೆ ಬರುತ್ತಾಳೆ ಎಂದು ಒಳಗೊಳಗೇ ಪಡುವ ಸಂತಸ ಅವನ ಮಾತುಗಳಲ್ಲಿ ನನಗೆ ಕಾಣುತಿತ್ತು.

ಆದರೆ ಈಗ ಡೇವಿಡ್‌ನ ದುಗುಡ ತನ್ನ ಮಗನ ಬಗ್ಗೆಯಾಗಿತ್ತು. “ಹತ್ತನೇ ಕ್ಲಾಸಾಗುತ್ತಲೇ ಸ್ಕೂಲು ಬಿಟ್ಟಿದ್ದಾನೆ. ಏನು ಮಾಡುವುದಕ್ಕೂ ಉತ್ಸಾಹವಿಲ್ಲದವನಂತೆ ಇರುತ್ತಾನೆ. ಅಪ್ರೆಂಟಿಸ್‌ಶಿಪ್ ಮಾಡು ಎಂದು ಹೇಳಿದರೂ ಕೇಳುತ್ತಿಲ್ಲ. ನಾನು ಹೇಳಿದೆ ಅಂತ ಹೇಳಬೇಡ – ಯಾವಾಗಲಾದರೂ ಸಿಕ್ಕರೆ ಅವನಿಗೆ ನೀನೂ ಬುದ್ಧಿ ಹೇಳು” ಅಂದ. ನಾನು ಗೋಣಾಡಿಸಿದೆ. “ಮನೆ ಬಿಟ್ಟು ಹೋಗು ಎನ್ನುವ ಹಾಗಿಲ್ಲ. ಹಾಗೇನಾದರೂ ಆದರೆ ಕುಡಿತ ಡ್ರಗ್ಸ್ ಅಂತ ನಾಶವಾಗಿ ಹೋಗ್ತಾನೆ. ಜವಾಬ್ದಾರಿ ಅರ್ಥಮಾಡಿಸೋಕೆ ಆಗ್ತಿಲ್ಲ. ನಾನೇನು ಮಾಡಲಿ” ಅಂತ ನಿಟ್ಟುಸಿರುಬಿಟ್ಟ.

ಅಯ್ಯೋ ಬಿಡಯ್ಯ-ಒಂದೆರಡು ದಿನ ಅವನೇ ಸರಿ ಹೋಗ್ತಾನೆ. ಒಳ್ಳೆ ಹುಡುಗಾನೆ ಅಲ್ಲವ? ಯಾಕೆ ಸುಮ್ಮನೆ ಚಿಂತೆ ಮಾಡ್ತ್ಯ? ಏನು ಮಾಡ್ತಾ ಇದ್ಯ ಅಂತ ಆಗಾಗ ಕೇಳ್ತಿರು. ಅವನು ಬಯ್ದರೂ ಪರವಾಗಿಲ್ಲ ಸಹಿಸಿಕೋ. ನಮ್ಮ ಮಕ್ಕಳನ್ನ ಅಲ್ಲದೆ ಇನ್ನಾರನ್ನ ಸಹಿಸಬೇಕು ನಾವು. ಹಿಂಗೆಲ್ಲಾ ಸಮಾಧಾನ ಮಾಡಬೇಕು ಅಂತ ಅನ್ಸಿತ್ತು. ಆದರೆ, ಅವನ ದುಗುಡದ ಆಳದಲ್ಲಿ ನನಗೆ ಕಾಣೋದಕ್ಕಿಂ
ತ ಹೆಚ್ಚೇನೋ ಇದೆ ಅನ್ನಿಸಿ ಸುಮ್ಮನಾದೆ. “ಡೋಂಟ್ ವರಿ, ಹಿ ವಿಲ್ ಬಿ ಆಲ್‌ ರೈಟ್” ಅಂದೆ. “ಹೋಪ್‌ ಸೋ” ಅನ್ನುತ್ತಾ ಮನೆಯೊಳಗೆ ಕಾಲೆಳೆದುಕೊಂಡು ಹೋದ.

ಶಿಶಿರದಲ್ಲಿ ಅವರ ಮನೆಯ ಮುಂದಿರುವ ದೊಡ್ಡ ಮರದ ಅಗಲವಾದ ಎಲೆಗಳೆಲ್ಲಾ ಉದುರಿ ನಮ್ಮ ಮನೆಯ ಅಂಗಳದ ತುಂಬಾ ಮುಚ್ಚಿಕೊಳ್ಳುತ್ತದೆ. ಅದನ್ನು ಗುಡಿಸಿ ತೆಗೆಯುವುದೇ ಒಂದು ದೊಡ್ಡ ಕೆಲಸ. ಈಗೀಗ ಹಾಗೇ ತುಂಬಾ ದಿನ ಬಿಟ್ಟುಬಿಟ್ಟಿರುತ್ತೇವೆ. ಅವರ ಮನೆಯಲ್ಲಿ ನೆಟ್ಟ ಜಾಜಿ ಗಿಡದ ಬಳ್ಳಿಯೂ ಬೇಲಿಯೆಲ್ಲಾ ಹಬ್ಬಿ ನಮ್ಮತ್ತಲೂ ಹೂ ಬಿಡುತ್ತದೆ. ವಸಂತದಲ್ಲಿ ನೋಡಲು ಅದು ತುಂಬಾ ಚಂದ.