ಅವಳ ನೀಲಿ ಕಣ್ಣು ಎಷ್ಟು ಸ್ವಚ್ಛವಾಗಿದ್ದವೆಂದರೆ ಕಣ್ಣು ಹೊಳೆದಾಗ ಮುಖದಲ್ಲಿ ಜೀವಂತಿಕೆ, ಮರುಕ, ಸರಳ, ಪ್ರಾಮಾಣಿಕತೆಯ ಭಾವಗಳು ಮೂಡಿ ನೋಡಿದವರನ್ನು ಸೆಳೆಯುವಂತಿದ್ದವು. ಅಲ್ಲದೆ ಅವಳ ಮುಖಮಾತ್ರವಲ್ಲದೆ ಇಡೀ ದೇಹಕ್ಕೆ ವಿಶಿಷ್ಟವಾದೊಂದು ಲಕ್ಷಣವಿತ್ತು: ಅವಳಿಗೆ ಹದಿನೆಂಟು ವರ್ಷವಾಗಿದ್ದರೂ ಪುಟ್ಟ ಹುಡುಗಿಯ ಹಾಗೆ ಕಾಣುತಿದ್ದಳು.
ಪ್ರೊ. .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ನಾಲ್ಕನೆಯ ಅಧ್ಯಾಯ

 

ಆ ಹೊತ್ತಿಗೆ ರೂಮಿನ ಬಾಗಿಲು ಸದ್ದಿಲ್ಲದೆ ತೆರೆದುಕೊಂಡಿತು, ಹುಡುಗಿಯೊಬ್ಬಳು ಒಳಕ್ಕೆ ಬಂದಳು. ಅಂಜುತ್ತ ಸುತ್ತಲೂ ಕಣ್ಣಾಡಿಸಿದಳು. ಎಲ್ಲರೂ ಆಶ್ಚರ್ಯಪಡುತ್ತ ಅವಳನ್ನು ನೋಡಿದರು. ರಾಸ್ಕೋಲ್ನಿಕೋವ್‍ ಗೆ ಅವಳ ಗುರುತು ತಟ್ಟನೆ ಸಿಗಲಿಲ್ಲ. ಬಂದವಳು ಸೋಫ್ಯಾ ಸೆಮಯೊನೋವ್ನಾ ಮಾರ್ಮೆಲಡೋವಾ. ಅವಳನ್ನು ಅವನು ನಿನ್ನೆಯಷ್ಟೇ ಮೊದಲಬಾರಿಗೆ ನೋಡಿದ್ದ. ಆದರೆ ಎಂಥ ಹೊತ್ತಿನಲ್ಲಿ, ಎಂಥ ಸಂದರ್ಭದಲ್ಲಿ, ಎಂಥ ಉಡುಪಿನಲ್ಲಿ ನೋಡಿದ್ದನೆಂದರೆ ಬೇರೆಯದೇ ಚಿತ್ರವೊಂದು ಅವನ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡಿತ್ತು. ಅವಳ ಉಡುಪು ಬಡವರು ತೊಡುವಂಥ ಸಾದಾ ಉಡುಪು. ಎಷ್ಟು ಚಿಕ್ಕ ಪ್ರಾಯದವಳೆಂದರೆ ಇನ್ನೂ ಪುಟ್ಟ ಹುಡುಗಿಯ ಹಾಗೆ ಕಾಣುತ್ತಿದ್ದಳು. ನಡವಳಿಕೆ ಸಭ್ಯವಾಗಿ, ಮರ್ಯಾದಸ್ಥರ ನಡವಳಿಕೆಯ ಹಾಗಿತ್ತು. ಮುಖದಲ್ಲಿ ಹೊಳಪಿತ್ತು, ಆದರೂ ಅಂಜಿದವಳ ಹಾಗೆ ಕಾಣುತ್ತಿದ್ದಳು. ಮೈಯ ಮೇಲೆ ಇದ್ದದ್ದು ದಿನವೂ ತೊಡುವಂಥ ಸಾಮಾನ್ಯ ಬಟ್ಟೆ, ತಲೆಯ ಮೇಲೆ ಇದ್ದದ್ದು ಈಗಿನ ಫ್ಯಾಶನ್ನಿಗೆ ಹೊಂದದ ಹಳೆಯ ಹ್ಯಾಟು. ನಿನ್ನೆ ಅವಳ ಕಂಕುಳಲ್ಲಿದ್ದ ಛತ್ರಿ ಈಗಲೂ ಇತ್ತು. ರೂಮಿನ ತುಂಬ ಜನ ಇರುವುದನ್ನು ತಟ್ಟನೆ ಗಮನಿಸಿದವಳು ಗೊಂದಲಕ್ಕೆ ಗುರಿಯಾಗಿ ಕಳೆದುಹೋದ ಮಗುವಿನ ಹಾಗೆ ದಿಕ್ಕುತಪ್ಪಿ ಅಂಜಿ ನಿಂತಳು, ವಾಪಸ್ಸು ಹೋಗುವವಳ ಹಾಗೆ ಹಿಂದಕ್ಕೂ ತಿರುಗಿದಳು.

‘ಹೋ… ನೀನಾ?’ ರಾಸ್ಕೋಲ್ನಿಕೋವ್ ಆಶ್ಚರ್ಯದಲ್ಲಿ ಕೇಳಿ ತಾನೂ ಮುಜುಗರಪಡುತ್ತ ನಿಂತ.

ಅಮ್ಮ, ತಂಗಿ ಇಬ್ಬರೂ ಪೀಟರ್ ಪೆಟ್ರೋವಿಚ್‍ ನ ಕಾಗದದಲ್ಲಿ ‘ಸಂಶಯಾಸ್ಪದ ನಡವಳಿಕೆ’ಯ ಹುಡುಗಿಯ ಬಗ್ಗೆ ಓದಿ ತಿಳಿದಿದ್ದಾರೆ ಅನ್ನುವುದು ತಟ್ಟನೆ ನೆನಪಾಯಿತು. ನನಗೆ ಅವಮಾನ ಮಾಡುವುದಕ್ಕೇ ಅವನು ಹಾಗೆ ಬರೆದಿದ್ದಾನೆ, ನಿನ್ನೆಯಷ್ಟೇ ಮೊದಲ ಸಾರಿ ಅವಳನ್ನು ನೋಡಿದ್ದು ಎಂದು ಹೇಳಿದ್ದೆ, ಈಗ ಸ್ವತಃ ಅವಳೇ ನನ್ನ ರೂಮಿಗೆ ಬಂದಿದ್ದಾಳೆ, ಅಲ್ಲದೇ ಅವಳ ನಡವಳಿಕೆಯ ಬಗ್ಗೆ ಕಾಗದದಲ್ಲಿರುವುದು ಸುಳ್ಳು ಅಂತಲೂ ಹೇಳಿಲ್ಲ ನಾನು ಎಂಬುದೆಲ್ಲ ಅವನ ಮನಸಿನಲ್ಲಿ ಆ ಕ್ಷಣವೇ ಅಸ್ಪಷ್ಟವಾಗಿ ಮಿಂಚಿ ಹೋದವು. ಅವಳನ್ನು ಗಮನಿಸಿ ನೋಡಿದಾಗ ಈ ಹುಡುಗಿ ಎಷ್ಟೊಂದು ಅವಮಾನಕ್ಕೆ ಗುರಿಯಾಗಿದ್ದಾಳಲ್ಲಾ, ಈಗ ತಡೆಯಲಾಗದಷ್ಟು ಸಿಗ್ಗುಪಡುತ್ತಿದ್ದಾಳಲ್ಲಾ ಎಂದು ಮರುಕ ಹುಟ್ಟಿತು. ಹೆದರಿದ ಪುಟ್ಟ ಮಗುವಿನ ಹಾಗೆ ವಾಪಸ್ಸು ಓಡಿಹೋಗಲೆಂದು ಅವಳು ತಿರುಗಿದಾಗ ಅವನ ಮನಸ್ಸು ಒದ್ದಾಡಿತು.

ಹೋಗಬೇಡವೆಂದು ಅವಳನ್ನು ನೋಟದಲ್ಲೇ ತಡೆಯುತ್ತ, ‘ನೀನು ಬರುತ್ತೀಯ ಅಂತ ಅಂದುಕೊಂಡೇ ಇರಲಿಲ್ಲ,’ ಅಂದ. ‘ಪ್ಲೀಸ್, ಕೂತುಕೋ.. ಕ್ಯಾತರೀನ ಇವಾನೋವ್ನಾ ನಿನ್ನನ್ನು ಕಳಿಸಿರಬೇಕು ಅಲ್ಲವಾ? ಉಹ್ಞುಂ, ಇಲ್ಲಲ್ಲ, ಅಲ್ಲಿ,’ ಅಂದ.

ಸೋನ್ಯಾ ಒಳಕ್ಕೆ ಬಂದಾಗ ರಝುಮಿಖಿನ್ ರೂಮಿನಲ್ಲಿದ್ದ ಮೂರು ಕುರ್ಚಿಗಳಲ್ಲಿ ಬಾಗಿಲ ಪಕ್ಕದಲ್ಲೇ ಇದ್ದ ಕುರ್ಚಿಯ ಮೇಲೆ ಕೂತಿದ್ದವನು ದಾರಿ ಮಾಡಿಕೊಡಲೆಂದು ಎದ್ದು ನಿಂತಿದ್ದ. ಸೋಫಾದ ಮೇಲೆ ಸ್ವಲ್ಪ ಹೊತ್ತಿಗೆ ಮೊದಲು ಝೋಸ್ಸಿಮೋವ್ ಕೂತಿದ್ದ ಜಾಗವನ್ನು ಅವಳಿಗೆ ತೋರಿಸಿದ ರಾಸ್ಕೋಲ್ನಿಕೋವ್. ಆದರದು ತೀರ ಆಪ್ತವೆನಿಸುವ ಜಾಗ, ತಾನು ಮಲಗುವ ಸೋಫಾ ಅನ್ನಿಸಿ ಅವಳಿಗೆ ರಝುಮಿಖಿನ್ ಕೂತಿದ್ದ ಕುರ್ಚಿಯನ್ನು ತೋರಿಸಿ, ‘ನೀನು ಇಲ್ಲಿ ಬಾ,’ ಎಂದು ರಝುಮಿಖಿನ್‍ ನನ್ನು ಝೋಸಿಮೋವ್‍ ಕೂತಿದ್ದಲ್ಲಿಗೆ ಕರೆದ.

ಸೋನ್ಯಾ ಕೂತಳು, ಆದರೂ ಭಯದಲ್ಲಿ ಅವಳ ಮೈ ನಡುಗುತ್ತಿತ್ತು. ಅಂಜುತ್ತ ಅಂಜುತ್ತ ನೋಡಿದಳು, ರೂಮಿನಲ್ಲಿದ್ದ ಇನ್ನಿಬ್ಬರು ಹೆಂಗಸರ ಪಕ್ಕದಲ್ಲಿ ಹೇಗೆ ಬಂದು ಕೂತೆ ಅನ್ನುವುದು ಅವಳಿಗೇ ಗೊತ್ತಾಗಿಲ್ಲ ಅನ್ನುವುದು ತಿಳಿಯುವ ಹಾಗಿತ್ತು. ಮರ್ಯಾದಸ್ಥ ಮಹಿಳೆಯರ ಪಕ್ಕದಲ್ಲಿ ಕುಳಿತಿದ್ದೇನೆಂದು ತಿಳಿದಾಗ ಭೀತಳಾಗಿ, ತಟ್ಟನೆ ಎದ್ದುನಿಂತಳು, ಪೂರಾ ತಬ್ಬಿಬ್ಬಾಗಿ ರಾಸ್ಕೋಲ್ನಿಕೋವ್‍ ಗೆ ಹೇಳಿದಳು.

‘ನಾನು… ನಾನು… ತುಂಬ ಹೊತ್ತು ಇರಲ್ಲ… ಸಾರಿ… ತೊಂದರೆ ಕೊಡತಾ ಇದೀನಿ…’ ತಡವರಿಸಿ ತಡವರಿಸಿ ಅಂದಳು. ‘ಕ್ಯಾತರೀನ ಇವಾನೋವ್ನಾ ನನ್ನನ್ನ ಕಳಿಸಿದರು… ಬೇರೆ ಯಾರೂ ಇರಲಿಲ್ಲ ಕಳಿಸಕ್ಕೆ… ನಾಳೆ ದಿನ ಕಾರ್ಯಕ್ಕೆ ನೀವು ತಪ್ಪದೆ ಬರಬೇಕಂತೆ… ಬೆಳಗ್ಗೆ, ಪ್ರಾರ್ಥನೆಗೆ… ಮಿತ್ರೊಫನಿಯೇವ್ಸ್ಕಿ ಸಿಮಿಟ್ರಿಯಲ್ಲಿ… ಆಮೇಲೆ ನಮ್ಮ ಜೊತೆ… ಕ್ಯಾತರೀನ ಜೊತೆ… ಊಟಕ್ಕೆ… ದಯವಿಟ್ಟು ತಪ್ಪದೆ ಬನ್ನಿ… ಅಂತ’ ಅನ್ನುತ್ತ ತಡವರಿಸಿ ಮಾತು ಮುಗಿಸದೆ ಸುಮ್ಮನಾಗಿಬಿಟ್ಟಳು.

‘ಬರೋದಕ್ಕೆ ಪ್ರಯತ್ನಪಡತೇನೆ… ಖಂಡಿತ…’ ರಾಸ್ಕೋಲ್ನಿಕೋವ್ ಕೂಡ ಎದ್ದು ನಿಂತು, ತಡವರಿಸಿ, ಮಾತು ಮುಗಿಸದೆ ಸುಮ್ಮನಾದ. ‘ಪ್ಲೀಸ್, ಕೂತುಕೋ. ನಿನ್ನ ಜೊತೆ ಮಾತಾಡಬೇಕು. ನಿನಗೆ ಅರ್ಜೆಂಟು ಇದೆಯೇನೋ. ಪ್ಲೀಸ್. ಎರಡೇ ನಿಮಿಷ,’ ಅಂದ.

ರಾಸ್ಕೋಲ್ನಿಕೋವ್ ಅವಳತ್ತ ಕುರ್ಚಿಯನ್ನು ಸರಿಸಿದ. ಸೋನ್ಯಾ ಮತ್ತೆ ಕೂತಳು. ದಿಕ್ಕುತಪ್ಪಿದವಳ ಹಾಗೆ, ಅಂಜುತ್ತ ಇಬ್ಬರು ಹೆಂಗಸರತ್ತ ದೃಷ್ಟಿ ಹಾಯಿಸಿದಳು. ತಟ್ಟನೆ ತಲೆ ತಗ್ಗಿಸಿ ನೆಲ ನೋಡಿದಳು.

ಬಿಳಿಚಿದ್ದ ರಾಸ್ಕೋಲ್ನಿಕೋವ್‍ ನ ಮುಖ ಕೆಂಪಾಯಿತು. ಮೈ ನಡುಗಿದಂತಿತ್ತು. ಕಣ್ಣು ಉರಿಯುತ್ತಿದ್ದವು.

ಅಮ್ಮಾ, ಈಕೆ ಸೋಫ್ಯಾ ಸೆಮೆನೋವ್ನಾ ಮಾರ್ಮೆಲಡೋವಾ. ನಿನ್ನೆ ಅಪಘಾತ ಆಯಿತು ಅಂದೆನಲ್ಲ, ಮಾರ್ಮೆಲಡೋವ್ ಅವರ ಮಗಳು. ಈಕೆ ಬಗ್ಗೆ ನಿಮಗೆ ಆಗಲೇ ಹೇಳಿದೇನೆ,’ ಅಂದ. ಅವನ ದನಿ ದೃಢವಾಗಿತ್ತು.

ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಕಣ್ಣು ಕಿರಿದು ಮಾಡಿ ಸೋನ್ಯಾಳನ್ನು ನೋಡಿದಳು. ಸವಾಲು ಎಸೆಯುವ ಹಾಗಿದ್ದ ಮಗನ ದನಿ ಕೇಳಿ, ನೆಟ್ಟ ನೋಟವನ್ನ ನೋಡಿ ಅವಳಿಗೆ ಕಸಿವಿಸಿಯಾಗಿತ್ತು. ದುನ್ಯಾ ಬಡ ಹುಡುಗಿಯ ಮುಖದ ಮೇಲೇ ದೃಷ್ಟಿ ನೆಟ್ಟು ನೇರವಾಗಿ, ಗಂಭೀರವಾಗಿ ದಿಟ್ಟಿಸಿದಳು. ಹುಡುಗಿಯ ತಬ್ಬಿಬ್ಬನ್ನು ಗಮನಿಸಿದಳು. ತನ್ನ ಪರಿಚಯ ಮಾಡಿಕೊಡುತ್ತಿರುವುದನ್ನು ಕೇಳಿ ಸೋನ್ಯಾ ಕಣ್ಣೆತ್ತಿದಳು. ಮತ್ತಷ್ಟು ತಬ್ಬಿಬ್ಬಾದಳು.

‘ಏನಂದರೆ ಅದು… ಅದು… ಇವತ್ತು ಎಲ್ಲಾ ಹೇಗೆ ನಡೆಯಿತು? ಯಾರಾದರೂ, ಅಂದರೆ, ಪೋಲೀಸಿನವರು ಏನಾದರೂ ತೊಂದರೆ ಕೊಟ್ಟರಾ?’ ರಾಸ್ಕೋಲ್ನಿಕೋವ್ ಆತುರವಾಗಿ ಕೇಳಿದ.

‘ಇಲ್ಲಾ ಸಾರ್, ಎಲ್ಲ ಸರಿಯಾಗಿ ನಡೆಯಿತು… ಸತ್ತಿದ್ದಕ್ಕೆ ಕಾರಣ ಸ್ಪಷ್ಟವಾಗಿತ್ತು. ನಮಗೆ ಏನೂ ತೊಂದರೆ ಕೊಡಲಿಲ್ಲ ಪೋಲೀಸಿನವರು ಅಕ್ಕಪಕ್ಕದ ಮನೆಗಳವರಿಗೆ ಮಾತ್ರ ಸಿಟ್ಟು ಬಂದಿತ್ತು.’

‘ಯಾಕೆ?’

‘ಹೆಣ ತುಂಬ ಹೊತ್ತಿಂದ ಅಲ್ಲೇ ಇತ್ತಲ್ಲ… ಈಗ ಬೇಸಗೆ, ವಾಸನೆ ಬರತಾ ಇತ್ತು… ಅದಕ್ಕೇ ಇವತ್ತು ಸಾಯಂಕಾಲದ ಪ್ರಾರ್ಥನೆ ಹೊತ್ತಿಗೆ ಅವರೆಲ್ಲ ಹೆಣಾನ ತಾವೇ ಸ್ಮಶಾನಕ್ಕೆ ಸಾಗಿಸತಾರೆ. ನಾಳೆ ಬೆಳಗ್ಗೆವರೆಗೂ ಚಾಪೆಲ್‍ ನಲ್ಲಿ ಇಟ್ಟಿರತಾರೆ. ಮೊದಮೊದಲು ಕ್ಯಾತರೀನ ಇವಾನೋವ್ನ ವಿರೋಧ ಮಾಡಿದರು. ಬೇರೆ ದಾರಿ ಇಲ್ಲ ಅಂತ ಈಗ ಸುಮ್ಮನಾಗಿದಾರೆ…’

‘ಹಾಗಾದರೆ ಕಾರ್ಯ ಇವತ್ತೂ?’

‘ನೀವು ತಪ್ಪದೆ ಸಂಸ್ಕಾರಕ್ಕೆ ಬರಬೇಕು ನಾಳೆ. ಆಮೇಲೆ ನಡೆಯುವ ಕಾರ್ಯದ ಪೋಮಿನ್ಕಿ ಊಟಕ್ಕೆ ಬರಬೇಕು ಅಂತ ಬೇಡಿಕೊಂಡಿದಾರೆ.’

‘ಊಟಕ್ಕೆ ಏರ್ಪಾಟಾಗಿದೆಯಾ?’

‘ಮಾಮೂಲಿ ಊಟ. ನಿನ್ನೆ ನೀವು ಮಾಡಿದ ಸಹಾಯಕ್ಕೆ ಥ್ಯಾಂಕ್ಸ್ ಹೇಳು ಅಂದರು… ನೀವು ಸಹಾಯಮಾಡದಿದ್ದರೆ ಕಾರ್ಯ ನಡೆಸುವುದಕ್ಕೆ ಆಗತಾ ಇರಲಿಲ್ಲ.’ ಸೋನ್ಯಾಳ ತುಟಿ, ಗಲ್ಲ ತಟ್ಟನೆ ಕಂಪಿಸಿದವು. ಮನಸ್ಸು ಗಟ್ಟಿ ಮಾಡಿ ಅಳು ತಡೆದುಕೊಂಡು, ಮತ್ತೆ ನೆಲ ನೋಡುತ್ತ ನಿಂತಳು.

ಹೀಗೆ ಮಾತಾಡುತ್ತಿರುವಾಗ ರಾಸ್ಕೋಲ್ನಿಕೋವ್ ಅವಳನ್ನು ಗಮನವಿಟ್ಟು ನೋಡಿದ. ಅವಳ ಪುಟ್ಟ ಮುಖ ತೀರ ಬಡಕಲಾಗಿತ್ತು, ರಕ್ತಹೀನವಾಗಿ ಬಿಳಿಚಿತ್ತು. ಮೂಗು, ಗಲ್ಲಗಳು ಚೂಪಾಗಿದ್ದವು. ಚೆನ್ನಾಗಿದ್ದಾಳೆ ಅನ್ನುವ ಹಾಗೂ ಇರಲಿಲ್ಲ. ಆದರೆ, ಅವಳ ನೀಲಿ ಕಣ್ಣು ಎಷ್ಟು ಸ್ವಚ್ಛವಾಗಿದ್ದವೆಂದರೆ ಕಣ್ಣು ಹೊಳೆದಾಗ ಮುಖದಲ್ಲಿ ಜೀವಂತಿಕೆ, ಮರುಕ, ಸರಳ, ಪ್ರಾಮಾಣಿಕತೆಯ ಭಾವಗಳು ಮೂಡಿ ನೋಡಿದವರನ್ನು ಸೆಳೆಯುವಂತಿದ್ದವು. ಅಲ್ಲದೆ ಅವಳ ಮುಖಮಾತ್ರವಲ್ಲದೆ ಇಡೀ ದೇಹಕ್ಕೆ ವಿಶಿಷ್ಟವಾದೊಂದು ಲಕ್ಷಣವಿತ್ತು: ಅವಳಿಗೆ ಹದಿನೆಂಟು ವರ್ಷವಾಗಿದ್ದರೂ ಪುಟ್ಟ ಹುಡುಗಿಯ ಹಾಗೆ ಕಾಣುತಿದ್ದಳು. ವಯಸಿಗಿಂತ ತೀರ ಚಿಕ್ಕವಳಾಗಿ ಮಗುವಿನಂತೆ ಕಾಣುತ್ತಿದ್ದಳು. ಹಾಗಾಗಿ ಅವಳ ಚಲನವಲನ ಒಮ್ಮೊಮ್ಮೆ ತಮಾಷೆಯಾಗಿಯೂ ಕಾಣುತ್ತಿತ್ತು.

‘ಕ್ಯಾತರೀನ ಇವಾನೋವ್ನಾ ಎಲ್ಲಾನೂ ಹೇಗೆ ನಿಭಾಯಿಸಿದರು? ಜೊತೆಗೆ ಕಾರ್ಯವಾದ ಮೇಲೆ ಊಟಕ್ಕೂ ಏರ್ಪಾಟು ಮಾಡಿದ್ದಾರಲ್ಲಾ?’ ಮಾತು ಮುಂದುವರೆಸಬೇಕೆಂಬ ನಿಶ್ಚಯದಲ್ಲಿ ರಾಸ್ಕೋಲ್ನಿಕೋವ್ ಕೇಳಿದ.

‘ಕಾಫಿನ್ನು ಮಾಮೂಲಿಯದು ಸಾರ್… ಎಲ್ಲಾನೂ ಸಿಂಪಲ್ಲಾಗಿ ಮಾಡತೇವೆ… ಹಾಗಾಗಿ ದುಡ್ಡು ಜಾಸ್ತಿ ಖರ್ಚಾಗಲ್ಲ. ನಾನೂ ಕ್ಯಾತರೀನ… ಇವಾನೋವ್ನಾ ಇಬ್ಬರೂ ಲೆಕ್ಕ ಹಾಕಿದೆವು. ಊಟದ ಖರ್ಚಿಗೆ ದುಡ್ಡು ಉಳಿಯತ್ತೆ… ಊಟ ಹಾಕಲೇಬೇಕು ಅನ್ನೋದು ಕ್ಯಾತರೀನ ಇವಾನೋವ್ನಾ ಆಸೆ. ಕಷ್ಟಾನೇ… ಆದರೂ ಅವಳ ಮನಸಿನ ಸಮಾಧಾನಕ್ಕೆ… ಗೊತ್ತಲ್ಲ ನಿಮಗೆ….’

‘ಅರ್ಥ ಆಗತ್ತೆ, ಆಗತ್ತೆ… ಖಂಡಿತ… ಯಾಕೆ ರೂಮನ್ನ ಹಾಗೆ ನೋಡತಾ ಇದೀಯ? ಇದು ಹೆಣದ ಪೆಟ್ಟಿಗೆ ಥರ ಇದೆ ಅನ್ನತಿದ್ದರು ನಮ್ಮಮ್ಮ.’

‘ನಿನ್ನೆ ನೀವು ನಿಮ್ಮ ಹತ್ತಿರ ಇದ್ದ ದುಡ್ಡೆಲ್ಲ ಕೊಟ್ಟುಬಿಟ್ಟಿರಿ,’ ಸೋನ್ಯಾ ಇದ್ದಕಿದ್ದ ಹಾಗೆ ಉತ್ಕಟವಾದ ಪಿಸುದನಿಯಲ್ಲಿ ಉತ್ತರ ಕೊಟ್ಟಳು.
ಅವಳು ಮತ್ತೆ ನೆಲ ನೋಡುತ್ತಿದ್ದಳು, ಅವಳ ತುಟಿ, ಗಲ್ಲಗಳು ಮತ್ತೆ ಅದುರುತ್ತಿದ್ದವು. ರಾಸ್ಕೋಲ್ನಿಕೋವ್‍ ಕೋಣೆಯ ಬಡತನ ಅವಳ ಮನಸ್ಸನ್ನು ಘಾತಿಸಿತ್ತು. ಈಗ ಅವಳಾಡಿದ ಮಾತು ಅವಳಿಗೇ ಗೊತ್ತಾಗದ ಹಾಗೆ ಬಂದಿದ್ದವು. ಸ್ವಲ್ಪ ಹೊತ್ತು ಮೌನವಿತ್ತು. ಹೇಗೋ ಏನೋ ದುನ್ಯಾಳ ಕಣ್ಣು ಹೊಳೆದವು, ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಕೂಡ ಸ್ನೇಹಪೂರ್ವಕವಾಗಿ ಸೋನ್ಯಾಳನ್ನು ನೋಡಿದಳು.

ಅವಳು ಏಳುತ್ತಾ, ‘ರೋದ್ಯಾ, ನಾವು ಒಟ್ಟಿಗೆ ಊಟ ಮಾಡಣ. ದುನ್ಯಾ ನಡಿ ಹೋಗಣ… ರೋದ್ಯಾ ನೀನು ಸ್ವಲ್ಪ ಸುತ್ತಾಡಿಕೊಂಡು ಬಾ, ಮಲಗಿ ವಿಶ್ರಾಂತಿ ತಗೋ, ಆಮೇಲೆ ಬೇಗ ನಮ್ಮ ರೂಮಿಗೆ ಬಾ… ನಾವು ಬಂದು ನಿನಗೆ ಸುಸ್ತು ಮಾಡಿದೆವು ಅನ್ನಿಸತ್ತೆ…’ ಅಂದಳು.

‘ಹ್ಞೂಂ, ಹ್ಞೂಂ, ಬರತೇನೆ,’ ಅವನೂ ಎದ್ದು ನಿಂತು ಅವಸರ ತೋರುತ್ತ ಹೇಳಿದ. ‘ಸ್ವಲ್ಪ ಕೆಲಸ ಇದೆ, ನಿಜ ಹೇಳಬೇಕು ಅಂದರೆ…ʼ

‘ಅಂದರೆ… ಏನು? ನೀನೇ ಬೇರೆ ಎಲ್ಲೋ ಊಟ ಮಾಡತೀಯ ಅಂತಲಾ!’ ರಝುಮಿಖಿನ್ ಆಶ್ಚರ್ಯಪಟ್ಟುಕೊಂಡು ರಾಸ್ಕೋಲ್ನಿಕೋವ್‍ ನನ್ನು ನೋಡುತ್ತ , ‘ಏನಾಗಿದೆ ನಿನಗೆ?’ ಅಂದ.

‘ಹ್ಞೂಂ, ಬರತೇನೆ, ಬರತೇನೆ ನಾನೂ… ಒಂದು ನಿಮಿಷ ಇರು. ಈಗ ಇವನು ಮಾಡೋ ಕೆಲಸ ಏನೂ ಇಲ್ಲ, ಅಲ್ಲವಾ ಅಮ್ಮಾ?’

‘ಇಲ್ಲ, ಏನೂ ಇಲ್ಲ! ದ್ಮಿತ್ರೀ, ನೀನೂ ಪ್ಲೀಸ್ ನಮ್ಮ ಜೊತೆ ಊಟಕ್ಕೆ ಬಾಪ್ಪಾ!’

‘ಪ್ಲೀಸ್, ಬನ್ನಿ,’ ಅಂದಳು ದುನ್ಯಾ.

ರಝುಮಿಖಿನ್‍ ನ ಮುಖ ಮೈಯೆಲ್ಲವೂ ಖುಷಿಯಲ್ಲಿ ಬೆಳಗಿದವು. ತಲೆ ಬಾಗಿ ವಂದಿಸಿ ಆಹ್ವಾನ ಒಪ್ಪಿಕೊಂಡ. ಒಂದು ಕ್ಷಣ ಎಲ್ಲರಿಗೂ ಮುಜುಗರವಾಯಿತು.

‘ಬೈ ರೋದ್ಯಾ, ಸದ್ಯಕ್ಕೆ ಅಷ್ಟೆ. ಗುಡ್ ಬೈ ಅನ್ನಕ್ಕೆ ನನಗಿಷ್ಟ ಇಲ್ಲ. ಗುಡ್ ಬೈ ನಸ್ತಾಸ್ಯಾ… ಅಯ್ಯೋ, ಮತ್ತೆ ಅದನ್ನೇ ಅಂದೆನಲ್ಲಾ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.

ಅವಳು ಹೋಗುತ್ತ ಸೋನ್ಯಾಗೆ ಕೂಡ ತಲೆಬಾಗಿ ವಂದಿಸುವುದರಲ್ಲಿದ್ದಳು, ಹೇಗೋ ತಡೆದುಕೊಂಡಳು. ಲಗುಬಗೆಯಲ್ಲಿ ಕೋಣೆಯಿಂದಾಚೆಗೆ ನಡೆದಳು.

ದುನ್ಯಾ ತನ್ನ ಸರದಿಗೆ ಕಾಯುತ್ತಿದ್ದ ಹಾಗಿತ್ತು. ಸೋನ್ಯಾಳನ್ನು ದಾಟಿ ಹೋದ ಅಮ್ಮನ ಹಿಂದೆಯೇ ಹೋಗುತ್ತ ಹುಡುಗಿಯನ್ನು ಗಮನವಿಟ್ಟು ನೋಡುತ್ತ ಸೌಜನ್ಯಪೂರ್ವಕವಾಗಿ ಬಾಗಿ ವಂದಿಸಿದಳು. ಸೋನ್ಯಾಗೆ ಮಾತ್ರ ತೀರ ಮುಜುಗರವಾಯಿತು. ಅಂಜುತ್ತ, ಆತುರವಾಗಿ ತಲೆ ಬಾಗಿ ವಂದಿಸಿದಳು. ಅವಳ ಮುಖದಲ್ಲಿ ನೋವು ಕೂಡ ಕಾಣಿಸಿತು. ದುನ್ಯಾಳ ಸೌಜನ್ಯ, ಗಮನಗಳು ಭಾರವೆನಿಸಿ ಅವಳಿಗೆ ಹಿಂಸೆ ಕೊಡುತ್ತಿದ್ದ ಹಾಗಿತ್ತು.

‘ದುನ್ಯಾ, ಗುಡ್ ಬೈ,’ ರಾಸ್ಕೋಲ್ನಿಕೋವ್ ಬಾಗಿಲಿನಿಂದಲೇ ಕೂಗಿದ. ‘ಎಲ್ಲಿ, ನಿನ್ನ ಕೈ ತಾ,’ ಅಂದ.

‘ಬಂದ ತಕ್ಷಣವೇ ನಿನ್ನ ಕೈ ಕುಲುಕಿದೆ,’ ದುನ್ಯ ಅವನತ್ತ ತಿರುಗಿ, ಮರುಕದಿಂದ ವಿಚಿತ್ರವಾಗಿ ನೋಡುತ್ತ ಅಂದಳು.

‘ಸರಿ, ಇನ್ನೂ ಒಂದು ಸಾರಿ ಕೈ ಕುಲುಕು!’

ಅವಳ ಪುಟ್ಟ ಕೈಯನ್ನು ಬಿಗಿಯಾಗಿ ಒತ್ತಿ ಹಿಡಿದಿದ್ದ. ದುನ್ಯಾ ಪ್ರೀತಿಯಿಂದ ನಕ್ಕಳು, ಮುಖ ಕೆಂಪಾಯಿತು, ತಟ್ಟನೆ ಕೈ ಹಿಂದೆಳೆದುಕೊಂಡಳು, ಅಮ್ಮನನ್ನು ಹಿಂಬಾಲಿಸಿದಳು. ಯಾವ ಕಾರಣಕ್ಕೋ ಏನೋ ಅವಳಿಗೆ ಸಂತೋಷವಾಗಿತ್ತು.

‘ಚೆನ್ನಾಗಿತ್ತಲ್ಲವಾ!’ ಮತ್ತೆ ಕೋಣೆಯೊಳಕ್ಕೆ ಬರುತ್ತ ಸೋನ್ಯಾಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಅಂದ. ‘ಸತ್ತವರು ಶಾಂತವಾಗಿರಲಿ, ಬದುಕಿರುವವರು ಇನ್ನೂ ಬದುಕಿರಬೇಕು! ಅಲ್ಲವಾ! ಅಲ್ಲವಾ? ಸರಿ, ಅಲ್ಲವಾ?’ ಅಂದ.

ಅಷ್ಟು ಬೇಗ ಅವನ ಮುಖ ಬೆಳಗಿದ್ದು ಕಂಡು ಸೋನ್ಯಾಗೆ ಆಶ್ಚರ್ಯವಾಗಿತ್ತು. ಕೆಲವು ಕ್ಷಣಗಳ ಕಾಲ ಮೌನವಾಗಿ ನಿಂತು ಅವಳ ಮುಖ ದಿಟ್ಟಿಸಿದ. ಸತ್ತು ಹೋದ ಅವಳ ಅಪ್ಪ ಹೇಳಿದ್ದ ಎಲ್ಲ ಕಥೆ ಅವನ ಮನಸಿನಲ್ಲಿ ಒಂದು ಕ್ಷಣ ಮಿಂಚಿ ಹೋಯಿತು.

*****

ಹೊರಗೆ ಬೀದಿಗೆ ಕಾಲಿಟ್ಟ ಕ್ಷಣವೇ ಪುಲ್ಚೇರಿಯ ಅಂದಳು-‘ದೇವರು ದೊಡ್ಡವನು, ದುನ್ಯಾ! ಅವನನ್ನ ಬಿಟ್ಟು ಬಂದೆವಲ್ಲ, ಈಗ ಸ್ವಲ್ಪ ನಿರಾಳ ಅನಿಸತ್ತೆ! ನಿನ್ನೆ ರೈಲಲ್ಲಿರೋವಾಗ ಮಗನಿಂದ ದೂರ ಬಂದು ಖುಷಿಪಡತೇನೆ ಅನ್ನೋ ಯೋಚನೆ ಕೂಡ ಬಂದಿರಲಿಲ್ಲ.’

‘ಅಲ್ಲಮ್ಮಾ, ಅವನಿಗಿನ್ನೂ ತೀರ ಹುಷಾರಿಲ್ಲ ನೋಡಲಿಲ್ಲವಾ? ನಮ್ಮ ಬಗ್ಗೆ ತುಂಬ ತಲೆಕೆಡಿಸಿಕೊಂಡಿದ್ದ ಅನಿಸತ್ತೆ. ಅದಕ್ಕೇ ಅವನ ಮನಸ್ಸು ಕೆಟ್ಟಿತ್ತು. ಸ್ವಲ್ಪ ಕರುಣೆ ಇರಬೇಕಮ್ಮಾ ನಮಗೆ. ಎಷ್ಟೋ ವಿಚಾರಗಳಲ್ಲಿ ಅವನನ್ನ ಈಗ ಕ್ಷಮಿಸಬೇಕು,’ ಅಂದಳು ದುನ್ಯಾ.

‘ಅಷ್ಟೊಂದು ತಾಳ್ಮೆ ನಿನಗೇ ಇರಲಿಲ್ಲ!’ ಸ್ವಲ್ಪ ಸಿಟ್ಟಿನಲ್ಲಿ ಅಲೆಕ್ಸಾಂಡ್ರೋವ್ನಾ ತಕ್ಷಣ ಅಂದಳು. ‘ನಿಮ್ಮಿಬ್ಬರನ್ನೂ ನೋಡತಾ ಇದ್ದೆ, ದುನ್ಯಾ. ನೀನೂ ಎಲ್ಲಾ ಅವನ ಹಾಗೇ, ನೋಡಕ್ಕಲ್ಲ ಯೋಚನೇಲ್ಲಿ, ನಿಮ್ಮಿಬ್ಬರದೂ ಒಂದೇ ಥರ ಮನಸು. ಇಬ್ಬರೂ ಕೊರಗತೀರಿ, ದುಃಖಪಡತೀರಿ, ಸಿಟ್ಟು ಮಾಡಿಕೊಳ್ಳತೀರಿ, ಧಾರಾಳವಾಗೂ ಇರತೀರಿ, ಅಹಂಕಾರ ಪಡತೀರಿ. ನೀವು ಒಂದೇ ಥರ. ಅವನಿಗೆ ಸ್ವಾರ್ಥ ಇಲ್ಲವೇ ಇಲ್ಲ, ಅಲ್ಲವಾ ದುನ್ಯಾ? ಅಲ್ಲವಾ?… ಇವತ್ತು ಸಾಯಂಕಾಲ ಏನೇನಾಗತ್ತೋ ಅಂತ ಯೋಚನೆ ಮಾಡಿದರೆ ಮೈಯೆಲ್ಲ ಥಣ್ಣಗಾಗತ್ತೆ!’

‘ಯೋಚನೆ ಮಾಡಬೇಡಮ್ಮ, ಏನಾಗಬೇಕೋ ಅದು ಆಗೇ ಆಗತ್ತೆ.’

‘ದುನ್ಯಾ ಈಗ ನಮ್ಮ ಸ್ಥಿತಿ ನೋಡು! ಪೀಟರ್ ಪೆಟ್ರೊವಿಚ್ ಮದುವೆ ಬೇಡ ಅಂದರೆ ಏನು ಗತಿ?’ ಇದ್ದಕಿದ್ದ ಹಾಗೆ ಎಚ್ಚರ ತಪ್ಪಿ ಅಂದುಬಿಟ್ಟಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.

‘ಬೇಡ ಅಂದರೆ ಅವನ ಯೋಗ್ಯತೆ ಏನು ಉಳಿಯತ್ತೇ!’ ದುನ್ಯಾ ಒರಟಾಗಿ, ತಿರಸ್ಕಾರದ ದನಿಯಲ್ಲಿ ಅಂದಳು.

‘ನಾವು ಈಗಲೇ ಹೊರಟಿದ್ದು ಒಳ್ಳೆಯದಾಯಿತು,’ ಪುಲ್ಚೇರಿಯ ಹೇಳಿದಳು. ‘ಅವನು ಎಲ್ಲಿಗೋ ಹೋಗೋದಕ್ಕೆ ಆತರಪಡತಿದ್ದ. ಸ್ವಲ್ಪ ಸುತ್ತಾಡಿಕೊಂಡು ಬಂದರೆ ಅವನಿಗೇ ಒಳ್ಳೇದು. ಒಳ್ಳೇ ಗಾಳೀ ಆದರೂ ಸಿಗತ್ತೆ. ಆ ರೂಮಲ್ಲಿ ಗಾಳಿ ಆಡೋದೇ ಇಲ್ಲ… ಈ ಊರಲ್ಲಿ ಒಳ್ಳೇ ಗಾಳಿ ಎಲ್ಲಿ ಸಿಗತ್ತೆ? ದೇವರೇ, ಎಂಥಾ ಊರಪ್ಪ ಇದು? ಇಲ್ಲಿನ ಬೀದಿಗಳು ಕೂಡ ಕಿಟಕಿ ಇಲ್ಲದೆ ಇರೋ ರೂಮಿನ ಥರ ಇದಾವೆ… ಹುಷಾರೂ, ನಿನ್ನ ತುಳಿದು ಹಾಕತಾರೆ… ಏನೋ ಹೊತ್ತುಕೊಂಡು ಹೋಗತಾ ಇದಾರೆ… ಅಯ್ಯೋ, ಪಿಯಾನೋ! ಹೊತ್ತುಕೊಂಡು ಜನಾನ ದಬ್ಬಿಕೊಂಡು ಹೋಗತಾ ಇದಾರೆ… ದೇವರೇ, ಆ ಹುಡುಗೀನ ನೋಡಿದರೆ ಹೆದರಿಕೆ ಆಗತ್ತೆ…ʼ

‘ಯಾವ ಹುಡುಗಿ, ಅಮ್ಮಾ?ʼ

‘ಅದೇ ಸೋನ್ಯಾ, ಈಗ ಅಲ್ಲಿಗೆ ಬಂದಿದ್ದಳಲ್ಲಾ…ʼ

‘ಅವಳದೇನು?’

‘ನೀನು ನಂಬಿದರೆ ನಂಬು, ಬಿಟ್ಟರೆ ಬಿಡು, ಅವಳು ಒಳಕ್ಕೆ ಕಾಲಿಡತಿದ್ದ ಹಾಗೇ ಆಗಿದ್ದಕ್ಕೆಲ್ಲ ಇವಳೇನೇ ಕಾರಣ ಅಂತ ನನಗೆ ಅನ್ನಿಸಿಬಿಟ್ಟಿತು.’

‘ಕಾರಣ ಗೀರಣ ಏನೂ ಇಲ್ಲ!’ ಬೇಸತ್ತ ದನಿಯಲ್ಲಿ ಅಂದಳು ದುನ್ಯಾ. ‘ನೀನೋ ನಿನಗೆ ಅನಿಸೋದೋ, ಏನಮ್ಮಾ ಇದು! ಅವನು ಅವಳನ್ನ ನೋಡಿದ್ದೇ ನಿನ್ನೆ, ಅವಳು ಬಂದಾಗ ಅವನು ಗುರುತೂ ಹಿಡಿಯಲಿಲ್ಲ.’

‘ಅಲ್ಲಾ, ಅವಳನ್ನ ನೋಡಿ ಮನಸ್ಸು ಒಂಥರಾ ಆಯಿತು… ನೋಡತಾ ಇರು, ನಿನಗೇ ಗೊತ್ತಾಗತ್ತೆ. ಗೊತ್ತಾಗತ್ತೆ! ಅವಳು ನನ್ನ ನೋಡಿದಾಗ ಭಯ ಆಯಿತು. ನನ್ನ ಸುಮ್ಮನೆ ನೋಡಿದಳು, ಅಷ್ಟೇ. ನನಗೆ ಕೂತಿರೋದಕ್ಕೇ ಆಗಲಿಲ್ಲ. ಜ್ಞಾಪಕ ಇದೆಯಾ-ಅವನು ಅವಳನ್ನ ಪರಿಚಯ ಮಾಡಿಸಿದನಲ್ಲಾ ಆಗ. ವಿಚಿತ್ರ ಅಂದರೆ ಪೀಟರ್ ಪೆಟ್ರೋವಿಚ್ ಕೂಡ ಅವಳ ಬಗ್ಗೆ ಏನೇನೋ ಬರೆದಿದಾನೆ. ಈಗ ನೋಡಿದರೆ ಇವನೇ ಅವಳನ್ನ ನಿನಗೆ, ನನಗೆ ಎಲ್ಲಾರಿಗೂ ಪರಿಚಯ ಮಾಡಿಕೊಡತಾ ಇದಾನೆ. ಅಂದರೆ ಅವಳ ಬಗ್ಗೆ ಅವನ ಮನಸ್ಸಿನಲ್ಲಿ ಏನೋ ಇರಬೇಕು!’

‘ಅವನು ಏನು ಬರೆದರೆ ಏನಾಗತ್ತೆ! ನಮ್ಮ ಬಗ್ಗೆ ಕೂಡ ಜನ ಏನೇನೋ ಅಂದರು, ಬರೆದರು. ಮರೀಬೇಡ ಅದನ್ನ! ಅವಳು… ಒಳ್ಳೇ ಹುಡುಗಿ, ಚಂದ ಇದಾಳೆ. ಮಿಕ್ಕಿದ್ದೆಲ್ಲ ನಾನ್ಸೆನ್ಸ್.’

ರಾಸ್ಕೋಲ್ನಿಕೋವ್ ಅವಳತ್ತ ಕುರ್ಚಿಯನ್ನು ಸರಿಸಿದ. ಸೋನ್ಯಾ ಮತ್ತೆ ಕೂತಳು. ದಿಕ್ಕುತಪ್ಪಿದವಳ ಹಾಗೆ, ಅಂಜುತ್ತ ಇಬ್ಬರು ಹೆಂಗಸರತ್ತ ದೃಷ್ಟಿ ಹಾಯಿಸಿದಳು. ತಟ್ಟನೆ ತಲೆ ತಗ್ಗಿಸಿ ನೆಲ ನೋಡಿದಳು.

‘ದೇವರು ಕಾಪಾಡಲಿ ಅವಳನ್ನ!’

‘ಈ ಪೀಟರ್ ಪೆಟ್ರೊವಿಚ್ ಕೆಲಸಕ್ಕೆ ಬಾರದ ಚಾಡಿಕೋರ!’ ದುನ್ಯಾ ತಟ್ಟನೆ ಅಂದಳು.

ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮುಖ ಹಿಂಡಿದಳು. ಮಾತಿನ ಎಳೆ ಕತ್ತರಿಸಿ ಹೋಯಿತು.

*****

‘ನಿನ್ನ ಏನೋ ಕೇಳಬೇಕು,’ ಅನ್ನುತ್ತ ರಾಸ್ಕೋಲ್ನಿಕೋವ್ ಕಿಟಕಿಯ ಪಕ್ಕಕ್ಕೆ ರಾಝುಮಿಖಿನ್‍ ನನ್ನು ಕರಕೊಂಡು ಹೋದ.

‘ಹಾಗಾದರೆ, ನೀವು ಬರತೀರಿ ಅಂತ ಕ್ಯಾತರೀನ ಇವಾನೋವ್ನಾಗೆ ಹೇಳಲಾ?’ ಸೋನ್ಯಾ ಹೊರಡಲು ಆತುರ ತೋರಿದಳು.

‘ಒಂದೇ ನಿಮಿಷ, ಸೋಫ್ಯಾ ಸೆಮ್ಯೊನೋವ್ನಾ, ಅಂಥ ಗುಟ್ಟೇನೂ ಇಲ್ಲ. ನಮಗೆ ತೊಂದರೇನೂ ಆಗತಾ ಇಲ್ಲ’ ಅಂದು, ತಟ್ಟನೆ ರಝುಮಿಖಿನ್ ಕಡೆಗೆ ತಿರುಗಿ, ‘ನಿನಗೆ ಇವನು, ಅದೇ, ಏನವನ ಹೆಸರು, ಪೋರ್ಫಿರಿ ಪೆಟ್ರೋವಿಚ್ ಗೊತ್ತಾ?’ ಎಂದು ಕೇಳಿದ.

‘ಹ್ಞೂಂ ಗೊತ್ತಿದೆ. ನಮಗೆ ದೂರದ ಸಂಬಂಧ ಆಗಬೇಕು, ಯಾಕೆ ಅವನ ವಿಷಯ ಈಗ?’ ರಝುಮಿಖಿನ್ ಕುತೂಹಲದಿಂದ ಕೇಳಿದ.

‘ಅವನು ಈಗ ಈ ಕೇಸು… ಅದೇ ನಿನ್ನೆ ಮಾತಾಡತಾ ಇದ್ದೆಯಲ್ಲ ನೀನು, ಆ ಕೊಲೆ ಕೇಸು ನೋಡಿಕೊಳ್ಳುವುದಕ್ಕೆ ಅವನಿಗೆ ಹೇಳಿದಾರಂತೆ?’

‘ಹೌದು, ಅದಕ್ಕೇ?’ ರಝುಮಿಖಿನ್ ಕಣ್ಣು ಇದ್ದಕಿದ್ದ ಹಾಗೆ ಅರಳಿದವು.

‘ಅವನು ಗಿರವಿ ಇಟ್ಟವರನ್ನೆಲ್ಲ ವಿಚಾರಣೆ ಮಾಡತಿದಾನೆ. ನಾನೂ ಒಂದೆರಡು ವಸ್ತು ಗಿರವಿ ಇಟ್ಟಿದ್ದೆ-ಸಣ್ಣ ಪುಟ್ಟವು-ಅದರಲ್ಲಿ ನನ್ನ ತಂಗಿ ನಾನು ಊರಿಗೆ ಬರುವಾಗ ಕೊಟ್ಟಿದ್ದ ಉಂಗುರ, ನಮ್ಮಮ್ಮ ನನಗೆ ಕೊಟ್ಟಿದ್ದ ನಮ್ಮಪ್ಪನ ಬೆಳ್ಳಿ ಗಡಿಯಾರ ಕೂಡ ಇವೆ. ಒಟ್ಟಾಗಿ ಐದು-ಆರು ರೂಬಲ್ ಬೆಲೆಯವು, ಬೆಲೆಗಿಂತ ಹೆಚ್ಚಾಗಿ ನೆನಪಿನ ವಸ್ತುಗಳು. ಈಗ ಏನು ಮಾಡಲಿ, ಹೇಳು. ಅವೆಲ್ಲ ವಸ್ತು, ಅದರಲ್ಲೂ ನಮ್ಮಪ್ಪನ ಗಡಿಯಾರ ಹಾಗೇ ಕಳೆದೇ ಹೋಗೋದು ನನಗಿಷ್ಟ ಇಲ್ಲ. ಸ್ವಲ್ಪ ಹೊತ್ತಿಗೆ ಮುಂಚೆ ದುನ್ಯಾಳ ಗಡಿಯಾರದ ಪ್ರಸ್ತಾಪ ಬಂದಿತ್ತಲ್ಲ, ಆಗ ನನ್ನ ಮೈ ನಡುಗಿತು. ನಮ್ಮ ಅಪ್ಪನದು ಅಂತ ಉಳಿದಿರೋದು ಅದೊಂದೇ. ಅದೇನಾದರೂ ಕಳೆದರೆ ನಮ್ಮಮ್ಮನಿಗೆ ಸಹಿಸಕ್ಕಾಗಲ್ಲ. ಹೆಂಗಸರೇ ಹಾಗೆ! ನಾನೇನು ಮಾಡಲಿ ಈಗ? ಹೇಳು. ಪೋಲೀಸಿನವರಿಗೆ ಹೇಳಬೇಕು ಅಂತ ಗೊತ್ತು, ಆದರೆ ಅದಕ್ಕಿಂತ ಪೋರ್ಫಿರೆ ಹತ್ತಿರ ಹೋಗೋದು ವಾಸಿ ಅಲ್ಲವಾ, ಹ್ಞಾಂ? ನಿನಗೇನನ್ನಿಸತ್ತೆ? ಬೇಗ ಇದೊಂದು ಕೆಲಸ ಮುಗಿದರೆ ಸಾಕು. ರಾತ್ರಿ ಊಟಕ್ಕೆ ಮೊದಲು ಅಮ್ಮ ಕೇಳಿದರೂ ಕೇಳಿದಳೇ. ನೋಡತಾ ಇರು!’

‘ಪೋಲೀಸರ ಹತ್ತಿರ ಬೇಡ, ಪೋರ್ಫಿರಿಯನ್ನ ಹೇಗಾದರೂ ಸರಿ ನೋಡಬೇಕು!’ ಅಸಾಮಾನ್ಯ ಉದ್ರೇಕದಲ್ಲಿ ಹೇಳಿದ ರಝುಮಿಖಿನ್.
‘ನನಗೆ ಎಷ್ಟು ಖುಷಿಯಾಗಿದೆ, ಹೇಳಲಾರೆ! ತಡ ಯಾಕೆ? ಈಗಲೇ ಹೋಗಣ, ಇಲ್ಲೇ ನಾಕು ಹೆಜ್ಜೆ ಅಷ್ಟೆ, ಅಲ್ಲೇ ಖಂಡಿತ ಸಿಗತಾನೆ.’

‘ಓಹೋ, ನಡಿ… ಹೋಗಣ…’

‘ಅವನಿಗಂತೂ ನಿನ್ನ ನೋಡಿ ತುಂಬ, ತುಂಬ ತುಂಬ, ತುಂಬ ಖುಷಿ ಆಗತ್ತೆ! ನಿನ್ನ ಬಗ್ಗೆ ಅವನಿಗೆ ತುಂಬಾ ವಿಷಯ, ಎಷ್ಟೋ ಸಾರಿ ಹೇಳಿದೇನೆ… ನಿನ್ನೆ ಕೂಡ ಹೇಳಿದ್ದೆ. ಹೋಗಣ, ನಡಿ… ಅಂದರೆ ನಿನಗೆ ಆ ಮುದುಕಿ ಗೊತ್ತಿದ್ದಳು! ಅದಪ್ಪ ವರಸೆ! ಅದ್ಭುತ!… ಹ್ಞಾ, ಸೋಫ್ಯಾ ಇವಾನೋವ್ನಾ….’

‘ಸೋಫ್ಯಾ ಸೆಮ್ಯೊನೋವ್ನಾ,’ ರಾಸ್ಕೋಲ್ನಿಕೋವ್ ತಿದ್ದಿದ. ‘ಸೋಫ್ಯಾ ಸೆಮ್ಯೊನೋವ್ನಾ, ಇವನು ನನ್ನ ಸ್ನೇಹಿತ, ರಝುಮಿಖಿನ್, ತುಂಬ ಒಳ್ಳೆಯವನು…’

‘ಅಲ್ಲ, ನೀವು ಹೋಗೋದಾದರೆ…’ ಸೋನ್ಯಾ ರಝುಮಿಖಿನ್‍ ನನ್ನು ಕಣ್ಣೆತ್ತಿಯೂ ನೋಡದೆ ಮಾತಾಡಲು ಪ್ರಯತ್ನಪಟ್ಟು, ಇನ್ನೂ ಹೆಚ್ಚು ಮುಜುಗರಪಟ್ಟಳು.

‘ನಡಿ, ಹಾಗಾದರೆ!’ ರಾಸ್ಕೋಲ್ನಿಕೋವ್ ತೀರ್ಮಾನ ಮಾಡಿದ. ‘ಸೋಫ್ಯಾ ಸೆಮ್ಯೊನೋವ್ನಾ ಇವತ್ತು ನಿಮ್ಮ ಮನೆಗೆ ಬರತೇನೆ, ನಿಮ್ಮ ಮನೆ ಎಲ್ಲಿ ಅಂತ ಹೇಳಿ.’

ಅವನ ಮಾತು ಸ್ಪಷ್ಟವಾಗಿಯೇ ಇತ್ತು, ಆದರೂ ಆತುರದಲ್ಲಿರುವವನ ಹಾಗೆ, ಅವಳ ಕಣ್ಣು ತಪ್ಪಿಸಿ ಮಾತಾಡಿದ. ಮನೆಯ ವಿಳಾಸ ಹೇಳುತ್ತ ಸೋನ್ಯ ನಾಚಿದಳು. ಎಲ್ಲರೂ ಒಟ್ಟಿಗೆ ಹೊರಟರು.

‘ಬಾಗಿಲಿಗೆ ಬೀಗ ಹಾಕಲ್ಲವಾ?’ ರಝುಮಿಖಿನ್ ಮೆಟ್ಟಿಲಿಳಿಯುತ್ತ ಕೇಳಿದ.

‘ಉಹ್ಞೂಂ. ಯಾವತ್ತೂ ಹಾಕಿಲ್ಲ! ಬೀಗ ಖರೀದಿ ಮಾಡಬೇಕು ಅಂತ ಎರಡು ವರ್ಷದಿಂದ ಅಂದುಕೊಳ್ಳತಾನೇ ಇದೇನೆ’ ಅಂದ. ಸೋನ್ಯಾ ಕಡೆಗೆ ತಿರುಗಿ, ನಗುತ್ತಾ ‘ಬೀಗ ಹಾಕಬೇಕಾದಂಥದ್ದು ಏನೂ ಇಲ್ಲದವರೇ ನಿಜವಾಗಿ ಸುಖಿಗಳು, ಅಲ್ಲವಾ?’ ಅಂದ.
ಹೊರಗೆ ಗೇಟಿನ ಹತ್ತಿರ ನಿಂತರು.

‘ನೀವು ಬಲಗಡೆಗೆ ಹೋಗುತಿದ್ದೀರಾ? ಅಂದಹಾಗೆ ನಮ್ಮ ಮನೆ ಹೇಗೆ ಪತ್ತೆ ಮಾಡಿದಿರಿ?’ ಬೇರೆ ಇನ್ನೇನೋ ವಿಷಯ ಮಾತಾಡುವವನ ದನಿಯಲ್ಲಿ ಕೇಳಿದ. ಅವಳ ಸ್ವಚ್ಛ ಶಾಂತ ಕಣ್ಣನ್ನು ನೋಡಬೇಕು ಅನಿಸುತ್ತಿತ್ತು, ಆದರೆ ಯಾಕೋ ಅವಳ ಕಣ್ಣು ನೋಡಲು ಆಗುತ್ತಲೇ ಇರಲಿಲ್ಲ.

‘ನಿನ್ನೆ ಪೋಲ್ಯಾಗೆ ನಿಮ್ಮ ವಿಳಾಸ ಹೇಳಿದ್ದಿರಿ.’

‘ಪೋಲ್ಯಾ? ಹ್ಞಾ, ಹೌದು. ಪೋಲ್ಯಾ… ಪುಟ್ಟ ಹುಡುಗಿ, ನಿಮ್ಮ ತಂಗೀನಾ ಅವಳು? ಅವಳಿಗೆ ನಮ್ಮ ಮನೆ ವಿಳಾಸ ಹೇಳಿದ್ದೆನಾ?’

‘ಅಂದರೇ, ನಿಮಗೆ ಮರೆತು ಹೋಯಿತಾ?’

‘ಉಹ್ಞೂಂ… ನೆನಪಿದೆ…’

‘ಅದಕ್ಕೆ ಮೊದಲೇನೂ ನಮ್ಮಪ್ಪ ನಿಮ್ಮ ಬಗ್ಗೆ ಹೇಳಿದ್ದರು… ನಿಮ್ಮ ಪೂರ್ತಿ ಹೆಸರು ಗೊತ್ತಿರಲಿಲ್ಲ, ಅಷ್ಟೆ. ನಮ್ಮಪ್ಪನಿಗೂ ಗೊತ್ತಿರಲಿಲ್ಲ. ನಿನ್ನೆ ನಿಮ್ಮ ಹೆಸರು ತಿಳೀತು. ಇವತ್ತು ಕೇಳಿಕೊಂಡು ಬಂದೆ… ರಾಸ್ಕೋಲ್ನಿಕೋವ್ ಅವರ ಮನೆ ಎಲ್ಲಿ ಅಂತ… ನೀವೂ ನಮ್ಮ ಹಾಗೇನೇ ಬಾಡಿಗೆಯ ಮನೆಯಲ್ಲಿ ಬಾಡಿಗೆ ಕೋಣೆಯಲ್ಲಿದ್ದೀರಿ ಅಂತ ಗೊತ್ತಿರಲಿಲ್ಲ… ಬೈ… ಸಾರ್. ಕ್ಯಾತರೀನ ಇವಾನೋವ್ನಾ ಅವರಿಗೆ ಹೇಳತೇನೆ…’
ಕೊನೆಗೂ ಪಾರಾದೆ ಎಂದು ಅವಳಿಗೆ ಭಯಂಕರ ಸಂತೋಷವಾಗಿತ್ತು. ನೆಲ ನೋಡುತ್ತ ಬೇಗ ಬೇಗ ಹೆಜ್ಜೆ ಹಾಕಿದಳು. ಆದಷ್ಟೂ ಬೇಗ ಅವರ ನೋಟದಿಂದ ದೂರವಾಗಬೇಕು, ಹೇಗಾದರೂ ಸರಿ, ಆದಷ್ಟೂ ಬೇಗ ಇಪ್ಪತ್ತು ಹೆಜ್ಜೆನಡೆದು ಆ ಮೂಲೆಯಲ್ಲಿ ಬಲಕ್ಕೆ ತಿರುಗಬೇಕು, ಆಮೇಲೆ ಕೊನೆಗೂ ಒಬ್ಬಳೇ ನಡೀತಾ, ಬೇಗ ಬೇಗ ಹೋಗತಾ, ಏನೂ ನೋಡದೆ, ಯಾವುದಕ್ಕೂ ಗಮನ ಕೊಡದೆ, ಅವನು ಆಡಿದ ಒಂದೊಂದೂ ಮಾತು ಒಂದೊಂದೂ ಸಂದರ್ಭ ನೆನೆಯಬೇಕು, ಯಾವತ್ತೂ, ಯಾವತ್ತೂ ಅವಳಿಗೆ ಹೀಗೆ ಇಂಥದೆಲ್ಲ ಅನಿಸಿರಲಿಲ್ಲ. ಹೊಸ ಲೋಕವೊಂದು ಅಸ್ಪಷ್ಟವಾಗಿ, ನಿಗೂಢವಾಗಿ ಅವಳ ಆತ್ಮಕ್ಕೆ ಬಂದಿಳಿದಿತ್ತು. ರಾಸ್ಕಲ್ನಿಕೋವ್ ಸ್ವತಃ ತಾನೇ ತನ್ನ ಮನೆಗೆ ಬರುತ್ತೇನೆಂದು ಹೇಳಿದ್ದು ಇದ್ದಕಿದ್ದ ಹಾಗೆ ನೆನಪಿಗೆ ಬಂದಿತು. ಇವತ್ತೇನೋ, ಈಗಲೇನೋ!

‘ಇವತ್ತು ಮಾತ್ರ ಬರೋದು ಬೇಡ, ಪ್ಲೀಸ್!’ ಯಾರನ್ನೋ ಯಾಚಿಸುತ್ತಿರುವ ಭಯಗೊಂಡ ಮಗುವಿನ ಹಾಗೆ ತನ್ನೊಳಗೇ ಗೊಣಗಿಕೊಂಡಳು. ಅವಳ ಎದೆ ಕುಸಿಯುತ್ತಿತ್ತು. ‘ನನ್ನ ಆ ರೂಮಿಗೆ ಬಂದರೆ… ಅವನು ನೋಡತಾನೆ… ಅಯ್ಯೋ ದೇವರೇ!’ ಅಂದುಕೊಂಡಳು.

ಅವಳ ಮೇಲೇ ಕಣ್ಣಿಟ್ಟು ಅವಳ ಬೆನ್ನ ಹಿಂದೆಯೇ ಬರುತ್ತಿದ್ದ ಅಪರಿಚಿತನೊಬ್ಬ ಅವಳಿಗೆ ಆ ಹೊತ್ತಿನಲ್ಲಿ ಗಮನಕ್ಕೆ ಬರುವುದು ಸಾಧ್ಯವಿರಲಿಲ್ಲ. ಅವಳು ಗೇಟಿನ ಹತ್ತಿರ ಬಂದಾಗಲಿಂದ ಅವಳ ಬೆನ್ನು ಹತ್ತಿದ್ದ. ಆಕೆ, ರಝುಮಿಖಿನ್, ರಾಸ್ಕೋಲ್ನಿಕೋವ್ ಮೂವರೂ ಗೇಟಿನ ಹತ್ತಿರ ಒಂದೆರಡು ಮಾತಾಡುವುದಕ್ಕೆ ಫುಟ್‍ ಪಾತಿನ ಮೇಲೆ ನಿಂತಾಗ ಆ ಅಪರಿಚಿತ ಅವರನ್ನು ಬಳಸಿಕೊಂಡು ಹೆಜ್ಜೆ ಹಾಕಿದ್ದ. ಸೋನ್ಯಾ ಹೇಳಿದ ‘ರಾಸ್ಕೋಲ್ನಿಕೋವ್ ಎಲ್ಲಿರತಾರೆ ಅಂತ ಕೇಳಿದೆ,’ ಎಂಬ ಮಾತು ಅಕಸ್ಮಾತ್ ಅವನ ಕಿವಿಗೆ ಬಿದ್ದು ಬೆಚ್ಚಿದ್ದ. ಆ ಮೂವರನ್ನು, ವಿಶೇಷವಾಗಿ ರಾಸ್ಕೋಲ್ನಿಕೋವ್‍ ನನ್ನು ಚುರುಕಾಗಿ ಗಮನಿಸಿದ. ಸೋನ್ಯಾ ಅವನಿಗೇ ಆ ಮಾತು ಹೇಳುತ್ತಿದ್ದಳು. ಆಮೇಲೆ ಆ ಮನೆಯನ್ನು ಗಮನಿಸಿ ನೋಡಿದ. ಇದೆಲ್ಲ ಅರ್ಧ ಕ್ಷಣದಲ್ಲಿ ನಡೆದಿತ್ತು. ತನ್ನ ಕುತೂಹಲ ಅವರ ಗಮನ ಸೆಳೆಯಬಾರದೆಂದು ಆ ಅಪರಿಚಿತ ಅವರನ್ನು ದಾಟಿ ಮುಂದೆ ಬಂದು, ಯಾರನ್ನೋ ಕಾಯುತ್ತಿರುವ ಹಾಗೆ ಹೆಜ್ಜೆಯ ವೇಗ ಕಡಿಮೆ ಮಾಡಿ ನಡೆಯುತ್ತಿದ್ದ. ಅವನು ಕಾಯುತ್ತಿದ್ದದ್ದು ಸೋನ್ಯಾ ಬರಲೆಂದು. ಗುಡ್ ಬೈ ಹೇಳಿಕೊಳ್ಳುತ್ತಿದ್ದರು, ಸೋನ್ಯಾ ಮನೆಗೆ ಹೊರಡುವುದರಲ್ಲಿದ್ದಳು.

‘ಎಲ್ಲಿದೆ ಅವಳ ಮನೆ? ಇವಳನ್ನ ಎಲ್ಲೋ ನೋಡಿದ್ದೇನಲ್ಲಾ, ಕಂಡು ಹಿಡಿಯಬೇಕು,’ ಅಂದುಕೊಳ್ಳುತ್ತ ಅವಳ ಮುಖ ನೆನಪಿಗೆ ತಂದುಕೊಂಡ.

ಬೀದಿಯ ತಿರುವಿಗೆ ಬಂದವನು ರಸ್ತೆಯನ್ನು ದಾಟಿ ಇನ್ನೊಂದು ಬದಿಗೆ ಹೋಗುತ್ತ ಹಿಂದಿರುಗಿ ನೋಡಿದ. ಸೋನ್ಯಾ ಅವನ ಹಿಂದೆಯೇ ಅದೇ ದಿಕ್ಕಿನಲ್ಲೇ ಬರುತ್ತಿದ್ದಳು, ಯಾವುದರ ಬಗ್ಗೆಯೂ ಅವಳಿಗೆ ಗಮನವಿರಲಿಲ್ಲ. ಮೂಲೆಗೆ ಬಂದವಳು ಅವನಿದ್ದ ಬೀದಿಗೇ ತಿರುಗಿದಳು,ಅವನು ಮತ್ತೊಂದು ಬದಿಯ ಫುಟ್‍ ಪಾತಿನ ಮೇಲೆ ಅವಳನ್ನು ಹಿಂಬಾಲಿಸಿದ. ಅವನು ಐವತ್ತು ಹೆಜ್ಜೆ ನಡೆದು ರಸ್ತೆ ದಾಟಿ, ಸೋನ್ಯಾ ನಡೆಯುತ್ತಿದ್ದ ಫುಟ್ ಪಾತಿಗೇ ಬಂದು, ಅವಳ ಬೆನ್ನ ಹಿಂದೆಯೇ ಐದು ಹೆಜ್ಜೆ ದೂರದಲ್ಲಿ ಹೆಜ್ಜೆ ಹಾಕಿದ.

ಅವನಿಗೆ ಸುಮಾರು ಐವತ್ತು ವರ್ಷ. ಮಾಮೂಲಿಗಿಂತ ಸ್ವಲ್ಪ ಎತ್ತರವಾಗಿದ್ದ. ಸ್ಥೂಲ ಕಾಯ, ವಿಶಾಲವಾದ ಇಳಿಜಾರು ಭುಜ, ಹಾಗಾಗಿ ಬೆನ್ನು ಸ್ವಲ್ಪ ಬಾಗಿದ ಹಾಗೆ ಕಾಣುತ್ತಿತ್ತು. ಬೆಲೆಬಾಳುವ ಫ್ಯಾಶನ್ ಉಡುಗೆ ತೊಟ್ಟಿದ್ದ. ಜಮೀನ್ದಾರನ ಗತ್ತು ಅವನಿಗಿತ್ತು. ಕೈಯಲ್ಲಿ ವಾಕಿಂಗ್ ಸ್ಟಿಕ್ಕು ಇತ್ತು. ಹೆಜ್ಜೆಗೊಮ್ಮೆ ಅದನ್ನು ಫುಟ್ಟ್‌ ಪಾತಿನ ಮೇಲೆ ಕುಟ್ಟಿಕೊಂಡು ನಡೆಯುತ್ತಿದ್ದ. ಕೈಯ ಗ್ಲೌಸ್ ಹೊಸದಾಗಿ ಕಾಣುತಿದ್ದವು. ಮುಖ ಅಗಲವಾಗಿತ್ತು, ಎದ್ದು ಕಾಣುವ ಕೆನ್ನೆಮೂಳೆಗಳು ಚಂದವಾಗಿ ಕಾಣುತ್ತಿದ್ದವು. ಪೀಟರ್ಸ್‍ಬರ್ಗ್‍ ಜನರಲ್ಲಿ ಸಾಮಾನ್ಯವಾಗಿ ಕಾಣದಂಥ ಬಣ್ಣ ಅವನದ್ದು. ಹೊಂಬಣ್ಣದ ತಲೆಗೂದಲು ಇನ್ನೂ ದಟ್ಟವಾಗಿದ್ದವು. ಅಲ್ಲಲ್ಲಿ ನೆರೆತ ಹಾಗೆ ಕಾಣುತ್ತಿದ್ದವು. ಗುದ್ದಲಿಯಾಕಾರದ ಅವನ ಗಡ್ಡವೂ ದಟ್ಟವಾಗಿತ್ತು, ತಲೆಗೂದಲಿಗಿಂತ ಸ್ವಲ್ಪ ತೆಳು ಬಣ್ಣದ್ದಾಗಿತ್ತು. ತೆಳು ನೀಲಿ ಬಣ್ಣದ ಕಣ್ಣಿನಲ್ಲಿ ತಣ್ಣನೆಯ ನಿಶ್ಚಲ ಯೋಚನಾಮಗ್ನ ನೋಟವಿತ್ತು. ತುಟಿ ಕೆಂಪಾಗಿತ್ತು. ಒಟ್ಟಾಗಿ ಅವನು ತನ್ನ ವಯಸಿಗಿಂತ ಕಿರಿಯವನ ಹಾಗೆ ಕಾಣುತ್ತಿದ್ದ, ಆರೋಗ್ಯ, ಮೈಕಟ್ಟು ಉಳಿಸಿಕೊಂಡ ಮನುಷ್ಯನ ಹಾಗೆ ಕಾಣುತ್ತಿದ್ದ.

ಸೋನ್ಯಾ ಕೆನಾಲ್ ಹತ್ತಿರ ಬಂದಾಗ ಫುಟ್ ಪಾತಿನ ಮೇಲೆ ಅವರಿಬ್ಬರೇ ಇದ್ದರು. ಅವಳನ್ನು ನೋಡುತ್ತ ತುಂಬ ವಿಷಾದದಲ್ಲಿದ್ದಾಳೆ, ಅನ್ಯಮನಸ್ಕಳಾಗಿದ್ದಾಳೆ ಎಂಬುದನ್ನು ಗಮನಿಸಿದ. ಮನೆಗೆ ತಲುಪಿ ಗೇಟಿನೊಳಕ್ಕೆ ಹೆಜ್ಜೆ ಹಾಕಿದಳು. ಆಶ್ಚರ್ಯಪಟ್ಟವನ ಹಾಗೆ ಅವನೂ ಅವಳನ್ನು ಹಿಂಬಾಲಿಸಿದ. ಅಂಗಳಕ್ಕೆ ಕಾಲಿಟ್ಟು, ಬಲದ ಮೂಲೆಯತ್ತ ತಿರುಗಿದಳು, ಮೆಟ್ಟಿಲು ಏರಿದಳು. ‘ಹಾ!’ ಅಂದುಕೊಂಡ ಅಪರಿಚಿತ ಅವಳ ಹಿಂದೆಯೇ ತಾನೂ ಮೆಟ್ಟಿಲೇರಿದ. ಆಗಷ್ಟೇ ಸೋನ್ಯಾ ಅವನನ್ನು ಗಮನಿಸಿದಳು. ಅವಳು ಮೂರನೆಯ ಮಹಡಿಗೆ ಹೋಗಿ ಒಂಬತ್ತನೆಯ ನಂಬರಿನ ಮನೆಯ ಬಾಗಿಲು ತಟ್ಟಿದಳು. ‘ಕಾಪರ್ನೌಮೋವ್, ದರ್ಜಿ’ ಎಂದು ಬಾಗಿಲ ಮೇಲೆ ಬರೆದಿತ್ತು. ಮತ್ತೊಮ್ಮೆ ಆಶ್ಚರ್ಯದಲ್ಲಿ ‘ಹಾ!’ ಎಂದು ಉದ್ಗರಿಸಿದ ಅಪರಿಚಿತ. ಆಕಸ್ಮಿಕವನ್ನು ಕಂಡ ಅಚ್ಚರಿ ಅದು. ಅವನು ಎಂಟನೆಯ ನಂಬರಿನ ಪಕ್ಕದ ಮನೆಯ ಬಾಗಿಲು ತಟ್ಟಿದ.. ಎರಡೂ ಬಾಗಿಲು ಆರೇಳು ಹೆಜ್ಜೆಗಳ ಅಂತರದಲ್ಲಿದ್ದವು.

‘ನೀವು ಕಾಪರ್ನೌಮೋವ್ ಮನೆಯಲ್ಲಿದ್ದೀರಾ!ʼ ಸೋನ್ಯಾಳನ್ನು ನೋಡಿ ನಗುತ್ತ ಕೇಳಿದ. ‘ನಿನ್ನೆ ತಾನೇ ಅವರು ನನ್ನ ವೇಸ್ಟ್ ಕೋಟು ರಿಪೇರಿ ಮಾಡಿಕೊಟ್ಟರು. ನಾನು ನಿಮ್ಮ ಪಕ್ಕದ ಮನೆಯಲ್ಲಿ, ಮೇಡಂ ರೆಸ್ಸ್ಲಿಚ್ ಗೆರ್ಟ್ಯೂಡ್ ಕಾರ್ಲೋವ್ನ ಅವರ ಮನೆಯಲ್ಲಿದೇನೆ. ಎಷ್ಟು ವಿಚಿತ್ರ, ಅಲ್ಲವಾ!’ ಅಂದ.

ಸೋನ್ಯಾ ಈಗ ಅವನನ್ನು ಗಮನಿಸಿ ನೋಡಿದಳು.

‘ನಾವು ಅಕ್ಕಪಕ್ಕದ ಮನೆಯವರು, ನಾನು ಈ ಊರಿಗೆ ಬಂದು ಮೂರು ದಿನ ಆಯಿತು ಅಷ್ಟೇ. ಗುಡ್‍ ಬೈ ಮೇಡಂ.’ ಖುಷಿಯಾಗಿ ಅಂದ ಅವನು.

ಸೋನ್ಯಾ ಉತ್ತರ ಕೊಡಲಿಲ್ಲ. ಬಾಗಿಲು ತೆರೆಯಿತು. ಅವಳು ಒಳಕ್ಕೆ ತನ್ನ ಕೋಣೆಗೆ ಜಾರಿಕೊಂಡಳು ಯಾಕೋ ನಾಚಿಕೆ ಅನಿಸುತ್ತಿತ್ತು, ದಿಗಿಲಾಗುತ್ತಿತ್ತು.

*****

ಪೋರ್ಫಿರಿಯನ್ನು ಕಾಣಲು ಹೋಗುತ್ತಿರುವಾಗ ರಝುಮಿಖಿನ್ ತುಂಬ ಉತ್ಸಾಹಿತನಾಗಿದ್ದ.

‘ತುಂಬ ಒಳ್ಳೇದಾಯಿತು, ಬ್ರದರ್. ನನಗಂತೂ ಸಂತೋಷ, ತುಂಬಾ ಸಂತೋಷ!’ ಎಂದು ಮತ್ತೆ ಮತ್ತೆ ಹೇಳಿದ.

‘ಅಷ್ಟೊಂದು ಸಂತೋಷಪಡುವುದಕ್ಕೆ ಏನಿದೆ?’ ರಾಸ್ಕೋಲ್ನಿಕೋವ್ ಮನಸಿನಲ್ಲೇ ಕೇಳಿಕೊಂಡ.

‘ನೀನು ಆ ಮುದುಕಿ ಹತ್ತಿರ ಅಡ ಇಟ್ಟಿದ್ದು ಗೊತ್ತೇ ಇರಲಿಲ್ಲ ನನಗೆ. ಮತ್ತೆ… ಮತ್ತೆ… ಬಹಳ ದಿನ ಆದವಾ ಅಡವಿಟ್ಟು?’
(‘ಎಂಥಾ ಪೆದ್ದ!’)

‘ಯಾವಾಗಾ ಅಂದರೇ…’ ರಾಸ್ಕೋಲ್ನಿಕೋವ್ ನೆನಪು ಮಾಡಿಕೊಳ್ಳುತ್ತ ಮಾತು ನಿಲ್ಲಿಸಿದ. ‘ಅಲ್ಲಿಗೆ ಹೋಗಿದ್ದು, ಅವಳು ಸಾಯೋದಕ್ಕೆ ಮೂರು ದಿನ ಮೊದಲು ಅಂತ ಕಾಣತ್ತೆ. ಹಾಗಂತ ಈಗಲೇನೇ ಬಿಡಿಸಿಕೊಳ್ಳಲ್ಲ,’ ಅಡವಿಟ್ಟ ವಸ್ತುಗಳ ಬಗ್ಗೆ ವಿಶೇಷ ಆಸಕ್ತಿ ಇರುವವನ ಹಾಗೆ ಆತುರವಾಗಿ ಹೇಳಿ. ‘ನನ್ನ ಹತ್ತಿರ ಇನ್ನೊಂದೇ ಒಂದು ಬೆಳ್ಳಿಯ ರೂಬಲ್ ನಾಣ್ಯ ಇದೆ ಅಷ್ಟೇ. ನಿನ್ನೆ ಸನ್ನಿ ಹಿಡಿದಿತ್ತಲ್ಲ, ಅದಕ್ಕೇ ಹೀಗೆ…ʼ ವಿಶೇಷ ಮಹತ್ವದ್ದು ಅನ್ನುವ ಹಾಗೆ ಸನ್ನಿ ಅನ್ನುವುದನ್ನು ಹೇಳಿದ್ದ.

‘ಹ್ಞಾ, ಹೌದು, ಹೌದು’ ಎಲ್ಲಾ ಗೊತ್ತಿರುವವನ ಹಾಗೆ ರಝುಮಿಖಿನ್ ಹೂಂಗುಟ್ಟಿದ. ‘ಅದಕ್ಕೇ ನೀನು… ಆವಾಗ ಹಾಗೆ ಆಡಿದೆ… ಗೊತ್ತಾ? ನೀನು ಯಾವುದೋ ಉಂಗುರ, ಸರ ಅಂತ ಅನ್ನತಿದ್ದೆ ನಿನಗೆ ಸನ್ನಿ ಹಿಡಿದಾಗ! ಹೌದು ಹೌದು… ಎಲ್ಲಾ ಕ್ಲಿಯರಾಯಿತು, ಈಗ,’ ಅಂದ.

(ಹಾಗಾದರೆ ಈ ವಿಚಾರ ಅವರ ಮಧ್ಯೆ ಹರಡಿದೆ. ಇಗೋ ಇವನು ನನಗಾಗಿ ಶಿಲುಬೆ ಹತ್ತಕ್ಕೂ ತಯಾರು. ಆದರೂ ಎಲ್ಲಾ ಸ್ಪಷ್ಟವಾಯಿತು ಅಂತ ಖುಷಿಪಡತಿದಾನೆ. ಉಂಗುರ, ಸರ ಅನ್ನೋ ಮಾತೆಲ್ಲ ಸನ್ನಿ ಹಿಡಿದಾಗ ಯಾಕೆ ಆಡಿದೆ ಅನ್ನುವುದು ಈಗ ಅವರಿಗೆಲ್ಲ ಸ್ಪಷ್ಟವಾಗಿದೆ…’)

‘ಅವನಿರತಾನಾ?’ ರಾಸ್ಕೋಲ್ನಿಕೋವ್ ಗಟ್ಟಿಯಾಗಿ ಕೇಳಿದ.

‘ಇರತಾನೆ, ಇರತಾನೆ. ಅವನು ಒಳ್ಳೇವನು, ಬ್ರದರ್. ನೀನೇ ನೋಡತೀಯಲ್ಲ! ಸ್ವಲ್ಪ ವಿಚಿತ್ರ ಅನ್ನಿಸತಾನೆ, ಹಾಗಂತ ಲೌಕಿಕ ಗೊತ್ತಿಲ್ಲದವನಲ್ಲ. ಬೇರೆ ಥರದಲ್ಲಿ ವಿಚಿತ್ರ ಅಷ್ಟೆ. ಜಾಣ, ಪೆದ್ದ ಅಂತೂ ಖಂಡಿತ ಅಲ್ಲ.. ಅವನು ಯೋಚನೆ ಮಾಡೋ ರೀತಿ ಮಾತ್ರ ಬೇರೆ.. ಯಾರನ್ನೂ ನಂಬದ, ವಿಚಾರವಾದಿ ಸಿನಿಕ… ಜನಕ್ಕೆ ಕೈಕೊಡೋದು, ಅಥವಾ ಜನರನ್ನ ಮರುಳುಮಾಡೋದು ಅವನಿಗಿಷ್ಟ. ಹಳೇ ವಿಧಾನದಲ್ಲಿ ಕೆಲಸಮಾಡೋನು… ಆದರೆ ಮಾತ್ರ ಒಳ್ಳೆಯ ಕಸುಬುದಾರ… ಹೋದ ವರ್ಷ ಒಂದು ಕೊಲೆ ಕೇಸು, ಯಾವ ಸುಳಿವೂ ಉಳಿದಿರಲಿಲ್ಲ ಅಂಥಾದ್ದನ್ನ ಬಿಡಿಸಿದ. ತುಂಬ, ತುಂಬ ಕಷ್ಟದ ಕೇಸು ಅದು. ನಿನ್ನ ಪರಿಚಯ ಮಾಡಿಕೊಳ್ಳಬೇಕು ಅಂತ ಅವನ ಆಸೆ.’

‘ಯಾಕೆ?’

‘ಹಾಗಲ್ಲ… ಏನಂದರೆ… ಇತ್ತೀಚೆಗೆ ನಿನಗೆ ಹುಷಾರಿರಲಿಲ್ಲವಲ್ಲ, ಆಗ ನಿನ್ನ ವಿಚಾರ ಅವನ ಹತ್ತಿರ ಬಹಳ ಮಾತಾಡತಿದ್ದೆ… ಹಾಗಾಗಿ ನೀನು ಗೊತ್ತು… ನೀನು ಕಾನೂನಿನ ಸ್ಟೂಡೆಂಟು ಅನ್ನುವುದು ಗೊತ್ತಾದಾಗ, ನಿನ್ನ ಪರಿಸ್ಥಿತಿ ತಿಳಿದಾಗ, ಅಯ್ಯೋ ಅಂದ. ಅದಕ್ಕೇ ನಿನ್ನ ಬಗ್ಗೆ… ಅಂದರೆ… ರೋದ್ಯಾ, ನಿನ್ನೆ ಕುಡಿದಿದ್ದಾಗ ನಿನ್ನ ಬಗ್ಗೆ ಬಡಬಡ ಮಾತಾಡಿದ್ದೆ… ಅವನೂ ನಾನೂ ಮನೆಗೆ ಬರುವಾಗ… ಸ್ವಲ್ಪ ಜಾಸ್ತಿನೇ ಹೇಳಿದೆನೋ ಏನೋ…’

‘ಏನಂದೆ? ನಾನು ಹುಚ್ಚ ಅಂತಲಾ? ನಿಜ ಇದ್ದರೂ ಇರಬಹುದು.’
ಮುಖ ಹಿಂಡಿಕೊಂಡ.

‘ಹೌದು… ಹೌದು… ಉಹ್ಞೂಂ, ಅಲ್ಲ! ನಾನು ಹೇಳಿದ್ದೆಲ್ಲ ನಾನ್ಸೆನ್ಸ್… ಕುಡಿದಿದ್ದೆ ನೋಡು.’

‘ಅದು ಯಾಕೆ ಸಾರಿ ಕೇಳೋನ ಥರ ಮಾತಾಡತಿದೀಯ! ನನಗಂತೂ ಇದೆಲ್ಲ ಸಾಕಾಗಿಹೋಗಿದೆ!’ ರೇಗಿಕೊಂಡವನ ಹಾಗೆ ಅಂದ ರಾಸ್ಕೋಲ್ನಿಕೋವ್. ಹಾಗೆ ಮಾತಾಡಿದ್ದರಲ್ಲಿ ನಟನೆಯ ಅಂಶವೂ ಹೆಚ್ಚಾಗಿಯೇ ಇತ್ತು.

‘ಗೊತ್ತು, ಗೊತ್ತು. ಅರ್ಥ ಆಗತ್ತೆ. ಇದರ ಬಗ್ಗೆ ಮಾತಾಡೋದಕ್ಕೂ ನಾಚಿಕೆ ಆಗತ್ತೆ!’

‘ನಾಚಿಕೆ ಆಗೋದಾದರೆ ಮಾತಾಡಲೇಬೇಡ…’

ಇಬ್ಬರೂ ಸುಮ್ಮನಾದರು. ರಝುಮಿಖಿನ್‍ ಗೆ ತುಂಬ ಸಂತೋಷವಾಗಿತ್ತು. ಅದನ್ನು ಕಂಡು ರಾಸ್ಕೋಲ್ನಿಕೋವ್ ಒಳಗೇ ಅಸಹ್ಯಪಟ್ಟುಕೊಂಡ. ಪೋರ್ಫಿರಿ ಬಗ್ಗೆ ಅವನು ಹೇಳಿದ್ದನ್ನು ಕೇಳಿಯೂ ಚಿಂತೆಯಾಗಿತ್ತು.

‘ಅವನ ಹತ್ತಿರಾನೂ ಮತ್ತೆ ಬಡವ ಲಾಝರಸ್‍ ನ ಆಟ ಕಟ್ಟಬೇಕು,’ ಅಂದುಕೊಳ್ಳುತ್ತ ರಾಸ್ಕೋಲ್ನಿಕೋವ್‍ ನ ಮುಖ ಬಣ್ಣಗೆಟ್ಟಿತು, ಎದೆ ಜೋರಾಗಿ ಬಡಿದುಕೊಂಡಿತು. ‘ಆಟ ನಿಜ ಅನ್ನುವ ಹಾಗಿರಬೇಕು. ನಟನೆ ಮಾಡಬಾರದು. ನಟನೆ ಅಲ್ಲ ಅನ್ನುವ ಹಾಗೆ ನಟನೆ ಮಾಡೋದು ಕಷ್ಟ. ಹಾಗೆ ತೋರಿಸಿಕೊಳ್ಳೋದು ಅಸಹಜ ಅನ್ನಿಸತ್ತೆ. ನೋಡಣ… ಏನಾಗತ್ತೋ… ಅವನ ಮನೆಗೆ ಹೋಗತಾ ಇರೋದು ಒಳ್ಳೇದೋ, ಕೆಟ್ಟದ್ದೋ? ದೀಪದ ಉರಿಗೆ ಹೋಗಿ ಬೀಳುವ ಹುಳದ ಹಾಗೆ. ಎದೆ ಬಡಕೊಳ್ಳತಿದೆ. ಒಳ್ಳೇದಲ್ಲ,’ ಅಂದುಕೊಂಡ.

‘ಗ್ರೇ ಕಲರಿನ ಮನೆ,’ ಅಂದ ರಝುಮಿಖಿನ್.

(‘ಎಲ್ಲಾದಕ್ಕಿಂತ ಮುಖ್ಯ ಅಂದರೆ ನಾನು ನಿನ್ನೆ ಆ ಮುದುಕಿ ಮನೆಗೆ ಹೋಗಿದ್ದು, ರಕ್ತದ ಕಲೆ ಬಗ್ಗೆ ವಿಚಾರಿಸಿದ್ದು ಪಾರ್ಫಿರಿಗೆ ಗೊತ್ತಾ ಅನ್ನುವುದನ್ನ ತಿಳಿಯಬೇಕು. ಮನೆ ಒಳಕ್ಕೆ ಮೊದಲನೆ ಹೆಜ್ಜೆ ಇಡತಿದ್ದ ಹಾಗೇ ಅವನ ಮುಖ ನೋಡಿ ಅರ್ಥಮಾಡಿಕೊಳ್ಳಬೇಕು. ಕಂಡುಹಿಡಿದೇ ಹಿಡಿತೇನೆ ಅವನ ಮನಸ್ಸಲ್ಲಿರೋದನ್ನ. ನಾನು ಸತ್ತರೂ ಪರವಾಗಿಲ್ಲ!)

‘ಗೊತ್ತಾ,’ ಇದ್ದಕಿದ್ದ ಹಾಗೆ ರಝುಮಿಖಿನ್ ಕಡೆಗೆ ತಿರುಗಿ ಮುಖದ ಮೇಲೆ ತುಂಟ ದೆವ್ವದ ನಗು ತಂದುಕೊಂಡು ಕೇಳಿದ: ‘ತುಂಬ ಉತ್ಸಾಹ ಇದೆ, ಸಂಭ್ರಮ ಇದೆ ನಿನಗೆ ಅನ್ನಿಸತ್ತೆ ಬ್ರದರ್ ಇವತ್ತು ಬೆಳಗ್ಗೆಯಿಂದಲೂ,’ ಅಂದ.

‘ಹೇ, ಎಂಥಾದ್ದೂ ಇಲ್ಲಾ,’ ಅನ್ನುತ್ತ ರಝುಮಿಖಿನ್ ಹಲ್ಲು ಕಿರಿದ.

‘ನಿಜವಾಗಲೂ ಬ್ರದರ್, ಸಂಭ್ರಮ ಎದ್ದು ಕಾಣತಾ ಇದೆ. ನೀನು ಇವತ್ತು ಕುರ್ಚಿ ಮೇಲೆ ಕೂತಾಗ ತೀರ ತುದೀಲಿ ಕೂತಿದ್ದೆ, ಯಾವತ್ತೂ ಹಾಗೆ ಮಾಡಿದವನಲ್ಲ. ಸುಮ್ಮನೆ ಚಡಪಡಿಸತಾ ಇದ್ದೆ. ಸಿಟ್ಟು ಮಾಡಿಕೊಂಡಿದ್ದೆ. ಇದ್ದಕಿದ್ದ ಹಾಗೆ ಸಕ್ಕರೆ ಅಚ್ಚಿನ ಥರ ಆಗಿಬಿಟ್ಟೆ. ನಾಚತಾ ಇದ್ದೆ. ಅದರಲ್ಲೂ ರಾತ್ರಿ ಊಟಕ್ಕೆ ಕರೆದಾಗ ಮುಖ ಎಲ್ಲಾ ಕೆಂಪಾಯಿತು!’

‘ಸುಳ್ಳು! ಹಾಗೇನೂ ಮಾಡಲಿಲ್ಲ ನಾನು!.. ಏನೇನೋ ಸುಮ್ಮನೆ ಹೇಳಬೇಡ.’

‘ಅಲ್ಲಾ, ಸ್ಕೂಲು ಹುಡುಗನ ಹಾಗೆ ಈಗಲೂ ನಾಚಿಕೊಳ್ಳತಾ ಇದೀಯ, ನೋಡು!’

‘ಅಯ್ಯೋ, ಹಂದೀ!ʼ

‘ಯಾಕೆ ಮುಜಗರಪಡತಾ ಇದೀಯ? ರೋಮಿಯೋ! ತಾಳು. ಇವತ್ತು ಹಾ ಹಾ, ಸಾಯಂಕಾಲ ಎಲ್ಲಾರಿಗೂ ಹೇಳತೇನೆ, ಅಮ್ಮ ಅಂತೂ ಹೊಟ್ಟೆ ತುಂಬ ನಗತಾಳೆ… ಎಲ್ಲಾರೂ ನಗತಾರೆ…’

‘ಇಲ್ಲಿ ಕೇಳು, ಇದು ಸೀರಿಯಸ್ಸು… ಅಯ್ಯೋ ದೆವ್ವಾ! ಏನಂತ ತಿಳೀತಿಲ್ಲ,’ ರಝುಮಿಖಿನ್ ಗೊಂದಲಕ್ಕೆ ಗುರಿಯಾದ, ಭಯವಾಗಿ ಮೈ ತಣ್ಣಗಾದ ಹಾಗೆ ಅನಿಸಿತು. ‘ಅಲ್ಲಾ, ಸಾಯಂಕಾಲ ಏನು ಹೇಳತೀಯಾ? ಅಯ್ಯೋ ಹಂದೀ…’

‘ವಸಂತ ಋತುವಿನಲ್ಲಿ ಅರಳಿದ ಗುಲಾಬಿಯ ಹಾಗೆ! ಎಷ್ಟು ಚೆನ್ನಾಗಿ ಕಾಣತಾ ಇದೀಯ ಗೊತ್ತಾ! ಆರೂವರೆ ಅಡಿ ಎತ್ತರದ ರೋಮಿಯೋ! ಮೈಕೈ ಎಲ್ಲ ತಿಕ್ಕಿ ತೊಳೆದು ಶುಭ್ರವಾಗಿ ಬಂದಿದಾನೆ. ಉಗುರಿನ ಕೆಳಗೆ ಇರುವ ಕೊಳೇನೂ ಮಾಯಾ! ಹೀಗೆ ಯಾವತ್ತಪ್ಪಾ ಇದ್ದೆ ನೀನು, ಹೇಳು ನೋಡಣ! ತಲೆಗೆ ಪೊಮೇಡ್ ಕೂಡಾ, ಎಲ್ಲಿ, ಬಗ್ಗು, ನೋಡತೀನಿ!’

‘ಹಂದಿ, ಹಂದಿ ನೀನು!’

ರಾಸ್ಕೋಲ್ನಿಕೋವ್ ಜೋರಾಗಿ ನಕ್ಕ. ತಡೆದುಕೊಳ್ಳಲು ಆಗುವುದೇ ಇಲ್ಲ ಅನ್ನುವ ಹಾಗೆ ನಕ್ಕ. ಹಾಗೆ ನಗುತ್ತ ಅವರು ಪಾರ್ಫಿರೆಯ ಅಪಾರ್ಟ್‍ಮೆಂಟಿಗೆ ಬಂದರು. ನಗುತ್ತಲೇ ಬಾಗಿಲು ತಟ್ಟಿದರು.

‘ಇನ್ನೊಂದು ಮಾತಾಡಿದರೆ ಚಚ್ಚಿಹಾಕತೇನೆ..!’ ರಾಸ್ಕೋಲ್ನಿಕೋವ್‍ ನ ಭುಜ ಹಿಡಿದು ಪಿಸು ದನಿಯಲ್ಲಿ ಅಂದ ರಝುಮಿಖಿನ್.