Advertisement
ಅಪ್ಪನ ಅಂಗೈಯಲ್ಲಿ ತಿರುಗುವ ಚಕ್ರಗಳು…: ಲೈಲಾ ಪರ್ವೀನ್‌ ಬರಹ

ಅಪ್ಪನ ಅಂಗೈಯಲ್ಲಿ ತಿರುಗುವ ಚಕ್ರಗಳು…: ಲೈಲಾ ಪರ್ವೀನ್‌ ಬರಹ

ಬಾಬಾ  ಎಲ್ಲಿಗೆ ಬೇಕಾದರೂ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಅದು ಕಾಡಾಗಲಿ, ಸಣ್ಣ ಹಳುವಾಗಲಿ, ಗದ್ದೆ ಅಂಚಾಗಲಿ, ಕಲ್ಲುಗೊಜ್ಜಿನ ರಸ್ತೆಯಾಗಲಿ, ಯಾರ ಮನೆಯಂಗಳವೇ ಆಗಲಿ, ಯಾವ ರೀತಿಯ ಏರು ತಗ್ಗುಗಳಿರಲಿ, ಗುಂಡಿಗಳಿರಲಿ, ಬಂಡೆಕಲ್ಲೇ ಇರಲಿ ಎಲ್ಲದರ ಮೇಲೂ ಸೈಕಲ್ ಓಡಿಸುವ ಛಾತಿಯಿತ್ತು ಅವರಿಗೆ.  ಹೇಳಿ ಕೇಳಿ ಸೈಕಲ್ಲುಗಳ ನಾಡಿಮಿಡಿತ ಬಲ್ಲ ವೈದ್ಯರಲ್ಲವೇ? ಸೈಕಲ್ಲು ಎಲ್ಲಿ ಹೇಗೆ ಹೋಗಬಲ್ಲುದು ಹಾಗೂ ಎಲ್ಲಿ ಹೋಗಲಾರದೆಂಬುದನ್ನು  ಅವರಿಗಿಂತ ಚೆನ್ನಾಗಿ ಬಲ್ಲವರಿಲ್ಲ. ಈ ಮಟ್ಟಿಗೆ  ಸೈಕಲ್ ಹೊಡೆದ ಕಾರಣಕ್ಕೋ ಏನೋ ಬಾಬಾ ಈಗಲೂ ಸಪೂರದೇಹಿ.
ತಮ್ಮ ತಂದೆಯವರ ಸೈಕಲ್‌ ಪ್ರೇಮದ ಕುರಿತು ಲೈಲಾ ಪರ್ವೀನ್‌ ಬರಹ ನಿಮ್ಮ ಓದಿಗೆ

ರಸ್ತೆಯಲ್ಲಿ ಓಡಾಡುವಾಗೆಲ್ಲ  ಕಾಣಿಸುವ ಬೆಲೆಬಾಳುವ ಕಾರುಗಳು, ದೊಡ್ಡ ಸದ್ದು ‌ಮಾಡಿಕೊಂಡು ಓಡಾಡುವ ಬೈಕುಗಳು, ಒಡಲೊಳಗೆ ಸಕಲ ಸವಲತ್ತುಗಳನ್ನೊಳಗೊಂಡ ಟೂರಿಸ್ಟ್ ಬಸ್ಸುಗಳು, ತರತರದ ಟೆಂಪೋ ರಿಕ್ಷಾ ಲಾರಿಗಳು ನನಗೆ ಆಕರ್ಷಣೆಯ ವಿಷಯವಾಗಿರುವುದಿಲ್ಲ. ಆ ಹತ್ತಾರು ಬಗೆಯ ಓಡುವ ಯಂತ್ರಗಳ ನಡುವೆಯೊಂದು ದೇವದೂತನಂಥಾ ಸೈಕಲ್ ಹಾದು ಹೋದರೆ ನಾನದನ್ನು ನೋಡುತ್ತಾ ನೋಡುತ್ತಾ  ಇಹರಪರಗಳನ್ನು ಮರೆತು ಆ ಹಳೆಕಾಲಕ್ಕೆ ಸರಿದುಬಿಡುತ್ತೇನೆ. ಬಾಲ್ಯದ ನೂರಾರು ನೆನಪು, ಬಾಂಧವ್ಯಗಳು ಮನಸಲ್ಲಿ ಹರಿದಾಡುತ್ತವೆ. ಆ‌ಮೇಲಿನ ಸಮಯವೆಲ್ಲ ಸೈಕಲ್ಲಿನ ಜಪತಪಕ್ಕೆ ಮೀಸಲು. ನನ್ನ ಪಾಲಿನ ಭಾವುಕ ಜಗತ್ತಾಗಿರುವ ಸೈಕಲ್ಲಿನ ಕಡೆಗೆ ನನ್ನದು ಮುಗಿಯದ ಮಿಡಿತ.

ತಿರುಗುವ ಸೈಕಲ್ ಚಕ್ರಗಳೊಂದಿಗೆ ಬದುಕಿನ ಗಾಲಿಗಳನ್ನು ತಿರುಗಿಸುತ್ತಾ ಚಲನೆಯನ್ನೇ ಉಸಿರಾಗಿಸಿಕೊಂಡು ಬಂದ‌ ಬಡಬದುಕಿನ ಕತೆಯೊಳಗೆ ಸೈಕಲ್ಲಿನದ್ದೇ ಮಹಾಪಾಲು. ನಾವೆಲ್ಲ ಚಿಕ್ಕವರಿದ್ದ ಆ ದಿನಗಳಲ್ಲಿ ನಮಗೆ ಅನ್ನವನಿಕ್ಕಿ ಸಲಹಿದ್ದು ಸೈಕಲ್ಲೇ ಎಂಬಷ್ಟು ಕೃತಾರ್ಥಭಾವ.  ನಾವು ಬಾಬಾ ಎಂದು ಪ್ರೀತಿಯಿಂದ ಕರೆಯುವ  ಅಪ್ಪಯ್ಯ, ಅವರ ಪ್ರೀತಿಯ ಸೈಕಲ್ಲುಗಳು,  ಹಾಗೂ ಇಂದಿಗೂ ನಮ್ಮ ಜೀವವಾಗಿಯೇ ಉಳಿದಿರುವ ಬಸ್ರೂರು ಇವಿಷ್ಟೇ ನಮ್ಮ ಬದುಕಾಗಿತ್ತು.  ಬಾಬಾರ ಬಿಡುವಿಲ್ಲದ ದುಡಿಮೆಗೆ ಅರ್ಥ ತಂದುಕೊಟ್ಟದ್ದು ಸೈಕಲ್ಲುಗಳೇ ಎಂಬಷ್ಟು ಧನ್ಯತೆ ನಮಗೆ.  ಅದೆಲ್ಲೇ ಇರಲಿ ಹೇಗೇ ಇರಲಿ, ಜನ ಅದನ್ನು ಮೆಚ್ಚಲಿ‌ ಬಿಡಲಿ, ಸೈಕಲ್ಲಿಗಿಂತ ಶ್ರೇಷ್ಠ ವಾಹನ ಈ‌ ಜಗತ್ತಿನಲ್ಲೇ ಇಲ್ಲವೆಂದು ವಾದಕ್ಕೆ ನಿಲ್ಲಲೂ ಸಿದ್ಧವಿರುವಷ್ಟು ಮೋಹ ಪ್ರೀತಿ ಸೈಕಲ್ಲುಗಳ ಬಗ್ಗೆ ಬೆಳೆದದ್ದು ಹೇಗೆಂದರೆ ಹುಟ್ಟಿ ಕಣ್ಣು ಬಿಟ್ಟಾಗಿನಿಂದಲೂ ಕಂಡದ್ದು, ಆಡಿದ್ದು, ಬೆಳೆದದ್ದು ಎಲ್ಲ ಸೈಕಲ್‌ಗಳ ನಡುವೆ. ನನಗದು ಇಷ್ಟ ಮತ್ತು ಅದೇ ನನ್ನ ಸದಾಕಾಲದ ಇಷ್ಟ.

ಸುಂದರ ಪ್ರಕೃತಿ, ವಾರಾಹಿ ನದಿ, ಪ್ರೀತಿ ಅಂತಃಕರಣ ತುಂಬಿದ ಜನ, ನಿರ್ಮಲ ಸ್ನೇಹ ಹಾಗೂ ನಿಷ್ಕಲ್ಮಷತೆಗೆ ಹೆಸರಾದ ನನ್ನೂರು ಬಸ್ರೂರಿನ ರಥಬೀದಿಯಲ್ಲಿ ಬಾಬಾ  ಆರು ದಶಕಗಳ ಹಿಂದೆ ಸ್ಥಾಪಿಸಿದ  ಸೈಕಲ್ ಅಂಗಡಿ ಕಾಲಕ್ರಮೇಣ ಹಸನ್ ಸಾಹೇಬ್ರ ಸೈಕಲ್ ಅಂಗಡಿಯೆಂದೇ ಪ್ರಸಿದ್ಧವಾಯಿತು. ಮೋಟರು ವಾಹನಗಳು ಅತಿಕಡಿಮೆಯಿದ್ದ ಆ ಕಾಲದಲ್ಲಿ ಸೈಕಲ್ಲೇ ಏಕಮಾತ್ರ ಜನಪ್ರಿಯ ಅನುಕೂಲಕರ ವಾಹನವಾಗಿತ್ತು.  ಹಾಳಾದ ಸೈಕಲ್‌ಗಳನ್ನು ರಿಪೇರಿ ಮಾಡಿಕೊಡುತ್ತ ಒಂದಿಷ್ಟು ಸೈಕಲ್ಲುಗಳನ್ನು ಬಾಡಿಗೆಗೂ ಇಟ್ಟಿದ್ದ ಕಾರಣ ದಿನದ ಎಲ್ಲಾ ಹೊತ್ತಲ್ಲೂ ಅಂಗಡಿಗೆ ಜನ ಬಂದು ಹೋಗುತ್ತಿದ್ದರು.  ಎಲ್ಲಿಗೆ ಹೋಗಬೇಕಿದ್ದರೂ ಸೈಕಲ್ಲೇ ಗತಿಯಾಗಿದ್ದ ಆ ಕಾಲದಲ್ಲಿ ಬಾಡಿಗೆ  ಸೈಕಲ್ಲುಗಳಿಗೆ ಭಾರಿ ಬೇಡಿಕೆಯಿತ್ತು. ಪ್ರತೀ ಸೈಕಲ್ಲಿನ  ಹಿಂಭಾಗಕ್ಕೆ  ಬಾಬಾ ಬಿಳಿ ಪೈಂಟ್ ಬಳಿದು ಅಲ್ಲಿ ಚಂದವಾಗಿ ಕೆಂಪು ಬಣ್ಣದಲ್ಲಿ  ಬಿ. ಎಚ್. ಎಸ್. (ಅಂದರೆ ಬಸ್ರೂರು ಹಸನ್ ಸಾಹೇಬ್ )ಎಂದು  ಬರೆದಿದ್ದರು. ಪ್ರತೀ ಸೈಕಲ್ಲಿಗೂ ನಂಬರಿತ್ತು.  ಇದನ್ನೆಲ್ಲ ಬ್ರಶ್ ಹಿಡ್ಕೊಂಡು ಅವರೇ ಬರೆಯುತ್ತಿದ್ದರು. ಅಷ್ಟು ಚಂದ ಅಕ್ಷರ ಅವರದು.  ನಮ್ಮ ಸೈಕಲ್ಲು ಯಾವೂರಿಗೆ ಬಾಡಿಗೆ ಹೋದರೂ ಗುರ್ತ ಸಿಗುತ್ತಿತ್ತು.  ಗಂಟೆಗೆ ಎಂಟಾಣೆ ಎಂಬ ಲೆಕ್ಕಾಚಾರದಲ್ಲಿ ಬಾಡಿಗೆ ನಡೆಯುತ್ತಿತ್ತು. ಹಲವಾರು ಸಲ ಜನರು ಬಾಡಿಗೆಗೆ ಹೋದ ಸೈಕಲ್ ಬರುವವರೆಗೆ ಕಾದು ನಿಲ್ಲುವುದೂ ಇತ್ತು. ಮಕ್ಕಳು ನನಗೆ ತನಗೆ ಎಂದು ಜಗಳಾಡಿಕೊಂಡು ಸಣ್ಣ ಸೈಕಲ್ಲುಗಳನ್ನು ಬಾಡಿಗೆಗೆ ಪಡೆದು ಊರಿಡೀ ಸುತ್ತಿ ಖುಷಿಪಡುತ್ತಿದ್ದರು. ನಮ್ಮೂರಿನ ಹೆಚ್ಚಿನ ಮಕ್ಕಳು ಸೈಕಲ್ ಕಲಿತದ್ದೇ ಬಾಬಾರ ಅಂಗಡಿಯ ಸೈಕಲ್‌ಗಳಲ್ಲಿ.

ಬದುಕಿನ ಇನ್ಯಾವ ಅಂದಚಂದವೂ ಮುಖ್ಯವಾಗಿರದಿದ್ದ  ಬಾಬಾ ಸೈಕಲ್ಲುಗಳೊಂದಿಗೆ ಬದುಕು ಆರಂಭಿಸುವಾಗ ಆಗಿನ್ನೂ  ಸಣ್ಣ ಪ್ರಾಯ. ಕೆಲಸದ ಮೇಲಿನ ಶ್ರದ್ಧೆ, ಸೈಕಲ್‌ಗಳ ಬಗೆಗಿನ ನಿರ್ದಿಷ್ಟ ಜ್ಞಾನ ಹಾಗೂ ತನ್ನ  ಸೌಮ್ಯ ಸ್ವಭಾವದಿಂದ ಅವರು  ಜನಮನಕ್ಕೆ ಹತ್ತಿರವಾಗಿದ್ದರು. ಮನೆಯಲ್ಲೊಂದು‌ ಸೈಕಲ್ ಇದೆಯೆಂದರೆ ಅವರು ತಕ್ಕ ಮಟ್ಟಿಗೆ ಶ್ರೀಮಂತರೇ ಎಂಬಂತಿದ್ದ ಕಾಲಘಟ್ಟವದು. ಅಗತ್ಯವಿರುವವರು ಬಾಡಿಗೆಗಾದರೂ ಸೈಕಲ್ ಪಡೆದು ಹೋಗಬೇಕಾದಲ್ಲಿಗೆ ಹೋಗಿ ಬಂದು ಸೈಕಲ್ಲನ್ನು ಅಂಗಡಿ ಮುಂದಿಟ್ಟು ಸಾಯಿಬ್ರೇ ಎಷ್ಟಾಯ್ತ್ ಎಂದು ಕೇಳುವುದು, ಇರಲಿ ಎಷ್ಟಾರೂ ಕೊಡ ಎಂದು ಬಾಬಾ ಹೇಳುವುದು, ಹೀಗೊಂದು ದುಡ್ಡಿನ ಲೆಕ್ಕಾಚಾರಕ್ಕೆ ಕಟ್ಟುಬೀಳದ ಸುಂದರ ಸಂಬಂಧ ಕುದುರಿ ಬಾಬಾ ಊರಲ್ಲಿ ಪ್ರೀತಿಪಾತ್ರರಾಗುತ್ತ ಸಾಗಿದರು.

ಆಗೆಲ್ಲ ಅಂಗಡಿ ತುಂಬಾ ಸೈಕಲ್ಲುಗಳನ್ನೇ ಕಂಡಿದ್ದ ನಮಗೆ ತರತರದ ಅಂಗವಿಕಲ ಸೈಕಲ್ಲುಗಳನ್ನು ಕಂಡು ಪಾಪವೆನಿಸುವುದಿತ್ತು. ಈ ಸೈಕಲ್ಲಿಗೆ ಹುಶಾರಿಲ್ಲ, ಆ ಸೈಕಲ್ಲಿನ ಕಾಲು ಮುರಿದಿದೆ, ಇನ್ನೊಂದರ ಭುಜ‌ ಡೊಂಕಾಗಿದೆ ಎಂದು ನಾವು ‌ಮಕ್ಕಳು ಮಾತಾಡಿಕೊಳ್ಳುವುದಿತ್ತು. ಗೋಡೆಗೆ ಗುದ್ದಿಯೋ, ಚರಂಡಿಗೆ ಬಿದ್ದೋ, ಕಾಡುಮೇಡು ಅಲೆದಾಡಿ ಕೈಮೈ ನಟ್ಟುಬೋಲ್ಟು ಲೂಸಾಗಿಯೋ, ಅಥವಾ ಬಸ್ಸು ಲಾರಿ ಮುಂತಾದವಕ್ಕೆ ಗುದ್ದಿ ಮೈಹರಿದುಕೊಂಡ ಬಡಪಾಯಾಗಿಯೋ, ತನ್ನೊಡೆಯನೊಂದಿಗೆ  ಬಾಬಾರ  ಬಳಿಗೆ ದೀನನಾಗಿ  ಬರುವ ಸೈಕಲ್‌ಗೆ ತನ್ನ ಮುಂಚಿನ ರೂಪ ಬರುವಂತೆ ಮಾಡಿ ಹೊಳೆಸಿ ಬೆಳೆಸಿ ಬಾಬಾ ಚಂದಗಾಣಿಸಿಕೊಡುವ ರೀತಿಗೆ ಸೈಕಲ್ ಓನರನಲ್ಲ ಸಾಕ್ಷಾತ್ ಸೈಕಲ್ಲೇ ಮಾರುಹೋಗುತ್ತಿತ್ತು.

ಸಂಜೆ ಶಾಲೆ ಬಿಟ್ಟು ಮನೆಗೆ ಹೋಗಿ ಚೀಲ ಇಟ್ಟು ನಾವು ಸೇರುತ್ತಿದ್ದುದು ಬಾಬಾರ ಸೈಕಲ್ ಅಂಗಡಿಯನ್ನು. ಅಲ್ಲೇ ಆಡುತ್ತಾ, ಸೈಕಲ್ ರಿಪೇರಿಯನ್ನು ನೋಡುತ್ತ  ಗಮನಿಸುತ್ತ ಬೆಳೆದ ನಾವು  ಹೆಚ್ಚು ಕಡಿಮೆ ಎಲ್ಲ ರೀತಿಯ ಸೈಕಲ್ ರಿಪೇರಿಗಳನ್ನು ಕಲಿತಿದ್ದೆವು‌. ನನ್ನ ಮಕ್ಕಳ ಸೈಕಲ್ ಹಾಳಾದರೆ  ಈಗಲೂ ನಾನೇ ಅದನ್ನು ತಿರುಗಿಸಿ ಮಲಗಿಸಿ ಏನಾಗಿದೆಯೆಂದು ನೋಡಿ, ಇಷ್ಟು ನಂಬರಿನ ಸ್ಪಾನರ್ ತನ್ನಿ ಎಂದು ಹೇಳುತ್ತಾ ಅದರ ಹಿಂದೆ ಮುಂದೆ ನಲಿದು ಅಂಗಾಂಗಗಳನ್ನು ಬಿಡಿಸಿ ಊದಿ ಗ್ರೀಸ್ ಉಜ್ಜಿ ಕೆಲವನ್ನು ಸಡಿಲಗೊಳಿಸಿ, ಇನ್ಯಾವುದನ್ನೋ ಗಟ್ಟಿಗೊಳಿಸಿ  ರಿಪೇರಿ ಮಾಡಿಡುತ್ತೇನೆ. ಆಗೆಲ್ಲ ಮಕ್ಕಳು ನನ್ನನ್ನು ಮೆಚ್ಚುವುದೂ, ಪತಿರಾಯರು “ಹಸನ್ ಸಾಹೇಬ್ರ ಮಗಳಾಗಿದ್ದದ್ದಕ್ಕೆ ಸಾರ್ಥಕ ಆಯ್ತು” ಎಂದು ಶಹಬ್ಬಾಸ್ ಹೇಳಿ ನಗುವುದೂ ನಡೆದು ನನಗೊಂದು ಹೆಮ್ಮೆಯಂತಹ ಅನುಭವವಾಗಿ ಖುಷಿಪಡುತ್ತೇನೆ.

ಬಾಬಾ  ಯಾವ ದೊಡ್ಡ ವಾಹನಗಳನ್ನೂ  ಆಸಕ್ತಿಯಿಂದ ನೋಡುವುದಿಲ್ಲ. ದುಬಾರಿ ಕಾರುಗಳೆಲ್ಲ ಅವರಿಗೆ ಲೆಕ್ಕವೇ ಅಲ್ಲ.  ವಾಹನವೆಂದರೆ‌ ಅದು ಸೈಕಲ್ ಮಾತ್ರ. ದೂರದ ದೇಶಗಳಲ್ಲಿ ಸೈಕಲ್ಲುಗಳು ಓಡಾಡಲೆಂದೇ ಪ್ರತ್ಯೇಕವಾದ ರಸ್ತೆಗಳಿವೆಯಂತೆ  ಎಂದು ನಾನೊಮ್ಮೆ ಹೇಳಿದಾಗ ಬಾಬಾರ ಕಣ್ಣರಳಿದ್ದು ಇನ್ನೂ ನೆನಪು. ನಮ್ಮಲ್ಲೂ ಅಂಥದ್ದನ್ನು ಕಾಣುವ ಆಸೆ ಅವರಿಗೆ  ಖಂಡಿತವಾಗಿ ಆಗಿರುತ್ತದೆ. ರಸ್ತೆಯ ಉದ್ದಾನುದ್ದಕ್ಕೂ ಬರೇ ಸೈಕಲ್ಲುಗಳೇ ಓಡಾಡುತ್ತಿದ್ದರೆ ಅದನ್ನು ನೋಡಲೆರಡು ಕಣ್ಣು  ಅವರಿಗೆ  ಖಂಡಿತ ಸಾಲದಾದೀತು.

ನಾವು ಬೇರೆ ಬೇರೆ ಕಡೆ ಮನೆ ಮಾಡುತ್ತ ಫುಟ್ಬಾಲ್ ಚೆಂಡಿನಂತೆ  ಅಲ್ಲಿ‌ಇಲ್ಲಿ ಬೀಳುತ್ತಾ ಊರೂರು ಸುತ್ತುತ್ತಿದ್ದಾಗ ಬಾಬಾ  ಸೈಕಲ್‌ ಹೊಡ್ಕೊಂಡು ಬೆಳಿಗ್ಗೆ ಸಂಜೆ ಮನೆಗೆ ಬಂದು ಹೋಗಲು ಕಷ್ಟಪಡುತ್ತಿದ್ದರು… ಆ ಸಮಯದಲ್ಲಿ ದುಡ್ಡು ಹೊಂದಿಸಿ ಒಂದು ಲೂನಾ ಖರೀದಿಸಿದರು. ಅದಕ್ಕೆ  ಪೆಟ್ರೋಲ್ ಹಾಕುವುದು ಅವರಿಗೆ  ಸಂಕಟದ ವಿಷಯವಾಗಿತ್ತು. ಏನೇನೂ ಖರ್ಚಿಲ್ಲದೆ ಬದುಕು ಪೂರ್ತಿ ಬೆನ್ನೇರಿ ನಡೆದರೂ ನೋಯದ ಕೋಪಿಸಿಕೊಳ್ಳದ ಸೈಕಲ್‌ಗಳನ್ನು ಆರಾಧಿಸುತ್ತ ಬದುಕಿದ ಬಾಬಾ  ಈ ವಾಹನಕ್ಕೆ ಪೆಟ್ರೋಲ್ ಖರ್ಚೊಂದು ಹೆಚ್ಚಿನ ಭಾರವೆಂದುಕೊಂಡು ನೊಂದರು‌. ಇಷ್ಟು ಸರಳ ಅನುಕೂಲಕರ ಸೈಕಲ್ಲುಗಳಿರುವಾಗ ನಾವೇಕೆ ಸಂಕೀರ್ಣತೆಯನ್ನು ಬದುಕಿಗೆ ಆವಾಹಿಸಿಕೊಳ್ಳುತ್ತೇವೆ ಎಂಬುದು ಅವರ ಮನಸಿನ  ಸಹಜ ಪ್ರಶ್ನೆಯಾಗಿತ್ತು.

ಬಾಬಾರ ಹತ್ತಿರ ಪೆಟ್ರೋಲಿಗೆಂದು ಒಂದು ಪ್ಲಾಸ್ಟಿಕ್ ಬಾಟಲಿ ಇತ್ತು. ಇದ್ಯಾಕೆ ಈ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಇಟ್ಟುಕೊಳ್ಳುತ್ತಾರೆ ಅಂತ ಒಂದು ಪ್ರಶ್ನೆ ಮನಸಿಗೆ ಬಂದಾಗ ಆ ಬಗ್ಗೆ ಕೇಳಿದ್ದೆ. ‘ಗಾಡಿಗೆ ಪೆಟ್ರೋಲ್ ಹಾಕುವಾಗ ನಾವು ನೂರು ರೂಪಾಯಿದು ಹಾಕಿದ್ರೂ ಇನ್ನೂರು ರೂಪಾಯಿದು ಹಾಕಿದ್ರೂ ಅವರು ಒಂದೇ ಗಳಿಗೆಯಲ್ಲಿ ಸುಂಯ್ಕ್ ಅಂತ ಹಾಕಿ ಮುಗಿಸಿಬಿಡ್ತಾರೆ. ಯಾರಿಗೆ ಗೊತ್ತು ಅವರು ಎಷ್ಟು ಹಾಕಿದ್ರು ಅಂತ. ನಾನು ಕೊಟ್ಟ ದುಡ್ಡಿಗೆ ತಕ್ಕ ಪೆಟ್ರೋಲ್ ಬೇಕಲ್ವ ಅದಕ್ಕೆ ಬಾಟಲಿಯಲ್ಲಿ ತುಂಬಿಸಿಕೊಳ್ಳುತ್ತೇನೆ. ಗಾಡಿಯಲ್ಲಿ ಖಾಲಿ ಆಯ್ತು ಅನಿಸಿದಾಗ ಅರ್ಧ ಬಾಟಲಿಯಷ್ಟನ್ನು ಅದಕ್ಕೆ ಸುರಿಯುತ್ತೇನೆ. ಮೋಸ ಹೋಗುವುದು ತಪ್ಪಿತು’.. ಅಂದಿದ್ದರು.  ಸುಂಯ್ಕೆಂದು ಗಾಡಿಯ ಟ್ಯಾಂಕಿಗೆ ಪೆಟ್ರೋಲ್ ಸುರಿಯುವ ವೈಖರಿಯನ್ನು ಬಾಬಾ ಮೋಸವೆಂದೇ ತಿಳಿದಿದ್ದರು. ಅದಕ್ಕಾಗಿ ಬಾಟಲಿಯಲ್ಲಿ ಪೆಟ್ರೋಲ್ ತರುವ ವಿಧಾನವನ್ನು ಅನುಸರಿಸಿದ್ದರು.

ಸೈಕಲ್ ಏರಿದ ಕೂಡಲೇ ಮಾಯಾಕುದುರೆಯನ್ನೇರಿದ ಹುರುಪು ಪಡೆಯುವ ಬಾಬಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ಷಿಪಣಿಗಳಂತೆ ಓಡುವ ಖಾಸಗಿ ಬಸ್ಸುಗಳ  ನಡುವೆ ಸೈಕಲ್ ಹೊಡ್ಕೊಂಡು ಹೇಗೆ ನುಸುಳಿ ಹೇಗೆ ಪಾರಾಗಿ ಹೋಗಿಬರುತ್ತಿದ್ದರೆಂಬುದು ನಮಗೆ ಈಗಲೂ ಆಶ್ಚರ್ಯ. ಒಂದಿನ ನಾನು ಬಸ್ಸಲ್ಲಿದ್ದಾಗ ಬಾಬಾ  ರಸ್ತೆ ಮೇಲೆ ಸೈಕಲಲ್ಲಿ ಹೋಗ್ತಾ ಇದ್ದರು. ಯಾವ ಒತ್ತಡವೂ ಇಲ್ಲ. ಅದ್ಭುತ ನಿರಾಳತೆ. ಬಾಬಾ ಹಾಗೂ  ಸೈಕಲ್ ಒಟ್ಟುಗೂಡಿದರೆ ಇದೇ ತಾನೇ? ಯಾವ ಬಸ್ಸಿನ‌ ವೇಗವೂ ಅವರನ್ನು ಕಂಗೆಡಿಸಿದ್ದಿಲ್ಲ. ಹೀಗೇ ಬಸ್ಸಿನೊಳಗಿದ್ದು ಅವರನ್ನು ನೋಡುತ್ತಾ ಆ  ಧೈರ್ಯಕ್ಕೆ ಮನಸಲ್ಲೇ ಮೆಚ್ಚುತ್ತಾ ಕೂತಿದ್ದವಳಿಗೆ ಡ್ರೈವರ್‌ ಬಾಬಾರನ್ನು   ಕರೆದು ಹೇಳಿದ ಮಾತು ಕೇಳಿ ನಗು ಬಂತು… ಹ್ವಾಯ್ ಸಾಯಿಬ್ರೇ… ನಮ್ ಬಸ್ಸಿಗೊಂಚೂರ್ ಜಾಗ ಬಿಡಿಯೇ… ನೀವೊಬ್ರೇ ಹೋಪುದಾ ರಸ್ತಿ‌ ಮ್ಯಾಲೆ.. ನಾವ್ ಹೋಪುದ್ ಬ್ಯಾಡದಾ??

ಕೊರಳು ತಿರುಗಿಸಿ ನೋಡಿದ ಬಾಬಾ  ಬದಿಗೆ ಸರಿದು ಬಸ್ಸಿಗೆ ಜಾಗ ಬಿಟ್ಟದ್ದನ್ನು ಕಣ್ಣಾರೆ ಕಂಡೆ. ಅಷ್ಟೆಲ್ಲ‌ ಜನರನ್ನು ತುಂಬಿಕೊಂಡ ಬಸ್ಸು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಬಾ  ಮತ್ತು ಅವರ ಸೈಕಲ್ಲಿನ ಬಳಿ ತನಗೆ ಹೋಗಲು ಜಾಗ ಕೊಡಿ ಎಂದು ಕೇಳಿದ ದೃಶ್ಯ ನನ್ನ ಆ ಹೊತ್ತಿನ ಪುಳಕ.  ಸೈಕಲ್  ಏರಿದಾಗಿನ  ಅವರ ಈ  ಹುಮ್ಮಸ್ಸು ನಾವು ಹೆದರುವಂತೆ ಮಾಡಿದೆ ಎಷ್ಟೋ ‌ಸಲ.

ಬಾಬಾ  ಎಲ್ಲಿಗೆ ಬೇಕಾದರೂ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಅದು ಕಾಡಾಗಲಿ, ಸಣ್ಣ ಹಳುವಾಗಲಿ, ಗದ್ದೆ ಅಂಚಾಗಲಿ, ಕಲ್ಲುಗೊಜ್ಜಿನ ರಸ್ತೆಯಾಗಲಿ, ಯಾರ ಮನೆಯಂಗಳವೇ ಆಗಲಿ, ಯಾವ ರೀತಿಯ ಏರು ತಗ್ಗುಗಳಿರಲಿ, ಗುಂಡಿಗಳಿರಲಿ, ಬಂಡೆಕಲ್ಲೇ ಇರಲಿ ಎಲ್ಲದರ ಮೇಲೂ ಸೈಕಲ್ ಓಡಿಸುವ ಛಾತಿಯಿತ್ತು ಅವರಿಗೆ.  ಹೇಳಿ ಕೇಳಿ ಸೈಕಲ್ಲುಗಳ ನಾಡಿಮಿಡಿತ ಬಲ್ಲ ವೈದ್ಯರಲ್ಲವೇ? ಸೈಕಲ್ಲು ಎಲ್ಲಿ ಹೇಗೆ ಹೋಗಬಲ್ಲುದು ಹಾಗೂ ಎಲ್ಲಿ ಹೋಗಲಾರದೆಂಬುದನ್ನು  ಅವರಿಗಿಂತ ಚೆನ್ನಾಗಿ ಬಲ್ಲವರಿಲ್ಲ. ಯಾವ ಕೊಂಪೆಗೂ ಬಾಬಾ ಸೈಕಲಲ್ಲೇ ಹೋಗುವುದನ್ನು ಕಂಡ  ಕೆಲವು ಹಿರಿಯರು ನಮ್ಮೆದುರು  ಹಿಲಾಲು ಹಾಕುವುದಿತ್ತು… ನಿನ್ನ ಬಾಬಾ ಇನ್ನು ಸ್ವಲ್ಪ ದಿನಕ್ಕೆ ಕಡಲಿನ ಅಲೆಗಳ ಮೇಲೆ ಸೈಕಲ್ ಹೊಡೀತಾನೆ ಅಂತ‌.  ಈ ಮಟ್ಟಿಗೆ  ಸೈಕಲ್ ಹೊಡೆದ ಕಾರಣಕ್ಕೋ ಏನೋ ಬಾಬಾ ಈಗಲೂ ಸಪೂರದೇಹಿ. ಪೆಟ್ರೋಲ್ ಡೀಸೆಲ್ ಎಂಬ ಖರ್ಚಿಲ್ಲದೆ, ಹಾಳಾದರೆ ರಿಪೇರಿಗೆ ದೊಡ್ಡ ಮೊತ್ತದ ಹಣವನ್ನೇನೂ ವ್ಯಯ ಮಾಡಬೇಕಾಗಿಬರದೆ, ಒಳ್ಳೆಯ ವ್ಯಾಯಾಮ ಒದಗಿಸಿ ಕೈಕಾಲು ಗಟ್ಟಿ ‌ಮಾಡುವ, ಹೊಗೆಯುಗುಳದೆ ಪರಿಸರವನ್ನು ಕಾಪಾಡುವ ಸೈಕಲ್ಲಿನ ಬಗೆಗೆ  ಬಾಬಾರಿಗೆ ತುಂಬು ಭಕ್ತಿ. ಅವರಿಗೆ ಸೈಕಲ್ಲುಗಳು ನಿರ್ಜೀವ ಎಂದು ಯಾವಾಗಲೂ ಅನಿಸುತ್ತಿರಲಿಲ್ಲ. ಅವುಗಳನ್ನು ವ್ಯಕ್ತಿಗಳಂತೆ ಭಾವಿಸುತ್ತಿದ್ದರು. ಗೌರವಿಸುತ್ತಿದ್ದರು. ಹೀಗೆ ಅವರ ಗರಡಿಯಲ್ಲಿ ಪಳಗಿದ ಮಕ್ಕಳು ನಾವು ಆ ಕಾಲಕ್ಕೆ ಹೆಣ್ಣು ಗಂಡು ಭೇದವಿಲ್ಲದೆ ಸೈಕಲ್ ಹೊಡ್ಕೊಂಡು ಊರು ಕೇರಿ ಸುತ್ತುವುದು, ಕಾಡುಗುಡ್ಡೆ ಅಲೆಯುವುದು, ಸೈಕಲ್ ರೇಸ್‌ಗಳನ್ನು ಮಾಡುವುದು ಮತ್ತು ಅದರಲ್ಲಿ ನಾವೇ ಗೆಲ್ಲುವುದು ಬಾಲ್ಯಕಾಲದ ಅಮೂಲ್ಯ ನೆನಪುಗಳು.

ಸೈಕಲ್ ಮಾತ್ರವಲ್ಲದೆ ನಮ್ಮ ಅಂಗಡಿಯಲ್ಲಿ ಸ್ಟವ್, ಕೊಡೆ ಮೊದಲಾದವು ರಿಪೇರಿಯಾಗುತ್ತಿದ್ದವು. ಬಾಬಾರದ್ದೇ ಆದ ಸೌಂಡ್ ಸಿಸ್ಟಮ್ ಇತ್ತು. ಆ‌ ಕಾಲದ ಪ್ರಸಿದ್ಧ ಪರ್ವಿನ್ ಸೌಂಡ್ಸ್ ಎಂಡ್ ಲೈಟ್ಸ್. ಸುತ್ತಮುತ್ತಲ ಹತ್ತೂರಿನ ಕಾರ್ಯಕ್ರಮಗಳಿಗೆ ಬಾಬಾರದ್ದೇ  ಮೈಕ್ಸೆಟ್ಟು. ಅಲ್ಲಿಗೂ ಅವರ  ಹಿಂದೆ ನಾವು ಓಡುತ್ತಿದ್ದೆವು. ಮೊದಲಿಗೆ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಆಗಿ,  ಆಮೇಲೆ ನಂಬಿದೆ ನಿನ್ನ ನಾಗಾಭರಣ ಮೊದಲಾದ ಭಕ್ತಿ ಗೀತೆಗಳಾಗಿ, ಮಧುರ ಸಿನಿಮಾಗೀತೆಗಳು ಶುರುವಾಗುವುದು, ಭಕ್ತಿಗೀತೆ ಸಿನಿಮಾಗೀತೆ ಎಲ್ಲಕ್ಕೂ ಒಟ್ಟೊಟ್ಟಿಗೆ ಧ್ವನಿ ಸೇರಿಸಿ ನಾವೂ ಹಾಡುವುದು, ಅಲ್ಲಿ ಕಂಡದ್ದನ್ನೆಲ್ಲ ತಿಂದುಕೊಂಡು ಕುಂದಾಪ್ರ ಕನ್ನಡದಲ್ಲಿ ಇಷ್ಟು ಹರಟಿಕೊಂಡು  ಹೊಸ ಹೊಸ  ಸ್ನೇಹಿತರನ್ನು ಕಟ್ಟಿಕೊಂಡು ರಾತ್ರಿ ಪೂರಾ ಕಾರ್ಯಕ್ರಮ ನೋಡಿ ಮನೆಗೆ ಹಿಂತಿರುಗುವುದೂ ಇತ್ತು. ಇವೆಲ್ಲ ನೆನಪಾಗುವಾಗ ನಮ್ಮ ಬಾಲ್ಯ ಎಂತಹ ಸಮೃದ್ಧಿಯಿಂದ ಕೂಡಿತ್ತು ಎಂಬ ಅರಿವಾಗಿ ಮನಸು ತಂಪಾಗುತ್ತದೆ.

ನಾಲ್ಕಾರು ಬಗೆಯ ಕೆಲಸಗಳನ್ನು ನಿಭಾಯಿಸುತ್ತಿದ್ದರೂ ಬಾಬಾ ಸಂಪೂರ್ಣವಾಗಿ ಜೋತುಬಿದ್ದದ್ದು ಸೈಕಲ್ಲಿನ ಮೋಹಕ್ಕೆ ಎಂಬುದು ಮಾತ್ರ ಸತ್ಯ. ಈಗ ಅನಾರೋಗ್ಯದಿಂದ ರಾತ್ರಿ ಹೊತ್ತು ಒಮ್ಮೊಮ್ಮೆ ಕನವರಿಸುವುದೂ ಸೈಕಲ್ಲುಗಳ ವಿಷಯವನ್ನು‌. ರಿಪೇರಿಗೆ ಕೊಟ್ಟ ಸೈಕಲ್‌ಗಳನ್ನು ಯಾರು ಯಾರಿಗೆಲ್ಲ ಕೊಡುವುದು ಬಾಕಿ ಇದೆ ಎಂಬ ಪಟ್ಟಿ ಅವರ  ಬಳಿ ಈಗಲೂ ಲಭ್ಯವಿದೆ. ಅಷ್ಟೊಂದು ವರ್ಷಗಳಿಂದ ಸೈಕಲ್‌ಗಳ ಒಡನಾಟದಿಂದ ತುಂಬಿ‌ ಹೋಗಿರುವ ಬಾಬಾ ಒಂದು ಬಗೆಯ ಕರ್ಮಯೋಗಿ. ಬೆಳಿಗ್ಗೆಯೇ ಅಂಗಡಿಗೆ ಹೋದರೆ ಹಿಂತಿರುಗುವುದು ರಾತ್ರಿ. ಶುಕ್ರವಾರದ ಮಧ್ಯಾಹ್ನ ಮತ್ತು ವರ್ಷಕ್ಕೆರಡು  ಹಬ್ಬದ ದಿನ ಬಿಟ್ಟರೆ ಬೇರೆ ರಜೆ ಇಲ್ಲ. ಹೀಗೆ ಇಡೀ ಒಂದು ಯುಗವನ್ನೇ ಬಾಬಾ ಸೈಕಲ್ಲುಗಳೊಂದಿಗೆ ಕಳೆದರು. ಸೈಕಲ್ಲುಗಳ ಬಳಕೆ ಕಡಿಮೆಯಾಗಿ ಮೋಟಾರು ವಾಹನಗಳು ಬಂದಾಗ ಸಹಜವಾಗಿ ಅಂಗಡಿಯಲ್ಲಿ ಕೆಲಸ ಕಮ್ಮಿ ಆಯಿತು. ಒಂದುಕಾಲದಲ್ಲಿ ಎಂಟನೇ ತರಗತಿ ಮಕ್ಕಳಿಗೆ ಸೈಕಲ್ ಕೊಡುವ ಬಗ್ಗೆ ಸರ್ಕಾರ ಘೋಷಿಸಿದಾಗ ಬಾಬಾ ಸಂತಸಪಟ್ಟಿದ್ದರು. ಮುಂದಿನ ದಿನಗಳಲ್ಲಿ ಆ ಮಕ್ಕಳು ಸೈಕಲ್ಲಿನ ಹಿಂಭಾಗ, ಮುಂಭಾಗ, ಕಡ್ಡಿ ಚಕ್ರಗಳಿಗೆಲ್ಲ ಬಾಬಾರ ಬಳಿ ಬಣ್ಣದ ರಿಬ್ಬನ್ನುಗಳ ಸಿಂಗಾರ ಮಾಡಿಸಿಕೊಂಡು ಸಣ್ಣ ಪುಟ್ಟ ರಿಪೇರಿಗಳನ್ನು ಮಾಡಿಸುತ್ತಾ ಅವರ ಸೈಕಲಂಗಡಿಗೆ ಅಂಟಿಕೊಂಡು ಬಾಬಾ ಸಮಾಧಾನವಾಗಿರುವಂತೆ ನೋಡಿಕೊಂಡವು‌.

ಸೌಹಾರ್ದತೆಗೆ ಹೆಸರಾದ ನಮ್ಮೂರಿನಲ್ಲಿ ಪ್ರತಿವರ್ಷ ಜಾತ್ರೆಯ  ತೇರನ್ನು ಎಲ್ಲ ಜಾತಿ ಧರ್ಮಗಳಿಗೆ ಸೇರಿದ ವಿವಿಧ  ಕಸುಬು ಮಾಡುವ ಜನ ಸೇರಿ ಕಟ್ಟುವುದು ಪ್ರತೀತಿ. ತೇರಿನ ಕಲಶದ ಕೆಳಗೆ ಇರುವ ಕೆಂಪು ಬಿಳಿ ಬಟ್ಟೆಯನ್ನು ಬಾಬಾ ಕಟ್ಟುತ್ತಿದ್ದರು. ಜಾತ್ರೆಗೆ ಮುನ್ನ ನಡೆಯುವ ಈ ಕಾರ್ಯವನ್ನು ಬಾಬಾ  ಬಹಳ ಭಕ್ತಿಯಿಂದ ಮಾಡುತ್ತಿದ್ದರು. ತೇರಿನ ಮೇಲಕ್ಕೆ ಸಹಾಯಕರೊಂದಿಗೆ ಹತ್ತಿ ಬಾಬಾ  ಬಟ್ಟೆ ಕಟ್ಟುತ್ತಿದ್ದ ಈ ದೃಶ್ಯವನ್ನು ನಾವು ಮಕ್ಕಳು ಕೆಳಗೆ ನಿಂತು ಕಣ್ತುಂಬಿಕೊಳ್ಳುತ್ತಿದ್ದೆವು. ಒಂದು ವರ್ಷ ಕಾಲು ಪೆಟ್ಟಾಗಿ ಓಡಾಡಲಾಗದೆ ಬಾಬಾ  ಮನೆಯಲ್ಲೇ ಇದ್ದಾಗ ಮಹಾಲಿಂಗೇಶ್ವರ ದೇವಸ್ಥಾನದ ಕಡೆಯಿಂದ ಒಂದಿಷ್ಟು ಜನ ಹಿರಿಯರು ಹಣ್ಣು ಹಂಪಲಿನೊಂದಿಗೆ  ಮನೆಗೆ ಬಂದು ಬಾಬಾರಿಗೆ ನಮಸ್ಕರಿಸಿ, ಆರೋಗ್ಯ ವಿಚಾರಿಸಿ,  ತೇರಿನ ಬಟ್ಟೆಯನ್ನು ಕಟ್ಟುವ ಕೈಂಕರ್ಯವನ್ನು ಇನ್ನೊಬ್ಬರಿಗೆ ವಹಿಸುವ  ಬಗ್ಗೆ ಗೌರವದಿಂದ ಅನುಮತಿ ಕೇಳಿದ ಸಂಗತಿ ಇಂದಿಗೂ ನಮ್ಮೆಲ್ಲರ ಮನಸಿನಲ್ಲಿ ಹಸಿರಾಗಿ ಉಳಿದಿದೆ. ದೊಡ್ಡ ಮಟ್ಟದ ಸಂಸ್ಕಾರ ಹೊಂದಿರುವ ನಮ್ಮ ಬಸ್ರೂರು ಹಾಗೂ ಬಸ್ರೂರಿನ‌ ಜನ,  ಎಲ್ಲರೊಂದಿಗೆ ಕೂಡಿ ಬಾಳುವ ಪಾಠವನ್ನು ನಮ್ಮ ಪುಟ್ಟ ಮನಸುಗಳಿಗೆ ಅದಾಗಲೇ ತುಂಬಿದ್ದರು.

ಸೂರಿನ ಆಸರೆಗಾಗಿ ಹತ್ತಾರು ಊರುಗಳನ್ನು ಸುತ್ತಬೇಕಾಗಿ ಬಂದರೂ ಬಾಬಾರ ಸೈಕಲಂಗಡಿ ಮಾತ್ರ ಊರು ಬದಲಾಯಿಸದೆ  ಬಸ್ರೂರಿನಲ್ಲೇ ಉಳಿಯಿತು. ಕಷ್ಟ ನಷ್ಟ ತೊಂದರೆ ತಾಪತ್ರಯಗಳ ನಡುವೆಯೂ ಬಾಬಾ  ಅದನ್ನು ಉಳಿಸಿಕೊಂಡರು. ತನ್ನ ಊರನ್ನು ಹಾಗೂ ವೃತ್ತಿಯನ್ನು ವಿಪರೀತವಾಗಿ ಪ್ರೀತಿಸುತ್ತ ಬೇರೆಲ್ಲವನ್ನು ಮರೆಯುತ್ತಿದ್ದ ಬಾಬಾ  ಸೈಕಲ್ ಹಾಗೂ ಬಸ್ರೂರನ್ನು ನಾವು ಶಾಶ್ವತವಾಗಿ ಪ್ರೀತಿಸುತ್ತಲೇ ಉಳಿಯುವ ಹಾಗೆ ಮಾಡಿದರು.   ಮಿತಖರ್ಚಿನಲ್ಲಿ ಸಂಭಾಳಿಸಬಹುದಾದ, ದೈಹಿಕ ವ್ಯಾಯಾಮವನ್ನು ನೀಡುವ, ಯಾವುದೇ ಮಾಲಿನ್ಯಕ್ಕೆ ಕಾರಣವಾಗದ, ರಾಶಿ‌ರಾಶಿ ಬಾಲ್ಯದ ನೆನಪುಗಳನ್ನೂ ಊರಿನ ಬಾಂಧವ್ಯವನ್ನೂ ಹಸಿರಾಗಿರಿಸಿರುವ ಸೈಕಲ್   ಇಂದಿಗೂ ನನ್ನ ಕಣ್ಣಿಗೆ ದೇವದೂತನಂತೆಯೇ ಕಾಣಿಸಿ ಅದರೊಂದಿಗೆ ಮತ್ತೆ ಮತ್ತೆ ಒಲವಿಗೆ ಬೀಳುತ್ತೇನೆ.

About The Author

ಲೈಲಾ ಪರ್ವೀನ್

ಲೈಲಾ ಪರ್ವೀನ್ ಮೂಲತಃ ಕುಂದಾಪುರ ತಾಲೂಕಿನ ಬಸ್ರೂರಿನವರು. ವಾಸ ಬೆಳ್ತಂಗಡಿ. ಬಂಟ್ವಾಳದ ಕಾವಳಪಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

3 Comments

  1. Munavar sha basrur

    Really i proud of you laila because you are my classmate.
    And it’s very heart touching story about your baba. And I personally know Hasan bhai he is very nice person and very polite.
    Our childhood time we use hasan bhai rented bicycle..
    Super

    Reply
  2. ಆನಿಲ್ ವಾಘ್

    ಆಪ್ತವಾದ ಬರವಣಿಗೆ ತುಂಬ ಇಷ್ಟವಾಯಿತು, ನಿಮ್ಮ ಬರವಣಿಗೆಯನ್ನು ಮುಂದುವರಿಸಿ

    Reply
  3. Armaan Riyaaz

    Thank you Munna 🌿

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ