ಎಂದೂ ಬಾರದವಳಿಗೆ

ಯಾವತ್ತೂ ನನ್ನ ಬಾಹುಗಳಲ್ಲಿ
ಬಾರದವಳು ನೀನು.
ತೊಡಗುವ ಮೊದಲೇ
ಕಳೆದು ಹೋದವಳು.
ನಿನ್ನ ತಣಿಸುವ ಹಾಡ
ಅರಿಯದವನು ನಾನು.

ನಿಲ್ಲಿಸಿರುವೆ ಕಣ್ಣ ಮುಂದಿನ ಕಡಲ ಮೊರೆತದ ನಡುವೆ
ನಿನ್ನ ಗುರುತು ಹಿಡಿಯಲು ತೊಡಗುವುದನ್ನು
ಎದೆಯೊಳಗಿನ ಅಗಾದ ಆಕಾರಗಳು ರೂಪಗಳು
ತೀರದ ದೂರದ ಕಾಡುವ ನೆಲ,
ನಗರಗಳು, ಗೋಪುರಗಳು, ಸೇತುವೆಗಳು, ತಟ್ಟೆಂದು
ಎದುರಾಗುತ್ತಿದ್ದ ಹಾದಿಯ ತಿರುವುಗಳು,
ಒಂದು ಕಾಲದಲ್ಲಿ ದೇವಾನುದೇವತೆಗಳ ಸಪ್ಪಳದ
ನಡುವೆಯೂ ಮಿನುಗುತ್ತಿದ್ದ ದೂರದ ಭುವಿಯಂತಹವಳು.
ಉಮ್ಮಳಿಸುತ್ತಿವೆ ಈ ಎಲ್ಲವು ಒಳಗೊಳಗೆ ನಿನ್ನ ಒಳಗಿನವು ಅರಿವಾಗದೆ
ಎಂದಿಗೂ ಎಟುಕದವಳು ನೀನು.

ನಾ ಯಾವತ್ತೂ ಹಂಬಲಿಸುತ್ತ ನಿರುಕಿಸುತ್ತಿದ್ದ
ಹೂದೋಟ ನೀನು ಮಾತ್ರ .
ಊರ ಮನೆಯ ತೆರೆದಿದ್ದ ಕಿಟಕಿ
ನೀ ಹೊರಟು ನಿಂತಿದ್ದೆ ನನ್ನ ಕಾಣಲು
ದುಗುಡ ತುಂಬಿ ಬಹುತೇಕ.
ನಾನೂ ಕಂಡೆ ಆಕಸ್ಮಿಕದ ಹಾದಿಗಳಲ್ಲಿ
ನೀ ನಡೆದು ಮರೆಯಾಗುತ್ತಿದ್ದೆ.
ಒಮ್ಮೊಮ್ಮೆ ಅಂಗಡಿಯ ಕನ್ನಡಿಯಲ್ಲಿ ಅದಾಗತಾನೇ
ಹಾದು ಹೋಗಿದ್ದ ನಿನ್ನ ಮಸುಕು ರೂಪ ಕಾಣುತ್ತಿತ್ತು
ಅದಾಗ ತಾನೇ ನಾನೂ ಅದರಲ್ಲಿ ಅಲ್ಲೇ ಕಾಣುತ್ತಿದ್ದೆ.
ಯಾರಿಗೆ ಗೊತ್ತು? ಅದೇ ಹಕ್ಕಿ ನಮ್ಮಿಬ್ಬರಲ್ಲೂ ಕುಹುಗುಟ್ಟಿರಬಹುದು
ಅದೇ ಸಂಜೆಯ ಹೊತ್ತು ದೂರದಲ್ಲಿ ಬೇರೆಯಾಗಿ

ಮೂಲ ರಿಲ್ಕ್ ಕವಿತೆ: You Who Never Arrived
ಭಾವಾನುವಾದ: ಅಬ್ದುಲ್ ರಶೀದ್