ಸಿನಿಮಾ ಲೋಕದಲ್ಲಿ ಅಭಿನಯಶಾರದೆ ಎಂಬ ಕೀರ್ತಿಗೆ ಪಾತ್ರರಾಗಿದ್ದ ಹಿರಿಯ ನಟಿ ಜಯಂತಿ ತೀರಿಕೊಂಡಿದ್ದಾರೆ. ಅನಾರೋಗ್ಯದಿಂದ ಕೆಲಕಾಲ ಬಳಲುತ್ತಿದ್ದ ಅವರು ಸೋಮವಾರ ಬೆಳಿಗ್ಗೆ ಚಿರನಿದ್ರೆಗೆ ಜಾರಿದರು. ಕಮಲಕುಮಾರಿಯಾಗಿದ್ದ ಅವರು  ಬಳ್ಳಾರಿ ಮೂಲದವರು. ಜಯಂತಿ ಎಂಬ ಹೆಸರಿನೊಂದಿಗೆ ಸಿನಿಮಾ ಲೋಕ ಪ್ರವೇಶಿಸಿದ ಬಳಿಕ, ಕನ್ನಡದ ಕ್ಲಾಸಿಕ್ಸ್ ಎಂದು ಗುರುತಿಸಿಕೊಳ್ಳುವ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಅವರ ಸುದೀರ್ಘವಾದ ಸಿನಿಮಾ ಪಯಣವನ್ನು ನೆನಪಿಸಿಕೊಂಡು ಭಾರತಿ ಹೆಗಡೆ ಬರೆದ ಲೇಖನ ಇಲ್ಲಿದೆ. 

 

ಅವಳ ಹೆಸರು ಮಾಧವಿ. ವಿಂಗ್ ಕಮಾಂಡರ್‌ನ ಹೆಂಡತಿ. ಯುದ್ಧದಲ್ಲಿ ಒಂದು ಕಾಲು ಮತ್ತು ಪುರುಷತ್ವವನ್ನು ಕಳೆದುಕೊಂಡ ಪತಿಯ ಪತ್ನಿ ಇವಳು. ಕಾಮವನ್ನು ಹತ್ತಿಕ್ಕಲಾಗದೆ ಪರಪುರುಷನ ಸಂಗ ಮಾಡಿ ನಂತರ ತಪ್ಪುಮಾಡಿದ್ದೇನೆಂಬ ಪಶ್ಚಾತ್ತಾಪ ಪಡುತ್ತಲೇ ಕಡೆಗೊಮ್ಮೆ ಸಾಯುತ್ತಾಳೆ.

ಸಿಂಗಾರೂ… ಎನ್ನುತ್ತ ಮಸಣದ ಹೂವಿನ ಘರವಾಲಿಯ ಪಾತ್ರ,
ಮದುವೆಗೆ ಮುಂಚೆಯೇ ಮಗುವಾದರೆ ತಪ್ಪೇನು ಎಂದು ದಿಟ್ಟವಾಗಿ ಕೇಳುವ ಮಿಸ್.ಲೀಲಾವತಿ, ಡ್ಯುಯೆಲ್ ಪರ್ಸನಾಲಿಟಿಯನ್ನು ಎತ್ತಿಹಿಡಿಯುವ ಎರಡು ಮುಖದ ನಾಯಕಿ. ನೃತ್ಯಗಾತಿಯಾದರೂ ಗೃಹಿಣಿಯ ಕಟ್ಟುಪಾಡುಗಳ ಎಲ್ಲೆಯನ್ನು ಮೀರದ ಕುಲಗೌರವದ ನಾಯಕಿ,

ಭಯ, ಕಾಮನೆ… ಪ್ರೇಮ… ಹೀಗೆ ಎಲ್ಲ ಭಾವಗಳನ್ನೂ ಒಂದೇ ಬಾರಿಗೆ ವ್ಯಕ್ತಪಡಿಸುವ ಅದ್ಭುತ ಕಲಾವಿದೆ ಜಯಂತಿ ಈಗ ನಮ್ಮನ್ನಗಲಿದ್ದಾರೆ. ಅವರಿಗೆ ವಯಸ್ಸು 76 ಆಗಿತ್ತು.

ಮೊನ್ನೆಯಷ್ಟೇ ಅವರ ಕುರಿತು ಲೇಖನವೊಂದನ್ನು ಬರೆಯುವಾಗ ಇವೆಲ್ಲ ನೆನಪಿಗೆ ಬಂದಿದ್ದವು. ಅವರನ್ನು ಸಂದರ್ಶನ ಮಾಡುವಾಗಿನ ಆ ದಿನಗಳನ್ನು ಒಮ್ಮೆ ನೆನಪಿಸಿಕೊಂಡಿದ್ದೆ. ಈಗ ಅವರು ಇನ್ನಿಲ್ಲ ಎಂಬ ಸುದ್ದಿ ಬಂದಿದೆ. ಜಯಂತಿ ಎಂದ ಕೂಡಲೇ ಮೊದಲು ನೆನಪಾಗುವುದೇ ಅವರ ವಯಸ್ಸು, ಒಂದು ಕಾಲದ ಸುರಸುಂದರಿ, ಸುಮಾರು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮ ಛಾರ್ಮ್ ಅನ್ನು ಉಳಿಸಿಕೊಂಡ ಚಿರಯೌವ್ವನೆ. ಕಾಲನ ಪ್ರಭಾವ ಅವರ ಮೇಲೆ ಆಗಲೇ ಇಲ್ಲವೇನೋ ಎಂಬಂತಿದ್ದ ಜಯಂತಿ ಅವರ ಬಳಿ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ ಸಿಟ್ಟುಬರುತ್ತಿತ್ತು.

ನನ್ನ ವಯಸ್ಸು ತಗೊಂಡೇನಾಗಬೇಕು ನಿಮಗೆ?

ಜಯಂತಿ ಅವರನ್ನು ನಾಲ್ಕೈದು ವರ್ಷಗಳ ಹಿಂದೆ ಸಂದರ್ಶನಕ್ಕೆಂದು ಅವರ ಮನೆಗೆ ಹೋದಾಗ ಆಗಲೇ ವಯೋಸಹಜತೆಯಿಂದ ನಡುಗುವ ಕಾಲುಗಳನ್ನು ಬೇರೆಯವರಿಗೆ ತಿಳಿಯದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದರು. ‘ನಿಮ್ಮ ವಯಸ್ಸೆಷ್ಟು’ ಎಂದು ಅಚಾನಕ್ಕಾಗಿ ಕೇಳಿಬಿಟ್ಟೆ, ನನ್ನ ದುರುಗುಟ್ಟಿ ನೋಡಿ ‘28.. ಅಂತ ಬರಕ್ಕೊಳಮ್ಮಾ’ ಎಂದರು. ‘ಯಾಕೆ ನನ್ನ ವಯಸ್ಸು ಬೇಕು ನಿಮಗೆ’ ಎಂದು ಕೇಳುತ್ತಾ, ‘ನಿಮಗೆ ಗೊತ್ತಾ ಕನ್ನಡ ಸಿನಿಮಾದಲ್ಲಿ ಸ್ವಿಮ್ ಡ್ರೆಸ್ ಹಾಕಿದ ಮೊದಲ ನಟಿ ನಾನು’ ಎಂದು ಹೆಮ್ಮೆಯಿಂದ ಹೇಳಿದರು.

ಒಂದು ಕಾಲದ ಸುರಸುಂದರಿ, ಅಭಿನಯ, ಶುದ್ಧ ಭಾಷೆ, ಎಲ್ಲದರಲ್ಲೂ ಒಂದಕ್ಕೊಂದು ಬೆರೆತಂತಿರುವ ನಟಿ ಜಯಂತಿ ಬಿಳಿ ಉಡುಗೆಯಲ್ಲಿ ನನ್ನ ಮುಂದೆ ಕುಳಿತು ಹಳೆಯ ನೆನಪುಗಳ ತುಣುಕುಗಳನ್ನು ಹೆಕ್ಕುತ್ತಿದ್ದರೆ, ಗತ ವೈಭವಗಳನ್ನು ಮೊಗೆಮೊಗೆದು ಆಸ್ವಾದಿಸುತ್ತಿರುವಂತೆ ಅನಿಸುತ್ತಿತ್ತು. ‘ನಿಮಗೆ ಗೊತ್ತಾ, ಜೇಡರ ಬಲೆ ಸಿನಿಮಾದ ನನ್ನ ಚಿತ್ರವಿದ್ದ ಪೋಸ್ಟರ್‌ಗಳನ್ನು ಹರಿದುಕೊಂಡು ಹೋಗುತ್ತಿದ್ದರಂತೆ ಪ್ರೇಕ್ಷಕರು’ ಎಂದು ಖುಷಿಯಿಂದ, ತುಸು ನಾಚಿಕೆಯಿಂದ ಹೇಳಿದರು.

ನಿಜ, ಅಭಿನಯ ಶಾರದೆ ಜಯಂತಿ ಅವರ ಬಳಿ ಮಾತನಾಡುವುದೆಂದರೆ ಅಲ್ಲಿ ಯಾವುದೇ ಬಿಗುಮಾನಗಳಿರುವುದಿಲ್ಲ, ಜಯಂತಿ ಬಳಿ ಗುಟ್ಟೆಂಬುದೇ ಇಲ್ಲ. ‘ನನ್ನ ಮನಸ್ಸೇನಿದ್ದರೂ ಬಿಳಿ ಹಾಳೆಯ ಹಾಗೆ’ ಎಂದು ಹೇಳಿಕೊಳ್ಳುವ ಜಯಂತಿ ಸುಂದರ ಅಷ್ಟೇ ಅಲ್ಲ ಬೋಲ್ಡ್ ನಟಿ ಎಂದೇ ಕರೆಸಿಕೊಂಡವರು.

ಸ್ವಿಮ್ ಡ್ರೆಸ್, ಮಿಡಿ, ಸ್ಕರ್ಟ್ ಸೇರಿದಂತೆ ಎಲ್ಲ ರೀತಿಯ ಮಾಡ್ ಡ್ರೆಸ್‌ಗಳನ್ನು ಕನ್ನಡದಲ್ಲಿ ಹಾಕಿದ ಮೊದಲ ನಾಯಕಿ ನಾನು ಎಂದು ಖುಷಿ, ಹೆಮ್ಮೆಯಿಂದ ಹೇಳಿಕೊಳ್ಳುವ ಜಯಂತಿ ತಮ್ಮ ಇಳಿವಯಸ್ಸಿನಲ್ಲೂ ತಮ್ಮ ಬಟ್ಟಲುಗಣ್ಣುಗಳನ್ನು ಅರಳಿಸಿ ಮಾತನಾಡುತ್ತಿದ್ದರೆ ನಿಜ, ಅವರಿಗೆ ಯೌವನ ಹಸಿರಾಗಿದೆ ಎಂದೆನಿಸಿಬಿಡುತ್ತಿತ್ತು. ಅದೇ ಮುಗ್ಧತನದ ಮಾತುಗಳು, ಸ್ನಿಗ್ಧ ನಗು ಇವೆಲ್ಲ ಜಯಂತಿ ಚಿರಯೌವ್ವನೆ ಎಂಬುದನ್ನು ಮತ್ತೆ ಮತ್ತೆ ಹೇಳುತ್ತವೆಯೋನೋ ಅನಿಸಿಬಿಡುತ್ತಿತ್ತು. ವಯೋಸಹಜತೆಯಿಂದ ನಿಂತರೆ ನಡುಗುವ ಕಾಲುಗಳನ್ನು ಬೇರೆಯವರಿಗೆ ತಿಳಿಯದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವ ಜಯಂತಿ ನನಗೆ ನಗೋದಂದ್ರೆ ತುಂಬ ಇಷ್ಟ ಎಂದು ಯಾವ ಹಮ್ಮು ಬಿಮ್ಮುಗಳಿಲ್ಲದೇ ಮಾತಿಗಿಳಿಯುತ್ತಿದ್ದರು. ಹೇಳು ರಾಜಾ.. ಎಂದು ಮಾತಿಗೆ ಮುಂಚೆ ರಾಜಾ ಎನ್ನುತ್ತ ಅದೆಷ್ಟೋ ದಿವಸಗಳಿಂದ ಪರಿಚಯವಿರುವವರಂತೆ ಮಾತನಾಡಿಸುತ್ತಿದ್ದರು ಜಯಂತಿ.

ಮಹಿಳೆ ಚಿತ್ರರಂಗಕ್ಕೆ ಕಾಲಿಡುವುದೇ ಅಪರಾಧ ಎಂಬ ಕಾಲದಲ್ಲಿ ಜಯಂತಿ ಚಿತ್ರರಂಗದಲ್ಲಿ ಮಾಡ್ ಡ್ರೆಸ್, ಸ್ವಿಮ್ ಡ್ರೆಸ್ ಹಾಕಿದ ಮೊದಲ ನಾಯಕಿ. ನಾಯಕಿ ಎಂದರೆ ತಲೆ ತಗ್ಗಿಸಿ ಕಣ್ಣನ್ನು ಪಟ ಪಟನೆ ಮಿಟುಕಿಸುತ್ತಾ ತಗ್ಗಿದ ಧ್ವನಿಯಲ್ಲಿ ಮಾತನಾಡಬೇಕು ಎಂಬ ಕಲ್ಪನೆ ಮುರಿದು ತನಗನ್ನಿಸಿದ್ದನ್ನು ಬಿಂದಾಸ್ ಆಗಿ ಮಾಡುವ ಮಿಸ್. ಲೀಲಾವತಿ ಚಿತ್ರದ ನಾಯಕಿ ಪಾತ್ರವನ್ನು ನಿರ್ವಹಿಸಿ ಹೊಸತನದ ಅಲೆ ಎಬ್ಬಿಸಿದವರು.

ಬೆಟ್ಟದ ಹುಲಿಯಲ್ಲಿ ಈಜು ಉಡುಗೆ ತೊಟ್ಟು ಪಡ್ಡೆ ಹುಡುಗರ ಕನಸಿಗೆ ರಂಗನ್ನು ತುಂಬಿದವರು, ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಸಂತೋಷ .. ಆಹಾ… ಓಹೋ… ಎಂದು ಪರಪುರುಷನ ಜೊತೆ ನಲಿದಾಡಿ ಸಂಪ್ರದಾಯಸ್ಥರ ಹುಬ್ಬಗಣ್ಣು ಮೇಲೇರುವಂತೆ ಮಾಡಿದವರು, ಚಕ್ರತೀರ್ಥದಲ್ಲಿ ತಾಯಿ ಮಗಳಾಗಿ ದ್ವಿಪಾತ್ರದಲ್ಲಿ ಅಭಿನಯಿಸಿ ಸೈಯೆನ್ನಿಸಿಕೊಂಡರು, ಜಯವಿಜಯದಲ್ಲಿ ಪ್ಯಾಂಟ್ ಹಾಕಿಕೊಂಡು ರೌಡಿಗಳನ್ನು ಸದೆ ಬಡಿಯುವ ದೃಶ್ಯದಲ್ಲಿ ಸಕತ್ ಆಗಿಯೇ ವಿಶಲ್ ಗಿಟ್ಟಿಸಿದರು. ಬಹದ್ದೂರು ಗಂಡಿಗೇ ಸವಾಲು ಹಾಕುವ ರಾಣಿಯ ಪಾತ್ರದಲ್ಲಿ ಮಿಂಚಿದವರು- ಹೀಗೆ ಜಯಂತಿ ನಿರ್ವಹಿಸಿದ ಪಾತ್ರಗಳು ಕನ್ನಡದಲ್ಲಿ ಬಹುಶಃ ಯಾವ ನಾಯಕಿಯರೂ ನಿರ್ವಹಿಸದಷ್ಟು ವೈವಿಧ್ಯಮಯವಾಗಿವೆ. ದಕ್ಷಿಣ ಭಾರತದ ಮೇರು ನಾಯಕರಾದ ರಾಜ್ ಕುಮಾರ್, ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್, ಶಿವಾಜಿ ಗಣೇಶನ್ ಅವರಿಗೆ ನಾಯಕಿಯಾಗಿ ಬೆಳ್ಳಿತೆರೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿಯವರದ್ದು.

ಒಂದು ಕಾಲದ ಸುರಸುಂದರಿ, ಸುಮಾರು ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮ ಛಾರ್ಮ್ ಅನ್ನು ಉಳಿಸಿಕೊಂಡ ಚಿರಯೌವ್ವನೆ. ಕಾಲನ ಪ್ರಭಾವ ಅವರ ಮೇಲೆ ಆಗಲೇ ಇಲ್ಲವೇನೋ ಎಂಬಂತಿದ್ದ ಜಯಂತಿ ಅವರ ಬಳಿ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ ಸಿಟ್ಟುಬರುತ್ತಿತ್ತು.

ಬಳ್ಳಾರಿಯಿಂದ ಮದ್ರಾಸ್‌ವರೆಗೆ…

ಜಯಂತಿಯ ಮೂಲ ಹೆಸರು ಕಮಲಕುಮಾರಿ. ತಂದೆ ಪ್ರೊ. ಬಾಲಸುಬ್ರಹ್ಮಣ್ಯಂ, ತಾಯಿ ಸಂತಾನ ಲಕ್ಷ್ಮಿ, ಬಳ್ಳಾರಿಯಲ್ಲಿ ಬಾಲ್ಯ ಕಳೆದರು, ಅಮ್ಮನಿಗೆ ಮಗಳು ಡಾನ್ಸ್ ಕಲಿಯಬೇಕೆಂಬ ಆಸೆ. ಹಾಗಾಗಿ ಮಗಳನ್ನು ಮದ್ರಾಸ್‌ನ ಚಂದ್ರಕಲಾ ಎಂಬುವರ ಡಾನ್ಸ್ ಸ್ಕೂಲಿಗೆ ಸೇರಿಸಿದರು. ಅಲ್ಲಿ ಖ್ಯಾತ ತಮಿಳು ನಟಿ ಮನೋರಮಾ ಅವರೂ ಇದ್ದರು. ಚಂದ್ರಕಲಾ ಆ ಕಾಲದಲ್ಲಿ ತಮಿಳು ಚಿತ್ರಗಳಲ್ಲಿ ಐಟಮ್ ಸಾಂಗ್‌ಗಳಿಗೆ ನೃತ್ಯ ಮಾಡುತ್ತಿದ್ದರು. ಅವರ ಜೊತೆ ಜಯಂತಿಯೂ ಸೇರಿದಂತೆ ಎಲ್ಲ ವಿದ್ಯಾರ್ಥಿಗಳೂ ಶೂಟಿಂಗ್ ನೋಡಲು ಹೋಗುತ್ತಿದ್ದರು. ಆಗ ಖ್ಯಾತ ನಿರ್ದೇಶಕ ವೈ.ಆರ್.ಸ್ವಾಮಿ ಅವರ ಕಣ್ಣಿಗೆ ಬಿದ್ದವರು ನಮ್ಮ ಜಯಂತಿ.

ಆಗ ವೈ.ಆರ್.ಸ್ವಾಮಿ ಅವರು ತಮ್ಮ ಜೇನುಗೂಡು ಸಿನಿಮಾಕ್ಕೆ ನಾಯಕಿಯ ತಲಾಷೆಯಲ್ಲಿದ್ದರು. ಅದರಲ್ಲಿ ಮೂವರು ನಾಯಕಿಯರು. ಇಬ್ಬರು ನಾಯಕಿಯರು ಆಗಲೇ ಸಿಕ್ಕಿದ್ದರು. ಮೂರನೇ ನಾಯಕಿಯಾಗಿ ಅವರ ಕಣ್ಣಿಗೆ ಬಿದ್ದವರೇ ಈ ಕಮಲಕುಮಾರಿ. ನಂತರ ಜಯಂತಿ ಆದರು. ಜೇನಿರುಳು ಜೊತೆಗೂಡಿರಲು ಎಂದು ಹಾಡಿ ಅಭಿನಯಿಸಿ ಗೆದ್ದೂ ಬಿಟ್ಟರು.

ನಂತರ ಚಂದವಳ್ಳಿಯ ತೋಟ ಚಿತ್ರಕ್ಕೆ ಆಯ್ಕೆ ಆದರು. ತುಂಬು ಕುಟುಂಬದ ಸೊಸೆಯಾಗಿ ಬಂದು ಸವಾಲುಗಳನ್ನು ಎದುರಿಸುವ ಪಾತ್ರ ನಿರ್ವಹಿಸಿ ನೋಡುಗರ ಕಣ್ಣೆವೆಯನ್ನು ತೇವ ಮಾಡುವಲ್ಲಿ ಯಶಸ್ವಿಯಾದರು. ಇದೆ ಜಯಂತಿ ಪ್ರೇಮಮಯಿ ಚಿತ್ರದಲ್ಲಿ ತುಂಬುಕುಟುಂಬವನ್ನು ಒಡೆಯುವ ಬಿನ್ನಾಣಗಿತ್ತಿ ಪಾತ್ರ ಕೂಡ ಮಾಡಿದ್ದು ಅವರ ಅಭಿನಯದ ರೇಂಜ್ ತೋರಿಸುತ್ತದೆ.

ಚಂದವಳ್ಳಿಯ ತೋಟ (1964) ದಿಂದ ಹಿಡಿದು ಬಹದ್ದೂರು ಗಂಡು (1976)ಸಿನಿಮಾವರೆಗೆ 39 ಚಿತ್ರಗಳಲ್ಲಿ ಡಾ.ರಾಜ್‌ಕುಮಾರ್ ಜೊತೆ ನಾಯಕಿಯಾಗಿ ಅಭಿನಯಿಸುವ ಮೂಲಕ ಅತಿಹೆಚ್ಚಿನ ಸಿನಿಮಾಗಳಲ್ಲಿ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿಸಿದ ಖ್ಯಾತಿ ಜಯಂತಿ ಅವರದ್ದು. ರಾಜ್ ಎಂದು ಕರೆಯುತ್ತಿದ್ದರು ಜಯಂತಿ. ಜೊತೆಗೆ ಗ್ಲಾಮರ್ ಮತ್ತು ಪ್ರತಿಭೆ ಎರಡೂ ಮೇಳೈಸಿದ ಪಾತ್ರಗಳನ್ನು ಮಾಡಿದ ಖ್ಯಾತಿಯೂ ಜಯಂತಿ ಅವರಿಗೇ ಸಲ್ಲುತ್ತದೆ.

ಮಿಸ್ ಲೀಲಾವತಿ…

ಮಿಸ್‌ ಲೀಲಾವತಿ ಸಿನಿಮಾ ಕನ್ನಡದ ಸಿನಿಮಾಗಳಲ್ಲೇ ಮಹತ್ವದ ಸಿನಿಮಾ ಎಂದು ಈಗಲೂ ನಿಂತಿದೆ.

1965ರಲ್ಲಿ ತೆರೆಕಂಡ ಈ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಎಂ.ಆರ್.ವಿಠಲ ನಿರ್ದೇಶನದ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವತ್ಥ್ ಇದ್ದಾರೆ. ಮಹಿಳಾವಾದ, ಮಹಿಳಾ ಸ್ವಾತಂತ್ರ್ಯ ಎಂಬುದು ಅಷ್ಟಾಗಿ ಇರದ ಮಡಿವಂತಿಕೆಯ ಆ ಕಾಲದಲ್ಲಿ ಜಯಂತಿ ತುಂಬ ಬೋಲ್ಡ್ ಆಗಿ ನಟಿಸಿದ್ದು ವಿಶೇಷವಾಗಿತ್ತು. ಅದರ ಅನೇಕ ನೆನಪುಗಳನ್ನು ಜಯಂತಿ ಹಂಚಿಕೊಂಡಿದ್ದಾರೆ…

ಮಹಡಿ ಮೇಲಿಂದ ಕೆಳಗೆ ಮೆಟ್ಟಿಲನ್ನು ಇಳಿದು ಬರುವ ದೃಶ್ಯವಿದೆ. ಆಗೆಲ್ಲ ಬಾಂಬೆ ಕಲ್ಚರ್ ಜಾಸ್ತಿ. ಅಲ್ಲೆಲ್ಲ ತಲೆಯ ಮೇಲೆ ಎತ್ತರವಾದ ತುರುಬು ಹಾಕಿಕೊಳ್ಳುವ ಹೇರ್‌ಸ್ಟೈಲ್‌ ಆಗ ತುಂಬ ಜನಪ್ರಿಯವಾಗಿತ್ತು. ಹಾಗೆಯೇ ಹೊಕ್ಕುಳು ಕೆಳಗೆ ಸೀರೆ ಉಟ್ಟುಕೊಳ್ಳೋದು ಆಗಿನ ಫ್ಯಾಷನ್. ನಾನು ಕೂಡ ಅದೇ ರೀತಿ ಡ್ರೆಸ್ ಮಾಡಿಕೊಂಡು ಮೇಲಿಂದ ಕೆಳಗೆ ಇಳಿದು ಬಂದೆ. ನಿರ್ದೇಶಕ ಎಂ.ಆರ್. ವಿಠಲ್ ನೋಡಿದವರು ತಕ್ಷಣ ಅವರ ಹೆಂಡತಿ ಶಬರಿಯವರನ್ನು ಕರೆದರು. ಶಬರಿಯವರೇ ಈ ಸಿನಿಮಾಕ್ಕೆ ಕಾಸ್ಟೂಮ್ ಡಿಸೈನರ್ ಆಗಿದ್ದರು. ಅವರಿಗೆ ಹೇಳಿ ಇವಳನ್ನು ಒಳಗೆ ಕರೆದುಕೊಂಡು ಹೋಗಿ ಬೇರೆ ಸೀರೆ ಉಡಿಸು ಎಂದರು. ಬೇಡ ಅಪ್ಪಾಜಿ, ಇದು ಈಗಿನ ಫ್ಯಾಷನ್. ಚೆನ್ನಾಗಿರುತ್ತದೆ. ಹೀಗೇ ಉಟ್ಟುಕೊಳ್ಳುತ್ತೇನೆಂದು ಎಷ್ಟು ಹೇಳಿದರೂ ಕೇಳಲಿಲ್ಲ. ನಿನಗ್ಯಾಕೆ ಹಠ, ಸುಮ್ಮನೆ ಅವರು ಹೇಳಿದಂತೆ ಮಾಡು ಎಂದು ಅವರ ಹೆಂಡತಿ ನನ್ನನ್ನು ಬೈದು ಕರೆದುಕೊಂಡು ಹೋಗಿ ಮೈತುಂಬ ಮುಚ್ಚುವಂತೆ ಸೀರೆ ಉಡಿಸಿದರು. ಅಂದರೆ ಮಿಸ್.ಲೀಲಾವತಿಯ ಪಾತ್ರ ತುಂಬ ಬೋಲ್ಡ್ ಆಗಿತ್ತು ನಿಜ. ಆದರೆ ನಮ್ಮ ಉಡುಪುಗಳು ಅಷ್ಟು ಬೋಲ್ಡ್ ಆಗಿರಲು ಆಗಿನ ನಿರ್ದೇಶಕರು ಒಪ್ಪುತ್ತಿರಲಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. .

‘ಮಿಸ್.ಲೀಲಾವತಿ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂತು. ಪ್ರಶಸ್ತಿ ಸ್ವೀಕಾರಕ್ಕೆ ನಾವೆಲ್ಲ ದೆಹಲಿಗೆ ಹೋದ್ವಿ. ಆಗಿನ ಪ್ರಧಾನಿ ಇಂದಿರಾಗಾಂಧಿಯವರಿಂದ ಪ್ರಶಸ್ತಿ ತಗೊಂಡು ಕೆಳಗಿಳಿಯುತ್ತಿದ್ದ ಹಾಗೇ ಇಂದಿರಾ ಗಾಂಧಿ ಅವರು “ವೋ ಲಡಕೀ ಕೊ ಬುಲಾವ್’ ಎಂದು ಹೇಳಿಕಳುಹಿಸಿದರು. ಎಲ್ಲಿ ನನ್ನ ಪ್ರಶಸ್ತಿಯನ್ನು ಕಸಿದುಕೊಂಡು ಬಿಡುತ್ತಾರೋ ಎಂಬ ಭಯ. ಅದಕ್ಕೆ ಅದನ್ನು ಎದೆಗವಚಿಕೊಂಡೇ ಹೋದೆ. ಅವರು ಬಂದು ನನ್ನ ಕೈ ಹಿಡಿದುಕೊಂಡು ಪ್ರೀತಿಯಿಂದ ತಲೆ ಸವರಿ “ಜೀತೇ ರಹೋ ಬೇಟಿ’ ಎಂದು ಹರಸಿದರು. ದೇಶದ ಒಬ್ಬ ಪ್ರಧಾನಿಯೇ ನನ್ನ ಹರಸಿ ಕಳಿಸಿದರು ಎಂಬುದೆಲ್ಲ ನನಗೆ ಆಗ ತಿಳಿಯುವ ವಯಸ್ಸಲ್ಲ, ಸದ್ಯ, ನನ್ನ ಪ್ರಶಸ್ತಿ ಉಳಿತಲ್ಲ ಎಂದು ಉಸಿರುಬಿಟ್ಟೆ’ ಎಂದು ನಗುವ ಜಯಂತಿ ಮತ್ತೆ ನೆನಪಿಸಿಕೊಳ್ಳತೊಡಗಿದರು.

ಓಬವ್ವನ ಪಾತ್ರ ಮಾಡುವ ಸಮಯದಲ್ಲಿ ಜಯಂತಿ ಬಹುಬೇಡಿಕೆಯಲ್ಲಿದ್ದ ನಟಿಯಾಗಿದ್ದರು. ಆದರೂ ಆ ಚಿಕ್ಕ ಪಾತ್ರವನ್ನೇ ಒಪ್ಪಿಕೊಂಡು ಅಭಿನಯಿಸಿದ್ದು ಅವರ ಸರಳತನವನ್ನು ತೋರಿಸುತ್ತಿತ್ತು. ಹಾಗೆ ನೋಡಿದರೆ ನಾಗರಹಾವು ಸಿನಿಮಾದ ಚಿಕ್ಕ ಪಾತ್ರ ಒನಕೆ ಓಬವ್ವ ಪಾತ್ರವನ್ನು ಮೊದಲು ಕಲ್ಪನಾ ಮಾಡಬೇಕಿತ್ತು. ಅವರು ನಿರಾಕರಿಸಿದ ಕಾರಣ ಅದು ಜಯಂತಿ ಪಾಲಿಗೆ ಒದಗಿ ಬಂತು. ಜಯಂತಿ ಅದನ್ನು ಸವಾಲೆಂಬಂತೆ ಸ್ವೀಕರಿಸಿದರು. ಆದರೆ ಅವತ್ತೂ ಇವತ್ತೂ ಜಯಂತಿ ನಟನೆಯ ಓಬವ್ವನನ್ನು ಮರೆಯುವವರಾರು? ಶತ್ರುಗಳನ್ನು ಕೊಲ್ಲುವ ಸಮಯದಲ್ಲಿ ಉರಿವ ಗೋಳದಂತಿರುವ ಜಯಂತಿಯ ಕಣ್ಣುಗಳನ್ನು ಮರೆಯಲು ಸಾಧ್ಯವೇ? ಓಬವ್ವನಿಂದ ಜಯಂತಿಗೆ ಹೆಸರೋ… ಜಯಂತಿಯಿಂದ ಓಬವ್ವನ ಪಾತ್ರ ಹೆಚ್ಚು ಜನಪ್ರಿಯವಾಯಿತೋ… ಗೊತ್ತಿಲ್ಲ. ಆದರೆ ಇವತ್ತಿಗೂ ಓಬವ್ವ ಎಂದರೆ ಥಟ್ಟನೆ ನೆನಪಾಗುವುದು ಜಯಂತಿಯೇ. ಅಂದರೆ ಇಲ್ಲಿ ಗಮನಿಸಬೇಕಾದ್ದೇನು ಎಂದರೆ ಪಾತ್ರ ಒಳ್ಳೆಯದಿದ್ದರೆ ಅದು ಚಿಕ್ಕದೋ ದೊಡ್ಡದೋ ಎಂಬುದನ್ನೆಲ್ಲ ಜಯಂತಿ ನೋಡುತ್ತಿರಲಿಲ್ಲ. ಪಾತ್ರಕ್ಕೆ ಜೀವತುಂಬುವುದಷ್ಟೇ ನಮ್ಮ ಕೆಲಸ ಎಂದು ಭಾವಿಸಿದ್ದರು.

ಎಡಕಲ್ಲು ಗುಡ್ಡದ ಮೇಲಿನ ನೆನಪು…

‘ಎಡಕಲ್ಲು ಗುಡ್ಡದ ಮೇಲೆ ಸಿನಿಮಾಕ್ಕೆ ನೀನೇ ಆಗಬೇಕು ಎಂದು ಪುಟ್ಟಣ್ಣ ಹಠ ಹಿಡಿದಾಗ ಅದರ ಕತೆ ಕೇಳಿ ಸ್ವಲ್ಪ ಹಿಂಜರಿದೆ. ಮದುವೆಯಾದ ಹೆಣ್ಣೊಬ್ಬಳು ಕಾಮತೃಷೆಗಾಗಿ ಪರಪುರುಷನ ಹಿಂದೆ ಹೋಗುವ ಪಾತ್ರ. ‘ಇದನ್ನು ನಾನು ಮಾಡಿದರೆ ಜನ ನನಗೆ ಕಲ್ಲಲ್ಲಿ ಹೊಡೆಯಲ್ವಾ’ ಎಂದು ಕೇಳಿದ್ದೆ. ‘ಈ ಪಾತ್ರಕ್ಕೆ ನಿಮ್ಮನ್ನು ಹೊರತು ಬೇರೆಯಾರನ್ನೂ ಕಲ್ಪಿಸಿಕೊಳ್ಳಲೂ ನನಗೆ ಸಾಧ್ಯವಿಲ್ಲ’ ಎಂದು ಪುಟ್ಟಣ್ಣ ಪಟ್ಟುಹಿಡಿದರು. ನಂತರ ಪುಟ್ಟಣ್ಣ ಈ ಸಿನಿಮಾದಲ್ಲಿ ಆರತಿಯ ಪಾತ್ರವನ್ನು ಮೇಲೆತ್ತಲು ತುಂಬ ಪ್ರಯತ್ನಿಸಿದ್ದರು. ಆದರೆ ಕೊನೆಗೆ ಜನ ನನ್ನ ಪಾತ್ರವನ್ನು ಗೆಲ್ಲಿಸಿದರು, ನನಗೆ ಅದಕ್ಕೆ ಅವಾರ್ಡ್ ಕೂಡ ಬಂತು.’ ಎಂದರು. ಇಂತಹ ಅದೆಷ್ಟೋ ಘಟನೆಗಳು ನನ್ನ ಬತ್ತಳಿಕೆಯಲ್ಲಿವೆ ಎಂಬಂತೆ.

ನಿಜ, ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಅವರ ಪಾತ್ರವನ್ನು ಮರೆಯುವುದೆಂತು. ಕಾಮ ಮತ್ತು ಪ್ರೇಮದ ನಡುವಿನ ತಿಕ್ಕಾಟದ ಆ ಪಾತ್ರವನ್ನು ಒಳಗೊಳಗೇ ಬೇಯುತ್ತ, ಭಯ ಪಡುತ್ತ ಆದರೂ ಬಯಕೆಯನ್ನು ಹತ್ತಿಕ್ಕಲಾಗದ ಆ ಪಾತ್ರವನ್ನು ತುಂಬ ಮನೋಜ್ಞವಾಗಿ ಅಭಿನಯಿಸಿದವರು ಜಯಂತಿ.

ಆಗಿನ ಕಾಲದ ಹೀರೋಯಿನ್‌ಗಳ ಹಾಗೆ ಜಯಂತಿ ಕೂಡ ಅಪ್ಪಟ ಗೃಹಿಣಿಯ ಪಾತ್ರಗಳಲ್ಲಿ ಕಾಣಿಸಿಕೊಂಡದ್ದೇ ಹೆಚ್ಚು. ಹಾಗಂತ ಜಯಂತಿಗೆ ಮನೆಗೆಲಸ ಮಾಡಲು ಬರುತ್ತದೆಂದರೆ ಸ್ವತಃ ಜಯಂತಿಯೇ ನಕ್ಕುಬಿಡುತ್ತಾರೆ. ಜಯಂತಿ ಅವರಿಗೆ ಕಾಫಿ, ಟೀ, ಮಾಡಲೂ ಬರುವುದಿಲ್ಲ. ಎಷ್ಟೋ ಸಲ ಸಿನಿಮಾಗಳಲ್ಲಿ ರಂಗೋಲಿ ಹಾಕುವ ದೃಶ್ಯವಿದ್ದರೆ ರಂಗೋಲಿಯನ್ನು ಬಿಡಿಸಿದ ಮೇಲೆ ಕಡೆಯಲಿ ಒಂದೇಒಂದು ಸಣ್ಣ ಗೆರೆಯನ್ನು ಎಳೆಯಲು ನನ್ನ ಕೂರಿಸಿ ಶೂಟ್ ಮಾಡಿದ್ದುಂಟು. ‘ಕೆ. ಬಾಲಚಂದರ್ ನಿರ್ದೇಶನದ ತಮಿಳು ಸಿನಿಮಾದಲ್ಲಿ ನಾನು ನಾಯಕಿ. ಕನ್ನಡದಲ್ಲಿ ಎರಡು ರೇಖೆಗಳು ಸಿನಿಮಾ ಬಂತಲ್ಲ. ಅದು ತಮಿಳಿನ ರೀಮೇಕ್. ಅದರಲ್ಲಿ ನನ್ನದು ಗೃಹಿಣಿ ಪಾತ್ರ. ದೋಸೆ ಮಾಡುವ ದೃಶ್ಯ. ಆದರೆ ನನಗೆ ದೋಸೆ ಮೊಗಚಿಹಾಕಲೂ ಬರುವುದಿಲ್ಲ. ನಿರ್ದೇಶಕ ಬಾಲಚಂದರ್ ಅವರೇ ದೋಸೆಯನ್ನು ಹೊಯ್ದು, ನನ್ನ ಕೈಯ್ಯಲ್ಲಿ ಸೌಟು ಹಿಡಿಸಿ ನಾನೇ ದೋಸೆ ಮಾಡಿದಂತೆ ಚಿತ್ರಿಸಿದರು. ಶೂಟಿಂಗ್ ಮುಗಿದ ಮೇಲೆ ದೋಸೆ ತಿನ್ನಕ್ಕೆ ಬರುತ್ತಾಮ್ಮಾ.. ಎಂದು ಬಾಲಚಂದರ್ ಕೇಳಿದರು. ಹೂ.. ಎಂದು ತಲೆ ಅಲ್ಲಾಡಿಸಿದ್ದೆ.’ ಎಂದು ಪುಟ್ಟ ಹುಡುಗಿಯಂತೆ ಹೇಳುವ ಜಯಂತಿಯಲ್ಲಿ ತುಂಟತನ, ಹುಡುಗುತನ ಎಲ್ಲ ಕಡೆಯವರೆಗೂ ಅವರಲ್ಲಿದ್ದವು.

ಜಯಂತಿಗೆ ಆಭರಣಗಳೆಂದರೆ ತುಂಬ ಇಷ್ಟ. ಅದರಲ್ಲೂ ದೊಡ್ಡ ಉಂಗುರ, ದೊಡ್ಡ ಹಾರವೆಂದರೆ ತುಂಬ ಇಷ್ಟ. ಜೀವಿತದ ಕಡೆಯವರೆಗೂ ಅವರ ಕೈ ಬೆರಳುಗಳಲ್ಲಿ ದೊಡ್ಡದೊಡ್ಡ ಉಂಗುರುಗಳು ಇದ್ದವು. ಎಂಥದ್ದೇ ಸಂದರ್ಭ ಬಂದಾಗಲೂ ಅವರದನ್ನು ತೆಗೆಯುತ್ತಿರಲಿಲ್ಲ. ಸಿನಿಮಾವೊಂದರಲ್ಲಿ ಬಡ ಮಹಿಳೆಯ ಪಾತ್ರ ಮಾಡುವಸಂದರ್ಭ ಬಂದಾಗಲೂ ಆ ಉಂಗುರವನ್ನು ತಿರುಗಿಸಿಕೊಂಡಿದ್ದರೇ ಹೊರತು ತೆಗೆದಿರಲಿಲ್ಲ.

ಆರತಿ, ಭಾರತಿ, ಕಲ್ಪನ, ಮಂಜುಳಾ, ಚಂದ್ರಕಲಾ.. ಇವರೇ ನಮ್ಮ ಪಂಚಕನ್ಯೆಯರು ಎಂಬ ಹಾಡನ್ನು ಕೇಳಿದಾಗಲೆಲ್ಲ ಜಯಂತಿ ಸಿಟ್ಟಿಗೇಳುತ್ತಿದ್ದರು. ಯಾಕೆ, ನಾವೆಲ್ಲ ಇರಲಿಲ್ಲವಾ? ನನ್ನ ಭಾಷೆ, ಅಭಿನಯ ಯಾವುದಕ್ಕೆ ಕಡಿಮೆ ಇತ್ತು? ಎಂದು ಪ್ರಶ್ನಿಸುತ್ತಿದ್ದ ಜಯಂತಿ ಈಗ ಚಿರನಿದ್ದೆಯಲ್ಲಿದ್ದಾರೆ.

ಜಯಂತಿಯವರನ್ನು ಹಿಂದಿಯ ಮೀನಾಕುಮಾರಿಗೆ ಹೋಲಿಸುತ್ತಿದ್ದರು. ಇಬ್ಬರೂ ಅಪ್ಪಟ ಪ್ರತಿಭಾವಂತರು, ಇಬ್ಬರೂ ಜೀವನದಲ್ಲಿ ಬಹಳಷ್ಟು ಕಳಕೊಂಡವರು, ಬಹಳಷ್ಟು ನೊಂದವರು. ಹೀಗಿದ್ದೂ ಜಯಂತಿಯೆಂದರೆ ನಮಗೆ ನೆನಪಾಗುವುದು ಅವರ ನಗುಮುಖ ಮಾತ್ರ.


ಪ್ರಶಸ್ತಿಗಳು

ರಾಷ್ಟ್ರ, ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಜಯಂತಿ ಅವರಿಗೆ, ಎರಡು ಮುಖ, ಮನಸ್ಸಿನಂತೆ ಮಾಂಗಲ್ಯ, ಧರ್ಮದಾರಿ ತಪ್ಪಿತು, ಮಸಣದ ಹೂವು, ಆನಂದ್ ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಬಂದಿದೆ.  ಮಿಸ್.ಲೀಲಾವತಿ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 190 ಕನ್ನಡ ಸಿನಿಮಾಗಳು, 500ಕ್ಕೂ ಹೆಚ್ಚು ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡವರು.

(ಚಿತ್ರಗಳು- ಡಿ.ಸಿ.ನಾಗೇಶ್)