ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು. ಆದರೂ ಅವಕ್ಕೆ ಕೂಡ ಒಂದು ಡಾಲರ್ ಕೊಡಲೆ ಬೇಕಿತ್ತು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ನಾಲ್ಕನೆಯ ಬರಹ
ನಾವಿದ್ದ ಓಮಾಹಾದಲ್ಲಿ ಏನಾದರೂ ಬೇಕಾದರೆ ಅಲ್ಲಿಯೇ ಹತ್ತಿರದಲ್ಲೇ ಹಲವಾರು ಅಂಗಡಿಗಳು ಇದ್ದವು. ಅಲ್ಲಿ ಅಂಗಡಿಗಳು ಅಂದರೆ ದೊಡ್ಡವು ಇಲ್ಲವೇ ಮಧ್ಯಮ ಗಾತ್ರದವು. ನಮ್ಮಲ್ಲಿ ಇರುವಂತೆ ಚಿಕ್ಕ ಚಿಕ್ಕ ಅಂಗಡಿಗಳು ನನಗಂತೂ ಎಲ್ಲೂ ಕಾಣಲಿಲ್ಲ. ಆ ದೊಡ್ಡ ಅಂಗಡಿ ಅಥವಾ ಡಿಪಾರ್ಟ್ಮೆಂಟಲ್ ಸ್ಟೋರ್ಗಳಲ್ಲಿ ಎಲ್ಲವೂ ಯಾಂತ್ರಿಕ.. ಕೌಂಟರ್ನಲ್ಲಿರುವ ಸಹಾಯಕಿಯ ನಗುವೂ ಕೂಡ! ಅಮೆರಿಕನ್ನರ ನಗುವು ಎಷ್ಟು ಔಪಚಾರಿಕವಾಗಿ ಇರುತ್ತದೆ ಅಂದರೆ, ಅದರಲ್ಲಿ ಜೀವಂತಿಕೆಯನ್ನು ಭೂತಗನ್ನಡಿ ಇಟ್ಟು ಹುಡುಕಬೇಕು. ಅಂತಹ ಜೀವಂತ ನಗುವುಳ್ಳವರೂ ಇದ್ದರಾದರೂ ಅಂಗಡಿಯಲ್ಲಂತೂ ಆ ನಗುವು ತುಂಬಾ ವ್ಯವಹಾರಿಕವಾಗಿರುತ್ತಿತ್ತು. ಆಗ ನನಗೆ ಮತ್ತೆ ನಮ್ಮ ದೇಶ ನೆನಪಾಗುತ್ತಿತ್ತು!
ನಾವೆಲ್ಲ ಸಣ್ಣ ಊರಿನಲ್ಲಿ ಬೆಳೆದವರು. ಅಲ್ಲಿನ ಸಣ್ಣ ಸಣ್ಣ ಅಂಗಡಿಗಳು, ಅದರೊಳಗೆ ಬೆಸೆದಿದ್ದ ಆ ಅಂಗಡಿಗೆ ಅನನ್ಯವಾಗಿ, ಮೂಗಿಗೆ ಅಡರುತ್ತಿದ್ದ ಸುವಾಸನೆ, ಅಂಗಡಿ ಮಾಲೀಕರ ಜೊತೆಗಿನ ಆಪ್ಯಾಯಮಾನ ಹರಟೆ ಇವೆಲ್ಲ ನೆನಪಾಗುತ್ತಿತ್ತು. ಲಕ್ಷ್ಮೇಶ್ವರದಲ್ಲಿ ನನ್ನ ಸೋದರ ಮಾವನ ಅಂಗಡಿ ಇತ್ತು. 40 ವರ್ಷಗಳಿಗಿಂತಲೂ ಹಳೆಯ ಅಂಗಡಿ ಅದು. ಇನ್ನೂ ಇದೆ. ಅದೊಂದು ಸಾಂಸ್ಕೃತಿಕ ಕೇಂದ್ರ ಆಗಿತ್ತು. ಅಲ್ಲಿ ಎಲ್ಲರೂ ಬರುತ್ತಿದ್ದರು. ಸೋಷಲ್ ಮೀಡಿಯಾ ಇಲ್ಲದ ದಿನಗಳಲ್ಲಿ ಅಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯುತ್ತಿತ್ತು. ನನ್ನ ಇನ್ನೊಬ್ಬ ಮಾವ, ಅಲ್ಲಿಗೆ ಬಂದವರ ಕಾಲು ಎಳೆಯುತ್ತಿದ್ದುದನ್ನು ನೋಡಲೆ ಅಂತಲೇ ಒಂದಿಷ್ಟು ಜನ ಬರುತ್ತಿದ್ದರು. ಸಣ್ಣ ಪುಟ್ಟ ವಾಗ್ವಾದಗಳೂ ನಡೆಯುತ್ತಿದ್ದವು. ಚಹಾ, ಗಿರಿಮಿಟ್ಟು, ದಾಣಿ ಚುರುಮರಿ, ಮಿರ್ಚಿ-ಭಜಿಗಳ ಸೇವನೆ ನಿರಂತರವಾಗಿ ನಡೆಯುತ್ತಿದ್ದವು. ಸಂತೆ, ಹಬ್ಬದ ದಿನಗಳಲ್ಲಿ ಅಂತೂ ಗಿರಾಕಿಗಳಿಂದ ಅಂಗಡಿ ಗಿಜಿಗಿಜಿಗುಡುತ್ತಿತ್ತು. ಅಲ್ಲಿಗೆ ಹೋಗುವುದೇ ಒಂದು ಸಂಭ್ರಮ ನನಗೆ. ಅಂತಹ ಒಂದು “ಆಪ್ತ ಅಂಗಡಿಯನ್ನು” ಅಮೆರಿಕೆಯಲ್ಲಿ ಹುಡುಕುತ್ತಿದ್ದ ನನಗೆ ಅಲ್ಲಿಗೆ ಹೋದಾಗ ಸಿಕ್ಕಿದ್ದು, ಭಾರತೀಯ ಕಿರಾಣಿ ಅಂಗಡಿ ತುಳಸಿ ಒಂದೇ. ಸ್ವಲ್ಪ ಮಟ್ಟಿಗೆ ನಮ್ಮವರು ಬಂದು ಸೇರುತ್ತಿದ್ದರು, ಅಲ್ಲಿಗೆ ಆಗಾಗ ಹೋಗಬಹುದು ಅಂತ ಮೊದಮೊದಲು ಅನಿಸಿತ್ತಾದರೂ ಹಾಗೆ ಹೋಗಲು ಸಾಧ್ಯ ಆಗುತ್ತಿರಲಿಲ್ಲ. ಅದನ್ನು ನಡೆಸುತ್ತಿರುವವರು ಕನ್ನಡಿಗರೇ ಹಾಗೂ ನಮಗೆ ಪರಿಚಯದವರೆ ಆಗಿದ್ದರೂ ಅವರು ಯಾವಾಗಲೂ ಅಂಗಡಿಯಲ್ಲಿ ಇರುತ್ತಿರಲಿಲ್ಲ. ಆಂಧ್ರದ ಒಬ್ಬ ಹುಡುಗ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಹೀಗಾಗಿ ಏನಾದರೂ ದಿನಸಿ ಬೇಕಾದಾಗ, ಇಲ್ಲವೇ ದೇವಸ್ಥಾನಕ್ಕೆ ಹೋದಾಗ ಮಾತ್ರ ಅಲ್ಲಿ ಹೋಗುತ್ತಿದ್ದೆವು.
ಇದನ್ನು ಬಿಟ್ಟರೆ ಮನೆಗೆ ಬೇಕಾಗುವ ಇತರ ಸಾಮಾನು ಖರೀದಿಸಲು ಅಲ್ಲಿ ಹಲವಾರು ಆಯ್ಕೆಗಳು ಇದ್ದವು. ಅದರಲ್ಲಿ ಒಂದು ವಾಲ್ ಮಾರ್ಟ್. ಅದೊಂದು ದೊಡ್ಡ ಅಂಗಡಿ. ಈಗ ಅಂತಹ ಹಲವಾರು ಅಂಗಡಿಗಳು ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚೇ ಅನ್ನುವಷ್ಟು ಇವೆ. ಅದನ್ನು ಸ್ಥಾಪಿಸಿದವರ ಹೆಸರು ಸ್ಯಾಮ್ ವಾಲ್ಟನ್. ತುಂಬಾ ಕಡಿಮೆ ಬೆಲೆಗೆ ಕೊಡುತ್ತೇವೆ ಎಂಬ ಧ್ಯೇಯದೊಂದಿಗೆ ಶುರುವಾದ, ಅಮೆರಿಕೆಯಲ್ಲಿ ಬಹಳ ಪ್ರಸಿದ್ಧಿ ಪಡೆದ ಕಂಪೆನಿಗಳಲ್ಲಿ ಒಂದು ಅದು. ಅಲ್ಲಿ ತುಂಬಾ ಒಳ್ಳೆಯ ಬೆಲೆಗೆ ಎಲ್ಲವೂ ಸಿಗುತ್ತಿತ್ತು. ಅಲ್ಲಿ ನನಗೆ ಇಷ್ಟವಾದ ಒಂದು ಪದ್ಧತಿ ಎಂದರೆ, ಯಾವುದೇ ಖರಿದಿಸಿದ ವಸ್ತುವನ್ನು ಮನೆಗೆ ತೆಗೆದುಕೊಂಡು ಹೋದ ಹೋದ ನಂತರ ಬೇಡ ಅನಿಸಿದರೆ ಅಂಗಡಿಗೆ ಮರಳಿಸಬಹುದಿತ್ತು. ಅವರು ಯಾವುದೇ ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ. ಅಲ್ಲಿನ ಬಹುತೇಕ ಅಂಗಡಿಗಳಲ್ಲಿ ಅದನ್ನು ಪಾಲಿಸುತ್ತಿದ್ದರು. ಈಗೀಗ ಭಾರತದಲ್ಲೂ ಕೂಡ ಆ ಪದ್ಧತಿ, ವಿಶೇಷವಾಗಿ ಆನ್ಲೈನ್ ಖರೀದಿಗಳಲ್ಲಿ ಕಾಣುತ್ತಿದ್ದೇವೆ. ಆದರೆ ಅಲ್ಲಿನ ರಿಟರ್ನ್ ಪಾಲಿಸಿ ತುಂಬಾ ಸುಲಲಿತವಾಗಿತ್ತು. ಮೊದಮೊದಲು ಹಾಗೆ ಮರಳಿಸಲು ಸಂಕೋಚ ಮಾಡಿಕೊಳ್ಳುತ್ತಿದ್ದ ನಾವು, ನಮಗೆ ಬೇಡ ಅನಿಸಿದ್ದನ್ನು ನಿರ್ಭಯವಾಗಿ ವಾಪಸ್ಸು ಕೊಡುವುದನ್ನು ಕಲಿತೆವು. ಹಾಗೆ ಎಲ್ಲರೂ ಕೊಂಡ ವಸ್ತುಗಳನ್ನು ಮರಳಿ ಕೊಟ್ಟರೆ ಅವರಿಗೆ ನಷ್ಟವಾಗೋದಿಲ್ಲವೇ ಅಂತ ನನಗೆ ಅನಿಸುತ್ತಿತ್ತು. ಅದಕ್ಕೆ ಮೂಲ ಅನಿವಾಸಿ ಚಂದ್ರು ತುಂಬಾ ಅದ್ಭುತ ವಿಶ್ಲೇಷಣೆ ಮಾಡಿ ಹೇಳಿದ್ದ ಮಾತು ನಿಜ ಅನಿಸಿತು. ಹಾಗೆ ವಾಪಸ್ಸು ಕೊಡಬಹುದು ಅಂತ ನಮ್ಮ ಮನಸ್ಸಿನಲ್ಲಿ ಇದ್ದಾಗ ಅವಶ್ಯಕತೆಗಿಂತ ಜಾಸ್ತಿನೇ ನಾವು ಕೊಂಡುಕೊಳ್ಳುತ್ತೇವೆ. ಹಾಗೆ ಕೊಂಡುಕೊಂಡ ಎಷ್ಟೋ ಜನರಲ್ಲಿ ಬರಿ ಕೆಲವೇ ಪ್ರತಿಶತ ಜನರು ವಸ್ತುಗಳನ್ನು ವಾಪಸ್ಸು ಕೊಡಬಹುದು. ಆದರೆ ಮಿಕ್ಕವರು ಬೇಡವಾಗಿದ್ದನ್ನು ಕೂಡ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ! ಅವರಲ್ಲಿ ಮೈಗಳ್ಳರು, ದುಡ್ಡು ಹೆಚ್ಚು ಇರುವವರೂ ಇರುತ್ತಾರೋ ಏನೋ. ಹೀಗಾಗಿ ಅದೊಂದು ರೀತಿಯಲ್ಲಿ ಅಂಗಡಿಗಳಿಗೆ ಲಾಭವನ್ನೇ ಮಾಡಿಕೊಡುತ್ತದೆಯಂತೆ.
ಇದು ನನಗೆ ಅನುಭವಕ್ಕೆ ಬಂದಿದ್ದು ಕೋಲ್ಸ (Kohls) ಎಂಬ ಬಟ್ಟೆ ಅಂಗಡಿಯಲ್ಲಿ. ಅಲ್ಲಿ ಎಲ್ಲ ನಮೂನೆಯ ಬಟ್ಟೆಗಳು ಸಿಗುತ್ತಿದ್ದವು. ಅಲ್ಲಿಗೆ ಹೋದರೆ ನನ್ನ ಹೆಂಡತಿಯನ್ನು ಆ ಅಂಗಡಿಯೊಳಗೆ ಬಿಟ್ಟು ನಾನು ಅಲ್ಲಿ ಇಲ್ಲಿ ಅಡ್ಡಾಡಿಕೊಂಡು 3 ಗಂಟೆಯ ನಂತರ ಹೆಂಡತಿಯನ್ನು ಕರೆದುಕೊಂಡು ಹೋಗಲು ಬರುತ್ತಿದ್ದೆ. ಅಷ್ಟು ದೊಡ್ಡ ಅಂಗಡಿಯದು. ಕೆಲವು ಸಲ ಸಿನೆಮಾ ನೋಡಿಕೊಂಡು ಬಂದಿದ್ದೂ ಇದೆ! ಒಳ್ಳೆಯ ಡೀಲ್ ಇದೆ ಅಂತ ಕೆಜಿಗಟ್ಟಲೆ ಬಟ್ಟೆ ಖರೀದಿಸಿ ಇಟ್ಟಿರುತ್ತಿದ್ದಳು. ಪುಣ್ಯ ನನ್ನ ಹೆಂಡತಿಗೆ ಬಂಗಾರದ ಹುಚ್ಚು ಇಲ್ಲ! ಅಲ್ಲಿ ಒಳ್ಳೆಯ ಗುಣಮಟ್ಟದ ಜೊತೆಗೆ ಬೆಲೆ ಕೂಡ ಕಡಿಮೆಯೇ ಇರುತ್ತಿತ್ತು. ಅವುಗಳಲ್ಲಿ, ಆಮೇಲೆ ಬೇಡವಾದರೆ ಕೊಟ್ಟರಾಯ್ತು ಅಂತ ತಂದ ಬಟ್ಟೆಗಳೆ ಜಾಸ್ತಿಯಿರುತ್ತಿದ್ದವು. ಕೆಲವನ್ನು ವಾಪಸ್ಸು ಮಾಡೋಕೆ ಅಂತಲೇ ಮತ್ತೊಮ್ಮೆ ಹೋಗುತ್ತಿದ್ದೆವು! ಆ ಅಂಗಡಿಯಲ್ಲಿ ಇನ್ನೊಂದು ಮಾರಾಟದ ವಿಶೇಷ ತಂತ್ರವನ್ನು ಗಮನಿಸಿದೆ. ಗ್ರಾಹಕರು ಬಟ್ಟೆ ತೆಗೆದುಕೊಂಡು ಬಿಲ್ ಮಾಡಿಸುವಾಗ ಕೊನೆಗೆ ನಮ್ಮ ಒಟ್ಟು ಮೊತ್ತದ ಮೇಲೆ ಇಂತಿಷ್ಟು ಡಾಲರ್ ಕೋಲ್ಸ್ ಕ್ಯಾಷ್ ಅಂತ ಒಂದು ಮುದ್ರಿತ ರಸೀದಿ ಬರುತ್ತಿತ್ತು. ಆದರೆ ಆ ಮೊತ್ತವನ್ನು ಕೂಡಲೇ ಬಳಸಲು ಬರುತ್ತಿರಲಿಲ್ಲ. ಅದು ಕೆಲವು ದಿನಗಳಾದ ಬಳಿಕ ಅದೇ ಅಂಗಡಿಗೆ ಬಂದು ಆ ಮೊತ್ತದ ಯಾವುದೇ ಬಟ್ಟೆಯನ್ನು ಖರೀದಿ ಮಾಡಬಹುದಿತ್ತು. ಅದೇ ನೋಡಿ ಟ್ರಿಕ್ಕು! ಕೋಲ್ಸ್ ಕ್ಯಾಷ್ ಅನ್ನು ಖಾಲಿ ಮಾಡಲು ಬಂದ ಗ್ರಾಹಕ ಮತ್ತೆ ಒಂದಿಷ್ಟು ಬಟ್ಟೆಗಳನ್ನು ಖರೀದಿಸುತ್ತಿದ್ದ/ಳು. ಅದಕ್ಕೆ ಮತ್ತೊಂದಿಷ್ಟು ಕೋಲ್ಸ್ ಕ್ಯಾಷ್ ಸಿಗುತ್ತಿತ್ತು. ಹೀಗೆ ಗ್ರಾಹಕ ಕೋಲ್ಸ್ ಬಲೆಗೆ ಸಿಕ್ಕಿಕೊಂಡು ನಿರಂತರವಾಗಿ ಆ ಅಂಗಡಿಗೆ ಬರುವಂತೆ ಅವರು ಮಾಡುತ್ತಿದ್ದರು!
ಇದೆ ತರಹದ ಇನ್ನೊಂದು ಅಂಗಡಿಯಲ್ಲಿನ ತಂತ್ರವನ್ನು ನಾನು ಗಮನಿಸಿದ್ದೆ. ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು. ಆದರೂ ಅವಕ್ಕೆ ಕೂಡ ಒಂದು ಡಾಲರ್ ಕೊಡಲೆ ಬೇಕಿತ್ತು! ಹೀಗೆ ಆ ಅಂಗಡಿಯಲ್ಲಿ ಆಮೇಲಾಮೇಲೆ ತುಂಬಾ ತಲೆ ಓಡಿಸಿ ಖರೀದಿ ಮಾಡುತ್ತಿದ್ದೆವು!
ಇವುಗಳ ಜೊತೆಗೆ ನಾನು ಹೋಗಿದ್ದ ಇತರ ಅಂಗಡಿಗಳಲ್ಲಿ ಕೊಸ್ಟಕೋ (Costco) ಎಂಬ ಅಂಗಡಿ ತುಂಬಾ ಆಕರ್ಷಿಸಿತ್ತು. ಅದೊಂದು ಸಗಟು ವ್ಯಾಪಾರದ ಅಂಗಡಿ. ವರ್ಷಕ್ಕೆ ಇಷ್ಟು ಡಾಲರ್ ಅಂತ ಕೊಟ್ಟು ಅದರ ಸದಸ್ಯರಾದರೆ ಅಲ್ಲಿ ತುಂಬಾ ಕಡಿಮೆ / wholesale ಬೆಲೆಗೆ ವಸ್ತುಗಳು ಸಿಗುತ್ತಿದ್ದವು. ಬೆಂಗಳೂರಿನಲ್ಲಿ ಇರುವ Metro Wholesale ಕೂಡ ಇದೆ ಮಾದರಿಯದು. ಕಡಿಮೆ ಬೆಲೆಗೆ ಅಲ್ಲಿ ಎಲ್ಲವೂ ಸಿಗುತ್ತಿತ್ತು. ಎಣ್ಣೆ ಕೂಡ! ಅಲ್ಲಿಗೆ ಹೋದವರು ಸಗಟು ಬೆಲೆ ಅಂತ ಹೇಳಿ ಡಬ್ಬಗಟ್ಟಲೆ ಬಿಯರು ಹೊತ್ತುಕೊಂಡು ಬರುತ್ತಿದ್ದರು. ಕುಡಿದು ಲಿವರ್ ಕೆಡಿಸಿಕೊಳ್ಳಬೇಕು ಅನ್ನುವವರಿಗಂತೂ ಅಮೆರಿಕೆಯು ಒಂದು ಸ್ವರ್ಗ!
ಇಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಂತೂ ತುಂಬಾ ಸ್ಪರ್ಧೆ ನಡೆಯುತ್ತಿತ್ತು. ಇಲೆಕ್ಟ್ರಾನಿಕ್ ಗ್ಯಾಜೆಟ್ಟುಗಳನ್ನು ಕೊಳ್ಳುವವರಲ್ಲೂ ಸ್ಪರ್ಧೆ, ಮಾರಾಟ ಮಾಡುವವರಲ್ಲೂ ಸ್ಪರ್ಧೆ. ಉದಾಹರಣೆಗೆ, ನೀವೊಂದು ಕ್ಯಾಮೆರಾ ನೋಡಿದ್ದೀರಿ. ಒಂದು ಅಂಗಡಿಯಲ್ಲಿ ನೂರು ಡಾಲರ್ ಇದೆ ಅಂತ ಅಂದುಕೊಳ್ಳೋಣ. ಬೇರೆ ಅಂಗಡಿಯಲ್ಲಿ 90 ಡಾಲರ್ ಇದೆ ಅಂತ ನೀವು ಆನ್ಲೈನ್ನಲ್ಲಿ ಸಾಕ್ಷಿ ತೋರಿಸಿದರೆ, ಈ ಅಂಗಡಿಯವನು ಅದೇ ಬೆಲೆಗೆ ಕೊಡುತ್ತಾನೆ. ಅದಕ್ಕೆ ಬೆಲೆ ಹೊಂದಿಸುವುದು (price matching) ಅಂತ ಹೇಳೋರು. ಅದು ಬೆಸ್ಟ್ ಬಯ್ (Best Buy) ಎಂಬ ಅಂಗಡಿಯಲ್ಲಿ ಗಮನಿಸಿದ್ದೆ. ಇದರ ಜೊತೆಗೆ ಇನ್ನೊಂದು ಆಕರ್ಷಕ ಯೋಜನೆ, ಬೋಗೋ (BOGO – Buy One Get One) offer! ಒಂದು ಕೊಂಡರೆ ಇನ್ನೊಂದು ಉಚಿತ! ಅದರ ಬಲೆಗೆ ನಾವೂ ಒಂದು ಸಲ ಬಿದ್ದು ಸ್ವಲ್ಪದರಲ್ಲೇ ಹೊರಗೆ ಬಂದಿದ್ದೆವು. ನನಗೆ Iphone ಗಳ ಹುಚ್ಚು ಅಷ್ಟೆಲ್ಲಾ ಇರಲಿಲ್ಲ. ಆದರೂ ಒಂದು ಕಡೆ ಬೋಗೋ ಆಫರ್ ಇದೆ ಅಂತ ಗೊತ್ತಾಯ್ತು. ಬರಿ 200 ಡಾಲರಿಗೊ ಏನೋ ಒಂದು ಐಫೋನ್ಗೆ ಇನ್ನೊಂದು ಐಫೋನ್ ಉಚಿತ ಅಂತ ಇತ್ತು. ಆಯ್ತು ನನಗೊಂದು ಅಶಾಗೊಂದು ಅಂತ ಸರತಿಯಲ್ಲಿ ನಿಂತಿದ್ದೆವು. ಅದರ ವಿಶೇಷವೆಂದರೆ ಅದನ್ನು ಅಲ್ಲಿ ಮಾತ್ರ ಬಳಸಬಹುದು. ಭಾರತಕ್ಕೆ ವಾಪಸ್ಸು ಬರಲು ತುದಿಗಾಲಲ್ಲಿ ನಿಂತಿದ್ದ ನನಗೆ ಈ ಐಫೋನು ಅಲ್ಲೇ ಇರುವಂತೆ ಮಾಡಿಬಿಟ್ಟರೆ ಎಂಬ ಭಯ ಶುರುವಾಯ್ತು. ಸರತಿಯಲ್ಲಿ ನಿಂತುಕೊಂಡೆ ಚಿಂತನ ಮಂಥನ ಶುರುವಾಯ್ತು. ಇನ್ನೇನು ದುಡ್ಡು ಕೊಟ್ಟು ಅದನ್ನು ಪಡೆಯಬೇಕು ಎಂಬುವಷ್ಟರಲ್ಲಿ ನಾನು ಮನಸ್ಸು ಬದಲಾಯಿಸಿ ಬೇಡ ಅಂತ ನಿರ್ಧರಿಸಿದೆ. ನನ್ನ ಬದಲು ನನ್ನ ಇನ್ನೊಬ್ಬ ದೇಸಿ ಗೆಳೆಯನಿಗೆ ಆ ಆಫರ್ ಅನ್ನು ಬಿಟ್ಟು ಕೊಟ್ಟೆ. ಅವನು ತನಗೆ ಸಿಗಲೇ ಇಲ್ಲ ಎಂಬ ನಿರಾಸೆಯಿಂದ ಇದ್ದವನು, ಜಗತ್ತಿನಲ್ಲೇ ಅಮೂಲ್ಯವಾದ ಐಫೋನು ಪಡೆದು ಕೃತಾರ್ಥನಾದ! ನನಗೆ ಪದೇ ಪದೇ ಕೃತಜ್ಞತೆಯನ್ನು ಅರ್ಪಿಸಿದ. ಜನ ಮರುಳೋ ಜಾತ್ರೆ ಮರುಳೋ…
ಇವುಗಳನ್ನು ಹೊರತುಪಡಿಸಿ ಇದ್ದ ಇನ್ನಿತರ ಅಂಗಡಿಗಳಲ್ಲಿ ಒಂದು ನೆಬ್ರಾಸ್ಕ ಫರ್ನೀಚರ್ ಮಾರ್ಟ್. ಅದು ಜಗತ್ತಿನ ಕುಬೇರರಲ್ಲಿ ಒಬ್ಬರಾದ್ದ ವಾರೆನ್ ಬಫೆಟ್ ಅವರದ್ದು. ಅದು ಎಷ್ಟೋ ಏಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಅದು ಪೀಠೋಪಕರಣಗಳಿಗೆ ಅಂತಲೇ ಮೀಸಲಾದ ರಾಕ್ಷಸ ಗಾತ್ರದ ಅಂಗಡಿ.
ಅಲ್ಲಿ ಇನ್ನೊಂದು ವಿಶೇಷ ಅಂಗಡಿಗೆ ಒಮ್ಮೆ ಆಕಸ್ಮಿಕವಾಗಿ ಹೋಗಿದ್ದೆವು. ಅದರಲ್ಲಿ ನಮ್ಮ ಆಯುರ್ವೇದದ ಅಂಗಡಿಯಲ್ಲಿನ ತರಹದ ಸುವಾಸನೆ ನನಗೆ ತುಂಬಾ ಖುಷಿ ಕೊಟ್ಟಿತು. ಅಲ್ಲಿ ಭಾರತದ ಹಲವಾರು ಆಯುರ್ವೇದದ ಉತ್ಪನ್ನಗಳು ಕೂಡ ಇದ್ದವು. ಅಲ್ಲಿ ಇದ್ದ ಪರಿಚಾರಕನ ಭುಜದ ಮೇಲೆ ಅವನು ಹಾಕಿಸಿಕೊಂಡ ದೊಡ್ಡದಾದ ಗಣಪತಿಯ ಬಣ್ಣದ ಹಚ್ಚೆಯನ್ನು (tattoo) ನೋಡಿ ಬೆರಗಾದೆ. ಅವನ ಜೊತೆಗೆ ಮಾತನಾಡಿ ನಾನು ಭಾರತದವನು ಅಂತ ಹೆಮ್ಮೆಯಿಂದ ಹೇಳಿಕೊಂಡೆ. ಅವನಿಗೂ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ತುಂಬಾ ತಿಳುವಳಿಕೆ ಹಾಗೂ ಅಭಿಮಾನ ಇದ್ದದ್ದನ್ನು ಅವನ ಮಾತಿನ ಮೂಲಕ ತಿಳಿದುಕೊಂಡೆ.
ಹೀಗೆ ಅಲ್ಲಿನ ಹಲವಾರು ಅಂಗಡಿಗಳನ್ನು ಸುತ್ತಿದರೂ ಅಲ್ಲಿ ಇರುವತನಕ ಆ ಒಂದು ಅಂಗಡಿಗೆ ಮಾತ್ರ ಹೋಗುವ ಧೈರ್ಯ ಮಾಡಲೇ ಇಲ್ಲ..!
(ಮುಂದುವರಿಯುವುದು..)
(ಹಿಂದಿನ ಕಂತು: ಇರುವಲ್ಲೇ ಖುಷಿ ಕಾಣುವ ಪಾಠ)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ಚಂದ್ರಿಕಾ ಎಲೆಕ್ಟ್ರಿಕಲ್ ಶಾಪ್!
ಹೌದು, ಮರೆಯಲಾಗದ ಹೆಸರು! ಧನ್ಯವಾದಗಳು ಶ್ರೀನಿವಾಸ 🙂🙏🏻