“ತಾತನ ಮಾತುಗಳನ್ನು ಕೇಳಿದ ಪಮ್ಮಿ ‘ಹಾಗಾದರೆ ನೀನೂ ಕೂಡಾ ಅಮ್ಮನ ತರಹ ಯಾರಿಗೂ ಹೇಳದೆ ನೋವನ್ನು ತಡೆದುಕೊಳ್ಳುತ್ತೀಯಾ’ ಎಂದು ಕೇಳಿದಳು. ‘ಹೌದು ಪಮ್ಮಿ, ಒಂದೊಂದು ಸಲ ನೋವು ತಡ್ಕೋತೀನಿ ಇನ್ನೂ ಕೆಲವು ಸಲ ನೋವು ಮರೆಯೋಕೆ ಮನದುಂಬಿ ಹಾಡು ಹೇಳುತ್ತೀನಿ. ಹಾಡು ಕೇಳಿ ಕೆಲವರು ದುಡ್ಡು ಹಾಕುತ್ತಾರೆ. ಕೆಲವರು ಚೆನ್ನಾಗಿ ಹಾಡಿದೆ ಅಂತ ಹೇಳುತ್ತಾರೆ. ಇನ್ನೂ ಕೆಲವರು ಭಿಕ್ಷೆ ಹಾಕಬೇಕು ಅಂತ ನನ್ನನ್ನೂ, ನನ್ನ ಕಂಠವನ್ನೂ ಬೈದು ಹೋಗುತ್ತಾರೆ. ಹಾಡಿ ನೋವನ್ನು ನೀಗಿಸಿಕೊಂಡ ಮೇಲೆ, ಬಂದ ಹಣದಿಂದ ಹಸಿವನ್ನು ನೀಗಿಸಿಕೊಳ್ಳುತ್ತೀನಿ’ ಅಂದ ತಾತ.”
ಪಮ್ಮಿ ಬಲು ಚೂಟಿ ಹುಡುಗಿ. ತನ್ನ ಕೆಲಸವನ್ನೆಲ್ಲಾ ತಾನೇ ಮಾಡಿಕೊಳ್ಳುತ್ತಿದ್ದಳು. ವಯಸ್ಸು ಏಳೇ ವರ್ಷ, ಆದರೂ ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಅಮ್ಮನಿಗೆ ಸಹಾಯ ಮಾಡೋದು ಅಂದರೆ ಅವಳಿಗೆ ತುಂಬಾ ಇಷ್ಟ. ತರಗತಿಯಲ್ಲಿ ಪಮ್ಮಿ ಚೂಟಿಯಾಗಿದ್ದಳು, ಓದಿನಲ್ಲೂ ಮುಂದಿದ್ದಳು. ತಾನು ಕಲಿತ ಪಾಠವನ್ನು ಬಾಯಿಪಾಠ ಮಾಡಿಕೊಂಡು ಅಮ್ಮನಿಗೆ ಒಪ್ಪಿಸಿಬಿಡುತ್ತಿದ್ದಳು. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಹಿರಿಯರಿಗೆ ಗೌರವ ತೋರಿಸುತ್ತಿದ್ದಳು. ಕಿರಿಯರಿಗೆ ಪ್ರೀತಿ ನೀಡುತ್ತಿದ್ದಳು. ಎಲ್ಲರೂ ಮೆಚ್ಚಿಕೊಳ್ಳುವಂಥ ಹುಡುಗಿಯಾಗಿದ್ದಳು ಪಮ್ಮಿ.
ಒಂದು ದಿನ ಶಾಲೆಯಿಂದ ಮನೆಗೆ ಬರುವಾಗ ರಸ್ತೆ ದಾಟಲು ಒಬ್ಬ ಕುರುಡು ತಾತ ಕೈಯಲ್ಲಿ ಕೋಲು ಹಿಡಿದುಕೊಂಡು ನಿಂತಿದ್ದ. ದೂರದಿಂದ ತಾತನನ್ನು ನೋಡುತ್ತಲೇ ಬಂದಳು ಪಮ್ಮಿ. ಯಾರೊಬ್ಬರೂ ಕುರುಡು ತಾತನನ್ನು ರಸ್ತೆ ದಾಟಿಸಲೇ ಇಲ್ಲ. ತಾತನ ಹತ್ತಿರಕ್ಕೆ ಬಂದ ಪಮ್ಮಿ, ತಾತನ ಕೈ ಹಿಡಿದುಕೊಂಡು ‘ರಸ್ತೆ ದಾಟಿಸಬೇಕಾ ತಾತ?’ ಎಂದು ಕೇಳಿದಳು. ಮಗುವಿನ ಮುದ್ದಾದ ಮಾತನ್ನು ಕೇಳಿ ಕುರುಡು ತಾತ ‘ಹೌದು ಮಗು’ ಅಂದ. ರಸ್ತೆಯನ್ನು ದಾಟಿದ ಮೇಲೆ ಕುರುಡು ತಾತ ಕೇಳಿದ, ‘ಮಗು ನಾನೊಬ್ಬ ಭಿಕ್ಷುಕ. ನನಗೆ ಕಣ್ಣು ಕಾಣಿಸುವುದಿಲ್ಲ. ಎಲ್ಲರೂ ನನ್ನನ್ನು ನೋಡಿ ಅಸಹ್ಯ ಪಟ್ಟುಕೊಂಡರೆ, ನೀನು ನನ್ನ ಕೈ ಹಿಡಿದು ರಸ್ತೆ ದಾಟಿಸಿದೆಯಲ್ಲಾ, ನಿನ್ನನ್ನು ಪಡೆದ ತಾಯಿ ತಂದೆ, ನಿನಗೆ ಪಾಠ ಹೇಳಿದ ಗುರುಗಳು ಎಲ್ಲರೂ ತುಂಬಾ ಪುಣ್ಯವಂತರು’ ಎಂದು ತಾತ ಹೇಳಿದ. ಅದಕ್ಕೆ ಪಮ್ಮಿ ‘ಇದು ಪುಣ್ಯವಲ್ಲ ತಾತ, ನಮ್ಮ ಕರ್ತವ್ಯ’ ಅಂದಳು.
ಮಗುವಿನ ಮಾತನ್ನು ಕೇಳಿದ ಕುರುಡು ತಾತ ಆಶ್ಚರ್ಯದಿಂದ ‘ನಿನ್ನ ಹೆಸರೇನು ಮಗು’? ಎಂದು ಮತ್ತೆ ಕೇಳಿದ. ‘ನನ್ನ ಹೆಸರು ಪಲ್ಲವಿ, ಎಲ್ಲರೂ ನನ್ನನ್ನು ಪಮ್ಮಿ ಪಮ್ಮಿ ಅಂತ ಕರಿತಾರೆ. ಸರಿ ತಾತ, ನೀವು ಎಲ್ಲಿಗೆ ಹೋಗಬೇಕು ಹೇಳಿ ನಾನು ರಸ್ತೆ ತೋರಿಸುತ್ತೇನೆ’ ಎಂದಳು ಪಮ್ಮಿ. ಅದಕ್ಕೆ ಉತ್ತರಿಸಿದ ತಾತ ‘ನನಗೆ ಎಲ್ಲಿ ಹೋಗಬೇಕು ಅಂತ ಗೊತ್ತೇ ಇಲ್ಲ ಮಗು. ನಾನು ನಡೆದದ್ದೇ ರಸ್ತೆ, ಹೋದದ್ದೆ ದಾರಿ’ ಅಂದ. ಆಗ ತಾತನ ಬಿಳಿ ಕಣ್ಣು ಗುಡ್ಡೆಯಲ್ಲಿ ನೀರು ಜಿನುಗುತ್ತಿದ್ದವು.
ಕುರುಡು ತಾತ ಅಳುವುದನ್ನು ನೋಡಿ ಪಮ್ಮಿ ‘ಅಳಬೇಡ ತಾತ, ಯಾಕೆ ಅಳುತ್ತೀಯಾ?’ ಅಂತ ಕೇಳಿದಳು. ‘ಅಳದೇ ಬೇರೆ ದಾರಿ ಇಲ್ಲ ಕಂದ, ನನಗೆ ಕಾಲು ನೋವು, ಕಣ್ಣು ಕಾಣುವುದಿಲ್ಲ. ಹಸಿವು ಬೇರೆ ಅದಕ್ಕೆ ಅಳು ಬಂತು ಅಷ್ಟೇ’ ಅಂದ ತಾತ.
‘ನಮ್ಮ ಅಮ್ಮ ಯಾವಾಗಲೂ ಹೇಳುತ್ತಾಳೆ, ಯಾವುದೇ ಸಮಯದಲ್ಲೂ ಎಷ್ಟೇ ಕಷ್ಟ ಬಂದರು ಅಳಬಾರದು, ನೋವನ್ನು ತಡ್ಕೋಬೇಕು. ಹುಷಾರಿಲ್ಲದಾಗ ಅಳದೇ ಔಷಧ ತಗೋಬೇಕು ಅಂತ. ಅದಕ್ಕೆ ತಾತ ನೀನು ಅಳಬೇಡ ಆಯ್ತಾ?’
ಪಮ್ಮಿಯ ಮಾತನ್ನು ಕೇಳಿದ ತಾತ, ‘ಈ ಕುರುಡನ ಮೇಲೆ ಎಷ್ಟೊಂದು ಪ್ರೀತಿ ತೋರಿಸುತ್ತಿದ್ದೀಯ ಮಗು’ ಎಂದನು. ‘ನನಗೆ ನನ್ನಮ್ಮ ಪ್ರೀತಿ ತೋರಿಸುತ್ತಾಳೆ, ನನ್ನ ಗುರುಗಳು ಪ್ರೀತಿ ತೋರಿಸುತ್ತಾರೆ, ನನ್ನ ಸ್ನೇಹಿತರು ಪ್ರೀತಿ ತೋರಿಸುತ್ತಾರೆ, ಹಾಗಾಗಿ ನಾನು ನಿನಗೆ ಪ್ರೀತಿ ತೋರಿಸುತ್ತಿದ್ದೀನಿ. ಪ್ರೀತಿನ ಕೊಟ್ರೆ ಮತ್ತೆ ಪ್ರೀತಿನೇ ವಾಪಸ್ಸು ಬರುತ್ತೆ ಅಂತ, ಪ್ರೀತಿಯಿಂದ ಏನು ಬೇಕಾದರೂ ಗೆಲ್ಲಬಹುದು ಅಂತಾನೂ ಅಮ್ಮ ಯಾವಾಗಲೂ ಮತ್ತೆ ಮತ್ತೆ ಹೇಳ್ತಾನೆ ಇರ್ತಾಳೆ ತಾತ’ ಅಂದಳು ಪಮ್ಮಿ.
ಪಮ್ಮಿಯ ಮಾತನ್ನು ಕೇಳಿದ ಕುರುಡು ತಾತ ಒಂದು ಕ್ಷಣ ಬೆರಗಾಗಿ ಇಷ್ಟು ಒಳ್ಳೆಯ ಮಗುವಿನ ಮುಖ ನೋಡಲಾಗುತ್ತಿಲ್ಲವಲ್ಲ ಎಂದುಕೊಂಡ. ತಾತ ಸುಮ್ಮನ್ನಿದ್ದುದ್ದನ್ನು ನೋಡಿ ‘ಏನಾಯಿತು ತಾತ? ನಿಂಗೆ ನೋವಾಗುತ್ತಿದೆಯಾ? ನೀರು ಬೇಕಾ ನಿನಗೆ? ನಿನ್ನ ಚೀಲದಲ್ಲಿ ಏನಾದರೂ ತೆಗೆದುಕೊಡಬೇಕಾ? ಅಥವಾ ಏನಾದರೂ ತಿನ್ನಬೇಕಾ?’ ಅಂತ ಕಾಳಜಿಯಿಂದ ಪಮ್ಮಿ ಕೇಳಿದಳು. ಪಮ್ಮಿಯ ಮಾತನ್ನು ಗಮನಿಸಿದ ತಾತ ‘ಒಬ್ಬ ಕುರುಡನನ್ನು ನೋಡಿದರೆ ಎಲ್ಲರೂ ಕುರುಡ ಕುರುಡ ಅಂತ ಆಡಿಕೊಳ್ಳುತ್ತಾರೆ. ರಸ್ತೆಯಲ್ಲಿ ಗುದ್ದಿಕೊಂಡು ಹೋಗುತ್ತಾರೆ. ನೀನು ಕುರುಡನನ್ನು ಹೇಗೆ ನೋಡಿಕೊಳ್ಳಬೇಕು ಅನ್ನೊದನ್ನೆಲ್ಲಾ ಕಲಿತಿದ್ದೀಯಲ್ಲ, ಇದನ್ನೆಲ್ಲಾ ಹೇಗೆ ಕಲಿತೆ ಕಂದಾ?’ ಅಂದ ತಾತ.
‘ನನಗೆ ಕುರುಡರು ಮಾತ್ರವಲ್ಲ ಎಲ್ಲರೂ ತುಂಬಾ ಇಷ್ಟ. ಕುರುಡರು ಮಾತ್ರ ಎಲ್ಲಾ ಕೆಲಸಾನ ಯಾರಿಗೂ ಹೇಳದೆ ಅವರೇ ಮಾಡಿಕೊಳ್ಳುತ್ತಾರೆ. ಬೇರೆಯವರ ಕೆಲಸಾನೂ ಶ್ರದ್ಧೆಯಿಂದ ಮಾಡುತ್ತಾರೆ. ಸ್ವಲ್ಪ ನಿಧಾನವಾಗಬಹುದು. ಆದರೆ ಮಾಡೋ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ’ ಅಂದಳು ಪಮ್ಮಿ. ‘ಹೇಗೆ ಮಗು? ಅವರು ಎಲ್ಲಾ ಕೆಲಸವನ್ನು ಮಾಡುತ್ತಾರೆ ಅಂತ ನಿನಗೆ ಹೇಗೆ ಗೊತ್ತು’?
‘ಓ ಚೆನ್ನಾಗಿ ಗೊತ್ತು ಯಾಕೆಂದ್ರೆ, ನಮ್ಮ ಮನೇಲಿ ಅಮ್ಮನಿಗೆ ರಾತ್ರಿ ಹೊತ್ತು ಕಣ್ಣೇ ಕಾಣಲ್ಲ. ಆದ್ರೂ, ರಾತ್ರಿ ವೇಳೆ ರುಚಿ ರುಚಿಯಾಗಿ ಅಡುಗೆ ಮಾಡಿ ಪ್ರೀತಿಯಿಂದ ಕೈ ತುತ್ತು ತಿನ್ನಿಸುತ್ತಾಳೆ. ಅಮ್ಮ ತುಂಬಾ ಜಾಣೆ. ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ ಅಂತ ಚೆನ್ನಾಗಿ ಗೊತ್ತು ಅವಳಿಗೆ. ಯಾವ ಡಬ್ಬದಲ್ಲಿ ಏನಿದೆ, ಎಲ್ಲಿ ಯಾವ ಯಾವ ವಸ್ತುಗಳು ಇವೆ ಎಂದು ನೆನಪಿಟ್ಟುಕೊಂಡು ಎಲ್ಲಾ ಕೆಲಸ ಅವಳೊಬ್ಬಳೆ ಮಾಡುತ್ತಾಳೆ.’
‘ಅಂದ್ರೆ, ನಿಮ್ಮ ಅಮ್ಮನಿಗೆ ಕಣ್ಣು ಕಾಣಲ್ವ?’
‘ಇಲ್ಲ ತಾತ ಕಾಣುತ್ತೆ’
‘ಮತ್ತೆ ಕಾಣಲ್ಲ ಅಂತ ಹೇಳ್ತಿದ್ದೀಯಾ?’
‘ಹೌದು ಕಾಣಲ್ಲ’.
‘ಕಾಣುತ್ತೆ, ಕಾಣಲ್ಲ ಹೇಗೆ ಮಗು’? ಸರಿಯಾಗಿ ಹೇಳು ಎಂದು ಕೇಳಿದ ತಾತ.
ಪಮ್ಮಿಯ ಮಾತನ್ನು ಕೇಳಿದ ಕುರುಡು ತಾತ ಒಂದು ಕ್ಷಣ ಬೆರಗಾಗಿ ಇಷ್ಟು ಒಳ್ಳೆಯ ಮಗುವಿನ ಮುಖ ನೋಡಲಾಗುತ್ತಿಲ್ಲವಲ್ಲ ಎಂದುಕೊಂಡ. ತಾತ ಸುಮ್ಮನ್ನಿದ್ದುದ್ದನ್ನು ನೋಡಿ ‘ಏನಾಯಿತು ತಾತ? ನಿಂಗೆ ನೋವಾಗುತ್ತಿದೆಯಾ? ನೀರು ಬೇಕಾ ನಿನಗೆ? ನಿನ್ನ ಚೀಲದಲ್ಲಿ ಏನಾದರೂ ತೆಗೆದುಕೊಡಬೇಕಾ? ಅಥವಾ ಏನಾದರೂ ತಿನ್ನಬೇಕಾ?’ ಅಂತ ಕಾಳಜಿಯಿಂದ ಪಮ್ಮಿ ಕೇಳಿದಳು.
‘ಅಮ್ಮನಿಗೆ ರಾತ್ರಿ ಹೊತ್ತು ಕಣ್ಣು ಕಾಣಲ್ಲ. ಬೆಳಿಗ್ಗೆ ಹೊತ್ತು ಚೆನ್ನಾಗಿ ಕಣ್ಣು ಕಾಣುತ್ತೆ. ಅವಳಿಗೆ ಇರುಳುಗುರುಡು ತಾತ. ಸಂಜೆಯಾದರೆ ಅವಳನ್ನು ಕೈಹಿಡಿದುಕೊಂಡು ಅಂಗಡಿಗೆ ಕರೆದುಕೊಂಡು ಹೋಗುತ್ತೇನೆ. ಇಬ್ಬರೂ ಸೇರಿ ತರಕಾರಿ ತರುತ್ತೇವೆ. ಅಮ್ಮನ ಜೊತೆ ಸೇರಿ ನಾನು ಮನೆ ಕೆಲಸಾನೂ ಮಾಡುತ್ತೀನಿ. ಅಮ್ಮನಿಗೆ ಕಣ್ಣು ಕಾಣದೇ ಇದ್ದಾಗ ಕಷ್ಟ ಪಡುವುದನ್ನು ನೋಡಿದ್ದೀನಿ. ಅದಕ್ಕೆ ಕುರುಡರು ಅಂದ್ರೆ ತುಂಬಾ ಇಷ್ಟ’ ಅಂತ ಪಮ್ಮಿ ಹೇಳಿದಳು.
ಪಮ್ಮಿಯ ಮಾತುಗಳನ್ನು ಕೇಳಿದ ತಾತ ಪ್ರೀತಿಯಿಂದ ತಲೆ ಸವರುತ್ತಾ ‘ಮತ್ತೆ ಇನ್ನೇನೇನು ಅಮ್ಮನಿಗೆ ಸಹಾಯ ಮಾಡುತ್ತೀಯಾ ನೀನು’? ಅಂತ ಪಮ್ಮಿಯನ್ನು ಕೇಳಿದ. ಅದಕ್ಕೆ ಪಮ್ಮಿ ಅಮ್ಮನಿಗೆ ಬಟ್ಟೆಯನ್ನು ತೊಟ್ಟುಕೊಳ್ಳುವಾಗ ಬಣ್ಣ ಯಾವುದೆಂದು ಹೇಳುತ್ತೇನೆ. ರಸ್ತೆಯಲ್ಲಿ ಗುಂಡಿಗಳಿದ್ದಾಗ, ಯಾವುದಾದರೂ ಕಟ್ಟಡದಲ್ಲಿ ಮೆಟ್ಟಿಲುಗಳಿದ್ದಾಗ ಎಡವದಂತೆ ಎಚ್ಚರಿಸುತ್ತೇನೆ. ಸಂಜೆಯಾದ ಮೇಲೆ ಕಾಗದದ ಮೇಲಿರುವ ಅಕ್ಷರಗಳನ್ನು ಓದಿ ಹೇಳುತ್ತೇನೆ. ಅಮ್ಮನಿಗೆ ಸಹಾಯ ಆಗೋ ಕೆಲಸಗಳನ್ನೆಲ್ಲಾ ಅವಳು ಹೇಳುವ ಮೊದಲೇ ನಾನು ಮಾಡಿಬಿಡುತ್ತೇನೆ ತಾತ’ ಎಂದು ಹೇಳಿದ ಪಮ್ಮಿಯ ಮಾತನ್ನು ಕೇಳಿ, ‘ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನನಗೆ ಆನಂದವಾಗುತ್ತಿದೆ ಕಂದ’ ಎಂದು ತಾತ ಹೆಮ್ಮೆ ಪಟ್ಟನು.
‘ತಾತ ನನ್ನ ತರಹ ನಿನಗೆ ಸಹಾಯ ಮಾಡಲು ನಿನ್ನ ಮಕ್ಕಳಿಲ್ವ?’
‘ಇಲ್ಲ ಮಗು, ನನಗೆ ಮಕ್ಕಳಿಲ್ಲ. ನನ್ನವರು ಅಂತ ಯಾರೂ ಇಲ್ಲ. ನಾನೊಬ್ಬ ಅನಾಥ ಕುರುಡು ತಾತ’. ‘ಹಾಗಾದರೆ, ನಿನಗೆ ಸಹಾಯ ಮಾಡಲು, ನಿನಗೆ ಕಾಣದ ವಸ್ತುಗಳನ್ನು ತೆಗೆದುಕೊಡಲು ಒಬ್ಬರೂ ಜೊತೆಯಲ್ಲಿ ಇಲ್ಲವಲ್ಲ ತಾತ. ಹೇಗೆ ದಾರಿಯಲ್ಲಿ ಒಬ್ಬನೇ ಹೋಗ್ತೀಯಾ?’
‘ಹೌದು, ಪಮ್ಮಿ ಒಂದೊಂದು ಸಲ ನಿನ್ನ ತರಹ ಯಾರಾದರೂ ಕೈಹಿಡಿದು ರಸ್ತೆ ದಾಟಿಸುತ್ತಾರೆ. ಇಲ್ಲ ಅಂದ್ರೆ ನಾನು ವಾಹನಗಳ ಶಬ್ದವನ್ನು ಕೇಳಿಸಿಕೊಂಡು, ಕೋಲಿನ ಸಹಾಯದಿಂದ ಮೆಲ್ಲಗೆ ದಾರಿ ಸಾಗಿಸುತ್ತೇನೆ. ಒಮ್ಮೊಮ್ಮೆ ಬೀಳುತ್ತೇನೆ ಬಿದ್ದಾಗ ನೋವಾಗುತ್ತೆ, ರಕ್ತ ಬರುತ್ತೆ, ಮತ್ತೆ ಹಾಗೆ ನಿಧಾನವಾಗಿ ಸಮಾಧಾನ ಮಾಡಿಕೊಂಡು ನಡೆದುಕೊಂಡು ಹೋಗುತ್ತೇನೆ’ ಅಂದ ತಾತ.
ತಾತನ ಮಾತುಗಳನ್ನು ಕೇಳಿದ ಪಮ್ಮಿ ‘ಹಾಗಾದರೆ ನೀನೂ ಕೂಡಾ ಅಮ್ಮನ ತರಹ ಯಾರಿಗೂ ಹೇಳದೆ ನೋವನ್ನು ತಡೆದುಕೊಳ್ಳುತ್ತೀಯಾ’ ಎಂದು ಕೇಳಿದಳು. ‘ಹೌದು ಪಮ್ಮಿ, ಒಂದೊಂದು ಸಲ ನೋವು ತಡ್ಕೋತೀನಿ ಇನ್ನೂ ಕೆಲವು ಸಲ ನೋವು ಮರೆಯೋಕೆ ಮನದುಂಬಿ ಹಾಡು ಹೇಳುತ್ತೀನಿ. ಹಾಡು ಕೇಳಿ ಕೆಲವರು ದುಡ್ಡು ಹಾಕುತ್ತಾರೆ. ಕೆಲವರು ಚೆನ್ನಾಗಿ ಹಾಡಿದೆ ಅಂತ ಹೇಳುತ್ತಾರೆ. ಇನ್ನೂ ಕೆಲವರು ಭಿಕ್ಷೆ ಹಾಕಬೇಕು ಅಂತ ನನ್ನನ್ನೂ, ನನ್ನ ಕಂಠವನ್ನೂ ಬೈದು ಹೋಗುತ್ತಾರೆ. ಹಾಡಿ ನೋವನ್ನು ನೀಗಿಸಿಕೊಂಡ ಮೇಲೆ, ಬಂದ ಹಣದಿಂದ ಹಸಿವನ್ನು ನೀಗಿಸಿಕೊಳ್ಳುತ್ತೀನಿ’ ಅಂದ ತಾತ.
‘ನಿನಗೆ ಹಾಡೋಕೆ ಬರುತ್ತಾ ತಾತ? ನನಗೂ ಹಾಡು ಕೇಳೋಕೆ ಮತ್ತು ಹಾಡು ಹಾಡೋಕೆ ತುಂಬ ಇಷ್ಟ . ನನಗೂ ಹಾಡೋದು ಕಲಿಸಿಕೊಡುತ್ತೀಯಾ?’ ಎಂದು ಕೇಳಿದಳು ಪಮ್ಮಿ. ‘ಹೇಗೆ ಕಲಿಸಿ ಕೊಡೋದು ಮಗು? ನಾನು ದಾರಿ ದಾರಿ ತಿರುಗೋ ಕಣ್ಣು ಕಾಣದ ಭಿಕ್ಷುಕ. ಇವತ್ತು ಈ ರಸ್ತೆಯಲ್ಲಿ ಇದ್ದರೆ, ನಾಳೆ ಇನ್ನೆಲ್ಲಿ ಇರುತ್ತೀನೋ ಗೊತ್ತಿಲ್ಲವಲ್ಲ ಮಗು’ ಅಂದ ತಾತ. ‘ಹಾಗಾದರೆ ನೀನು ನಮ್ಮ ಮನೆಗೆ ಬಂದು ಬಿಡು ತಾತ. ಆಗ ನೀನೂ ದಿನಾಲೂ ಹಾಡು ಹೇಳಬಹುದು, ಮತ್ತೆ ನಾನು ಹಾಡು ಕಲಿಯಬಹುದು’ ಎಂದಳು. ‘ಅದೆಷ್ಟು ಒಳ್ಳೆಯ ಮನಸ್ಸು ಮಗು ನಿನ್ನದು. ನಾನು ಒಬ್ಬ ಭಿಕ್ಷುಕ, ಕೊಳೆ ಬಟ್ಟೆ ಹಾಕಿಕೊಂಡಿದ್ದೀನಿ. ಬಾಚದ ತಲೆಗೂದಲು, ಮೈ ತೊಳೆಯದೆ ಕೆಟ್ಟವಾಸನೆ ಬರುತ್ತಾ ಇದೆ. ಹೀಗಿದ್ದಾಗ ನಾನು ನಿಮ್ಮ ಮನೆಗೆ ಬಂದರೆ ನಿಮ್ಮಮ್ಮ ಬೈದುಬಿಡ್ತಾರೆ. ಬೇಡ ಮಗು. ನಾನು ದಾರಿಯಲ್ಲೇ ಜೀವನ ಮಾಡುತ್ತೀನಿ. ನೀನು ನನಗೆ ರಸ್ತೆ ದಾಟಿಸಿ, ಸವಿ ಸವಿಯಾದ ಮಾತುಗಳಿಂದ ಸಂತೋಷಪಡಿಸಿ, ಹಸಿವನ್ನು ಮರೆಸಿದ್ದೀಯಾ ಕಂದ. ಈಗ ತಡವಾಯ್ತು ಮನೆಗೆ ಹೋಗು ಅಮ್ಮ ಕಾಯುತ್ತಿರುತ್ತಾರೆ’ ಎಂದ ತಾತ.
ಆಗ ಪಮ್ಮಿ ‘ನೀನು ಊಟ ಇಲ್ಲ ಅಂತ ಭಿಕ್ಷುಕನಾದೆ, ಸ್ನಾನ ಮಾಡಿಲ್ಲ, ಅದಕ್ಕೆ ವಾಸನೆ ಅಷ್ಟೇ. ಕೊಳೆ ಬಟ್ಟೆ ತೆಗೆದು ಬೇರೆ ಬಟ್ಟೆ ತೊಟ್ಟುಕೊಂಡರೆ ಎಲ್ಲ ಸರಿಹೋಗುತ್ತದೆ ಆಯ್ತ. ಆಗ ನೀನು ನಮ್ಮ ಥರನೇ ಆಗಿಬಿಡುತ್ತೀಯ. ನಮ್ಮ ಮನೇಲಿ ಊಟ ಇದೆ, ಬಟ್ಟೆ ಇದೆ, ಅಮ್ಮ ಹೇಳಿಕೊಟ್ಟಿರೋ ಪ್ರೀತಿ ಇದೆ, ನಿನ್ನ ಜೊತೆಗೆ ನಾನು, ಅಮ್ಮ, ಬೂಚಿ ಬೆಕ್ಕು ಎಲ್ಲಾ ಇರುತ್ತೀವಿ ಬಾ ತಾತ’ ಅಂದಳು ಪಮ್ಮಿ. ಮಾತನ್ನು ಕೇಳಿ ತಾತನ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು. ‘ನಾನು ಬಂದರೆ ಅಮ್ಮ ಬೈಯುತ್ತಾರೆ, ನೀನು ಹೊರಡು’ ಅಂತ ಮತ್ತೆ ಹೇಳಿದ ಕುರುಡು ತಾತ.
ತಾತನ ಮಾತನ್ನು ಕೇಳಿದ ಪಮ್ಮಿ ‘ನಮ್ಮ ಅಮ್ಮ ತುಂಬಾ ಒಳ್ಳೆಯವರು. ಒಳ್ಳೆಯವರನ್ನು ಮನೆಗೆ ಕರೆದುಕೊಂಡು ಹೋದರೆ ಸಂತೋಷಪಡುತ್ತಾರೆ. ಅವರು ಯಾವಾಗಲೂ ಒಳ್ಳೆ ಕೆಲಸ ಮಾಡಿದರೆ ಬೈಯಲ್ಲ ತಾತ. ನಾನು ತಪ್ಪು ಮಾಡಿದಾಗಲೂ ತಿದ್ದಿ ಬುದ್ಧಿ ಹೇಳುತ್ತಾರೆಯೇ ಹೊರತು ಬೈಯ್ಯುವುದಿಲ್ಲ ಗೊತ್ತಾ’ ಎಂದು ಹೇಳಿದಳು.
‘ಒಂದು ಸಲ ನಾನು ಶಾಲೆಗೆ ಹೋಗೋವಾಗ ನಮ್ಮ ಮನೆಯಲ್ಲಿರೋ ಬೂಚಿಬೆಕ್ಕು ಆಗಿನ್ನು ಮರಿಯಾಗಿತ್ತು. ಮರದ ಹತ್ತಿರ ಅದು ಆಟ ಆಡಬೇಕಾದರೆ ಅದರ ಎರಡೂ ಕಣ್ಣಿಗೆ ಮುಳ್ಳು ಚುಚ್ಚಿಕೊಂಡು ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತಿತ್ತು ಪಾಪ. ಆಗ ಅದರ ಮೈಯಲ್ಲಾ ರಕ್ತ, ಕೊಚ್ಚೆಯಾಗಿತ್ತು. ನಾನು ಶಾಲೆಯಿಂದ ಬರಬೇಕಾದರೆ ಅದನ್ನ ನೋಡಿದೆ. ಅದು ಒದ್ದಾಡುತ್ತಾ ಇತ್ತು. ಅದರ ಮೈಯಿಂದ ಕೆಟ್ಟ ವಾಸನೆ ಬರುತ್ತಿತ್ತು. ನನಗೆ ಅಳು ಬಂದು ಅದನ್ನ ಎತ್ತಿಕೊಂಡು ಮನೆಗೆ ಬಂದೆ. ಅಮ್ಮ ಅದಕ್ಕೆ ಬೈಯಲೇ ಇಲ್ಲ. ಗೊತ್ತಾ! ನಾನು, ಅಮ್ಮ ಸೇರಿಕೊಂಡು ಅದಕ್ಕೆ ಸ್ನಾನ ಮಾಡಿಸಿದೆವು. ಅದರ ಕಣ್ಣಿಂದ ಬರುತ್ತಿದ್ದ ರಕ್ತವನ್ನು ಒರೆಸಿ ಗಾಯಕ್ಕೆ ಅರಿಶಿಣ ಪುಡಿ ಹಾಕಿದಳು ಅಮ್ಮ. ಆಮೇಲೆ ಅದರ ಮೈಯಲ್ಲಾ ಒರೆಸಿ ಕುಡಿಯೋಕೆ ತಟ್ಟೆಗೆ ಹಾಲು ಹಾಕಿದ್ವಿ. ಎಷ್ಟು ಹೊತ್ತಾದರೂ ಅದು ಮಿಯಾಂವ್ ಮಿಯಾಂವ್ ಅಂತ ಅಳ್ತಾನೇ ಇತ್ತು. ಆಮೇಲೆ ಆ ಹಾಲಿನ ತಟ್ಟೆಯನ್ನು ಅದರ ಬಾಯಿ ಹತ್ತಿರ ಹಿಡಿದುಕೊಂಡ ಮೇಲೆ ಎಲ್ಲ ಒಂದೇ ಉಸಿರಿಗೆ ಕುಡಿದು ಹಾಕಿಬಿಡ್ತು. ಎಲ್ಲೂ ಓಡಾಡದೇ ಒಂದೇ ಕಡೆ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಸೈನಿಕರು ಓಡಾಡೋ ತರಹ ಮನೆಯಲ್ಲಿ ಓಡಾಡುತ್ತಲೇ ಇತ್ತು. ಆಮೇಲೆ ನನಗೆ ಅಮ್ಮನಿಗೆ ಗೊತ್ತಾಯಿತು ಆ ಬೆಕ್ಕಿಗೆ ಎರಡೂ ಕಣ್ಣು ಕಾಣಿಸುತ್ತಿಲ್ಲ ಅಂತ. ಅದು ಗೊತ್ತಾದ ಮೇಲೆ ಅಮ್ಮನಿಗೆ ನನಗೆ ತುಂಬಾ ನೋವಾಯಿತು. ಆಚೆಗೆ ಬಿಟ್ಟುಬಿಟ್ಟರೆ ಯಾವುದಾದರೂ ಗಾಡಿಗೆ ಸಿಕ್ಕಿ ಅಥವಾ ಗುಂಡಿಯಲ್ಲಿ ಬಿದ್ದು ಸತ್ತು ಹೋಗುತ್ತೆ ಅಂತ ಅದನ್ನ ನಮ್ಮ ಮನೇಲೆ ಇಟ್ಟುಕೊಂಡುಬಿಟ್ಟೆವು. ಅದು ನನ್ನ ಜೊತೆ ಅಮ್ಮನ ಜೊತೆ ಆಟ ಆಡುತ್ತೆ. ಹಸಿವಾದಾಗ ಹಾಲು ಕುಡಿಯುತ್ತೆ. ಒಂದು ಇಲೀನೂ ಮನೆಗೆ ಬರೋಕೆ ಬಿಡಲ್ಲ. ಅದಕ್ಕೆ ನಾವು ಪ್ರೀತಿಯಿಂದ ಬೂಚಿಬೆಕ್ಕು ಅಂತ ಕರೀತೀವಿ. ನಮ್ಮ ಮನೆಯಲ್ಲಿ ಈಗ ಬೂಚಿ ಬೆಕ್ಕು ಕೂಡಾ ನಮ್ಮ ಕುಟುಂಬದ ಸದಸ್ಯ. ಅಮ್ಮನಿಗೆ, ಬೂಚಿಬೆಕ್ಕಿಗೆ ಕಷ್ಟ ಆದಾಗಲೆಲ್ಲಾ ನಾನು ಸಹಾಯ ಮಾಡುತ್ತೀನಿ. ನೀನು ಬಂದರೆ, ನಿನಗೂ ಕೆಲಸ ಮಾಡಿಕೊಳ್ಳಲು ಸ್ವಲ್ಪ ಸಹಾಯ ಮಾಡುತ್ತೀನಿ. ಅಮ್ಮ ಬೂಚಿಬೆಕ್ಕನ್ನು ಕರೆದುಕೊಂಡು ಹೋದಾಗಲೂ ಬೈಯಲ್ಲಿಲ್ಲ, ನೀನೂ ಬಂದರೂ ಖಂಡಿತ ಬೈಯಲ್ಲ, ಬಾ ತಾತ’ ಅಂತ ಕುರುಡು ತಾತನನ್ನು ಒತ್ತಾಯ ಮಾಡಿದಳು ಪಮ್ಮಿ.
ಪಮ್ಮಿ, ಮನೆಗೆ ಕುರುಡು ತಾತನನ್ನು ಕರೆದಾಗ ‘ಪಮ್ಮಿ ನೀನು ಇನ್ನೂ ಚಿಕ್ಕವಳು. ನಿಮ್ಮ ಮನೆಯಲ್ಲಿ ಈಗಾಗಲೇ ಇರುವ ಅಮ್ಮನ ಮತ್ತು ಬೂಚಿಬೆಕ್ಕಿನ ಯೋಗಕ್ಷೇಮವನ್ನು ನೀನು ನೋಡಬೇಕು. ನಾನು ಬಂದರೆ ನಿನಗೆ ಹೆಚ್ಚು ಹೊರೆಯಾಗುವುದು ಕಂದ’. ಹುಷಾರಿಲ್ಲವೆಂದು, ನಡೆಯಲಾಗುವುದಿಲ್ಲವೆಂದು ಏನೆಲ್ಲಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ತಾತನ ಪ್ರಯತ್ನ ವಿಫಲವಾಯಿತು. ಪಮ್ಮಿಯ ಮಾತಿಗೆ ಕಟ್ಟುಬಿದ್ದು ತಾತ ‘ನಿಮ್ಮ ಮನೆಗೆ ಬರುತ್ತೇನೆ. ಆದರೆ ನಿತ್ಯವೂ ಅಲ್ಲೇ ಇರುವುದಿಲ್ಲ. ದಿನ ಸಂಜೆ ನಿಮ್ಮ ಮನೆಯ ಜಗುಲಿಯ ಮೇಲೆ ಬಂದು ಹಾಡುತ್ತೇನೆ. ಆಗ ನೀನು ನನಗೆ ಸೇವೆ ಮಾಡಬೇಡ! ನನಗೆ ಬೇಕಿರುವ ವಸ್ತುಗಳನ್ನು ಚೀಲದಲ್ಲಿ ಜೋಡಿಸಿಟ್ಟುಕೊಳ್ಳಲು ಸಹಾಯ ಮಾಡು ಕಂದ”. ಪಮ್ಮಿ ಮತ್ತು ತಾತ ಇಬ್ಬರೂ ಪಮ್ಮಿಯ ಮನೆ ಕಡೆಗೆ ನಡೆದರು. ಪಮ್ಮಿ ತಾತನ ಕೈ ಹಿಡಿದುಕೊಂಡು, ತಾತನ ಹಾಡು ಕೇಳುತ್ತಾ ಮನೆಯ ದಾರಿಯತ್ತ ಹೆಜ್ಜೆ ಹಾಕಿದಳು. ತಾತ ಧೈರ್ಯದಿಂದ ದಿಟ್ಟತನದಿಂದ ಪ್ರೀತಿಯ ಪಮ್ಮಿಯ ಜೊತೆಗೂಡಿ ಹೆಜ್ಜೆ ಹಾಕಿದ.
(ಇದೇ ಬುಧವಾರ 10ನೇ ತಾರೀಖು ಬಿಡುಗಡೆಯಾಗಲಿರುವ ಬೇಲೂರು ರಘುನಂದನ್ ಬರೆದ “ಹಾರುವ ಆನೆ” ಮಕ್ಕಳ ಕಥಾ ಸಂಕಲನದಿಂದ ಈ ಕತೆಯನ್ನು ಆರಿಸಿಕೊಳ್ಳಲಾಗಿದೆ)
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.