ಹೆಣ್ಣು ಮಕ್ಕಳು ನಸುಕಿನಲ್ಲಿ ಹಾಡುತ್ತ ಬೀಸುತ್ತಿದ್ದರು. ಹೈನುಳ್ಳವರು ದೊಡ್ಡ ಪಾತ್ರೆಯಲ್ಲಿ ಮೊಸರು ಕಡೆಯುತ್ತ ಬೆಣ್ಣೆ ತೆಗೆಯುವುದನ್ನು ನೋಡುವುದೇ ನನಗೆ ಸೋಜಿಗವಾಗಿತ್ತು. ಮೊಸರು ಮಜ್ಜಿಗೆಯಾಗಿ ಅದರೊಳಗಿಂದ ಬೆಣ್ಣೆ ಬರುವುದನ್ನು ನೋಡಲಿಕ್ಕೆ ಮಜಾ ಅನಿಸುತ್ತಿತ್ತು. ದೊಡ್ಡ ಕಡೆಗೋಲನ್ನು ಕಂಬದ ಆಧಾರದ ಮೇಲೆ ದೊಡ್ಡ ಪಾತ್ರೆಯಲ್ಲಿ ಇಳಿಬಿಟ್ಟು ಅದಕ್ಕೆ ಸಣ್ಣ ಹಗ್ಗ ಸುತ್ತಿ ಎರಡೂ ಕೈಯಿಂದ ಮಥಿಸುತ್ತಿದ್ದರು. ಮಜ್ಜಿಗೆಯನ್ನು ಎಂದೂ ಮಾರುತ್ತಿರಲಿಲ್ಲ. ಪಾತ್ರೆ ತೆಗೆದುಕೊಂಡು ಬಂದವರಿಗೆಲ್ಲ ಕೊಟ್ಟುಬಿಡುತ್ತಿದ್ದರು.

ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಎರಡನೆಯ ಕಂತು

 

ನಾನು ಸುಮಾರು ಆರು ವರ್ಷದವನಾಗುವವರೆಗೆ ಅಲ್ಲೀಬಾದಿಯಲ್ಲೇ ಇದ್ದೆ. ನಮ್ಮ ಹಸುಗಳು, ಅಜ್ಜಿ, ಬಾಬು ಮಾಮಾ, ಅವನ ಗೆಳೆಯರು ಮತ್ತು ನನ್ನ ಇಬ್ಬರು ಗೆಳೆಯರು ಮುಂತಾದವರಿಂದ ಕೂಡಿದ ಪುಟ್ಟ ಜಗತ್ತು ನನ್ನದಾಗಿತ್ತು. ಎಂಟು ಕಿಲೊಮೀಟರ್ ದೂರದಲ್ಲಿ ಮಸಕು ಮಸಕಾಗಿ ಕಾಣುವ ದ್ಯಾಬೇರಿ ಹಳ್ಳಿಯನ್ನು ಮಾಳಿಗೆ ಹತ್ತಿ ನೋಡುವುದೇ ಖುಷಿ ಮತ್ತು ಅಲ್ಲಿಗೆ ಹೋಗಲಿಕ್ಕಾಗುವುದಿಲ್ಲವಲ್ಲಾ ಎಂಬ ಬೇಸರ ಒಟ್ಟೊಟ್ಟಿಗೆ ಆಗುತ್ತಿದ್ದವು.

ಒಂದೊಂದು ಸಲ ಕರಕರ ಮುಂಡೇರು ಬರುತ್ತಿದ್ದರು. ಅವರ ಕೈಯಲ್ಲಿ ಹೊಳೆಯುವ ಹತ್ತಾರು ಚಪ್ಪಟೆ ರಿಂಗುಗಳಿರುತ್ತಿದ್ದವು. ಅವುಗಳಲ್ಲಿ ದೊಡ್ಡ ರಿಂಗಿನ ವ್ಯಾಸ ಎಂಟ್ಹತ್ತು ಇಂಚಿನವರೆಗೆ ಇರುತ್ತಿತ್ತು. ಅವುಗಳಿಂದ ಸಪ್ಪಳ ಮಾಡುವುದು ಅವರು ಭಿಕ್ಷೆ ಬೇಡುವ ರೀತಿಯಾಗಿತ್ತು. ಅವುಗಳ ಕರಕರ ನಾದದಿಂದ ಜನರಿಗೆ ಕಿರಿಕಿರಿ ಎನಿಸುತ್ತಿತ್ತು. ಹೀಗಾಗಿ ಕೂಡಲೆ ಭಿಕ್ಷೆ ನೀಡಿ ಕಳಿಸುತ್ತಿದ್ದರು. ನನಗೋ ಅವರ ರಿಂಗುಗಳು ಬಹಳ ಆಕರ್ಷಣೀಯವಾಗಿ ಕಾಣುತ್ತಿದ್ದವು.

(ಅಲಿಯಾಬಾದ (ಅಲ್ಲೀಬಾದಿ) ಫಲಕ)

ಅಲ್ಯೂಮಿನಿಯಂ ಪಾತ್ರೆ ಮಾರುವವರು, ಹೆಣ್ಣುಮಕ್ಕಳಿಗೆ ಬೇಕಾದ ವಸ್ತುಗಳನ್ನು ಮಾರುವವರು- ಮುಂತಾದವರು ಹಳ್ಳಿಗಳಿಗೆ ಬರುತ್ತಿದ್ದರು. ಜಾತಕಾರರು ಎಮ್ಮೆ ಬೋಳಿಸಲು ಬರುತ್ತಿದ್ದರು. ಅವರ ಹೆಂಡಂದಿರು ಹಳೆ ಬಟ್ಟೆಯಿಂದ ಹೊಸ ಕೌದಿ ತಯಾರಿಸಿಕೊಡುತ್ತಿದ್ದರು.

ಬಯಲು ಪತ್ತಾರರು ಹಳ್ಳಿಗೆ ಬಂದು ಒಂದು ಕಡೆ ಕಲ್ಲಿದ್ದಲಿನ ಒಲೆ ಮಾಡಿ ಅದಕ್ಕೆ ಪಂಕಾ (ಕೊಳವೆಯಿಂದ ಈ ಒಲೆಗೆ ಗಾಳಿ ಪೂರೈಸುವ ಕೈಯಂತ್ರ) ತಿರುಗಿಸುತ್ತ ಕೂಡುತ್ತಿದ್ದರು. ಹೆಣ್ಣು ಮಕ್ಕಳು ತಮ್ಮ ಒಡೆದ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಪಾತ್ರೆಗಳನ್ನು ತಂದು ಅವರಿಗೆ ಕೊಟ್ಟು ತಮ್ಮಗಿಷ್ಟವಾದ ದೇವರುಗಳನ್ನು ತಯಾರಿಸಲು ಹೇಳುತ್ತಿದ್ದರು. ಬಯಲು ಪತ್ತಾರರು ಅವುಗಳನ್ನು ಕರಗಿಸಿ, ಆಯಾ ದೇವರುಗಳ ಅಚ್ಚಿನಲ್ಲಿ ಹಾಕಿ ಹೊಸ ದೇವರುಗಳನ್ನು ಸೃಷ್ಟಿಸಿ ಕೊಡುತ್ತಿದ್ದರು. ಪಾತ್ರೆಗಳಿಗೆ ಕಲಾಯಿ ಮಾಡುವವರೂ ಹೀಗೇ ಬಂದು ಕೂಡುತ್ತಿದ್ದರು.

ವ್ಯಕ್ತಿಯೊಬ್ಬ ಎಂದಾದರೊಮ್ಮೆ ಬಂದು ತೆಂಗಿನ ಗರಿಗಳಿಂದ ಶಹನಾಹಿ, ಸನಾದಿ, ಕೊಂಬು (ರಣೋತ್ಸಾಹಕ್ಕಾಗಿ ಊದುವ ವಾದ್ಯ) ಮುಂತಾದವುಗಳನ್ನು ತಯಾರಿಸಿ ಮಾರುತ್ತಿದ್ದ. ಅವುಗಳಿಂದ ನಾದ ಹೊರಡಿಸಿ ಅಚ್ಚರಿ ಮೂಡಿಸುತ್ತಿದ್ದ. ಆ ಬಡವನ ಕಲಾಪ್ರತಿಭೆಗೆ ಅಚ್ಚರಿ ಪಡುತ್ತಿದ್ದೆ.

ವರ್ಣರಂಜಿತ ಗರ್ದಿಗಮ್ಮತ್ತು ಪೆಟ್ಟಿಗೆ ಹೊತ್ತುಕೊಂಡು ಬಂದು ಟೈಪಾಡ್ ಮೇಲೆ ಇಟ್ಟು ಚಳ್ಳಂ ಬಾರಿಸುತ್ತ ಗರ್ದಿಗಮ್ಮತ್ ದೇಖೋ, ಮುಂಬೈ ಶಹರ್ ದೇಖೋ, ತಾಜಮಹಲ್ ದೇಖೋ ಎಂದು ಮುಂತಾಗಿ ಕೂಗುತ್ತಿದ್ದ. ದುಡ್ಡು ಕೊಟ್ಟವರಿಗೆ ಮುಚ್ಚಳ ತೆಗೆದು ದುಂಡನೆಯ ಕಿಂಡಿಯಿಂದ ಗರ್ದಿಗಮ್ಮತ್ ತೋರಿಸುತ್ತಿದ್ದ. ನಾಲ್ಕೈದು ಜನರು ಏಕಕಾಲಕ್ಕೆ ನೋಡುವ ಅವಕಾಶವಿತ್ತು. ದೆಹಲಿ, ಮುಂಬೈ, ಲಂಡನ್ ಮುಂತಾದ ನಗರಗಳನ್ನು, ಸಮುದ್ರ, ಹಿಮಾಲಯ ಮತ್ತು ನಮಗೆ ಗೊತ್ತಿರದ ಪ್ರಾಣಿ ಮುಂತಾದವುಗಳನ್ನು ಆ ಕಿಂಡಿಯಿಂದ ನೋಡುತ್ತಿದ್ದೆವು. ಹೀಗೆ ನಮಗೆ ಹೊಸ ಪ್ರಪಂಚದ ಅನುಭವವಾಗುತ್ತಿತ್ತು.

ಹೆಣ್ಣು ಮಕ್ಕಳು ನಸುಕಿನಲ್ಲಿ ಹಾಡುತ್ತ ಬೀಸುತ್ತಿದ್ದರು. ಹೈನುಳ್ಳವರು ದೊಡ್ಡ ಪಾತ್ರೆಯಲ್ಲಿ ಮೊಸರು ಕಡೆಯುತ್ತ ಬೆಣ್ಣೆ ತೆಗೆಯುವುದನ್ನು ನೋಡುವುದೇ ನನಗೆ ಸೋಜಿಗವಾಗಿತ್ತು. ಮೊಸರು ಮಜ್ಜಿಗೆಯಾಗಿ ಅದರೊಳಗಿಂದ ಬೆಣ್ಣೆ ಬರುವುದನ್ನು ನೋಡಲಿಕ್ಕೆ ಮಜಾ ಅನಿಸುತ್ತಿತ್ತು. ದೊಡ್ಡ ಕಡೆಗೋಲನ್ನು ಕಂಬದ ಆಧಾರದ ಮೇಲೆ ದೊಡ್ಡ ಪಾತ್ರೆಯಲ್ಲಿ ಇಳಿಬಿಟ್ಟು ಅದಕ್ಕೆ ಸಣ್ಣ ಹಗ್ಗ ಸುತ್ತಿ ಎರಡೂ ಕೈಯಿಂದ ಮಥಿಸುತ್ತಿದ್ದರು. ಮಜ್ಜಿಗೆಯನ್ನು ಎಂದೂ ಮಾರುತ್ತಿರಲಿಲ್ಲ. ಪಾತ್ರೆ ತೆಗೆದುಕೊಂಡು ಬಂದವರಿಗೆಲ್ಲ ಕೊಟ್ಟುಬಿಡುತ್ತಿದ್ದರು.

(ಕುರುಬ ಸಮಾಜದ ಮಹಿಳೆ ಬಯಲು ಬಿಡಾರದ ಮುಂದೆ ಮೊಸರು ಕಡೆಯುತ್ತಿರುವುದು)

ನೌವಾರಿ ಸೀರೆ ಉಡುವ ಹೆಂಗಸರು ಕುಪ್ಪಸದ ಖಣವನ್ನು ತಾವೇ ಕತ್ತರಿಸಿ ಸೂಜಿ ದಾರದಿಂದ ಹೊಲಿದುಕೊಳ್ಳುತ್ತಿದ್ದರು. ಲಂಗ ಬ್ರಾಗಳ ಗೊಡವೆ ಇರಲಿಲ್ಲ. ಸೆರಗು ಹೊದ್ದುಕೊಳ್ಳದೆ ತಿರುಗುವ ಧೈರ್ಯ ಯಾರಿಗೂ ಇರಲಿಲ್ಲ.

ಮದುವೆ ವಿಚಾರದಲ್ಲಿ ಎರಡು ಪ್ರಸಂಗಗಳ ಕುರಿತು ಹೇಳಲೇ ಬೇಕು. ಒಂದು ಪ್ರಸಂಗದಲ್ಲಿ ಹೆಣ್ಣಿನ ಕಡೆಯವರು ಗಂಡಿನ ಪರೀಕ್ಷೆ ಮಾಡಲು ಎರೆಭೂಮಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ತಿಳಿಸಿದರು. ಆ ಸ್ಥಳದ ಆಳವನ್ನು ಪರೀಕ್ಷಿಸಿದರು. ಗಂಡಿನ ಕಡೆಯ ಅಜ್ಜಿಯೊಬ್ಬರು ಹುಡುಗಿಗೆ ಸ್ನಾನ ಮಾಡಿಸುವ ನೆಪದಲ್ಲಿ ಕನ್ಯತ್ವ ಪರೀಕ್ಷೆ ಮಾಡಿದರು. ಮಹಿಳೆಯರು ಇಂಥ ಘಟನೆಗಳ ಕುರಿತು ಮೆತ್ತಗೆ ಮಾತನಾಡುತ್ತಲೇ ಇದ್ದರು. ಮಕ್ಕಳಾದ ನಮಗೆ ಇವೆಲ್ಲ ವಿಚಿತ್ರ ಆಟ ಎನಿಸುತ್ತಿದ್ದವು. ನಾವು ಆಜುಬಾಜು ಮನೆಗಳಲ್ಲಿ ಓಡಾಡಿಕೊಂಡೇ ಇರುತ್ತಿದ್ದೆವು.

ನಮ್ಮ ಮನೆಯ ಎದುರಿಗೆ ಧನಗರ್ ಸಮಾಜದವರ ಮನೆ ಇತ್ತು. ಆ ಮನೆಯ ಸೊಸೆ ಸ್ಫುರದ್ರೂಪಿಯಾಗಿದ್ದು ರೂಪಾಯಿ ಅಗಲ ಕುಂಕುಮ ಹಚ್ಚಿಕೊಳ್ಳುತ್ತಿದ್ದಳು. ಜೇನು ಹುಟ್ಟಿನಿಂದ ತಯಾರಿಸಿದ ಅಂಟನ್ನು ಮೊದಲಿಗೆ ಹಚ್ಚಿಕೊಂಡು ಅದರ ಮೇಲೆ ಕುಂಕುಮ ಹಚ್ಚುವುದರಿಂದ ಅದು ಅಳಿಸಿಹೋಗುತ್ತಿರಲಿಲ್ಲ. ದನಕಾಯುವಾಗ, ಸಂಜೆ ಹೊತ್ತಿನಲ್ಲಿ ಸೂರ್ಯ ಬಯಲ ಭೂಮಿಯಲ್ಲಿ ಇಳಿಯುವಾಗ ಆಕೆಯ ಕುಂಕುಮದ ಹಾಗೆ ಕೆಂಪಗಾಗುತ್ತಿದ್ದ ಎಂದು ನನಗೆ ಅನಿಸುತ್ತಿತ್ತು. ಆಕೆ ಅತಿ ಮೃದುಸ್ವಭಾವದ ಗುಣವಂತೆ ಆಗಿದ್ದಳು.

ಹಳ್ಳಿಯಲ್ಲಿ ಹೆಣ್ಣುಮಕ್ಕಳು ನಸುಕಿನಲ್ಲಿ ಅಥವಾ ರಾತ್ರಿಯಾದ ಮೇಲೆ ಬಯಲುಕಡೆಗೆ ಹೋಗಲು ಸಾಧ್ಯವಿತ್ತು. ಒಂದು ವೇಳೆ ನಸುಕಿನಲ್ಲಿ ಏಳಲಿಕ್ಕಾಗದಿದ್ದರೆ ಬಯಲುಕಡೆಗೆ ಹೋಗಲು ರಾತ್ರಿಯಾಗುವವರೆಗೂ ಕಾಯಬೇಕಿತ್ತು. ಹಗಲು ಹೊತ್ತಿನಲ್ಲಿ ಗಂಡಸರ ಹಾಗೆ ಯಾವಾಗ ಬೇಕಾದರೂ ಹೋಗಲು ಹೆಣ್ಣುಮಕ್ಕಳಿಂದ ಸಾಧ್ಯವಿಲ್ಲ. ಆ ರೂಪಾಯಿ ಅಗಲ ಕುಂಕುಮದಾಕೆಗೆ ಒಂದು ಸಲ ಮಧ್ಯಾಹ್ನ ಒತ್ತರಿಸಿ ಬಯಲುಕಡೆ ಬಂದಿತು. ಆಕೆ ತಾಳಿಕೊಳ್ಳಲಿಕ್ಕಾಗದೆ ಹಿತ್ತಲಲ್ಲಿ ಸಂಡಾಸ್ ಮಾಡಿದಳು.

(ಗ್ರಾಮಪಂಚಾಯತ್ ಕಾರ್ಯಾಲಯ)

ಅದೇ ವೇಳೆಗೆ ಆಕೆಯ ಗಂಡ ಬಂದ. ಅವಳು ಹಾಗೆ ಮಾಡಿದ್ದು ನೋಡಿ ಕೆಂಡಾಮಂಡಲವಾದ. ಸಿಟ್ಟಿನ ಬರದಲ್ಲಿ ಆಕೆಗೆ ಬಡಿಬಡಿದು ಅಡಿಕೆ ಗಾತ್ರದ ಮಲ ತಿನ್ನಿಸಿದ! ಈ ಸುದ್ದಿ ಹಳ್ಳಿಗೆಲ್ಲ ಹಬ್ಬಿತು. ಧನಗರ ಸಮಾಜದವರು ತಮ್ಮ ಪಂಚರನ್ನು ಕರೆಯಿಸಿ ಪಂಚಾಯ್ತಿ ಮಾಡಿದರು. ಹೇಲು ತಿಂದ ಹೆಣ್ಣು ಹಂದಿಯಾದಳು. ನೀನು ಹಂದಿಯ ಜೊತೆ ಬಾಳುವೆ ಮಾಡುವೆಯಾ? ಎಂದು ಅವಳ ಗಂಡನನ್ನು ಪಂಚರು ಪ್ರಶ್ನಿಸಿದರು. ನೀನು ಅವಳಿಗೆ ಸೋಡಚೀಟಿ (ವಿವಾಹ ವಿಚ್ಛೇದನ) ಕೊಡದಿದ್ದರೆ ನಿಮ್ಮದು ಹಂದಿಗಳ ಮನೆತನ ಎಂದು ಕುಲದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದರು. ಹೀಗೆ ಆ ಅಮಾಯಕ ಹೆಣ್ಣುಮಗಳು ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಹೋಗಬೇಕಾಯಿತು.

ನಮ್ಮ ಮನೆಗೆ ಸಮೀಪದಲ್ಲೇ ಎದುರುಗಡೆ ಒಂದು ಮನೆಯವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದ. ಮಗ ರಸ್ತೆ ನಿರ್ಮಾಣ ಕೆಲಸಕ್ಕೆ ಕೂಲಿಯಾಗಿ ಹೋಗುತ್ತಿದ್ದ. ಇಬ್ಬರೂ ಹೆಣ್ಣು ಮಕ್ಕಳ ಮದುವೆಯಾಗಿತ್ತು. ಒಬ್ಬಳು ಕಪ್ಪಾಗಿದ್ದರೆ ಇನ್ನೊಬ್ಬಳು ಬೆಳ್ಳಗೆ ಬಹಳ ಆಕರ್ಷಕವಾಗಿದ್ದಳು. ಆ ಕಪ್ಪನೆಯ ಹೆಣ್ಣುಮಗಳು ಗಂಡನ ಮನೆಗೆ ಹೋಗಿ ಬಡತನದಲ್ಲೇ ಚೆನ್ನಾಗಿ ಬಾಳುವೆ ಮಾಡಿದಳು. ಇನ್ನೊಬ್ಬಳು ಗಂಡನ ಮನೆಗೆ ಹೋಗಲೇ ಇಲ್ಲ. ಆತ ತನಗೆ ಅನುರೂಪದ ಗಂಡನಲ್ಲ ಎಂಬುದು ಅವಳ ಭಾವನೆಯಾಗಿತ್ತು. ಹೀಗಾಗಿ ಮನೆಯವರು ಎಷ್ಟೇ ಪ್ರಯತ್ನ ಪಟ್ಟರೂ ಅವಳೇ ಹಠ ಸಾಧಿಸಿಬಿಟ್ಟಳು. ಕೊನೆಗೆ ಸೋಡಚೀಟಿಯಾಯಿತು.

(ಅಲ್ಲೀಬಾದಿ ಗ್ರಾಮದ ಒಂದು ಭಾಗ)

ಹೆಣ್ಣು ಮಕ್ಕಳು ತಮ್ಮ ಒಡೆದ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ಪಾತ್ರೆಗಳನ್ನು ತಂದು ಅವರಿಗೆ ಕೊಟ್ಟು ತಮ್ಮಗಿಷ್ಟವಾದ ದೇವರುಗಳನ್ನು ತಯಾರಿಸಲು ಹೇಳುತ್ತಿದ್ದರು. 

ಅದು ಹೇಗೋ ಅವಳಿಗೆ ವಿಜಾಪುರದ ಒಬ್ಬ ಕಾಂಟ್ರ್ಯಾಕ್ಟರನ ಸಂಬಂಧ ಬಂದಿತು. ಬಹುಶಃ ಆತ ರೋಡ್ ಕಾಂಟ್ರ್ಯಾಕ್ಟರ್ ಇರಬಹುದು. ಅವನ ಕೈಯಲ್ಲಿ ಕೂಲಿ ಮಾಡುವ ಈಕೆಯ ತಮ್ಮನ ಜೊತೆ ಮನೆಗೆ ಬಂದಿರಬಹುದು. ಮನೆಯವರು ಅವಳ ಸಂಬಂಧವನ್ನು ಮೌನವಾಗಿ ಒಪ್ಪಿಕೊಂಡಿರಬಹುದು. ಆತ ಅವರ ಮನೆಗೆ ಆ ಕಾಲದಲ್ಲಿ ಬಹಳಷ್ಟು ಗೃಹೋಪಯೋಗಿ ಸಾಮಾನುಗಳನ್ನು ತಂದುಕೊಡುತ್ತಿದ್ದ. ಮನೆಗೆ ಪಲ್ಲಂಗ, ಕುರ್ಚಿಗಳು ಬಂದವು. ಮನೆತುಂಬ ಸಾಮಾನುಗಳಾದವು. ಕೊನೆಗೊಂದು ದಿನ ಅವರ ಮಧ್ಯೆ ಅದೇನು ಮನಸ್ತಾಪ ಬಂದಿತೊ ಗೊತ್ತಿಲ್ಲ. ಒಂದು ದಿನ ಆತ ಬಂದು ಮೂರು ಚಕ್ಕಡಿಗಳಲ್ಲಿ ಕೊಟ್ಟ ಸಾಮಾನುಗಳನ್ನು ತುಂಬಿಕೊಂಡು ಹೋದ. ಈ ಅಪಮಾನವನ್ನು ತಾಳಲಾರದೆ ಆಕೆ ತಂಗಿಯ ಮನೆ ಸೇರಿದಳು. ಆ ತಂಗಿ ಅಕ್ಕನನ್ನು ಚೆನ್ನಾಗಿ ನೋಡಿಕೊಂಡಳು.

ಹಳ್ಳಿಯಲ್ಲಿ ಒಂದು ವಿಚಿತ್ರ ಪ್ರಸಂಗ ನಡೆಯಿತು. ಒಬ್ಬ ಹೆಣ್ಣುಮಗಳು ನೆರೆಮನೆಗೆ ಹೋದಾಗ ಚಿನ್ನದ ಸರ ಕದ್ದಿದ್ದಳು. ಆ ಮನೆಯವರಿಗೆ ಅವಳ ಮೇಲೆಯೆ ಸಂಶಯ ಏಕೆಂದರೆ ಆ ದಿನ ಮನೆಯೊಳಗೆ ಬೇರೆ ಯಾರೂ ಬಂದಿರಲಿಲ್ಲ. ಅವಳು ಮನೆಯೊಳಗೆ ಬರುವ ಮೊದಲು ಇದ್ದ ಸರ; ಅವಳು ಹೋದ ಮೇಲೆ ಮಾಯವಾದದ್ದು ಹೇಗೆ ಎಂಬ ಪ್ರಶ್ನೆಗೆ ಅವಳೇ ಕಳ್ಳಿ ಎಂಬ ಉತ್ತರ ಬರುತ್ತಿತ್ತು. ಮನೆಯ ಎಲ್ಲ ಹೆಂಗಸರು ಸೇರಿ ಅವಳ ಚಿಕ್ಕ ಮನೆಯನ್ನೆಲ್ಲ ಶೋಧಿಸಿದರೂ ಸಿಗಲಿಲ್ಲ. ಎಲ್ಲರು ಕೂಡಿ ಬಡಿದರೂ ಅವಳು ಬಾಯಿ ಬಿಡಲಿಲ್ಲ. ತಾನು ನಿರಪರಾಧಿ ಎಂದೇ ಸಾಧಿಸಿದಳು. ಕೊನೆಗೆ ಹಿರಿಯಳೊಬ್ಬಳು ಅವಳ ಸಂಸಾರದಲ್ಲಿ ಕೈ ಹಾಕಿ ಆ ಚಿನ್ನದ ಸರ ತೆಗೆದಳು. ಇಂಥ ಸುದ್ದಿಗಳೆಲ್ಲ ಇತರೆ ಹೆಂಗಸರು ನನ್ನ ಅಜ್ಜಿಯ ಬಳಿ ಬಂದು ಗುಸು ಗುಸು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಅವರು ಬಳಸಿದ ‘ಸಂಸಾರ’ದ ಅರ್ಥ ನನಗೆ ಬಹಳ ವರ್ಷಗಳ ನಂತರ ತಿಳಿಯಿತು.

ಬಾಲಕರು ಕೂಡ ಬಾಲಕಿಯರ ಜೊತೆ ಆಡುವಂತಿರಲಿಲ್ಲ. ಆದರೆ ನಮ್ಮ ಮನೆಯ ಸುತ್ತ ಬಾಲಕಿಯರೇ ಹೆಚ್ಚಾಗಿದ್ದರು. ನಾವು ಮೂವರು ಮಾತ್ರ ಹುಡುಗರಿದ್ದೆವು. ನಮ್ಮ ಮನೆಯ ಹಿಂದೆ ಸ್ವಲ್ಪ ದೂರದಲ್ಲಿ ಐದಾರು ಅಡಿ ಎತ್ತರದ ಚಿಕ್ಕ ಗುಡಿ ಇತ್ತು. ಅದಕ್ಕೆ ಹಿರೋಡ್ಯಾನ ಗುಡಿ ಎನ್ನುತ್ತಿದ್ದರು. ನನ್ನ ಕೂಡ ಆಡಲು ಹುಡುಗರಿಲ್ಲದಾಗ ಆ ಹುಡುಗಿಯರ ಜೊತೆ ಆಡುತ್ತಿದ್ದೆ. ಹಿರೋಡ್ಯಾನ ಗುಡಿ ಸುತ್ತಲಿನ ಜಾಗದಲ್ಲಿ ಆಟ ಆಡುತ್ತಿದ್ದೆವು. ಆಗ ನೋಡಿದವರು “ಹೆಂಗಸರ ಕೂಡ ಹಿರೋಡ್ಯಾ” ಎಂದು ಗೇಲಿ ಮಾಡುತ್ತಿದ್ದರು.
(ಹಿರೋಡ್ಯಾ ಎಂದರೆ ಕೃಷ್ಣ ಎಂಬುದು ನನಗೆ ಸಮಾರು ನಲವತ್ತು ವರ್ಷಗಳ ಹಿಂದೆ ಗೊತ್ತಾಯಿತು.)

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಂದು ತಿಂಗಳು ಸಾಂಸ್ಕೃತಿಕ ಪ್ರವಾಸಕ್ಕಾಗಿ ಒರಿಸ್ಸಾಗೆ ಹೋಗಿದ್ದೆ. ಒರಿಸ್ಸಾದಲ್ಲಿ ಜಗನ್ನಾಥನಾದ ಕೃಷ್ಣನಿಗೆ ‘ಬೋಡೇ ಸರ್ಕಾರ’ ಅಂದರೆ ‘ಹಿರಿಯ ಒಡೆಯ’ ಎಂದು ಕರೆಯುತ್ತಾರೆ. ಹಿರಿಯ ಒಡೆಯ ಎಂಬದು ಹಿರೋಡ್ಯಾ ಆಗಿದೆ. ಜಗನ್ನಾಥ ಇಡೀ ಒರಿಸ್ಸಾದಲ್ಲಿ ಬೋಡೇ ಸರ್ಕಾರ. (ಹಿರಿಯ ಒಡೆಯ) ಆದರೆ ಪುರಿಯ ಜಗನ್ನಾಥ ಮಂದಿರದ ಪೌಳಿಯ ಒಳಗೆ ಮಾತ್ರ ಆತ ಬೋಡೇ ಸರ್ಕಾರ ಅಲ್ಲ; ಅವರ ಅಣ್ಣ ಬಲಭದ್ರನೇ ಬೋಡೇ ಸರ್ಕಾರ. ಏಕೆಂದರೆ ಆತ ಮನೆಯೊಳಗೆ ಹಿರಿಯ ಒಡೆಯ. ಜಗನ್ನಾಥ ಜಗತ್ತಿಗೆ ಒಡೆಯನಾದರೂ ಮನೆಯಲ್ಲಿ ಚಿಕ್ಕವ! ಮಂದಿರದ ಜಗಲಿಯ ಮೇಲೆ ಆದಿವಾಸಿ ಶೈಲಿಯ ಆರಡಿ ಎತ್ತರದ ಕಾಷ್ಠಶಿಲ್ಪದ ಮೂರ್ತಿಗಳಿವೆ. ಅವು ಅನುಕ್ರಮವಾಗಿ ಬಲಭದ್ರ, ಸುಭದ್ರ ಮತ್ತು ಜಗನ್ನಾಥ ಮೂರ್ತಿಗಳು. ಜಗನ್ನಾಥನ ಮನೆಯಲ್ಲಿ ಆತನ ಸ್ಥಾನ ಮೂರಕ್ಕೆ ಇಳಿದಿದೆ! ಮೊದಲು ಅಣ್ಣ, ಆಮೇಲೆ ತಂಗಿ, ನಂತರ ಜಗನ್ನಾಥ. ಇದು ಭಾರತೀಯ ಕುಟುಂಬ ಸಂಸ್ಕೃತಿಯ ದ್ಯೋತಕ. ತಮ್ಮ ಎಷ್ಟೇ ದೊಡ್ಡವನಾದರೂ ಮನೆಯಲ್ಲಿ ಅಣ್ಣನಿಗಿಂತ ಸಣ್ಣವನೇ. ತಂಗಿಗೆ ಪ್ರೀತಿಯಿಂದ ದೊಡ್ಡ ಸ್ಥಾನ! ಇದೆಲ್ಲ ಇಂದಿಗೂ ನಮ್ಮ ಕುಟುಂಬಗಳಲ್ಲಿ ಪ್ರಚಲಿತವಿದೆ. ನಮ್ಮ ಕುಟುಂಬಗಳು ಐರೋಪ್ಯ ಕುಟುಂಬಗಳಿಗಿಂತ ಗಟ್ಟಿಯಾಗಿರುವುದು ಇಂಥ ಕುಟುಂಬ ಸಂಸ್ಕೃತಿಯ ಕಾರಣದಿಂದ. ಒರಿಸ್ಸಾ ಜನ ಇದನ್ನು ಪಾಲಿಸಿದರೂ ಅವರದು ಎಲ್ಲೆಡೆ ಒಂದೇ ಪ್ರಾರ್ಥನೆ: “ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ.” ‘ಜಗನ್ನಾಥ ಸ್ವಾಮಿಯೆ ನನ್ನ ದೃಷ್ಟಿಪಥಲ್ಲಿದ್ದು ದಾರಿ ತೋರಿಸು’ ಎಂಬುದು ಇದರ ಅರ್ಥ.

(ಪುರಿ ಜಗನ್ನಾಥ ಮಂದಿರದ ಬಲಭದ್ರ, ಸುಭದ್ರ ಜಗನ್ನಾಥ – ಸಾಂದರ್ಭಿಕ ಚಿತ್ರ)

ಒಬ್ಬ ವ್ಯಕ್ತಿ ವಯಸ್ಸಿನಿಂದ ಸಣ್ಣವನಾದರೂ ಅವನ ಪ್ರತಿಭೆಗೆ ಕೊಡುವ ಗೌರವ ಸಣ್ಣದಾಗಿರುವುದಿಲ್ಲ. ಪುರಿಯ ಜಗನ್ನಾಥ ಮಂದಿರದಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ. ಆದರೆ ಸೂಫಿ ಕವಿ ಸಾಲ್ ಬೇಗ್ ಬರೆದಂಥ ಹಾಡುಗಳ ಮೂಲಕವೇ ಜಗನ್ನಾಥ ಏಳುತ್ತಾನೆ, ಸಕಲ ಲೀಲೆಗಳನ್ನು ತೋರಿಸುತ್ತಾನೆ ಮತ್ತು ಮಲಗುತ್ತಾನೆ. ಜಗನ್ನಾಥ ಮಂದಿರದ ಗರ್ಭಗುಡಿಯಲ್ಲಿ ಸಾಲ್ ಬೇಗ್ ಹಾಡುಗಳು ರಾರಾಜಿಸುತ್ತಿವೆ. ಅಲ್ಲಿ ದಲಿತರಿಗೂ ಪ್ರವೇಶವಿಲ್ಲ. ದಲಿತ ಹರಿದಾಸ್ ತನ್ನ ಮಾವಿನ ಮರದಿಂದ ಪಡೆದ ಮೊದಲ ಹಣ್ಣನ್ನು ತಂದು ಮಂದಿರದ ಪೌಳಿಯ ಮುಖ್ಯದ್ವಾರದಲ್ಲಿ ಇಟ್ಟು ಹೋದ. ಮರುದಿನ ಮುಂಜಾವಿನ ಪೂಜೆಗೆ ಬಂದ ಪಂಡಾಗಳು, ‘ಆ ಹಣ್ಣಿನ ಗುಟ್ಲಿ ಮತ್ತು ಸಿಪ್ಪಿ ಜಗನ್ನಾಥ ಮೂರ್ತಿಯ ಮುಂದೆ ಬಿದ್ದಿದ್ದವು. ಆ ಮೂರ್ತಿಯ ಮುಖಕ್ಕೆ ಮಾವಿನ ಹಣ್ಣಿನ ರಸ ಹತ್ತಿತ್ತು’ ಎಂದು ಹೇಳಿದರು. ಇಂಥ ಅನೇಕ ದಲಿತ ಮತ್ತು ಮುಸ್ಲಿಂ ಪರವಾದ ಜಗನ್ನಾಥನ ಮಿಥ್‌ಗಳು ಒರಿಸಾದಲ್ಲಿ ಪ್ರಚಲಿತ ಇವೆ.)

ಹಿರೋಡ್ಯಾ ಅಂದಕೂಡಲೆ ನೆನಪಾಯಿತು. ನಾನು ಎಂಜಿನ್ ಆಗಿ ಎಲ್ಲರ ಮುಂದೆ ಇರುತ್ತಿದ್ದೆ. ಐದಾರು ಹುಡುಗಿಯರು ಹಿಂದೆ ಬೋಗಿಯ ಹಾಗೆ ಇರುತ್ತಿದ್ದರು. ನನ್ನ ಹಿಂದಿರುವ ಮೊದಲ ಹುಡುಗಿ ನನ್ನ ಅಂಗಿಯ ಚುಂಗನ್ನು ಹಿಡಿಯುತ್ತಿದ್ದಳು. ಅವಳ ಹಿಂದಿನ ಹುಡುಗಿ ಆಕೆಯ ಹೆಳಲು ಹಿಡಿಯುತ್ತಿದ್ದಳು. ಹೀಗೇ ಬೋಗಿಗಳು ತಯಾರಾಗುತ್ತಿದ್ದವು. ನಂತರ ನಮ್ಮ ರೈಲು ಹಿರೋಡ್ಯಾನ ಗುಡಿ ಸುತ್ತುತ್ತಿತ್ತು.

ಈ ಆಟ ಆಡಲು ಒಂದು ಕಾರಣವಿದೆ. ನಮ್ಮ ಹಳ್ಳಿಗೆ ಸಮೀಪದಲ್ಲೇ ವಿಜಾಪುರ ಕಡೆಯಿಂದ ಸೋಲಾಪುರದ ಕಡೆಗೆ ರೈಲುಗಳು ಹೋಗುತ್ತಿದ್ದವು. ಅವುಗಳನ್ನು ದೂರದಿಂದಲೇ ನೋಡುತ್ತಿದ್ದೆವು. ಅವುಗಳ ರಭಸದ ವೇಗ ಮತ್ತು ಎಂಜಿನ್ ಗಾಲಿಗಳು ತಿರುಗುವ ರೀತಿ ಆಶ್ಚರ್ಯಕರ ಎನಿಸುತ್ತಿತ್ತು.

(ಹಿರೋಡ್ಯಾ ಗುಡಿ)

(ಉಗಿಬಂಡಿ -ಸಾಂದರ್ಭಿಕ ಚಿತ್ರ)

ದನ ಕಾಯುವ ಬಯಲಿನ ಮಧ್ಯೆಯೆ ರೈಲುಹಳಿ ಹಾಯ್ದು ಹೋಗಿತ್ತು. ದನಗಾಯಿ ದೊಡ್ಡ ಹುಡುಗರು ರೈಲನ್ನು ನಿಲ್ಲಿಸಿ ನೋಡುವ ಯೋಜನೆ ರೂಪಿಸಿದರು. ರೈಲುಹಳಿಗಳ ಮಧ್ಯದ ಬಿರುಕಿನಲ್ಲಿ ದೊಡ್ಡ ಕಬ್ಬಿಣದ ಸಳಿಗಳನ್ನು ಬಡಿದರು. ಆ ರೈಲು ನಿಲ್ಲುವುದನ್ನು ನೋಡುವ ತೀವ್ರತೆ ನನಗೂ ಇತ್ತು. ನಾನು ಬಹಳ ದೂರದಲ್ಲಿ ನಿಂತು ಅವರು ಸಳಿ ಬಡಿಯುವುದನ್ನು ನೋಡುತ್ತಿದ್ದೆ. ರೈಲಿನ ಚಾಲಕ ಬಹಳ ದೂರದಿಂದಲೇ ಗಮನಿಸಿದ್ದ. ರೈಲು ಈ ಕುಕೃತ್ಯದ ಸಮೀಪದಲ್ಲೇ ಬಂದು ನಿಂತಿತು. ರೈಲಿನ ಸಿಬ್ಬಂದಿ ಜೊತೆ ಚಾಲಕ ಓಡುತ್ತ ಹಿಡಿಯಲು ಬಂದ. ನಾನು ಬಹಳ ದೂರ ಇದ್ದುದರಿಂದ ತಪ್ಪಿಸಿಕೊಂಡೆ. ಕೆಲವರು ಸಿಕ್ಕು ಬಹಳ ಬಡಿಸಿಕೊಂಡ ನೆನಪು.

ಆಗಿನ ರೈಲುಗಳು ಡೀಸಲ್ ಮತ್ತು ವಿದ್ಯುತ್ ಚಾಲಿತ ಆಗಿರಲಿಲ್ಲ. ಕಲ್ಲಿದ್ದಲ ಬೆಂಕಿಯಿಂದ ನೀರಿನ ಉಗಿ ಹಾಯಿಸುವ ಮೂಲಕ ರೈಲು ಓಡುತ್ತಿದ್ದವು. ಎಂಜಿನ್ ಅಗ್ನಿಕುಂಡವನ್ನು ಒಳಗೊಂಡಿರುತ್ತಿತ್ತು. ಅದರೊಳಗೆ ನಿರಂತರವಾಗಿ ಸಲಿಕೆಯಂಥ ವಸ್ತುವಿನಿಂದ ಕಲ್ಲಿದ್ದಲ್ಲು ಹಾಕುತ್ತಿದ್ದರು. ಹಾಗೆ ಹಾಕುವಾಗ ಕೆಲವೊಂದು ಕಲ್ಲಿದ್ದಲು ತುಂಡುಗಳು ಹೊರಗೆ ಬೀಳುತ್ತಿದ್ದವು. ನಾನು ಅಜ್ಜಿಯ ಜೊತೆ ಕಲ್ಲಿದ್ದಲು ಆರಿಸಲು ಹಳಿಗುಂಟ ಬಹಳ ದೂರದವರೆಗೆ ಹೋಗುತ್ತಿದ್ದೆ. ಒಂದು ಸಿಮೆಂಟ್ ಚೀಲ ತುಂಬುವಷ್ಟು ಕಲ್ಲಿದ್ದಲು ಆರಿಸಿಕೊಂಡು ಬರುತ್ತಿದ್ದೆವು.

ನಾವು ಹುಡುಗರು ಕಾರು ನೋಡುವುದಕ್ಕಿಂತಲೂ ಮೊದಲು ಹೀಗೆ ರೈಲು ನೋಡಿದ್ದೆವು. ಒಂದು ಸಲ ನಮ್ಮ ಹಳ್ಳಿಗೆ ಕಾರು ಬಂದಿತು. ಆಗ ನಾನು ಬಹಳೇ ಚಿಕ್ಕವನಿದ್ದೆ. ನನ್ನ ಹಾಗೆ ಕಾರು ನೋಡದ ಸ್ವಲ್ಪ ದೊಡ್ಡ ಹುಡುಗರು ಆ ಕಾರನ್ನು ಸಮೀಪದಿಂದ ನೋಡುವ ಉದ್ದೇಶದಿಂದ ಮಣ್ಣಿನ ದಾರಿಗೆ ಕಲ್ಲು ಅಡ್ಡಹಾಕಿ ಕಾರು ವಾಪಸ್ ಬರುವುದನ್ನು ಕಾಯುತ್ತ ಪಕ್ಕದ ಗಿಡ ಹತ್ತಿ ಕುಳಿತರು. ನಾನು ಅಂಜಿ ಸ್ವಲ್ಪ ದೂರದಲ್ಲಿ ನಿಂತಿದ್ದೆ. ಕಾರು ಬಂತು. ಮುಂದೆ ಹೋಗಲಿಕ್ಕಾಗದೆ ನಿಂತಿತು. ಚಾಲಕ ಇಳಿದು ಕಲ್ಲು ಸರಿಸುವವರೆಗೆ ಕಾರು ನೋಡುವ ಮತ್ತು ಚಾಲಕ ಕಾರು ಓಡಿಸುವುದನ್ನು ನೋಡುವ ಅವಕಾಶ ಸಿಕ್ಕಿತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)