ಮುಟ್ಟಾಟ
೧.
ಸ್ತ್ರೀತ್ವ
ಭೂಮಿ ಮೇಲಿನ ಎರಡನೇ ಗುರುತ್ವ
೨.
ಎಳೆವೆಯ ಮುದ್ದು ಚಿಗರೆ ಕಂಗಳ ಹುಡುಗಿ
ಚೆಂಗನೆ ಹಾರಿ ಗಾಳಿಯ ಬೆನ್ನೇರಿ ಓಡಿ ಕಣ್ಣುಬಿಡುಷ್ಟರಲ್ಲಿ
ಕೈಗೆಸಿಕ್ಕವರ ಮುಟ್ಟಿ ‘ಔಟ್’ ಎಂದು ಕೂಗುವಳು
ಸಂತಸ ಅವಳ ಎದೆಯಲ್ಲಿ ಬುಗ್ಗೆಯಾಗುವುದು
ಮುಟ್ಟಿಸಿಕೊಂಡವರೂ ಖುಷಿಯಲಿ ಪೆಚ್ಚಾಗುವರು
ಮುಟ್ಟಾಟವೆಂದರೆ ಅಷ್ಟಿಷ್ಟ
ಮರದ ತೊಗಟೆಯ ಒರಟುತನ
ಮಣ್ಣಿನ ಬೆಚ್ಚನೆಯ ಉಸಿರು
ಸ್ನೇಹಿತರ ಭುಜದ ಬೆವರು
ಗೆಳತಿಯರ ನಗುವಿನ ಕಂಪನ
ಬೀದಿ ನಾಯಿಯ ಬೆನ್ನು
ಮನೆಯ ಬಾಗಿಲು
ದೇವರ ಕೋಣೆಯ ಗಂಟೆ
ಅಮ್ಮನ ಸೀರೆ ಸೆರಗು
ಯಾರನ್ನಾದರೂ ಮುಟ್ಟುವುದು ಎಂದರೆ
ಆತ್ಮೀಯತೆ ಹಂಚುವ ಭಾಷೆ ಎಂದವಳ
ಒಂದು ದಿನ
ಕೆಂಪು ಹಕ್ಕಿಯೊಂದು ಪ್ರಕೃತಿ ಸಹಜವೆಂಬಂತೆ
ಋತುವಾಗಿ ಮುಟ್ಟಿತು
ನಿಷೇಧದ ಗೋಡೆಗಳು ಧಿಡೀರನೆ ನಿಂತಿದ್ದವು
ಬೆರಳ ತುದಿಯ ಲೋಕ ಗಾವುದ ದೂರ
ಇಂದವಳು ದೀಪ ಹಚ್ಚಬಾರದು
ಅಡಿಗೆಮನೆಯ ಹೋಗಬಾರದು
ದೇವರ ಕೋಣೆಗಂತೂ ಪ್ರವೇಶ ನಿಷಿದ್ಧ
ಆದಷ್ಟೂ ಮುಟ್ಟದಿದ್ದರೆ ಚೆನ್ನ
ಹೊರಗಾದರೆ ಪ್ರತ್ಯೇಕ
ಒಳಗೇ ಉಳಿಯುವವು ಪ್ರಶ್ನೆಗಳನೇಕ
ಆಟ ಪಾಠಗಳಲಿ ಕಟ್ಟಳೆ
ಮಾತು ನಡಿಗೆಯಲಿ ನಾಜೂಕು
ಬಾರದು ಕೂಡದು ನಡೆಯದೆಂಬ ಕೋಟಲೆ
ನಿಗದಿಯಾದದ್ದು ಹೊಸ ಕ್ಯಾಲೆಂಡರ್; ಮೊಳೆ
ಪಂಚಾಂಗ ಸರಿದಂತೆ
ಅವಳು ತಾಯಿಯಾದಳು ಉದ್ಯೋಗಿಯಾದಳು
ತನ್ನ ದೇಹವ ನಿರುಕಿಸುವ ಕಣ್ಣುಗಳಿಂದ
ಬಚಾವಾಗುವುದ
ನಿರ್ವಹಿಸುವುದ ಕಲಿತಳು
ನೋವನ್ನುಸಹಿಸುವುದು
ದಣಿವನ್ನು ಮರೆಮಾಡುವುದು
ಹೊಟ್ಟೆಯೊಳಗಿನ ಚಂಡಮಾರುತಗಳನ್ನು
ಸಾಮಾನ್ಯ ಗಾಳಿಯಂತೆ ನಟಿಸುವುದು
ಕೆಂಪು ಮೊಗ್ಗು ಮಾತ್ರವಲ್ಲ,
ಅದರೊಂದಿಗೆ ಒಸರುವ ಎಲ್ಲ ಭಾವನೆಗಳನ್ನು
ಚೆನ್ನಾಗಿ ರಂಗೋಲಿ ಬಿಡಿಸಿದ ನಗುವಿನ ಕೆಳಗೆ
ಬಚ್ಚಿಡುವುದು
ಮುಟ್ಟಾಟದ ಆಟ ಮುಂದುವರಿಯುತ್ತಲೇ ಇದೆ
ಬಾಲ್ಯದಲ್ಲಿ
ಅವಳು ಇತರರನ್ನು ಮುಟ್ಟಿ ಓಡುತ್ತಿದ್ದಳು.
ಈಗ
ತನ್ನನ್ನೇ ಯಾರೂ ಮುಟ್ಟದಂತೆ ನೋಡಿಕೊಂಡು ಓಡಬೇಕು
ಬಾಲ್ಯದಲ್ಲಿ
ಸಿಕ್ಕಿಬೀಳುವುದೇ ಆಟದ ಉಲ್ಲಾಸ.
ಈಗ
ಸಿಕ್ಕಿಬೀಳದಿರುವುದೇ ಬದುಕಿನ ಕೌಶಲ್ಯ.
ಈಗವಳಿಗೆ ಅರ್ಥವಾಯಿತು –
ಅಸ್ಪೃಶ್ಯತೆ ಎಂದರೆ
ಇತರರು ತನ್ನನ್ನು ಮುಟ್ಟುವುದು ಮಾತ್ರವಲ್ಲ
ಅದರ ಬಗ್ಗೆ ಒಮ್ಮೊಮ್ಮೆ ಹರ್ಷಿಸುತ್ತ ಹೆಮ್ಮೆ ಪಡುತ್ತ ಒಮ್ಮೊಮ್ಮೆ
ಸಂಕೋಚ ಅನುಮಾನಪಡುತ್ತ
ತನ್ನ ಸಹಜತೆಯನ್ನು
ತಾನೇ ಕ್ಷಮೆ ಕೇಳುತ್ತ ಬದುಕುವುದು ಕೆಲವೊಮ್ಮೆ
೩.
ಒಮ್ಮೆ ಅವಳು ಕೈಯನ್ನು
ತನ್ನ ಹೊಟ್ಟೆಯ ಮೇಲೆ ಇಟ್ಟಳು
ಅಲ್ಲಿ
ತಿಂಗಳು ತಿಂಗಳಿಗೆ ತೆರೆಯುವ ಕೆಂಪು ನದಿಗಳಿದ್ದವು
ಅಲ್ಲಿ
ಜೀವ ರೂಪುಗೊಳ್ಳುವ ರಹಸ್ಯ ದ್ವಾರಗಳಿದ್ದವು
ಅಲ್ಲಿ
ಸಾವಿರಾರು ವರ್ಷಗಳ ಸ್ತ್ರೀಸ್ಮೃತಿಗಳು
ಮಣ್ಣಿನ ಪದರಗಳಂತೆ ಜಮೆಯಾಗಿದ್ದವು.
ಆ ಸ್ಪರ್ಶದಲ್ಲಿದ್ದದ್ದು
ಒಂದು ಹೆಣ್ಣು
ತನ್ನನ್ನೇ ಮರಳಿ ಮುಟ್ಟಿಕೊಳ್ಳುತ್ತಿರುವ
ಆದಿಮ ಕ್ಷಣ ಮಾತ್ರ
ಮತ್ತು
ಅನೇಕ ವರ್ಷಗಳಿಂದ ಅವಳನ್ನು ಬೆನ್ನಟ್ಟಿದ
ಎಲ್ಲ ಮುಟ್ಟಾಟಗಳ ಕೊನೆಯಲ್ಲಿ
ಮೊದಲ ಬಾರಿಗೆ
ಅವಳು ಒಂದು ಕಾಲದ ಅಸ್ಪೃಶ್ಯತೆಯನ್ನೇ ಮೆಟ್ಟಿದಳು
*****
ಊಹ್ಞೂ, ಈ ಥರದ ಕವಿತೆಗಳು ಬೇಡ
ಊಹ್ಞೂ,
ಈ ಥರದ ಕವಿತೆ ಬೇಡ
ಕಣ್ಣೀರಿಗೆ ಮಳೆಯ ರೂಪಕ ಕೊಟ್ಟು
ನೋವಿಗೆ ಚಂದ್ರನ ಬೆಳಕು ಹಚ್ಚಿ
ಒಡೆದ ಹೃದಯದ ತುಂಡುಗಳನ್ನು
ನಕ್ಷತ್ರಗಳೆಂದು ಕರೆಯುವ
ಈ ಹಳೆಯ ವಂಚನೆ ಬೇಡ
ನನಗೆ ಬೇಕಾದುದು
ರಾತ್ರಿಯ ಕಪ್ಪು ಬಣ್ಣವಲ್ಲ
ಆ ನಿಗೂಢತೆಯೊಳಗೆ
ಸಾವಿರ ವರ್ಷಗಳಿಂದ
ಉಸಿರುಗಟ್ಟಿಕೊಂಡಿರುವ
ಮೌನದ ಪಿಸುನುಡಿ
ಹೂಗಳ ಬಗ್ಗೆ ಹೇಳಬೇಡ
ಅವು ಅರಳುವುದರ ಕಥೆ
ಎಲ್ಲರಿಗೂ ಗೊತ್ತು
ಬೇರುಗಳ ಬಗ್ಗೆ ಹೇಳು –
ಭೂಮಿಯ ಕತ್ತಲೆಯೊಳಗೆ
ಬೆಳಕಿನ ಅರ್ಥವೇ ತಿಳಿಯದೆ
ಆದರೂ ಮರವನ್ನು ನಿಲ್ಲಿಸಿರುವ
ಅವುಗಳ ಅನಾಮಿಕ ತ್ಯಾಗದ ಬಗ್ಗೆ
ಊಹ್ಞೂ,
ಈ ಥರದ ಕವಿತೆಯಂತೂ ಬೇಡವೇ ಬೇಡ
ಪ್ರೀತಿಯನ್ನು ಸಮುದ್ರಕ್ಕೆ ಹೋಲಿಸಿ
ವಿರಹವನ್ನು ಮರಳಿಗೆ ಹೋಲಿಸಿ
ಜೀವನವನ್ನು ಪಯಣವೆಂದು ಹೇಳುವ
ಸುರಕ್ಷಿತ ಪದಗಳ ಬೇಲಿ ಬೇಡ
ಒಮ್ಮೆ
ಮನಸಿನ ಗೋಡೆಗಳನ್ನು ಒಡೆದು ನೋಡು
ಮನುಷ್ಯನ ನಗುವಿನ ಹಿಂದೆ
ಹೂತುಹಾಕಿರುವ ಯುದ್ಧಗಳನ್ನು
ಅವನ ಮೌನದೊಳಗೆ
ಅಲೆಮಾರಿಯಾದ ಪ್ರಶ್ನೆಗಳನ್ನು
ದೇವರ ಮುಂದೆ ಮಣಿದ ಕೈಗಳಲ್ಲೇ
ಅಡಗಿರುವ ಅವನ ಅನುಮಾನಗಳನ್ನು
ಬರೆ
ಪ್ರತಿಯೊಬ್ಬ ಮನುಷ್ಯನೂ
ಒಂದು ಅಪೂರ್ಣ ಬ್ರಹ್ಮಾಂಡ
ಅವನ ಎದೆಯೊಳಗೆ
ನಕ್ಷತ್ರಗಳು ಹುಟ್ಟುತ್ತವೆ
ಕಪ್ಪು ರಂಧ್ರಗಳು ಬೆಳೆಯುತ್ತವೆ
ಮತ್ತು
ಯಾರಿಗೂ ಕಾಣದ ಪ್ರಳಯಗಳು
ಪ್ರತಿದಿನ ಸಂಭವಿಸುತ್ತವೆ
ಊಹ್ಞೂ,
ಈ ಥರದ ಕವಿತೆಗಳ ಸಹವಾಸವೇ ಬೇಡ.
ಪದಗಳು ಛಂದೋಬದ್ಧವಾಗಿ ಮೂಡಿ
ಪ್ರಾಸಗಳು ಅನಾಯಾಸ ಒಲಿದು ಬಂದು
ಉಪಮೆಗಳು ಲಯದಲಿ ಮಿಂದು
ಭಾಷೆ ಭಾವೋದ್ರೇಕದಲಿ
ಸುಳ್ಳು ಸುಳ್ಳೇ ವಿಜೃಂಭಿಸುವ
ಹಠ ಬೇಡ
ಕೆಲವು ಸತ್ಯಗಳು
ರಕ್ತದ ವಾಸನೆ ಬೀರುತ್ತವೆ
ಕೆಲವು ನೆನಪುಗಳು
ಬೆಂಕಿಯಂತೆ ಮುಟ್ಟುತ್ತವೆ
ಕೆಲವು ಪ್ರಶ್ನೆಗಳು
ದೇವರನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತವೆ
ಅವುಗಳನ್ನು ಹಾಗೆಯೇ ಬಿಡು
ಕವಿತೆ ಎಂದರೆ
ಗಾಯದ ಮೇಲೆ ಹೂ ಇಡುವ ಕಲೆ ಅಲ್ಲ
ಗಾಯವನ್ನು ತೆರೆದು
ಅದರೊಳಗೆ
ಇನ್ನೂ ಬಡಿತವಿರುವ ಹೃದಯವನ್ನು
ತೋರಿಸುವ ಧೈರ್ಯ
ನೀನು ಬರೆಯುವುದಾದರೆ
ಆಕಾಶದ ಬಗ್ಗೆ ಅಲ್ಲ
ಆಕಾಶವನ್ನು ಹುಡುಕುತ್ತಾ
ತನ್ನೊಳಗೇ ಕಳೆದುಹೋದ ಮನುಷ್ಯನ ಬಗ್ಗೆ ಬರೆ
ಪ್ರೀತಿಯ ಬಗ್ಗೆ ಅಲ್ಲ
ಪ್ರೀತಿಸಿದ ನಂತರ
ತಾನೇ ಯಾರು ಎಂಬುದನ್ನು ಮರೆತ ಆತ್ಮದ ಬಗ್ಗೆ ಬರೆ
ಜೀವನದ ಬಗ್ಗೆ ಅಲ್ಲ
ಸಾವಿನ ನೆರಳನ್ನು ಹೊತ್ತುಕೊಂಡೇ
ಪ್ರತಿದಿನ ಬದುಕಲು ಕಲಿಯುವ
ಮಾನವ ಮಹಾಕಾವ್ಯದ ಬಗ್ಗೆ ಬರೆ
ಆಗ ಬಹುಶಃ
ಹ್ಞೂ, ಈ ಥರದ ಕವಿತೆ ಬೇಕು ಎನ್ನಬಹುದು

ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಇವರ ಊರು. ಓದಿದ್ದು ಎಮ್. ಫಾರ್ಮಸಿ. ಸದ್ಯ ಬೆಂಗಳೂರಿನ ಖಾಸಗಿ ಔಷಧಿ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ. ಪ್ರಕಟಿತ ಕೃತಿಗಳು: ಕರಿನೆಲ (ಕವನ ಸಂಕಲನ), ವ್ಯೋಮ ತಂಬೂರಿ ನಾದ (ಕವನ ಸಂಕಲನ) ಮತ್ತು ಪಾದಗಟ್ಟಿ (ಕಥಾ ಸಂಕಲನ).

