‘ತರಂಗ’ವಾಗಲಿ, ‘ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ‘ಸುಧಾ’ ಅಥವಾ ‘ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ‘ತರಂಗ’ ಇಂಥದ್ದೇ ಯುದ್ಧದಲ್ಲಿ ಹರಿದು ಹೋದದ್ದಿದೆ!
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ಹೊಸವರ್ಷವು ಆರಂಭವಾಗುತ್ತಿದ್ದಂತೆಯೇ ಎಷ್ಟೊಂದು ಲವಲವಿಕೆ ಇರಬೇಕಿತ್ತು.  ಮತ್ತೊಂದು ವರ್ಷ ಬಂತು ಎಂಬ  ವಿಷಯದ ಹೊರತಾಗಿ ಈ ಬಾರಿ ಸಂಭ್ರಮವೇನೂ ಮುಗಿಲುಮುಟ್ಟುವಂತೆ ಕಾಣಿಸುತ್ತಿಲ್ಲ.  ಪತ್ರಿಕೆಗಳು ಯಥಾ ಪ್ರಕಾರ ಕಳೆದ ವರ್ಷದ ಏಳುಬೀಳುಗಳನ್ನು ದಾಖಲಿಸುತ್ತಿವೆ. ಈ ಕೊರೊನಾ ಎಂಬ ಸೋಂಕು ಕೂಡ ಕಳೆದ ವರ್ಷದಂತೆಯೇ, ಈ ವರ್ಷವು ಜನರ ಮನದಲ್ಲಿ ಆತಂಕದ ಬೀಜವನ್ನು ಬಿತ್ತಿದೆ. ಇಂತಹ ಸಂದರ್ಭದಲ್ಲಿ ಬರೆಯಲು ಕುಳಿತ ನನ್ನನ್ನು ಕೊರೊನಾ ಸೋಂಕಿನ ವಿಚಾರಗಳೂ ಕಾಡುತ್ತಿವೆ. ಊರಿನಲ್ಲಿದ್ದಾಗ ನನ್ನ ಆಲೋಚನೆಗಳನ್ನು ತಿದ್ದಿದ ಎರಡು ಪತ್ರಿಕೆಗಳ ವಿಚಾರವೂ ನೆನಪಾಗುತ್ತಿದೆ.

ಹೊಸ ವರ್ಷ ಬಂದರೂ ಬಿಡದ ಕರೊನಾ:

೨೦೧೯ರ ಹೆಸರನ್ನು ಇಟ್ಟುಕೊಂಡು ಜನವರಿ ೨೦೨೦ರಲ್ಲಿ ಜಗತ್ತನ್ನು ಆವರಿಸಿದ ಕೋವಿಡ್-೧೯ ಎನ್ನುವ ನಾಮಾಂಕಿತ ವೈರಸ್ 2022 ಬಂದರೂ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಬ್ರಿಟನ್ನಿನಲ್ಲಿ ಹಿಂದೆಂದೂ ಕಂಡಿರದಷ್ಟು ಪ್ರಮಾಣದಲ್ಲಿ ಜನರು ಸೋಂಕಿತರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗುವವರೂ ಹೆಚ್ಚಾಗುತ್ತಿದ್ದಾರೆ. ಆದರೆ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ, ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆ ಅದೇ ಪ್ರಮಾಣದಲ್ಲಿ ಇನ್ನೂ ಹೆಚ್ಚಾಗಿಲ್ಲ ಎನ್ನುವುದು ನೀತಿ-ನಿಯಮಗಳನ್ನು ಮಾಡುವವರಿಗೆ ಸ್ವಲ್ಪ ಸಮಾಧಾನದ ಸಂಗತಿ. ಹೀಗಾಗಿ ಇಲ್ಲಿನ್ನೂ ಲಾಕ್‌ಡೌನ್‌ಗಳಾಗಲೀ, ಸಿನೆಮಾ-ರೆಸ್ಟೋರೆಂಟ್‌ಗಳನ್ನು ಮುಚ್ಚುವುದಾಗಲೀ, ಶಾಲಾ ಕಾಲೇಜುಗಳನ್ನು ಬಂದ್‍ ಮಾಡುವುದಾಗಲೀ ನಡೆದಿಲ್ಲ.

ಬ್ರಿಟನ್ನಿನಲ್ಲಿ ಎಲ್ಲರಿಗೂ ಮೂರನೇ ಸಲ ಲಸಿಕೆ(ಬೂಸ್ಟರ್ ಡೋಸ್)ಯನ್ನು ಕೊಡುವ ಕೆಲಸ ಭರದಿಂದ ಸಾಗುತ್ತಿದೆ. ಜೊತೆಗೆ ಕೋವಿಡ್ ಸೋಂಕಿತರಿಗೆ ವಿವಿಧ ತರಹದ ಹೊಸ ಹೊಸ ಔಷಧಗಳನ್ನು ಉಪಯೋಗಿಸಲು ಅನುಮೋದನೆಯನ್ನು ಕೊಟ್ಟಿದ್ದಾರೆ. ಸರಕಾರವಾಗಲೀ ಆರೋಗ್ಯ ವ್ಯವಸ್ಥೆಯಾಗಲೀ ಮೊದಲಿನಷ್ಟು ಹೆದರಿಕೊಂಡಂತೆ ಅನಿಸುತ್ತಿಲ್ಲ. ಆದರೆ ಮುಂದೇನು ಎಂದು ಹೇಳುವರು ಯಾರು? ಈ ವರ್ಷವಾದರೂ ಎಲ್ಲ ಸರಿಹೋಗಬಹುದು, ಇದೆಲ್ಲ ಮುಗಿದುಹೋಗಬಹುದು ಎನ್ನುವ ಆಶಯದೊಂದಿಗೆ ಹೊಸ ವರ್ಷವನ್ನು ಆರಂಭಿಸಿದರೆ ಖಿನ್ನತೆಯಾದರೂ ಓಡಿಹೋದೀತು.

ಭಾರತದಲ್ಲಿಯೂ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಾಣು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಭಾರತದಲ್ಲೂ ಲಸಿಕೆಯ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಎರಡನೇ ಅಲೆಯ ಆರಂಭದಲ್ಲಿ ಭಾರತದಲ್ಲಿ ಉಂಟಾದ ಅಲ್ಲೋಲ-ಕಲ್ಲೋಲ (ಆಮ್ಲಜನಕ ಕೊರತೆ, ಸಾವುಗಳು, ಬ್ಲಾಕ್‌ ಫಂಗಸ್) ಈ ಸಲ ಆಗದಿರಲಿ ಎನ್ನುವ ಆಶಯ ಮತ್ತು ಪ್ರಾರ್ಥನೆ ಇಲ್ಲಿರುವ ಎಲ್ಲ ಭಾರತೀಯರದು.

(ನೋವಾಕ್‌ ಜೋಕೋವಿಕ್)

ಲಸಿಕಾ ವಿರೋಧಿಗಳು ಎಲ್ಲೆಡೆ ಇದ್ದಾರೆ, ಅದಕ್ಕೆ ಅವರದೇ ಆದ ತರ್ಕಗಳಿವೆ. ಲಸಿಕಾ ವಿರೋಧಿಗಳು ಅನಕ್ಷರಸ್ಥರೇ ಆಗಬೇಕಾಗಿಲ್ಲ, ಲಸಿಕಾ ವಿರೋಧಕ್ಕೆ ಭಾರತವೂ ಹೊರತಲ್ಲ, ಕ್ರಿಶ್ಚಿಯನ್ನರು, ಬೌದ್ಧರು, ಹಿಂದೂಗಳು, ಮುಸಲ್ಮಾನರು ಯಾರೂ ಹೊರತಾಗಿಲ್ಲ. ವಿಶ್ವವಿಖ್ಯಾತ ಟೆನಿಸ್ ಆಟಗಾರರಿಂದ ಹಿಡಿದು ಹೇಳಹೆಸರಿಲ್ಲದ ನನ್ನಂಥ ಶ್ರೀಸಾಮಾನ್ಯನವರೆಗೆ ಆಧುನಿಕ ಮತ್ತು ವೈಜ್ಞಾನಿಕ ತರ್ಕಗಳನ್ನು ನಂಬದವರು ಜಗತ್ತಿನ ಎಲ್ಲಕಡೆ ಇರುತ್ತಾರೆ.

ಕೊರೊನಾದಿಂದಾಗಿ ಎಲ್ಲ ದೇಶಗಳು ತತ್ತರಿಸುತ್ತಿದ್ದರೂ, ಜೋಕೋವಿಕ್ (ಪ್ರಖ್ಯಾತ ಟೆನಿಸ್ ಆಟಗಾರ) ಲಸಿಕೆ ಹಾಕಿಸಿಕೊಳ್ಳದೇ ಆಸ್ಟ್ರೇಲಿಯಾವನ್ನೇ ಎದುರು ಹಾಕಿಕೊಂಡು ಗೆದ್ದು, ಲಸಿಕಾವಿರೋಧಿಗಳಲ್ಲಿ ಪುಳಕವೆಬ್ಬಿಸಿದ್ದಾರೆ. ಬ್ರಿಟನ್ನಿನಲ್ಲಿ ಕೂಡ ಡಾ.ಸ್ಟೀವ್ ಜಾಬ್ಸ್, ಸ್ವತಃ ಆಸ್ಪತ್ರೆಗಳಲ್ಲಿ ದಶಕಗಳಿಂದ ಕೆಲಸ ಮಾಡುತ್ತಿದ್ದರೂ, ತನ್ನ ಕಣ್ಣೆದುರಿಗೇ ಕೊರೊನಾದಿಂದ ಸತ್ತವರನ್ನು ನೋಡಿದರೂ, ಇದುವರೆಗೂ ಯಾವ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಮತ್ತು ತಮ್ಮ ಲಸಿಕಾ ವಿರೋಧಿ ಧೋರಣೆಯನ್ನು ಘಂಟಾಘೋಷವಾಗಿ ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಲಸಿಕಾ ವಿರೋಧಿಗಳು ಎಲ್ಲೆಡೆ ಇದ್ದಾರೆ, ಅದಕ್ಕೆ ಅವರದೇ ಆದ ತರ್ಕಗಳಿವೆ. ಲಸಿಕಾ ವಿರೋಧಿಗಳು ಅನಕ್ಷರಸ್ಥರೇ ಆಗಬೇಕಾಗಿಲ್ಲ, ಲಸಿಕಾ ವಿರೋಧಕ್ಕೆ ಭಾರತವೂ ಹೊರತಲ್ಲ, ಕ್ರಿಶ್ಚಿಯನ್ನರು, ಬೌದ್ಧರು, ಹಿಂದೂಗಳು, ಮುಸಲ್ಮಾನರು ಯಾರೂ ಹೊರತಾಗಿಲ್ಲ. ವಿಶ್ವವಿಖ್ಯಾತ ಟೆನಿಸ್ ಆಟಗಾರರಿಂದ ಹಿಡಿದು ಹೇಳಹೆಸರಿಲ್ಲದ ನನ್ನಂಥ ಶ್ರೀಸಾಮಾನ್ಯನವರೆಗೆ ಆಧುನಿಕ ಮತ್ತು ವೈಜ್ಞಾನಿಕ ತರ್ಕಗಳನ್ನು ನಂಬದವರು ಜಗತ್ತಿನ ಎಲ್ಲಕಡೆ ಇರುತ್ತಾರೆ. ಆದ್ದರಿಂದ ಲಸಿಕಾ ವಿರೋಧಿಗಳಿಗೆ ಧರ್ಮದ ಲೇಪನವನ್ನು ಕೊಡುವುದು, ಅಶಿಕ್ಷಿತರು ಎಂದು ಜರೆಯುವುದು ಸಮಂಜಸವಲ್ಲ ಎನಿಸುತ್ತದೆ.

ತರಂಗ ಮತ್ತು ಸುಧಾ:

ನಾನು ಹುಟ್ಟುವ ಮೊದಲೂ ನಮ್ಮ ಮನೆಗೆ ‘ಸುಧಾ’ ಬರುತ್ತಿತ್ತು. ನನಗೆ ಕನ್ನಡ ಓದಲು ಬರುವ ಮೊದಲಿನಿಂದಲೂ ನಾನು ‘ಸುಧಾ’ ಓದಿದ್ದೇನೆ; ನಾನು ಅದರಲ್ಲಿರುವ ಫ್ಯಾಂಟಮ್‌ನ ಚಿತ್ರಗಳನ್ನು ನೋಡುತ್ತಿದ್ದೆ, ನನ್ನ ಅಣ್ಣ ಓದಿ ಹೇಳುತ್ತಿದ್ದ. ‘ಸುಧಾ’ ನನ್ನ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು.

ಹತ್ತು ಹನ್ನೊಂದು ವರ್ಷವಾಗುವಷ್ಟರಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಒಂದು ಅಕ್ಷರವನ್ನೂ ಬಿಡದೆ (ಜಾಹೀರಾತುಗಳನ್ನೂ ಸೇರಿಸಿ) ಓದುತ್ತಿದ್ದೆ. ಅರ್ಥವಾಗಲಿ ಬಿಡಲಿ ಅದರಲ್ಲಿರುವ ಕತೆಗಳನ್ನು ಧಾರಾವಾಹಿಗಳನ್ನೂ ಮುಗಿಸುತ್ತಿದ್ದೆ. ಟಿ ಕೆ ರಾಮರಾವ್ ಮತ್ತು ಯಂಡಮೂರಿ ವೀರೇಂದ್ರನಾಥ ನನ್ನ ಅಚ್ಚುಮೆಚ್ಚಿನ ಕತೆಗಾರರಾಗಿದ್ದರು. 1982ರಲ್ಲಿ ‘ತರಂಗ’ ಎನ್ನುವ ವಾರಪತ್ರಿಕೆಯೊಂದು ಶುರುವಾದದ್ದು ಗೊತ್ತಾಯಿತು. ನನ್ನ ಗೆಳೆಯನೊಬ್ಬನ ಮನೆಯಲ್ಲಿ ಅದನ್ನು ಮೊಟ್ಟಮೊದಲು ನೋಡಿದ ನೆನಪು. ‘ಸುಧಾ’ ವಾರಪತ್ರಿಕೆಗಿಂತ ತುಂಬ ವಿಭಿನ್ನವಾದ ರೀತಿಯಲ್ಲಿ ಕಾಣಿಸಿತು. ‘ಸುಧಾ’ ಪತ್ರಿಕೆಯ ಸಂಪಾದಕರು ಯಾರು ಎಂದು ಗೊತ್ತೇ ಇರಲಿಲ್ಲ. ಆದರೆ ‘ತರಂಗ’ದ ಮೊದಲ ಸಂಚಿಕೆಯನ್ನು ತೆರೆಯುತ್ತಿದ್ದಂತೆ ಸಂತೋಷಕುಮಾರ ಗುಲ್ವಾಡಿ ಎನ್ನುವ ಸಂಪಾದಕರ ಹೆಸರು ಮನದಲ್ಲಿ ಸ್ಥಾಪಿತವಾಯಿತು. ‘ತರಂಗ’ ಪತ್ರಿಕೆಯ ಪ್ರತೀ ಪುಟವೂ ವಿಭಿನ್ನವಾಗಿ ಕಂಡಿತ್ತು. ‘ತರಂಗ’ ಎಂದು ಬರೆದಿರುವ ರೀತಿಯಿಂದ ಹಿಡಿದು, ಕೊನೆಯ ಪುಟದವರೆಗೂ ಗುಲ್ವಾಡಿಯವರ ಶ್ರಮ ಕಾಣುತ್ತಿತ್ತು. ‘ತರಂಗ ನಮ್ಮ ಮನೆಗೂ ಬರಲು ಶುರುವಾಯಿತು. ‘ಸುಧಾ’ ಘನಗಾಂಭೀರ್ಯದ ಮಧ್ಯವಯಸ್ಕನಂತೆ ಕಂಡರೆ, ‘ತರಂಗ’ ಟೀನೇಜಿನ ಗುಣಗಳನ್ನು ಹೊಂದಿತ್ತು.

ಕತೆ ಬರೆದವರ ಹೆಸರನ್ನಲ್ಲದೇ ಅವರ ವಿಳಾಸ ಮತ್ತು ಭಾವಚಿತ್ರವನ್ನು ಪ್ರಕಟಿಸುವ ಪರಿಪಾಠವನ್ನು ಆರಂಭಿಸಿದ್ದು ‘ತರಂಗ’. ಪ್ರಿಂಟ್ ಮತ್ತು ಕಾಗದದ ಗುಣಮಟ್ಟವೂ ‘ಸುಧಾ’ಗಿಂತ ಒಂದು ಪಟ್ಟು ಮೇಲೇ ಇರುತ್ತಿತ್ತು. ಸಿನೆಮಾ ಪುಟಗಳು ರೋಚಕವಾಗಿರುತ್ತಿದ್ದವು. ಹರಿಣಿಯವರು ಬರೆವ ವ್ಯಂಗ್ಯಚಿತ್ರಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿತ್ತು. ಆಗಾಗ ವಿಶೇಷ ಸಂಚಿಕೆಗಳನ್ನು ಮಾಡುತ್ತಿದ್ದರು. ನಿಜವಾದ ಅರ್ಥದಲ್ಲಿ ‘ತರಂಗ’ವು ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಹಿಕವಾಗಿತ್ತು.

‘ತರಂಗ’ವಾಗಲಿ, ‘ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ‘ಸುಧಾ’ ಅಥವಾ ‘ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ‘ತರಂಗ’ ಇಂಥದ್ದೇ ಯುದ್ಧದಲ್ಲಿ ಹರಿದು ಹೋದದ್ದಿದೆ!

ನನ್ನ ಹೆಸರು ಮೊಟ್ಟ ಮೊದಲು ದಾಖಲಾಗಿದ್ದು ‘ತರಂಗ’ದಲ್ಲಿ. ಆಗ ‘ತರಂಗ’ದಲ್ಲಿ ಕಾರಂತಜ್ಜನಿಗೆ ಪ್ರಶ್ನೆ ಕಳಿಸಬಹುದಿತ್ತು. ನಾನು ೧೫ ಪೈಸೆಯ ಪೋಸ್ಟ್‌ಕಾರ್ಡಿನಲ್ಲಿ, ‘ಪೂಜ್ಯ ಕಾರಂತಜ್ಜನಿಗೆ, ಶಿರಸಾಷ್ಟಾಂಗ ನಮಸ್ಕಾರಗಳು…’ ಎಂದು ಆರಂಭಿಸಿ ಪ್ರಶ್ನೆಗಳನ್ನು ಕಳಿಸಿದ್ದೆ (ಯಾವ ಪ್ರಶ್ನೆಗಳು ಎನ್ನುವುದು ಮರೆತು ಹೋಗಿದೆ). ಅವುಗಳಲ್ಲಿ ಒಂದು ಪ್ರಶ್ನೆಯನ್ನು ಎತ್ತಿಕೊಂಡು, ಕಾರಂತರು ಉತ್ತರಿಸಿದ್ದರು. ‘ತರಂಗ’ದಲ್ಲಿ ನನ್ನ ಹೆಸರನ್ನು ನೋಡಿ, ನನ್ನ ಪ್ರಶ್ನೆಗೆ ಕಾರಂತರು ಉತ್ತರಿಸಿದ್ದನ್ನು ನೋಡಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಶಾಲೆಗೆ ‘ತರಂಗ’ ವನ್ನು ತೆಗೆದುಕೊಂಡು ಹೋಗಿ ಗೆಳೆಯರಿಗೆ ಮತ್ತು ಗುರುಗಳಿಗೆ ತೋರಿಸಿದ್ದೆ.

ನಾನೂ ಬರೆಯಬಹುದು ಎನ್ನುವಂತೆ ಮಾಡಿದ್ದೆ ‘ತರಂಗ’. ‘ಸುಧಾ’ ಪತ್ರಿಕೆಯಲ್ಲಿ ಮಕ್ಕಳು ಏನನ್ನಾದರು ಬರೆದರೆ ಅದನ್ನು ಪ್ರಕಟಿಸುತ್ತಾರೋ, ಇಲ್ಲವೋ ಗೊತ್ತಿರಲಿಲ್ಲ. ಜೊತೆಗೆ ಎಲ್ಲಿ ಕಳಿಸಬೇಕು, ಹೇಗೆ ಕಳಿಸಬೇಕು ಎನ್ನುವ ಸೂಚನೆಗಳೂ ಇರಲಿಲ್ಲ. ಆದರೆ ‘ತರಂಗ’ ದಲ್ಲಿ ಮಕ್ಕಳು ಕೂಡ ಬರೆಯಲು ಅನುಕೂಲವಾಗುವಂತೆ ‘ಮಕ್ಕಳ ವಿಭಾಗ’ದಲ್ಲಿ ಎಲ್ಲಿ ಬರೆದು ಕಳಿಸಬೇಕು ಎನ್ನುವ ಸೂಚನೆ ಇರುತ್ತಿತ್ತು.

ಆಗ ನಾನು ‘ಕವನ’ಗಳನ್ನೂ ಬರೆಯುವ ಪ್ರಯತ್ನ ಮಾಡುತ್ತಿದ್ದೆ. ‘ಸುಧಾ’ ಮತ್ತು ‘ತರಂಗ’ದ ‘ಬಾಲಪುಟ’ಗಳಲ್ಲಿ ಬರುವ ಕವನಗಳನ್ನು ಅನುಕರಿಸಿ ಈಗಾಗಲೇ ಸಾಕಷ್ಟು ‘ಕವನ’ಗಳನ್ನು ಬರೆದಿದ್ದೆ. ಅವುಗಳಲ್ಲಿ ನನಗೆ ಇಷ್ಟವಾದ ಕವನವೊಂದನ್ನು ‘ತರಂಗ’ಕ್ಕೆ ‘ಇನ್‌ಲ್ಯಾಂಡ್ ಲೆಟರ್’ನಲ್ಲಿ ಬರೆದು ಕಳಿಸಿದೆ. ಅದಾದ ಮೇಲೆ, ಪ್ರತಿವಾರ ತರಂಗವನ್ನು ತೆಗೆದಾಗಲೂ ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳುತ್ತಿತ್ತು. ಎರಡು ತಿಂಗಳಾಗುವಷ್ಟರಲ್ಲಿ ನನ್ನ ಕವನದ ಪ್ರಕಟಣೆಯ ಆಸೆಯನ್ನು ಬಿಟ್ಟುಬಿಟ್ಟಿದ್ದೆ. ಆದರೆ ಅದಾಗಿ ಕೆಲವು ವಾರಗಳ ನಂತರ ನನ್ನ ಕವನ ಪ್ರಕಟವಾಗಿತ್ತು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಪರೀಕ್ಷೆಯ ಅಂಕಗಳಿಗಿಂತ, ಶಾಲೆಯ ರ‍್ಯಾಂಕಿಗಿಂತಲೂ, ಕ್ರಿಕೆಟ್ ಮ್ಯಾಚು ಗೆದ್ದುದಕ್ಕಿಂತಲೂ ಹೆಚ್ಚಿನ ಪ್ರಶಸ್ತಿ ಬಂದ ಅನುಭವ ಆಗಿತ್ತು.

ಇದಾದ ಮೇಲೆ 90ರ ದಶಕದಲ್ಲಿ ನಾನು ಬರೆದ ಎರಡು ಕತೆಗಳು ‘ತರಂಗ’ದಲ್ಲಿ ಪ್ರಕಟವಾದವು. ಒಂದು ಕತೆಯಂತೂ ‘ತಿಂಗಳ ಬಹುಮಾನಿತ ಕತೆ’ಯಾಯಿತು. ಆಗಿನ ಕಾಲಕ್ಕೆ ನನಗೆ ಬಂದ ದುಡ್ಡು ೫೦೦ ರೂಪಾಯಿ! ಆಗ ನನ್ನ ತಿಂಗಳ ಹಾಸ್ಟೇಲು-ಊಟ-ಪುಸ್ತಕ-ಸಿನೆಮಾ ಎಲ್ಲ ಸೇರಿ 200 ರೂಪಾಯಿ ಖರ್ಚಾಗುತ್ತಿತ್ತು. ಅಂದರೆ ಒಂದು ಕತೆಗೆ ಎರಡುವರೆ ತಿಂಗಳು ಬದುಕುವಷ್ಟು ದುಡ್ಡು!

2002ರಲ್ಲಿ ಭಾರತವನ್ನು ಬಿಡುವವರೆಗೂ ‘ತರಂಗ’ವನ್ನು ಮತ್ತು ‘ಸುಧಾ’ ಪತ್ರಿಕೆಯನ್ನು ಒಂದು ವಾರವೂ ಬಿಡದೆ ಓದಿದ್ದೇನೆ. ಯಾವುದೇ ಕತೆ, ಧಾರಾವಾಹಿ ಆಗಿರಲಿ, ಬಿಟ್ಟಿಲ್ಲ. ಅದಾದ ಮೇಲೆ ‘ತರಂಗ’ ಮತ್ತು ‘ಸುಧಾ’ಗಳ ಸಂಪರ್ಕ ಬಿಟ್ಟು ಹೋಗಿತ್ತು.

ಈಗ ಕೆಲವು ವರ್ಷಗಳಿಂದ ‘ತರಂಗ’ ಮತ್ತು ‘ಸುಧಾ’ ಎರಡೂ ಆನ್‌ಲೈನ್‌ನಲ್ಲಿ ಸಿಗುತ್ತಿವೆ. ಈಗಲೂ ಪ್ರತಿವಾರ ‘ಸುಧಾ’ ಮತ್ತು ‘ತರಂಗ’ಗಳ ಮೇಲೆ ಕಣ್ಣಾಡಿಸುತ್ತೇನೆ. ಯಾವುದಾದರೂ ಆಸಕ್ತಿದಾಯಕ ಅನಿಸಿದರೆ ಓದುತ್ತೇನೆ. ಈಗ ಆ ಎರಡೂ ಪತ್ರಿಕೆಗಳಲ್ಲಿ ಮೊದಲಿನ ಲವಲವಿಕೆ ಇಲ್ಲ ಅನ್ನಿಸುತ್ತದೆ. ಅದಕ್ಕೆ ನನ್ನ ವಯಸ್ಸು ಕಾರಣವಾಗಿರಬಹುದು, ಅಥವಾ ದೇಶದಿಂದ ದೂರ ಬಂದ ಕಾರಣವಿರಬಹುದು, ಈ ಪತ್ರಿಕೆಗಳ ಬದಲಾದ ಧೋರಣೆಗಳಿರಬಹುದು.

ಅದೇನೇ ಇರಲಿ, ‘ತರಂಗ’ ಮತ್ತು ‘ಸುಧಾ’ ನನ್ನ ಪೀಳಿಗೆಯನ್ನು ‘ಕನ್ನಡ’ದಲ್ಲಿ ಆಡಿಸಿ ಬೆಳೆಸಿದ ವಾರಪತ್ರಿಕೆಗಳು ಎನ್ನುವುದರಲ್ಲಿ ಯಾವುದೇ ತಕರಾರಿಲ್ಲ. ಈಗ ‘ತರಂಗ’ಕ್ಕೆ 40ರ ಸಂಭ್ರಮ. ಅದಕ್ಕೆ ಇದೆಲ್ಲ ನೆನಪಾಯಿತು. ‘ತರಂಗ’ ಮತ್ತು ‘ಸುಧಾ’ಗಳು ಇನ್ನೂ ನೂರ್ಕಾಲ, ಸಾವಿರಾರು ವರ್ಷ ಕನ್ನಡಿಗರ ಮನೆಮನಗಳಲ್ಲಿ ಕನ್ನಡವನ್ನು ಬೆಳಗುತ್ತಲಿರಲಿ.