ಪುಣ್ಯ ಕೊನೆಯ ಬಾರಿ ಮಾತನಾಡಿದ್ದು ಇದೆ ಒಂದು ವಾರದ ಕೆಳಗೆ. ಅವನ ಶಾಲಾ ವಾರ್ಷಿಕೋತ್ಸವದಲ್ಲಿ… ಈ ರಗಳೆಗಳೆಲ್ಲ ಶುರುವಾದದ್ದು ಸುರಭಿಯಿಂದಲೇ ಎನ್ನಬೇಕು. ಆರನೇ ತರಗತಿ ಓದುತ್ತಿದ್ದ ಸುರಭಿ, ಒಂದು ದಿನ ಶಾಲೆಯಿಂದ ಬಂದದ್ದೆ ಜೋರಾಗಿ ಅಳತೊಡಗಿದಳು. ‘ಅಣ್ಣ ಹುಡುಗಿ ತರ ಆಡ್ತಾನೆ ಅಂತ ಎಲ್ಲರು ನಂಗೆ ಹೆಣ್ಣಿಗನ ತಂಗಿ ಅಂತ ಆಡ್ಕತಾರೆ…ಕಾಡಿಸ್ತಾರೆ. ನಾಳೆಯಿಂದ ಶಾಲೆಗೇ ಹೋಗಲ್ಲ!’ ಎಂದು ರಂಪ ಮಾಡತೊಡಗಿದ್ದಳು. ಅಂದಿನಿಂದಲೇ ಪ್ರತಾಪ್ ಇವನನ್ನ ಸರಿ ಮಾಡಲು ಶುರುಮಾಡಿದ್ದು… ಪುಣ್ಯನ ದನಿ ಹುಡುಗಿಯ ದನಿಯನ್ನು ಹೋಲುತ್ತಿತ್ತು. ಅವನ ನಡಿಗೆಯಲ್ಲಿ ಹುಡುಗಿಯರ ಲಾಲಿತ್ಯ ಗೋಚರಿಸಿಬಿಡುತ್ತಿತ್ತು. ಮೂರು ವರ್ಷದವನಿದ್ದಾಗಿನಿಂದಲೇ ಇವನು ಹುಡುಗಿಯರ ಗೊಂಬೆಗಳನ್ನು ಇಷ್ಟಪಡುತ್ತಿದ್ದ. ದಾದಾಪೀರ್‌ ಜೈಮನ್‌ ಬರೆಯುವ ʻಜಂಕ್ಷನ್‌ ಪಾಯಿಂಟ್‌ʼ ಅಂಕಣದ ಹೊಸ ಬರಹ

 

ನಿನ್ನೆ ಆಫೀಸಿಗೆ ಅರ್ಧ ದಿನ ರಜೆ ಹಾಕಿ ಪುಣ್ಯನ ಶಾಲೆ ತಲುಪುವುದರೊಳಗೆ ಮೂರು ಗಂಟೆಯಾಗಿತ್ತು. ಧ್ಯಾನ ಮಂದಿರದ ಪಕ್ಕದ ಗಾರ್ಡನ್ನಿನಲ್ಲಿ ಕುಳಿತಿರಿ. ಕ್ಲಾಸು ಮುಗಿಸಿ ಮೂರೂವರೆಗೆ ಭೇಟಿಯಾಗುತ್ತೇನೆ ಎಂದು ಮೆಸೇಜಿಸಿದ್ದರು ಪುಣ್ಯನ ಕ್ಲಾಸ್ ಟೀಚರ್ ನರ್ಮದಾ. ಹೌದು ಇದೊಂದು ಅಫಿಷಿಯಲ್ ಅಲ್ಲದ ಭೇಟಿ… ‘ಸರಿ. ಥ್ಯಾಂಕ್ಯೂ’ ಎಂದಷ್ಟೇ ಪ್ರತಿಕ್ರಿಯಿಸಿ ಬೈಕನ್ನು ಪಾರ್ಕ್ ಮಾಡಿ ಶಾಲೆಯ ಗೇಟಿನ ಬಳಿ ಹೆಸರು, ಒಂದು ಸುಳ್ಳು ಕಾರಣ ಬರೆದು ಗಾರ್ಡನ್ನಿನ ಕಲ್ಲು ಬೆಂಚಿನತ್ತ ನಡೆಯತೊಡಗಿದೆ…

ಪುಣ್ಯ ಮಾತನಾಡುತ್ತಿಲ್ಲ. ಅಷ್ಟೇ… ಪುಣ್ಯ ಮಾತನಾಡುತ್ತಿಲ್ಲ. ಅಷ್ಟನ್ನು ಬಿಟ್ಟರೆ ನನಗೇನು ಹೊಳೆಯುತ್ತಿರಲಿಲ್ಲ… ಈ ವರ್ಷ ಹತ್ತನೇ ತರಗತಿ ಬೇರೆ… ಪರೀಕ್ಷೆಗೆ ಇನ್ನು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿಯಿದೆ. ಇವನ ಮಾತು ನಿಂತು ಹೋಗಿದೆ. ಕೊನೆ ಘಳಿಗೆಯಲ್ಲಿ ಹೀಗಾದರೆ ಹೇಗೆ? ಮೊದಲಿಗೆ ಸಣ್ಣವನಿರುವಾಗ ವಿಪರೀತ ಉಗ್ಗು. ಐದನೇ ತರಗತಿಯಲ್ಲಿರುವಾಗ ಐದನೇ ಮಗ್ಗಿ ಹೇಳಲು ಬರುತ್ತಿರಲಿಲ್ಲ. ಹಾಗು ಹೀಗೂ ಈ ಲ್ಯಾಂಗ್ವೇಜ್ ಲ್ಯಾಬು ಅದು ಇದು ಎಲ್ಲ ಮಾಡಿ ಒಂದು ತಹಬಂದಿಗೆ ತಂದದ್ದಾಯಿತು. ಆಮೇಲೆ ದನಿ ಹುಡುಗಿಯರ ದನಿ ಹೋಲುತ್ತದೆ ಎನ್ನುವ ರಂಪಾಟ… ಅದರ ಜೊತೆಗೂ ಗುದ್ದಾಡಿದ್ದಾಯಿತು… ಈಗ ಮಾತೆ ನಿಂತು ಹೋಗಿದೆ. ಹೀಗೆ ಮೆಲ್ಲನೆ ಒಂದರ ಹಿಂದೆ ಒಂದು ನೆನಪಾಗುತ್ತಾ ಚಲನೆಯಂತದ್ದೊಂದು ಆದಂತಾಗಿ ಕಡೆ ಪಕ್ಷ ನರ್ಮದಾ ಅವರ ಹತ್ತಿರ ಹೇಳಿಕೊಳ್ಳಲಿಕ್ಕಾಗುವಷ್ಟಾದರೂ ತಲೆ ಕೆಲಸ ಮಾಡುತ್ತಿದೆ ಎನಿಸಿ ಸಮಾಧಾನವೂ ಆಯಿತು.

ಕಲ್ಲು ಬೆಂಚಿನ ಮೇಲೆ ಕುಳಿತ ತಕ್ಷಣ ಮತ್ತೆ ಖಾಲಿಯೆನಿಸತೊಡಗಿತು. ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದೆ. ಧ್ಯಾನ ಮಂದಿರದಿಂದ ಗದ್ದಲಿಸುತ್ತ ಬರುತ್ತಿದ್ದ ಕೆಲವು ಪ್ರೈಮರಿ ಮಕ್ಕಳನ್ನು ಅವರ ತರಗತಿಯ ಟೀಚರ್ ‘ಶಟಪ್ ಅಂಡ್ ವಾಕ್ ಚಿಲ್ಡ್ರನ್’ ಎಂದು ಬೈಯುತ್ತಾ ಲೈನು ಮಾಡಿಸಿಕೊಂಡು ತರಗತಿಗೆ ಕರೆದುಕೊಂಡು ಹೋಗುತ್ತಿದ್ದರು. ಆಟದ ಮೈದಾನದಲ್ಲಿ ಒಂದಷ್ಟು ಹುಡುಗರು ಖೋ-ಖೋ ಆಟವಾಡುತ್ತಿದ್ದರು. ಹುಡುಗಿಯರು ವಾಲಿಬಾಲ್ ಆಡುತ್ತಿದ್ದರು. ಅವರ ಉತ್ಸಾಹ, ಕೇಕೆ, ನಗು ಮತ್ತವರ ತಿದ್ದಿಕೊಳ್ಳುತ್ತಿರುವ ತಪ್ಪು ತಪ್ಪು ಇಂಗ್ಲೀಷು ಅನಾಯಾಸವಾಗಿ ಕಿವಿಗೆ ಅಪ್ಪಳಿಸುತ್ತಿತ್ತು. ಹೆತ್ತ ತಾಯಿ ನಾನು. ಅವರ ನಗು ಹೊಟ್ಟೆಯಲ್ಲಿ ಬೆಂಕಿ ಹಾಕಿದ ಹಾಗಾಯಿತು. ಈಗಾಗಲೇ ಯಾವುದೋ ಪ್ರಪಾತದ ಆಳದಲ್ಲಿದ್ದಂತೆ ಅಥವಾ ಕಣ್ಣು ಕಟ್ಟಿ ಕಾಡ ಕತ್ತಲಲ್ಲಿ ಬಿಟ್ಟಂತೆ ಅನಿಸುತ್ತಿರುವಾಗಲೇ ಈ ಮಕ್ಕಳ ಸಹಜ ಉತ್ಸಾಹ ತನ್ನನ್ನು ಏಕಿಷ್ಟು ಸಿಡಿಮಿಡಿಗೊಳ್ಳುವಂತೆ ಮಾಡುತ್ತಿದೆ? ಇವೆಲ್ಲ ನನ್ನ ಭ್ರಮೆಯಾ? ನಗರದ ಬೇರೊಂದು ಭಾಗದಲ್ಲಿ ಲೈಬ್ರರಿಯನ್ ಆದ ನನಗೆ ಪುಸ್ತಕ ಓದುವ ಅತೀವ ಖಯಾಲಿಯಿಂದ ಈ ರೀತಿ ವಾಕ್ಯ ಬಳಸಿ ನನ್ನ ಖಾಲಿತನಕ್ಕೆ ಅರ್ಥ ಕೊಡಲೇಬೇಕೆಂಬ ಜಿದ್ದಿಗೆ ಬಿದ್ದು ಹೀಗೆಲ್ಲ ಹೇಳುತ್ತಿರುವೆನೆ?

 

ಒಂದಂತೂ ಸ್ಪಷ್ಟ. ನರ್ಮದಾ ಬರುವುದರೊಳಗೆ ಅವರೊಡನೆ ಮಾತನಾಡಲಾದರೂ ಸ್ವಲ್ಪ ಗೆಲುವಾಗಬೇಕು ಅಂದುಕೊಂಡು ವ್ಯಾನಿಟಿಯೊಳಗಿಂದ ‘ಪುಣ್ಯ’ ಬರೆದಿಟ್ಟುಕೊಳ್ಳುತ್ತಿದ್ದ ಡೈರಿಯನ್ನು ತೆಗೆದೆ. ಮೊನ್ನೆಯಿಂದ ಅದೆಷ್ಟು ಬಾರಿ ಅದನ್ನು ಓದಿದ್ದೇನೋ ಲೆಕ್ಕವೇ ಇರಲಿಲ್ಲ. ತೆಗೆಯುತ್ತಲೇ ಅವನದೊಂದು ಫೋಟೋ. ಎತ್ತರವಾದ, ಗೋಧಿ ಬಣ್ಣದ, ನೀಳ ಮೂಗಿನ, ಬಟ್ಟಲು ಕಂಗಳ ಹುಡುಗ. ಮನೆಯ ಸಂಬಂಧಿಕರೆಲ್ಲ ಹೇಳುವಂತೆ ನನ್ನನ್ನೇ ಹೊತ್ತ ಹುಡುಗ. ‘ಪುಣ್ಯನ ಬಗ್ಗೆ ನನಗಂತೂ ಹೆಮ್ಮೆ. ಓದಿನ ವಿಷಯದಲ್ಲೂ ಎಂದೂ ಹಿಂದೆ ಬೀಳದವ. ಎಲ್ಲಾ ನನ್ನಂತೆಯೇ ಚುರುಕು. ಡೈರಿಯ ಎರಡನೆ ಪುಟದಲ್ಲಿ ನನ್ನ, ಅವನ ಮತ್ತು ಸುರಭಿಯ ಫೋಟೋ…ಸುರಭಿ ಅವನ ತಂಗಿ. ಪುಣ್ಯನಿಗೆ ಒಂದು ವರ್ಷಕ್ಕೆ ಸಣ್ಣವಳು. ಮೂರನೆ ಪುಟದಲ್ಲಿ ಅವನ ಕ್ಲಾಸ್ ಟೀಚರ್ ನರ್ಮದಾರ ಫೋಟೋ… ನಾಲ್ಕು, ಐದು, ಆರು ಪುಟಗಳಲ್ಲೆಲ್ಲ ಬರೆದುಕೊಂಡದ್ದು, ಫೋಟೋ ಇದ್ದದ್ದು ಆ ಹುಡುಗನದ್ದು… ಅವನ ಹೆಸರು ಶಾಹುಲ್. ಅವನ ಮೇಲೆ ಪದ್ಯ ಬರೆದಿದ್ದ. ಅದೂ ಕನ್ನಡದಲ್ಲಿ… ಇಡೀ ಡೈರಿಯನ್ನೆಲ್ಲ ತಡಕಾಡಿದರು ಪ್ರತಾಪನ ಪ್ರಸ್ತಾಪವೇ ಇಲ್ಲ… ಪ್ರತಾಪ್ ಮತ್ತವನ ಮಧ್ಯೆ ನಡೆಯುವ ಕೋಲ್ಡ್ ವಾರುಗಳನ್ನು ನಾನು ಎಂದಾದರೂ ನಿಭಾಯಿಸಿದ್ದಿದೆಯೇ? ಈ ಪ್ರಶ್ನೆಯೆ ಒಂದು ಸುಳ್ಳು ಅನಿಸುತ್ತದೆ… ಮೂಲದಲ್ಲಿ ಎಂದಾದರೂ ಪ್ರತಾಪನ ಮುಂದೆ ಎದುರು ಬದುರು ಮಾತಾಡುವ, ಎತ್ತರದ ದನಿಯಲ್ಲಿ ಆಡುವ ಧೈರ್ಯವಾದರೂ ನನಗಿದೆಯೇ? ಎಂಬ ಪ್ರಶ್ನೆಗೇ ನನಗಿನ್ನೂ ಉತ್ತರ ಕಂಡುಕೊಳ್ಳಲಾಗಿಲ್ಲ.

ಅಮ್ಮ ಯಾವಾಗಲೂ ಹೇಳುತ್ತಿದ್ದಳು; ‘ಆಳದ ದನಿ ತುಂಬಾ ಕ್ಷೀಣವಾಗಿರುತ್ತೆ ಅಚಲಾ!!! ಅದನ್ನ ಕೇಳಿಸಿಕೊಳ್ಳುವವರೆಗೆ ನಾವು ನಾವಾಗಿರಲು ಸಾಧ್ಯವಾಗದು’. ಇಷ್ಟು ಹೇಳುತ್ತಿದ್ದ ಅಮ್ಮನಿಗೆ ಈ ದನಿ ಎಂದಾದರೂ ಕೇಳಿಸಿದೆಯಾ? ಅದರ ಯಾವ ಕಥೆಗಳೂ ನನಗೆ ಗೊತ್ತಿಲ್ಲ. ಅವಳಂತೆಯೇ ನನ್ನ ಗಾಯಗಳು, ಬಿಕ್ಕುಗಳು, ಭಯಗಳು ದನಿಯಾಗಿ ರೂಪುಗಳ್ಳಲೇ ಇಲ್ಲ…ಎಲ್ಲೋ ಕಳೆದು ಹೋಗುತ್ತಿದ್ದೇನೆ ಎನಿಸತೊಡಗಿತು. ಮತ್ತೆ ಅದರ ಕಿವಿ ಹಿಡಿದು ಮರಳಿ ಮುಂದಿನ ಪುಟಗಳಲ್ಲಿ ಅವನ ಕ್ಲಾಸ್ ಟೀಚರ್ ನರ್ಮದಾ, ಶಾಲೆಯ ಹುಡುಗರು ಕಾಡಿಸಿದ್ದು, ಅವನ ನಡಿಗೆಯ ಬಗೆಗೆ ಅವನ ಸ್ನೇಹಿತರು ‘ಹೆಣ್ಣಿಗ’ ಎಂದು ಆಡಿಕೊಳ್ಳುವ ಬಗ್ಗೆ ಎಲ್ಲ ಬರೆದುಕೊಂಡಿದ್ದ… ಇನ್ನು ಇಲ್ಲಿಗೆ ಬಂದಿರುವುದಾದರೂ ಯಾಕೆ? ನನಗೇ ಸ್ಪಷ್ಟವಿರಲಿಲ್ಲ… ಬಂದದ್ದು ಶಾಹುಲನ ಬಗ್ಗೆ ವಿಚಾರಿಸಲಿಕ್ಕಾ? ಪುಣ್ಯನಿಗೆ ನೋಟ್ಸ್ ಇಸಿದುಕೊಳ್ಳಲಿಕ್ಕ? ಆಗಿದ್ದೆಲ್ಲವನ್ನೂ ಹೇಳಿ, ಅತ್ತು ಹಗುರಾಗುವುದಕ್ಕಾ? ಊಹೂ… ಒಂದೂ ಸ್ಪಷ್ಟವಾಗಲೇ ಇಲ್ಲ. ಅಷ್ಟಕ್ಕೂ ಎಲ್ಲ ಬಿಟ್ಟು ನರ್ಮದಾರ ಬಳಿಯೇ ಈ ಎಮೋಷನಲ್ ಔಟ್ಲೆಟ್ ಯಾಕೆ? ಪುಣ್ಯನ ಕ್ಲಾಸ್ ನೆಚ್ಚಿನ ಟೀಚರ್ ಅಷ್ಟೇ ಕಾರಣವಾ? ಪ್ರಶ್ನೆಗಳು ಸುರುಳಿ ಸುರುಳಿಯಾಗಿ ಕಾಡಲಾರಂಭಿಸಿದವು.

ಪುಣ್ಯ ಕೊನೆಯ ಬಾರಿ ಮಾತನಾಡಿದ್ದು ಇದೆ ಒಂದು ವಾರದ ಕೆಳಗೆ. ಅವನ ಶಾಲಾ ವಾರ್ಷಿಕೋತ್ಸವದಲ್ಲಿ… ಈ ರಗಳೆಗಳೆಲ್ಲ ಶುರುವಾದದ್ದು ಸುರಭಿಯಿಂದಲೇ ಎನ್ನಬೇಕು. ಆರನೇ ತರಗತಿ ಓದುತ್ತಿದ್ದ ಸುರಭಿ, ಒಂದು ದಿನ ಶಾಲೆಯಿಂದ ಬಂದದ್ದೆ ಜೋರಾಗಿ ಅಳತೊಡಗಿದಳು. ‘ಅಣ್ಣ ಹುಡುಗಿ ತರ ಆಡ್ತಾನೆ ಅಂತ ಎಲ್ಲರು ನಂಗೆ ಹೆಣ್ಣಿಗನ ತಂಗಿ ಅಂತ ಆಡ್ಕತಾರೆ…ಕಾಡಿಸ್ತಾರೆ. ನಾಳೆಯಿಂದ ಶಾಲೆಗೇ ಹೋಗಲ್ಲ!!!’ ಎಂದು ರಂಪ ಮಾಡತೊಡಗಿದ್ದಳು. ಅಂದಿನಿಂದಲೇ ಪ್ರತಾಪ್ ಇವನನ್ನ ಸರಿ ಮಾಡಲು ಶುರುಮಾಡಿದ್ದು…

ಪುಣ್ಯನ ದನಿ ಹುಡುಗಿಯ ದನಿಯನ್ನು ಹೋಲುತ್ತಿತ್ತು. ಅವನ ನಡಿಗೆಯಲ್ಲಿ ಹುಡುಗಿಯರ ಲಾಲಿತ್ಯ ಗೋಚರಿಸಿಬಿಡುತ್ತಿತ್ತು. ಅಜ್ಜಿ ಮನೆಗೆ ರಜೆಗೆಂದು ಹೋದಾಗ ಅಲ್ಲಿ ಅವನ ವಾರಗೆಯ ಹುಡುಗರು ಆಡುತ್ತಿದ್ದ ಬುಗುರಿ, ಗೋಲಿ, ಚಿನ್ನಿ ದಾಂಡು, ಕ್ರಿಕೆಟ್, ಫುಟ್ಬಾಲ್ ಮುಂತಾದ ಆಟಗಳನ್ನು ಆಡದೆ ಓಣಿಯ ಹುಡುಗಿಯರ ಜೊತೆ ಕುಂಟಾಬಿಲ್ಲೆ, ಕಣ್ಣಾಮುಚ್ಚಾಲೆ ಇತ್ಯಾದಿ ಆಟಗಳನ್ನೇ ಆಡುತ್ತಿದ್ದುದು ನನ್ನ ಕಣ್ಣಿಗೂ ಬಿದ್ದಿತ್ತು. ಮೂರು ವರ್ಷದವನಿದ್ದಾಗಿನಿಂದಲೇ ಇವನು ಹುಡುಗಿಯರ ಗೊಂಬೆಗಳನ್ನು ಇಷ್ಟಪಡುತ್ತಿದ್ದ… ಆಗಲೇ ಎಲ್ಲೋ ಅಳುಕು ಶುರುವಾಗಿತ್ತು. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಸುಮ್ಮನಾಗಿದ್ದೆ. ಪ್ರತಾಪನೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಎಲ್ಲವೂ ಸರಿಯಿದೆ ಎನ್ನಿಸುವಾಗ ಸುರಭಿಯ ಅಳು. ಪ್ರತಾಪ ‘ಪುಣ್ಯ’ ನಲ್ಲಿ ಗಂಡಸುತನ ತರಿಸಿಯೇ ತೀರುತ್ತೇನೆಂದು ಪಣ ತೊಟ್ಟವನಂತೆ ಕಾಡತೊಡಗಿದ. ಪುಣ್ಯನ ಪಾಲಿಗೆ ಆ ದಿನಗಳು ನರಕಗಳೇ ಆಗಿಹೋದವು. ಮೊದಲು ನಡೆಯುವ ಭಂಗಿಯನ್ನು ಬದಲಾಯಿಸುವ ಕೆಲಸಕ್ಕೆ ಕೈಹಾಕಿದ್ದು! ಅವನು ಎಷ್ಟೆ ಪ್ರಯತ್ನ ಪಟ್ಟರೂ ಅವನ ಸ್ವಭಾವದ ನಡಿಗೆ ಬಂದುಬಿಡುತ್ತಿತ್ತು. ಊಟ ನಿಲ್ಲಿಸಿ, ಬೈದು, ಮನೆಯಿಂದ ಹೊರ ಹಾಕಿದ್ದೆಲ್ಲವೂ ಆಯಿತು. ಈಜು, ಫು‌ಟ್ ಬಾಲ್, ವಾಲಿಬಾಲ್, ಕ್ರಿಕೆಟ್ ಮುಂತಾದವುಗಳಿಗೆ ಸೇರಿಸಿದ. ಪುಣ್ಯ ಮಾತ್ರ ಯಾವುದಕ್ಕೂ ತುಂಬಾ ದಿನ ಹೋಗದೆ ಉಳಿದ. ಕೊನೆಗೆ ಪ್ರತಾಪ್ ಪುಣ್ಯನ ಜೊತೆ ಮಾತನಾಡುವುದನ್ನು ಬಿಟ್ಟುಬಿಟ್ಟ… ಎಷ್ಟೋ ದಿನ ಹಾಗೆ ಮುಂದುವರೆದಿತ್ತು. ಒಂದು ದಿನ ರಾತ್ರಿ ‘ಯಾವನ್ ಜೊತೆ ಹೋಗಿ ಮಲಗಿದ್ದಿಲೆ ಹಾದರಗಿತ್ತಿ… ನೂರಕ್ಕೆ ನೂರು ಗಂಡಸಾದ ನನ್ನಲ್ಲಿ ಇಂತಹ ಮಗ ಹುಟ್ಟುವುದಕ್ಕಾದರೂ ಹೆಂಗೆ ಸಾಧ್ಯ? ಬೊಗಳು’ ಎಂದು ಇಬ್ಬರೂ ಮಕ್ಕಳೂ ಕೇಳಿಸಿಕೊಳ್ಳುವಂತೆಯೇ ಸೂರು ಹಾರಿ ಹೋಗುವಂತೆ ಚೀರಿ ಜರೆದು, ಬಡಿದು ಆಡಿದ್ದ ಆ ಜಗಳ ನನಗಿಂತಲೂ ಪುಣ್ಯನನ್ನ ತಾಕಿರಬಹುದೆ ಎನಿಸುತ್ತದೆ.

ಪ್ರತಾಪ್ ಮೊದಲಿನಿಂದಲೂ ಒರಟ. ಈಗಿರುವ ಮನೆಗೆ ಬಂದ ಹೊಸದಿನಗಳವು. ಆಗಿನ್ನೂ ಮದುವೆಯ ಬಿಸುಪು ಆರಿರದ ಹಸಿಮಯ್ಯಿ. ಇಬ್ಬರು ವಾಕಿಂಗ್ ಮುಗಿಸಿ ಬರುವಾಗ ಬಡಾವಣೆಯ ಬೀದಿಯ ತೊಟ್ಟಿಯಲ್ಲಿ ಹೆಣ್ಣು ಹಸುಗೂಸು ಬಿದ್ದಿತ್ತು. ಮರುದಿನ ಆ ಮಗುವಿನ ಬಗ್ಗೆ ಪ್ರತಾಪನಲ್ಲಿ ಕೇಳಲು ‘ಆ ಮಗು ಇದೇ ಓಣಿಯ ಕೊನೆ ಮನೆಯ ಬಾಷಾನದ್ದು. ಅವನ ಹೆಂಡತಿ ಶಾಕಿರಳಿಗೆ ಇಲ್ಲಿಯವರೆಗೂ ಐದೂ ಹೆಣ್ಣು ಮಕ್ಕಳೇ ಆಗಿವೆ. ಈಗ ಹುಟ್ಟಿದ ಆರನೇಯದ್ದು ಹೆಣ್ಣೆಂದು ತಿಳಿದು ಬಿಸಾಕಿದ್ದಾನೆ’ ಅವನು ಮಾಡಿದ್ದು ಸರಿಯೇನೋ ಎಂಬಂತೆ ತಣ್ಣನೆಯ ದನಿಯಲ್ಲೇ ಹೇಳಿ ನೋಡುತ್ತಿದ್ದ ಟಿವಿ ಚಾನೆಲ್ ಬದಲಿಸಿದ್ದ. ಅದೇನೋ ಆ ಘಟನೆ ನನ್ನ ಮನಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ಕೆಲವು ನೆನಪುಗಳೆ ಹಾಗೆ. ಉಳಿದುಬಿಡುತ್ತವೆ. ಅವುಗಳನ್ನ ಮತ್ತೆ ಮತ್ತೆ ನೆನಪು ಮಾಡಿಕೊಂಡೆ ಅವಳ ಮೇಲಿನ ಪ್ರೀತಿ ಮತ್ತು ದ್ವೇಷಗಳನ್ನು ತೀರಿಸಿಕೊಳ್ಳಬೇಕು. ಕೆಲಸಕ್ಕೆ ಕಳಿಸದ ಅನುಮಾನದ ಪಿಶಾಚಿ, ಜುಗ್ಗ, ಆಸೆಬುರುಕ, ಮೋಜುಗಾರ, ಹುಚ್ಚನಂತೆ ಪ್ರೇಮಿಸುವ ಪ್ರೇಮಿ, ಮನುಷ್ಯರ ಸೇರದವ ಹೀಗೆ ಎಲ್ಲವೂ ಆಗಿರುವ ಪ್ರತಾಪನನ್ನ ಸಹಿಸಿಕೊಂಡು ಹೋಗುತ್ತಿದ್ದವಳ ಬದುಕಿನಲ್ಲಿ ಮದುವೆಯಾದ ಎಷ್ಟೋ ವರುಷಗಳಾದರೂ ಮಕ್ಕಳಾಗುತ್ತಿಲ್ಲವೆಂದು ಅರಿವಿಗೆ ಬಂದಾಗ ಬೀಸತೊಡಗಿದ ಬಿರುಗಾಳಿ ಪ್ರತಾಪನ ಅಪ್ಪಣೆಯಂತೆ ನೂರು ದೇವರ ಸುತ್ತಿ, ಪೂಜೆ, ಪುನಸ್ಕಾರ, ವ್ರತ ಮುಂತಾದ ಎಲ್ಲವನ್ನೂ ದೂರದ ಊರಲ್ಲಿರುವ ಅತ್ತೆಯ ಅಣತಿಯಂತೆ ಮಾಡಿದ್ದಿದೆ. ಕೊನೆಗೂ ನೂರು ದೇವರ ಹರಕೆಯಿಂದ ಮಗ ಹುಟ್ಟಿದ ಎಂದು, ಅವರಮ್ಮ ಹೇಳಿದರಂತೆ ಒಬ್ಬ ದೇವರ ಹೆಸರಿಟ್ಟರೆ ಮತ್ತೊಂದಕ್ಕೆ ಬೇಸರ ಆಗ್ತದೆ. ಅದಕ್ಕೆ ಅವರಮ್ಮ ಸೂಚಿಸಿದ ‘ಪುಣ್ಯ’ ಎಂಬ ಹೆಸರಿಟ್ಟ.

ಇದಾಗಿ ಒಂದೇ ವರ್ಷಕ್ಕೆ ಸುರಭಿ ಹುಟ್ಟಿದಳು. ಅನುಮಾನಗಳು ಅಳಿಸಿ ಹೋದವು. ನನ್ನ ಕೈಯಿಗೊಂದು ಹೊಸ ಫೋನು ಬಂದಿತು. ಎಲ್ಲಕ್ಕಿಂತ ಇವಳಿಗೆ ಖುಷಿಯಾಗಿದ್ದು ಇವಳನ್ನು ಕೆಲಸಕ್ಕೆ ಕಳಿಸಲು ಪ್ರತಾಪ ಒಪ್ಪಿದ್ದು! ನನಗೆ ಲೈಬ್ರರಿಯನ್ ಕೆಲಸ ಸಿಕ್ಕಿದ್ದು, ಖುಷಿ ದಿನಗಳು ಆರಂಭವಾದವೆಂಬುದರಲ್ಲೇ ಅವನ ಅಂಗಿಯ ಮೇಲೆ ಮತ್ತೊಂದು ಪರ್ಫ್ಯೂಮಿನ ಗಂಧವೂ ಮೂಗಿಗೆ ಅಡರತೊಡಗಿತು. ಮನುಷ್ಯನನ್ನ ಇಡಿಯಾಗಿ ಅವನೆಲ್ಲಾ ಸಂಕೀರ್ಣತೆಗಳೊಂದಿಗೆ ಹಿಡಿದಿಡಲು ಸಾಧ್ಯವಿದೆಯೇ? ಬಹುಷಃ ಇಲ್ಲ. ಯಾವುದನ್ನು ಹೇಳಲು ಶುರು ಮಾಡಿದರೂ ಪೂರ್ತಿ ಹೇಳಿದಂತಾಗುವುದಿಲ್ಲ. ನಡೆಯುತ್ತಾ ನಡೆಯುತ್ತಾ ಯಾವುದೋ ತಿರುವಿನಲ್ಲಿ ಕಳೆದು ಹೋದವರಂತೆ ನಿಂತು ಬಿಟ್ಟಂತಾಗುತ್ತದೆ.

ತನ್ನ ಅಪ್ಪ ತನ್ನೊಡನೆ ಮಾತನಾಡುತ್ತಿಲ್ಲ ಎಂಬುದನ್ನ ಸಹಿಸಲಾಗದ್ದಕ್ಕೇನೋ ಎಂಬಂತೆ ಪುಣ್ಯ ನಟಿಸಲು ಶುರು ಮಾಡಿದ. ಎಲ್ಲದರಲ್ಲೂ ಒಂದು ತಪ್ಪಿಸಿಕೊಳ್ಳುವ ಮಾರ್ಗ ಹುಡುಕಿಕೊಂಡ. ತನಗೆ ಬೇಕಾದ್ದನ್ನ ತಾನು ಬುದ್ಧಿವಂತಿಕೆಯಿಂದ ಪಡೆದುಕೊಳ್ಳುವುದನ್ನ ಕಲಿತ. ಮತ್ತೆ ಓದಿನಲ್ಲಿ ಮೊದಲಿನಂತೆ ತೊಡಗಿಕೊಳ್ಳಲು ಶುರು ಮಾಡಿದ. ಆಟದಲ್ಲಿ ಬಹುಮಾನ ತಂದ…ನಡಿಗೆಯ ಲಾಲಿತ್ಯವನ್ನು ತಕ್ಕಮಟ್ಟಿಗೆ ನಿಭಾಯಿಸುತ್ತಿದ್ದ ಆದರೆ ಅವನೆಷ್ಟೇ ಪ್ರಯತ್ನಿಸಿದರೂ ಸಹ ಅವನಿಂದ ಬದಲಾಯಿಸಿಕೊಳ್ಳಲು ಅಥವಾ ಬದಲಾಯಿಸಿಕೊಂಡಂತೆ ನಟಿಸಲು ಸಾಧ್ಯವಾಗದ್ದು ಅವನ ದನಿ ಮಾತ್ರ. ಉಗ್ಗಿಸುತ್ತಾ ತೊಡರುತ್ತ ಹೇಳುವ ಹೆಣ್ಣು ದನಿ. ಈ ಒಂದು ವಿಷಯದಲ್ಲಿ ಅವನು ಅಸಹಾಯಕನಂತೆ ಕಾಣುತ್ತಿದ್ದ. ತನ್ನ ತಂದೆಯ ಜೊತೆಗೆ ಸ್ಪರ್ಧೆಗೆ ಇಳಿದಂತಿತ್ತು. ಪುಣ್ಯನ ಪ್ರತಿಯೊಂದು ಸಾಧನೆ ಎನ್ನಿಸುವ ವಿಷಯಗಳು ಪ್ರತಾಪನಿಂದ ಶಹಬ್ಬಾಶ್ ಗಿಟ್ಟಿಸಿಕೊಂಡರೆ ಅವನಾಳದಲ್ಲಿ ಹೆಚ್ಚಾಗುತ್ತಿದ್ದ ಅಸಹಜತೆ ನನಗೆ ಬೇಗನೆ ಗೊತ್ತಾಗಿಬಿಡುತ್ತಿತ್ತು. ಹೀಗೆಯೇ ಮುಂದುವರೆದರೆ ಪುಣ್ಯ ನಮ್ಮ ಕೈತಪ್ಪಿ ಹೋಗುತ್ತಾನೆ ಎಂದು ಒಳಗೊಳಗೇ ಕೊರಗುತ್ತಿರುವಾಗಲೇ ‘ಮಹಿಷಾಸುರ ಮರ್ದಿನಿ’ ಎಂಬ ಹೊಸ ಪ್ರಹಸನ ಜೀವನದಲ್ಲಿ ಶುರುವಾಗಿತ್ತು. ಸುರಭಿ ಅಂದು ಬಹಳ ಉಮೇದಿನಲ್ಲಿ ಶಾಲೆಯಿಂದ ಬಂದವಳೇ ತಾನು ‘ಹೂವಿ’ ನಾಟಕದ ಮುಖ್ಯಪಾತ್ರಕ್ಕೆ ಆಯ್ಕೆಯಾಗಿರುವುದಾಗಿಯೂ ಮತ್ತು ಪುಣ್ಯ ‘ಮಹಿಷಾಸುರ ಮರ್ದಿನಿ’ ರೂಪಕದ ಮಹಿಷಾಸುರನ ಪಾತ್ರಕ್ಕೆ ಆಯ್ಕೆಯಾಗಿರುವುದಾಗಿಯೂ ಹೇಳಿದಳು. ಪ್ರತಾಪನಿಗೆ ಆದ ಖುಷಿಗೆ ಅಂದು ಹೋಟೆಲ್ಲಿಗೆ ಹೋಗಿ ಊಟ ಮಾಡಿಸಿಕೊಂಡು ಸಿನಿಮಾ ತೋರಿಸಿಕೊಂಡು ಬಂದ. ನನಗೆ ಒಳಗೊಳಗೇ ದಿಗಿಲು. ಪುಣ್ಯ ಇದೆಲ್ಲವನ್ನೂ ನಿಭಾಯಿಸುತ್ತಾನಾ? ಯಾವುದಕ್ಕೂ ಒಮ್ಮೆ ಇವನಿಗೆ ನೃತ್ಯ ಕಲಿಸುತ್ತಿದ್ದ ನೃತ್ಯಗಾತಿಯೂ ಆದ ಪುಣ್ಯನ ಕ್ಲಾಸ್ ಟೀಚರ್ ನರ್ಮದಾರನ್ನ ಭೇಟಿ ಆಗುವುದೇ ಒಳ್ಳೆಯದೆಂದು ಭೇಟಿಯಾಗಲು ಬಂದಿದ್ದೆ.

‘ಪುಣ್ಯನ ಬಗ್ಗೆ ನಿಮಗೇ ಗೊತ್ತು. ಅವ್ನಿಗೆ ಈ ಪಾತ್ರ ಮಾಡಕ್ಕಾಗತ್ತೆ ಅಂತ ನಿಮಗನ್ನಿಸತ್ತಾ?’

‘ನಿಮಗನ್ನಿಸಲ್ವಾ?’

‘ ಅವನ ನಡಿಗೆ ? ಅವನ ದನಿ?’

‘ಭಯ ಪಡಬೇಡಿ. ಇದು ನೃತ್ಯರೂಪಕ ಆದ್ದರಿಂದ ಚೀರುವ ಹಾವ ಭಾವ ಸಾಕು. ಮಾತನಾಡಬೇಕು ಅಂತೇನಿಲ್ಲ. ಉಳಿದದ್ದು ನಾನೇ ಟ್ರೈನ್ ಮಾಡ್ತೀನಿ. ಹಿ ವಿಲ್ ಡು ವೆಲ್. ಹೋಗಿ ಬನ್ನಿ’

ನರ್ಮದಾ ಆಡಿದ್ದ ಸಮಾಧಾನದ ಮಾತುಗಳಿಂದ ಚೂರು ಗೆಲುವಾದಳಾದರು ತನ್ನದಲ್ಲದ ತನ್ನನ್ನು, ಪರರನ್ನು ಮೆಚ್ಚಿಸುವುದಕ್ಕಾಗಿ ನಟಿಸುವುದು ಎಷ್ಟು ಕಷ್ಟ ಅದೂ ‘ಪುಣ್ಯ’ನ ಚಿಕ್ಕ ವಯಸ್ಸಲ್ಲಿ ಅವನು ಹೇಗೆ ನಿಭಾಯಿಸುತ್ತಿರಬಹುದೆಂದು ಯೋಚಿಸಿಯೇ ಭಯಗೊಂಡಳು.

‘ಪುಣ್ಯ’ ಇವೆಲ್ಲ ಯಾಕೆ ಮಾಡುತ್ತಿದ್ದಾನೆ? ಪ್ರತಾಪನನ್ನ ಮೆಚ್ಚಿಸಲಾ? ಅವನ ಮೇಲಿನ ದ್ವೇಷದಿಂದಲಾ? ದ್ವೇಷ ಅಸಹಜ ಆಗುತ್ತಿದೆಯಾ? ಒಂದೂ ತಿಳಿಯದಂತೆ ಆಯಿತು. ಪುಣ್ಯನ ರೂಮ್ ಕ್ಲೀನ್ ಮಾಡಬೇಕಾದರೆ ಸಿಕ್ಕ ನನ್ನ ಸೀರೆ, ಲಿಪ್ಸ್ಟಿಕ್ ಇವೆಲ್ಲದಕ್ಕೆ ಯಾವ ಅರ್ಥ ಹಾಕಿಕೊಳ್ಳಬೇಕು…? ದಿನಗಳು ಕಳೆಯುತ್ತಿದ್ದಂತೆಯೇ, ನೋಡುನೋಡುತ್ತಿದ್ದಂತೆಯೇ ಶಾಲೆಯ ವಾರ್ಷಿಕೋತ್ಸವದ ದಿನ ಕೊನೆಗೂ ಬಂದೇ ಬಿಟ್ಟಿತು. ಇನ್ನೇನು ಕೆಲವೇ ಕ್ಷಣಗಳಲ್ಲಿ ನೀವು ಎದುರುನೋಡುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ವೇದಿಕೆಯ ಹಿಂದಿನಿಂದ ನಿರೂಪಕಿ ಅನೌನ್ಸ್ ಮಾಡುತ್ತಿದ್ದಳು. ಮೈಕ್ ಟೆಸ್ಟಿಂಗ್ ಒನ್ ಟು ಥ್ರೀ.. ಒನ್ ಟು ಥ್ರೀ ಶುರುವಾಗಿತ್ತು. ಗ್ರೀನ್ ರೂಮಿನಲ್ಲಿ ಪುಣ್ಯನಿಗೆ ಮೇಕಪ್ ಆಗುವಾಗ ಪ್ರತಾಪನೇ ಖುದ್ದು ನಿಂತು ಕಣ್ತುಂಬಿಕೊಂಡು ಬಂದಿದ್ದ. ಗಂಡಸುತನ ಅವನಲ್ಲಿ ಆ ಮೇಕಪ್ಪಿನ ಬಣ್ಣಗಳಿಂದ ಚರ್ಮಕ್ಕೆ, ಚರ್ಮದಿಂದ ದೇಹದ ರಕ್ತ, ರಕ್ತದಿಂದ ನರನಾಡಿಗಳಲ್ಲೂ ಹರಿಯುತ್ತದೆ ಎಂದು ಕಲ್ಪಿಸಿಕೊಂಡ…… ಮೊದಲಿಗೆ ಹೂವಿ ನಾಟಕದಲ್ಲಿ ಪಾತ್ರವೇ ತಾನಾಗಿ ಅಭಿನಯಿಸಿ ಸುರಭಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡಳು…. ಡೈರಿಯಲ್ಲಿ ಹೆಸರು ಬರೆದುಕೊಂಡಿದ್ದ ಶಾಹುಲ, ಶೇಕ್ಸಪೀಯರ್ ನಾಟಕದ ಮುಖ್ಯಪಾತ್ರದಲ್ಲಿದ್ದ. ‘ಈಗ ನೃತ್ಯರೂಪಕ ‘ಮಹಿಷಾಸುರ ಮರ್ದಿನಿ’ ಪುಣ್ಯ ಪ್ರತಾಪ್ ಮತ್ತು ತಂಡದವರಿಂದ’ ಎಂದು ಅನೌನ್ಸ್ ಮಾಡಲಾಯಿತು.

ವೇದಿಕೆಯ ಮುಂಭಾಗದಲ್ಲೇ ಕೂತಿದ್ದ ಪ್ರತಾಪನ ಗಂಟಲು ಉಬ್ಬಿ ಹೋದವು. ಎಲ್ಲವೂ ಸಾಂಗವಾಗಿ ಆದರೆ ಸಾಕು ಎಂದು ನಾನು ಕೈಕೈ ಹೊಸೆಯುತ್ತಾ ಗ್ರೀನ್ ರೂಮಿನ ಕಡೆಗೊಮ್ಮೆ ಇನ್ನೇನು ತೆರೆಯಲಿದ್ದ ಪರದೆಯ ಕಡೆಗೊಮ್ಮೆ ನೋಡುತ್ತಿದ್ದೆ. ವೇದಿಕೆಯ ಪರದೆ ಸರಿಯಿತು. ವೇದಿಕೆಯ ತುಂಬೆಲ್ಲ ಧೂಪದ ಹೊಗೆ ಪ್ರೇಕ್ಷಕರತ್ತ ಧಾವಿಸಿಬಂದು ಒಮ್ಮೆ ದೇಗುಲವನ್ನು ನೆನಪಿಸಿತು. ಹಾಡು ಶುರುವಾಯಿತು. ಮೊದಲಿಗೆ ಒಬ್ಬೊಬ್ಬ ದೇವಿಯರದೇ ಪರಿಚಯದ ಸ್ತುತಿ ಆರಂಭವಾಯಿತು. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಹೀಗೆ ಒಂಭತ್ತು ಹುಡುಗಿಯರು ದೇವಿಯರ ರೂಪದಲ್ಲಿ ವೇದಿಕೆಯನ್ನೇ ಆವರಿಸಿರುವ ರೀತಿಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿರುವಾಗಲೇ ಮಹಿಷಾಸುರನ ಪ್ರವೇಶ. ಚೀರಾಡುವ ದನಿ. ಚೀರುತ್ತಾ ಹ್ಞೂ೦ಕರಿಸುತ್ತಾ ವೇದಿಕೆಯ ಮಧ್ಯಭಾಗದಿಂದ ಮಹಿಷಾಸುರನ ಪಾತ್ರದಲ್ಲಿದ್ದ ಪುಣ್ಯನ ಪ್ರವೇಶ. ಮ್ಯೂಸಿಕ್ ಇದ್ದರೂ ಅದರ ಸಂಗೀತದಲ್ಲೇ ಚೀರಾಡುವ ದನಿ ಇದ್ದರೂ ಅದಕ್ಕೆ ಹೊಂದಿಕೊಳ್ಳುವಂತೆ, ಅದನ್ನು ಮೀರಿಸುವಂತೆ ಭಾವಾವೇಶದಿಂದ ಚೀರಾಡುತ್ತಾ ಕುಣಿಯುತ್ತಾ ವೇದಿಕೆಯೇರಿದ. ಅವನದಲ್ಲದ ದನಿ ಮತ್ತು ಅವನದ್ದೇ ಅನ್ನಿಸುವ ದನಿ. ಆ ಆಡಿಟೋರಿಯಮ್ಮಿನಲ್ಲಿ ಯಾರಿಗೂ ಕಾಣಿಸದ ವೇದನೆ ನನಗಷ್ಟೇ ಗೊತ್ತಾಗುತ್ತಿದೆ ಎನಿಸುತ್ತಿತ್ತು. ‘ಪುಣ್ಯ’ ದೇವಿಯರಷ್ಟೇ ಸಮನಾಗಿ ಆವರಿಸುತ್ತಾ ಹೋದ. ಚೀರುತ್ತಾ ಹೋದ… ಚೀರಿದ… ಚೀರಿದ… ಚೀರಿದ. ಇಡೀ ಸಭಾಂಗಣವೇ ಮಾರ್ದನಿಸಿತು. ದುರ್ಗೆ ಮಹಿಷಾಸುರನನ್ನು ಸಂಹರಿಸುವ ದೃಶ್ಯದಲ್ಲಿ ಪುಣ್ಯನನ್ನು ನೋಡಲಾಗದೆ ಅಚಲಾ ಕಣ್ಣುಮುಚ್ಚಿಕೊಂಡರೆ ಪ್ರತಾಪ ಚಪ್ಪಾಳೆ ತಟ್ಟುತ್ತಿದ್ದ. ನೃತ್ಯರೂಪಕದ ಅಭೂತಪೂರ್ವ ಯಶಸ್ಸು. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಪ್ರತಾಪನ ಕಣ್ಣಲ್ಲಿ ನೀರಿದ್ದವು. ಒಂದು ಸಣ್ಣ ಗದ್ದಲ ವೇದಿಕೆಯ ಹಿಂಭಾಗದಿಂದ ಶುರುವಾಯಿತು. ನಾನು ಮತ್ತು ಸುರಭಿ ಕೂಡಲೇ ಗ್ರೀನ್ ರೂಮಿನತ್ತ ಓಡಿದೆವು. ಪುಣ್ಯ ಬಿದ್ದಿದ್ದ. ಮೇಲೇಳಲಿಲ್ಲ… ನನಗೆ ಕೈ ಕಾಲೇ ಆಡಲಿಲ್ಲ. ಅಲ್ಲಿಂದ ಸೀದಾ ಆಸ್ಪತ್ರೆ, ಅಲ್ಲಿಂದ ಮನೆ ಮತ್ತು ಈಗ ಇಲ್ಲಿ… ಅಂದಿನಿಂದ ಪುಣ್ಯ ಮಾತನಾಡುತ್ತಿಲ್ಲ.

ಎಲ್ಲೋ ಕಳೆದುಹೋಗಿದ್ದಾಗ ನರ್ಮದಾ ಬರುತ್ತಿರುವುದು ಕಾಣಿಸಿತು. ಅವರ ಮುಖದಲ್ಲಿದ್ದ ಕಳೆ, ನಡೆಯುವ ಶೈಲಿ ಎಲ್ಲವೂ ಅವರೊಬ್ಬ ಭರತನಾಟ್ಯ ಪಟುವೆಂದು ಹೇಳುತ್ತಿದ್ದವು. ಆಕೆ ನಿಜಕ್ಕೂ ಸುಂದರಿಯಾಗಿದ್ದಳು. ಪುಣ್ಯ ಅವನ ಡೈರಿಯಲ್ಲಿ ಬರೆದುಕೊಂಡಂತೆ ನಿಜಕ್ಕೂ ಆಕೆ ಬೆಳದಿಂಗಳ ಬಾಲೆಯೆ ಹೌದು…

ನರ್ಮದಾ ಬಂದು ತನ್ನ ಪಕ್ಕ ಕುಳಿತಳು. ಸ್ವಲ್ಪ ಹೊತ್ತು ಮೌನ ಆವರಿಸಿತು… ಇಬ್ಬರಿಗೂ ಏನು ಮಾತನಾಡಬೇಕೆಂಬುದೇ ತೋಚಲಿಲ್ಲ… ಸ್ವಲ್ಪ ಹೊತ್ತಿನ ನಂತರ ಅವರೇ ‘ಈಗ ಪುಣ್ಯ ಹೇಗಿದ್ದಾನೆ?’ ಎಂದು ಕೇಳಿದರು.

‘ಡಾಕ್ಟರ್ , ಅವನು ಯಾವುದೋ ಶಾಕ್ ಅಲ್ಲಿ ಇದ್ದಾನೆ. ಸರಿಯಾಗುತ್ತದೆ. ಅವನನ್ನ ಗಾಬರಿಗೊಳಿಸಬೇಡಿ ಅಂದ್ರು. ಅವನಿಗೆ ಉಗ್ಗು ಹಿಡಿದಾಗಲೂ ಫ್ಯಾಮಿಲಿ ಡಾಕ್ಟರ್ ಅದೇ ಮಾತು ಹೇಳಿದ್ದರು…’

ದುಃಖ ತಡೆಯಲಾಗಲಿಲ್ಲ. ಅತ್ತುಬಿಟ್ಟೆ… ಅವರು ನನ್ನ ಕೈ ಅದುಮಿದರು. ‘ಸಮಾಧಾನ ಮಾಡ್ಕೊಳ್ಳಿ ಮಿಸಸ್ ಅಚಲಾ… ಎಲ್ಲ ಸರಿ ಹೋಗುತ್ತೆ’

‘ಎಲ್ಲ ಸರಿ ಹೋಗುತ್ತೆ ಅನ್ನೋ ಮಾತು ಕೇಳಿ ಕೇಳಿ ನನಗೆ ಸಾಕಾಗಿ ಹೋಗಿದೆ ಮ್ಯಾಡಮ್. ಪುಣ್ಯ ಯಾಕೆ ಅಷ್ಟೊಂದು ಗಾಬರಿಯಾಗುತ್ತಾನೆ? ಅವನಿಗೆ ಯಾವುದರ, ಯಾರ ಭಯವಿದೆ? ಪ್ರತಾಪ್ ಕೊಡುವ ಹಿಂಸೆಯಷ್ಟೇ ಕಾರಣವಾ? ಅವನ ಭಯದ ಮೂಲ ಯಾವುದು? ಈ ಡೈರಿ ನೋಡಿ. ಇದರಲ್ಲಿ ಶಾಹುಲ್ ಅನ್ನೋ ಹುಡುಗನ ಬಗ್ಗೆನೇ ಬರ್ಕೊಂಡಿದಾನೆ… ಇವೆಲ್ಲ ನೋಡಕೆ ಹಿಂಸೆ ಆಗತ್ತೆ’

‘ನೋಡಿ… ನನ್ನ ಮಟ್ಟಿಗೆ ಹೇಳೋದಾದ್ರೆ ಪುಣ್ಯ ಅವನ ಹಾಗೆ ಇದಾನೆ. ಅವನ ದನಿ ಅವನದ್ದು… ಅವನಿಗೆ ಅವನದೇ ಭಯಗಳಿದ್ದಾವೆ. ಅವನನ್ನ ಅವನಂತೆಯೇ ಒಪ್ಪಿಕೊಂಡಿದ್ದಿದ್ರೆ ಈ ಸಮಸ್ಯೆ ಬರ್ತಿರಲಿಲ್ಲ ಮಿಸಸ್ ಅಚಲಾ. ಅವನು ನಿಮ್ಮ ಕೂಸು ಅಷ್ಟೇ… ನಿಮ್ಮ ಕರುಳ ಕುಡಿ ಅಷ್ಟೇ… ಅವನೇನಾಗ್ತಾನೋ ಆಗ್ಲಿ. ಹಾಗೆ ಹೀಗೆ ಅದು ಇದು ಅಂತ ಲೇಬಲ್ ಮಾಡೋಕೆ ಹೊರಟಾಗಲೇ ಸಮಸ್ಯೆ ಶುರುವಾಗತ್ತೆ. ಯು ವರ್ಕ್ ಇನ್ ಲೈಬ್ರರಿ. ಯು ಮಸ್ಟ್ ಬಿ ರೀಡಿಂಗ್ ಸೊ ಮಚ್… ಈ ವಯಸ್ಸಲ್ಲಿ ಮಕ್ಕಳಿಗೆ ತಾವೇನು ಅನ್ನೋದೇ ಗೊತ್ತಿರಲ್ಲ. ಅವರನ್ನ ಅವರ ಹಾಗೆ ಸಹಜವಾಗಿ ಇರೋದಕ್ಕೆ ಬಿಟ್ಟುಬಿಡಬೇಕು. ಹೇಳ್ಬೇಕು ಅಂದ್ರೆ ವೀ ನೀಡ್ ಹೆಲ್ಪ್. ನಾಟ್ ಪುಣ್ಯ’. ಬನ್ನಿ ಕೆಫೆಟೇರಿಯಾಗೆ ಹೋಗೋಣ ಎಂದು ಡೈರಿ ವಾಪಸ್‌ ಕೊಟ್ಟು ನನ್ನ ಕೈಯನ್ನು ಮತ್ತೊಮ್ಮೆ ಮೆಲುವಾಗಿ ಅದುಮಿದರು.

ಲೈಬ್ರರಿಯ ಸಾಲು ಸಾಲು ಪುಸ್ತಕಗಳು…ಮನೆಯ ನನ್ನ ಓದುವ ಕೋಣೆಯಲ್ಲಿರುವ ಸಾಲು ಸಾಲು ಪುಸ್ತಕಗಳು. ವಾರ್ತಾಪತ್ರಿಕೆ, ವೃತ್ತ ಪತ್ರಿಕೆ, ಕಥೆ, ಕವಿತೆ, ಕಾದಂಬರಿ ಹೀಗೆ ಬಗೆಬಗೆಯ ಪುಸ್ತಕಗಳು… ಪ್ರತಿ ಪುಸ್ತಕಗಳನ್ನು ಹೊರತೆಗೆದು ನೇವರಿಸಿ ಮತ್ತೆ ಅದರ ಜಾಗದಲ್ಲಿಟ್ಟೆ. ಫೆಬ್ರವರಿಯ ಚಳಿಬಿಟ್ಟ ಈ ರಾತ್ರಿಯ ನನ್ನ ಓದುವ ಟೇಬಲ್ಲಿನಲ್ಲಿ ಕೂತೆ. ಹೊರಗಡೆ ಬೆಳದಿಂಗಳ ಬೆಳಕು ಚೆಲ್ಲಿತ್ತು. ಸುಮ್ಮನೆ ಹೀಗೆ ಕೂತುಬಿಡಬೇಕು ಅನಿಸಿತು. ಕ್ರಮೇಣ ಲೈಬ್ರರಿಯಲ್ಲಿನ ನಿಶಬ್ಧ ಆವರಿಸತೊಡಗಿತು. ಅಮ್ಮ ಹೇಳುತ್ತಿದ್ದಂತೆ ಆಳದ ದನಿ ಕೇಳುತ್ತದೆಯಾ ಎಂದು ಕಣ್ಮುಚ್ಚಿದೆ. ದೇವರ ಮುಂದೆ ನಿಂತ ಹಾಗಾಯಿತು. ಅವಳು ಹೇಳಿದಂತೆ ಹನಿ ಹನಿ ಸೇರಿ ಹಳ್ಳವಾಗುವಂತೆ ದನಿ ಸ್ಪಷ್ಟವಾಗತೊಡಗಿತು. ಅದು ಸ್ಪಷ್ಟವಾಗತೊಡಗಿದಂತೆ ಮೈಯ ಮೇಲಿನ ಗಾಯಗಳೆಲ್ಲ ಮಾಯವಾಗತೊಡಗಿದವು. ಪುಸ್ತಕಗಳ ಉಸಿರಾಟ ಮೊದಲ ಬಾರಿಗೆ ಕೇಳಿಸಿದಂತಾಯಿತು. ದನಿ ಇನ್ನು ಸ್ಪಷ್ಟವಾಗುತ್ತಾ ಪುಣ್ಯ ಮಾತನಾಡುವ ಕನಸು ಬೀಳತೊಡಗಿತು.