ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ. ‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೆರಡನೆಯ ಬರಹ
ಜಯಲಕ್ಷ್ಮಿ ಅರಮನೆಯಲ್ಲಿ ಕಾಸರವಳ್ಳಿಯವರ ಸಂದರ್ಶನವನ್ನು ನಡೆಸಿಕೊಡಬೇಕಿತ್ತು. ಕಾರ್ಯಕ್ರಮದ ಸ್ಥಳವಿದ್ದ ಕಡೆ ಹೋಗುವಾಗ ಒಬ್ಬ ದ್ವಿಚಕ್ರಿ ಬೇಕೆಂತಲೇ ತಟ್ಟನೆ ಅಡ್ಡಬಂದಿದ್ದ. ಲೇಡಿ ಡ್ರೈವರ್ ನೋಡಿದ ತಕ್ಷಣ ಈ ಗಂಡಸರು ಹೆಂಡ ಕುಡಿದ ಕಪಿಗಳಾಗುತ್ತಾರೆ. ಹೇಗೆ ನಿಯಂತ್ರಿಸುತ್ತಾಳೆ ನೋಡೋಣ ಎಂಬ ಉಡಾಫೆ! ಹೊರಗಿನ ರಸ್ತೆ ಗಂಡಸಾದ ನನಗೆ ಸೇರಿದ್ದು, ನೀನು ಮನೆಯೊಳಗೆ ಇರುವುದು ಬಿಟ್ಟು ಹೇಗೆ ಇಲ್ಲಿ ಬಂದೆ ಎಂಬ ದುರಹಂಕಾರ!
ಕೊನೆಗೆ ನಿಯಂತ್ರಿಸಲಾಗದೆ ಗಾಡಿ ಸಮೇತ ತೂರಾಡಿದ್ದು ಅವನೇ!
ನಿಲ್ಲಿಸಿ ಗಾಜನ್ನು ಇಳಿಸಿ ಜೊತೆಗೆ ಮುಖದ ನೀರಿಳಿಸಿದೆ. ‘ನಾನು ಹೋಗುತ್ತಿರುವುದು ಮುಖ್ಯ ರಸ್ತೆಯಲ್ಲಿ. ನೀನು ಬೇಕೆಂತಲೇ ಅಡ್ಡ ಬಂದ ಎಡಬಿಡಂಗಿ. ಹೆಲ್ಮೆಟ್ ಇಲ್ಲ, ಲೈಸೆನ್ಸ್ ಆದರೂ ಇದೆಯಾ? ಒಂದು ಕೆಲಸ ಮಾಡು, ಇನ್ನು ಮುಂದೆ ರಸ್ತೆಗೆ ಇಳಿಯುವ ಮುಂಚೆ ಮನೆಯಲ್ಲಿ ಕೊನೆಯ ಬಾರಿಗೆ ಟಾಟಾ ಹೇಳಿ ಬಂದು ಬಿಡು!’
ಅವ ಪೆಕರನಂತೆ ನೋಡುತ್ತಾ ನಿಂತಿದ್ದ.
ಈ ಕಪಿಚೇಷ್ಟೆಯ ಹಿಂದಿನ ಮನೋಭಾವ ನನ್ನನ್ನು ಉರಿದು ಬೀಳಿಸುತ್ತದೆ. ಹಾಗಾಗಿಯೇ ಮಾತುಗಳು ಸಹ ಕಠೋರವಾಗುತ್ತವೆ. ಹೆಚ್ಚಿನ ದ್ವಿಚಕ್ರಿಗಳ ಗಾಡಿಗೆ ಕನ್ನಡಿ ಇರಲ್ಲ (ಅವನು ಮಾತ್ರ ಜಾತ್ರೆಯಲ್ಲಿ ಕೊಂಡ ಕೂಲಿಂಗ್ ಗ್ಲಾಸ್ ಏರಿಸಿರುತ್ತಾನೆ), ಹೆಲ್ಮೆಟ್ ಇರಲ್ಲ, ಲೈಸೆನ್ಸ್ ಅಪ್ಪರಾಣೆ ಇರಲ್ಲ!
ಇಲ್ಲ, ಇಲ್ಲಗಳೇ! ರಸ್ತೆನಿಯಮ ಪ್ರಜ್ಞೆ ಮೊದಲೇ ಇಲ್ಲ!
ಜೊತೆಗೆ ಟ್ರಿಪಲ್ ಪಡ್ಡೆಗಳು! ನಾಲ್ಕು ಚಕ್ರಗಳು ಹೋಗಬೇಕಾದ ಬಲಗಡೆಯಲ್ಲೇ ಅವರ ಸವಾರಿ! ತಲೆಯನ್ನು ಸೊಟ್ಟಗಾಗಿಸಿ ಕಿವಿಗೆ ಮೊಬೈಲ್ ತಗುಲಿಸಿಕೊಂಡು ಮಾತಾಡುತ್ತಾ ಹೋಗುವ ಈ ಜಾತ್ರೆ ಮನ್ಮಥರು ಹಾಂಕ್ ಮಾಡಿದರೂ ದಾರಿ ಬಿಡಲಾರರು. ಮೈಸೂರಿನ ರಸ್ತೆಗಳು ಡಬಲ್ ಲೇನ್ ಆದರೇನು? ಗಾಡಿ ಓಡಿಸುವವರ ತಲೆ ಮಾತ್ರ ಸಿಂಗಲ್ ಲೇನೆ!
ಒಮ್ಮೆ ರೇಗಿ ಸಿಗ್ನಲಿನಲ್ಲಿ ಅವನ ಪಕ್ಕ ನಿಲ್ಲಿಸಿ ಕಿವಿಗೆ ಮೊಬೈಲ್ ತಗುಲಿಸಿಕೊಂಡಿದ್ದ ಅವನಿಗೆ ‘ನಿನಗೆ ಹುಟ್ಟುವ ಮಕ್ಕಳಿಗೆ ತಲೆ ಸೊಟ್ಟಗೆ ಇರಬೇಕಾ?’ ಎಂದು ಕೇಳಿ ಪೆಕರು ಹಿಡಿಸಿದ್ದೆ. ಇನ್ನೊಮ್ಮೆ ತುಂಬ ರೇಗಿದಾಗ, ‘ಹೀಗೇ ಗಾಡಿ ಓಡಿಸಿದರೆ ಒಂದಲ್ಲ ಒಂದು ದಿನ ರಸ್ತೆಯಲ್ಲೇ ಸಾಯ್ತೀಯ!’ ಅಂದಿದ್ದೆ.
‘ಮತ್ತೆ ನೀವು?’
‘ನಾನು ಕಾರೊಳಗೆ ಸಾಯಬಹುದು. ನಿನ್ನ ತರ ನಾಯಿಯ ಹಾಗೆ ಬೀದಿಯಲ್ಲಿ ಸಾಯಲ್ಲ ಅನ್ನೊದೊಂದೇ ಸಮಾಧಾನ!’
ಪಡ್ಡೆಗೆ ಗ್ರಹಚಾರ ಬಿಡಿಸಿ ವಿಶ್ವವಿದ್ಯಾಲಯ ತಲುಪಿದ ಮೇಲೆ ಗಿರೀಶರ ಕೈಕುಲುಕಿ ಮಾತಾಡಿಸಿದಾಗ ಆ ಮುಖದ ಮೇಲಿನ ಮಂದವಾದ ನಗು ನನ್ನ ಬಿಪಿಯನ್ನು ತಂತಾನೆ ಕಮ್ಮಿಯಾಗಿಸಿತ್ತು.
ಆ ವಾರ ಎರಡು ಅದ್ಭುತ ವ್ಯಕ್ತಿತ್ವಗಳನ್ನು ಕಣ್ಣಾರೆ ಕಾಣುವ ಭಾಗ್ಯ ನನಗೆ! ಪಂಡಿತ್ ವೆಂಕಟೇಶ್ ಕುಮಾರ್ ಮತ್ತು ಗಿರೀಶ್ ಕಾಸರವಳ್ಳಿ. ಆ ದಿವ್ಯಗಾಯಕನ ಬಗ್ಗೆ ಕಾಸರವಳ್ಳಿಯವರು ತಯಾರಿಸಿದ್ದ ‘ನಾದದ ನವನೀತ’ ಎಂಬ ಸಾಕ್ಷ್ಯಚಿತ್ರದಲ್ಲಿದ್ದ ಸೂಕ್ಷ್ಮಜ್ಞತೆ ತುಂಬ ಪ್ರಿಯವೆನ್ನಿಸಿತ್ತು.
ವೆಂಕಟೇಶ ಕುಮಾರರ ದಿವ್ಯ ಸಂಗೀತ, ಅದರಲ್ಲೂ ಅಲ್ಲಮನ ವಚನ, ಮೂಡಿಸಿದ ಅನುಭವಕ್ಕೆ ನನ್ನಲ್ಲಿ ಮಾತಿಲ್ಲ. ಅಂದು ರಾತ್ರಿಯ ನನ್ನ ನಿದ್ದೆಯಲ್ಲೂ ಅಲ್ಲಮನ ‘ಪ್ರಣತಿ ಇದೆ, ಬತ್ತಿ ಇದೆ… ’ ರಿಂಗಣಿಸುತ್ತಿತ್ತು. ಅದರ ಸಾಹಿತ್ಯವನ್ನು ಮನಸ್ಸಿನಲ್ಲಿ ಹೊರಳಿಕೊಳ್ಳಿಸುತ್ತಿದ್ದಾಗ ಥಟ್ಟನೆ ನನ್ನ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಂತಿತ್ತು.
ನನಗೆ ಐದನೆಯ ತರಗತಿಯಲ್ಲಿ ‘ಧರ್ಮವ್ಯಾಧ’ ಎಂಬ ಪಾಠವೊಂದಿತ್ತು. ಅದರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮರದ ಕೆಳಗೆ ತಪಸ್ಸು ಮಾಡುತ್ತಿದ್ದ ಒಬ್ಬ ‘ಧರ್ಮಜ್ಞಾನಿ’ ಮೇಲೆ ಕೂತಿದ್ದ ಹಕ್ಕಿಯೊಂದು ತನ್ನ ಮೇಲೆ ಹೊಲಸನ್ನು ಸುರಿಸಿತು ಎಂಬ ಕಾರಣಕ್ಕೆ ಶಾಪ ಕೊಟ್ಟಿದ್ದ!
ನಮ್ಮ ಟ್ಯೂಷನ್ ಮೇಷ್ಟ್ರನ್ನ ‘ಅದ್ಯಾಕಪ್ಪಾ? ಹಕ್ಕಿ ಪಾಪ ತನ್ನ ಕೆಲಸವನ್ನ ಮಾಡ್ತು, ಅಷ್ಟೇ ತಾನೇ? ಕೆಳಗಡೆ ಒಬ್ಬ ಘನಂದಾರಿ ಮಹಾಶಯ ಕೂತಿದಾನೆ ಅಂತ ಅದಕ್ಕೇನು ಗೊತ್ತು?ʼ ಎಂದು ಕೇಳಿದ ನೆನಪು. ಧರ್ಮ ಬೇರೆ, ಪ್ರಕೃತಿ ಬೇರೆಯೇ? ಪ್ರಕೃತಿ ಧರ್ಮ ಅಂತಲೂ ಒಂದು ಇದೆಯಲ್ಲ? ಎಂದು ಕೇಳಲಾಗದಷ್ಟು ಚಿಕ್ಕವಳು ನಾನು.
ಸ್ವಾಮಿ ವಿವೇಕಾನಂದ ಸಹ ಭಕ್ತಿಯನ್ನು lower truth ಮತ್ತು ಜ್ಞಾನವನ್ನು higher truth ಎಂದು ವಿಶ್ಲೇಷಿಸಿದಂತೆ ಕೇಳಿದ್ದೇನೆ. ನಮ್ಮನ್ನು ಕಾಡುವ ಭಯಗಳನ್ನು ನಿವಾರಿಸಲು, ಬಯಕೆಗಳನ್ನು ಈಡೇರಿಸಲು ಮೊರೆ ಹೋಗುವುದನ್ನು ಭಕ್ತಿ ಅಂತ ವೈಭವೀಕರಿಸುವುದು ನಮಗೆ ನಾವೇ ಮಾಡಿಕೊಳ್ಳುವ ಮಹಾಮೋಸ. ಅಂಥ ಭಕ್ತಿ ನಮ್ಮನ್ನು ಹೆಳವರನ್ನಾಗಿಸುತ್ತದೆ. ಸ್ವಾಮಿ ವಿವೇಕಾನಂದ ಹೇಳಿದ ಭಕ್ತಿ ಅದಂತೂ ಆಗಿರಲಾರದು. ‘ಅದು ಕೊಡು, ಇದು ಕೊಡು ಎಂದು ಗುರುವನ್ನು ಕೇಳಬೇಡಿ’ ಎಂದು ಗುರುಮನೆಯ ಅಧ್ಯಕ್ಷಜ್ಜೊರು ಹೇಳಿದ್ದು ನೆನಪಿಗೆ ಬರುತ್ತದೆ.
ಅಲ್ಲಮನ ವಚನದಲ್ಲಿ ಜ್ಞಾನ ಇದ್ದರೆ ಮಾತ್ರ ಭಕ್ತಿ ಸಾಧ್ಯ ಎಂಬ ನಿಲುವನ್ನು ‘ಸುಜ್ಞಾನವಂಕುರಿಸುವನ್ನಕ್ಕರ ಭಕ್ತಿಯೆಲ್ಲಿಯದೋ?’ ಎಂಬ ಸಾಲು ನನಗೆ ಸತ್ಯದರ್ಶನ ಮಾಡಿದಂತೆ ಅನ್ನಿಸಿತ್ತು. ಜ್ಞಾನವಿಲ್ಲದ ಭಕ್ತಿ ಮಹಾ ಕುರುಡು!
ಗಿರೀಶರಿಗೆ ವೆಂಕಟೇಶ ಕುಮಾರರ ಸಂಗೀತಕ್ಕೆ ಹೋದದ್ದನ್ನು ಹೇಳಿದೆ. ಮತ್ತೊಮ್ಮೆ ಅದೇ ಮಂದವಾದ ನಗು. ಅವರ ಮುಖದ ಮೇಲಿನ radical innocence (ಕವಿ ಯೇಟ್ಸ್ ಹೊಸೆದ ಪದಪುಂಜ), ನನ್ನ ಪ್ರಶ್ನೆಗಳನ್ನು ಆಲಿಸಿದ ರೀತಿ, ಮತ್ತು ಮಾತಾಡುವಾಗ ಎದುರಿಗಿದ್ದ ಮಂದಿಗೆ ಸ್ಪಂದಿಸಿದ ಮತ್ತು ಸಂವಾದಿಸಿದ ರೀತಿ ನನ್ನ ಮನಸ್ಸನ್ನು ಅರಳಿಸಿತ್ತು. ಪ್ರತಿಭೆಯೆಂದರೆ ಹೀಗಿರುತ್ತದೆ ಅಂತನ್ನಿಸಿತ್ತು!
*****
ಗ್ಲೊಬೀಕರಣದ ತೊಂಬತ್ತರ ದಶಕದಲ್ಲಿ ಬೆಂಗಳೂರು ಎಕ್-ಹೊರಟುಹೋಗಲು ಆರಂಭಿಸಿತ್ತು. ಐಟಿಬಿಟಿಗಳಿಗೆ ಅದರ ಶ್ರೇಯಸ್ಸು ಸಲ್ಲಬೇಕು. ನಮ್ಮ ಸುಂದರ ಬೆಂಗಳೂರನ್ನು ಗಬ್ಬೆಬ್ಬಿಸಿದ ತಳಿಗಳು ನೀವು ಎಂದು ಹರಿಯನ್ನು ರೇಗಿಸಿದ್ದೆ. ಬೆಂಗಳೂರು ಮಹಾ ನಗರವಾಯಿತು. ಶನಿವಾರದ ಸಂಜೆಯ ಟ್ರಾಫಿಕ್ ಮಹಾ ನರಕವಾಯಿತು.
ಬೆಂಗಳೂರು ಹೈವೇ ಬಂದ ನಂತರ ಈಗ ಮೈಸೂರು ನಗರ ವೀಕೆಂಡ್ ನರಕವಾಗಹತ್ತಿದೆ.

(ಜಯಂತ ಕಾಯ್ಕಿಣಿ)
ಆದರೂ ಒಮ್ಮೆ ಸಂಜೆಯ ಒಂದು ಪುಸ್ತಕ ಬಿಡುಗಡೆಗೆ ಬರುತ್ತೇನೆ ಎಂದು ಒಪ್ಪಿಕೊಂಡಿದ್ದೆ. ಸ್ನೇಹಿತ ಜಯಂತ ಕಾಯ್ಕಿಣಿ ಕರೆದಿದ್ದಕ್ಕೆ. ಕರೆದಾಗ ಮೊದಲು ನಾನು ಮೈಸೂರಿನಲ್ಲಿ ಇರುವುದಿಲ್ಲ. ಹೈದರಾಬಾದಿಗೆ ಹಾರಲಿದ್ದೇನೆ ಎಂದು ಮೆಸೇಜು ಕಳಿಸಿದೆ. ‘ಬಚ್ ಗಯಿ ಸಾಲೀ’ ಎಂಬ ಉತ್ತರ ಬಂದಾಗ ಮನಸಾರೆ ನಕ್ಕಿದ್ದೆ.
ಜಯಂತನ one-line ಸಾಹಿತ್ಯದಲ್ಲಿ ಸಹ ತುಂಟತನ, ಪ್ರೀತಿ, ಜೀವನೋತ್ಸಾಹ ಒಡೆದು ಮೂಡುತ್ತವೆ. ಆತನ ಸಾಹಿತ್ಯದಲ್ಲಿ ಇರುವ ಲವಲವಿಕೆ ನನಗೆ ತುಂಬ ಇಷ್ಟ. ನಿಮ್ಮ ಪುಸ್ತಕಗಳೆಲ್ಲವನ್ನೂ ಅಮೇಜಾನಿನಲ್ಲಿ ಖರೀದಿ ಮಾಡಿದ್ದೇನೆ ಎಂದು ಒಮ್ಮೆ ಹೇಳಿದಾಗ ‘ಕನ್ನಡಾಂಬೆ ನೀನು’ ಎಂದು ಹೇಳಿ ನಾನು ಕಿಸಕ್ಕನೆ ನಕ್ಕಿದ್ದೂ ಆಯ್ತು. ಜಯಂತ ಚಲನಚಿತ್ರಗಳಿಗೆ ಹಾಡುಗಳನ್ನು ಬರೆದು ಸಿಕ್ಕಾಪಟ್ಟೆ ಜನಪ್ರಿಯನಾಗಿರುವುದು ಇಂದಿನ ಸ್ಥಿತಿಗತಿ.
ಮೊನ್ನೆ ತಮಿಳಿನ ವೈರಮುತ್ತುಗೆ ಜ್ಞಾನಪೀಠ ಬಂದಾಗ if vairamuthu gets it, can Jayanta be far behind ಎಂದು ಸಂದೇಶ ಕಳಿಸಿ ಕಿಚಾಯಿಸಬೇಕೆನ್ನಿಸಿತ್ತು (ಶೆಲ್ಲಿಯ if winter comes, can spring be far behind ಧಾಟಿಯಲ್ಲಿ).
ಸುಮಾರು ಒಂದು ದಶಕದ ಹಿಂದೆಯೋ ಏನೋ, ಕನ್ನಡಪ್ರಭ ವರುಷದ ಕೊನೆಯಲ್ಲಿ ‘ಈ ವರ್ಷ ನಾನು ಓದಿದ ಅತ್ಯುತ್ತಮ ಪುಸ್ತಕ’ ಎಂಬ ಸರಣಿಗೆ ಲೇಖನ ಕೊಡಿ ಎಂದಾಗ ಜಯಂತನ ‘ಟೂರಿಂಗ್ ಟಾಕೀಸು’ ಹೆಸರಿಸಿ ಬರೆದಿದ್ದೆ.
ಇರಲಿ, ರಂಗಾಯಣದ ವನರಂಗದಲ್ಲಿ ಐದು ಗಂಟೆಗೆ ಕಾರ್ಯಕ್ರಮವಿತ್ತು. ಸರಿಯಾಗಿ ಇನ್ನು ಐದು ನಿಮಿಷವಿರುವಾಗ ಅಲ್ಲಿ ಹಾಜರಿದ್ದೆ. ವನರಂಗ ಮಾತ್ರ ಆಯೋಜಿಸಿದವರ, ಅತಿಥಿಗಳ ನೆರಳೂ ಇಲ್ಲದೆ ಅನಾಥವಾಗಿತ್ತು.
ಅರ್ಧ ಗಂಟೆ ಅಲ್ಲಿಂದಿಲ್ಲಿಗೆ ಠಳಾಯಿಸಿದೆ. ಪುಸ್ತಕಗಳನ್ನು ಕೊಂಡೆ. ಕಾರ್ಯಕ್ರಮದ ಪಟ್ಟಿಯನ್ನು ಮತ್ತೊಮ್ಮೆ ನೋಡಿದೆ. ವಿಶೇಷ ಅತಿಥಿಗಳೆಲ್ಲ ಹೊಳೆಯುವ ತಾರೆಗಳೇ! ಆದರೆ ಬರೀ ಗಂಡಸರು.
ವೇದಿಕೆಯ ಮೇಲೆ ಒಂದೇ ತರ ಕಾಣುವವರು ಇದ್ದರೆ ನನಗೇನೋ ಅಲರ್ಜಿ. ಕಣ್ಣಿಗೆ ಹಿತವೆನ್ನಿಸುವುದಿಲ್ಲ. ನಿಸರ್ಗ ಹಾಗಿಲ್ಲ. ಬದುಕೂ ಹಾಗಿಲ್ಲ. ಕಾರ್ಯಕ್ರಮಗಳು ಸಹ ಹಾಗಿರಬಾರದು.
ಹೊಳೆಯುವ ತಾರೆಗಳೇ ಆದ್ದರಿಂದ ಜನ ಹೇಗೋ ಬಂದೇ ಬರುತ್ತಾರೆ ಎಂಬ ಉಡಾಫೆಯೋ ಏನೋ. ಇಲ್ಲದಿದ್ದರೆ ಸಾಮಾನ್ಯವಾಗಿ ಆಯೋಜಕರಿಗೆ ಹೇಳಿದ ಟೈಮಿಗೆ ಹಾಜರಿದ್ದು ಮಂದಿಯನ್ನು ಸ್ವಾಗತಿಸುವ ಸೌಜನ್ಯವಾದರೂ ಇರುತ್ತದೆ ಎಂದುಕೊಂಡಿದ್ದೇನೆ.
ಅರ್ಧ ಗಂಟೆ ದಾಟಿದ ಮೇಲೂ ಮೈಕಿನಲ್ಲಿ ಕಮಕ್ ಕಿಮಕ್ ಏನೂ ಕೇಳಿಸದೆ ಕಿರಿ ಕಿರಿ ಅಂತನ್ನಿಸಲು ಶುರುವಾಗಿತ್ತು. ನಾನು ಹೊರಟೆ ಎಂದು ಜಯಂತನಿಗೆ ಮತ್ತು ಆಯೋಜಕರಿಗೆ ಮೆಸೇಜ್ ಕಳಿಸಿ ಕಾರ್ ಹೊರಡಿಸಿದೆ.
ಜಯಂತನಿಗೆ ಐದೂವರೆಗೆ ಬರಲು ಆಯೋಜಕರು ಹೇಳಿದ್ದರಂತೆ (ಅದೂ ಸಹ ದಾಟಿತ್ತು!) ಮತ್ತೆ ಉಳಿದವರಿಗೆ ಯಾಕೆ ಅರ್ಧ ಗಂಟೆ ಮೊದಲು? ಜನಪ್ರಿಯ ಸಾಂಸ್ಕೃತಿಕ ನಾಯಕ ಎಂಟ್ರಿ ತೆಗೆದುಕೊಳ್ಳುವಾಗ ಚಪ್ಪಾಳೆ ಸಿಳ್ಳೆಗಳ ಸಮೇತ ಸ್ವಾಗತಿಸಲಿ ಎಂದೆ?
ನಾವು ಮಹಾ ಪ್ರದರ್ಶನಪ್ರಿಯರು!
ಜನಪ್ರಿಯ ನಾಯಕರಲ್ಲ, ನಾಯಕಿಯರಿಗೆ ಸಹ ನಾನು ಕಾಯಲಾರೆ ಎಂದುಕೊಳ್ಳುತ್ತಾ ಕಾರನ್ನು ರಂಗಾಯಣದ ಗೇಟಿನಿಂದ ಹೊರಗೆ ಓಡಿಸಿದೆ. ರಸ್ತೆಯುದ್ದಕ್ಕೂ ಪೊಲೀಸರು! ಅರೆ, ಜಯಂತ ಇಷ್ಟು ಫೇಮಸ್ ಆಗಿದ್ದು ಯಾವಾಗ?
ಕೆ ಆರ್ ಎಸ್ ರಸ್ತೆ Saturday night madness ಕಳೆಯನ್ನು ಹೊತ್ತು ನರಕವಾಗಿತ್ತು. ಉದ್ದಕ್ಕೂ ಮಂದಿ ಅವರವರದ್ದೇ ಹುಚ್ಚಿನ ಕಾರಣಗಳಿಗೆ ಹೆಂಡದಂಗಡಿಗಳಿಗೆ, ಹೋಟೆಲ್ಲುಗಳಿಗೆ ದೇವಸ್ಥಾನಗಳಿಗೆ ಮುಗಿ ಬೀಳುತ್ತಿದ್ದದ್ದು ಕಂಡಿತ್ತು.
ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ.
‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಯೋಜಕರು ಈ ಅಭಿನಂದನೆ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದು ನಂತರ ತಿಳಿಯಿತು. ನಮ್ಮನ್ನ ಇಲ್ಲಿಗೆ ಕರೆದು ನೀವ್ಯಾಕ್ರಿ ಅಲ್ಲಿಗೆ ಹೋಗಿದ್ರಿ ಎಂದು ಕೇಳಿದೆ. ‘ಸಿಎಂ ಬರ್ತಾಯಿದ್ರು. ಆಮಂತ್ರಣ ಬಂದಿತ್ತು. ಬಿಡೊಕಾಗುತ್ಯೆ?’ ಎಂಬ ಸಮಜಾಯಿಷಿ ಬಂತು. ಇದ್ಯಾವ ಸೀಮೆಯ ವಿವೇಕವೋ ಎಂದು ಗೊಣಗುತ್ತಾ ಜಯಂತ ಅಲ್ಲ, ಯಾವ ಮಹಂತ ಕರೆದರೂ ವೀಕೆಂಡ್ ಟ್ರಾಫಿಕ್ ಎಂಬ ನರಕದೊಳಗೆ ಬೀಳಲು ಹೋಗಲ್ಲ ಎಂದು ಮನಸ್ಸಿನಲ್ಲಿ ಶಪಥ ಮಾಡಿಕೊಂಡೆ.


