ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ. ಮೈಮೇಲಿನ ಭಾರವನ್ನು ತಡೆಯಲಾರದೆ ಉಬ್ಬಸ ಬಂದ ಕಾರನ್ನು ರಸ್ತೆಗಿಳಿಸಲು ಫ್ರೆಂಚ್ ಯುವಕರ ಸಹಾಯ ಕೋರಿದ್ದಿದೆ.
ಡಾ. ವಿನತೆ ಶರ್ಮ ಬರೆಯವ “ಆಸ್ಟ್ರೇಲಿಯಾ ಪತ್ರ”

ಒಂದು ಕ್ಯಾಂಪ್ ಸೈಟ್ ಆರಿಸಿಕೊಳ್ಳುವುದರಲ್ಲಿ ಜಾಣ್ಮೆ, ತಾಳ್ಮೆಯಿದೆ. ಖರ್ಚು-ವೆಚ್ಚದ ಲೆಕ್ಕಾಚಾರ, ಕುಡಿಯುವ ನೀರಿನ ಸೌಲಭ್ಯ, ನಾವು ಭೇಟಿಕೊಡಲು ಇಚ್ಚಿಸುವ ಸ್ಥಳೀಯ ತಾಣಗಳು, ಅಥವಾ ಎಲ್ಲೂ ಹೋಗದೆ ಒಂದೇ ಕಡೆ ಇದ್ದುಕೊಂಡು ಅಲ್ಲಿಯದೇ ನಿಸರ್ಗ ಸೌಂದರ್ಯವನ್ನು ಅನುಭವಿಸುವ ಅವಕಾಶ ಮುಂತಾದವನ್ನು ನಾವು ಮೊದಲೇ ನಿರ್ಧರಿಸಬೇಕು. ಇವುಗಳಲ್ಲಿ ಸೇರುವ ಮುಖ್ಯಾಂಶಗಳು ಆ ಕ್ಯಾಂಪ್ ಸೈಟ್ ನಮ್ಮ ಕುಟುಂಬಕ್ಕೆ, ಮಕ್ಕಳಿಗೆ ಹೊಂದುತ್ತದೆಯೇ ಎಂಬುದು. ಆಸ್ಟ್ರೇಲಿಯನ್ ಮೂಲನಿವಾಸಿಗಳು, ವಸಾಹತುಶಾಹಿಗಳು ಮತ್ತು ವಲಸಿಗರ ‘ಬಹುಸಂಸ್ಕೃತಿಗಳ’ ಹೆಸರನ್ನು ಸದಾ ಜಪಿಸುವ ಆಸ್ಟ್ರೇಲಿಯಾದಲ್ಲಿ ಇದು ಬಹಳ ಮುಖ್ಯವಾದ ಅಂಶ. ಆಸ್ಟ್ರೇಲಿಯನ್ ಮೂಲನಿವಾಸಿಗಳು ಬೇಕೆಂದೇ ಹುಡುಕಿಕೊಂಡು ಕ್ಯಾಂಪಿಂಗ್ ಹೋಗುವುದಿಲ್ಲ. ಆಂಗ್ಲೋ-ಯುರೋಪಿಯನ್ ಸಂಸ್ಕೃತಿಗಳು ತಳವೂರುವ ಮುನ್ನ ಅವರು ಬದುಕುತ್ತಿದ್ದದ್ದು ಹೊರಾಂಗಣದಲ್ಲಿಯೇ! ಹಾಗಿದ್ದವರನ್ನು ‘ಇವರು ಮನುಷ್ಯರೇ ಅಲ್ಲ’ ಎಂದು ಹೇಳುತ್ತಾ ವಸಾಹತು ಸ್ಥಾಪಿಸಿ, ಮೂಲನಿವಾಸಿಗಳನ್ನು ಬಲವಂತವಾಗಿ ‘ಮನೆ’ ಗಳಲ್ಲಿ ಬದುಕುವಂತೆ ಮಾಡಿದ ಆಂಗ್ಲರು ತಾವು ಮಾತ್ರ ಕ್ಯಾಂಪಿಂಗ್ ಪ್ರಿಯರು!!

ಈ ವಿಷಯವನ್ನು ನನ್ನ ಗಮನಕ್ಕೆ ತಂದವರು ಒಬ್ಬ ಅಬೊರಿಜಿನಲ್ ಸಹೋದ್ಯೋಗಿ. ಒಮ್ಮೆ ‘ಈ ಬಾರಿ ಬೇಸಿಗೆ ರಜಕ್ಕೆ ಏನು ಮಾಡುತ್ತಿದ್ದೀಯಾ’ ಎಂದು ಕೇಳಿದವರಿಗೆ ನಾನು ಕ್ಯಾಂಪಿಂಗ್ ಹೋಗುವುದಿದೆ ಎಂದೆ. ಅದಕ್ಕವರು ನಕ್ಕರು. ಇದ್ಯಾಕೋ ಈ ನಗು ಸರಿಯಾಗಲಿಲ್ಲ ಎಂದುಕೊಂಡು ಯಾಕೆ ನಗುತ್ತಿದ್ದೀರ, ನೀವು ಕ್ಯಾಂಪಿಂಗ್ ಇಷ್ಟಪಡುವುದಿಲ್ಲವೇ ಹೇಗೆ, ಎಂದು ಕೇಳಿಯೇಬಿಟ್ಟೆ. ಅದಕ್ಕವರು “ವಿನತೆ, ನಾವು ಅಬೊರಿಜಿನಲ್ ಜನರು ಹೊರಾಂಗಣದಲ್ಲಿ ಇದ್ದರೆ ಪೊಲೀಸರು ಬಂದು ‘ಇವರು ಕುಡಿದು ಗಲಾಟೆ ಮಾಡುತ್ತಾರೆ, ಅನಾಗರಿಕರು, ಮನೆ-ವಸತಿಯಿಲ್ಲದೆ ಇಲ್ಲಿ ಬಂದು ಬಿದ್ದಿದ್ದಾರೆ’ ಎಂದೆಲ್ಲಾ ಕಾರಣ ಕೊಟ್ಟು ನಮ್ಮ ಜನರನ್ನು ಬಂಧಿಸಿ ಒಯ್ಯುತ್ತಾರೆ. ನಮ್ಮ ನೆಲದಲ್ಲಿ ಪ್ರಕೃತಿಯನ್ನು, ಹೊರಾಂಗಣವನ್ನು ಒಂದು ಖಾಸಗಿ ವಸ್ತುವನ್ನಾಗಿ ನೋಡುವ, ಅದನ್ನು ತನ್ನ ಐಷಾರಾಮಕ್ಕಾಗಿ ಬಳಸುವುದು ಈ ಬಿಳಿಯರು ಮಾತ್ರ, ಅದು ಅವರ ಹಕ್ಕಾಗಿದೆ. ಬಹುತೇಕ ಕ್ಯಾಂಪ್ ಸೈಟ್‌ಗಳಲ್ಲಿ ನಮ್ಮ ಜನರಿಗೆ ಪ್ರವೇಶವಿಲ್ಲ,” ಎಂದು ಮತ್ತೊಮ್ಮೆ ನಕ್ಕರು. ಕಕ್ಕಾಬಿಕ್ಕಿಯಾಗಿ ಅವರನ್ನು ನೋಡುತ್ತಾ ನಿಂತ ನನಗೆನಿಸಿದ್ದು ಇಂತಹುದೇ ಪರಿಸ್ಥಿತಿ ಇಂದಿಗೂ ಕೂಡ ನನ್ನ ಭಾರತದಲ್ಲಿ ಇದೆಯಲ್ಲವೇ. ಮಹಾತ್ಮಾ ಗಾಂಧಿ ಬಂದುಹೋದರೂ ಕೆಲವೆಡೆ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ, ಅಲ್ಲವೇ. ನನ್ನ ಸಹೋದ್ಯೋಗಿ ಹೇಳಿದಂತೆಯೇ ನಾನು ಹೋಗುವ ಬಹುತೇಕ ಕ್ಯಾಂಪ್ ಸೈಟ್‌ಗಳಲ್ಲಿ ಬಿಳಿಯರೇ ಕಾಣುವುದು. ಅಪರೂಪಕ್ಕೆ ನನ್ನಂಥ ಕಂದು ಚರ್ಮದವರು ಒಂದೆರೆಡು ದಿನಗಳ ಮಟ್ಟಿಗೆ ಬಂದು ಹೋಗುತ್ತಾರೆ. ಇವತ್ತಿಗೂ ಕೂಡ ಕ್ಯಾಂಪ್ ಸೈಟ್‌ಗಳಲ್ಲಿ ಕಂದು ಬಣ್ಣದ ಜನರು ಕಂಡರೆ ನನಗೇನೋ ಸಡಗರ! ಇತ್ತೀಚೆಗೆ ಭಾರತೀಯರು, ಚೀನೀಯರು ಕ್ಯಾಂಪಿಂಗ್ ಹೋಗುವುದು ಹೆಚ್ಚುತ್ತಿದೆ ಎಂದು ನನ್ನ ಇಂಗ್ಲಿಷ್ ಗೆಳತಿ ಹೇಳಿದಾಗ ಖುಷಿಯಾಯ್ತು.

ಕ್ಯಾಂಪ್ ಸೈಟ್ ಆರಿಸಿಕೊಂಡ ಮೇಲೆ ಅಲ್ಲಿನ ಸಿಬ್ಬಂದಿಯೊಡನೆ ಮಾತನಾಡಿ ನಾವು ನಮಗೆ ಅಗತ್ಯವಿರುವ ಗಾತ್ರದ ಜಾಗವನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲಿ ನಮ್ಮ ಆಯ್ಕೆಯ ಅಗತ್ಯಗಳನ್ನೆ ಉದಾಹರಣೆಯನ್ನಾಗಿ ಹೇಳುತ್ತೀನಿ. ಕಳೆದ ಇಪ್ಪತ್ತು ವರ್ಷಗಳಲ್ಲಿ ಮಕ್ಕಳು ಬೆಳೆಯುತ್ತಿದ್ದಂತೆ ನಮ್ಮಲ್ಲಿನ ಟೆಂಟ್ ಗಾತ್ರವು ಕ್ರಮೇಣ ಹಿಗ್ಗಿದೆ. ಎರಡು-ಮನುಷ್ಯ ಗಾತ್ರದ ಪುಟಾಣಿ ಟೆಂಟ್ ಜೊತೆಗೆ ಜೀಬೀ ಮತ್ತು ನಾನು ಕ್ಯಾಂಪಿಂಗ್ ಪಯಣಗಳನ್ನಾರಂಭಿಸಿದ್ದು. ನಂತರದ ದಿನಗಳಲ್ಲಿ ನಾಲ್ಕು-ಮನುಷ್ಯ ಗಾತ್ರ, ಎಂಟು ಮನುಷ್ಯ ಗಾತ್ರದ ಫ್ಯಾಮಿಲಿ ಟೆಂಟ್‌ಗಳು ಮತ್ತು ಒಬ್ಬರೇ ಮಲಗುವ bivvi ಸೇರಿಕೊಂಡಿವೆ. ಟೆಂಟ್ ಜೊತೆಗೆ ಹಲವಾರು ಖಂಡಗಳಲ್ಲಿ ಸುತ್ತುತ್ತಿದ್ದಾಗ ಅಲ್ಲಿನ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಕೊಂಡು ಬಳಸಿದ ಟಾರ್ಟ್‌ಗಳು (ಮೇಲ್ಹೊದಿಕೆ) ಸೇರಿಕೊಂಡಿವೆ. ಆಸ್ಟ್ರೇಲಿಯದಲ್ಲಿ ಬೇಸಿಗೆಯ ಕಡುಬಿಸಿಲಿನಿಂದ ರಕ್ಷಣೆ ಬೇಕು. ಬ್ರಿಟನ್ನಿನಲ್ಲಿ ಸದಾ ಸುರಿಯುವ ಮಳೆಯ ಕಾರಣವಾಗಿ ನೀರು ತಾಕದ (waterproof) ಟೆಂಟ್, ಟಾರ್ಪ್‌ಗಳು ಬೇಕು. ಕೆನಡಾದ ಚಳಿ ಮತ್ತು ಯೂರೋಪ್ ದೇಶಗಳ ಚಳಿ-ಬಿಸಿಲು-ಗಾಳಿ-ಮಳೆಗಳಿಗೆ ತಕ್ಕಂತೆ ನಮ್ಮ ಟೆಂಟ್ ವ್ಯವಸ್ಥೆ ಇರಬೇಕು. ಟೆಂಟ್ ಗೂಟಗಳನ್ನು ಸ್ಥಾಪಿಸುವ ನೆಲವು ನಮ್ಮ ಸುತ್ತಿಗೆಗೆ ಹಿತವಾಗಬೇಕು. ಯಾವುದೇ ಕಾರಣದಿಂದ ನಮ್ಮ ಟೆಂಟ್ ವಾಸದ ಸುಖ, ಆನಂದಗಳಿಗೆ ಮಣ್ಣು, ಕೊಚ್ಚೆ, ರಾಡಿಗಳಿಂದ ಭಂಗ ಬರಬಾರದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಜಾಗ-ಆಯ್ಕೆಯ ನಿರ್ಧಾರವಾಗಬೇಕು.

“ವಿನತೆ, ನಾವು ಅಬೊರಿಜಿನಲ್ ಜನರು ಹೊರಾಂಗಣದಲ್ಲಿ ಇದ್ದರೆ ಪೊಲೀಸರು ಬಂದು ‘ಇವರು ಕುಡಿದು ಗಲಾಟೆ ಮಾಡುತ್ತಾರೆ, ಅನಾಗರಿಕರು, ಮನೆ-ವಸತಿಯಿಲ್ಲದೆ ಇಲ್ಲಿ ಬಂದು ಬಿದ್ದಿದ್ದಾರೆ’ ಎಂದೆಲ್ಲಾ ಕಾರಣ ಕೊಟ್ಟು ನಮ್ಮ ಜನರನ್ನು ಬಂಧಿಸಿ ಒಯ್ಯುತ್ತಾರೆ. ನಮ್ಮ ನೆಲದಲ್ಲಿ ಪ್ರಕೃತಿಯನ್ನು, ಹೊರಾಂಗಣವನ್ನು ಒಂದು ಖಾಸಗಿ ವಸ್ತುವನ್ನಾಗಿ ನೋಡುವ, ಅದನ್ನು ತನ್ನ ಐಷಾರಾಮಕ್ಕಾಗಿ ಬಳಸುವುದು ಈ ಬಿಳಿಯರು ಮಾತ್ರ, ಅದು ಅವರ ಹಕ್ಕಾಗಿದೆ. ಬಹುತೇಕ ಕ್ಯಾಂಪ್ ಸೈಟ್‌ಗಳಲ್ಲಿ ನಮ್ಮ ಜನರಿಗೆ ಪ್ರವೇಶವಿಲ್ಲ,” ಎಂದು ಮತ್ತೊಮ್ಮೆ ನಕ್ಕರು.

ಟೆಂಟ್ ಸ್ಥಾಪನೆಗೆ ನಾವು ಯಾವಾಗಲೂ ಮರಗಳಿರುವ ಜಾಗವನ್ನು ಆರಿಸಿಕೊಳ್ಳುತ್ತೀವಿ. ಮುಖ್ಯ ಕಾರಣ ನಮ್ಮ ಅಡುಗೆ ಮಾಡುವ ಮತ್ತು ನೆಲದ ಮೇಲೆ ಕೂರುವ ಸ್ಥಳವು ಬಿಸಿಲು-ಮಳೆಯಿಂದ ರಕ್ಷಿತವಾಗಿರಬೇಕು. ಅಲ್ಲದೆ ನಾವು- ಬೆಂಗಳೂರಿನವಳಾದ ನಾನು ಮತ್ತು ಬ್ರಿಟನ್ನಿಗರಾದ ಜೀಬೀ- ಅತೀವ ಬಿಸಿಲನ್ನು ತಡೆದುಕೊಳ್ಳಲಾರೆವು. ಹೀಗಾಗಿ ನಮ್ಮೊಡನೆ ವಿವಿಧ ಟಾರ್ಪ್-ಗಳು ಇದ್ದೇಇರುತ್ತವೆ. ಮರಗಳಿದ್ದರೆ ಟಾರ್ಪ್‌ಗಳನ್ನು ಕಟ್ಟಲು ಸುಲಭ, ನೆರಳೂ ಕೂಡ ದ್ವಿಗುಣವಾಗುತ್ತದೆ. ನಮ್ಮ ಜೀಬೀ ಟೆಂಟ್ ಸ್ಥಾಪಿಸುವುದರಲ್ಲಿ ಮತ್ತು ಟಾರ್ಪ್ ಕಟ್ಟುವುದರಲ್ಲಿ ನಿಷ್ಣಾತ, ಬಲು ಜಾಣ. ನಾನು ಸಣ್ಣ ಗಾತ್ರದ ಟೆಂಟ್ ಸ್ಥಾಪಿಸಿ, ಅಲ್ಲಲ್ಲಿ ಟಾರ್ಪ್ ಕಟ್ಟಬಲ್ಲೆ. ಆದರೆ ನಮಗೆ ಸಿಕ್ಕುವ ಟೆಂಟ್ ಜಾಗವನ್ನು ಅವಲೋಕಿಸಿ, ದೊಡ್ಡ ಫ್ಯಾಮಿಲಿ ಟೆಂಟ್ ಸ್ಥಾಪನೆ ಮತ್ತು ಅದಕ್ಕನುಗುಣವಾಗಿ ಇರುವ ಹಗ್ಗಗಳನ್ನು ಬಳಸಿ ನಾಲ್ಕಾರು ಟಾರ್ಪ್‌ಗಳನ್ನು ಒಂದಕ್ಕೊಂದು ಹೊಂದಿಕೊಂಡಂತೆ ಜೋಡಿಸುವುದಕ್ಕೆ ಜೀಬೀಯ ಅಗಾಧ ಅನುಭವ, ಕೌಶಲ್ಯ ಮತ್ತು ತಾಳ್ಮೆ ನಮಗೆ ಬೇಕೇಬೇಕು. ಟೆಂಟ್ ಕಟ್ಟುವುದೆಂದರೆ ಅವರಿಗೂ ಕೂಡ ಅದೊಂದು ಧ್ಯಾನವೂ, ಥೆರಪಿಯೂ ಆಗಿಬಿಡುತ್ತದೆ. ಟೆಂಟ್ ಸ್ಥಾಪಿಸುವುದಕ್ಕೆ ನಾವು ಅಷ್ಟಿಷ್ಟು ಸಹಾಯ ಮಾಡುತ್ತಾ ನಂತರ ಜೀಬೀ ಹಗ್ಗಗಳನ್ನು ಬಳಸಿ ವಿವಿಧ ರೀತಿಯ knots-ಗಂಟುಗಳನ್ನು ಹಾಕುತ್ತಾ ಟಾರ್ಪ್‌ಗಳನ್ನು ಕಟ್ಟಲಾರಂಭಿಸುವಾಗ ಮಾತ್ರ ನಾನು ಅವರ ಪಕ್ಕದಲ್ಲಿ ಹೋಗಿ ನಿಲ್ಲುತ್ತೀನಿ. ಅವರು ಹಾಕುವ bowline knot, ಡಬಲ್ figure of eight knot, square knot ಮುಂತಾದವುಗಳನ್ನು ಗಮನಿಸುವುದಕ್ಕಾಗಿ. ನನಗೆ clove hitch, timber hitch, figure of eight knot, square knot ಮುಂತಾದ ಗಂಟುಗಳನ್ನು ಹಾಕಲು ಬಂದರೂ ಕೂಡ ಅವನ್ನು ಒಂದಕ್ಕೊಂದು ಹೊಂದುವಂತೆ ಜೋಡಿಸಿ ಹಗ್ಗಗಳನ್ನು ಪರಸ್ಪರ ಪೋಣಿಸಿ, ಆಗಾಗ ಅವನ್ನು ಸಡಿಲಿಸಿ, ಬಿಗಿದು ಬಂಧಿಸಿ ಬೇಕಾದ ಎತ್ತರ, ವಾಲುವಿಕೆ, ಗಾಳಿ ತಡೆಗಟ್ಟುವಿಕೆ ಇತ್ಯಾದಿಗಳನ್ನು ನಮ್ಮ ಅಗತ್ಯಕ್ಕೆ ಬೇಕಾಗುವ ಹಾಗೆ ಟಾರ್ಪ್ ಕಟ್ಟುವ ಕಲೆ ಇನ್ನೂ ಕೈಗೂಡಿಲ್ಲ. ಹಾಗಾಗಿ ನಮ್ಮ ಕ್ಯಾಂಪಿಂಗ್ ಸಾಹಸಗಳಿಗೆ ಜೀಬೀ ನಿರ್ಮಾಪಕರಾದರೆ ನಾನು ನಿರ್ದೇಶಕಿ. ಈಗೀಗ ನನ್ನ ಸ್ಥಾನಕ್ಕಾಗಿ ಮಕ್ಕಳು ಪೈಪೋಟಿ ಹೂಡುತ್ತಿರುವುದು ನಾನು ಹುಬ್ಬೇರಿಸುತ್ತಿರುವುದು ನಡೆದಿದೆ. ‘Knots ಕಲೆ ಕಲಿತವರು ಮಾತ್ರ ಕ್ಯಾಂಪಿಂಗ್ ನಾಯಕ ಸ್ಥಾನಕ್ಕೆ ಅರ್ಹರು’ ಎಂಬ ನನ್ನ ರೂಲ್ ಇನ್ನೂ ಚಾಲ್ತಿಯಲ್ಲಿದೆ. ಜೀವನದಲ್ಲಿ ಸಂಬಂಧಗಳನ್ನು ಜೋಡಿಸಿ ಕಟ್ಟುವುದು, ಪೋಣಿಸುವುದು, ಬಂಧಿಸುವುದು, ಬೇಕಾದಾಗ ಅವಕ್ಕೆ ನಾವು, ನಮಗೆ ಅವು ಹೊಂದುವಂತೆ ರೂಢಿಸಿಕೊಳ್ಳುವುದು ಮುಖ್ಯ ತಾನೇ.

ಇನ್ನು ಕ್ಯಾಂಪಿಂಗ್ ದಿನಚರಿ ಹೀಗಿರುತ್ತದೆ. ಟೆಂಟ್ ಇರುವ ನಾವು ಕ್ಯಾನ್‌ಗಳಲ್ಲಿ ಕುಡಿಯುವ ನೀರು ಶೇಖರಣೆ ಮಾಡಿಕೊಳ್ಳಬೇಕು. ಕ್ಯಾಂಪ್ ಸೈಟ್‌ನವರು ಅನುಮತಿ ಕೊಟ್ಟರೆ (ಅವರಿಗೂ ಲೈಸನ್ಸ್ ಇರಬೇಕು) ಕಟ್ಟಿಗೆ ಒಲೆ (fire pit), ನಮ್ಮದೇ ಆದ ಕಲ್ಲಿದ್ದಲಿನ ಒಲೆ, ಗ್ಯಾಸ್ ಕುಕ್ಕರ್‌ಗಳನ್ನು ಬಳಸುವುದು. ಅಡುಗೆಮನೆ ಅಂದರೆ ಕ್ಯಾಂಪಿಂಗ್ ಟೇಬಲ್ ಮೇಲೆ ಗ್ಯಾಸ್ ಸ್ಟೋವ್ ಇಟ್ಟು, ಟೇಬಲ್ಲಿಗೆ ಜೋಡಿಸುವ ಅಡುಗೆ ಪದಾರ್ಥಗಳ ಶೆಲ್ಫ್, ತಟ್ಟೆ-ಲೋಟ, ಪಾತ್ರೆಗಳನ್ನು ಇಡಲು ಕ್ಯಾಂಪಿಂಗ್ ಸಿಂಕ್ ಹೀಗೆ ಚಿಕ್ಕಚೊಕ್ಕವಾಗಿ ಎಲ್ಲದರ ಜೋಡಣೆ. ಟೆಂಟ್ ಹೊರಗಡೆ ನಾವು ಕೂರಲು ಮಡಚುವ ಕ್ಯಾಂಪಿಂಗ್ ಕುರ್ಚಿಗಳು ಮತ್ತು ನೆಲಹಾಸುಗಳು ಇಲ್ಲವೇ ಅಲ್ಲಿಯೂ ಕೂಡ ಟಾರ್ಪ್ ಬಳಸುವಿಕೆ. ಟೆಂಟ್ ಒಳಗಡೆ ಮುಂಭಾಗದಲ್ಲಿ ಬಲಗಡೆ ಅಡುಗೆ-ಆಹಾರ ಪದಾರ್ಥಗಳು; ಎಡಗಡೆ ಟಾರ್ಚ್, ಫಸ್ಟ್ ಏಡ್ ಚೀಲ, ಚಪ್ಪಲಿಗಳು, ಸುತ್ತಿಗೆ, ಟೆಂಟ್ ಪೆಗ್ಸ್, ಹಗ್ಗ ಮತ್ತಿತರ ಟೆಂಟ್ ಸ್ಥಾಪನಾ ಸಾಧನಗಳು. ಟೆಂಟ್ ಮಧ್ಯದ ಕೊಠಡಿ ನಮ್ಮ ಬಟ್ಟೆ, ಚಾಪೆ ಇತ್ಯಾದಿಗಳಿಗಾಗಿ. ಕಡೆಯ ಭಾಗದಲ್ಲಿ ಮಲಗುವ ಕೊಠಡಿಗಳು – ಇವುಗಳಲ್ಲಿ ಕ್ಯಾಂಪಿಂಗ್ ಮ್ಯಾಟ್, ಸ್ಲೀಪಿಂಗ್ ಬ್ಯಾಗ್ ಮುಂತಾದವು. ಪ್ರತಿವರ್ಷವೂ ಇವೆಲ್ಲವನ್ನೂ ಇದೇ ಅನುಕ್ರಮದಲ್ಲಿ ಜೋಡಿಸುವುದು-ಬಳಸುವುದು ಮತ್ತು ಅಗತ್ಯಕ್ಕೆ ತಕ್ಕಂತೆ ಕಡಿಮೆ ಮಾಡುವುದರಿಂದ ಕಾಲಕ್ರಮೇಣ ನಮಗೆ ಕ್ಯಾಂಪಿಂಗ್ ಸಿದ್ಧತೆಯು ಸುಲಭವಾಗಿದೆ.

ಕ್ಯಾಂಪ್ ಸ್ಥಾಪನೆ ಮತ್ತು ಅದರ ಬಿಚ್ಚುವಿಕೆಗೆ ಈ ವರ್ಷ ನಾವು ಎರಡು ಗಂಟೆಗಳ ಕಾಲ ಮಾತ್ರ ತೆಗೆದುಕೊಂಡಿದ್ದು. ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಭಾರಿ ಗಾತ್ರದ ಟಾರ್ಪ್ ಇದ್ದ ಕಾಲದಲ್ಲಿ, ಮಕ್ಕಳು ಇನ್ನೂ ಚಿಕ್ಕವರಾಗಿದ್ದಾಗ, ನಮ್ಮ ಕಾರಲ್ಲಿ ಎಲ್ಲವನ್ನೂ ತುರುಕುತ್ತಾ, ಅದು ಸಾಕಾಗದೆ ಟ್ರೈಲೆರ್‌ನಲ್ಲಿ ಕೂಡ ಒಂದಷ್ಟು ಸೇರಿಸಿಕೊಂಡು ಜೊತೆಗೆ ನಮ್ಮ ನಾಲ್ಕು ಸೈಕಲ್‌ಗಳು ಮತ್ತು canoe ಕೂಡ ಒಯ್ಯುತ್ತಿದ್ದುದ್ದನ್ನು ನೆನಪಿಸಿಕೊಂಡು ಎಲಾ ಎಲಾ ಹೆಣ್ಣೇ ಎಂದು ನಗು ಬರುತ್ತಿದೆ.

ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ. ಮೈಮೇಲಿನ ಭಾರವನ್ನು ತಡೆಯಲಾರದೆ ಉಬ್ಬಸ ಬಂದ ಕಾರನ್ನು ರಸ್ತೆಗಿಳಿಸಲು ಫ್ರೆಂಚ್ ಯುವಕರ ಸಹಾಯ ಕೋರಿದ್ದಿದೆ. Pyrenees ಪರ್ವತ ವಲಯವನ್ನು ಹೊಕ್ಕು, ಆರೋಗ್ಯ ಕೆಟ್ಟು ಮೈಮೇಲಿನ ಚೀಲವು ಹೊರೆಯಾಗಿ ಸ್ಕೂಟರಿನಲ್ಲಿ ಹೋಗುತ್ತಿದ್ದ ಹುಡುಗಿಯನ್ನು ಅಂಗಲಾಚಿದರೆ ‘ನಿನಗೆ ಲಿಫ್ಟ್ ಕೊಡುವುದಿಲ್ಲ’ ಎಂದು ಹಂಗಿಸಿದ ಸ್ಪ್ಯಾನಿಷ್ ಹುಡುಗಿಗೆ ಆಸ್ಟ್ರೇಲಿಯನ್ ಐವತ್ತು ಡಾಲರಿನ ನೋಟ್ ಎತ್ತಿ ಹಿಡಿದು ತೋರಿಸಿದ್ದಿದೆ.

ಇಟಲಿಯ ಕ್ಯಾಂಪ್ ಸೈಟ್ ಕೆಫೆಯಲ್ಲಿ ನನ್ನ ಮಕ್ಕಳು ಭಾರಿ ಇಷ್ಟಪಟ್ಟು ಸವಿದ ಪಾಸ್ತಾವನ್ನು ಹೊಗಳಿ ಅಲ್ಲಿನ ಮಾಲೀಕಳಿಗೆ ಧನ್ಯವಾದ ಹೇಳಿದಾಗ ಅವಳು ಇಟಾಲಿಯನ್ ಭಾಷೆಯಲ್ಲಿ ಅದೇನೋ ಹೇಳಿದ್ದು ಅರ್ಥವಾಗದೆ ಇಬ್ಬರೂ ನಕ್ಕಿದ್ದಿದೆ. ಕೆನಡಾದ ಕ್ಯಾಂಪ್ ಸೈಟ್‌ನಲ್ಲಿ ಕಂಡ ಕಾಡುಹಣ್ಣು raspberry ರುಚಿ ಹತ್ತಿಸಿಕೊಂಡು ಇನ್ನೂ ತಿನ್ನಬೇಕೆಂದು ಮೈಲಿಗಟ್ಟಲೆ ಸುತ್ತಿದ್ದು ಉಂಟು. ನಮಗೆ ಪ್ರಿಯವಾದ ಆಸ್ಟ್ರೇಲಿಯನ್ ಕ್ಯಾಂಪ್ ಸೈಟ್ ಒಂದರಲ್ಲಿ ಒಮ್ಮೆ ಧಡಕ್ಕೆಂದು ಸುರಿದ ಮಳೆಯನ್ನು ಆನಂದಿಸುತ್ತಾ ನಾನು, ಮಕ್ಕಳು ಕುಣಿದಾಡಿದ್ದಿದೆ. ರಾಣಿರಾಜ್ಯದ ರೇನ್ಬೋ ಬೀಚ್ ಪ್ರದೇಶದಲ್ಲಿ ಕಂಡರಿಯದ ಸೂಕ್ಷ್ಮ sand fly, ಸೊಳ್ಳೆ, horsefly ಮುಂತಾದವುಗಳ ಹಾವಳಿಗೆ ಸಿಲುಕಿ ತಲೆಕೂದಲಿಂದ ಹಿಡಿದು ಪಾದಗಳವರೆಗೂ ಕೆರೆದುಕೊಳ್ಳುತ್ತಾ ಹಿಡಿಶಾಪ ಹಾಕಿದ್ದಿದೆ. ನೆನಪುಗಳ ಬುತ್ತಿ ಬಿಚ್ಚಿದರೆ ಅದರಲ್ಲಿ ಸಿಕ್ಕುವುದು ಸಿಹಿ, ಕಹಿ, ಒಗರು, ಹುಳಿ, ಖಾರ, ಎಲ್ಲವೂ… ಪದೇಪದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವಂತೆ ಮಾಡುವುದು ನಮ್ಮ ಕ್ಯಾಂಪಿಂಗ್ ಅನುಭವಗಳು.