Advertisement
ಆಸ್ಟ್ರೇಲಿಯಾದಲ್ಲಿ ವಸಂತ: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ವಸಂತ: ವಿನತೆ ಶರ್ಮ ಅಂಕಣ

ಸ್ವಲ್ಪಮಟ್ಟಿಗೆ ಓಹೊ ಆಹಾ ಎನ್ನುವಂತೆ ಮಾಡುವುದು ಒನ್ ನೇಶನ್ ರಾಜಕೀಯ ಪಕ್ಷದವರು ಕೊಡುವ ಅಸಂಬದ್ಧ ಹೇಳಿಕೆಗಳು. ಆದರೂ ಇವು ಅನೇಕರಿಗೆ, ವಿಶೇಷವಾಗಿ ಭಾರತೀಯರಿಗೆ, ತಲೆಬಿಸಿ ಮಾಡುತ್ತಿದೆ. ಇದನ್ನು ಮೀರಿಸಿದ, ಸ್ವಲ್ಪ ಆತಂಕ ಹುಟ್ಟಿಸಿರುವುದು ಏನೆಂದರೆ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರಕಾರವು ವಲಸೆ-ಸಂಬಂಧಿತ ವೀಸಾ ವಿಷಯದಲ್ಲಿ ಗುರುತರ ಬದಲಾವಣೆಗಳನ್ನು ಘೋಷಿಸಿದೆ. ಇದು ಭಾರತೀಯರಿಗೆ ಇನ್ನೂ ತಲೆಬಿಸಿ ತಂದಿದೆ. ಯಾಕೆಂದರೆ, ಆಸ್ಟ್ರೇಲಿಯಾದ ವಲಸೆಗಾರ ಸಂಖ್ಯೆ ಪಟ್ಟಿಯಲ್ಲಿ ಭಾರತೀಯರು ಮೊದಲನೆ ಸ್ಥಾನದಲ್ಲಿದ್ದಾರೆ. ವಿದ್ಯಾರ್ಥಿಗಳ ಸ್ಟಡಿ ವೀಸಾ, ತಾತ್ಕಾಲಿಕ ವೀಸಾ ವಿಧಗಳು, ಕುಟುಂಬಸ್ಥರ ವೀಸಾ ಮುಂತಾದವಕ್ಕೆ ಪೆಟ್ಟು ಬಿದ್ದಿದೆ.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಕಳೆದೆರಡು ತಿಂಗಳುಗಳಲ್ಲಿ ಆಸ್ಟ್ರೇಲಿಯಾದಲ್ಲಿ ಅದೆಷ್ಟು ವಿಷಯಗಳು ನಡೆದಿವೆ. ಜನಗಣತಿ ಆಯ್ತು. ಆಸ್ಟ್ರೇಲಿಯನ್ನರು ಫ್ಲೂ ಎಂದು ನರಳಿದರು, ಮಲಗಿದರು, ಅದು ಇನ್ನೂ ಮುಂದುವರೆದಿದೆ. ಇರಾನ್-ಅಮೆರಿಕಾ ಯುದ್ಧದ ಕಾರಣವಾಗಿ ತಾತ್ಕಾಲಿಕವಾಗಿ ಕೇಂದ್ರ ಸರಕಾರವು ಕೊಟ್ಟಿದ್ದ ಇಂಧನ ರಿಯಾಯಿತಿ ಅವಧಿ ಮುಗಿದು ಪುನಃ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ನಿತ್ಯಜೀವನದ ಕಾಸ್ಟ್ ಆಫ್ ಲಿವಿಂಗ್ ಎಲ್ಲರನ್ನೂ ಕಾಡುತ್ತಿದೆ. ಇದೆ ಮುಖ್ಯ ಕಾರಣವಾಗಿ ರಾಜಕೀಯ ಪಕ್ಷಗಳು ಕಿತ್ತಾಡುತ್ತಿವೆ. ಆದರೆ ಆಸ್ಟ್ರೇಲಿಯಾದಲ್ಲಿ ಈ ಕಿತ್ತಾಡುವಿಕೆಯೂ ಸಪ್ಪೆ. ಅದು ಮೈನವಿರೇಳಿಸುವುದಿಲ್ಲ.

ಸ್ವಲ್ಪಮಟ್ಟಿಗೆ ಓಹೊ ಆಹಾ ಎನ್ನುವಂತೆ ಮಾಡುವುದು ಒನ್ ನೇಶನ್ ರಾಜಕೀಯ ಪಕ್ಷದವರು ಕೊಡುವ ಅಸಂಬದ್ಧ ಹೇಳಿಕೆಗಳು. ಆದರೂ ಇವು ಅನೇಕರಿಗೆ, ವಿಶೇಷವಾಗಿ ಭಾರತೀಯರಿಗೆ, ತಲೆಬಿಸಿ ಮಾಡುತ್ತಿದೆ. ಇದನ್ನು ಮೀರಿಸಿದ, ಸ್ವಲ್ಪ ಆತಂಕ ಹುಟ್ಟಿಸಿರುವುದು ಏನೆಂದರೆ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರಕಾರವು ವಲಸೆ-ಸಂಬಂಧಿತ ವೀಸಾ ವಿಷಯದಲ್ಲಿ ಗುರುತರ ಬದಲಾವಣೆಗಳನ್ನು ಘೋಷಿಸಿದೆ. ಇದು ಭಾರತೀಯರಿಗೆ ಇನ್ನೂ ತಲೆಬಿಸಿ ತಂದಿದೆ. ಯಾಕೆಂದರೆ, ಆಸ್ಟ್ರೇಲಿಯಾದ ವಲಸೆಗಾರ ಸಂಖ್ಯೆ ಪಟ್ಟಿಯಲ್ಲಿ ಭಾರತೀಯರು ಮೊದಲನೆ ಸ್ಥಾನದಲ್ಲಿದ್ದಾರೆ. ವಿದ್ಯಾರ್ಥಿಗಳ ಸ್ಟಡಿ ವೀಸಾ, ತಾತ್ಕಾಲಿಕ ವೀಸಾ ವಿಧಗಳು, ಕುಟುಂಬಸ್ಥರ ವೀಸಾ ಮುಂತಾದವಕ್ಕೆ ಪೆಟ್ಟು ಬಿದ್ದಿದೆ.

ವಿಷಯ ಬದಲಾವಣೆ ಮಾಡಿ, ಈಗ ಸ್ವಲ್ಪ ನಾನಿರುವ ಬ್ರಿಸ್ಬೇನ್ ನಗರ, ಅದಿರುವ ರಾಣಿರಾಜ್ಯದ (Queensland) ವಿಷಯ ಹೇಳುತ್ತೀನಿ. ನಮಗೆಲ್ಲ ಬೇಕಿರುವ ಮಳೆ ಕೈಕೊಟ್ಟು, ಮೂರು ತಿಂಗಳಿಂದ ಗಿಡಮರಗಳು ಒಣಗುತ್ತಿದ್ದವು. ಮನೆಗಳಲ್ಲಿರುವ ಮಳೆನೀರು ಟ್ಯಾಂಕ್ ಪೂರ್ತಿ ಖಾಲಿ. ನಾವೆಲ್ಲ ಕಂಗಾಲಾಗಿ ಎಲ್ ನೀನೊ (El Nino) ಎಲ್ಲಿದ್ದೀಯ ನೀನು, ಬಾ ಬೇಗ, ಈ ಬರವನ್ನು ನೀಗಿಸು ಎಂದು ಕೇಳಿಕೊಳ್ಳುತ್ತಿದ್ದದ್ದನ್ನು ನೋಡಿ ನಕ್ಕು ಈಗಷ್ಟೇ El Nino ಕಾಲಿಟ್ಟಿದೆ. ಭೂಮಿ ತಂಪಾಗಿದೆ. ಮನಸ್ಸಿಗೆ ಹಿತವಾಗಿದೆ.

ಬ್ರಿಸ್ಬೇನ್ ನಗರದ ಪಶ್ಚಿಮದಲ್ಲಿ Toowoomba ಎಂಬ ಪಟ್ಟಣವಿದೆ. ಅದಕ್ಕೆ ಇತ್ತೀಚೆಗೆ ‘ನಗರ’ ಅನ್ನೋ ಸ್ಥಾನ ಸಿಕ್ಕಿದೆ. ಅಂದರೆ ಅಲ್ಲಿಯ ಜನಸಂಖ್ಯೆ ಹೆಚ್ಚಾಗಿ, ಬೇಕಿರುವ ಸೇವೆ-ಸೌಲಭ್ಯಗಳು ವಿಸ್ತರಿಸಿವೆ. ಕೇವಲ ಹತ್ತು-ಹದಿನೈದು ವರ್ಷಗಳ ಹಿಂದೆ ಇದು ಚಿಕ್ಕದೊಂದು ಕಂಟ್ರಿ ಟೌನ್ ಆಗಿತ್ತು. ಬೆಟ್ಟಗಳ ಮೇಲೆ ಪಟ್ಟಣವನ್ನು ಸ್ಥಾಪಿಸಿ ಸುತ್ತಲೂ ಇರುವ ಕಣಿವೆಗಳಲ್ಲಿ ವ್ಯವಸಾಯ, ತೋಟಗಾರಿಕೆ, ಹೈನುಗಾರಿಕೆ ಮುಂತಾದ ಚಟುವಟಿಕೆಗಳಿದ್ದವು. Toowoomba ಅನ್ನೋ ಹೆಸರಿನ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಈ ಪ್ರದೇಶದ ಸಾಂಪ್ರದಾಯಿಕ ಅಬೊರಿಜಿನಲ್ ಜನರು ಜಾಗೆರಾ (Jagera), ಜಿಯಬಲ್ (Giabal) ಮತ್ತು ಜರೊವೆರ್ (Jarowair) ಕುಲಗಳಿಗೆ ಸೇರಿದವರು. ಅವರ ಒಂದು ಭಾಷೆಯಲ್ಲಿ ಈ ಪ್ರದೇಶವನ್ನು Tawampa ಅಂದರೆ ಜೌಗುತಾಣವೆಂದು (swamp) ಗುರುತಿಸಿದ್ದರು. ಇನ್ನೊಂದು ಅಭಿಪ್ರಾಯದಲ್ಲಿ ಈ ಬೆಟ್ಟ ಕಣಿವೆಗಳಲ್ಲಿ ನೀರಿನ ಸೆಲೆಗಳಿವೆ ಅನ್ನೋ ಅರ್ಥ ಬರುವ Woomba Woomba ಅನ್ನೋ ಪದಬಳಕೆಯಿತ್ತು. ಇನ್ನೊಂದು ಕಥೆಯಿರುವುದು Toowoom ಅಂದರೆ ಇಲ್ಲಿ ಸಿಗುತ್ತಿದ್ದ ಒಂದು ರೀತಿಯ ಹಣ್ಣು, ಅದರಿಂದ ವಸಾಹತುಶಾಹಿಗಳು Toowoomba ಅನ್ನೋ ಹೆಸರನ್ನು ಬಳಕೆಗೆ ತಂದರು.

ಈ ಸ್ಥಳ-ಹೆಸರು ಕಥೆಗಳಿಗೆ ಹೊಸ ಅರ್ಥಗಳು, ಅವೊಡನೆ ನಮ್ಮದೆ ಆದ ಸ್ವ-ಕಥನಗಳು ಹುಟ್ಟುವುದು ನಾವು Toowoomba ನಗರಕ್ಕೆ ಹೋಗಿ ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ನಿಂತಾಗ. ಅಲ್ಲಿ ನಿಂತು, ಕೂತು, ನಡೆದಾಡಿ ಸುತ್ತಲಿನ ಪುಟ್ಟ ಬೆಟ್ಟಗಳ ನೆತ್ತಿಯನ್ನು, ಸುತ್ತಲೂ ಹರಡಿರುವ ವಿಶಾಲ ಕಣಿವೆಗಳನ್ನು ನೋಡುತ್ತಾ ಇರುವಾಗ ಕಾಲಘಟ್ಟಗಳಲ್ಲಿ ಕಳೆದುಹೋಗುವ ಸಂಭವವಿದೆ. ಯಾಕೆಂದರೆ ಅಬೊರಿಜಿನಲ್ ಜನರು ಈ ಬೆಟ್ಟಗಳನ್ನು ಜೀವಂತ ಪಾತ್ರಗಳನ್ನಾಗಿ ರೂಪಿಸಿ, ಅವಕ್ಕೆ ಅವರದ್ದೆ ಆದ ಮನುಷ್ಯ ಗುಣಗಳನ್ನು, ಪಾತ್ರಗಳನ್ನು ಕೊಟ್ಟು ಅವೆಲ್ಲ ಅವರ Dreamtime Stories ಅಲ್ಲಿ ಅಜರಾಮರವಾಗಿವೆ. ಈ ಕಥೆಗಳನ್ನು ಓದುತ್ತಿರುವಾಗ ನಮ್ಮ ಭಾರತದ ಆರ್ಯಜನ ಕುಲಗಳ ಪುರಾಣ ಕಥೆಗಳು, ದ್ರಾವಿಡ ಜನಕುಲಗಳ ಕಥೆಗಳು ನೆನಪಿಗೆ ಬಂದು ಅಲ್ಲಲ್ಲಿ ಕೆಲ ಸಾಮ್ಯತೆಗಳಿರುವುದು ಅರಿವಾಗುತ್ತದೆ.  ಜೀವಸಂಕುಲಗಳ ವಿಕಾಸ ಹಂತಗಳಲ್ಲಿ ಮನುಷ್ಯರು ವಿಕಸಿತವಾದಂತೆಲ್ಲಾ ಅವರ ಕಲ್ಪನಾ ಪ್ರತಿಭೆ, ಭಾವನೆಗಳು, ಕಥೆ ಹುಟ್ಟಿಸುವ ಕಾರಣಗಳು, ಎಲ್ಲವೂ ವಿಕಸಿಸಿ, ವಿಸ್ತರಿಸಿವೆ. ಇವೆಲ್ಲ ರೋಚಕಮಯವಾದದ್ದು!

ಇರಲಿ, Toowoomba ನಗರಕ್ಕೆ ಹೋಗೋಣ. Toowoomba ನಗರ ಮತ್ತೊಂದು ಕಾರಣಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿ ಅನೇಕ ಸುಂದರ ಉದ್ಯಾನವನಗಳಿವೆ. ಇವೆಲ್ಲವನ್ನೂ ಸ್ಥಾಪಿಸಿದ್ದು, ಬೆಳೆಸಿದ್ದು ಇಪ್ಪತ್ತನೆ ಶತಮಾನದಲ್ಲಿ. ಬಹುತೇಕ ಉದ್ಯಾನವನಗಳು ಆಸ್ಟ್ರೇಲಿಯಾದ ತಾಯಿದೇಶವಾದ ಇಂಗ್ಲೆಂಡ್ ಅಲ್ಲಿರುವ ಉದ್ಯಾನವನಗಳನ್ನು ಹೋಲುತ್ತವೆ. ಬರುಬರುತ್ತಾ ಬಹಳ ಸುಂದರವಾದ ಹೂತೋಟಗಳ ಜೊತೆಗೆ ಗಮನವಿಟ್ಟು ಆಸ್ಟ್ರೇಲಿಯನ್ ನೇಟಿವ್ ಮರಗಿಡಗಳನ್ನು ಬೆಳೆಸಿ, ಅವುಗಳ ಉಪಯೋಗಗಳನ್ನು, ಅಬೊರಿಜಿನಲ್ ಜನರು ಬಳಸುತ್ತಿದ್ದದ್ದನ್ನು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಈಗ ವಸಂತ ಕಾಲ. ಎಲ್ಲೆಲ್ಲೂ ಸ್ವಾಭಾವಿಕವಾಗಿ ಅರಳಿದ್ದ, ಮನೆಮುಂದೆ ಜನರು ಬೆಳೆಸಿರುವ ಹೂಗಿಡಗಳ ಅಂದ ಕಾಣುತ್ತದೆ (ನೀರಿದ್ದರೆ!). ಸೆಪ್ಟೆಂಬರ್ ತಿಂಗಳ ಕೊನೆ ಎರಡು ವಾರಗಳು ಮತ್ತು ಅಕ್ಟೋಬರ್ ತಿಂಗಳ ಮೊದಲನೆ ವಾರದಲ್ಲಿ ಇಲ್ಲಿ Carnival of Flowers ಇತ್ತು. ಬಹಳ ಚೆನ್ನಾಗಿತ್ತು. ನಾನು ಹೋದಾಗ ನಮ್ಮ ರಾಣಿರಾಜ್ಯದವರಿಗೆ ಮತ್ತು ನೆರೆಯ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಸಾರ್ವಜನಿಕ ರಜೆಯಿತ್ತು. ಹಾಗಾಗಿ ಒಳ್ಳೆ ಸಂಖ್ಯೆಯಲ್ಲಿ ಜನ ಬಂದಿದ್ದರು. ನಗರದಲ್ಲಿದ್ದ ಮೂರು ಮುಖ್ಯ ಉದ್ಯಾನವನಗಳಲ್ಲಿ ಫ್ಲವರ್ ಶೋ – ಹೂವನಗಳಿದ್ದವು. ಒಂದು ವನದಿಂದ ಇನ್ನೊಂದು ವನಕ್ಕೆ ಜನರು ಸುಗಮವಾಗಿ ಓಡಾಡಲು ಉಚಿತ ಶಟಲ್ ಬಸ್ ಏರ್ಪಾಡಾಗಿತ್ತು. ಅನೇಕರು ಇದರ ಉಪಯೋಗ ಮಾಡಿಕೊಂಡಿದ್ದು ಗಮನಕ್ಕೆ ಬಂತು.

ಕಳೆದ ವಾರಗಳಲ್ಲಿ ಫ್ಲೂ ಮತ್ತು bronchitis ರೋಗಗಳಿಂದ ನನ್ನ ಆರೋಗ್ಯ ಕ್ಷೀಣಿಸಿ, ನನಗೂ ಒಂದು ಬದಲಾವಣೆ ಬೇಕಿತ್ತು. ಈ ಫ್ಲವರ್ ಶೋ ಗೆ ಹೋಗಿ ಸುಂದರ ಅತಿಸುಂದರ ಹೂವನಗಳನ್ನು ನೋಡಿ ಮನಸ್ಸು ಆನಂದಿಸಿತು. ಎರಡುದಿನಗಳ ಕಾಲ ಉದ್ಯಾನವನಗಳ, ಹೊರಾಂಗಣದ ಸ್ವಚ್ಛ ಗಾಳಿಯನ್ನು ಹೀರಿ ನನ್ನ ಉಸಿರಾಟ ಸುಧಾರಿಸಿತು. ಜೊತೆಗೆ ಇನ್ನೂ ಉಲ್ಲಾಸ ಕೊಟ್ಟಿದ್ದು ನನಗೆ ಬಹಳ ಪ್ರಿಯವಾದ ಜಪಾನೀಸ್ ಉದ್ಯಾನವನವನ್ನು ನೋಡಿ, ಅಲ್ಲಿ ಕಾಲ ಕಳೆದಿದ್ದು. ನಿರಾಸೆಯಾಗಿದ್ದು ನಾನು ನಿರೀಕ್ಷಿಸಿದ್ದ ಮಟ್ಟದಲ್ಲಿ ವಿಸ್ಟೀರಿಯಾ ಹೂ ಇರದಿದ್ದು. ಬೇಕಾದಷ್ಟು ಬಳ್ಳಿಗಳು ಹರಡಿದ್ದರೂ, ಹೂ ಬಿಟ್ಟಿರಲಿಲ್ಲ. ಕಾರಣ ಮಳೆಬಾರದೆ ಅಧಿಕ ಬಿಸಿಲು ಹವಾಮಾನವಿತ್ತು. ಈ ಹವಾಮಾನ ಬದಲಾವಣೆಯ ಪರಿಣಾಮಗಳು ಒಂದು ಹೂ ಅರಳುವ, ಅರಳದೆ ಇರುವ ಸಣ್ಣ ಪ್ರಸಂಗದಿಂದ ತಿಳಿಯುತ್ತದೆ.

ಅಷ್ಟೊಂದು ವಿಸ್ಟೇರಿಯಾ ಹೂ ಇಲ್ಲದಿದ್ದರೂ ಅಲ್ಲೊಂದು ಇಲ್ಲೊಂದು ಪುಟಾಣಿ ಗುಚ್ಛವಿತ್ತು. ನನ್ನ ಮನೆಯಂಗಳದಲ್ಲೂ ಇದೆ ತಿಳಿ ನೇರಳೆ ಬಣ್ಣದ ನನ್ನ ಪ್ರೀತಿಯ ವಿಸ್ಟೇರಿಯಾ. ಆದರೆ ಇನ್ನೂ ಬಳ್ಳಿಯಷ್ಟೇ, ಹೂ ಬಿಟ್ಟಿಲ್ಲ. ನನ್ನ ದೊಡ್ಡ ಕನಸುಗಳಲ್ಲಿ ಒಂದು ಜಪಾನ್ ದೇಶಕ್ಕೆ ಹೋಗಿ, ಅಲ್ಲಿನ ವಿಶ್ವಪ್ರಸಿದ್ಧ ಸಾಂಪ್ರದಾಯಿಕ ಉದ್ಯಾನವನಗಳನ್ನು ಮತ್ತು ನನ್ನ ಪ್ರೀತಿಯ ವಿಸ್ಟೀರಿಯಾ ಹೂಗುಚ್ಛಗಳನ್ನು ನೋಡುವುದು. ಯಾವಾಗ ಕೈಗೂಡುವುದೊ ತಿಳಿಯದು.

ನಾನು ಹೋದ ವಾರಾಂತ್ಯದಲ್ಲಿ ಫ್ಲವರ್ ಕಾರ್ನಿವಾಲ್ ಅಲ್ಲಿ ಕಂಡಿದ್ದು ಹೂವನಗಳಷ್ಟೇ ಅಲ್ಲ. ಅಲ್ಲಿದ್ದ ಪ್ರವಾಸಿಗರಲ್ಲಿ ಬಹುತೇಕರು ಭಾರತೀಯರು ಇಲ್ಲಾ ದಕ್ಷಿಣ ಏಷ್ಯಾ ದೇಶಗಳವರು. ಅವರುಗಳು ತಾತ್ಕಾಲಿಕ ಪ್ರವಾಸಿಗರೊ, ಸುತ್ತಮುತ್ತ ನಗರ, ಪಟ್ಟಣಗಳಲ್ಲಿ ವಾಸಿಸುವ ಖಾಯಂ ಜನರೊ ತಿಳಿಯದು. ಮುಖ್ಯ ಉದ್ಯಾನವನದಲ್ಲಿ ಕಾಲಾಡಿಸುತ್ತಿದ್ದಾಗ ನಮ್ಮ ಯೂನಿವರ್ಸಿಟಿಯ ಇಬ್ಬರು ವಿದ್ಯಾರ್ಥಿಗಳು ಬಂದು ಹಲೊ ಹೇಳಿದರು. ಕೆಲವರ್ಷಗಳ ಹಿಂದೆ ಇನ್ನೂ ಕಿರಿಪಟ್ಟಣವಾಗಿದ್ದ Toowoomba ದ ಪ್ರಸಿದ್ಧ ಫ್ಲವರ್ ಫೆಸ್ಟಿವಲ್ ಗೆ (ಆಗಿನ್ನೂ ಅದು ಕಂಟ್ರಿ ಫೆಸ್ಟಿವಲ್) ಬಂದಿದ್ದಾಗ ನನ್ನಂಥ ವಲಸೆಗಾರರು ಹೆಚ್ಚಾಗಿ ಕಂಡಿರಲಿಲ್ಲ. ಬರೀ ಬಿಳಿಯ ಜನರು. ಅವರು ನನ್ನನ್ನು ದಿಟ್ಟಿಸಿ ನೋಡುವುದು ನನಗೆ ಮುಜುಗರ ತಂದಿತ್ತು. ಈ ಸರ್ತಿ ನೋಡಿದ್ದು ಬಿಳಿಯರ ಸಂಖ್ಯೆಯನ್ನು ಮೀರಿಸಿದ್ದ ಬಹುಸಂಸ್ಕೃತಿಗಳ ಜನರು. ಬಿಳಿಯರೊಡನೆ, ಅವರ ಮಧ್ಯದಲ್ಲಿ, ಈ ಬಹುಸಂಸ್ಕೃತಿಗಳ ಜನರ ಹಳದಿ, ಕಂದು, ಕಪ್ಪು ಬಣ್ಣಗಳು ಎತ್ತಿ ಕಾಣುತ್ತಿತ್ತು. ಸುತ್ತಲೂ ಹರಡಿದ್ದ ನಾನಾಬಗೆ ಬಣ್ಣಗಳ ಹೂವನಗಳ ಅಂದಚೆಂದದ ಜೊತೆ ಅವರ ನಗು, ಉಲ್ಲಾಸ, ಆತ್ಮವಿಶ್ವಾಸ ನನಗೆ ಖುಷಿ ತಂದಿತು. ಆಸ್ಟ್ರೇಲಿಯಾದಲ್ಲಿ ಬಹುಸಂಸ್ಕೃತಿ ಸಮಾಜದ ವಿಕಸನವು ಸರಿಯಾದ ಮಾರ್ಗದಲ್ಲಿ ಮುಂದುವರೆಯುತ್ತಿದೆ ಎನ್ನುವ ಭರವಸೆ ಹೆಚ್ಚಾಯ್ತು.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ