ಗರ್ಭಗುಡಿಯಲ್ಲಿ ಮಹಾದೇವ ಶಿವಲಿಂಗವಿದ್ದು ಪಾಣಿಪೀಠದ ತಳಭಾಗವು ಭೂಮಿಯಲ್ಲಿ ಹುದುಗಿಕೊಂಡಂತಿದೆ. ಮಹಾದೇವನಿಗೆ ಅಭಿಮುಖವಾಗಿ ಅಂತರಾಳದಲ್ಲಿರುವ ಸಾಲಂಕೃತ ನಂದಿಯ ವಿಗ್ರಹ ಚಿಕ್ಕದಾದರೂ ಮುದ್ದಾಗಿದೆ. ನವರಂಗ ಹಾಗೂ ಮಂಟಪಗಳ ಭುವನೇಶ್ವರಿಯ ಕೆತ್ತನೆಗಳೂ ಅಚ್ಚುಕಟ್ಟಾಗಿವೆ. ಮಧ್ಯದ ಭುವನೇಶ್ವರಿಯಲ್ಲಿ ನೃತ್ಯಶಿವನನ್ನೂ ಆತನ ಸುತ್ತ ಅಷ್ಟದಿಕ್ಪಾಲಕರೇ ಮೊದಲಾದ ದೇವತೆಗಳನ್ನೂ ಕಾಣಬಹುದು. ಗರ್ಭಗುಡಿಯ ಮೇಲಣ ಶಿಖರವನ್ನು ಅನೇಕ ಕೀರ್ತಿಮುಖಗಳು ಅಲಂಕರಿಸಿವೆ. ಶಿಖರದ ಮೇಲುಭಾಗವನ್ನು ಗಾರೆಯಿಂದ ಮರುನಿರ್ಮಾಣ ಮಾಡಲಾಗಿದೆ. ಸುತ್ತುಗೋಡೆಯ ಮೇಲೆ ಕಿರುಗೋಪುರಗಳೂ, ವಿಧವಿಧ ವಿನ್ಯಾಸದ ಕಿರುಗಂಬಗಳೂ ಕಂಡುಬರುತ್ತವೆ. ಗೋಡೆಯ ಕೈಪಿಡಿಯಲ್ಲಿ ಅನೇಕ ಕೀರ್ತಿಮುಖಗಳೂ ಸಾಲಂಕೃತ ಆನೆಗಳೂ ಪ್ರಧಾನವಾಗಿ ಸ್ಥಾನಪಡೆದಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತ್ತೊಂದನೆಯ ಕಂತು

 

ಕನ್ನಡನಾಡಿನ ಪುರಾತನ ದೇವಾಲಯಗಳು ಒಂದಕ್ಕಿಂತ ಒಂದು ಸೊಗಸಿನವು. ವಿಶಿಷ್ಟ ಸೌಂದರ್ಯವನ್ನು ಮೆರೆಯುವ ಈ ಶಿಲ್ಪಕಲಾಭಂಡಾರಗಳನ್ನು ಪರಸ್ಪರ ಹೋಲಿಕೆಯ ಮಾಪನಕ್ಕೆ ಒಳಪಡಿಸಲು ಸಾಧ್ಯವೇ ಇಲ್ಲ. ಹೀಗಿರುವಾಗ ಈ ನೂರಾರು ದೇವಾಲಯಗಳಲ್ಲಿ ನಿರ್ದಿಷ್ಟವಾಗಿ ಯಾವುದೋ ಒಂದನ್ನು ಸರ್ವೋತ್ತಮವೆಂದು ಗುರುತಿಸುವುದಾದರೂ ಹೇಗೆ? ಆದರೆ, ಪುರಾತನ ಶಾಸನವೊಂದರಲ್ಲಿ ಇಟಗಿಯ ಮಹಾದೇವರ ದೇಗುಲವನ್ನು ‘ದೇವಾಲಯಗಳ ಚಕ್ರವರ್ತಿ’ ಎಂದು ಕರೆಯಲಾಗಿದೆ. ಎಂದಮೇಲೆ, ಈ ಅಭಿಪ್ರಾಯದ ಹುರುಳನ್ನು ಪರೀಕ್ಷಿಸುವುದಕ್ಕಾದರೂ ಕನ್ನಡಿಗರು ಈ ದೇವಾಲಯವನ್ನು ಒಮ್ಮೆ ನೋಡಲೇಬೇಕೆಂದು ಆಹ್ವಾನ ಕೊಟ್ಟಂತೆಯೇ ಆಯಿತು.

ಗದಗದಿಂದ ಮೂವತೈದು ಕಿಮೀ ದೂರದಲ್ಲಿರುವ ಇಟಗಿ ಗ್ರಾಮವು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿಗೆ ಸೇರುತ್ತದೆ. ಪ್ರಸಿದ್ಧ ಕ್ಷೇತ್ರವಾದ ಕುಕನೂರು ಇಟಗಿಯಿಂದ ಏಳು ಕಿಮೀ ದೂರದಲ್ಲಿದೆ. ಇಟಗಿಯ ಮಹಾದೇವ ದೇಗುಲವನ್ನು ಕಲ್ಯಾಣದ ಚಾಲುಕ್ಯದೊರೆ ಆರನೆಯ ವಿಕ್ರಮಾದಿತ್ಯನ ದಂಡನಾಯಕನಾದ ಮಹಾದೇವನು 1112 ರಲ್ಲಿ ಕಟ್ಟಿಸಿದ. ಮಹಾದೇವನು ದೇವರ ನಿತ್ಯಪೂಜೆಗಾಗಿ ಅಗತ್ಯ ಧನಸಹಾಯವನ್ನೂ ಒದಗಿಸಿದನಲ್ಲದೆ, ತನ್ನ ತಂದೆತಾಯಿಯರ ಸ್ಮರಣೆಯಲ್ಲಿ ಕೆಲವು ಚಿಕ್ಕ ದೇಗುಲಗಳನ್ನೂ ಇದೇ ಸಂಕೀರ್ಣದಲ್ಲಿ ಕಟ್ಟಿಸಿದ್ದಾನೆ.


ಬಲುವಿಸ್ತಾರವಾದ ಮಹಾದೇವರ ದೇವಾಲಯದ ಆವರಣ, ಕೊಳ, ಸಭಾಮಂಟಪ, ಮುಖಮಂಟಪ, ಅಂತರಾಳ, ಗರ್ಭಗುಡಿ, ಶಿಖರಗಳೆಲ್ಲವೂ ಚಕ್ರವರ್ತಿಯ ವೈಭವಕ್ಕೆ ಅನುಗುಣವಾಗಿಯೇ ಇವೆ. ಹಲವು ಕಿರುಮಂಟಪಗಳು ಹಾಗೂ ಗುಡಿಗಳಿಂದ ಸುತ್ತುವರೆದ ಮಹಾದೇವರ ಗುಡಿಯ ಶಿಖರ ಅನತಿದೂರದಿಂದಲೇ ಎದ್ದುಕಾಣುತ್ತದೆ. ಗುಡಿಯ ಮುಖಮಂಟಪ ಹಲವು ದಿಕ್ಕುಗಳಿಗೆ ತೆರೆದುಕೊಂಡಂತಿದ್ದು ಮಂಟಪದ ಕಂಬಗಳು ಒಂದಕ್ಕಿಂತ ಒಂದು ವಿಶಿಷ್ಟ ಕೆತ್ತನೆಯ ವಿನ್ಯಾಸದಿಂದ ಬೆರಗುಗೊಳಿಸುತ್ತವೆ. ಈ ಕಂಬಗಳ ಬುಡದಲ್ಲಿ ಚೌಕಾಕಾರವಿದ್ದು ಅದರ ತೆರವಿನಲ್ಲಿ ಹಲವಾರು ದೇವತಾಶಿಲ್ಪಗಳನ್ನು ಚಿತ್ರಿಸಲಾಗಿದೆ. ಶಿವನ ಹಲವು ರೂಪಗಳು, ವಿಷ್ಣು, ಗಣಪತಿ, ಮಹಿಷಮರ್ದಿನಿ ಮೊದಲಾದ ದೇವತೆಗಳು ಈ ಕಂಬಚೌಕಗಳಲ್ಲಿ ಸ್ಥಾನಪಡೆದಿದ್ದಾರೆ. ಒಳಗುಡಿಗೆ ಹೋಗುವೆಡೆಯ ದ್ವಾರದ ಚೌಕಟ್ಟು ಸೊಗಸಾದ ಕೆತ್ತನೆಯಿಂದ ಮನಸೆಳೆಯುತ್ತದೆ.

ಒಂಬತ್ತು ಪಟ್ಟಿಕೆಗಳಿರುವ ಈ ಚೌಕಟ್ಟಿನ ಮೇಲೆ ವಜ್ರಾಕೃತಿ, ಹೂಬಳ್ಳಿಗಳೊಳಗೆ ನರ್ತಕರು ಹಾಗೂ ವಾದ್ಯಗಾರರು, ನಾಗ-ನಾಗಿಣಿಯರು, ಯಕ್ಷರು, ಸ್ತಂಭಗಳು ಮೊದಲಾದವನ್ನು ಚಿತ್ರಿಸಿರುವ ಬಗೆ ಅನನ್ಯವಾಗಿದೆ. ಹೊರಗಿನಿಂದ ಒಳಗುಡಿಗೆ ಪ್ರವೇಶ ಕಲ್ಪಿಸುವ ಇತರ ಬಾಗಿಲುಗಳಲ್ಲೂ ಇದೇ ಮಾದರಿಯ ಕೆತ್ತನೆಯಿರುವ ಪಟ್ಟಿಕೆಗಳನ್ನು ಕಾಣಬಹುದು. ಗರ್ಭಗುಡಿಗೆ ತೆರಳುವಲ್ಲಿ ಎರಡು ಕಂಬಗಳ ಮೇಲೆ ಚಿತ್ರಿಸಿರುವ ಮಕರತೋರಣವಂತೂ ಅದ್ಭುತವಾಗಿದೆ. ತೋರಣದ ನಡುವೆ ಶಿವನೂ ಅವನ ಅಕ್ಕಪಕ್ಕಗಳಲ್ಲಿ ಬ್ರಹ್ಮ ವಿಷ್ಣುಗಳೂ ಇದ್ದಾರೆ. ಎಲ್ಲ ಬಾಗಿಲುಗಳಲ್ಲಿ ಕಾಣಬಹುದಾದಂತೆ ಗರ್ಭಗುಡಿಯ ಬಾಗಿಲವಾಡದ ಮೇಲೂ ಗಜಲಕ್ಷ್ಮಿಯನ್ನು ಚಿತ್ರಿಸಿದೆ. ಸುತ್ತಲಿನ ಆರು ಪಟ್ಟಿಕೆಗಳಲ್ಲಿ ಹೂಬಳ್ಳಿಗಳೊಳಗೆ ಗಾಯಕ, ನರ್ತಕ, ಯಕ್ಷರನ್ನು ಕೆತ್ತಿರುವ ಶಿಲ್ಪಿಯ ಪ್ರತಿಭೆಗೆ ತಲೆಬಾಗಲೇಬೇಕು. ಇವೆಲ್ಲ ಪಟ್ಟಿಕೆಗಳಿಂದ ಮೇಲೆದ್ದು ತೋರುವ ಮೂರು ಆಯಾಮಗಳ ಉಬ್ಬುಶಿಲ್ಪಗಳಂತೆ ತೋರುವುದೇ ಒಂದು ವಿಶೇಷ. ಪಟ್ಟಿಕೆಗಳ ಬುಡದಲ್ಲಿ ದ್ವಾರಪಾಲಕರೂ ಚಾಮರಧಾರಿಣಿಯರೂ ಕಂಡುಬರುತ್ತಾರೆ.

(ಫೋಟೋಗಳು: ಲೇಖಕರವು)

ಗರ್ಭಗುಡಿಯಲ್ಲಿ ಮಹಾದೇವ ಶಿವಲಿಂಗವಿದ್ದು ಪಾಣಿಪೀಠದ ತಳಭಾಗವು ಭೂಮಿಯಲ್ಲಿ ಹುದುಗಿಕೊಂಡಂತಿದೆ. ಮಹಾದೇವನಿಗೆ ಅಭಿಮುಖವಾಗಿ ಅಂತರಾಳದಲ್ಲಿರುವ ಸಾಲಂಕೃತ ನಂದಿಯ ವಿಗ್ರಹ ಚಿಕ್ಕದಾದರೂ ಮುದ್ದಾಗಿದೆ. ನವರಂಗ ಹಾಗೂ ಮಂಟಪಗಳ ಭುವನೇಶ್ವರಿಯ ಕೆತ್ತನೆಗಳೂ ಅಚ್ಚುಕಟ್ಟಾಗಿವೆ. ಮಧ್ಯದ ಭುವನೇಶ್ವರಿಯಲ್ಲಿ ನೃತ್ಯಶಿವನನ್ನೂ ಆತನ ಸುತ್ತ ಅಷ್ಟದಿಕ್ಪಾಲಕರೇ ಮೊದಲಾದ ದೇವತೆಗಳನ್ನೂ ಕಾಣಬಹುದು. ಗರ್ಭಗುಡಿಯ ಮೇಲಣ ಶಿಖರವನ್ನು ಅನೇಕ ಕೀರ್ತಿಮುಖಗಳು ಅಲಂಕರಿಸಿವೆ.

ಶಿಖರದ ಮೇಲುಭಾಗವನ್ನು ಗಾರೆಯಿಂದ ಮರುನಿರ್ಮಾಣ ಮಾಡಲಾಗಿದೆ. ಸುತ್ತುಗೋಡೆಯ ಮೇಲೆ ಕಿರುಗೋಪುರಗಳೂ, ವಿಧವಿಧ ವಿನ್ಯಾಸದ ಕಿರುಗಂಬಗಳೂ ಕಂಡುಬರುತ್ತವೆ. ಗೋಡೆಯ ಕೈಪಿಡಿಯಲ್ಲಿ ಅನೇಕ ಕೀರ್ತಿಮುಖಗಳೂ ಸಾಲಂಕೃತ ಆನೆಗಳೂ ಪ್ರಧಾನವಾಗಿ ಸ್ಥಾನಪಡೆದಿವೆ. ಅಲ್ಲಲ್ಲಿ ಅಂಧಕಾಸುರ ಸಂಹಾರವೇ ಮೊದಲಾದ ಶಿವನ ವಿವಿಧ ರೂಪಗಳು, ಮಿಥುನಶಿಲ್ಪ, ಗಣಪತಿ, ಹಾಗೂ ದೇವಿಯರ ಕಿರುಶಿಲ್ಪಗಳನ್ನೂ ಕಾಣಬಹುದು.


ದೇವಾಲಯದ ಹೊರಾವರಣದ ಮಂಟಪಗಳು, ಕಿರುಗುಡಿಗಳು ಹಾಗೂ ಕೊಳಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಪುರಾತತ್ವ ಇಲಾಖೆ ಇದೀಗ ಕ್ರಮಗಳನ್ನು ಕೈಗೊಂಡಿದೆ. ಗದಗ ಹಾಗೂ ಲಕ್ಕುಂಡಿಗಳತ್ತ ಬರುವವರು ಅಲ್ಲಿನ ದೇಗುಲಗಳನ್ನು ನೋಡಿಕೊಂಡು ಇಟಗಿ ಮಾರ್ಗವಾಗಿ ಏಳು ಕಿಮೀ ದೂರದ ಕುಕನೂರಿಗೂ ಹೋಗಿ ಮಹಾಮಾಯಾ ದೇವಾಲಯದ ದರ್ಶನ ಮಾಡಿ ಬರಬಹುದಾಗಿದೆ.