”ಸಿರಿಯಾ ದೇಶದಿಂದ ಬಂದಿದ್ದ ನನ್ನ ವೈದ್ಯ ಸಹೋದ್ಯೋಗಿಯೊಬ್ಬ ಹೊಟ್ಟೆ ದಪ್ಪಗಿದ್ದ ಹೆಂಗಸು ರೋಗಿಯನ್ನು “ನೀನು ಗರ್ಭಿಣಿಯಾ?” ಅಂತ ಕೇಳಿದ್ದಕ್ಕೆ ಆಕೆ ಆತನ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಳು! ಅಸಲು ಅವಳು ಗರ್ಭಿಣಿಯೇ ಆಗಿರಲಿಲ್ಲ. ದಪ್ಪಗೆ ಹೊಟ್ಟೆ ಇತ್ತು ಅಷ್ಟೆ! ಮೂರು ಹೆಣ್ಣು ಮಕ್ಕಳ ತಂದೆಯಾದ ಈ ವೈದ್ಯನಿಗೆ ಆ ರೋಗಿಯ ಕಾಳಜಿಯ ಹೊರತು ಬೇರೆ ಉದ್ದೇಶವಿರಲಿಲ್ಲ. ಆದರೆ “ನೀನು ಗರ್ಭಿಣಿಯಿರುವ ಸಾದ್ಯತೆಗಳಿವೆಯಾ?” ಎಂದು ಕೇಳಬೇಕಿತ್ತು ಅಂತ ಆತ ನಂತರ ಕಲಿತುಕೊಂಡ”
ಡಾ. ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

ಒಂದು ಮುಂದುವರೆದ ದೇಶದ ಬಗ್ಗೆ ಸಕಾರಾತ್ಮಕ ವಿಚಾರಗಳನ್ನು ಕೇಳುವುದು ಸಾಮಾನ್ಯವೇ. ಆದರೆ ಅಲ್ಲಿ ನೆಲೆಸಿ ಆ ಜನರ ಬದುಕಿನ ಒಂದು ಭಾಗವಾಗುವುದು ಸುಲಭವಲ್ಲ. ಆಂಗ್ಲಭಾಷೆಯಲ್ಲಿ ಮಾತನಾಡಲು ಬಂದರೂ ಸಂಸ್ಕೃತಿಯ, ಸಂಪ್ರದಾಯಗಳ ಅರಿವಿಲ್ಲದಿದ್ದರೆ, ಅವರ ಕಣ್ಣಿನಿಂದಲೇ ಅವರ ಜಗತ್ತನ್ನು ನೋಡದಿದ್ದರೆ ಇಂಗ್ಲಿಷರು ನಮಗೆ ಅರ್ಥವಾಗುವುದೇ ಇಲ್ಲ. ಅದಕ್ಕೆ ಸಮಯ ಮತ್ತು ಅನುಭವ ಬೇಕು. ಜೊತೆಗೆ ಅವರ ಬಗ್ಗೆ ಉತ್ತಮ ಭಾವನೆ, ಹೊಂದಾಣಿಕೆಗಳನ್ನು ತೋರಿಸುವುದು ಕೂಡ ಅಗತ್ಯ. ನಾವು ಇಂಗ್ಲೆಂಡಿಗೆ ಮೊದಲು ಬಂದದ್ದು ಆಸ್ಪತ್ರೆಯವರು ಒದಗಿಸಿದ್ದ ನಿವಾಸಗಳಿಗೆ. ಹಾಗಾಗಿ ನಾನು ಇಂಗ್ಲೆಂಡಿಗೆ ಬಂದಿದ್ದರೂ ನಾವಿದ್ದ ಅಪಾರ್ಟ್ ಮೆಂಟ್ ಕಟ್ಟಡದ ಆರು ನಿವಾಸದಲ್ಲೂ ಆಶ್ಚರ್ಯ ಎನ್ನುವಂತೆ ಭಾರತೀಯರೇ ಇದ್ದರು.

ಈಗಾಗಲೇ ಹೇಳಿದಂತೆ ಇಂಗ್ಲೆಂಡಿಗೆ ಬಂದಾಗ ನನ್ನ ಕೈಯಲ್ಲಿ ಮೂರು ತಿಂಗಳ ಕೂಸಿತ್ತು. ನಾನು ಮಗುವಿನೊಂದಿಗೆ ಓಡಾಟಕ್ಕೆ ಹೊರಗೆ ಹೋದಾಗಲೆಲ್ಲ ಕೆಲವು ಬ್ರಿಟಿಷರು “ಓ ಮಗು ಎಷ್ಟು ಮುದ್ದಾಗಿದೆ, ಎಂತ ಬಣ್ಣ, ಎಂತಹ ಗುಂಗುರು ಕೂದಲು“ ಎಂದೆಲ್ಲ ಹಾಡಿ ಹೊಗಳಿ, ನಿಂತು ಮಾತಾಡಿಸುತ್ತಿದ್ದರು. ಅಮ್ಮನಾಗಿ ನನಗೆ ಹಿರಿ ಹಿರಿ ಹಿಗ್ಗು! ಒಮ್ಮೆ ಇನ್ನೊಂದು ಕುಟುಂಬದ ಮಗು ಮತ್ತು ಅಮ್ಮ ನನ್ನೊಡನೆ ಬಂದಿದ್ದರು. ಆ ಮಗು ನನ್ನ ಮಗುವಿಗಿಂತ ಬಹಳ ಭಿನ್ನವಾಗಿದ್ದರೂ ದಾರಿಯಲ್ಲಿ ಸಿಕ್ಕ ಇಬ್ಬರು ವಯಸ್ಸಾದ ಬ್ರಿಟಿಷ್ ದಂಪತಿಗಳು ಅವಳೊಡನೆ ಮಾತಿಗಿಳಿದು ಅವಳ ಮಗುವನ್ನು ಕೂಡ ಅದೇ ಪದಗಳಲ್ಲಿ ಹಾಡಿ ಹೊಗಳಿದಾಗ ಅವರ ಹೊಗಳಿಕೆಯ ನಿಜವಾದ ಅರ್ಥ ನನಗೆ ಮೊದಲ ಬಾರಿಗೆ ಆಯಿತು. ಎಲ್ಲ ತಾಯಿಯರಿಗೆ ತಮ್ಮ ತಮ್ಮ ಮಕ್ಕಳು ಮುದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ ಅಲ್ಲವೇ? ಅದನ್ನರಿತು ಬಹುಶಃ ಅವರು ಪ್ರತಿ ಮಗುವಿನ ಬಗ್ಗೆಯೂ ಇದೇ ಮಾತನ್ನಾಡುತ್ತಾರೆ ಎಂದು ತಿಳಿಯಿತು. ಅಂದಿನಿಂದ ಅವರ ಹೊಗಳಿಕೆಯ ಸತ್ಯಾಸತ್ಯತೆಗಳನ್ನು ಸಮಚಿತ್ತದಲ್ಲಿ ತೆಗೆದುಕೊಳ್ಳತೊಡಗಿದೆ. ಅಷ್ಟೇ ಅಲ್ಲ ಮೊದಲ ಬಾರಿ ನೋಡುವಾಗ ಏಷಿಯನ್ನರಾದ ನಾವೆಲ್ಲರೂ ಇಂಗ್ಲಿಷರ ಕಣ್ಣಿಗೆ ಬಹುಶಃ ಒಂದೇ ರೀತಿಯಲ್ಲಿ ಕಾಣುತ್ತೇವೆ ಎಂದು ಕೂಡ ಅರ್ಥವಾಯಿತು!

ಬ್ರಿಟಿಷರೇ ಹಾಗೆ. ನಿಮ್ಮ ಮನಸ್ಸಿಗೆ ಹಿತವಾಗುವಂತ ಮಾತುಗಳನ್ನು ಹೇಗೆ ಆಡಬೇಕು ಎಂಬುದು ಇವರಿಗೆ ಕರಗತ. ಇಂತಹ ಇಂಗ್ಲಿಷರ ಹೊಗಳಿಕೆಯ ಮಾತನ್ನು ತಲೆಗೆ ಹಚ್ಚಿಕೊಳ್ಳದೆ ಸಭ್ಯ ಉತ್ತರಗಳನ್ನು ನೀಡುವ ಕಲೆಯನ್ನು ನಾವು ಕಲಿಯಬೇಕಿತ್ತು. ‘ಕರ್ರಗಿನ ಕಾಗೆ’ಯನ್ನು ಕೂಡ ಇವರು ಹೇಗೆ ‘ಬೆಳ್ಳಗಿದೆ ‘ ಎಂದು ವರ್ಣಿಸುತ್ತಾರೆ ಎನ್ನುವ ಕಲೆಯನ್ನು ನೋಡುವುದು, ಕೇಳುವುದು ಕೂಡ ಆನಂದವೇ ಸರಿ! ವೈಕ್ತಿಕವಾಗಿ ಹೇಳುವುದಾದರೆ ‘ಮನಸಾ’ ಅನಿಸದ ಮಾತುಗಳು ನನ್ನಿಂದ ಹೊರಬೀಳಲು ಬಹಳ ಪ್ರಯಾಸ ಪಡುತ್ತವೆ. ಅಕಸ್ಮಾತ್ ಸುಳ್ಳು ಹೇಳಿದರೆ ನಂತರ ಮನಸ್ಸಿಗೆ ಕಸಿವಿಸಿಯಾಗುತ್ತದೆ. ನನಗೇ ಅದು ಬಹಳ ಕೃತಕವಾಗಿ ಕೇಳಿಸುತ್ತದೆ. ಬ್ರಿಟಿಷರಿಗೆ ಇತರೆ ಜನರನ್ನು ಅತ್ಯಂತ ಸಿಹಿಯಾಗಿ ಮಾತನಾಡಿಸುವ ಕಲೆ, ಸಾಮಾಜಿಕವಾಗಿ, ಕೌಟುಂಬಿಕವಾಗಿ, ಓದಿನ ಮೂಲಕ, ಮನಃಶಾಸ್ತ್ರದ ಅರಿವಿನ ಮೂಲಕ ಒದಗಿ ಬಂದ ‘ಸಿದ್ಧ ಕಲೆ’. ಪ್ರಯಾಸವಿಲ್ಲದೆ ಹೊರಬರುವ ಈ ಮಾತುಗಳ ಮೋಡಿಯಿಂದಲೇ ಇವರು ಪ್ರಪಂಚವನ್ನು ಆಳಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿನ ಯೂನಿವರ್ಸಿಟಿಗಳಲ್ಲಿ ಸಂವಹನ ಶಾಸ್ತ್ರವನ್ನೇ ಅಧ್ಯಯನ ವಿಚಾರವನ್ನಾಗಿ ಆರಿಸಿಕೊಳ್ಳುವ ಅವಕಾಶಗಳಿವೆ.

‘ಬೇರೆಯವರು ಆಡುವ ಮಾತುಗಳನ್ನು ಕೇಳಿಸಿಕೊಳ್ಳುವು ಕಲೆ’, ‘ನಮ್ಮ ವಿಚಾರಗಳನ್ನು ಮುಂದಿಡುವ ಕಲೆ’, ‘ದೂರವಾಣಿಗಳಲ್ಲಿ ಮಾತನಾಡುವ ಕಲೆ ’, ‘ವಿಮರ್ಶೆಗಳನ್ನು ಮುಂದಿಡುವ ಮತ್ತು ಟೀಕೆಗಳನ್ನು ಅಂಗೀಕರಿಸುವ ಕಲೆ’, ‘ಬೇರೆಯವರನ್ನು ಪ್ರಶಂಸಿಸುವ ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳುವ ಕಲೆ’, ‘ಸಹಕಾರ ತೋರುವ ಮಾತುಗಳ ಕಲೆ’, ‘ದೈಹಿಕ ಭಾಷಾ ಕಲೆ’- ಇನ್ನಿತರ ವಿಚಾರಗಳಲ್ಲಿ ಪರಿಣತಿಗಳನ್ನು ಪಡೆದುಕೊಳ್ಳುಲು ವಿಶ್ವ ವಿದ್ಯಾಲಯಗಳಲ್ಲಿ ಅವಕಾಶಗಳಿವೆ. ಈ ಕಲೆಗಳನ್ನು ಕರಗತಮಾಡಿಕೊಂಡವರಿಗೆ ಕೆಲಸಗಳೂ ದೊರಕುತ್ತವೆ. ಮಾತನಾಡುವ ಕಲೆಗೆ ಇವರು ನೀಡುವ ಪ್ರಾಶಸ್ತ್ಯಕ್ಕೆ ಮಿತಿಯೇ ಇಲ್ಲ. ಮಾತನಾಡುವ ‘ಕ್ರಿಯೆ’ಯನ್ನು ಕಲೆಯನ್ನಾಗಿ, ವಿಜ್ಞಾನವನ್ನಾಗಿ, ಮಾನಸಿಕ ಶಾಸ್ತ್ರದ ತಳಹದಿಯ ಆಧಾರದ ಮೇಲೆ ಒಂದು ಸೌಜನ್ಯಪೂರ್ಣ ಸಾಮಾಜಿಕ ಕಲೆಯನ್ನಾಗಿ ಇವರು ಸ್ವೀಕರಿಸಿದ್ದಾರೆ.

ನಾನು ಮಗುವಿನೊಂದಿಗೆ ಓಡಾಟಕ್ಕೆ ಹೊರಗೆ ಹೋದಾಗಲೆಲ್ಲ ಕೆಲವು ಬ್ರಿಟಿಷರು “ಓ ಮಗು ಎಷ್ಟು ಮುದ್ದಾಗಿದೆ, ಎಂತ ಬಣ್ಣ, ಎಂತಹ ಗುಂಗುರು ಕೂದಲು“ ಎಂದೆಲ್ಲ ಹಾಡಿ ಹೊಗಳಿ, ನಿಂತು ಮಾತಾಡಿಸುತ್ತಿದ್ದರು. ಅಮ್ಮನಾಗಿ ನನಗೆ ಹಿರಿ ಹಿರಿ ಹಿಗ್ಗು! ಒಮ್ಮೆ ಇನ್ನೊಂದು ಕುಟುಂಬದ ಮಗು ಮತ್ತು ಅಮ್ಮ ನನ್ನೊಡನೆ ಬಂದಿದ್ದರು. ಆ ಮಗು ನನ್ನ ಮಗುವಿಗಿಂತ ಬಹಳ ಭಿನ್ನವಾಗಿದ್ದರೂ ದಾರಿಯಲ್ಲಿ ಸಿಕ್ಕ ಇಬ್ಬರು ವಯಸ್ಸಾದ ಬ್ರಿಟಿಷ್ ದಂಪತಿಗಳು ಅವಳೊಡನೆ ಮಾತಿಗಿಳಿದು ಅವಳ ಮಗುವನ್ನು ಕೂಡ ಅದೇ ಪದಗಳಲ್ಲಿ ಹಾಡಿ ಹೊಗಳಿದಾಗ ಅವರ ಹೊಗಳಿಕೆಯ ನಿಜವಾದ ಅರ್ಥ ನನಗೆ ಮೊದಲ ಬಾರಿಗೆ ಆಯಿತು. ಎಲ್ಲ ತಾಯಿಯರಿಗೆ ತಮ್ಮ ತಮ್ಮ ಮಕ್ಕಳು ಮುದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ ಅಲ್ಲವೇ? ಅದನ್ನರಿತು ಬಹುಶಃ ಅವರು ಪ್ರತಿ ಮಗುವಿನ ಬಗ್ಗೆಯೂ ಇದೇ ಮಾತನ್ನಾಡುತ್ತಾರೆ ಎಂದು ತಿಳಿಯಿತು.

ಇಲ್ಲಿನ ಗುರುತರ ಹುದ್ದೆಗಳಲ್ಲಿರುವ ಜನರು ಕೈ ಕೆಳಗಿನ ಜನರೊಂದಿಗೆ ಹೇಗೆ ಮಾತನಾಡಬೇಕೆನ್ನುವ ಬಗ್ಗೆ ಪ್ರಯತ್ನಪಟ್ಟು ಕಲಿಯುತ್ತಾರೆ. ಲೀಡರ್ ಶಿಪ್ ಅಥವಾ ಮುಂದಾಳತ್ವದ ತರಬೇತಿ ಕಾರ್ಯಕ್ರಮಗಳಲ್ಲಿ ಜನರೊಂದಿಗೆ ಮಾತನಾಡುವುದನ್ನು ಕಲಿಸುತ್ತಾರೆ. ರಾಜಕಾರಣಿಗಳು ಮತ್ತು ಗುರುತರ ಕಲಾವಿದರು ಕೂಡ ಮಾತನಾಡುವ ಕಲೆಯನ್ನು ಪರಿಣಿತರಿಂದ ಕಲಿಯುತ್ತಾರೆ. ‘ವ್ಯಕ್ತಿತ್ವ ವಿಕಸನ’ ದ ಕುರಿತಾಗಿ ಪಾಶ್ಚಾತ್ಯರು ಬರೆದಿರುವ ಯಾವುದೇ ಪುಸ್ತಕ ಕೊಂಡು ಓದಿದರೂ ಅದರಲ್ಲಿ ಮಾತನಾಡುವ ಕಲೆಯ ಬಗ್ಗೆ ಪ್ರಾಮುಖ್ಯತೆ ನೀಡಲಾಗಿರುವುದನ್ನು ನೋಡುತ್ತೇವೆ. ನಾನಿಲ್ಲಿ ಪ್ರಸ್ತಾಪಿಸುತ್ತಿರುವುದು ವೇದಿಕೆಯ ಮೇಲೆ ನಿಂತು ಮಾತನಾಡುವ ಕಲೆ ಮಾತ್ರವಲ್ಲದೆ. ದೈನಂದಿನ ಬದುಕಿನಲ್ಲಿ, ಕೆಲಸದಲ್ಲಿ, ಸಮಾಜದಲ್ಲಿ ಮಾತೆನ್ನುವುದು ಹೇಗಿರಬೇಕೆನ್ನುವ ಅತ್ಯಗತ್ಯ ಕಲೆಯ ಬಗ್ಗೆ. ಇಲ್ಲಿನ ಜನರು ಅತ್ಯಂತ ಕಡಿಮೆ ದರ್ಜೆಯ ನೌಕರಿಯಲ್ಲೇ ಇದ್ದರೂ, ಶಾಲೆಯ ಬದುಕಿನಲ್ಲೇ ವಿದ್ಯಾಭ್ಯಾಸಕ್ಕೆ ಎಳ್ಳುನೀರು ಬಿಟ್ಟವರಾಗಿದ್ದರೂ ಸಂಭಾವಿತ ರೀತಿಯಲ್ಲಿ, ಸೌಜನ್ಯಪೂರ್ಣರಾಗಿ ಜನರೊಡನೆ ಮಾತನಾಡುವ ಕಲೆಯನ್ನು ಸಹಜವಾಗಿಯೇ ಸಮಾಜದಿಂದ ಪಡೆದವರಾಗಿರುತ್ತಾರೆ. ಬ್ರಿಟಿಷ್ ಸಮಾಜ ಕಲಿಸುವ ಗುರುತರ ಕಲೆ ಎಂದರೆ ಮಾತನಾಡುವ ಕಲೆಯೇ.

ಹಾಗಾಗಿ ಹೊರದೇಶದಿಂದ ಬಂದು ಇಲ್ಲಿನ ಜನರೊಡನೆ ಒಡನಾಡುವ, ಮಾತನಾಡುವ ವೃತ್ತಿಯಲ್ಲಿರುವ ಮಂದಿ ಇಂಗ್ಲೀಷರ ನಯವನ್ನು, ಮಾತುಗಾರಿಕೆಯ ಕಲೆಯನ್ನು ಕಲಿಯದಿದ್ದರೆ ಭಾರೀ ತೊಂದರೆಗೆ ಸಿಲುಕುತ್ತಾರೆ. ನಾನು ಇಂಗ್ಲೆಂಡಿಗೆ ಬಂದ ಹೊಸತರಲ್ಲಿ “ನನಗೆ ಡಯಾಬಿಟೀಸ್ ಇದೆ… ನಿನಗೆ ಕ್ಯಾನ್ಸರ್ ಇದೆ… ಎಲ್ಲರೂ ಒಂದಲ್ಲ ಒಂದು ದಿನ ಸಾಯಬೇಕು …” ಎಂದು ರೋಗಿಗೆ ಸಮಾಧಾನ ಹೇಳಿದ ಕಾರಣಕ್ಕೆ ಭಾರತೀಯ ಮೂಲದ ವೈದ್ಯನೊಬ್ಬನನ್ನು ಇಲ್ಲಿನ ನ್ಯಾಯಾಲಯ ವಿಚಾರಣೆಗೆ ಒಳಪಡಿಸಿತ್ತು. ಈ ವೈದ್ಯ ತನಗೆ ತಿಳಿದ ‘ವೇದಾಂತ’ ವನ್ನು ಬಳಸಿ ಆ ರೋಗಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದ. “ಇದು ರೋಗಿಯೊಬ್ಬನಿಗೆ ಹೇಳುವಂತ ಮಾತಲ್ಲ. ಆತನ ಮನಸ್ಸಿಗೆ ಇದರಿಂದ ಅಪಾರ ನೋವಾಗಿದೆ” ಎಂಬುದು ಅದರ ವಾದವಾಗಿತ್ತು. ಹಾಗಂತ ರೋಗಿಯೇ ಕಂಪ್ಲೇಂಟ್ ಕೊಟ್ಟಿದ್ದ. ಇಂತಹ ಕ್ಷುಲ್ಲಕ ಕಾರಣಕ್ಕೆಲ್ಲ ಇಷ್ಟೊಂದು ವಿಚಾರಣೆಯೇ ಎಂಬ ಕಾರಣಕ್ಕೆ ಈ ವಿಚಾರ, ಬಿ.ಬಿ.ಸಿ. ಯಲ್ಲಿ ಬಿಸಿ ಬಿಸಿ ಚರ್ಚೆಯಾಗಿಬಿಟ್ಟಿತ್ತು. ವೈದ್ಯ ವೃತ್ತಿಯಲ್ಲಿದ್ದ ನಮಗೆಲ್ಲ ಇದರಿಂದ “ಅಬ್ಬಾ ಈ ಜನರು ಇಷ್ಟು ಸೂಕ್ಷ್ಮವೇ?” ಎಂದು ಅಚ್ಚರಿಯೂ ಆಗಿತ್ತು. ಹೇಗೆ ಮಾತಾಡುವುದು ಸರಿ, ಹೇಗೆ ಮಾತಾಡಿದರೆ ಈ ಜನರಿಗೆ ಸರಿಕಾಣುತ್ತದೆ ಎಂದು ತಿಳಿಯುವುದರ ಅವಶ್ಯಕತೆಯನ್ನು ಈ ಘಟನೆ ಸಾರಿ ಹೇಳಿತ್ತು.

ಮಾತನಾಡುವ ಕಲೆಯನ್ನು ಬ್ರಿಟಿಷರು ಬಹುಶಃ ಇಡೀ ಪ್ರಪಂಚಕ್ಕೆ ಹೇಳಿಕೊಟ್ಟವರು. ಅಪ್ಪಿ, ತಪ್ಪಿ ಮನಸ್ಸಿಗೆ ಅನ್ನಿಸಿದ್ದನ್ನು ಅದರಂತೆ ಹೇಗೆಂದರೆ ಹಾಗೆ ಮಾತಾಡಿದರೆ ಅವರೇ ಸೃಷ್ಟಿಸಿಕೊಂಡಿರುವ ನಿಯಮಗಳ ಬಲೆಗೆ ಬಿದ್ದು ದಂಡ ತೆರುತ್ತಾರೆ, ಹಾಗಾಗಿ ಮಾತಾಡುವ ಕಲೆಯನ್ನು ಅವರು ಸುಧಾರಿಸಿಕೊಳ್ಳುತ್ತಲೇ ನಡೆದಿದ್ದಾರೆ. ಅದನ್ನು ಮೀರಿ ಪ್ರತಿಷ್ಠೆಯನ್ನು ಮೆರೆವ ಮಂದಿಯಷ್ಟೇ ಮನಸ್ಸಿಗೆ ಬಂದಂತೆ ಮಾತಾಡಿ ಮಾಧ್ಯಮಗಳ ಚೀಮಾರಿಗೆ ತುತ್ತಾಗಿ, ಎಲ್ಲರೆದುರು ಕ್ಷಮೆಯಾಚಿಸುವುದು, ಹಲವರು ತಮ್ಮ ಪದವಿಗಳಿಂದ ಉಚ್ಛಾಟಿತರಾಗುವುದೂ ಉಂಟು.

ಸಿರಿಯಾ ದೇಶದಿಂದ ಬಂದಿದ್ದ ನನ್ನ ವೈದ್ಯ ಸಹೋದ್ಯೋಗಿಯೊಬ್ಬ ಹೊಟ್ಟೆ ದಪ್ಪಗಿದ್ದ ಹೆಂಗಸು ರೋಗಿಯನ್ನು “ನೀನು ಗರ್ಭಿಣಿಯಾ?” ಅಂತ ಕೇಳಿದ್ದಕ್ಕೆ ಆಕೆ ಆತನ ಬಗ್ಗೆ ಲಿಖಿತ ದೂರು ಸಲ್ಲಿಸಿದ್ದಳು! ಅಸಲು ಅವಳು ಗರ್ಭಿಣಿಯೇ ಆಗಿರಲಿಲ್ಲ. ದಪ್ಪಗೆ ಹೊಟ್ಟೆ ಇತ್ತು ಅಷ್ಟೆ! ಮೂರು ಹೆಣ್ಣು ಮಕ್ಕಳ ತಂದೆಯಾದ ಈ ವೈದ್ಯನಿಗೆ ಆ ರೋಗಿಯ ಕಾಳಜಿಯ ಹೊರತು ಬೇರೆ ಉದ್ದೇಶವಿರಲಿಲ್ಲ. ಆದರೆ “ನೀನು ಗರ್ಭಿಣಿಯಿರುವ ಸಾದ್ಯತೆಗಳಿವೆಯಾ?” ಎಂದು ಕೇಳಬೇಕಿತ್ತು ಅಂತ ಆತ ನಂತರ ಕಲಿತುಕೊಂಡ. ಜೊತೆಗೆ ನಾವು ಕೂಡ!

ಬ್ರಿಟಿಷರೇ ಹಾಗೆ. ನಿಮ್ಮ ಮನಸ್ಸಿಗೆ ಹಿತವಾಗುವಂತ ಮಾತುಗಳನ್ನು ಹೇಗೆ ಆಡಬೇಕು ಎಂಬುದು ಇವರಿಗೆ ಕರಗತ. ಇಂತಹ ಇಂಗ್ಲಿಷರ ಹೊಗಳಿಕೆಯ ಮಾತನ್ನು ತಲೆಗೆ ಹಚ್ಚಿಕೊಳ್ಳದೆ ಸಭ್ಯ ಉತ್ತರಗಳನ್ನು ನೀಡುವ ಕಲೆಯನ್ನು ನಾವು ಕಲಿಯಬೇಕಿತ್ತು. ‘ಕರ್ರಗಿನ ಕಾಗೆ’ಯನ್ನು ಕೂಡ ಇವರು ಹೇಗೆ ‘ಬೆಳ್ಳಗಿದೆ ‘ ಎಂದು ವರ್ಣಿಸುತ್ತಾರೆ ಎನ್ನುವ ಕಲೆಯನ್ನು ನೋಡುವುದು, ಕೇಳುವುದು ಕೂಡ ಆನಂದವೇ ಸರಿ! ವೈಕ್ತಿಕವಾಗಿ ಹೇಳುವುದಾದರೆ ‘ಮನಸಾ’ ಅನಿಸದ ಮಾತುಗಳು ನನ್ನಿಂದ ಹೊರಬೀಳಲು ಬಹಳ ಪ್ರಯಾಸ ಪಡುತ್ತವೆ.

ಇದೇ ದೇಶದಲ್ಲಿ ಹುಟ್ಟಿ ಬೆಳೆದು, ಪದವಿ ಪಡೆದು ಆಗ ತಾನೇ ವೈದ್ಯನಾಗಿದ್ದ ಇನ್ನೊಬ್ಬ ಸಹೋದ್ಯೋಗಿಯೊಬ್ಬ ಪದೇಪದೇ ಹುಳುಕಲ್ಲು ಮಾಡಿಕೊಂಡು ಚಿಕಿತ್ಸೆಗೆ ಬರುತ್ತಿದ್ದ ದಪ್ಪಗಿದ್ದ ಗಂಡಸು ರೋಗಿಯೋರ್ವನಿಗೆ ಡಯಟ್ ಬಗ್ಗೆ ತಿಳುವಳಿಕೆ ಹೇಳಿದ್ದಕ್ಕೆ ಆತ ಲಿಖಿತ ದೂರು ಸಲ್ಲಿಸಿ ಕ್ಷಮಾಪಣೆ ಯಾಚಿಸುವಂತೆ ಕೇಳಿದ್ದ. ಈ ರೋಗಿಯ ಪ್ರಕಾರ ವೈದ್ಯ ನನ್ನ ಗಾತ್ರ, ತೂಕದ ಬಗ್ಗೆ ಅವಹೇಳನದ ಮಾತನಾಡಿದ್ದ ಎನ್ನುವುದಾಗಿತ್ತು. ಇಂತಹ ಸಂದರ್ಭಗಳಲ್ಲಿ ವೈದ್ಯರು ತಮ್ಮ ವೃತ್ತಿಗೆ ಇನ್ಶ್ಯೂರೆನ್ಸ್ ಒದಗಿಸುವ ಸಂಸ್ಥೆಗಳ ಸಲಹೆ ಕೇಳಬೇಕಾಗುತ್ತದೆ. ಆತನೂ ಕೇಳಿದ. ಅದಕ್ಕವರು ‘ಕ್ಷಮಾಪಣೆ ಕೇಳುವುದು ಒಳಿತು’ ಎಂದು ಹೇಳಿದ್ದರು. “ವೈದ್ಯನ ಕರ್ತವ್ಯ ಮಾಡಿದ್ದಕ್ಕೆ ನಾನ್ಯಾಕೆ ಕ್ಷಮಾಪಣೆ ಕೇಳಬೇಕು?” ಎಂದು ಆತ ಉರಿದುರಿದು ಬಿದ್ದದ್ದು ಇನ್ನೂ ನೆನಪಿದೆ. ಆದರೆ ಇಲ್ಲಿನ ಜನರ ಮಾತು ಬೆಣ್ಣೆಯಲ್ಲಿ ಕೂದಲು ತೆಗೆಯುವಷ್ಟು ನಯ. ಹಿಂದಿನಿಂದ ಏನೇ ಮಾತಾಡಿದರೂ ಎದುರು-ಬದುರು ನಿಂತಾಗ ಸಕ್ಕರೆಯಂತ ಸವಿಯಾದ ಮಾತುಗಳು ತುಂಬ ಮುಖ್ಯ. ಜೊತೆಗೆ ‘ಬಾಡಿ ಲಾಂಗ್ವೇಜ್’ ಕೂಡ!

ತಮಿಳುನಾಡಿನಿಂದ ಸ್ಕಾಲರ್ ಶಿಪ್ ಗಳಿಸಿ ತನ್ನ ತಂದೆಯ ಪಿಂಚಣಿ ಹಣದಲ್ಲಿ ವಿಮಾನ ಯಾನದ ಖರ್ಚು ಭರಿಸಿ ಇಲ್ಲಿಗೆ ಬಂದಿದ್ದ ಒಬ್ಬ ಪ್ರತಿಭಾನ್ವಿತ ಯುವ ವೈದ್ಯನ ಕಥೆ ಕೇಳಿ. ಈತನಿಗೆ ಇನ್ನೂ ಮದುವೆಯೂ ಆಗಿರಲಿಲ್ಲ. ಆಸ್ಪತ್ರೆಯಲ್ಲಿ ಇವನು ಒಂದೆಡೆ ಕೆಲಸ ಮಾಡುತ್ತಿದ್ದಾಗ ದಾದಿಯೊಬ್ಬಳು ಈತನನ್ನು ವಾರ್ಡಿಗೆ ಬರುವಂತೆ ಕರೆದಳು. ಏನೋ ಕೆಲಸದಲ್ಲಿ ನಿರತನಾಗಿದ್ದ ಇನ್ನೂ ಮದುವೆಯಾಗಿರದ ಈತ ದೂರದಲ್ಲಿದ್ದ ಅವಳಿಗೆ ಕೂಗಿ ಹೇಳುವ ಬದಲು “ಒಂದು ನಿಮಿಷ ಬರುತ್ತೇನೆ” ಅಂತ ತೋರು ಬೆರಳು ಎತ್ತಿ ತೋರಿಸಿದ. ಅದನ್ನವಳು “ಫಿಂಗರ್ ಅಪ್ ಯುವರ್ ಆ…” ಅಂತ ಗ್ರಹಿಸಿದಳು! ಗ್ರಹಚಾರಕ್ಕೆ ಅವನ ಬಗ್ಗೆ ಲಿಖಿತ ದೂರನ್ನು ಕೂಡ ಸಲ್ಲಿಸಿದಳು. ಆತನ ಕೆಲಸ ಹೋಯ್ತು. ಅವನು ನಂತರ ಕೊಟ್ಟ ವಿವರಣೆ ಎಲ್ಲ ವಿಚಾರಣೆ ಶುರುವಾದ ಮೇಲೆ, ಪೈಸಕ್ಕೆ ಪೈಸೆ ಕೂಡಿಸಿ, ಏನನ್ನೋ ಸಾಧಿಸುವ ಹುಮ್ಮಸ್ಸಿನ ಕನಸು ಕಟ್ಟಿ ಬಂದ ಆತನ ಪಾಡನ್ನು ನೋಡಲಾಗುತ್ತಿರಲಿಲ್ಲ.

ನಮ್ಮದು ತಲೆಗೆ ಬಂದಂತೆ ಮಾತಾಡಬಹುದಾದ ದೇಶ. ಬಹುಶಃ ಅದೊಂದೇ ನಾವು ನಮ್ಮ ದೇಶದಲ್ಲಿ ಮುಕ್ತವಾಗಿ ಮಾಡಿ ನಿಟ್ಟುಸಿರಿಡಬೇಕಾದ ಪರಿಸ್ಥಿತಿಯಿದೆ. ನಮ್ಮ ದೇಶದಲ್ಲಿ ಮೊದಲಿಗೆ ಮನೆಯಲ್ಲಿ ಮಾತು ಹೇಳಿಕೊಡುತ್ತಾರೆ, ‘ಏಕವಚನ’ ಬೇಡ ‘ಬಹುವಚನ’ ದಲ್ಲಿ ಮಾತಾಡಬೇಕು. ‘ಎಡಗೈ’ ನ್ನು ಪುಣ್ಯದ ಕೆಲಸಗಳಿಗೆ ಬಳಸಬಾರದು, ಎಲ್ಲಿಗಾದರೂ ಹೊರಟಾಗ ‘ಎಲ್ಲಿಗೆ’ ಎಂದು ಕೇಳಬಾರದು ಎಂದೆಲ್ಲ ತಿಳುವಳಿಕೆ ನೀಡುತ್ತಾರೆ. ‘ಸುಳ್ಳು ಹೇಳಬಾರದು’ ಎಂದು ಕೂಡ ಕಲಿಸುತ್ತಾರೆ. ಆದರೆ ಸಕಾರಾತ್ಮಕ ಪ್ರಚೋದನೆಗಳ ಲಾಭವನ್ನು, ಬೇರೆಯವರ ಮನಸ್ಸನ್ನು ಮುದಗೊಳಿಸುವಂತೆ ಮಾತಾಡುವ ಕಲೆಯನ್ನು ಸಮುದಾಯ ಮಟ್ಟದಲ್ಲಿ ಇನ್ನೂ ಕಲಿಸುತ್ತಿಲ್ಲ. ನಾನೂ ಕಲಿತು ಬಂದಿರಲಿಲ್ಲ. ಹಾಗಾಗಿ ಇಲ್ಲಿನ ಸಾಮಾಜಿಕ ರೀತಿಯ ಮಾತುಗಾರಿಕೆಯನ್ನು ಕಲಿಯುವುದಕ್ಕೆ ಬಹಳ ಶ್ರಮಪಟ್ಟಿದ್ದೇನೆ. ಆದರೂ ಕರಗತವಾಗಿಲ್ಲ. ಕಾರಣವಿಷ್ಟೆ. ಇಲ್ಲಿನ ಜನರು ಮಾತಿನ ಕಲೆಯನ್ನು ತಲ ತಲಾಂತರದಿಂದ ಮುಂದಿನ ಪೀಳಿಗೆಗಳಿಗೆ ರವಾನಿಸಿದ್ದಾರೆ. ಬಾಲ್ಯದಿಂದಲೇ ಆ ಕಲೆ ಇವರಿಗೆ ಉಣಿಸಲ್ಪಡುತ್ತದೆ. ಹಾಗಾಗಿ ಇತರೆ ದೇಶದವರ ಮಾತುಗಳು ಇಲ್ಲಿ ಅಸಂಬದ್ಧವಾಗಿಯೂ, ಒರಟಾಗಿಯೂ ಕೇಳಿಸುತ್ತದೆ. ಮನಸ್ಸಿನಲ್ಲಿ ಎಂತಹ ಸದುದ್ದೇಶಗಳಿದ್ದರೂ, ತಲೆಯಲ್ಲಿ ಅಪಾರ ಅರಿವಿದ್ದರೂ, ಕೈ ಕೆಲಸದಲ್ಲಿ ಉತ್ತಮ ನೈಪುಣ್ಯತೆಯಿದ್ದರೂ ಮಾತಿನ ಮುಂದಾಳತ್ವವಿಲ್ಲದಿದ್ದರೆ ಮಿಕ್ಕೆಲ್ಲ ಹಲವು ಬಾರಿ ವಿಫಲವಾಗುವುದನ್ನೂ ನೋಡಿದ್ದೇನೆ. ಹಾಗಾಗಿ ಇಂಗ್ಲಿಷರ ಜೊತೆಗೆ ಮಾತಿನ ಕಲೆಗೆ ಸ್ಪರ್ಧೆಯೊಡ್ಡುವುದು ಸುಲಭದ ಮಾತಲ್ಲ.

ನಮ್ಮ ದೇಶದಲ್ಲಿ ‘ಏನೇ’.. ‘ಬಾರೇ’ ಎಂದು ಹೆಣ್ಣು ಮಕ್ಕಳನ್ನು ಸಂಭೋದಿಸುವ ಹಲವು ಶಿಕ್ಷಕರಿದ್ದಾರೆ. ಅಸಭ್ಯ ಭಾಷೆಗಳಲ್ಲಿ ಮಕ್ಕಳನ್ನು ಬೈಯುತ್ತಾರೆ. ಭಾಷಾ ವಿನಯ, ನಾಜೂಕು ಏನೂ ತಿಳಿಯದ ಜನರು ಮಕ್ಕಳಿಗೆ ಪಾಠ ಕಲಿಸಿದರೆ ಏನಾಗಬಹುದು? ಸ್ವತಃ ಅವರಿಗೇ ಇಲ್ಲದ ತಿಳುವಳಿಕೆಯನ್ನು ಅವರು ಮಕ್ಕಳಿಗೆ ಹೇಳಿಕೊಡಲು ಸಾಧ್ಯವಿಲ್ಲ. ನಾವಿನ್ನೂ ಮನಸ್ಸಿಗೆ ಹಿಡಿಸದ ವಿಚಾರಗಳನ್ನು ಮೌನವಹಿಸಿ ಸಹಿಸುವ, ಸುಮ್ಮನಿರುವ ವಿದ್ಯೆಗಳಲ್ಲಿ ಸಂಭಾವಿತರಾಗಿರುವ ಜನ. ನಂಬಲು ಕೂಡ ಸಾಧ್ಯವಾಗದಂತೆ ಹಾಡಿ ಹೊಗಳುವ ಹಲವು ಮಂದಿ ಸಮಾಜದಲ್ಲಿದ್ದರೂ, ನಕಾರಾತ್ಮಕ ವಿಚಾರಗಳನ್ನು ಸಕಾರಾತ್ಮಕವಾಗಿ ಕೇಳುವಂತೆ ಹೇಳಬಲ್ಲ ವಿದ್ಯೆ ಇನ್ನೂ ಕರಗತವಾಗಿಲ್ಲದ ಜನ. ಜನ ನಾಯಕರು ಕೂಡ ಅಸಂಬದ್ಧವಾಗಿ, ಪ್ರಚೋದನಾತ್ಮಕವಾಗಿ, ದೂಷಣೆಗಳಿಂದ ಕೂಡಿದ ಭಾಷಣಗಳಲ್ಲೇ ನಮ್ಮ ಜನರ ಮನಸ್ಸಿಗಿಳಿಯುವುದು. ಇಂತವರ ಅಬ್ಬರದ ಮುಂದೆ ಪ್ರಬುದ್ಧ ಜನರು ಮೌನವಾಗಬೇಕಾದ ಪರಿಸ್ಥಿತಿಯಿದೆ. ಸಮಾಜವೊಂದರ ಅಗತ್ಯದ ಆರಿವು ಆಳುವವರಿಗಿರಬೇಕು. ಸಮಾಜದ ಮೌಲ್ಯಗಳು ಮುರಿದುಹೋಗುತ್ತಿದ್ದರೂ ಮೈಮರೆತು ಮಾಡುವ ರಾಜಕಾರಣದಿಂದ ಸಮಾಜ ತಾನೇ ಹೇಗೆ ಸುಧಾರಿಸಬಲ್ಲುದು?

ಹೊರದೇಶದಿಂದ ಬಂದು ಇಲ್ಲಿನ ಜನರೊಡನೆ ಒಡನಾಡುವ, ಮಾತನಾಡುವ ವೃತ್ತಿಯಲ್ಲಿರುವ ಮಂದಿ ಇಂಗ್ಲೀಷರ ನಯವನ್ನು, ಮಾತುಗಾರಿಕೆಯ ಕಲೆಯನ್ನು ಕಲಿಯದಿದ್ದರೆ ಭಾರೀ ತೊಂದರೆಗೆ ಸಿಲುಕುತ್ತಾರೆ. ನಾನು ಇಂಗ್ಲೆಂಡಿಗೆ ಬಂದ ಹೊಸತರಲ್ಲಿ “ನನಗೆ ಡಯಾಬಿಟೀಸ್ ಇದೆ… ನಿನಗೆ ಕ್ಯಾನ್ಸರ್ ಇದೆ… ಎಲ್ಲರೂ ಒಂದಲ್ಲ ಒಂದು ದಿನ ಸಾಯಬೇಕು …” ಎಂದು ರೋಗಿಗೆ ಸಮಾಧಾನ ಹೇಳಿದ ಕಾರಣಕ್ಕೆ ಭಾರತೀಯ ಮೂಲದ ವೈದ್ಯನೊಬ್ಬನನ್ನು ಇಲ್ಲಿನ ನ್ಯಾಯಾಲಯ ವಿಚಾರಣೆಗೆ ಒಳಪಡಿಸಿತ್ತು. ಈ ವೈದ್ಯ ತನಗೆ ತಿಳಿದ ‘ವೇದಾಂತ’ ವನ್ನು ಬಳಸಿ ಆ ರೋಗಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದ. “ಇದು ರೋಗಿಯೊಬ್ಬನಿಗೆ ಹೇಳುವಂತ ಮಾತಲ್ಲ. ಆತನ ಮನಸ್ಸಿಗೆ ಇದರಿಂದ ಅಪಾರ ನೋವಾಗಿದೆ” ಎಂಬುದು ಅದರ ವಾದವಾಗಿತ್ತು. ಹಾಗಂತ ರೋಗಿಯೇ ಕಂಪ್ಲೇಂಟ್ ಕೊಟ್ಟಿದ್ದ. ಇಂತಹ ಕ್ಷುಲ್ಲಕ ಕಾರಣಕ್ಕೆಲ್ಲ ಇಷ್ಟೊಂದು ವಿಚಾರಣೆಯೇ ಎಂಬ ಕಾರಣಕ್ಕೆ ಈ ವಿಚಾರ, ಬಿ.ಬಿ.ಸಿ. ಯಲ್ಲಿ ಬಿಸಿ ಬಿಸಿ ಚರ್ಚೆಯಾಗಿಬಿಟ್ಟಿತ್ತು.

 

ಆಡಳಿತದ ಮಂದಿಗೇ ಈ ಬಗ್ಗೆ ಅರಿವಿಲ್ಲದಿದ್ದರೆ ಅವರು ಅದನ್ನು ವಿದ್ಯಾಭ್ಯಾಸದಲ್ಲಿ ಬೆರೆಸುವುದರಲ್ಲಿ ವಿಫಲರಾಗುತ್ತಾರೆ. ಇದರ ಜೊತೆ ಸಮಾಜದ ಮಾತುಕತೆಯ ಶಿಷ್ಟಾಚಾರಗಳ ಮೇಲೆ ಅತ್ಯಂತ ವಿಶಿಷ್ಟ ಪರಿಣಾಮ ಬೀರುವ ಮಾಧ್ಯಮಗಳು ಕೂಡ ಇತ್ತೀಚೆಗೆ ಹಿಂದಿದ್ದ ಸಭ್ಯತೆಯನ್ನು ಕಳೆದುಕೊಂಡಿರುವುದು ಭಾರತದ ದುರಂತ. ನಮ್ಮ ರಾಜ್ಯದಲ್ಲಿಯೂ ಮಾಧ್ಯಮಗಳು, ಸಿನಿಮಾ, ಟೀವಿಗಳು ಭಯಾನಕ ಕರ್ಕಶವಾಗಿ ಕೇಳಿಸುವ ಹೊಸ ಕನ್ನಡ ಭಾಷೆಯನ್ನು ಬಳಸುತ್ತಿದ್ದಾರೆ. ಬೀಚಿಯವರು “ಹೋದುದು ಹಳೆಗನ್ನಡ, ಹೋಗುತ್ತಿರುವುದು ನಡುಗನ್ನಡ, ನಡೆಯುತ್ತಿರುವುದು ಬಡ ಕನ್ನಡ, ಬರಲಿರುವುದು ‘ಎಬಡ’ ಕನ್ನಡ!” ಎಂದು ಹೇಳಿದ್ದಾರೆ. ಇಂದಿನ ಹಲವು ಕನ್ನಡ ಚಾನೆಲ್ಲುಗಳನ್ನು ವೀಕ್ಷಿಸಿದರೆ, ‘ಎಬಡ’ ಕನ್ನಡ ಈಗಾಗಲೇ ನಡೆಯುತ್ತಿದೆ ಎಂದೆನಿಸದೇ ಇರದು.

ಭಾರತದಲ್ಲಿ ಇವತ್ತು ಹಲವು ಭಾಷೆಗಳು ಸಾಯುತ್ತಿವೆ. ಜೊತೆಗೆ ಅವುಗಳ ಜೊತೆಗಿನ ಸಂಸ್ಕೃತಿ ಕೂಡ. ಇನ್ನು ಭಾಷೆಯ ಬಗೆಗಿನ ಶಿಷ್ಟಾಚಾರಗಳು, ಬಳಕೆ, ಅವುಗಳ ಹಿಂದಿನ ಮಾನಸಿಕ ಇಂಗಿತಗಳ ಕಲೆ ಸಿದ್ದಿಸುವುದು ಗೌಣವಾಗುತ್ತಿರುವ ದೇಶ ನಮ್ಮದು. ಬದಲಿಗೆ ಇತರೆ ದೇಶದವರ ಅನುಕರಣೆಯಲ್ಲಿಯೇ ನಮ್ಮ ಕಲಿಕೆ ಮುಂದುವರೆದಂತಿದೆ. ಆದರೆ ತಳಹದಿಯೇ ಇಲ್ಲದೆ ಅನುಕರಣೆಯಿಂದ ಮಾತ್ರ ಬರುವ ಮಾತುಗಾರಿಕೆಯ ಮಿತಿ ಬಹಳ ಸಣ್ಣದಾಗಿರುತ್ತದೆ. ಆಳ ಮತ್ತು ಹರಹುಗಳ ಕೊರತೆ ಅಪಾರವಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಇಂತಹ ಜೊಳ್ಳು ಕಾಳುಗಳು ತೇಲಿ ಬೇರೆಯಾಗಿ ಬಿಡುವುದು ಅತ್ಯಂತ ಸುಲಭ ಕೂಡ. ಹಾಗಾಗಿ ಸಂಸ್ಕೃತಿಯಾಗಿ ಒಲಿದು ಬರದೆ, ಬರೀ ಅನುಕರಣೆಯ ಆಡಂಬರದ ಮಾತುಗಳಿಂದ, ಪದ ಲೋಲುಪತೆಗಳಿಂದಲೇ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ.

ಇದುವರೆಗೆ ಮತ್ತೂ ಹದಿನಾಲ್ಕು ದೇಶಗಳನ್ನು ಸುತ್ತಿ ಬಂದಿದ್ದೇನೆ. ಆದರೆ ಇಂಗ್ಲೆಂಡಿನಲ್ಲಿ ಹಲವು ವರ್ಷ ಕಳೆದಿರುವ ನನಗೆ ಯಾವ ದೇಶದವರೂ ಇವರಿಗೆ ಸರಿ ಸಮಾನವಾಗಿ ಮಾತನಾಡುವುದಿಲ್ಲ ಎಂದು ಗಾಢವಾಗಿ ಅನ್ನಿಸಿದೆ. ಇವರ ಕುಹಕ ಹಾಸ್ಯ ಪ್ರಜ್ಞೆ ಕೂಡ ಅತ್ಯಂತ ವಿಶಿಷ್ಟವೇ. ಇಂಗ್ಲಿಷರ ಕುಹಕ ಅದೆಷ್ಟು ನಾಜೂಕಿನದೆಂದರೆ ನಿಮ್ಮೆದುರು ನಿಂತೇ ನಿಮ್ಮನ್ನು ಆಡಿಕೊಳ್ಳುತ್ತಿದ್ದರೂ ಅದು ನಿಮಗೆ ಹೊಗಳಿಕೆಯಂತೆಯೇ ಕೇಳಿಸಬಲ್ಲದು! ಧ್ವನಿಯ ನಿಯಂತ್ರಣ ಮತ್ತು ಮುಖದ ಭಾವ ನಿಯಂತ್ರಣಗಳನ್ನೂ ಅದರ ಜೊತೆಯೇ ಮಾಡಬಲ್ಲ ಇವರ ಮಾತುಗಾರಿಕೆಗೆಯ ಬಗ್ಗೆ ಮೆಚ್ಚುಗೆ ತಾಳದಿರಲು ಸಾಧ್ಯವಿಲ್ಲ.

ಉಸಿರು ಕಟ್ಟಿ, ತಡಬಡಾಯಿಸದೆ ಮಾತಿನಲ್ಲೇ ಎದುರಿರುವವರನ್ನು ಸದೆಬಡಿಯುವುದು, ಕಿಚಾಯಿಸುವುದು, ನಗಿಸುವುದು, ನೆಲದಿಂದ ಎರಡಡಿ ಮೇಲಕ್ಕೆ ತೇಲಿಸುವುದು ಎಲ್ಲದರಲ್ಲೂ ಇವರು ನಿಪುಣರು. ಇವರ ಮಾತುಗಾರಿಕೆಯ ಸಾಮಾಜಿಕ ನಿಯಮಗಳು, ಸೌಜನ್ಯಗಳು ಸಾಂಪ್ರದಾಯಿಕ ನೆಲೆಯಿಂದ ಮೂಡಿದಂತವು. ಕಾಲಾನುಕ್ರಮದಲ್ಲಿ ಬದಲಾಗುತ್ತ ನಡೆದಂತವು. ಇವರ ಮಾತಿನಲ್ಲಿ ನೇರವಾದ ಹೊಗಳಿಕೆಯಿದ್ದರೂ, ಸ್ವಪ್ರಶಂಸೆ ಗೌಣವಾಗಿರುತ್ತದೆ. ಹಾಗೆಯೇ ಗುಡ್ಡ ಹತ್ತಿ ಬಂದ ಕೆಲಸದ ಹೇಳಿಕೆಯಲ್ಲಿ ಪರ್ವತವನ್ನೇ ಏರಿಬಂದ ವರ್ಣನೆಯಿರುತ್ತದೆ. ಮಾತು ಮಾತಿನಲ್ಲಿ ಹಾಸ್ಯವನ್ನು ಬೆರೆಸಿ ಬದುಕನ್ನು ಹಗುರವಾಗಿಸುವ ಕಲೆಯಿರುತ್ತದೆ. ಸಣ್ಣ ಮಕ್ಕಳಿಗೆ, ವಯಸ್ಸಾದವರಿಗೆ, ವಯಸ್ಕರರಿಗೆ ಇವರ ಮಾತಿನ ಬತ್ತಳಿಕೆಯಲ್ಲಿ ಭಿನ್ನ, ಭಿನ್ನ ಬಾಣಗಳಿರುತ್ತವೆ. ಸ್ವಂತ ಮಾಡಿಕೊಳ್ಳುವ ಪರಿಹಾಸ್ಯವೂ ಅಗಾಧವಾಗಿರುತ್ತದೆ. ಪರೋಕ್ಷವಾಗಿ ಮಾತಿನ ಚಾಟಿಯನ್ನು ಬೀಸುತ್ತಲೇ ತಮ್ಮದೇ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಆಡಿಕೊಳ್ಳುವ, ಒಪ್ಪಿಕೊಳ್ಳುವ ಪ್ರಬುದ್ಧತೆಯೂ ತೋರಿಬರುತ್ತದೆ. ಶತಮಾನಗಳಿಂದಲೂ ಇಂತಹ ಮಾತುಗಾರಿಕೆಯ ಕಲೆಯ ಒಂದು ಪ್ರಕಾರವನ್ನೇ ಇವರು ಬೆಳೆಸಿಕೊಂಡು ಬಂದಿದ್ದಾರೆ. ‘ಸ್ಟಾಂಡ್ ಅಪ್ ಕಾಮೆಡಿ’ ಯ ಪ್ರಕಾರಗಳಿಗೆ ಇಂಗ್ಲಿಷ್ ನೆಲ ಹೆಸರುವಾಸಿ. ಮಾತು ಮಾತಿನಲ್ಲಿ ‘ಡಾರ್ಲಿಂಗ್’ , ‘ಹನಿ’, ‘ಏಂಜಲ್’, ‘ಲವ್ಲೀ’, ‘ಎಕ್ಸಲೆಂಟ್’, ‘ವೆಲ್ ಡನ್’, ‘ಪ್ಲೀಸ್’, ‘ವೆರಿ ಕೈಂಡ್’ ಪದಗಳು ತುಂಬಿ ತುಳುಕುತ್ತವೆ. ಇಂತಹ ಸವಿ ಪದಗಳಿಗೆ ಒಗ್ಗಿದ ನಂತರ ‘ಏನು?’, ‘ಯಾಕೆ?’ ಎಂಬಂತ ನೇರ ಪದ/ಪ್ರಶ್ನೆಗಳು ಕಿವಿಗೆ ಕರ್ಕಶವಾಗಿ ಕೇಳುತ್ತವೆ. ನಾವು ಇಂಗ್ಲೀಷರಲ್ಲದಿದ್ದರೂ ಮೂರು ಬಾರಿ ಕೈಗೊಂಡಿರುವ ಅಮೆರಿಕಾ ಪ್ರವಾಸದಲ್ಲಿ ಆಂಗ್ಲ ಭಾಷೆಯನ್ನೇ ತವರು ಭಾಷೆಯನ್ನಾಗಿ ಮಾಡಿಕೊಂಡಿರುವ ಅಮೆರಿಕನ್ನರ ಮಾತು ಬಹಳ ‘ಒರಟು’ ಎಂದೆನ್ನಿಸಿದೆ. ಇನ್ನು ಮಿಕ್ಕ ದೇಶಗಳ ಬಗ್ಗೆ ಹೇಳುವಂತೆಯೇ ಇಲ್ಲ. ಹಾಗಾಗಿ ಇಂಗ್ಲಿಷರ ಮಾತುಗಾರಿಕೆ ಅವರ ಸಂಸ್ಕೃತಿಯ ಅತಿ ದೊಡ್ಡ ಭಾಗ ಎಂಬುದರ ಅರಿವಾಗಿದೆ. ಈ ಕಾರಣಕ್ಕೆ ಇಂಗ್ಲೆಂಡಿಗೆ ಬಂದ ಹೊಸತರಲ್ಲಿ ಮಾತನಾಡುವುದನ್ನು ಕಲಿಯಲು ಮತ್ತೆ ಶುರುಮಾಡಬೇಕಾಯಿತು ಎಂದರೆ ತಪ್ಪಿಲ್ಲ. ಅದರ ಜೊತೆ ಇಂಗ್ಲಿಷರ ಮಾತಿನ ನಿಜ ಭಾವಾರ್ಥಗಳನ್ನು ಕೂಡ ಕಲಿಯತೊಡಗಿದೆ!

(ಮುಂದುವರೆಯುವುದು)