ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.
ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ
ನಾಳಿನವರ ಪಾಲಿಗೆ ನಾವು ಶ್ಲಾಘನೀಯರಾಗುವುದು ದಿನದಿನಕ್ಕೆ ಕಷ್ಟವಾಗಲಿದೆ
ಐವತ್ತು ವರ್ಷಗಳ ಹಿಂದೆ ಜಪಾನೀಯರ ನಿಘಂಟಿಗೆ ‘ಕೊಗಾಯ್ʼ ಎಂಬ ಹೊಸ ಪದವೊಂದು ಸೇರಿಕೊಂಡಿತು. ಅದರ ಸರಿಯಾದ ಅರ್ಥ ಬೇಕೆಂದರೆ ನಾವು ಕನ್ನಡದಲ್ಲೂ “ದುಸ್ಸುಧಾರಣೆ” ಎಂಬ ಹೊಸ ಪದವನ್ನು ಟಂಕಿಸಬೇಕು. ಅಥವಾ ಅಪಸೌಲಭ್ಯ ಎಂದರೂ ಸರಿ. ಅಭಿವೃದ್ಧಿಯ ಹೆಸರಿನಲ್ಲಿ ಒಂದು ಸಮಾಜ ತನ್ನ ಮೇಲೆ ಎಳೆದುಕೊಳ್ಳುತ್ತಿರುವ ಸಂಕಟಗಳಿಗೆ ‘ಕೊಗಾಯ್ʼ ಪದ ಅಲ್ಲಿ ಬಳಕೆಗೆ ಬಂದಿತ್ತು. ಆಕಾಶದಲ್ಲಿ ಕೊಳಕು ಗಾಳಿ, ಸಮುದ್ರದಲ್ಲಿ ಕೊಳಕು ನೀರು, ನದಿಯಲ್ಲಿ ಕೊಳಕು ಧಾರೆ, ಮಣ್ಣೆಂದರೆ ಕೊಳಕು ಮಣ್ಣು.
ಅಂದು ಜಪಾನಿನಲ್ಲಿ ಎಲ್ಲೆಲ್ಲೂ ಕೈಗಾರಿಕಾ ಕ್ರಾಂತಿಯ ಈ ಎಲ್ಲ ದುರ್ಲಕ್ಷಣಗಳು ಕಾಣುತ್ತಿದ್ದವು. ಪಾದರಸದ ಅತಿ ಬಳಕೆಯಿಂದ ‘ಮಿನಾಮಾಟಾ ಕಾಯಿಲೆʼ ಮೈದಳೆದಿತ್ತು. ಕಡಲಂಚಿನ ಮಿನಾಮಾಟಾ ಎಂಬ ಊರಿನಲ್ಲಿ ಮೀನನ್ನು ತಿನ್ನುವ ಎಲ್ಲ ಜೀವಿಗಳೂ (ಬೆಕ್ಕು, ನಾಯಿ, ಮನುಷ್ಯ ಜೀವಿಗಳು, ಹಾರಾಡುವ ಪಕ್ಷಿಗಳು) ಕುಣಿಕುಣಿದು ತಲೆತಿರುಗಿ ಬಿದ್ದು ಸಾಯುತ್ತಿದ್ದವು. ಅದು ಅಂದಿನ ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಸಂಭವಿಸಿ ಎನ್ನಿಸಿತ್ತು. ನಮ್ಮ ಭೋಪಾಲ್ ದುರಂತದಂತೆ ಅದೇನೂ ಹಠಾತ್ ಸಂಭವಿಸಿರಲಿಲ್ಲ. ಕಾರ್ಖಾನೆಯೊಂದು ಮೀಥೈಲ್ ಮರ್ಕ್ಯುರಿ ಹೆಸರಿನ ಕೊಳೆಯನ್ನು ನೀರಿಗೆ ಹರಿಸುತ್ತಿರುವುದೇ ಕಾರಣ ಎಂಬುದು ಗೊತ್ತಾಗಲು ಇಪ್ಪತ್ತು ವರ್ಷಗಳೇ ಬೇಕಾದವು. ಇಂದು ಅಲ್ಲಿ ‘ಕೊಗಾಯ್ʼ ಪದ ಬಳಕೆಯಲ್ಲಿಲ್ಲ. ಜಪಾನ್ ಅದೆಷ್ಟು ತ್ವರಿತವಾಗಿ, ಅದೆಷ್ಟು ದಕ್ಷತೆಯಿಂದ ಮಾಲಿನ್ಯ ನಿವಾರಣಾ ಕ್ರಮಗಳನ್ನು ಜಾರಿಗೆ ತಂದಿತೆಂದರೆ -ಉದಾಹರಣೆಗೆ, ಕಾರುಗಳ ತಯಾರಿಕೆಗೆ ಬೇಕಿದ್ದ ಎಲ್ಲ ಲೋಹ, ಗಾಜು, ಪ್ಲಾಸ್ಟಿಕ್, ರಬ್ಬರ್ ಉತ್ಪಾದನಾ ಘಟಕಗಳೂ ಚೊಕ್ಕಟಗೊಂಡವು; ಹಾಗೆ ತಯಾರಾಗಿ ರಸ್ತೆಗಿಳಿಯುವ ಕಾರುಗಳ ಹೊಗೆ ಕೊಳವೆ, ಇಂಧನ ಕ್ಷಮತೆಯೂ ಸುಧಾರಿಸುತ್ತ, ಅಲ್ಲಿ ತಯಾರಾಗುವ ಉತ್ಪನ್ನಗಳು ಇತರ ದೇಶಗಳಿಗೂ ಮಾದರಿಯಾದವು.
ನಾವೆಲ್ಲಿದ್ದೇವೆ? ನಿನ್ನೆಯ ಪಿಟಿಐ ವರದಿಯ ಪ್ರಕಾರ, ಜಗತ್ತಿನ 180 ದೇಶಗಳ ‘ಪರಿಸರ ನಿರ್ವಹಣಾ ಸೂಚ್ಯಂಕʼದ ಪ್ರಕಾರ ಡೆನ್ಮಾರ್ಕ್ ದೇಶ 78 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಇಂಡಿಯಾ 19 ಅಂಕಗಳನ್ನು ಪಡೆದು ಕೊನೆಯ 180ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ಟರ್ಕಿ, ಸುಡಾನ್, ಹೈಟಿ, ಇಥಿಯೋಪಿಯಾದಂಥ ದೇಶಗಳು ಭಾರತಕ್ಕಿಂತ ಹೆಚ್ಚು ಗೌರವದ ಸ್ಥಾನದಲ್ಲಿವೆ. ಹಾಗೆಂದು ನಮ್ಮ ಸರಕಾರ ಘೋಷಿಸಿದ ಯೋಜನೆಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಸ್ವಚ್ಛ ಭಾರತ್, ಸಶಕ್ತ ಭಾರತ್, ಸಕ್ಷಮ ಭಾರತ್, ಸಮಗ್ರ ಭಾರತ್, ಸನಾತನ ಭಾರತ್ ಮುಂತಾದ ಸ-ಕಾರಾತ್ಮಕ ಯೋಜನೆಗಳು ಸಾಲುಗಟ್ಟಿ ಬರುತ್ತಿವೆ. ಆದರೂ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಭಾರತದ ಶ್ರೇಯಾಂಕ ಪದೇ ಪದೇ ಕುಸಿಯುತ್ತಿದೆ ಯಾಕೊ?
ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ 1984ರಲ್ಲಿ ಭೋಪಾಲ್‌ನಲ್ಲಿ ಸಂಭವಿಸಿತು. ಕೀಟನಾಶಕ ವಿಷಗಳ ಉತ್ಪಾದನೆಗೆ ಬೇಕಿದ್ದ ಮೂಲ ಸಂಯುಕ್ತವನ್ನು (ಮೀಥೈಲ್ ಐಸೊಸೈನೇಟ್) ಭೋಪಾಲದ ಕಾರ್ಖಾನೆ ತಯಾರಿಸುತ್ತಿತ್ತು. ಅದು ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಎನ್ನಿಸಿತು. ಆ ದುರಂತ ನಡೆದ 15 ವರ್ಷಗಳ ನಂತರ ಎಂಡೊಸಲ್ಫಾನ್ ದುರಂತವೂ ಕಾಸರಗೋಡಿನಲ್ಲಿ ಬೆಳಕಿಗೆ ಬಂತು. ಅದೂ ಜಗತ್ತಿನ ಅತಿ ದೊಡ್ಡ ಕೃಷಿವಿಷದ ದುರಂತ. ನಾವು ಪಾಠ ಕಲಿತೆವೆ? ಬೇರೆ ದೇಶಗಳಲ್ಲಿ ನಿಷೇಧಿಸಲಾದ 66 ಬಗೆಯ ಕೀಟವಿಷಗಳು ಈಗಲೂ ನಮ್ಮಲ್ಲಿ ಬಳಕೆಯಲ್ಲಿವೆ. ಆ 66ರ ಪೈಕಿ ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಅಪಾಯ ತರಬಲ್ಲ 27ನ್ನು ನಿಷೇಧಿಸುವ ಪ್ರಸ್ತಾವನೆಯೇನೋ ಇದೆ. ನಿಷೇಧವಾಗಿಲ್ಲ ಇನ್ನೂ. ವಿಷವಸ್ತುಗಳ ಉತ್ಪಾದಕರಿಗೆ ಒಳ್ಳೆಯದಾಗಲೆಂದು ಈ ಪ್ರಸ್ತಾವನೆಯನ್ನೇ ಆದಷ್ಟು ದುರ್ಬಲಗೊಳಿಸುವ ಮತ್ತು ನೆಪಮಟ್ಟಕ್ಕಿಳಿಸುವ ಹುನ್ನಾರ ಕಾಣುತ್ತದೆಂಬ ಟೀಕೆ ಆಗಲೇ ಬಂದಿತ್ತು. ಈಗಂತೂ ನಿಷೇಧ ಎಂದರೆ ಹಿಜಾಬ್ ನಿಷೇಧ, ಧ್ವನಿವರ್ಧಕ ನಿಷೇಧದ ಚರ್ಚೆಗಳೇ ಮುನ್ನೆಲೆಗೆ ಬರುತ್ತಿವೆ ವಿನಾ ಜೀವರಕ್ಷಕ ವಿಷಯಗಳೆಲ್ಲ ಹಿನ್ನೆಲೆಗೆ ಹೋಗಿಬಿಟ್ಟಿವೆ.
ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ. ಹಾಗೆಯೇ ಕೊಳಕು ಗಾಳಿಯ ವಿಸರ್ಜನೆಯ ಪ್ರಮಾಣ ಕಡಿಮೆಯಾಗಿದೆ ಎಂದು ನಮ್ಮ ದೊಡ್ಡ ನಗರಗಳಲ್ಲಿನ ಉಪಕರಣಗಳು ಸಾರುತ್ತವೆ. ಆದರೆ ಲಕ್ಷಾಂತರ ಸಣ್ಣಪುಟ್ಟ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುವವರೇ ಇಲ್ಲ. ಅದರ ಬದಲು ಒಟ್ಟೂ ಎಷ್ಟು ವಾಹನಗಳು ಮಾರಾಟವಾಗಿವೆ, ರಸ್ತೆಯಲ್ಲಿ 15 ವರ್ಷಗಳಿಗಿಂತ ಹಳೇ ವಾಹನಗಳು ಎಷ್ಟಿವೆ ಎಂಬುದರ ಲೆಕ್ಕ ಹಿಡಿದು ಹೊರಟರೆ ಗಾಳಿಯ ಗುಣಮಟ್ಟದ ನೈಜ ಚಿತ್ರಣ ಸಿಗುತ್ತದೆ. ಇಂಥ ಎಲ್ಲ ಲೆಕ್ಕಾಚಾರಗಳಲ್ಲೂ ನಮ್ಮ ದೇಶ ನಪಾಸಾದಂತಿದೆ.
ಈ ವರ್ಷದ ‘ವಿಶ್ವ ಪರಿಸರ ದಿನʼ ಹಿಂದೆಂದಿಗಿಂತ ವಿಶೇಷದ್ದಾಗಿತ್ತು. ಐವತ್ತು ವರ್ಷಗಳ ಹಿಂದೆ, 1972ರಲ್ಲಿ ಸ್ವೀಡನ್ನಿನ ಸ್ಟಾಕ್‌ಹೋಮ್ ನಗರದಲ್ಲಿ “ಇರುವುದೊಂದೇ ಭೂಮಿ” ಹೆಸರಿನ ಮೊದಲ ಪರಿಸರ ಸಮ್ಮೇಳನ ನಡೆದಿತ್ತು. ಈ 50ನೇ ವರ್ಷದಲ್ಲಿ ಮತ್ತೊಮ್ಮೆ “ಸ್ಟಾಕ್‌ಹೋಮ್+50” ಹೆಸರಿನಲ್ಲಿ ಅಲ್ಲೇ ಅದೇ “ಇರುವುದೊಂದೇ ಭೂಮಿ” ಹೆಸರಿನ ಸಮಾವೇಶ ನಡೆಯಿತು. ಮನುಕುಲ ತನ್ನ ಹೊಣೆಯನ್ನು ಸೂಕ್ತವಾಗಿ ನಿಭಾಯಿಸುವುದನ್ನು ಕಲಿತಿದೆಯೆ ಎಂಬುದರ ಮೌಲ್ಯಮಾಪನ ನಡೆಯಿತು. ಕೆಲವು ರಾಷ್ಟ್ರಗಳು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದು ತಂತಮ್ಮ ನೆಲಜಲವನ್ನು ತಕ್ಕಮಟ್ಟಿಗೆ ಚೊಕ್ಕಟ ಇಟ್ಟುಕೊಂಡಿವೆ. ಯುರೋಪಿನ ಆರು ದೇಶಗಳ ಮೂಲಕ ಹಾದು ಹೋಗುವ ರೈನ್ (Rhine) ನದಿ ಸಮುದ್ರಕ್ಕೆ ಸೇರುವವರೆಗೂ ಚೊಕ್ಕಟವಾಗಿಯೇ ಇದೆ. ಆ ನದಿಯ ಒಂದೊಂದು ಹನಿಯೂ ಎಂಬತ್ತು ಬಾರಿ ಬಳಕೆಯಾಗಿ ಮತ್ತೆ ನದಿಗೆ ಸ್ವಚ್ಛ ಸ್ಥಿತಿಯಲ್ಲೇ ಸೇರುತ್ತದೆ ಎಂಬ ಪ್ರತೀತಿ ಇದೆ. ಅಲ್ಲಿನವರ ಆ ಮಟ್ಟಿನ ಪರಿಸರ ಪ್ರಜ್ಞೆಯನ್ನು ಮೆಚ್ಚಲೇಬೇಕು. ಆದರೆ ಇಡೀ ಪೃಥ್ವಿಯ ಸಾಮೂಹಿಕ ಆಸ್ತಿ ಎನಿಸಿದ ವಾಯುಮಂಡಲ ಮತ್ತು ಸಪ್ತಸಾಗರಗಳು ಈ 50 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಳೆಯನ್ನು ಸೇರಿಸಿಕೊಂಡಿವೆ. ಶ್ರೀಮಂತ, ಶಕ್ತಿವಂತ ದೇಶಗಳ ಬೇಜವಾಬ್ದಾರಿ ಜಾಸ್ತಿಯಾಗುತ್ತಿದೆ. ನಮ್ಮ ದೇಶದಲ್ಲೂ ಶ್ರೀಮಂತರು ತುಂಬಾ ದೊಡ್ಡ ಪ್ರಮಾಣದಲ್ಲಿ ಬಿಸಿಗಾಳಿಯನ್ನು ಹೊರ ಹೊಮ್ಮಿಸುತ್ತಾರೆ. ತಾಪಮಾನ ಏರಿಕೆಯ ದುಷ್ಫಲ ಮಾತ್ರ ಜಗತ್ತಿನೆಲ್ಲೆಡೆ ದುರ್ಬಲರಿಗೇ ಹೆಚ್ಚಾಗಿ ಬಡಿಯುತ್ತದೆ.
ಕಳೆದ ವಾರ ಜಗತ್ತಿನ ಪ್ರತಿಷ್ಠಿತ 17 ವಿಜ್ಞಾನ ಸಂಸ್ಥೆಗಳ ತಜ್ಞರು ಒಂದು ಜಂಟಿ ಹೇಳಿಕೆಯನ್ನು ಪ್ರಕಟಿಸಿದರು. ಭೂಮಿಯನ್ನು ಮತ್ತೆ ಸುಸ್ಥಿತಿಗೆ ತರಲು ಹೆಚ್ಚು ಸಮಯ ಉಳಿದಿಲ್ಲ ಎಂದು ಎಚ್ಚರಿಸಿದರು. ನಾವೆಲ್ಲರೂ “ಉತ್ತಮ ನೆರೆಹೊರೆಯವರಾಗೋಣ, ಉತ್ತಮ ಪೂರ್ವಜರಾಗೋಣ” ಎಂದು ಕರೆ ಕೊಟ್ಟರು. ಪೂರ್ವಜರು ಅಂದಾಕ್ಷಣ ನಮಗಿಂತ ಹಿರಿಯರು ಎಂತಲೋ ಅಥವಾ ಇನ್ನೂ ಹಿಂದಿನ ವಾನರರೋ ಎಂಬ ಭಾವನೆ ಮೂಡುತ್ತದೆ. ಅದು ಹಾಗಲ್ಲ. ಮುಂದಿನ ಪೀಳಿಗೆಯ ಮಟ್ಟಿಗೆ ನಾವೂ ಒಂದಲ್ಲ ಒಂದು ದಿನ ಪೂರ್ವಜರೇ ಆಗುತ್ತೇವೆ ತಾನೆ?
ನಮ್ಮ ಪೂರ್ವಜರ ಸಾಧನೆಗಳನ್ನು ಕೊಂಡಾಡಲು ಈಗೀಗ ನಾಮುಂದು, ತಾಮುಂದು ಎನ್ನುತ್ತ ಅನೇಕ ಸ್ವಯಂಘೋಷಿತ ಇತಿಹಾಸಕಾರರು ಉದ್ಭವಿಸುತ್ತಿದ್ದಾರೆ. ನಾಳಿನ ಇತಿಹಾಸ ನಮ್ಮನ್ನು ಹೇಗೆ ಬಣ್ಣಿಸಬಹುದು? ಉತ್ಖನನ ಮಾಡಿದಲ್ಲೆಲ್ಲ ಪ್ಲಾಸ್ಟಿಕ್ ಕಚಡಾ, ಹಳೇ ಟೈರ್, ಸ್ಯಾನಿಟರಿ ಪ್ಯಾಡ್, ಕಾಂಕ್ರೀಟ್ ಕಂಬಿ, ಕೇಬಲ್ ತಂತಿಗಳೇ ಸಿಗುತ್ತಿದ್ದರೆ?
(ಕೃತಿ:“ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”, ಲೇಖಕರು: ನಾಗೇಶ ಹೆಗಡೆ, ಪ್ರಕಾಶಕರು: ಭೂಮಿ ಪ್ರಕಾಶನ, ಬೆಲೆ: 160/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ತುಂಬಾ ಆತಂಕದ ಬರಹ. ನಾಗೇಶ್ ಸರ್ ಗೆ 🙏🏻🙏🏻t