ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಅವರೊಡನೆ ಚರ್ಚಿಸುತ್ತಿದ್ದ ದಿನಗಳು ನನ್ನ ಬದುಕಿನ ಸುವರ್ಣ ಯುಗ. ಅವ್ರಿಗೆ ತಂತ್ರದ ಬಗ್ಗೆ ವಿಶೇಷ ಆಸಕ್ತಿ ಎಂದಾಗ ಒಪ್ಪಿಕೊಂಡಿದ್ದರು. ಅಡಿಗರ ಕುರಿತ ದೂರುಗಳನ್ನೂ, ಮೆಚ್ಚುಗೆಯನ್ನೂ ಮುಕ್ತವಾಗಿ ಹೇಳುತ್ತಿದ್ದರು. ನೀವೇಕೆ ನಿಮ್ಮ ಬರೆಯುವ ರೀತಿಯನ್ನು ಪದೇ ಪದೇ ಬದಲಾಯಿಸಿದಿರಿ. ಮಹಾಪ್ರಸ್ಥಾನದ ಮಾದರಿಯಲ್ಲೇ ಬರೆಯಬಹುದಿತ್ತಲ್ಲ ಎಂದು ಕೇಳಿದಾಗ ನಾನು ಆ ವಯಸ್ಸಿನಲ್ಲೇ ನಿಲ್ಲಲು ಸಾಧ್ಯವಿಲ್ಲವಲ್ಲ ಎಂದು ತುಂಟ ನಗೆ ನಕ್ಕಿದ್ದರು.
ತಮ್ಮ ಗ್ರಹಿಕೆಗೆ ಸಿಕ್ಕ ಕೆ.ವಿ. ತಿರುಮಲೇಶರ ಕುರಿತು ಬರೆದಿದ್ದಾರೆ ಮಾಲಿನಿ ಗುರುಪ್ರಸನ್ನ

ಅವತ್ತೊಂದು ದಿನ ಬೆಳಗ್ಗೆ ಫೇಸ್ಬುಕ್, ವಾಟ್ಸಾಪ್ ಗುಂಪುಗಳಲ್ಲಿ ಬಿಸಿಬಿಸಿ ಚರ್ಚೆ.. ತಿರುಮಲೇಶರು ಕೆಂಡಸಂಪಿಗೆಯಲ್ಲಿ ಬರೆದ ಲೇಖನದಲ್ಲಿ ನನ್ನನ್ನು ಯಾರೂ ಓದುತ್ತಿಲ್ಲ ಎಂದು ಕೊರಗಿದ್ದಾರೆ ಎಂಬುದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿತ್ತು. ಅಷ್ಟು ದೊಡ್ಡ ಲೇಖಕರು ಈ ರೀತಿ ಹಳಹಳಿಸಬೇಕಿಲ್ಲ, ಅವರದೇ ಓದುಗ ವರ್ಗ ಖಂಡಿತಾ ಇರುತ್ತದೆ, ಅವರಿಗೆ ಗೊತ್ತಿಲ್ಲ ಅಷ್ಟೇ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ನಾನು ತಿರುಮಲೇಶ್ ಸರ್ ಅವರಿಗೆ ಫೋನ್ ಮಾಡಿ ಕೇಳಿದೆ..

“ಏಕೆ ಹೀಗೆ ಬರೆದಿರಿ? ಜನ ಹೇಗೆಲ್ಲ ಮಾತನಾಡುತ್ತಿದ್ದಾರೆ. ಹೀಗೆ ಪಬ್ಲಿಕ್ ಆಗಿ ಬರೆಯಬಾರದಿತ್ತು.”
ಅರೆಕ್ಷಣ ಮೌನ ಅತ್ತ ಕಡೆ. ಎಂದಿನ ಮೆಲುದನಿ ಮಾತನಾಡಿತು.

“ನಾನು ಹಾಗೆ ಏಕೆ ಬರೆಯಬಾರದು?”

“ಏಕೆಂದರೆ ನಿಮ್ಮನ್ನು ಓದುವವರು ನಿಜವಾಗಿಯೂ ಬಹಳ ಜನ ಇದ್ದಾರೆ. ನಿಮ್ಮದು ಕಾವ್ಯ ಪ್ರಪಂಚದಲ್ಲಿ ದೊಡ್ಡ ಹೆಸರು. ನಿಮ್ಮ ಅಭಿಮಾನಿಗಳ ಸಂಖ್ಯೆ ಎಷ್ಟಿದೆ ನಿಮಗೇ ಗೊತ್ತಿಲ್ಲ.”
ಸಣ್ಣಗೆ ನಕ್ಕರು.

“ಮಾಲಿನಿ, ಕಾವ್ಯ ಪ್ರಪಂಚದಲ್ಲಿ ದೊಡ್ಡ ಹೆಸರು! ನಾನು ಬರೀ ಕಾವ್ಯವನ್ನಷ್ಟೇ ಬರೆದಿಲ್ಲವಲ್ಲ. ಸರಿಯಾಗಿ ನನ್ನನ್ನು ಓದುವವರು ಯಾರೂ ಇಲ್ಲ ಎಂಬುದನ್ನು ನಾನು ಬರೆಯಬಾರದು ಯಾಕೆ? ನನಗೆ ನೋವಾಗಬಾರದು ಎಂದು ಏಕೆ ಹೇಳಬೇಕು? ನೀನು ಬರೆದಿದ್ದು ಸರಿ ಇಲ್ಲ ಎಂದು ಬೇಕಾದರೆ ಹೇಳಲಿ. ನಾನು ಚರ್ಚಿಸುತ್ತೇನೆ ಅಥವಾ ಒಪ್ಪಿಕೊಳ್ಳುತ್ತೇನೆ. ಆದರೆ ಅದು ಆಗುತ್ತಿಲ್ಲ ಎಂಬುದು ನನ್ನ ಬೇಸರ. ಜನ ಏನೋ ಮಾತನಾಡುತ್ತಾರೆ ಎಂದು ಸುಮ್ಮನಿರೋದು ಹೇಗೆ? ನಾನು ಎಂತಹ ಸಂದರ್ಭದಲ್ಲೂ ಯಾರೋ ಏನೋ ಹೇಳುತ್ತಾರೆ ಎಂದು ನನ್ನ ಮಾತುಗಳನ್ನು ಹೇಳುವುದನ್ನು ನಿಲ್ಲಿಸಿದವನಲ್ಲ.” ಕೊಂಚ ತಡೆದು ಮುಂದುವರಿಸಿದರು “ನೋಡು, ಕೆಂಡಸಂಪಿಗೆಯಲ್ಲಿ ಎಷ್ಟು ಲೇಖನಗಳನ್ನು ಬರೆದಿದ್ದೇನೆ. ಯಾರೂ ಮಾತನಾಡಲಿಲ್ಲ ಅವುಗಳ ಬಗ್ಗೆ. ಈಗ ಮಾತ್ರ..”

ನನಗೂ ನೋವಾಗಿತ್ತು. ನನ್ನ ಒಡಲ ತುಮುಲಗಳ ಕಿವಿಯಾದ ಸಿಂಧುವಿನ ಬಳಿ ತೋಡಿಕೊಂಡೆ. ಅವರ ಸಾಹಿತ್ಯದ ಬಗ್ಗೆ ಒಂದಿಷ್ಟು ಜನರಾದರೂ ಮಾತನಾಡಬೇಕು, ಅದು ಅವರ ಕಿವಿ ತಲುಪಬೇಕು ಎಂಬುದಷ್ಟೇ ಆಗ ನನ್ನ ತಲೆಯಲ್ಲಿ ಇದ್ದುದು. ಸಿಂಧು ಕೂಡಾ ತಲ್ಲಣಿಸಿದರು. ಅದೇನೇ ವಿಷಯವಿದ್ದರೂ ನಿಮ್ಮ ಜೊತೆ ನಾನಿದ್ದೇನೆ ಎಂದರು. ಅಂದು ಜುಲೈ ಹದಿನೇಳು. ಸೆಪ್ಟೆಂಬರ್ ೧೨ಕ್ಕೆ ಅವರಿಗೆ ಎಂಬತ್ತು ತುಂಬುತ್ತಿತ್ತು. ತಕ್ಷಣ ಕಾವ್ಯಕೇಳಿಯಲ್ಲಿ ಈ ಬಗ್ಗೆ ಮೆಸೇಜ್ ಹಾಕಿದೆವು. ಚೊಕ್ಕಾಡಿ ಸರ್ ತಿರುಮಲೇಶರ ಒಂದಿಷ್ಟು ಸಾಹಿತ್ಯ ಒದಗಿಸಿದರು. ರಜನಿ ಗರುಡ ನಾಟಕವನ್ನು ಸಂಗ್ರಹಿಸಿ ಕೊಟ್ಟರು. ಅವರ ಕಥೆಗಳನ್ನು ಕೂತು ಟೈಪಿಸಿ ಗುಂಪಿನಲ್ಲಿ ಹಂಚಿದೆವು, ಕವನಗಳನ್ನು ಆರಿಸಿ ಕೊಟ್ಟೆವು. ಒಂದಿಡೀ ತಿಂಗಳು ತಿರುಮಲೇಶರ ಸಾಹಿತ್ಯವನ್ನು ಪಟ್ಟಾಗಿ ಕುಳಿತು ಓದಿದೆವು. ಹದಿನೈದು ದಿನದಲ್ಲಿ ಬರೆದುಕೊಡಿ ಎಂದು ಕೇಳಿಕೊಂಡಾಗ ಬರೆದುಕೊಟ್ಟವರ ಉತ್ಸಾಹ ನೋಡಬೇಕಿತ್ತು.. ಎಲ್ಲವನ್ನೂ ನಸುಕು ವಿಜಯ್ ಶೆಟ್ಟಿಯವರ ಸಹಕಾರದೊಂದಿಗೆ ಪ್ರಕಟಿಸಿ ತಿರುಮಲೇಶರ ಮುಂದಿಟ್ಟೆವು. ಥೇಟ್ ಚಾಕೊಲೇಟ್ ನೋಡಿ ಸಂಭ್ರಮಿಸುವ ಮಗುವಿನಂತೆಯೇ ಅವರು ಇಡೀ ವಾರವಿಡೀ ಕೂತು ಎಲ್ಲ ಲೇಖನಗಳನ್ನೂ ಓದಿದರು, ಕವನಗಳನ್ನು ಕೇಳಿದರು. ಬರೆದ ಹಲವರ ಜೊತೆ ಮಾತನಾಡಿದರು. ಸುಶ್ರುತ ದೊಡ್ಡೇರಿಯ ನಂಬರ್ ಕೇಳಿದರು. ಅವನಿಗೆ ಮಾತನಾಡಲು ಹೇಳುತ್ತೇನೆ ಎಂದೆ. ಬೇಡ, ನಾನೇ ಮಾತನಾಡುತ್ತೇನೆ ಎಂದರು. ಮಾತನಾಡಿದರು. ಕೊನೆಗೆ ಇನ್ನು ಕೊರಗಬಾರದು ನೀವು ಎಂದೆ. ಇಲ್ಲ, ನಾನಿನ್ನು ಕೊರಗುವುದಿಲ್ಲ ಎಂದು ನಕ್ಕರು. ನಾನು ನಿಸೂರಾದೆ.

ಹದಿನೈದು ದಿನಗಳ ನಂತರ ಮಾತನಾಡುವಾಗ ಮತ್ತೆ ಅದೇ ಮಾತು.. ಯಾರೂ ಓದುತ್ತಿಲ್ಲ.. ನನಗೆ ಸಿಟ್ಟೇ ಬಂತು. ಮೊನ್ನೆಯಿನ್ನೂ ಅಷ್ಟು ಜನ ಓದಿದ್ದಾರೆ, ಬರೆದಿದ್ದಾರೆ. ಮತ್ತೂ ಕೊರಗುತ್ತೀರಲ್ಲ ಎಂದೆ. ನನಗೆ ಕಾಮನಬಿಲ್ಲಿನ ಅಷ್ಟೂ ಬಣ್ಣಗಳು ಬೇಕು ಎಂದರು. ಅರ್ಥವಾಗಲಿಲ್ಲ. ಎಲ್ಲ ರೀತಿಯ ಓದುಗವರ್ಗ ಬೇಕು ಅನ್ನಿಸುತ್ತದೆ. ತಪ್ಪಾ ಎಂದು ಪ್ರಶ್ನಿಸಿದರು. ನಾನು ಮೌನವಾದೆ. ಅವರಿಗೆ ಹಿಪೊಕ್ರೆಸಿ ಇರಲಿಲ್ಲ. ಅನಿಸಿದ್ದನ್ನು ಹೇಳಲು ಹಿಂಜರಿಕೆಯೂ ಇರಲಿಲ್ಲ.

ನಿಧಾನವಾಗಿ ಯೋಚಿಸುತ್ತಾ ಕೂತ ಮೇಲೆ ಅವರ ಒಟ್ಟು ಬರಹಗಳ ಬಗ್ಗೆ ನಿಜಕ್ಕೂ ಹೆಚ್ಚು ಚರ್ಚೆ ಆಗಿರಲೇ ಇಲ್ಲ ಎಂಬುದು ಅರಿವಾಗುತ್ತಾ ಹೋಯಿತು. ಅವರ ಓದಿನ ವಿಸ್ತಾರ ಅದೆಷ್ಟು ದೊಡ್ಡದೋ, ಬರಹಗಳ ವಿಸ್ತಾರ ಕೂಡಾ ಅಷ್ಟೇ ದೊಡ್ಡದಿತ್ತು. ಯಾವ ವಿಷಯದ ಬಗ್ಗೆ ಬರೆದರೂ ಅದರ ಬಗ್ಗೆ ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿಯೇ ಬರೆದಿರುತ್ತಿದ್ದರು. ಅವರ ಕಾವ್ಯದ ಬಗ್ಗೆ, ಅದರಲ್ಲೂ ನವ್ಯದ ಒಡನಾಟದ ಬಗ್ಗೆ ಮಾತ್ರ ಹೆಚ್ಚು ಬರಹಗಳು ಬಂದು ತಿರುಮಲೇಶರ ಒಂದು ಮುಖ ಮಾತ್ರ ಅವರ ಮುಖವೇನೋ ಎಂದು ಹೊಸ ಓದುಗರು ಭಾವಿಸುವಂತಾಗಿತ್ತು. ಅವರು ನವ್ಯವನ್ನು ಯಾವುದೊ ಕಾಲಕ್ಕೆ ಬಿಟ್ಟಿದ್ದರೂ ಓದುಗರು ಮಾತ್ರ ಅದೇ ರೆಫರೆನ್ಸಲ್ಲೆ ಮಾತನಾಡುತ್ತಿದ್ದರು. ಕನ್ನಡ ಭಾಷೆ, ಅಲ್ಪಪ್ರಾಣ, ಮಹಾಪ್ರಾಣದ ಬಗ್ಗೆ ನಾನು ಅವರ ಅಭಿಪ್ರಾಯ ಕೇಳಿದ್ದೆ. ಮೂರು ಪುಸ್ತಕಗಳನ್ನು ಈ ಬಗ್ಗೆ ಬರೆದಿದ್ದೇನೆ, ಅದನ್ನು ಓದದೇ ಹೀಗೆ ಫೋನಿನಲ್ಲಿ ನನ್ನ ಅಭಿಪ್ರಾಯ ಕೇಳುತ್ತೀಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದರು. ಅದರ ಬಗ್ಗೆ ಯಾರೂ ಓದಲಿಲ್ಲ, ಚರ್ಚೆಯಾಗಲಿಲ್ಲ ಎಂಬ ನೋವು ಸಹಜವಾಗಿಯೇ ಅವರನ್ನು ಬಾಧಿಸುತ್ತಿತ್ತು. ಆ ಪುಸ್ತಕಗಳನ್ನು ಕಷ್ಟಪಟ್ಟು ಸಂಗ್ರಹಿಸಿ ಓದಿದ ನಂತರ ಹಾಗೆ ಕೇಳಿದ್ದಕ್ಕೆ ನನ್ನ ಬಗ್ಗೆ ನನಗೇ ನಾಚಿಕೆಯಾಗಿತ್ತು.

ತಿರುಮಲೇಶ್ ಅವರ ಆಳ ಮೇಲ್ನೋಟಕ್ಕೆ ಅರಿವಾಗುತ್ತಲೇ ಇರಲಿಲ್ಲ. ಅವರ ಜೊತೆ ಗಂಟೆಗಟ್ಟಲೆ ಮಾತನಾಡಿದರೂ. ಅವರು ಮಗುವಿನಂತೆ ಎಂದು ಅನೇಕರು ಹೇಳುತ್ತಿದ್ದರು. ಅವರು ಮಗುವಿನಂತೆಯೇ ಎಂಬುದು ಸತ್ಯವೇ. ಅವರು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಕೇಳಿಸಿಕೊಳ್ಳುತ್ತಿದ್ದರು. ಕೇಳಿಸಿಕೊಳ್ಳುವಾಗಲೂ ಏಕಾಗ್ರಚಿತ್ತರಾಗಿ, ಆ ವಿಷಯದ ಬಗ್ಗೆ ಹೊಸದಾಗಿ ಕೇಳಿಸಿಕೊಳ್ಳುತ್ತಿದ್ದೇನೆ ಎಂಬಂತೆ ಕುಳಿತಿರುತ್ತಿದ್ದರು. ಎದುರಿನವರಿಗೆ ಯಾವುದೇ ಅಳುಕಿಲ್ಲದೆ ಮಾತನಾಡಲು ಅವರ ಈ ಗುಣ ಪ್ರೇರಣೆ ಕೊಡುತ್ತಿತ್ತು. ಆ ಮಾತುಗಳ ಬಗ್ಗೆ ತಾನು ಮಾತನಾಡಬಹುದು, ಆ ಮಾತಿಗೆ ಎದುರಿಗಿದ್ದವನು ಸ್ಪಂದಿಸಬಲ್ಲ ಎಂಬ ಅನಿಸಿಕೆ ಮೂಡಿದರೆ ಮಾತ್ರ ಆ ವಿಷಯದ ಬಗ್ಗೆ ಎಷ್ಟೂ ಆಳಕ್ಕೆ ಇಳಿದುಬಿಡುತ್ತಿದ್ದರು. ಒಮ್ಮೆ ಅವರು ಹಾಗೆ ಇಳಿದಮೇಲೆ ಎದುರಿನವರಿಗೆ ಬೆರಗಿನಿಂದ ಕೇಳುವುದು ಮಾತ್ರ ಉಳಿಯುತ್ತಿತ್ತು.

ಹದಿನೈದು ದಿನಗಳ ನಂತರ ಮಾತನಾಡುವಾಗ ಮತ್ತೆ ಅದೇ ಮಾತು.. ಯಾರೂ ಓದುತ್ತಿಲ್ಲ.. ನನಗೆ ಸಿಟ್ಟೇ ಬಂತು. ಮೊನ್ನೆಯಿನ್ನೂ ಅಷ್ಟು ಜನ ಓದಿದ್ದಾರೆ, ಬರೆದಿದ್ದಾರೆ. ಮತ್ತೂ ಕೊರಗುತ್ತೀರಲ್ಲ ಎಂದೆ. ನನಗೆ ಕಾಮನಬಿಲ್ಲಿನ ಅಷ್ಟೂ ಬಣ್ಣಗಳು ಬೇಕು ಎಂದರು. ಅರ್ಥವಾಗಲಿಲ್ಲ. ಎಲ್ಲ ರೀತಿಯ ಓದುಗವರ್ಗ ಬೇಕು ಅನ್ನಿಸುತ್ತದೆ. ತಪ್ಪಾ ಎಂದು ಪ್ರಶ್ನಿಸಿದರು. ನಾನು ಮೌನವಾದೆ.

ನಿಮ್ಮ ದನಿಯಲ್ಲಿ ಸಣ್ಣ ವಿಷಾದ ಇರ್ತದೆ ಎಂದು ಯಾರೋ ಹೇಳಿದ್ದನ್ನು ಹೇಳಿ ನಕ್ಕಿದ್ದರು. ಹೌದಾ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದಕ್ಕೆ ಅದು ಬೆಕ್ಕಿನ ಕಣ್ಣಿನ ವಿಷಾದ ಮಾರಾಯಿತಿ. ಅದನ್ನು ನನ್ನಲ್ಲೂ ಹುಡುಕುವುದನ್ನು ಕವನ ಬರೆದು ಇಷ್ಟು ವರ್ಷವಾದರೂ ಬಿಟ್ಟಿಲ್ಲ ಎಂದು ಹೇಳುತ್ತಾ ನನ್ನನ್ನೂ ನಗಿಸಿದ್ದರು. ಹಳೆಯ ವಿಷಯಗಳನ್ನು ಕೆದಕಿ ಕೆದಕಿ ಕೇಳುತ್ತಾ, ಆ ವಿಷಯಗಳಿಂದ ಮೆಲ್ಲಗೆ ಜಾರಿಕೊಳ್ಳುತ್ತಿದ್ದ ಅವರನ್ನು ಕಾಲೆಳೆಯುತ್ತಿದ್ದರೆ ಸಣ್ಣಗೆ ನಗುತ್ತಿದ್ದರು. ಹಳೆಯ ಕವನಗಳನ್ನು ಓದುತ್ತಾ ಅದರ ಬಗ್ಗೆ ಮಾತನಾಡುವಾಗ “ನೀನು ಕವನಗಳ ಮೂಲಕ ನನ್ನೊಳಗೆ ಇಳಿದುಬಿಡುತ್ತೀಯ. ಹೆದರಿಕೆಯಾಗ್ತದೆ ಬಯಲಾಗಿಬಿಡುತ್ತೇನೆ ಅಂತ” ಎಂದಿದ್ದರು. ಮಾತಿನ ಮಧ್ಯೆ ನುಸುಳಿದ ತಮ್ಮ ಹಳೆಯ ವೈಯಕ್ತಿಕ ವಿವರಗಳ ಮಾತುಗಳನ್ನು ಎಲ್ಲಿಯೂ ಪ್ರಸ್ತಾಪಿಸುವಂತಿಲ್ಲ ಎಂದು ಸಣ್ಣ ದನಿಯಲ್ಲೇ ಎಚ್ಚರಿಸಿದ್ದರು. ನಿಮ್ಮ ಆತ್ಮ ಕಥೆ ಬರೆಯಿರಿ ಎಂದು ಗಂಟು ಬಿದ್ದಾಗ (ಚೊಕ್ಕಾಡಿ ಸರ್ ಅವರ ಆತ್ಮಕಥೆ ನಿರೂಪಿಸಿದ ಅಂಜನಾ ಹೆಗಡೆ ಜೊತೆಗಿದ್ದಾರೆ ಎಂಬ ಧೈರ್ಯ ಜೊತೆಗಿತ್ತು) ಅವರು ಅದಕ್ಕೆ ಸುತಾರಾಂ ಒಪ್ಪಲೇ ಇಲ್ಲ. “ನಾನು ಬರೆದ ಕಥೆಗಳನ್ನು ಓದದವರಿಗೆ ನನ್ನ ಕಥೆಯನ್ನು ಯಾಕೆ ಹೇಳಲಿ” ಎಂದು ಜೋರಾಗಿ ನಕ್ಕುಬಿಟ್ಟರು. ಜಗತ್ತಿನೆದುರು ತನ್ನ ಎಲ್ಲಾ ಒಳಗನ್ನು ಬಿಚ್ಚಿಡುವುದು ಅವರಿಗೆ ಇಷ್ಟವಿರಲಿಲ್ಲ. ಕೆಲವು ಅಹಿತಕರ ವಿಷಯಗಳನ್ನು ಹೇಳಲೇ ಬೇಕಾಗುತ್ತದೆ. ಹಾಗೆ ಪ್ರಸ್ತಾಪಿಸುವುದರಿಂದ ಯಾರಿಗೆ ಲಾಭ, ಅದು ಬೇಡ ಎಂದು ನಿರಾಕರಿಸಿದರು. ಹೋಗಲಿ ನಿಮ್ಮ ಸಾಹಿತ್ಯದ ಚರಿತ್ರೆ ಬರೆಯಿರಿ. ಅದರ ಹುಟ್ಟು, ಬೆಳವಣಿಗೆಗಳ ಬಗ್ಗೆ, ನೀವು ಹೇಳುತ್ತಾ ಹೋಗಿ, ನಾನು ಬರೆದುಕೊಳ್ಳುತ್ತೇನೆ ಎಂದು ಕೇಳಿದಾಗ ಅದರ ಬಗ್ಗೆ ಯೋಚಿಸಬಹುದು ಎಂದಿದ್ದರು. ಮರುದಿನವೇ ಅವರಿಗೆ ಫೋನ್ ಮಾಡಿ ಹೇಳಿ ಬರೆದುಕೊಳ್ಳುತ್ತೇನೆ ಎಂದಾಗ “ನಾನು ಯೋಚಿಸಬಹುದು ಎಂದೆ. ಒಪ್ಪಿಗೆ ಕೊಟ್ಟಿಲ್ಲ” ಎಂದು ಹೇಳಿ ನನ್ನನ್ನು ಬೇಸ್ತು ಬೀಳಿಸಿದ್ದರು.

ಕಣ್ಣು ಅವರಿಗೆ ಬಹಳ ತೊಂದರೆ ಕೊಡುತ್ತಿತ್ತು. ಓದಲು ಕಷ್ಟವಾಗುತ್ತಿತ್ತು. ನಾನು ಇಲ್ಲಿಂದ ಅನೇಕ ಆಡಿಯೋ ಫೈಲುಗಳನ್ನು ಅವರಿಗೆ ಕಳಿಸಿ ನೀವು ಕೇಳಿ ಸಾಕು. ಓದಲು ನಿಮಗೇ ಕಷ್ಟವಾಗ್ತದೆ ಎಂದು ಕೇಳಿಕೊಂಡಿದ್ದೆ. ನನಗೆಲ್ಲಿ ಬೇಸರವಾಗುತ್ತದೆಯೋ ಎಂದು ಕೆಲವು ದಿನ ಈ ಫೈಲುಗಳ ಧಾಳಿಯನ್ನು ತಡೆದುಕೊಂಡರು. ಕೊನೆಗೊಮ್ಮೆ “ಮಾಲಿನಿ, ನನಗೆ ಓದೋಕೆ ಕಷ್ಟವಾಗ್ತದೆ ನಿಜ. ಹಾಗಂತ ಏನೇನೋ ಕೇಳೋಕೂ ಸಾಧ್ಯವಿಲ್ಲ. ನನ್ನದೇ ಆಯ್ಕೆಗಳಿರುತ್ತಲ್ಲ” ಎಂದಿದ್ದರು. ನನ್ನ ಈ ಎಡವಟ್ಟು ಕೆಲಸದ ಬಗ್ಗೆ ನನಗೇ ನಗು, ಬೇಸರ ಎರಡೂ ಆಗಿತ್ತು. ಅವರ ಆಯ್ಕೆಗಳ ಬಗ್ಗೆ ಅವರು ನಿಖರವಾಗಿರುತ್ತಿದ್ದರು. ಅಂತಹಾ ಹೊತ್ತಿನಲ್ಲೂ ಅವರು ಓದುತ್ತಿದ್ದ ಪುಸ್ತಕಗಳ ಪಟ್ಟಿ ಕೇಳಿಸಿಕೊಂಡರೆ ಬೆರಗು ಮೂಡುತ್ತಿತ್ತು.

ಅವರಿಗೆ ಮಾಸ್ತಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದಾಗ ಅವರನ್ನು ನೋಡಲು ನಾನು ಮತ್ತು ಸಿಂಧು ಹೋಗಿದ್ದೆವು. ಅದೇ ಸಮಯದಲ್ಲಿ ಜಯಂತ್ ಕಾಯ್ಕಿಣಿ ಮತ್ತು ವಿವೇಕ ಶಾನುಭಾಗರೂ ಅಲ್ಲಿಗೆ ಬಂದರು. ಜಯಂತ್ ಅವರ ಪುಸ್ತಕ ಆಗಷ್ಟೇ ಬಿಡುಗಡೆಯಾಗಿತ್ತು. ತಮ್ಮ ಒಂದೆರಡು ಹೊಸ ಪುಸ್ತಕಗಳನ್ನು ಜಯಂತ್ ತಿರುಮಲೇಶ್ ಅವರಿಗೆ ಕೊಡಲು ತಂದಿದ್ದರು. ರೂಮಿನಲ್ಲಿದ್ದ ದೊಡ್ಡ ಸೂಟ್ ಕೇಸ್, ಹಲವು ಪುಸ್ತಕಗಳನ್ನು ನೋಡಿ ಜಯಂತರು ಈ ಪುಸ್ತಕಗಳನ್ನು ಪೋಸ್ಟ್ ಅಥವಾ ಕೊರಿಯರ್ ಮಾಡುತ್ತೇನೆ. ನೀವು ಹೊರಬೇಕಲ್ಲ ಅಲ್ಲಿಯವರೆಗೂ ಎಂದು ಕಾಳಜಿಯಿಂದ ಹೇಳಿದರು. ಕೈಯಿಗೆ ಬಂದ ಚಾಕೊಲೇಟ್ ಕಳೆದುಕೊಳ್ಳುವ ಮಗುವಿನ ರೀತಿಯಲ್ಲಿ “ಬೇಡ, ಕೊಟ್ಟುಬಿಡಿ. ನಾನು ತೆಗೆದುಕೊಂಡು ಹೋಗುತ್ತೇನೆ” ಎಂದು ಅವರ ಮುಂದೆಯೇ ನಿಂತು ಅವರ ಸಹಿ ಮಾಡಿಸಿಕೊಂಡು ಪುಸ್ತಕ ಕೈಗೆ ತೆಗೆದುಕೊಂಡಾಗ ಅವರ ಮುಖದ ಭಾವವನ್ನು ಯಾವ ಪದಗಳಲ್ಲಿಯೂ ನಾನು ಹಿಡಿದಿಡಲಾರೆ. ಪುಸ್ತಕಗಳ ಕುರಿತ ಅವರ ಪ್ರೀತಿ ಅಂಥದ್ದು.

“ಚಿಕ್ಕಣಿ ರಾಜ” ಪುಸ್ತಕ ಬಂದಾಗ ಏಕೆ ಈ ರೀತಿಯ ಪದ್ಯಗಳನ್ನು ಬರೆಯಬೇಕೆನ್ನಿಸಿತು ಎಂದು ಕೇಳಿದ್ದೆ. ಬರೆಯಬೇಕೆನಿತು, ಬರೆದೆ ಅಷ್ಟೇ ಎಂದು ಉತ್ತರಿಸಿದರು. ನನಗೇ ಇಂತಹುದೇ ಬರೆಯಬೇಕು ಎಂಬ ಅಜೆಂಡಾ ಇಲ್ಲ. ಆ ಕ್ಷಣಕ್ಕೆ ಏನು ಅನ್ನಿಸುತ್ತದೆಯೋ ಅದನ್ನು ಬರೆಯುತ್ತೇನೆ ಎಂದು ಉತ್ತರಿಸಿದ್ದರು. ಅವರ ವಿಸ್ತೃತ ಓದು ಅವರಲ್ಲಿ ಏನೇನು ಹೊಳೆಸುತ್ತಿತ್ತೋ ಬಲ್ಲವರಾರು? ಅವರೊಬ್ಬ ಅದ್ಭುತ ಅನುವಾದಕ, ಶ್ರೇಷ್ಠ ಕವಿ, ಆಳ ಅಧ್ಯಯನವಿದ್ದ ಭಾಷಾವಿದ್ವಾಂಸ, ಬಹಳ ಉತ್ತಮ ಪ್ರಬಂಧಕಾರ, ಮಕ್ಕಳ ಕವಿ ಎಲ್ಲವೂ ಆಗಿದ್ದರು. ನಿಮ್ಮ ಸಾಹಿತ್ಯ ಎಷ್ಟಿದೆ ಎಂದರೆ ಒಬ್ಬ ವ್ಯಕ್ತಿ ಓದೋಕೆ ಆರಂಭಿಸಿದರೆ ಬರೀ ನಿಮ್ಮೊಬ್ಬರನ್ನೇ ಓದ್ಕೊಂಡು ಇರಬೇಕಾಗುತ್ತದೆ ಅಷ್ಟೇ ಎಂದು ಹೇಳಿದಾಗ ಅವ್ರು ನಕ್ಕ ರೀತಿಯನ್ನು ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ.

ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಅವರೊಡನೆ ಚರ್ಚಿಸುತ್ತಿದ್ದ ದಿನಗಳು ನನ್ನ ಬದುಕಿನ ಸುವರ್ಣ ಯುಗ. ಅವ್ರಿಗೆ ತಂತ್ರದ ಬಗ್ಗೆ ವಿಶೇಷ ಆಸಕ್ತಿ ಎಂದಾಗ ಒಪ್ಪಿಕೊಂಡಿದ್ದರು. ಅಡಿಗರ ಕುರಿತ ದೂರುಗಳನ್ನೂ, ಮೆಚ್ಚುಗೆಯನ್ನೂ ಮುಕ್ತವಾಗಿ ಹೇಳುತ್ತಿದ್ದರು. ನೀವೇಕೆ ನಿಮ್ಮ ಬರೆಯುವ ರೀತಿಯನ್ನು ಪದೇ ಪದೇ ಬದಲಾಯಿಸಿದಿರಿ. ಮಹಾಪ್ರಸ್ಥಾನದ ಮಾದರಿಯಲ್ಲೇ ಬರೆಯಬಹುದಿತ್ತಲ್ಲ ಎಂದು ಕೇಳಿದಾಗ ನಾನು ಆ ವಯಸ್ಸಿನಲ್ಲೇ ನಿಲ್ಲಲು ಸಾಧ್ಯವಿಲ್ಲವಲ್ಲ ಎಂದು ತುಂಟ ನಗೆ ನಕ್ಕಿದ್ದರು. ಹತ್ತು ಕಡೆ ಬಾವಿ ತೋಡಿದ ಹಾಗೆ ಅನ್ಸುತ್ತಾ ಎಂದರೆ ನಾನು ಕನ್ನಡ ಸಾಹಿತ್ಯ ಬಾವಿಯನ್ನೇ ತೋಡಿದ್ದು, ಒಮ್ಮೆ ಗುದ್ದಲಿಯಿಂದ, ಮತ್ತೊಮ್ಮೆ ಹಾರೆಯಿಂದ, ಮಗದೊಮ್ಮೆ ಕೈಯ್ಯಿನಿಂದಲೂ ಎಂದು ನನ್ನ ದಡ್ಡ ಪ್ರಶ್ನೆಗೆ ಸೂಕ್ಷ್ಮ ಉತ್ತರ ಕೊಟ್ಟಿದ್ದರು.

ನನ್ನ ಕಣ್ಣಿಗೆ ಕಂಡ ಕೆವಿಟಿ ಹೀಗಿದ್ದರು. ಅವರೊಂದಿನ ನೂರಾರು ಫೋನ್ ಕಾಲ್‌ಗಳಲ್ಲಿ ನಾನು ಎಷ್ಟು ದಡ್ಡಿ, ಎಷ್ಟು ಓದುವುದಿದೆ, ಎಷ್ಟು ಸೂಕ್ಷ್ಮಗಳನ್ನು ಗಮನಿಸುವುದಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿತ್ತು. ಕೆವಿಟಿ ಕಾಲಿಂಗ್ ಎಂದು ತೋರುತ್ತಿದ್ದ ಮೊಬೈಲ್ ಇನ್ನೆಂದೂ ಅದನ್ನು ತೋರುವುದಿಲ್ಲ ಎಂಬ ನಿಷ್ಠುರ ಸತ್ಯ ಕಂಗಾಲಾಗಿಸುತ್ತಿದೆ. ಎಂದೋ ಒಮ್ಮೆ ಘಟಿಸಬಹುದು ಎಂಬ ಅರಿವಿದ್ದರೂ ದುತ್ತೆಂದು ಬಂದು ನಿಂತಾಗ ಒಪ್ಪಿಕೊಳ್ಳಲಾಗದೆ ಒದ್ದಾಡುವಂತಾಗಿದೆ. ಆ ವಿಶಾಲ ಸಾಗರದಲ್ಲಿ ನನಗೆ ಎತ್ತಿ ಹಿಡಿದಿಟ್ಟುಕೊಳ್ಳಲಾಗಿದ್ದು ಕೆಲವೇ ಹನಿಗಳನ್ನು ಮಾತ್ರ. ಜತನದಿಂದ ಕಾಪಾಡಿಕೊಳ್ಳಬೇಕಾದ ಹನಿಗಳವು.