ಅವರು ಯಾವತ್ತು ಎಲ್ಲಿಗೇ ಬಂದರೂ ಇದುವರೆಗೆ ಅವರ ಮ್ಲಾನವಾದ ಮುಖವನ್ನು ನಾನು ನೋಡೇ ಇಲ್ಲ. ಯಾವಾಗಲೂ ನಗ್ತಾ ನಗ್ತಾ ಇರ್ತಾರೆ. ಅವರು ಮತ್ತು ಅವರ ಗೆಳತಿ ಸಂಧ್ಯಾ ರಾಣಿ ಯಾವುದೇ ಸಮಾರಂಭಕ್ಕೆ ಬಂದರೂ ಅವರು ಮುಖ ಕಳೆಗುಂದಿದ್ದನ್ನು ನಾನು ನೋಡೇ ಇಲ್ಲ. ಅವರು ಬಂದರೆ ಆ ವಾತಾವರಣವೆಲ್ಲ ಲೈಟ್ ಹೊತ್ತಿಸಿದಂತೆ… ಒಂದು ನೂರು ಕ್ಯಾಂಡಲ್ ಬಲ್ಬ್ ಹೊತ್ತಿಸಿದ ಹಾಗೆ! ಅವರನ್ನು ನೋಡ್ತಿದ್ದರೆ ನಮಗೂ ಆ ಉಲ್ಲಾಸ ವರ್ಗವಾಗಿ ಬಿಡತ್ತೆ. ಅದೇ ರೀತಿಯ ಅನುಭವ ಅವರ ಸಾಸಿವೆ ತಂದವಳು ಪುಸ್ತಕ ಓದುವಾಗಲೂ ಆಗಿತ್ತು.
ಬಿ.ವಿ. ಭಾರತಿ ಅವರ ‘ಎಲ್ಲಿಂದಲೋ ಬಂದವರು’ ಕೃತಿಗೆ ಟಿ.ಎನ್. ಸೀತಾರಾಮ್ ಬರೆದ ಮುನ್ನುಡಿ

 

ಅದು ‘ಸಾಸಿವೆ ತಂದವಳು’ ಪುಸ್ತಕ ಬಿಡುಗಡೆಯ ದಿನ. ಸಾಸಿವೆ ತಂದವಳು ಭಗವಾನ್ ಬುದ್ಧನಿಗೆ ಸಂಬಂಧ ಪಟ್ಟಿರುವ ಒಂದು ಘಟನೆ. ‘ಸಾವಿಲ್ಲದ ಮನೆಯ ಸಾಸಿವೆ ತಾ’ ಅಂತ ಕಿಸಾಗೋತಮಿಗೆ ಬುದ್ಧ ಹೇಳುವ ಒಂದು ಮಾತನ್ನು ಇಟ್ಕೊಂಡು ಬರೆದ ಸಾಸಿವೆ ತಂದವಳು ಎನ್ನುವ ಒಂದು ಮನೋಜ್ಞವಾದ ಶೀರ್ಷಿಕೆಯ ಪುಸ್ತಕ ಅದು. ಅವತ್ತು ಅದು ರಿಲೀಸ್ ಆಯ್ತು. ಅವತ್ತಿನ ದಿನ ಪುಸ್ತಕ ಬಿಡುಗಡೆ ಮಾಡಿದ ಶಂಕರ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಶ್ರೀನಾಥ್ ಅವರು ಬಂದವರಿಗೆ ಕ್ಯಾನ್ಸರ್ ರೋಗಿಗಳು ಹೇಗೆ ಈ ರೋಗವನ್ನು ಗೆದ್ದು ಬರಬೇಕು ಅನ್ನುವ ಭರವಸೆಯ ಮಾತುಗಳನ್ನಾಡಿದ್ದರು. ಸಾಮಾನ್ಯವಾಗಿ ನಾನು ಬಿಡುಗಡೆ ಕಾರ್ಯಕ್ರಮಕ್ಕೆ ಹೋದಾಗ ತಂದ ಪುಸ್ತಕಗಳನ್ನೆಲ್ಲ ಎಲ್ಲೋ ಒಂದು ಕಡೆ ಇಟ್ಟಿರ್ತೀನಿ. ಈ ಪುಸ್ತಕ ಓದಕ್ಕೆ ತಗೊಂಡೆ ಎರಡನೆಯ ದಿವಸ. ನಾನು ನನಗೆ ತುಂಬ ಇಷ್ಟವಾದ ಪುಸ್ತಕಗಳನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡ್ತೀನಿ. ಆದರೆ ಇದನ್ನು ಓದಕ್ಕೆ ನನಗೆ ಎರಡು ದಿನ ಬೇಕಾಯ್ತು. ನಾನು ಅದನ್ನು ಇಷ್ಟ ಪಟ್ಟಿರಲಿಲ್ಲ ಅಂತಲ್ಲ… ಈ ಪುಸ್ತಕ ನನ್ನ ನರನಾಡಿಗಳನ್ನು ಹೊಕ್ಕುಬಿಟ್ಟಿತು…

ಭಾರತಿ ಕ್ಯಾನ್ಸರ್ ಅನ್ನು ಹೇಗೆ ಗೆದ್ದು ಬಂದರು ಅನ್ನೋದನ್ನು ಈ ಪುಸ್ತಕದಲ್ಲಿ ಹಂತಹಂತವಾಗಿ ಮೆಟ್ಟಿಲು ಮೆಟ್ಟಿಲಾಗಿ ವಿವರಿಸ್ತಿದ್ದಾರೆ.

ಅವರ ಹಿಂಸೆ ನನ್ನ ಹಿಂಸೆಯೇನೋ ಅನ್ನೋ ಥರ, ಅವರ ನರಳಾಟ ನನ್ನ ನರಳಾಟವೇನೋ ಅನ್ನೋ ಥರ, ಅವರ ನೋವು ನನ್ನ ನೋವೇನೋ ಅನ್ನೋ ಥರ ಅಷ್ಟು ಹೃದಯಂಗಮವಾಗಿ ಮತ್ತು ಅತ್ಯುತ್ತಮ ಲೇಖಕಿಯಂತೆ ಅನುಭವಗಳನ್ನು ಜೋಡಿಸ್ತಾ ಹೋಗ್ತಿದಾರೆ.

ಅದನ್ನು ಓದ್ತಾ ಓದ್ತಾ ನಾನು ಆಗಾಗ ನಿಲ್ಲಿಸಿ, ಕಣ್ಣ ತೇವವನ್ನು ಒರೆಸಿಕೊಂಡು, ನನ್ನನ್ನು ನಾನು ಸಾವರಿಸಿಕೊಂಡು, ಅರ್ಧ ಘಂಟೆ ಬಿಟ್ಟು ಮತ್ತೆ ಮುಂದೆ ಓದಬೇಕಿತ್ತು.

ಹಾಗಾಗಿ ಅದನ್ನು ಓದಿ ಮುಗಿಸಕ್ಕೆ ಎರಡು ದಿನ ತಗೊಂಡೆ

ಓದಿ ಮುಗಿಸಿದ ಮೇಲೆ ಅದೊಂದು ದಿಗ್ಭ್ರಾಂತ ಸ್ಥಿತಿಗೆ ಈ ಪುಸ್ತಕ ನನ್ನನ್ನು ಕರೆದುಕೊಂಡು ಹೋಗಿತ್ತು…

ನನ್ನ ಹತ್ತಿರದ ಸಂಬಂಧಿಯೊಬ್ಬರು ನಲವತ್ತು ವರ್ಷಗಳ ಹಿಂದೆ ಹೀಗೇ ಕ್ಯಾನ್ಸರ್‌ನ ಗೆದ್ದಿದ್ದರು. ಅದೇ ಥರದ ಅನುಭವ ಇದೂ ಕೂಡಾ. ಈ ಅನುಭವವನ್ನು ಮಾತ್ರ ಭಾರತಿ ನನಗೆ ಹಂಚಲಿಲ್ಲ, ಜೊತೆಗೆ ಒಂದು ಅಂತಃಕರಣವನ್ನೂ ಹಂಚಿದ್ದರು ಅನ್ನಿಸತ್ತೆ. ಭಾರತಿ ಅದನ್ನು ಹೇಗೆ ಗೆದ್ದು ಬಂದರು ಅನ್ನುವುದನ್ನು ವಿವರಿಸಿದ್ದನ್ನು ನೋಡಿ ಎಷ್ಟೋ ಕ್ಯಾನ್ಸರ್ ರೋಗಿಗಳು ಧೈರ್ಯ ತಂದುಕೊಂಡು ತಮ್ಮ ಬದುಕಿನಲ್ಲಿ ಅದನ್ನು ಗೆದ್ದ ಉದಾಹರಣೆಗಳು ನನಗೆ ಗೊತ್ತು. ಹಾಗಾಗಿ ಅತ್ಯಂತ ದೊಡ್ಡದಾದ ಮಾನವೀಯ ಕೆಲಸವನ್ನು ಭಾರತಿ ‘ಸಾಸಿವೆ ತಂದವಳು’ ಪುಸ್ತಕದಲ್ಲಿ ಮಾಡಿದ್ದು ಮಾತ್ರವಲ್ಲ, ಆ ನಂತರ ಅವರು ಇಡಿಯ ಬದುಕನ್ನೇ ಬೇರೆಯ ಥರ ತೆಗೆದುಕೊಂಡು ಬಿಟ್ಟರು.

ಅವರು ಯಾವತ್ತು ಎಲ್ಲಿಗೇ ಬಂದರೂ ಇದುವರೆಗೆ ಅವರ ಮ್ಲಾನವಾದ ಮುಖವನ್ನು ನಾನು ನೋಡೇ ಇಲ್ಲ. ಯಾವಾಗಲೂ ನಗ್ತಾ ನಗ್ತಾ ಇರ್ತಾರೆ. ಅವರು ಮತ್ತು ಅವರ ಗೆಳತಿ ಸಂಧ್ಯಾ ರಾಣಿ ಯಾವುದೇ ಸಮಾರಂಭಕ್ಕೆ ಬಂದರೂ ಅವರು ಮುಖ ಕಳೆಗುಂದಿದ್ದನ್ನು ನಾನು ನೋಡೇ ಇಲ್ಲ. ಅವರು ಬಂದರೆ ಆ ವಾತಾವರಣವೆಲ್ಲ ಲೈಟ್ ಹೊತ್ತಿಸಿದಂತೆ… ಒಂದು ನೂರು ಕ್ಯಾಂಡಲ್ ಬಲ್ಬ್ ಹೊತ್ತಿಸಿದ ಹಾಗೆ! ಅವರನ್ನು ನೋಡ್ತಿದ್ದರೆ ನಮಗೂ ಆ ಉಲ್ಲಾಸ ವರ್ಗವಾಗಿ ಬಿಡತ್ತೆ. ಅದೇ ರೀತಿಯ ಅನುಭವ ಅವರ ಸಾಸಿವೆ ತಂದವಳು ಪುಸ್ತಕ ಓದುವಾಗಲೂ ಆಗಿತ್ತು. ಹೀಗೆ ಬರೆಯಲು ಶುರು ಮಾಡಿದ ಭಾರತಿ ಮುಂದೆ ಅದ್ಭುತ ಲೇಖಕಿಯಾಗಿ ಬೆಳೆದುಬಿಟ್ಟರು.

ಅದನ್ನು ಓದ್ತಾ ಓದ್ತಾ ನಾನು ಆಗಾಗ ನಿಲ್ಲಿಸಿ, ಕಣ್ಣ ತೇವವನ್ನು ಒರೆಸಿಕೊಂಡು, ನನ್ನನ್ನು ನಾನು ಸಾವರಿಸಿಕೊಂಡು, ಅರ್ಧ ಘಂಟೆ ಬಿಟ್ಟು ಮತ್ತೆ ಮುಂದೆ ಓದಬೇಕಿತ್ತು.

ಅದಾದ ನಂತರ ಅವರು ಆಟೋ ಚಾಲಕರ ಬಗ್ಗೆ ‘ಜಸ್ಟ್ ಮಾತ್ ಮಾತಲ್ಲಿ’ ಪುಸ್ತಕ ಬರೆದರು. ನನ್ನ ಮನಸ್ಸಿಗೆ ಆಟೋ ರಿಕ್ಷಾದವರು ತುಂಬ ಹತ್ತಿರ. ನನ್ನ ಧಾರಾವಾಹಿಗಳಲ್ಲೂ ನಾನು ಅವರ ಜೊತೆ ಬೇಗ ಕನೆಕ್ಟ್ ಆಗ್ತೀನಿ. ಅವರ ಹ್ಯೂಮರ್ ನನಗೆ ಬಹಳ ಇಷ್ಟ. ಅಂಥ ಆಟೋ ಚಾಲಕರ ಜೊತೆಗೆ ಒಡನಾಡಿದ ಅನುಭವಗಳನ್ನು ಈ ಪುಸ್ತಕದಲ್ಲಿ ಬರೆದರು. ಇನ್ನು ಅವರ ಕಿಚನ್ ಕವಿತೆಗಳು ಪುಸ್ತಕ… ಹೆಣ್ಣುಮಕ್ಕಳು ಅಡಿಗೆಮನೆಯಲ್ಲಿ ತುಂಬ ಕಷ್ಟ ಪಡ್ತಾರೆ. ಅದು ಕೋವಿಡ್ ಸಮಯದಲ್ಲಿ ನನಗೆ ಇನ್ನೂ ಹೆಚ್ಚು ಅರ್ಥ ಆಯ್ತು. ಅಂಥ ಅಡಿಗೆಮನೆಯ ಬಗ್ಗೆ ಭಾರತಿ ತಮ್ಮ ‘ಕಿಚನ್ ಕವಿತೆ’ಯಲ್ಲಿ ಕವಿತೆಗಳನ್ನು ಬರೆದ್ರು.

ಭಾರತಿ ಇತ್ತೀಚೆಗೆ ‘ನನ್ನ ಪುಸ್ತಕವೊಂದಕ್ಕೆ ಮುನ್ನುಡಿ ಬರ್ಕೊಡಕ್ಕೆ ಸಾಧ್ಯಾನಾ’ ಅಂತ ಕೇಳಿದರು. ನಾನು ‘ಸಾಮಾನ್ಯವಾಗಿ ನಾನು ಪುಸ್ತಕದ ಬಗ್ಗೆ ಮುನ್ನುಡಿ ಬರೆಯಲ್ಲ, ಮನುಷ್ಯರ ಬಗ್ಗೆ ಬರೀತೀನಿ’ ಅಂದಿದ್ದೆ. ನನ್ನ ಗುರುಗಳಾದ ಲಂಕೇಶ್ ಕೂಡಾ ಇದೇ ಮಾತನ್ನು ಹೇಳ್ತಿದ್ದರು. ಆ ನಂತರ ಭಾರತಿ ಅದನ್ನು ಕಳಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಆ ನಂತರ ಕಳಿಸಿದಾಗ ನೋಡಿದರೆ ಪುಸ್ತಕದ ಹೆಸರು ‘ಎಲ್ಲಿಂದಲೋ ಬಂದವರು’. ನನ್ನ ಗುರು ಲಂಕೇಶ್ ಅದೇ ಹೆಸರಿನ ಸಿನೆಮಾ ತೆಗೆದಿದ್ದರು. ಸರಿ, ನಾನು ಲೇಖನಗಳನ್ನು ಓದಲು ಶುರು ಮಾಡಿದೆ. ಪುಸ್ತಕ ಶುರು ಮಾಡುವ ಮೊದಲು ಇದು ಡಾಕ್ಟರ್ ಶ್ರೀನಾಥ್ ಬಗ್ಗೆ ಬರೆದ ಪುಸ್ತಕ ಇರಬಹುದಾ ಅಂದುಕೊಂಡಿದ್ದೆ. ಆದರೆ ಇದು ಅವರ ಬಗ್ಗೆ ಬರೆದಿದ್ದಾಗಿರಲಿಲ್ಲ. ಬಹುಶಃ ಅವರ ಬಗ್ಗೆ ಬೇರೆಯ ಪುಸ್ತಕವನ್ನೇ ಬರೀತಾರೆ ಅನ್ನಿಸತ್ತೆ. ಈ ‘ಎಲ್ಲಿಂದಲೋ ಬಂದವರು’ ಪುಸ್ತಕ ಅವರ ಅನುಭವ ಕಥನ. ಬಾಲ್ಯದಿಂದ ಆರಂಭಿಸಿ ಇಲ್ಲಿಯವರೆಗೆ ಅವರು ಕಷ್ಟದಲ್ಲಿರುವಾಗ ಯಾರೋ ಬಂದು ಸಹಾಯ ಮಾಡಿದ ಅನುಭವಗಳನ್ನೆಲ್ಲ ಬರೆಯುತ್ತಾ ಹೋಗಿದ್ದಾರೆ. ಅದೂ ಕಷ್ಟದಲ್ಲಿರುವಾಗ ಅನಿರೀಕ್ಷಿತವಾಗಿ ಯಾರೋ ಬಂದು ಸಹಾಯ ಮಾಡುವಂಥದ್ದು.

ಅದರಲ್ಲಿ ಒಂದು ಅನುಭವ ಹೀಗಿದೆ: ಅವರು ಚಿಕ್ಕವರಿರುವಾಗ ಅವರ ತಂದೆ ಬೇರೆ ಊರಿನಲ್ಲಿ ಇರ್ತಾರೆ. ಅವರು ಬರೋದಕ್ಕೋಸ್ಕರ ಮನೆಯವರೆಲ್ಲ ಕಾಯ್ತಾ ಕೂತ್ಕೊಂಡಿರ್ತಾರೆ. ಬಂದಾಗ ತುಂಬ ಸಿನೆಮಾ ನೋಡುವ ಹುಚ್ಚು ಮನೆಯವರಿಗೆಲ್ಲ. ಅವರ ತಂದೆಯ ಹತ್ತಿರ ಒಂದು ಬುಲೆಟ್ ಬೈಕ್ ಇರತ್ತೆ. ಒಂದು ದಿನ ಪ್ರಸನ್ನ ಥಿಯೇಟರ್‌ನಲ್ಲಿ ಸೆಕೆಂಡ್ ಶೋ ಸಿನೆಮಾ ನೋಡಿಕೊಂಡು ಹೊರಡುವಾಗ ಬೈಕ್ ಸ್ಟಾರ್ಟ್ ಆಗೋದೇ ಇಲ್ಲ. ಆ ಕಾಲದಲ್ಲಿ ಸೆಕೆಂಡ್ ಶೋ ಮುಗೀತಿದ್ದಿದ್ದು ಮಧ್ಯರಾತ್ರಿ ಹನ್ನೆರಡೂವರೆ, ಒಂದಕ್ಕೆ. ಆ ನಡುರಾತ್ರಿಯಲ್ಲಿ ಇವರ ಬೈಕ್ ಸ್ಟಾರ್ಟ್ ಆಗಲಿಲ್ಲ ಅಂತಾದಾಗ ಇವರಿಗೆ ಭಯ, ಆತಂಕ. ಹೋಗಿದ್ದು ಅಪ್ಪ, ಅಕ್ಕ ಮತ್ತು ಭಾರತಿ ಮೂರೇ ಜನ. ಆಗ ಯಾರೋ ಅಪರಿಚಿತರು ಸಹಾಯ ಮಾಡಲು ಮುಂದೆ ಬಂದವರು ಅಪ್ಪನ ಬೈಕ್ ಅನ್ನು ತಳ್ಳುತ್ತಾ ಹೊರಟು ಹೋಗ್ತಾರೆ. ಭಾರತಿ ಮತ್ತು ಅವರಕ್ಕ ಇಬ್ಬರು ಮಾತ್ರ ಕತ್ತಲಿನಲ್ಲಿ ಅಲ್ಲಿಯೇ ಉಳೀತಾರೆ. ಅವರ ಅಪ್ಪ ವಾಪಸ್ ಬರ್ತಾರೋ ಇಲ್ಲವೋ ಅನ್ನುವ ಆ ಕ್ಷಣದ ಆತಂಕವನ್ನು ಭಾರತಿ ಯಾವ ರೀತಿ ಮೂಡಿಸಿದ್ದಾರೆ ನೋಡಬೇಕು! ಘಳಿಗೆ ಘಳಿಗೆಯ ಆತಂಕ ನಮ್ಮೆದುರೇ ಈಗ ನಡೆಯುತ್ತಿರೋ ಹಾಗೆ.

(ಟಿ.ಎನ್. ಸೀತಾರಾಮ್)

ಈ ಪುಸ್ತಕದಲ್ಲಿ ಮತ್ತೊಂದು ಘಟನೆ ಭಾರತಿಯ ಮಗನಿಗೆ ಸಂಬಂಧ ಪಟ್ಟಿದ್ದು. ಮಾತು ಬಾರದ ಮಗನ ಬದುಕಿನ ಬಗ್ಗೆ ಬರೆಯುವ ಆ ಲೇಖನ ನನಗೆ ಬಹಳ ಇಷ್ಟವಾಯ್ತು. ಮಗಳಾಗಿ, ಅಮ್ಮನಾಗಿ, ತಾನಾಗಿ ಹೀಗೆ ವಿವಿಧ ಅನುಭವ ಲೇಖನಗಳು ಇದರಲ್ಲಿದೆ. ಇಲ್ಲಿ ಅವರ ಕ್ಯಾನ್ಸರ್ ಸಮಯದ ಬಗೆಗಿನ ಒಂದು ಘಟನೆಯನ್ನು ಬರೀತಾರೆ. ಆದರೆ ಅದರಲ್ಲಿ ಸಾಸಿವೆ ತಂದವಳು ಪುಸ್ತಕದ ರೀತಿಯ ಯಾವುದೇ ಡೀಟೇಲ್ಸ್‌ಗೆ ಹೋಗೇ ಇಲ್ಲ. ಅದನ್ನು ಸುಮ್ಮನೆ ಮೇಲೆ ಮೇಲೆ ಹೇಳಿದಂತೆ ಮಾಡಿ, ಆ ನಂತರ ಆ ಸಮಯದಲ್ಲಿ ಸಹಾಯ ಮಾಡಿದ ಒಬ್ಬ ಆಯಾ ಬಗ್ಗೆ ಬರೆಯುತ್ತಾ ಮತ್ತೆ ಯಾವುದೋ ಅನುಭವವನ್ನು ಕಟ್ಟಿಕೊಟ್ಟು ಬಿಡುತ್ತಾರೆ…

ಹೀಗೆ ಈ ಪುಸ್ತಕದಲ್ಲಿ ಎಲ್ಲೆಲ್ಲಿಂದಲೋ ಬಂದವರ ಅನೇಕ ಅನುಭವ ಕಥನಗಳಿವೆ. ಹಲವಾರು ಘಟನೆಗಳನ್ನು ಓದುತ್ತಾ ಕೆಲವು ನಮ್ಮನ್ನು ತಲ್ಲಣಗೊಳಿಸಿದರೆ, ಮತ್ತೆ ಕೆಲವು ನಮ್ಮ ಮುಖದಲ್ಲೊಂದು ಮುಗುಳ್ನಗೆ ಮೂಡಿಸುತ್ತವೆ. ಜೊತೆಗೆ ಅದನ್ನೆಲ್ಲ ಓದುತ್ತಾ ಹೋದಂತೆ ನಮ್ಮ ಬದುಕಿನ ಪುಟಗಳೂ ತೆರೆಯುತ್ತಾ ಹೋಗಿ, ನಮ್ಮ ಬದುಕಿನಲ್ಲಿ ‘ಎಲ್ಲಿಂದಲೋ ಬಂದವರೆಲ್ಲ’ ನೆನಪಾಗುತ್ತಾ ಹೋಗುತ್ತಾರೆ. ಭಾರತಿ ಸ್ವಂತ ಅನುಭವಗಳನ್ನೆಲ್ಲ ಸೇರಿಸಿ ಒಂದು ಒಳ್ಳೆಯ ಪುಸ್ತಕ ಬರೆದಿದ್ದಾರೆ.

ನಾನು ಇಲ್ಲಿ ಭಾರತಿಯ ಪುಸ್ತಕದ ಬಗ್ಗೆಗಿಂತ ಭಾರತಿಯ ಬಗ್ಗೆ ಹೆಚ್ಚು ಬರೆದಿದ್ದೇನೆ. ಯಾಕೆಂದರೆ ಅವರು ತಮಗೆ ಆದ ಕಹಿ ಅನುಭವಗಳನ್ನು ಮರೆತು, ಮರೆಯಿಸಿ, ಮುಗುಳ್ನಗೆಯಿಂದ ಬದುಕನ್ನು ಸ್ವೀಕರಿಸುತ್ತಾರೆ, ಸವಾಲ್‌ನ ಥರ. ಅವರು ಹೀಗೇ ಗೆದ್ದು ಬರುತ್ತಾ ಇರಲಿ, ಅವರ ಬದುಕಿನಲ್ಲಿ ಹೀಗೆ ಎಲ್ಲಿಂದಲೋ ಜನರು ಬರುತ್ತಾ ಇರಲಿ, ಅವರ ಇಡೀ ಬದುಕಿನುದ್ದಕ್ಕೂ ಇದೇ ಥರದ ಸಹಾಯಗಳು ಎದುರಾಗುತ್ತಾ ಇರಲಿ, ಅದರಿಂದ ಅವರ ಮುಖದಲ್ಲಿ ನಗು ಮತ್ತು ಮನಸ್ಸಿನಲ್ಲಿ ಕೃತಾರ್ಥತೆ ಸದಾ ಹೀಗೇ ತುಂಬುತ್ತಿರಲಿ ಎಂದು ಆಶಿಸುತ್ತೇನೆ.

(ಕೃತಿ: ಎಲ್ಲಿಂದಲೋ ಬಂದವರು, ಲೇಖಕರು: ಬಿ.ವಿ. ಭಾರತಿ, ಪ್ರಕಾಶಕರು: ಸಾವಣ್ಣ ಪಬ್ಲಿಕೇಷನ್, ಬೆಲೆ: 160/-)