ಬಣ್ಣ ಬದಲಾಗುತ್ತ ಅಲ್ಲಲ್ಲೇ ಅದುರುತ್ತ ಉದುರುತ್ತಿರುವ ಎಲೆಗಳನ್ನು ನೋಡುತ್ತಿದ್ದರೆ, ಅರೆ ಇಷ್ಟು ಬೇಗ ವರ್ಷ ಮುಗಿಯುತ್ತ ಬಂದಿತೆ ಎಂದು ಆಶ್ಚರ್ಯವೂ ಭಯವೂ ಆಗುತ್ತಿದೆ.

ಆಟೋಬಾನ್ ಗಳ ಮೇಲೆ ಓಡುತ್ತಿರುವಂತೆ ಉರುಳುತ್ತಿರುವ ದಿನಗಳು  ಬ್ರೇಕ್ ಹಾಕಿದರೆ ಎಲ್ಲಿ ಟೈರ್ ಹೊತ್ತಿ ಉರಿಯುವುದೋ ಎಂಬಂತೆ ಉಸಿರುಗಟ್ಟಿ ನುಗ್ಗುತ್ತಿವೆ.  ಈ ಬಾರಿಯ ಶರದ್ರುತುವಿಗೂ ನನ್ನಂತೆಯೇ ವಿಚಿತ್ರ ಧಾವಂತ ಆವರಿಸಿಕೊಂಡಂತಿದೆ. ಹಸರು ಯಾವಾಗ ಹಳದಿಯಾಗಿ ಕೆಂಪಾಯಿತು ಎಂದು ನಾನು ನೋಡಲೇ ಇಲ್ಲವಲ್ಲ ಈ ಸರ್ತಿ. ಒಂದಷ್ಟು ಮರಗಳು ಅರ್ಧ ಹಸುರು ಅರ್ಧ ಕೆಂಪಾಗಿ ಅಲ್ಲದ ವಯಸ್ಸಿನಲ್ಲಿ ತಲೆಹಣ್ಣಾಗಿ ಮದರಂಗಿ ಬಳಿದುಕೊಂಡ  ಹುಡುಗರಂತೆ ಎಡವಟ್ಟಾಗಿ ತೋರುತ್ತಿದ್ದರೆ, ಸದಾಹಸಿರಿನ ಸೂಚೀಪರ್ಣಿಗಳೂ ಗೊಂದಲಗೊಂಡು  ಒಣಗೊಣಗಿ ಉದುರಿಬಿಟ್ಟಿವೆ. ಇದ್ದುದರಲ್ಲಿ ಬರ್ಚ್ ಜಾತಿಯ ಮರಗಳೊಂದಷ್ಟು, ಅಷ್ಟಿಷ್ಟು ಕಾಯಿದೆ ಪಾಲಿಸಿ ಹಳದಿಯಾಗುತ್ತ ಕೆಂಪಿನತ್ತ ಹೊರಳುತ್ತಿವೆ.  ಈ ಬಾರಿಯ ಎಡಬಿಡಂಗಿ ಫಾಲ್ ಬಣ್ಣಗಳುನೋಡುತ್ತಿದ್ದರೆ,  ಮೊನ್ನೆ ಮೊನ್ನೆ ಅಡ್ಡಾಡಿ ಬಂದ ಲಂಡನ್, ಲಿವರ್ ಪೂಲಿನ ಬೀದಿಗಳು ನೆನಪಾಗುತ್ತಿವೆ.  ಬೀದಿಗಳಿಗಿಂತಲೂ ಬೀದಿಗಳ ಮೇಲಿನ ಬಣ್ಣದ ಬೆಡಗಿಯರು ಎಂದರೆ ಹೆಚ್ಚು ಸರಿ. ಅಮೆರಿಕಾದ ಜೀನ್ಸ್, ಟಿ-ಶರ್ಟು, ಬೆಸಿಗೆಯಲಾದರೆ ಒಂದು ಷಾರ್ಟ್ಸ್, ಮತ್ತದೇ ಟಿ-ಶರ್ಟಿನ ವಾತಾವರಣಕ್ಕೆ ಒಗ್ಗಿಹೋದ ನನಗೆ ಇಂಗ್ಲೆಂಡಿಗೆ ಹೋದಾಗ ರಾಚಿದಂತೆ ಎದ್ದು ಕಂಡಿದ್ದು ಅಲ್ಲಿನ ಜನರ ವೈವಿಧ್ಯಮಯ ಅಲಂಕಾರದ ಬಗೆ. ಯಾವುದೊ ಫ್ಯಾಶನ್ ಶೋದ  ರೆಂಪಿನಿಂದ ಸೀದಾ ರಸ್ತೆಗಿಳಿದುಬಂದವರಂತೆ ಇದ್ದರು.  ಒಬ್ಬರು ಧರಿಸಿದಂತೆ ಇನ್ನೊಬ್ಬರ ವೇಷವಿಲ್ಲ. ಒಬ್ಬಳ ಮುಖಾರವಿಂದ ಯಕ್ಷಗಾನ ಚೌಕಿಮನೆಯಿಂದ ತಪ್ಪಿ ಹೊರಬಂದಿದ್ದಳೋ ಎಂಬಂತಿದ್ದರೆ ಮತ್ತೊಬ್ಬಳು, ಈಗ ತಾನೇ ಭರತನಾಟ್ಯ ರಂಗಪ್ರವೇಶಕ್ಕೆ ಸಜ್ಜಾಗಿದ್ದಾಳೋ ಎನಬೇಕು. ಎದುರಿಗೆ ಬಂದ ಒಂದು ಕಾಲೇಜು ಹುಡುಗಿಯರ ಗುಂಪು ಕಾಲೇಜಿಗೆ ಹೊರಟಿದೆಯೋ,  ಇಲ್ಲ ಬೆಳಿಗ್ಗೆ ೯ ಗಂಟೆಗೆ ಕ್ಲಬ್ಬಿಗೆ ಹೊರಟಿದೆಯೋ ಎಂದು ಕನ್ಫ್ಯೂಸ್ ಆಗುತ್ತಿದ್ದೆ. ಇನ್ನೊಬ್ಬಳು ಟ್ಯೂಬ್ನಲ್ಲಿ( ಲಂಡನ್ ಟ್ರೈನ್ ವ್ಯವಸ್ಥೆ) ಬೆಳಬೆಳಿಗ್ಗೆ ಇಂಥಾ ದೊಡ್ಡ ಪೆಟ್ಟಿಗೆ ತೆಗೆದು ಒಂದಾದ ಮೇಲೊಂದರಂತೆ ಮುಖಕ್ಕೆ ಮೆತ್ತಿಕೊಳ್ಳುತ್ತಿದ್ದರೆ, ಎಷ್ಟು ಸಮಯವಿದೆಯಪ್ಪ ಇವರಿಗೆಲ್ಲ ದಿನಾ ಹೀಗೆ ಮೆತ್ತಿಕೊಳ್ಳಲು ಎನಿಸುತ್ತಿತ್ತು.  ತನ್ನ ಸ್ಟೇಶನ್ ಬರುತ್ತಿದ್ದಂತೆ ಎಲ್ಲ ಪಟಪಟನೆ ತುಂಬಿ ಹೆಗಲಿಗೇರಿಸಿ, ಇನ್ನೊಂದು ಕೈಯಲ್ಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿದು ಚೂಪನೆಯ ಚಪ್ಪಲಿಯಲ್ಲಿ ಒಡತೊಡಗಿದಳು.  ಕೆದರಿದ ತಲೆಯಲ್ಲೇ, ಕಾರಿನಲ್ಲೇ ಬಾಚಿಕೊಳ್ಳುತ್ತಾ ಕೆಲಸಕ್ಕೆ ಹೋಗುವ ನನ್ನಂತವಳಿಗೆ  ಅಪ್ಪ ದೇವರೇ, ಸತ್ತರೂ ಇಂಗ್ಲೆಂಡಿನಲ್ಲಿ ಕೆಲಸ ಮಾಡುವಂತೆ ಹರಸಿಬಿಡಬೇಡ ಎಂದು ಬೇಡಿಕೊಂಡೆ.

ಉಳಿದ ಸೌಲಭ್ಯ ಸೌಕರ್ಯಗಳೆಲ್ಲ ಇಲ್ಲಿಯಂತೆ ಇದ್ದುದರಿಂದ, ವ್ಯತ್ಯಾಸ ಎನಿಸಿದ್ದೆಂದರೆ ಕಟ್ಟಡಗಳು. ನ್ಯೂ ಇಂಗ್ಲೆಂಡಿಗೆ ಯಾಕೆ ಹಾಗೆನ್ನುತ್ತರೆಂದು ಇಂಗ್ಲೆಂಡಿಗೆ ಹೋದ ಮೇಲೆ ಗೊತ್ತಾಯಿತು.  ಇಲ್ಲಿ ಅಲ್ಲಲ್ಲಿ ಒಂದಿಷ್ಟು ಗೊಂಚಲಿನಂತೆ ಕಾಣುವ ವಿಕ್ಟೋರಿಯನ್, ಎಡ್ವರಡಿಯನ್ ಕಟ್ಟಡಗಳು, ಅಲ್ಲಿ ಊರುತುಂಬಾ ಅವೇ.  ಎಲ್ಲಿ ನಡೆದರೂ, ನೋಡಿದರೂ ಏನೋ ಒಂದು ಘಟಿಸಿದ ವಿವರಣೆ, ಐತಿಹಾಸಿಕ ತುಣುಕೇ ಇಟ್ಟಂತೆ ತೋರುತ್ತಿತ್ತು.  ಆಗಷ್ಟೇ ಇಂಗ್ಲೆಂಡ್ ಪ್ರವಾಸ ಮುಗಿಸಿದ್ದ ಅಪ್ಪನನ್ನು  ಹಿಂದೊಮ್ಮೆ ಕೇಳಿದ್ದೆ, ಲಂಡನ್ ಹೇಗಿದೆ ಎಂದು? ಅದಕ್ಕೆ ಅವನ ಉತ್ತರ- ” ಸಾಯಡಿಗೆ ಎಲ್ಲೋ ಉಚ್ಚೆ ಹೊಯ್ದರೂ ಯಾವುದೊ ಮಹತ್ವವಾದ ಐತಿಹಾಸಿಕ ಕುರುಹಿನ ಮೇಲೆ ಬೀಳುತ್ತದೆ,  ನೋಡು ಹಾಗಿದೆ ಎಂದು.” ಲಂಡನ್ ಸುತ್ತಾಡಿದಾಗ ಹ್ಮ್ಮ್.. ಪಪ್ಪನಿಗಿಂತ ಸಮರ್ಥವಾಗಿ ಲಂಡನ್ ವಿವರಣೆ ಸಾಧ್ಯವಿಲ್ಲ ಅನಿಸಿತ್ತು. ಜಗತ್ತಿನ ದುಡ್ಡೆಲ್ಲ ದೋಚಿ ತಂದು ಇತಿಹಾಸ ಎನ್ನುತ್ತಾ ಎಂಥೆಂತ ಕೋಟೆ ಕೊತ್ತಲ ಕಟ್ಟಿಬಿಟ್ಟರಲ್ಲ ಇವರು ಎಂದು ಮಧ್ಯೆ ಮಧ್ಯೆ ಉರಿಯುತ್ತಿತ್ತು ಕೂಡ.

ಎದುರಿನ ಅಂಗಳದಲ್ಲಿ ಹರಡಿಬಿದ್ದಿರುವ ಪೈನ್ ಕೋನ್ ಗಳ ರಾಶಿಯ ನಡುವೆ ಪೋಣಿಸಿದಂತೆ ಹುದುಗಿಹೋಗಿರುವ ಎಕಾರ್ನ್ ಗಳ ನಡುವಿಂದ ಗಟ್ಟಿಕಾಳುಗಳನೆಲ್ಲ ಆರಿಸಿ ಆರಿಸಿ ಹೊತ್ತೊಯ್ಯುತ್ತಿರುವ ಅಳಿಲೊಂದು ಲಂಡನ್ ಬೀದಿಯಿಂದ ನನ್ನನ್ನು  ಮೆಟ್ಟಿಲ ಮೇಲೆ ಮತ್ತೆ ಬೀಳುತ್ತಿರುವ ಎಲೆಗಳ ನಡುವೆ ತಂದು ನಿಲ್ಲಿಸಿದೆ. ೪ ದಿನ ಮಲೆನಾಡಿನಂತೆ ಮಳೆ, ಮತ್ತೆ ಎಳೆಬಿಸಿಲು, ಮತ್ತೆ ಮಳೆ.  ಆ ಅಳಿಲಿಗೂ ಮತ್ತೆ ಯಾವಾಗ ಮಳೆ ಬರುವುದೋ ಎಂಬ ಹೆದರಿಕೆ ಪಾಪ. ಎಡಬಿಡದೆ ಚಳಿಗಾಲಕ್ಕೆ ಬೇಕಾದ ಕಾಳುಗಳನ್ನು ಬಿಡಾರ ಸೇರಿಸುತ್ತಿದೆ. ಮನೆಗಳ ಮುಂದೆ, ಅಂಗಡಿಗಳಲ್ಲೆಲ್ಲ ಅಲಂಕಾರವೂ ಬದಲಾಗಿ ಹೋಗಿದೆ.  ಎಲ್ಲಿ ನೋಡಿದರೂ ಒಣಗಿದ ಜೋಳದ ತೆನೆಗಳು, ಕೇಸರಿ ಕುಂಬಳಗಳು, ಗದ್ದೆಬೆಚ್ಚುಗಳು. ಮತ್ತೊಂದಿಷ್ಟು ಮನೆಗಳ ಮುಂದೆ ಈಗಾಗಲೇ, ಬಾವಲಿ, ಭೂತ, ಪಿಶಾಚಿ, ಅಸ್ಥಿಪಂಜರ, ಸ್ಮಶಾನ, ಗೋರಿ ಎದ್ದು ನಿಂತಿವೆ. ಇದ್ಯಾಕೆ ಇಷ್ಟು ಬೇಗ ಹ್ಯಾಲೋವೀನ್ ಅಲಂಕಾರ ಎಂದುಕೊಳ್ಳುತ್ತ ಕ್ಯಾಲೆಂಡರ್ ನೋಡಿದರೆ ಆಗಲೇ ಅಕ್ಟೋಬರ್ ಮೆಟ್ಟಿ ಒಂದು ವಾರವಾಗುತ್ತಿದೆ. ಇನ್ನೇನು ದಶಮಿ, ದೀಪಾವಳಿ ಹಾಗೆ ಕ್ರಿಸ್ ಮಸ್ ರಜೆ ಆಗಿಹೋಯಿತು ಇಡೀ ವರ್ಷ. ನಾನೆಲ್ಲಿ ಕಳೆದು ಹೋಗಿದ್ದೆ ಇಷ್ಟು ದಿನ? ಕಳೆದೆಲ್ಲಿ ಹೋಗಿದ್ದೆ, ಇಲ್ಲೇ ಇದ್ದೆ. ಚಳಿಗಾಲದ ಮಂಜು ಕರಗಿ ಚೆರ್ರಿ ಹೂಗಳನ್ನು ನೋಡಿದ್ದೆನಲ್ಲವೆ? ವಲಸೆ ಹಕ್ಕಿಗಳೆಲ್ಲ ಹಿಂತಿರುಗಿ ಹಿತ್ತಲಲ್ಲಿ ರಾಬಿನ್ ಹಾಡಿದ್ದು ಕೂಡ ಕೇಳಿದ್ದೆನಲ್ಲವೇ. ಟ್ಯೂಲಿಪ್ ಳು ಉದುರಿ, ಮೇ ಫ್ಲವರ್ ಗಳು ಒಣಗಿ ಲಾನ್ ಹಸಿರಾದದ್ದೂ ಕಂಡಿತ್ತಲ್ಲವೇ. ಉರಿಬಿಸಿಲಲ್ಲಿ ಸ್ಪ್ರಿಂಕ್ಲರ್ ಹಚ್ಚಿ ಕುಣಿದ ಮಕ್ಕಳು ದಿನವಿಡೀ ಪಾಪ್ಸಿಕಲ್ ಮೆಂದದ್ದೂ ಮೊನ್ನೆ ಮೊನ್ನೆಯಂತಿದೆ ತಾನೇ. ಕಳೆದ ತಿಂಗಳಷ್ಟೇ ಎಫಿನಟ್ ಎನ್ನುತ್ತಿದ್ದ ಮಗ ಈಗ ಸರಿಯಾಗಿ ಎಲಿಫಂಟ್ ಎನ್ನುತ್ತಿದ್ದಾನೆ.  ಅವನ ಮುಂಚಿನ ಉಚ್ಚಾರವೇ ಚೆನ್ನಿತ್ತು ಅನಿಸುತ್ತಿದೆ. ಹಿಂದೊಮ್ಮೆ ಮೊಟೆಟೊ ಎನ್ನುತ್ತಿದ್ದ ಮಗಳೂ ಈಗ ಟೊಮೇಟೊ ಎಂದು ಬರೆಯುವಷ್ಟಾಗಿಬಿಟ್ಟಿದ್ದಾಳೆ.

ಕಮರುವ ಮುಂಚಿನ ಒಂದಿಷ್ಟು ಕಲರ್ಈಗ ಕಾಣುತ್ತಿರುವುದು ಬೇಸಿಗೆಯ ಹಸಿರೆಲ್ಲ ಕರಟಿ ಕಮರುವ ಮುಂಚಿನ ಒಂದಿಷ್ಟು ಕಲರ್ ಅಷ್ಟೇ. ಕೈಯೊಳಗಿನ ಹಬೆಯಾಡುವ ಚಹಾ ಖಾಲಿಯಾಗುವುದರೊಳಗೆ ಎಲೆಗಳಿಗೂ ಚಹಾದ ಬಣ್ಣ ಬಂದಿರುತ್ತದೆ. ಕಡೆಗೇನಿದ್ದರೂ  ಕರಿಮರಗಳ ನಡುವೆ  ಬಿಳಿಮಂಜಿನ ಮೇಲೆ ಪ್ರತಿಫಲಿಸುವ ಕ್ರಿಸ್ ಮಸ್ ಲೈಟಿನ ಬಣ್ಣದ ಬೆಳಕು. ಕರಿಕೋಟಿನ ಸಾಗರದೆಡೆಗಳಲ್ಲಿ ಇಣುಕುವ ಒಂದಷ್ಟು ಸ್ಕಾರ್ಫು, ಮಫ್ಲರಿನ ಬಣ್ಣಗಳು. ಮಕ್ಕಳ ಬೂಟುಗಾಲಿನ ಮೇಲೆ ಕಂಡೂ ಕಾಣದಂತೆ ರೆಪ್ಪೆಬಡಿಯುವ ಸಾಕ್ಸಿನ ಬಣ್ಣಗಳು. ಚೈತ್ರದ ಹೂವಿನ ಬಣ್ಣಗಳೆಲ್ಲ ಎಳೆಬಿಸಿಲ ಹಳದಿಯಾಗಿ, ಹುಲ್ಲು ಹಸಿರಾಗಿ ಬಣ್ಣದೆಲೆಗಳ ನಡುವೆ ಕರಗಿ ಉಳಿವುದು ಅಗ್ಗಿಷ್ಟಿಕೆಯಲ್ಲಿ ಉರಿವ ಬೆಚ್ಚನೆಯ ಬೆಂಕಿಯ ಬಂಗಾರದ ಬಣ್ಣಗಳು. ಈ ಬಣ್ಣಗಳನೆಲ್ಲ ಬಿಳಿಮಂಜು ನುಂಗುವ ಮುನ್ನ, ನನ್ನ ಬಣ್ಣದಂಗಿಗಳೆಲ್ಲ ಕರಿಕೋಟಿನ ಹಿಂದೆ ಹುದುಗುವ ಮುನ್ನ ಕಣ್ತುಂಬಿಕೊಳ್ಳಬೇಕು, ಮೈದುಂಬಿಕೊಳಬೇಕು.  ಒಂದರೆಕ್ಷಣ ನಿಂತು ಮೆಪಲ್ ಮರಗಳ ಮೇಲಿಂದ ಹಾದುಬರುವ ಗಾಳಿಯಲ್ಲಿ ಸೂಕ್ಷ್ಮವಾಗಿ ತೋರುವ ಕಮಟು ಸಕ್ಕರೆಯ ಘಮಕ್ಕೆ ಮೂಗರಳಿಸಬೇಕು. ಆ ಗಾಳಿಯ ರಭಸಕ್ಕೆ ದೂರದ ತೋಟವೊಂದರಲ್ಲಿ ತೊಟ್ಟು ಕಳಚಿ ಬಿದ್ದ ಸೇಬಿನ ಹಣ್ಣು ತರಗೆಲೆಗಳ ತಾಕಿದ ಶಬ್ದಕ್ಕೆ ಕಿವಿಯಾಗಬೇಕು. ತಾ ಒಬ್ಬನೇ ಕಾಳು ಆರಿಸುತ್ತಿರುವ ಅಳಿಲಿಗೆ ಒಂದಿಷ್ಟು ಅಳಿಲುಸೇವೆ ಮಾಡಬೇಕು.

“ಅಮ್ಮ ಈ ಬಾರಿ ಪಂಪ್ಕಿನ್ ಪಿಕಿಂಗ್ ಹೋಗುವುದು ಯಾವಾಗ?”  ಹೌದು, ಹೊರಡಬೇಕು.