ಇಲ್ಲಿನ ಎಲ್ಲಾ ಕಥೆಗಳಲ್ಲಿ ಪಾತ್ರಗಳ ದಿನನಿತ್ಯದ ಬದುಕಿನ ಲಯಗಳನ್ನು ಸೂಕ್ತ ವಿವರಗಳ ಮೂಲಕ ನಿರೂಪಿಸಲಾಗಿದೆ. ಪ್ರಸನ್ನ ಅವರದೇ ಆದ ಒಂದು ನಿರೂಪಣಾ ವಿಶೇಷತೆ ಎಂದರೆ, ಅವರು ಪಾತ್ರಗಳನ್ನು ಸುತ್ತುವರಿದಿರುವ ಗಾಳಿ, ಬೆಳಕು ಮತ್ತು ಪೀಠೋಪಕರಣಗಳು ಹಾಗೂ ಇತರ ವಸ್ತುವಿಶೇಷಗಳ ಮೂಲಕವೂ ಪಾತ್ರಗಳ ಮಾನಸಿಕ ಏರುಪೇರುಗಳನ್ನು ಪ್ರತಿಫಲಿಸುವುದು. ಈ ಮಾತುಗಳಿಗೆ `ಹುಡುಕಾಟ’ ಕಥೆಯ ನಾಯಕಿ ಸುಕೃತಾಳ ಬಗೆಗೆ ದಿನದ ವಿವಿಧ ಹಂತಗಳಲ್ಲಿ, ವಿವಿಧ ಆವರಣಗಳಲ್ಲಿ ಅವಳ ವಿವಿಧ ಮಾನಸಿಕ ಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ಈ ನಿರೂಪಣೆಗಳನ್ನು ಗಮನಿಸಬಹುದು.
ಎ.ಎನ್. ಪ್ರಸನ್ನ ಹೊಸ ಕಥಾ ಸಂಕಲನ ‘ಬಿಡುಗಡೆ’ಗೆ ಗಿರೀಶ್ ವಿ. ವಾಘ್ ಬರೆದ ಮುನ್ನುಡಿ ನಿಮ್ಮ ಓದಿಗೆ
ಕಳೆದ ಐದು ದಶಕಗಳಲ್ಲಿ ಐದು ಕಥಾಸಂಕಲನಗಳನ್ನು ಮತ್ತು ಒಂದು ಆಯ್ದ ಕಥೆಗಳ ಸಂಕಲನವನ್ನು ಪ್ರಕಟಿಸಿರುವ ಎ.ಎನ್. ಪ್ರಸನ್ನ ಅವರು ನಮ್ಮ ಸಮರ್ಥ ಕಥೆಗಾರರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಅವರು ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದು ಕಳೆದ ಶತಮಾನದ ಅರವತ್ತರ ದಶಕದ ಮಧ್ಯಭಾಗದಲ್ಲಿ. ಆಗಿನ ಯುವ ಬರಹಗಾರರು, ಹಿಂದಿನ ಹತ್ತು ವರ್ಷಗಳಲ್ಲಿ ಪ್ರಕಟವಾಗಿದ್ದ ನವ್ಯಕಥೆಗಾರರ ಹೊಸ ರೀತಿಯ ಕಥೆಗಳಿಂದ ಪ್ರಭಾವಿತರಾಗಿದ್ದರು. ಪ್ರಸನ್ನ ಅವರು ತಮ್ಮ ಕಥೆಗಳಲ್ಲಿ, ಮನುಷ್ಯರ ಸ್ವಭಾವಜನ್ಯ ನಡವಳಿಕೆಗಳನ್ನು, ಮನುಷ್ಯ ಸಂಬಂಧಗಳಲ್ಲಿನ ಜಟಿಲತೆ ಮತ್ತು ಸಂಕೀರ್ಣತೆಗಳನ್ನು, ಸೂಕ್ಷ್ಮತೆ ಮತ್ತು ಕುಶಲತೆಯಿಂದ ನಿರೂಪಿಸಿರುವ ರೀತಿಯಲ್ಲಿ ನವ್ಯಕಥೆಗಳ ಪ್ರಭಾವವನ್ನು ಗುರುತಿಸಬಹುದು. ಅವರ ಆಯ್ದ ಕಥೆಗಳ ಸಂಕಲನದ ಕಥೆಗಳಲ್ಲಿ ಮತ್ತು ಪ್ರಸ್ತುತ ಸಂಕಲನದ ಕೃತಿಗಳಲ್ಲಿ ಬಹುಪಾಲು ನಗರವಾಸಿ ಸುಶಿಕ್ಷಿತ ಮಧ್ಯಮ ವರ್ಗದ ಹಿನ್ನೆಲೆಯನ್ನೆ ಕಾಣುತ್ತೇವೆ. ಒಂದೇ ಸಾಮಾಜಿಕ ಹಿನ್ನೆಲೆ ಇದ್ದರೂ ಈ ಕಥೆಗಳಲ್ಲಿ ಸಾಕಷ್ಟು ವೈವಿಧ್ಯತೆ ಇದೆ.
ಈ ಸಂಕಲನದಲ್ಲಿ ಹೆಚ್ಚು ದೀರ್ಘವಾದ ಕಥೆಯಾದ `ಹುಡುಕಾಟ’ದ ಉದ್ಯೋಗಸ್ಥ ಯುವತಿ ಸುಕೃತಾಳಿಗೆ, ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಳ ಹೆತ್ತವರಿಂದ ಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಆಕೆ ತನ್ನ ಸಂಗಾತಿಯ ಆಯ್ಕೆಗಾಗಿ ಜಾಲತಾಣದಲ್ಲಿ ತನ್ನ ಬಗೆಗಿನ ವಿವರಗಳನ್ನು ದಾಖಲಿಸಿ, ಕೊನೆಯಲ್ಲಿ `ಕಂಡೀಷನ್ಸ್ ಅಪ್ಲೈ’ ಎಂದು ನಮೂದಿಸುತ್ತಾಳೆ. ಅವಳ ಈ ನಿರ್ಧಾರ, ಸಾಕಷ್ಟು ಮಾನಸಿಕ ತಾಕಲಾಟಗಳ ನಂತರದ ಫಲ ಎಂಬುದನ್ನು ಕಥೆ ನಿರೂಪಿಸುತ್ತದೆ. ಇದಕ್ಕೆ ಕಾರಣವಾದ ಸಂಗತಿ ಮತ್ತು ಅವಳು ನಮೂದಿಸಿದ ಷರತ್ತಿನ ಬಗ್ಗೆ ವಿವರಣೆಯನ್ನು ಪಡೆದ, ಅವಳನ್ನು ಭೇಟಿಯಾಗಲು ಬರುವ ಯುವಕರು, ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೇ ಈ ಕಥೆಯ ಪರಿಣಾಮಕಾರಿ ಭಾಗವಾಗಿದೆ. `ಪಾರ್ಕು’ ಕಥೆಯ ಉದ್ಯೋಗಸ್ಥ ವಿವಾಹಿತ ಯುವತಿ, ಚಿಕ್ಕಂದಿನಿಂದಲೂ ಸಸ್ಯ ಜಗತ್ತಿನಿಂದ ಆಕರ್ಷಿತಳಾಗಿರುತ್ತಾಳೆ. ಅವರು ಬಾಡಿಗೆಗೆ ಹಿಡಿದ ಹೊಸ ಮನೆಯ ಎದುರಿನ ಪಾರ್ಕಿನ ಬಗ್ಗೆ ಅವಳಿಗೆ ಸಹಜವಾಗಿಯೆ ಆಸಕ್ತಿ ಬೆಳೆದು ಅದೊಂದು ವ್ಯಸನವಾಗಿ, ಅದು ಅವಳ ದಾಂಪತ್ಯಕ್ಕೆ ಕುತ್ತು ತರುವುದನ್ನು ನೋಡುತ್ತೇವೆ. ಒಂದು ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮಧ್ಯ ವಯಸ್ಸಿನ `ನಂಟು’ ಕಥೆಯ ನಾಯಕ ತನ್ನ ಬಿಡುವಿನ ಸಮಯವನ್ನೆಲ್ಲ ಸೌರವಿದ್ಯುತ್ ಉತ್ಪಾದನಾ ಉಪಕರಣವನ್ನು ತಯಾರಿಸುವುದಕ್ಕೆ ವ್ಯಯಿಸಿ, ಅದರಲ್ಲಿ ಸಫಲನಾಗಿ ತೃಪ್ತಿ ಕಾಣುತ್ತಾನೆ. ಆದರೆ ಅವನ ಇಬ್ಬರು ಆಪ್ತ ಸಹೋದ್ಯೋಗಿಗಳನ್ನು ಬಿಟ್ಟರೆ ಇನ್ನಿತರರಾಗಲಿ ಅಥವಾ ಸಾರ್ವಜನಿಕ ಸಂಸ್ಥೆಗಳವರಾಗಲಿ ಅವನಿಗೆ ಪ್ರೋತ್ಸಾಹ ನೀಡುವುದಿಲ್ಲ.
`ಹೂರಣ’ಕಥೆಯನ್ನು ಅದರ ಕಥಾನಾಯಕನ ಮಾತುಗಳಲ್ಲೆ ನಿರೂಪಿಸಲಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಉನ್ನತಾಧಿಕಾರಿಯಾಗಿರುವ ಅವನ ವ್ಯಕ್ತಿತ್ವದಲ್ಲಿರುವ ವೈಚಿತ್ರಗಳನ್ನು ಈ ಕಥೆಯಲ್ಲಿ ಅನಾವರಣಗೊಳಿಸಲಾಗಿದೆ. ಅವನು ತನ್ನ ಹುದ್ದೆಯಿಂದ ನಿವೃತ್ತನಾಗುತ್ತಿರುವ ದಿನ ತನ್ನ ಬದುಕಿನಲ್ಲಿ ತಾನು ಉದಾರವಾಗಿ, ನೇರವಾಗಿ ನಡೆದುಕೊಳ್ಳಬೇಕೆಂದು ನಿಶ್ಚಯಿಸಿದಾಗಲೆಲ್ಲ ಹಾಗೆ ನಡೆದುಕೊಳ್ಳಲಾಗದಿದ್ದುದಷ್ಟೇ ಅಲ್ಲ, ಎಷ್ಟೋ ಸಾರಿ ಇತರರನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಾಗ ತನಗೆ ಸಿಗುತ್ತಿದ್ದ ಖುಷಿಯ ಬಗ್ಗೆಯೂ ಹೇಳಿಕೊಳ್ಳುತ್ತಾನೆ. ಪ್ರಸನ್ನ ಅವರು ತಮ್ಮ ಹಲವಾರು ಕಥೆಗಳ ನಿರೂಪಣೆಯಲ್ಲಿ `ಮಾಂತ್ರಿಕ ವಾಸ್ತವತೆ’ಯನ್ನು ಬಳಸಿದ್ದಾರೆ. `ಹೂರಣ’ ಕಥೆಯಲ್ಲಿನ ನಾಯಕನು ನೈತಿಕವಾಗಿ ಕುಬ್ಜನಾಗಿ ನಡೆದುಕೊಂಡಾಗಲೆಲ್ಲ ಅವನ ಮುಂದೆ `ಕುಗ್ಗಣ್ಣ’ ಎಂಬ ವ್ಯಕ್ತಿ ಬಂದು ಅವನ ಆತ್ಮಸಾಕ್ಷಿಯಾಗಿ ಕಾಡುವುದರಲ್ಲಿ ಇಂತಹ ನಿರೂಪಣೆಯನ್ನು ನೋಡಬಹುದು. `ಪಲ್ಲಟ’ ಕಥೆಯ ಮಧ್ಯವಯಸ್ಸನ್ನು ದಾಟುತ್ತಿರುವ ವಿಧುರ ನಾಯಕನಿಗೆ ಆರೋಗ್ಯದ ಸಮಸ್ಯೆ ಕಾಡಿದಾಗ, ಅವನ ಮಗ ಮತ್ತು ಸೊಸೆಗೆ ಅವನು ಒಂದು `ಹೊರೆ’ಯಾಗಿ ಕಾಣುತ್ತಾನೆ. ಅವನಿಗೆ ಈ ಬಿಕ್ಕಟ್ಟಿನ ಸನ್ನಿವೇಶಕ್ಕೆ ಪರಿಹಾರ ಕಂಡುಕೊಳ್ಳಲು, ಅವನ ದೈಹಿಕ ದೌರ್ಬಲ್ಯವನ್ನು ನೀಗಿಸಲು ಬಂದ ಯುವ ಫಿಸಿಯೋಥೆರಪಿಸ್ಟ್ ಎದುರಿಸುತ್ತಿರುವ ಕೌಟುಂಬಿಕ ಸಮಸ್ಯೆಯೆ ದಾರಿ ತೋರಿಸುವುದು, ಒಂದು ಕುತೂಹಲಕಾರಿ ವಿದ್ಯಮಾನವಾಗಿ ನಿರೂಪಿತವಾಗಿದೆ. `ಅಂತರಾಳ’ ಕಥೆಯಲ್ಲಿ, ಪೀಠೋಪಕರಣಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿರುವ ನಾಯಕನಿಗೆ ತನ್ನ ಮಗ ಒಂದು ಉದ್ಯೋಗವನ್ನು ಕಂಡುಕೊಳ್ಳಲಾಗದ್ದರ ಬಗ್ಗೆ ಗಮನಹರಿಸಲೇ ಬೇಕಾದಾಗ, ತನ್ನ ಬಾಲ್ಯದಲ್ಲಿ ತಾನು ಗಳಿಸಿದ ಒಂದು ಸಂಪರ್ಕ ತನ್ನನ್ನು ಉದ್ಯಮಿಯಾಗಿ ರೂಪುಗೊಳ್ಳಲು ಆಧಾರವಾಗಿತ್ತೆಂಬುದು ನೆನಪಿಗೆ ಬರುತ್ತದೆ. ಅವನ ಹೈಸ್ಕೂಲು ಶಿಕ್ಷಣಕ್ಕೆ ಕುತ್ತುಂಟಾಗುವ ಪರಿಸ್ಥಿತಿ ಬಂದಾಗ, ಅವನ ಶಿಕ್ಷಕರು ಅವನನ್ನು ತಮಗೆ ಪರಿಚಿತರಾಗಿದ್ದ ಉದ್ಯಮಿಯೊಬ್ಬರ ಹತ್ತಿರ ಕರೆದುಕೊಂಡು ಹೋಗಿ ನೆಲೆಗೊಳಿಸುತ್ತಾರೆ. ಇದರಿಂದ ಅವನು ತನ್ನ ಶಿಕ್ಷಣ ಮುಂದುವರಿಸುವುದರ ಜೊತೆಗೆ ಉದ್ಯಮ ಕ್ಷೇತ್ರದ ಒಡನಾಟವನ್ನು ಪಡೆಯುವಂತಾಗುತ್ತದೆ. ಈತನಿಗೆ ಮಾರ್ಗದರ್ಶಕನಾಗಿ ಸಹಾಯ ಮಾಡಿದ ಆ ಉದ್ಯಮಿಯ ಸ್ವಂತ ಮಗ, ತನ್ನ ತಂದೆಯ ಮಾರ್ಗದರ್ಶನವನ್ನು ನಿರಾಕರಿಸಿ, ತನ್ನ ಅಹಮ್ಮಿನಂತೆ ನಡೆದುಕೊಂಡು ತಂದೆಯ ಉದ್ಯಮದ ಅಂತ್ಯಕ್ಕೆ ಕಾರಣನಾಗುತ್ತಾನೆ. ಈ ಕಥೆ ಹೆತ್ತವರ ಮತ್ತು ಅವರ ವಯಸ್ಸಿಗೆ ಬಂದ ಮಕ್ಕಳ ನಡುವಿನ ಸಂಬಂಧದ ತೊಡಕುಗಳನ್ನು ತೆರೆದಿಡುವುದರ ಜೊತೆಗೆ ನಮ್ಮ ಯುವ ಜನರಲ್ಲಿ ಆಧುನಿಕ ಉದ್ಯಮ ಕ್ಷೇತ್ರಗಳು ಅಪೇಕ್ಷಿಸುವ ಕೌಶಲಗಳನ್ನು ಮತ್ತು ನಡಾವಳಿಗಳನ್ನು ರೂಢಿಸುವಲ್ಲಿ ನಮ್ಮ ಸಾಮಾನ್ಯ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಅಗತ್ಯವಾದಷ್ಟು ಗಮನಕೊಡುತ್ತಿಲ್ಲ ಎಂಬುದರ ಕಡೆಗೂ ನಮ್ಮ ಗಮನಸೆಳೆಯುತ್ತದೆ. ಈ ಕಥೆ ಕನ್ನಡದ ಮಹತ್ವದ ಘಟ್ಟಗಳಲ್ಲಿ ಒಂದು ಎನ್ನಬಹುದು.
ಇಲ್ಲಿನ ಎಲ್ಲಾ ಕಥೆಗಳಲ್ಲಿ ಪಾತ್ರಗಳ ದಿನನಿತ್ಯದ ಬದುಕಿನ ಲಯಗಳನ್ನು ಸೂಕ್ತ ವಿವರಗಳ ಮೂಲಕ ನಿರೂಪಿಸಲಾಗಿದೆ. ಪ್ರಸನ್ನ ಅವರದೇ ಆದ ಒಂದು ನಿರೂಪಣಾ ವಿಶೇಷತೆ ಎಂದರೆ, ಅವರು ಪಾತ್ರಗಳನ್ನು ಸುತ್ತುವರಿದಿರುವ ಗಾಳಿ, ಬೆಳಕು ಮತ್ತು ಪೀಠೋಪಕರಣಗಳು ಹಾಗೂ ಇತರ ವಸ್ತುವಿಶೇಷಗಳ ಮೂಲಕವೂ ಪಾತ್ರಗಳ ಮಾನಸಿಕ ಏರುಪೇರುಗಳನ್ನು ಪ್ರತಿಫಲಿಸುವುದು. ಈ ಮಾತುಗಳಿಗೆ `ಹುಡುಕಾಟ’ ಕಥೆಯ ನಾಯಕಿ ಸುಕೃತಾಳ ಬಗೆಗೆ ದಿನದ ವಿವಿಧ ಹಂತಗಳಲ್ಲಿ, ವಿವಿಧ ಆವರಣಗಳಲ್ಲಿ ಅವಳ ವಿವಿಧ ಮಾನಸಿಕ ಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ಈ ನಿರೂಪಣೆಗಳನ್ನು ಗಮನಿಸಬಹುದು:
“ಇದೆಲ್ಲ ಆಲೋಚನೆಗಳು ತಲೆಯಲ್ಲಿ ಸುತ್ತುತ್ತಿರುವಾಗಲೇ… ಅಮ್ಮ ಮಿಕ್ಸೀ ಆನ್ ಮಾಡಿದ್ದರಿಂದ ಉಂಟಾದ ಶಬ್ದ ಕೇಳಿಸಿಕೊಳ್ಳುತ್ತ ಮತ್ತೊಂದು ಕಡೆ ಕಣ್ಣು ಹಾಯಿಸಿದಾಗ ವಾಶಿಂಗ್ ಮೆಶೀನ್ ಮುಂದಿದ್ದ ಬಟ್ಟೆಗಳನ್ನು ಅದರೊಳಗೆ ಹಾಕಿ, `ಇಷ್ಟೇ ತಾನೆ.. ಆನ್ ಮಾಡೋದಾ..’ ಎಂದು ಕೇಳಿದ್ದಕ್ಕೆ ರಾಜಮ್ಮ ತಲೆ ಹಾಕಿದರು. ಅದನ್ನು ಆನ್ ಮಾಡಿ ಡೈನಿಂಗ್ ಟೇಬಲ್ ಮೇಲಿದ್ದ ಅಮ್ಮ ಮಾಡಿದ್ದ ತಿಂಡಿ ತಿಂದು ಕೆಳಗೆ ಬಂದು ಮೊಪೆಡ್ ಹೊರಗೆ ತೆಗೆದು ರಸ್ತೆಗಿಳಿದರೆ ಬೆಳಗಿನ ಒಂದು ಅಧ್ಯಾಯ ಮುಗಿದ ಹಾಗೆ’’
ಸುಕೃತಾ ತನ್ನ ವಿವಾಹಾಕಾಂಕ್ಷೆಯ ಬಗ್ಗೆ ಜಾಲತಾಣದಲ್ಲಿ ವಿವರಗಳನ್ನು ದಾಖಲಿಸಿ ನಿರಾಳತೆ ಪಡೆದು ಸಾಯಂಕಾಲ ಮನೆಗೆ ಹೊರಟಾಗಿನ ಸಂದರ್ಭದ ವಿವರಣೆ:
“ಹೊರಗೆ ಕಾಲಿಟ್ಟರೆ ಎದುರಿಗೆ ಕಂಡ ಅಂಗಡಿಗಳು ಆಫೀಸುಗಳ ಹೊರ ಮೈಗೆ ಹೊಸ ಬಣ್ಣ ಬಳಿಯುತ್ತಿರುವ ಹಾಗೆ, ಹಾರಾಡುತ್ತಿರುವ ಪಕ್ಷಿಗಳಿಗೆ ಹೊಸ ಶಕ್ತಿಯ ಹುರುಪು ಸೇರಿದ ಹಾಗೆ, ಅತ್ತಿತ್ತ ಓಡಾಡುವವರ ಮುಖ ಚಹರೆಯಲ್ಲಿ ಮಂದಹಾಸದ ಮಿರುಗು ಕಾಣಿಸಿದ ಹಾಗೆ, ಸಣ್ಣ ವಯಸ್ಸಿನವರ ಉಡುಗೆಗಳಿಗೆ ಹೊಸ ಛಾಪು ಮೂಡಿದ ಹಾಗೆ, ಆಗೀಗ ಕೇಳುವ ವಾಹನಗಳ ಶಬ್ದಕ್ಕೆ ಸುಖವೆನಿಸುವ ಲಯ ಬೆರೆತ ಹಾಗೆ, ಎದುರಾದ ಹುಡುಗಿಯರ ಹುಬ್ಬಿನಲ್ಲಿ ಹಬ್ಬದ ಹರವು ಹಬ್ಬಿದ ಹಾಗೆ..”
ವಿವಾಹ ಜಾಲತಾಣದಲ್ಲಿ ತನ್ನ ವಿವರಗಳ ಜೊತೆಗೆ `ಕಂಡೀಷನ್ಸ್ ಅಪ್ಲೈ’ ಎಂದು ನಮೂದಿಸಿರುವುದಕ್ಕೆ ಆಫೀಸಿನ ಸಹೋದ್ಯೋಗಿಗಳಿಂದ ಬಂದ ಪ್ರತಿಕ್ರಿಯೆಗಳ ಬಗ್ಗೆ ಯೋಚಿಸುತ್ತಿರುವ ಸುಕೃತಾಳ ಮುಂದೆ,
“ಆಫೀಸಿನಲ್ಲಿ ಅಲ್ಲಲ್ಲಿ ಇಳಿಬಿಟ್ಟಿದ್ದ ಲೈಟುಗಳು, ಗೋಡೆಗೆ ತಗಲು ಹಾಕಿದ್ದ ಉದ್ದಗಲದ ಫೋಟೋಗಳು, ಸುತ್ತ ತಿರುಗುವ ಕುರ್ಚಿಗಳು, ಟೇಬಲ್ ಮೇಲಿದ್ದ ನೋಟ್ಬುಕ್ಕುಗಳು ಮುಂತಾದವೆಲ್ಲ ಸುಕೃತಾಳಿಗೆ ಇತರರು ತಂದೊಡ್ಡಿದ ಅಹಿತ ಅನುಭವವನ್ನು ತಮ್ಮಲ್ಲಿಯೇ ಚರ್ಚಿಸಿದವು. ಅವು ಒಟ್ಟಾರೆಯಾಗಿ ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುವ ಹಾಗೆ, ಸುಕೃತಾ ಕೈಗೊಂಡಿದ್ದ ಮುನ್ನಡೆಗೆ ಸಹಕಾರ ಮತ್ತು ಬೆಂಬಲವನ್ನು ಸೂಚಿಸಿದವು. ಹೀಗಾಗಿಯೆ ಅವಳು ಅವುಗಳ ಕಡೆ ನೋಡಿದಾಗ ಕೊಂಚ ಮಿಂಚಿ ನಸುನಗೆ ಬೀರಿದವು” ಇಂಥವುಗಳಲ್ಲಿ ಮಾಂತ್ರಿಕ ವಾಸ್ತವತೆಯನ್ನು ಕಾಣಬಹುದು.
ಸಣ್ಣಕಥಾ ಪ್ರಕಾರದ ಬಹಳಷ್ಟು ರಚನೆಗಳಲ್ಲಿ, ಬದುಕಿನಲ್ಲಿ ಮನುಷ್ಯರು ಎದುರಿಸುವ ಬಿಕ್ಕಟ್ಟಿನ ಸನ್ನಿವೇಶಗಳು ಮತ್ತು ಅವುಗಳಿಂದ ಹೊರಬರಲು ಅವರು ಕಂಡುಕೊಳ್ಳುವ ಪರಿಹಾರಗಳನ್ನು ರೂಪಿಸಲಾಗಿರುತ್ತದೆ. ಕಳೆದ ವರ್ಷ ಮತ್ತು ಈಗಲೂ ಕೂಡ ನಮ್ಮ ಇಡೀ ಸಮಾಜ ಕೋವಿಡ್ ಸೋಂಕು ರೋಗ ತಂದ ಬಿಕ್ಕಟ್ಟುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವ್ಯಸ್ತವಾಗಿದೆ. ಲೇಖಕ ಪ್ರಸನ್ನ ಅವರ ಈ ಸಂಕಲನದ ಕಥೆಗಳು ಕಳೆದ ವರ್ಷದ ಆರೇಳು ತಿಂಗಳಲ್ಲಿ ಬರೆದಂತವು. ಸಹಜವಾಗಿಯೇ ಈ ಸಂಕಲನದಲ್ಲಿರುವ ನಾಲ್ಕು ಕಥೆಗಳು ಈ ಸೋಂಕು ರೋಗ ವ್ಯಕ್ತಿಗಳ, ಕುಟುಂಬಗಳ ಹಾಗೂ ಇಡೀ ಸಮಾಜದ ಬದುಕಿನಲ್ಲಿ ಕಷ್ಟನಷ್ಟಗಳನ್ನು ಮತ್ತು ಅಂತಹ ಸಮಯದಲ್ಲಿ ಕೆಲವರು ಅಮಾನವೀಯವಾಗಿ ನಡೆದುಕೊಂಡದ್ದು ಹಾಗೂ ಇನ್ನು ಕೆಲವರು ಸಂವೇದನಾಶೀಲತೆಯಿಂದ ನಡೆದುಕೊಂಡ ಪ್ರಸಂಗಗಳನ್ನು ಆಧರಿಸಿವೆ. ‘ಅಂತರ’, ‘ಬಿಡುಗಡೆ’, ‘ವರ್ತುಲ’, ಮತ್ತು ‘ಹೊರಳು’ಎಂಬ ನಾಲ್ಕು ಕಥೆಗಳಲ್ಲಿ ‘ಅಂತರ’ ಮತ್ತು ‘ಬಿಡುಗಡೆ’ ಕಥೆಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮೂಲಕ, ಪ್ರಸನ್ನ ಅವರು ನಮ್ಮ ಸಮೂಹ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿದ್ಯಮಾನದ ಬಗ್ಗೆ ದಾಖಲಾದ ವರದಿಗಳು, ವಿಶೇಷಣಗಳು, ಅನುಭವ ಕಥನಗಳಿಗಿಂತ ಭಿನ್ನವಾಗಿ ತಮ್ಮ ಕಥನಕಲೆಯ ಮೂಲಕ ಇಡೀ ವಿದ್ಯಮಾನವನ್ನು ಓದುಗರ ಅನುಭವಕ್ಕೆ ಹೇಗೆ ತರಲು ಪ್ರಯತ್ನಿಸಿದ್ದಾರೆ ಎಂಬುದನ್ನು ನೋಡಬಹುದು.
‘ಅಂತರ’ ಕಥೆಯಲ್ಲಿ ಸೀತಾಪತಿ ಎಂಬ ಯುವಕ, ಹೋಬಳಿ ಕೇಂದ್ರವಾದ ತನ್ನ ಊರಿನ ಸ್ಥಗಿತ ಬದುಕಿನಲ್ಲಿ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಅವಕಾಶಗಳಿಲ್ಲ ಎಂದು ಕಂಡುಕೊಂಡು ಆ ಊರನ್ನು ಬಿಟ್ಟು ಬೆಂಗಳೂರು ನಗರಕ್ಕೆ ವಲಸೆ ಬಂದು, ಅಲ್ಲಿನ ಬದುಕಿಗೆ ಹೊಂದಿಕೊಂಡು ಫ್ಯಾಕ್ಟರಿಯಲ್ಲಿ ಕೆಲಸ ಪಡೆದು ಸಂಸಾರಸ್ಥನೂ ಆಗುತ್ತಾನೆ. ಅವನಿಗೆ ತನ್ನ ಊರಿನ ಹೆಸರನ್ನು ಇತರರಿಗಿರಲಿ ತನ್ನ ಹೆಂಡತಿಗೂ ಹೇಳಲು ಇಷ್ಟವಿಲ್ಲ. ಅವನಿಗೆ ಆ ಊರಿನ ಬಗ್ಗೆ ಅಷ್ಟು ದ್ವೇಷ. ಕೊರೊನಾ ಸೋಂಕು ಹರಡಲು ಪ್ರಾರಂಭವಾದ ಮೇಲೆ ಅದು ಅವನಿಗೆ ಫ್ಯಾಕ್ಟರಿಯಲ್ಲಿ ತಗುಲಿ, ಅವನಿಂದ ಅವನ ಹೆಂಡತಿಗೂ ತಗುಲಿ ಅವರಿಬ್ಬರೂ ಕ್ವಾರಂಟೀನ್ ಕೇಂದ್ರದಲ್ಲಿರಬೇಕಾಗುತ್ತದೆ. ಅಲ್ಲಿಂದ ರೋಗಮುಕ್ತನಾಗಿ ಬಂದ ಮೇಲೆ ಲಾಕ್‌ಡೌನಿನಿಂದಾಗಿ ಫ್ಯಾಕ್ಟರಿ ಮುಚ್ಚಿಹೋಗಿ ಕೆಲಸ ಇಲ್ಲವಾಗಿ, ಅವನಿಗೆ ತನ್ನ ಊರಿನ ನೆನಪಾಗುತ್ತದೆ. ಲಾಕ್‌ಡೌನ್ ತೆಗೆದ ಮೇಲೆ ಅವನು ಮತ್ತು ಅವನ ಹೆಂಡತಿ ಅಲ್ಲಿಗೆ ಹೋಗುತ್ತಾರೆ. ಬಸ್‌ನಿಂದ ಸಂಜೆಗತ್ತಲಲ್ಲಿ ಅಲ್ಲಿಗೆ ತಲುಪಿದಾಗ ಅವನಿಗೆ, ಆ ದಿನವೇ ತನ್ನ ತಂದೆ ರೋಗಪೀಡಿತರಾಗಿ ತೀರಿ ಹೋಗಿರುವುದು ತಿಳಿಯುತ್ತದೆ. ತಂದೆಯ ಅಂತ್ಯಸಂಸ್ಕಾರದ ನಂತರ ಅವರು ಮತ್ತೆ ಕ್ವಾರಂಟೀನ್‌ನಲ್ಲಿ ಇರಬೇಕಾಗುತ್ತದೆ ಎಂದು ತಿಳಿಯುತ್ತದೆ.
ಪ್ರಸನ್ನ ಅವರು ತಮ್ಮ ಈ ಕಥೆಯಲ್ಲಿ ವಲಸೆ ಕಾರ್ಮಿಕನಾದ ಸೀತಾಪತಿಯ ಬವಣೆಯನ್ನು ಮಾತ್ರ ನಿರೂಪಿಸಿದ್ದರೆ ಅದು ಮಾಧ್ಯಮಗಳಲ್ಲಿ ಪ್ರಸಾರಗೊಂಡ ಅಂತಹ ಅನೇಕಾನೇಕ ಅನುಭವ ಕಥನಗಳಿಗಿಂತ ಸ್ವಲ್ಪ ಮಾತ್ರ ಭಿನ್ನ ಎಂದೆನಿಸುತ್ತಿತ್ತು. ಆದರೆ ಅವರು ಈ ಕಥೆಯಲ್ಲಿ ಸೀತಾಪತಿಯ ಬವಣೆಯನ್ನು ಕಾಲಾನುಕ್ರಮದಲ್ಲಿ ಪುನರ್ಸಂಘಟಿಸಿ ಅವನ ಅನುಭವಗಳ ನಿರೂಪಣೆಯ ಮಧ್ಯದಲ್ಲಿ, ಅವನು ಬಿಟ್ಟು ಬಂದ ಊರಿನ ಸ್ಥಗಿತ ಬದುಕಿನ ವಿವರಗಳನ್ನು ನಿರೂಪಿಸುವ ಜೊತೆಗೆ, ಅಲ್ಲಿ ಸೀತಾಪತಿಯ ತಂದೆ ವೆಂಕಟೇಶಯ್ಯನವರು ಊರಿನ ಜನರ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಾ, ಊರಿನ ಸಾರ್ವಜನಿಕ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರಿ ಇಲಾಖೆಗಳಿಗೆ ನಿರಂತರ ವಾಗಿ ಎಡತಾಕುತ್ತಾ ಇರುವ ಅವರ ದಿನಚರಿಯನ್ನು ಓದುಗರ ಮುಂದೆ ಇಟ್ಟಿದ್ದಾರೆ.
ಹಾಗೆಯೆ ಆ ಊರಿನಲ್ಲಿರುವ ಎಂಬತ್ತೈದು ವರ್ಷ ದಾಟಿದ ವೃದ್ಧೆ ಸಾವಿತ್ರಮ್ಮ ಪ್ರತಿದಿನ ಬೆಳಿಗ್ಗೆ ಎದ್ದು ಊರಿನ ದೇವಸ್ಥಾನಕ್ಕೆ ನಡೆದುಕೊಂಡು ಹೋಗಿ ಅಲ್ಲಿನ ಆವರಣವನ್ನು ಶುಚಿಗೊಳಿಸಿ ರಂಗೋಲಿ ಹಾಕುವುದನ್ನೂ ದಾಖಲಿಸಲಾಗಿದೆ. ವೆಂಕಟೇಶಯ್ಯ, ಸಾವಿತ್ರಮ್ಮ ಹಾಗೂ ಪೋಸ್ಟ್ ಮ್ಯಾನ್ ದುಗ್ಗಪ್ಪನವರಂಥವರ ದಿನಚರಿಯ ಜೀವಂತ ನಿರೂಪಣೆಯಿಂದ ಈ ಕಥೆ ಬರೀ ಬವಣೆಗಳ ಬೇಸರದ ಕಥೆಯಾಗದೆ, ಮನುಷ್ಯರ ಕ್ರಿಯಾಶೀಲತೆ ಎಂದೂ ಸ್ಥಗಿತಗೊಳ್ಳುವುದಿಲ್ಲ ಎಂಬ ಸತ್ಯವನ್ನು ನಮಗೆ ಮನಗಾಣಿಸುತ್ತದೆ. ತನ್ಮೂಲಕ ಸಮೂಹ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವಿದ್ಯಮಾನಗಳಿಗೆ ಇನ್ನೊಂದು ಆಯಾಮವೂ ಇರುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ.
`ಬಿಡುಗಡೆ’ಕಥೆ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯದಲ್ಲಿ ಅನೇಕ ಕಡೆ ಲಾಕ್‌ಡೌನ್ ಜಾರಿಗೆ ತಂದಿದ್ದ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿದೆ ಮತ್ತು ಮಾಧ್ಯಮಗಳಲ್ಲಿ ಅದನ್ನು ಕುರಿತು ಸುದ್ದಿಯೂ ಪ್ರಸಾರವಾಗಿತ್ತು. ಈ ಕಥೆಯಲ್ಲಿ ಖಾಸಗಿ ಕ್ಲಿನಿಕ್ ಹೊಂದಿರುವ ದಂತ ವೈದ್ಯೆ ಧರಣಿ ತನ್ನ ಗಂಡನೊಡನೆ ಸಮಾಲೋಚಿಸಿ, ಸ್ನಾತಕೋತ್ತರ ಶಿಕ್ಷಣ ಪಡೆದು ತನ್ನ ವೃತ್ತಿಬದುಕಿನಲ್ಲಿ ಏಳಿಗೆ ಪಡೆಯಬೇಕೆಂದು ಯೋಚಿಸಿರುತ್ತಾಳೆ. ಆದರೆ ಆಕಸ್ಮಿಕವಾಗಿ ಅವಳು ಗರ್ಭಧರಿಸಿದಾಗ, ಅವಳಿಗೆ ತನ್ನ ಗಂಡನ ಒತ್ತಾಯದಂತೆ ಅದನ್ನು ತೆಗೆಸಬೇಕೋ ಅಥವಾ ಮುಂದುವರಿಸಬೇಕೋ ಎಂಬ ಬಿಕ್ಕಟ್ಟು ಎದುರಾಗುತ್ತದೆ. ಕೊನೆಗೆ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕ ಕುಟುಂಬವೊಂದರ ತೀವ್ರ ಒತ್ತಾಯದಿಂದಾಗಿ ಅವರಲ್ಲಿನ ಗರ್ಭಿಣಿಯೊಬ್ಬಳಿಗೆ ತನ್ನ ಕ್ಲಿನಿಕ್ಕಿನಲ್ಲಿ ಹೆರಿಗೆ ಮಾಡಿಸಬೇಕಾದ ಸವಾಲಿನ ಸಂದರ್ಭ ಎದುರಾಗಿ, ಅದನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ ಅವಳಿಗೆ ತನ್ನ ನಿರ್ಧಾರ ಏನಾಗಬೇಕು ಎಂಬುದು ಸ್ಪಷ್ಟವಾಗುತ್ತದೆ. ಈ ಕಥೆಯಲ್ಲೂ ಧರಣಿಯ ದೈನಿಕದ ವಿವರಗಳ ಜೊತೆಗೆ ಅವಳ ಅತ್ತೆ ಸೀತಮ್ಮನ ದಿನನಿತ್ಯದ ಬದುಕಿನ ವಿವರಗಳೂ ಇವೆ. ಹಾಗೆಯೆ ಧರಣಿ ಲಾಕ್‌ಡೌನ್ ಸಮಯದಲ್ಲೂ, ತನ್ನ ಕ್ಲಿನಿಕ್ಕಿನ ಸಹಾಯಕ ನರಸಿಂಹನೊಡನೆ ಮತ್ತು ತನ್ನ ಪರಿಚಯದ ಸಮಾಜ ಕಾರ್ಯಕರ್ತರೊಬ್ಬರ ಮೂಲಕ ಸಂತ್ರಸ್ತ ಜನರಿಗೆ ಸಹಾಯ ಮಾಡುವ ಕಾರ್ಯದಲ್ಲೂ ಕೈಜೋಡಿಸುವುದನ್ನು ಕಾಣುತ್ತೇವೆ.
ಈ ಕಥಾಸಂಕಲನದ ಕಥೆಗಳು, ಪ್ರಸನ್ನ ಅವರ ಕಥಾಜಗತ್ತಿನಲ್ಲಿ ಕಂಡುಬರುವ ಬದುಕಿನ ವೈವಿಧ್ಯತೆ ಮತ್ತು ಅವರ ಕಥನಕಲೆ ಇತರ ಕಥೆಗಾರರದ್ದಕ್ಕಿಂತ ಸಾಕಷ್ಟು ಭಿನ್ನವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ತಮ್ಮ ಈ ಸಂಕಲನವನ್ನು ಓದಲು ನೀಡಿ ಇಲ್ಲಿನ ಕಥೆಗಳ ಬಗ್ಗೆ ನನ್ನ ಅನಿಸಿಕೆಗಳನ್ನು ದಾಖಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು.
(ಕೃತಿ: ಬಿಡುಗಡೆ (ಕಥಾ ಸಂಕಲನ), ಲೇಖಕರು: ಎ.ಎನ್. ಪ್ರಸನ್ನ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 195/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ