ಪ್ರೀತಿಯನ್ನು ಪರಿಮಳದಂತೆ ತಮ್ಮ ಸುತ್ತಲಿರುವವರಿಗೆ ಷರತ್ತೇ ಇಲ್ಲದೆ ಹಂಚಿದ ಎ.ಎನ್. ಮುಕುಂದ ಅವರು ಇಂದು ಅಗಲಿದ್ದಾರೆ. ತಾವು ಪ್ರೀತಿಸಿದ ಕಸುಬನ್ನು ಇನ್ನಷ್ಟು ಚಂದಗೊಳಿಸುತ್ತ , ತನ್ನ ಒಡನಾಡಿಗಳ ಜೊತೆ ಅದಮ್ಯ ಜೀವನ ಪ್ರೀತಿ ಹಂಚುತ್ತಾ ಬಾಳಿದವರು ಅವರು. ಲೇಖಕರಿಗೆ ಕವಿಭಾವ ಕವಿಸಮಯ ಎಂಬುದೊಂದಿರುತ್ತದೆ, ಅದನ್ನು ಕವಿಗಳು ಅಕ್ಷರಬೀಜಗಳಾಗಿಸಿ ನೆಡುತ್ತಾರೆ. ಅಂತೆಯೇ ಈ ಫೋಟೋಗ್ರಾಫರ್ ಕವಿಗಳದೇ ಆದ ಒಂದು ಭಾವ ಕ್ಷಣವನ್ನು ನೆರಳು ಬೆಳಕು ಮತ್ತು ಬಣ್ಣಗಳ ಅಪೂರ್ವ ಸಂಗಮದಲ್ಲಿ ಸೆರೆಯಾಗಿಸುತ್ತಾರೇನೋ ಅನಿಸುತ್ತದೆ ಎನ್ನುವ ಜಯಶಂಕರ ಹಲಗೂರು ಅವರು ಮುಕುಂದ ಅವರೊಡನೆ ಒಡನಾಡಿದ ಕ್ಷಣಗಳನ್ನು ಹೆಕ್ಕಿ ಲೇಖನವೊಂದನ್ನು ಬರೆದಿದ್ದಾರೆ

ನೆನಪು ಒಂದು:

ಅದು ಏಪ್ರಿಲ್ 5, 2007 ಪೂರ್ಣಚಂದ್ರ ತೇಜಸ್ವಿಯವರು ಮರೆಯಾಗಿ ಹೋದರು. ಆಗ ನಟರಾಜ್ ಹುಳಿಯಾರ್‌ ಅವರು ತರುತ್ತಿದ್ದ “ಕನ್ನಡ ಟೈಮ್ಸ್” ಪತ್ರಿಕೆಯಲ್ಲಿ ಆ ವಾರ ತೇಜಸ್ವಿ ವಿಶೇಷ ತರಲು ಪ್ಲಾನ್ ಮಾಡಿದರು. ಅಮೂಲ್ಯ ಬರಹಗಳು, ನೆನಪುಗಳೊಡನೆ ಪತ್ರಿಕೆಯೂ ಸಿದ್ಧವಾಯ್ತು. ಆದರೆ ತೇಜಸ್ವಿ ಅವರ ಒಟ್ಟು ವ್ಯಕ್ತಿತ್ವವನ್ನು ಬಿಂಬಿಸುವ ಅವರ ಫೋಟೊ ಒಂದು ಇರಲಿಲ್ಲ. ಹುಳಿಯಾರ್ ಹಲವು ಇಂಟರ್ನೆಟ್ ಫೋಟೊ ನೋಡಿ ಅವರದೇ ಶೈಲಿಯಲ್ಲಿ ಏಯ್ ಥೂ ಥೂ ಅದ್ ಬೇಡ ಕಣ್ರೀ ಎಂದು ಗೋಣು ಹಾಕಿದರು. ಪಕ್ಕದಲ್ಲೇ ಇದ್ದ ಕಿರಂ ನಾಗರಾಜ ಅವರು ರೀ ಮುಕುಂದ್ ಹತ್ರ ಒಳ್ಳೆ ಫೋಟೊ ಇದಾವೆ ಕಣ್ರೀ.. ಎಂದರು.
ಹುಳಿಯಾರ್ ಅವರು “ಹಲಗೂರ್, ತಗೊಳಿ ಮುಕುಂದ್ ನಂಬರ್, ಸ್ಟಾರ್ಟ್ ಮಾಡಿ ನಿಮ್ ಗಾಡಿ” ಅಂದರು.

ಲಂಕೇಶರ ಪುಸ್ತಕಗಳಲ್ಲಿ ಫೋಟೊ: ಎ.ಎನ್. ಮುಕುಂದ್ ಅಂತ ಕೇಳಿದ್ದೆ ಅಷ್ಟೇ.. ಅಂದು ನಾನು ಫೋನ್ ಮಾಡಿದೆ, ಆಪ್ತವಾದ ದನಿಯೊಂದು ಹಲೋ ಎಂದು ಕೇಳಿಸಿಕೊಳ್ಳತೊಡಗಿತು. ತೇಜಸ್ವಿ ಅವರ ಫೋಟೊ ಬೇಕು ಸಾರ್… ಹೀಗೀಗೆ ಅಂತ ಹೇಳ್ದೆ. ಹಲೋ ಎಂದಷ್ಟೇ ಹೇಳಿ ನನ್ನ ಮಾತನ್ನಷ್ಟೇ ಕೇಳಿಸಿಕೊಂಡಿದ್ದ ಅವರು ಕೂಡಲೇ ಆಪ್ತವಾದ ಮಾತುಗಳೊಡನೆ ಬನ್ನಿ ಅಂದರು.

ಎಂದಿನಂತೆ ನನ್ನ ಸ್ಲೆಂಡರ್ ಪ್ಲಸ್ ಹೊರಟಿತು. ಬನ್ನೇರುಘಟ್ಟ ರೋಡ್, ಹುಳಿಮಾವು ಹತ್ರ ಅವರ ಮನೆ‌. ಆಗ ಸಮಯ ರಾತ್ರಿ ಹತ್ತು… ಅವರು ಸಿಕ್ಕರು.

ಅಂದು ನನಗವರು ಜೀವನದಲ್ಲಿ ಮೊದಲ ಸಾರಿ ಕಂಡ ಮನುಷ್ಯ ಅಂತ ಅನ್ನಿಸಲೇ ಇಲ್ಲ. ಬೇಕಾದ್ದು ಫೋಟೊ ತಗೊಳಿ ಅಂದರು. ಕನ್ನಡದ ಹಲವು ಲೇಖಕರ ಅನಂತ ಮುಖಭಾವದ ದಾಖಲೆ ಕಂಡು ಬೆರಗಾದೆ.

ಒಬ್ಬ ಶ್ರೇಷ್ಠ ಫೋಟೋಗ್ರಾಫರ್ ತೇಜಸ್ವಿ ಅವರ ಫೋಟೊ ತೆಗೆಯುವುದು ಎಷ್ಟು ಕಷ್ಟಸಾಧ್ಯವಾದುದು ಅಂತ ಮಾತಾಡಿದರು. ಹೇಳಿದಂತೆ ಫೋಸು ನೀಡದ ತೇಜಸ್ವಿ ಅವರ ಫೋಟೊಗಳು ಒಂದು ರೀತಿಯ ಕ್ಯಾಂಡಿಡ್ ಎಂದರು. ಅಲ್ಲದೆ ವ್ಯಕ್ತಿಚಿತ್ರಗಳನ್ನು ತೆಗೆಯೋ ವಿಷಯದಲ್ಲಿ ತೇಜಸ್ವಿ ಅವರು ತೋರುತ್ತಿದ್ದ ಉದಾಸೀನವನ್ನು ಕುರಿತು ಮಾತಾಡಿದರು.

ಊಟ ಮಾಡುವಂತೆ ಬಗೆಬಗೆಯಲ್ಲಿ ಒತ್ತಾಯಿಸಿದರು, ಅವರು ಕೊಟ್ಟ ಅನನ್ಯ ಸಿಹಿ ಕಹಿಯ ಕಾಫಿ ಹೀರಿ, ತೇಜಸ್ವಿ ಫೋಟೊ ಪಡೆದು ಹೊರಟೆ…

ಬೆಂಗಳೂರಿನ ಶ್ರೀನಿವಾಸ ನಗರದ ಮುಖ್ಯ ರಸ್ತೆಯ ಬಾರ್ ಒಂದರಲ್ಲಿ ನನಗಾಗಿ ಒಂದು ಚಿಲ್ಲ್‌ಡ್‌ ಕೆಎಫ್ ಪ್ರೀಮಿಯಂ ಕಾಯ್ತಾ ಇತ್ತು. ಆಗ ಕಿರಂ, ಹುಳಿಯಾರ್ ಜೊತೆ ಇರುವುದು ಸ್ವರ್ಗವೇ ಆಗಿತ್ತು. ಅಂದು ನನ್ನೊಳಗೆ ಇಳಿದ ಶ್ರೀ ಎ.ಎನ್. ಮುಕುಂದ್ ಅವರು ಉಳಿಯುತ್ತಲೇ ಹೋದರು.

ನೆನಪು ಎರಡು:

ಕಳೆದ ವರ್ಷ ನಮ್ಮ ಕಾಲೇಜಿನ ಗೋಡೆಗಳನ್ನು ಲೇಖಕ, ಲೇಖಕಿಯರ ಫೋಟೊಗಳಿಂದ ಅಲಂಕಾರ ಮಾಡಬೇಕಿನಿಸಿತು. ಚಂದದ ಮುಖಭಾವದ, ಒಳ್ಳೆಯ ರೆಸಲ್ಯೂಷನ್ ಇರುವ ಕ್ಲೋಸ್ ಅಪ್ ಛಾಯಾಚಿತ್ರಗಳು ಬೇಕು; ಥಟ್ಟನೆ ನೆನಪಾದ ಹೆಸರು ಎ.ಎನ್. ಮುಕುಂದ್ ಅವರದೇ. ಅವರಿಗೆ ಫೋನ್ ಮಾಡಿ ನನ್ನ ಆಸೆ ತಿಳಿಸಿದೆ, ಬನ್ನಿ ಬನ್ನಿ ಸಂಜೆ ಬನ್ನಿ ಎಂದರು.

ಮತ್ತದೇ ಸಂಜೆ, ಕಲಾತ್ಮಕವಾದ ಅವರ ಮನೆಯ ಒಳಗು. ತೆರೆದಮನದಿಂದ ದಂಪತಿಗಳು ಒಳ ಕರೆದರು. ಉಮಾ ಮೇಡಂ ಅವರ ಸರಬರ ಓಡಾಟ ನಡೆಯುತ್ತಿತ್ತು. ಏನೋ ಕೆಲಸದಲ್ಲಿ ಮುಳುಗಿದ್ದ ಪ್ರತೀಕ್ ಹಾಯ್ ಹೇಳಿ ಅವರ ಕೆಲಸದಲ್ಲಿ ಮುಳುಗಿದ್ದರು.

ಮುಕುಂದ್ ಅವರು ಮಾತಿನೊಡನೆ ತಾವು ತೆಗೆದ ಲೇಖಕರ ಫೋಟೊ ತೋರತೊಡಗಿದರು. ಕೆಲವು ಬಣ್ಣದವು ಕೆಲವು ಕಪ್ಪು ಬಿಳುಪಿನವು. ಎಂಥೆಂಥ ಮುಖಭಾವದ ಅಮೂಲ್ಯ ದಾಖಲೆಗಳಿವು ಅನ್ನಿಸತೊಡಗಿತು! ಲೇಖಕರಿಗೆ ಕವಿಭಾವ ಕವಿಸಮಯ ಎಂಬುದೊಂದಿರುತ್ತದೆ, ಅದನ್ನು ಕವಿಗಳು ಅಕ್ಷರಬೀಜಗಳಾಗಿಸಿ ನೆಡುತ್ತಾರೆ. ಅಂತೆಯೇ ಈ ಫೋಟೋಗ್ರಾಫರ್ ಕವಿಗಳದೇ ಆದ ಒಂದು ಭಾವ ಕ್ಷಣವನ್ನು ನೆರಳು ಬೆಳಕು ಮತ್ತು ಬಣ್ಣಗಳ ಅಪೂರ್ವ ಸಂಗಮದಲ್ಲಿ ಸೆರೆಯಾಗಿಸಿದ್ದಾರೆ ಅನ್ನಿಸಿತು‌. ಕಾವ್ಯಜೀವಿಗಳ ಭಾವಕ್ಷಣವನ್ನು ದಾಖಲಿಸಿರುವ ಈ ಫೋಟೊಗಳು ಭಾವಕಾವ್ಯವೇ ಆಗಿವೆ.

ಕುವೆಂಪು, ಕಾರಂತ, ಅಡಿಗರು, ಪು.ತಿ.ನ., ಕೆ.ಎಸ್.ನ, ಜಿ.ಎಸ್.ಎಸ್, ಅನಂತಮೂರ್ತಿ, ಲಂಕೇಶ್, ನಿಸಾರ್ ಅಹಮ್ಮದ್, ದೇವನೂರು, ಸಿದ್ದಲಿಂಗಯ್ಯ… ಹೀಗೆ ಎಷ್ಟೊಂದು ಮುಖಗಳು, ಭಾವಗಳು, ಭಂಗಿಗಳು. ನೋಡುತ್ತಾ ಹೋದಂತೆ ವ್ಯಕ್ತಿಗಳ ಕ್ಲೋಸ್ ಅಪ್ ಮುಖಭಾವ ಎಷ್ಟೊಂದು ಸಂಕೀರ್ಣವೂ ಭಾವಪೂರ್ಣವೂ ಆದುದೆನಿಸತೊಡಗಿತು. ಸುತ್ತ ಕತ್ತಲೆಯ ನಡುವೆ ಬೆಳ್ಳಿಕೂದಲ ಬಳ್ಳಿಯ ಕೆಳಗೆ ವಜ್ರದಂತೆ ಕಂಗೊಳಿಸುವ ಕಾರಂತರ ಫೋಟೊ ನಂಗೆ ತುಂಬಾ ಇಷ್ಟ ಆಯ್ತು ಸರ್ ಅಂದೆ ಹೌದಾ ಎನ್ನುತ್ತಲೇ ತಮ್ಮ ಕಸುಬಿನ ಬಗೆಗೆ ಖುಷಿಪಟ್ಟು ಸುಖಿಸುತ್ತಿರುವುದನ್ನು ಮನಗಂಡೆ. ಪುತಿನ ಫೋಟೊ ಎದುರಿಗಿಟ್ಟರು; ಕ್ಯಾಮರಾ ಕಡೆ ನೋಡದೆ ನಸು ಬಲಕ್ಕೆ ಬಾಗಿ ಮೌನವೂ ಗಂಭೀರವೂ ಆಗಿರುವ ಪುತಿನ ಅವರ ಭಾವ ಆಳವಾದ ಪ್ರಶಾಂತವಾದ ತಿಳಿಗೊಳವನ್ನು ಕಂಡಂತೆನಿಸಿತು. ಸಕಲ ದಮನಿತರ ಎದೆನೋವನೆಲ್ಲ ತನ್ನ ಕಣ್ಣಿನಲ್ಲಿ ತುಂಬಿಕೊಂಡ ಕಾರುಣ್ಯಮೂರ್ತಿಯಂತೆ ಹನಿಗಣ್ಣ ದೇವನೂರು ಮೂಡಿದ್ದರು.

ಲೇಖಕರ ಫೋಟೊಗಳಿಗಿಂತ ಲೇಖಕಿಯರ ಫೋಟೊ ಕಡಿಮೆ ಇವೆ ಸರ್ ಅಂದೆ, ಸುಮ್ಮನೆ ನಗುತ್ತಲೇ ವೈದೇಹಿ ಅವರ ಭಾವಚಿತ್ರವನ್ನು ಎತ್ತಿಕೊಟ್ಟರು. ಆದರೂ ಲೇಖಕಿಯರ ಭಾವಚಿತ್ರಗಳನ್ನು ತೆಗೆಯಿರಿ ಸಾರ್ ಅಂದೆ.

ಉಮಾ ಮೇಡಂ ಬಿಸಿ ಬಿಸಿ ಬಜ್ಜಿ, ಕಾಫಿಯಷ್ಟೇ ಆಪ್ತವಾಗಿ ಮುಕುಂದ್ ಅವರ ಮುಕ್ತ ಮಾತುಗಳು ನನ್ನನ್ನು ಆವರಿಸಿಕೊಳ್ಳತೊಡಗಿದವು. ಒಬ್ಬೊಬ್ಬ ಬರಹಗಾರರ ಫೋಟೊ ತೆಗೆಯಲು ಇವರು ಮಾಡಿಕೊಂಡ ತಯಾರಿ, ಅವರ ರಿಯಾಕ್ಷನ್ ಗಳು ಆಕರ್ಷಕವಾಗಿ ಕಂಡವು. ಫೋಟೋಗ್ರಫಿ ಸಂದರ್ಭದಲ್ಲಿ ಲೇಖಕರ ಒಡನಾಟ, ಅವರ ಪ್ರತಿಕ್ರಿಯೆ, ಅವರೊಡನೆ ನಡೆದ ಮಾತುಕತೆಗಳನ್ನು ಬರೆಯಿರಿ ಸಾರ್ ಅಂದೆ. ಪುಸ್ತಕ ಮಾಡೋಣ, ಒಂದು ಹೊಸ ಬಗೆಯ ಪುಸ್ತಕ ಆಗತ್ತೆ ಅಂದೆ.

ಮಾತಾಡುತ್ತಲೇ ಎದ್ದವರು “ಮುಖ ಮುದ್ರೆ” ಎಂಬ ಹೆಸರು ಹೊತ್ತು ಪುಸ್ತಕ ಕೈಗಿತ್ತರು. ಪುಟ ತೆರೆಯತೊಡಗಿದೆ, ಹತ್ತಾರು ಲೇಖಕರು ಮೂಡಲಾರಂಭಿಸಿದರು. ಈ ಕೃತಿ ನಿಜಕ್ಕೂ ಬರಹಗಾರರ ಭಾವಕಾವ್ಯ ಸಂಕಲನ ಅದು.

ನಿಮಗೆ ಬೇಕಾದ ಫೋಟೊಗಳ ಲಿಸ್ಟ್ ಕೊಡಿ, ಅವುಗಳ ಒರಿಜಿನಲ್ ಇಮೇಜ್ ಇಮೇಲ್ ಮಾಡ್ತೀನಿ, ಒಳ್ಳೆ ಕಡೆ ಕಟ್ಟು ಹಾಕಿಸಿ ಎಂದರು. ಎಷ್ಟೇ ಒತ್ತಾಯಿಸಿದರು ದುಡ್ಡು ಬೇಡವೆಂದರು, ಫೋಟೊ ಕರ್ಟಸಿ ಹಾಕಿ ಸಾಕು ಎಂದರು. “ಮುಖ ಮುದ್ರೆ” ಕೃತಿ ಕೊಡುತ್ತಲೇ ಇದಕ್ಕೆ ಮಾತ್ರ ಕಾಸು ಕೊಡಿ ಅಂದರು ನಗುತ್ತಲೇ…

ಹೊರಟೆ.. ಮಾತಿಗೆ ಮುಕ್ತಾಯ ಹೇಳಲು ಇಬ್ಬರಿಗೂ ಆಸೆ ಇರಲಿಲ್ಲ.. ಹಾಲ್ ಬಿಟ್ಟು ಆಚೆ ಬಂದೆವು ಮಾತು, ಗೇಟಿನ ಬಳಿ ಬಂದೆವು ಮಾತು, ಮನೆಯ ಆಚೆ ಬಂದೆವು ಮಾತು.

ಅವರೊಬ್ಬ ಅಪೂರ್ವ ಮಾತುಗಾರ. ಅಂತೆಯೇ ಕವಿಭಾವ ಸೆರೆಹಿಡಿದ ಭಾವಕಾವ್ಯ ಗಾರುಡಿಗ. ಅಂದು ಮತ್ತೆ ಮೀಟ್ ಮಾಡಣ ಬನ್ನಿ ಜಯಶಂಕರ್ ಅಂದರು ಉಮಾ ಮೇಡಂ ಮುಕುಂದ್ ಅವರು ಇಬ್ಬರೂ. ನಾನು ಮತ್ತೆ ಹೋಗಲಾರದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆ… ಅವರ ಜೊತೆ ಅತ್ಯಂತ ಖುಷಿ ಮತ್ತು ಸಲುಗೆಯಲ್ಲಿ ಆ ಸಂಜೆ ತೆಗೆದುಕೊಂಡ ಫೋಟೊಗಳಷ್ಟೇ ಇಂದು ನನ್ನ ನೆನಪು.

ಅಷ್ಟು ಮಾತ್ರವೇ? ಅವರು ಹಿಡಿದು ಕಟ್ಟಿರುವ ಕನ್ನಡ ಲೇಖಕ, ಲೇಖಕಿಯರ ಅಪೂರ್ವ ಭಾವ ಕ್ಷಣಗಳು ನಮ್ಮ ನೆನಪಿಗೆ ಸದಾ ಇದ್ದೇ ಇರುತ್ತವೆ.