ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಆಟ ಎಂದರೆ ಕೆಲವರಿಗೆ ಕ್ರಿಕೆಟ್, ಇನ್ನು ಕೆಲವರಿಗೆ ವಾಲಿಬಾಲು ಮತ್ತೆ ಕೆಲವರಿಗೆ ಫುಟ್ಬಾಲು, ಕಬಡ್ಡಿ, ಶಟಲ್.. ಇತ್ಯಾದಿ ಇತ್ಯಾದಿ.

ಆದರೆ ನಾವು ಕರಾವಳಿಯ ಜನ. ನಮಗೆ ಆಟ ಎಂದರೆ ಅದು ಬೇರೆಯೇ.

ಆಟದ ಬಗ್ಗೆ ನಮ್ಮಲ್ಲಿ ಕೇಳಿದರೆ ಎದುರಾಗುವ ಪ್ರಶ್ನೆ ಎರಡೇ,

ಅದುವೇ..

ಬಡಗುತಿಟ್ಟಿನ ಆಟವಾ? ಅಥವಾ ತೆಂಕುತಿಟ್ಟಿನ ಆಟವಾ?.. ಎಂದು.

ಯಕ್ಷಗಾನಕ್ಕೆ ನಮ್ಮಲ್ಲಿ ಆಟ ಎಂದೇ ಹೇಳುವುದು.

ಇನ್ನೂ ವಿಸ್ತರಿಸಿ ಹೇಳಬೇಕೆಂದರೆ ಈ ಬಡಗುತಿಟ್ಟು, ತೆಂಕುತಿಟ್ಟುಗಳು ಈ ಆಟ ಎನ್ನುವ ಯಕ್ಷಗಾನದ ಎರಡು ಪ್ರಮುಖ ಪ್ರಕಾರಗಳು.

ಎಲ್ಲವೂ ಆಟವೇ ಆದರೂ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಗಡಿ ಭಾಗದ ಯಕ್ಷಗಾನಕ್ಕೆ ತೆಂಕುತಿಟ್ಟು ಎಂದು ಉಡುಪಿಯಿಂದ ಆಚೆಯ ಯಕ್ಷಗಾನಕ್ಕೆ ಬಡಗುತಿಟ್ಟು, ಉತ್ತರಕನ್ನಡ ಕಡೆಗಿನ ಯಕ್ಷಗಾನಕ್ಕೆ ಬಡಾಬಡಗು ಇಲ್ಲವೇ ಉತ್ತರದ ತಿಟ್ಟು ಎಂದು ಹೆಚ್ಚಾಗಿ ಹೇಳುತ್ತಾರೆ.

ನಿಜ ಹೇಳಬೇಕೆಂದರೆ ಈ ಮೂರೂ ತಿಟ್ಟುಗಳಲ್ಲಿನ ವೇಷ ಭೂಷಣ, ಭಾಗವತಿಕೆ, ಮುಖವರ್ಣಿಕೆ, ಅಭಿನಯ, ಕುಣಿತ, ಪಗಡಿ(ಕಿರೀಟ) ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಅದೇ ರೀತಿ ಇಲ್ಲಿ ಬಳಸುವ ಚೆಂಡೆ ಮದ್ದಳೆಗಳಲ್ಲೂ ಕೂಡ ಅಂತಹ ವ್ಯತ್ಯಾಸವನ್ನು ಕಾಣಬಹುದು. ಹಿಂದೂಸ್ತಾನಿ ಸಂಗೀತಕ್ಕೆ ತಬಲ ಸಾಥಿಯಾದರೆ, ಕರ್ನಾಟಕ ಸಂಗೀತಕ್ಕೆ ಮೃದಂಗ ಜೋಡಿಯಾದರೆ ನಮ್ಮ ಯಕ್ಷಗಾನಕ್ಕೆ ಈ ಚೆಂಡೆ ಮದ್ದಳೆಗಳದ್ದೇ ಅದ್ಭುತವಾದ ಜುಗಲ್‌ಬಂದಿ.

ಅದೇ ರೀತಿ ಯಕ್ಷಗಾನದ ಮತ್ತೊಂದು ಪ್ರಕಾರ ತಾಳಮದ್ದಲೆ. ಅಲ್ಲಿ ಯಾವುದೇ ವೇಷವಿಲ್ಲ, ಕುಣಿತವಿಲ್ಲ. ಭಾಗವತರು ಸೊಗಸಾಗಿ ಹಾಡುತ್ತಾರೆ. ಎದುರು ಬದುರು ಕುಳಿತಿರುವ ಅರ್ಥಧಾರಿಗಳು ಅರ್ಥಗರ್ಭಿತವಾಗಿ ಮಾತಾಡುತ್ತಾರೆ. ಆ ವಾಗ್ಯುದ್ಧದ ಪರಿ ನೋಡುವುದೇ ಬಲು ಚಂದ. ಒಟ್ಟಿನಲ್ಲಿ ಈ ಆಟ ಎಂಬುವುದು ನನ್ನ ಬಾಲ್ಯ, ನನ್ನ ಜೀವನ, ಮತ್ತು ನನ್ನ ಸರ್ವಸ್ವವೂ ಆಗಿತ್ತು.

ಚಿಕ್ಕಂದಿನಲ್ಲಿಯೇ ಅಮ್ಮನ ಜೊತೆಗೆ ಆಟ ನೋಡಲು ಹೋಗುತ್ತಿದ್ದೆ ನಾನು. ಅಲ್ಲಿಯ ಆ ಸಡಗರದ ವಾತಾವರಣ, ರಾತ್ರಿಯ ಸಮಯವಾದರೂ ಇಡೀ ರಾತ್ರಿ ಆಟ ನೋಡಲು ಬರುತ್ತಿದ್ದ ಆ ಯಕ್ಷಗಾನ ಪ್ರೇಮಿ ಜನಸ್ತೋಮ, ಅಲ್ಲಿ ಸಂತೆಯಲ್ಲಿ ತಿನ್ನಲು ಸಿಗುತ್ತಿದ ಖಾರ ಖಾರವಾದ ಚರ್ಮುರಿ, ಕುಡಿಯಲು ಬಿಸಿ ಬಿಸಿ ಸೋಜಿ(ಹೆಸರು ಬೇಳೆಯನ್ನು ಬೇಯಿಸಿ ಬೆಲ್ಲ ಹಾಕಿ ಮಾಡುವ ಒಂದು ರೀತಿಯ ಪಾನೀಯ), ಸವಿಯಲು ತುಂಡರಿಸಿದ ಬಚ್ಚಂಗಾಯಿ(ಕಲ್ಲಂಗಡಿ ಹಣ್ಣು), ಸಂತೆಯ ಹೋಟೆಲ್‌ಗಳಲ್ಲಿ ಸಿಗುತ್ತಿದ್ದ ರಾತ್ರಿಯ ಚಳಿಗೆ ಹಿತವೆನಿಸುವ ಬಿಸಿ ಬಿಸಿಯಾದ ಚಹಾ.. ಆ ಗೋಳಿಬಜೆ, ಪೋಡಿ, ಬನ್ಸ್.. ಆಹಾ..ಆ ಸಮಯಕ್ಕೆ ಅದರಲ್ಲಿಯೇ ನಮಗೆ ಬಾಯಿ ಚಪಲದ ಸುಖ. ಬೆಳಿಗ್ಗೆ ಆಟ ಮುಗಿದ ಮೇಲೆ ಎಲ್ಲರೂ ತಪ್ಪದೇ ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಆ ಕುರ್ಲು(ಮಂಡಕ್ಕಿ)ಪ್ಯಾಕೆಟ್ಟು ಅದು ಯಕ್ಷಗಾನಕ್ಕೆ ಹೋಗಿ ಬಂದ ಒಂದು ದಿವ್ಯ ಕುರುಹು. ಕೆಲವರು ರಿಕ್ಷಾ ಮಾಡಿಕೊಂಡು ಮನೆಯಿಂದ ಆಟ ನೋಡಲು ಹೋಗುತ್ತಿದ್ದರೆ ಇನ್ನು ಹಲವರು ಎಷ್ಟೇ ಕಿಲೋಮೀಟರ್ ಗಟ್ಟಲೆ ದೂರವಿದ್ದರೂ ನಡೆದೇ ಯಕ್ಷಗಾನ ನೋಡಲು ಹೋಗುತ್ತಿದ್ದರು, ಹಾಗೇ ವಾಪಸು ನಡೆದೇ ಬೆಳಿಗ್ಗೆ ಮನೆ ಸೇರುತ್ತಿದ್ದರು. ಒಟ್ಟಿನಲ್ಲಿ ಊರಿನಲ್ಲಿ ಒಂದು ಆಟ ಆಗುವುದು ಎಂದರೆ ನಮ್ಮವರಿಗೆ ಅದೊಂದು ಜಾತ್ರೆಯೇ ಸರಿ.

ನನಗೆ ಹೆಚ್ಚಿನ ಆಸಕ್ತಿ ಇದ್ದದ್ದು ಮಾತ್ರ ವೇಷಧಾರಿಗಳು ಬಣ್ಣ ಬಳಿದುಕೊಳ್ಳುವ ಚೌಕಿಯಲ್ಲಿಯೇ. ಅಮ್ಮನೊಂದಿಗೆ ಚೌಕಿಯೊಳಗೆ ಹೋಗುವಾಗ ಚಪ್ಪಲಿಯನ್ನು ಹೊರಗೆ ಬಿಟ್ಟು ಅಲ್ಲಿರುವ ಮೇಳದ ದೇವರಿಗೆ ಮೊದಲು ಕೈ ಮುಗಿದು ನಮಸ್ಕರಿಸುತ್ತಿದ್ದೆ. ಎಲ್ಲವೂ ಅಮ್ಮ ಹೇಳಿಕೊಟ್ಟದ್ದು.

ಟೆಂಟಿನ ಆ ಚೌಕಿಯೊಳಗೆ ವೇಷಧಾರಿಗಳು ಕನ್ನಡಿಯ ಮುಂದೆ ಕುಳಿತುಕೊಂಡು ಶ್ರದ್ಧೆಯಿಂದ ತಮ್ಮ ಮುಖಕ್ಕೆ ತಾವೇ ಬಣ್ಣ ಬಳಿದುಕೊಂಡು ರಾಮನೋ, ಕೃಷ್ಣನೋ, ಬ್ರಹ್ಮನೋ, ರಾವಣನೋ ಆಗಿ ಬಿಡುತ್ತಿದ್ದರು. ನಾನೂ ಎಲ್ಲವನ್ನು ಅತೀ ಕೂತುಹಲದಿಂದ, ಬಹಳ ಆಸಕ್ತಿಯಿಂದ ಹಾಗೇ ಗಮನಿಸುತ್ತಿದೆ. ಕೆಲವೊಮ್ಮೆ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿದ್ದ ದೈತ್ಯ ಅಸುರ ಪಾತ್ರಧಾರಿ ನನ್ನಂತಹ ಚಿಕ್ಕ ಹುಡುಗನನ್ನು ನೋಡಿ ಸುಮ್ಮನೆ ಹೆದರಿಸಲು ತಮ್ಮ ಕಣ್ಣುಗಳನ್ನು ದೊಡ್ಡದು ಮಾಡಿ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ಆವಾಗ ನಾನು ಅಮ್ಮನ ಸೀರೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಿದ್ದೆ. ಅದನ್ನು ಕಂಡು ಆ ಅಸುರ ಪಾತ್ರಧಾರಿ ಹಾಗೇ ನಗುತ್ತಿದ್ದರು. ಅವರು ನಕ್ಕಾಗ ನಾನೂ ಕೂಡ ಒಂದಿಷ್ಟು ನಕ್ಕು ಬಿಡುತ್ತಿದ್ದೆ.

ಆದರೂ ನನಗೆ ಈ ದೊಡ್ಡ ದೊಡ್ಡ ಅಸುರ ಪಾತ್ರಗಳು ಅಷ್ಟಾಗಿ ಇಷ್ಟ ಆಗುತ್ತಿರಲಿಲ್ಲ. ನನಗೆ ಜಾಂಬವತಿ ಕಲ್ಯಾಣದ ಕೃಷ್ಣ, ದಾನ ಶೂರ ಕರ್ಣದ ಕರ್ಣ, ವಾಲಿ ಮೋಕ್ಷದ ವಾಲಿ, ರಾಮಾಂಜನೆಯ ಯುದ್ಧದ ರಾಮ ಮತ್ತು ಹನುಮಂತ ಇಬ್ಬರೂ ಇಷ್ಟವಾಗುತ್ತಿದ್ದರು. ಎಲ್ಲರಿಗಿಂತ ನನಗೆ ಸೌಮ್ಯ ಮೂರ್ತಿ ರಾಮನೆಂದರೆ ಅದೆನೋ ಪ್ರೀತಿ.. ಅದೆನೋ ಮೋಹ.

ಆಟ ನೋಡಲು ಅಮ್ಮ ಮಾತ್ರ ಬರುತ್ತಿದ್ದರು. ಆಮೇಲೆ ಅವರು ನಡುವಲ್ಲಿ ಎದ್ದು ಮನೆಗೆ ಹೋದರೂ ನಾನು ಮಾತ್ರ ಮಂತ್ರಮುಗ್ಧನಾದವನಂತೆ ರಂಗಸ್ಥಳದ ಎದುರು ಕಣ್ಣು ಬಿಟ್ಟುಕೊಂಡು ನಿದ್ರೆ ಮರೆತು ಕುಳಿತಿರುತ್ತಿದ್ದೆ. ಅಪ್ಪನಿಗೆ ಆಟ ಎಂದರೆ ಆಗುತ್ತಿರಲಿಲ್ಲ. ನಾವು ಮೂವರು ಮಕ್ಕಳು. ಮೂವರು ಕೂಡ ಗಂಡು ಮಕ್ಕಳೇ. ಅದರಲ್ಲಿ ನಾನೇ ಕೊನೆಯವ.

ಅಣ್ಣಂದಿರು ಇಬ್ಬರು ಚೆನ್ನಾಗಿ ಓದಿ ಕಲಿತು ಮುಂದೆ ದೊಡ್ಡವರಾಗಿ ಕೆಲಸ ಕೂಡ ಗಿಟ್ಟಿಸಿಕೊಂಡಿದ್ದರು. ಓದಿನಲ್ಲಿ, ಕೆಲಸ ಪಡೆಯುವುದರಲ್ಲಿ ಒಟ್ಟಿನಲ್ಲಿ ಎಲ್ಲದರಲ್ಲೂ ಮುಂದೆ ಇದ್ದ ಅವರಿಬ್ಬರನ್ನು ಕಂಡರೆ ಅಪ್ಪನಿಗೆ ಬಹಳನೇ ಇಷ್ಟ. ಆದರೆ ನಾನಲ್ಲ!

ಒಳಗೊಳಗೆ ನೋವಾದರೂ ನಾನು ದುಃಖ ಪಡಲಿಲ್ಲ. ಕಾರಣ ನನ್ನ ಸುಖ ಸಂತೋಷಗಳು ಬೇರೆಯೇ ಆಗಿತ್ತು. ಆಟ ಒಂದೇ ನನ್ನನ್ನು ಬಾ.. ಬಾ.. ಎಂದು ಪ್ರತೀ ಕ್ಷಣವೂ ಕೈ ಬೀಸಿ ಕರೆಯುತ್ತಿತ್ತು. ಆ ಗೆಜ್ಜೆ, ಆ ಬಣ್ಣ, ಆ ಚೌಕಿ, ತಲೆಯ ಮೇಲಿನ ಆ ಪಗಡಿ(ಕಿರೀಟ), ಆ ಕುಣಿತ, ನಿಲ್ಲದೆ ತಿರುಗುವ ದಿಗಿಣ, ಭಾಗವತರ ಕಂಚಿನ ಕಂಠದ ಭಾಗವತಿಕೆ, ಚೆಂಡೆಯ ಪೆಟ್ಟು, ಮದ್ದಳೆಯ ಸದ್ದು.. ನನ್ನನ್ನು ಕನಸಿನಲ್ಲೂ ಆವರಿಸಿಕೊಂಡು ಬಿಟ್ಟಿತ್ತು.

ಮನಸ್ಸಿನಲ್ಲಿಯೇ ಕೇಳಿದ್ದ ಹೆಚ್ಚಿನ ಪ್ರಸಂಗಗಳ ಮಾತುಗಾರಿಕೆಗಳು ನನಗೆ ಸ್ಪಷ್ಟವಾಗಿ ನೆನಪಿನಲ್ಲಿ ಇದ್ದವು, ಎಲ್ಲವನ್ನೂ ಮತ್ತೊಮ್ಮೆ ನಾನೇ ಹೇಳುವಷ್ಟು ಕಂಠಪಾಠವಾಗಿ ಹೋಗಿದ್ದವು. ಯಾರಿಗೂ ಕಾಣದಂತೆ ಮನೆಯ ಹಿಂದಿನ ಗುಡ್ಡೆಯ ನೆತ್ತಿಗೆ ಹೋಗಿ ನಾನು “ತಾ ಕಿಟ ಕಿಟ ತಕ ತೋದಿನ್ನಕ ದಿಕುತಕ ದಿನ್ನ ಕಿಟತಕ ಧೀಂ ದಿನ್ನಾ ಕಿಟತಕ ಧೀಂ ದಿನ್ನ ಕಿಟತಕ ಧೀಂ”ಇಲ್ಲವೇ” ತಾ ಕಿಟ ತಕ ತರಿಕಟ ಕಿಟತಕ ತಾ ತೈ ತಕ ದಿತ್ತಾ ದದಿಗಿಣ.. ದೀಂ..” ಎಂದು ನನ್ನದೇ ಶೈಲಿಯಲ್ಲಿ ಬಾಯಿಗೆ ಬಂದಂತೆ ತಾಳವನ್ನು ಹೇಳಿಕೊಂಡು ಕುಣಿಯುತ್ತಿದ್ದೆ. ಅಲ್ಲಿ ನಾನೇ ರಾಮ.. ನಾನೇ ವಾಲಿ…ನಾನೇ ಕೃಷ್ಣ… ನಾನೇ ಕಂಸ ಎಲ್ಲವೂ ಆಗಿ ಬಿಡುತ್ತಿದ್ದೆ.

ಮನೆಯಲ್ಲೊಂದು ಚಿಕ್ಕ ರೇಡಿಯೋ ಇತ್ತು. ಬ್ಯಾಟರಿ ಶೆಲ್ಲು ಹಾಕಿದರಷ್ಟೇ ಅದು ಮಾತನಾಡುತ್ತಿತ್ತು. ಆಕಾಶವಾಣಿ ಮಂಗಳೂರು ಅದರಲ್ಲಿ ಬುಧವಾರ ರಾತ್ರಿ ಯಕ್ಷಗಾನ ತಾಳಮದ್ದಲೆಯನ್ನು ಕೂಡ ಪ್ರಸಾರ ಮಾಡುತ್ತಿತ್ತು. ಆದರೆ ಯಕ್ಷಗಾನ ವಿರೋಧಿ ನನ್ನ ಅಪ್ಪನಿಂದಾಗಿ ನನಗೆ ಅದರಲ್ಲಿ ಯಕ್ಷಗಾನದ ಅರ್ಥಗಾರಿಕೆಯನ್ನು ಕೇಳುವ ಭಾಗ್ಯವಿರಲಿಲ್ಲ.

ನಮ್ಮ ಪಕ್ಕದ ಮನೆ ಸುಂದರಣ್ಣನದ್ದು. ಅಪ್ಪನ ಗೆಳೆಯ ಅವರು. ಅವರ ಮಗ ರಮೇಶ ನನಗೂ ಗೆಳೆಯ. ಅವರ ಮನೆಯ ರೇಡಿಯೋದಲ್ಲಿ ಯಕ್ಷಗಾನ ತಾಳಮದ್ದಲೆಯನ್ನು ಕೇಳಲು ಅಂತಹ ಯಾವುದೇ ನಿರ್ಬಂಧವಿರಲಿಲ್ಲ. ಹಾಗಾಗಿ ಬುಧವಾರ ರಾತ್ರಿ 9.30 ಗಂಟೆಗೆ ನಾನು ಸುಂದರಣ್ಣನ ಮನೆಗೆ ಓಡಿ ಹೋಗುತ್ತಿದ್ದೆ. ಅಲ್ಲಿನ ರೇಡಿಯೋದಲ್ಲಿ ಬರುತ್ತಿದ್ದ ಆ ಯಕ್ಷಗಾನ ಅರ್ಥಗಾರಿಕೆಯನ್ನು ಬಹಳ ಶ್ರದ್ಧೆಯಿಂದ ಕೇಳುತ್ತಿದ್ದೆ. ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ನನ್ನೊಳಗೆ ಅವುಗಳನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದೆ.. ಆ ನಂತರ ಮರುದಿನವೇ ಮತ್ತೆ ಗುಡ್ಡ ಹತ್ತಿ ಹಿಂದಿನ ದಿನ ರೇಡಿಯೋದಲ್ಲಿ ಕೇಳಿದ್ದ ಯಕ್ಷಗಾನದ ಸಂಭಾಷಣೆಯನ್ನು ನಾನಲ್ಲಿ ಜೋರಾಗಿ ಹೇಳುತ್ತಿದ್ದೆ.. ಮುಖದಲ್ಲಿ ಬಣ್ಣವಿಲ್ಲದಿದ್ದರೂ ಕಾಲಿಗೆ ಗೆಜ್ಜೆ ಇಲ್ಲದಿದ್ದರೂ ನಾನು ಮನಸ್ಸೋಯಿಚ್ಛೆ ಗುಡ್ಡದ ನೆತ್ತಿಯಲ್ಲಿ ಒಬ್ಬನೇ ಕುಣಿಯುತ್ತಿದ್ದೆ, ದಿಗಿಣ ತಿರುಗುತ್ತಿದ್ದೆ. ಈ ರೀತಿಯಾಗಿ ನನ್ನ ಯಕ್ಷಗಾನದ ದಾಹವನ್ನು ನಾನು ತಣಿಸಿಕೊಳ್ಳುತ್ತಿದ್ದೆ.

ರಂಗಸ್ಥಳದಲ್ಲಿ ನಾನೊಬ್ಬ ಪಾತ್ರಧಾರಿಯಾಗಿ ಅದರಲ್ಲೂ ಒಮ್ಮೆಯಾದರೂ ನನ್ನ ಆರಾಧ್ಯ ರಾಮನಾಗಿ ಮುಖಕ್ಕೆ ಬಣ್ಣ ಹಚ್ಚಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಒಂದು ದಿನ ಕುಣಿಯಲೇಬೇಕು, ದಿಗಿಣ ತಿರುಗಲೇಬೇಕು ಎಂದು ನಾನು ಬಹುವಾಗಿ ಹಂಬಲಿಸುತ್ತಿದ್ದೆ.

ನನಗೆ ಅಪ್ಪನೆಂದರೆ ಮೊದಲಿನಿಂದಲೂ ಭಯ. ಆದರೂ ಒಂದು ದಿನ ಗಟ್ಟಿ ಮನಸ್ಸು ಮಾಡಿ ಇದ್ದ ಬದ್ದ ಧೈರ್ಯವನ್ನೆಲ್ಲ ಒಟ್ಟು ಮಾಡಿ ಅಪ್ಪನಲ್ಲಿ… “ಅಪ್ಪ… ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ನಾನು ಯಕ್ಷಗಾನ ಕಲಿಯಲು ಹೋಗುತ್ತೇನೆ..” ಎಂದು ಹೇಳಿ ಬಿಟ್ಟೆ.

ಆದರೆ ಅಪ್ಪ ನನ್ನ ಮಾತು ಕೇಳಲಿಲ್ಲ. ಏಕೆಂದರೆ ಅವರು ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದವರು. ನಾನಿನ್ನೂ ಹೈಸ್ಕೂಲ್ ನಲ್ಲಿಯೇ ಇದ್ದೆ.

ಅಮ್ಮನಲ್ಲಿ ಹೇಳಿದೆ.. “ಅಪ್ಪನಿಗೆ ಹೇಳಮ್ಮ ನಾನು ಆಟ ಕಲಿಯಲು ಹೋಗುತ್ತೇನೆ”

ಅಮ್ಮ ಏನು ಹೇಳುತ್ತಾಳೆ.. ಅವಳು ಅಪ್ಪನ ಮಾತು ಎಂದೂ ಮೀರಿದವಳಲ್ಲ. ನಮ್ಮ ಮನೆಯಲ್ಲಿ ಅಪ್ಪನ ಮಾತು ಮೀರುವವರಾದರೂ ಯಾರು ಇದ್ದಾರೆ. ಅಂತಹ ಧೈರ್ಯ ಯಾರಿಗೆ ಬರಲು ಸಾಧ್ಯ. ಮೂಗಿನ ತುದಿಯಲ್ಲಿಯೇ ಸದಾ ಕೋಪ ಇಟ್ಟುಕೊಂಡಿದ್ದ ಮನೆಯ ಉಗ್ರನರಸಿಂಹ ಅವರು.

ಮನೆಯಲ್ಲಿ ಬೆಂಬಲ ಸಿಗದಿದ್ದರೂ ನಾನು ಮಾತ್ರ ನನ್ನ ಇಷ್ಟದ ಯಕ್ಷಗಾನ ಕಲಿಯಲು ಸೇರಿ ಆಗಿತ್ತು.

ಆ ದಿನದಿಂದಲೇ ಅಪ್ಪ ನನ್ನಲ್ಲಿ ಮಾತು ಬಿಟ್ಟರು..!

ಸರಿ ಸುಮಾರು ಹದಿನೈದು ವರ್ಷ ಅಪ್ಪ ನನ್ನಲ್ಲಿ ಮಾತಾಡಲೇ ಇಲ್ಲ..!!

ಆದರೆ ಯಕ್ಷಗಾನ ತರಬೇತಿಗೆ ಸೇರಿದ ನಾನು ಎಲ್ಲವನ್ನೂ ಕಲಿತೆ. ಆ ಕುಣಿತ, ದಿಗಿಣ, ಸ್ವಯಂ ಬಣ್ಣ ಹಚ್ಚಿಕೊಳ್ಳುವುದು, ಮಾತುಗಾರಿಕೆಗಳೆಲ್ಲವೂ ನನಗೆ ಸುಲಭವಾಗಿ ಒಲಿಯಿತು. ಚಿಕ್ಕಂದಿನಿಂದಲೇ ಯಕ್ಷಗಾನ ನೋಡಿ ನೋಡಿ, ರೇಡಿಯೋದಲ್ಲಿ ತಾಳಮದ್ದಲೆ ಕೇಳಿ ಕೇಳಿ ಅವೆಲ್ಲವನ್ನೂ ಮನನ ಮಾಡಿಕೊಂಡಿದ್ದ ಅಭ್ಯಾಸವೊಂದು ನನಗೆ ನಿಜ ಯಕ್ಷಗಾನದ ಲಹರಿಗೆ ಹೊಂದಿಕೊಳ್ಳುವಲ್ಲಿ ವರದಾನವಾಯಿತು. ತಕ್ಕ ಮಟ್ಟಿನ ಭಾಗವತಿಕೆ, ಇನ್ನೂ ಹೆಚ್ಚಿನ ಅರ್ಥಗಾರಿಕೆಯನ್ನು ಕೂಡ ಅಭ್ಯಾಸ ಮಾಡಿ ಬಿಟ್ಟಿದ್ದೆ. ಆದರೆ ಮನಸ್ಸು ಇದ್ದದ್ದು ಮಾತ್ರ ಬಣ್ಣಹಚ್ಚಿ, ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಕುಣಿಯುವುದರಲ್ಲಿಯೇ.

ಎಲ್ಲವನ್ನೂ ಕಲಿತಾದ ನಂತರ ನಾನು ಮೇಳಕ್ಕೂ ಕೂಡ ಸೇರಿಕೊಂಡೆ.

ಚಿಕ್ಕಂದಿನಿಂದಲೂ ನಾನು ರಂಗಸ್ಥಳದಲ್ಲಿ ಕೃಷ್ಣನಾಗಿ, ಕರ್ಣನಾಗಿ, ವಾಲಿಯಾಗಿ ಇಲ್ಲವೇ ಭೀಷ್ಮನಾಗಿ ದೊಡ್ಡ ಪಾತ್ರಗಳನ್ನು ನಿರ್ವಹಿಸುವ ಕನಸು ಕಾಣುತ್ತಿದ್ದವನು. ಅದರಲ್ಲೂ ಶ್ರಿರಾಮ ನನ್ನ ಆರಾಧ್ಯ ಆಗಿದ್ದ.

ಆದರೆ ನಾನು ಹೋದ ಮೇಳದಲ್ಲಿ ಎಲ್ಲಾ ಪಾತ್ರಗಳಿಗೂ ಅದರಲ್ಲೂ ಮುಖ್ಯ ಪಾತ್ರಗಳಿಗೆ ಸರಿ ಹೊಂದುವ ದೊಡ್ಡ ದೊಡ್ದ ಹೆಸರುವಾಸಿಯಾದ ಪಾತ್ರಧಾರಿಗಳು ಅದಾಗಲೇ ಅಲ್ಲಿದ್ದರು.

ನನ್ನ ದೃಢಕಾಯವಾದ ದೇಹ, ಹಾಗೂ ಏರು ಧ್ವನಿಯ ಸ್ವರಕ್ಕಾಗಿ ನನಗೆ ಅಸುರ ಪಾತ್ರಗಳೇ ಜಾಸ್ತಿಯಾಗಿ ಸಿಗುತ್ತಿತ್ತು. ಮಧು ಕೈಟಭ, ರಕ್ತಬೀಜಾಸುರ, ಹಿರಣ್ಯಕಶಿಪು, ಚಂಡ ಮುಂಡ, ಕಂಸ, ರಾವಣ ಇಂತವುಗಳು.

ಹೀಗಾಗಿ ನಾನು ಹೆಚ್ಚಾಗಿ ಮಾಡಿದ್ದೇ ನನಗಿಷ್ಟವಿಲ್ಲದ ಅಸುರ ಪಾತ್ರಗಳನ್ನೇ, ಅದರಲ್ಲೂ ಮೈಸಾಸುರನ ಪಾತ್ರವನನ್ನೇ ನಾನು ಹೆಚ್ಚು ಮಾಡಿದ್ದೆ..

ಮೈಸಾಸುರ ಅಂದರೆ ಅದೇ ಮಹಿಷಾಸುರ. ನಮ್ಮಲ್ಲಿ ಎಲ್ಲರೂ ಅವನನ್ನು ಮೈಸಾಸುರ ಎಂದೇ ಹೇಳುವುದು.

ದೊಡ್ಡ ಪಾತ್ರಗಳಲ್ಲಿ ರಂಗಸ್ಥಳದಲ್ಲಿ ಕುಣಿದು ಮೆರೆಯಬೇಕೆಂದು ಆಸೆ ಇದ್ದ ನನಗೆ ಆರಂಭದಲ್ಲಿ ನಿರಾಸೆ ಆದರೂ, ಆ ನಂತರ ನಾನು ಅಸುರ ಪಾತ್ರಗಳಲ್ಲಿ ಇನ್ನಿಲ್ಲದಂತೆ ದೈತ್ಯನಾಗಿಯೇ ಮೆರೆದುಬಿಟ್ಟೆ.

ಅದರಲ್ಲೂ ಬರು ಬರುತ್ತಾ ಮೈಸಾಸುರನಾಗಿ ಬಣ್ಣ ಬಳಿದುಕೊಂಡು ಆ ಪಾತ್ರ ಮಾಡುವುದು ನನಗೆ ಅಭ್ಯಾಸ ಆಗಿ ಹೋಯಿತು ಮಾತ್ರವಲ್ಲ ನನಗದೇ ಇಷ್ಟವಾಗತೊಡಗಿತು. ಎಷ್ಟೆಂದರೆ ನನ್ನ ನೆಚ್ಚಿನ ಬಾಲ್ಯದ ಪಾತ್ರಗಳನ್ನು ಮರೆಯುವಷ್ಟೂ..

ಮುಂದೆ ನಾನು ನಮ್ಮ ಮೇಳದಲ್ಲಿ ಕೇವಲ ಮೈಸಾಸುರ ಪಾತ್ರಕಷ್ಟೇ ಸೀಮಿತವಾಗುತ್ತಾ ಹೋದೆ. ಇತರ ಅಸುರ ಪಾತ್ರಗಳು ಬೇರೆಯವರಿಗೆ ನಿಶ್ಚಯಿಸಿಲಾಯಿತು.

ಅಷ್ಟು ಮಾತ್ರವಲ್ಲ ನನ್ನಷ್ಟು ಚೆನ್ನಾಗಿ ಮೈಸಾಸುರ ಪಾತ್ರ ಮಾಡುವವರು ನಮ್ಮ ಮೇಳದಲ್ಲಿ ಯಾರೂ ಕೂಡ ಇರಲಿಲ್ಲ.ಏಕೆಂದರೆ ಅಂತಹ ದೈತ್ಯ ದೇಹವಾಗಲಿ,ಆ ಒಂದು ಅಸುರ ಪಾತ್ರಕ್ಕೆ ಹೊಂದುವ ಧ್ವನಿಯಾಗಲಿ ಅವರಿಗಿರಲಿಲ್ಲ.

ಎಲ್ಲಾ ಪಾತ್ರಗಳು ಯಕ್ಷಗಾನದ ಚೌಕಿಯಿಂದ ಬಣ್ಣ ಹಚ್ಚಿಕೊಂಡು ರಂಗಸ್ಥಳಕ್ಕೆ ಬಂದರೆ.. ಕೇವಲ ಒಂದು ಪಾತ್ರ ಮೈಸಾಸುರ ಮಾತ್ರ ಬಹಳ ದೂರದಿಂದ,ಕೆಲವೊಮ್ಮೆ ರಂಗಸ್ಥಳದಿಂದ ಹೆಚ್ಚು ಕಡಿಮೆ ಅರ್ಧ ಕಿಲೋಮೀಟರ್ ಗಿಂತ ದೂರದಿಂದಲೇ, ತಲೆಗೊಂದು ದೊಡ್ಡ ಕೋಣನ ಕೊಂಬನ್ನು ಕಟ್ಟಿಕೊಂಡು, ಜನರ ನಡುವೆ ಆರ್ಭಟಿಸುತ್ತಾ, ಕೈಯಲ್ಲಿ ಒಣಗಿದ ತೆಂಗಿನ ಗರಿಯ ಸೂಟೆ( ಪಂಜು)ಯನ್ನು ಹಿಡಿದು, ಅದಕ್ಕೆ ರಾಳದ ಹುಡಿಯನ್ನು ಹಾಕಿ ಮತ್ತಷ್ಟು ಬೆಂಕಿಯ ಜ್ವಾಲೆಯನ್ನು ಧಿಗ್ಗೆಂದು ಉರಿಸುತ್ತಾ.. ಎಲ್ಲೆಲ್ಲೋ ನಡೆಯುತ್ತಾ, ಓಡಾಡುತ್ತಾ, ಆರ್ಭಟಿಸುತ್ತಾ ದಾರಿ ತುಂಬೆಲ್ಲಾ ದೂಳೆಬ್ಬಿಸುತ್ತಾ ಬರುವ ನಿಜಕ್ಕೂ ದೈತ್ಯ ಪಾತ್ರವೇ ಅದು.

ಮೈಸಾಸುರ ಬರುವಾಗ ಅವನ ಆ ಆಗಮನಕ್ಕಾಗಿಯೇ ಅಲ್ಲಲ್ಲಿ ಮುಳಿ ಹುಲ್ಲಿಗೆ ಬೆಂಕಿ, ಅಗತ್ಯಕ್ಕಿಂತ ಹೆಚ್ಚಿನ ಚೆಂಡೆ ಮದ್ದಳೆ, ತಾಸೆ, ಬ್ಯಾಂಡ್ ಗಳ ಅಬ್ಬರ,ಅವನ ಹಿಂದೆಯೇ ರಾಶಿ ರಾಶಿ ಜನಸ್ತೋಮ.. ಹೀಗೆಲ್ಲ ಇದ್ದರೇನೇ ಮೈಸಾಸುರನ ರಂಗಸ್ಥಳ ಪ್ರವೇಶಕ್ಕೂ ಒಂದು ಗತ್ತು. ಗರ್ನಲ್, ಕದೋನಿ(ಸಿಡಿಮದ್ದು) ಗಳನ್ನು ಕೂಡ ಸಿಡಿಸುತ್ತಾರೆ. ಕೆಲವೊಮ್ಮೆ ಈ ಪ್ರವೇಶಕ್ಕಾಗಿಯೇ ಅರ್ಧಗಂಟೆಯವರೆಗಿನ ಸಮಯವನ್ನು ಕೂಡ ತೆಗೆದು ಕೊಳ್ಳಲಾಗುವುದು. ಕೇವಲ ಜನರ ಖುಷಿಗಾಗಿ, ಮನೋರಂಜನೆಗಾಗಿ ಅಷ್ಟೇ. ಹೆಚ್ಚು ಕಡಿಮೆ ಒಂದು ಗಂಟೆಯ ನಂತರ ರಾತ್ರಿಯ ಮಧ್ಯಭಾಗದಲ್ಲಿ ಬರುವ ಮೈಸಾಸುರ ಮತ್ತೆ ಒಂದು ಗಂಟೆ ರಂಗಸ್ಥಳದಲ್ಲಿ ಅಬ್ಬರಿಸುತ್ತಾನೆ.

ಮೈಸಾಸುರನ ಪಾತ್ರಕ್ಕೆ ಕುಣಿತಕ್ಕಿಂತಲೂ ಜಾಸ್ತಿ ನೆಲದ ಮೇಲೆ ಕೋಣದಂತೆ ಹೂಂಕರಿಸುತ್ತಾ ನಾಲ್ಕು ಕಾಲಲ್ಲಿ(ಎರಡು ಕೈ ಮತ್ತು ಎರಡು ಕಾಲು) ನಡೆಯುವುದಕ್ಕೆ ಕೂಡ ಹೆಚ್ಚಿನ ಪ್ರಾಶಸ್ತ್ಯತೆ ಇದೆ. ಏಕೆಂದರೆ ಮೈಸಾಸುರ ಎಂದರೆನೇ ಕೋಣನ ರೂಪದ ಅಸುರ.

ಮೈಸಾಸುರನ ಕಥೆ ಬರುವುದು ನಮ್ಮಲ್ಲಿ ದೇವಿ ಮಹಾತ್ಮೆ ಎಂಬ ಅತೀ ದಿವ್ಯವಾದ ಪ್ರಸಂಗದಲ್ಲಿ. ಕಥೆಯಲ್ಲಿ ಮೊದಲಿಗೆ ಜಗನ್ಮಾತೆಯಿಂದಲೇ ತ್ರಿಮೂರ್ತಿಗಳ ಜನನವಾಗುತ್ತದೆ. ಆ ನಂತರ ವಿಷ್ಣುವಿನಿಂದಲೇ ಹುಟ್ಟಿದ ಮಧು ಕೈಟಭರ ವಧೆ, ಸ್ವಯಂ ವಿಷ್ಣುವಿನಿಂದಲೇ ಆಗುತ್ತದೆ. ಆ ನಂತರ ಬರುವುದೇ ಈ ಮೈಸಾಸುರನ ಕಥೆ.

ಅವನ ತಂದೆ ವಿದ್ಯುನ್ಮಾಲಿಯು ದೇವತೆಗಳ ವಿರುದ್ಧದ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಆ ಸಂದರ್ಭದಲ್ಲಿ ಮೈಸಾಸುರನ ಮಾತೆ ಮಾಲಿನಿ..

“ಮಗನೇ ಮಹಿಷಾ.. ಬಾ ಮಗನೇ ಬಾ..” ಎಂದು ಅತ್ತು ಕರೆವಾಗ ಮೈಸಾಸುರ ಪಾತ್ರ ರಂಗಸ್ಥಳ ಪ್ರವೇಶಿಸಬೇಕು.

ಆ ಕ್ಷಣವೇ ಯಕ್ಷಗಾನ ನೋಡುತ್ತಾ ನೋಡುತ್ತಾ ನಿದ್ದೆ ಮಾಡುತ್ತಿದ್ದ ಮಕ್ಕಳ ನಿದ್ದೆಯೊಂದು ರಪ್ಪನೇ ಹಾರಿ ಹೋಗುವುದು. ಎಷ್ಟೋ ಮಕ್ಕಳು ಮೈಸಾಸುರನನ್ನು ನೋಡಿ ಅತ್ತದ್ದೂ ಇದೆ. ಆ ಎತ್ತರದ ರೂಪ, ಆ ಭಯ ಹುಟ್ಟಿಸುವ ವೇಷ, ಆ ದೊಡ್ಡ ಕೊಂಬು, ಕೈಯಲ್ಲಿ ಬೆಂಕಿಯ ಸೂಟೆ(ಪಂಜು), ಅವನ ಆ ಧ್ವನಿ ನಿಜವಾಗಿಯೂ ಮಕ್ಕಳಲ್ಲಿ ಭಯ ಹುಟ್ಟಿಸದೇ ಇರುವುದಿಲ್ಲ.

ಜನರ ಮಧ್ಯೆ ಭಯ ಹುಟ್ಟಿಸುತ್ತಾ ಬರುವಾಗ, ರಂಗಗಸ್ಥಳಕ್ಕೆ ಬರಲು ಮೈಸಾಸುರ ತುಂಬಾ ವಿಳಂಬ ಮಾಡಿದಾಗ, ಕೊನೆಯಲ್ಲಿ ಮೈಸಾಸುರನ ತಾಯಿ ಮಾಲಿನಿಯೇ..

“ಮಗನೇ ಮಹಿಷಾ… ಬಾ.. ಇತ್ತ ಕಡೆಗೆ ಬಾ..” ಎಂಬುದಾಗಿ ಕಣ್ಣೀರು ಸುರಿಸುತ್ತಾ ಕೂಗಿ ಕೂಗಿ ಕರೆವಾಗ, ತಾಯಿಯ ಆ ಧ್ವನಿಗೆ ಓಗೊಟ್ಟು…

” ವಾಂಯ್… ವಾಂಯ್..” ಎಂದು ಕೋಣದಂತೆ ಹೂಂಕರಿಸುತ್ತಾ ತಾಯಿಯ ಬಳಿ ಹೋಗುತ್ತಾನೆ ಮೈಸಾಸುರ.

ಕೊನೆಗೆ ಕಥೆಯಲ್ಲಿ ಮೈಸಾಸುರನ ಉಪಟಳ ಜಾಸ್ತಿ ಆದಾಗ ತ್ರಿಮೂರ್ತಿಗಳ ಪ್ರಾರ್ಥನೆಯ ಮೇರೆಗೆ ದೇವಿಯಿಂದ ವಧೆ ಆಗಿ ಹೋಗುತ್ತಾನೆ ಈ ಅಸುರ ಮೈಸಾಸುರ. ದೇವಿಯ ಸಿಂಹ ಅವನ ಕೊಂಬನ್ನು(ಸಾಂಕೇತಿಕವಾಗಿ ತಲೆ ಎಂದು ಹೇಳಬಹುದು) ಕಚ್ಚಿಕೊಂಡು ಹೋದರೆ ಅಲ್ಲಿಗೆ ಮೈಸಾಸುರನ ಪಾತ್ರಕ್ಕೆ ರಂಗಸ್ಥಳದಲ್ಲಿ ತೆರೆ ಬೀಳುವುದು.

ಆ ನಂತರ ಪ್ರಸಂಗದ ಕಥೆಯಲ್ಲಿ ಮುಂದಕ್ಕೆ ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ ಮೊದಲಾದ ಅಸುರರನ್ನು ದೇವಿ ವಧೆ ಮಾಡುವ ಕಥೆ ಹಾಗೇ ಮುಂದುವರಿಯುವುದು.

ಅಪ್ಪ ಯಾವತ್ತೂ ನನ್ನ ಮೈಸಾಸುರನನ್ನು ನೋಡಲು ರಂಗಸ್ಥಳದತ್ತ ಬರಲೇ ಇಲ್ಲ. ಅದರಲ್ಲೂ ಅವರಿಗೆ ಆಟ ಎಂದರೆ ಆಗುವುದೇ ಇಲ್ಲ.. ನನ್ನಲ್ಲಿ ಮಾತು ಬೇರೆ ಬಿಟ್ಟಿದ್ದರು.. ಇದರ ನಡುವೆ ಅಮ್ಮ ಕೂಡ ತೀರಿಕೊಂಡರು. ಇಬ್ಬರು ಅಣ್ಣಂದಿರ ಮದುವೆಯೂ ಆಯಿತು. ಒಬ್ಬ ಮುಂಬೈಗೆ ಹೋಗಿ ನೆಲೆ ನಿಂತ. ಮತ್ತೊಬ್ಬ ಅಣ್ಣ ಬೆಂಗಳೂರಿನಲ್ಲಿ ಸಂಸಾರ ಸಾಗಿಸಿದ.

ಮನೆಯಲ್ಲಿ ಅಪ್ಪ ನಾನು ಇಬ್ಬರೇ.. ನಾನು ಇನ್ನೂ ಮದುವೆ ಆಗಿರಲಿಲ್ಲ. ಅಪ್ಪನಿಗೂ ಅರುವತ್ತು ದಾಟಿತು. ನಾನು ಮಾತ್ರ ಎಂದಿನಂತೆ ನನ್ನಷ್ಟಕ್ಕೆ ಮೈಸಾಸುರನಾಗಿ ರಂಗಸ್ಥಳದಲ್ಲಿ ಅಬ್ಬರಿಸುತ್ತಿದೆ.

ಇಬ್ಬರ ಬಳಿಯೂ ಅದಾಗಲೇ ಬಂದಿದ್ದ ಮೊಬೈಲ್ ಇತ್ತು. ಆದರೆ ನನ್ನ ಬಳಿ ಅಪ್ಪನ ನಂಬರ್ ಇರಲಿಲ್ಲ. ಅಪ್ಪನ ಬಳಿ ನನ್ನ ನಂಬರ್ ಇರಲಿಲ್ಲ..!

ಇಬ್ಬರೂ ಪರಸ್ಪರ ನಂಬರ್ ಕೇಳಿ ಪಡೆದುಕೊಳ್ಳಬೇಕೆಂದು ಇಬ್ಬರಿಗೂ ಅನಿಸಲಿಲ್ಲ. ಏಕೆಂದರೆ ನಮ್ಮಿಬ್ಬರ ನಡುವೆ ಮಾತು ಸತ್ತು ಹೋಗಿಯೇ ಅದೆಷ್ಟೋ ವರುಷಗಳಾಗಿದ್ದವು..

ಹಿಂದಿನ ದಿನ ರೇಡಿಯೋದಲ್ಲಿ ಕೇಳಿದ್ದ ಯಕ್ಷಗಾನದ ಸಂಭಾಷಣೆಯನ್ನು ನಾನಲ್ಲಿ ಜೋರಾಗಿ ಹೇಳುತ್ತಿದ್ದೆ.. ಮುಖದಲ್ಲಿ ಬಣ್ಣವಿಲ್ಲದಿದ್ದರೂ ಕಾಲಿಗೆ ಗೆಜ್ಜೆ ಇಲ್ಲದಿದ್ದರೂ ನಾನು ಮನಸ್ಸೋಯಿಚ್ಛೆ ಗುಡ್ಡದ ನೆತ್ತಿಯಲ್ಲಿ ಒಬ್ಬನೇ ಕುಣಿಯುತ್ತಿದ್ದೆ, ದಿಗಿಣ ತಿರುಗುತ್ತಿದ್ದೆ. ಈ ರೀತಿಯಾಗಿ ನನ್ನ ಯಕ್ಷಗಾನದ ದಾಹವನ್ನು ನಾನು ತಣಿಸಿಕೊಳ್ಳುತ್ತಿದ್ದೆ.

ಮನೆ ಸೇರಿಕೊಂಡರೆ ಮಾತು ಕತೆ ಏನೂ ಇಲ್ಲ. ಬರೀ ಸ್ಮಶಾನ ಮೌನ.. ಆದರೂ ಮನೆಯಲ್ಲಿ ಇಬ್ಬರೂ ಇದ್ದೆವು. ಕೆಲವೊಮ್ಮೆ ಅಪ್ಪ ಅಡುಗೆ ಮಾಡುತ್ತಿದ್ದರು. ಇನ್ನು ಕೆಲವೊಮ್ಮೆ ನಾನು ಮಾಡುತ್ತಿದ್ದೆ. ಇಬ್ಬರೂ ಹಸಿವಾದಾಗ ಅವರವರೇ ಬಡಿಸಿಕೊಂಡು ಊಟ ಮಾಡುತ್ತಿದ್ದೆವು. ಅವರು ನನ್ನನ್ನು ಊಟಕ್ಕೆ ಎಂದೂ ಕರೆದವರಲ್ಲ.. ಭಯದಿಂದ ನಾನೂ ಕೂಡ ಅವರ ಸುದ್ದಿಗೆ ಯಾವತ್ತೂ ಹೋದವನಲ್ಲ. ಅವರು ನನ್ನೊಂದಿಗೆ ಮಾತು ಬಿಟ್ಟ ನಂತರ ಎಂದಿಗೂ ನನ್ನೊಟ್ಟಿಗೆ ಕೂತು ಊಟ ಮಾಡಿದ್ದೇ ಇಲ್ಲ. ನಮ್ಮಿಬ್ಬರ ನಡುವೆ ಶಬ್ಧವೊಂದು ನಿಜವಾಗಿಯೂ ಆ ಮನೆಯಲ್ಲಿ ಜನ್ಮ ತಾಳಲೇ ಇಲ್ಲ..

ಆದರೆ ಒಂದು ದಿನ ಅದು… ಅದು ಸಂಭವಿಸಿತು.

ಹೌದು ಆ ಒಂದು ರಾತ್ರಿ ಅಂತಹ ನನ್ನ ಅಪ್ಪ ನನ್ನಲ್ಲಿ ಮಾತಾಡಿಯೇ ಬಿಟ್ಟರು…!

ಬರೋಬ್ಬರಿ ಹದಿನೈದು ವರ್ಷಗಳ ನಂತರ ನನ್ನ ಅಪ್ಪ ನನ್ನಲ್ಲಿ ಮಾತಾಡಿ ಬಿಟ್ಟರು..!

ಅಪ್ಪ ಕೇಳಿದ್ದರು….

“ಮಹೇಶ… ಯಕ್ಷಗಾನ ಎಲ್ಲಾ ಹೇಗಿದೆಯಪ್ಪ..” ನನ್ನ ಬಳಿಗೆ ಬಂದು ಕೇಳಿಯೇ ಬಿಟ್ಟಿದ್ದರು ನನ್ನಪ್ಪ.!!

ಅಪ್ಪನ ಬಾಯಿಯಲ್ಲಿ ಎಷ್ಟೋ ವರ್ಷಗಳ ನಂತರ ನನ್ನ ಹೆಸರು ಕೇಳಿ ನನ್ನ ಮೈಯಲ್ಲಿ ಮಿಂಚು ಸಂಚಾರ ಆದಂತೆ ಆಯಿತು.

ಎಷ್ಟಾದರೂ ಅವರು ನನ್ನನ್ನು ಹುಟ್ಟಿಸಿದ ಅಪ್ಪ. ಅವರಿಗೆ ನನ್ನ ಮೇಲೆ ಪ್ರೀತಿ ಇಲ್ಲದೇ ಇರಬಹುದು. ಆದರೆ ನನಗೆ ನನ್ನ ಅಪ್ಪನ ಮೇಲೆ ಅಂತಹ ದ್ವೇಷ ಎಂದೂ ಇರಲಿಲ್ಲ. ನಿಜವಾಗಿಯೂ ಅಪ್ಪ ಎನ್ನುವ ಗೌರವವೇ ಜಾಸ್ತಿ ಇತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರೆಂದರೆ ನನಗೆ ವ್ಯಕ್ತಪಡಿಸಲಾಗದ ಭಯ ಚಿಕ್ಕಂದಿನಿಂದಲೂ ಇತ್ತು. ಬಹುಶಃ ಕೊನೆಗಾದರೂ ಅವರಿಗೆ ನನ್ನ ಮೇಲಿನ ಅವರ ಕೋಪ ಕರಗಿರಬಹುದು ಎಂದುಕೊಂಡೆ ನಾನು..

“ಪ..ಪ.. ಪರವಾಗಿಲ್ಲಪ್ಪ.. ಚೆನ್ನಾಗಿ ನಡೀತಾ ಇದೆ.. ಅಪ್ಪ” ಅಂದೆ ತೊದಲುತ್ತಾ ನಾನು.

“ಅಂದ ಹಾಗೆ ಮಹೇಶ.. ನೀನು ಯಕ್ಷಗಾನದಲ್ಲಿ ಯಾವ ಪಾತ್ರ ಮಾಡುತ್ತಿದ್ದಿಯಾ..?” ಮತ್ತೆ ಅಪ್ಪ ಕೇಳಿಬಿಟ್ಟರು.

ಮೊದಲೇ ಅವರಿಗೆ ಯಕ್ಷಗಾನ ಎಂದರೆ ಆಗುವುದಿಲ್ಲ. ಈಗ ನಾನು ಮೈಸಾಸುರ ಎಂದು ಹೇಳಿಬಿಟ್ಟರೆ.. ಇಷ್ಟು ವರ್ಷ ಬರೀ ಅಷ್ಟೇಯಾ ಮಾಡಿದ್ದು.. ಎಂದು ಮತ್ತೆಲ್ಲಿ ಬೇಜಾರು ಮಾಡಿಕೊಳ್ಳುತ್ತಾರೋ, ಕೋಪ ಮಾಡಿಕೊಳ್ಳುತ್ತಾನೋ ಎಂದು..

“ರಾಮ, ಕೃಷ್ಣ, ಅಂಜನೇಯ.. ಎಲ್ಲಾ ಮುಖ್ಯ ಪಾತ್ರಗಳನ್ನೇ ಮಾಡುತ್ತೇನೆ ಅಪ್ಪ..” ಎಂದು ಸುಳ್ಳು ಹೇಳಿದೆ.

“ಹೌದಾ .. ಹಾಗಾದರೆ ‘ವಾಲಿ ಮೋಕ್ಷದ’ ರಾಮನ ಮಾತುಗಾರಿಕೆಯನ್ನು ಒಮ್ಮೆ ನನ್ನೆದುರು ಮಾಡಿ ತೋರಿಸು ನೋಡೋಣ….” ಅಪ್ಪ ತಣ್ಣಗೆ ಹೇಳಿ ಬಿಟ್ಟರು!

ನನಗೆ ಅರ್ಥವಾಗಲಿಲ್ಲ…!!

ಏಕೆ…? ನನ್ನಪ್ಪ ನನ್ನಲ್ಲಿ ಯಕ್ಷಗಾನದ ಕುರಿತಾಗಿ ಏತಕ್ಕಾಗಿ ಕೇಳುತ್ತಿದ್ದಾರೆ..? ಎಂದು

ಯಕ್ಷಗಾನದ ಸುಧೀರ್ಘ ತರಬೇತಿ ಹಾಗೂ ಪ್ರಸಂಗಗಳ ಅರಿವು, ಹೆಚ್ಚಿನ ಮಾತುಗಾರಿಕೆಯ ಜ್ಞಾನ ನನ್ನಲ್ಲಿ ಇದ್ದುದರಿಂದ ನಾನು ಎಲ್ಲಾ ಪಾತ್ರಗಳನ್ನು ಕೂಡ ಮಾಡಬಲ್ಲವನಾಗಿದ್ದೆ. ಆದರೆ ಆ ನನ್ನ ನೆಚ್ಚಿನ ರಾಮನ ಪಾತ್ರವಾಗಿ ನಾನು ಮಾತಾಡದೇ ಅದೆಷ್ಟೋ ಸಮಯವಾಗಿತ್ತು. ಬಾಲ್ಯದಲ್ಲಿ ಗುಡ್ಡದ ನೆತ್ತಿಯಲ್ಲಿ ನನ್ನಷ್ಟಕ್ಕೆ ಅಭಿನಯಿಸಲು ಹಾಗೂ ಆ ಯಕ್ಷಗಾನ ಕಲಿಕೆಯ ಸಮಯದಲ್ಲಿ ರಾಮನನ್ನು ಮಾಡಿ ನಾನು ಮಿಂಚಿದ್ದೆ. ಅದರ ನಂತರ ರಂಗಸ್ಥಳದಲ್ಲಿ ಕೇವಲ ಮೈಸಾಸುರ ಮಾಡಿಯೇ ಅಭ್ಯಾಸವಾಗಿ ಹೋಗಿತ್ತು ನನಗೆ.

ಆದರೆ ಈಗ ಎಂದೂ ಮಾತಾಡಿಸದ ನನ್ನ ಅಪ್ಪ ನನ್ನಲ್ಲಿ.. ಒಮ್ಮೆ ರಾಮನಾಗು ಮಹೇಶ.. ಎಂದು ಕೇಳಿಕೊಳ್ಳುತ್ತಿದ್ದಾರೆ.

ಮನಸ್ಸು ತಡೆಯಲಿಲ್ಲ.. ಅಪ್ಪನಿಗಾಗಿ ಒಂದೆರಡು ರಾಮನ ಮಾತನ್ನಾಡಲು ನಿರ್ಧರಿಸಿ ಬಿಟ್ಟೆ ನಾನು.

ಪುನಃ ಅಪ್ಪನಿಗೆ ಹೇಳಿದೆ.. “ಅಪ್ಪ ನಾನು ರಾಮನಾಗಬಲ್ಲೆ.. ಆದರೆ ಎದುರಿಗೆ ಒಬ್ಬ ವಾಲಿ ಪಾತ್ರ ಏನಾದರೂ ಇದ್ದಿದ್ದರೆ ರಾಮನಾಗಿ ಇನ್ನಷ್ಟು ಸೊಗಸಾಗಿ ಮಾತಾಡಲು ಬಲ ಬರುವುದು..”

ಅದಕ್ಕೆ ಅಪ್ಪ ಆ ಕೂಡಲೇ ಹೇಳಿ ಬಿಟ್ಟರು.. “ಅದಕ್ಕೆ ಯಾಕೆ ಇಷ್ಟೊಂದು ಚಿಂತೆ ಮಹೇಶ.. ನಿನ್ನ ರಾಮನಿಗಾಗಿ.. ಆ ರಾಮನ ಮಾತು ಕೇಳಲು ಕ್ಷಣ ಕಾಲ ನಾನೇ ವಾಲಿ ಆಗಿ ಬಿಡುವೆನು. ನಾನೇ ವಾಲಿ ಎಂದು ತಿಳಿದು ನೀನು ರಾಮನಂತೆ ಮಾತಾಡು..! ”

ಎಂದು ಹೇಳಿದ ಅಪ್ಪ ಅಲ್ಲೇ ಇದ್ದ ಮಂಚದ ಕಾಲಿನ ಕೆಳಗೆ ಕುಳಿತುಕೊಂಡು.. ಆ ಮಂಚಕ್ಕೆ ಒರಗಿಕೊಂಡು ಮತ್ತೆ ಹೇಳಿದರು..

“ನೋಡು ಮಹೇಶ.. ನೀನು ರಾಮನಾಗಿ ಮರೆಯಲ್ಲಿ ನಿಂತು ಬಿಟ್ಟ ಬಾಣ, ವಾಲಿಯಾಗಿರುವ ನನ್ನ ಎದೆಗೆ ಈಗ ನಾಟಿದೆ. ಕೆಳಗೆ ಬಿದ್ದಿರುವ ನಾನು ವಾಲಿಯಂತೆ ‘ಯಾರದು… ಇಂತಹ ಅಧರ್ಮದ ಕೆಲಸ ಮಾಡಿದ್ದು ಯಾರದು.. ನನ್ನ ಮುಂದೆ ಬನ್ನಿ ಈಗಲೇ….’ ಎಂದು ಕ್ರೋಧದಿಂದ ಹೇಳಿದ್ದೇನೆ ಎಂದೇ ಭಾವಿಸಿಕೋ. ಈಗ ನೀನು ಇಲ್ಲಿ ಕೆಳಗೆ ಬಿದ್ದಿರುವ ನನ್ನ ಮುಂದೆ.. ಈ ವಾಲಿಯ ಮುಂದೆ ರಾಮನಾಗಿ ಮಾತಾಡಿ ಬಿಡು ಮಹೇಶ. ನಾನೂ ಕೂಡ ಆ ನಿನ್ನ ರಾಮನನ್ನು ಕೇಳಿಸಿಕೊಳ್ಳುವೆ …” ಅಂದರು ಅಪ್ಪ..!

ನನ್ನ ಅಪ್ಪ ರಾಮನ ಬಾಣ ಚುಚ್ಚಿದ ನಿಜ ವಾಲಿಯಂತೆ, ಕೆಳಗೆ ಬಿದ್ದುಕೊಂಡು ನಿಜವಾಗಿಯೂ ಅಪಾರವಾದ ನೋವು ಅನುಭವಿಸುವಂತೆ, ತನಗೆ ರಾಮನಿಂದ ಮೋಸವಾದಂತೆ.. ಪರಕಾಯ ಪ್ರವೇಶ ಮಾಡಿಯೇ ನಟಿಸುತ್ತಿದ್ದರು..!

ನನಗೆ ಒಮ್ಮೆ ಭಯವಾಗಿ ಬಿಟ್ಟಿತು!

ಅಪ್ಪ ಏತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು!!

ಆದರೂ ಅವರಿಗೆ ನೋವು ಉಂಟು ಮಾಡುವ ಇಚ್ಛೆ ನನಗಿರಲಿಲ್ಲ. ನಾನು ಅವರ ಮುಂದೆ ನಿಂತು ಅವರ ಖುಷಿಗಾಗಿ ರಾಮನಂತೆ ಮಾತನಾಡಲು ಶುರು ಮಾಡಿಯೇ ಬಿಟ್ಟೆ.

“ಹೇಯ್ ವಾನರ ರಾಜ ವಾಲಿ…

ಯಾರು ಸ್ವಯಂ ಅಧರ್ಮ, ಅನೀತಿ, ಪಾಪಗಳಲ್ಲಿ ಸಂಪೂರ್ಣವಾಗಿ ಮುಳುಗಿರುವನೋ.. ಅವನ ಬಾಯಿಯಿಂದ ಇಂತಹ ಧರ್ಮ, ನೀತಿ, ಸದಾಚಾರಗಳ ಮಾತು ಕೇಳಲು ಯಾವತ್ತಿಗೂ ಆಡಂಬರ ಅನಿಸುತ್ತದೆಯೇ ಹೊರತು ಬೇರೆನೂ ಅಲ್ಲ!!

ಆ ಸಮಯ ನಿನ್ನ ಧರ್ಮ ಎಲ್ಲಿ ಹೋಗಿತ್ತು… ಅಂದು ನಿನ್ನ ನಿರಪರಾಧಿ ಸಹೋದರ ಸುಗ್ರೀವನನ್ನು ಕಿಷ್ಕಿಂಧೆಯಿಂದ ಬಹಿಷ್ಕಾರಗೊಳಿಸುವಾಗ… ಅವನನ್ನು ಅಲ್ಲಿಂದ ಶಾಶ್ವತವಾಗಿ ಹೊರದಬ್ಬುವಾಗ ಆ ನಿನ್ನ ಧರ್ಮ ಎಲ್ಲಿ ಹೋಗಿತ್ತು..?

ನೀನು ನಿನ್ನ ನಿರ್ದೋಷಿ ಸಹೋದರನನ್ನು ಹತ್ಯೆಗೈಯಲು ಹೊರಟಾಗ… ನಿನ್ನ ಧರ್ಮ ಏನು ಮಾಡುತ್ತಿತ್ತು.. ಹೇಳು.. ಮಲಗಿ ನಿದ್ರಿಸುತ್ತಿತೆ??

ನೀನು ಅಂದು ನಿನ್ನ ಪುತ್ರಿ ಸಮಾನಳಾದ ನಿನ್ನ ಸ್ವಂತ ತಮ್ಮನ ಪತ್ನಿ ತಾರೆಯ ಮೇಲೆ ಕ್ರೂರ ದೃಷ್ಟಿ ಬೀರಿದಾಗ.. ನಿನಗೆ ನಿನ್ನ ಧರ್ಮದ ಸ್ಮರಣೆ ಸ್ವಲ್ಪವೂ ಆಗಲಿಲ್ಲವೇ ವಾನರ ರಾಜ..?

ಹೇಳು.. ಎಲ್ಲಿ ಹೋಗಿತ್ತು ಆ ನಿನ್ನ ಧರ್ಮ?! ”

ಅಷ್ಟು ಹೇಳಿ ನನ್ನ ಮಾತು ನಿಲ್ಲಿಸಿ ಬಿಟ್ಟೆ ನಾನು.

ಆದರೆ ಅದಾಗಲೇ ನನ್ನ ಅಪ್ಪನೊಳಗಿದ್ದ ವಾಲಿ ಆ ಕ್ಷಣವೇ ಇನ್ನಿಲ್ಲದ ಕ್ರೋಧದಿಂದ ಮಾತಾಡಲು ಶುರು ಮಾಡಿ ಬಿಟ್ಟಿದ್ದ..!

ಅಪ್ಪ ಬಿದ್ದುಕೊಂಡಲ್ಲಿಂದಲೇ ತೀಕ್ಷ್ಣವಾದ ಧ್ವನಿಯಲ್ಲಿ ಹೇಳಿದರು…

“ಹೇಯ್ ರಘನಂದನ ರಾಮ…

ನೀವು…ನೀವು ದಶರಥ ಪುತ್ರನಲ್ಲವೇ..?

ಕೇಳಿದ್ದೇನೆ.. ಬಹಳಷ್ಟು ಕೇಳಿದ್ದೇನೆ.. ನಿಮ್ಮ ರಘುವಂಶ ಧರ್ಮಕ್ಕೆ, ನ್ಯಾಯಕ್ಕೆ ಹೆಸರುವಾಸಿಯಾದದ್ದು ಎಂದು.

ಆದರೆ…

ಆದರೆ ಅಂತಹ ಶ್ರೇಷ್ಠ ಕುಲದಲ್ಲಿ ಹುಟ್ಟಿದ ನೀವು..

ನನ್ನಂತ ಮಹಾ ಯೋಧನಿಗೆ ಈ ರೀತಿಯ… ಈ ರೀತಿಯ ಮೃತ್ಯು ಏತಕ್ಕಾಗಿ ನೀಡಿದಿರಿ.. !?

ಹೇಳಿ….

ನನಗೆ ಉತ್ತರ ಹೇಳಿ ರಾಮ…!

ನಿಮಗೆ ಗೊತ್ತೇ.. ನನ್ನೆದುರು ನಿಂತು ಯಾರೂ ಕೂಡ ನನ್ನನ್ನು ಎಂದಿಗೂ ಜಯಿಸಲಾಗದು..!

ಅಷ್ಟೇ ಏಕೆ..

ಮಹಾಬಲಶಾಲಿ, ತ್ರಿಲೋಕಾಧಿಪತಿ ಎಂದು ಮೆರೆಯುವ ಆ ಲಂಕಾಧಿಪತಿ ದಶಾನನ ರಾವಣನೇ… ನನ್ನೆದುರು ನಿಂತು ಯುಧ್ಧ ಮಾಡುವ ಸಾಹಸವನ್ನು ಎಂದಿಗೂ ಮಾಡಲಾರ ರಾಮ..!

ಅವನನ್ನು.. ಆ ರಾವಣನನ್ನು ನನ್ನ ಬಾಲದಲ್ಲಿ ಸುತ್ತಿಕೊಂಡು ಗಗನಕ್ಕೆ ಹಾರುತ್ತಿದ್ದವನು ನಾನು..!

ಕಡಲ ನೀರಿನಲ್ಲಿ ಅವನನ್ನು ಮುಳುಗಿಸಿ ಅವನಿಗೆ ನೀರು ಕುಡಿಸಿದವನು ನಾನು..!

ನನ್ನ ಪುತ್ರ ಅಂಗದನ ತೊಟ್ಟಿಲಿಗೆ ಆಟಿಕೆಯಂತೆ ಆ ಲಂಕೇಶನನ್ನು ಕಟ್ಟಿ ತೊಟ್ಟಿಲು ತೂಗಿದ ಮಹಾ ಪರಾಕ್ರಮಿ ನಾನು.

ಈ ಸುಗ್ರೀವನ ಬದಲು ನನ್ನಲ್ಲಿ ಒಂದು ಮಾತು ಕೇವಲ ಒಂದು ಮಾತು ಹೇಳಿದ್ದರೆ ರಾಮ.. ಆ ರಾವಣನನ್ನು ನೇರಾ ನಿಮ್ಮೆದುರೇ ತಂದು ನಿಲ್ಲಿಸುತ್ತಿದ್ದೆ ನಾನು.

ಹೌದು ನನ್ನೊಂದಿಗೆ ಎದುರು ನಿಂತು ಯುದ್ಧ.. ಇಲ್ಲ.. ಇಲ್ಲ.. ಎಂದಿಗೂ ಯಾರು ಕೂಡ ಮಾಡಲಾರರು..! ಅಂತಹ ಯೋಚನೆಯೇ ಸಾವಿಗೆ ನೇರಾ ಆಹ್ವಾನವಿದ್ದಂತೆ!

ಅದು ಈ ಸುಗ್ರೀವನಿಗೂ ಸಹ ಬಹಳ ಚೆನ್ನಾಗಿಯೇ ಗೊತ್ತಿದೆ… ಮಾತ್ರವಲ್ಲ ಇಡೀ ಜಗತ್ತಿಗೆ ತಿಳಿದಿರುವ ಪರಮ ಸತ್ಯವದು!

ಆದರೂ ಇಂತಹ ವೀರನಾದ ನನಗೆ.. ನಿಮ್ಮಿಂದ.. ಅದೂ ನಿಮ್ಮಿಂದ ಈ ರೀತಿಯ ಮೋಸದ ಶಿಕ್ಷೆಯೇ ರಾಮ..?

ಹೇಳಿ ರಾಮ.. ನೀವೊಬ್ಬರು ಅದೆಂತಹ ಯೋಧ?

ನಿಮ್ಮ ಬಗ್ಗೆ ಏನೇನೂ ಒಳ್ಳೆಯದನ್ನೇ ಕೇಳಿ ತಿಳಿದುಕೊಂಡಿದ್ದೆ ನಾನು..

ಆದರೆ.. ಆದರೆ ಮರೆಯಲ್ಲಿ ನಿಂತು ಒಬ್ಬ ಯೋಧನನ್ನು ಈ ರೀತಿಯಾಗಿ ಬಾಣ ಬಿಟ್ಟು ಮೋಸದಿಂದ ಕೊಲ್ಲುವುದು ಅದು ಯಾವ ರೀತಿಯ ಕ್ಷತ್ರಿಯ ಧರ್ಮ.. ?

ಹೇಳಿ ರಾಮ… ಹೇಳಿ!

ನಾನು ಕೂಡ ಅಧರ್ಮವನ್ನೇ ಮಾಡಿದ್ದೆ ಎಂದು ನೀವು ಹೇಳಿದಿರಿ ಅಲ್ಲವೇ..?

ಆದರೆ… ಆದರೆ ನಾವು ವಾನರರು..!

ಮನುಷ್ಯರ ನಿಯಮ ನಮಗೆ ಅನ್ವಯವಾಗುವುದಿಲ್ಲ ರಘುನಂದನ..ನಮ್ಮ ಸ್ವಭಾವ ನಿಮ್ಮ ರೀತಿ ಎಂದಿಗೂ ಇರುವುದಿಲ್ಲ.

ನೀವು ನರೇಶರು.. ತಿಳಿದವರು.. ಧರ್ಮ ಪರಿಪಾಲಕರು..

ನೀವೇ ಈ ರೀತಿ ಮಾಡಿ ಬಿಟ್ಟರೇ? ಜಗತ್ತಿಗೆ ಸರಿ ದಾರಿ ತೋರುವವರು ಯಾರು.?

ಹೇಳಿ… ಈ ರೀತಿಯ ಹೀನ ಕೃತ್ಯ.. ಕುತಂತ್ರ.. ಅದು ಹೇಗೆ ಮಾಡಿ ಬಿಟ್ಟಿರಿ ನನಗೆ ನೀವು..!

ನಾನು ಅಫರಾಧವೇ ಮಾಡಿದ್ದರೆ, ಅಧರ್ಮವೇ ಮಾಡಿದ್ದರೆ.. ಅದು ನಾನು ನನ್ನ ರಾಜ್ಯದಲ್ಲಿಯೇ ಮಾಡಿದ್ದೇನೆ…!!

ನಿಮ್ಮ ರಾಜ್ಯದಲ್ಲಿ ಅಲ್ಲ ರಾಮ!

ಹಾಗೆಯೇ ನನಗೆ ನಿಮ್ಮ ಮೇಲೆ ಯಾವುದೇ ವ್ಯಕ್ತಿಗತ ಶತ್ರುತ್ವವೂ ಇರಲಿಲ್ಲ..!

ಹೀಗಿರುವಾಗ… ನನ್ನ ಅಪರಾಧಕ್ಕೆ ದಂಡನೆ ನೀಡಲು ನೀವು ಯಾರು…?

ಹೇಳಿ …ದಂಡನೆ ನೀಡಲು ನೀವು ಯಾರು..?!

ಈಗೋ.. ರಘುನಂದನ… ಇಲ್ಲಿ ಕೇಳಿ..

ಸಂಪೂರ್ಣ ಲೋಕವೇ ಕಾಲದ ಅಧಿನದಲ್ಲಿದೆ, ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇ ಬೇಕು…

ಹೌದು ನಾನೂ ಸಾಯಲೇಬೇಕು.. ಅದೂ ನನಗೂ ಗೊತ್ತಿದೆ.

ಆದ್ದರಿಂದ ನನಗೆ ನನ್ನ ಮೃತ್ಯುವಿನ ಬಗ್ಗೆ ಅಂತಹ ಯಾವುದೇ ದುಃಖವೂ ಇಲ್ಲ.. ಚಿಂತೆಯೂ ಇಲ್ಲ.

ಆದರೆ.. ಆದರೆ ಈ ನಿಮ್ಮ ಅಧರ್ಮ, ಕುಕೃತ್ಯವನ್ನು ನಾನೆಂದಿಗೂ ಸಹಿಸಲಾರೆ ರಾಮ.. ನಾನೆಂದಿಗೂ ಸಹಿಸಲಾರೆ!

ಇದರ ಪರಿಣಾಮ ನೀವು ಅವಶ್ಯವಾಗಿ ಎದುರಿಸುವಿರಿ ರಾಮ.. ಅವಶ್ಯವಾಗಿ ಎದುರಿಸುವಿರಿ!

ಈ ಹೀನ ಕಾರ್ಯಕ್ಕಾಗಿ ಈ ಜಗತ್ತನ್ನು ನಿಮ್ಮನ್ನು ಸದಾ ನಿಂದಿಸುವುದು ರಾಮ..!

ನೆನಪಿರಲಿ… ಈ ವಾಲಿಯ ವಧೆಗಾಗಿ.. ಈ ಜಗತ್ತು ನಿಮ್ಮನ್ನು ಸದಾ ನಿಂದಿಸುವುದು… ಸದಾ ನಿಂದಿಸುವುದು ..!! ”

ಅಷ್ಟು ಹೇಳಿದ ಅಪ್ಪ ಮಾತು ತನ್ನ ನಿಲ್ಲಿಸಿ ಬಿಟ್ಟರು!

ಆದರೆ ನನ್ನ ಕಣ್ಣುಗಳಲ್ಲಿ ನೀರು ಗಳಗಳನೆ ರಭಸದ ಹೊಳೆಯಂತೆ ಹರಿದಿತ್ತು…!!

ಎಂತಹ ಅಪ್ಪ ಇವರು..?!!

ಅದೆಂತಹ ವಾಲಿಯ ಮಾತು ಇವರದ್ದು!

ರಂಗಸ್ಥಳದ ನಡುವಲ್ಲಿ ಕೇಳಿಬರಬೇಕಾದ ಗುಡುಗು ಸಿಡಿಲಿನಂತಹ ಮಾತುಗಳಿವು.

ಹುಟ್ಟು ಯಕ್ಷಗಾನ ದ್ವೇಷಿ ನನ್ನ ಅಪ್ಪ.. ಇಷ್ಟು ಮಾತು ಅದು ಹೇಗೆ ಆಡಿ ಬಿಟ್ಟರು?

“ಅಪ್ಪ ನೀವು…ನೀವು…..” ತಡವರಿಸುತ್ತಲೇ ಹೇಳಿದೆ.

ಅಪ್ಪನೇ ಹೇಳಿದರು.. “ಹೇಳುತ್ತೇನೆ ಮಹೇಶ.. ಎಲ್ಲವನ್ನೂ ಹೇಳುತ್ತೇನೆ ನಿನಗೆ ಇಂದು..

ಎಂದು ಬಹಳ ಶಾಂತವಾಗಿ ಹೇಳಿದ ಅಪ್ಪ, ಕೆಳಗೆ ಕುಳಿತಲ್ಲಿಂದ ಎದ್ದು ನಿಂತು ಹೇಳಲು ಶುರು ಮಾಡಿ ಬಿಟ್ಟರು.

” ಹೌದು.. ನಾನು ಕೂಡ ಯಕ್ಷಗಾನ ಪ್ರೇಮಿಯೇ ಆಗಿದ್ದೆ ಮಹೇಶ.. ಕಾಲೇಜು ದಿನಗಳಲ್ಲಿ ಎಲ್ಲಾ ಪಾತ್ರವನ್ನೂ ನಾನು ಮಾಡುತ್ತಿದ್ದೆ. ಬಹಳ ಸೊಗಸಾಗಿ ಮಾತುಗಾರಿಕೆಯನ್ನು ಕೂಡ ಮಾಡುತ್ತಿದ್ದವನು ನಾನು.

ಯಕ್ಷಗಾನದ ಹುಚ್ಚು ನನ್ನಲ್ಲಿ ಅದೆಷ್ಟು ಇತ್ತು ಎಂದರೆ ಊರಿನ ಯಾವ ಯಕ್ಷಗಾನವನ್ನು ನಾನು ಬಿಡುತ್ತಿರಲಿಲ್ಲ. ರಾತ್ರಿ ಹೋದರೆ ಬೆಳಿಗ್ಗೆಯೇ ಬರುತ್ತಿದ್ದೆ. ಅದೇ ರೀತಿ ತಾಳಮದ್ದಲೆಯನ್ನು ಕೂಡ ಬಹುವಾಗಿ ಇಷ್ಟ ಪಡುತ್ತಿದ್ದೆ. ಆಗಿನ್ನೂ ನನಗೆ ಮದುವೆ ಆಗಿರಲಿಲ್ಲ. ಆದರೆ ಒಂದು ದಿನ ಏನಾಯಿತು ಎಂದರೆ, ನಾನು ಊರಿನ ಶಾಲೆಯ ಮೈದಾನದಲ್ಲಿ ಯಕ್ಷಗಾನ ನೋಡುತ್ತಾ ಮೈ ಮರೆತಿದ್ದೆ. ನಾನು ಅಲ್ಲಿ ಯಕ್ಷಗಾನ ನೋಡುತ್ತಾ ಕಳೆದು ಹೋಗಿದ್ದಾಗ ಇಲ್ಲಿ ಮನೆಯಲ್ಲಿ ಅಪ್ಪನಿಗೆ ತಣ್ಣನೆ ಹೃದಯಾಘಾತವಾಗಿತ್ತು. ಅಮ್ಮ ಮನೆಯಲ್ಲಿ ಒಬ್ಬಳೇ ಇದ್ದಳು. ಅವಳಿಗೆ ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ಅಕ್ಕ ಪಕ್ಕ ಆಗ ಯಾವುದೇ ಮನೆ ಕೂಡ ಇರಲಿಲ್ಲ. ಅವಳ ಒಂದು ಕಾಲು ಬೇರೆ ಊನವಾಗಿತ್ತು. ಸರಿಯಾಗಿ ನಡೆಯಲು ಕೂಡ ಅವಳಿಗೆ ಆಗುತ್ತಿರಲಿಲ್ಲ. ಈಗಿನಂತೆ ಆ ಕಾಲದಲ್ಲಿ ಮೊಬೈಲ್ ಕೂಡ ಇರಲಿಲ್ಲ. ಮನೆಯಲ್ಲಿ ದೂರವಾಣಿ ಸಹ ಇರಲಿಲ್ಲ.

ನನ್ನ ಅಪ್ಪನನ್ನು ಆ ರಾತ್ರಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಅವರು ಬದುಕುತಿದ್ದರೋ ಏನೋ. ಆದರೆ ಹಾಗೆ ಆಗಲಿಲ್ಲ. ಅಪ್ಪ ತೀರಿಕೊಂಡು ಬಿಟ್ಟಿದ್ದರು!!

ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ. ನನ್ನ ಪ್ರೀತಿಯ ಯಕ್ಷಗಾನ ಊರಿನ ಬೈಲು ಗದ್ದೆಯಲ್ಲಿ, ಶಾಲಾ ಮೈದಾನದಲ್ಲಿ ಸಂಭ್ರಮದಿಂದ ಜರುಗುವಾಗಲೆಲ್ಲ ನನಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ನಾನೂ ಹೋಗಬೇಕು ಅಂದು ಅನಿಸುತ್ತಿತ್ತು. ಆದರೆ ನಾನು ಹೋಗಲಿಲ್ಲ. ತಂದೆಯೇ ಪದೇ ಪದೇ ನೆನಪಾಗುತ್ತಿದ್ದರು. ಅವರನ್ನು ನಾನು ಬಹುವಾಗಿ ಪ್ರೀತಿಸಿದ್ದೆ. ಹೌದು ಯಕ್ಷಗಾನದಂತೆಯೇ. ಯಕ್ಷಗಾನದ ಹೆಸರು ಕೇಳಿದಾಗಲೆಲ್ಲ ನನಗೆ ನನ್ನಲ್ಲಿ ತಪ್ಪಿತಸ್ಥ ಭಾವನೆ ಮತ್ತೆ ಮತ್ತೆ ಹುಟ್ಟುತ್ತಿತ್ತು. ಅದು ಹಾಗೆ ಶಾಶ್ವತವಾಗಿಯೇ ನನ್ನಲ್ಲಿಯೇ ಉಳಿದು ಹೋಯಿತು.

ಅದಕ್ಕಾಗಿಯೇ ಯಕ್ಷಗಾನದ ಹೆಸರು ಈ ಮನೆಯಲ್ಲಿ ಕೇಳಿ ಬಂದಾಗಲೆಲ್ಲ.. ನೀನು ಯಕ್ಷಗಾನಕ್ಕೆ ಹೋಗುವೆ ಎಂದು ಬಲು ಆಸೆಯಿಂದ ಕೇಳಿದಾಗ ನಿನ್ನನ್ನು ನಾನು ಕಟುವಾಗಿ ವಿರೋಧಿಸಿದ್ದು ಮಹೇಶ. ಒಮ್ಮೆ ನಿನ್ನನ್ನು ವಿರೋಧಿಸಿ ಬಿಟ್ಟೆ ನೋಡು, ಅದಕ್ಕಾಗಿ ಆಮೇಲೆ ನಾನು ನನ್ನ ನಿರ್ಧಾರದಿಂದ ಎಂದೂ ಹಿಂದೆ ಸರಿಯಲಿಲ್ಲ. ಎಷ್ಟಾದರೂ ನಾನು ನಿನ್ನ ತಂದೆ ನೋಡು. ಹಟ ಎನ್ನುವುದು ನನಗಂತು ಮೊದಲಿನಿಂದಲೂ ಅಧಿಕವಾಗಿಯೇ ಇತ್ತು.

ಆದರೆ ಮಹೇಶ.. ನೀನಂತು ನಿನ್ನಾಸೆಯಂತೆ ಗೆಜ್ಜೆ ಕಟ್ಟಿ ಕುಣಿದಾಗಿತ್ತು. ನನಗೂ ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಕುಣಿಯುವ ಆಸೆ ಏನೋ ಬಹಳಷ್ಟು ಇತ್ತು, ಆದರೆ ನನ್ನ ಆ ಕನಸ್ಸು ಎಂದೂ ನೆರವೇರಲಿಲ್ಲ. ನೀನು ಯಕ್ಷಗಾನ ಕಲಾವಿದನಾದಾಗ ಈ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಖುಷಿ ಪಟ್ಟಿದ್ದು ಯಾರು ಎಂದು ಗೊತ್ತೇ ಮಹೇಶ..?

ಅದು ನಾನು..!

ಹೌದು ನಾನು ಮಾತ್ರ..!!” ಅಪ್ಪನ ಕಣ್ಣಲ್ಲಿ ನೀರಿತ್ತು.

ಅಪ್ಪ ಮತ್ತೆ ಮುಂದುವರಿಸಿದರು – ನನ್ನ ಮೊದಲ ಇಬ್ಬರೂ ಮಕ್ಕಳಿಗೆ ತುಂಬಾ ಓದಿಸಿದ್ದೆ ನಾನು. ನೀನು ಕೂಡ ಓದಬೇಕು ಎಂದು ನನಗೆ ಆಸೆ ಇತ್ತು. ಅದಕ್ಕಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನ ಬೇಡ ಎಂದು ವಿರೋಧಿಸಿದೆ. ನೀನು ನಾನು ಹೇಳಿದ ಮಾತು ಕೇಳಲಿಲ್ಲ ನೋಡು.. ಅದಕ್ಕಾಗಿ ನಾನು ನಿನ್ನಲ್ಲಿ ಮಾತನ್ನೇ ಬಿಟ್ಟೆ.

ಯಾರು ನನಗೆ ನನ್ನ ಕೊನೆಯ ಕಾಲದಲ್ಲಿ ಸಹಾಯ ಆಗುವರು ಎಂದು ತಿಳಿದಿದ್ದೆನೋ ಆ ಇಬ್ಬರು ಮಕ್ಕಳು ಕೊನೆಗೂ ನನ್ನ ಬಳಿ ಬರಲೇ ಇಲ್ಲ… ಆದರೆ.. ಆದರೆ ನಾನು ತಿರಸ್ಕರಿಸಿದ ನನ್ನ ಕೊನೆಯ ಮಗನೇ ನನ್ನ ಕೊನೆಯ ಕಾಲದಲ್ಲಿ ನಾನು ಒಂದು ಶಬ್ದ ಅವನಲ್ಲಿ ಆಡದೇ ಇದ್ದರೂ ಕೂಡ.. ನನ್ನನ್ನು ಮಾತ್ರ ಯಾವತ್ತಿಗೂ ತಿರಸ್ಕರಿಸಲಿಲ್ಲ…!!

ತಪ್ಪು ನನ್ನದೇ ಇತ್ತು ಮಹೇಶ…ನಿನ್ನದಲ್ಲ!!

ಹೇಳು…ಕ್ಷಮಿಸಬಲ್ಲೆಯಾ… ಈ ನಿನ್ನ ಅಪ್ಪನನ್ನು?!”

ಅಪ್ಪ ಕಣ್ಣೀರು ಸುರಿಸುತ್ತಲ್ಲೇ ಅಪ್ಪನೆಂಬ ತನ್ನ ಆ ಅಹಂಕಾರವನ್ನು ತೊರೆದು ಹೇಳಿ ಬಿಟ್ಟಿದ್ದರು ಈ ಮಾತನ್ನು.!

ಆದರೆ ನಾನು ಏನು ಹೇಳಲಿ..?!

ಅವರು ನನ್ನ ಅಪ್ಪ… ಚಿಕ್ಕಂದಿನಿಂದಲೂ ನನಗೆ ಅವರನ್ನು ಕಂಡರೆ ಭಯ, ಇನ್ನಿಲ್ಲದ ಹೆದರಿಕೆ.

ಅವರು ಜೋರಾಗಿ ಮಾತಾಡಿದರೂ ಸಾಕು ಹೆದರಿ ಅವರಿಂದ ದೂರ ಓಡಿ ಹೋಗುತ್ತಿದ್ದವನು ನಾನು.

ಅಂತಹ ಅಪ್ಪ ಒಂದು ದಿನ ಹೀಗೆ ಹೊತ್ತಲ್ಲದ ಹೊತ್ತಲ್ಲಿ…ರಾತ್ರಿಯ ಸಮಯದಲ್ಲಿ.. “ಮಗನೇ ನಾನು ತಪ್ಪು ಮಾಡಿರುವೆ… ಕ್ಷಮಿಸ ಬಲ್ಲೆಯಾ?” ಎಂದು ಕಣ್ಣೀರಾಗಿ ಕೇಳಿ ಬಿಟ್ಟರೆ ನಾನಾದರೂ ಏನು ಹೇಳಬಲ್ಲೆ…?!

ಬಾಯಿ ಕಟ್ಟಿದಂತಾಗಿತ್ತು ನನಗೆ.

ಕಣ್ಣಲ್ಲಿ ಜಲಪಾತವೊಂದು ನನಗರಿವಿಲ್ಲದೇ ಅದಾಗಲೇ ಭೋರ್ಗರೆದು ಧುಮುಕಿತ್ತು!

ಏನೂ ತೋಚದೆ ತಲೆ ತಗ್ಗಿಸಿ ನಿಂತಿದ್ದ ನನ್ನನ್ನು… ಅಪ್ಪನೇ ಬಂದು ಬಾಚಿ ತಬ್ಬಿಕೊಂಡರು.. ಅಂದು ಇಬ್ಬರೂ ಜೋರಾಗಿ ಅತ್ತಿದ್ದೆವು.. ಆ ನಂತರ ಬಹಳಷ್ಟು ಒಟ್ಟಿಗೆ ನಕ್ಕೆವು. ಹದಿನೈದು ವರುಷಗಳ ನಂತರ ಒಟ್ಟಿಗೆ ಕುಳಿತುಕೊಂಡು ಊಟವನ್ನು ಸಹ ಮಾಡಿದೆವು.

ನನ್ನ ಮೊಬೈಲ್ ನಂಬರ್ ಅವರು ಪಡೆದುಕೊಂಡರು, ಅವರ ನಂಬರ್ ನಾನು ಪಡೆದುಕೊಂಡೆ. ಆ ದಿನ ನನಗೆ ನನ್ನ ಅಪ್ಪ ಮರಳಿ ಸಿಕ್ಕಿದ್ದರು. ಮತ್ತು ಅಪ್ಪನಿಗೆ.. ಅವರ ಮಗ ಸಿಕ್ಕಿದ್ದ. ಮೇಳದಲ್ಲಿಯೂ ಕೂಡ ನಾನು ರಾಮನಾದವನು ಅಲ್ಲ. ಆದರೆ ನನ್ನ ಅಪ್ಪ ನನ್ನನ್ನು ಒಂದೇ ದಿನ ರಾಮನನ್ನಾಗಿ ಮಾಡಿ ಬಿಟ್ಟರು.

ನನ್ನ ಚಿಕ್ಕಂದಿನ ಕನಸು… ನನ್ನ ಅಪ್ಪ ಮನೆಯಲ್ಲಿ ಅದನ್ನು ನನಸು ಮಾಡಿ ಕೊಟ್ಟಿದ್ದರು. ಅಪ್ಪ ನನ್ನನ್ನು, ನನ್ನ ಯಕ್ಷಗಾನವನ್ನೂ ಕೊನೆಗೂ ಬಹುವಾಗಿ ಮೆಚ್ಚಿಕೊಂಡು ಬಿಟ್ಟಿದ್ದರು.

ಅಪ್ಪ ಅಂದೇ ಹೇಳಿದರು – “ಮಹೇಶ.. ರಾಮನಾಗಿ ಬಹಳ ಚೆನ್ನಾಗಿ ಅಭಿನಯಿಸಬಲ್ಲೆ ನೀನು. ನಿನಗೆ ನಿಜಕ್ಕೂ ಕಲೆ ಒಲಿದಿದೆ.. ಆದರೆ ಯಾವತ್ತೂ ನೆನಪಿಟ್ಟುಕೋ.. ಯಕ್ಷಗಾನ ಎಂಬ ಗಂಡುಕಲೆ ಬೇಕು ಎಂದರೂ ಯಾರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅದನ್ನು ಹಾಗೇ ಪೂಜಿಸಿಬಿಡು. ಅದರ ಪಾವಿತ್ರ್ಯತೆ, ಗೌರವಗಳನ್ನು ಕಾಪಾಡಿಕೊಂಡು ಹೋಗಬೇಕಾದದ್ದು ಒಬ್ಬ ಕಲಾವಿದನಿಗೆ ಇರಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ತಿಳಿದುಕೊಂಡಿರು..

ಒಂದು ದಿನ ನೀನು ಇನ್ನೂ ದೊಡ್ಡ ಕಲಾವಿದನಾಗಬಹುದು ಮಹೇಶ. ಆಗಲೂ ನೀನು ನೆನಪಿಟ್ಟುಕೋ… ಜನರು ನಿನ್ನನ್ನು ಆರಾಧಿಸಿದರೆ ಅದು ನಿನ್ನೊಳಗೆ ಇರುವ ಯಕ್ಷಗಾನವನ್ನೇ ಹೊರತು ನಿನ್ನನ್ನಲ್ಲ. ಆ ವಿದ್ಯೆಗಿಂತ ಅದರೊಳಗಿನ ಕಲೆಗಿಂತ ದೊಡ್ಡವ ಎಂದಿಗೂ ನೀನು ಆಗಲಾರೆ. ಮನಸ್ಸಿಗೆ ಅಹಂಕಾರ ಮೆತ್ತಿಸಿಕೊಳ್ಳಬೇಡ. ಬಣ್ಣ ಹಚ್ಚು, ಗೆಜ್ಜೆ ಕಟ್ಟು, ಅಹಂಕಾರವಿಲ್ಲದೆ ಮತ್ತಷ್ಟು ಕುಣಿದು.. ದಿಗಿಣವನ್ನೂ ಸುತ್ತು.. ಆದರೆ ಬುದ್ಧಿ ಮಾತ್ರ ಸದಾ ನೆಲದ ಮೇಲೆಯೇ ಇರಲಿ.. ಕೇವಲ ಕಲಾ ಸರಸ್ವತಿಯನ್ನು ಆರಾಧಿಸುವ ಕೆಲಸ ಬಿಟ್ಟರೆ ಮತ್ತೇನು ಮಾಡಲು ಹೋಗಬೇಡ ನೀನು.. ಮುಂದೆ ಅವಳೇ ನಿನ್ನ ಕೈ ಹಿಡಿದು ನಡೆಸುತ್ತಾಳೆ.. ನಿನಗೆ ಕಲೆ ಒಲಿದಿದೆ…” ಎಂದು ಹೇಳಿ ಮುಗಿಸಿದ್ದರು ಅಪ್ಪ.

ಆಹಾ… ಯಕ್ಷಗಾನ ಕಲೆಯ ಬಗ್ಗೆ ಅದೆಂತಹ ಗೌರವ ಅವರಿಗೆ ಎಂದು ಅನಿಸಿತು.

ಆ ದಿನದಿಂದ ಮನೆಯಲ್ಲಿ ನಾನು ಇದ್ದಷ್ಟು ದಿನವೂ ಯಕ್ಷಗಾನದ ಮಾತುಗಾರಿಕೆ, ಅರ್ಥಗಾರಿಕೆ ಎಲ್ಲವೂ ನಮ್ಮಿಬ್ಬರ ನಡುವೆ ಅಧಿಕವಾಗುತ್ತಾ ಹೋಯಿತು.

ಎಲ್ಲಾ ಪ್ರಸಂಗಗಳ ಮಾತುಗಾರಿಕೆಯನ್ನು ನಾವಿಬ್ಬರು ಬಹಳ ಉತ್ಸಾಹದಿಂದಲೇ ಮಾಡುತ್ತಿದ್ದೆವು. ನಮ್ಮಿಬ್ಬರ ತೀಕ್ಷ್ಣವಾದ ಮಾತಿನ ವಾಗ್ಯುದ್ಧ ಹಾಗೂ ಆ ಒಂದು ಸೊಗಸಾದ ಸಂಭಾಷಣೆ ಕೇಳಲು ಕೆಲವೊಮ್ಮೆ ಪಕ್ಕದ ಮನೆಯ ರಮೇಶ ಮತ್ತು ರಮೇಶನ ಅಪ್ಪ ಸುಂದರಣ್ಣ ಕೂಡ ಬರುತ್ತಿದ್ದರು.

ನನ್ನ ಅಪ್ಪನ ಹೆಸರು ವಸಂತಣ್ಣ. ಅವರು ಹಾಗೂ ರಮೇಶನ ಅಪ್ಪ ಸುಂದರಣ್ಣ ಅದಾಗಲೇ ಬಹಳಷ್ಟು ಕಾಲದ ಗೆಳೆಯರು. ನಾನು ಮೇಳಕ್ಕೆ ತಿರುಗಾಟಕ್ಕೆ ಹೋದಾಗ ಸುಂದರಣ್ಣ ರಾತ್ರಿ ಬಂದು ನಮ್ಮ ಮನೆಯಲ್ಲಿಯೇ ಮಲಗುತ್ತಿದ್ದರು. ಅಪ್ಪನಿಗೂ ನಾನಿರದಾಗ ಒಂದು ಜೊತೆಯಾಗುತ್ತಿತ್ತು.

ನಾನು ರಂಗಸ್ಥಳದಲ್ಲಿ ಕೇವಲ ಮೈಸಾಸುರನಾಗಿ ಮಾತ್ರ ಮಿಂಚುತ್ತಿದ್ದರೆ ಮನೆಯಲ್ಲಿ ನಡೆಯುವ ಅರ್ಥಗಾರಿಕೆಯಲ್ಲಿ ರಾಮ, ಕೃಷ್ಣ, ಆಂಜನೇಯ, ಭೀಮ, ಬ್ರಹ್ಮ, ಈಶ್ವರ, ಪರಶುರಾಮ.. ಎಲ್ಲವೂ ಆಗುತ್ತಿದ್ದೆ. ಎಲ್ಲವೂ ಅಪ್ಪನಿಗಾಗಿಯೇ. ಅಪ್ಪನ ಖುಷಿಗಾಗಿಯೇ. ಆದರೂ ಮನಸ್ಸಿಗೆನೋ ದಿವ್ಯವಾದ ನೆಮ್ಮದಿ ಇತ್ತು. ಬಾಲ್ಯದ ನನ್ನಿಷ್ಟದ ಪಾತ್ರಗಳನ್ನು ಕೇವಲ ಗುಡ್ಡದ ನೆತ್ತಿಯಲ್ಲಿ ಮಾಡುತ್ತಿದ್ದವನು ಈಗ ಮನೆಯಲ್ಲಿ ಮೊದಲ ಬಾರಿಗೆ ನಿರ್ಭೀತಿಯಿಂದ ಮಾಡುತ್ತಿದ್ದೆ.

ಒಂದು ದಿನ ನಾವಿಬ್ಬರು “ಶರ ಸೇತು ಬಂಧ” ಪ್ರಸಂಗದ ಸಂಭಾಷಣೆಗಳನ್ನು ನಡೆಸುತ್ತಿದ್ದೆವು. ಅಪ್ಪ ಎಂದಿನಂತೆ ರಾಮನಾಗಿ ಬಹಳ ಸೊಗಸಾಗಿ ಮಾತಾಡುತ್ತಿದ್ದರು. ಖಂಡಿತವಾಗಿಯೂ ನನಗಿಂತಲೂ ಸುಂದರವಾಗಿ.

ಎಲ್ಲಾ ಮುಗಿದಾದ ಮೇಲೆ ಅಪ್ಪನಲ್ಲಿಯೇ ಕೇಳಿದೆ ನಾನು.

ಅಪ್ಪ.. ನಿಮಗೆ ರಾಮ.. ಕೃಷ್ಣ.. ಎಂದರೆ ಎಷ್ಟೊಂದು ಇಷ್ಟ ಅಲ್ಲವೇ..?

ಅದಕ್ಕೆ ಅಪ್ಪ ಹೇಳಿದರು..
“ಹೌದು ಎಲ್ಲವೂ ಇಷ್ಟವೇ.. ಆದರೆ ನಿಜ ಹೇಳಬೇಕೆಂದರೆ ನನಗೆ ಯಕ್ಷಗಾನದಲ್ಲಿ ಅತೀ ಹೆಚ್ಚು ಗಮನ ಸೆಳೆಯುತ್ತಿದ್ದದ್ದು, ಇಷ್ಟವಾಗುತ್ತಿದ್ದುದು ಎಂದರೆ ಅದು ಮೈಸಾಸುರ ಮಾತ್ರ.. ಕೇವಲ ಮೈಸಾಸುರನನ್ನು ಕಾಣಲೆಂದೇ ನಾನು ರಾತ್ರಿ ಎಲ್ಲಾ ಯಕ್ಷಗಾನ ನೋಡುತ್ತಿದ್ದೆ. ಬಹಳ ಚಿಕ್ಕಂದಿನಲ್ಲಿಯೇ ಮೈಸಾಸುರನನ್ನು ನೋಡಿ ನೋಡಿಯೇ ನನಗೆ ಯಕ್ಷಗಾನದ ಮೇಲೆ ಇನ್ನಿಲ್ಲದ ಕುತೂಹಲ ಹಾಗೂ ಇಷ್ಟೊಂದು ಪ್ರೀತಿ ಹುಟ್ಟಿದ್ದು. ಅವನ ಅಬ್ಬರದ ರಂಗ ಪ್ರವೇಶ.. ನನಗೆ ರೋಮಾಂಚನ ಉಂಟು ಮಾಡುತ್ತಿತ್ತು.

ನೀನು ಏನೇ ಹೇಳು ಮಹೇಶ… ಒಂದು ಪಾತ್ರವಾಗಿ ಮೈಸಾಸುರನಿಗಿರುವ ಆ ಅಬ್ಬರದ ರಂಗ ಪ್ರವೇಶ ಬೇರೆ ಯಾವ ಪಾತ್ರಕ್ಕೂ ಇಲ್ಲ ಬಿಡು..

ನಾನು ಕೂಡ ಒಮ್ಮೆ ಕಾಲೇಜಿನಲ್ಲಿ ಮೈಸಾಸುರನಾಗಿ ಮಾಡಿದ್ದೆ. ಬಹುಶಃ ಅದುವೇ ಕೊನೆ ಇರಬೇಕು ಎಂದು ಕಾಣುತ್ತೆ. ಆಮೇಲೆ ನಾನು ಯಾವ ಪಾತ್ರವನ್ನೂ ಮಾಡಲಿಲ್ಲ. ಆ ದಿನ ಅಪ್ಪ ತೀರಿಕೊಂಡಾಗ ಕೂಡ ನಾನು ಮೈಸಾಸುರನ ಅಬ್ಬರವನ್ನೇ ನೋಡಿಕೊಂಡು ಶಾಲೆಯ ಮೈದಾನದಲ್ಲಿ ಮೈ ಮರೆತಿದ್ದೆ.. ಕಾಲೇಜಿನಲ್ಲಿ ಕೊನೆಯದಾಗಿ ಪಾತ್ರ ಹಾಕಿದ್ದು ಕೂಡ ಮೈಸಾಸುರನದ್ದೇ…. ರಂಗಸ್ಥಳದಲ್ಲಿ ಕೊನೆಯದಾಗಿ ನೋಡಿದ್ದು ಕೂಡ ಮೈಸಾಸುರನನ್ನೇ..” ಎಂದು ಹೇಳಿ ಮಾತು ನಿಲ್ಲಿಸಿದರು ಅಪ್ಪ.

ಕ್ಷಣಕಾಲ ಮೌನವಾಗಿ ಬಿಟ್ಟೆ ನಾನು.

ಏಕೆಂದರೆ ಅಪ್ಪನ ಅಷ್ಟು ಇಷ್ಟದ ಪಾತ್ರ ಮೈಸಾಸುರ ಅವರ ಮನೆಯಲ್ಲಿಯೇ ಅವರೆದರುರೇ ದಿನ ನಿತ್ಯವೂ ಉಸಿರಾಡುತ್ತಿದ್ದ…!!

ಆದರೆ ಅಪ್ಪನಿಗೆ ಖುಷಿ ಆಗಲು ಸುಳ್ಳು ಹೇಳಿ ಮನೆಯಲ್ಲಿ ನಾನಾಗಿದ್ದು ಮಾತ್ರ.. ರಾಮ, ಕೃಷ್ಣ, ಕರ್ಣ, ಪರಶುರಾಮ.. ಇತ್ಯಾದಿ ಇತ್ಯಾದಿ.

ನಾನು ಯಾವುದು ಅಲ್ಲವೋ ಅದು ಅಪ್ಪನಿಗಾಗಿ ಆಗಿದ್ದೆ.

ನಿಜವಾಗಿ ನಾನು ಯಾವುದು ಆಗಿದ್ದೆನೋ.. ಅಪ್ಪನಿಗೂ ಕೂಡ ಅದೇ ಬಹಳಷ್ಟು ಇಷ್ಟವಾಗುತ್ತಿತ್ತೋ… ಅದು ಮನೆಯಲ್ಲಿ ಅಷ್ಟೂ ದಿನಗಳಲ್ಲಿ ಅರ್ಥಗಾರಿಕೆ ಮಾಡುವಾಗ ನಾನು ಯಾವತ್ತೂ ಆಗಿರಲಿಲ್ಲ..!

ಒಮ್ಮೆ ಹೇಳಿಬಿಡಬೇಕು ಎಂದು ಅನಿಸಿತು..

ಅಪ್ಪ… ರಂಗಸ್ಥಳದಲ್ಲಿ ನಿಮ್ಮ ಮಗ ರಾಮನೂ ಅಲ್ಲ, ಕೃಷ್ಣನೂ ಅಲ್ಲ. ಅವನೂ ಕೂಡ ನಿಮ್ಮಿಷ್ಟದ ಮೈಸಾಸುರನೇ ಎಂದು..

ಆದರೆ ಅದಕ್ಕೂ ಮೊದಲು ಅಪ್ಪನೇ ಹೇಳಿಬಿಟ್ಟರು..

“ಮಹೇಶ.. ನನಗಾಗಿ ಒಮ್ಮೆ ನೀನು ಮೈಸಾಸುರನಂತೆ ಪಾತ್ರ ಮಾಡಿ ತೋರಿಸಬಲ್ಲೆಯಾ.. ಬೇಕಾದರೆ ನಾನೇ ನಿನ್ನೆದುರು ಮಾಲಿನಿ ಆಗಿ ಬಿಡುವೆ..”

ಆ ಕ್ಷಣ ಅದೆಷ್ಟು ಖುಷಿ ಆಗಿತ್ತು ಗೊತ್ತಾ..

ವರ್ಷದ ಹೆಚ್ಚಿನ ದಿನ ಮೈಸಾಸುರನಂತೆ ಮೆರೆದಾಡಿದವನಿಗೆ ಮೊದಲ ಬಾರಿಗೆ ಮನೆಯಲ್ಲಿಯೇ ಅಪ್ಪನೆದುರು ಮೈಸಾಸುರನಾಗುವ ಅವಕಾಶ..

ಅಪ್ಪನ ಇಷ್ಟದ ಮೈಸಾಸುರನಾಗಲು ನಾನು ಆ ಕ್ಷಣವೇ ನೆಲದ ಮೇಲೆ ಕೋಣನಂತೆ ಕುಳಿತೆ.

ಅಪ್ಪ ಹೇಳಿದರು..

ಏನು ಮಹೇಶ… ಮೈಸಾಸುರ ಇಷ್ಟು ಹತ್ತಿರದಿಂದ ಬರುತ್ತಾನೆಯೇ…?

ಹೋಗು.. ಮನೆಯ ಹೊರಗೆ ಹೋಗಿ ಕುಳಿತುಕೋ.

ನಾನು “ಬಾ ಮಗನೇ.. ಮಹಿಷಾ…” ಎಂದು ಇಲ್ಲಿಂದಲೇ ಕರೆಯುತ್ತೇನೆ..

ಆಗ ನೀನು ಮೈಸಾಸುರನಂತೆ ನೆಲದಲ್ಲಿ ಹೆಜ್ಜೆಯೂರುತ್ತಾ ನನ್ನಲ್ಲಿಗೆ ಬಾ.. ಎಂದು ಹೇಳಿದರು ಅಪ್ಪ.

ನಾನು ಮನೆಯ ಹೊರಗೆ ಹೋದೆ..

ಅಪ್ಪ “ಮಹಿಷಾ… ಬಾ ಮಗನೇ, ಬಾ.. ಇತ್ತ ಬಾ..” ಎಂದು ಮಾಲಿನಿಯಂತೆಯೇ ಅತೀ ನೋವಿನಿಂದ ಕರೆದರು.

ನಾನು ನೆಲದಲ್ಲಿ ಎರಡು ಕೈಯನ್ನು ಊರಿ ನಾಲ್ಕು ಕಾಲಿನ ಕೋಣನಂತೆ “ವಾಂಯ್….. ವಾಂಯ್” ಶಬ್ಧ ಮಾಡುತ್ತಾ.. ಮನೆಯ ಹೊರಗಿನಿಂದ ಮನೆಯ ಒಳಗೆ ಹೋಗುತ್ತಾ…

“ಅಂ…. ಮ್ಮ್ ಮ್ಮಾ… ಅಮ್ಮ.. ಮ್ಮಾ.. ಕಣ್ಣೀರು ಧಾರಾಕಾರವಾಗಿ ಸುರಿಸುತ್ತಾ ಇದ್ದೀರಲ್ಲಮ್ಮಾ…

ಯಾಕಮ್ಮಾ ಅಂ…. ಮ್ಮ್ ಮ್ಮ… ಅಮ್ಮ.. ಮ್ಮಾ.. ಏನಾಯಿತು ಅಮ್ಮ.. ಮ್ಮಾ

ಹೇಳಿ…. ಆದೇನು ಆಯಿತು ಇಂದು ನಿಮಗೆ??

ನಿಮ್ಮ ಮುಖ ಬಾಡಿ ಹೋಗಿದೆ. ಹಣೆಯಲ್ಲಿ ನಿತ್ಯ ರಾರಾಜಿಸುತ್ತಿದ್ದ ಆ ದಿವ್ಯ ಕುಂಕುಮವು ಕೂಡ ಅಳಿಸಿ ಹೋಗಿದೆ!

ಯಾರಿಂದ ಆಪತ್ತು? ಹೇಳಮ್ಮಾ.. ನಿಮ್ಮ ಮಗ ಮಹಿಷ ಬಂದಿರುವನು!!” ಎಂದು ಮೈಸಾಸುರನಂತೆಯೇ ಹೇಳಿದೆ.

ಆ ದಿನ ಅಪ್ಪನಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಖುಷಿಯಿಂದ ಚಪ್ಪಾಳೆಯನ್ನೇ ತಟ್ಟಿಬಿಟ್ಟಿದ್ದರು ಅವರು.

ಆ ನಂತರ ತುಂಬಾ ಸಲ ನಾವಿಬ್ಬರು ನಮ್ಮಿಷ್ಟದ ಎಲ್ಲಾ ಅರ್ಥಗಾರಿಕೆ ಮುಗಿದ ಮೇಲೆ ಅಪ್ಪನ ಆಸೆಯಂತೆ ಮಾಲಿನಿ-ಮೈಸಾಸುರ ಆಗುತ್ತಿದ್ದೆವು…

ಒಂದು ದಿನ ಅಪ್ಪ ಹೇಳಿದರು.. “ಹೇಗೋ ಯಕ್ಷಗಾನದಲ್ಲಿಯೇ ಇದ್ದೀಯಾ.. ಒಂದು ದಿನ ಯಾವಾಗಲಾದರೂ ಮೈಸಾಸುರನ ವೇಷ ಭೂಷಣ ತಂದು ವೇಷ ಹಾಕಿಯೇ ಪಾತ್ರ ಮಾಡಿ ತೋರಿಸು ಮಹೇಶ.. ಅದೊಂದನ್ನು ನೋಡುವ ಆಸೆ ನನಗಿದೆ..

ಅಷ್ಟು ಮಾತ್ರವಲ್ಲ. ನೀನು ಮೈಸಾಸುರನಾಗಿ ಬಹಳ ಚೆನ್ನಾಗಿ ಪಾತ್ರ ಮಾಡಬಲ್ಲೆ ಮಹೇಶ. ನಿಜ ಹೇಳಬೇಕೆಂದರೆ ರಾಮನಿಗಿಂತ ನಿನಗೆ ಮೈಸಾಸುರನೇ ಅಧಿಕವಾಗಿ ಒಪ್ಪುತ್ತಾನೆ. ಅಂದ ಹಾಗೆ ಇಲ್ಲಿ ಯಾವ ಪಾತ್ರವೂ ಮೇಲಲ್ಲ, ಯಾವ ಪಾತ್ರವೂ ಕೀಳಲ್ಲ. ಅದು ಕೇವಲ ಪಾತ್ರ ಎಂದು ತಿಳಿದು ಆ ಪಾತ್ರಕ್ಕೆ ನಾವು ನ್ಯಾಯ ಒದಗಿಸಬೇಕು ಅಷ್ಟೇ. ಅದು ಬೇಕಿದ್ದರೆ ದೇವರ ಪಾತ್ರವೇ ಇರಲಿ.. ಇಲ್ಲ ಅಸುರ ಪಾತ್ರವೇ ಇರಲಿ..

ಸಾಧ್ಯ ಆದರೆ ಒಂದು ದಿನ ನೀನು ಕೂಡ ರಂಗಸ್ಥಳದಲ್ಲಿಯೂ ಮೈಸಾಸುರನಾಗಿ ವೇಷ ಹಾಕು ಮಹೇಶ. ಖಂಡಿತವಾಗಿಯೂ ನೀನು ಅದನ್ನು ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ. ಆದರೆ ಅದಕ್ಕಿಂತಲೂ ಮೊದಲು ನನ್ನೆದುರಿಗೆ ಒಮ್ಮೆ ನೀನು ಆ ರೀತಿ ವೇಷ ಹಾಕಿ ನಿಜ ಮೈಸಾಸುರನಂತೆ ಆರ್ಭಟಿಸಬಲ್ಲೆಯಾ…?” ಅಪ್ಪ ಕೇಳಿಯೇ ಬಿಟ್ಟರು!

ನಾನು ಇಷ್ಟು ದಿನ ಮಾಡಿದ್ದು ಅದೊಂದೇ ಪಾತ್ರವನ್ನು.. ಆದ್ದರಿಂದ ಅಪ್ಪನಿಗೆ ನನ್ನ ಮೈಸಾಸುರ ಅದು ಹೇಗೆ ಇಷ್ಟ ಆಗದೇ ಇರುತ್ತಾನೆ…

ಆಯಿತು ಅಪ್ಪ.. ನಾಳೆ ಊರಿನಲ್ಲಿಯೇ ಆಟ ಇದೆ. ನೀವು ಏನೂ ಚಿಂತೆ ಮಾಡಬೇಡಿ. ಬೇಕಾದರೆ ನಾನು ಮೈಸಾಸುರನಂತೆ ವೇಷ ಹಾಕಿಕೊಂಡೇ ಅಲ್ಲಿಂದ ನೇರವಾಗಿ ಇಲ್ಲಿಗೆ ಬರುವೆ.. ಅಂದು ಬಿಟ್ಟೆ.

ಅಪ್ಪ ಬಹಳ ಸಂತೃಪ್ತಿಯಾಗಿ ನಕ್ಕರು..

ಮರುದಿನ ಆಟದ ದಿನ..

ಅದೇ ಪ್ರಸಿದ್ಧ ದೇವಿ ಮಹಾತ್ಮೆ ಪ್ರಸಂಗ.

ನಾನು ಆಟ ನಡೆಯುವಲ್ಲಿಯೇ ಇದ್ದೆ.

ಮನೆಯಲ್ಲಿ ಅಪ್ಪ ಮತ್ತು ಪಕ್ಕದ ಮನೆಯ ರಮೇಶನ ಅಪ್ಪ ಸುಂದರಣ್ಣ ಇದ್ದರು.

ರಾತ್ರಿಯ ಒಂದು ಗಂಟೆಯ ಸಮಯ.

ನಾನು ಮೈಸಾಸುರನಂತೆ ಬಣ್ಣ ಹಚ್ಚಿಕೊಂಡು, ವೇಷ ಭೂಷಣ ಎಲ್ಲ ಹಾಕಿಕೊಂಡು, ತಲೆಗೆ ದೊಡ್ಡ ಕೊಂಬು ಕಟ್ಟಿಕೊಂಡು ರಂಗಸ್ಥಳದಿಂದ ಅತೀ ದೂರದಲ್ಲಿ ಅರ್ಧ ಕಿಲೋಮೀಟರ್ ಆಚೆ ನಿಂತಿದ್ದೆ.

ಆಟವನ್ನು ದೇವರಂತೆ ಪೂಜಿಸುವ ನಾನು ಅಪ್ಪ ಹೇಳಿದಂತೆ ಅದರ ಪಾವಿತ್ರ್ಯತೆಯನ್ನು ಎಂದಿಗೂ ಗೌರವಿಸಿದವನೇ. ಆಟ ಸೇರಿದ ಮೇಲೆ ಸಂಪೂರ್ಣ ಸಸ್ಯಹಾರಿ ಆಗಿ ಹೋಗಿದ್ದೆ. ಕುಡಿತ, ಬೀಡಿ ಎಂದಿಗೂ ನನ್ನಲ್ಲಿ ಇರಲಿಲ್ಲ.

ನಾನು ಮೈಸಾಸುರನಾಗಿ ಅಬ್ಬರಿಸಿ ಬೊಬ್ಬಿರಿದು ರಂಗಸ್ಥಳದತ್ತ ನಡೆಯಲು ಇನ್ನೂ ಕೇವಲ ಐದು ನಿಮಿಷ ಬಾಕಿ ಇತ್ತು ಅಷ್ಟೇ.

ಆಗಲೇ ಮೇಳದಲ್ಲಿ ನಮಗೆ ಸಹಾಯಕನಾಗಿದ್ದ ಸುರೇಶ ಅಲ್ಲಿಗೆ ಓಡಿಕೊಂಡು ಬಂದದ್ದು.

ಮಹೇಶಣ್ಣ… ಆಗದಿಂದ ನಿಮ್ಮ ಮೊಬೈಲ್ ಗೆ ಪದೇ ಪದೇ ಕರೆ ಬರುತ್ತಾನೇ ಇದೆ. ಇಲ್ಲಿಯವರೆಗೆ ಹತ್ತು ಕರೆಗಳು ಬಂದಿದೆ.. ಏನೋ ಅರ್ಜೆಂಟ್ ಇರಬೇಕು.. ಅಂದ ನನ್ನ ಕೈಗೆ ಮೊಬೈಲ್ ಕೊಡುತ್ತಲೇ.

ನಮ್ಮೆಲ್ಲಾ ಕಲಾವಿದರ ಮೊಬೈಲ್ ಅವನಲ್ಲಿಯೇ ಇರುವುದು.

ಮೊಬೈಲ್ ಕೈಗೆ ತೆಗೆದುಕೊಂಡು ನೋಡಿದೆ.

ಪಕ್ಕದ ಮನೆಯ ರಮೇಶ ಇನ್ನೂ ಕರೆ ಮಾಡುತ್ತಲೇ ಇದ್ದ.

ನನ್ನ ಮೊಬೈಲ್‌ಗೆ ಬಂದ ಕರೆಯನ್ನು ಸ್ವೀಕರಿಸಿದವನೇ… “ಏನು ರಮೇಶ… ಏನಾಯಿತು?” ಎಂದು ಕೇಳಿದೆ.

ರಮೇಶ ನಡುಗುವ ಧ್ವನಿಯಲ್ಲಿ ಹೇಳಿದ್ದ..

ಮಹೇಶ ಅದು….

ಅದೇ ಏನದು ಹೇಳು ರಮೇಶ… ಮತ್ತೆ ಕೇಳಿದ್ದೆ ನಾನು.

“ಅದು.. ಅದು.. ನಿನ್ನ ಅಪ್ಪ ವಸಂತಣ್ಣ ಇನ್ನಿಲ್ಲ ಮಹೇಶ….

ಹೋಗಿ ಬಿಟ್ಟರು..!!

ಹೃದಯಾಘಾತವಾಗಿದೆ ಅವರಿಗೆ..!

ಕೊನೆಯ ಕ್ಷಣದಲ್ಲಿ ನಿನ್ನ ಹೆಸರನ್ನೇ ಜೋರಾಗಿ ಒಮ್ಮೆ ಕೂಗಿದ್ದರಂತೆ..!

ಬೇಗ ಬಾ ಮಹೇಶ..

ಆದಷ್ಟು ಬೇಗ ಮನೆಗೆ ಬಾ…

ಎಲ್ಲರೂ ನಿನ್ನನೇ ಕಾಯುತ್ತಿದ್ದೇವೆ.. ”

ಎಂದು ಹೇಳಿ ಪೋನ್ ಕಟ್ ಮಾಡಿಯೇ ಬಿಟ್ಟ ರಮೇಶ.

ಒಂದು ಕ್ಷಣ ಸುಧೀರ್ಘ ಮೌನಕ್ಕೆ ಜಾರಿದ್ದೆ ನಾನು!!

ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ.

ಸುರೇಶ ಕೇಳಿದ – ಮಹೇಶಣ್ಣ… ಏನಾದರೂ ಸಮಸ್ಯೆ ಆಗಿದೆಯಾ…?

ಏನಿಲ್ಲ.. ಅಂದೆ..!

ಆ ಕ್ಷಣವೇ ಗರ್ನಲ್, ಕದೋನಿ(ಸಿಡಿಮದ್ದು)ಜೋರಾಗಿ ಸಿಡಿದವು.

ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಮೈಸಾಸುರ ರಂಗಸ್ಥಳದತ್ತ ಹೊರಡಲೇ ಬೇಕು…!

ಎಲ್ಲವನ್ನೂ ಬಿಟ್ಟು ನಾನು ಮನೆಗೆ ಹೋಗುವಂತಿಲ್ಲ..

ಮನೆಗೆ ಹೋದರು ನನ್ನ ಅಪ್ಪ ಎದ್ದು ಬರುವುದಿಲ್ಲ..!!

ಕೈಯಲ್ಲಿದ್ದ ತೆಂಗಿನ ಗರಿಗಳ ಸೂಟೆಗೆ(ಪಂಜು) ಬೆಂಕಿ ಹಚ್ಚಿ ರಂಗಸ್ಥಳದತ್ತಲೇ ಯಾಂತ್ರಿಕವಾಗಿ ನಡೆದೆ ನಾನು..!!

ಅಲ್ಲಲ್ಲಿ ಮುಳಿ ಹುಲ್ಲಿಗೆ ಬೆಂಕಿ ಹಾಕಿ ಮೈಸಾಸುರನ ಅಬ್ಬರದ ಪ್ರವೇಶಕ್ಕೆ ವ್ಯವಸ್ಥೆ ಕೂಡ ಮಾಡಿದ್ದರು…

ಕೈಯಲ್ಲಿದ್ದ ಉರಿಯುವ ಸೂಟೆಗೆ ರಾಳ ಹಾಕಿದಾಗ ಸೂಟೆಯಲ್ಲಿ ಮತ್ತಷ್ಟು ಬೆಂಕಿ… ಸೂಟೆ ಮತ್ತಷ್ಟು ಬೆಂಕಿ ಚೆಲ್ಲುತ್ತಾ ತೀವ್ರವಾಗಿ ಉರಿಯತೊಡಗಿತು..

ಆದರೆ ಅಲ್ಲಿ ನಿಜವಾಗಿಯೂ ಬೆಂಕಿಯಲ್ಲಿ ಒಳಗೊಳಗೆ ಸುಟ್ಟು ಹೋಗುತ್ತಿದ್ದವನು ಮಾತ್ರ ನಾನೇ..!!

ನನ್ನ ಹೃದಯ ನೋವಿನಿಂದ ಧಗಧಗ ಎಂದು ಅದರಷ್ಟಕ್ಕೆ ದಹಿಸುತ್ತಲೇ ಇತ್ತು!

ಆದರೂ ಯಾವುದನ್ನೂ ತೋರಿಸದೇ, ಯಾರಿಗೂ ಹೇಳದೇ..

ಕೊನೆಗೂ ಅಬ್ಬರಿಸುತ್ತಲೇ ರಂಗಸ್ಥಳಕ್ಕೆ ಬಂದೆ ನಾನು..!!

ಪ್ರಸಂಗ ಮುಂದುವರಿಯಿತು.. ಮತ್ತೆ ಒಂದು ಗಂಟೆಗಳ ಕಾಲ… ಅಮ್ಮ ಮಾಲಿನಿಯನ್ನು ನಾನು ಮೈಸಾಸುರನಾಗಿ ಬಹಳಷ್ಟು ಸಂತೈಸಿದೆ. ಆ ನಂತರ ತಪಸ್ಸು ಮಾಡಲು ಹೋದೆ.. ವರವನ್ನೂ ಸಹ ಪಡೆದೆ..!

ಪುನಃ ತಂದೆಯನ್ನು ಕೊಂದ ದೇವತೆಗಳೊಂದಿಗೆ ಯುದ್ಧಕ್ಕೆ ಹೊರಟು ನಿಂತೆ..

ಇಂದ್ರ ಚಂದ್ರ ಎಲ್ಲಾ ಆದಿತ್ಯರನ್ನೂ ಸೋಲಿಸಿದೆ..

ಕೊನೆಯಲ್ಲಿ ದೇವಿಯೇ ಸಿಂಹವನ್ನು ಏರಿ ನನ್ನೆದುರು ಬಂದಳು..

ನನ್ನನ್ನು ವಧೆ ಮಾಡಿಯೇ ಬಿಟ್ಟಳು!!

ಕೊನೆಗೂ ಕಥೆಯಲ್ಲಿ ನನ್ನೊಳಗಿನ ಮೈಸಾಸುರ ಆ ರಂಗಸ್ಥಳದಲ್ಲಿ ಸತ್ತು ಮಲಗಿ ಬಿಟ್ಟ!

ಆದರೆ ನನ್ನೊಳಗಿನ ಮಹೇಶ ಇನ್ನು ಜೀವಂತವಾಗಿಯೇ ಇದ್ದ.

ಮನೆಯಲ್ಲಿ ಸತ್ತು ಮಲಗಿದ್ದ ನನ್ನ ಅಪ್ಪ ಮತ್ತೆ ನೆನಪಾಗಿದ್ದರು!

“ಒಮ್ಮೆ ನನಗಾಗಿ ಮೈಸಾಸುರ ಆಗುವೆಯಾ ಮಹೇಶ… ಕೊನೆಯದಾಗಿ ಅದೊಂದನ್ನು ನೋಡುವ ಆಸೆ ನನಗಿದೆ” ಎಂದು ಅವರು ಹೇಳಿದ್ದ ಆ ಮಾತೇ ಕಿವಿಯಲ್ಲಿ ಮತ್ತೆ ಮತ್ತೆ ಗುಂಯ್ ಗುಡುತ್ತಿತ್ತು..

ದೇವಿಯಿಂದ ವಧೆ ಆದ ನಂತರ ಅಲ್ಲೇ ಕೆಳಗೆ ಬಿದ್ದಿದ್ದ ನನ್ನ ಮೈಸಾಸುರನ ಕೊಂಬನ್ನು ಮತ್ತೆ ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ, ಆ ರಂಗಸ್ಥಳದಿಂದ ನಾನು ಓಡಿದೆ..

ಓಡಿದೆ…

ಓಡಿದೆ..

ಓಡಿದೆ…

ಮಾಲಿನಿಯನ್ನು ಕಾಣಲು ಬಹು ದೂರದಿಂದ ಬರುವ ಯಕ್ಷಗಾನದ ನಿಜ ಮೈಸಾಸುರನಂತೆಯೇ ನಾನು ಓಡುತ್ತಿದ್ದೆ..

ಏಕೆಂದರೆ ಮಾಲಿನಿ ಎಂಬ ನನ್ನ ಅಪ್ಪನೇ ನನ್ನನ್ನು.. “ಮಗನೇ ಬಾ…” ಎಂದು ಬಹು ದೂರದಿಂದ ನನ್ನನ್ನು ಕರೆದಂತೆ ನನಗೆ ಭಾಸವಾಗುತ್ತಿತ್ತು..

ಕೊನೆಗೆ ರಸ್ತೆ ಪಕ್ಕ ಒಂದು ರಿಕ್ಷಾ ಸಿಕ್ಕಿತು.

ಕೈ ಅಡ್ಡ ಹಾಕಿದೆ..

ಮೈಸಾಸುರ ವೇಷದಲ್ಲಿದ್ದ ನಾನು ಅವನ ಕೊಂಬನ್ನು ಕೈಯಲ್ಲಿ ಹಿಡಿದುಕೊಂಡು ಆ ರಿಕ್ಷಾದಲ್ಲಿ ಕುಳಿತೆ. ಆದರೆ ಮನಸ್ಸು ಮಾತ್ರ ನನ್ನ ಮನೆಯ ಅಂಗಳದಲ್ಲಿಯೇ ಇತ್ತು.

ರಿಕ್ಷಾ ಮನೆಯವರೆಗೂ ಹೋಗುವುದಿಲ್ಲ.

ಒಂದು ಚಿಕ್ಕ ಗುಡ್ಡ ಹತ್ತಿ ಇಳಿಯಬೇಕು.

ರಿಕ್ಷಾದಿಂದ ಇಳಿದವನೇ ಮತ್ತೆ ಓಡಿದೆ.

ಆ ರಾತ್ರಿ ಮೂರು ಗಂಟೆಗೆ ನಾನು ಆ ಗುಡ್ಡದಲ್ಲಿ ಮಾಲಿನಿಯ ಮಗ ಮೈಸಾಸುರನಂತೆ ಓಡುತ್ತಲೇ ಇದ್ದೆ

ಓಡಿ.. ಓಡಿ.. ಕೊನೆಗೂ ಮನೆ ತಲುಪಿದೆ.

ಮನೆಯ ಒಳಗೆ ಅಪ್ಪನನ್ನು ನೆಲದ ಮೇಲೆ ಮಲಗಿಸಿದ್ದರು ರಮೇಶ ಮತ್ತು ಸುಂದರಣ್ಣ..

ರಮೇಶನ ಹೆಂಡತಿ ಮಕ್ಕಳು ಕೂಡ ಅಲ್ಲೇ ಇದ್ದರು.

ಅಪ್ಪ ಹೇಳಿದ್ದು ಮತ್ತೆ ನೆನಪಾಯಿತು..

“ಒಂದು ದಿನ ಯಾವಾಗಲಾದರೂ ಮೈಸಾಸುರನ ವೇಷ ಭೂಷಣ ತಂದು ವೇಷ ಹಾಕಿ ಪಾತ್ರ ಮಾಡಿ ತೋರಿಸು ಮಹೇಶ.. ಅದೊಂದನ್ನು ನೋಡುವ ಆಸೆ ನನಗಿದೆ. ಮಾತ್ರವಲ್ಲ.ನೀನು ಮೈಸಾಸುರನಾಗಿ ಬಹಳ ಚೆನ್ನಾಗಿ ಪಾತ್ರ ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ.. ನಿಜ ಹೇಳಬೇಕೆಂದರೆ ರಾಮನಿಗಿಂತ ನಿನಗೆ ಮೈಸಾಸುರನೇ ಅಧಿಕವಾಗಿ ಒಪ್ಪುತ್ತಾನೆ..”

ಕೈಯಲ್ಲಿ ಇದ್ದ ಮೈಸಾಸುರನ ಕೊಂಬನ್ನು ಮತ್ತೆ ಗಟ್ಟಿಯಾಗಿ ತಲೆಗೆ ಕಟ್ಟಿಕೊಂಡೆ..!

ಒಳಗೆ ಅಪ್ಪನ ಬಳಿ ನಡೆದೆ.

ಮೈಸಾಸುರನ ತಾಯಿ ಮಾಲಿನಿಗೆ ಹೇಳುವಂತೆಯೇ.. ಅಮ್ಮಾ… ಎಂದು ಹೇಳಲು ಮನಸ್ಸು ಬರಲೇ ಇಲ್ಲ ನನಗೆ.

“ಅಪ್ಪಾ….” ಎಂದು ಹೇಳಿದೆ.

ಕೂಗಿ ಕೂಗಿ ಹೇಳಿದೆ..!

ಕಣ್ಣು ಬಹಳಷ್ಟು ಒದ್ದೆಯಾಗಿತ್ತು..!

ಆದರೆ ನನ್ನ ಅಪ್ಪ ಮಾತಾಡಲೇ ಇಲ್ಲ ..!!

ಅಪ್ಪ ಹೇಳಿದ್ದ ಇನ್ನೂ ಒಂದು ಮಾತು ಮತ್ತೆ ನೆನಪಾಯಿತು..

“ಮೈಸಾಸುರ ಯಾವತ್ತಾದರೂ ಇಷ್ಟು ಹತ್ತಿರದಿಂದ ಬರುತ್ತಾನಾ ಮಹೇಶ..

ಹೋಗು.. ಮನೆಯ ಹೊರಗೆ ಹೋಗಿ ಕುಳಿತುಕೋ..

ನಾನು ಮಗನೇ ಮಹಿಷಾ.. ಬಾ.. ಎಂದು ಕರೆಯುತ್ತೇನೆ.. ಆಗ ನೀನು ಅಮ್ಮಾ.. ಎನ್ನುತ್ತಾ ಒಳಗೆ ಬರಬೇಕು…”

ನಾನು ಮತ್ತೆ ಮನೆಯ ಹೊರಗೆ ನಡೆದೆ.

ಕಣ್ಣಲ್ಲಿ ನೀರು ನನಗರಿವಿಲ್ಲದೇ ಹಾಗೇ ಧಾರಾಕಾರವಾಗಿ ಹರಿಯುತ್ತಲೇ ಇತ್ತು…

ಸುಂದರಣ್ಣ, ರಮೇಶ ಮತ್ತು ಅವನ ಹೆಂಡತಿ ಮಕ್ಕಳು ನಾನು ಏನು ಮಾಡುತ್ತಿದ್ದೇನೆ ಎಂದು ನನ್ನನ್ನೇ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದರು..

ಮತ್ತೆ ಮನೆಯ ಹೊರಗೆ ಹೋಗಿ ಕುಳಿತರೂ ನಾನು, ಮನೆಯ ಒಳಗಡೆ ಸತ್ತು ಮಲಗಿದ್ದ ನನ್ನ ಅಪ್ಪ, “ಮಗನೇ ಮಹಿಷಾ.. ಬಾ..” ಎಂದು ನನ್ನನ್ನು ಕರೆಯೇ ಇಲ್ಲ….!!

ಆದರೆ ಮನಸ್ಸಿಗೆ ಮಾತ್ರ ಹಾಗೆಯೇ ಕರೆದಂತೆಯೇ ಆಯಿತು…

ಬಾರಿ ಬಾರಿ ಕರೆದಂತೆ ಆಯಿತು..!!

ಆದರೆ ಮಹೀಷಾ ಎಂದು ಅಲ್ಲ…

“ಮಗನೇ ಮಹೇಶ… ಬಾ” ಎಂದು ಕರೆದಂತೆ ಭಾಸವಾಯಿತು!!

ಈಗಲೂ ಅಮ್ಮಾ… ಎಂದು ಹೇಳಲಿಲ್ಲ ನಾನು..

ಬದಲಿಗೆ ಕಣ್ಣಲ್ಲಿ ಮತ್ತಷ್ಟು ನೀರು ತುಂಬಿಕೊಂಡು ಅಲ್ಲಿದ್ದ ಎಲ್ಲರಿಗೂ ಕೇಳುವಂತೆ ಜೋರಾಗಿ ನಾನು ನನಗರಿವಿಲ್ಲದೇ ಹೇಳಿ ಬಿಟ್ಟಿದ್ದೆ …

“ಅಪ್ಪಾಆಆಆ …

ನೋಡು.. ನಾನು ಬಂದಿರುವೆ..

ನಿನ್ನ ಮಗ ನಾನು ಮಹೇಶ ಬಂದಿರುವೆ….

ನನಗಾಗಿ ಎದ್ದು ಬಂದು ನನ್ನಲ್ಲಿ ಸ್ವಲ್ಪವೂ ಮಾತಾಡುವುದಿಲ್ಲವೇ ಅಪ್ಪಾ…!!…”

ಅದನ್ನು ಕೇಳಿ ಅಪ್ಪನ ಪಕ್ಕವೇ ಕೂತಿದ್ದ ಸುಂದರಣ್ಣ ಗಳ ಗಳನೇ ಎಂದು ಅತ್ತೇ ಬಿಟ್ಟರು!!

ನನ್ನ ಮನಸ್ಸನೊಳಗಿನ ಮೈಸಾಸುರ ಮಾತ್ರ ಅತೀ ವೇದನೆಯಿಂದ..

ವಾಂಯ್…. ವಾಂಯ್… ಎಂದು ಹೂಂಕರಿಸುತ್ತಲೇ ಇದ್ದ..!!

ಕೊನೆಗೂ ಅಪ್ಪ ಎದ್ದು ಬರಲೇ ಇಲ್ಲ!!

ನನ್ನ ಮೈಸಾಸುರ ಅಬ್ಬರಿಸಲೇ ಇಲ್ಲ!!