ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ. ಇಂಗ್ಲಿಷರು ಜಗತ್ತಿನ ಮೂರನೆಯ ಒಂದು ಭಾಗ ಆಳಿದವರು, ಹೋಗಿಬಂದಲ್ಲೆಲ್ಲ ಪರಿಸ್ಥಿತಿ ಬಿಗಡಾಯಿಸಿ ಬಂದಿದ್ದಾರೆ, ಇವರು ಒಂದು ಕೆಲಸ ಸುಸೂತ್ರ ಮಾಡಿದ್ದಿದೆಯಾ ಹೇಳು ಎಂದು ಕೇಳುತ್ತಾನೆ. 
ಯೋಗೀಂದ್ರ ಮರವಂತೆ ಅಂಕಣ.

 

ಇಲ್ಲೊಬ್ಬ ಅಜ್ಜ. ಹುಟ್ಟಿನಲ್ಲಿ ಐರಿಷ್. ಐರಿಷ್ ಅಂದರೆ ಏನೆಲ್ಲವೂ ಇರಬಹುದು. ಐರಿಷ್ ಕಾಲುವೆ, ಗಿನ್ನೆಸ್ ಬೀಯರ್, ಐರಿಷ್ ವಿಸ್ಕಿ, ಐರಿಷ್ ಭಾಷೆ, ಐರಿಷ್ ಜನರ ಇಂಗ್ಲಿಷ್ ಉಚ್ಚಾರ, ಆಸ್ಕರ್ ವೈಲ್ಡ್ ನ ಕಾವ್ಯ, ಐರಿಷ್ ಯೋಚನೆ ಮತ್ತೆ ಇವೆಲ್ಲವುಗಳಂತೆಯೇ ಈತ, ಐರಿಷ್ ಅಜ್ಜ. ಆಗಾಗ ಮಾತಿಗೂ ಸಿಗುವ ಈತ ನನಗೆ ಕತೆ, ಅನುಭವ, ಗೊಣಗಾಟ ಕೊಡುತ್ತಾನೆ, ಎಲ್ಲವೂ ಪುಕ್ಕಟೆ.

ಈತ ಹುಟ್ಟಿದ್ದು ಐರ್ಲೆಂಡ್ ಅಲ್ಲಿ, ಕೆಲಸ ಹುಡುಕಿಕೊಂಡು ಎಷ್ಟೋ ಜನರು ವಿಮಾನ ಹತ್ತಿ ಇಂಗ್ಲೆಂಡ್ ಗೆ ಬಂದ ಹಾಗೆ ಈತನೂ ಒಂದಾನೊಂದು ಕಾಲದಲ್ಲಿ ಬಂದಿದ್ದಾನೆ. ವಿಮಾನದಲ್ಲಿ ಇವನ ಹುಟ್ಟಿದ ಊರಿನಿಂದ ಈಗ ಇರುವ ಇಂಗ್ಲೆಂಡ್ ನ ಬ್ರಿಸ್ಟಲ್ ಗೆ ಬರೇ ಒಂದು ತಾಸು. ಇದೀಗ ಹಣ್ಣು ಮುದುಕನಾಗಿರುವ ಈತನ ಮಾತಿನಲ್ಲಿ ಕತೆಯಲ್ಲಿ ಇಲ್ಲೇ ಉದ್ಯೋಗ ಹಿಡಿದು “ಸೆಟಲ್” ಆಗಿರುವ ಇವನ ಸಮಸ್ತ ಪರಿವಾರದ ಕತೆಗಳೂ ಬರುತ್ತಿರುತ್ತವೆ. ಮಕ್ಕಳ ಸುದ್ದಿ ಹೇಳುವಾಗ ಮೊಮ್ಮಕ್ಕಳ ವಿಷಯ ಹೇಳುತ್ತಾನೆ ಮೊಮ್ಮಕ್ಕಳ ಪರಿಚಯ ಹೇಳುವಾಗ ಮಕ್ಕಳು ಸಣ್ಣ ಇದ್ದಾಗ ಏನು ಮಾಡುತ್ತಿದ್ದರು ಎಂದೂ ಹೇಳುತ್ತಾನೆ. ನಿನ್ನೆ ಜಿಮ್ ಹೋಗಿ ವ್ಯಾಯಾಮ ಮಾಡಿದ್ದು ಅಲ್ಲಿ ಐದುನೂರು ಕಿಲೊಕ್ಯಾಲೋರಿ ಕರಗಿಸಿದ್ದು, ಮತ್ತೆ ಮುಂದಿನ ವಾರ ಕುದುರೆ ರೇಸ್ ನೋಡಲು ಹೋಗುವುದು ಎಲ್ಲ ವಿವರಗಳೂ ಸುಲಲಿತವಾಗಿ ಲಭ್ಯ ಇವನ ಮಾತುಗಳಲ್ಲಿ.

ಇವನ ಅನುಭವದ ಕಡತದಲ್ಲಿ ಈಗಿನ ನಿನ್ನೆಯ ಕತೆಗಳಲ್ಲದೇ ಹತ್ತು ಇಪ್ಪತ್ತು ವರ್ಷಗಳಿಂದ ಹಿಡಿದು ಐವತ್ತು ಅರವತ್ತು ವರ್ಷಗಳಷ್ಟು ಹಿಂದಿನ ಕತೆಗಳೂ ಬರುತ್ತವೆ. ಮತ್ತೆ ಇವು ಯಾವುವೂ ಕ್ರಮದಲ್ಲಿ ಬರುವುದಿಲ್ಲವಾದ್ದರಿಂದ ಜೋಡಿಸಿಕೊಳ್ಳುವ ಹೊಣೆ ಕೇಳುವವರದು. ಇಸ್ಪೀಟು ವಾಲೆಗಳನ್ನು ಕಲಸಿ ಎಸೆದ ಮೇಲೆ, ಆಟಗಾರನೇ ಜೋಡಿಸಿಕೊಂಡು ಸೋಲೋ ಗೆಲುವೋ ನಿರ್ಧಾರವಾದಂತೆ. ಈತ ಮನಸ್ಸು ಬಂದಂತೆ ಕಲಸಿ ಎಸೆವ ಕತೆಗಳ ಸುದ್ದಿಗಳ ಇಸ್ಪೀಟು ವಾಲೆಗಳು, ಅವುಗಳನ್ನು ಕಿವಿಯಲ್ಲಿ ಹೆಕ್ಕಿದ ಮನಸ್ಸಲ್ಲಿ ಜೋಡಿಸಿಕೊಂಡ ಪ್ರತಿಯೊಬ್ಬರಿಗೂ ಅವರವರದೇ ಕತೆ ಸಿಗುತ್ತದೆ. ಈತನ ಮಾತು ಕೇಳಿ ನಾವು ಕಟ್ಟಿಕೊಂಡ ಕತೆಗೆ ನಾವೇ ಜವಾಬ್ದಾರರು. ಇವನೊಂದು ಕತೆಯ ಕಣಜ.

“ಹಿಂದಿನ ಕಾಲ ಈಗಿನಂತಿರಲಿಲ್ಲ ” ಎಂದು ಹೇಳುವ ಈ ಜಗತ್ತಿನ ಕೋಟ್ಯಂತರ ಅಜ್ಜಂದಿರಲ್ಲಿ ಇವನೂ ಒಬ್ಬ. ಇವನು ಬದುಕಿದ್ದ ಕಾಲದಲ್ಲಿ ಇವನು ಬದುಕನ್ನು ನೋಡಿದ ಹೆಚ್ಚಿನ ಸಮಯದಲ್ಲಿ ನಾನು ಈ ಮನುಷ್ಯ ಜನ್ಮದಲ್ಲಿಯಂತೂ ಇರಲಿಲ್ಲವಾದ್ದರಿಂದ ಇವನು ಹೇಳಿದ್ದನ್ನೇ ಸದ್ಯಕ್ಕೆ ನಂಬಬೇಕಾದ ಅನಿವಾರ್ಯತೆಯಲ್ಲಿದ್ದೇನೆ. ಈ ದೇಶದಲ್ಲಿ “ಮೊದಲೆಲ್ಲ ಹೀಗಿತ್ತಂತೆ” ಎಂದ ಇವನ ಅನುಭವಗಳನ್ನೇ ಕದ್ದು ನಾನು ಬೇರೆಯವರಿಗೆ ಹಂಚುವುದೂ ಇದೆ. ಜಗತ್ತಿನ ಯಾವ್ಯಾವ ಮೂಲೆಯ ಶಾಂತಿ ಅಶಾಂತಿಗಳ ಬಗ್ಗೆ ಇವನ ಟಿಪ್ಪಣಿ ಇದ್ದೇ ಇರುತ್ತದೆ. ಹೇಳುತ್ತಾನೆ ಆಗೆಲ್ಲ ಇಷ್ಟು ಮೋಸ ಇರಲಿಲ್ಲ ಅಶಾಂತಿ ಇರಲಿಲ್ಲ ಎಂದು. ಆಗ ಹೇಗೆಂದು ಗೊತ್ತಿಲ್ಲದಿದ್ದರೂ ಈಗ ಹೀಗೆಂದು ಗೊತ್ತಿರುವುದರಿಂದ ಇವ ಹೇಳುವುದಕ್ಕೆ ಒಪ್ಪಿ ನಾನು ಹೂಂ ಹಾಕಿ ತಲೆ ಆಡಿಸುತ್ತೇನೆ.

ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ಯುದ್ಧ ದೊಂಬಿ ಗಲಾಟೆಗಳ ಬಗ್ಗೆ ಈತ ಪ್ರತಿಕ್ರಿಯೆ ಮಾಡದೆ ಬಿಡುವವನಲ್ಲ. ಇವನ ಪ್ರಕಾರ ಜಗತ್ತಿನ ೯೯ ಶೇಕಡಾ ಜನರು ಶಾಂತಿಪ್ರಿಯರು. ಉಳಿದ ೧% ಜನರಿಂದಲೇ ಜಗತ್ತಿನ ಶಾಂತಿ ಹಾಳಾಗಿರುವುದು. ಮತ್ತೆ ೯೯% ಜನರಲ್ಲಿ ಆತನನ್ನೂ ನನ್ನನ್ನೂ ಸೇರಿಸಿದ್ದೇನೆಂದೂ ಹೇಳಿ ನನಗೆ ಮನಃಶಾಂತಿ ನೀಡಿದ್ದಾನೆ. ಜಗತ್ತಲ್ಲಿ ಶಾಂತಿ ಕದಡುವವರ ಇವನ ಪಟ್ಟಿಯಲ್ಲಿ ಅಮೆರಿಕಾದ ನಾಯಕರು, ಲಂಡನ್ ನ ಸಂಸತ್ತಿನಲ್ಲಿ ಕುಳಿತವರು, ಪ್ರಪಂಚದ ಮೂಲೆ ಮೂಲೆಯಲ್ಲಿ ದೇಶ ಧರ್ಮ ಜಾತಿಗಳ ಹೆಸರಲ್ಲಿ ಜೀವ ತೆಗೆಯುವವರು ಎಲ್ಲರೂ ಬರುತ್ತಾರೆ. ಇನ್ನು ಭಾರತದ ಮಟ್ಟಿಗೆ, ಹೆಚ್ಚು ಕಡಿಮೆ ನಿಮ್ಮದು ಶಾಂತಿಪ್ರಿಯರ ನಾಡೇ ಎಂದೂ ಹೇಳುತ್ತಾನೆ. ಇಷ್ಟೆಲ್ಲಾ ಹೇಳುವಾಗ ಮೊದಲೇ ಕೆಂಪಾದ ಅವನ ಮುಖ ಇನ್ನೂ ಕೆಂಡವಾಗುತ್ತದೆ.

ಎಲ್ಲ ಧರ್ಮಗಳ ಮೂಲ ಸೆಲೆಯೂ ಮರ್ಮವೂ ಶಾಂತಿಯೇ. ಯಾವುದೇ ಧರ್ಮಕ್ಕೂ ಒಳ್ಳೆಯ ಹೆಸರೋ ಕೆಟ್ಟ ಹೆಸರೋ ಬರುವುದು ಅದನ್ನು ಆಚರಿಸುವ ಜನರಿಂದ ಹೊರತು ಆಯಾ ಧರ್ಮದ ಹೆಸರು ಮಾತ್ರದಿಂದಲೇ ಅಲ್ಲ ಎಂದು ನನಗೆ ತತ್ವದರ್ಶನ ಮಾಡಿಸುತ್ತಾನೆ. ಯಾವ ಸಂತ, ಸ್ವಾಮಿ, ಫಕೀರ, ಗುರು ಎನ್ನುವ ಬಿರುದೂ ಇಲ್ಲದ, ಅನುಯಾಯಿ ಶಿಷ್ಯ ಭೋಪರಾಕ್ ಗಳ ಹಂಗಿಲ್ಲದ ಯಾವುದೇ ದೇಶದ ನೆರೆದ ತಲೆಯ ಅಜ್ಜನಂತಹ ಅಜ್ಜನೊಬ್ಬನ ಆಧ್ಯಾತ್ಮ ಪ್ರವಚನಕ್ಕೆ ನಾನೂ ಬೆಚ್ಚಿ ಬೆರಗಾಗುತ್ತೇನೆ.

ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ. ಇಂಗ್ಲಿಷರು ಜಗತ್ತಿನ ಮೂರನೆಯ ಒಂದು ಭಾಗ ಆಳಿದವರು, ಹೋಗಿಬಂದಲ್ಲೆಲ್ಲ ಪರಿಸ್ಥಿತಿ ಬಿಗಡಾಯಿಸಿ ಬಂದಿದ್ದಾರೆ, ಇವರು ಒಂದು ಕೆಲಸ ಸುಸೂತ್ರ ಮಾಡಿದ್ದಿದೆಯಾ ಹೇಳು ಎಂದು ಕೇಳುತ್ತಾನೆ. ಆತನ ಶಬ್ದದಲ್ಲೇ ಹೇಳುವುದಾದರೆ, ಇಂಗ್ಲಿಷರು ಕಾಲಿಟ್ಟಲ್ಲೆಲ್ಲ “ಮೆಸ್” ಆಗಿದೆ.

ಇವನ ಅನುಭವದ ಕಡತದಲ್ಲಿ ಈಗಿನ ನಿನ್ನೆಯ ಕತೆಗಳಲ್ಲದೇ ಹತ್ತು ಇಪ್ಪತ್ತು ವರ್ಷಗಳಿಂದ ಹಿಡಿದು ಐವತ್ತು ಅರವತ್ತು ವರ್ಷಗಳಷ್ಟು ಹಿಂದಿನ ಕತೆಗಳೂ ಬರುತ್ತವೆ. ಮತ್ತೆ ಇವು ಯಾವುವೂ ಕ್ರಮದಲ್ಲಿ ಬರುವುದಿಲ್ಲವಾದ್ದರಿಂದ ಜೋಡಿಸಿಕೊಳ್ಳುವ ಹೊಣೆ ಕೇಳುವವರದು. ಇಸ್ಪೀಟು ವಾಲೆಗಳನ್ನು ಕಲಸಿ ಎಸೆದ ಮೇಲೆ, ಆಟಗಾರನೇ ಜೋಡಿಸಿಕೊಂಡು ಸೋಲೋ ಗೆಲುವೋ ನಿರ್ಧಾರವಾದಂತೆ.

ಈತ ಸುಮಾರು ಮುಕ್ಕಾಲು ಶತಮಾನದಷ್ಟು ಕಾಲ ಇಂಗ್ಲೆಂಡ್ ನ ಬೀದಿಗಳಲ್ಲೇ ತಿರುಗುತ್ತ ಇಲ್ಲಿನ ಊಟ ಆಹಾರವನ್ನೇ ಸೇವಿಸುತ್ತಾ ಇಲ್ಲೇ ದುಡಿಯುತ್ತ ಇಲ್ಲಿಯ ಎಲ್ಲವುದನ್ನು ವ್ಯಂಗ್ಯ ಮಾಡುತ್ತ ಬದುಕುತ್ತಿರುವವನು. ಐರ್ಲ್ಯಾಂಡ್ ನ ಐರಿಷರು, ಸ್ಕಾಟ್ಲೆಂಡ್ ನ ಸ್ಕಾಟಿಷರು, ವೇಲ್ಸ್ ನ ವೆಲ್ಶರು ಎಲ್ಲರೂ ಇಂಗ್ಲೆಂಡ್ ನ ನೆರೆಹೊರೆಯವರೇ, ಆದರೆ ಇವರೆಲ್ಲರೂ ಸಂಯುಕ್ತ ಸಂಸ್ಥಾನ ಅಥವಾ ಯುನೈಟೆಡ್ ಕಿಂಗ್ಡಮ್ ಎನ್ನುವ ಒಕ್ಕೂಟ ದೇಶದ ಹೆಸರಲ್ಲಿ ಒಟ್ಟಾದರೂ ಎದುರೆದುರೇ ಒಬ್ಬರನ್ನೊಬ್ಬರು ನಕಲಿ ಮಾಡುತ್ತ, ತಮಾಷೆ ಮಾಡುತ್ತಾ ಮಜಾ ತಗೊಳ್ಳುವವರು. ಫುಟ್ಬಾಲ್, ರಗ್ಬಿ ಕ್ರೀಡೆಗಳಲ್ಲಿ ವಿರೋಧಿಗಳಾಗಿ ಸೆಣಸಾಡುವ ಇವರು, ಪಂದ್ಯ ಒಂದು ಮುಗಿದ ಮರುದಿನ ಕಚೇರಿಗೆ ಬಂದು ಒಬ್ಬರನ್ನೊಬ್ಬರು ಕಿಚಾಯಿಸುತ್ತಾರೆ. ಇವರೊಳಗಿನ ಯಾವ ಟೀಕೆ ವ್ಯಂಗ್ಯಗಳೂ ಮೈಪೆಟ್ಟಿನ ಹಂತಕ್ಕೆ ಹೋಗುವುದಿಲ್ಲ, ಖಾಯಂ ದ್ವೇಷವಾಗಿ ಪರಿವರ್ತಿತ ಆಗುವುದಿಲ್ಲ, ಇವರಿಗೆ ಪ್ರಿಯವಾದ ಚಿನ್ನದ ಬಣ್ಣದ ಬೀಯರಿನ ನೊರೆಯಂತೆ ಒಬ್ಬರಿಗೊಬ್ಬರ ಅಪಹಾಸ್ಯ ಚುಚ್ಚುನುಡಿಗಳು ನಗುತ್ತ ಕಣ್ಣು ಮಿಟುಕಿಸುತ್ತ ಮೂಡಿ ಕರಗಿ ತೇಲಿ ಹೋಗುತ್ತವೆ! ತಮ್ಮನ್ನು ಇಷ್ಟು ಗೇಲಿ ಮಾಡುವ ಈ ನೆರೆಹೊರೆಯವರು ತಮ್ಮ ಭಾಷೆ ಇಂಗ್ಲೀಷನ್ನು ಕಷ್ಟದಲ್ಲಿ ಕಲಿತು ಹೇಗೆ ಒದ್ದಾಡಿ ಮಾತಾಡುತ್ತಾರೆ ಎನ್ನುವುದರಿಂದಲೇ ಆಂಗ್ಲರು ಐರಿಷ್ ಸ್ಕಾಟಿಷ್ ಹಾಗು ವೆಲ್ಶರಿಗೆ ತಿರುಗೇಟೂ ಕೊಡುತ್ತಾರೆ.

ಇಂಗ್ಲೆಂಡ್ ಗೆ ಬಂದು ಹಲವು ದಶಕಗಳು ಕಳೆದರೂ ನಮ್ಮ ಐರಿಷ್ ಅಜ್ಜನ ಆಂಗ್ಲ ಭಾಷೆಯ ಉಚ್ಚಾರ ಐರಿಶ್ ನಿಂದ ಪೂರ್ತಿ ಹೊರ ಬಂದಿಲ್ಲ, ಇಂಗ್ಲಿಷ್ ನ ಒಳಗೆ ಇವನಿನ್ನೂ ಪೂರ್ತಿ ಹೊಕ್ಕಿಲ್ಲ. ಹಾಗಂತ ಐರಿಷ್ ಅಜ್ಜ ಇಂಗ್ಲಿಷ್ ಮಾತಾಡುವುದನ್ನು ಕಡಿಮೆ ಮಾಡಿಲ್ಲ. ಕೆಲವೊಮ್ಮೆ ಆತನಿಗೆ ತಿಳಿಯದೆ ಕೆಲವು ಐರಿಷ್ ಶಬ್ದಗಳು ಇವನ ಇಂಗ್ಲಿಷ್ ಮಾತಿನಲ್ಲಿ ಹೊಕ್ಕಿಹೊರಬಂದು ಕೇಳುವವರನ್ನು ತಬ್ಬಿಬ್ಬು ಮಾಡುತ್ತವೆ. ಎಷ್ಟೇ ಇಂಗ್ಲಿಷ್ ಕೇಳಿದ ಆಡಿದ ಅನುಭವ ಇರುವವರೂ ಇವನ ಯಾವುದೊ ವಾಕ್ಯದಲ್ಲಿ ಒಂದೆರಡು ಅಪರಿಚಿತ ಪದಗಳನ್ನು ಕೇಳಿಸಿಕೊಂಡು ಇದೇನು ಹೇಳಿರಬಹುದು ಎಂದು ತಲೆಕೆಡಿಸಿಕೊಂಡ ಸಂದರ್ಭಗಳು ಇವೆ.

ಇವನ ಶಬ್ದೋಚ್ಚಾರ ವಾಕ್ಯ ರಚನೆ ಹೇಗೇ ಇರಲಿ, ಇವನಿಂದ ಹೆಚ್ಚುಕಮ್ಮಿ ನಿತ್ಯ ಮೂದಲಿಕೆಗೆ ಒಳಗಾಗುವವರು ಇಲ್ಲಿನ ರಾಜಕಾರಣಿಗಳು. ಇಂದಿನ ಇಂಗ್ಲಿಷ್ ರಾಜಕಾರಣಿಗಳು ತಾವಿನ್ನೂ ಜಗತ್ತಿನ ಚಕ್ರವರ್ತಿಗಳೆಂಬ ಭ್ರಮೆಯಲ್ಲೇ ಇದ್ದಾರೆಂದು ಈತ ನಗುವುದಿದೆ. ದಶಕಗಳ ಕಾಲದ ಬಾಂಧವ್ಯ ವ್ಯಾಪಾರ ವ್ಯವಹಾರ ಸಂಬಂಧಗಳನ್ನು ಮುರಿದು ಯೂರೋಪಿನ ಒಕ್ಕೂಟದಿಂದ ಹೊರಬರುವ ಬ್ರಿಟನ್ ನ ನಿರ್ಧಾರ (ಬ್ರೆಕ್ಸಿಟ್) ಮೂರ್ಖತನದ್ದು ಎಂದೂ ಇವನಿಗನ್ನಿಸುತ್ತದೆ. ಯೂರೋಪಿನ ಜೊತೆಗೆ ವಿಚ್ಚೇದನ ಪಡೆದು ಬ್ರಿಟನ್ ಯುರೋಪ್ ನ ಮುಕ್ತ ಮಾರುಕಟ್ಟೆಯಿಂದ ಹೊರಬಂದರೆ ಪರಿಸ್ಥಿತಿ ಗಂಡಾಂತರ ಆಗುತ್ತದೆ ಎನ್ನುತ್ತಾನೆ.

ಕಳೆದ ನೂರು ವರ್ಷಗಳಿಂದ ದಕ್ಷಿಣ ಮತ್ತು ಉತ್ತರ ಐರ್ಲೆಂಡ್ ಗಳ ಮಧ್ಯ ಮುಕ್ತ ಗಡಿ ಇದೆ. ಗಡಿಯ ಆಚೆ ಈಚೆ ಆರಾಮವಾಗಿ ಓಡಾಡಿ ಬರುವ ಇವನ ಬಂಧುಗಳು ಇದ್ದಾರೆ. ಗಡಿಯ ಎರಡೂ ಕಡೆ ಹಂಚಿಹೋಗಿರುವ ಹೊಲ ತೋಟ ಇರುವ ಸಂಬಂಧಿಗಳು ಇದ್ದಾರೆ. ದಕ್ಷಿಣ ಉತ್ತರ ಐರ್ಲೆಂಡ್ ಗಳ ನಡುವಿನ ಗಡಿ ಯಾರ ಮನೆ ಎಲ್ಲಿ ತೋಟ ಎಲ್ಲಿ ಲೆಕ್ಕಿಸದೆ ಹೊಲ ಬೆಟ್ಟ ಗುಡ್ಡಗಳ ನಡುವೆ ಹಾದು ಸೀಳಿ ಹೋಗುತ್ತದೆ. ಬ್ರೆಕ್ಸಿಟ್ ಅನುಷ್ಠಾನದ ಒಂದು ಸಾಧ್ಯತೆ ಎಂದರೆ ಉತ್ತರ ದಕ್ಷಿಣ ಐರ್ಲೆಂಡ್ ಗಳ ನಡುವೆ ಒಂದು “ಹಾರ್ಡ್ ಬಾರ್ಡರ್ ” ಅಥವಾ ನಿರ್ಬಂಧಿತ ಗಡಿರೇಖೆ ಸ್ಥಾಪನೆ ಆಗುವುದು. ಆಚಿನವರು ಆಚೆ ಈಚಿನವರು ಈಚೆ ಎಂದಾಗುವುದು. ಅಂತಹ ಕಟ್ಟುನಿಟ್ಟಿನ ಗಡಿ ಅನುಷ್ಠಾನಕ್ಕೆ ಬಂದರೆ ಅಂದು ಭಾರತ ವಿಭಜನೆಗೊಂಡಂತೆ ಆದೀತೆ ಎಂದು ಕಳವಳ ಪಡುತ್ತಾನೆ ಅಜ್ಜ. ಸೀಮಾಸುಂಕ ತಪಾಸಣೆ ತೆರಿಗೆ ಇತ್ಯಾದಿಗಳ ಜೊತೆ ಸಂಶಯ ಭಯಗಳೂ ವಿಭಜನೆ ಗಡಿಯ ಉಗಮದಿಂದ ಹುಟ್ಟಬಹುದೇ ಎಂದೂ ಚಿಂತಿಸುತ್ತಾನೆ.

ಯಾವುದೋ ಕಾಲದಲ್ಲಿ ಬ್ರಿಟನ್ನಿಗೆ ವಲಸೆ ಬಂದ ಅಜ್ಜನ ಮಕ್ಕಳು ಮೊಮ್ಮಕ್ಕಳು ಬ್ರಿಟನ್ನಿನ ಪಾಸ್ ಪೋರ್ಟ್ ಪಡೆದುಕೊಂಡು ಬದುಕುತ್ತಿದ್ದಾರೆ. ಮತ್ತೆ ಸದ್ಯಕ್ಕೆ ಬ್ರಿಟಿಷ್ ಪಾಸ್ ಪೋರ್ಟ್ ಅಥವಾ ಇನ್ಯಾವುದೋ ಗುರುತಿನ ಚೀಟಿ ಹಿಡಿದು ಮುಕ್ತವಾಗಿ ಐರ್ಲೆಂಡ್ ಗೆ ಹೋಗಿ ಬರುತ್ತಿದ್ದಾರೆ. ಬ್ರೆಕ್ಸಿಟ್ ಪಾಲು ಪಂಚಾಯಿತಿಯಲ್ಲಿ ಅಧ್ವಾನವಾಗಿ ಐರ್ಲೆಂಡ್ ಭೇಟಿಮಾಡಲು ಐರಿಷ್ ಪಾಸ್ ಪೋರ್ಟ್ ಬೇಕಾಗಬಹುದೋ ಎನ್ನುವ ಗುಮಾನಿಯಲ್ಲಿ ಇದೀಗ ತರಾತುರಿಯಲ್ಲಿ ಮಕ್ಕಳ ಮೊಮ್ಮಕ್ಕಳಿಗೆ ಐರಿಷ್ ಪಾಸ್ ಪೋರ್ಟ್ ಮಾಡಿಸುತ್ತಿದ್ದಾನೆ. ಬ್ರೆಕ್ಸಿಟ್ ಪ್ರತಿದಿನವೂ ಹೊಸ ತಿರುವನ್ನು ಪಡೆಯುತ್ತ ಹೆಚ್ಚು ಜಟಿಲಗೊಳ್ಳುತ್ತ “ಘಾಚರ್ ಘೋಚರ್” ಆಗುತ್ತಿರುವುದನ್ನು ಕಂಡು ಇನ್ನಿದರ ಬಗ್ಗೆ ಮಾತಾಡುವುದರಲ್ಲಿ ಯಾವ ಅರ್ಥ ಇಲ್ಲ ಎನ್ನುವ ತೀರ್ಮಾನಕ್ಕೂ ಬಂದಿದ್ದಾನೆ. ಅದರ ಪಾಡಿಗೆ ಅದು ತನ್ನ ಪಾಡಿಗೆ ತಾನು ಎಂದಿದ್ದಾನೆ.

ಈ ಲೋಕದ ಅಶಾಂತಿ ಅಧರ್ಮ ಪ್ರಕ್ಷುಬ್ಧತೆಗಳ ಬಗ್ಗೆ ಮಾತಾಡಿ ತನ್ನ ಮುಖ ಇನ್ನೂ ಕೆಂಪು ಮಾಡಿಕೊಳ್ಳುವುದಕ್ಕಿಂತ ಮುಂದಿನ ವಾರದ ರೇಸ್ ನಲ್ಲಿ ಇವೆಲ್ಲ ಯುದ್ಧ ಗೊಂದಲ ಗೋಜಲುಗಳಿಂದ ದೂರ ಇರುವ ಯಾವ ಸುಂದರ ಕುದುರೆ ಗೆದ್ದೀತು ಎಂದು ಯೋಚಿಸುವುದೇ ಹಿತಕರ ಎಂದು ನಗುತ್ತಿದ್ದಾನೆ. ಜಗತ್ತಿನ ೯೯% ನಿರುಪದ್ರ ಜೀವಿಗಳಲ್ಲಿ ತಾನು ಪ್ರತಿವಾರ ಕುತೂಹಲ ತಾಳುವ ಕುದುರೆಗಳೂ ಇವೆಯಲ್ಲ ಎನ್ನುವ ಸಮಾಧಾನದಲ್ಲಿದ್ದಾನೆ.