ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೊಂಭತ್ತನೆಯ ಬರಹ
ನಮ್ಮಲ್ಲಿ ಯಾತ್ರೆ ಎನ್ನುವುದು ಸಾಮಾನ್ಯವಾಗಿ ಹೆಣ್ಣು ಒಂಟಿಯಾಗಿ ಮಾಡುವಂತದ್ದಲ್ಲ. ಆದರೂ ನನಗೆ ಎದೆಯಾಳದಲ್ಲೆಲ್ಲೋ ಆಸೆಯಂತೂ ಇತ್ತು. ನಾನಿದ್ದ ಪರದೇಶಗಳಲ್ಲಿ ಅದೇನೂ ದೊಡ್ಡ ವಿಷಯವಲ್ಲ. ಕಿವಿನಾಡಿನಲ್ಲಿ ಇದ್ದ ಹತ್ತು ಗ್ರೇಟ್ ವಾಕುಗಳಲ್ಲಿ ಐದನ್ನು ಮಾಡಿದ್ದೆ. ದೇಶವಿದೇಶಗಳಿಂದ ಬಂದ ಹೆಣ್ಮಕ್ಕಳು ಒಂಟಿಯಾಗಿ ಬ್ಯಾಕ್ ಪ್ಯಾಕ್ ಏರಿಸಿಕೊಂಡು ಕಾಡಿನಲ್ಲೆಲ್ಲೋ ಧೀ ಎಂದು ನಡೆಯುವುದನ್ನು ನೋಡಿದಾಗ ವ್ಯವಸ್ಥೆಯ ಬಗ್ಗೆ ಭೇಷ್ ಅಂತನ್ನಿಸಿತ್ತು.
ಸಾಮಾನ್ಯವಾಗಿ ನಾನು ಟೂರಿಸ್ಟ್ ಗೈಡುಗಳನ್ನು ದೂರವಿಡುತ್ತೇನೆ. ಅವರ ರಂಗುರಂಗಿನ ನಿರೂಪಣೆ ಇತಿಹಾಸದ ವಿದ್ಯಾರ್ಥಿಯಾದ ನನಗೆ ತಲೆನೋವು ಬರಿಸುತ್ತದೆ. ಕಳೆದ ತಿಂಗಳು ಹಂಪಿಗೆ ಹೋಗಿ ಬಂದಿದ್ದ ಒಬ್ಬರು ‘ವಿಜಯನಗರದ ವೈಭವವನ್ನು ನಾಶ ಮಾಡಲು ಆರು ವರ್ಷ ಹಿಡಿಯಿತಂತೆ,’ ಎಂದಾಗ ಇದು ಖಂಡಿತಾ ಟೂರಿಸ್ಟ್ ಗೈಡ್ ಮಾಡಿದ ಉತ್ಪ್ರೇಕ್ಷೆ ಅಂತನ್ನಿಸಿತ್ತು. ಗೆದ್ದ ರಾಜ ಸಾಮ್ರಾಜ್ಯವನ್ನು ಹರಡಲು ಮುಂದೆ ಸಾಗುತ್ತಾನೆ ಹೊರತು ಒಂದೇ ಕಡೆ ಅಷ್ಟೊಂದು ಸಮಯವನ್ನು ವ್ಯರ್ಥ ಮಾಡಲಾರ. ಐತಿಹಾಸಿಕ ದಾಖಲೆಯನ್ನು ಹುಡುಕಿ ತೆಗೆದಾಗ ಐದು ತಿಂಗಳು ಎಂದು ಕಾಣಿಸಿ ಅದರ ಪಟ ಹೊಡೆದು ಕಳಿಸಿದ್ದೆ.
ಹೊರಡುವ ಸ್ವಲ್ಪ ಮುಂಚೆ ಇದ್ದ ಬದ್ದ ಐತಿಹಾಸಿಕ ಸಾಮಗ್ರಿಯನ್ನು ಓದಿ ಗ್ರಹಿಸಲು ಪ್ರಯತ್ನಪಟ್ಟೆ. ಸುಮಾರು ಮಟ್ಟಿಗೆ ಹಂಪಿಯಲ್ಲಿ ಏನೇನಿದೆ, ಹೇಗಿದೆ ಎಂಬ ನಕ್ಷೆ ಮೂಡಿತ್ತು. ಆದರೆ ಹೈದರಾಬಾದು-ಹಂಪಿ ರೈಲು ಪ್ರಯಾಣ ಆರಂಭವಾದಾಗಲೇ ಏನೋ ಸರಿಯಿಲ್ಲ ಅಂತನ್ನಿಸಿತ್ತು. ನಾನಿದ್ದ ಕ್ಯಾಬಿನ್ನಿಗೆ ಯಾರೋ ಒಬ್ಬ ಬಂದ. ಅರವತ್ತು ದಾಟಿರಬಹುದು ಎಂದು ದೃಷ್ಟಿ ಅತ್ತ ಹರಿದಾಗ ಅನ್ನಿಸಿತು. ಮಾತಾಡಿಸಲಿಲ್ಲ. ದಾರಿಹೋಕರ ಕೆಟ್ಟ ಕುತೂಹಲದ ಪರಿಚಯ ನನಗೆ ಇಲ್ಲ ಅಂತೇನೂ ಇಲ್ಲ. ಅದರಲ್ಲೂ ನಡುವಯಸ್ಸು ಮತ್ತು ವೃದ್ಧರನ್ನು ನಾನು ಸುತರಾಂ ಆಚೆಗಿಡುತ್ತೇನೆ. ಹೆಚ್ಚಿನಂಶದ ಯುವಕರಿಗೆ ನನ್ನ ವಯಸ್ಸಿನ ಹೆಂಗಸರ ಬಗ್ಗೆ ಒಂದು ರೀತಿಯ ಗೌರವವಾದರೂ ಇರುತ್ತದೆ. ಮುದುಕರಿಗೆ ಮಾತ್ರ ಇಲ್ಲವೇ ಇಲ್ಲ. ಅವರೊಂದಿಗೆ ಹೆಂಡತಿ ಮಕ್ಕಳಿದ್ದರೆ ಸಭ್ಯತೆಯ ಸೋಗಾದರೂ ಇರಬಹುದೇನೋ. ಒಂಟಿಯಾಗಿದ್ದರೆ ಮಾತ್ರ ಕುರೂಪ ನಿಧಾನವಾಗಿ ಹಲ್ಲು ಕಿರಿಯಲಾರಂಭಿಸುತ್ತದೆ. ಎದುರಿಗಿರುವವಳು ಒಂಟಿಹೆಣ್ಣು ಎಂಬ ವಾಸ್ತವ ಇನ್ನಷ್ಟು ಕುಮ್ಮಕ್ಕು ಕೊಡುತ್ತದೆ.
ನನ್ನ ದುರಾದೃಷ್ಟಕ್ಕೆ ಅಂದು ಆರು ಮಂದಿಯ ಎಸಿ ಬೋಗಿಯಲ್ಲಿ ಇದ್ದಿದ್ದು ನಾವಿಬ್ಬರೇ. ಆತ ಏನೋ ಮಾತಿಗೆ ಹಚ್ಚಿಕೊಂಡ. ಫೋನಿನಲ್ಲಿ ಕನ್ನಡ ಮಾತಾಡುತ್ತಿದ್ದನಲ್ಲ ಎಂಬ ಒಂದೇ ಕಾರಣಕ್ಕೆ ಉತ್ತರಿಸಿದೆ. ತಾನು ಗದಗಿನವನು, ಭೀಮಸೇನ್ ಜೋಶಿ ತನಗೆ ಅಣ್ಣನಾಗಬೇಕು ಎಂದ. ನನ್ನ ಮುಖದ ಮೇಲಿನ ಬಿಗು ಸ್ವಲ್ಪ ಸಡಿಲವಾಗಿದ್ದು ನಿಜ. ಹೌದಾ ಎಂದು ಉಲ್ಲಾಸದಿಂದ ಕೇಳಿದ್ದು ನೋಡಿ ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಚಿತ್ರದಲ್ಲಿ ತಾನು ನಟಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡ. ನನಗೆ ಆ ಚಿತ್ರಕಥೆ ಗೊತ್ತಿತ್ತು, ನನ್ನ ಅಧ್ಯಯನದ ಸಲುವಾಗಿ ಹಲವಾರು ಬಾರಿ ನೋಡಿದ್ದೆನಲ್ಲ! ಯಾವ ಪಾತ್ರ ಎಂದು ಕೇಳಿದೆ. ಕೇಳುವಾಗಲೇ ಸೈಕಾಲಜಿ ಮಿತ್ರರೊಬ್ಬರು ಯಾವುದೋ ಚಿತ್ರದ ಬಗ್ಗೆ ಮಾತಾಡುತ್ತಾ ತಮ್ಮ ಎಂದಿನ ಹಾಸ್ಯದಲ್ಲಿ, ‘ಆ ಚಿತ್ರದಲ್ಲಿ ನಾನೂ ಪಾರ್ಟ್ ಮಾಡಿದೀನಿ ಗೊತ್ತಾ? ದುರ್ಗಿಯ ಹಿಂದೆ ಅಷ್ಟೊಂದು ಕೈಗಳು ಬಿಚ್ಚಿಕೊಳ್ಳುತ್ತವಲ್ಲ, ಅದರಲ್ಲಿ ನನ್ನದೂ ಎರಡು ಕೈ’ ಎಂದು ಹೇಳಿ ಅಹಹಾ ಎಂದು ನಗುವಂತೆ ಮಾಡಿದ್ದು ನೆನಪಿಗೆ ಬಂದಿತ್ತು.
ಈತನಿಂದ ಸ್ಪಷ್ಟ ಉತ್ತರ ಬರಲಿಲ್ಲ. ಹೋಗಯ್ಯೋ ಬೊಗಳೆ ದಾಸ ಎಂದುಕೊಂಡು ನಾನು ಉದಾಸಳಾದಾಗ ಇನ್ನೇನೋ ಮಾತು ಬದಲಾಯಿಸುತ್ತಾ ವೈಯುಕ್ತಿಕ ವಿವರಗಳನ್ನು ಕೇಳಲು ಮುಂದಾದ. ಅದರಲ್ಲಿ ನಿಮ್ಮ ಜಾತಿ ಯಾವುದು ಎನ್ನುವುದೂ ಒಂದು. ಇದೊಂದು ಖಾಯಿಲೆಯೇ? ಸರಿ ಇನ್ನೂ ಏನೇನು ಕೇಳುತ್ತಾನೋ ನೋಡಿಯೇ ಸೈ ಎಂದುಕೊಂಡು ಹೇಳಿಯೂ ಹೇಳಿದೆ. ಉಪಜಾತಿಯನ್ನೂ ಕೇಳಿದಾಗ ಎದ್ದು ಟಿಟಿಯನ್ನು ಹುಡುಕಿಕೊಂಡು ಹೋಗಿ ರಿಸರ್ವ್ ಆಗಿಲ್ಲದ ಸೀಟಿಗೆ ಪಲ್ಲಟಿಸಿಕೊಂಡೆ. ಆತ ಅದಕ್ಕೂ ಮೊದಲು ನನ್ನ ಫೋನ್ ನಂಬರ್ ಕೇಳಿಯಾಗಿತ್ತು. ಕೊಡಲ್ಲ ಅಂತ ನಾನು ಹೇಳಿಯೂ ಆಗಿತ್ತು. ಮುಂಬರುವ ಪ್ರಶ್ನೆಗಳನ್ನು ಆ ನಕಾರ ತಡೆದ ಹಾಗೆ ಕಾಣಿಸಲಿಲ್ಲ. ವಯಸ್ಸು ಮನುಷ್ಯರನ್ನು ಮಾಗಿಸುತ್ತದೆ ಅಂತ ಹೇಳಿದ ಮೂರ್ಖ ಯಾರೋ! ಎದುರಿಗೇನಾದರೂ ಸಿಕ್ಕರೆ, ಇರಬಹುದು, ಆದರೆ ಗಂಡಸರನಲ್ಲ ಅಂತ ತಿದ್ದುಪಡಿಸಬೇಕೆನ್ನಿಸಿತ್ತು.
ಅಬ್ಬೇಪಾರಿಯಂತೆ ಒಬ್ಬಳೇ ಅಲೆಯುವುದು ನನಗೆ ಮಹಾ ಇಷ್ಟ. ಹಂಪಿ ಅಂತವರಿಗೆ ಒಂದು ಪ್ರಶಸ್ತ ಸ್ಥಳ. ಗತವೆದ್ದು ಕೂತು ಕತೆ ಹೇಳುವಾಗ ಯಾವುದೇ ರೀತಿಯ ಪೂರ್ವಾಗ್ರಹವಿಲ್ಲದೆ ‘ಇದು ನಡೆದಿದ್ದು’ (ಇತಿ-ಹಾಸ) ಎಂಬ ನಿರ್ಭಾವದಲ್ಲಿ ಗಮನಿಸಬೇಕು ಅಷ್ಟೆ. ಚರಿತ್ರೆಯ ತಲ್ಲಣ ತಳಮಳಗಳನ್ನು ಗಮನಿಸುವ ಜೊತೆಜೊತೆಯೇ ಅದರ ಓಟದ ಜೊತೆಗೆ ಸುಮ್ಮನೆ ನಡೆಯಬೇಕು. ನಿಜವಾದ ಐತಿಹಾಸಿಕ ಅಧ್ಯಯನ ಕಲಿಸುವುದು ಅದನ್ನೇ.
ಹೀಗೆ ಏನೇನೋ ಅಂದುಕೊಂಡರೂ ಸಹ ಅವಶೇಷಗಳು ನನ್ನನ್ನು ಆಳವಾಗಿ ಕಲಕಿದ್ದು ನಿಜ. ಸೃಷ್ಟಿ ಮತ್ತು ಲಯ ಎರಡೂ ಒಂದೇ ಎಂಬ ಸತ್ಯ ದಾರ್ಶನಿಕ ಸ್ತರದಲ್ಲಿ ನಿಜವಿದ್ದರೂ ಇರಬಹುದು. ಆದರೆ ಇದು ಲಯವಲ್ಲ, ಘೋರಧ್ವಂಸ ಅಂತನ್ನಿಸಿ ವಿಷಾದದ ಆಳದಲ್ಲಿ ಕುಸಿಯುತ್ತಿದ್ದಾಗ ಹತ್ತಿರದಲ್ಲಿ ಇದ್ದಾಕೆ ಸ್ಪೀಕರ್ ಹಾಕಿ ಯಾರೊಂದಿಗೂ ಸಂಭಾಷಿಸುತ್ತಿದ್ದದ್ದು ಕೇಳಿಸಿತು. ‘Oh you are in Hampi! Enjoy the ruins!’ ಎಂದು ಅತ್ತ ಕಡೆಯಿಂದ ಹೇಳಿದ್ದು ಕೇಳಿಸಿದಾಗ ತಲೆ ಪೆಕರಾಗಿ ಹೋದಂತೆ ಅನ್ನಿಸಿತು. Enjoy the ruins? Seriously?
ಕಣ್ಣೊಳಗೆ ತೆಳುವಾಗಿ ಹರಡಿಕೊಂಡ ನೀರಿನ ನಡುವೆಯೇ ಇನ್ನೊಂದು ಕಡೆಗೆ ದೃಷ್ಟಿ ಹರಿಸಿದಾಗ ಅವಶೇಷಗಳ ನಡುವೆ ನಗುತ್ತಾ ಪೋಸು ಕೊಡುತ್ತಿದ್ದ ಹನಿಮೂನ್ ಗಂಡ ಕಾಣಿಸಿದ. ಗತ ಮತ್ತು ವರ್ತಮಾನಕ್ಕೆ ಸಂಬಂಧವೇ ಇರಲಿಲ್ಲ. ಅವನ ನೈಕಿ ಶೂಸು ಮತ್ತು ಅವಳ ಪ್ರಾಡಾ ಕನ್ನಡಕಗಳಿಗೆ ಅವಶೇಷಗಳು ಹಿನ್ನೆಲೆಯ ವೈಭವವಾಗಿ ಒದಗಿ ಬಂದಿದ್ದವು.

‘ಕಗ್ಗಲ್ಲ ಬಸಿರಿಂದ ಮೈವಡೆದ ಸೌಂದರ್ಯ’
ವಿಜಯ ವಿಠ್ಠಲ ದೇವಸ್ಥಾನದೊಳಗೆ ಇದ್ದ ರಂಗದ ಮೇಲಿನ ತೆಳುವಾದ ಸಂಗೀತಮಯ ಅಮೃತಶಿಲೆ ಕಂಬಗಳು ನನ್ನ ಕಣ್ಣಲ್ಲಿ ನೀರೂರಿಸಿದ್ದವು. ಎಸ್ಸೆಲ್ಸಿಯಲ್ಲಿ ಕೆ ವಿ ಅಯ್ಯರ್ ಅವರ ‘ಶಾಂತಲಾ’ ಕಾದಂಬರಿಯಲ್ಲಿ ‘ಕುವರವಿಷ್ಣುವಿನ ಕನಸು’ ಎಂಬ ಭಾಗವನ್ನು ನಾವು ಓದಬೇಕಿತ್ತು. ದೇವಾಲಯದ ಒಳಗೆ ಶಾಂತಲೆ ನೃತ್ಯ ಮಾಡುವುದನ್ನು ಕುವರವಿಷ್ಣು ವರ್ಣಿಸುತ್ತಿದ್ದಾನೆ. ನನಗೆ ಅದೆಷ್ಟು ಪ್ರಿಯವಾಗಿತ್ತೆಂದರೆ ಅದರ ಮೊದಲ ಭಾಗವಿನ್ನೂ ತಲೆಯಲ್ಲಿದೆ:
ಕನಸೆಂದೆನೆ! ಕನಸಲ್ಲ ಅಕ್ಕ ಅದು, ನಾನು ಕಣ್ಣು ತೆರೆದುಕೊಂಡೇ ಇದ್ದೆ… ಹೊಯಿಸಳೇಶ್ವರ, ಶಾಂತಲೇಶ್ವರ ದೇವಾಲಯಗಳನ್ನು ಕಟ್ಟಿ ಮುಗಿಸಿದ್ದರು. ಎರಡು ಆಲಯಗಳ ಪೂರ್ವ ಮುಖದಲ್ಲಿರುವ ದೊಡ್ಡ ದೊಡ್ಡ ನಂದಿಮಂಟಪಗಳನ್ನೂ ಕಟ್ಟಿ ಆಗಿತ್ತು. ನಂದಿಗಳು ಮಾತ್ರ ಸಿದ್ಧವಾಗಿರಲಿಲ್ಲ. ಅದಕ್ಕೆ ತಕ್ಕ ಘನ ಶಿಲೆಗಳು ಸಿಗದಿದ್ದುದೇ ಕಾರಣ… (ಪು. ೨೩೬)
ಈಗ ಸಂಗೀತಮಯ ಕಂಬಗಳನ್ನು ನೋಡುತ್ತಾ ಇಂಥದ್ದೇ ದೇವಾಲಯದೊಳಗೆ ಶಾಂತಲೆ ನರ್ತಿಸಿರಬಹುದೇ ಎಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಇಷ್ಟಾದರೂ ಆ ಕನಸಿನ ವರ್ಣನೆಯಲ್ಲಿ ನನ್ನನ್ನು ತೀವ್ರವಾಗಿ ಆಕರ್ಷಿಸಿದ್ದ ಭಾಗ ಶಾಂತಲೆಯ ಸ್ವರ್ಗೀಯ ನೃತ್ಯವಲ್ಲ. ಬದಲಿಗೆ ನಗು, ಲೇವಡಿ, ಪ್ರತಿಭಟನೆಗಳು ತುಂಬಿದ್ದ ಇನ್ನೊಂದು ಭಾಗ ಎನ್ನುವುದು ಸಹ ನೆನಪಿಗೆ ಬಂತು.
ಆ ರಾತ್ರಿ ದೇವಾಲಯದ ಗೋಪುರ ಚಂದ್ರಮಂಡಲವನ್ನು ತಾಗಿ ನಿಂತಿದ್ದು ಅಮೃತರಸಪ್ರವಾಹವೊಂದು ದೇವಾಲಯದ ಗೋಪುರದ ತುದಿಯಿಂದ ಮೆಲ್ಲನೆ ಹರಿದು ಬಂದು ಇಡೀ ದೇವಾಲಯವನ್ನು ಅಲ್ಲಿರುವ ಪ್ರತಿಯೊಂದು ಆಕಾರವನ್ನು ಸಜೀವವಾಗಿಸಿ ಒಬ್ಬರಾದ ಮೇಲೊಬ್ಬರಂತೆ ದೇವದೇವತೆಯರ ನರ್ತನವೇ ನಡೆಯಲಾರಂಭಿಸುತ್ತದೆ. ಅದನ್ನು ನೋಡುತ್ತಿರುವ ಗಣಪತಿಗೆ ತಾನೂ ನರ್ತಿಸಬೇಕೆಂಬ ಆಸೆ ಹುಟ್ಟುತ್ತದೆ. ‘ಅವನಿಗೆ ಹಿಂದೆ ಎಂದಾದರೂ ನರ್ತಿಸಿ ಅಭ್ಯಾಸವಿದ್ದಿತೋ ಇಲ್ಲವೋ! ಕಿವಿಗಳನ್ನು ಬೀಸುತ್ತಾ, ಸೊಂಡಿಲನ್ನು ಆಡಿಸುತ್ತಾ, ಮೋಟು ಕೈಗಳನ್ನು ತಿರುವುತ್ತ, ಕಂಬಗಳಂತಿದ್ದ ಆ ಕಾಲುಗಳಿಗೆ ಕಿರುಗೆಜ್ಜೆಗಳ ಸರಗಳನ್ನು ಕಟ್ಟಿಕೊಂಡು ನಾಟ್ಯರಂಗವೇರಿದ ಗಣಪತಿ. ಎಲ್ಲರಿಗೂ ಹೊಟ್ಟೆಯಲ್ಲಿ ನಗು, ಮುಖದಲ್ಲಿ ಬಿಗು …
ಮಹಾದೇವನು ಪಾರ್ವತಿಯನ್ನು ನೋಡಿ, ಮೆಲ್ಲಗೆ ‘ಇವನಿಗೇಕೆ ಕುಣಿಯುವ ಆಶೆ ಬಂತು ಈಗ, ಈ ಮೈಯನ್ನಿಟ್ಟುಕೊಂಡು?’ ಎಂದನು. ಪಾರ್ವತಿಗೆ ಸ್ವಲ್ಪ ಸಿಟ್ಟು ಬಂತೆಂದು ಕಂಡಿತು. ‘ಮಕ್ಕಳು ಸಂತೋಷದಿಂದ ಕುಣಿಯಬಾರದೇನು!’ ಎಂದಳು. ಶಿವನು ತಾನು ಕೇಳಿದುದು ತಪ್ಪಾಯಿತೆಂದು ತಿಳಿದು ಸುಮ್ಮನಾದನು. ಗಜಾನನನು ತಾಂಡವ ನೃತ್ಯಕ್ಕೆ ಮೊದಲಿಟ್ಟನು. ಗಜಾನನ ಆ ನೃತ್ಯಕ್ಕೆ ಶಿಲಾಪೀಠ ಅದುರಿತು, ನೆಲ ನಡುಗಿತು, ನುಣ್ಣನೆಯ ಶಿಲೆಯ ಮೇಲೆ ಒಮ್ಮೆ ಗಣಪನಿಗೆ ಕಾಲು ಜಾರಿತು, ರಭಸದಿಂದ ಬಿದ್ದನು. ಭಯಾವೃತವಾಗಿದ್ದ ಆ ಸಭೆಯಲ್ಲಿ ಯಾರೂ ನಗಲಿಲ್ಲ. ಶಿವನು ಮಾತ್ರ ನಕ್ಕ. ಆ ನಗು ಗಣಪತಿಗೆ ಕೇಳಿಸಿತು. ಪಾರ್ವತಿ ಪತಿಯ ಕಡೆಗೆ ನೋಡಿದಳು. ಶಿವನಿಗೆ ಆಗ ತಾನು ನಗಬಾರದಿತ್ತು ಎನ್ನಿಸಿತು. ಗಣಪತಿಗೆ ಸಿಟ್ಟು ಬಂದಿತು. ‘ನನ್ನ ನಾಟ್ಯ ನನಗೆ ಸುಖ ಕೊಟ್ಟರೆ ಸಾಕು, ಇತರರು ನೋಡಿ ಮೆಚ್ಚಬೇಕಾಗಿಲ್ಲ,’ ಎಂದುಕೊಳ್ಳುತ್ತಾ ಎದ್ದು ಹೋಗಿ ದೇವಾಲಯದ ದಕ್ಷಿಣದ್ವಾರದ ಒಂದು ಪಾರ್ಶ್ವದಲ್ಲಿ ತನ್ನ ಸುಖಕ್ಕಾಗಿಯೇ ನಾಟ್ಯವಾಡುತ್ತ ನಿಂತುಬಿಟ್ಟ.’ (ಪು. ೨೪೫)
ಎಸ್ಸೆಲ್ಸಿ ಕೊನೆಯ ಪರೀಕ್ಷೆಯಲ್ಲಿ ‘ಕುವರವಿಷ್ಣುವಿನ ಕನಸನ್ನು ವರ್ಣಿಸಿ’ ಎಂಬ ಬ್ಲಾಂಕೆಟ್ ಪ್ರಶ್ನೆಗೆ ನಾನು ದೇವತೆಗಳನ್ನು ಮಾನವೀಯಗೊಳಿಸುವ ಗಣಪತಿ ನೃತ್ಯ ಪ್ರಸಂಗದ ಮೇಲೆ ಬರೆದಿದ್ದೇ ಬರೆದಿದ್ದು! ಮೌಲ್ಯಮಾಪನ ಮಾಡಿದವರು ಅಂಕ ಕೊಟ್ಟರೋ ಬಿಟ್ಟರೋ ಗೊತ್ತಿಲ್ಲ.
ಹಿಸ್ಟರಿ ಎನ್ನುವುದು ಹಿಸ್ ಸ್ಟೋರಿ ಎಂಬ ಮಾತಿದೆ. ಅದಕ್ಕೆ ಏನೋ, ವೈಭವ, ಯುದ್ಧ, ಧ್ವಂಸ ಇತ್ಯಾದಿಗಳೇ ಇತಿಹಾಸವಾಗುತ್ತವೆ. ಅವಶೇಷಗಳ ನಡುವೆ ಭಾರವಾದ ಮನಸ್ಸನ್ನು ಸಮಾಧಾನಿಸಿಕೊಳ್ಳಲು ಹೇಮಕೂಟದ ಎತ್ತರಕ್ಕೆ ಹೋಗಿ ಕೂತು ಸಂಜೆಯನ್ನು ಕಳೆದೆ. ಮಾಲ್ಯವಂತ ರಘುರಾಮನ ಬೆಟ್ಟಕ್ಕೆ ಹೋದಾಗ ಹನುಮಂತನ ವೇಷ ತೊಟ್ಟ ಹುಡುಗನೊಬ್ಬ ಸುತ್ತಮುತ್ತ ಠಳಾಯಿಸಿದ. ಒಮ್ಮೆ ಘೋರವಾಗಿ ಕಣ್ಣು ಬಿಟ್ಟು ಹೆದರಿಸಿದೆ, ಅಷ್ಟೇ!
ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ. ಗಾಡಿ ನಿಧಾನವಾದಾಗ ಹತ್ತಿರ ಬಂದು ಕೋತಿಯಂತೆ ಶಬ್ದ ಮಾಡುತ್ತಾ ನನ್ನ ಕಡೆಗೆ ನೋಡಿದ. ಸಿಕ್ಕಿದ್ದು ಮಾತ್ರ ಸೊನ್ನೆಯೇ.
ಹಂಪಿಯಲ್ಲಿ ಮಕ್ಕಳು ಸ್ಕೂಲಿಗೆ ಚಕ್ಕರ್ ಹಾಕುವುದು ತುಂಬ ಸಾಮಾನ್ಯವಂತೆ. ಅದೂ ಇದೂ ಮಾರುವುದು ಹೆಚ್ಚು ಲಾಭ ಅಂತ ಭಾವಿಸಿದಂತಿದೆ. ಒಬ್ಬನಿಗೆ ‘ಏಯ್ ಯಾಕೋ, ಈ ಹೊತ್ತಿನಲ್ಲಿ ಸ್ಕೂಲಿನಲ್ಲಿ ಇರುವುದು ಬಿಟ್ಟು ಇಲ್ಲಿದೀಯಾ? ಹಂಪಿಯ ಪೊಲೀಸ್ ಕಮಿಷನರ್ ನಂಗೆ ಗೊತ್ತು. ನಿನ್ನ ಫೋಟೋ ತೆಗೆದು ಅವರಿಗೆ ಕಳಿಸಲಾ?’ ಎಂದು ಹೆದರಿಸಿದೆ. ‘ಹಂಗೇನಿಲ್ಲ. ಇವತ್ತು ರೇಷನ್ ತರಕ್ಕೆ ರಜೆ ಕೊಟ್ಟಿದಾರೆ. ನೀವೇನಾದರೂ ದುಡ್ಡು ಕೊಟ್ಟರೆ ಪುಸ್ತಕ ತಗಳ್ತಿನಿ,’ ಅಂತ ಅಂದ. ಒಮ್ಮೆ ಅವನ ಸ್ಟೈಲಾದ ಟೀಶರ್ಟ್, ಶಾರ್ಟ್ಸ್, ಅಣಬೆ ಹೇರ್ ಸ್ಟೈಲ್ ನೋಡಿ ಈ ಶೋಕಿಗೆಲ್ಲ ಎಷ್ಟು ಕೊಟ್ಟೆ ಅಂತ ಕೇಳಿದ್ದಕ್ಕೆ ದಾಪುಗಾಲಿಡುತ್ತಾ ಹೋಗಿ ಅವನ ಸ್ನೇಹಿತನಿಗೆ ನನ್ನನ್ನು ತೋರಿಸುತ್ತಾ ಏನೋ ಹೇಳುತ್ತಿದ್ದದ್ದು ಕಾಣಿಸಿತು.

ಹಂಪಿಯ ಅವಶೇಷಗಳೀಗ ಯುನೆಸ್ಕೋ ಸುಪರ್ದಿಯಲ್ಲಿವೆ. ಹಾಗಾಗಿ ಇಪ್ಪತ್ನಾಲ್ಕು ಗಂಟೆಯೂ ಭದ್ರತೆ ಇರುತ್ತದಷ್ಟೇ ಅಲ್ಲ, ಎಲ್ಲವೂ ಹಾಯೆನ್ನಿಸುವ ಶುದ್ಧ, ಸ್ವಚ್ಛ! ನಾನು ಉಳಿದುಕೊಂಡಿದ್ದ ಹೋಮ್ ಸ್ಟೇ ಹೆಣ್ಣು ಪೂಜೆ ನಡೆಯುವ ಎರಡು ಮೂರು ಸ್ಥಳಗಳನ್ನು ಸೂಚಿಸಿದಾಗ ನನಗದರ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಬೇಕಾಯಿತು.
ಮರಳುವ ದಿನ ರೈಲಿನ ಫಸ್ಟ್ ಕ್ಲಾಸ್ ಬೋಗಿಗೆ ಹೋದೆ. ಟಿಟಿ ಬಂದಾಗ ನಾಲ್ಕು ಮಂದಿಯ ಆ ಕ್ಯಾಬಿನ್ನಿನಲ್ಲಿ ಯಾರಾದರೂ ಹೆಂಗಸರು ಇರಬಹುದಾ ಎಂದು ಕೇಳಿದೆ. ಇರಲಿಲ್ಲ. ಬಳ್ಳಾರಿಯಲ್ಲಿ ಹತ್ತುವ ಮೂರೂ ಮಂದಿ ಗಂಡಸರೇ. ನನಗೆ ಬೇರೆ ಕಡೆ ಜಾಗ ಕೊಡಿ ಅಂದೆ. ‘ಅಯ್ಯೋ, ಮೂರೂ ಕ್ಯಾಬಿನ್ನುಗಳಲ್ಲಿ ಇರುವ ಮಂದಿಯಲ್ಲಿ ಎಲ್ಲರೂ ಗಂಡಸರೇ ಮೇಡಂ. ಭಯಪಡಬೇಡಿ, ನಾನಿಲ್ಲೇ ಸುತ್ತಮುತ್ತ ಇರುತ್ತೇನೆ,’ ಅಂತ ಆಶ್ವಾಸನೆ ಬಂತು.
ಫಸ್ಟ್ ಕ್ಲಾಸಿನಲ್ಲಿ ಇರುವ ಮಂದಿಯೆಲ್ಲ ಒಂಟಿ ಗಂಡಸರೇ! ಅಂದರೆ ಒಂಟಿಯಾಗಿ ಹೋಗುವಾಗೆಲ್ಲ ಫಸ್ಟ್ ಕ್ಲಾಸ್. ಹೆಂಡತಿ ಮಕ್ಕಳ ಜೊತೆ ಹೋಗಬೇಕಾದರೆ ಸೆಕೆಂಡ್ ಕ್ಲಾಸ್? ಭಲೇ! ನನಗೆ ಗೊತ್ತಿರುವ ಸ್ನೇಹಿತರೊಬ್ಬರು ಒಮ್ಮೆ ಕೆನಡಾದಲ್ಲಿರುವ ಮಕ್ಕಳ ಮನೆಗೆ ಒಬ್ಬರೇ ಹೋಗುವಾಗ ವಿಮಾನದಲ್ಲಿ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ಕಾದಿರಿಸಿದ್ದನ್ನು ಹೇಳಿದ್ದರು. ಏನೋ ಕಾರಣಗಳಿಗೆ ಅವರ ಹೆಂಡತಿ ಹಿಂದಿನ ಬಾರಿ ಹೋದಾಗ ಅಲ್ಲಿಯೇ ಉಳಿದುಕೊಂಡಿದ್ದರಂತೆ. ನಿಮ್ಮ ಹೆಂಡತಿ ಜೊತೆ ಹೋಗುವಾಗ ಸಹ ಈ ತರಹದ ಟಿಕೆಟೆನಾ ಅಂತ ಮುಲಾಜಿಲ್ಲದೆ ಕೇಳಿದ್ದೆ. ‘ಅಯ್ಯೋ, ಎರಡು ಟಿಕೇಟು ನೋಡಿ, ಅದಕ್ಕೆ ಇಕಾನಮಿ ಕ್ಲಾಸ್,’ ಅಂದರು. ಎರಡು ವರ್ಷದ ಹಿಂದೆ ಅವರ ಹೆಂಡತಿ ಒಬ್ಬರೇ ಪ್ರಯಾಣಿಸಿದ್ದು ನನಗೆ ಗೊತ್ತಿತ್ತು. ಆಗ ಅವರಿಗೆ ಯಾವ ಕ್ಲಾಸ್ ಟಿಕೇಟು? ಉತ್ತರ ಬರಲಿಲ್ಲ.

ಫಸ್ಟ್ ಕ್ಲಾಸಿನ ಗಂಡಸರೆಲ್ಲ ಗೊರಕೆ ಹೊಡೆದು ನಿದ್ದೆ ಮಾಡಿ ಪೈಸಾ ವಸೂಲಿ ಮಾಡಿಕೊಂಡರೆ ನಾನು ಪಿಳಿಪಿಳಿ ಕಣ್ಣುಬಿಡುತ್ತಾ ರಾತ್ರಿಯನ್ನು ಕಳೆದಿದ್ದೆ. ಕೊನೆಗೂ ‘ಕಾಸೂ ಕೇಡು ತಲೆಯೂ ಬೋಳು’ ಸುಳ್ಳಾಗಿರಲಿಲ್ಲ!
(ಫೋಟೋಗಳು: ಲೇಖಕರವು)


