“ಅನ್ ಫಿನಿಶ್ಡ್ ಸಿಂಫೋನಿ” ಗೆ ಸಂಗೀತ ನಿರ್ದೇಶಕನ ತಾಳದಂಡವನ್ನು ಆಡಿಸುವ ಕತೆಯ ನಾಯಕನ ಪಾತ್ರವನ್ನು ಮಾಡಿದ ನಟ ನುಮಸಾಕಿ ಇಸಾವೊ. ಈತನಿಗೆ ಸಂಗೀತದ ಗಂಧಗಾಳಿ ಗೊತ್ತಿರಲಿಲ್ಲ. ಸಂಗೀತ ಕುರಿತಂತೆ ಹಲವು ರೀತಿಯ ಅಸೂಕ್ಷ್ಮತೆಗಳಿರುತ್ತವೆ. ಆದರೆ ನುಮಸಾಕಿಗೆ ಧ್ವನಿಯಲ್ಲಿನ ನವಿರು, ತೀಕ್ಷ್ಣ ಅಥವ ಆಳವನ್ನು ಕೂಡ ಗುರುತಿಸಲಾಗುತ್ತಿರಲಿಲ್ಲ. ಆದರೆ ನಾವಿದನ್ನು ಕಡೆಗಣಿಸುವಂತಿರಲಿಲ್ಲ. ನುಮಸಾಕಿ ಬೆದುರುಗೊಂಬೆಯಂತೆ ಕೈಯಾಡಿಸುತ್ತಿದ್ದ. ನಾನು ಮತ್ತು ಹಟ್ಟೊರಿ ದಿನವೂ ಅವನಿಗೆ ಸಿಂಫೋನಿಯನ್ನು ನಡೆಸುವುದು ಹೇಗೆ ಎಂದು ಹೇಳಿಕೊಡಲಾರಂಭಿಸಿದೆವು. ಕೈಕೆಲಸಗಳಲ್ಲಿ ಸದಾ ಹಿಂದಿರುವ ನನ್ನನ್ನು ಟೆಲಿಫೋನ್ ನಲ್ಲಿ ನಂಬರ್ ತಿರುಗಿಸುವಾಗ ಚಿಂಪಾಂಜಿಯಂತೆ ಕಾಣುತ್ತೇನೆ ಎನ್ನುತ್ತಾರೆ.
ಹೇಮಾ ಎಸ್. ಅನುವಾದಿಸುವ ಅಕಿರ ಕುರೊಸೊವಾನ ಆತ್ಮಕತೆಯ ಪುಟ

 

ನಾವು ತೊಹೊದಲ್ಲಿಯೇ ಉಳಿದುಕೊಂಡೆವು. ಶಿನ್ ತೊಹೊ ಸೇರಲು ಹತ್ತು ಜನ ನಟರ ಗುಂಪು ಹೊರಟುಹೋದಾಗ ನಮ್ಮ ಚಿತ್ರಗಳಲ್ಲಿ ನಟಿಸಲು ಒಬ್ಬನೇ ಒಬ್ಬ ಹೆಸರಾಂತ ನಟನೂ ಉಳಿಯಲಿಲ್ಲ. ಎರಡೂ ಸ್ಟುಡಿಯೋಗಳು ತಮ್ಮದೇ ರೀತಿಯಲ್ಲಿ ಭಿನ್ನವಾಗಿ ಗುರುತಿಸಿಕೊಂಡವು. ಹಳೆಯ ಸಂಸ್ಥೆ ನಿರ್ದೇಶಕರಿಗೆ ಪ್ರಾಮುಖ್ಯತೆಯನ್ನು ನೀಡಿದರೆ ಹೊಸ ಸಂಸ್ಥೆ ನಟರನ್ನು ಮುಖ್ಯವೆಂದು ಪರಿಗಣಿಸಿತು. ಇದೇ ಘರ್ಷಣೆಯ ಕೇಂದ್ರಬಿಂದುವಾಯಿತು. ಪರಿಣಾಮವಾಗಿ ಅಣ್ಣ ತಮ್ಮಂದಿರ ನಡುವೆಯೇ ಜಗಳ ಹುಟ್ಟಿಕೊಂಡಿತು.

ಶಿನ್ ತೊಹೊ ಸೂಪರ್ ಸ್ಟಾರ್ ಗಳ ಸಾಲುಸಾಲು ಚಿತ್ರಗಳ ನಿರ್ಮಾಣದ ಘೋಷಣೆ ಮಾಡಿತು. ತೊಹೊದಲ್ಲಿದ್ದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕರು, ಚಿತ್ರಕತೆ ರಚನೆಗಾರರು ಮತ್ತು ನಿರ್ಮಾಪಕರು ದಕ್ಷಿಣ ಟೋಕಿಯೊದ ಇಜು ಪೆನಿನ್ಸುಲಾದಲ್ಲಿ ತುರ್ತು ಸಭೆ ಸೇರಿದರು. ಮರುದಿನ ನಡೆಯಲಿರುವ ಯುದ್ಧಕ್ಕೆ ಸೇನಾಧಿಪತಿಗಳೆಲ್ಲರೂ ಹಿಂದಿನ ರಾತ್ರಿ ಸಭೆ ಸೇರಿ ತಂತ್ರವನ್ನು ಹೆಣೆಯುವಂತೆ ಆ ಸಭೆಯಿತ್ತು.

ಒಂದು ರೀತಿಯಲ್ಲಿ ಅದೊಂದು ಸ್ವಪ್ರತಿಷ್ಠೆಯ ತೋರಿಕೆಯಾಗಿತ್ತು. ಈ ಸಭೆಯ ಫಲಿತಾಂಶವೆಂದರೆ ನಿರ್ದೇಶಕರ ಹೆಸರಿನಲ್ಲಿ ಹೊಸ ಚಿತ್ರಗಳ ಬಿಡುಗಡೆಯನ್ನು ಘೋಷಿಸಲಾಯಿತು. ಯೋಟ್ಸು ನೋ ಕೋಯಿ ನೋ ಮೊನೊಗಟಾರಿ (ಫೋರ್ ಲವ್ ಸ್ಟೋರಿಸ್) ಎನ್ನುವ ಚಿತ್ರದ ಒಂದೊಂದು ಭಾಗವನ್ನು ಕಿನುಗಾಸ ತೆಯ್ನೋಸ್ಕೆ, ಯಮಮೊಟೊ ಕಾಜಿರೊ, ನರುಸೆ ಮಿಕಿಯೊ ಮತ್ತು ಟೊಯೊಡಾ ಶಿರೋ ನಿರ್ದೇಶಿಸಬೇಕಿತ್ತು. ಗೋಶೋ ಹೈನೋಸ್ಕೆ ಐಮಾ ಹಿಟೊಟಾಬಿ ನೋ (ಒನ್ ಟೈಂ ನೌ) ಚಿತ್ರವನ್ನು ನಿರ್ದೇಶಿಸಬೇಕಿತ್ತು. ಯಮಮೊಟೊ ಸಾಟ್ಸುವೊ ಸೆನ್ಸೊ ಟು ಹೈವಾ (ವಾರ್ ಅಂಡ್ ಪೀಸ್) ಚಿತ್ರವನ್ನು ಕಮೀ ಫ್ಯೂಮಿಯೊ ಜೊತೆಗೂಡಿ ಸಹನಿರ್ದೇಶಿಸಬೇಕಿತ್ತು. ನಾನು ಸುಬರಾಶಿಕಿ ನಿಚಿಯೋಬಿ (ಒನ್ ವಂಡರ್ಫುಲ್ ಸಂಡೆ) ಚಿತ್ರವನ್ನು ನಿರ್ದೇಶಿಸಬೇಕಿತ್ತು.

ತನಿಗುಚಿ ಸೆಂಕುಚಿ ಆತನ ಮೊದಲ ಚಿತ್ರ ಗಿನ್ರೆಯ ನೊ ಹೇಟ್ (ಟು ದ ಎಂಡ್ ಆಫ್ ದ ಸಿಲ್ವರ್ ಮೌಂಟನ್) ನಿರ್ದೇಶಿಸಬೇಕಿತ್ತು. ನನ್ನ ಒನ್ ವಂಡರ್ಫುಲ್ ಸಂಡೆ ಚಿತ್ರಕ್ಕೆ ಚಿತ್ರಕತೆ ಬರೆಯುವುದರೊಂದಿಗೆ ಫೋರ್ ಲವ್ ಸ್ಟೋರಿಸ್ ನ ಒಂದು ಭಾಗಕ್ಕೆ ಚಿತ್ರಕತೆ ಬರೆಯಬೇಕಿತ್ತು. ಜೊತೆಗೆ ಸೆನ್ ಚಾನ್ ನ ಸಿಲ್ವರ್ ಮೌಂಟನ್ಸ್ ಗೂ ಚಿತ್ರಕತೆ ಬರೆಯುವ ಜವಾಬ್ದಾರಿ ನನ್ನ ಹೆಗಲೇರಿತ್ತು.

ಒನ್ ವಂಡರ್ಫುಲ್ ಸಂಡೆಯ ಸ್ವರೂಪವನ್ನು ಚರ್ಚಿಸಲು ವೆಕ್ಸಾ ಕಿಯೊನೆಸ್ಕೆಯನ್ನು ಭೇಟಿ ಮಾಡಿ ಆ ಕುರಿತ ವಿವರಗಳನ್ನು ಅವನಿಗೆ ನೀಡಿ ಹೊರಟೆ. ತಾನಿಗುಚಿ ಸೆಂಕಿಚಿ ಮತ್ತು ನಾನು ಹಾಟ್ ಸ್ಪ್ರಿಂಗ್ ಇನ್ನಲ್ಲಿ ಎಲ್ಲರೂ ಟೊಕಿಯೊಗೆ ಹೊರಟ ನಂತರವೂ ಉಳಿದುಕೊಂಡೆವು. ಸಿಲ್ವರ್ ಮೌಂಟನ್ಸ್ ಚಿತ್ರದ ಕತೆಯನ್ನು ಅಲ್ಲಿಯೇ ಮುಗಿಸಲು ಉದ್ದೇಶಿಸಿದ್ದೆವು. ಫೋರ್ ಲವ್ ಸ್ಟೋರೀಸ್ ಚಿತ್ರಕತೆಯನ್ನು ಸಿಲ್ವರ್ ಮೌಂಟನ್ಸ್ನ ನಂತರ ಮುಗಿಸಲು ನಿರ್ಧರಿಸಿದೆ. ಈ ಕೆಲಸಗಳ ನಂತರ ವೆಕ್ಸಾನೊಂದಿಗೆ ಒನ್ ವಂಡರ್ಫುಲ್ ಸಂಡೆ ಯ ಅಂತಿಮ ಕರಡನ್ನು ಸಿದ್ಧಪಡಿಸಲು ಹೋಗಲಿದ್ದೆ.

ಮೂರು ಚಿತ್ರಕತೆಗಳನ್ನು ನಿಗದಿತ ಸಮಯದಲ್ಲಿ ಅಂದುಕೊಂಡಂತೆ ಬರೆದುಮುಗಿಸಿದೆ. ಶಿನ್ ತೊಹೊದ ಸ್ಟಾರ್ಗಿರಿಯೊಡನೆ ಸ್ಪರ್ಧಿಸುವ ಒತ್ತಡವಿರದಿದ್ದಲ್ಲಿ ಮತ್ತು ನನ್ನೊಳಗೂ ಅದನ್ನು ವಿರೋಧಿಸುವ ತುಡಿತ ಇರದಿದ್ದಲ್ಲಿ ಇದನ್ನು ಮಾಡಲಾಗುತ್ತಿರಲಿಲ್ಲ. ಸಿಲ್ವರ್ ಮೌಂಟನ್ಸ್ ಚಿತ್ರಕತೆ ಕುರಿತು ನಮಗಿದ್ದ ಕಲ್ಪನೆಯೆಂದರೆ ಅದೊಂದು ಪರ್ವತಪ್ರದೇಶದಲ್ಲಿ ನಡೆವ ಸಾಹಸಮಯ ಚಿತ್ರ. ಸೆನ್ ಚಾನ್ ಪರ್ವತಗಳನ್ನು ಇಷ್ಟಪಡುತ್ತಿದ್ದ. ಎತ್ತರದ ಪರ್ವತ ಪ್ರದೇಶವನ್ನು ಚಿತ್ರೀಕರಣಕ್ಕಾಗಿ ಬಳಸಬೇಕಿತ್ತು.

(ವೆಕ್ಸಾ ಕಿಯೊನೆಸ್ಕೆ)

ಸೆನ್ ಚಾನ್ ಮತ್ತು ನಾನು ಮೂರು ದಿನ ಬರೆಯುವ ಮೇಜಿನ ಮುಂದೆ ಪರಸ್ಪರರ ಮುಖ ನೋಡುತ್ತಾ ಕೂತಿದ್ದೆವು. ಸ್ಫೂರ್ತಿದಾಯಕ ಎನಿಸುವಂತದ್ದು ಏನೂ ಹುಟ್ಟಲಿಲ್ಲ. ಕಡೆಗೆ ನೇರವಾಗಿ ಆಕ್ರಮಣ ಮಾಡುವುದೇ ಸರಿ ಎಂದು ನಿರ್ಧರಿಸಿ ದಿನಪತ್ರಿಕೆಯೊಂದರ ಪ್ರಮುಖ ಸುದ್ದಿಯ ಶೀರ್ಷಿಕೆಯಂತೆ ಹೀಗೆ ಬರೆದೆ : “ಮೂವರು ಬ್ಯಾಂಕ್ ದರೋಡೆಕೋರರು ನಾಗಾನೊ ಪರ್ವತ ಪ್ರಾಂತ್ಯಕ್ಕೆ ತಪ್ಪಿಸಿಕೊಂಡು ಹೋಗಿದ್ದಾರೆ. ತನಿಖಾ ತಂಡವು ಜಪಾನಿನ ಆಲ್ಪ್ಸ್ ಪರ್ವತ ಪ್ರದೇಶಕ್ಕೆ ತೆರಳಿದೆ”. ಆಮೇಲೆ ಮೂವರು ಕಳ್ಳರು ಆಲ್ಪ್ಸ್ ಹಿಮಪರ್ವತಗಳಲ್ಲಿ ಅಡಗಿಕೊಂಡಿರುವಂತೆ, ಪೋಲಿಸ್ ಇನ್ಸ್ಪೆಕ್ಟರ್ ಅವರ ಹಿಂದೆ ಹೋದಂತೆ ಬರೆದೆ. ಸೆನ್ ಚಾನ್ ನ ಪರ್ವತಾರೋಹಣದ ಅನುಭವಗಳು ಮತ್ತು ತಿಳಿವಳಿಕೆಯನ್ನು ಬಳಸಿಕೊಂಡು ದಿನವೂ ಸ್ವಲ್ಪ ಸ್ವಲ್ಪವೇ ಬರೆಯಲು ಶುರುಮಾಡಿದೆವು. ಮೂರನೇ ವಾರದ ಹೊತ್ತಿಗೆ ಟು ದ ಎಂಡ್ ಆಫ್ ಸಿಲ್ವರ್ ಮೌಂಟನ್ಸ್ ನ ಸಂಪೂರ್ಣ ಚಿತ್ರಕತೆ ಸಿದ್ಧವಾಗಿತ್ತು. ಕತೆ ಕೂಡ ಚೆನ್ನಾಗಿತ್ತು.

ಇದಾದ ತಕ್ಷಣ ಫೋರ್ ಲವ್ ಸ್ಟೋರೀಸ್ ನ ಕೆಲಸದಲ್ಲಿ ತೊಡಗಿಸಿಕೊಂಡೆ. ನಾಲ್ಕರಲ್ಲಿ ಒಂದು ಕತೆ ಮಾತ್ರ ಬರೆಯಬೇಕಿತ್ತು. ಅದರ ಕುರಿತು ಅಷ್ಟುಹೊತ್ತಿಗಾಗಲೇ ಯೋಚಿಸಿದ್ದರಿಂದ ನಾಲ್ಕು ದಿನಗಳಲ್ಲಿ ಅದನ್ನು ಬರೆದು ಮುಗಿಸಿದೆ. ಇವೆಲ್ಲವನ್ನೂ ಮುಗಿಸಿ ಬಿಡುವಾಗಿ ವೆಕ್ಸಾನೊಂದಿಗೆ ಒನ್ ವಂಡರ್ಫುಲ್ ಸಂಡೆ ಬರೆಯಲು ಕೂತೆ.

“ಮುರಸಾಕಿ” ವೆಕ್ಸಾ ಮತ್ತು ಕುರೊಸಾವ “ಶೊನಗಾನ್” ಒಂದೇ ಮೇಜಿನ ಮೇಲೆ ಕೂತು ಬರೆದು ಇಪ್ಪತ್ತೈದು ವರ್ಷಗಳಾಗಿದ್ದವು. ನಮ್ಮಿಬ್ಬರಿಗೂ ಮೂವತ್ತೇಳು ವರ್ಷ ವಯಸ್ಸು. ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದಂತೆ ಇಬ್ಬರ ಬಾಹ್ಯ ಚರ್ಯೆಗಳಷ್ಟೇ ಬದಲಾಗಿವೆ ಆಂತರ್ಯದಲ್ಲಿ ನಾವಿಬ್ಬರೂ ಇನ್ನೂ ಚಿಕ್ಕಂದಿನಲ್ಲಿದ್ದಂತೆ ಇದ್ದೇವೆ ಎನ್ನುವುದು ಅರಿವಾಯಿತು. ಪ್ರತಿದಿನ ಒಟ್ಟಾಗಿ ಕೂತು ಕೆಲಸ ಮಾಡುತ್ತಿದ್ದಂತೆ ಕಳೆದ ವರ್ಷಗಳೆಲ್ಲ ಕನಸೆನೋ ಎನ್ನಿಸಿತು. ಇಬ್ಬರು ಮಧ್ಯವಯಸ್ಕರು ಮರಳಿ “ಕೆಯ್ ಚಾನ್” ಮತ್ತು “ಕುರೊ ಚಾನ್” ಆಗಿಬಿಟ್ಟರು. ಈ ಪ್ರಪಂಚದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಕೆಯ್ನೊಸ್ಕೆ ತರಹ ಬಹಳ ಕಡಿಮೆ ಬದಲಾಗುತ್ತಾರೆ. ಇದು ಅವನ ನಿಷ್ಕಲ್ಮಷ ಹೃದಯವೋ ಅಥವ ಶುದ್ಧ ಹಠಮಾರಿತನವೋ ಗೊತ್ತಿಲ್ಲ. ದುರ್ಬಲನಾಗಿದ್ದರೂ ಶಕ್ತಿಶಾಲಿ ಎನ್ನುವಂತೆ ತೋರಿಸಿಕೊಳ್ಳುತ್ತಾನೆ; ರೊಮ್ಯಾಂಟಿಕ್ ಸ್ವಭಾವದವನಾದರೂ ವಾಸ್ತವವಾದಿ ಎನ್ನುವಂತೆ ತೋರಿಸಿಕೊಳ್ಳುತ್ತಾನೆ. ಮತ್ತೊಬ್ಬರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸಗಳನ್ನು ಮಾಡುತ್ತಲೇ ಇರುತ್ತಾನೆ. ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರಾಥಮಿಕ ಶಾಲೆಯಿಂದಲೂ ಇವನು ನನಗೆ ಸಮಸ್ಯೆಗಳನ್ನು ತಂದೊಡ್ಡುತ್ತಲೇ ಇದ್ದಾನೆ.

ಒನ್ ವಂಡರ್ಫುಲ್ ಸಂಡೆ ಗೂ ಹತ್ತು ವರ್ಷಗಳ ಮುಂಚೆ ತೋಜುರೊಸ್ ಲವ್ ಚಿತ್ರೀಕರಣ ಸಮಯದಲ್ಲಿ ಸೆಟ್ ನಲ್ಲಿ ಕ್ರೇನ್ ನಲ್ಲಿ ಎತ್ತರದಲ್ಲಿ ಕೂತಿದ್ದೆ. ಚಿತ್ರೀಕರಣದ ನಿರ್ದೇಶನಗಳನ್ನು ತಂಡಕ್ಕೆ ಮತ್ತು ಎಕ್ಸ್ಟ್ರಾ ನಟ/ನಟಿಯರಿಗೆ ನೀಡುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಪಿನ ಮಧ್ಯದಿಂದ ಕ್ಯಾಮೆರಾ ಕಡೆ ಯಾರೋ ಕೈಬೀಸಿದರು. ನಟರು ಕ್ಯಾಮೆರಾ ಕಡೆ ನೋಡಬಾರದು ಎನ್ನುವುದು ಚಿತ್ರನಿರ್ಮಾಣದ ಮೂಲಭೂತ ನಿಯಮಗಳಲ್ಲೊಂದು. ಸಿಟ್ಟಿನಲ್ಲಿ ಕೈಬೀಸಿದವನತ್ತ ಇಣುಕಿದೆ. ಹತ್ತಿರ ಹೋಗಿ ನೋಡಿದರೆ ವಿಚಿತ್ರ ಗಂಟನ್ನು ಹಾಕಿಕೊಂಡಿದ್ದ ವಿಚಿತ್ರ ಪಾತ್ರಧಾರಿ ನನ್ನತ್ತ ನೋಡಿ ನಕ್ಕ. ಅವನು “ಕುರೊ ಚಾನ್” ಎಂದಾಗ ವೆಕ್ಸಾ ಎಂದು ತಿಳಿಯಿತು. ಆಶ್ಚರ್ಯದಿಂದ ಅವನು ಅಲ್ಲೇನು ಮಾಡುತ್ತಿದ್ದಾನೆ ಎಂದು ಕೇಳಿದೆ. ಎಕ್ಸ್ಟ್ರಾ ನಟನಾಗಿ ಸಾಕಷ್ಟು ದುಡ್ಡು ಗಳಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದ. ಚಿತ್ರೀಕರಣದಲ್ಲಿ ಬಿಜಿ಼ಯಾಗಿದ್ದರಿಂದ ಅವನ ಹುಡುಗಾಟಗಳಿಗೆ ನನ್ನ ಹತ್ತಿರ ಸಮಯವಿರಲಿಲ್ಲ. ಹಾಗಾಗಿ ಐದು ಯೆನ್ ಗಳನ್ನು ಕೊಟ್ಟು ಮನೆಗೆ ಹೋಗಲು ಹೇಳಿದೆ.

ಅವನು ಹಣ ತೆಗೆದುಕೊಂಡ, ಆದರೆ ಮನೆಗೆ ಹೋಗಲಿಲ್ಲ. ಅನಾಥವಾಗಿ ಬಿದ್ದಿದ್ದ ಸಮುರಾಯ್ ವಸ್ತ್ರಗಳನ್ನು, ಉದ್ದ ಹುಲ್ಲಿನ ಟೋಪಿಯನ್ನು ನನ್ನ ಗಮನಸೆಳೆಯಲು ಹಾಕಿಕೊಂಡದ್ದಾಗಿ ಆಮೇಲೆ ನನಗೆ ಹೇಳಿದ. ನಾನು ಕೊಟ್ಟ ಹಣದೊಂದಿಗೆ ಎಕ್ಸ್ಟ್ರಾ ನಟರ ಸಂಭಾವನೆಯನ್ನು ತೆಗೆದುಕೊಂಡೆ ಎಂದ. ಅವನಿದನ್ನು ಹೇಳಿದಾಗ ಸೆಟ್ ನಲ್ಲಿ ವಿಚಿತ್ರ ಸಮುರಾಯ್ ಒಬ್ಬ ಎಲ್ಲೆಂದರಲ್ಲಿ ಓಡಾಡುತ್ತಾ ನನಗೆ ತೊಂದರೆ ಕೊಟ್ಟಿದ್ದು ನೆನಪಾಯಿತು. ಕೆಯ್ನೊಸ್ಕೆ ಹೀಗೆ ತಲೆನೋವಿನ ವ್ಯಕ್ತಿ.

ಈ ವೆಕ್ಸಾ ಒಂದು ದಿನ ಇದ್ದಕ್ಕಿದ್ದಂತೆ ಮಾಯವಾದವನು ಮತ್ತೊಂದು ದಿನ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿಬಿಡುತ್ತಾನೆ. ನನ್ನ ದೃಷ್ಟಿಯಿಂದ ಮರೆಯಾಗಿದ್ದ ದಿನಗಳಲ್ಲಿ ಅದ್ಭುತ ಎನ್ನುವಂತಹ ಸಂಗತಿಗಳನ್ನು ಮಾಡಿಬಿಡುತ್ತಾನೆ. ಜಲ್ಲಿ ಕಾರ್ಮಿಕರ ಜೊತೆಯಲ್ಲಿ ಫೋರ್ ಮನ್ ಆಗಿ ಕೆಲಸಮಾಡುತ್ತಾನೆ, ಸಿನೆಮಾಗಳಲ್ಲಿ ಎಕ್ಸ್ಟ್ರಾ ನಟನಾಗಿ ಕೆಲಸ ಮಾಡುತ್ತಾನೆ, ಟೊಕಿಯೊದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದು ನಡೆದ ಮೆರವಣಿಗೆಯಲ್ಲಿ ಭಾಗವಹಿಸುತ್ತಾನೆ. ಇದರ ನಡುವೆ ಅದ್ಭುತ ನಾಟಕಗಳನ್ನು ಮತ್ತು ಚಿತ್ರಕತೆಗಳನ್ನು ಬರೆಯುತ್ತಾನೆ.

 

ಒನ್ ವಂಡರ್ಫುಲ್ ಸಂಡೆಯ ಸ್ವರೂಪವನ್ನು ಚರ್ಚಿಸಲು ವೆಕ್ಸಾ ಕಿಯೊನೆಸ್ಕೆಯನ್ನು ಭೇಟಿ ಮಾಡಿ ಆ ಕುರಿತ ವಿವರಗಳನ್ನು ಅವನಿಗೆ ನೀಡಿ ಹೊರಟೆ. ತಾನಿಗುಚಿ ಸೆಂಕಿಚಿ ಮತ್ತು ನಾನು ಹಾಟ್ ಸ್ಪ್ರಿಂಗ್ ಇನ್ನಲ್ಲಿ ಎಲ್ಲರೂ ಟೊಕಿಯೊಗೆ ಹೊರಟ ನಂತರವೂ ಉಳಿದುಕೊಂಡೆವು. ಸಿಲ್ವರ್ ಮೌಂಟನ್ಸ್ ಚಿತ್ರದ ಕತೆಯನ್ನು ಅಲ್ಲಿಯೇ ಮುಗಿಸಲು ಉದ್ದೇಶಿಸಿದ್ದೆವು.

ಒಂದೆಡೆ ನಿಲ್ಲದ ವೆಕ್ಸಾ ಗುರಿಯಿಲ್ಲದ ಈ ಅಲೆದಾಟಗಳಿಂದ ಬಳಲಿದ್ದ. ಒನ್ ವಂಡರ್ಫುಲ್ ಸಂಡೆ ಚಿತ್ರಕತೆ ಬರೆಯಲು ಕೂತಾಗ ಇಡಿಯಾಗಿ ತನ್ನನ್ನು ತಾನು ಅದರಲ್ಲಿ ತೊಡಗಿಸಿಕೊಂಡ. ಚಿತ್ರದ ವಸ್ತು ಕೂಡ ಇದಕ್ಕೆ ಕಾರಣವಾಗಿರಬೇಕು. ಸೋತ ಜಪಾನಿನಲ್ಲಿನ ಪ್ರೇಮಿಗಳ ಹೋರಾಟದ ಕತೆಯದು. ಅಸಹಾಯಕರ ಮತ್ತು ಬದುಕಿನ ಈ ಕರಾಳತೆಯ ಕಡೆಗೆ ಆಕರ್ಷಿತನಾಗುವ ಈ ವ್ಯಕ್ತಿಗೆ ಇದು ಹೇಳಿಮಾಡಿಸಿದ ವಸ್ತುವಾಗಿತ್ತು. ಚಿತ್ರಕತೆ ಬರೆಯುವಾಗ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದದ್ದು ಬಹಳ ಕಡಿಮೆ.

ಆದರೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಇಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯ ಬಂತು. ಬಡ ಪ್ರೇಮಿಗಳಿಬ್ಬರೂ ವರ್ತುಲಾಕಾರದ ಖಾಲಿ ರಂಗಮಂದಿರದಲ್ಲಿನ (ಆಂಪಿಥಿಯೇಟರ್) ಸಂಗೀತ ಕಛೇರಿಯಲ್ಲಿದ್ದಾರೆ. ಅವರು ತಮ್ಮ ಕಲ್ಪನೆಯಲ್ಲಿ ಶುಬರ್ಟ್ ನ “ಅನ್ ಫಿನೀಶ್ಡ್ ಸಿಂಫೋನಿ” ಕೇಳುತ್ತಿದ್ದಾರೆ. ಸಹಜವಾಗಿಯೇ ಈ ದೃಶ್ಯದಲ್ಲಿ ಸಿನಿಮಾದ ಸೌಂಡ್ ಟ್ರ್ಯಾಕ್ ನಲ್ಲಿ ಯಾವುದೇ ಸಂಗೀತವಿರುವುದಿಲ್ಲ. ಆ ಹುಡುಗಿ ಸಿನೆಮಾದ ನಿಯಮವನ್ನು ಮುರಿದು ಪ್ರೇಕ್ಷಕರತ್ತ ಅಂದರೆ ಪರದೆಯತ್ತ ತಿರುಗಿ ಅವರೊಡನೆ ಮಾತಾಡುತ್ತಾಳೆ. “ದಯವಿಟ್ಟು ನಿಮಗೆ ನಮ್ಮ ಬಗ್ಗೆ ಅಯ್ಯೋ ಪಾಪ ಅನ್ನಿಸಿದ್ದರೆ ನೀವೆಲ್ಲರೂ ಚಪ್ಪಾಳೆ ತಟ್ಟಿ. ನೀವು ಚಪ್ಪಾಳೆ ತಟ್ಟಿದರೆ ನಮಗೆ ಸಂಗೀತ ಕೇಳುತ್ತದೆ ಎನ್ನುವ ನಂಬಿಕೆಯಿದೆ” ಎನ್ನುತ್ತಾಳೆ. ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೆ. ಚಿತ್ರದಲ್ಲಿನ ಹುಡುಗ ಸಂಗೀತ ನಿರ್ದೇಶಕನ ತಾಳದಂಡವನ್ನು ಕೈಗೆತ್ತಿಕೊಳ್ಳುತ್ತಾನೆ. ಅವನು ಅದನ್ನು ಆಡಿಸಲು ಶುರುಮಾಡುತ್ತಿದ್ದಂತೆ “ಅನ್ ಫಿನೀಶ್ಡ್” ಸೌಂಡ್ ಟ್ರ್ಯಾಕ್ ನಲ್ಲಿ ಕೇಳಲಾರಂಭಿಸುತ್ತದೆ.

(ನಕಕಿತಾ ಚಿಎಕೊ)

ಪ್ರೇಕ್ಷಕರನ್ನು ನೇರವಾಗಿ ಉದ್ದೇಶಿಸಿ ಹೇಳುವ ಮೂಲಕ ಅವರನ್ನು ಚಿತ್ರದಲ್ಲಿ ಭಾಗವಹಿಸುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು. ಪ್ರೇಕ್ಷಕರು ಚಿತ್ರ ನೋಡಲು ಹೋದಾಗ ಹೆಚ್ಚುಕಡಿಮೆ ಅದರಲ್ಲಿ ಮಾನಸಿಕವಾಗಿ ಭಾಗಿಯಾಗಿ ತಮ್ಮನ್ನು ಮರೆಯುತ್ತಾರೆ. ಆದರಿದು ಅವರ ಮನಸ್ಸುಗಳಲ್ಲಿ ನಡೆಯುವ ಪ್ರಕ್ರಿಯೆ. ಅದು ಬಾಹ್ಯಕ್ರಿಯೆಯಾಗಿ ವ್ಯಕ್ತವಾಗುವುದು ಕಡಿಮೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಚಪ್ಪಾಳೆಯ ಮೂಲಕ ವ್ಯಕ್ತವಾಗಬಹುದು. ಈ ದೃಶ್ಯದಲ್ಲಿ ಪ್ರೇಕ್ಷಕರು ನಿಜವಾಗಿಯೂ ಕಥೆಯಲ್ಲಿ ಭಾಗಿಯಾಗುವಂತೆ ಮಾಡಿ ಚಿತ್ರದ ಪ್ರಭಾವ ಅವರ ಮೇಲಾಗುವುದನ್ನು ನೋಡಬೇಕೆಂದುಕೊಂಡೆ.

ನನ್ನ ಈ ಐಡಿಯಾಗೆ ಪ್ರತಿಯಾಗಿ ವೆಕ್ಸಾ ಮತ್ತೊಂದು ಐಡಿಯಾವನ್ನು ಮುಂದಿಟ್ಟ. ದೃಶ್ಯದ ಆರಂಭದಲ್ಲಿ ಖಾಲಿ ರಂಗಮಂದಿರವನ್ನು ತೋರಿಸುವುದು. ಆ ಹುಡುಗಿ ಮನವಿ ಮಾಡಿಕೊಂಡ ನಂತರ ಚಪ್ಪಾಳೆಯ ಸದ್ದು ಕೇಳುತ್ತದೆ. ನಂತರ ಕತ್ತಲಲ್ಲಿ ಕ್ಯಾಮೆರಾ ಅಲ್ಲಲ್ಲಿ ಕೂತ ಜೋಡಿಗಳನ್ನು ತೋರುತ್ತದೆ. ಚಪ್ಪಾಳೆ ತಟ್ಟಿದ ಈ ಜೋಡಿಗಳು ನಮ್ಮ ಕತೆಯ ನಾಯಕ ನಾಯಕಿಯನ್ನು ಹೋಲುತ್ತಾರೆ. ವೆಕ್ಸಾ ಹೇಳಿದ ಈ ಐಡಿಯಾ ನನಗಿಷ್ಟವಾಗಲಿಲ್ಲ. ಅದನ್ನು ಅಳವಡಿಸಲು ಒಪ್ಪಲಿಲ್ಲ. ನಾವಿಬ್ಬರೂ ಮೂಲಭೂತವಾಗಿ ವಿಭಿನ್ನ ರೀತಿಯ ವ್ಯಕ್ತಿಗಳು ಎಂದು ವೆಕ್ಸಾ ಹೇಳುವಷ್ಟು ಗಂಭೀರವಾದ ಕಾರಣವೇನೂ ಇದರ ಹಿಂದೆ ಇಲ್ಲ. ನನ್ನ ಐಡಿಯಾ ಬಳಸಿ ನಿರ್ದೇಶನದಲ್ಲೊಂದು ಪ್ರಯೋಗ ಮಾಡಬೇಕೆಂದುಕೊಂಡೆ ಅಷ್ಟೇ. ಈ ಪ್ರಯೋಗ ಜಪಾನಿನಲ್ಲಿ ಸೋತಿತು. ಜಪಾನಿನ ಪ್ರೇಕ್ಷಕರು ಕಲ್ಲಿನಂತೆ ಕೂತಿದ್ದರು. ಅವರಿಗೆ ತಮ್ಮನ್ನು ಚಿತ್ರದೊಂದಿಗೆ ಸಮೀಕರಿಸಿಕೊಂಡು ಚಪ್ಪಾಳೆ ತಟ್ಟಲು ಸಾಧ್ಯವಾಗದೆ ಹೋದ್ದರಿಂದ ಪ್ರಯೋಗ ವಿಫಲವಾಯಿತು. ಆದರೆ ಪ್ಯಾರಿಸ್ ನಲ್ಲಿ ಯಶಸ್ವಿಯಾಯಿತು. ಫ್ರೆಂಚ್ ಪ್ರೇಕ್ಷಕರು ಕಿವಿಗಡಚಿಕ್ಕುವಂತೆ ತಟ್ಟಿದ ಚಪ್ಪಾಳೆಯೊಂದಿಗೆ ಆರ್ಕೆಸ್ಟ್ರಾದ ಸಂಗೀತವು ಸೇರಿ ನಾನು ನಿರೀಕ್ಷಿಸಿದ್ದ ಅಪರೂಪದ ವಿಚಿತ್ರ ಭಾವನೆಯನ್ನು ಹುಟ್ಟುಹಾಕಿತು.

ಒನ್ ವಂಡರ್ಫುಲ್ ಸಂಡೆಯ ಈ ದೃಶ್ಯದ ಬಗ್ಗೆ ಮತ್ತೊಂದು ಮರೆಯಲಾಗದ ಸಂಗತಿಯಿದೆ. “ಅನ್ ಫಿನಿಶ್ಡ್ ಸಿಂಫೋನಿ” ಗೆ ಸಂಗೀತ ನಿರ್ದೇಶಕನ ತಾಳದಂಡವನ್ನು ಆಡಿಸುವ ಕತೆಯ ನಾಯಕನ ಪಾತ್ರವನ್ನು ಮಾಡಿದ ನಟ ನುಮಸಾಕಿ ಇಸಾವೊ. ಈತನಿಗೆ ಸಂಗೀತದ ಗಂಧಗಾಳಿ ಗೊತ್ತಿರಲಿಲ್ಲ. ಸಂಗೀತ ಕುರಿತಂತೆ ಹಲವು ರೀತಿಯ ಅಸೂಕ್ಷ್ಮತೆಗಳಿರುತ್ತವೆ. ಆದರೆ ನುಮಸಾಕಿಗೆ ಧ್ವನಿಯಲ್ಲಿನ ನವಿರು, ತೀಕ್ಷ್ಣ ಅಥವ ಆಳವನ್ನು ಕೂಡ ಗುರುತಿಸಲಾಗುತ್ತಿರಲಿಲ್ಲ. ಆದರೆ ನಾವಿದನ್ನು ಕಡೆಗಣಿಸುವಂತಿರಲಿಲ್ಲ. ನುಮಸಾಕಿ ಬೆದುರುಗೊಂಬೆಯಂತೆ ಕೈಯಾಡಿಸುತ್ತಿದ್ದ. ನಾನು ಮತ್ತು ಹಟ್ಟೊರಿ ದಿನವೂ ಅವನಿಗೆ ಸಿಂಫೋನಿಯನ್ನು ನಡೆಸುವುದು ಹೇಗೆ ಎಂದು ಹೇಳಿಕೊಡಲಾರಂಭಿಸಿದೆವು. ಕೈಕೆಲಸಗಳಲ್ಲಿ ಸದಾ ಹಿಂದಿರುವ ನನ್ನನ್ನು ಟೆಲಿಫೋನ್ ನಲ್ಲಿ ನಂಬರ್ ತಿರುಗಿಸುವಾಗ ಚಿಂಪಾಂಜಿಯಂತೆ ಕಾಣುತ್ತೇನೆ ಎನ್ನುತ್ತಾರೆ. ಅಂತಹ ನಾನು ನುಮಸಾಕಿಗೆ ಹೇಳಿಕೊಡುತ್ತಾ ಹಟ್ಟೋರಿ “ಶುಬರ್ಟ್ ನ “ಅನ್ ಫಿನೀಶ್ಡ್ ಸಿಂಫೋನಿ”ಯ ಮೊದಲ ಚಲನೆಯನ್ನು ನಡೆಸಲು ರೆಡಿನಾ” ಎಂದು ಹೇಳುವಂತಾಯಿತು. ಅಂದರೆ ಇದಕ್ಕಾಗಿ ಎಷ್ಟು ಶ್ರಮ ಹಾಕಿದೆ ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಬಹುದು.

ಒನ್ ವಂಡರ್ಫುಲ್ ಸಂಡೆ ಯ ಮುಖ್ಯಪಾತ್ರಧಾರಿಗಳು ನುಮಸಾಕಿ ಮತ್ತು ನಕಕಿತಾ ಚಿಎಕೊ. ಆಗ ಅವರಿಬ್ಬರೂ ಇನ್ನೂ ಜನರಿಗೆ ಪರಿಚಿತರಾಗಿರಲಿಲ್ಲ. ನಗರದೊಳಗೆ ಚಿತ್ರೀಕರಣ ನಡೆಸುವ ಹೊತ್ತಿನಲ್ಲಿ ನಟನಟಿಯರ ಮುಖ ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ ನಾವು ಕೇವಲ ಕ್ಯಾಮೆರಾವನ್ನು ಅಡಗಿಸಿಡಬೇಕಿತ್ತು. ಈ ರೀತಿ ಕ್ಯಾಮರಾ ಅಡಗಿಸಿಟ್ಟು ಚಿತ್ರೀಕರಿಸಬೇಕಾದ ಸ್ಥಳಗಳಲ್ಲಿ ನಾವು ಕ್ಯಾಮೆರಾವನ್ನು ಪೆಟ್ಟಿಗೆಯೊಂದರಲ್ಲಿ ಹಾಕಿ ಬಟ್ಟೆ ಚೀಲದಲ್ಲಿ ಸುತ್ತಿಬಿಡುತ್ತಿದ್ದೆವು. ಲೆನ್ಸ್ ಬಳಿ ಮಾತ್ರ ತೂತು ಮಾಡಿರುತ್ತಿದ್ದ ಈ ಕ್ಯಾಮೆರಾವನ್ನು ಕೈಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದೆವು.

(ನುಮಸಾಕಿ ಇಸಾವೊ)

ಒಂದು ದಿನ ಟೊಕಿಯೊದ ಶಿಂಜುಕು ನಿಲ್ದಾಣದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಿದೆವು. ಕ್ಯಾಮೆರಾವನ್ನು ಪ್ಲಾಟ್ಫಾರಂನಲ್ಲಿ ಸಿದ್ಧವಾಗಿಟ್ಟುಕೊಂಡು ರೈಲಿಗಾಗಿ ಕಾಯುತ್ತಿದ್ದೆವು. ರೈಲಿನಿಂದ ನಕಕಿತಾ ಇಳಿಯುವುದನ್ನು ಚಿತ್ರೀಕರಿಸಬೇಕಿತ್ತು. ಅಲ್ಲಿ ನಿಂತಿದ್ದಾಗ ಮುದುಕರೊಬ್ಬರು ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದು ನೇರವಾಗಿ ಕ್ಯಾಮೆರಾ ಮುಂದೆ ನಿಂತುಬಿಟ್ಟರು. ಅವರನ್ನು ಪಕ್ಕಕ್ಕೆ ತಳ್ಳಿದೆ. ಪಕ್ಕಕ್ಕೆ ಹೋದ ತಕ್ಷಣ ಆತ ಆತಂಕದಿಂದ ಜೇಬಿನಲ್ಲಿದ್ದ ಪರ್ಸನ್ನು ತೆಗೆದುನೋಡಿಕೊಂಡರು. ಅವರು ನನ್ನನ್ನು ಜೇಬುಗಳ್ಳ ಎಂದುಕೊಂಡರು.

ಮತ್ತೊಮ್ಮೆ ಶಿಂಜುಕುವಿನ ರಸ್ತೆಬದಿಯ ಮಾರ್ಗದಲ್ಲಿ ಕ್ಯಾಮರಾವನ್ನು ಬಚ್ಚಿಟ್ಟು ಚಿತ್ರೀಕರಿಸುತ್ತಿದ್ದೆವು. ನುಮಸಾಕಿ ಮತ್ತು ನಕಕಿತಾ ಕ್ಯಾಮೆರಾ ಕಡೆ ನಡೆದುಬರುತ್ತಿರುವಾಗ ಹಾದಿಯಲ್ಲಿ ಹೋಗುತ್ತಿದ್ದವನೊಬ್ಬ ಅವರ ಮುಂದೆ ಬಂದು ಅವಳ ಹಿಂದೆ ಠಳಾಯಿಸಲು ಶುರುಮಾಡಿದ. ಕ್ಯಾಮರಾ ಅವರೆಡೆಗೆ ಕೇಂದ್ರೀಕರಿಸಿತ್ತು. ನುಮಸಾಕಿ ಮತ್ತು ನಕಕಿತಾಗೆ ಅದರಿಂದ ಬೇರೆಡೆ ಗಮನಸೆಳೆಯಲು ಸಾಧ್ಯವಿರಲಿಲ್ಲ. ನುಮಸಾಕಿ ದೊಗಲೆ ಅಂಗಿಯ ಮೇಲೆ ಮಿಲಿಟರಿ ಓವರ್ ಕೋಟ್ ಹಾಕಿದ್ದ. ನಕಕಿತಾ ದೊಡ್ಡ ಸೈಜಿನ ರೈನ್ ಕೋಟ್ ಧರಿಸಿ ಸಾಮಾನ್ಯವಾಗಿ ಎಲ್ಲಿ ಬೇಕಾದರೂ ಕಾಣಬಹುದಾದ ಸ್ಕಾರ್ಫ್ ಕಟ್ಟಿದ್ದಳು. ಹಾಗಾಗಿ ಅವರನ್ನು ಗುಂಪಿನಿಂದ ಬೇರ್ಪಡಿಸಿ ಗುರುತಿಸುವುದು ಸಾಧ್ಯವಿರಲಿಲ್ಲ. ನಿಜ ಹೇಳಬೇಕೆಂದರೆ ಅಲ್ಲಿನ ಗುಂಪಿನಲ್ಲಿದ್ದ ಜೋಡಿಗಳ ನಡುವೆ ಅವರೆಷ್ಟು ಹೊಂದಿಕೊಂಡಿದ್ದರೆಂದರೆ ನನಗೆ ಮತ್ತು ಛಾಯಾಗ್ರಾಹಕನಿಗೆ ಹಲವು ಬಾರಿ ಅವರು ಗುಂಪಿನಲ್ಲಿದ್ದಾಗ ಗುರುತು ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಜಪಾನಿನಲ್ಲಿ ಆ ರೀತಿಯ ಯುವಜೋಡಿಗಳನ್ನು ಎಲ್ಲಿ ಬೇಕಾದರೂ ಕಾಣಬಹುದಿತ್ತು. ಈ ರೀತಿಯಲ್ಲಿ ಅವರು ಆ ಕತೆಯ ಅವಿಭಾಜ್ಯ ಅಂಗವಾಗಿದ್ದರು. ಇದೇ ಕಾರಣಕ್ಕೆ ಈಗ ನಾನವರನ್ನು ಕುರಿತು ಯೋಚಿಸಿದಾಗ ಅವರು ಚಿತ್ರದ ನಾಯಕ ನಾಯಕಿ ಎನ್ನುವುದಕ್ಕಿಂತಲೂ ಶಿಂಜುಕು ಯುದ್ಧದ ನಂತರ ಆಕಸ್ಮಿಕವಾಗಿ ಅವರನ್ನು ಭೇಟಿಯಾದೆ. ಅವರೊಂದಿಗೆ ಮಾತಾಡುತ್ತಾ ಸ್ನೇಹಿತರಾದೆವು ಅನ್ನಿಸುತ್ತದೆ.

ಒನ್ ವಂಡರ್ಫುಲ್ ಸಂಡೆ ಬಿಡುಗಡೆಯಾಗಿ ಹಲವು ದಿನಗಳ ನಂತರ ನನಗೊಂದು ಪತ್ರ ಬಂದಿತು. ಅದರಲ್ಲಿ “ಒನ್ ವಂಡರ್ಫುಲ್ ಸಂಡೆ ಚಿತ್ರ ಮುಗಿದಮೇಲೆ ಚಿತ್ರಮಂದಿರದಲ್ಲಿ ದೀಪಗಳು ಬೆಳಗಿದವು. ಪ್ರೇಕ್ಷಕರು ಹೊರಹೋಗಲು ಎದ್ದುನಿಂತರು. ಆದರೆ ಒಬ್ಬ ಮುದುಕ ಮಾತ್ರ ಸೀಟಿನಲ್ಲಿ ಕೂತು ಬಿಕ್ಕುತ್ತಿದ್ದ…” ಎಂದು ಬರೆದಿತ್ತು. ಅದನ್ನು ಓದುತ್ತ ಖುಷಿಯಿಂದ ಕೂಗುವಂತಾಯಿತು. ಅಳುತ್ತಿದ್ದ ಆ ಮುದುಕ ನಮ್ಮ ಪ್ರಾಥಮಿಕ ಶಾಲೆಯ ಮೇಷ್ಟ್ರು ತಚಿಕಾವ. ನನಗೆ ಮತ್ತು ವೆಕ್ಸಾನಿಗೆ ಪ್ರೀತಿ ತೋರಿಸಿ ಶಿಕ್ಷಣವನ್ನು ಕೊಟ್ಟವರು. “ಚಿತ್ರದ ಕೊನೆಯಲ್ಲಿನ ತಂಡದವರ ಹೆಸರುಗಳ ಪಟ್ಟಿ ನೋಡುತ್ತಿರುವಾಗ ಚಿತ್ರಕತೆ: ವೆಕ್ಸಾ ಕೆಯ್ನೊಸ್ಕೆ, ನಿರ್ದೇಶಕ : ಕುರೊಸೊವ ಅಕಿರ ಎಂದಿದ್ದನ್ನು ನೋಡಿ ಕಣ್ಣು ಮಂಜಾಯಿತು. ಮುಂದಿನದನ್ನು ನನ್ನಿಂದ ಓದಲಾಗಲಿಲ್ಲ” ಎಂದು ತಚಿಕಾವ ಬರೆದಿದ್ದರು.

ತಕ್ಷಣ ವೆಕ್ಸಾನಿಗೆ ಕರೆಮಾಡಿದೆ. ತಚಿಕಾವ ಅವರನ್ನು ತೊಹೊ ಸ್ಟುಡಿಯೊದಲ್ಲಿ ರಾತ್ರಿ ಊಟಕ್ಕೆ ಆಹ್ವಾನಿಸಲು ನಿರ್ಧರಿಸಿದೆವು. ಆಹಾರದ ಪೂರೈಕೆಯಲ್ಲಿ ಕೊರತೆಯಿದ್ದಾಗ ಕನಿಷ್ಠ ಸುಕಿಯಾಕಿಯಂತಹ ರುಚಿಕರವಾದ ಖಾದ್ಯ ತಿನ್ನಲು ಸಿಗುತ್ತಿತ್ತು.

ತಚಿಕಾವ ಅವರೊಂದಿಗೆ ಊಟ ಮಾಡಿ ಇಪ್ಪತ್ತೈದು ವರ್ಷಗಳಾಗಿದ್ದವು. ಅವರಿಗೆ ವಯಸ್ಸಾಗಿ ಕುಗ್ಗಿಹೋಗಿದ್ದರು. ಅವರ ಹಲ್ಲುಗಳು ಎಷ್ಟು ನಿಶ್ಯಕ್ತವಾಗಿದ್ದವೆಂದರೆ ಸುಕಿಯಾಕಿಯಲ್ಲಿದ್ದ ಮಾಂಸವನ್ನು ಅಗಿದು ತಿನ್ನಲು ಆಗಲಿಲ್ಲ. ಅವರನ್ನು ಆ ರೀತಿ ನೋಡಿ ಬೇಸರವಾಯಿತು. ಅವರಿಗೆ ಏನಾದರೂ ಮೆತ್ತಗಿರುವ ತಿಂಡಿ ತರೋಣವೆಂದು ಎದ್ದು ನಿಂತಾಗ ನಮ್ಮನ್ನು ತಡೆದರು. ನಮ್ಮನ್ನು ನೋಡಿದ್ದೆ ದೊಡ್ಡ ಹಬ್ಬ ಎಂದರು. ಅವರ ಮಾತಿನಿಂದ ನಾವಿಬ್ಬರೂ ಭಾವುಕರಾಗಿ ಸುಮ್ಮನೆ ಕೂತೆವು. ನಮ್ಮಿಬ್ಬರ ಮುಖಗಳನ್ನು ನೋಡುತ್ತಾ ಏನೇನೋ ಸದ್ದುಗಳನ್ನು ಮಾಡುತ್ತಾ ಒಪ್ಪಿಗೆಯಿಂದ ಮೆಚ್ಚುಗೆಯಿಂದ ತಲೆದೂಗಿದರು. ಅವರನ್ನು ದಿಟ್ಟಿಸಿನೋಡುತ್ತಿದ್ದಂತೆ ನನ್ನ ವೃದ್ಧ ಮೇಷ್ಟ್ರ ಮುಖ ಅಸ್ಪಷ್ಟವಾಗಿ ಕಣ್ಣು ಮಂಜಾಗಿ ಅವರನ್ನು ಸ್ಪಷ್ಟವಾಗಿ ನೋಡಲಾಗಲಿಲ್ಲ.