ಒಳಾಂಗಣದ ಬದುಕು ಎಷ್ಟೇ ಚೆನ್ನಾಗಿದ್ದರೂ, ಸುಂದರವಾಗಿದ್ದರೂ ಅದೇ ಸರ್ವಸ್ವವಲ್ಲ. ಮನುಷ್ಯ ಕೊನೆಗೂ ಗೆಲ್ಲಬೇಕಾದ್ದು ಹೊರ ಜಗತ್ತನ್ನು, ಬದುಕಬೇಕಾದ್ದು ಕೂಡ ಹೊರ ಜಗತ್ತಿನಲ್ಲಿ. ಒಳಾಂಗಣದಲ್ಲೇ ಲೋಲುಪರಾಗಿ ಕಾಲ ಕಳೆಯುತ್ತಾ ಕೂರಬಾರದು. ಎರಡರ ಸಮನ್ವಯವಿರಬೇಕು. ಪರಸ್ಪರ ಚಲನೆಯಿರಬೇಕು. ಹುಲಿಕಲ್ಲು ನೆತ್ತಿಯ ಮೇಲಿನ ಒಳಾಂಗಣದ ಸುತ್ತ ಇರುವ ಅನಂತ ಕಾಲದ ಪ್ರಾಕೃತಿಕ ಶ್ರೀಮಂತಿಕೆಯ ಹೊರಾಂಗಣದ ಮಹತ್ವ ಕುವೆಂಪು ಭೇಟಿ ಮಾಡಿದ ಎಷ್ಟೋ ದಿನಗಳ ನಂತರ ನನಗೆ ಅರ್ಥವಾಯಿತು
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎರಡನೇ ಪ್ರಬಂಧ ನಿಮ್ಮ ಓದಿಗೆ
ಗೃಹಪ್ರವೇಶದ ಸಮಾರಂಭಗಳಿಗೆ ನಿರಂತರವಾಗಿ ಆಹ್ವಾನ ಪತ್ರಿಕೆಗಳು ಬರುತ್ತಲೇ ಇರುತ್ತವೆ. ವಿಲ್ಲಾಗಳು/ಬಂಗಲೆಗಳು, ಡೂಪ್ಲೆಕ್ಸ್ ಮನೆಗಳು, ನಾಲ್ಕಾರು ಬೆಡ್ ರೂಮ್, ಮೂರು ನಾಲ್ಕು ಸ್ನಾನಗೃಹಗಳಿರುವ ಮನೆಗಳು ಇಂತಹ ವಸತಿಗಳನ್ನು ಕಟ್ಟಿಕೊಂಡು, ಕೊಂಡುಕೊಂಡು, ಆಹ್ವಾನಿಸುವವರೆಲ್ಲ ಬಂಧುಮಿತ್ರರೇ ಆಗಿರುತ್ತಾರೆ. ಸ್ವಂತಕ್ಕೆ ಮನೆ ಕಟ್ಟಿಕೊಳ್ಳುವುದು ಮಧ್ಯ ವಯಸ್ಸಿನ ಒಂದು ಮುಖ್ಯ ಘಟ್ಟ. ಇದರ ಹಿಂದೆ ದೃಢ ನಿರ್ಧಾರ, ಹಣ ಕಾಸಿನ ಲೆಕ್ಕಾಚಾರ, ಮುಂದಿನ ಇಪ್ಪತ್ತೈದು-ಮೂವತ್ತು ವರ್ಷಗಳು ಸಂಸಾರ ಬೆಳೆಯಬೇಕಾದ ರೀತಿಯ ದೃಷ್ಟಿಕೋನ ಎಲ್ಲವೂ ಸೇರಿಕೊಂಡಿರುತ್ತದೆ. ಹಾಗಾಗಿ ನಮಗೂ ಸಂತೋಷ. ಸಂತೋಷದ ಹಿಂದೆಯೇ ನಮ್ಮ ಮನೆ, ನಮ್ಮ ಮಕ್ಕಳ ಮನೆಗಳ ಹೋಲಿಕೆ, ಅಸೂಯೆ, ಮೇಲರಿಮೆ, ಕೀಳರಿಮೆ, ಕರುಬುವಿಕೆ ಜಾಗೃತವಾಗುತ್ತದೆ. ಅಸಹನೆ, ಅಸೂಯೆ ಹೆಚ್ಚಾದಂತೆಲ್ಲ ಮನೆ ಕಟ್ಟುತ್ತಿರುವ, ಕೊಳ್ಳುತ್ತಿರುವ ಮಾಲೀಕರು ಮತ್ತು ಅವರ ಕುಟುಂಬದ ಬಗ್ಗೆ ನಮಗಿರುವ ನಕಾರಾತ್ಮಕ ಭಾವನೆಗಳೇ ಮುನ್ನೆಲೆಗೆ ಬರುತ್ತವೆ. ಒಂದು ರೀತಿಯ ವಿಕೃತ ಸಂತೋಷ, ಉನ್ಮಾದ ತುಂಬಿದ ನೆಮ್ಮದಿ.
ಇದೆಲ್ಲ ತತ್ಕ್ಷಣದ ಸಹಜ ಮನುಷ್ಯ ಪ್ರತಿಕ್ರಿಯೆ. ಆದರೆ ಒಂದು ಕುಟುಂಬದ ನೆಮ್ಮದಿ, ಸಂತೋಷ, ತೃಪ್ತಿ ಯಾವುದೂ ಮನೆಯ ಆಕಾರ, ಆಕೃತಿ, ಎತ್ತರ ಅಗಲಗಳ ಮೇಲೆ, ರೂಮು, ಟಾಯಿಲೆಟ್ಗಳ ಸಂಖ್ಯೆಯ ಮೇಲೆ ನಿಂತಿರುವುದಿಲ್ಲ. ಒಳಾಂಗಣದಲ್ಲಿ ಕುಟುಂಬದ ಸದಸ್ಯರು ಯಾವ ರೀತಿ ಬದುಕುತ್ತಾರೆ, ನಗುತ್ತಾರೆ, ಸಂತೋಷ ಪಡುತ್ತಾರೆ, ಅಸಹಾಯಕರಾಗುತ್ತಾರೆ, ನಿಟ್ಟುಸಿರು ಬಿಡುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಒಂದು ಮನೆಯ ಒಳಾಂಗಣವನ್ನು ಎಲ್ಲಿ ಹುಡುಕಬಹುದು, ಎಲ್ಲಿ ಕಾಣಬಹುದು, ಬಚ್ಚಲು ಮನೆಯೇ, ಶಯ್ಯಾಗೃಹವೇ, ಹಿತ್ತಲೇ, ದಿವಾನ್ ಖಾನೆಯೇ, ದೇವರ ಮನೆಯೇ ನನ್ನ ಪ್ರಕಾರ ಯಾವುದು ಬೇಕಾದರೂ ಆಗಬಹುದು. ಎಲ್ಲಿ ಬೇಕಾದರೂ ಆಗಬಹುದು, ಜಗುಲಿ ಕೂಡ ಆಗಬಹುದು, ಮೆಟ್ಟಿಲು ಕೂಡ ಆಗಬಹುದು. ಕುಟುಂಬದ ಸದಸ್ಯರು ಒಂಟಿಯಾಗಿ, ಖಾಸಗಿಯಾಗಿ ಕಾಲ ಕಳೆಯುವ, ತಮ್ಮನ್ನು ತಾವು ಕಂಡುಕೊಳ್ಳುವ, ಎದುರಿಸುವ ಮನೆಯ, ಮನೆಯೊಳಗಿನ ಮನಸ್ಸಿನ ಭಾಗವನ್ನು ಒಳಾಂಗಣವೆಂದು ಕರೆಯಬಹುದು.
ನೀವು ಒಬ್ಬರ ಮನೆಗೆ ಹೋದಾಗ, ಒಳಾಂಗಣವನ್ನು ಯಾರೊಬ್ಬರೂ ಕರೆದು ತೋರಿಸುವುದಿಲ್ಲ. ಆದರೆ ಮನೆಯೊಳಗಿರುವವರು ಬದುಕುತ್ತಿರುವ ರೀತಿಯಲ್ಲಿ ಅದು ನಿಮ್ಮ ಅನುಭವಕ್ಕೆ, ಗ್ರಹಿಕೆಗೆ ಬರುತ್ತದೆ. ವೆರಾಂಡದಲ್ಲಿ ಸೋಫಾ ಸೆಟ್ ಮೇಲೆ ಕೂರಿಸಿ ಕಾಫಿ ತಿಂಡಿ ಕೊಟ್ಟು ಚೆನ್ನಾಗಿ ಮಾತನಾಡಿಸಬಹುದು. ರೋಸ್ ವುಡ್ ಮರದಿಂದ ತಯಾರಿಸಿದ ಊಟದ ಟೇಬಲ್ ಮೇಲೆ ಭಕ್ಷ್ಯ ಭೋಜನ ನೀಡಬಹುದು. ಎಲ್ಲ ಆದಮೇಲೆ ಉಡುಗೊರೆಯನ್ನು ಕೊಡಬಹುದು. ಎಲ್ಲವೂ ಸುಂದರವಾಗಿರಬಹುದು, ಅತ್ಯಾಧುನಿಕವಾಗಿರಬಹುದು. ಹೀಗೆಲ್ಲ ಮಾಡುವಾಗ ಮನೆಯ ಒಳಾಂಗಣವನ್ನು ನಿಮ್ಮಿಂದ ಮುಚ್ಚಿಡತ್ತಲೂ ಇರಬಹುದು. ಎಲ್ಲವೂ ಚಂದವಾಗಿ ಸುಸೂತ್ರವಾಗಿ ಕಾಣುವ ಮನೆಗಳಲ್ಲಿ ಒಳಾಂಗಣವೇ, ಒಳಾಂಗಣದ ಬದುಕೇ ಇಲ್ಲದಿರಬಹುದು. ಯಾವುದೋ ಮೂಲೆಯಲ್ಲಿರುವ ಜೇಡರ ಬಲೆ, ಅಂಗಡಿಯಿಂದ ತಂದರೂ ಬಿಚ್ಚಿರದ ಸಾಮಾನು, ಟೆಲಿವಿಷನ್ ಹತ್ತಿರ ಅಸ್ತವ್ಯಸ್ತವಾಗಿ ಬಿದ್ದಿರುವ ಕೀಗೊಂಚಲು, ಕಾಫಿ ತಿಂಡಿಯನ್ನು ಮನೆಯೊಡತಿ ತಂದುಕೊಡುವಾಗ ಸೂಸುವ ಕೃತಕ ನಗು, ಹೀಗೆ ಹತ್ತು ಹಲವು ಸಂಗತಿಗಳ ಮೂಲಕ ಒಳಾಂಗಣ ಅಭಿವ್ಯಕ್ತಿ ಪಡೆಯುತ್ತಿರುತ್ತದೆ. ಇದನ್ನೆಲ್ಲ ಯಾರೂ ಉದ್ದೇಶಪೂರ್ವಕವಾಗಿ ಮುಚ್ಚಿಡುವುದಿಲ್ಲ. ಹಾಗೆಂದು ತೋರಿಸಿಕೊಳ್ಳಲು ಕೂಡ ಹೋಗುವುದಿಲ್ಲ. ಒಳಾಂಗಣ, ಒಳಾಂಗಣದ ಬದುಕು ಅನಂತ ರೀತಿಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ.
ಒಂದೇ ಒಂದು ಕೋಣೆಗೂ ಕೂಡ ಸೌಕರ್ಯ ಇಲ್ಲದ ಮನೆಗಳು, ಬಾಗಿಲುಗಳೇ ಇಲ್ಲದ ಗುಡಿಸಲುಗಳು, ಎಂಟು ಹತ್ತು ಜನ ಒಂದೇ ಜಾಗದಲ್ಲಿ ಮಲಗಬೇಕಾದ ಅನಿವಾರ್ಯತೆಯನ್ನು ಇನ್ನೂ ನಮ್ಮ ದೇಶದ ಕೋಟ್ಯಾಂತರ ಜನರು ಎದುರಿಸುತ್ತಿರುವಾಗ ನಿಮ್ಮದು ಯಾವ ಸೀಮೆಯ ಒಳಾಂಗಣದ ಮಾತು ಎಂದು ನೀವು ಪ್ರಶ್ನಿಸಿ, ನಿಮ್ಮ ಪ್ರಗತಿಪರ ಮನೋಭಾವವನ್ನು ತೋರಬಹುದು, ತಪ್ಪೇನಿಲ್ಲ. ಮತ್ತೆ ಮತ್ತೆ ಹೇಳುವ ಹಾಗೆ, ಹೇಳುತ್ತಲೇ ಇರಬೇಕಾದ ಹಾಗೆ ಒಳಾಂಗಣದ ಬದುಕಿನ ವ್ಯಾಪ್ತಿ ವೈವಿದ್ಯಕ್ಕೂ, ಬಡತನಕ್ಕೂ, ಶ್ರೀಮಂತಿಕೆಗೂ, ತೇಗದ ಮರದ ಬಾಗಿಲಿಗೂ, ಅಮೃತ ಶಿಲೆಗೂ ಯಾವ ರೀತಿಯ ಸಂಬಂಧವೂ ಇಲ್ಲ. ನನಗೆ ಚೆನ್ನಾಗಿ ಪರಿಚಯವಿರುವ, ನಾನು ಆಗಾಗ್ಗೆ ಹೋಗಿ ಬರುವ ಒಳಾಂಗಣ ಇರುವ ಗುಡಿಸಲು ಐತ-ಪೀಂಚಲುಗೆ ಸೇರಿದ್ದು. ಇದೊಂದು ಗುಡಿಸಲು. ಮುರುಕಲು ಬಾಗಿಲು ಎಲ್ಲ ಸೇರಿ ಒಂದೇ ಕೋಣೆ. ಇರುವುದು ಒಂದೇ ಕಂಬಳಿ. ದಿಂಬು ಕೂಡ ಕಲ್ಲಿನದು. ಬೆಳಕು, ದೀಪ ಕೂಡ ಕಡಿಮೆ. ಕೋಳಿ, ಹೇಂಟೆಗಳೆಲ್ಲ ಇಲ್ಲೇ ವಾಸ. ನೀವು ಮಲಗಿದ್ದರೂ ರಾತ್ರಿಯಲ್ಲೂ ಒಲೆಯ ಬೂದಿಯ ವಾಸನೆ ಮೂಗಿಗೇ ರಾಚುತ್ತಿರುತ್ತದೆ. ಈ ಒಳಾಂಗಣದಲ್ಲಿ ಐತ-ಪೀಂಚಲು ಇವರೇ ಚಕ್ರವರ್ತಿ-ಸಾಮ್ರಾಜ್ಞಿ, ದೇವ-ದೇವಿಯರು. ಎಲ್ಲವೂ ಈ ಒಳಾಂಗಣದಲ್ಲಿ ಕಂಡುಬಂದಷ್ಟು, ಕೇಳಿಬಂದಷ್ಟು ಸಂಸಾರಸುಖ, ಕುಲುಕುಲುನಗು, ಕಿಚಾಯಿಸುವಿಕೆ, ತಾದಾತ್ಮ್ಯ, ಆತ್ಮೀಯತೆ ಇನ್ನೆಲ್ಲೂ ಕಂಡು ಬಂದಿಲ್ಲ, ಕೇಳಿಯೂ ಇಲ್ಲ. ಹತ್ತಾರು ದೇಶಗಳು, ಮೂರು ನಾಲ್ಕು ಖಂಡಗಳನ್ನು ಸುತ್ತಿ, ಸಾವಿರಾರು ಪುಸ್ತಕಗಳನ್ನು ಓದಿರುವ ನನ್ನಂಥ ಬಡಪಾಯಿ ಸ್ವಾಮಿ ಈ ಮಾತು ಹೇಳುತ್ತಿರುವುದು, ದಯವಿಟ್ಟು ಅವಗಣನೆ ಮಾಡಬೇಡಿ, ತಿರಸ್ಕಾರ ತೋರಬೇಡಿ.
ಒಂದು ಕುಟುಂಬದ ನೆಮ್ಮದಿ, ಸಂತೋಷ, ತೃಪ್ತಿ ಯಾವುದೂ ಮನೆಯ ಆಕಾರ, ಆಕೃತಿ, ಎತ್ತರ ಅಗಲಗಳ ಮೇಲೆ, ರೂಮು, ಟಾಯಿಲೆಟ್ಗಳ ಸಂಖ್ಯೆಯ ಮೇಲೆ ನಿಂತಿರುವುದಿಲ್ಲ. ಒಳಾಂಗಣದಲ್ಲಿ ಕುಟುಂಬದ ಸದಸ್ಯರು ಯಾವ ರೀತಿ ಬದುಕುತ್ತಾರೆ, ನಗುತ್ತಾರೆ, ಸಂತೋಷ ಪಡುತ್ತಾರೆ, ಅಸಹಾಯಕರಾಗುತ್ತಾರೆ, ನಿಟ್ಟುಸಿರು ಬಿಡುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ನಾಲ್ಕಾರು ಕೋಣೆಗಳು, ರಾಜ ಪಲ್ಲಂಗಗಳು ಇರುವ ಮನೆಗಳಲ್ಲಿ ಒಳಾಂಗಣವಿಲ್ಲದೆ ಇರಬಹುದು. ಏಕೆಂದರೆ, ಒಳಾಂಗಣದಲ್ಲಿ ಬದುಕು ನಳನಳಿಸಬೇಕಾದರೆ ಇನ್ನೊಬ್ಬರಿಗೆ ಆತ್ಮೀಯತೆ, ಪ್ರೀತಿ ನೀಡಬೇಕು. ಇದನ್ನೇ ಇನ್ನೊಬ್ಬರಿಂದಲೂ ಬಯಸಬೇಕು. ಇದಿಲ್ಲದೆ ಹೋದರೆ, ರೂಮುಗಳು, ದಿಂಬುಗಳು, ರಗ್ಗುಗಳು ಮಾತ್ರದಿಂದಲೇ ಒಳಾಂಗಣ ನಿರ್ಮಾಣವಾಗುವುದಿಲ್ಲ. ಒಳಾಂಗಣ ಮೂಡಿಬರುವುದು ಭಾವನೆಗಳ ಶ್ರೀಮಂತಿಕೆಯಿಂದ.
ಒಳಾಂಗಣಕ್ಕೂ, ಪ್ರತ್ಯೇಕವಾದ ಜಾಗಕ್ಕೂ ಏನಾದರೂ ಸಂಬಂಧವಿದೆಯೇ? ಒಂದೇ ಸೂರಿನಡಿಯಲ್ಲಿ ನಾಲ್ಕಾರು ಸಂಸಾರ. ಒಂದೇ ಒಂದು ಕೋಣೆ. ಆ ಕೋಣೆ ಮನೆತನದ ಹಿರಿಯ ವೃದ್ಧ ದಂಪತಿಗಳಿಗೆ ಮೀಸಲು. ಉಳಿದ ಸಂಸಾರಗಳೆಲ್ಲ ಗುಂಪು ಗುಂಪಾಗಿ ತೊಟ್ಟಿ ಕಂಭದ ಸುತ್ತ ಜಮಖಾನ ಹಾಸಿಕೊಂಡು ಮಲಗಬೇಕು. ಹೀಗೆ ಮಲಗುವವರೆಲ್ಲ ತರುಣ, ಮಧ್ಯ ವಯಸ್ಸಿನ ದಂಪತಿಗಳು. ಇವರೆಲ್ಲ ಎಲ್ಲೆಂದರಲ್ಲಿ ಒಳಾಂಗಣವನ್ನು ಸೃಷ್ಟಿಸಿಕೊಳ್ಳುತ್ತಿದ್ದ ರೀತಿಯೇ ಕುತೂಹಲಕರವಾದದ್ದು. ಅಟ್ಟದ ಮೇಲಿಂದ ಹೆಂಡತಿ ಸಾಮಾನು ಇಳಿಸುತ್ತಿದ್ದಾಳೆ. ಗಂಡ ಏಣಿಯ ಕೆಳಗೋ, ಬಾಗಿಲ ಕೆಳಗೋ ನಿಂತಿರುತ್ತಾನೆ. ಅಲ್ಲೇ ಒಂದು ನಿಮಿಷ ಸರಸ ಸಲ್ಲಾಪ. ಕಷ್ಟ-ಸುಖವನ್ನು ಪಿಸುಮಾತಿನಲ್ಲಾಡಿ ಮೈ ಕೈ ಸವರಿಕೊಳ್ಳುತ್ತಾರೆ. ಹತ್ತಾರು ಜನ ಊಟಕ್ಕೆ ಕೂತಾಗ ಯಾರಿಗೂ ಗೊತ್ತಾಗದ ಹಾಗೆ ಗಂಡನಿಗೆ ಒಂದೆರಡು ಮಿಳ್ಳೆ ತುಪ್ಪವನ್ನು ಹೆಚ್ಚಾಗಿ ಬಡಿಸಿ ಕಣ್ಣು ನೋಟದಲ್ಲೇ ಒಳಾಂಗಣ ಸೃಷ್ಟಿಸಿ ಆಹ್ವಾನಿಸಿಬಿಡುತ್ತಾಳೆ (ಈ ಒಳನೋಟಕ್ಕೆ ಶಂಕರ ಮೊಕಾಶಿ ಪುಣೇಕರರಿಗೆ ವಂದನೆಗಳು). ಇದಲ್ಲದೆ ರಾಜಾ ಸೀಟಿನ ಮಂಚದ ಮೇಲೆ ಮಲಗಿ ದಂಪತಿಗಳು ಪರಸ್ಪರ ಬೆನ್ನು ಹಾಕಬಹುದು. ಹೀಗೆಲ್ಲ ಇರುವಾಗ ಯಾರಾದರೂ ಹೊಸದಾಗಿ ಪರಿಚಯವಾದಾಗ, ಮೊದಲ ಸಲ ಅವರ ಮನೆಗೆ ಹೋದಾಗ, ಪೂಜಾಗೃಹ, ಸ್ನಾನಗೃಹ, ಅಧ್ಯಯನ ಕೋಣೆ ಎಂದು ಉತ್ಸಾಹದಿಂದ ತೋರಿಸುವಾಗ ನನಗೆ ನಗು ಒಳಗಿಂದೊಳಗೇ ಉಕ್ಕಿ ಬರುತ್ತದೆ. ಹಾಸಿಗೆಯಲ್ಲಿ ಸುಕ್ಕಿರುವುದಿಲ್ಲ. ಮನೆಯಲ್ಲಿ ಒಂದು ತೊಟ್ಟು ನೀರೂ ತೊಟ್ಟಿಕ್ಕಿರುವುದಿಲ್ಲ. ಎಲ್ಲವೂ ಅಚ್ಚುಕಟ್ಟು. ಎಲ್ಲೆಲ್ಲೂ ಮಿರ ಮಿರ ಶುಭ್ರ ವಾತಾವರಣ. ಒಳಗಡೆಯ ಶೂನ್ಯ ಮುಖಕ್ಕೆ ರಾಚುತ್ತದೆ. ಹೇಳುವ ಹಾಗಿಲ್ಲ, ಬಿಡುವ ಹಾಗಿಲ್ಲ.
ನಾನು ಮದುವೆಯಾಗುವಾಗ ಬೇರೆಲ್ಲ ದೃಷ್ಟಿಯಿಂದಲೂ ಆಕರ್ಷಕವಾಗಿ ಕಂಡು ಬಂದಿದ್ದ ಎರಡು ಸಂಬಂಧಗಳನ್ನು ಆ ಮನೆಯ ಒಳಾಂಗಣದ ರೀತಿ ನೀತಿಯಿಂದಾಗಿ ತಿರಸ್ಕರಿಸಬೇಕಾಯಿತು. ಮನೆಯಲ್ಲಿ ಎಲ್ಲೆಲ್ಲೂ ಹೆಂಗಸರ ಕೂದಲ ಸುರಳಿಗಳು. ಹರಡಿಕೊಂಡು ಬಿದ್ದಿದ್ದ ಬಟ್ಟೆಗಳು, ಪುಸ್ತಕಗಳು. ಕುಟುಂಬದ ಸದಸ್ಯರೆಲ್ಲ ಯಾವಾಗಲೂ ಪಿಸುಮಾತನಾಡುತ್ತಿದ್ದರು. ಯಾವುದೋ ರೂಮಿನ ಬೀಗದ ಕೈ ಕಳೆದುಹೋಗಿದ್ದಕ್ಕೆ ರಂಪ. ಪೋಸ್ಟ್ಮ್ಯಾನ್ ಹತ್ತು ಸಲ ಕೂಗಿದರೂ ಯಾರೊಬ್ಬರೂ ಆ ಕರೆಗೆ ಸ್ಪಂದಿಸೆ ಹೋದದ್ದು. ಬೇಸರದಿಂದ ಪೋಸ್ಟ್ಮ್ಯಾನ್ ಪತ್ರಗಳನ್ನು ಎಸೆದು ಹೋದದ್ದು. ಅದೇಕೋ ಈ ಮನೆಯಲ್ಲಿ ಒಳಾಂಗಣವಿಲ್ಲ, ಇದ್ದರೂ ನನ್ನ ಸ್ವಭಾವಕ್ಕೆ ಕೂಡಿಬರುವದಿಲ್ಲ ಎನಿಸಿತು. ಮುಂದಿನ ದಿನಗಳಲ್ಲಿ ನಾನು ಗಮನಿಸಿದ ಹಾಗೆ ಎಲ್ಲ ತರದ ಶ್ರೀಮಂತಿಕೆ, ಆಧುನಿಕತೆಯಿದ್ದು, ಆ ಕುಟುಂಬ ನಾನಾ ರೀತಿಯಲ್ಲಿ ಬಸವಳಿದುಹೋಯಿತು.
ಒಳಾಂಗಣದಲ್ಲಿ ಬದುಕು ಹೇಗೆ ಬಸವಳಿದು ಹೋಗುತ್ತದೆ ಎಂದು ಸೂಕ್ಷ್ಮವಾಗಿ ತೋರಿಸಿಕೊಟ್ಟವನು ಟಾಲ್ಸ್ಟಾಯ್, ಅನ್ನಾ ಕರೇನಿನಾ ಕಾದಂಬರಿಯಲ್ಲಿ. ಅನ್ನಾ ಸುಂದರಿ, ಬುದ್ಧಿವಂತೆ, ಸೂಕ್ಷ್ಮಸ್ಥೆ, ಆಧುನಿಕಳು, ವಿದ್ಯಾವಂತಳು, ಬರೆಯಬಲ್ಲಳು, ಓದಬಲ್ಲಳು. ಅವಳು ವಾಸ ಮಾಡುವ ಎರಡೂ ಸಂಬಂಧದ ಮನೆಗಳು ಶ್ರೀಮಂತಿಕೆಯ ಆಗರ. ಜೀವನಶೈಲಿ ಕೂಡ ಶೃಂಗಾರಮಯವಾದದ್ದು. ದಿನಕ್ಕೆ ಎಷ್ಟು ಸಲ ಬಟ್ಟೆ ಬದಲಾಯಿಸುತ್ತಾಳೆ. ಯುರೋಪು ಪ್ರವಾಸಕ್ಕೆ ಹೋದಾಗಲೂ ಸ್ಟುಡಿಯೋದಂತಹ ಹೋಟೆಲುಗಳಲ್ಲಿ ವಾಸ. ಏನಾದರೇನು? ಒಳಾಂಗಣದ ಬದುಕನ್ನು ನಿರ್ವಹಿಸಲಾರಳು. ಇರುವ ಕಡೆ ಒಂಟಿತನವನ್ನು ಸೃಷ್ಟಿಸಿಕೊಳ್ಳಬಲ್ಲಳು. ಆದರೆ ತನ್ನ ವ್ಯಕ್ತಿತ್ವದ ಒಳಾಂಗಣವನ್ನು ತಿಳಿಯಲಾರಳು. ಇನ್ನೊಂದು ಮನೆಯ, ಇನ್ನೊಂದು ವ್ಯಕ್ತಿತ್ವದ ಒಳಾಂಗಣವನ್ನು ಕೂಡ ತಿಳಿಯಲಾರಳು, ಮೀಟಲಾರಳು. ವ್ರಾಂಸ್ನಿ, ಕರೇನಿನ್ ಮಾತ್ರವಲ್ಲ, ಸೋದರರು, ಬಂಧುಗಳು, ಅಷ್ಟೇ ಏಕೆ, ಸ್ವತಃ ಟಾಲ್ಸ್ಟಾಯ್ ಕೂಡ ಬಸವಳಿದು ಏದುಸಿರು ಬಿಡುವಂತೆ ಮಾಡಬಲ್ಲಳು. ಕೊನೆಗೆ ಅವಳು ಒಳಾಂಗಣ ಸೃಷ್ಟಿಸಿಕೊಂಡದ್ದು ರೈಲುಗಾಡಿಯ ಚಕ್ರದ ಕೆಳಗೆ. ಪಾಪ, ಇವಳ ಪಾತ್ರವನ್ನು ಮನೋಜ್ಞವಾಗಿ ಸೃಷ್ಟಿಸಲು ಹೋಗಿ, ಟಾಲ್ಸ್ಟಾಯ್ ಬಂಗಲೆಯ ಒಳಾಂಗಣ ಕೂಡ ಕೊನೆ ಕೊನೆಗೆ ಇವಳ ಒಳಾಂಗಣದಂತೆಯೇ ಆಗಿ ಸಂಸಾರ ಮೂರಾಬಟ್ಟೆಯಾಯಿತು.
ಒಳಾಂಗಣವನ್ನು ಮನೆಯೊಳಗೇ ಸೃಷ್ಟಿಸಿಕೊಳ್ಳಬೇಕೆ? ಎಲ್ಲ ಸಂದರ್ಭಗಳಲ್ಲೂ, ಎಲ್ಲ ಮನೆಯೊಳಗೂ ಒಳಾಂಗಣ ಸೃಷ್ಟಿಯಾಗಲಾರದು. ಎರಡು ಮನಸ್ಸುಗಳ ಒಳಾಂಗಣದ ನಡುವೆ ಬದುಕು ಸೃಷ್ಟಿಯಾಗದಿದ್ದರೆ, ಮನೆ ಒಳಗೂ ಅದು ಸೃಷ್ಟಿಯಾಗುವುದಿಲ್ಲ. ಆವಾಗ ಮನೆಯಿಂದ ಹೊರಗಡೆ ಹೋಗಿ ಒಳಾಂಗಣ ಕಂಡುಕೊಳ್ಳಬೇಕಾಗುತ್ತದೆ. ಆವಾಗ ನಮ್ಮ ಸಹಜೀವಿಗೆ, ಪತ್ನಿ, ಸಹೋದರ-ಸಹೋದರಿಯರಿಗೆ, ಗೆಳೆಯರಿಗೆ ಕೂಡ ಹೀಗೆ ಮನೆಯಿಂದ ಹೊರಗೆ ಹೋಗಿ ಒಳಾಂಗಣವನ್ನು ಸೃಷ್ಟಿಸಿಕೊಳ್ಳುವ ಹಕ್ಕು ಮತ್ತು ಔದಾರ್ಯವನ್ನು ನೀಡುವ ಧಾರಾಳತನ ನಮಗಿರಬೇಕು. ದಶರಥ, ಕೈಕೇಯಿ, ರಾಮ, ಸೀತೆ, ಕೌಸಲ್ಯ ಇವರೆಲ್ಲರಿಗೂ ಪ್ರತ್ಯೇಕ ಅರಮನೆಗಳಿದ್ದವು. ಯಾರೊಬ್ಬರಿಗೂ ಮನೆಯಲ್ಲೂ, ಮನಸ್ಸಿನಲ್ಲೂ ಒಳಾಂಗಣವಿರಲಿಲ್ಲ. ಕಾಡುಮೇಡು, ನದಿ ತೀರ, ಋಷಿ ಆಶ್ರಮ, ಎಲ್ಲೂ ಇವರ್ಯಾರಿಗೂ ಸಂಪನ್ನವಾದ ಒಳಾಂಗಣ ಸಿಗಲಿಲ್ಲ. ಒಳಾಂಗಣವನ್ನು ಹುಡುಕುತ್ತಲೇ, ಅದು ಎದುರಾದಾಗಲೂ ಗುರುತಿಸಲಾಗದೆ ಹೋದ ಸಂಸಾರಗಳ ರಂಪವೇ ವಾಲ್ಮೀಕಿಯ ರಾಮಾಯಣ.
ಒಳಾಂಗಣವೂ ವ್ಯಕ್ತಿ ನಿಷ್ಠವೇ? ತಲೆಮಾರಿನಿಂದ ತಲೆಮಾರಿಗೆ ದಾಟಿಸಬಹುದೆ? ಒಳಾಂಗಣದಲ್ಲಿ ಒಬ್ಬರ ಜೊತೆ ಸಂಪನ್ನ ಬದುಕು ಕಳೆದ ಮೇಲೆ ಆ ಒಳಾಂಗಣಕ್ಕೆ ಇನ್ನೊಬ್ಬರನ್ನು ಬಿಟ್ಟುಕೊಳ್ಳಬಹುದೆ? ವಿಧುರ, ವಿಧವೆಯರು, ದಾಂಪತ್ಯದಲ್ಲಿ ಎರಡನೆ ಇನ್ನಿಂಗ್ಸ್ ಪ್ರಾರಂಭಿಸುವವರು ಈ ಸವಾಲನ್ನು ಎದುರಿಸಬೇಕಾಗುತ್ತದೆ. ಸಂಗಾತಿ ತೀರಿಹೋದ ಮೇಲೆ ಅವರ ಗೌರವಾರ್ಥವಾಗಿ ಅವರು ಬಳಸುತ್ತಿದ್ದ ಎಲ್ಲ ಪದಾರ್ಥ ಪರಿಕರಗಳನ್ನು ಹಾಗೆಯೇ ಇಟ್ಟು ಬೇರಾರಿಗೂ ಕೊಡದೆ ಬದುಕನ್ನೆಲ್ಲ ಕಳೆದವರನ್ನು ನಾನು ನೋಡಿದ್ದೇನೆ. ಹಾಗೆಯೇ ಮುಂದಿನ ತಲೆಮಾರಿಗೆ ಇದೆಲ್ಲ ದಾಟಲಿ ಎಂಬ ಆಸೆಯೊಡನೆ ಇದನ್ನೆಲ್ಲ ಮಕ್ಕಳಿಗೆ ಹಂಚಿದ್ದನ್ನು ನೋಡಿದ್ದೇನೆ. ಒಳಾಂಗಣಕ್ಕೆ ಬೇಕಾದ ಮಾನಸಿಕ ಸಂಪತ್ತನ್ನು ಹಸ್ತಾಂತರಿಸುವುದು ಹೇಗೆ? ಈಚೆಗೆ ನಾನು ಓದಿದ ಒಂದು ಅಮೆರಿಕನ್ ಕತೆಯಲ್ಲಿ ಗಂಡ ಆಕಸ್ಮಿಕದಲ್ಲಿ ಸಾಯುತ್ತಾನೆ. ಅದೊಂದು ಪ್ರೀತಿಯ ಕುಟುಂಬ. ಹೆಂಡತಿ ನಂತರ ಇನ್ನೊಂದು ಮದುವೆ ಆಗುತ್ತಾಳೆ. ಆ ಮದುವೆ ಕೂಡ ಯಶಸ್ವಿಯಾಗುತ್ತದೆ. ಅಲ್ಲೂ ಒಳಾಂಗಣದ ತೃಪ್ತಿಯೇ. ಕತೆಯ ನಾಯಕಿ ಮೊದಲ ಗಂಡನಿಂದ ಪಡೆದ ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಆ ಮಕ್ಕಳಿಗೆ ಮಾತ್ರ ತಾನು ಮತ್ತು ಮೊದಲ ಗಂಡ ಬಳಸುತ್ತಿದ್ದ ಕೋಣೆ, ಹಾಸಿಗೆ, ಮಂಚವನ್ನೆಲ್ಲ ಉಪಯೋಗಿಸಲು ಅವಕಾಶ ನೀಡುತ್ತಾಳೆ. ದಿನ ಕಳೆದಂತೆ ಎರಡೂ ಮದುವೆಗಳಿಂದ ಆದ ಮಕ್ಕಳು ಎಲ್ಲ ಕೋಣೆಗಳನ್ನು, ಪದಾರ್ಥಗಳನ್ನು ಯಾವುದೇ ವ್ಯತ್ಯಾಸವಿಲ್ಲದೆ ಉಪಯೋಗಿಸುತ್ತಾ ಎರಡೂ ಒಳಾಂಗಣವನ್ನು ಒಂದು ಮಾಡುತ್ತವೆ.
ಈ ಕಾರಣಕ್ಕಾಗಿಯೇ ಕುವೆಂಪು ಒಳಾಂಗಣವೆಂದರೆ ತೀರಾ ವೈಯಕ್ತಿಕ ಕಲ್ಪನೆಯಲ್ಲ, ನಾಲ್ಕು ಗೋಡೆಯ ನಡುವೆ, ಒಳಗೆ ನಡೆಯುವ ಜೈವಿಕ-ಲೈಂಗಿಕ ವ್ಯಾಪಾರಗಳಲ್ಲ ಎಂದರು. ರಸಋಷಿಯ ಪ್ರಕಾರ ಇದೊಂದು Community concept. ಹುಲಿಕಲ್ಲು ನೆತ್ತಿಯ ಮೇಲೆ ಒಂದೇ ಒಂದು ದಿನದ ಮಟ್ಟಿಗಾದರೂ ಅವರು ಸಾಮುದಾಯಿಕ ಒಳಾಂಗಣವನ್ನು ಸೃಷ್ಟಿಸುತ್ತಾರೆ. ಈಚೆಗೆ ಭೇಟಿಯಾಗಿದ್ದಾಗ ಕುವೆಂಪು ಹೇಳಿದ ಒಂದು ಮಾತು ನನಗೆ ಭಯ ಹುಟ್ಟಿಸುತ್ತದೆ. ಒಳಾಂಗಣದ ಬದುಕು ಹುಲಿಕಲ್ಲು ನೆತ್ತಿಯ ಮೇಲಾಗಲೀ, ಕುಪ್ಪಳ್ಳಿಯ ಸುಪ್ಪತ್ತಿಗೆಯ ಮೇಲಾಗಲೀ ಎಲ್ಲಾದರೂ ಸರಿಯೇ, ಅಂತಹ ಬದುಕಿಗೆ ಬೇಕಾದ ಪ್ರೀತಿ, ತಾಳ್ಮೆ, ಪರಸ್ಪರ ಅನುಭೂತಿ, ಪರಿಶ್ರಮ ಈಗಿನ ಕಾಲದ ತರುಣರಲ್ಲಾಗಲೀ, ರಾಷ್ಟ್ರಪತಿ ಭವನದಲ್ಲಾಗಲೀ ಕಾಣುವುದಿಲ್ಲ. ಸುಮ್ಮನೆ ಪ್ರತಿ ಮನೆಯೊಳಗೂ ಕೋಣೆಗಳ ಸಂಖ್ಯೆ, ಶಯ್ಯಾಗೃಹಗಳ ಪ್ರಸಾಧನ ವಿಸ್ತಾರ ಹೆಚ್ಚಾಗುತ್ತಿದೆಯಲ್ಲ ಎಂದು ಖೇದ ವ್ಯಕ್ತಪಡಿಸಿದರು. ನಾನು ಏನೂ ಉತ್ತರ ಹೇಳಲು ಹೋಗಲಿಲ್ಲ. ಕುವೆಂಪು ನನ್ನ ಮನೆಯ, ಕುಟುಂಬದ ಎಲ್ಲ ಗುಟ್ಟುಗಳನ್ನು ಬಲ್ಲವರಂತೆ ಮುಗಮ್ಮಾಗಿದ್ದರು. ಸಡಿಲವಾಗಿರುವ ದಂತಪಂಕ್ತಿಯಿಂದಲೇ ಕಟ ಕಟ ಕಡಿಯುತ್ತಿದ್ದರು. ಮತ್ತೆ ಮುಂದುವರಿಸಿದರು.
ಇನ್ನೂ ಒಂದು ಮಾತು ತಿಳಿದುಕೊಳ್ಳಬೇಕು. ಒಳಾಂಗಣದ ಬದುಕು ಎಷ್ಟೇ ಚೆನ್ನಾಗಿದ್ದರೂ, ಸುಂದರವಾಗಿದ್ದರೂ ಅದೇ ಸರ್ವಸ್ವವಲ್ಲ. ಮನುಷ್ಯ ಕೊನೆಗೂ ಗೆಲ್ಲಬೇಕಾದ್ದು ಹೊರ ಜಗತ್ತನ್ನು, ಬದುಕಬೇಕಾದ್ದು ಕೂಡ ಹೊರ ಜಗತ್ತಿನಲ್ಲಿ. ಒಳಾಂಗಣದಲ್ಲೇ ಲೋಲುಪರಾಗಿ ಕಾಲ ಕಳೆಯುತ್ತಾ ಕೂರಬಾರದು. ಎರಡರ ಸಮನ್ವಯವಿರಬೇಕು. ಪರಸ್ಪರ ಚಲನೆಯಿರಬೇಕು. ಹುಲಿಕಲ್ಲು ನೆತ್ತಿಯ ಮೇಲಿನ ಒಳಾಂಗಣದ ಸುತ್ತ ಇರುವ ಅನಂತ ಕಾಲದ ಪ್ರಾಕೃತಿಕ ಶ್ರೀಮಂತಿಕೆಯ ಹೊರಾಂಗಣದ ಮಹತ್ವ ಕುವೆಂಪು ಭೇಟಿ ಮಾಡಿದ ಎಷ್ಟೋ ದಿನಗಳ ನಂತರ ನನಗೆ ಅರ್ಥವಾಯಿತು. ಮನೆಯೊಳಗೊಂದು ಒಳಾಂಗಣ, ಮನಸ್ಸಿನೊಳಗೊಂದು ಒಳಾಂಗಣ, ಕೆಲಸ ಮಾಡುವ ಕಡೆಯೂ ಒಂದು ಒಳಾಂಗಣ, ಲೋಕದೊಳಗೂ ಒಂದು ಒಳಾಂಗಣ ಎಂದು ಸದಾ ಹಪಹಪಿಸಿದ ವರ್ಜೀನಿಯಾ ವುಲ್ಫ್ರಂತಹ ಸೋದರತ್ತೆಯರು ನೆನಪಾದರು.
ಒಳಾಂಗಣ ಸತ್ಯಕ್ಕೆ ಹತ್ತಿರವಿರುತ್ತದೋ, ದೇವರಿಗೆ ಹತ್ತಿರವಿರುತ್ತದೋ ಎನ್ನುವ ಪ್ರಶ್ನೆಗೆ ಉತ್ತರ ನೀವು ಸತ್ಯ ಮತ್ತು ದೇವರ ಕಲ್ಪನೆಗಳಲ್ಲಿ ಯಾವುದಕ್ಕೆ ಹತ್ತಿರವಾಗುತ್ತೀರಿ, ಹತ್ತಿರವಾಗಲು ಬಯಸುತ್ತಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಕಾರಂತರು ದೇವರಿಗೆ ಹತ್ತಿರವಿರಲಿಲ್ಲ. ಹತ್ತಿರವಿರಲು ಕನಸಿನಲ್ಲೂ ಬಯಸಲಿಲ್ಲ. ಆದರೆ ಬದುಕಿನ ಒಳಾಂಗಣದ ಸತ್ಯಕ್ಕೆ ಹತ್ತಿರವಿದ್ದರು. ಮರಳಿ ಮಣ್ಣಿಗೆ ಕಾದಂಬರಿಯ ಲಚ್ಚ ಕನ್ನಡ ಕಥನದ ದಿಕ್ಸೂಚಿ ಪಾತ್ರಗಳಲ್ಲೊಬ್ಬ. ಲಂಪಟ, ಕೊಳಕ, ನೀತಿ ನಿಯತ್ತಿಲ್ಲದವನು. ಅವನ ಹೆಂಡತಿ ನಾಗವೇಣಿ, ಸಂವೇದನಾಶೀಲೆ, ಕುಟುಂಬವತ್ಸಲೆ, ಜೀವನದಲ್ಲಿ ನೊಂದು ಬೆಂದವಳು. ಮಲಿನಗೊಂಡ ರೋಗಿಷ್ಠ ಲಚ್ಚನ ದೇಹದಿಂದಲೂ ಕಾಯಿಲೆ, ಕಸಾಲೆ ಅನುಭವಿಸಿದವಳು. ಆದರೆ ಅವಳ ಯೌವ್ವನದ ದಿನಗಳು ಇನ್ನೂ ಮುಗಿದಿಲ್ಲ. ಅವಳಿಗೂ ಲಚ್ಚನ ಬಗ್ಗೆ ಒಂದು ಕ್ಷಣವಾದರೂ ಆಸೆಯಾಗಬಹುದಲ್ಲ ಅಥವಾ ಲಚ್ಚನಂತವನ ಕೆಟ್ಟ ಆಸೆಗೂ ಒಪ್ಪುವ ಮನಸ್ಸಾಗಬಹುದಲ್ಲ. ಈ ಮನೋಲಯವನ್ನು ಕೂಡ ಕಾರಂತರು ಗುರುತಿಸುತ್ತಾರೆ. ಅಂದರೆ ಕೋಟಾ ಜಗತ್ತಿನಲ್ಲಾಗುತ್ತಿರುವ ಬಾಹ್ಯಲೋಕದ ಬದಲಾವಣೆಗಳನ್ನು ಗುರುತಿಸುವಷ್ಟೇ ಸೂಕ್ಷ್ಮವಾಗಿ ಮನೆಯ ಮನಸ್ಸಿನ ಒಳಾಂಗಣದಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸುತ್ತಾರೆ.
ಒಳಾಂಗಣದ ಬಗ್ಗೆ ಬರೆಯಲು ಹೊರಟ ನಾನು, ಗಂಡು-ಹೆಣ್ಣಿನ ಸಂಬಂಧ ಸೂಕ್ಷ್ಮವಾಗಿ ವ್ಯಕ್ತವಾಗುವ ಸ್ಥಳದ ಬಗ್ಗೆ ಮಾತ್ರ ಬರೆದೆ ಎಂಬ ತಪ್ಪು ಕಲ್ಪನೆ ಬೇಡ. ದೇವರ ಮನೆ, ಅಧ್ಯಯನದ ಕೋಣೆ, ದಿವಾನ್ಖಾನೆ ಕೂಡ ಒಳಾಂಗಣವಾಗಲಿ ತೊಂದರೆಯಿಲ್ಲ. ದಿವಾನ್ಖಾನೆಯಲ್ಲಿ ನೀವು ಮತ್ತು ನಿಮ್ಮನ್ನು ನೋಡಲು ಬಂದವರು ಇಬ್ಬರೂ ತೆರದ ಮನಸ್ಸಿನವರಾಗಿರಬೇಕು. ತೆರದ ಮನಸ್ಸು, ಭಾವನೆ ಮತ್ತು ವಿಚಾರ ಎರಡಕ್ಕೂ ಸಂಬಂಧಿಸಿದ್ದು. ಇನ್ನೊಬ್ಬರಿಗೆ ಹೇಳುವುದು ಮಾತ್ರವಲ್ಲ, ಇನ್ನೊಬ್ಬರು ಹೇಳಿದ್ದನ್ನು ಕೇಳಿಸಿಕೊಳ್ಳುವುದಕ್ಕೂ ಸಿದ್ಧರಿರಬೇಕು. ದೇವರ ಮನೆಯಲ್ಲಿ ನೀವು ದೇವರಿಗೆ ನಿಮ್ಮ ಒಪ್ಪು-ತಪ್ಪುಗಳನ್ನೆಲ್ಲ ಒಪ್ಪಿಸುತ್ತೀರಿ. ಆದರೆ ದೇವರ ಕಡೆಯಿಂದಲೂ ಪಿಸುಮಾತು ಕೇಳಿಸಿದರೆ! ಅಧ್ಯಯನದ ಕೋಣೆ ಇರುವುದು ಪುಸ್ತಕ ತೆರೆಯುವುದಕ್ಕಲ್ಲ, ನಿಮ್ಮನ್ನು ತೆರೆದುಕೊಳ್ಳುವುದಕ್ಕೆ.
ಈ ಎಲ್ಲ ಒಳಾಂಗಣವು ಸಂಬಂಧಿಸಿರುವುದು ನಮ್ಮೊಳಗಿರುವ ಒಳಾಂಗಣದ ಪಾವಿತ್ರ್ಯಕ್ಕೆ. ಇಷ್ಟೊಂದು ಉದ್ದ-ಅಗಲವಿರುವ ನಮ್ಮ ದೇಹದಲ್ಲೂ ಕೂಡ ಒಳಾಂಗಣವು ಯಾವುದೋ ಒಂದು ಸಣ್ಣ ಮೂಲೆಯಲ್ಲಿ, ಕಿರು ಕೋಣೆಯಲ್ಲಿ ಅವಿತುಕೊಂಡಿರುತ್ತದೆ. ಅದು ಇದೆ ಎಂದು ಬೇರೆಯವರಿಗಿರಲಿ ನಮಗೇ ಗೊತ್ತಿರುವುದಿಲ್ಲ. ಯಾವಾಗಲೋ ಒಮ್ಮೊಮ್ಮೆ ಪಿಸುನುಡಿಯುತ್ತದೆ. ನೀವು ಆ ಮಾತನ್ನು, ಆ ಧ್ವನಿಯನ್ನು ಕೇಳಿಸಿಕೊಳ್ಳುವ, ಗೌರವಿಸುವ ಮನುಷ್ಯ ಎನಿಸಿದರೆ, ಅದು ಮತ್ತೊಮ್ಮೆ ಮೆಲು ನುಡಿಯುತ್ತದೆ. ನೀವು ಒಮ್ಮೆ ಉದಾಸೀನ ತೋರಿದರೆ, ನಿರ್ಲಕ್ಷ್ಯ ಮಾಡಿದರೆ, ಅದು ನಿಮ್ಮೊಳಗೇ ಮಿಸುಕಾಡುತ್ತಾ ಕೂರುವುದಿಲ್ಲ. ತನ್ನನ್ನು ಗೌರವಿಸಬಲ್ಲ, ತನ್ನ ಮೆಲುನುಡಿಗೆ ಸ್ಪಂದಿಸಬಲ್ಲವರ ಕಡೆಗೆ ಹೊರಟುಬಿಡುತ್ತದೆ.
ಒಳಾಂಗಣವು ಕೊನೆಗೂ ಒಳಮಾತಿಗೆ, ಒಳಧ್ವನಿಗೆ, ಒಳಕೋಣೆಗೆ, ಒಳ ಉಸುರಿಗೆ ಸಂಬಂಧಿಸಿದ್ದಷ್ಟೆ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ)ಲಭಿಸಿದೆ.
ಪ್ರಬಂಧದ ವ್ಯಾಪ್ತಿಯನ್ನು ಇಷ್ಟು ಅದ್ಭುತವಾಗಿ ಹಿಗ್ಗಿಸಿದ್ದು ಅಲ್ಲದೇ ಒಳಾಂಗಣ ಎನ್ನುವ ಸಾಮಾನ್ಯ ಕಲ್ಪನೆಯನ್ನೂ ಅನಂತವಾಗಿಸಿದ ಪ್ರಬಂಧ ಇದು.
– ದೀಪಾ ಫಡ್ಕೆ
ತುಂಬ ಸುಂದರ ಬರೆಹ. ನಮ್ಮನ್ನೇ ನಾವು ಅನ್ವೇಷಿಸಿಕೊಳ್ಳಲು ದಾರಿ ದೀವಿಗೆಯಾಗಿದೆ.
– ವಾಸುದೇವ ಶೆಟ್ಟಿ
ಹೊಸ ಹೊಳಹನ್ನು ನೀಡುವ ಬಹಳ ಉತ್ತಮವಾದ ಬರಹ ಸರ್. ಅಂತರ್ಜಾಲದ ಯುಗದಲ್ಲಿರುವ ನಾವಿಂದು ಗೂಗಲ್ ಮೀಟ್, ಝೂಮ್ ಮೀಟ್ – ಇತ್ಯಾದಿಗಳ ಮೂಲಕ ಗುಂಪಿನಲ್ಲೋ ಅಥವಾ ಇಬ್ಬರೇ ಆದರೂ ವೀಡೀಯೋದಲ್ಲಿ ಸಂವಾದಿಸುವಾಗಲೂ ಈ ಒಳಾಂಗಣ ಸೃಷ್ಟಿಯಾದರೆ ಮಾತ್ರ ಪ್ರೊಡಕ್ಟಿವ್ ಸಂವಾದ, ಧನಾತ್ಮಕ ಫಲ ಮೂಡಬಹುದು ಎಂದೂ ಅನ್ನಿಸಿತು. ಅಧ್ಯಯನದ ಕೋಣೆ ಇರುವುದು ಪುಸ್ತಕ ತೆರೆಯುವುದಕ್ಕಲ್ಲ, ನಿಮ್ಮನ್ನು ತೆರೆದುಕೊಳ್ಳುವುದಕ್ಕೆ.>> – ಈ ಒಂದು ಸಾಲು ನನ್ನೊಳಗಿನ ಒಳಾಂಗಣದ ಪಿಸುಧ್ವನಿಯ ಸೇರಿ ಹಲವು ಹೊಸ ಆಯಾಮಗಳನ್ನು, ಸಾಧ್ಯತೆಗಳನ್ನು ಗುರುತಿಸುವಂತೆ ಮಾಡಿತು ಸರ್.
~ತೇಜಸ್ವಿನಿ ಹೆಗಡೆ.