ಓದುವುದನ್ನು ಇಷ್ಟಪಡುವವರಿಗೆ ಲೇಖ ಮಲ್ಲಿಕಾ ಪುಸ್ತಕ ಇಷ್ಟವಾಗಬಹುದು. ತಮ್ಮ ದೀರ್ಘವಾದ ಓದಿನ ಅನುಭವ ಸಾರವನ್ನು ಭಟ್ಟಿಇಳಿಸಿ, ಲೇಖಕಿ ಸುಮಾ ವೀಣಾ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸಾಹಿತ್ಯ ಲೋಕದ ಕೈಪಿಡಿಯಂತಿರುವ ಪುಸ್ತಕದಲ್ಲಿ, ಉಲ್ಲೇಖವಾಗಿರುವ ಪುಸ್ತಕಗಳೂ ಮಹತ್ವದ್ದಾಗಿವೆ. ತಮ್ಮ ಅಧ್ಯಯನಶೀಲತೆ, ಸಂಶೋಧನೆ, ಸಾಹಿತ್ಯಾಸಕ್ತಿ, ತೌಲನಿಕ ಮೀಮಾಂಸೆಯನ್ನೊಳಗೊಂಡಂತೆ ಅವರು ರೂಪಿಸಿದ ಈ ಪುಸ್ತಕವು ಸಂಗ್ರಾಹ್ಯವಾದುದು. ಲೇಖ ಮಲ್ಲಿಕಾ ಸಾಹಿತ್ಯ ಕೃತಿಯ ಕುರಿತ ವಿಶ್ಲೇಷಣಾ ಬರಹವೊಂದನ್ನು ಬರೆದಿದ್ದಾರೆ ಡಿ.ಯಶೋದಾ. 

 

ಪುಸ್ತಕಗಳ ಓದು ನಮಗೆ ಜಗತ್ತನ್ನು ಹೆಚ್ಚು ಆಪ್ತವಾಗಿ ಪರಿಚಯಿಸುತ್ತದೆ. ಹಾಗೆ ಓದಿದ ಪುಸ್ತಕಗಳ ಟಿಪ್ಪಣಿಯು ನಮ್ಮ ಆಲೋಚನೆಗಳಿಗೆ ಅಂತರ್ಜಲವಾಗಿ ಕೆಲಸ ಮಾಡುತ್ತದೆ. ಅದುವೇ ನಮ್ಮ ಜ್ಞಾನಭಂಡಾರದ ಸ್ರೋತವೆನ್ನಬಹುದು.

ತಾವು ಓದಿದ ಪುಸ್ತಕಗಳ ಗ್ರಹಿಕೆಯನ್ನು ಒಂದೆಡೆ ಸಾಂದ್ರೀಕರಿಸಿ ಬರೆದು, ಮತ್ತೊಂದು ಪುಸ್ತಕವನ್ನಾಗಿಸಿದ್ದಾರೆ ಸುಮವೀಣಾ. ಲೇಖಮಲ್ಲಿಕಾ ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಅನೇಕ ಪುಸ್ತಕಗಳ ಹೂರಣವು ಪುಟ್ಟ ಪುಟ್ಟ ಅಧ್ಯಾಯವಾಗಿ, ಓದುಪ್ರಿಯರಿಗೆ ನೆರವಾಗುವಂತಿದೆ.  ಒಂದು ವಿಷಯದ ಮೇಲೆ, ಒಬ್ಬ ವ್ಯಕ್ತಿಯ ಕುರಿತು ಪುಸ್ತಕ ಬರೆಯುವುದಕ್ಕಿಂತ ಹೆಚ್ಚಾಗಿ ವಿವಿಧ ಪುಸ್ತಕಗಳ ತುಲನಾತ್ಮಕ ಅಧ್ಯಯನ ಮಾಡಿ ಅವುಗಳ ಭಟ್ಟಿ ಇಳಿಸಿ ಮತ್ತೊಂದು ಪುಸ್ತಕದಲ್ಲಿ ಕಟ್ಟಿಕೊಡುವುದು ಕಷ್ಟದ ಕೆಲಸ. ಅಂತಹ ಕೆಲಸಕ್ಕೆ ಕೈ ಹಾಕಿ 208 ಪುಟಗಳ ಪುಸ್ತಕದಲ್ಲಿ ಸಾಕಷ್ಟು ಮಾಹಿತಿಗಳನ್ನು ನೀಡಿ ‘ಅಲ್ಪದಲ್ಲಿ ಕಲ್ಪ’ ಎಂಬಂತೆ ಸುಮಾವೀಣಾ ಅವರು ಈ ಪುಸ್ತಕ ಸಿದ್ಧಪಡಿಸಿದ್ದಾರೆ.

ಇವು ಬರಿದೆ ಮೇಲು ಮೇಲಿನ  ಓದಿಗೆ ಸೀಮಿತವಾದ ಪುಸ್ತಕಗಳಲ್ಲ.  ಹಳೆಗನ್ನಡ, ನಡುಗನ್ನಡ, ಆಧುನಿಕ ಕಾಲದ ಪುಸ್ತಕಗಳನ್ನು ಅವರು ಓದಿ ಗ್ರಹಿಸಿದ್ದಾರೆ. ತಮ್ಮ ಗ್ರಹಿಕೆಯನ್ನು ಭಟ್ಟಿಇಳಿಸಿ ಬರೆದ ಕೃತಿ ಲೇಖ ಮಲ್ಲಿಕಾ ಎನ್ನಬಹುದು.  ಪಂಪನಿಂದ ಹಿಡಿದು ಇಲ್ಲಿಯವರೆಗಿನ ಕವಿಗಳ ಪುಸ್ತಕಗಳ ಬಗ್ಗೆ ವಿವಿಧ ವಿಷಯವಾಗಿ ತುಲನೆ ಮಾಡಿ ಮಾಹಿತಿಗಳ ಭೂರಿ ಭೋಜನ ಉಣಬಡಿಸಿದ್ದಾರೆ.

ವೃತ್ತಿಯಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಸುಮಾ ಅವರ ಅಧ್ಯಯನಶೀಲತೆ, ಸಂಶೋಧನೆ, ಸಾಹಿತ್ಯಾಸಕ್ತಿ, ತೌಲನಿಕ ಮೀಮಾಂಸೆ ಎಲ್ಲವನ್ನೂ ಈ ಪುಸ್ತಕದಲ್ಲಿ ಕಾಣಬಹುದು.

(ಸುಮಾವೀಣಾ)

ಎರಡು ವಿಭಾಗಗಳ ಒಟ್ಟು 23 ಸಾಹಿತ್ಯಾತ್ಮಕ ಲೇಖನಗಳು,  ಲೇಖ ಮಲ್ಲಿಕಾದಲ್ಲಿವೆ. ಇದರ ಪರಿಮಳ ವೈವಿಧ್ಯಮಯ. ಈ ಪುಸ್ತಕದಲ್ಲಿ ಬರುವ ವಿಷಯಗಳು ಒಂದಲ್ಲ ಎರಡಲ್ಲ, ಅನೇಕ ಸಾಹಿತ್ಯ ಕೃತಿಗಳು ಪರಿಚಯವಾಗುತ್ತವೆ, ಸಮಯದ ಪಾತ್ರದ ಪರಿಚಯ, ಅಗ್ರಮಾನ್ಯ ವ್ಯಕ್ತಿತ್ವಗಳ ವರ್ಣನೆ, ಅವಗುಣಗಳಿಂದಾದ ಅನಾಹುತಗಳ ದರ್ಶನ, ಸಮಾಜಪೀಡಕರಿಗೆ ಆಪ್ತಸಮಾಲೋಚನೆಯ ಅಗತ್ಯದ ಘೋಷಣೆ, ಸಂಬಂಧಗಳ ಕಗ್ಗಂಟು, ಸಂಬಂಧಗಳ ಪಾತಿವ್ರತ್ಯ, ಮಳೆ ನಕ್ಷತ್ರಗಳ ವೈಶಿಷ್ಟ್ಯ, ಕೃತಜ್ಞತೆಯ ಮಹತ್ವ, ಅಸಹಾಯಕ ಸ್ತ್ರೀಯ ನೋವಿನ ಅನಾವರಣ, ವಚನಗಾರರ ಸಾಮಾಜಿಕ ಕಳಕಳಿ, ವಾಲ್ಮೀಕಿ ರಾಮಾಯಣದ ಭಾವೋತ್ಕರ್ಷ, ಭಕ್ತ ಸಿರಿಯಾಳನ ನಿಷ್ಠೆ, ಪೋಷಕರ ಮಮಕಾರ- ಅಸಹಾಯಕತೆ, ಆರೋಗ್ಯಕರ ಆಹಾರ, ನವರಸಗಳು, ಶಾಸ್ತ್ರೀಯ ರಾಗಗಳು, ಬೇಲೂರು ಮದನಿಕೆಯರ ಶೃಂಗಾರ ವೈಭವ, ವೈದೇಹಿ ಬರಹದಲ್ಲಿನ ಸ್ತ್ರೀ ಚಂತನೆ, ಕುವೆಂಪು ವಿಚಾರಧಾರೆಗಳು, ಒಲುಮೆ ಕವಿಯ ಪ್ರೇಮಕಾವ್ಯ, ಜಿಎಸ್‌ಎಸ್ ಅವರ ಸಮನ್ವಯ, ಅಮ್ಮಂದಿರ ಸಂವೇದನೆ ಎಲ್ಲವೂ ಇವೆ.

ಹೂವುಗಳಲ್ಲೇ ಪ್ರಪಂಚದ ಎಲ್ಲ ಸಂಬಂಧಗಳನ್ನೂ ತಿಳಿಸುವ ಸುಮಾ ಅವರ ಪ್ರಯತ್ನ ಮೆಚ್ಚುವಂತಹದ್ದು. ಪ್ರೀತಿ- ಪ್ರೇಮ, ಅಣ್ಣ ತಂಗಿ ವಾತ್ಯಲ್ಯ, ಬಾಂಧವ್ಯ, ದೇವರ ಬಗೆಗಿನ ಭಕ್ತಿ, ನಲ್ಲ ನಲ್ಲೆಯರ ಒಡನಾಟ, ಮದುವೆ ಶಾಸ್ತ್ರ, ಸೌಂದರ್ಯ – ಹೀಗೆ ಎಲ್ಲ ರೀತಿಯ ಭಾವನೆಗಳಿಗೆ ಹೂವುಗಳನ್ನು ಪೋಣಿಸಲಾಗಿದೆ. ಜನಪದ ಸಾಹಿತ್ಯದಲ್ಲಿ ಹೂವಿನ ಬಳಕೆ, ಹೂವುಗಳ ಉಪಯೋಗ ಎಲ್ಲವುಗಳ ಬಗ್ಗೆ ಹೂವುಗಳ ಕುರಿತಾದ ಲೇಖನದಲ್ಲಿ ಸುದೀರ್ಘವಾಗಿ ಬರೆದಿದ್ದು, ಸುಮಾ ಅವರ ಪುಷ್ಪ ಪರಿಮಳ ನಿಜಕ್ಕೂ ಚಂದ.

ಸಿಗ್ಮಂಡ್ ಫ್ರಾಯ್ಡ್, ಈಡಿಪಸ್, ವಡ್ಡಾರಾಧನೆ, ಜಲ ಪ್ರಸವ (ವಾಟರ್ ಬರ್ತ್) ಬಗ್ಗೆ ತಿಳಿಸುವ ಸುಮಾ, ಈಡಿಪಸ್ ಕಾಂಪ್ಲೆಕ್ಸ್ ಅಂಶಗಳು ಜನಪದದ ಪಿರಿಯಾಪಟ್ಟಣ ಕಾಳಗದಲ್ಲಿ ಕಂಡುಬರುವುದನ್ನು ನಿರೂಪಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಸುಖ ದುಃಖ, ಸೋಲು ಗೆಲುವು ಸರದಿಯ ಪ್ರಕಾರ ಬಂದೇ ಬರುತ್ತೆ, ಅದಕ್ಕಾಗಿ ಸಿದ್ಧರಿರಬೇಕು ಮತ್ತು ಕಾಯಬೇಕು ಎಂಬುದನ್ನು ಕರ್ಣ- ಭೀಷ್ಮರ ಮಾತುಕತೆಯ ದೃಷ್ಟಾಂತ ತಿಳಿಸುತ್ತದೆ. ಅತ್ತಿಮಬ್ಬೆ ಸಾವಿರ ವರ್ಷಗಳಷ್ಟು ಹಿಂದಿನವರಾದರೂ ಅವರ ವ್ಯಕ್ತಿತ್ವ ಸಮಕಾಲೀನ ಎನ್ನುವುದನ್ನು ‘ದಾನ ಚಿಂತಾಮಣಿ ಅತ್ತಿಮಬ್ಬೆ’ಯ ಜೀವನ, ಸಾಹಿತ್ಯ ಸೇವೆಯ ಬಗ್ಗೆ ಹೇಳುತ್ತಾ ಸುಮಾ, ಆಕೆ ಮಹಿಳೆಯರಿಗೆ ಮಾದರಿ ಎಂಬುದನ್ನು ಸಾಕ್ಷೀಕರಿಸಿದ್ದಾರೆ.

ಯುದ್ಧದಿಂದ ಶೂನ್ಯವೇ ಹೊರತು ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವ ರನ್ನನ ಗದಾಯುದ್ಧದ ಪದ್ಯಗಳ ಅವಲೋಕನ, ಭರತ- ಬಾಹುಬಲಿಯ ವ್ಯಾಯೋಗದ ಪಂಪನ ಆದಿಪುರಾಣ, ದುರ್ಯೋಧನ- ಭಾನುಮತಿ- ಕರ್ಣರ ಸ್ನೇಹದ ಪಂಪಭಾರತ, ಸಂಬಂಧಗಳ ಸಚ್ಚಾರಿತ್ರ್ಯಕ್ಕೆ ಒತ್ತು ನೀಡುವ ವಡ್ಡಾರಾಧನೆಯ ಸುಕುಮಾರ ಸ್ವಾಮಿಯ ಕಥೆಯಲ್ಲಿನ ಸುಧಾಮೆ, ರಾಮನ ಮೇಲಿನ ಸೀತೆಯ ಪ್ರೀತಿ ಕುರಿತ ನಾಗಚಂದ್ರನ ರಾಮಚಂದ್ರ ಪುರಾಣದ ಲೇಖನಗಳು ಗಮನ ಸೆಳೆಯುತ್ತವೆ.

ತಾರುಣ್ಯದ ಮದದಿಂದಾಗುವ ಅನಾಹುತಗಳನ್ನು ನಾಗವರ್ಮನು ಕರ್ನಾಟಕ ಕಾದಂಬರಿಯಲ್ಲಿ ತಿಳಿಸಿರುವುದಾಗಿ ಹೇಳುತ್ತಾ ಸುಮಾ, ಇಂದು ಮೋಜು- ಮಸ್ತಿಯಲ್ಲಿ ತೊಡಗುವ ಯುವಕರು ಪಾಲಕರಿಗಷ್ಟೇ ಅಲ್ಲದೆ ಸಮಾಜಕ್ಕೂ ಪೀಡಕರು ಎಂಬುದನ್ನು ಕರ್ನಾಟಕ ಕಾದಂಬರಿಯ ಸಾಲುಗಳು ಮತ್ತು ಅಡಿಗರ ಕವನಗಳನ್ನು ಹೋಲಿಸಿ ಹೇಳಿದ್ದಾರೆ.

ಎಲ್ಲ ರೀತಿಯ ಭಾವನೆಗಳಿಗೆ ಹೂವುಗಳನ್ನು ಪೋಣಿಸಲಾಗಿದೆ. ಜನಪದ ಸಾಹಿತ್ಯದಲ್ಲಿ ಹೂವಿನ ಬಳಕೆ, ಹೂವುಗಳ ಉಪಯೋಗ ಎಲ್ಲವುಗಳ ಬಗ್ಗೆ ಹೂವುಗಳ ಕುರಿತಾದ ಲೇಖನದಲ್ಲಿ ಸುದೀರ್ಘವಾಗಿ ಬರೆದಿದ್ದು, ಸುಮಾ ಅವರ ಪುಷ್ಪ ಪರಿಮಳ ನಿಜಕ್ಕೂ ಚಂದ.

ಮಳೆಯಿಂದಾಗುವ ಅನುಕೂಲಕ್ಕೆ, ಅನನುಕೂಲಕ್ಕೆ, ಕಡಿಮೆ ಮಳೆಗೆ, ಹೆಚ್ಚಿನ ಮಳೆಗೆ, ಅಕಾಲಿಕ ಮಳೆಗೆ, ಕಾಲಕ್ಕನುಗುಣವಾದ ಮಳೆಗೆ- ಬೆಳೆಗೆ ಎಲ್ಲದಕ್ಕೂ ಜಾನಪದ ಗಾದೆಮಾತುಗಳು ಬೆಸೆದುಕೊಂಡಿರುವುದನ್ನು ಸುಮಾ ಅರ್ಥೈಸಿದ್ದು, ವಿವಿಧ ರೀತಿಯ ಮಳೆಗೆ ಮನುಷ್ಯರ ವಿವಿಧ ಗುಣಗಳ ಹೋಲಿಕೆಯ ಗಾದೆಮಾತುಗಳನ್ನೂ ಉಲ್ಲೇಖಿಸ್ದಿದಾರೆ. “ಒಕ್ಕಲಿಗ ಒಕ್ಕದಿದ್ದರೆ ದೇಶವೆಲ್ಲ ಬಿಕ್ಕುತ್ತದೆ” ಎಂದು ರೈತರ ಮಹತ್ವವನ್ನು ಸಾರುವ ಈ ಲೇಖನದಲ್ಲಿ ರೈತಪರ ಹೋರಾಟಗಳು ಸ್ವಾರ್ಥಿಗಳ ಪಾಲಾಗಿ ರೈತರು ದಿಕ್ಕೆಡುವಂತಾಗಿದೆ ಎಂಬುದನ್ನು “ರಸ ಬೆಳೆದು ಕಸ ತಿನ್ನುವ ಹಾಗೆ ಹಸ ಕಟ್ಟಿ ಮೊಸರಿಗೆ ಪರದಾಡುವ ಹಾಗೆ” ಎನ್ನುವ ಗಾದೆಮಾತುಗಳ ಮೂಲಕ ಸುಮಾ ರೈತರ ಪರಿಸ್ಥಿತಿಯ ಪರಿಚಯ ಮಾಡ್ತುತಾರೆ. ಇಲ್ಲಿ ಬರುವ ಮಳೆ ನಕ್ಷತ್ರಗಳು, ಜಾನಪದ ಗೀತೆಗಳು ಜಾನಪದ ಸಾಹಿತ್ಯದ ಓದಿಗೆ ತುಂಬಾ ನೆರವಾಗುತ್ತದೆ. ಉತ್ತರದೇವಿಯ ಕತೆಯ ಪಾಠಾಂತರಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾವಣೆಯಾಗಿರುವುದನ್ನು ತಿಳಿಸುತ್ತ ಸುಮಾ ಜನಪದ ಸಾಹಿತ್ಯದ ಮಹತ್ವವನ್ನು ಸಾರಿದ್ದಾರೆ.

ಆಧ್ಯಾತ್ಮಿಕ ಕ್ಷೇತ್ರದಲ್ಲೂ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಲಭಿಸಲು ಕಾರಣವಾದ ಬಸವಣ್ಣನವರ, ಅಕ್ಕ ಅಕ್ಕನಾಗಮ್ಮನವರ ಶ್ರೇಷ್ಠವಾದ ಚಿಂತನೆ, ಅಕ್ಕಮಹಾದೇವಿಯ ವೈಚಾರಿಕ ನಿಲುವುಗಳು, ವಚನಗಳ ಮೂಲಕ ಗಾಂಧಿ -ಶಾಸ್ತ್ರಿಯವರ ಗುಣಗಳ ಅನಾವರಣವಾಗಿರುವುದನ್ನು ನಿರೂಪಿಸುವ ಸುಮಾ ಅವರ ವಿಶೇಷ ಪ್ರಯತ್ನ ಮೆಚ್ಚುವಂತಹದ್ದು.

ವಾಲ್ಮೀಕಿ ರಾಯಾಯಣದ ಆದರ್ಶ ಪಾತ್ರಗಳು ತಿಳಿಸುವ ಉತ್ತಮ ಗುಣಗಳ ಅವಲೋಕಿಸುತ್ತಾ ಸುಮಾ, ರಾಮಾಯಣದಂತಹ ಮಹಾಕಾವ್ಯ ಭಾವೋತ್ಕರ್ಷದ ಜೊತೆಗೆ ಜೀವೋತ್ಕರ್ಷವಾಗಿರುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ.  ಹಾಗೆಯೇ ಉಪಕಾರ ಸ್ಮರಣೆ ಮಾಡದವರು ನಾಯಿಗಿಂತ ಕಡೆ ಎಂದು ಹೇಳುತ್ತ, ಸಣ್ಣ ವಿಚಾರದಲ್ಲೂ ಕೃತಜ್ಞತೆ ಭಾವ ಇರಬೇಕು ಎಂಬುದನ್ನು  ‘ಕೃತಜ್ಞತೆ’ ಎಂಬ ಲೇಖನದಲ್ಲಿ ಹೇಳುತ್ತಾರೆ.

ಪಾಲಕರ ಮಮಕಾರ, ಅಸಹಾಯಕತೆಗೆ ಸಾಕ್ಷಿಯಾಗುವ ಮರೆಯುವ ಮರುಕಳಿಸುವ ಮಮಕಾರ ಲೇಖನ ಭಕ್ತಿಯ ಪರಾಕಾಷ್ಠೆ, ಸಾಮಾಜಿಕ ಮೌಲ್ಯದ ಕುಸಿತ ಹಾಗೂ ಪೋಷಕತ್ವದ ಜವಾಬ್ದಾರಿಯ ಕಡೆ ಒತ್ತು ನೀಡುತ್ತದೆ.

ಸರ್ವಜ್ಞನ ತ್ರಿಪದಿಗಳಲ್ಲಿ ಬಂದಿರುವ ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ಹೇಳುತ್ತಾ, ದೇಸೀ ಆಹಾರ ಪದ್ಧತಿಯ ಮಹತ್ವದ ಬಗ್ಗೆ ವಿಷಾದ ಪಡಿಸಿದ್ದಾರೆ. ಸ್ತ್ರೀವಾದಿ ಚಿಂತನೆಯ ವೈದೇಹಿ ಅವರ ಬರಹಗಳ ಪರಿಚಯವನ್ನು ಮಾಡಿರುವ ಸುಮಾ, ಹೆಣ್ಣು ಅಸ್ಮಿತೆಯನ್ನು ಕಾಯ್ದುಕೊಂಡು ಸ್ವಾಭಿಮಾನಿಯಾಗಲು ಕರೆ ನೀಡಿರುವುದನ್ನು ಕವನಗಳ ಮೂಲಕ ತಿಳಿಸಿದ್ದಾರೆ.

ಡಿವಿಜಿಯವರ ಅಂತಃಪುರಗೀತೆಗಳು ಪುಸ್ತಕದಲ್ಲಿನ ಕವಿತೆಗಳಲ್ಲಿ ಬೇಲೂರು ಮದನಿಕೆಯರ ವಿವರಣೆ ಇದೆ. ಅದರ ಬಗ್ಗೆ ಬರೆದಿರುವ ಸುಮಾ ಅಂತಃಪುರ ಗೀತೆಗಳನ್ನು ಓದಿಸುವುದರ ಜೊತೆಗೆ ಚನ್ನಕೇಶವನ ಅಂತರಂಗದ ನಾಯಕಿಯರ ವಿವಿಧ ಶೃಂಗಾರ ಭಾವಗಳನ್ನೂ ಅರ್ಥ ಮಾಡಿಸಿದ್ದಾರೆ. ಶಿಲ್ಪದ ಮೂಲಕ ನೃತ್ಯ ವಿಲಾಸವನ್ನು ವರ್ಣಿಸಿರುವ ಅವರು ಅಂತಃಪುರಗೀತೆಗಳನ್ನು ಕಣ್ಣಮುಂದೆ ನರ್ತಿಸುವಂತೆ ಮಾಡಿದ್ದಾರೆ. ನವರಸಗಳಿಗೆ ಸಂಬಂಧಿಸಿದಂತೆ ಈ ಕೃತಿಗಳ ತೌಲನಿಕ ವಿಮರ್ಶೆಯೂ ಆಗಿದೆ, ಜೊತೆಗೆ ರಾಗಗಳ ವೈಶಿಷ್ಟ್ಯದ ಉಲ್ಲೇಖವೂ ಇದ್ದು, ಈ ಮೂಲಕ ಈ ಪುಸ್ತಕ ಸಂಗೀತ- ನಾಟ್ಯಪ್ರಿಯರಿಗೂ ಉಪಯುಕ್ತ.

ತಮ್ಮ ಕವನಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಲು, ಮೌಢ್ಯಗಳನ್ನು ತೊರೆಯಲು, ಆಡಂಬರ ಜೀವನಕ್ಕೆ ಬದಲಾಗಿ ಸರಳ ಜೀವನ ನಡೆಸಲು ಒಟ್ಟಾರೆ ವಿಶ್ವಪ್ರಜ್ಞೆಯನ್ನು ಜಾಗೃತಗೊಳಿಸಲು ಕರೆ ನೀಡಿದ ಕುವೆಂಪು ಅವರ ವೈಚಾರಿಕತೆಯನ್ನು ಸುಮಾ ಕುವೆಂಪು ಅವರ ಕವನಗಳ ಮೂಲಕ ಪ್ರತಿಫಲಿಸಿದ್ದಾರೆ.

ಗಂಡ- ಹೆಂಡಿರ ನಡುವಿನ ಪ್ರೀತಿ, ಮುನಿಸು, ಧನ್ಯತಾ ಭಾವ, ಹೆಂಡತಿಯ ತಲ್ಲಣ, ಅನುಸರಣೆ, ಅನ್ಯೋನ್ಯತೆ, ತುಂಟತನ, ವಿರಹದ ತುಡಿತ, ಗಂಡನ ಮುನಿಸು, ಹೆಣ್ಣಿನ ನೋವು ಎಲ್ಲವನ್ನೂ ಕವಿತೆಗಳಲ್ಲಿ ತುಂಬಿರುವ ಒಲುಮೆಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯ ಘಮವನ್ನು ಸುಮಾ ಚೆನ್ನಾಗೇ ಆಘ್ರಾಣಿಸಿದ್ದಾರೆ.

ನವೋದಯ, ನವ್ಯ, ನಮ್ಯೋತ್ತರ ಮೂರರಲ್ಲೂ ತಮ್ಮ ಅಸ್ತಿತ್ವದ ಅಚ್ಚು ಒತ್ತಿ, ಸಾಮಾಜಿಕ ಕಳಕಳಿಯ ಗೀತೆಗಳ ಮೂಲಕ ಸಮನ್ವಯ ಸಾಧಿಸಿದ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಗಳ ಭಾವಾನುಸಂಧಾನಕ್ಕೂ ಮುಂದಾಗಿದ್ದಾರೆ ಸುಮಾ.

(ಡಿ. ಯಶೋದಾ)

ಗಂಡಿನ ದಾರ್ಷ್ಟ್ಯಕ್ಕೆ ಹೆಣ್ಣು ಬಲಿಯಾಗಿ, ಅಸಹಾಯಕಳಾಗುವುದು, ಬಡತನವೂ ಅವಳಿಗೇ ಹೆಚ್ಚಾಗಿ ಕಾಡುವುದು, ಸಮಾಜದ ದಬ್ಬಾಳಿಕೆ, ಅನ್ಯಾಯವನ್ನೂ ಸಹಿಸಬೇಕಾಗಿರುವುದು ಜೀವವನ್ನೂ ಬಲಿಕೊಡಬೇಕದಂತಹ ದುರಂತ ಕತೆ ಸಾರಾ ಅಬೂಬಕರ್ ಅವರ ನಿಮಯ ನಿಯಮಗಳ ನಡುವೆ ಕಥೆ. ಈ ಕಥೆಯನ್ನು ಸುಮಾ ಅವರು ಅಮ್ಮಂದಿರ ಸಂವೇದನೆಗಳ ಮೂಲಕ ವಿಮರ್ಶಿಸಿದ್ದಾರೆ. ಒಟ್ಟಾರೆ ಸುಮಾ ಅವರೇ ಹೇಳುವಂತೆ ಕನ್ನಡ ಸಾಹಿತ್ಯದಲ್ಲಿಯೇ ಇರುವ ದ್ರವ್ಯವನ್ನು ಆಧುನಿಕ ಪರಿಭಾಷೆಗೆ ಹೊಂದಿಸುವ ಪ್ರಯತ್ನ ಈ ಪುಸ್ತಕದಲ್ಲಿ ಕಾಣಬಹುದು.

ಈ ಪುಸ್ತಕದಲ್ಲಿ ಹೆಸರಿಸಿರುವ ಪುಸ್ತಕಗಳ ಪಟ್ಟಿಯೇ ದೊಡ್ಡದಿದೆ. ಶಿವಕೋಟ್ಯಾಚಾರ್ಯನ ವಡ್ಡಾರಾಧನೆ, ಪಂಪನ ವಿಕ್ರಮಾರ್ಜುನ ವಿಜಯ, ಆದಿಪುರಾಣ, ರನ್ನನ ಗದಾಯುದ್ಧ, ಅಜಿತ ಪುರಾಣ, ಪೊನ್ನನ ಶಾಂತಿಪುರಾಣ, ಜನ್ನನ ಯಶೋಧರಾ ಚರಿತೆ, ಲಕ್ಷ್ಮೀಶನ ಜೈಮಿನಿ ಭಾರತ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸನ ಗದುಗಿನ ಭಾರತ, ನಾಗಚಂದ್ರನ ರಾಮಚಂದ್ರಚರಿತಪುರಾಣ, ನಾಗವರ್ಮನ ಕರ್ನಾಟಕ ಕಾದಂಬರಿ, ಷಡಕ್ಷರ ಕವಿಯ ರಾಜಶೇಖರ ವಿಳಾಸ, ಕಾಳಿದಾಸನ ಶಾಂಕುಂತಲಾ, ಮುದ್ದಣನ ರಾಮಾಶ್ವಮೇಧ, ಹರ್ಷನ ನಾಗಾನಂದ, ನಯಸೇನನ ಕೃತಿಗಳು, ಭಟ್ಟನಾರಾಯಣನ ವೇಣೀಸಂಹಾರ, ಭಾಸನ ಊರುಭಂಗ, ಹರಿಹರನ ಮಹಾದೇವಿಯಕ್ಕನ ರಗಳೆ, ಇಳಿಯಾಂಡ ಗುಡಿಮಾರನ ರಗಳೆ, ಆಂಡಯ್ಯನ ಕಾವ್ಯ, ಸಕಲೇಶ ಮಾದರಸನ ವಚನಗಳು, ಅಕ್ಕಮಹಾದೇವಿಯ ವಚನಗಳು, ಜಗನ್ನಾಥದಾಸರ ವಚನಗಳು, ಕನಕದಾಸರ ನಳಚರಿತ್ರೆ, ಜಾನಪದದ ಪಿರಿಯಾಪಟ್ಟಣ ಕಾಳಗ, ಓ.ಎಲ್. ನಾಗಭೂಷಣಸ್ವಾಮಿಯವರ ಕೆಂಪು ಮುಡಿಯ ಹೆಣ್ಣು (ಓರ್ಹಾನ್ ಪಮುಕ್- ರೆಡ್ ಹೇರ್ಡ್ ವುಮೆನ್), ಬ್ರಹ್ಮಶಿವನ ಸಮಯ ಪರೀಕ್ಷೆ, ಸಿದ್ಧಲಿಂಗಯ್ಯನವರ ಏಕಲವ್ಯ, ಜನಪದ ಕಥನ ಕಾವ್ಯಗಳು, ಜನಪದ ಗೀತೆಗಳು, ಎಚ್. ತಿಪ್ಪೇರುದ್ರಸ್ವಾಮಿಯವರ ಕದಳಿಯ ಕರ್ಪೂರ, ಎಲ್. ಬಸವರಾಜು ಅವರ ಶಿವದಾಸ ಗೀತಾಂಜಲಿ, ಚಂದ್ರಶೇಖರ ಕಂಬಾರ ಅವರ ಜೈಸಿದ್ಧ ನಾಟಕ, ಮಧುಬೆನ್ ಅವರ ಬಾಪೂ ಮೈ ಮದರ್, ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ಅಂತಃಪುರಗೀತೆಗಳು, ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳು, ಬೆರಳ್ಗೆ ಕೊರಳ್, ಜಲಗಾರ, ಮಲೆಗಳಲ್ಲಿ ಮಧುಮಗಳು, ಶೂದ್ರತಪಸ್ವಿ, ಶ್ರೀ ರಾಮಾಯಣ ದರ್ಶನಂ, ಪೂಚಂತೆ ಅವರ ಅಣ್ಣನ ನೆನಪು…..

ಸಾಹಿತ್ಯಾಸಕ್ತರು, ಸಾಹಿತ್ಯ ವಿದ್ಯಾರ್ಥಿಗಳು ಲೇಖ ಮಲ್ಲಿಕಾದಲ್ಲಿ ಉಲ್ಲೇಖವಾಗಿರುವ ಈ ಪುಸ್ತಕಗಳನ್ನೆಲ್ಲ ಓದಿಬಿಟ್ಟರೆ ಕನ್ನಡ ಸಾಹಿತ್ಯ ಚರಿತ್ರೆಯ ಸಂಪೂರ್ಣ ಪರಿಚಯವಾಗುತ್ತದೆ.

ಒಟ್ಟಾರೆ ವೈವಿಧ್ಯಮಯ ವಿಷಯಗಳ ಮೂಲಕ, ಕಥೆ, ಕಾದಂಬರಿ, ಕಾವ್ಯ, ವಚನ, ಜನಪದ ಸಾಹಿತ್ಯ ಎಲ್ಲವನ್ನೂ ತುಂಬಿಕೊಟ್ಟು, ಹೆಚ್ಚಿನ ಪುಸ್ತಕಗಳ ಓದಿಗೆ ಪ್ರೇರೇಪಿಸಿರುವ ಸುಮಾ ಅವರ ಲೇಖ ಮಲ್ಲಿಕಾ ಒಂದು ವಿಶಿಷ್ಟ ಕೃತಿ.

(ಕೃತಿ: ಲೇಖ ಮಲ್ಲಿಕಾ (ಸಾಹಿತ್ಯಾತ್ಮಕ ಪ್ರಬಂಧಗಳ ಕಟ್ಟು), ಲೇಖಕರು: ಸುಮಾವೀಣಾ, ಪ್ರಕಾಶಕರು: ಅಕ್ಷರ ಮಂಟಪ ಪ್ರಕಾಶನ, ಬೆಲೆ: 200/-)