ಜಿ.ಕೆ. ಗೋವಿಂದ ರಾವ್ ಅವರು ಅಪ್ಪಟ ನಾಗರಿಕ ಬದುಕಿಗೆ ಶ್ರೇಷ್ಠ ಮಾದರಿಯಾಗಿದ್ದರು. ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಪ್ರಖರ ಪ್ರತಿಪಾದಕರಾಗಿದ್ದರು. ಆಡಂಬರದ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡು ಪ್ರಚಾರ ಗಳಿಸುವ ಮಠಮಾನ್ಯಗಳನ್ನು ನಿರ್ಭಿಡೆಯಿಂದ ಖಂಡಿಸುವಾಗ ಕೋಪಾವಿಷ್ಟ ವಿಶ್ವಾಮಿತ್ರನಂತಾಗುತ್ತಿದ್ದರು. ಅವರಿಗೆ ದೈವಗಳಲ್ಲಿ, ಅವತಾರಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ; ಮತ್ಸ್ಯಾವತಾರ ಒಂದನ್ನು ಬಿಟ್ಟು!
ಜಿ.ಕೆ. ಗೋವಿಂದ ರಾವ್  ಜೊತೆ ಒಡನಾಡಿದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಅಗ್ರಹಾರ ಕೃಷ್ಣ ಮೂರ್ತಿ

 

ಆಗ ಅವರಿನ್ನೂ ಕಾಲೇಜಿನಲ್ಲಿ ಇಂಗ್ಲಿಷ್ ಪಾಠ ಮಾಡುವ ವೃತ್ತಿಯಿಂದ ನಿವೃತ್ತರಾಗಿರಲಿಲ್ಲ. ಬೆಂಗಳೂರಿನ ಬ್ರಿಗೇಡ್ಸ್ ರಸ್ತೆಯಲ್ಲಿ ಎದುರಾದರು. ಅವರು ಆಭಿನಯಿಸುತ್ತಿದ್ದ ನಾಟಕ ಸಿನೆಮಾಗಳಲ್ಲಿ, ಸಭೆ, ಸಮಾರಂಭ, ಸೆಮಿನಾರುಗಳಲ್ಲಿ ಕಂಡಿದ್ದೆ. ಅವರೂ ನನ್ನನ್ನು ನೋಡಿದ್ದರು. ಪರಸ್ಪರ ಪರಿಚಯವಿರಲಿಲ್ಲ. ಮುಖ ಕಂಡ ಕೂಡಲೆ ನಿಮಗೆ ಬಿಯರ್ ಕುಡಿಯುವ ಅಭ್ಯಾಸ ಇದೆಯೋ ಎಂದು ಪ್ರಶ್ನಿಸಿದರು ! ಪರಮಾಶ್ಚರ್ಯ, ಕ್ಷಣಗೊಂದಲಕ್ಕೆ ಬಿದ್ದನಾನು ‘ಹೌದು’ ಅಂದ ಐದು ನಿಮಿಷಗಳಲ್ಲಿ ನಾವಿಬ್ಬರೂ ಒಂದು ಪ್ರಶಸ್ತವಾದ ಸ್ಥಳದಲ್ಲಿದ್ದೆವು ! ಎಷ್ಟೋ ವರ್ಷಗಳಿಂದ ಪರಿಚಯವಿದ್ದವರಂತೆ ಆ ಹಗಲನ್ನು ರಾತ್ರಿ ಮಾಡಿದ್ದೆವು. ನನಗಿಂತ ಹದಿನೈದು ವರ್ಷಗಳ ಹಿರಿತನ, ಸಾಹಿತ್ಯ ಮತ್ತು ಅಭಿನಯ ಕೀರ್ತಿ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ ಅವರು ಅಂದು ತೋರಿದ ಪ್ರತಿಷ್ಠೆರಹಿತ ಅಹಂಕಾರರಹಿತ ಆತ್ಮೀಯತೆ, ಪ್ರೀತಿ ವಿಶ್ವಾಸಕ್ಕೆ ಕಿಂಚಿತ್ತು ಊನವಿಲ್ಲದಂತೆ ಕೊನೆಯವರೆಗೂ ನೆಡೆದುಕೊಂಡು ಬಂದಿತ್ತು.

ವರ್ಷಗಳು ಕಳೆದಂತೆ ಸಲುಗೆಯೂ ಬೆಳೆದು ಸ್ವಲ್ಪ ಗಟ್ಟಿದನಿಯಲ್ಲಿ ‘ನೀವು ಸುಮ್ಮನಿರಿ ಗುರುಗಳೇ’ ಅನ್ನುತ್ತಿದ್ದ ಹಂತ ತಲುಪಿದ್ದರೂ ಅವರ ಬಗ್ಗೆ ನನ್ನಲ್ಲಿನ ಗೌರವ, ನನ್ನ ಬಗ್ಗೆ ಅವರಿಗಿದ್ದ ಪ್ರೀತಿಗೆ ಯಾವ ಕುಂದೂ ಉಂಟಾಗಲಿಲ್ಲ. ಈಗ ಅವರು ನಮ್ಮ ನಡುವೆ ಇಲ್ಲವಾಗಿದ್ದಾರೆ.

ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಬೆಂಗಳೂರಿಗಿರುವ ‘ವ್ಯಕ್ತಿತ್ವ’ದ ಜೊತೆಗೆ ನಿರಂತರ ಎಂಭತ್ತು ವರ್ಷ ತಮ್ಮನ್ನು ಬೆಸೆದುಕೊಂಡಿದ್ದರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚುಕಾಲ ದೇಶದ ಮತ್ತು ಕನ್ನಡ ನಾಡಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಎಲ್ಲ ವಿದ್ಯಮಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು ಜಿಕೆಜಿ. ನಿಜವಾದ ಅರ್ಥದಲ್ಲಿ ಅವರು ಒಬ್ಬ ಪಬ್ಲಿಕ್ ಇಂಟಲೆಕ್ಚ್ಯುವಲ್ ಆಗಿದ್ದರು. ಯಾವುದೇ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆಯುಂಟಾದ ಗಳಿಗೆಗಳಲ್ಲಿ ಅವರು ಕ್ಷಿಪ್ರವಾಗಿ, ತೀವ್ರ ಪ್ರತಿಕ್ರಿಯೆ ಮತ್ತು ಪ್ರತಿಭಟನೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ರೀತಿಯ ಚಟುವಟಿಕೆಗಳಿಗೆ ನಾಡಿನಾದ್ಯಂತ ಓಡಾಡಿ ಬೇರೆಬೇರೆ ಸಂಘ ಸಂಸ್ಥೆಗಳ ಮತ್ತು ಹೋರಾಟಗಾರರ ಚೈತನ್ಯಕ್ಕೆ ಸ್ಫೂರ್ತಿಯನ್ನು ತುಂಬುತ್ತಿದ್ದರು.

ಅಹಿಂಸಾ ಆಕ್ಟಿವಿಸಂಗೆ ಎದೆಗುಂದದ ಸೇನಾನಿ ಅವರಾಗಿದ್ದರು. ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಅವರ ತತ್ವ ಚಿಂತನೆಗಳನ್ನು ತಮ್ಮ ಸಾರ್ವಜನಿಕ ಬದುಕಿನಲ್ಲಿ, ಹೋರಾಟ ಮತ್ತು ಚಳವಳಿಗಳಲ್ಲಿ ಪ್ರತಿಬಿಂಬಿಸುತ್ತಿದ್ದರು.

ಯಾವುದೇ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆಯುಂಟಾದ ಗಳಿಗೆಗಳಲ್ಲಿ ಅವರು ಕ್ಷಿಪ್ರವಾಗಿ, ತೀವ್ರ ಪ್ರತಿಕ್ರಿಯೆ ಮತ್ತು ಪ್ರತಿಭಟನೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ರೀತಿಯ ಚಟುವಟಿಕೆಗಳಿಗೆ ನಾಡಿನಾದ್ಯಂತ ಓಡಾಡಿ ಬೇರೆಬೇರೆ ಸಂಘ ಸಂಸ್ಥೆಗಳ ಮತ್ತು ಹೋರಾಟಗಾರರ ಚೈತನ್ಯಕ್ಕೆ ಸ್ಫೂರ್ತಿಯನ್ನು ತುಂಬುತ್ತಿದ್ದರು.

ವ್ಯವಸ್ಥೆಯ ಲೋಪದೋಷ, ಸಾಮಾಜಿಕ ಅನ್ಯಾಯ ದೌರ್ಜನ್ಯಗಳನ್ನು ಖಂಡಿಸುವಾಗ ಯಾವ ಪ್ರಭಾವಶಾಲಿ ವ್ಯಕ್ತಿಶಕ್ತಿಗಳಿಗೂ ಸೊಪ್ಪು ಹಾಕದಿರುವಂಥ ಕೆಚ್ಚನ್ನು ತೋರುತ್ತಿದ್ದರು. ಅದು ಸಾಧ್ಯವಾದದ್ದು ಅವರು ಅತ್ಯಂತ ಉನ್ನತ ಮಟ್ಟದ ವೈಯಕ್ತಿಕ ನೈತಿಕತೆ ಮತ್ತು ಅದಮ್ಯ ನಿರ್ಭೀತಿಯನ್ನು ಮೈಗೂಡಿಸಿಕೊಂಡಿದ್ದರಿಂದ. ಯು.ಆರ್. ಅನಂತಮೂರ್ತಿ ಅವರು ಸರ್ಕಾರದ ಕೃಪೆಗೆ ಪಾತ್ರರಾದ ಹೊತ್ತಿನಲ್ಲಿ ಸ್ನೇಹದ ಗಡಿಯನ್ನು ಮೀರಿ ಡಿವಿಜಿ, ಹೇಗೆ ಸರ್ಕಾರಿ ಚೆಕ್ಕೊಂದನ್ನು ಬ್ಯಾಂಕಿಗೆ ಹಾಕಿ ನಗದು ಮಾಡಿಸಿಕೊಳ್ಳದೆ ನಿರ್ಲಕ್ಷಿಸಿದ್ದರೆಂಬ ವಿಚಾರ ತಿಳಿಸಿ ಪತ್ರ ಬರೆಯುವಂಥವರಾಗಿದ್ದರು ಜಿಕೆಜಿ. ಅಂಥ ಸಂದರ್ಭಗಳ ಸಾರ್ವಜನಿಕ ಭಾಷಣಗಳಲ್ಲಿ ಸತ್ಯನಿಷ್ಠೆ ಮತ್ತು ನೈತಿಕತೆಯ ದೈವವೇ ಮೈಯೇರಿ ಬಂದವರಂತೆ ಮೊದಲೇ ಕೆಂಪಗಿದ್ದ ಅವರ ಮುಖಾರವಿಂದ ಮತ್ತು ಕಿವಿಗಳು ಮತ್ತಷ್ಟು ಕೆಂಪಾಗಿ ಉದ್ನಿಗ್ನರಾಗಿಬಿಡುತ್ತಿದ್ದರು. ದಲಿತ ಪ್ರಶ್ನೆ ಬಂದಾಗ ಅವರು ಅತೀವ ಕಾಳಜಿ ತೋರುತ್ತಿದ್ದರು.

ಅವರ ಕೊನೆಯ ಬರಹ ಬಹುಶಃ ಗಾಂಧೀಜಿಯವರ ಉಪವಾಸಗಳನ್ನು ಕುರಿತದ್ದೇ ಇರಬೇಕು. ಪೂನಾ ಒಪ್ಪಂದದ ಸಂದರ್ಭದ ಗಾಂಧೀಜಿಯವರ ಆಮರಣಾಂತ ಉಪವಾಸವನ್ನು ಜಿಕೆಜಿ ತೀವ್ರವಾಗಿ ಖಂಡಿಸಿ ಬಾಬಾ ಸಾಹೇಬರ ಪರ ನಿಲ್ಲುತ್ತಾರೆ. ಗಾಂಧೀಜಿ ಅಹಿಂಸೆಯ ಒಂದು ಅಸ್ತ್ರವನ್ನಾಗಿ ಉಪವಾಸವನ್ನು ಬಳಸುವ ಪ್ರಯೋಗವನ್ನು ಅದೊಂದು ಬೆದರಿಕೆಯ ತಂತ್ರವೆಂಬುದಾಗಿ ಕರೆಯುತ್ತಾರೆ. ಅದು ಹಾಗಲ್ಲ ಎಂಬ ಇತರರ ಅಭಿಪ್ರಾಯಗಳನ್ನು ತಮ್ಮ ಅದೇ ಪುಸ್ತಕದಲ್ಲಿ ಅಚ್ಚುಮಾಡಿಸಿ ಸಮಕಾಲೀನ ಚರ್ಚೆಗಳು ಇರಬೇಕಾದದ್ದೇ ಹೀಗೆ ಎಂದು ಭಿನ್ನಾಭಿಪ್ರಾಯಗಳನ್ನ ಗೌರವಿಸುತ್ತಾರೆ.

ಅವರು ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಪ್ರಖರ ಪ್ರತಿಪಾದಕರಾಗಿದ್ದರು. ಆಡಂಬರದ ಸಾಮಾಜಿಕ ಸುಧಾರಣೆಗಳನ್ನು ಕೈಗೊಂಡು ಪ್ರಚಾರ ಗಳಿಸುವ ಮಠಮಾನ್ಯಗಳನ್ನು ನಿರ್ಭಿಡೆಯಿಂದ ಖಂಡಿಸುವಾಗ ಕೋಪಾವಿಷ್ಟ ವಿಶ್ವಾಮಿತ್ರನಂತಾಗುತ್ತಿದ್ದರು. ಕೋಪ ಅವರ ಮೂಗಿನ ತುದಿಯ ಮೇಲೇ ಇರುತ್ತಿತ್ತು. ಅವರು ಮಾಧ್ವರೊ ಸ್ಮಾರ್ತರೊ ತಿಳಿಯದು. ಆದರೆ ಮಾಧ್ವ ಗುರುಗಳಾದ ಪೇಜಾವರ ಸ್ವಾಮಿಗಳು ಅವರಿಗೆ ಪ್ರಿಯರಾಗಿದ್ದರು; ಕೇವಲ ನಿಂದಾಸ್ತುತಿಗಳಿಗಾಗಿ ! ಸ್ವಾಮಿಗಳ ರಾಜಕೀಯ, ಸಾಮಾಜಿಕ ನಿಲುವುಗಳನ್ನು ಕಟುವಾಗಿ ಪ್ರಶ್ನಿಸುತ್ತಿದ್ದರು. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿಯುವ ದಿನಗಳವರೆಗೂ ನಿರಂತರವಾಗಿ ತಮ್ಮ ಪ್ರಗತಿಪರ, ಸಾರ್ವಜನಿಕ ಮತ್ತು ಸಾಮಾಜಿಕ ಕ್ಷೇಮಚಿಂತನೆಯನ್ನು ಕಾಪಾಡಿಕೊಂಡು ಬಂದಿದ್ದ ಹಿರಿಯ ಜೀವಿ ಜಿಕೆಜಿ.

ಅವರು ದಶಕಗಳ ಕಾಲ ಸಾಹಿತ್ಯವನ್ನು ಪಾಠ ಮಾಡಿದ್ದರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರೆಲ್ಲರ ವಿಚಾರಗಳನ್ನು ಸಾರ್ವಜನಿಕ ಬದುಕಿಗೆ ಇಂಬಾಗಿರಿಸಿಕೊಂಡಿದ್ದ ಅವರು ತಮ್ಮ ಒಳ ಮನಸ್ಸಿನ ಸಂತೋಷಾನಂದಗಳಿಗೆ, ಆಂತರಿಕ ಸಂತೈಕೆಗೆ ಶೇಕ್ಸ್ ಪಿಯರ್ ಮತ್ತು ಠಾಗೋರರನ್ನು ಆರಾಧಿಸುತ್ತಿದ್ದರು.

ಸಾರ್ವಜನಿಕ ಭಾಷಣಗಳನ್ನು ಮಾಡುವಾಗ ಹೇಗೆ ಉದ್ವಿಗ್ನಗೊಳ್ಳುತ್ತಿದ್ದರೋ ಹಾಗೆಯೇ ಶೇಕ್ಸ್ ಪಿಯರ್ ಮತ್ತು ಠಾಗೋರರ ಕೃತಿಗಳ ಬಗ್ಗೆ ಮೈದುಂಬುತ್ತಿದ್ದರು. ಅವರ ದುಡಿಮೆಯ ಬಹು ಭಾಗವನ್ನು ಪುಸ್ತಕ ಕೊಳ್ಳುವುದಕ್ಕಾಗಿಯೇ ವಿನಿಯೋಗಿಸಿದ್ದರು. ತಾವು ಓದಿದ ಪುಸ್ತಕಗಳ ಬಗ್ಗೆ ನಮ್ಮಂತ ಹಿರಿಕಿರಿ ಗೆಳೆಯರಿಗೆ ತಿಳಿಸಿ ಓದಲು ಉತ್ಸಾಹ ತುಂಬುತ್ತಿದ್ದರು. ಅವರು ಒಮ್ಮೆ ನಮ್ಮ ಖಾಸಗಿ ಬೈಠಕ್ಕಿನಲ್ಲಿ ‘ನನಗೆ ಜಗತ್ತಿನ ಯಾವ ದೇಶವನ್ನೂ ನೋಡುವ ಆಸೆಯಿಲ್ಲ. ಆದರೆ ಶೇಕ್ಸ್ ಪಿಯರ್‌ನ ಸ್ಟಾಂಫರ್ಡ್ ಅಪಾನ್ ಏವನ್ ನೋಡಬೇಕು,’ ಎಂದು ಹೇಳಿದ್ದರು. ಅದು ಕೈಗೂಡಲಿಲ್ಲ. ನಾನು ದಿಲ್ಲಿಯಲ್ಲಿದ್ದಾಗ ಠಾಗೋರರ ೧೫೦ ನೇ ಜನ್ಮೋತ್ಸವದ ಸಂದರ್ಭದಲ್ಲಿ ಶಾಂತಿನಿಕೇತನಕ್ಕೆ ಆಹ್ವಾನಿಸಿದ್ದೆ. ಬಹಳ ಸಂತೋಷದಿಂದ ಬಂದು ಹೋಗಿದ್ದರು. ಅವರಿಗೆ ಠಾಗೋರರನ್ನು ಕುರಿತು ಒಂದು ಪುಸ್ತಕ ಬರೆಯುವ ಆಲೋಚನೆಯೂ ಇತ್ತು.

ಅವರಿಗೆ ದೈವಗಳಲ್ಲಿ, ಅವತಾರಗಳಲ್ಲಿ ಯಾವ ನಂಬಿಕೆಯೂ ಇರಲಿಲ್ಲ; ಮತ್ಸ್ಯಾವತಾರ ಒಂದನ್ನು ಬಿಟ್ಟು! ಅದರಲ್ಲೂ ಮತ್ಸ್ಯ ನಮ್ಮ ಬಾಣಸಿಗರ ಕೈಯಲ್ಲಿ ತಳೆಯುವ ವಿವಿಧ ಅವತಾರಗಳಲ್ಲಿ ಫಿಂಗರ್ ಫಿಶ್ ಅಂದರೆ ಅವರಿಗೆ ಪ್ರಾಣ! ಅವತಾರ ದರ್ಶನದ ಬಯಕೆಯಾದಾಗ ಬಾಲಕನಿಗೆ ಫೋನ್ ಬರುತ್ತಿತ್ತು! (ಅವರು ಹಲವರನ್ನು ‘ದೇಶಭಕ್ತಾ..’ ಎಂದು ಕರೆದೇ ಮಾತಾಡಿಸುತ್ತಿದ್ದರು. ನನ್ನನ್ನು ‘ಬಾಲಕಾ ಏನು ಮಾಡ್ತಾ ಇದ್ದಾನೆ..’ ಅನ್ನುತ್ತಿದ್ದರು). ಬೆಂಗಳೂರಿನಲ್ಲಿ ನಮ್ಮ ಮತ್ಸ್ಯಾವತಾರ  ದರ್ಶನಮ್ ಏವಂ ಸ್ವಾಹಾಸ್ಥಾನಂಗಳು ಕುಡ್ಲ ಅಥವಾ ಗಂಧರ್ವ!

ಅವರದ್ದೇ ಆದ ಸ್ವಂತ ಮನೆ ಇರಲಿಲ್ಲ. ಬಾಡಿಗೆ, ಲೀಸ್‌ಗಳಲ್ಲಿ ಹಲವು ಮನೆಗಳಲ್ಲಿ ವಾಸ ಮಾಡಿದರು. ಮನೆಯಿಂದ ಹೊರಗೆ ಬಂದರೆ ಶುಭ್ರ ಗರಿಗರಿ ಉಡುಪು, ಪಾಲಿಷ್ ಆದ ಪಾದರಕ್ಷೆ, ಕಣ್ಣಿಗೆ ಮಿರಿಮಿರಿ ಮಿಂಚುವ ರೇಬಾನ್, ಜೇಬಲ್ಲಿ ಸದಾ ಒಂದು ಜೋಡಿ ಪೆನ್ನು! ಈಗ ಮೇಲಿಂದ ಇಳಿದುಬಂದ ಕಿನ್ನರ ಕಿಂಪುರುಷನಂತೆ ಕಾಣುತ್ತಿದ್ದರು. ಕಾರು ಕೊಂಡಿರದ ಅವರು ಆಟೋಗಳಲ್ಲೇ ತಿರುಗಾಡಿದರು. ಚಲನಚಿತ್ರಗಳಲ್ಲಿ, ಟೆಲಿವಿಶನ್ ಸೀರಿಯಲ್‌ಗಳಲ್ಲಿ ಕಂಡಿದ್ದ ಆಟೋ ಚಾಲಕರು ಬಾಡಿಗೆ ಹಣವನ್ನು ನಿರಾಕರಿಸುತ್ತಿದ್ದುದುಂಟು; ಅಂಥವರಿಗೆ ಗಟ್ಟಿಯಾಗಿ ಸಮಾ ಬೈಯ್ದು ದುಡ್ಡು ಕೊಟ್ಟು ಕಳಿಸುತ್ತಿದ್ದರು. ಲೆಕ್ಕವಿಲ್ಲದಷ್ಟು ಬಾರಿ ಇಂಥ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿದ್ದ ನನಗೆ ಒಂದಿಬ್ಬರು ಚಾಲಕರು ಗಂಟುಬಿದ್ದು, ‘ಸಾರ್ ನೀವು ಸ್ವಲ್ಪ ಅವರಿಗೆ ಹೇಳಿ ನನಗೊಂದು ಚಾನ್ಸ್ ಕೊಡ್ಸಿ ಸಾರ್,’ ಅನ್ನುತ್ತಿದ್ದುದುಂಟು!

ಒಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಖರ ನೈತಿಕ ನಿಷ್ಠೆಯಿಂದ, ಯಾವ ಯಾರ ಮುಲಾಜೂ ಇಲ್ಲದೆ, ಉನ್ನತ ಅಧಿಕಾರ ಸ್ಥಾನಗಳ ಸಂಪರ್ಕಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ಅತ್ಯಂತ ಸರಳವಾಗಿಯೂ ಬದುಕುವುದು ತುಂಬಾ ದುಸ್ತರವಾದುದು. ಈ ಕೊರೋನಾ ವಕ್ಕರಿಸುವ ಪೂರ್ವದಲ್ಲಿ ಜಿಕೆಜಿ ಫೋನ್ ಮಾಡಿ, “ನನ್ನ ಬ್ಯಾಂಕ್ ಮ್ಯಾನೇಜರ್ ಒಂದು ಲಕ್ಷ ಸಾಲ ಕೊಡಲು ಒಪ್ಪಿದ್ದಾರೆ. ನೀವು ಆಧಾರ್ ಕಾರ್ಡ್ ಜೊತೆ ಬಂದು ಗ್ಯಾರಂಟಿ ಆಗಬೇಕಲ್ಲಾ..” ಅಂದರು. ‘ಆಯ್ತು ಗುರುಗಳೆ’ ಅಂದ ನಾನು ಅತೀವ ಗೊಂದಲದಲ್ಲಿ ಬಿದ್ದೆ. ತಕ್ಷಣ ಅವರಿಗೂ ಆತ್ಮೀಯವಾಗಿ ಗೊತ್ತಿದ್ದ ಒಬ್ಬರ ಬಳಿ ಮಾತಾಡಿ,  ‘ಅವರು ಸಾಲ ತಗೊಳ್ಳೊದು ಬೇಡ, ನಾವೇ ಹೇಗಾದರೂ ಹೊಂದಿಸಿ ಕೊಡೋಣವಾ’ ಎಂದು ಕೇಳಿದೆ. ಅವರು ಮರು ಮಾತಿಲ್ಲದೆ ಒಪ್ಪಿ ನಾಳೆ ಬೆಳಗ್ಗೆಯೇ ಕೊಟ್ಟು ಬರೋಣ ಎಂದರು. ನಾನು ಜಿಕೆಜಿ ಅವರಿಗೆ ಪೋನ್ ಮಾಡಿ ತಿಳಿಸಿದೆ. ಅವರು ನಾಳೆ ಫೋನ್ ಮಾಡ್ತೀನಿ ಅಂದರು. ಆ ವಿಚಾರವಾಗಿ ಅವರು ಮತ್ತೆ ಯಾವ ಮಾತೂ ಆಡಲಿಲ್ಲ. ನಾನಾಗಿ ಪ್ರಸ್ತಾಪ ಮಾಡಿದಾಗ ಗಾಂಧೀಜಿಯ ಉಪವಾಸಗಳ ಬಗ್ಗೆ ಒಂದು ಲೇಖನ ಬರೆದು ಮುಗಿಸಿದೀನಿ. ಮೇಲ್ ಮಾಡ್ತೀನಿ ಒಂದು ಅಭಿಪ್ರಾಯ ಬರೆದುಕೊಡತಕ್ಕದ್ದು ಎಂದು ಆಜ್ಞೆ ಮಾಡಿದರು!

ಜಿಕೆಜಿಯವರ ಆತ್ಮೀಯರಲ್ಲಿ ಕೊನೆಯವರೆಗೂ ಒಡನಾಡಿದವರಲ್ಲಿ ಒಬ್ಬನಾದ ನನಗೆ ಅವರ ಅಗಲಿಕೆ ವೈಯಕ್ತಿಕವಾಗಿ ದುಃಖ ತಂದಿದೆ. ಅವರು ಓಲ್ಡ್ ಆಂಗ್ರೀ ಯೆಂಗ್ ಮ್ಯಾನ್ ಆಗಿ ನಮ್ಮ ನಡುವೆ ಅಪ್ಪಟ ನಾಗರೀಕ ಬದುಕಿಗೆ ಶ್ರೇಷ್ಠ ಮಾದರಿಯಾಗಿದ್ದರು. ಅವರ ಜೊತೆಗಿನ ಅಸಂಖ್ಯಾತ ಗಳಿಗೆಗಳಿಗೆ ನಮಸ್ಕಾರ.