ನಾವು ವಿನ್ಯಾಸಕರು ಕಟ್ಟಡಗಳಿಗೂ ತಮ್ಮದೇ ‘ಚಾರಿತ್ರ್ಯ’ವಿದೆಯೆಂದು ಇನ್ನಿಲ್ಲದಂತೆ ನಂಬುತ್ತೇವೆ. ಮನುಷ್ಯ ಸಹಜ ಗುಣಾವಗುಣಗಳ ಮೇಲೆ ಆರೋಪಿಸಲಾಗುವ ‘ಕ್ಯಾರೆಕ್ಟರ್’ ಎನ್ನುವ ಸವಕಲು ವಿಶೇಷಣವಿದೆಯಲ್ಲ- ಅದೇ ಇದಂತ ಬೇರೆಯಾಗಿ ಹೇಳಬೇಕಿಲ್ಲವಲ್ಲ? ಈ ಕ್ಯಾರೆಕ್ಟರನ್ನು ಆರ್ಕಿಟೆಕ್ಚರಿನ ಥಿಯರಿ ಮತ್ತು ಪ್ರ್ಯಾಕ್ಟಿಸುಗಳೆರಡೂ ದಿನಾಲೂ ಚರ್ಚಿಸುವುದಿದೆ. ಇದು ವೃತ್ತಿಶಃ ಅಭ್ಯಾಸವೇ ಆಗಿರುವುದರಿಂದ ರಸ್ತೆ ಬದಿಯ ಒಂದೊಂದು ಕಟ್ಟಡವನ್ನೂ ಕಣ್ಣಲ್ಲೇ ಅಳೆದು ಅದರ ಶೀಲ ಮತ್ತು ಚಾರಿತ್ರ್ಯಕ್ಕೆ ಸರ್ಟಿಫಿಕೇಟು ಕೊಡುವುದು ನನಗೊಂದು ನಮೂನೆ ಚಾಳಿಯೇ ಆಗಿಬಿಟ್ಟಿದೆ. ನಮ್ಮ ಸಿನೆಮಾಗಳಲ್ಲಿ ಜನಪ್ರಿಯ ಎನ್ನುವ ಮಾದರಿಯಿರುವ ಹಾಗೆ ಆರ್ಕಿಟೆಕ್ಚರಿನಲ್ಲೂ ‘ಪಾಪ್’ ಇದೆ. ಇದಕ್ಕೆ ವಿರುದ್ಧವಾಗಿ ಅಷ್ಟೇ ಸೀರಿಯಸ್ಸಾದ ಗಂಭೀರ ಚಿಂತನೆಯೂ ಕಟ್ಟಡ ವಿನ್ಯಾಸದಲ್ಲಿದೆ. ಅಲ್ಲದೆ ಇವೆರಡನ್ನೂ ಚೂರುಪಾರು ಹೊಂದಿರುವ ‘ಬ್ರಿಡ್ಜ್’ ಆರ್ಕಿಟೆಕ್ಚರೆಂತಲೂ ಒಂದಿದೆ. ನಮ್ಮ ಕಟ್ಟಡಗಳು ಹೊರಗಿನಿಂದ ತೋರಿಕೊಳ್ಳುವ ಬಗೆಗಳನ್ನು ನಾವು ಕೇಳುತ್ತ, ನೋಡುತ್ತ ಆಸ್ವಾದಿಸುವ ಇತರೆ ಕಲೆಗಳ ಹಾಗೆಯೇ ವಿಂಗಡಿಸಿಡಬಹುದೇನೋ. ಅಂದರೆ ಆರ್ಕಿಟೆಕ್ಚರಿನಲ್ಲಿ ಶುದ್ಧವಾದ ‘ಲತಾ ಮಂಗೇಶ್ಕರ್’ಗಳೂ ಇವೆ. ರೀಮಿಕ್ಸಿಗೆ ಮನಸಾ ಒಗ್ಗಿಕೊಳ್ಳುವ ‘ಆಶಾ ಭೋಂಸ್ಲೆ’ಗಳೂ ಇವೆ. ಬರೇ ಧನಾಧನುಳ್ಳ ಅಬ್ಬರದ ಮಸಾಲೆಗಳೂ ಇವೆ. ಈ ಎಲ್ಲವಕ್ಕೂ ತಂತಮ್ಮದೇ ಚಾರಿತ್ರ್ಯವಿದೆ.

ಇಷ್ಟೆಲ್ಲ ಪೀಠಿಕೆ ಬರೆದಿದ್ದಕ್ಕೆ ಒಂದು ಕಾರಣವಿದೆ. ಮೊನ್ನೆ ಮೊನ್ನೆಯಷ್ಟೇ ನಾಡಿಗೆ ತೆರೆದುಕೊಂಡ ಎರಡು ಹೈಕೋರ್ಟ್ ಪೀಠಗಳ ಚಿತ್ರಗಳನ್ನು ನೋಡಿದಾಗ ಯಾಕೋ ಅಸಂಬದ್ಧವೆನಿಸಿತು. ಎರಡೂ ರಾಜಧಾನಿಯಲ್ಲಿರುವ ಉಚ್ಛ ನ್ಯಾಯಾಲಯ ಕಟ್ಟಡದ್ದೇ ಕಳಪೆ ನಕಲು. ಅದೇ ಕೆಂಪು. ಅವೇ ಕಂಭಗಳು. ಅಂತಹವೇ ಕಮಾನುಗಳು. ಅಂಥದೇ ಪಡಸಾಲೆ. ಇವೆಲ್ಲ ಮೇಲುನೋಟದ ಗಮನಗಳೇ ಇರಬಹುದು. ನಾನು ಈ ಕಟ್ಟಡಗಳನ್ನು ಒಳಹೊಕ್ಕು ನೋಡಿಲ್ಲ. ಆದಾಗ್ಯೂ ನನ್ನದೊಂದಿಷ್ಟು ತಗಾದೆಗಳಿವೆ. ಅಷ್ಟಾಗಿ ವೃತ್ತಿನಿಷ್ಠವಲ್ಲದ ತಾತ್ವಿಕ ಆಕ್ಷೇಪಗಳಿವು.

ಮೊದಲನೆಯದಾಗಿ ಈ ಎರಡೂ ಪೀಠಗಳು ತಾವು ಪ್ರತಿನಿಧಿಸುವ ಬೆಂಗಳೂರಿನ ಕಟ್ಟಡದ ಹಾಗೇ ಇರಬೇಕೆಂದು ಆಗಿರುವುದು ಯಾಕೆ? ಹಾಗೆ ಇರಲಿಕ್ಕೊಂದು ಸೈದ್ಧಾಂತಿಕ ದಾಕ್ಷಿಣ್ಯವೇನಾದರೂ ಈ ಕಟ್ಟಡಗಳಿಗೆ ಇವೆಯೆ? ಅದು ದಾಕ್ಷಿಣ್ಯವೇ ಇದ್ದಲ್ಲಿ ಅದರ ಹಿಂದೆ ಎಷ್ಟರ ಮಟ್ಟಿಗೆ ಒಂದು ಬೌದ್ಧಿಕ ವಿಚಾರ ದುಡಿದಿದೆ? ಮತ್ತು ಈ ಪೀಠಗಳೂ ಹೀಗೇ ಕಾಣಬೇಕೆಂಬುದು ಪೂರ್ವನಿರ್ಧಾರಿತವೇ ಇದ್ದಲ್ಲಿ ಅವುಗಳ ಪ್ರತಿಮಾರ್ಹತೆ (imageability) ಎಷ್ಟು ಸರಿ?

ಎರಡನೆಯದಾಗಿ ನೂರು ವರ್ಷಗಳ ಹಿಂದಿನ ಅರಸೊತ್ತಿಗೆ ಅವತ್ತಿನ ಕಾಲಕ್ಕೆ, ದೇಶಕ್ಕೆ ಬದ್ಧವಿದ್ದು ಕಟ್ಟಿದ ಅಠಾರ ಕಚೇರಿಯ ರೂಪುರಚನೆ ಇವತ್ತಿನ ಸಂದರ್ಭದಲ್ಲಿ ಎಷ್ಟು ಪ್ರಸ್ತುತ ಮತ್ತು ಎಷ್ಟು ಸೂಕ್ತ? ನಮ್ಮ ಹೈಕೋರ್ಟ್‌ನ್ನು ಮೈಸೂರಿನ ಒಡೆಯರು ಕಟ್ಟಿಸಿದ್ದು ಎನ್ನುವುದಾದರೂ ಅದರ ಮೇಲೆ ಇನ್ನಿಲ್ಲದ ಯುರೋಪಿಯನ್ ಛಾಪಿದೆ. ಅದೊಂದು ರೀತಿಯಲ್ಲಿ ಅಪ್ಪಟ ಇಂಪೀರಿಯಲ್ ಪ್ರತಿಮೆಯೇ ಸರಿ. ಈ ಎರಡು ಸಾವಿರದ ಎಂಟರ ಸಂದರ್ಭದಲ್ಲಿ ನಮ್ಮ ಜನಪ್ರಭುತ್ವದ ನ್ಯಾಯಾಂಗವನ್ನು ಪ್ರತೀಕಿಸಲಿಕ್ಕೆ ಒಂದು ಇಂಪೀರಿಯಲ್ ಪ್ರತಿಮೆ! ಇದು ನಮ್ಮ ಪ್ರಜಾಪ್ರಭುತ್ವದ ಪರಿ!!

ಮೂರನೆಯದಾಗಿ ನಮ್ಮ ಸರ್ವತಂತ್ರ ಸ್ವತಂತ್ರ ಗಣರಾಜ್ಯದಲ್ಲಿ ಸ್ವಾತಂತ್ರ್ಯೋತ್ತರದ ಅರವತ್ತೂ ಚಿಲ್ಲರೆ ವರ್ಷಗಳ ಬಳಿಕವೂ ನಾವು ಮತ್ತು ನಮ್ಮ ಧುರೀಣರು ಬೀಗಿಕೊಳ್ಳುವ ಸೆಕ್ಯುಲರ್ ಅನ್ನಲಾಗುವ ಮತ್ತು ನಮ್ಮದೇ ಐಡೆಂಟಿಟಿಯೆನಿಸಬಲ್ಲ ಒಂದು ಕಟ್ಟಡ ಶೈಲಿಯನ್ನು ನಾವು ಹುಟ್ಟಿಸಿಲ್ಲವೇಕೆ? ಇಲ್ಲಿ ಸೆಕ್ಯುಲರ್ ಅನ್ನುವುದನ್ನು ನಮ್ಮ ರಾಜಕೀಯದವರು ಅರ್ಥಯಿಸುವ ಹಾಗೆ ಜಾತ್ಯತೀತ ಅಥವಾ ಧರ್ಮನಿರಪೇಕ್ಷ ಅನ್ನುವ ಅರ್ಥದಲ್ಲಿ ಹೇಳುತ್ತಿಲ್ಲ. ಸೆಕ್ಯುಲರ್ ಅಂದರೆ ಯಾವುದೇ ಒಂದು ನಿರ್ದಿಷ್ಟ ಶೈಲಿಯನ್ನು ಅಳವಡಿಸಿಕೊಳ್ಳದೆ ಕಟ್ಟಡದ ಒಳಗಿನ ಅವಕಾಶಕ್ಕೆ ತಕ್ಕ ಹೊರಗವಚವನ್ನು ಮಾಡುವುದು. ಕಟ್ಟಡದ ಹೊರಮೈಯಲ್ಲಿ ಅನಗತ್ಯವಾದ ಪ್ರಸಾಧನವನ್ನು ಹೇರದಿರುವುದು. ಅಂದರೆ ಕಟ್ಟಡದಲ್ಲಿ ಯಾವುದೇ ಒಂದು ಪರಂಪರೆಗೆ ಬದ್ಧವಾಗುವ ಕಂಭ, ಕಮಾನು ಇನ್ನಿತರೆ ರೆಟರಿಕುಗಳನ್ನು ಅಳವಡಿಸದಿರುವುದು.

ಈ ನಿಟ್ಟಿನಲ್ಲಿ ಈ ಎರಡೂ ಪೀಠಗಳ ಚಾರಿತ್ರ್ಯವನ್ನು ಕುರಿತು ಏನನ್ನುವುದು? ಮೇಲೆ ಹೇಳಿದ ವಿಂಗಡಣೆಯಲ್ಲಿ ಇವುಗಳನ್ನು ಎಲ್ಲಿ, ಹೇಗೆ ಹೊಂದಿಸುವುದು ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ ನಮ್ಮ ವಿಧಾನಸೌಧವೂ ಇದೇ ರೀತಿಯದೇ ಒಂದು ಕಟ್ಟಡ. ಅದನ್ನು ಕಟ್ಟಿದ ಸುಮಾರಿನಲ್ಲೇ ನಮ್ಮಲ್ಲಿ ಚಂಡೀಗಢವೆಂಬ ರಾಜಧಾನಿಯನ್ನು ಊರಿಗೆ ಊರೇ ಹೊಸತಾಗಿ ಕಟ್ಟಿದ್ದು. ಆ ಕಾಲದ ಹತ್ತು ವರ್ಷಗಳಷ್ಟು ಹಿಂದಕ್ಕೆ ಮುಂದಕ್ಕೆ ಜಗತ್ತಿನ ಎಷ್ಟೆಲ್ಲ ದೇಶಗಳು ಸ್ವತಂತ್ರಗೊಂಡಿದ್ದು, ಗಣತಂತ್ರಗೊಂಡಿದ್ದು ಮತ್ತು ಸೆಕ್ಯುಲರ್ ಎಂದು ಮೊಳಗಿಕೊಂಡಿದ್ದು. ಇಂತಹದೊಂದು ಮುಹೂರ್ತದಲ್ಲಿ ಕನ್ನಡದ ಸೆಕ್ರೆಟೇರಿಯಟ್ಟಿನ ವಿನ್ಯಾಸಕಾರರು ಅದನ್ನು ಕಟ್ಟುವಾಗ ಎಲ್ಲೆಲ್ಲಿನ ಪ್ರಾಚ್ಯ-ಸ್ಫೂರ್ತಿಯನ್ನು ಎರವಲು ತಂದು ವಿಧಾನಸೌಧವೆಂದು ಮೆರೆದಿದ್ದು ನಿಜಕ್ಕೂ ಪ್ರಶ್ನಾತೀತವೆ?

ಕಳೆದ ಶತಮಾನದ ಐವತ್ತರ ದಶಕ ಜಗತ್ತಿನ ಎಲ್ಲೆಲ್ಲೂ ವಸಾಹತುಶಾಹಿ ಮರೆಯಾಗುತ್ತಿದ್ದ ಕಾಲ. ಜಗತ್ತು ಕ್ಲಾಸಿಕಲ್ ಅಥವಾ ಶಾಸ್ತ್ರೀಯತೆಯನ್ನು ನಿವಾರಿಸಿಕೊಂಡ ಸಮಯ. ಆಗ ನಾವಿಲ್ಲಿ ಆರೇಳು ಶತಮಾನಗಳಷ್ಟು ಹಿಂದಿನ ಇಂಡೋ-ಸಾರ್ಸೆನಿಕ್ ಎನ್ನುವ ಶೈಲಿಗೆ ಜೋತುಕೊಂಡಿದ್ದು ಎಷ್ಟು ಸರಿ? ವಿಧಾನಸೌಧ ಮೈಸೂರಿನ ಅರಮನೆಗೆ ಪರ್ಯಾಯವಾದ ಸತ್ತೆಯ ಕಟ್ಟಡ ಎನ್ನುವುದಾದರೆ ಅದು ಹೊಂದಿರುವ ವಿನ್ಯಾಸದ ಅಂಶಗಳಲ್ಲಿ ಎಷ್ಟೆಲ್ಲ ಅರಮನೆಯ ಅಂಶಗಳಿಲ್ಲ? ನಮ್ಮ ಕಾವ್ಯ, ಸಾಹಿತ್ಯ ಛಂದಸ್ಸನ್ನು ಬದಿಗಿಟ್ಟಾದ ಮೇಲೂ ನಮ್ಮ ಕಟ್ಟಡಗಳು ಆರ್ಕಿಟೆಕ್ಚರಿನ ಹಳೆಯ ಛಂದಸ್ಸನ್ನು ಇನ್ನೂ ಉಳಿಸಿಕೊಂಡಿರುವುದಕ್ಕೆ ಏನನ್ನುವುದು?

ನಮ್ಮ ಸಾರ್ವಜನಿಕ ಕಟ್ಟಡಗಳನ್ನು ವಿನ್ಯಾಸ ಮಾಡುವುವರು ಈ ಸೂಕ್ಷ್ಮಗಳನ್ನು ಗಮನಿಸಲೇಬೇಕಾಗುತ್ತದೆ. ಈ ಕಟ್ಟಡಗಳು ಭವ್ಯವಿರಬೇಕು ಅನ್ನುವುದು ಬರೇ ವಿನ್ಯಾಸದ ಪ್ರಯತ್ನದಿಂದ ಆಗುವ ಸಾಧನೆಯೇನಲ್ಲ. ತಮ್ಮೊಳಗೆ ಹುದುಗಿಸಿಕೊಳ್ಳುವ ಜನಮನದ ಗಾತ್ರದಿಂದಲೇ ಅವು ಭವ್ಯವೆನಿಸಿಬಿಡುತ್ತವೆ. ಈ ಕಟ್ಟಡಗಳು ಸಾರ್ವಜನಿಕ ಎನಿಸಲಿಕ್ಕೆ ಜನರು ಅವುಗಳನ್ನು ಕಟ್ಟುವ ಗೋಡೆಗಳ ಜತೆ, ಮೆಟ್ಟಿಲುಗಳ ಮೇಲೆ, ಕಂಭಗಳ ಸುತ್ತ ಹೇಗೆ ಸ್ಪಂದಿಸುತ್ತಾರೆ ಅನ್ನುವುದೂ ಮುಖ್ಯವಾಗುತ್ತದೆ. ಈ ಕಟ್ಟಡಗಳು ತಮ್ಮೆಲ್ಲ ಬದಿಗಳನ್ನು ಜನರಿಗೆ ತೆರೆದುಕೊಂಡರೆ ಮಾತ್ರ ಅವು ಜನರಿಗೋಸ್ಕರ ಅನಿಸುವುದು. ಇವು ತಮ್ಮೆದುರು ಜನರಿಗೆ ಸರಾಗವಾಗಿ ಸಮಷ್ಟಿಯಲ್ಲಿ ವ್ಯವಹರಿಸಬಲ್ಲ ಮುನ್ನೆಲೆಯೊದಗಿಸಬೇಕು ಮತ್ತು ಈ ವ್ಯವಹಾರಗಳಿಗೆ ತಾವೇ ಹಿನ್ನೆಲೆಯಾಗಬೇಕು. ತಮ್ಮ ಸುತ್ತ ಬೇಲಿ ಹಾಕಿಕೊಂಡು, ಒಳಗೆ ಷೋಕಿಯ ಆಮದು ಹುಲ್ಲು ಹರವಿ, ಅದನ್ನು ತಿದ್ದಿ ತೀಡಿ ಆರೈಸುತ್ತ ಮುಟ್ಟಿದರೆ ದಂಡ ಅಂತ ಬೋರ್ಡು ಬರೆಯುವುದರಿಂದಲ್ಲ. ಬೆಂಗಳೂರಿನ ಟೌನ್‍ಹಾಲ್ ಅದರ ಮಗ್ಗುಲಿಗಿರುವ ಕಲಾಕ್ಷೇತ್ರ ಮತ್ತು ಕನ್ನಡ ಭವನಗಳಿಗಿಂತ ಆಪ್ತವೆನಿಸುವುದೂ ಮತ್ತು ಸಾಮುದಾಯಿಕವೆನಿಸುವುದು ಇದೇ ಕಾರಣಕ್ಕೆ. ಕಟ್ಟಡದ ಚಾರಿತ್ರ್ಯದಲ್ಲಿ ನಿರ್ಣಾಯಕವೆನಿಸುವುದು ಅದು ಹೇಗೆ ತೋರುತ್ತದೆ ಎನ್ನುವುದಲ್ಲ. ಅದು ಎಷ್ಟು ಮಟ್ಟಿಗೆ ಜನರಿಗೆ ಅನುಭವಶೀಲವಾಗಿದೆ ಅನ್ನುವುದು.