ಅವರ ಮಾತಿನಲ್ಲಿ ಕಥೆ ಕೇಳುವುದೇ ಚೆಂದ. ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಷಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ “ಇಲ್ಲ ಮಾರಾಯ್ತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ‌. ಪಾಪ ಮದುವೆ ಆಗಿ ಇಲ್ಲಿಗೆ ಬಂದವಳು ನೀನು, ನಿಂಗೆ ಉಡುಪಿ ಗೊತ್ತಿರ್ಲಿಕ್ಕಿಲ್ಲ, ಕೃಷ್ಣ ಮಠ ಇದ್ಯಲ್ಲಾ ಅದೇ ನಮ್ಮೂರು. ಮೊದ್ಲು ನಾವು ಅಲ್ಲೇ ಇದ್ವಿ. ಇಬ್ಬರು ಗಂಡು ಮಕ್ಕಳು. ಹೊಲ, ತೋಟ ಅಂತ ಬೆಳೆಯುತ್ತಾ ಬೆಳೆದದ್ದನ್ನು ತಿನ್ನುತ್ತಾ ಹಾಯಾಗಿಯೇ ಇದ್ದೆವು‌.
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.

ಪ್ರತಿ ಬಾರಿ ಕಡಲಿಗೆ ಮುಖಾಮುಖಿಯಾದಾಗೆಲ್ಲಾ, ಈ ಕಡಲು ಮತ್ತು ನಾನು ಯಾವುದೋ‌ ಜನ್ಮದಲ್ಲಿ ದಾಯಾದಿಗಳಾಗಿದ್ದಿರಬಹುದು, ಅದಕ್ಕೇ ಈಗ ನನ್ನ ಮೆದುಳಿನ ಯಾವುದೋ ಒಂದು ಕೋಶದಲ್ಲಿ ಅಡಗಿರುವ ಅಷ್ಟೂ ವಿಷಾದಗಳನ್ನು ಕಡಲಿಗೆ, ಮೊರೆವ ಅಲೆಗಳಿಗೆ ಕೇಳಿಸಬೇಕು ಅನ್ನುವ ಹುಕಿ ಆಗಾಗ ನನ್ನೊಳಗೆ ಹುಟ್ಟಿಕೊಳ್ಳುವುದು ಅಂತ ನನಗೆ ಅನ್ನಿಸುತ್ತದೆ. ‌ಮರುಕ್ಷಣ ಹೀಗೆ ಕಡಲಿನೊಂದಿಗೆ ಖುಷಿಯನ್ನೂ, ನಲಿವನ್ನೂ, ಸಂಕಟವನ್ನೂ, ಕೆಲವು ವಿಯೋಗಗಳನ್ನೂ ಎಷ್ಟು ಮಂದಿ ಇರಬಹುದು? ಅವರೆಲ್ಲರೂ ಯಾವುದೋ ಜನ್ಮದಲ್ಲಿ ದಾಯಾದಿಗಳಾಗಿದ್ದರೆ, ನಿಜಾರ್ಥದಲ್ಲಿ ಕಡಲು ದೊಡ್ಡ ಕುಟುಂಬಸ್ಥನೇ ಇರಬೇಕು ಅನ್ನಿಸಿ ನಗು ಬರುತ್ತದೆ.

ಕಡಲು ನಾನು ಮಾತಾಡುವುದನ್ನು ಕೇಳಿಸಿಕೊಳ್ಳುತ್ತದೋ ಬಿಡುತ್ತದೋ, ಅದು ಪಾಠ ಕಲಿಸುತ್ತದೋ ಇಲ್ಲವೋ, ಆದರೆ ಕಡಲಿನಲ್ಲೊಂದು ಹಿತವಾದ ಮೌನ ಇದ್ದೇ ಇದೆ. ಅದು ಸುಮ್ಮನೆ ಕೇಳಿಸದು, ಶಬ್ಧಗಳ ಸಂತೆಯೊಳಗೆ ಕಳೆದುಹೋಗದ ಮನಸ್ಸನ್ನಿಟ್ಟುಕೊಂಡು ಕಡಲ ಮೌನವನ್ನು ಆಲಿಸದರೆ ಮಾತ್ರ ಕೇಳಿಸಬಲ್ಲುದು. ಕಡಲಷ್ಟೇ ಅಲ್ಲ, ಅದರ ತೀರ, ರಸ್ತೆಗೂಡುವಲ್ಲಿ ಪುಟ್ಟದಾಗಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು, ಅವರ ಮಾತು, ಕಥೆ, ಬದುಕೂ ಒಂದು ಅಚ್ಚರಿಯೇ. ಹಾಗೆ ನೋಡುವುದಾದರೆ ದಡದ ಒಂದೊಂದು ಮರಳಿನ ಕಣಗಳೂ ಹೊಸ ಹೊಸ ಕಥೆಗಳನ್ನು ಹೇಳುತ್ತವೆಯೇನೋ ಅನಿಸುತ್ತದೆ. ಹೀಗೆ ಕಡಲ ತಡಿಯ ಅಚ್ಚರಿಯನ್ನು ಬೆಚ್ಚಗೆ ಮಡಿಲಲ್ಲಿ ಕೂರಿಸಿ ಮೈದಡವಿದರೆ, ಟೀ, ಕಾಫಿ, ಸ್ವೀಟ್ ಕಾರ್ನ್, ಮುರುಮುರಿಗಳ ಪುಟ್ಟ ಸ್ಟಾಲ್ ಇಟ್ಟುಕೊಂಡಿರುವ ಇಳಿವಯಸ್ಸಿನ ದಂಪತಿ ಕಣ್ಣಿಗೆ ಬೀಳುತ್ತಾರೆ.

ಎಂಥಾ ಜೀವನೋತ್ಸಾಹ ಅವರದ್ದು! ಸದಾ ಬ್ಯುಸಿಯಾಗಿರುವ, ಅಷ್ಟು ಬ್ಯುಸಿಯ ಮಧ್ಯೆಯೂ ಯಾರ ಮೇಲೂ ಸಿಡುಕದ, ಎಲ್ಲವನ್ನೂ ನಗುತ್ತಲೇ ಸಂಭಾಳಿಸುವ ಅವರನ್ನು ನೋಡುವುದೇ ಒಂದು ಹಬ್ಬ. ಕಣ್ಣ ಮೇಲೊಂದು ಕನ್ನಡಕ, ಕಾಸಗಲದ ಕುಂಕುಮ, ಕಿವಿಯ ಪಕ್ಕದಲ್ಲಿ ಸ್ವಲ್ಪವೇ ಸ್ವಲ್ಪ ಹಚ್ಚಿಕೊಂಡ ಪ್ರಸಾದ, ಮುಕ್ಕಾಗದ ಹತ್ತಿ ಸೀರೆ, ಮುಖದ ಪೂರ್ತಿ ನಗು… ಇವು ಆ ಅಜ್ಜಿಯ ಅಲಂಕಾರವಾದರೆ ತಿಳಿ ಬಣ್ಣದ ಅಂಗಿ, ಒಂದು ಪಂಚೆ ಮತ್ತು ಆಗಾಗ ಕೈ ಒರೆಸಿಕೊಳ್ಳಲು ಹೆಗಲ ಮೇಲೆ ಒಂದು ಬೈರಾಸು… ಇಷ್ಟು ಅಜ್ಜನ ವೇಷ ಭೂಷಣ. ನೀವೆಂದಾದರೂ ನಮ್ಮೂರಿನ ಬೀಚ್ ಗೆ ಬಂದರೆ ಇಡೀ ಕಡಲಿನ ಸೌಂದರ್ಯಕ್ಕೆ ಪುಟವಿಟ್ಟಂತೆ ಕಾಣುವ ಇವರನ್ನು ಭೇಟಿಯಾಗದೆ ವಾಪಾಸಾಗಬಾರದು.

ಅವರು ತಯಾರಿಸುವ ಮಸಾಲೆ ಟೀಯಂತೂ ಅದ್ಭುತ. ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕೆನ್ನುವ ತಪನೆ ಹುಟ್ಟುಹಾಕುತ್ತದದು. ಆದರೆ ಈ ವಯಸ್ಸಿನಲ್ಲಿ ಯಾವ ಅನಿವಾರ್ಯತೆ ಅವರನ್ನು ಹೀಗೆ ದುಡಿಯಲು ಪ್ರೇರೇಪಿಸುತ್ತಿದೆ ಅಂತ ಹಲವು ಬಾರಿ ನಾನು ಯೋಚಿಸಿದ್ದಿದೆ. ಕೆಲವೊಮ್ಮೆ ಟೀ ಕುಡಿಯುವಾಗ ಎಲ್ಲಾ ಕೇಳಿಬಿಡಬೇಕು ಅಂದುಕೊಂಡದ್ದೂ ಇದೆ. ಆದರೆ ಅಲ್ಲಿರುವ ಜನಜಂಗುಳಿ, ವ್ಯಾಪಾರದ ಭರಾಟೆ, ಅವರಿಬ್ಬರ ಕಾರ್ಯತತ್ಪರತೆ ನೋಡಿ ಏನೂ ಕೇಳಲಾಗದೆ ಹಿಂದಿರುತ್ತೇನೆ. ಮೇಲಾಗಿ ನನ್ನ ಅನುಮಾನಗಳಿಗೆಲ್ಲಾ ಅವರು ಉತ್ತರಿಸುತ್ತಾರೆ ಎನ್ನುವ ಯಾವ ನಂಬಿಕೆಯೂ ನನಗಿರಲಿಲ್ಲ‌. ಹಿಂದೊಮ್ಮೆ ಹೀಗೆ ಯಾರನ್ನೋ ಅವರ ಬದುಕಿನ ಬಗ್ಗೆ ಕೇಳಿ ಬಯ್ಯಿಸಿಕೊಂಡ ಅನುಭವವೂ ಇತ್ತು. ಹಾಗಾಗಿ ಯಾವ ಉಸಾಬರಿಯೂ ಬೇಡವೆಂದು ಸುಮ್ಮನಾಗುತ್ತಿದ್ದೆ.

ಆದರೆ ಪ್ರತಿ ಬಾರಿ ಅವರನ್ನ ನೋಡಿದಾಗೆಲ್ಲಾ ನನ್ನ ಮೆದುಳು ಪ್ರಶ್ನೆಗಳ ಗೀಜುಗದ ಗೂಡಾಗಿಬಿಡುತ್ತಿತ್ತು. ಎಷ್ಟು ಬಿಡಿಸಲೆತ್ನಿಸಿದ್ದರೂ ಬಿಡಿಸಿಕೊಳ್ಳುತ್ತಿರಲಿಲ್ಲ. ಮುಪ್ಪಿನಲ್ಲೂ ಯಾರ ಮುಂದೆಯೂ ಕೈಯೊಡ್ಡಲಾರೆ ಅನ್ನುವ ಸ್ವಾಭಿಮಾನ ಅವರನ್ನು ಈ ವಯಸ್ಸಿನಲ್ಲೂ ದುಡಿಸುತ್ತಿದೆಯಾ? ಅಥವಾ ಎಲ್ಲಾ ಮುಗಿದ ಮೇಲೆ ಮಕ್ಕಳು ಅವರಿಬ್ಬರನ್ನೂ ಮನೆಯಿಂದ ಹೊರಹಾಕಿದ್ದಾರೋ? ರಸ್ತೆಗೆಂದೋ, ರೈಲ್ವೇ ಟಾಕೀಸಿಗೆಂದೋ ಕಸಿದುಕೊಂಡ ಭೂಮಿ ಅವರನ್ನು ರಸ್ತೆಯಲ್ಲಿ ನಿಲ್ಲಿಸಿತಾ? ಊರಿಂದ, ಕುಟುಂಬದಿಂದ ಬಹಿಷ್ಕೃತರೋ? ಇಡೀ ಬದುಕನ್ನು ವಿಲಾಸದಿಂದ ಕಳೆದವರು ಈಗ ಕೈ ಖಾಲಿ ಮಾಡಿಕೊಂಡು ಕಳೆದುಕೊಂಡದ್ದನ್ನೇನಾದರೂ ಹುಡುಕುತ್ತಿದ್ದಾರಾ? ಅಂದರೆ ಹುಡುಕಾಟ ಎನ್ನುವುದು ಕಳೆದುಕೊಂಡಿರುವುದಕ್ಕಷ್ಟೇ ಅನ್ವಯಿಸುವಂಥದ್ದಾ? ಹೊಸದಾಗಿ ಯಾವುದನ್ನೂ ಹುಡುಕಬಾರದಾ? ಬದುಕಿನ ಸಂಧ್ಯಾಕಾಲದಲ್ಲಿ ಮನಸ್ಸಿಗಿಷ್ಟವಾಗುವ ಹೊಸ ಸಾಹಸವಾ ಇದು? ಅಥವಾ ಹೀಗೆಲ್ಲಾ ಯೋಚಿಸುತ್ತಿರುವ ನನ್ನ ಯೋಚನಾ ಕ್ರಮವೇ ತಪ್ಪಾ? ಅವರನ್ನು ಕೇಳಬೇಕು, ಮಾತಾಡಿಸಬೇಕು ಅನ್ನುವ ಇಂಗಿತ ತಪ್ಪಾ? ಊಹೂಂ, ಒಂದೂ ಗೊತ್ತಾಗದೆ ತಲೆ ಕೊಡವಿಕೊಳ್ಳುತ್ತೇನೆ. ಮತ್ತು ಹಾಗೆ ಕೊಡವಿಕೊಂಡಾಗೆಲ್ಲಾ ಮತ್ತಷ್ಟು ಪ್ರಶ್ನೆಗಳು ಕಾಡುತ್ತವೆ. ನಾನು, ಬದುಕು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುತ್ತಾ ಕೂತರೆ, ಬದುಕು ಪ್ರಶ್ನೆಯನ್ನೇ ಬದಲಿಸಿಬಿಡುತ್ತದೆ ಅನ್ನುವ ತತ್ವಾಜ್ಞಾನಕ್ಕೆ ಜೋತುಬಿದ್ದು ತಾತ್ಕಾಲಿಕ ಸಮಾಧಾನ ಪಟ್ಟುಕೊಳ್ಳುತ್ತೇನೆ.

ಪ್ರಶ್ನೆಗಳಿಗೆ ಉತ್ತರಿಸಲಾಗುವುದಿಲ್ಲ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ ಎಂದಾದಾಗೆಲ್ಲಾ ತತ್ವಜ್ಞಾನದ ನೆರಳಿನಡಿ ಅಡಿಗಿಕೊಳ್ಳುವ ಮನುಷ್ಯ ಸ್ವಭಾವದ ಮೂಲ ಹುಡುಕುತ್ತಾ ಹೋದರೆ ಭೂತ, ವರ್ತಮಾನಗಳೊಂದಿಗೆ ಭವಿಷ್ಯವೂ ಡೋಲಾಯಮಾನವಾಗಿಬಿಡಬಹುದು. ಇರಲಿ, ಮೊನ್ನೆ ಹೊಂಬಣ್ಣ ತಬ್ಬಿದ ಸಂಜೆಯೊಂದರಲ್ಲಿ, ನಾನೀಗ ಬದುಕುತ್ತಿರುವ ಬದುಕು ನನ್ನದಲ್ಲ ಅಂತ ದಿಢೀರ್ ಜ್ಞಾನೋದಯ ಆದಂತಾಯಿತು. ಹಾಗಿದ್ದರೆ ಈಗ ನಾನು ಬದುಕುತ್ತಿರುವ ಬದುಕು ಯಾರದು? ಇದು ನನ್ನದಲ್ಲದೇ ಹೋಗಿದ್ದರೆ ಇದರ ಅಸಲೀ ಹಕ್ಕುದಾರರು ಯಾರು? ನನ್ನ ಬದುಕನ್ನು ಯಾರು ಬದುಕುತ್ತಿದ್ದಾರೆ? ಹಾಗೆ ಬದುಕುತ್ತಿರುವವರು ಖುಷಿಯಾಗಿದ್ದಾರಾ? ಅಥವಾ ಯಾವುದೋ ಬಿಸಿಲ್ಗುದುರೆಯೊಂದರ ಬೆನ್ನು ಹತ್ತಿ ಅವರದೇ ಬದುಕಿಗಾಗಿ ಅಲೆಯುತ್ತಿದ್ದಾರಾ? ಹೀಗೆಲ್ಲಾ ಬದುಕು ಎಕ್ಸ್ ಛೇಂಜ್ ಆಫರ್ ನಷ್ಟು ಸುಲಭವಾಗಿ ಅದಲುಬದಲಾಗಲು ಸಾಧ್ಯವೇ? ಅಂತೆಲ್ಲಾ ಯೋಚನೆಗೆ ಇಟ್ಟುಕೊಂಡಿತು. ನನ್ನ ಗೊಂದಲಗಳನ್ನೂ, ಅನುಮಾನಗಳನ್ನೂ ಕಡಲಿನ ಅಲೆಗಳಿಗೆ ಕೇಳಿಸಿ ಸಮಾಧಾನ ಪಡೆದುಕೊಳ್ಳಬೇಕೆಂದು ಅನ್ನಿಸಿ ಒಂಟಿಯಾಗಿ ತೀರದ ಕಡೆ ನಡೆದೆ. ನಾಲ್ಕು ಹೆಜ್ಜೆ ಇಟ್ಟರೆ ಕಡಲು, ನಲವತ್ತು ಹೆಜ್ಜೆ ಇಟ್ಟರೆ ಸಾವು… ಹೆಜ್ಜೆಗಳ ಮತ್ತು ಪ್ರಶ್ನೆಗಳ ನಡುವೆ ಜೀಕುವ ಜೋಕಾಲಿ ಬದುಕು. ಕಡಲ ಮರಳು ಮತ್ತು ಟಾರು ರಸ್ತೆ ಸೇರುವ ಸ್ವರ್ಗದ ಬಾಗಿಲಿನಂತಹ ಸ್ಥಳದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ ದೇವತೆಗಳಂತಹ ಅಜ್ಜ, ಅಜ್ಜಿ. ಅವರ ಮಸಾಲೆ ಟೀಯ ಘಮ ಮೂಗಿಗೆ ಅಡರುತ್ತಿದ್ದಂತೆ ನನ್ನ ಗೊಂದಲಗಳೆಲ್ಲಾ ಮರೆತೇ ಹೋದವು.

ಹೇಗೆ ಮಾತು ಶುರು ಹಚ್ಚಬೇಕೆಂದು ಅರ್ಥವಾಗದೆ ಅವರ ಮುಂದೆ ಎರಡು ಕ್ಷಣ ಸುಮ್ಮನೆ ನಿಂತು “ಮಸಾಲಾ ಟೀ” ಅಂದೆ. ನಗುನಗುತ್ತಲೇ ಟೀ ಕಾಸಿಕೊಟ್ಟರು. ನಾನು‌ ಟೀ ಹೀರುವ ನೆಪದಲ್ಲಿ ಅಲ್ಲೇ ನಿಂತು, “ನೀವು ಇಲ್ಲಿಯವರೇನಾ ಅಜ್ಜಿ?” ತೀರಾ ಸಾಮಾನ್ಯವೆಂಬಂತೆ ಕೇಳಿದೆ. ಅಜ್ಜ ಊಹೂಂ ಎಂದು ತಲೆಯಾಡಿಸಿದರು. ಆದರೆ ಅಜ್ಜಿ ಮಾತ್ರ ನಿಧಾನವಾಗಿ ತಮ್ಮ ವೃತ್ತಾಂತ ತೆರೆದಿಡಲು‌ ಪ್ರಾರಂಭಿಸಿದರು. ಮಾತಿನ ಮಧ್ಯೆ ಮಧ್ಯೆ ತುಳು ಪದಗಳನ್ನು ಅನಾಯಾಸವಾಗಿ ಬೆರೆಸುತ್ತಿದ್ದ ಅವರ ವಿಶಿಷ್ಟ ಕನ್ನಡಕ್ಕೆ ಮನ ಸೋಲುತ್ತಲೇ, ಕೈಯಲ್ಲಿ ಹಿಡಿದಿದ್ದ ಕಪ್ ಗೆ ಮತ್ತೆ ಮತ್ತೆ ಟೀ ಸುರಿದುಕೊಳ್ಳುತ್ತಾ ನಾನು ಅವರ ಮಾತಿಗೆ ಕಿವಿಯಾದೆ.

ಅವರ ಮಾತಿನಲ್ಲಿ ಕಥೆ ಕೇಳುವುದೇ ಚೆಂದ. ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಷಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ “ಇಲ್ಲ ಮಾರಾಯ್ತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ‌. ಪಾಪ ಮದುವೆ ಆಗಿ ಇಲ್ಲಿಗೆ ಬಂದವಳು ನೀನು, ನಿಂಗೆ ಉಡುಪಿ ಗೊತ್ತಿರ್ಲಿಕ್ಕಿಲ್ಲ, ಕೃಷ್ಣ ಮಠ ಇದ್ಯಲ್ಲಾ ಅದೇ ನಮ್ಮೂರು. ಮೊದ್ಲು ನಾವು ಅಲ್ಲೇ ಇದ್ವಿ. ಇಬ್ಬರು ಗಂಡು ಮಕ್ಕಳು. ಹೊಲ, ತೋಟ ಅಂತ ಬೆಳೆಯುತ್ತಾ ಬೆಳೆದದ್ದನ್ನು ತಿನ್ನುತ್ತಾ ಹಾಯಾಗಿಯೇ ಇದ್ದೆವು‌. ಆಗ ನಮ್ಮ ಜಿಲ್ಲೆಗೆ ಉಡುಪಿ ಅಂತ ಹೆಸರೂ ಇರ್ಲಿಲ್ಲ, ದಕ್ಷಿಣ ಕನ್ನಡ ವಿಭಜನೆ ಆಗಿರ್ಲಿಲ್ಲ. ಉಡುಪಿ ಮಂಗಳೂರು ಒಂದೇ ಆಗಿತ್ತು. ತಕ್ಕ ಮಟ್ಟಿಗೆ ಅನುಕೂಲಸ್ಥರೇ. ಆದ್ರೆ ನಾಲ್ಕು ತಲೆಮಾರಿಗೆ ಆಗುವಷ್ಟೇನೂ ಕೂಡಿಟ್ಟಿರಲಿಲ್ಲ. ಆದ್ರೆ ಉಣ್ಣೋಕೆ, ಉಡೋಕೆ ಏನು ಕಮ್ಮಿ ಇರ್ಲಿಲ್ಲ. ಹೊಲ, ಗದ್ದೆ, ತೋಟ ಜೊತೆಗೆ ಒಂದಿಷ್ಟು ದನ ಕರುಗಳು. ಬದುಕು ಹಾಯಾಗಿತ್ತು.

ಆಗ ನಮ್ಮೂರಲ್ಲಿ ನಾನೇ ಸುಂದರಿ. ಎಷ್ಟು ಮಂದಿ ನನ್ನ ಮದಿಮೆಯಾಗುದಕ್ಕೆ ಸಾಲುಗಟ್ಟಿ ನಿಂತಿದ್ರು ಗೊತ್ತಾ? ನಾನೆಷ್ಟು ವರಗಳನ್ನು ತಿರಸ್ಕರಿಸಿದ್ದೇನೆ ಗೊತ್ತಾ?” ಎಂದು ಸ್ವಲ್ಪ ನಾಚಿಕೆಯಿಂದ ಮತ್ತು ಹೆಚ್ಚೇ ಹೆಮ್ಮೆಯಿಂದ ಅಜ್ಜನತ್ತ ಕಣ್ಣು ಮಿಟುಕಿಸಿ ಮತ್ತೆ ಕಥೆ ಮುಂದುವರಿಸಿದರು‌. “ತರಹೇವಾರಿ ವಧುಪರೀಕ್ಷೆಗಳು ನಡೆಯುತ್ತಿದ್ದ ಕಾಲದಲ್ಲಿ ವರ ಪರೀಕ್ಷೆ ನಡೆಸಿದ ಜಾಣೆ ನಾನು. ‌ಒಂದ್ಸಲ ಏನಾಯ್ತು ಗೊತ್ತಾ? ಒಬ್ಬ ಘಟವಾಣಿ ಹೆಂಗ್ಸು, ಪಾಪದ ಮಗಳು ಮತ್ತು ಆ ಹೆಂಗ್ಸಿನ ಮಗ ನನ್ನ ವಧುಪರೀಕ್ಷೆಗೆ ಬಂದಿದ್ದರು. ಆ ಹೊತ್ತಿಗಾಗುವಾಗ ನಾನು ನಿರಾಕರಿಸಿದ್ದ ವರಗಳ ಪಟ್ಟಿ ಉದ್ದವಾಗಿಯೇ ಇತ್ತು. ಅಪ್ಪ- ಅಮ್ಮನಿಗೆ ಮಗಳೆಲ್ಲಿ ಮದುವೆಯಾಗದೇ ಉಳಿದುಬಿಡುತ್ತಾಳೇನೋ ಅನ್ನುವ ಭಯ ಒಳಗೊಳಗೇ ಕಾಡಲು ಶುರುವಾಗಿತ್ತು. ನನ್ನದೇ ವಯಸ್ಸಿನ ಸಂಬಂಧಿ ಹೆಣ್ಣು ಮಕ್ಕಳು, ಅಕ್ಕಪಕ್ಕದ ಮನೆಯವರು ಆಗಲೇ ಕಂಕುಳಲ್ಲೊಂದು, ಕೈಯಲ್ಲೊಂದು ಮಗು ಹಿಡಿದು ತಿರುಗುತ್ತಿದ್ದರು. ಅವರಿವರ ಮಾತುಗಳು ಬೇರೆ ಅವರ ಎದೆ ಚುಚ್ಚುತ್ತಿತ್ತು. ಹಾಗಾಗಿ ಅಮ್ಮ, ಈ ಮದುವೆ ನಡೆಯಲೇಬೇಕು, ಏನೂ ಅಪದ್ಧ ಮಾತನಾಡಬಾರದು ಎಂದು ಮೊದಲೇ ತಾಕೀತು ಮಾಡಿದ್ದರು. ಅಮ್ಮನಿಗೆ ಹೆದರಿ ನಾನೂ ಸುಮ್ಮನಿದ್ದೆ. ಕೋಡುಬಳೆ ಕೊಟ್ಟು ತಿನ್ನಲು ಹೇಳುವುದೇನು, ಹತ್ತು ಹೆಜ್ಜೆ ನಡೆಯಿಸಿ ನೋಡುವುದೇನು, ಹಾಡಿಸುವುದೇನು, ಅಡುಗೆಯಲ್ಲಿ ತಪ್ಪುಗಳೆಷ್ಟಿವೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುವುದೇನು? ನಾನು ಸಹಿಸುವಷ್ಟು ಸಹಿಸಿಕೊಂಡೆ, ಆದರೆ ಎಲ್ಲಾ ಮುಗಿದು ಹೊರಡಬೇಕು ಅನ್ನುವಷ್ಟರಲ್ಲಿ ನನಗೇನೋ ಉಪಕಾರ ಮಾಡುತ್ತಿದ್ದೇವೆ ಅನ್ನುವ ಧಾಟಿಯಲ್ಲಿ ನಿಮ್ಮ ಮಗಳ ಮೂಗು ಸ್ವಲ್ಪ ಗಿಡ್ಡ, ಇರಲಿ ಪರವಾಗಿಲ್ಲ. ನಾವು ಮದುವೆ ಮಾಡಿಸಲು ತಯಾರು, ಆದರೆ ವರಪೂಜೆ ಸಾಂಗವಾಗಿ ನಡೆಯಬೇಕು, ನಮಗೆ ಬರಬೇಕಾದ್ದೆಲ್ಲಾ ಬರಲೇಬೇಕು ಎಂದರು. ಅಷ್ಟು ಹೊತ್ತು ಎಲ್ಲಾ ಸಹಿಸಿಕೊಂಡಿದ್ದ ನಾನು ನಿಮ್ಮ ಮಗನೂ ಬೇಡ, ಈ ಮದುವೆಯೂ ಬೇಡ ಎಂದೆ.

ದುರ್ನಾದ ತೆಗೆದುಕೊಂಡಂತೆ ಅವರು ಎಷ್ಟು ಅಹಂಕಾರದ ಹುಡುಗಿ ಈಕೆ, ನಮಗೇ ಅವಮಾನ ಮಾಡುತ್ತಾಳಲ್ಲಾ, ಇರಲಿ ಇವಳಿಗೆ ಹೇಗೆ ಮದುವೆಯಾಗುತ್ತೆ ಅಂತ ನಾನೂ ನೋಡುತ್ತೇನೆ ಎಂದು ಶಾಪ ಹಾಕುತ್ತಾ, ನಿಟಿಕೆ ಮುರಿಯುತ್ತಾ ಹೊರಟು ಹೋದರು.
ಈ ಸುದ್ದಿ ಊರಿಡೀ ಹಬ್ಬಿತು. ಇನ್ನು ಇವಳಿಗೆ ಮದುವೆ ಆದಂತೆಯೇ ಎಂದು ಊರು, ಕೇರಿ ಮಾತಾಡಿಕೊಳ್ಳತೊಡಗಿತು. ಅಪ್ಪ ಅಮ್ಮನೂ ಕುಸಿದು ಕುಳಿತರು. ನಾನು ಮಾತ್ರ ಏನೂ ನಡೆದೇ ಇಲ್ಲವೆನ್ನುವಷ್ಟು ಆರಾಮವಾಗಿದ್ದೆ. ಆಗ ನೋಡು ನನ್ನ ಬದುಕಲ್ಲಿ ಬಂದದ್ದು ಇವರು. ದೂರದಲ್ಲಿ ನನಗೆ ಅತ್ತೆಯ ಮಗ ಆಗಬೇಕು. ಆದ್ರೆ ಋಣಾನುಬಂಧ ನಮ್ಮನ್ಬು ಒಂದುಗೂಡಿಸಿತ್ತು. ಪಾಪದ ಅತ್ತೆ, ಮಗು ಮನಸ್ಸಿನ ಮಾವ ನನ್ನನ್ನು ಸೊಸೆಯಾಗಿ, ಮಗಳಾಗಿ ನೋಡಿಕೊಂಡರು.

ತೋಟದಲ್ಲಿ ಕೆಲಸ ಮಾಡುತ್ತಾ, ಹೊಲ ಉಳುತ್ತಾ, ಹಾಲು ಕರೆಯುತ್ತಾ ಆರಾಮವಾಗಿ ಇದ್ದೆವು. ಈಗ ನೀನು ಚಹಾ ಕುಡಿಯುತ್ತಿ ಅಲ್ವಾ ಹಾಗೆಯೇ ಆಗಲೂ ನನ್ನ ಚಹಾಕ್ಕೆ ತುಂಬಾ ಬೇಡಿಕೆ ಇತ್ತು. ನಮ್ಮ ಮನೆಯಿಂದ ಎರಡು ಮೈಲು ದೂರ ಇದ್ದ ಮಸೀದಿಯ ಗುರುಗಳು ನನ್ನ ಚಹಾಕ್ಕೋಸ್ಕರ ಮನೆಯವರೆಗೆ ಬರುತ್ತಿದ್ದರು ಅಂದರೆ ನೀನೇ ಲೆಕ್ಕ ಹಾಕು ನನ್ನ ಚಹಾ ಎಷ್ಟು ಜನಪ್ರಿಯ ಆಗಿದ್ದಿರಬಹುದು ಎಂದು.

ಆಮೇಲೆ ಮಕ್ಕಳು, ಮರಿ ಅಂತ ಸಂಸಾರ ದೊಡ್ಡದಾಯಿತು. ಮಕ್ಕಳಿಬ್ಬರೂ ಓದಿ, ಮದುವೆಯಾಗಿ ಪಟ್ಟಣ ಸೇರಿದರು. ಅತ್ತೆ, ಮಾವ ತೀರಿಕೊಂಡರು. ನನ್ನ ಅಪ್ಪ ಅಮ್ಮನೂ ತೀರಿಕೊಂಡರು. ಅವರೆಲ್ಲರ ಸಮಾಧಿಯನ್ನು ನಮ್ಮ ಹೊಲದಲ್ಲೇ ಕಟ್ಟಿದ್ದೇವೆ ನಾವು. ನಮಗೂ ವಯಸ್ಸಾಯ್ತು. ಹಾಲು ಕರೆಯುವುದು, ಹೊಲ ಉಳುವುದು ಇವೆಲ್ಲಾ ಕ್ರಮೇಣ ನಿಂತು ಹೋಯಿತು. ಗದ್ದೆ ಕೆಲಸಕ್ಕೆ, ಹಟ್ಟಿ ಕೆಲಸಕ್ಕೆ ಯಾರನ್ನಾದರೂ ನೇಮಿಸೋಣ ಅಂದ್ರೆ ಈ ಕಾಲದಲ್ಲಿ ಸಾಧ್ಯ ಇಲ್ಲ. ಕೊನೆಗೆ ಏನೂ ಮಾಡೋಕೆ ಆಗದೆ ಸಮಾಧಿ ಇರುವ ಜಾಗದ ಹತ್ತಿರ ನಾವು ಸತ್ತಾಗ ನಮ್ಮ ಸಮಾಧಿ ಮಾಡಲೂ ಒಂದಿಷ್ಟು ಜಾಗ ಉಳಿಸಿ ಉಳಿದೆಲ್ಲವನ್ನೂ ಮಾರಿ ನಮಗೆ ಅಂತ ಸ್ವಲ್ಪ ಉಳಿಸಿಕೊಂಡು ಉಳಿದ ದುಡ್ಡನ್ನೆಲ್ಲಾ ಇಬ್ಬರೂ ಮಕ್ಕಳಿಗೆ ಸಮನಾಗಿ ಹಂಚಿ ನಾವು ಈ ಊರಲ್ಲಿ ಬಂದು ನೆಲೆಸಿದೆವು. ಟೀ ಸ್ಟಾಲಿನ ವ್ಯಾಪಾರದಿಂದಾಗಿ ಮೂರು ಹೊತ್ತಿನ ತುತ್ತಿಗೆ ಯಾವ ತತ್ವಾರವೂ ಇಲ್ಲ. ಇಂದೋ ನಾಳೆಯೋ ಬಿದ್ದು ಹೋಗುವ ಮರ, ಹೆಚ್ಚಿನದೇನೋ ಬೇಕಾಗಿಲ್ಲ. ಮಕ್ಕಳೂ ವರ್ಷಕ್ಕೆ ಮೂರೋ ನಾಲ್ಕೋ ಬಾರಿ ಬಂದು ನೋಡಿಕೊಂಡು ಹೋಗುತ್ತಾರೆ. ಖಾಯಿಲೆ ಕಸಾಲೆ ಅಂತ ಬಂದರೆ ದುಡ್ಡು ಕಳುಹಿಸುತ್ತಾರೆ” ಎಂದು ಮಾತು ಮುಗಿಸಿದರು, ನಾನು ಕಪ್ ಮುಂದೊಡ್ಡಿ ಮತ್ತೊಂದಿಷ್ಟು ಟೀ ಸುರುವಿಕೊಂಡೆ.

ನಾನು ಊಹಿಸಿಕೊಂಡದ್ದು ಸರಿಯಾಗಿಯೇ ಇದೆ ಅನ್ನುವ ಹಮ್ಮಿಗೋ ಅಥವಾ ನಿಜಕ್ಕೂ ಅವರ ಮೇಲಿನ ಕಾಳಜಿಗೋ ಗೊತ್ತಿಲ್ಲ, “ರೆಕ್ಕೆ ಬಲಿತ ಮೇಲೆ ಯಾವ ಹಕ್ಕಿಗೂ ಗೂಡು, ತುತ್ತು ನೆನಪಾಗುದಿಲ್ಲ ಅಲ್ವಾ?” ಅಂದೆ. ಅಜ್ಜಿ ಅದೆಲ್ಲಿತ್ತೋ ಸಿಟ್ಟು, “ಯಾಕೆ ತಾಯಿ ಹೀಗೆ ಮಾತಾಡ್ತಿದ್ಯಾ? ನಮ್ಮ ಮಕ್ಕಳೇನು ನಮ್ಮನ್ನು ದೂರ ಮಾಡಿಲ್ಲ. ಬದುಕಿರುವಷ್ಟು ನಮ್ಮ ಅನ್ನ ನಾವೇ ದುಡಿದು ಉಣ್ಣುವುದರಲ್ಲಿ ತಪ್ಪೇನಿದೆ? ದೇವರು ಅನ್ನದ ಅಗುಳಿನ ಮೇಲೆ ಯಾರ ಹೆಸರು ಬರೆದಿದೆಯೋ ಅವಷ್ಟೇ ದಕ್ಕುತ್ತವೆ, ಉಳಿದದ್ದೆಲ್ಲಾ ಬೆರಳುಗಳೆಡೆಯಿಂದ ಸೋರಿ ಹೋಗಲೇಬೇಕು. ಮಕ್ಕಳ ಬದುಕಿನ ಋಣ ಪೇಟೆಯಲ್ಲಿದೆ, ಆ ಋಣವನ್ನು ಅಲ್ಲೇ ತೀರಿಸಬೇಕು, ತೀರಿಸುತ್ತಿದ್ದಾರೆ. ಎಷ್ಟು ಬಾರಿ ಪೇಟೆಗೆ ಹೋದರೂ ಆ ಜನಜಂಗುಳಿ, ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ಉಳಿಯದ ಧಾವಂತ, ಅಪರಿಚಿತತೆ ನಮಗೆ ಒಗ್ಗಲೇ ಇಲ್ಲ. ಹಾಗಾಗಿ ನಾವು ಮತ್ತೆ ಮತ್ತೆ ಇದೇ ಮಣ್ಣಿನ ಕಡೆ ಮರಳುತ್ತೇವೆ. ಹಾಗಂತ ಮಕ್ಕಳು ಕೆಲಸ, ಕಾರ್ಯ, ಹೆಂಡತಿ, ಸಂಸಾರ ಎಲ್ಲಾ ಬಿಟ್ಟು ಬಂದು ಇಲ್ಲಿ ಇರೋಕಾಗುತ್ತಾ? ಹಾಗೆ ಇರುತ್ತೇನೆ ಎಂದುಕೊಂಡು ಬಂದರೂ ಈ ಮಣ್ಣು, ಇಲ್ಲಿನ ಬದುಕು ಅವರ ಕೈ ಹಿಡಿಯುತ್ತಾ? ನೋಡೋಕೆ ಓದಿದವರ ತರ ಕಾಣುತ್ತೀಯಾ, ಹೆತ್ತವರಿಂದ ದೂರ ಇರುವ ಎಲ್ಲಾ ಮಕ್ಕಳು ಅವರನ್ನು ತಿರಸ್ಕರಿಸಿ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ ಅಂತ ಯಾಕೆ ಯೋಚಿಸ್ತೀಯಾ?” ಕೇಳಿದರು.


ಕಪ್ ನಲ್ಲಿದ್ದ ಬಿಸಿ ಚಹಾ ಕೈ ಮೇಲ ತುಳುಕಿ ಚರ್ರೆಂದಿತು. ಭೋರ್ಗರೆಯುತ್ತಿದ್ದ ಕಡಲು ಒಮ್ಮೆ ಮೌನವಾದಂತೆನಿಸಿತು, ಮರುಕ್ಷಣ ಛಿಲ್ಲೆಂದು ನಕ್ಕಂತಾಯಿತು. ನನ್ನ ಯೋಚನೆಗೆ ನಾಚಿಕೆ ಪಟ್ಟುಕೊಳ್ಳುತ್ತಾ ಕಡಲಿಗೆ ಬೆನ್ನು ತಿರುಗಿಸಿ ಮನೆಯ ದಾರಿ ಹಿಡಿದೆ, ಬೆನ್ನ ಹಿಂದೆ ಉಳಿದ ಹೆಜ್ಜೆಗಳನ್ನೂ, ಸಣ್ಣ ಯೋಚನೆಗಳನ್ನೂ ಕಡಲೀಗ ಅಳಿಸಿರಬಹುದು…