ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಬೀಡಿನಲ್ಲಿ ಬಿತ್ತನೆಯಾಗದು. ಆಗಬಾರದೇಕೆಂದು ಬಿತ್ತಿದರೆ ಅದನ್ನು ಬೆಳೆ ಎನ್ನುವುದಿಲ್ಲ.
ಸದಾಶಿವ ಸೊರಟೂರು ಕಥಾಸಂಕಲನ “ಅರ್ಧ ಬಿಸಿಲು ಅರ್ಧ ಮಳೆ”ಗೆ ಸ. ರಘುನಾಥ ಬರೆದ ಮುನ್ನುಡಿ

ಖುಷ್ಕಿ ಬೇಸಾಯವೋ, ತರಿ ಬೇಸಾಯವೋ, ಬಾಗಾಯಿತಿ ಬೇಸಾಯವೋ ನೆಲ, ನೀರಿರದೆ ಸಾಗದು, ಆಗದು. ತೇವದ ಹದವರಿತರೆ ಹಸನಾದ ಉಳುಮೆ ಹಾಗು ಬಿತ್ತನೆ. ಸಾರವಿದ್ದಂತೆ ಬೆಳೆ. ನೆಲದ ಸಾರದ ಏರಿಳಿಕೆಯ ಅರಿವೂ ರೈತನಿಗೆ ಮುಖ್ಯ. ನಾಟಿ ತಳಿಗೂ, ಸಂಕರ ತಳಿಗೂ ಸಾರವೇ ತ್ರಾಣ ಪ್ರಾಣ. ಇದರಲ್ಲಿ ಬೀಜತ್ರಾಣವೂ ಲೆಕ್ಕವೇ.

ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಬೀಡಿನಲ್ಲಿ ಬಿತ್ತನೆಯಾಗದು. ಆಗಬಾರದೇಕೆಂದು ಬಿತ್ತಿದರೆ ಅದನ್ನು ಬೆಳೆ ಎನ್ನುವುದಿಲ್ಲ. ಅದು ಕೃಷಿಕನಲ್ಲದವನ ಕೆಲಸವಲ್ಲದ ಕೆಲಸ. ಅಲ್ಲಿ ಬಳ್ಳ ಬಿತ್ತಿದರೆ ಬೆಳೆಯುದು ಸೊಲಿಗೆಯಷ್ಟೇ. ಆ ಸೊಲಿಗೆಯೂ ಜೊಳ್ಳಾದರೂ ಆದೀತು. ಯಾವುವನ್ನು ಸೃಜನಶೀಲ ಸಾಹಿತ್ಯವೆನ್ನುವೆವೋ ಅವೆಲ್ಲ ಸರಿಬೆಳೆಯಾಗುವುದು ಹೀಗೆಯೇ ಎಂದು ನನಗನ್ನಿಸುತ್ತದೆ.

(ಸದಾಶಿವ ಸೊರಟೂರು)

ಈ ಮಾತುಗಳನ್ನು ವಿವರಿಸುವ ಅವಕಾಶ ಈ ಮುನ್ನುಡಿಯಲ್ಲಿರುವುದೆಂದು ಭಾವಿಸುವೆ. ಹೊಲವೆಂದರೆ ಕಥೆ ಹುಟ್ಟುವ ಮನಸ್ಸು. ಉಳುಮೆಯೆಂದರೆ ಅದಕ್ಕೆ ಬೇಕಾದ ‘ಹದ’ವನ್ನು ಕಂಡುಕೊಳ್ಳುವುದು. ಬೀಜಗಳು ಕಥಾ ವಸ್ತು. ಬಿತ್ತುವುದು ಅನುಭವ. ಬೆಳೆಯೆಂಬುದು ಕಥನ, ವೈಖರಿ. ತೆನೆಗಟ್ಟುವುದು ವಸ್ತು ಕಥೆಯಾಗುವ ಪರಿ. ಕಳೆ ತೆಗೆಯವುದೆಂದರೆ ಪುನರ್ ಓದು ಮತ್ತು ತಿದ್ದುವುದು. ಕಥೆಯಾದದ್ದು ಸುಗ್ಗಿ. ಸುಗ್ಗಿಯಾದವನ್ನು ಕೊಟ್ಟರೆ ಅದು ಕಥೆ. ರಾಶಿ ಅಳೆಯುವುದು ವಿಮರ್ಶೆ. ಇದು ಸ್ವವಿಮರ್ಶೆಯೂ ಆಗಿದ್ದೀತು. ಸ್ವವಿಮರ್ಶೆ ಒಳ ವಿಮರ್ಶೆಯೂ ಹೌದು. ಯಾವದು ಸೃಜನವೋ ಅದು ಸ್ವ(ಒಳ)ವಿಮರ್ಶೆಯ ತೂರಿಕೆಗೆ ಸಿಕ್ಕಬೇಕು. ಆಗ ಜೊಳ್ಳಾಗಿದ್ದರೆ ತಂತಾನೇ ತೂರಿ ಹೋಗುತ್ತದೆ. ತೂರಿ ಹೋಯಿತೋ ಹೋಗಲಿ. ಮುಂದಿನ ಬೆಳೆಗೆ ಅಣಿ ಮಾಡುವುದು ಇದ್ದೇ ಇರುತ್ತದೆ. ಇದು ರೈತನಾದವನಲ್ಲಿರುವ ಮನದರಿವು.

ಮುಂದಿನ ಬೇಸಾಯವೆಂದರೆ ಮಳೆಗೆ ಕಾಯುವುದು. ಅದರ ಯೋಗವರಿತು ಸಲಕರಣೆಗಳನ್ನು ಕುಲುಮೆಯಲ್ಲಿ, ಬಡಗಿಯ ಬಳಿ ಯೋಗ್ಯಗೊಳಿಸುವುದು. ನದಿ ನಾಲೆ ನೀರಿನ ಬೇಸಾಯ ಬೇರೆ ರೀತಿಯದು. ಕತೆಗಾರನದಂತೂ ಮಳೆನೀರಿನ ಬೇಸಾಯವೆಂದೇ ನಂಬುವೆ. ಇದು ರೂಪುಗೊಳ್ಳುವುದು ಪರಂಪರೆಯ ಅರಿವಿನಿಂದ. ಬೀಜವನ್ನು ಸಂಕರಿಸಿ ಹುಟ್ಟಿಸುವ ಬೀಜವೂ ಮೂಲ ಬೀಜದಿಂದಲೇ. ನೆಲವನ್ನಂತೂ ಲ್ಯಾಬುಗಳಲ್ಲಿ ಸೃಷ್ಟಿಸಲಾಗದಲ್ಲ! ನೀರೂ ಅಷ್ಟೇ. ದದ್ರೂಪಿ ಸೃಷ್ಟಿಗೂ ಮೂಲವಿದ್ದದ್ದೇ. ಪ್ರಣಾಳ ಶಿಶು ಜನನಕ್ಕೂ ವೀರ್ಯ, ಕಾಪಿನ ಗರ್ಭಬೇಕು. ಅಥವಾ ಗರ್ಭಕೋಶದ ಜೀವಾವರಣ ನಿರ್ಮಿಸಬೇಕು. ಇದು ಗೊತ್ತಿದ್ದೂ ಹುಟ್ಟಿಸುವ ವಾದಕ್ಕೆ ಪ್ರತಿವಾದ ಹೂಡುವುದು ಸೃಜನ ಕಾಲವನ್ನು ವ್ಯರ್ಥ ಮಾಡುವುದಾಗುತ್ತದೆ ಮತ್ತು ಸೃಜನ ಬಸಿರನ್ನು ಕಿತ್ತು ಹಾಕಲು ಬಳಸಿದಂತಾಗುತ್ತದೆ.

ಈ ಆಲೋಚನಾ ತರಂಗಗಳೇಳಲು ಯುವ ಕತೆಗಾರ ಗೆಳೆಯ ಸದಾಶಿವ ಸೊರಟೂರು ತಮ್ಮ ಕಥೆಗಳ ಪ್ರತಿಯನ್ನು ಓದಲು ಕೊಟ್ಟದ್ದು ಕಾರಣವಾಗಿದೆ. ಇದಕ್ಕಾಗಿ ನಾನವರಿಗೆ ಋಣಿ.

ಸದಾಶಿವ ಸೊರಟೂರು ತಮ್ಮಲ್ಲಿ ಕತೆಗಾರ, ಕವಿಯನ್ನು ಕಂಡುಕೊಳ್ಳುತ್ತಿರುವ ಲೇಖಕ. ತಾನು ಮೊದಲಿಗೆ ಯಾರನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲಿ ಎಂಬ ಆಯ್ಕೆಯಲ್ಲಿದ್ದಂತಿದೆ ಎಂಬುದು ಅವರ ಕವಿತೆ, ಕಥೆಗಳನ್ನು ಓದಿದಾಗ ಅನ್ನಿಸಿದ್ದುಂಟು. ಇಬ್ಬರನ್ನೂ ಅವರು ಒಟ್ಟಿಗೆ ಬಲವಾಗಿ ಅಪ್ಪಿಕೊಳ್ಳುವ ಬಾಹುಬಂಧ ಅವರದಾದರೆ ಸಂತೋಷವೇ.

ಹೊಲವೆಂದರೆ ಕಥೆ ಹುಟ್ಟುವ ಮನಸ್ಸು. ಉಳುಮೆಯೆಂದರೆ ಅದಕ್ಕೆ ಬೇಕಾದ ‘ಹದ’ವನ್ನು ಕಂಡುಕೊಳ್ಳುವುದು. ಬೀಜಗಳು ಕಥಾ ವಸ್ತು. ಬಿತ್ತುವುದು ಅನುಭವ. ಬೆಳೆಯೆಂಬುದು ಕಥನ, ವೈಖರಿ. ತೆನೆಗಟ್ಟುವುದು ವಸ್ತು ಕಥೆಯಾಗುವ ಪರಿ. ಕಳೆ ತೆಗೆಯವುದೆಂದರೆ ಪುನರ್ ಓದು ಮತ್ತು ತಿದ್ದುವುದು. ಕಥೆಯಾದದ್ದು ಸುಗ್ಗಿ. ಸುಗ್ಗಿಯಾದವನ್ನು ಕೊಟ್ಟರೆ ಅದು ಕಥೆ. ರಾಶಿ ಅಳೆಯುವುದು ವಿಮರ್ಶೆ.

ಅವರ ರಚನೆಗಳ ಓದುವಿಕೆಯನ್ನು ಮುಂದುವರೆಸಿದಾಗ ಇಬ್ಬರ ಅಪ್ಪುವಿಕೆಗಾಗಿ ಅವರು ತಹತಹಿಸುತ್ತಿದ್ದಾರೆ ಅನ್ನಿಸುತ್ತದೆ. ಇದಕ್ಕೆ ಅವರ ಕೆಲವು ಕವಿತೆಗಳು, ಕಥೆಗಳು ಸಾಕ್ಷಿಯ ದೀಪ ಹಿಡಿಯುತ್ತವೆ. ಯಾವುದು ಅವರ ಬಿಗಿಯಪ್ಪುಗೆಯಲ್ಲಿದೆ, ಯಾವುದು ಸಡಿಲ ಅಪ್ಪುಗೆಯಲ್ಲಿದೆ, ಯಾವುದು ಅಪ್ಪುಗೆಗೆ ಸಿಕ್ಕಿಲ್ಲ ಅನ್ನುವುದನ್ನು ಸಾಕ್ಷಿದೀಪದ ಬೆಳಕು ಅವರಿಗೂ ನಮಗೂ ಕಾಣಿಸಿಕೊಡುತ್ತದೆ. ಈ ಕಾಣಿಸುವಿಕೆಯಲ್ಲಿ ಇಲ್ಲಿನ ಕಥೆಗಳಿವೆ.

‘ಅರ್ಧ ಬಿಸಿಲು ಅರ್ಧ ಮಳೆ’ ಸಂಕಲನದಲ್ಲಿರುವ, ಸಂಕಲನದ ಶೀರ್ಷಿಕೆಯ ಕಥೆಯೊಂದಿಗೆ ‘ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು’ ಕಥೆಗಳು ಹೊಲದ ಗೊಬ್ಬರದ ಗುಡ್ಡೆಗಳಡಿಯ ‘ಮಂದಹಸುರು’ ಪೈರುಗಳಂತಿವೆ. ಇವು ಸಂಕಲನದ ಗಟ್ಟಿ ಕಥೆಗಳಷ್ಟೇ ಆಗಿರದೆ ಸೊರಟೂರರು ಕಥನಗಳ ದೋಣಿಗೆ ಸರಿದಿಕ್ಕು ಹಿಡಿಯುವ ಹುಟ್ಟು ಹಾಕಿದರೆ ಚುಳುಗುಟ್ಟುವ ಮೀನುಗಳಿರುವ ನರ‍್ಬಯಲಿಗೆ ನೇರ ಹೋಗುವ ನುರಿತ ಬೆಸ್ತನಾಗಬಹುದು.

ಕಥೆ ನೆಲದ ಬೇಸಾಯವೂ ಹೌದು, ಮೀನು ಹಿಡಿಯುವ ಕುಶಲತೆಯೂ ಅಹುದು. ಬೇಸಾಯ ಹರಗಿ ಬಿತ್ತಿ, ಫಸಲು ಕಾಣುವುದು. ಮೀನುಗಾರಿಕೆ ದೋಣಿಯನ್ನು ಸಾಗಿಸಿ, ಬಲೆ ಬೀಸಿ, ಸೆಳೆಸಳೆದು ದೋಣಿಗೆ ತರುವುದು. ಎರಡೂ ಶ್ರಮದ ಕ್ರಿಯೆಯೇ. ಈ ಶ್ರಮದಿಂದಲೆ ‘ಫಸಲು’ ಕೈ ಹತ್ತುವುದು. ಹೀಗೆ ಕೈಗೆ ಹತ್ತಿದ ಕಥೆಗಳೇ ಹೇಳುತ್ತವೆ, ಯಾವ ಕಥೆ ಕೈವರೆಗೆ ಬರದೆ ಜಾರಿದೆ ಎಂಬುದನ್ನು. ಇದಕ್ಕೆ ಉದಾಹರಣೆಯಾಗಿ ‘ಬಯಲು, ಕನಸಲ್ಲಿ ಸುರಿದ ಕೆಂಪು ಮಳೆ’ ಕಥೆಗಳು ಸಿಗುತ್ತವೆ. ಇಂತಹ ಕಥೆಗಳಲ್ಲಿ ಅಲ್ಲಲ್ಲಿ ಮೂಡುವ ನೆರಳುಗಳು ಕಥನಕ್ಕೆ ಅಡ್ಡವಾಗಿ ನಿಂತಂತೆ ಕಂಡರು ನೆರಳಲ್ಲಿ ಅಳಿಸಿ ಕೊನೆಗೆ ಬೆಳಕೊಂದು ಮೂಡುತ್ತದೆ. ಆ ತಾವುಗಳಲ್ಲಿ ನೆರಳುಗಳನ್ನು ಸರಿಸುವ ಬೆಳಕು ಹರಿಯಬೇಕು. ಆಗ ಆ ಭಾಗ ಕಥೆಯಲ್ಲಿ ಕಾಣಿಸಿಕೊಳ್ಳುತ್ತದೆ.

ಸದಾಶಿವ ಸೊರಟೂರು ಯುವಕ. ಕಥಿಸುವ ಹುರುಪಿರುವ ಯುವಕ. ಆ ಹುರುಪಿನಲ್ಲಿ ಅವಸರವೂ ಆತುರವೂ ಕಾಣಿಸುತ್ತದೆ. ಇದು ಈ ವಯಸ್ಸಿಗೆ ಸಹಜವೆನ್ನಿಸಿದರೂ ಕತೆಗಾರನಾಗಿ ಕಥೆಯನ್ನು ಕಥನ ಮಗ್ಗಕ್ಕಿಡುತ್ತಲೇ ಬಟ್ಟೆಯಾಯಿತೆಂದುಕೊಳ್ಳಲಾಗದು. ನೂಲು ತುಂಡಾಗಬಹುದು, ಸಿಕ್ಕಾಗಬಹುದು. ಲಾಳಿ ಆಡದೆ ನಿಂತರೂ ನಿಂತೀತು. ಇಂತಹ ತಡೆಗಳನ್ನು ನಿವಾರಿಸಿಕೊಂಡು ನೂತ ಮೇಲೆಯೇ ಬಟ್ಟೆ, ಅರ್ಥಾತ್ ಕಥೆ. ಸೊರಟೂರರೂ ತಾವೇ ಬಿಡಿಸಿಕೊಳ್ಳಬೇಕಾದ ಸಿಕ್ಕುಗಳಿವೆ. ಅವರು ಬಿಡಿಸಿಕೊಳ್ಳವ ಸೂಚನೆಗಳೂ ಇವೆ.

(ಸ. ರಘುನಾಥ)

ಆತುರ, ಅವಸರ ಎಂಬ ಮಾತು ಕಾಣಿಸಿಕೊಳ್ಳುವುದು ಕಥಿಸುವ ಸಮಯಕ್ಕೆ ಸಂಬಂಧಿಸಿದ್ದು. ಅದು ‘ಕಥನಧ್ಯಾನಭಂಗ.’ ಅದು ಯಾವ ಕತೆಗಾರನಿಗೂ ಆಗುವಂತಹುದು. ಗಾಯಕನಿಗೆ ಶ್ರುತಿಜ್ಞಾನವಿದ್ದೂ ಒಮ್ಮೊಮ್ಮೆ ತಪ್ಪುವಂತೆಯೇ ಇದೂ ಸಹ. ಅವನು ಈ ಲೋಪ ಅಥವಾ ದೋಷವನ್ನು ತನ್ನ ಮರು ಗಾಯನದಲ್ಲಿ ಸರಿಪಡಿಸಿಕೊಳ್ಳುವಂತೆ ಕತೆಗಾರ ಸರಿಪಡಿಸಿಕೊಂಡರೆ, ಅಂದರೆ ಕಥೆಯನ್ನು ತಿದ್ದಿದರೆ ಸಮಸ್ಯೆ ತೀರುತ್ತದೆ. ಸಂಗೀತ ಸಂಗೀತಗಾರನ ಮನೋಭಾವದ್ದು ಹೇಗೋ ಹಾಗೆಯೇ ಕಥೆಯೂ ಕಥೆಗಾರನ ಮನೋಭಾವದ್ದೇ. ಸೊರಟೂರು ಅವರ ಕಥೆಗಳು ಕರುಣೆ, ಪ್ರೀತಿ, ಆರ್ದ್ರ ಮನೋಭಾವದವು. ಅವು ಧ್ವನಿಪೂರ್ಣವಾಗಲು ಮುಂದಿನ ಬರವಣಿಗೆಗಾಗಿ ಅವರಲ್ಲಿರುವ ಕಥೆಗಳು ಒದಗಿ ಬರುವುದುಂಟು. ಇದಕ್ಕಾಗಿ ಅವರು ಅವರಲ್ಲಿನ ಕವಿ, ಕತೆಗಾರನ ಸಹಾಯದ ಮೊರೆ ಹೋಗಲೇಬೇಕಿದೆ.

ಸೊರಟೂರರಲ್ಲಿರುವ ಕತೆಗಾರ ಮುಖ್ಯವಾಗಿ ಭಾವಜೀವಿಯೆಂದು ಅವರ ಕಥೆಗಳು ಸೂಚಿಸುತ್ತವೆ. ‘ಬಯಲು, ಹೆಸರು ಬೇಡ ಊರು ಬೇಡ, ವಿದಾಯ’ದಂತಹ ಕಥೆಗಳಿಗೆ ವೈಚಾರಿಕತೆಯ ಹೊದಿಕೆ ಹಾಕಲು ಹೋಗಿ ಕಥೆಯಾಗಿಸುವಿಕೆಯನ್ನು ಜಾರುಬಂಡೆ ಏರಿಸಿದ್ದಾರೆ ಅನ್ನಿಸಿತು. ಕಥೆಯಲ್ಲಿ ವೈಚಾರಿಕತೆ ನಿಷಿದ್ಧವೇನಲ್ಲ. ಆದರೆ ಅದು ವಸ್ತುವಿನಲ್ಲಿಯೇ ಅರಳಬೇಕಷ್ಟೆ. ಹೊದಿಕೆಯಾಗಬಾರದು. ಇದರ ನಿವಾರಣೆಯೂ ಸೊರಟೂರರಲ್ಲಿ ಇಲ್ಲದಿಲ್ಲ. ಗುರುತಿಸಿಕೊಳ್ಳಬೇಕಿದೆ. ಕಥೆಗಳಿವೆ. ಆ ಕಥೆಗಳನ್ನು ಕಥಿಸುವಾಗ ಎಲ್ಲಿ ಧ್ಯಾನಭಂಗಕ್ಕೆ ಒಳಗಾಗುವರೋ ಅಲ್ಲಿ ವೈಚಾರಿಕತೆಯ ಮೊರೆ ಹೋಗಿಬಿಡುತ್ತಾರೆ.

ಕನ್ನಡ ಕತೆಗಾರರೂ ಸಾಮಾಜಿಕರಾಗಿಯೇ ಕಥೆಗಳನ್ನು ಕಟ್ಟಿದವರು. ರಮ್ಯ ಕಥೆಗಾರರೂ ಸಾಮಾಜಿಕತನದಿಂದೇನೂ ದೂರಸರಿದವರಲ್ಲ. ಸಾಹಿತ್ಯ ಚಳವಳಿಗಳು ಇದನ್ನೇ ಒತ್ತಿ ಹೇಳಿವೆ. ಇದು ಸಾಹಿತ್ಯದ ಜೀವಧ್ವನಿ. ಇದನ್ನು ಕನ್ನಡ ಸಾಹಿತ್ಯ ಆದಿಕವಿ ಪಂಪನಿಂದಲೇ ಮೈಗೂಡಿಸಿಕೊಂಡಿದೆ. ಆದುನಿಕ ಕನ್ನಡ ಸಾಹಿತ್ಯ ಇದಕ್ಕೆ ಗಟ್ಟಿ ಧ್ವನಿ ಕೊಟ್ಟಿತು. ಈ ಧ್ವನಿ ಸೊರಟೂರರ ಕಥೆಗಳಲ್ಲಿಯೂ ಇದೆ. ಇದನ್ನು ತನ್ನ ಧ್ವನಿಶೈಲಿಯಾಗಿಸಿಕೊಳ್ಳಲು ಹಿಂದಿನ ಧ್ವನಿಗಳನ್ನು ಇನ್ನೂ ಸ್ಪಷ್ಟವಾಗಿ ಎದೆಯಿಂದ ಕೇಳಿಸಿಕೊಂಡರೆ, ಅವುಗಳ ನಡುವೆ ತನ್ನ ಧ್ವನಿಸ್ಥಾನವನ್ನು ಗುರುತಿಸಿಕೊಳ್ಳಲು ಅನುಕೂಲವಾಗುತ್ತದೆ. ಈಗಿನ ಕನ್ನಡ ಕಥಾ ಸಾಹಿತ್ಯದ ಕೃಷಿ ಬಯಲಿನಲ್ಲಿ ಬಹಳಷ್ಟು ಯುವಕತೆಗಾರರ ಬೇಸಾಯ ಸಾಗಿದೆ. ನೆಲ ಹಿಡಿದ ದುಡಿಮೆದಾರರಿಂದ ಒಳ್ಳೆಯ ಫಸಲು ಬರುತ್ತಿದೆ. ಸೊರಟೂರರೂ ಅಂತಹ ಬೆಳೆಗಾರನಾಗಲೆಂಬ ಆಸೆ ನನ್ನಲ್ಲಿಯೂ ಇದೆ.

(ಕೃತಿ: ಅರ್ಧ ಬಿಸಿಲು ಅರ್ಧ ಮಳೆ (ಕಥಾ ಸಂಕಲನ), ಲೇಖಕರು: ಸದಾಶಿವ ಸೊರಟೂರು, ಪ್ರಕಾಶಕರು: ವೀರಲೋಕ ಬುಕ್ಸ್‌, ಬೆಲೆ: 120/-)