ಮೇಲ್ನೋಟಕ್ಕೆ ನಳ-ದಮಯಂತಿಯ ಪ್ರೇಮದ, ಪ್ರೇಮ ಪರೀಕ್ಷೆಯ ಕತೆಯಾಗಿ, ವಿಧಿಯ ಅಟ್ಟಹಾಸದ ಕತೆಯಾಗಿ ಕಾಣುವ ಕಾವ್ಯವನ್ನು ನಿಧಾನವಾಗಿ ಪರಿಶೀಲಿಸಿದರೆ ಅದಕ್ಕಿರುವ ಹಲವು ಆಯಾಮಗಳು ಗೋಚರವಾಗುತ್ತವೆ. ಕನಕದಾಸರ ಕಾವ್ಯವನ್ನು ಕೇವಲ ಪ್ರೇಮಕತೆಯಾಗಿ ನೋಡಿದರೆ ಅದು ರಂಜಕವಾಗಿ ಕಂಡು, ಮುಖ್ಯವಾಗಿ ದಮಯಂತಿಯಂತಹ ಪಾತ್ರಕ್ಕಿರುವ ಮಹತ್ವ ಕಡಿಮೆಯಾಗುವ ಸಾಧ್ಯತೆಯಿದೆ. ಬಹುಶಃ ಇದೇ ಕಾರಣಕ್ಕೋ ಏನೋ ಕನಕದಾಸರು ಪ್ರೇಮಕಾವ್ಯಗಳಲ್ಲಿ ಸಾಮಾನ್ಯವಾಗಿ ಕಾಣುವ ಶೃಂಗಾರ ವರ್ಣನೆಗಳನ್ನು ಇಲ್ಲಿ ಬಳಸಿಕೊಂಡಿಲ್ಲ.
ಎಸ್.‌ ಸಿರಾಜ್‌ ಅಹಮದ್‌ ಬರೆಯುವ ಅಂಕಣ

 

ಕನಕದಾಸರ ನಳ ಚರಿತೆಯಲ್ಲಿ ಬರುವ ನಳ-ದಮಯಂತಿಯರ ಪಾತ್ರಗಳನ್ನು ಅರ್ಥಮಾಡಿಕೊಳ್ಳುವಾಗ ಈಗಾಗಲೇ ಬಹಳ ಸಾರಿ ಚರ್ಚೆಗೆ ಒಳಗಾಗಿರುವ ಸಂಗತಿಯೊಂದು ನೆನಪಿಗೆ ಬರುತ್ತದೆ. ಭಾರತೀಯ ಸಂಸ್ಕೃತಿ ಚಿತ್ರಣದಲ್ಲಿ, ಪುರಾಣ-ಸಾಹಿತ್ಯ ಪಠ್ಯಗಳ ಚರ್ಚೆಯಲ್ಲಿ ಕೆಲವು ಪಾತ್ರಗಳು ಮಾತ್ರ ಮತ್ತೆಮತ್ತೆ ಮುನ್ನೆಲೆಗೆ ಬರುವುದನ್ನು ಕಾಣಬಹುದು. ಇದಕ್ಕೆ ಹಿನ್ನೆಲೆಯಾಗಿ ಹಲವು ಕಾರಣಗಳು, ಹಿತಾಸಕ್ತಿಗಳು ಕೆಲಸಮಾಡುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಭಾರತೀಯ ಸಂಸ್ಕೃತಿಯೆಂಬುದು ಏಕರೂಪಿಯಾಗಿರದಿದ್ದರೂ ಅಲ್ಲಿ ಸೀತೆ, ಸಾವಿತ್ರಿ, ಶಕುಂತಲೆ, ಊರ್ಮಿಳೆಯರ ವ್ಯಕ್ತಿತ್ವವನ್ನು ಬಹಳ ಆದರ್ಶಪ್ರಾಯವಾಗಿ ಕಾಣುವ ಪ್ರಸ್ತಾಪಗಳು ಬರುವುದನ್ನು ಮತ್ತೆ ಮತ್ತೆ ಕಾಣಬಹುದು.

ಇಷ್ಟೇ ಅಲ್ಲದೆ ಈ ಪಾತ್ರಗಳು ಪ್ರತಿನಿಧಿಸುವ ಮೌಲ್ಯಗಳು ಬಹಳ ದೊಡ್ಡ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವುದನ್ನೂ ಸಹ ನಾವು ಗಮನಿಸಬೇಕಾಗಿದೆ. ಪರಮಪತಿವ್ರತೆಯೂ, ಪರಮಸಹಿಷ್ಣುವೂ, ಪರಮಸಂಯಮಿಯೂ, ಪರಮಸುಂದರಿಯೂ ಆಗಿರುವ ಇಂಥ ಪಾತ್ರಗಳ ಸಾಲಿನಲ್ಲಿ ದಮಯಂತಿಯ ಹೆಸರು ಸಹ ಅಷ್ಟೇನೂ ದೊಡ್ಡಪ್ರಮಾಣದಲ್ಲಿ ಗಣನೆಗೆ ಬರದಿರುವುದು ವಿಚಿತ್ರವಾಗಿ ಕಾಣಿಸುತ್ತದೆ.

ಮಹಾಭಾರತದಲ್ಲಿ ಉಲ್ಲೇಖಗೊಂಡಿರುವ ಅತ್ಯಂತ ಜನಪ್ರಿಯ ಕಥಾಭಾಗವೊಂದರ ನಾಯಕಿಯಾದ ದಮಯಂತಿಯನ್ನು ಒಂದೊಮ್ಮೆ ಉಲ್ಲೇಖಿಸಿದರೂ ಆಕೆಯ ಪಾತ್ರ ವರ್ಣನೆ ಅವಳ ಅಪರಿಮಿತ ಸೌಂದರ್ಯಕ್ಕೆ, ಆಕೆ ಮತ್ತು ನಳನ ನಡುವಿನ ರಮ್ಯ ಶೃಂಗಾರ ಪ್ರಣಯ ವರ್ಣನೆಗೆ ಮೀಸಲಾಗಿರುವುದನ್ನೂ ಸಹ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಹಾಗೆ ನೋಡಿದರೆ, ದಮಯಂತಿ ಎಂಬ ಹೆಸರಿನಲ್ಲೇ ‘ದಮ’ ಎಂದರೆ ಪಳಗಿಸುವ, ಮೆಟ್ಟಿನಿಲ್ಲುವ ಎಂಬ ಅರ್ಥಗಳು ಅಡಗಿವೆ. ದಮಯಂತಿಯ ಪಾತ್ರದ ವಿಶೇಷತೆಯೆಂದರೆ ಆಕೆ ಸೀತೆ-ಸಾವಿತ್ರಿ-ಶಕುಂತಲೆ-ಊರ್ಮಿಳೆಯರಂತೆ ಬದುಕಿನಲ್ಲಿ ಹಲವಾರು ಕಷ್ಟಕೋಟಲೆಗಳನ್ನು ಎದುರಿಸಿದರೂ ಅವುಗಳನ್ನು ಮೆಟ್ಟಿನಿಲ್ಲುವ, ಅವುಗಳ ನಡುವೆಯೇ ಕಾರ್ಯಸಿದ್ಧಿ ಪಡೆಯುವ ವಿಶೇಷ ವ್ಯಕ್ತಿತ್ವವನ್ನು ತೋರುತ್ತಾಳೆ. ಈಕೆಯನ್ನು ಹೊರತುಪಡಿಸಿ ಸೀತೆ-ಸಾವಿತ್ರಿಯರ ಅಸ್ತಿತ್ವ-ಮಹತ್ವವಿರುವುದೇ ಹಲವು ರೀತಿಯಲ್ಲಿ ಅವರು ತಮ್ಮ ಜೀವನನದಲ್ಲಿ ಬಲಿಪಶುಗಳಾಗುವುದರಲ್ಲಿ. ಹೆಣ್ಣನ್ನು ಬಲಿಪಶುವಾಗಿ ನೋಡುವುದನ್ನೇ ಅಭ್ಯಾಸ ಮಾಡಿಕೊಂಡಿರುವ ನಮ್ಮ ಸಂಸ್ಕೃತಿ ಕಥನಗಳು, ಪುರಾಣದ ನಿರೂಪಣೆಗಳಲ್ಲಿ ಈ ರೀತಿಯ ವಿಕ್ಟಿಮ್‍ ಗಳ ಚರ್ಚೆಯೇ ಮುಖ್ಯವಾಗಿರುತ್ತದೇ ಹೊರತು, ದಮಯಂತಿಯಂತಹ ವಿಜಯಿಗಳಲ್ಲ. ಸೀತೆ ಸಾವಿತ್ರಿಯರ ಕಥನಗಳ ಹೋಲಿಕೆಯಲ್ಲಿ, ದಮಯಂತಿಯ ಪಾತ್ರ ಮಂಕಾಗಿ ಕಾಣುವುದು ಇದೇ ಕಾರಣಕ್ಕಾಗಿ ಇರಬಹುದು.

ಬಹಳ ಗಹನವಾದ ಧಾರ್ಮಿಕ ತತ್ವಗಳನ್ನು ಹಾಗೂ ಉಪನಿಷತ್ ಸೂತ್ರಗಳ ಸಾರವನ್ನು ಹಾಡು ಸಂಗೀತಗಳ ಮೂಲಕ ಜನರಿಗೆ ತಲುಪಿಸಿ ಅತ್ಯಂತ ಜನಪ್ರಿಯವೆನಿಸಿರುವ ದಾಸಸಾಹಿತ್ಯದಲ್ಲಿ ಸಮಾಜದ ಕೆಳಜಾತಿಯಿಂದ ಬಂದು ಧಾರ್ಮಿಕ ಡಂಭಾಚಾರ, ಮಡಿಮೈಲಿಗೆಗಳನ್ನು ವಿಡಂಬಿಸಿದ ಕನಕದಾಸರು ನಳಚರಿತ್ರೆಯಂತಹ ಕಾವ್ಯ ಬರೆಯಲು ಹೊರಟಿರುವುದೇ ವಿಶೇಷವಾಗಿ ಕಾಣಿಸುತ್ತದೆ.

ಕನಕದಾಸರು ಬರೆದಿರುವ ನಳಚರಿತ್ರೆಯಲ್ಲಾಗಲೀ, ಅಥವಾ ಅದಕ್ಕೆ ಮೂಲಪ್ರೇರಣೆ ನೀಡಿರುವ ಮಹಾಭಾರತದ ನಳೋಪಖ್ಯಾನದಲ್ಲಾಗಲೀ ನಳನ ಹೆಸರು ಮಂಚೂಣಿಯಲ್ಲಿದ್ದರೂ ಅಲ್ಲಿ ದಮಯಂತಿಯ ಜೀವನಹೋರಾಟದ ಕಥನವೇ ಮುಖ್ಯವಾಗಿದೆ. ನಳ-ದಮಯಂತಿಯರ ನಡುವಿನ ಪ್ರೇಮದ ರಮ್ಯವರ್ಣನೆಗಳಿಂದಾಗಿ ಅದು ತನ್ನ ಜನಪ್ರಿಯತೆಯಲ್ಲಿ ಕುಮಾರವ್ಯಾಸಭಾರತವನ್ನು ಮೀರಿಸುವಷ್ಟು ಪ್ರಭಾವಶಾಲಿಯಾಗಿದೆ.

ಮಹಾಭಾರತದಲ್ಲಿಯೂ ಸೀತೆ, ಸಾವಿತ್ರಿ, ಶಕುಂತಳೋಪಾಖ್ಯಾನಗಳನ್ನು ಬಿಟ್ಟರೆ ಜನಪ್ರಿಯವಾಗಿರುವುದು ನಳೋಪಖ್ಯಾನವೇ ಆಗಿದೆ. ಮಹಾಭಾರತ ರಚನೆಯಾಗುವ ಹೊತ್ತಿಗೇ ಅದು ಜಾನಪದ ಕತೆಯಾಗಿ ಇತಿಹಾಸವಾಗಿ, ಪುರಾಣವಾಗಿ ಎಲ್ಲರ ಬಾಯಲ್ಲಿ ಪ್ರಸಿದ್ಧವಾಗಿತ್ತು. ಹಾಗಾಗಿ ಅದು ಒಂದು ರೀತಿಯಲ್ಲಿ ಮಹಾಭಾರತಕ್ಕಿಂತ ಪ್ರಾಚೀನವಾದುದು. ಕನಕದಾಸರು ತಮ್ಮ ಕಾವ್ಯವನ್ನು ಬರೆಯುವಾಗ ವ್ಯಾಸ ಮಹಾಭಾರತದ ನಳೋಪಖ್ಯಾನವನ್ನೇ ಆಧರಿಸಿದ್ದರೂ ಅದರಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಅದನ್ನು ಮುಂದೆ ಚರ್ಚಿಸಬಹುದು.

ಹಾಗೆ ನೋಡಿದರೆ, ಮೂಲ ಮಹಾಭಾರತದಲ್ಲಿರುವ ಪಾಂಡವ-ಕೌರವರಂತೆ ಇಲ್ಲಿಯೂ ನಳ ಮತ್ತು ಅವನ ತಮ್ಮ ಪುಷ್ಕರನೆಂಬ ದಾಯಾದಿಗಳಿದ್ದಾರೆ. ಮಹಾಭಾರತದ ಜೂಜಿನ ಕಾಳಗದಂತೆ ಇಲ್ಲಿಯೂ ಪುಷ್ಕರ ನಳನನ್ನು ಸೋಲಿಸಿ ಕಾಡಿಗೆ ಕಳಿಸುತ್ತಾನೆ. ಹೀಗೆ ಹಲವಾರು ಸಾಮ್ಯಗಳಿದ್ದರೂ, ಮುಖ್ಯವಾಗಿ ಕನಕದಾಸರ ನಳ ಚರಿತ್ರೆ ನಳ-ದಮಯಂತಿಯರ ಅಪಾರ ಪ್ರೇಮ, ನಿಷ್ಠೆ, ಕಷ್ಟಸಹಿಷ್ಣುತೆಗಳನ್ನು ಎತ್ತಿಹಿಡಿಯುವ ಕತೆಯಾಗಿದೆ. ವಿಶೇಷವೆಂದರೆ ಮೂಲ ಮಹಾಭಾರತಲ್ಲಿ ನಳೋಪಖ್ಯಾನವೆಂದೂ, ಕನಕದಾಸರ ಕೈಯಲ್ಲಿ ನಳಚರಿತ್ರೆ ಎಂಬ ಹೆಸರಿನಲ್ಲಿ ಎಂದು ಜನಜನಿತವಾಗಿರುವ ಈ ಕತೆಗಳಲ್ಲಿ ನಳನ ಹೆಸರೇ ಮುಂಚೂಣಿಯಲ್ಲಿದ್ದರೂ ಎರಡೂ ಕಡೆ ಮುಖ್ಯವಾಗಿರುವುದು ದಮಯಂತಿಯ ಕತೆಯೇ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಎರಡೂ ಕತೆಗಳಲ್ಲಿ ಬಹಳ ಕಠೋರವಾಗಿ ನಡೆಯುವುದು ದಮಯಂತಿಯ ಪ್ರೇಮದ ಅಗ್ನಿ ಪರೀಕ್ಷೆಯೇ. ಪ್ರೇಮದ ವಿಷಯದಲ್ಲಿ, ಮನುಷ್ಯ ಸಂಬಂಧಗಳ ವಿಷಯದಲ್ಲಿ ಯಾಕೆ ಹೆಣ್ಣು ಮಾತ್ರವೇ ಯಾವಾಗಲೂ ಅತ್ಯಂತ ಕಠೋರ ಪರೀಕ್ಷೆಗೆ ಒಳಗಾಗುತ್ತಾಳೆ ಎಂಬ ಪ್ರಶ್ನೆ ಮಾತ್ರ ದೊಡ್ಡ ಆತಂಕವನ್ನು ಹುಟ್ಟಿಸುವಂತಿದೆ.

ನಳಚರಿತ್ರೆ ಮೇಲುನೋಟಕ್ಕೆ ನಳದಮಯಂತಿಯರ ರಮ್ಯ ಪ್ರೇಮದ ಉಜ್ವಲ ಕತೆಯನ್ನು ಹೇಳುವಂತಿದ್ದರೂ ಕನಕದಾಸರು ಅದನ್ನು ಶೃಂಗಾರ ಕಾವ್ಯವನ್ನಾಗಿಯೋ, ವಿಧಿಯ ಅಟ್ಟಹಾಸವನ್ನು ಎತ್ತಿ ತೋರುವ ಕತೆಯನ್ನಾಗಿಯೋ ನಿರೂಪಿಸಿಲ್ಲ. ಕತೆಗಿರುವ ಇತರ ಆಯಾಮಗಳನ್ನು ಚರ್ಚಿಸುವ ಮೊದಲು ಕತೆಯ ಒಟ್ಟು ಸ್ವರೂಪವನ್ನು ಹೀಗೆ ಸಂಗ್ರಹಿಸಬಹುದು. ಜೂಜಿನಲ್ಲಿ ಸಕಲಸಾಮ್ರಾಜ್ಯವನ್ನು ಸೋತು ಕಂಗಾಲಾಗಿರುವ ಧರ್ಮರಾಯನ್ನು ಸಮಾಧಾನಪಡಿಸಲು ರೋಮಶ ಮಹಾಮುನಿಗಳು ನಳಮಹಾರಾಜನ ಕತೆಯನ್ನು ವಿವರಿಸುವ ಮೂಲಕ ನಳಚರಿತ್ರೆ ಆರಂಭವಾಗುತ್ತದೆ.

(ಕಾಳಿದಾಸರು)

ನಿಷಧ ದೇಶದ ವೀರಸೇನನ ಮಗ ನಳ ಹಾಗೂ ವಿದರ್ಭದೇಶದ ದಮಯಂತಿ ಇಬ್ಬರೂ ಅಪರಿಮಿತ ಸೌಂದರ್ಯಕ್ಕೆ, ಸಕಲ ಸದ್ಗುಣಗಳಿಗೆ ಹೆಸರಾದವರು. ನಳನ ಅಪ್ರತಿಮ ರೂಪವನ್ನು ಕುರಿತು ಆಸ್ಥಾನದ ಕವಿಜನರು ಹಾಡುವಾಗ ದಮಯಂತಿ ಅವನ ರೂಪ, ಗುಣ, ಶೌರ್ಯಕ್ಕೆ ಮನಸೋಲುತ್ತಾಳೆ. ಈ ವಿಷಯವನ್ನು ಅರಿತ ಅವಳ ತಂದೆ ಸ್ವಯಂವರವನ್ನು ಏರ್ಪಡಿಸಿದಾಗ ಈ ವಿಷಯ ತಿಳಿದ ಇಂದ್ರ, ಅಗ್ನಿ, ವಾಯು ಮೊದಲಾದ ದೇವತೆಗಳು ನಳನ ರೂಪಧರಿಸಿ ದಮಯಂತಿ ಮದುವೆಯಾಗಲು ಹವಣಿಸುತ್ತಾರೆ. ಮುಂದುವರೆದು ದೇವೇಂದ್ರನೇ ಸ್ವರ್ಗದ ಕನ್ಯೆಯೊಬ್ಬಳನ್ನು ಕಳಿಸಿ ಆಕೆ ತನಗೆ ಒಲಿಯುವಂತೆ ಉಪಾಯ ಹೂಡುತ್ತಾನೆ. ಅಷ್ಟೇ ಅಲ್ಲ ಸ್ವತಃ ನಳಮಹಾರಾಜನನ್ನೆ ದೂತನಾಗಿ ಕಳುಹಿಸಿ ಅವಳು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾನೆ.

ದೇವತೆಗಳ-ದೇವೇಂದ್ರನ ಪ್ರಯತ್ನಗಳೆಲ್ಲ ದಮಯಂತಿಯ ಅಚಲಪ್ರೇಮದ ಮುಂದೆ ಸೋತು ನಳ-ದಮಯಂತಿಯರ ಸ್ವಯಂವರ ನಡೆಯುತ್ತದೆ. ದಮಯಂತಿಯ ಪ್ರೇಮನಿಷ್ಠೆಗೆ ಮೊದಲಿನಿಂದಲೂ ಎಷ್ಟು ದೊಡ್ಡ ಸವಾಲುಗಳು ಎದುರಾಗಿವೆಯೆಂದರೆ ಸ್ವತಃ ದೇವಾನುದೇವತೆಗಳೇ ಅವಳ ಪರೀಕ್ಷೆಗೆ ಸಿದ್ಧವಾಗಿದ್ದಾರೆ. ಅವರಿಬ್ಬರ ಮಿಲನಕ್ಕೆ ವಿರುದ್ಧವಾಗಿದ್ದಾರೆ. ಹೀಗಿರುವಾಗ ದಮಯಂತಿ ದೇವತೆಗಳ ಆಮಿಷಕ್ಕೆ ಬಲಿಯಾಗದೆ ಮನುಷ್ಯ ಪ್ರೇಮದ ನೂರಾರು ಕಷ್ಟಕೋಟಲೆಗಳ ಸುಳಿಗೆ ಸಿಲುಕಿಕೊಳ್ಳುವುದು ಆಕೆಯ ಗಟ್ಟಿತನಕ್ಕೆ ನಿದರ್ಶನದಂತಿದೆ.

ಇದೆಲ್ಲದರ ನಡುವೆ ನಳ-ದಮಯಂತಿಯರ ಸ್ವಯಂವರದ ವಿಷಯ ಕಲಿಯ ಕಿವಿಗೆ ಬಿದ್ದು ಅವನು ಅವರಿಬ್ಬರ ಸಂಬಂಧವನ್ನು ಹಾಳುಗೆಡಹುವ ಪಣ ತೊಡುತ್ತಾನೆ. ಏನೇಆಗಲಿ ಅವರಿಬ್ಬರನ್ನು ಬೇರೆಮಾಡಿ ನಳನನ್ನು ಕಾಡಿಗೆ ಅಟ್ಟದೆ ಇರುವುದಿಲ್ಲ ಎಂದು ನಿರ್ಧರಿಸಿ ಬ್ರಾಹ್ಮಣವೇಷದಲ್ಲಿ ಭೂಮಿಗೆ ಬಂದು ನಳನ ತಮ್ಮ ಪುಷ್ಕರನನ್ನು ತನ್ನ ಅಣ್ಣನ ವಿರುದ್ಧ ಜೂಜಾಡಲು ಪ್ರೇರೇಪಿಸುತ್ತಾನೆ. ಕಲಿಯ ಕುತಂತ್ರಕ್ಕೆ ಈಡಾಗಿ ನಳ ಜೂಜಿನಲ್ಲಿ ತನ್ನ ಸಕಲ ಸಾಮ್ರಾಜ್ಯವನ್ನು ಸೋತು ನಿರ್ಗತಿಕನಾಗಿ ದಮಯಂತಿಯೊಂದಿಗೆ ಕಾಡಿಗೆ ಹೋಗುತ್ತಾನೆ. ಅವರಿಬ್ಬರೂ ಎಂಥ ದುಸ್ಥಿತಿಗೆ ಈಡಾಗುತ್ತಾರೆ ಎಂದರೆ ಕಾಡಿನಲ್ಲಿ ಹಸಿವಿನಿಂದ ಬಳಲಿ ಬರುತ್ತಿರುವಾಗ ಸುಂದರವಾದ ಜಗನ್ಮೋಹನ ಪಕ್ಷಿಗಳನ್ನು ನಳ ನೋಡಿ ಅವುಗಳನ್ನು ಹಿಡಿಯಲು ತನ್ನ ಮೈಮೇಲಿನ ಬಟ್ಟೆಗಳನ್ನು ಬೀಸಿ ಹಿಡಿಯಲು ಮುಂದಾದಾಗ, ಅವು ಬಟ್ಟೆಯ ಸಮೇತ ಹಾರಿಹೋಗಿಬಿಡುತ್ತವೆ. ಮೈಮೇಲಿನ ಬಟ್ಟೆಯನ್ನೂ ಕಳೆದುಕೊಂಡು ನಳ ನಗ್ನವಾಗಿ ನಿಂತಿರುವಾಗ ದಮಯಂತಿ ತನ್ನ ಅರ್ಧಸೀರೆಯನ್ನು ಹರಿದು ಅವನ ಮಾನ ಕಾಪಾಡುತ್ತಾಳೆ. ಹೀಗೆ ನಳ ತನ್ನದೆಲ್ಲವನ್ನೂ ಕಳೆದುಕೊಂಡು ಬೆತ್ತಲಾಗಿರುವ ಪ್ರಸಂಗವು ಅವನು ಪಡೆದುಕೊಳ್ಳಬೇಕಾದ ಹೊಸ ವ್ಯಕ್ತಿತ್ವ ಧಾರಣೆಗೆ, ಅದಕ್ಕೆ ಪೂರಕವಾಗಿ ದಮಯಂತಿಯು ರೂಪಿಸಿಕೊಳ್ಳಲಿರುವ ದೃಢ ಸಂಕಲ್ಪಕ್ಕೆ ಪರೋಕ್ಷ ಸೂಚನೆಯಂತಿದೆ. ಇಡೀ ಕಾವ್ಯದಲ್ಲಿ ನಳ ತನ್ನ ಬದುಕನ್ನು ರಕ್ಷಿಸಿಕೊಳ್ಳುವಲ್ಲಿ ಬೆತ್ತಲಾಗುವುದು, ನಂತರ ಹಲವು ರೂಪಾಂತರಗಳನ್ನು ಹೊಂದುವುದು ಅವನ ಹೊಸವ್ಯಕ್ತಿತ್ವ ಧಾರಣೆಗೆ ಸಂಕೇತದಂತಿದೆ.

ಮುಂದೆ ದಮಯಂತಿ ಕಾಡಿನಲ್ಲಿ ಅಪಾರ ಕಷ್ಟಗಳನ್ನು ಅನುಭವಿಸುವುದನ್ನು ಕಂಡು ಆಕೆಯನ್ನು ಏಕಾಂಗಿಯಾಗಿ ಬಿಟ್ಟುಹೋದರೆ, ಮುಂದೇನೂ ದಾರಿ ಕಾಣದೆ ಆಕೆ ತನ್ನ ತಂದೆಯ ಮನೆಗೆ ಹಿಂದಿರುಗಬಹುದೆಂಬ ಯೋಚನೆಯಿಂದ ಅವಳನ್ನು ಕಾಡಿನಲ್ಲಿ ಬಿಟ್ಟು ಹೊರಟುಹೋಗುವ ಸಂದರ್ಭ ಅವರಿಬ್ಬರ ಜೀವನದ ಮುಖ್ಯಘಟ್ಟವನ್ನು ಸೂಚಿಸುತ್ತದೆ. ಹಾಗೆಯೇ ಅವರಿಬ್ಬರ ಬೇರ್ಪಡುವಿಕೆ, ವಿರಹ ಪರಂಪರೆಗಳು ಆರಂಭವಾಗಿ ಕಾವ್ಯಕ್ಕೆ ವಿಶೇಷವಾದ ತೀವ್ರತೆ ಒದಗಿಬರುತ್ತದೆ. ಆದರೆ ಈ ಅಗಲಿಕೆಯ ಪರ್ವವೇ ಅವರಿಬ್ಬರ ಪ್ರೇಮದ- ವ್ಯಕ್ತಿತ್ವಗಳ ಅಗ್ನಿಪರೀಕ್ಷೆಯ ಕಾಲವೂ ಆಗಿ ಪರಿಣಮಿಸುವುದನ್ನು ಗಮನಿಸಬೇಕಾದ ಸಂಗತಿಯಾಗಿದೆ. ಹಾಗೆಯೇ ಇಂಥ ಅಗಲಿಕೆಗೆ ಒಳಗಾದ ದುಷ್ಯಂತ-ಶಕುಂತಲೆ, ರಾಮ-ಸೀತೆಯರ ಕತೆಯಲ್ಲಿ ದುಷ್ಯಂತ, ರಾಮನಂತಹವರ ವ್ಯಕ್ತಿತ್ವದ ಪೊಳ್ಳುತನ ಬಯಲಾಗಿ ಶಕುಂತಲೆ, ಸೀತೆಯಂತಹವರು ಹೊಸವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದನ್ನು ನೆನೆಯಬೇಕು. ಅದರಲ್ಲೂ ವೈದೇಹಿಯಂತಹವರು ತಮ್ಮ ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ದಂತಹ ಕತೆಗಳಲ್ಲಿ ದುಷ್ಯಂತನ ಅಗಲಿಕೆಯ ನಂತರ ಶಕುಂತಲೆ ಪಡೆದುಕೊಳ್ಳುವ ಹೊಸವ್ಯಕ್ತಿತ್ವವನ್ನು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬೇಕು.

ಇತ್ತ ದಮಯಂತಿಯಿಂದ ದೂರವಾದ ನಳ ಕಾಳ್ಗಿಚ್ಚಿಗೆ ಬಲಿಯಾಗಿ ಸಾಯುತ್ತಿದ್ದ ಸರ್ಪವನ್ನು ರಕ್ಷಿಸಲು ಹೋದಾಗ ಅದು ಅವನನ್ನು ಕಚ್ಚುತ್ತದೆ. ಇದರ ಪರಿಣಾಮವಾಗಿ ಪರಮ ರೂಪವಂತನಾದ ನಳ ಪರಮ ಕುರೂಪಿಯಾಗಿ ಮಾರ್ಪಾಡುಗುತ್ತಾನೆ. ಮುಂದೆ ಸಾಗುವ ಮೊದಲು ಇಲ್ಲಿಯೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ಇಲ್ಲಿಯವರೆಗೆ ಚರ್ಚಿಸಿದಂತೆ ಬೆತ್ತಲಾದ ನಳ, ತನ್ನೆಲ್ಲ ಐಶ್ವರ್ಯವನ್ನು ಕಳೆದುಕೊಂಡ ನಳ, ತನ್ನ ಸುಂದರ ರೂಪವನ್ನು ಕಳೆದುಕೊಂಡ ನಳ- ಹೀಗೆ ಎಲ್ಲವನ್ನೂ ಕಳೆದುಕೊಂಡ ನಳ ಯಾವ ಬಗೆಯ ಹೊಸಹುಟ್ಟಿಗೆ ಸಿದ್ಧವಾಗುತ್ತಿದ್ದಾನೆ? ಮೇಲುನೋಟಕ್ಕೆ ರಮ್ಯ ಪ್ರೇಮದ ಕತೆಯೊಂದನ್ನು ಹೇಳುವ ಈ ಕಾವ್ಯ, ಪ್ರೇಮದಲ್ಲಿ ಸಿಲುಕಿದ ವ್ಯಕ್ತಿಗಳ ಅಸ್ತಿತ್ವವನ್ನು ಅಥವಾ ವ್ಯಕ್ತಿತ್ವ ಪರೀಕ್ಷೆಯ ಕತೆಯನ್ನೇ ಮುಖ್ಯವಾಗಿ ಹೇಳುತ್ತಿದೆಯೆ?

ಹಾವಿನಿಂದ ಕಚ್ಚಿಸಿಕೊಂಡು ವಿರೂಪನಾದ ನಳನಿಗೆ ಅದೇ ಹಾವು ತನ್ನ ಆಕಾರವನ್ನು ನೋಡಿಕೊಂಡು ದುಃಖಿತನಾಗದಿರುವಂತೆ ಹೇಳಿ, ಇದರಿಂದಲೇ ಅವನಿಗೆ ಒಳ್ಳೆಯ ಕಾಲವೊಂದು ಒದಗಿಬರಲಿದೆ ಎಂದು ಸೂಚಿಸುತ್ತದೆ. ಅಲ್ಲದೆ ನೀನು ಇಲ್ಲಿಂದ ಮುಂದೆ ಅಯೋಧ್ಯೆಗೆ ಹೋಗಿ ಅಲ್ಲಿ ಋತುಪರ್ಣರಾಜನ ಬಳಿ ಬಾಹುಕನೆಂಬ ಹೆಸರಿನಲ್ಲಿ ಅವನ ಸಾರಥಿಯಾಗಿ ಕೆಲಸಮಾಡುವಂತೆ ಸಲಹೆ ನೀಡುತ್ತದೆ. ಇನ್ನೊಂದು ಕಡೆ ಗಂಡನಿಂದ ಅಗಲಿದ ದಮಯಂತಿ ಬಹಳ ಚಿಂತಿತಳಾಗಿ ಕಾಡಿನಲ್ಲಿ ಹೋಗುವಾಗ ಹೆಬ್ಬಾವೊಂದನ್ನು ತುಳಿದು ಸಂಕಷ್ಟಕ್ಕೆ ಸಿಲುಕಿರುವಾಗ ಬೇಡನೊಬ್ಬ ಅವಳನ್ನು ಪಾರುಮಾಡುತ್ತಾನೆ. ಪಾರು ಮಾಡಿದ ಮೇಲೆ ಅವಳ ಅಪಾರ ಸೌಂದರ್ಯವನ್ನು ನೋಡಿದ ಅವನು ಆಕೆಯನ್ನು ತನ್ನ ಕಾಮದಾಸೆಗೆ ಬಳಸಿಕೊಳ್ಳಲು ಯತ್ನಿಸುತ್ತಾನೆ. ಮೊದಲಿನಿಂದಲೂ ದೇವಾನುದೇವತೆಗಳನ್ನು ತನ್ನ ವಿವೇಕ, ಆತ್ಮಶಕ್ತಿಯಿಂದ ಗೆದ್ದ ದಮಯಂತಿ, ತನ್ನ ಪ್ರಾಣ ಕಾಪಾಡಿದ ನೀನು ನನ್ನ ತಂದೆಯ ಸಮಾನನಲ್ಲವೆ ಎಂದು ಬೇಡನ ಮನಪರಿವರ್ತನೆಗೆ ಕಾರಣವಾಗುತ್ತಾಳೆ. ಎಂತಹ ಕಷ್ಟದ ಪರಿಸ್ಥಿತಿಯನ್ನು ಎಲ್ಲವನ್ನೂ ಮೆಟ್ಟಿನಿಲ್ಲುವ ಶಕ್ತಿಯನ್ನು ತೋರುವ ಕಾರಣದಿಂದಲೇ ಕೃತಿಯಲ್ಲಿ ನಳನಿಗಿಂತಲೂ ದಮಯಂತಿಯ ಪಾತ್ರವೇ ಹೆಚ್ಚು ಉಜ್ವಲವಾಗಿ ಕಾಣುತ್ತದೆ.

ಕನಕದಾಸರು ಬರೆದಿರುವ ನಳಚರಿತ್ರೆಯಲ್ಲಾಗಲೀ, ಅಥವಾ ಅದಕ್ಕೆ ಮೂಲಪ್ರೇರಣೆ ನೀಡಿರುವ ಮಹಾಭಾರತದ ನಳೋಪಖ್ಯಾನದಲ್ಲಾಗಲೀ ನಳನ ಹೆಸರು ಮಂಚೂಣಿಯಲ್ಲಿದ್ದರೂ ಅಲ್ಲಿ ದಮಯಂತಿಯ ಜೀವನಹೋರಾಟದ ಕಥನವೇ ಮುಖ್ಯವಾಗಿದೆ.

ಬೇಡನಿಂದ ಪಾರಾಗಿ ಬಂದ ದಮಯಂತಿ ಚೇದಿರಾಜನ ಬಳಿ ಬಂದು ಅವನ ಮಗಳ ಬಳಿ ಸೈರಂಧ್ರಿಯಾಗಿ ಸೇವಕಿಯ ಕೆಲಸಕ್ಕೆ ಸೇರುತ್ತಾಳೆ. ಹಾಗಿದ್ದರೂ ಆಕೆ ನಳನಿಗಾಗಿ ಇನ್ನಿಲ್ಲದೆ ಬಹಳ ತೀವ್ರವಾಗಿ ಹಂಬಲಿಸುತ್ತಲೇ ಇರುತ್ತಾಳೆ. ಆಹಾರ ನಿದ್ರೆ ಶಾಂತಿ ಸಮಾಧಾನಗಳಿಲ್ಲದೆ ಸೊರಗಿದ ಆಕೆ ಮತ್ತೆ ತನ್ನ ತಂದೆಯ ಮನೆಗೆ ಬಂದು ಸೇರುತ್ತಾಳೆ. ಮಗಳ ದುರವಸ್ಥೆಯನ್ನು ಕಂಡ ಆಕೆಯ ತಂದೆ ಎಲ್ಲ ಕಡೆ ಸೇವಕರನ್ನು ಕಳಿಸಿ ನಳನಿಗಾಗಿ ಹುಡುಕಾಟ ನಡೆಸುತ್ತಾನೆ. ಅನೇಕ ಪ್ರಯತ್ನದ ನಂತರ ಆಕೆಗೆ ನಳ ಋತುಪರ್ಣ ರಾಜನ ಬಳಿ ಸಾರಥಿಯಾಗಿ ಕೆಲಸಮಾಡುತ್ತಿದ್ದಾನೆ ಎಂಬುದು ತಿಳಿಯುತ್ತದೆ. ಅವಳಿಗೆ ಬಾಹುಕನೆಂಬ ಹೆಸರಿನ ಸಾರಥಿ ನಳನೇ ಇರಬೇಕೆನ್ನಿಸಿದರೂ ಅವನ ಕುರೂಪವನ್ನು ಕಂಡು ಖಚಿತವಾಗಿ ಹೇಳುವ ಹಾಗಿಲ್ಲ. ಹೀಗಿರುವಾಗ ಏನಾದರೂ ಮಾಡಿ ನಳನನ್ನು ಮತ್ತೆ ಪಡೆಯಬೇಕೆಂಬ ಸಂಕಲ್ಪ ಮಾಡಿದ ದಮಯಂತಿ ಒಂದು ಉಪಾಯ ಹೂಡುತ್ತಾಳೆ.

ಬಾಹುಕನನ್ನು ಭೇಟಿ ಮಾಡಿ ‘ಕಾಡಿನಲ್ಲಿ ಒಬ್ಬಂಟಿಯಾದ ಹೆಂಡತಿಯನ್ನು ಅರ್ಧ ಬಟ್ಟೆಯಲ್ಲಿ ಬಿಟ್ಟು ಹೋದವರು ಇಲ್ಲಿ ಯಾರಾದರೂ ಇದ್ದಾರೆಯೆ? ಇದು ಯಾವ ಗಂಡಸಿಗಾದರೂ ಸಮ್ಮತವಾದ ನಡತೆಯೇ?’ ಎಂಬ ಪ್ರಶ್ನೆಯನ್ನು ಕೇಳಲು ಹೇಳಿ ಉತ್ತರ ನೀಡುವ ವ್ಯಕ್ತಿಯ ಮುಖಭಾವವನ್ನು ಗಮನಿಸಲು ಸೂಚಿಸುತ್ತಾಳೆ. ಸೇವಕರು ಈ ಪ್ರಶ್ನೆಯನ್ನು ಬಾಹುಕನಿಗೆ ಕೇಳಿದಾಗ ಅವನು ವಿಚಲಿತಗೊಂಡು ತೀವ್ರ ಕಸಿವಿಸಿಗೆ ಒಳಗಾಗುತ್ತಾನೆ. ಇದಲ್ಲದೆ ಸೇವಕರ ಪ್ರಶ್ನೆಗೆ ‘ಅದು ಹೆಂಡತಿಗೆ ಮಾಡಿದ ವಂಚನೆಯಲ್ಲ. ಮೂಲತಃ ಅದು ಗಂಡನ ಕೊರತೆಯೇ’ ಎಂದು ಉತ್ತರಿಸುತ್ತಾನೆ. ಈ ಮಾತುಗಳನ್ನು ಕೇಳಿದ ಅವನು ನಳನೇ ಇರಬೇಕೆಂದು ಊಹಿಸಿ, ತನ್ನ ಪುನರ್‍ ಸ್ವಯಂವರವನ್ನು ಏರ್ಪಡಿಸಿಕೊಂಡು ಅದಕ್ಕೆ ಋತುಪರ್ಣ ರಾಜನನ್ನು ಆಹ್ವಾನಿಸುತ್ತಾಳೆ. ರಾಜ ಋತುಪರ್ಣನೊಂದಿಗೆ ಬಾಹುಕನೂ ಸಾರಥಿಯಾಗಿ ಸ್ವಯಂವರಕ್ಕೆ ಬರುತ್ತಾನೆ. ಆಗ ದಮಯಂತಿ ತನ್ನ ಮಕ್ಕಳನ್ನು ತೋರಿಸಿದಾಗ ಅವರನ್ನು ಕಂಡು ನಳ ಕಣ್ಣೀರುಗರೆಯುತ್ತಾನೆ. ಆಗ ದಮಯಂತಿಗೆ ಅವನು ನಳನೇ ಎಂಬುದು ಖಚಿತವಾಗುತ್ತದೆ. ಹೀಗೆ ಅವರ ಪುನರ್‍ಮಿಲನವಾಗಿ ನಂತರ ನಳ ಪುಷ್ಕರನನ್ನು ಸೋಲಿಸಿ ರಾಜ್ಯವನ್ನು ಪಡೆದು ಸುಖವಾಗಿ ಬಾಳುತ್ತಾನೆ.

ಮೇಲ್ನೋಟಕ್ಕೆ ನಳ-ದಮಯಂತಿಯ ಪ್ರೇಮದ, ಪ್ರೇಮ ಪರೀಕ್ಷೆಯ ಕತೆಯಾಗಿ, ವಿಧಿಯ ಅಟ್ಟಹಾಸದ ಕತೆಯಾಗಿ ಕಾಣುವ ಕಾವ್ಯವನ್ನು ನಿಧಾನವಾಗಿ ಪರಿಶೀಲಿಸಿದರೆ ಅದಕ್ಕಿರುವ ಹಲವು ಆಯಾಮಗಳು ಗೋಚರವಾಗುತ್ತವೆ. ಕನಕದಾಸರ ಕಾವ್ಯವನ್ನು ಕೇವಲ ಪ್ರೇಮಕತೆಯಾಗಿ ನೋಡಿದರೆ ಅದು ರಂಜಕವಾಗಿ ಕಂಡು, ಮುಖ್ಯವಾಗಿ ದಮಯಂತಿಯಂತಹ ಪಾತ್ರಕ್ಕಿರುವ ಮಹತ್ವ ಕಡಿಮೆಯಾಗುವ ಸಾಧ್ಯತೆಯಿದೆ. ಬಹುಶಃ ಇದೇ ಕಾರಣಕ್ಕೋ ಏನೋ ಕನಕದಾಸರು ಪ್ರೇಮಕಾವ್ಯಗಳಲ್ಲಿ ಸಾಮಾನ್ಯವಾಗಿ ಕಾಣುವ ಶೃಂಗಾರ ವರ್ಣನೆಗಳನ್ನು ಇಲ್ಲಿ ಬಳಸಿಕೊಂಡಿಲ್ಲ. ಇದನ್ನು ಗಮನಿಸಿದರೆ ಕನಕದಾಸರಿಗೆ ನಳ-ದಮಯಂತಿಯರ ಪ್ರೇಮಕ್ಕಿಂತ, ಪ್ರೇಮದ ಕಾರಣವಾಗಿ ಬದುಕಿನಲ್ಲಿ ಹಲವು ಕಷ್ಟಕೋಟಲೆಗಳಿಗೆ ಸಿಲುಕಿದ ವ್ಯಕ್ತಿಗಳ ವ್ಯಕ್ತಿತ್ವ ನಿರೂಪಣೆಯ ಕಡೆಗೇ ಹೆಚ್ಚು ಗಮನವಿರುವಂತೆ ಕಾಣುತ್ತದೆ. ಹಾಗಾಗಿ ಕನಕದಾಸರ ನಳಚರಿತ್ರೆಯನ್ನು ಪ್ರೇಮಕಾವ್ಯ ಎನ್ನುವುದಕ್ಕಿಂತ ಮನುಷ್ಯಪ್ರಯತ್ನದ ಕತೆಯಾಗಿ ನೋಡುವುದು ಹೆಚ್ಚು ಸೂಕ್ತವಾಗಿ ಕಾಣಿಸುತ್ತದೆ.

ಆದರೆ ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಉಲ್ಲೇಖಿಸಿಯೇ ಮುಂದೆ ಸಾಗಬೇಕು. ಸಾಮಾನ್ಯವಾಗಿ ಮನುಷ್ಯ ಪ್ರಯತ್ನವೆಂದರೆ ಸಹಜವಾಗಿ ಅದು ಪುರುಷಪ್ರಯತ್ನವೇ ಎನಿಸಿಬಿಡುವಷ್ಟರ ಮಟ್ಟಿಗೆ ನಮ್ಮ ಮನಸಿನಲ್ಲಿ ಪುರುಷಪ್ರಧಾನ ಮೌಲ್ಯಗಳು ವ್ಯಾಪಿಸಿಬಿಟ್ಟಿವೆ. ನಿಜದಲ್ಲಿ ನೋಡಿದರೆ ನಳಚರಿತ್ರೆಯಲ್ಲಿ ನಳನ ಪ್ರಯತ್ನವೇ ಇಲ್ಲ. ದಮಯಂತಿಯ ಹಾಗೆ ಬಹಳ ಕಠೋರ ಪರೀಕ್ಷೆಗಳಿಗೆ ಒಳಗಾಗದಿದ್ದರೂ, ತನಗೆ ಒದಗಿ ಬಂದಿರುವ ಕಷ್ಟ ಕೋಟಲೆಗಳನ್ನು ಮೀರಿ ನಿಲ್ಲುವಲ್ಲಿ ಹೆಚ್ಚಿನ ಪಾತ್ರವೇನೂ ಅವನಿಗಿಲ್ಲ. ಹಾಗಾಗಿ ಇಡೀ ಕಾವ್ಯವನ್ನು ದಮಯಂತಿಯ ಪ್ರೇಮದ, ಅದಕ್ಕಿಂತ ಮುಖ್ಯವಾಗಿ ಪ್ರೇಮವನ್ನು ಬದುಕಿನ ಹಲವು ಕಷ್ಟ ಪರಂಪರೆಗಳನ್ನು ಎದುರಿಸುವ ಶಕ್ತಿಯಾಗಿ ಸಂಚಯಿಸಿಕೊಳ್ಳುವ ಕತೆಯಾಗಿ ಓದಿಕೊಳ್ಳಲು ಸಾಧ್ಯವಿದೆ.

ನಳದಮಯಂತಿಯರ ಕತೆಯನ್ನು ಉಜ್ವಲ ಪ್ರೇಮಕತೆಯಾಗಿ ಕಂಡರೆ, ಅಲ್ಲಿ ದಮಯಂತಿಯ ಅಸಾಮಾನ್ಯ ಪ್ರಯತ್ನಗಳು ಹಿನ್ನೆಲೆಗೆ ಸರಿಯುತ್ತವೆ. ಹಾಗಾಗಿಯೇ ಇವರಿಬ್ಬರ ಕತೆಯನ್ನು ಪ್ರೇಮಕಾವ್ಯವೆಂದು ಅಬ್ಬರಿಸಿ ಹೇಳುವಲ್ಲಿ ದಮಯಂತಿಯ ಕತೃತ್ವಶಕ್ತಿಯನ್ನು ಮರೆಮಾಚುವ ಹುನ್ನಾರವೂ ಕಾಣಿಸಿದರೆ ಅದೇನು ಆಶ್ಚರ್ಯದ ಸಂಗತಿಯಾಗಿ ಕಾಣುವುದಿಲ್ಲ. ಮೇಲಾಗಿ ಕನಕದಾಸರು ನಳ-ದಮಯಂತಿಯರ ಪ್ರೇಮವನ್ನು ಬರಿಯ ಉದ್ವೇಗ-ಉತ್ಕಟತೆಗಳ ಅನುಭವವಾಗಿ ಅಥವಾ ಅದನ್ನು ಒಂದು ರಮ್ಯ/ರೊಮ್ಯಾಂಟಿಕ್ ಸ್ಥಿತಿಯಾಗಿ ನೋಡದೆ ಅದು ಹಂತಹಂತವಾಗಿ ಪರಿವರ್ತನೆಗೆ ಒಳಗಾಗುವ, ಬದುಕಿನ ಹಲವು ಸವಾಲುಗಳನ್ನು ಮೀರಿನಿಲ್ಲುವ ಶಕ್ತಿಯನ್ನಾಗಿ ನೋಡಲು ಯತ್ನಿಸಿದ್ದಾರೆ ಎನಿಸುತ್ತದೆ. ಅದಕ್ಕಾಗಿಯೇ ನಳ ತನ್ನ ಜೀವನದಲ್ಲಿ ಬೆತ್ತಲಾಗಿ, ಕುರೂಪಿಯಾಗಿ, ಸೇವಕನಾಗಿ ಹಲವು ಅವಸ್ಥೆಗಳನ್ನು ದಾಟಿಬರುತ್ತಾನೆ.

ಆದ್ದರಿಂದಲೇ ನಳಚರಿತ್ರೆಯಲ್ಲಿ ಪ್ರೇಮವು ಹಲವು ಹಂತಗಳಲ್ಲಿ ವಿಕಾಸಗೊಳ್ಳುವ, ಮಾಗುವ- ವಿಸ್ತಾರಗೊಳ್ಳುವ ಅನುಭವವಾಗಿ ಕಾಣಿಸುತ್ತದೆ. ಹಾಗೆ ನೋಡಿದರೆ ಹರಿಭಕ್ತಸಾರವನ್ನು ಸಾರುವ ಕೀರ್ತನೆಗಳನ್ನು, ಪರಮ ಶೃಂಗಾರ ವರ್ಣನೆಗಳನ್ನು ಹೊಂದಿರುವ ‘ಮೋಹನ ತರಂಗಿಣಿ’ಯನ್ನು ಬರೆದ ಕನಕದಾಸರು ನಳಚರಿತ್ರೆಯಂತಹ ಸಂಯಮದ, ಮಾಗಿದ ಕಾವ್ಯವನ್ನು ಹೇಗೆ ಬರೆದರು ಎಂದು ಆಶ್ಚರ್ಯಪಡುವಂತೆ ಈ ಕಾವ್ಯ ಇದೆ.

ಮೇಲಿನ ಮಾತನ್ನು ಮತ್ತೊಮ್ಮೆ ಕಾವ್ಯದ ಮುಖ್ಯಭಾಗಗಳನ್ನು ಪುನರವಲೋಕಿಸುವ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ಹಾಗೆ ನೋಡಿದರೆ ನಳ ದಮಯಂತಿಯರಿಬ್ಬರೂ ರೂಪ, ಐಶ್ವರ್ಯ, ಸಂಪತ್ತು, ಅಧಿಕಾರಗಳೆಲ್ಲವನ್ನೂ ಆಯಾಚಿತವಾಗಿ ದೈವದತ್ತವಾಗಿ ಪಡೆದುಕೊಂಡಿದ್ದಾರೆ. ಆದರೆ ದಮಯಂತಿಯಲ್ಲಿ ಮಾತ್ರ ಸೌಂದರ್ಯ, ಸಂಪತ್ತುಗಳ ಜೊತೆಗೆ ಆಕೆ ಸ್ವತಃ ತನ್ನ ಪ್ರಯತ್ನಶೀಲತೆಯಿಂದ ರೂಢಿಸಿಕೊಂಡ ಸಂಯಮ, ಸಹಿಷ್ಣುತೆ, ವಿವೇಕದ ಗುಣಗಳಿವೆ. ಇವೆಲ್ಲವನ್ನೂ ಆಕೆ ದೈವದತ್ತವಾಗಿ ಪಡೆದುಕೊಂಡವಳಲ್ಲ. ಬದಲಾಗಿ ಈ ಗುಣಗಳನ್ನು ಆಕೆ ಬದುಕಿನ ಹಲವಾರು ಕಷ್ಟಕೋಟಲೆಗಳನ್ನು ಎದುರಿಸುತ್ತಲೇ ರೂಢಿಸಿಕೊಂಡಿದ್ದಾಳೆ. ಆದ್ದರಿಂದಲೇ ಆಕೆ ತನ್ನ ಸಮಚಿತ್ತ, ಸಂಯಮದ ಗುಣಗಳಿಂದ ಸ್ವತಃ ಅವಳನ್ನು ಮದುವೆಯಾಗಲು ಬಂದ ದೇವೇಂದ್ರನನ್ನೇ ಮನವೊಲಿಸಿ ಹಿಂದಿರುಗುವಂತೆ ಮಾಡುತ್ತಾಳೆ. ಮುಂದೆ ಕಾಡಿನಲ್ಲಿ ತನ್ನನ್ನು ಕಾಮಿಸಲು ಬಂದ ಬೇಡನ ಮನಸ್ಸನ್ನು ಪರಿವರ್ತಿಸುವಲ್ಲಿಯೂ ಇದೇ ರೀತಿಯ ವಿವೇಕವನ್ನು ಪ್ರದರ್ಶಿಸುತ್ತಾಳೆ. ಇಷ್ಟಲ್ಲದೆ ತನ್ನಿಂದ ದೂರವಾದ ನಳನನ್ನು ಮರಳಿ ಪಡೆಯುವಲ್ಲಿ ದಮಯಂತಿ ಬಳಸುವ ಜಾಣ್ಮೆ, ಸಮಯಸ್ಫೂರ್ತಿ, ಕಾರ್ಯತತ್ಪರತೆ ಮೊದಲಾದ ಗುಣಗಳು ಅವಳಿಗಿರುವ ಧೃಢವಾದ ವ್ಯಕ್ತಿತ್ವವನ್ನು ಸೂಚಿಸುತ್ತವೆ.

ಕುರೂಪಿಯಾಗಿರುವ ನಳನನ್ನು ತನ್ನ ಗಂಡನೊ ಅಲ್ಲವೋ ಎಂದು ತಿಳಿದುಕೊಳ್ಳಲು ಆಕೆ ‘ಅರ್ಧ ಬಟ್ಟೆಯಲ್ಲಿ ಹೆಣ್ಣೊಬ್ಬಳನ್ನು ಕಾಡಿನಲ್ಲಿ ಒಂಟಿಯಾಗಿ ಬಿಡುವುದು ಗಂಡಸಿಗೆ ಯೋಗ್ಯವಾದ ಗುಣವೇ?’ ಎಂಬ ಪ್ರಶ್ನೆ ಹಾಕಿ ಅವನ ಮೇಲೆ ನೈತಿಕ ಒತ್ತಾಯವನ್ನು ಹೇರುತ್ತಾಳೆ. ನಳನನ್ನು ಮದುವೆಯಾಗಲು ನಡೆಯುವ ಮೊದಲ ಸ್ವಯಂವರದಲ್ಲಿ ಸ್ವತಃ ದೇವಾನುದೇವತೆಗಳನ್ನು ಬದಿಗೊತ್ತಿ ತನ್ನ ಪ್ರೇಮದ ಆಯ್ಕೆಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದಮಯಂತಿ ಮತ್ತೊಮ್ಮೆ ನಳನನ್ನು ಪಡೆಯಲು ಮತ್ತೊಂದು ಸ್ವಯಂವರವನ್ನು ಏರ್ಪಡಿಸಿಕೊಳ್ಳುವುದು ಅವಳ ಸ್ವತಂತ್ರವಿಚಾರ ಶಕ್ತಿಗೆ ಸೂಚನೆಯಂತಿದೆ. ಇವೆಲ್ಲವನ್ನೂ ನೋಡಿದರೆ ಕನಕದಾಸರು ನವರಸಗಳಿಗೆ ಅನುಗುಣವಾಗಿ-ಅಂದರೆ ಪುರುಷನ ಎಲ್ಲ ಬಗೆಯ ಭೋಗ ಅಪೇಕ್ಷೆಗಳಿಗೆ ಅನುಗುಣವಾಗಿ ಎಂದರ್ಥ- ರೂಪಿತವಾಗಿರುವ ರಮ್ಯ ಹೆಣ್ಣಿನ ಚಿತ್ರಣವನ್ನು ಕೊಡುತ್ತಿಲ್ಲ. ಬದಲಾಗಿ ಸಂಕಲ್ಪಶೀಲ ಗುಣದ, ಗಟ್ಟಿ ವ್ಯಕ್ತಿತ್ವದ ಹೆಣ್ಣನ್ನು ತೋರಿಸುವುದು ಅವರ ಉದ್ದೇಶವಾಗಿದೆ ಎನಿಸುತ್ತದೆ. ಅಲ್ಲದೆ ಪ್ರೇಮದ ಮೂಲಕ ರೂಪಿತವಾಗಬಹುದಾದ ಸ್ವತಂತ್ರವ್ಯಕ್ತಿತ್ವ ನಿರ್ಮಾಣವನ್ನು ತೋರಿಸುವ ಕಡೆ ಅವರ ಗಮನವಿದೆ ಎನಿಸುತ್ತದೆ.

ಆದರೆ ಇಷ್ಟೆಲ್ಲ ಕಷ್ಟಕೋಟಲೆಗಳನ್ನು ಎದುರಿಸುವ ದಮಯಂತಿಯ ಪಾತ್ರ ಇನ್ನೊಂದು ರೀತಿಯಲ್ಲಿ ಪತಿಗಾಗಿ ನೂರಾರು ಅಗ್ನಿ ಪರೀಕ್ಷೆಗಳಿಗೆ ಈಡಾಗುವ ಸತಿಸಾಧ್ವೀಮಣಿಯ ನಿರೂಪಣೆಯಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ. ನಳನಿಂದ ದೂರವಾದಾಗ, “ಪತಿವಿಹೀನೆಯಾದ ಸತಿಗೆ ಸುವೃತ, ಸುಭೋಜನ, ಸುಖಗಳೆಂಬುದು ಯೋಗ್ಯವೇ”ಎಂಬ ಸಂಪ್ರದಾಯಬದ್ಧ ನಂಬಿಕೆಗಳ ಆಶ್ರಯದಲ್ಲಿಯೇ ಆಕೆ ಬದುಕನ್ನು ಸಾಗಿಸುತ್ತಾಳೆ. ಮೇಲಾಗಿ ತನ್ನನ್ನು ಕಾಡಿನಲ್ಲಿ ಒಬ್ಬಂಟಿಯಾಗಿ ತೊರೆದುಹೋದ ನಳನ ಬಗ್ಗೆ ಆಕೆಗೆ ಯಾವ ಪ್ರಶ್ನೆಗಳೂ ಇಲ್ಲ. ದಮಯಂತಿ ನಳನನ್ನು ಮರಳಿ ಪಡೆಯಲು ಪುನರ್‍ಸ್ವಯಂವರವನ್ನು ಏರ್ಪಡಿಸಿದಾಗ ನಳ ಅದಕ್ಕೆ ಕಾರಣವಾದ ಆಕೆಯನ್ನು ‘ದ್ರೋಹಿಯಾ ದಮಯಂತಿ’ ಎಂದೇ ಸಂಬೋಧಿಸುತ್ತಾನೆ. ಹಾಗಾಗಿ ಕನಕದಾಸರ ಕಾವ್ಯವು ಹೆಣ್ಣನ್ನು ನೋಡುವ ಸಂಪ್ರದಾಯಬದ್ಧವಾದ ಪಡಿಯಚ್ಚಿನ ದೃಷ್ಟಿಕೋನದಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದೇನೂ ಹೇಳುವಂತಿಲ್ಲ.

ಹಾಗಿದ್ದರೂ ಮೊದಲಿನಿಂದಲೂ ದೇವತೆಗಳ ಸಾಂಗತ್ಯದ ಸಾಧ್ಯತೆಗಳನ್ನು ನಿರಾಕರಿಸಿ ತನ್ನ ಐಹಿಕ ಬದುಕಿನ ಪ್ರೇಮಜೀವನವನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಮತ್ತು ನಳನ ವ್ಯಕ್ತಿತ್ವದ ಸುತ್ತ ಆವರಿಸಿರುವ ಹಲವು ಬಗೆಯ ಪೊರೆಗಳು ಕಳಚಿಕೊಳ್ಳುವುದನ್ನು ನಿರಂತರವಾಗಿ ಸಾಧ್ಯವಾಗಿಸುವ ಮೂಲಕ ದಮಯಂತಿಯ ಪಾತ್ರ ಹೊಸ ಬಗೆಯ ಗಟ್ಟಿತನವನ್ನು ಪಡೆದುಕೊಳ್ಳುತ್ತದೆ. ಹಾಗಾಗಿಯೇ ಕಾಡಿನಲ್ಲಿ ಬೆತ್ತಲಾದ ನಳನಿಗೆ ತನ್ನ ಅರ್ಧ ಸೀರೆಯನ್ನು ಹರಿದು ನೀಡಿ ಅವನು ಹೊಸದೊಂದು ವ್ಯಕ್ತಿತ್ವವನ್ನು ಅನ್ವೇಷಿಸಲು ಸಿದ್ಧಗೊಳಿಸುವುದು ಈಕೆಯೇ. ಹಾಗೆಯೇ ನಳ ತನ್ನ ಎಲ್ಲ ಅವಲಂಬನೆಗಳು (ಯಾಕೆಂದರೆ ಅವನಿಗೆ ಎಲ್ಲವೂ ದೈವದತ್ತ), ಎಲ್ಲ ಅಸಹಾಯಕತೆಗಳು(ಜೂಜಿನಲ್ಲಿ ಸೋತಿರುವ) ಕಳೆದುಕೊಂಡು ಅವನು ಹೊಸ ವ್ಯಕ್ತಿತ್ವವನ್ನು ಪಡೆದುಕೊಳ್ಳುವಂತೆ ಅವನನ್ನು ಅಣಿಯಾಗಿಸುತ್ತಾಳೆ. ಹಾಗಾಗಿಯೇ ದಮಯಂತಿಯ ಪಾತ್ರ ಸಾಂಪ್ರದಾಯಿಕತೆಯ ನೆರಳಿನಲ್ಲಿದ್ದೂ ಅನೇಕ ಬಗೆಯ ಹೊರಚಾಚುಗಳನ್ನು ಹೊಂದಿರುವ ಪಾತ್ರವಾಗಿ ಕಾಣಿಸುತ್ತದೆ.

ಪ್ರೇಮದ ಮೂಲಕ, ಅದಕ್ಕೆ ಬರುವ ಸವಾಲುಗಳ ಮೂಲಕ ಇಲ್ಲಿ ಬರುವ ಗಂಡು ಹೆಣ್ಣುಗಳು ತಮ್ಮ ಸ್ವತಂತ್ರವ್ಯಕ್ತಿತ್ವದ ಹುಡುಕಾಟಕ್ಕೆ ಪ್ರೇರಣೆ ಪಡೆದುಕೊಳ್ಳುವ ಕಾರಣಕ್ಕೆ ಕನಕದಾಸರ ನಳಚರಿತ್ರೆ ಕುತೂಹಲ ಹುಟ್ಟಿಸುತ್ತದೆ. ಇದೇ ಮಾದರಿಯ ಅಗ್ನಿ ಪರೀಕ್ಷೆಗಳಿರುವ ರಾಮಾಯಣದಲ್ಲಿ ರಾಮ ಕೊನೆಗೆ ಎಂತಹ ಕಳಂಕಗಳಿಗೆ ಕಾರಣವಾಗಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಶಕುಂತಲೆಯ ಕಥೆಯ ಕೊನೆಯಲ್ಲಿ ದುಷ್ಯಂತ ಎಂತಹ ಅಪರಾಧಿ ಭಾವನೆಯಲ್ಲಿ ಸಿಲುಕಿಕೊಂಡಿದ್ದಾನೆ ಎಂಬುದೂ ಸಹ ತಿಳಿದಿದೆ. ಹೀಗಿರುವಾಗ ಅಷ್ಟೇನೂ ದೊಡ್ಡದಾದ ಹಾಗೂ ಸ್ವತಂತ್ರವ್ಯಕ್ತಿತ್ವವಿಲ್ಲದ ನಳ, ದಮಯಂತಿಯ ಸಂಕಲ್ಪಶೀಲವ್ಯಕ್ತಿತ್ವದಿಂದ ಹೊಸರೂಪ ಪಡೆದು ತನ್ನ ಮಡದಿಯೊಂದಿಗೆ ಸುಖವಾಗಿ ಬಾಳುವುದು ಪುರುಷ ಮೌಲ್ಯಗಳ ಸಣ್ಣ ಪಲ್ಲಟಕ್ಕೆ ಸೂಚನೆಯೂ ಆಗಿ ಕಾಣಿಸುತ್ತದೆ.