Advertisement
ಕನಸು, ಕನವರಿಕೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ಕನಸು, ಕನವರಿಕೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಬಹುವಾಗಿ ಇಷ್ಟಪಡುತ್ತಿದ್ದ ಜುಬೇದಾಬಾಯಿ, ನನ್ನನ್ನು ಕಂಡೊಡನೆ ‘ಎಷ್ಟು ಕ್ಯೂಟ್ ಅಯ್ತಲ್ಲ ಈ ಹುಡ್ಗಿ!’ ಎಂದು ಕೆನ್ನೆಗಿಂಡಿ, ಮುತ್ತಿಟ್ಟರು. ಕಳೆದುಹೋದೆ; ಆಕಾಶಕ್ಕೇರಿಬಿಟ್ಟೆ. ಆವತ್ತಿಡೀ ಕೆಳಗಿಳಿದಿದ್ದರೆ ಕೇಳಿ. ಹೇಮರೆಡ್ಡಿ ಮಲ್ಲಮ್ಮ ನಾಟಕವೆಂದರೆ ನನಗೂ ಉತ್ಸಾಹ ಹೆಚ್ಚಿರುತ್ತಿತ್ತು. ಏಕೆಂದರೆ ಅದೊಂದೇ ನಾಟಕದಲ್ಲಿ ನನಗೆ ವೇದಿಕೆಯೇರುವ ಅವಕಾಶ ಸಿಗುತ್ತಿದ್ದದ್ದು. ಮದುವೆ, ಉಡಿ ತುಂಬುವ ಗುಂಪು ದೃಶ್ಯಗಳಲ್ಲಿ ನಾನೂ ಇರುತ್ತಿದ್ದೆ. ಗುಂಪೋ ಪ್ರತ್ಯೇಕವೋ, ಜನ ನನ್ನ ನೋಡಿ ಗುರುತಿಸುತ್ತಾರೋ ಇಲ್ಲವೋ, ನನಗೆ ಇವೆಲ್ಲವೂ ಗೌಣ. ಬಣ್ಣ ಮತ್ತು ಬೆಳಕಿನ ಮೋಹವೇ ಅಂತಹದ್ದು ಎನಿಸುತ್ತದೆ.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೊಂದನೆಯ ಕಂತು

ಫ್ಲೋರಿನಾ ಬಾಯಿ ಬಳಸಿಟ್ಟಿದ್ದ ಬ್ಲೇಡನ್ನೇ ಹಿಡಿದು, ಹುಬ್ಬನ್ನೆಲ್ಲ ಬೋಳಿಸಿಕೊಂಡೆ. ಮುಖಕ್ಕೆ ಅಗತ್ಯವಿದ್ದ ಮೇಕಪ್ ಬಳಿದುಕೊಂಡು, ಸೀರೆಯುಟ್ಟು, ಸ್ಟೇಜಿನ ಪಕ್ಕದಲ್ಲಿ ಎಲ್ಲರಿಗೂ ಕಾಣುವಂತೆ ನಿಂತೆ. ನನ್ನನ್ನು ನೋಡಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು! ಪಾತ್ರ ಮಾಡಬೇಕೆಂಬ ಒಂದೇ ಕಾರಣಕ್ಕೆ ದಿಕ್ಕೆಟ್ಟವಳು ಎಂಬಂತೆ ಎಲ್ಲರೆದುರು ನಟಿಸುತ್ತಿದ್ದೆ. ಅನುಭವ ಪಡೆಯಬೇಕು, ಅಭಿನಯದಲ್ಲಿ ಇನ್ನಷ್ಟು ಮಾಗಬೇಕು ಎನ್ನುವ ಸಿದ್ಧಾಂತಗಳೆಲ್ಲ ನನಗೆ ತಿಳಿಯುತ್ತಲೇ ಇರಲಿಲ್ಲ. ನನ್ನೊಳಗಿನ ಆಸೆ, ರಕ್ತ ಒಸರುತ್ತಿದ್ದರೂ ಬಣ್ಣ ಹಚ್ಚಿಕೊಳ್ಳುವಂತೆ ಮಾಡಿದ್ದು; ವಿಚಿತ್ರವಾಗಿ, ವಿಕಾರವಾಗಿಯಾದರೂ ಸರಿ, ಜನರೆದುರು ವೇದಿಕೆ ಏರಬೇಕೆಂದು ನಿರ್ಧರಿಸಿದ್ದು. ರಂಗದ ಎದುರು ನಿಂತು ಕಂಜಿರ ಹಿಡಿದು, ಮೆಲ್ಲಗೆ ಬಡಿಯುತ್ತಿದ್ದೆ. ಫ್ಲೋರಿನಾ ಬಾಯಿ ಹತ್ತಿರ ಬಂದು, ‘ಒಳಗ್ ಹೋಗೆ… ಹೂಂ… ಹೋಗಂದೆ’, ವಟಗುಟ್ಟುತ್ತಲೇ ಇದ್ದರು. ಅದೇನೊ ಗೊತ್ತಿಲ್ಲ, ಹುಚ್ಚು ಧೈರ್ಯದಿಂದ ‘ನಾ ಹೋಗಲ್ಲ. ನಾನ್ಯಾಕ್ ಹೋಗ್ಲಿ?’ ಎಂದೇ ಪ್ರಶ್ನಿಸಿದೆ.

ಒಂಭತ್ತು ವರ್ಷದವಳಾದ ನನಗೆ ಎಲ್ಲಿಂದ ಗಟ್ಟಿತನ ಬಂತೋ! ಅವರು ಪ್ರತೀ ನಿಮಿಷ ಕಳೆದಂತೆ ಒಳಹೋಗು ಎನ್ನುವುದಕ್ಕೂ, ಮೊದಲೇ ವೈಯ್ಯಾರದಿಂದ ಬಳಕುತ್ತಿದ್ದ ನಾನು ಮತ್ತಷ್ಟು ಬಿನ್ನಾಣ ತೋರುವುದು ಹೆಚ್ಚೇ ಆಯಿತು. ಅಂತೂ ‘ಪಣಕ್ಕಿಟ್ಟ ಪ್ರಮಾಣ’ ನಾಟಕದ ಗೌರಿಯ ಅಪರಾವತಾರ ಎಂದೇ ತಿಳಿದರು. ಸಂಗೀತಗಾರರು ಹಾಡುವುದಿರಲಿ, ನಗು ನಿಲ್ಲಿಸುತ್ತಲೇ ಇರಲಿಲ್ಲ. ಎಲ್ಲರೂ ನೋಡಿ ನಗುತ್ತಿದ್ದರೆ ನನ್ನೊಳಗೆ ಮಾತ್ರ ಸಂಭ್ರಮವೇ ನದಿಯಾಗಿ ಹರಿಯುತ್ತಿತ್ತು.

ನಾಟಕದ ಲೈಟ್ ಆಫ್ ಆಯಿತು! ಸರಸ್ವತಿ ಎಲ್ಲಿ? ಎಂದು ಕೂಗಿ, ಹುಡುಕಾಡುವಷ್ಟರಲ್ಲಿ ನಾನಲ್ಲಿಂದ ಕಾಲುಕಿತ್ತಿದ್ದೆ. ಸೀರೆಯನ್ನೆಲ್ಲ ಕಿತ್ತೊಗೆದು, ನನ್ನದೇ ಬಟ್ಟೆ ತೊಟ್ಟು, ಓಡಿದ್ದೇ ಬೋರ್ಡಿಂಗ್ ಮನೆಗೆ. ಯಾರದಾದರೂ ಕಣ್ಣಿಗೆ ಅಪ್ಪಿತಪ್ಪಿ ಕಾಣಿಸಿಕೊಂಡರೆ ಬಣ್ಣದ ಜಗತ್ತಿನಿಂದ ಗೇಟ್‌ಪಾಸ್ ಖಾಯಂ ಎಂದುಕೊಂಡಿದ್ದೆ. ಹಾಗಾಗಿ, ಕೆಳಗೊಂದು ಗೋಣಿಚೀಲವನ್ನು ಹಾಸಿಕೊಂಡು, ಇನ್ನೊಂದು ಗೋಣಿಚೀಲದೊಳಕ್ಕೆ ದೇಹತೂರಿಸಿ, ಮೇಲೆ ಮತ್ತೊಂದು ಗೋಣಿಚೀಲವನ್ನು ಹೊದ್ದುಕೊಂಡೆ. ಅಂದರೆ, ನೋಡಿದವರಿಗೆ ಗುರುತೂ ಸಿಗಬಾರದೆಂದು ಅವಿತಿದ್ದೆ. ಬೆಳಗಾಗುತ್ತಿದ್ದಂತೆ ಯಾರೋ ಒದೆಯುತ್ತಿದ್ದಂತೆ ಅನಿಸಿತು, ಕಿರುಚಿಬಿಟ್ಟೆ. ಬೋರ್ಡಿಂಗ್ ಮನೆಯ ಉಸ್ತುವಾರಿ ವಹಿಸಿದ್ದು ಮಾಲೀಕರ ಸಂಬಂಧಿಗಳಾಗಿದ್ದ ಸಂಗವ್ವ ಮತ್ತು ಸಂಗಪ್ಪ ಇಬ್ಬರ ಕಣ್ಣಿಗೂ ಯಾವುದೋ ನಾಯಿ ಮಲಗಿದಂತೆ ಕಾಣುತ್ತಿತ್ತಂತೆ. ಕಾಲುಗಳೆರಡನ್ನೂ ಮುದುಡಿಸಿ, ದೇಹವನ್ನು ಗುಬರಿಟ್ಟುಕೊಂಡು ಮಲಗಿದ್ದರಿಂದ ಮನುಷ್ಯರು ಮಲಗಿರಬಹುದೆಂದು ಅವರು ಊಹಿಸುವುದಕ್ಕೂ ಸಾಧ್ಯವಿರಲಿಲ್ಲ ಬಿಡಿ. ಹೆಣ್ಣು ಧ್ವನಿ ಕೇಳುತ್ತಿದೆಯಲ್ಲಾ ಎಂದು ಬಗ್ಗಿ ನೋಡಿದರೆ, ಒಳಗಿರುವುದು ನಾನು! ‘ಅರೇ ಇದ್ಯಾಕ್ ಸರಸ್ವತವ್ವಾ, ಇಲ್ ಮಕ್ಕೊಂಡಿದಿ!?’ ಎಂದು ಕಣ್ಣರಳಿಸುತ್ತಾ ಕೇಳಿಸಿದ್ದರು. ‘ಅದು.. ಅದು ನಿನ್ನೆ ರಾತ್ರಿ ನಾಟಕ ಇತ್ತಲಾ, ಪಾರ್ಟ್ ಮಾಡ್ಬೇಕು ಅಂತ ಹೋಗಿದ್ದೆ. ಮತ್ತ ಎಲ್ಲರೂ ಬೈತಿದ್ರು. ಫ್ಲೋರಿನಮ್ಮ ನಂಗ್ ಹೊಡಿತಾರ ಅಂತ ಇಲ್ ಬಂದ್ ಮಕ್ಕೊಂಡೆ’ ಎಂದು ನಡೆದ ವಿಷಯವನ್ನೆಲ್ಲ ವರದಿಯಂತೆ ಒಪ್ಪಿಸಿದೆ. ಅವರಿಬ್ಬರೂ ಹಣೆಬರಹ ಎಂದು ತಲೆಚಚ್ಚಿಕೊಳ್ಳುತ್ತಾ, ನನ್ನ ಅವಸ್ಥೆಗೆ ಮರುಗಿದ್ದರು. ಕಂಪೆನಿಯಲ್ಲಿ ನನ್ನನ್ನು ನಿಷ್ಕಲ್ಮಶವಾಗಿ ಪ್ರೀತಿಸುವ ಎಷ್ಟೆಲ್ಲ ಮನಸ್ಸುಗಳಿದ್ದವು ಎಂದು ನೆನೆದರೇ ಹಾಯೆನಿಸುತ್ತದೆ. ಇರಲಿ, ಅವರಿಬ್ಬರೂ ಕೊಬ್ಬರಿ ಎಣ್ಣೆ ತಂದು ಮುಖಕ್ಕೆ ಬಳಿದಿದ್ದ ಮೇಕಪ್ ತೆಗೆಯಲು ನನ್ನೆದುರು ಕೂತರು. ರಾತ್ರಿ ಗಡಿಬಿಡಿ, ಗಾಬರಿಯಲ್ಲಿ ಬರೀ ಸೀರೆಯನ್ನೇನೊ ಎಸೆದುಬಂದಿದ್ದೆ. ಮೇಕಪ್ ಅಳಿಸುತ್ತಾ ಕೂತಿದ್ದರಂತೂ ಇನ್ನೆಂದೂ ಮೇಕಪ್ ಹಚ್ಚುವುದಕ್ಕೇ ಬಿಡುತ್ತಿರಲಿಲ್ಲ ಎಂದು ನನಗೂ ಗೊತ್ತಿತ್ತು! ಹಾಗಾಗಿ ಈ ಉಪಾಯ ಮಾಡಿದ್ದು ನಾನು. ಮೊದಲೇ ಹುಬ್ಬು ಬೋಳಿಸಿದ್ದರಿಂದ, ರಕ್ತ ಸೋರಿ ಗಾಯವಾಗಿದ್ದಕ್ಕೆ ಎಣ್ಣೆಯಿಂದ ನಯವಾಗಿ ಉಜ್ಜಿ, ಅರಿಶಿಣ ಪುಡಿ ಹಾಕಿ ನಂಜಾಗದಂತೆ ಕಾಳಜಿ ವಹಿಸಿದರು. ‘ಇದೇನವ್ವಾ! ನಿನ್ ಅವಸ್ಥೆ ಯಾರಿಗೂ ಬ್ಯಾಡ್ ನೋಡು’ ಎನ್ನುತ್ತಿದ್ದರೆ, ‘ನೋಡ್ರಿ, ಗೌರಿ ಪಾತ್ರ ಮಾಡ್ತೀನಿ ಅಂದ್ರು ಕೊಡವಲ್ರು. ಅದಕ್ಕೆ ನಾನೇ ಹಾಕ್ಕೊಂಡೆ’ ಎಂದು ಜಂಭದಲ್ಲೇ ಹೇಳಿದೆ. ನನ್ನ ಆಸಕ್ತಿಯನ್ನು ಕುಂದಿಸಬಾರದೆಂದು ಅವರಿಗೆ ಅನಿಸಿ, ‘ಆತು, ಸುಮ್ನಿರವ್ವಾ. ಅಣ್ಣಂಗ್ ಹೇಳಿ ಪಾರ್ಟ್ ಕೊಡಸ್ತೀನಿ’ ಎನ್ನುತ್ತಾ ಬರೀ ಸಮಾಧಾನವಷ್ಟೇ ಮಾಡಿದರು.

ಹಾವೇರಿ ಜುಬೇದಾಬಾಯಿ ಮತ್ತು ಸರೋಜಾಬಾಯಿ ಇಬ್ಬರೂ ಸಹೋದರಿಯರಾಗಿದ್ದರು. ಅಂತರಧರ್ಮೀಯರನ್ನು ವಿವಾಹವಾಗಿದ್ದ ಜುಬೇದಾಬಾಯಿ ಆಕಾಶವಾಣಿಯಲ್ಲಿ ಅದಾಗಲೇ ಹಾಡಿ, ಭೇಷ್ ಎನಿಸಿಕೊಂಡಿದ್ದ ದೈತ್ಯ ಪ್ರತಿಭೆ. ಅವರು ಹಾಡುತ್ತಿದ್ದರೆ ಜೇನು ಸವಿದಂತಹ ಮಧುರ ಅನುಭವ. ಕೇಳುತ್ತಿದ್ದ ಪ್ರತಿಯೊಬ್ಬರು ‘ಆಹಾ!’ ಎಂದು ಉದ್ಘಾರ ಹೊರಡಿಸುತ್ತಾ, ತಲೆದೂಗದೇ ಇರುತ್ತಿರಲಿಲ್ಲ. ಅದೇನೊ ಅವರ ದನಿಯಲ್ಲಿ ಅಂತಹದ್ದೊಂದು ಮ್ಯಾಜಿಕ್ ಇತ್ತು. ಹೇಳಬೇಕೆಂದಿದ್ದು, ಅವರ ನಟನಾ ಕೌಶಲ್ಯದ ಬಗ್ಗೆ. ಹೇಮರೆಡ್ಡಿ ಮಲ್ಲಮ್ಮ, ಸೀತೆ, ಚಿತ್ರಾಂಗದೆ ಹೀಗೆ ಬಹುತೇಕ ರಾಣಿ ಪಾತ್ರಗಳೆಲ್ಲ ಇವರಿಂದಾಗಿ ರಂಗದ ಮೇಲೆ ಜೀವಂತಿಕೆ ಪಡೆದುಕೊಳ್ಳುತ್ತಿತ್ತು. ಅಷ್ಟು ಸುಲಲಿತ ಅಭಿನಯ, ನಿರರ್ಗಳ ಮಾತುಗಾರಿಕೆ. ನಾನಂತೂ ಇವರ ನಟನೆಗೆ ಬೆಕ್ಕಸ ಬೆರಗಾಗಿಹೋಗಿದ್ದೆ.

ಅಷ್ಟು ಹೊತ್ತಿಗಾಗಲೇ ನಲ್ವತ್ತೈದು – ಐವತ್ತರ ಆಸುಪಾಸಿನಲ್ಲಿದ್ದ ಹಾವೇರಿ ಜುಬೇದಾಬಾಯಿ ನೋಡುವುದಕ್ಕೆ ಸ್ವಲ್ಪ ದಪ್ಪಗಿದ್ದರು. ಈಗೆಲ್ಲಿಯಾದರೂ ನೋಡಲು ದಪ್ಪಗಿದ್ದರೆ ಸ್ಟೀರಿಯೋಟೈಪ್ ಪಾತ್ರಗಳನ್ನೇ ನೀಡುತ್ತಾರೆ. ಉದಾಹರಣೆಗೆ ಶೂರ್ಪನಖಿ, ಮಂಥರೆ, ಹಿಡಿಂಬೆ ಇತ್ಯಾದಿ. ಸೌಂದರ್ಯವೂ ರಾಜಕಾರಣವಾಗಿ ಬದಲಾದ ಇಂದಿನ ಕಾಲದಲ್ಲಿ ನಾವು ಇನ್ನೇನನ್ನು ತಾನೆ ನಿರೀಕ್ಷಿಸಲು ಸಾಧ್ಯ ಹೇಳಿ? ಆಗ, ಈಗ ಅಂಥ ಸೌಂದರ್ಯ ಮೀಮಾಂಸೆಯ ಕುರಿತು ತೌಲನಿಕ ವಿಶ್ಲೇಷಣೆ ನೀಡುತ್ತಿಲ್ಲ. ಆದರೆ, ಪಾತ್ರಕ್ಕೂ ಗಾತ್ರಕ್ಕೂ ತಾಳೆಹಾಕಿ ನೋಡುವುದಂತೂ ಇರಲಿಲ್ಲ. ಸೀತೆ ಸಣಕಲು ದೇಹದವಳೇ ಯಾಕಾಗಿರಬೇಕು? ಚಿತ್ರಾಂಗದೆಗೆ ಬಳಕುವ ದೇಹವಿತ್ತೆಂದು ಕಂಡವರು ಯಾರು? ಪ್ರಶ್ನಿಸಿಕೊಂಡರೆ ಸಾಕು. ಬದಲಾವಣೆ ಖಂಡಿತ ಸಾಧ್ಯವಿದೆ. ಜುಬೇದಾಬಾಯಿ ರಂಗದಲ್ಲಿ ಇದ್ದಷ್ಟೂ ಹೊತ್ತು ಜನರೆಲ್ಲ ಅವರ ಇಂಪಾದ ಹಾಡುಗಾರಿಕೆ ಕೇಳುತ್ತಿದ್ದರು, ಅವರ ನಟನೆಗೆ ಮನಸೋಲುತ್ತಿದ್ದರು.

ನಾನು ಬಹುವಾಗಿ ಇಷ್ಟಪಡುತ್ತಿದ್ದ ಜುಬೇದಾಬಾಯಿ, ನನ್ನನ್ನು ಕಂಡೊಡನೆ ‘ಎಷ್ಟು ಕ್ಯೂಟ್ ಅಯ್ತಲ್ಲ ಈ ಹುಡ್ಗಿ!’ ಎಂದು ಕೆನ್ನೆಗಿಂಡಿ, ಮುತ್ತಿಟ್ಟರು. ಕಳೆದುಹೋದೆ; ಆಕಾಶಕ್ಕೇರಿಬಿಟ್ಟೆ. ಆವತ್ತಿಡೀ ಕೆಳಗಿಳಿದಿದ್ದರೆ ಕೇಳಿ. ಹೇಮರೆಡ್ಡಿ ಮಲ್ಲಮ್ಮ ನಾಟಕವೆಂದರೆ ನನಗೂ ಉತ್ಸಾಹ ಹೆಚ್ಚಿರುತ್ತಿತ್ತು. ಏಕೆಂದರೆ ಅದೊಂದೇ ನಾಟಕದಲ್ಲಿ ನನಗೆ ವೇದಿಕೆಯೇರುವ ಅವಕಾಶ ಸಿಗುತ್ತಿದ್ದದ್ದು. ಮದುವೆ, ಉಡಿ ತುಂಬುವ ಗುಂಪು ದೃಶ್ಯಗಳಲ್ಲಿ ನಾನೂ ಇರುತ್ತಿದ್ದೆ. ಗುಂಪೋ ಪ್ರತ್ಯೇಕವೋ, ಜನ ನನ್ನ ನೋಡಿ ಗುರುತಿಸುತ್ತಾರೋ ಇಲ್ಲವೋ, ನನಗೆ ಇವೆಲ್ಲವೂ ಗೌಣ. ಬಣ್ಣ ಮತ್ತು ಬೆಳಕಿನ ಮೋಹವೇ ಅಂತಹದ್ದು ಎನಿಸುತ್ತದೆ. ಆಗ ಸೀರೆ ಉಡುವುದೇನು, ತುರುಬು ಕಟ್ಟುವುದೇನು, ಹೂವಿಂದ ಸಿಂಗರಿಸಿಕೊಳ್ಳುವುದೇನು, ಅಬ್ಬಬ್ಬಾ! ಹತ್ತು ವಸಂತಗಳನ್ನು ಕಳೆಯದ ಹುಡುಗಿ ಎಂದು ನೀವು ಹೇಳುವಂತಿರಲಿಲ್ಲ. ಹಾಗೆ ತಯಾರಾಗುತ್ತಿದ್ದೆ. ಬಣ್ಣ ಹಚ್ಚಿಕೊಂಡು ಸ್ಟೇಜಿಗೆ ಬಂದಾಗ ಆಗುತ್ತಿದ್ದ ಆನಂದ ಎಲ್ಲವನ್ನೂ ಮೀರಿದ್ದು. ಸ್ವರ್ಗವೇ ಭೂಮಿಯಲ್ಲಿ ಅವತರಿಸಿದಂತೆ!

ಮದುವೆಯಲ್ಲಿ ಉಡಿ ತುಂಬುವ ದೃಶ್ಯದಲ್ಲಿ ಆರತಿ ಮಾಡಿ, ಗಂಡನ ಹೆಸರು ಹೇಳಬೇಕಾದ ಸನ್ನಿವೇಶವನ್ನು ನನಗೇ ನೀಡಿದ್ದರು. ‘ಉಡಿಯ ತುಂಬಿರೆ ನೀವು ಉಡಿರಾಜಮುಖಿಯಳಿಗೆ ಸಡಗರದಿಂದ ನಾರಿಮಣಿಯರೆ, ಸೋ..’ ಎಂದು ಬೇರೆ ಕಲಾವಿದರು ಹಾಡುತ್ತಿದ್ದರು. ಮುಂದುಗಡೆ ಕೂತ ನಾನು ಮತ್ತು ಇನ್ನೊಬ್ಬಳು ‘ಸೋ..’ ಎಂದು ಸೊಲ್ಲು ಹೇಳುತ್ತಿದ್ದೆವು. ‘ಮಲ್ಲಿಗೆ ಹೂವಿನಂಥ ಮಲ್ಲಮ್ಮಗೆ ನೀವೀಗ ಮಲ್ಲಿಗೆ ಮಾಲೆಯ ಧರಿಸಿರೆ ಸೋ..’ ಎಂದು ಮುಂದುವರೆಸುತ್ತಿದ್ದರೆ, ನಾವು ಮತ್ತೆ ಸೊಲ್ಲು ಹೇಳುತ್ತಿದ್ದೆವು. ‘ಅರಿಶಿಣ ಕುಂಕುಮ ಹಚ್ಚಿ’ ಎನ್ನುವ ಸಾಲು ಹಾಡುತ್ತಿದ್ದಂತೆ ನನ್ನ ಕಾಲು ಆರತಿ ತಟ್ಟೆಯೆಡೆಗೆ ದೌಡಾಯಿಸುತ್ತಿತ್ತು. ನಾನೇ ಮೊದಲು ಹಿಡಿದು, ಶಾಸ್ತ್ರ ಮಾಡಬೇಕೆಂಬ ಇರಾದೆ. ‘ಅರಿಶಿಣ ಕುಂಕುಮ ಹಚ್ಚಿ ಪರಿಮಳ ಗಂಧವ ಪೂಸಿ ತರುಣಿ ಮಲ್ಲಮ್ಮನಿಗೆ ಜಯಜಯವೆಂದು’ ಆರತಿ ಬೆಳಗುತ್ತಿದ್ದೆವು. ಅಷ್ಟೇ ಅಲ್ಲ, ಕೊನೆಯಲ್ಲಿ ಸೊಲ್ಲು ಕೊಡುತ್ತಲೇ ಆರತಿ ತಟ್ಟೆಯನ್ನು ಮರಳಿ ಇಡುತ್ತಿದ್ದೆ. ನನ್ನ ನಟನೆಯ ಸ್ಪೇಸ್ ಚಿಕ್ಕದಿದ್ದಷ್ಟೂ ವಿಸ್ತರಿಸಿಕೊಳ್ಳಬೇಕೆಂಬ ವಿದ್ಯೆ ನನಗೆ ಅದಾಗಲೇ ಕರಗತವಾಗಿತ್ತು.

‘ಆರತಿ ಬೆಳಗುವುದು ಮುಗಿಯುತ್ತಿದ್ದಂತೆ ಹೊಸದಾಗಿ ಮದುವೆಯಾದವರು ಗಂಡನ ಹೆಸ್ರು ಹೇಳ್ರವ್ವಾ’ ಎಂದು ಯಾರೋ ಕೇಳಬೇಕು. ಅದಕ್ಕೂ ಒಂದು ಹಾಡು, ‘ಹೊಸದಾಗಿ ಗಂಡನ ಹೆಸರು ಹೇಳುವುದಕ್ಕೆ ಬಸುರಿಯರೇ ಬಂದು…’ ಎಂದು ಮುಂದಿನ ಸಾಲು ಬರುವಷ್ಟರಲ್ಲಿ ಸೀರೆಯ ಸೆರಗನ್ನೇ ಸುತ್ತಿ ಹೊಟ್ಟೆಯೊಳಕ್ಕೆ ಇಟ್ಟು ಬೆನ್ನನ್ನು ಹಿಂದಕ್ಕೆ ಒರಗಿಸಿದಂತೆ ನಡೆಯುತ್ತಿದ್ದೆ. ಜೊತೆಯಲ್ಲಿದ್ದವರೆಲ್ಲ ನನ್ನ ಈ ಕೌಶಲ್ಯವನ್ನು ಮೆಚ್ಚುತ್ತಿದ್ದರು. ‘ಸಾವಿತ್ರಿ ಗಂಡನ ಹೆಸ್ರು ಹೇಳವ್ವ’ ಎನ್ನುತ್ತಿದ್ದರೆ, ನಾನೋ ನಾಚಿ ನೀರಾಗಿ ‘ಒಲ್ಲೆನವ್ವಾ, ನಂಗ್ ನಾಚ್ಕಿ ಆಕೇತಿ’ ಎಂದು ಮುಖಮುಚ್ಚಿಕೊಳ್ಳುತ್ತಿದ್ದೆ. ಅದಕ್ಕೆ ‘ಆ ನಾಚ್ಕಿ ತಾ ನನ್ ಕೈಯಾಗ’ ಎಂದೊ ಇಲ್ಲಾ, ‘ನಾಚ್ಗೆ ಎಲ್ಲ ಊರಿಂದ ಆಚ್ಗೆ’ ಎಂದೋ ಪ್ರತಿಕ್ರಿಯಿಸುತ್ತಿದ್ದರು. ದುಂಬಾಲು ಬಿದ್ದು ಕೇಳಿದಾಗ, ‘ಚಕಚಕ ನೀರಿಗೆ ಚಾರ್ಕಣ್ಣಿನ ಕುಬಸ, ವಜ್ರದ ಓಲೆ ಗೆಜ್ಜೆ ಟೀಕೆ, ಹತ್ ಮಂದೀಲಿ ಕುಂತ್ ನತ್ ಮಾಡ್ಸಿಕೊಡ್ತಾರ… ಚಂದ್ರಾಮ…’ ಎಂದು ಮುರ್ಕಾ ಮಾಡಿಕೊಂಡು, ವೈಯಾರದಿಂದ ಇದನ್ನು ಹೇಳಬೇಕಿತ್ತು. ಎದುರಿದ್ದ ವಿದೂಷಕ ನನ್ನ ಮಾತುಗಳನ್ನೇ ಇನ್ನಷ್ಟು ವೈಯ್ಯಾರ ಮಾಡುತ್ತಾ ಹೇಳಿದಾಗ ಜನರೆಲ್ಲ ನಗುತ್ತಿದ್ದರು. ಶೃಂಗಾರ ರಸ ತುಸು ಹೆಚ್ಚಾದರೂ ಹಾಸ್ಯವಾಗುತ್ತದೆಂಬ ಸೂಕ್ಷ್ಮ ಎಲ್ಲಾ ಕಲಾವಿದರಿಗೂ ತಿಳಿದಿತ್ತು.

ಹೀಗೆ ನಾಲ್ಕೈದು ನಾಟಕ ಆಗಿರಬೇಕು, ಜುಬೇದಾಬಾಯಿ ಕೂಡ ಗಮನಿಸುತ್ತಿದ್ದರು. ಮಾಲೀಕರೊಮ್ಮೆ ಬಂದು ಜುಬೇದಾಬಾಯಿಯನ್ನು ನೋಡಿಕೊಂಡು, ಅವರ ಜೊತೆಗೇ ಇರು. ಅವರ ಬೆನ್ನಿಗೆ ಎಣ್ಣೆ ಹಚ್ಚುವುದು, ಮೈ ಉಜ್ಜುವುದು, ತಲೆಗೆ ಎಣ್ಣೆ ಹಾಕುವುದು, ಮಲಗುವ ಮುನ್ನ ಕಾಲಿಗೆ ಎಣ್ಣೆ ಹಚ್ಚಿ ಒರೆಸಿ, ಮಲಗಿಸುವುದು, ಮುಟ್ಟಾದ ಬಟ್ಟೆಗಳನ್ನು ಒಗೆಯುವುದು ಹೀಗೆ ಈ ಎಲ್ಲ ಕೆಲಸಗಳನ್ನು ಮಾಡಲೇಬೇಕಿತ್ತು. ಬಗ್ಗಿ ಮಾಡುವುದಕ್ಕೆ ಅವರಿಗೂ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನನ್ನು ಗೌರವಯುತವಾಗಿ, ಪ್ರೀತಿ ತೋರಿ ನಡೆಸಿಕೊಂಡಿದ್ದೇ ಅವರ ಎಲ್ಲ ಕೆಲಸಗಳನ್ನು ನಾನು ಹಿಂಜರಿಕೆಯಿಲ್ಲದೆ ಮಾಡುವುದಕ್ಕೆ ಸಾಧ್ಯವಾಯಿತು. ಅದರೊಂದಿಗೆ, ‘ಸ್ಟೇಜಿಗೆ ನಿನ್ನ ಕಣ್ಣು ಒಪ್ಪತ್ತೆ. ಎಷ್ಟು ಮುದ್ದಾಗಿ ಮಾತಾಡ್ತಿ’ ಎನ್ನುವುದೆಲ್ಲ ಅವರ ಮನಸ್ಸಿನ ಮಾತುಗಳೇ ಆಗಿದ್ದವು.

ನಿತ್ಯವೂ ಅವರ ಜೊತೆಗೇ ಇರುತ್ತಿದ್ದದ್ದರಿಂದ ಒಂದು ಸಲುಗೆಯೂ ಬೆಳೆದಿತ್ತು. ಆವತ್ತೊಂದು ದಿನ ಹೀಗೆ ಮಾತಾಡುತ್ತಿರುವಾಗ ಅನಿಸಿದ್ದನ್ನೆಲ್ಲ ಮುಚ್ಚುಮರೆಯಿಲ್ಲದೆ ಹೇಳಿಬಿಟ್ಟೆ. ‘ನಂಗೆ ಪಾರ್ಟ್ ಮಾಡ್ಬೇಕಂತ ಆಸೆ ಅಕ್ಕ. ಪಣಕ್ಕಿಟ್ಟ ಪ್ರಮಾಣದಾಗ ಗೌರಿ ಪಾತ್ರ ಮಾಡ್ಬೇಕು’ ಒಂದೇ ಉಸಿರಿನಲ್ಲಿ ನನ್ನ ಕನಸುಗಳನ್ನು ಅವರೆದುರು ಇಟ್ಟೆ. ಜುಬೇದಾಬಾಯಿ ಎಷ್ಟೆಂದರೂ ಕಲಾವಿದರಲ್ಲವೆ? ‘ನಿಜ್ವಾಗ್ಲೂ ಪಾರ್ಟ್ ಮಾಡ್ತೀಯಾ ನೀನು?’ ಎಂದು ಕೇಳಿದರು. ಹೌದೆಂದೆ. ಸ್ಪಷ್ಟವಾದವರಂತೆ, ‘ಸರಿ, ನೀನು ನನ್‌ಜೊತೆ ಬರ್ತೀಯಾ?’ ಎಂದಿದ್ದಕ್ಕೆ, ಮಾಲೀಕರಿಗೆ ಏನು ಹೇಳುವುದೆಂದು ಯೋಚಿಸಿಯೇ ಕಂಗಾಲಾದೆ. ’ನಾನು ನಿನ್‌ಹತ್ರ ಪಾರ್ಟ್ ಮಾಡಿಸ್ತೀನಿ’ ಎಂದ ಮಾತೊಂದೇ ನನಗೆ ಆಸರೆಯಾಗಿತ್ತು. ಕ್ಯಾಂಪ್ ಮುಗಿಯುತ್ತಿದ್ದಂತೆ ಕಂಪೆನಿಯಲ್ಲಿ ಯಾರೊಬ್ಬರಿಗೂ ಹೇಳದೆ, ಯಾರನ್ನೂ ಕೇಳದೆ ಜುಬೇದಾಬಾಯಿ ಅವರೊಂದಿಗೆ ಹೊರಟೇಬಿಟ್ಟೆ.

ಮುಂದುವರೆಯುವುದು…
(ಹಿಂದಿನ ಕಂತು: ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ