ಮೊನ್ನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಂಚೆಕಚೇರಿಗೆ ತ್ವರಿತ ಅಂಚೆ ಸೇವೆಗೆ ಪೋಸ್ಟ್ ಮಾಡಲು ಹೋದಾಗ, ಕೌಂಟರಿನಲ್ಲಿರುವ ಟೈಪಿಸ್ಟ್ ವಿಳಾಸವನ್ನು ಇಂಗ್ಲಿಷ್ ನಲ್ಲಿ ಬರೆಯಲು ತಿಳಿಸಿದರು. ಏಕೆಂದರೆ ಅವರಿಗೆ ಕನ್ನಡ ಓದಲು ಟೈಪಿಸಲು ಬರುತ್ತಿರಲಿಲ್ಲ. ನಾನು ಇಂಗ್ಲಿಷ್ ನಲ್ಲಿ ಬರೆಯಲು ಸ್ಪಷ್ಟವಾಗಿ ನಿರಾಕರಿಸಿದೆ. ಏಕೆಂದರೆ ತಲುಪಬೇಕಾದ ವಿಳಾಸ ಕೂಡ ಕರ್ನಾಟಕದಲ್ಲಿ ಇತ್ತು. ಅವರು ಆ ಲಕೋಟೆಯನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ, ನಾನು ಕಾರಣ ಕೇಳಿ ಲಿಖಿತರೂಪದಲ್ಲಿ ನೀಡಬೇಕೆಂದು ನನ್ನ ಪ್ರತಿಭಟನೆಯನ್ನು ದಾಖಲಿಸಿದಾಗ ಹಿರಿಯ ಅಧಿಕಾರಗಳ ಮಧ್ಯಸ್ಥಿಕೆಯಿಂದ ಲಕೋಟೆಯನ್ನು ಸ್ವೀಕರಿದರು. ವ್ಯಂಗ್ಯವೆಂದರೆ ಅಲ್ಲಿರುವ ಬಹುತೇಕ ಸಿಬ್ಬಂದಿಯು ಕನ್ನಡಿಗರಿದ್ದರೂ ಹಿರಿಯ ಅಧಿಕಾರಿಗಳು ಪರಭಾಷೆಯವರು.
ಡಾ. ಲಕ್ಷ್ಮಣ ವಿ.ಎ. ಬರೆಯುವ ಅಂಕಣ

 

ನಿಮ್ಮ ಮಗುವನ್ನು ಕನ್ನಡ ಶಾಲೆಯಲ್ಲಿ ಓದಿಸುತ್ತಿದ್ದೀರಾ? ಎಂಬ ಪಶ್ನೆಯೊಂದು ಕನ್ನಡಪರ ದನಿಯೆತ್ತುವ ಜೀವಗಳಿಗೆ ನಿತ್ಯ ಎದುರಾಗುವ ಧರ್ಮಸಂಕಟದ ಸಂಧಿಗ್ಧತೆ. ಮೇಲ್ನೋಟಕ್ಕೆ ಇದು ಕನ್ನಡಾಭಿಮಾನದ ಪ್ರಶ್ನೆಯಾದರೂ ಕೆಲವೊಂದು ಸಲ ಇದು ಭಾಷೆಯನ್ನು ಉಳಿಸುವ ಸಲುವಾಗಿ ಹೋರಾಡುವವರ ಮನೋಬಲವನ್ನು ಕುಗ್ಗಿಸುವ ಕುಹಕದಂತೆಯೂ ಭಾಸವಾಗಬಹುದು. ಮೇಲಿನ ಪ್ರಶ್ನೆಗೆ ಸುಲಭವಾದ ಉತ್ತರವಿಲ್ಲ. ಎಲ್ಲಿಯವರೆಗೂ ಭಾಷೆಯೊಂದು ನಮಗೆ ಗೌರವ ಅಂತಸ್ತು ಅನ್ನ ಕೊಡುವ ಸಾಧನವಾಗಲಾರದೋ ಅಲ್ಲಿಯವರೆಗೆ ಈ ಪ್ರಶ್ನೆಗಳನ್ನು ನಾವು ಎದುರಿಸಲೇಬೇಕಾದ ಕಹಿ ಸತ್ಯವೂ ನಮ್ಮೆದುರಿಗೆ ಕಾಲು ಚಾಚಿ ಮಲಗಿದೆ.

ಮಗುವಿನ ಕಲಿಕಾ ಮಾಧ್ಯಮವು ಮಾತೃಭಾಷೆಯಲ್ಲಾದರೆ ಅವರ ಬೌದ್ಧಿಕ, ಮಾನಸಿಕ, ಸಾಮಾಜಿಕ, ವಿಕಾಸವಾಗುವುದೆಂದು ಸಂಶೋಧನೆಗಳೂ ಧೃಢಪಡಿಸಿವೆ. ಮಗುವಿನ ಮಾತೃಭಾಷೆ ಯಾವುದು? ಪರಿಸರದ ಭಾಷೆಯಾವುದು? ಮಕ್ಕಳ ಕಲಿಕೆಯ ಸ್ವಾತಂತ್ರ್ಯ ಪೋಷಕರದಾ? ಸರಕಾರದ್ದಾ ಎಂಬ ಚರ್ಚೆಯ ಹೊತ್ತಿನಲ್ಲಿಯೇ ಮಗುವೊಂದು ಭಾಷೆಯೆಡೆಗಿನ ಅಭಿಮಾನ ಬೆಳೆಸಿಕೊಳ್ಳುವ ವಾತಾವರಣವೊಂದನ್ನು ನಮ್ಮ ಮನೆಗಳಲ್ಲಿ ಹಾಗು ಪರಿಸರಗಳಲ್ಲಿ ಬೆಳೆಸುವಂತಹ ಜವಾಬ್ದಾರಿ ನಮ್ಮ ಹೆಗಲಮೇಲಿದೆ, ಈ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಮನಸುಗಳನ್ನು ತಾಯಿ ಭುವನೇಶ್ವರಿಯೇ ಕಾಪಾಡಬೇಕು.

ನನ್ನ ಮನೆಯಲ್ಲಿ ಎಂಟು ವರ್ಷದ ನನ್ನ ಮಗನೊಂದಿಗೆ ಕನ್ನಡ ಭಾಷೆಯಲ್ಲಿ ಸಂಭಾಷಿಸುವಾಗ ಅವನು ಕನ್ನಡದ ಪದಗಳನ್ನು ಅರ್ಥ ಮಾಡಿಕೊಳ್ಳಲಾರದೆ ತಿಣುಕಾಡಿದ್ದನ್ನು ನೋಡಿದ್ದೇನೆ. ಹತ್ತು ಗಂಟೆಯೆಂದರೆ ಎಷ್ಟು? ಒಂದು ವಾರವೆಂದರೆ ಎಷ್ಟು? ಅಳಿಲು ಎಂದರೇನೆಂಬುದು ನಾವು ಚಿತ್ರ ಬಿಡಿಸಿ ಅಥವ ಇಂಗ್ಲಿಷ್ ನಲ್ಲಿ ಹೇಳಿಕೊಡುವಾಗ ದಂಗಾಗಿ ಹೋಗಿದ್ದೇನೆ. ನಗರವಾಸಿಗಳ ಕಾನ್ವೆಂಟ್ ಕಂದಮ್ಮಗಳ ಕನ್ನಡದ ಬಗೆಗಿನ ಅರಿವಿನ ಮಿತಿ ಅಳೆದರೆ ಕನ್ನಡದ ಭವಿಷ್ಯದ ಬಗ್ಗೆ ಮರುಕವುಂಟಾಗುತ್ತದೆ. ಇದು ಕೇವಲ ನನ್ನೊಬ್ಬನ ಹಳಹಳಿಕೆಯಲ್ಲ ನಮ್ಮ ತಲೆಮಾರಿನ ಬಹುತೇಕ ಪೋಷಕರ ಅಳಲಿದು.

ನನ್ನ ಮನೆಯ ಭಾಷೆ ಕನ್ನಡ, ಪರಿಸರದ ಭಾಷೆಯೂ ಕನ್ನಡ. ಆದರೆ ಮಗ ಓದುತ್ತಿರುವುದು ಇದ್ಯಾವುದಕ್ಕೂ ಸಂಬಂಧ ಪಡದ ಇನ್ನೊಂದು ಭಾಷೆಯಲ್ಲಿ. ಇದು ನನ್ನ ಆಯ್ಕೆ, ಅನಿವಾರ್ಯತೆ, ಯಾಕಾಯಿತು ಎನ್ನುವುದೂ ಕೂಡ ಒಂದು ಪ್ರಶ್ನೆಯೇ.

ಈ ಮಾತೃಭಾಷೆ, ಪರಿಸರದ ಭಾಷೆ, ಕಲಿಕಾಮಾಧ್ಯಮದ ಗೊಂದಲಗಳು ಅವಶ್ಯಕತೆ, ಅನಿವಾರ್ಯತೆಯನ್ನು ಒಂದು ಕ್ಷಣ ಬದಿಗಿಟ್ಟು ಚಿಂತಿಸಿದರೆ, ಮಾತೃಭಾಷೆಯನ್ನು ಉಳಿಸುವ ಕೆಲವೊಂದು ಸುಲಭೋಪಾಯಗಳು ಇನ್ನೂ ಆಶಾದಾಯಕವಾಗಿ ಗೋಚರಿಸುತ್ತವೆ. ನಮ್ಮ ನಮ್ಮ ಮನೆಗಳಲ್ಲಿ ಕನ್ನಡ ಮಾತನಾಡುವುದಕ್ಕೆ ನಾವೇನೂ ಅಂತಹ ಕಷ್ಟ ಪಡಬೇಕಿಲ್ಲ. ಕನ್ನಡ ಭಾಷೆಗೆ ಭವ್ಯವಾದ ಇತಿಹಾಸವಿದೆ, ಪರಂಪರೆಯಿದೆ. ಸಮೃದ್ಧವಾದ ಸಾಹಿತ್ಯದ ಫಸಲಿದೆ. ಚಂದಮಾಮದಿಂದ ಹಿಡಿದು ರಾಮಾಯಣ ದರ್ಶನದನವರೆಗೆ ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಸಾಮಾನ್ಯ ಓದುಗರಿಂದ ಮೊದಲಾಗಿ ಪಂಡಿತರೂ ಪರಾಮರ್ಶಿಸುವ ಗ್ರಂಥಗಳಿವೆ. ಈ ಜನ್ಮಕ್ಕಾಗಿ ಮಿಕ್ಕುವಷ್ಟು ಪುಸ್ತಕ ಭಂಢಾರವಿದೆ. ಮೊದಲು ನಾವು ನಮ್ಮ ಓದಿನ ಜ್ಞಾನದ ಮಿತಿಯಲ್ಲಿ ಪುಸ್ತಕ ಸಂಗ್ರಹಿಸಿ ಓದಿ ಮಕ್ಕಳಿಗೂ ಕೂಡ ಓದಿನಲ್ಲಿ ಆಸಕ್ತಿ ಹುಟ್ಟಿಸಬಹುದಾದ ಪುಸ್ತಕ ಸಂಗ್ರಹಣೆ ಮಾಡಬಹುದು.

ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಅತ್ಯಮೂಲ್ಯ ಆಸ್ತಿಯೆಂದರೆ ಪುಸ್ತಕಗಳೆಂಬ ಅರಿವು ಮೊದಲು ಪೋಷಕರಿಗಿರಬೇಕಾಗುತ್ತದೆ. ನಮ್ಮೆಲ್ಲರ ಮನೆಯ ಖಾಸಗೀ ಕಾರ್ಯಕ್ರಮಗಳಾದ ಮದುವೆ, ಹುಟ್ಟುಹಬ್ಬಗಳಲ್ಲಿ ದುಬಾರಿ ಉಡುಗೊರೆಯ ಬದಲಾಗಿ ಸದಭಿರುಚಿಯ ಪುಸ್ತಕಗಳನ್ನು ಕೊಡಬಹುದು. ಅಂದಹಾಗೆ ನನ್ನ ಮಗ ಇಂಗ್ಲಿಷ್ ಮಾಧ್ಯಮದಲ್ಲಿ ಓದುತಿದ್ದರೂ ಕನ್ನಡದ ಮಕ್ಕಳ ಕತೆ ಕವಿತೆಗಳನ್ನು ಓದುವಷ್ಟು ಜ್ಞಾನ ಸಂಪಾದನೆ ಮಾಡಿದ್ದಾನೆ.

ನಗರವಾಸಿಗಳ ಕಾನ್ವೆಂಟ್ ಕಂದಮ್ಮಗಳ ಕನ್ನಡದ ಬಗೆಗಿನ ಅರಿವಿನ ಮಿತಿ ಅಳೆದರೆ ಕನ್ನಡದ ಭವಿಷ್ಯದ ಬಗ್ಗೆ ಮರುಕವುಂಟಾಗುತ್ತದೆ. ಇದು ಕೇವಲ ನನ್ನೊಬ್ಬನ ಹಳಹಳಿಕೆಯಲ್ಲ ನಮ್ಮ ತಲೆಮಾರಿನ ಬಹುತೇಕ ಪೋಷಕರ ಅಳಲಿದು.

ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದೆಂಬುದು ಕವಿವಾಣಿಯು ಕೇವಲ ಕನ್ನಡದ ಬೀದಿ ಹೋರಾಟಕ್ಕೆ ಸೀಮಿತವಾಗದೆ ಮನೆ ಮನೆಗೂ ಕನ್ನಡ ಸಾಹಿತ್ಯ ತಲುಪಿಸುವ ಪರಿಚಾರಿಕೆಯ ಕೆಲಸವಾಗಬೇಕಿದೆ. ಇದನ್ನು ವೈಯುಕ್ತಿಕವಾಗಿ, ಸಂಘಟನಾತ್ಮಕವಾಗಿ, ಮಾಡುವ ಕೆಲಸ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕತೆಯಾಗಿದೆ.

ಮೊನ್ನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಂಚೆಕಚೇರಿಗೆ ತ್ವರಿತ ಅಂಚೆ ಸೇವೆಗೆ ಪೋಸ್ಟ್ ಮಾಡಲು ಹೋದಾಗ, ಕೌಂಟರಿನಲ್ಲಿರುವ ಟೈಪಿಸ್ಟ್ ವಿಳಾಸವನ್ನು ಇಂಗ್ಲಿಷ್ ನಲ್ಲಿ ಬರೆಯಲು ತಿಳಿಸಿದರು. ಏಕೆಂದರೆ ಅವರಿಗೆ ಕನ್ನಡ ಓದಲು ಟೈಪಿಸಲು ಬರುತ್ತಿರಲಿಲ್ಲ. ನಾನು ಇಂಗ್ಲಿಷ್ ನಲ್ಲಿ ಬರೆಯಲು ಸ್ಪಷ್ಟವಾಗಿ ನಿರಾಕರಿಸಿದೆ. ಏಕೆಂದರೆ ತಲುಪಬೇಕಾದ ವಿಳಾಸ ಕೂಡ ಕರ್ನಾಟಕದಲ್ಲಿ ಇತ್ತು. ಅವರು ಆ ಲಕೋಟೆಯನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ, ನಾನು ಕಾರಣ ಕೇಳಿ ಲಿಖಿತರೂಪದಲ್ಲಿ ನೀಡಬೇಕೆಂದು ನನ್ನ ಪ್ರತಿಭಟನೆಯನ್ನು ದಾಖಲಿಸಿದಾಗ ಹಿರಿಯ ಅಧಿಕಾರಗಳ ಮಧ್ಯಸ್ಥಿಕೆಯಿಂದ ಲಕೋಟೆಯನ್ನು ಸ್ವೀಕರಿದರು. ವ್ಯಂಗ್ಯವೆಂದರೆ ಅಲ್ಲಿರುವ ಬಹುತೇಕ ಸಿಬ್ಬಂದಿಯು ಕನ್ನಡಿಗರಿದ್ದರೂ ಹಿರಿಯ ಅಧಿಕಾರಿಗಳು ಪರಭಾಷೆಯವರು. ಕೌಂಟರು, ಸ್ವಾಗತಕಾರರು, ಸಾರ್ವಜನಿಕ ಸಂಪರ್ಕವಿರುವ ಸ್ಥಳಗಳಲ್ಲಿ ಕನ್ನಡಿಗರನ್ನು ಅಥವ ಕನ್ನಡ ಬಲ್ಲವರನ್ನು ನಿಯಮಿಸಬೇಕೆನ್ನುವ ಕನಿಷ್ಠ ಸಾಮಾನ್ಯ ಪ್ರಜ್ಞೆ ಮೆರೆಯಲಾರದಷ್ಟು ಕನ್ನಡ ಅಸಡ್ಡೆಗೊಳಗಾಯಿತೆ?

ಅಷ್ಟೇ ಅಲ್ಲ ಬಹುರಾಷ್ಟ್ರೀಯ ಬ್ಯಾಂಕಿನಲ್ಲಿ, ಹೋಟೆಲುಗಳಲ್ಲಿ, ಮಾತನಾಡುವ ಸಿಬ್ಬಂದಿಗಳನ್ನು ನಿಯಮಿಸಬೇಕೆಂಬ ಸಾತ್ವಿಕ ಪ್ರತಿಭಟನೆಯನ್ನು ನಾವು ಮಾಡಬೇಕಿದೆ.

ಮೊನ್ನೆ ಕನ್ನಡದ ನಾಟಕಕಾರರೊಬ್ಬರನ್ನು ಇಂಗ್ಲಿಷ್ ಪತ್ರಿಕೆಯ ಯುವ ವರದಿಗಾರರೊಬ್ಬರು ಇತ್ತೀಚಿಗೆ ನಿಧನರಾದ ಖ್ಯಾತ ರಂಗಕರ್ಮಿ ಗೋಪಾಲ ವಾಜಪೇಯಿವರ ಬಗ್ಗೆ ಮಾತನಾಡಲು ಕೇಳಿಕೊಂಡಾಗ ಸಹಜವಾಗಿ ಅವರ ಮಾತು ದ.ರಾ.ಬೇಂದ್ರೆ ಮತ್ತು ವಾಜಪೇಯಿವರ ಒಡನಾಟದ ಬಗ್ಗೆ ಪ್ರಸ್ತಾಪವಾಗಿದೆ. ಆಗ ಯುವ ಇಂಗ್ಲಿಷ್ ವರದಿಗಾರರು, ಈ ಬೇಂದ್ರೆ ಅಂದರೆ ಯಾರು? ಎಂದು ಕೇಳಬೇಕೆ!

ನೆಲದ ಕವಿ, ವರಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಯ ಪಾಡು ಇದಾದರೆ ಬೇರೆಯವರ ಬಗ್ಗೆ ಮಾತನಾಡುವುದು ಅಪ್ರಸ್ತುತವಾಗುತ್ತದೆ. ಇದು ಆ ಪತ್ರಿಕೆಯವರ ಕನ್ನಡದ ಬಗೆಗಿನ ಅಸಡ್ಡೆಯಲ್ಲದೆ ಇನ್ನೇನು?

ಇತ್ತೀಚೆಗೆ ನೀನಾಸಂ ನಡೆಸಿಕೊಡುವ ಸಾಂಸ್ಕೃತಿಕ ಶಿಬಿರದಲ್ಲಿ ಬೆಂಗಳೂರಿನ ಕಲಾತಂಡದಿಂದ ‘ಅಕ್ಷಯಾಂಬರ’ ಎಂಬ ಅದ್ಭುತವಾದ ನಾಟಕ ಪ್ರದರ್ಶನವಾಯಿತು. ಈ ನಾಟಕದ ವಿಶೇಷತೆಯೆಂದರೆ ಇದನ್ನು ನಿರ್ದೇಶಿಸಿದವರು ಹಾಗು ಯುವನಾಯಕಿಯಾಗಿ ನಟನೆಮಾಡಿದವರು ಒಬ್ಬ ಯವತಿ. ಒಂದು ಗಂಟೆಯ ಆ ನಾಟಕದಲ್ಲಿ ಅಸ್ಖಲಿತವಾಗಿ ಕನ್ನಡದ ಸಂಭಾಷಣೆ ಹೇಳುವ ನಾಯಕಿ, ಆಟ ಮುಗಿದ ತಕ್ಷಣ ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಸಂದರ್ಭದಲ್ಲಿ ಕನ್ನಡ ಮಾತನಾಡುವುದಕ್ಕೆ ತಡವರಿಸಿದಂತೆ ತೋರಿದರು. ಈ ವಿದ್ಯಮಾನವೊಂದು ಒಂದು ರೂಪಕವಾಗಿ ಇಂದಿಗೂ ಕಾಡುತ್ತಿದೆ. ಅರ್ಥವಾಗುವುದೇನೆಂದರೆ ಕನ್ನಡದ ಅಷ್ಟು ಇಷ್ಟೂ ಪರಿಚಯವಿದ್ದವರೂ ಕೂಡ ಕಷ್ಟ ಪಟ್ಟು ಕಲಿಯಲೇಬೇಕೆಂದವರಿಗೆ ಕನ್ನಡದ ಕಲಿಕೆಯೊಂದು ಕಷ್ಟವೇನಲ್ಲ. ಇಲ್ಲಿ ಇವರಿಗೆ ಭಾಷೆಯೊಂದು ಗೌರವ ಘನತೆ ತಂದುಕೊಡುವ ಮಾರ್ಗವಾಗಿ ಗೋಚರಿಸಿದಂತಾಗಿ ಕಲಿಕೆಯ ಅನಿವಾರ್ಯತೆಯಾಗಿ ತೋರಿತು.

ಕನ್ನಡ ಸೊರಗುತ್ತಿದೆ ಎಂಬ ಹಳಹಳಿಕೆ ಇಂದು ನಿನ್ನೆಯದಲ್ಲ. ಭಾಷೆಯೊಂದು ತನ್ನ ಹುಟ್ಟಿನೊಂದಿಗೆ ಪ್ರತಿರೋಧಗಳನ್ನು ಎದುರಿಸುತ್ತ ತನ್ನ ಅಸ್ಮಿತೆಯನ್ನು ಕಾಪಿಟ್ಟುಕೊಂಡು ಬಂದಿರುತ್ತದೆ. ಅದರ ಅಳಿವು ಉಳಿವಿನ ಪ್ರಶ್ನೆ ಅದರನ್ನಾಡುವ ಜನಪದದ ಪ್ರೀತಿಯೊಂದೇ ಅಲ್ಲ ಬದ್ಧತೆಯನ್ನು ಕೂಡ ಬಯಸುತ್ತದೆ. ಇಲ್ಲವೆಂದಾದಲ್ಲಿ ಎರಡುಸಾವಿರ ವರ್ಷದ ಕನ್ನಡಭಾಷೆ ಎಂದೋ ಇತಿಹಾಸವಾಗುತಿತ್ತು.

ಆದರೆ ಭವಿಷ್ಯ…..? ಖಂಡಿತವಾಗಿಯೂ ನಮ್ಮೆಲ್ಲರ ಕೈಲಿದೆ.