ಹೆಚ್ಚಾಗಿ ಭಾರತೀಯ ಸಂಗೀತವನ್ನು ಕೇಳುವ ನನಗೆ ಪಾಪ್ ಮತ್ತು ರಾಕ್ ಸಂಗೀತ ಪ್ರಾಕಾರಗಳು ಅಷ್ಟು ರುಚಿಸಿರಲಿಲ್ಲ. ಆದರೆ ಇವೆರೆಡು ಹಾಡುಗಳು ಮನಸ್ಸಿಗೆ ಮುದ ನೀಡಿದ್ದವು ಅನ್ನೋದನ್ನು ತಳ್ಳಿಹಾಕಲಾರೆ. ಹಾಗಾಗಿ ಚಿತ್ರದ ಬಗ್ಗೆ ಕೊಂಚ ನಿರೀಕ್ಷೆ ಇಟ್ಟುಕೊಂಡೇ “ಬೊಹೇಮಿಯನ್ ರ್ಯಾಪ್ಸೊಡಿ”ಯನ್ನು ನೋಡಿದ್ದೆ. ಆ ಮೊದಲು ಫ್ರೆಡ್ಡಿಯ ಪೂರ್ವಾಪರವೇನೂ ನನಗೆ ಗೊತ್ತಿರಲಿಲ್ಲ. ಪಾಶ್ಚಾತ್ಯ ಸಂಗೀತಗಾರರಲ್ಲಿ ಅನೂ ಒಬ್ಬ ಅಂತಷ್ಟೇ ನನಗೆ ಗೊತ್ತಿದ್ದದ್ದು. ಆದರೆ ಚಿತ್ರ ನೋಡಿದ ಮೇಲೆ ಚಿತ್ರ ಇಷ್ಟವಾದ ದುಪ್ಪಟ್ಟು ಫ್ರೆಡ್ಡಿ ಮರ್ಕ್ಯೂರಿಯ ಸಂಗೀತದ ಆಸಕ್ತಿ ಹೆಚ್ಚಾಗಿತ್ತು. ಆಗಿನಿಂದ ನನ್ನ ಪ್ಲೇ ಲಿಸ್ಟಿನಲ್ಲಿ ಅವನ ಒಂದಷ್ಟು ಹಾಡುಗಳು ಜಾಗಪಡೆದುಕೊಂಡಿವೆ.
ರೂಪಶ್ರೀ ಕಲ್ಲಿಗನೂರ್ ಅಂಕಣ

 

“ಚೌಕಟ್ಟು”, ಈ ಪದ ಬದುಕಿನ ಎಲ್ಲ ಆಯಾಮಗಳಿಗೂ ಬೇಕಾಗಬಹುದಾದಂಥದ್ದು. ಅಂದರೆ ಎಲ್ಲವನ್ನೂ ತೀರಾ ಹದ್ದುಬಸ್ತಿನಲ್ಲಿ ಇಡುವಂಥದ್ದು ಅಲ್ಲ. ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವೆ ಒಂದು ಡಿಫರೆನ್ಸ್ ಇದೆಯಲ್ಲಾ… ಅದು, ನನಗೆ ಚೌಕಟ್ಟು ಅನ್ನಿಸೋದು. ರೆಕ್ಕೆಗಳಿಲ್ಲದ ಮನಸ್ಸು ಯಾವುದಾದ್ರೂ ಇದೆಯ? ಅಂಥದ್ದು ಸಿಗೋದು ನಿಜಕ್ಕೂ ಕಷ್ಟ. ಹಾಗೆ ಅಂಥದ್ದೊಂದು ಮನಸ್ಸು ಸಿಕ್ಕರೂ, ಅದರ ರೆಕ್ಕೆಗಳು, ಯಾರದ್ದೋ ಹಿಡಿತಕ್ಕೋ, ಯಾವುದೋ ಅನೂಹ್ಯ ಭಯಕ್ಕೋ, ಮತ್ತಿನ್ನಾವುದೋ ನಮಗೆ ಕಾಣಲಾಗದ ಅವರೊಳಗಿನ ಸಂಧಿಗ್ಧತೆಗೋ ಸಿಕ್ಕು ಅದು ಅವರ ಬೆನ್ನಿಗಂಟಿ ಕೊಳೆಯುತ್ತಿರಬಹುದು, ಅಥವಾ ಗಾಳಿ ಮತ್ತು ಸೂರ್ಯನ ಬೆಚ್ಚನೆಯ ಬೆಳಕು ಕಾಣದೇ ಮೆತ್ತಗಾಗಿ ಹೋಗಿರಬಹುದು… ಅಷ್ಟೇ.

ಕಲೆಯ ವಿಷಯಕ್ಕೆ ಬಂದಾಗ “ಚೌಕಟ್ಟು” ಅನ್ನೋ ಈ ಪದದ ಬಗ್ಗೆ, ಸ್ವತಃ ಕಲೆ ಅನ್ನುವ ಪದದ ಬಗ್ಗೆ ಅದೆಷ್ಟು ಚರ್ಚೆಗಳು ನಡೆಯೋಲ್ಲ? ಯಾವುದೇ ಕಲಾಪ್ರಕಾರವಾಗಿರಲಿ, ಅದಕ್ಕೊಂದು ಚೌಕಟ್ಟು ಇರಲೇಬೇಕು ಅಂತ ಹೇಳುವವರದ್ದು ಒಂದು ಗುಂಪಾದರೆ ಚೌಕಟ್ಟು ಇರುವುದನ್ನ ಕಲೆ ಅಂತ ಯಾಕೆ ಕರೀಬೇಕು ಅಂತ ಅನ್ನುವವರದ್ದು ಮತ್ತೊಂದು ಗುಂಪು. ಅದು ಸಂಗೀತ, ಚಿತ್ರಕಲೆ, ಶಿಲ್ಪಕಲೆ, ನೃತ್ಯ, ನಾಟಕ, ಸಿನಿಮಾ ಎಲ್ಲ ಮಾಧ್ಯಮಕ್ಕೂ ಸಂಬಂಧಿಸಿದ್ದು.

(ಫ್ರೆಡ್ಡೀ ಮರ್ಕ್ಯೂರಿ)

ಕಲೆ ಅನ್ನೋದು ಕಲೆಗಾಗಿಯೋ, ಜನರಿಗಾಗಿಯೋ ಅಥವಾ ಸ್ವತಃ ಕಲಾವಿದನಿಗಾಗಿಯೋ ಅನ್ನುವಂಥ ಉತ್ತರಿಸಲಾಗದ ಅಥವಾ, ಭಿನ್ನ ಉತ್ತರಗಳುಳ್ಳ ಈ ಪ್ರಶ್ನೆ ಹೇಗೆ ಯಾವತ್ತೂ ಕಲಾಲೋಕದಲ್ಲಿ ಪ್ರಸ್ತುತವಾಗಿರತ್ತೋ, ಅಷ್ಟೂ ದಿನಮಾನ ಚೌಕಟ್ಟಿನ ಬಗೆಗಿನ ಪ್ರಶ್ನೋತ್ತರಗಳೂ ಜೀವಂತವಾಗೇ ಇರುತ್ತವೆ. ಈ ಪ್ರಶ್ನೆಗಳೆಲ್ಲ ಒಮ್ಮೊಮ್ಮೆ ಕಬ್ಬಿಣದ ಕಡಲೆಯ ಹಾಗಿದ್ರೆ ಮತ್ತೊಮ್ಮೆ ಸುಲಿದ ಬಾಳೆ ಹಣ್ಣಿನಂತೆ ಅನ್ನಿಸುತ್ತೆ.

ಕಳೆದ ವಾರಾಂತ್ಯದಲ್ಲಿ ಎಲ್ಟನ್ ಜಾನ್ ಎಂಬ ಇಂಗ್ಲೆಂಡ್ ಮೂಲದ ಪಾಪ್ ಗಾಯಕನ ಬದುಕಿನ ಘಟನಾವಳಿಗಳ ಮೇಲೆ ಚಿತ್ರಿಸಲಾಗಿದ್ದ “ರಾಕೆಟ್ ಮ್ಯಾನ್” ಎಂಬ ಚಿತ್ರವನ್ನು ನಾವು ನೋಡಿದ್ವಿ. ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಸಿನಿಮಾ ನೋಡುವವರೆಲ್ಲ, ಚಿತ್ರದ ರಿವೀವ್ ಅಥವಾ ರೇಟಿಂಗ್ ಗಳನ್ನು ನೋಡಿಯೇ ಒಂದು ಚಿತ್ರವನ್ನು ನೋಡುವ ಹಾಗೆ ನಾವೂ ಅಂತರ್ಜಾಲ ತೋರಿಸಿದ್ದ ‘ಒಳ್ಳೆಯ ರಿವೀವ್’ ಗೆ ಮರುಳಾಗಿ “ರಾಕೆಟ್ ಮ್ಯಾನ್” ಚಿತ್ರವನ್ನು ನೋಡಲು ಶುರುಮಾಡಿದ್ವಿ. ಶುರುವಾತಿನಲ್ಲಿ ಬಹಳ ಗಂಭೀರ ಅನ್ನಿಸಿದ ಚಿತ್ರ ಆಮೇಲೆ ಚಿತ್ರ ಗಂಭೀರವಿದೆ ಅನ್ನಿಸಿದರೂ, ಕತೆ ಅಷ್ಟು ಹಿಡಿದಿಟ್ಟುಕೊಳ್ಳುವಂಥದ್ದಲ್ಲ ಅನ್ನಿಸಿತು. ಹಾಗೂಹೀಗೂ ಅರ್ಧ ಚಿತ್ರ ನೋಡಿದ್ದಾಯ್ತು ಅನ್ನುವಷ್ಟರಲ್ಲಿ ಇಡೀ ಸಿನಿಮಾನೇ ಮುಗಿದುಹೋಗಿತ್ತು. ನಾವೀಗ ಚಿತ್ರದ ಬಗ್ಗೆ ವ್ಯಥೆ ಪಡಬೇಕಾ ಅಥವಾ ಚಿತ್ರಕತೆಯ ಬಗ್ಗೆ ವ್ಯಥೆಪಡಬೇಕಾ ಅನ್ನೋದು ಗೊತ್ತಾಗದೇ ಗೊಂದಲದಲ್ಲಿ ಬಿದ್ದೆವು. ಚಿತ್ರದಲ್ಲಿ ಎಲ್ಟನ್ ಹಾಡಿಗೆ ಮರುಳಾಗುತ್ತಿದ್ದ ಜನರ ಬಗ್ಗೆಯಂತೂ ಒಂದಿನಿತೂ ಸಂಶಯವಿಲ್ಲದೇ ವ್ಯಥೆಪಟ್ಟದ್ದು ಬೇರೆ ಮಾತು! ಈ ಚಿತ್ರ ನೋಡಿದಮೇಲೆ ಉಂಟಾದ ಗೊಂದಲಗಳೇ ಈ ಲೇಖನ ಬರೆಯಲು ಸ್ಪೂರ್ತಿ.

ಈ ಹಿಂದೊಮ್ಮೆ ‘ಬೊಹೇಮಿಯನ್ ರ್ಯಾಪ್ಸೊಡಿ’ ಅನ್ನೋ ಚಿತ್ರ ನೋಡಿದ್ವಿ. ಅದು ಬ್ರಿಟೀಷ್ ಗಾಯಕ ಫ್ರೆಡ್ಡೀ ಮರ್ಕ್ಯೂರಿ ಎಂಬ ರಾಕ್ ಗಾಯಕನ ಜೀವನಗಾಥೆಯ ಕುರಿತಾದದ್ದು. ಆ ಚಿತ್ರ ನೋಡುವುದಕ್ಕೂ ಮುನ್ನ ಫ್ರೆಡ್ಡಿಯ “ವೀ ಆರ್ ದ ಚಾಂಪಿಯನ್ಸ್” ಮತ್ತು “ಬೊಹೇಮಿಯನ್ ರ್ಯಾಪ್ಸೊಡಿ” ಕೇಳಿದ್ದೆನಷ್ಟೇ. ಹೆಚ್ಚಾಗಿ ಭಾರತೀಯ ಸಂಗೀತವನ್ನು ಕೇಳುವ ನನಗೆ ಪಾಪ್ ಮತ್ತು ರಾಕ್ ಸಂಗೀತ ಪ್ರಾಕಾರಗಳು ಅಷ್ಟು ರುಚಿಸಿರಲಿಲ್ಲ. ಆದರೆ ಇವೆರೆಡು ಹಾಡುಗಳು ಮನಸ್ಸಿಗೆ ಮುದ ನೀಡಿದ್ದವು ಅನ್ನೋದನ್ನು ತಳ್ಳಿಹಾಕಲಾರೆ. ಹಾಗಾಗಿ ಚಿತ್ರದ ಬಗ್ಗೆ ಕೊಂಚ ನಿರೀಕ್ಷೆ ಇಟ್ಟುಕೊಂಡೇ “ಬೊಹೇಮಿಯನ್ ರ್ಯಾಪ್ಸೊಡಿ”ಯನ್ನು ನೋಡಿದ್ದೆ. ಆ ಮೊದಲು ಫ್ರೆಡ್ಡಿಯ ಪೂರ್ವಾಪರವೇನೂ ನನಗೆ ಗೊತ್ತಿರಲಿಲ್ಲ. ಪಾಶ್ಚಾತ್ಯ ಸಂಗೀತಗಾರರಲ್ಲಿ ಅನೂ ಒಬ್ಬ ಅಂತಷ್ಟೇ ನನಗೆ ಗೊತ್ತಿದ್ದದ್ದು. ಆದರೆ ಚಿತ್ರ ನೋಡಿದ ಮೇಲೆ ಚಿತ್ರ ಇಷ್ಟವಾದ ದುಪ್ಪಟ್ಟು ಫ್ರೆಡ್ಡಿ ಮರ್ಕ್ಯೂರಿಯ ಸಂಗೀತದ ಆಸಕ್ತಿ ಹೆಚ್ಚಾಗಿತ್ತು. ಆಗಿನಿಂದ ನನ್ನ ಪ್ಲೇ ಲಿಸ್ಟಿನಲ್ಲಿ ಅವನ ಒಂದಷ್ಟು ಹಾಡುಗಳು ಜಾಗಪಡೆದುಕೊಂಡಿವೆ.

ರೆಕ್ಕೆಗಳಿಲ್ಲದ ಮನಸ್ಸು ಯಾವುದಾದ್ರೂ ಇದೆಯ? ಅಂಥದ್ದು ಸಿಗೋದು ನಿಜಕ್ಕೂ ಕಷ್ಟ. ಹಾಗೆ ಅಂಥದ್ದೊಂದು ಮನಸ್ಸು ಸಿಕ್ಕರೂ, ಅದರ ರೆಕ್ಕೆಗಳು, ಯಾರದ್ದೋ ಹಿಡಿತಕ್ಕೋ, ಯಾವುದೋ ಅನೂಹ್ಯ ಭಯಕ್ಕೋ, ಮತ್ತಿನ್ನಾವುದೋ ನಮಗೆ ಕಾಣಲಾಗದ ಅವರೊಳಗಿನ ಸಂಧಿಗ್ಧತೆಗೋ ಸಿಕ್ಕು ಅದು ಅವರ ಬೆನ್ನಿಗಂಟಿ ಕೊಳೆಯುತ್ತಿರಬಹುದು, ಅಥವಾ ಗಾಳಿ ಮತ್ತು ಸೂರ್ಯನ ಬೆಚ್ಚನೆಯ ಬೆಳಕು ಕಾಣದೇ ಮೆತ್ತಗಾಗಿ ಹೋಗಿರಬಹುದು… ಅಷ್ಟೇ.

ಕಲೆಯ ಪ್ರಪಂಚದಲ್ಲಿ ಕಲಾವಿದನ ವೈಯಕ್ತಿಕ ಬದುಕಿನ ರೀತಿನೀತಿಗಳ ಮೇಲೆ ಅವನ ಕಲೆಯನ್ನು ಅಳೆಯುವುದು ಅಷ್ಟು ಸಮಂಜಸವಲ್ಲ. ನಿಜ. ಆದರೆ ಕಲೆಯ ಬಗ್ಗೆಯೇ ಅನುಮಾನಗಳು ಮೂಡಿದಾಗ ಅದು ಚರ್ಚಿಸಬೇಕಾದ ವಿಷಯವೇ. ಕಲೆಯ ಬಗ್ಗೆ ಮಾತಾಡುತ್ತಾ ಬೊಹೆಮೀನಿಯನ್ ರ್ಯಾಪ್ಸೊಡಿ ಹಾಗೂ ರಾಕೆಟ್ ಮ್ಯಾನ್ ಚಿತ್ರಗಳನ್ನು ಉದಾಹಣೆಯಾಗಿ ತೆಗೆದುಕೊಂಡದ್ದಕ್ಕೆ ಎರಡು ಕಾರಣಗಳಿವೆ. ಸಿನಿಮಾ ಕೂಡ ಒಂದು ಕಲಾಮಾಧ್ಯಮ ಅನ್ನೋದು ಮೊದಲ ಕಾರಣವಾದರೆ ಸಿನಿಮಾದ ವಸ್ತು ಕೂಡ ಕಲಾವಿದರ ಕುರಿತಾದದ್ದರಿಂದ ಇವುಗಳನ್ನು ಉದಾಹರಿಸಿದೆನಷ್ಟೇ.

ರಾಕ್ ಸಂಗೀತವೆಂದರೆ ಮೂಗುಮುರಿಯುತ್ತಿದ್ದ ನಾನು, “ಬೊಹೇಮಿಯನ್ ರ್ಯಾಪ್ಸೊಡಿ” ನೋಡಿದಮೇಲೆ ಪಾಶ್ಚಾತ್ಯ ಸಂಗೀತದಲ್ಲೂ (ಎಲ್ಲದರಲ್ಲೂ ಅಲ್ಲ) ಮನಸ್ಸನ್ನು ಸಂತೈಸುವ ಅಂಶವಿದೆ ಅನ್ನುವುದನ್ನು ಅರಿತುಕೊಂಡೆ ಅನ್ನೋದು ಪ್ಲಸ್ ಪಾಯಿಂಟ್ ಆದರೆ ರಾಕೆಟ್ ಮ್ಯಾನ್ ಚಿತ್ರದಲ್ಲಿ ಜಾನ್ ಎಲ್ಟನ್ ನ ಅಸಂಬದ್ಧ (ನನ್ನ ಗ್ರಹಿಕೆಯಲ್ಲಿ) ಸಂಗೀತ ಮತ್ತು ಸಾಹಿತ್ಯಕ್ಕೆ ಕುಣಿಯುವ ಜನರನ್ನು ಕಂಡು, ಜನರ ಕಲೆಯ ಅಭಿರುಚಿಯ ಬಗೆಗೇ ಪ್ರಶ್ನೆಗಳು ಏಳಲಾರಂಭಿಸಿದವು. ಚಿತ್ರದಲ್ಲಿ ತೋರಿಸಿರುವಂತೆ ಅವನ ಅಭಿಮಾನಿಗಳ ದೊಡ್ಡ ದಂಡೇ ಇದೆ, ಮತ್ತೆ ಅವನು ಅದರಿಂದ ವಿಪರೀತ ಹಣಗಳಿಸುತ್ತಾನೆ ಎಂಬುದರ ಬಗ್ಗೆ ತಿಳಿದಾಗ, ಮೊದಲು ನಮ್ಮ ಭಾರತೀಯ ಸಂಗೀತಗಾರರೇ ನೆನಪಿಗೆ ಬಂದದ್ದು.

ಭಾರತೀಯ ಸಂಗೀತ ಹಾಗೆ ಸುಲಭಕ್ಕೆ ದಕ್ಕುವಂಥದ್ದಲ್ಲ. ಸಾಯುವವರೆಗೂ ದಿನಂಪ್ರತಿ ಆರೇಳು ತಾಸು ರಿಯಾಜು ಮಾಡಿ, ಕಾರ್ಯಕ್ರಮ ಕೊಟ್ಟಂಥ, ಕೊನೆಗಾಲಕ್ಕೆ ಕೆಲವರಿಗೆ ತಕ್ಕಮಟ್ಟಿಗೋ, ಇನ್ನೂ ಕೆಲವರು ಬಡತನದಲ್ಲೇ ಅಸುನೀಗಿದ ಉದಾಹರಣೆಗಳು ಸಾಕಷ್ಟಿವೆ. ಪರಿಶ್ರಮಕ್ಕೆ ಕಲೆ ದಕ್ಕೇಬಿಡುತ್ತದೆ ಎಂಬುದಾಗಿದ್ದರೆ, ಅದರ ಮಾತೇ ಬೇರೆಯಾಗಿಬಿಡುತ್ತಿತ್ತು ಬಿಡಿ. ಅಷ್ಟು ಕಲೆಯ ಆರಾಧಕರಿರುವ ದೇಶ ನಮ್ಮದು. ಆದರೆ ಅಷ್ಟರಲ್ಲಿ ಯಾರಿಗಾಗದೂ ಕಂಡದ್ದಕ್ಕೆಲ್ಲ ಕೋಟಿಕೋಟಿ ಚೆಲ್ಲಿ ಕೊಳ್ಳುವಷ್ಟು ಸಿರಿತನವೇನಾದರೂ ಬಂದಿದೆಯೇ ಅಂತ ನೋಡಿದರೆ ಊಹೂಂ. ಅದು ಹೇಗೆಂದರೆ ಕೆಲವೊಮ್ಮೆ ಅಮೂರ್ತ ಚಿತ್ರಗಳಿಗೆ ಸಿಗೋ ಬೆಲೆ, ಮೂರ್ತ ಚಿತ್ರಗಳಿಗೆ ಹೇಗೆ ದಕ್ಕಲ್ಲವೋ ಹಾಗೆ. ಅನಾಟಮಿಯ ತಳಬುಡ ಎಲ್ಲ ಪಕ್ಕಾ ಕಲಿತ ಕಲಾವಿದ ಯಾವುದೋ ಮಾರ್ಕೆಟ್ಟಿನಲ್ಲಿ ಇಂತಿಷ್ಟು ದುಡ್ಡಿಗೆ ಪೋಟ್ರೇಟ್ ಚಿತ್ರ ಮಾಡುತ್ತ ಕುಳಿತಿದ್ದರೆ, ಗಿಮಿಕ್ಕಿನಿಂದ ಯಾವುದೋ ಒಂದು ಆ್ಯಂಗಲ್ ನಲ್ಲಿ ಚಂದ ಕಾಣಿಸುವ ಅಬ್ಸ್ಟ್ರಾಕ್ಟ್ ಚಿತ್ರಗಳು ಗ್ಯಾಲರಿಯಲ್ಲಿ ಸಾವಿರಾರು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತ ಹೋಗುತ್ತವೆ. ಅದಕ್ಕೇ ಕಲೆ ಅನ್ನೋದೆ ಒಂದು ರೀತಿ ಮಾಯೆಯ ಹಾಗನ್ನಿಸುತ್ತೆ.

(ಟಿ.ಎಂ ಕೃಷ್ಣ)

ಹಿಂದೊಮ್ಮೆಯಾದ ಘಟನೆಯಿದು. ಆವತ್ತು ಸಂಜೆ ಜೋರು ಮಳೆ. ಸಂಗೀತ ಕಾರ್ಯಕ್ರಮವೊಂದಕ್ಕೆ ಹೋಗಿ ಅದರ ರಿವೀವ್ ಬರೆಯಬೇಕಿತ್ತು. ಯಾವುದೋ ಕಾರ್ಪೊರೇಟ್ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮ. ಹಾಗಾಗಿ ದೊಡ್ಡದೊಡ್ಡ ಕಲಾವಿದರು ಅಲ್ಲಿ ಹಾಡುವವರಿದ್ದರು ಮತ್ತು ಅಷ್ಟೇ ದೊಡ್ಡ ಮೊತ್ತ ಕೊಟ್ಟು ಟಿಕೇಟ್ ಖರೀದಿಸಿ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಕಾರ್ಯಕ್ರಮದ ರಿವೀವ್ ಬರೆಯುವ ಸಲುವಾಗಿ ನನಗೆರಡು ಫ್ರೀ ಟಿಕೆಟ್ ಸಿಕ್ಕಿದ್ದವು. ಹಾಗಾಗಿ ಸಂಗೀತವನ್ನು ಇಷ್ಟಪಡುವ ಸ್ನೇಹಿತನೊಬ್ಬನನ್ನು ಜೊತೆಗೆ ಕರೆದುಕೊಂಡು ಹೋಗಿದ್ದೆ.

ಅದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವಾದರೂ, ಮೊದಲು ಶುರುವಾದದ್ದು, ಕರ್ನಾಟಿಕ್ ಸಂಗೀತದ ಒಂದು ಕಛೇರಿಯಿಂದ… ಟಿ.ಎಂ ಕೃಷ್ಣ ವೇದಿಕೆಯಲ್ಲಿ ಕುಳಿತು ಹಾಡಲಾರಂಭಿಸಿದ್ದೇ, ನನ್ನ ಸ್ನೇಹಿತ ನನ್ನನ್ನು ದುರುಗುಟ್ಟಿ ನೋಡಿದ. ಕರ್ನಾಟಿಕ್ ಎಂದರೆ ಸುತಾರಾಂ ಇಷ್ಟಪಡದ ಅವನಿಗೆ ನಾನು ಅಲ್ಲಿ ಹಾಡಲಿರುವ ಹಿಂದೂಸ್ತಾನಿ ಗಾಯಕರ ಹೆಸರನ್ನಷ್ಟೇ ಅವನಿಗೆ ಹೇಳಿದ್ದೆ. ಹಾಗಾಗಿ “ಈ ಸೆಷನ್ ಮುಗ್ಯೋವರ್ಗೂ ನಾನು ಹೊರಗಿರ್ತೀನಿ, ಬರ್ತೀಯಾ?” ಎಂದು ಕೇಳಿದ. ನಾನದಕ್ಕೆ, “ಇಲ್ಲ ಮಾರಾಯಾ ನೀನು ಹೊರಡು, ನಾನು ಇಡೀ ಕಾರ್ಯಕ್ರಮದ ರಿವೀವ್ ಮಾಡಬೇಕು” ಎಂದು ಅವನಿಗೆ ಹೊರಗೆ ದಾರಿಬಿಟ್ಟುಕೊಟ್ಟೆ. ಆ ಕಚೇರಿಯವರೆಗೂ ಕರ್ನಾಟಕ ಸಂಗೀತವೆಂದರೆ ನಾನೂ ಹಾಗೆ ಮಾಡುತ್ತಿದ್ದವಳೇ. ಆದರೆ ಕೃಷ್ಣರ ಹಾಡುಗಾರಿಕೆ ಅದೆಷ್ಟು ಚಂದಿತ್ತೆಂದರೆ, ಅವರ ಮೊದಲ ರಾಗದ ಪ್ರಸ್ತುತಿಯಿಂದ ಕೊನೆಯ ಪ್ರಸ್ತುತಿಯವರೆಗೂ ಕೈಗಳು ತಮ್ಮಷ್ಟಕ್ಕೆ ತಾವೇ ತಾಳಹಾಕತೊಡಗಿ, ನನಗೆ ಗೊತ್ತಿಲ್ಲದೇ ಕಾರ್ಯಕ್ರಮವನ್ನು ಬಹಳ ಆನಂದಿಸಿದ್ದೆ. ಅಂದಿನಿಂದ ಟಿ.ಎಂ. ಕೃಷ್ಣರ ಕಾರ್ಯಕ್ರಮವಿದ್ದಲ್ಲಿ ಹೋಗದೇ ಇರುವುದಿಲ್ಲ.

ಒಮ್ಮೆ ನೆನಪಿಸಿಕೊಳ್ಳಿ. ಉದಾಹರಣೆಗೆ ನೀವು ಸಂಗೀತವನ್ನು ಆಸ್ವಾದಿಸಬಲ್ಲವರಾಗಿದ್ದರೆ, ಅದು ನಿಮ್ಮ ಭಾವನಾತ್ಮಕ ಜಗತ್ತನ್ನು ಯಾವ ಮಟ್ಟಿಗೆ ಆಳಬಲ್ಲದು ಎಂಬುದನ್ನ ಯಾರಿಗಾದರೂ ವಿವರಿಸಿ ಹೇಳಲು ಸಾಧ್ಯವಾಗುತ್ತದಾ? ಒಂದೊಳ್ಳೆ ಹುಮ್ಮಸ್ಸಿನ ರಾಗವನ್ನು ಸರೋದ್ ನುಡಿಸಾಣಿಕೆಯಲ್ಲಿ ಕೇಳುವಾಗ ಮನಸ್ಸು ಹೇಗೆ ತುದಿಗಾಲಿನಲ್ಲಿ ನಿಂತು ನರ್ತಿಸುವ ನವಿಲಿನಂತಾಗುತ್ತದೋ, ಹಾಗೇ ತೋಡಿಯಂಥ ಭಾವನಾತ್ಮಕವಾದ ರಾಗವನ್ನು ಸಾರಂಗಿಯಲ್ಲಿ ಕೇಳುವಾಗ ಬದುಕಿನ ಎಲ್ಲ ನೋವುಗಳೂ, ಆ ಕ್ಷಣಕ್ಕೆ ನಮ್ಮನ್ನಪ್ಪಿಕೊಂಡು ಕಣ್ಣೀರು ಸುರಿಸುವಂತೆ ಮಾಡಿಬಿಡುತ್ತದೆ.

ಕಲೆಯೆಂದರೆ ಅದೆಷ್ಟು ಭಿನ್ನವಾದದ್ದಲ್ಲವೇ ಅನ್ನಿಸಿಬಿಡತ್ತೆ. ಪ್ರತಿಯೊಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗೆ, ಪ್ರಾಂತ್ಯದಿಂದ ಪ್ರಾಂತ್ಯಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ಕಲೆಯ ಬಗೆಗಿನ ಅಭಿರುಚಿ ಬದಲಾಗುತ್ತಾ ಹೋಗುತ್ತದೆ. ಹೇಗೆ ಕಲೆಗೆ ಹೀಗೆ ಅನ್ನೋ ಚೌಕಟ್ಟು ಇಲ್ಲವೋ, ಕಲಾರಸಿಕರಿಗೂ ಇರುವುದಿಲ್ಲ. ಆದರೆ ಅದು ಯಾವುದೋ ರೂಪದಲ್ಲಿ ಜನರ ಬದುಕಿನ ಭಾಗವಾಗಿ ಮೆಲ್ಲನೆ ಉಸಿರಾಡುತ್ತಾ ಇರುತ್ತದೆ.